Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 11

ಯೆಹೋವನನ್ನು ಸ್ಮರಿಸಿರಿ

11 “ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿರಿ. ಆತನು ಹೇಳಿದವುಗಳನ್ನೆಲ್ಲ ಮಾಡಿರಿ. ನೀವು ಕಟ್ಟಳೆಗಳಿಗೆ, ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ಯಾವಾಗಲೂ ವಿಧೇಯರಾಗಿರಬೇಕು. ನಿಮಗೆ ಉಪದೇಶ ಮಾಡುವುದಕ್ಕಾಗಿ ನಿಮ್ಮ ದೇವರಾದ ಯೆಹೋವನು ಮಾಡಿದ ಮಹತ್ಕಾರ್ಯಗಳನ್ನು ನೆನಪುಮಾಡಿರಿ. ಆತನ ಕಾರ್ಯಗಳನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಆತನು ಎಂಥಾ ಶಕ್ತಿಶಾಲಿ ಎಂದು ನೀವು ತಿಳಿದಿದ್ದೀರಿ. ಆ ಮಹತ್ಕಾರ್ಯಗಳನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಈಜಿಪ್ಟಿನಲ್ಲಿ ಫರೋಹನಿಗೂ ಅವನ ಸಮಸ್ತ ಪ್ರಜೆಗಳಿಗೂ ಮಾಡಿದ್ದನ್ನು ನೀವು ನೋಡಿದ್ದೀರಿ. ಯೆಹೋವನು ಈಜಿಪ್ಟಿನ ಸೈನಿಕರಿಗೂ ಅವರ ಕುದುರೆ ರಥಗಳಿಗೂ ಮಾಡಿದ್ದನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಅವರು ನಿಮ್ಮನ್ನು ಓಡಿಸಿಕೊಂಡು ಬರುತ್ತಿದ್ದರು. ಆದರೆ ಯೆಹೋವನು ಅವರನ್ನು ಸಮುದ್ರದ ನೀರಿನಲ್ಲಿ ಮುಳುಗಿಹೋಗುವಂತೆ ಮಾಡಿದುದ್ದನ್ನು ನೋಡಿದ್ದೀರಿ ಮತ್ತು ಅವರು ಸಂಪೂರ್ಣವಾಗಿ ನಾಶವಾಗುವುದನ್ನು ನೋಡಿದ್ದೀರಿ. ನೀವು ಈ ಸ್ಥಳಕ್ಕೆ ಬರುವತನಕ ನಿಮ್ಮ ದೇವರಾದ ಯೆಹೋವನು ನಿಮಗೋಸ್ಕರ ಮರುಭೂಮಿಯಲ್ಲಿ ಮಾಡಿದ ಎಲ್ಲಾ ಅದ್ಭುತಕಾರ್ಯಗಳನ್ನು ನೋಡಿದವರು, ನೀವೇ ಹೊರತು ನಿಮ್ಮ ಮಕ್ಕಳಲ್ಲ. ರೂಬೇನ್ ಕುಲದ ಎಲೀಯಾಬನ ಮಕ್ಕಳಾದ ದಾತಾನನಿಗೆ ಮತ್ತು ಅಬೀರಾಮನಿಗೆ ಯೆಹೋವನು ಮಾಡಿದ್ದನ್ನು ನೀವೇ ನೋಡಿದ್ದೀರಿ. ನಿಮ್ಮ ಕಣ್ಣಮುಂದೆಯೇ ಭೂಮಿಯು ಬಾಯಿ ತೆರೆದು ಅವರನ್ನು, ಅವರ ಹೆಂಡತಿಮಕ್ಕಳನ್ನು, ಅವರ ಗುಡಾರವನ್ನು, ಸೇವಕರನ್ನು, ಅವರ ಪಶುಗಳನ್ನು ನುಂಗಿದ್ದನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಆತನು ಮಾಡಿದ ಎಲ್ಲಾ ಮಹಾಕೃತ್ಯಗಳನ್ನು ನೋಡಿದವರು ನೀವೇ.

“ಆದ್ದರಿಂದ ನಾನು ನಿಮಗೆ ನೀವು ಎಲ್ಲಾ ಕಟ್ಟಳೆಗಳಿಗೆ ವಿಧೇಯರಾಗಿ ನಡೆಯಬೇಕು; ಆಗ ನೀವು ಬಲವನ್ನು ಹೊಂದುವಿರಿ; ಜೋರ್ಡನ್ ನದಿಯನ್ನು ದಾಟಿ ದೇವರು ನಿಮಗೆ ಕೊಟ್ಟಿರುವ ದೇಶವನ್ನು ಸ್ವಾಧೀನಪಡಿಸಿಕೊಳ್ಳುವಿರಿ. ಆ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ. ಆ ದೇಶವು ಎಲ್ಲಾ ಒಳ್ಳೆಯ ವಸ್ತುಗಳಿಂದ ತುಂಬಿದೆ. ಆ ದೇಶವನ್ನು ನಿಮ್ಮ ಪೂರ್ವಿಕರಿಗೆ ಕೊಡುವುದಾಗಿ ದೇವರು ವಾಗ್ದಾನ ಮಾಡಿದ್ದಾನೆ. 10 ನಿಮಗೆ ದೊರಕಲಿರುವ ದೇಶವು ನೀವು ಹೊರಟುಬಂದ ಈಜಿಪ್ಟ್ ದೇಶದಂತಿಲ್ಲ. ಈಜಿಪ್ಟಿನಲ್ಲಿ ನೀವು ಬಿತ್ತನೆ ಮಾಡಿದ ಮೇಲೆ ನೀರನ್ನು ಹಾಯಿಸಲು ನಿಮ್ಮ ಕಾಲುಗಳನ್ನು ಬಳಸುತ್ತಿದ್ದಿರಿ. ನಿಮ್ಮ ತರಕಾರಿ ತೋಟಗಳಿಗೆ ನೀರು ಹಾಯಿಸುವಂತೆಯೇ ನಿಮ್ಮ ಗದ್ದೆಗಳಿಗೂ ನೀರನ್ನು ಹಾಯಿಸುತ್ತಿದ್ದಿರಿ. 11 ನಿಮಗೆ ಶೀಘ್ರದಲ್ಲಿಯೇ ದೊರಕಲಿರುವ ಭೂಮಿ ಅಂಥದ್ದಲ್ಲ. ಅದು ಬೆಟ್ಟತಗ್ಗುಗಳ ಪ್ರಾಂತ್ಯ; ಮಳೆಯ ನೀರು ಭೂಮಿಯನ್ನು ತೊಯಿಸುತ್ತದೆ. 12 ನಿಮ್ಮ ದೇವರಾದ ಯೆಹೋವನು ಆ ಭೂಮಿಯನ್ನು ಕಾಯುತ್ತಾನೆ. ಆ ದೇಶವನ್ನು ವರ್ಷದ ಪ್ರಾರಂಭದಿಂದ ಕೊನೆಯ ತನಕ ಪರಿಪಾಲಿಸುತ್ತಾನೆ.

13 “ಯೆಹೋವನು ಹೀಗೆನ್ನುತ್ತಾನೆ: ‘ಇಂದು ನಾನು ನಿಮಗೆ ಕೊಟ್ಟ ಆಜ್ಞೆಗಳನ್ನೆಲ್ಲ ಗಮನವಿಟ್ಟು ಕೇಳಿರಿ: ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಆತನ ಸೇವೆ ಮಾಡಬೇಕು. ಹೀಗೆ ಮಾಡಿದರೆ 14 ಕಾಲಕಾಲಕ್ಕೆ ಸರಿಯಾಗಿ ನಿಮ್ಮ ದೇಶಕ್ಕೆ ನಾನು ಮಳೆಯನ್ನು ಕಳುಹಿಸುತ್ತೇನೆ. ಹಿಂಗಾರು, ಮುಂಗಾರು ಮಳೆ ತಕ್ಕ ಸಮಯದಲ್ಲಿ ಬೀಳುವುದು. ಆಗ ನೀವು ನಿಮ್ಮ ಧಾನ್ಯಗಳನ್ನು, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಗಳನ್ನು ಶೇಖರಿಸುವಿರಿ. 15 ನಿಮ್ಮ ಹೊಲಗಳಲ್ಲಿ ಮತ್ತು ನಿಮ್ಮ ಪಶುಗಳಿಗೆ ಹುಲ್ಲು ಹುಲುಸಾಗಿ ಬೆಳೆಯುವಂತೆ ಮಾಡುವೆನು. ನಿಮಗೆ ಆಹಾರವು ಸಮೃದ್ಧಿಕರವಾಗಿರುವುದು.’

16 “ಆದ್ದರಿಂದ ಜಾಗರೂಕರಾಗಿರಿ. ಬೇರೆ ದೇವರುಗಳನ್ನು ಸೇವೆಮಾಡಿ ಆರಾಧಿಸಬೇಡಿ. 17 ಇಲ್ಲವಾದರೆ, ಯೆಹೋವನು ನಿಮ್ಮ ಮೇಲೆ ಬಹಳ ಕೋಪಗೊಳ್ಳುವನು; ಆಕಾಶವನ್ನು ಮುಚ್ಚಿ ಮಳೆಬೀಳದಂತೆ ಮಾಡುವನು. ಆಗ ಹೊಲದಲ್ಲಿ ಧಾನ್ಯ ಬೆಳೆಯುವುದಿಲ್ಲ. ಆಗ ಆತನು ಕೊಡುವ ಒಳ್ಳೆಯ ದೇಶದಲ್ಲಿಯೇ ಊಟಕ್ಕಿಲ್ಲದೆ ಸಾಯುವಿರಿ.

18 “ನಾನು ಹೇಳಿದ ಆಜ್ಞೆಗಳನ್ನು ಯಾವಾಗಲೂ ಜ್ಞಾಪಕದಲ್ಲಿಡಿರಿ. ಅದನ್ನು ನಿಮ್ಮ ಹೃದಯದಲ್ಲಿಡಿರಿ. ಅವುಗಳನ್ನು ಬರೆದು ಕೈಗಳಲ್ಲಿ ಮತ್ತು ಹಣೆಯ ಮೇಲೆ ಕಟ್ಟಿರಿ. ಇದು ನಿಮಗೆ ಜ್ಞಾಪಕ ಕೊಡುವುದು. 19 ಈ ಕಟ್ಟಳೆಗಳನ್ನು ನಿಮ್ಮ ಮಕ್ಕಳಿಗೆ ಬೋಧಿಸಿರಿ. ಅವುಗಳ ವಿಷಯವಾಗಿ ನೀವು ನಿಮ್ಮ ಮನೆಗಳಲ್ಲಿ ಕುಳಿತಿರುವಾಗ, ದಾರಿಯಲ್ಲಿ ನಡೆಯುತ್ತಿರುವಾಗ, ಮಲಗುವಾಗ, ಏಳುವಾಗ ನೀವು ಮಾತನಾಡುತ್ತಾ ಇರಬೇಕು. 20 ಈ ಕಟ್ಟಳೆಗಳನ್ನು ನಿಮ್ಮ ಮನೆಯ ಬಾಗಿಲುಗಳ ಮತ್ತು ನಿಲುವುಗಳ ಮತ್ತು ಹೆಬ್ಬಾಗಿಲುಗಳ ಮೇಲೆ ಬರೆಯಿರಿ. 21 ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಲ್ಪಟ್ಟ ದೇಶದಲ್ಲಿ ಆಗ ನೀವು ಮತ್ತು ನಿಮ್ಮ ಮಕ್ಕಳು ಬಹುಕಾಲ ಬಾಳುವಿರಿ. ಆಕಾಶವು ಭೂಮಿಯ ಮೇಲೆ ಎಷ್ಟು ಕಾಲವಿರುವುದೋ ಅಷ್ಟುಕಾಲ ನೀವು ಬದುಕುವಿರಿ.

22 “ಅನುಸರಿಸಬೇಕೆಂದು ಹೇಳುವ ಪ್ರತಿಯೊಂದು ಕಟ್ಟಳೆಗಳಿಗೆ ವಿಧೇಯರಾಗಿರಿ. ನಿಮ್ಮ ಯೆಹೋವನನ್ನು ಪ್ರೀತಿಸಿ ಆತನ ಮಾರ್ಗದಲ್ಲಿ ನಡೆದು ಆತನಿಗೆ ನಂಬಿಗಸ್ತರಾಗಿರಿ. 23 ಆಗ ನೀವು ಹೋಗುವ ದೇಶದಲ್ಲಿ ವಾಸಿಸುವ ಜನರನ್ನು ಯೆಹೋವನಾದ ನಾನು ಹೊಡೆದೋಡಿಸುವೆನು. ಆ ಜನಾಂಗ ನಿಮಗಿಂತಲೂ ದೊಡ್ಡದು ಮತ್ತು ಬಲಿಷ್ಠವಾದದ್ದು. 24 ನೀವು ಹೆಜ್ಜೆಯಿಡುವ ಭೂಮಿಯೆಲ್ಲಾ ನಿಮ್ಮದಾಗುವುದು. ದಕ್ಷಿಣದ ಮರುಭೂಮಿಯಿಂದ ಹಿಡಿದು ಉತ್ತರದ ಲೆಬನೋನಿನ ತನಕ, ಪೂರ್ವದಲ್ಲಿರುವ ಯೂಫ್ರೇಟೀಸ್ ನದಿಯಿಂದ ಪಶ್ಟಿಮದ ಭೂಮಧ್ಯಸಮುದ್ರ ತೀರದ ತನಕ ವಿಸ್ತಾರವಾಗಿದೆ. 25 ನಿಮ್ಮ ವಿರುದ್ಧವಾಗಿ ಯಾರೂ ನಿಂತುಕೊಳ್ಳಲಾರರು. ನೀವು ಆಕ್ರಮಿಸಿಕೊಳ್ಳುವ ಪ್ರದೇಶದಲ್ಲೆಲ್ಲಾ ಯೆಹೋವನು ಅಲ್ಲಿಯ ಜನರು ನಿಮಗೆ ಭಯಪಡುವಂತೆ ಮಾಡುವನು. ಯೆಹೋವನು ಈ ವಾಗ್ದಾನವನ್ನು ನಿಮಗೆ ಮೊದಲೇ ಕೊಟ್ಟಿದ್ದಾನೆ.

ಆಶೀರ್ವಾದ ಅಥವಾ ಶಾಪ: ಇಸ್ರೇಲರ ಆರಿಸುವಿಕೆ

26 “ಈ ಹೊತ್ತು ನೀವು ಆಶೀರ್ವಾದವನ್ನಾಗಲಿ ಶಾಪವನ್ನಾಗಲಿ ಆರಿಸಬೇಕು. 27 ನಿಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ನೀವು ವಿಧೇಯರಾದರೆ ಆತನಿಂದ ಆಶೀರ್ವಾದ ಹೊಂದುವಿರಿ. 28 ಆದರೆ ನೀವು ವಿಧೇಯರಾಗದಿದ್ದರೆ ಶಾಪವನ್ನು ಹೊಂದುವಿರಿ. ನಾನು ನಿಮಗೆ ಕೊಡುವ ಯೆಹೋವನ ನಿಯಮಗಳನ್ನು ಅನುಸರಿಸುವುದನ್ನು ನಿಲ್ಲಿಸಬೇಡಿರಿ. ಅನ್ಯದೇವತೆಗಳನ್ನು ಪೂಜಿಸಬೇಡಿರಿ. ನಾನು ನಿಮಗೆ ಬೋಧಿಸುತ್ತಿರುವುದು ಯೆಹೋವನ ಮಾರ್ಗದ ಕುರಿತೇ ಹೊರತು ಬೇರೆ ದೇವರುಗಳ ಕುರಿತಲ್ಲ.

29 “ದೇವರಾದ ಯೆಹೋವನು ನಿಮ್ಮನ್ನು ನಿಮ್ಮ ದೇಶಕ್ಕೆ ನಡೆಸುವನು. ನೀವು ಬೇಗನೆ ಅದನ್ನು ಸ್ವಾಧೀನ ಮಾಡಿಕೊಳ್ಳುವಿರಿ. ಆ ಸಮಯದಲ್ಲಿ ನೀವು ಗೆರಿಜ್ಜೀಮ್ ಬೆಟ್ಟದ ತುದಿಗೇರಿ ಅಲ್ಲಿಂದ ಆಶೀರ್ವಾದ ವಚನಗಳನ್ನು ನುಡಿಯಿರಿ. ಅನಂತರ ನೀವು ಎಬಾಲ್ ಬೆಟ್ಟದ ಮೇಲೇರಿ ಅಲ್ಲಿಂದ ಜನರಿಗೆ ಶಾಪವಚನಗಳನ್ನು ನುಡಿಯಿರಿ. 30 ಈ ಬೆಟ್ಟಗಳು ಜೋರ್ಡನ್ ನದಿಯ ಆಚೆ ದಡದಲ್ಲಿವೆ. ಇವು ಜೋರ್ಡನ್ ಕಣಿವೆಯಲ್ಲಿ ವಾಸವಾಗಿರುವ ಕಾನಾನ್ಯರ ಪ್ರದೇಶದಲ್ಲಿವೆ. ಈ ಬೆಟ್ಟಗಳು ಪಶ್ಚಿಮ ದಿಕ್ಕಿನಲ್ಲಿವೆ. ಗಿಲ್ಗಾಲ್ ಊರಿನ ಸಮೀಪದಲ್ಲಿರುವ ಓಕ್ ಮರಗಳಿಗೆ ಇವು ದೂರವೇನೂ ಇಲ್ಲ. 31 ನೀವು ಜೋರ್ಡನ್ ನದಿಯನ್ನು ದಾಟಿ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ. ಈ ದೇಶವು ನಿಮ್ಮದೇ. 32 ಈ ದೇಶದಲ್ಲಿ ನೀವು ವಾಸಿಸುವಾಗ ನಾನು ಈ ಹೊತ್ತು ನಿಮಗೆ ಕೊಡುವ ಕಟ್ಟಳೆಗಳನ್ನೂ ವಿಧಿನಿಯಮಗಳನ್ನೂ ತಪ್ಪದೆ ಪರಿಪಾಲಿಸಬೇಕು.

ಕೀರ್ತನೆಗಳು 95-96

95 ಬನ್ನಿರಿ, ನಾವು ಯೆಹೋವನನ್ನು ಸ್ತುತಿಸೋಣ!
    ನಮಗೆ ಬಂಡೆಯಾಗಿರುವಾತನನ್ನು ಕೊಂಡಾಡೋಣ.
ಆತನಿಗೆ ಕೃತಜ್ಞತಾಸುತ್ತಿ ಮಾಡೋಣ.
    ಸ್ತುತಿಗೀತೆಗಳೊಡನೆ ಆನಂದಘೋಷ ಮಾಡೋಣ.
ಯಾಕೆಂದರೆ ಯೆಹೋವನು ಮಹಾದೇವರಾಗಿದ್ದಾನೆ!
    ಆತನು ದೇವರುಗಳಿಗೆಲ್ಲಾ ಮಹಾರಾಜನಾಗಿದ್ದಾನೆ.
ಭೂಮಿಯ ಆಳವೂ ಉನ್ನತೋನ್ನತವಾದ ಶಿಖರಗಳೂ ಆತನವೇ.
ಸಮುದ್ರವು ಆತನದೇ, ಅದನ್ನು ಸೃಷ್ಟಿಸಿದಾತನು ಆತನೇ.
    ಭೂಮಿಯೂ ಆತನ ಕೈಕೆಲಸವೇ.
ಬನ್ನಿರಿ, ಆತನಿಗೆ ಅಡ್ಡಬಿದ್ದು ಆರಾಧಿಸೋಣ.
    ನಮ್ಮನ್ನು ಸೃಷ್ಟಿಸಿದ ಯೆಹೋವನನ್ನು ಕೊಂಡಾಡೋಣ.
ನಮ್ಮ ದೇವರು ಆತನೇ, ನಾವು ಆತನವರೇ.
    ಆತನ ಸ್ವರಕ್ಕೆ ಕಿವಿಗೊಡುವುದಾದರೆ ಇಂದೇ ನಾವು ಆತನ ಮಂದೆಯಾಗುತ್ತೇವೆ.

ದೇವರು ಹೀಗೆನ್ನುತ್ತಾನೆ: “ನೀವು ಮೆರೀಬಾದಲ್ಲಿಯೂ
    ಮಸ್ಸಾ ಮರುಭೂಮಿಯಲ್ಲಿಯೂ ಮಾಡಿದಂತೆ ಮೊಂಡತನ ಮಾಡಬೇಡಿ.
ನಿಮ್ಮ ಪೂರ್ವಿಕರು ನನ್ನನ್ನು ಪರೀಕ್ಷಿಸಿದರು.
    ನನ್ನ ಮಹತ್ಕಾರ್ಯಗಳನ್ನು ನೋಡಿದ್ದರೂ ನನ್ನನ್ನು ಪರೀಕ್ಷಿಸಿದರು.
10 ನಲವತ್ತು ವರ್ಷಗಳ ಕಾಲ ನಾನು ಅವರೊಂದಿಗೆ ತಾಳ್ಮೆಯಿಂದಿದ್ದೆನು,
    ಅವರು ನಂಬಿಗಸ್ತರಲ್ಲವೆಂದು ನನಗೆ ತಿಳಿದಿತ್ತು.
    ಅವರು ನನ್ನ ಉಪದೇಶಗಳನ್ನು ಅನುಸರಿಸಲಿಲ್ಲ.
11 ಆದ್ದರಿಂದ ನಾನು ಕೋಪಗೊಂಡು ನನ್ನ ವಿಶ್ರಾಂತಿಯ ನಾಡನ್ನು
    ಅವರು ಪ್ರವೇಶಿಸಕೂಡದೆಂದು ನಾನು ಪ್ರಮಾಣ ಮಾಡಿದೆನು.”

96 ಯೆಹೋವನ ನೂತನ ಕಾರ್ಯಗಳ ಕುರಿತಾಗಿ ಹೊಸ ಹಾಡನ್ನು ಹಾಡಿರಿ!
    ಭೂಲೋಕವೆಲ್ಲಾ ಯೆಹೋವನನ್ನು ಹಾಡಿಕೊಂಡಾಡಲಿ.
ಯೆಹೋವನಿಗೆ ಹಾಡಿರಿ! ಆತನ ಹೆಸರನ್ನು ಸ್ತುತಿಸಿರಿ!
    ಶುಭವಾರ್ತೆಯನ್ನು ಹೇಳಿರಿ! ಆತನ ರಕ್ಷಣೆಯನ್ನು ಪ್ರತಿದಿನವೂ ಸಾರಿ ಹೇಳಿರಿ!
ಆತನ ಮಹಿಮೆಯನ್ನು ಜನಾಂಗಗಳಿಗೆ ಪ್ರಕಟಿಸಿರಿ.
    ಆತನ ಅಮೋಘ ಕಾರ್ಯಗಳ ಕುರಿತು ಸಾರಿ ಹೇಳಿರಿ.
ಯೆಹೋವನು ದೊಡ್ಡವನೂ ಸ್ತುತಿಗೆ ಯೋಗ್ಯನೂ ಆಗಿದ್ದಾನೆ.
    ಬೇರೆಲ್ಲ ದೇವರುಗಳಿಗಿಂತ ಆತನೇ ಭಯಂಕರನು.
ಅನ್ಯಜನಾಂಗಗಳ ದೇವರುಗಳೆಲ್ಲಾ ಕೇವಲ ಪ್ರತಿಮೆಗಳಾಗಿವೆ.
    ನಮ್ಮ ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
ಆತನ ಎದುರಿನಲ್ಲಿ ಮಹಿಮೆಯೂ ವೈಭವವೂ ಕಂಗೊಳಿಸುತ್ತಿವೆ.
    ಆತನ ಪವಿತ್ರಾಲಯದಲ್ಲಿ ಶಕ್ತಿಯೂ ಸೌಂದರ್ಯವೂ ತುಂಬಿಕೊಂಡಿವೆ.
ಭೂಜನಾಂಗಗಳೇ, ಸ್ತುತಿಗೀತೆಗಳನ್ನು ಹಾಡುತ್ತಾ
    ಯೆಹೋವನನ್ನು ಮಹಿಮೆಪಡಿಸಿರಿ.
ಯೆಹೋವನ ಹೆಸರನ್ನು ಸ್ತುತಿಸಿರಿ.
    ನಿಮ್ಮ ಕಾಣಿಕೆಗಳನ್ನು ತೆಗೆದುಕೊಂಡು ದೇವಾಲಯಕ್ಕೆ ಹೋಗಿರಿ.
    ಯೆಹೋವನನ್ನು ಆತನ ಸುಂದರವಾದ ಆಲಯದಲ್ಲಿ ಆರಾಧಿಸಿರಿ.
ಭೂನಿವಾಸಿಗಳೆಲ್ಲರೇ, ಆತನನ್ನೇ ಆರಾಧಿಸಿರಿ.
10     ಯೆಹೋವನೇ ರಾಜನೆಂದು ಜನಾಂಗಗಳಿಗೆ ಪ್ರಕಟಿಸಿರಿ.
ಭೂಮಿಯು ಸ್ಥಿರವಾಗಿರುವುದು.
    ಯೆಹೋವನೇ ನೀತಿಯಿಂದ ಅದನ್ನು ಆಳುವನು.
11 ಆಕಾಶಮಂಡಲವೇ, ಸಂತೋಷಪಡು!
    ಭೂಮಿಯೇ, ಉಲ್ಲಾಸಪಡು! ಸಮುದ್ರವೇ ಮತ್ತು ಸಮುದ್ರದೊಳಗಿರುವ ಸರ್ವಸ್ವವೇ, ಆನಂದಘೋಷ ಮಾಡಿರಿ!
12 ಹೊಲಗಳೇ ಮತ್ತು ಅವುಗಳ ಮೇಲೆ ಬೆಳೆದಿರುವ ಸಮಸ್ತವೇ, ಸಂತೋಷದಿಂದಿರಿ!
    ಅರಣ್ಯದ ಮರಗಳೇ, ಹಾಡಿರಿ ಮತ್ತು ಸಂತೋಷಪಡಿರಿ!
13 ಯಾಕೆಂದರೆ ಲೋಕವನ್ನು ಆಳಲು ಯೆಹೋವನು ಬರುತ್ತಿದ್ದಾನೆ.
    ಆತನು ಲೋಕವನ್ನು ನ್ಯಾಯ ನೀತಿಗಳಿಂದ ಆಳುವನು.

ಯೆಶಾಯ 39

ಜೆರುಸಲೇಮಿಗೆ ಎಚ್ಚರಿಕೆ

39 ಆ ಸಮಯದಲ್ಲಿ ಬಲದಾನ್ ಎಂಬವನ ಮಗನಾದ ಮೆರೋದಕಬಲದಾನ್ ಎಂಬವನು ಬಾಬಿಲೋನಿನ ಅರಸನಾಗಿದ್ದನು. ಅವನಿಗೆ ಹಿಜ್ಕೀಯನು ಅಸ್ವಸ್ಥನಾಗಿದ್ದಾನೆಂಬ ವರ್ತಮಾನ ತಲುಪಿದ್ದರಿಂದ ಅವನು ಹಿಜ್ಕೀಯನಿಗೆ ಒಂದು ಪತ್ರವನ್ನೂ ಜೊತೆಗೆ ಬಹುಮಾನಗಳನ್ನೂ ತನ್ನ ದೂತರ ಸಂಗಡ ಕಳುಹಿಸಿದನು. ಅವುಗಳನ್ನು ನೋಡಿ ಹಿಜ್ಕೀಯನಿಗೆ ಬಹು ಸಂತೋಷವಾಯಿತು. ಅವನು ಬಾಬಿಲೋನಿನ ದೂತರಿಗೆ ತನ್ನ ಅರಮನೆಯ ಉಗ್ರಾಣದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನೂ ತಾನು ಕೊಡಿಸಿಟ್ಟಿದ್ದ ಬೆಳ್ಳಿಬಂಗಾರಗಳನ್ನೂ ಸಾಂಬಾರ ಪದಾರ್ಥಗಳನ್ನೂ ಮತ್ತು ಸುಗಂಧದ್ರವ್ಯಗಳನ್ನೂ ತೋರಿಸಿದನು. ಅಲ್ಲದೆ ಯುದ್ಧದಲ್ಲಿ ಉಪಯೋಗಿಸುವ ಖಡ್ಗಗಳನ್ನು, ಗುರಾಣಿಗಳನ್ನು ತೋರಿಸಿದನು; ಅಲ್ಲದೆ ತನ್ನ ರಾಜ್ಯದಲ್ಲಿರುವ ಪ್ರತಿಯೊಂದು ವಿಷಯಗಳನ್ನು ಅವರಿಗೆ ಪ್ರದರ್ಶಿಸಿದನು.

ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಹೋಗಿ, “ನಿನ್ನ ಬಳಿಗೆ ಬಂದವರು ಎಲ್ಲಿಯವರು? ಅವರು ಏನನ್ನು ಹೇಳಿದರು?” ಎಂದು ವಿಚಾರಿಸಿದನು.

ಅದಕ್ಕೆ ಹಿಜ್ಕೀಯನು, “ಇವರು ಬಹುದೂರ ದೇಶದಿಂದ ನನ್ನನ್ನು ಸಂಧಿಸಲು ಬಂದಿದ್ದಾರೆ. ಅವರ ದೇಶ ಬಾಬಿಲೋನ್” ಎಂದನು.

“ನಿನ್ನ ಮನೆಯಲ್ಲಿ ಅವರು ಏನು ನೋಡಿದರು?” ಎಂದು ತಿರುಗಿ ಯೆಶಾಯನು ಪ್ರಶ್ನಿಸಿದನು.

“ಅವರು ನನ್ನ ಅರಮನೆಯಲ್ಲಿರುವದನ್ನೆಲ್ಲಾ ನೋಡಿದರು. ನಾನು ನನ್ನ ಐಶ್ವರ್ಯವನ್ನೆಲ್ಲಾ ಅವರಿಗೆ ತೋರಿಸಿದೆನು” ಎಂದು ಹಿಜ್ಕೀಯನು ಉತ್ತರಿಸಿದನು.

ಆಗ ಯೆಶಾಯನು ಹಿಜ್ಕೀಯನಿಗೆ, “ಸರ್ವಶಕ್ತನಾದ ಯೆಹೋವನ ಮಾತುಗಳನ್ನು ಕೇಳು: ‘ನಿನ್ನ ಮನೆಯಲ್ಲಿರುವ ಎಲ್ಲಾ ವಸ್ತುಗಳೂ ನಿನ್ನ ಪೂರ್ವಿಕರು ಕೂಡಿಟ್ಟಿದ್ದ ಎಲ್ಲಾ ವಸ್ತುಗಳೂ ಇಲ್ಲಿಂದ ಬಾಬಿಲೋನಿಗೆ ಒಯ್ಯುವ ಕಾಲವು ಬರುವದು. ಇಲ್ಲಿ ಏನೂ ಉಳಿಯುವದಿಲ್ಲ.’ ಇದು ಸರ್ವಶಕ್ತನಾದ ಯೆಹೋವನ ನುಡಿ. ಬಾಬಿಲೋನಿನವರು ನಿನ್ನ ಗಂಡುಮಕ್ಕಳನ್ನು ತೆಗೆದುಕೊಂಡು ಹೋಗುವರು. ಅವರು ಬಾಬಿಲೋನಿನ ಅರಮನೆಗಳಲ್ಲಿ ಕಂಚುಕಿಯರಾಗಿ ಸೇವೆ ಮಾಡುವರು” ಎಂದು ಹೇಳಿದನು.

ಅದಕ್ಕೆ ಹಿಜ್ಕೀಯನು ಯೆಶಾಯನಿಗೆ, “ಯೆಹೋವನ ಮಾತುಗಳು ಒಳ್ಳೆಯವೇ ಸರಿ” ಎಂದು ಹೇಳಿದನು. (ಯಾಕೆಂದರೆ ತಾನು ಅರಸನಾಗಿರುವಷ್ಟು ಕಾಲ ದೇಶದಲ್ಲಿ ಸಮಾಧಾನವಿರುವುದೆಂದು ಅವನು ಯೋಚಿಸಿಕೊಂಡನು.)

ಪ್ರಕಟನೆ 9

ಐದನೆಯ ತುತೂರಿ—ಮೊದಲನೆ ವಿಪತ್ತು

ಐದನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಒಂದು ನಕ್ಷತ್ರವು ಆಕಾಶದಿಂದ ಭೂಮಿಯ ಮೇಲೆ ಬಿದ್ದದ್ದನ್ನು ನಾನು ನೋಡಿದೆನು. ಆ ನಕ್ಷತ್ರಕ್ಕೆ ತಳವಿಲ್ಲದ ಆಳವಾದ ಕೂಪಕ್ಕೆ[a] ಹೋಗುವ ಬೀಗದ ಕೈ ಕೊಡಲ್ಪಟ್ಟಿತು. ನಂತರ ಆ ನಕ್ಷತ್ರವು ತಳವಿಲ್ಲದ ಆಳವಾದ ಕೂಪವನ್ನು ತೆರೆಯಿತು. ದೊಡ್ಡ ಕುಲುಮೆಯಿಂದ ಹೊಗೆಯು ಬರುವಂತೆ ಆ ಕೂಪದಿಂದ ಹೊಗೆ ಮೇಲಕ್ಕೆ ಬಂದಿತು. ಆ ಕೂಪದಿಂದ ಬಂದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾದವು.

ನಂತರ ಮಿಡತೆಗಳು ಹೊಗೆಯೊಳಗಿಂದ ಭೂಮಿಯ ಮೇಲಕ್ಕೆ ಬಂದಿಳಿದವು. ಅವುಗಳಿಗೆ ಚೇಳುಗಳಂತೆ ಕುಟುಕುವ ಶಕ್ತಿಯನ್ನು ಕೊಡಲಾಯಿತು. ಭೂಮಿಯ ಮೇಲಿನ ಹುಲ್ಲಿಗಾಗಲಿ ಸಸ್ಯಕ್ಕಾಗಲಿ ಮರಕ್ಕಾಗಲಿ ಹಾನಿ ಮಾಡದಂತೆ ಆ ಮಿಡತೆಗಳಿಗೆ ತಿಳಿಸಲಾಯಿತು. ತಮ್ಮ ಹಣೆಗಳ ಮೇಲೆ ದೇವರ ಮುದ್ರೆಯಿಲ್ಲದ ಜನರನ್ನು ಹಿಂಸಿಸಲು ಅವುಗಳಿಗೆ ತಿಳಿಸಲಾಯಿತು. ಜನಗಳಿಗೆ ಐದು ತಿಂಗಳ ಕಾಲ ನೋವು ಉಂಟುಮಾಡುವಂತಹ ಶಕ್ತಿಯನ್ನು ಈ ಮಿಡತೆಗಳಿಗೆ ಕೊಡಲಾಯಿತು. ಆದರೆ ಜನರನ್ನು ಕೊಲ್ಲುವ ಶಕ್ತಿಯನ್ನು ಮಿಡತೆಗಳಿಗೆ ಕೊಡಲಿಲ್ಲ. ಈ ಮಿಡತೆಗಳು ಕುಟುಕಿದಾಗ ಚೇಳು ಕುಟುಕಿದಷ್ಟೇ ನೋವಾಗುತ್ತಿತ್ತು. ಆ ದಿನಗಳಲ್ಲಿ ಜನರು ಸಾಯುವುದಕ್ಕೆ ಮಾರ್ಗವನ್ನು ಹುಡುಕಿದರೂ ಅವರಿಗೆ ಸಿಕ್ಕುವುದಿಲ್ಲ. ಅವರು ಮರಣವನ್ನು ಬಯಸಿದರೂ ಮರಣವು ಅವರಿಗೆ ಮರೆಯಾಗುತ್ತದೆ.

ಮಿಡತೆಗಳು ಯುದ್ಧಕ್ಕೆ ಸಿದ್ಧಪಡಿಸಿದ ಕುದುರೆಗಳಂತೆ ಕಾಣುತ್ತಿದ್ದವು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆ ಎನೋ ಇದ್ದವು; ಅವುಗಳ ಮುಖಗಳು ಮಾನವರ ಮುಖಗಳಂತಿದ್ದವು. ತಲೆಕೂದಲು ಸ್ತ್ರೀಯರ ತಲೆಕೂದಲಂತಿತ್ತು; ಹಲ್ಲುಗಳು ಸಿಂಹಗಳ ಹಲ್ಲುಗಳಂತಿದ್ದವು. ಎದೆಗಳು ಉಕ್ಕಿನ ಕವಚಗಳಂತೆ ಇದ್ದವು; ರೆಕ್ಕೆಗಳ ಶಬ್ದವು ಯುದ್ಧದಲ್ಲಿ ಆತುರದಿಂದ ಓಡುವ ಅನೇಕ ಕುದುರೆಗಳ ಮತ್ತು ರಥಗಳ ಶಬ್ದದಂತಿತ್ತು. 10 ಚೇಳುಗಳಿಗಿರುವಂತೆ ಬಾಲಗಳೂ ಕೊಂಡಿಗಳೂ ಇದ್ದವು; ಜನರಿಗೆ ಐದುತಿಂಗಳ ಕಾಲ ನೋವುಂಟುಮಾಡುವ ಶಕ್ತಿಯು ಅವುಗಳ ಬಾಲಗಳಲ್ಲಿ ಇತ್ತು. 11 ಮಿಡತೆಗಳಿಗೆ ಒಬ್ಬ ರಾಜನಿದ್ದನು. ತಳವಿಲ್ಲದ ಕೂಪದ ದೂತನೇ ಅವುಗಳ ರಾಜನಾಗಿದ್ದನು. ಅವನಿಗೆ ಹಿಬ್ರೂ ಭಾಷೆಯಲ್ಲಿ “ಅಬದ್ದೋನ್” ಎಂಬ ಹೆಸರಿತ್ತು. ಗ್ರೀಕ್ ಭಾಷೆಯಲ್ಲಿ “ಅಪೊಲ್ಲುವೋನ್” (ವಿನಾಶಕರ) ಎಂದೂ ಹೆಸರಿತ್ತು.

12 ಮೊದಲನೆಯ ಮಹಾವಿಪತ್ತು ಕಳೆದುಹೋಯಿತು. ಇನ್ನೂ ಎರಡು ಮಹಾವಿಪತ್ತುಗಳು ಬರಲಿದ್ದವು.

ಆರನೇ ತುತೂರಿಯ ಪ್ರಾರಂಭ

13 ಆರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ದೇವರ ಸನ್ನಿಧಿಯಲ್ಲಿರುವ ಚಿನ್ನದ ಯಜ್ಞವೇದಿಕೆಯ ಮೇಲಿನ ಕೊಂಬುಗಳಿಂದ ಬರುತ್ತಿರುವ ಧ್ವನಿಯನ್ನು ನಾನು ಕೇಳಿದೆನು. 14 ಆ ಧ್ವನಿಯು ತುತೂರಿಯಿದ್ದ ಆರನೆಯ ದೇವದೂತನಿಗೆ, “ಯೂಫ್ರಟಿಸ್ ಎಂಬ ಮಹಾನದಿಯ ಬಳಿ ಕಟ್ಟಿಹಾಕಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು” ಎಂದು ಹೇಳಿತು. 15 ಈ ನಾಲ್ಕು ಮಂದಿ ದೇವದೂತರನ್ನು ಇದೇ ವರ್ಷ, ಇದೇ ತಿಂಗಳು, ಇದೇ ದಿನ, ಇದೇ ತಾಸಿಗಾಗಿ ಸಿದ್ಧಪಡಿಸಲಾಗಿತ್ತು. ಭೂಮಿಯ ಮೇಲಿರುವ ಜನರಲ್ಲಿ ಮೂರನೆಯ ಒಂದು ಭಾಗವನ್ನು ಸಂಹರಿಸಲು ಇವರನ್ನು ಬಿಡುಗಡೆ ಮಾಡಲಾಯಿತು. 16 ಅವರಲ್ಲಿದ್ದ ಅಶ್ವದಳದ ಸೈನಿಕರ ಸಂಖ್ಯೆ ಇಪ್ಪತ್ತುಕೋಟಿ ಎಂದು ನನಗೆ ಕೇಳಿಸಿತು.

17 ನಾನು ದರ್ಶನದಲ್ಲಿ ಕುದುರೆಗಳನ್ನೂ ಕುದುರೆಗಳ ಮೇಲಿದ್ದ ಸವಾರರನ್ನೂ ನೋಡಿದೆನು. ಅವರು ಹೀಗೆ ಕಾಣುತ್ತಿದ್ದರು: ಅವರು ಬೆಂಕಿಯಂತೆ ಕೆಂಪಾದ, ಕಪ್ಪಾದ, ನೀಲಿಯ ಮತ್ತು ಗಂಧಕದಂತೆ ಹಳದಿಯಾದ ಕವಚಗಳನ್ನು ಹೊಂದಿದ್ದರು. ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತೆ ಕಾಣುತ್ತಿದ್ದವು. ಕುದುರೆಗಳ ಬಾಯಿಂದ ಬೆಂಕಿ, ಹೊಗೆ ಮತ್ತು ಗಂಧಕಗಳು ಬರುತ್ತಿದ್ದವು. 18 ಭೂಮಿಯ ಮೇಲಿನ ಜನರಲ್ಲಿ ಮೂರನೆಯ ಒಂದು ಭಾಗವು ಕುದುರೆಗಳ ಬಾಯಿಂದ ಹೊರಬಂದ ಬೆಂಕಿ, ಹೊಗೆ ಮತ್ತು ಗಂಧಕಗಳ ಉಪದ್ರವಗಳಿಂದ ಕೊಲ್ಲಲ್ಪಟ್ಟಿತು. 19 ಕುದುರೆಗಳ ಶಕ್ತಿಯು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇತ್ತು. ಅವುಗಳ ಬಾಲಗಳು ಜನರನ್ನು ಕಚ್ಚಬಲ್ಲ ಹೆಡೆಗಳುಳ್ಳ ಸರ್ಪಗಳಂತೆ ಇದ್ದವು.

20 ಈ ಉಪದ್ರವಗಳಿಂದ ಸಾಯದೆ ಉಳಿದ ಜನರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಲಿಲ್ಲ. ತಮ್ಮ ಸ್ವಂತ ಕೈಗಳಿಂದ ನಿರ್ಮಿಸಿದ ವಿಗ್ರಹಗಳನ್ನು ತೊರೆದುಬಿಡಲಿಲ್ಲ. ಅವರು ದೆವ್ವಗಳ ಆರಾಧನೆಯನ್ನು ನಿಲ್ಲಿಸಲಿಲ್ಲ. ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳಿಂದ ಮಾಡಲ್ಪಟ್ಟು, ನಡೆಯಲಾರದ, ನೋಡಲಾರದ ಮತ್ತು ಕೇಳಲಾರದ ವಿಗ್ರಹಗಳನ್ನು ಪೂಜಿಸುವುದನ್ನು ಅವರು ನಿಲ್ಲಿಸಲಿಲ್ಲ. 21 ಈ ಜನರು ತಮ್ಮ ಹೃದಯಗಳನ್ನು ಮತ್ತು ಜೀವಿತಗಳನ್ನು ಪರಿವರ್ತಿಸಿಕೊಳ್ಳಲಿಲ್ಲ ಮತ್ತು ಇತರರನ್ನು ಕೊಲ್ಲುವುದನ್ನು ಬಿಟ್ಟುಬಿಡಲಿಲ್ಲ. ಅವರು ತಾವು ನಡೆಸುತ್ತಿದ್ದ ಮಾಟಮಂತ್ರಗಳನ್ನು, ಲೈಂಗಿಕ ಪಾಪಗಳನ್ನು ಮತ್ತು ಕಳ್ಳತನವನ್ನು ತೊರೆದುಬಿಡಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International