Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 8

ದೇವರಾದ ಯೆಹೋವನನ್ನು ಸ್ಮರಿಸಿರಿ

“ನಾನು ಈ ದಿನ ಕೊಡುವ ಎಲ್ಲಾ ಆಜ್ಞೆಗಳನ್ನು ನೀವು ಅನುಸರಿಸಬೇಕು. ಆಗ ನೀವು ದೊಡ್ಡ ಜನಾಂಗವಾಗಿ ಅಭಿವೃದ್ಧಿಯಾಗುವಿರಿ. ನಿಮ್ಮ ಪೂರ್ವಿಕರಿಗೆ ಯೆಹೋವನು ವಾಗ್ದಾನ ಮಾಡಿದ ದೇಶವನ್ನು ನೀವು ಪಡೆದುಕೊಳ್ಳುವಿರಿ. ನಿಮ್ಮ ದೇವರಾದ ಯೆಹೋವನು ಈ ನಲವತ್ತು ವರ್ಷಗಳ ಕಾಲ ನಿಮ್ಮನ್ನು ಅರಣ್ಯ ಪ್ರಯಾಣದಲ್ಲಿ ಮೊದಲು ನಡೆಸಿದ್ದನ್ನು ನೀವು ಯಾವಾಗಲೂ ಸ್ಮರಿಸಬೇಕು. ಯೆಹೋವನು ನಿಮ್ಮನ್ನು ಪರೀಕ್ಷಿಸುತ್ತಿದ್ದನು ಮತ್ತು ನಿಮ್ಮನ್ನು ದೀನರನ್ನಾಗಿ ಮಾಡಬೇಕೆಂದಿದ್ದನು. ನಿಮ್ಮ ಹೃದಯದ ಆಲೋಚನೆಗಳನ್ನು ಆತನು ತಿಳಿದುಕೊಳ್ಳಬೇಕೆಂದಿದ್ದನು; ನೀವು ಆತನ ಆಜ್ಞೆಗಳಿಗೆ ವಿಧೇಯರಾಗುವಿರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕೆಂದಿದ್ದನು. ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿ ನಿಮಗೆ ಹಸಿವೆಯಾಗುವಂತೆ ಮಾಡಿದನು. ಆ ಬಳಿಕ ಮನ್ನದ ಮೂಲಕ ನಿಮ್ಮ ಹಸಿವೆಯನ್ನು ನೀಗಿದನು. ಇದರ ವಿಷಯವಾಗಿ ನೀವು ಹಿಂದೆಂದೂ ಕೇಳಿರಲಿಲ್ಲ. ನಿಮ್ಮ ಪೂರ್ವಿಕರೂ ನೋಡಿರಲಿಲ್ಲ. ಆತನು ಹೀಗೇಕೆ ಮಾಡಿದನು? ಯಾಕೆಂದರೆ ಕೇವಲ ರೊಟ್ಟಿ ತಿಂದ ಮಾತ್ರದಿಂದ ಮನುಷ್ಯರು ಬದುಕದೆ ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೇ ಬದುಕುವರೆಂಬುದನ್ನು ನೀವು ತಿಳಿಯಬೇಕೆಂದು ಹೀಗೆ ಮಾಡಿದನು. ಆತನು ನಿಮ್ಮನ್ನು ಕಾಪಾಡಿ ಸಂರಕ್ಷಿಸಿದ್ದರಿಂದ ಈ ನಲವತ್ತು ವರ್ಷ ನಿಮ್ಮ ಬಟ್ಟೆಗಳು ಹರಿದುಹೋಗಲಿಲ್ಲ; ನಿಮ್ಮ ಕಾಲುಗಳು ಊದಿಕೊಳ್ಳಲಿಲ್ಲ. ಇವೆಲ್ಲವನ್ನು ನಿಮ್ಮ ದೇವರಾದ ಯೆಹೋವನು ನಿಮಗೆ ಮಾಡಿದನು. ತಂದೆಯು ತನ್ನ ಮಗನನ್ನು ತಿದ್ದಿ ಶಿಸ್ತಿನಲ್ಲಿ ನಡೆಸುವಂತೆ ದೇವರು ನಿಮ್ಮೊಂದಿಗೆ ವರ್ತಿಸಿದನು.

“ಆತನ ಆಜ್ಞೆಗಳಿಗೆ ವಿಧೇಯರಾಗಿರಿ. ಆತನನ್ನು ಅನುಸರಿಸಿ ಗೌರವಿಸಿರಿ. ನಿಮ್ಮ ದೇವರಾದ ಯೆಹೋವನು ಉತ್ತಮವಾದ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. ಆ ದೇಶದಲ್ಲಿ ನೀರು ಸಮೃದ್ಧಿಯಾಗಿರುವುದು. ನೀರು ಕಣಿವೆಗಳಲ್ಲಿಯೂ ಬೆಟ್ಟಗಳಲ್ಲಿಯೂ ನೆಲದ ಮೇಲೂ ಹರಿದುಬರುವುದು. ಆ ದೇಶವು ಗೋಧಿ, ಜವೆಗೋಧಿ, ದ್ರಾಕ್ಷಾಲತೆಗಳು, ಅಂಜೂರ, ದಾಳಿಂಬೆ ಮರಗಳಿಂದ ತುಂಬಿದೆ. ಅಲ್ಲಿ ಎಣ್ಣೆ, ಜೇನುತುಪ್ಪ ಧಾರಾಳವಾಗಿ ಸಿಗುವವು. ಅಲ್ಲಿ ನೀವು ಯಥೇಚ್ಛವಾಗಿ ತಿನ್ನುವಿರಿ. ನಿಮಗೆ ಬೇಕಾದದ್ದೆಲ್ಲಾ ನಿಮಗಿರುವುದು. ಅಲ್ಲಿಯ ಕಲ್ಲುಗಳು ಕಬ್ಬಿಣದಂತಿವೆ. ಬೆಟ್ಟಗಳಿಂದ ನೀವು ತಾಮ್ರವನ್ನು ಅಗೆದು ತೆಗೆಯುವಿರಿ. 10 ನಿಮಗೆ ಬೇಕಾದಷ್ಟು ಆಹಾರ ಇರುವುದು. ಆಗ ನೀವು ನಿಮಗೆ ಉತ್ತಮ ದೇಶವನ್ನು ಕೊಟ್ಟಿರುವ ಯೆಹೋವ ದೇವರನ್ನು ಸ್ತುತಿಸುವಿರಿ.

ಯೆಹೋವನು ಮಾಡಿದ್ದನ್ನು ಮರೆಯಬೇಡಿರಿ

11 “ನೀವು ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡದಂತೆ ಎಚ್ಚರವಾಗಿರಿ. ನಾನು ಕೊಡುವ ವಿಧಿನಿಯಮಗಳಿಗೆ ವಿಧೇಯರಾಗಿರಿ. 12 ಆಗ ನಿಮಗೆ ಸಮೃದ್ಧಿಯಾಗಿ ಆಹಾರವಿರುವುದು. ನೀವು ಒಳ್ಳೆಯ ಮನೆಗಳನ್ನು ಕಟ್ಟಿಕೊಂಡು ವಾಸಿಸುವಿರಿ. 13 ನಿಮ್ಮ ಹಿಂಡು ವೃದ್ಧಿಯಾಗುವುದು. ನಿಮಗೆ ಬೆಳ್ಳಿಬಂಗಾರಗಳು ಹೇರಳವಾಗಿ ದೊರಕುವವು ಮತ್ತು ನೀವು ಪ್ರತಿಯೊಂದು ವಿಷಯದಲ್ಲೂ ಸಮೃದ್ಧಿಯನ್ನು ಕಾಣುವಿರಿ. 14 ಆಗ ನೀವು ಹೆಮ್ಮೆಯಿಂದ ಸೊಕ್ಕಿನ ಕಣ್ಣುಳ್ಳವರಾಗಿರಬೇಡಿ. ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡಬೇಡಿರಿ. ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ಆತನು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದನು. 15 ಆತನು ನಿಮ್ಮನ್ನು ಭಯಂಕರವಾದ ಆ ಅಡವಿಯಲ್ಲಿ ಮೊದಲು ನಡೆಸಿದನು. ಅಲ್ಲಿ ವಿಷದ ಹಾವುಗಳು, ಚೇಳುಗಳು ಇದ್ದವು. ನೆಲವು ಕಾದಿದ್ದು ಎಲ್ಲಿಯೂ ನೀರು ಸಿಗುತ್ತಿರಲಿಲ್ಲ. ಆದರೆ ನಿಮ್ಮ ದೇವರಾದ ಯೆಹೋವನು ಬಂಡೆಯೊಳಗಿಂದ ನೀರನ್ನು ನಿಮಗೆ ಒದಗಿಸಿದನು. 16 ನಿಮ್ಮ ಪೂರ್ವಿಕರು ನೋಡಿಲ್ಲದ ಮನ್ನವನ್ನು ಯೆಹೋವನು ನಿಮಗೆ ಮರುಭೂಮಿಯಲ್ಲಿ ತಿನ್ನಲು ಕೊಟ್ಟನು. ಯೆಹೋವನು ನಿಮ್ಮನ್ನು ಪರೀಕ್ಷಿಸಿದನು. ನೀವು ಒಳ್ಳೆಯ ಫಲಭರಿತವಾದ ಜೀವಿತವನ್ನು ನಡೆಸಬೇಕೆಂದು ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿದನು. 17 ‘ಇವೆಲ್ಲಾ ನಾವೇ ಸಂಪಾದಿಸಿದ್ದು, ನಮ್ಮ ಶಕ್ತಿಸಾಮರ್ಥ್ಯಗಳಿಂದ ಇವುಗಳನ್ನು ನಾವು ಪಡೆದೆವು’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿ. 18 ನಿಮ್ಮ ದೇವರಾದ ಯೆಹೋವನನ್ನು ಜ್ಞಾಪಕಮಾಡಿಕೊಳ್ಳಿ. ಇವೆಲ್ಲಾ ಸಂಪಾದಿಸುವುದಕ್ಕೆ ಆತನೇ ನಿಮಗೆ ಶಕ್ತಿ ಕೊಟ್ಟನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಯೆಹೋವನು ನಿಮಗೆ ಹೀಗೆ ಮಾಡುವುದರ ಉದ್ದೇಶವೇನಾಗಿತ್ತು? ಆತನು ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು.

19 “ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡಬೇಡಿ. ಅನ್ಯದೇವರುಗಳನ್ನು ಅನುಸರಿಸಬೇಡಿ. ಅವುಗಳನ್ನು ಪೂಜಿಸಬೇಡಿ; ಅವುಗಳ ಸೇವೆ ಮಾಡಬೇಡಿ. ಇಲ್ಲವಾದರೆ ನೀವು ಖಂಡಿತವಾಗಿ ನಾಶವಾಗುವಿರಿ. 20 ಯೆಹೋವನು ನಿಮಗೋಸ್ಕರ ಇತರ ಜನಾಂಗಗಳನ್ನು ನಾಶಮಾಡುತ್ತಾನೆ. ನಿಮ್ಮ ದೇವರಾದ ಯೆಹೋವನಿಗೆ ನೀವು ಕಿವಿಗೊಡದೆ ಅನ್ಯದೇವರುಗಳನ್ನು ಅನುಸರಿಸುವುದಾದರೆ ನೀವೂ ಅವರಂತೆ ನಾಶವಾಗುವಿರಿ.

ಕೀರ್ತನೆಗಳು 91

91 ಮಹೋನ್ನತನ ಮೊರೆಹೊಕ್ಕಿರುವವನು
    ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು.
ನಾನು ಯೆಹೋವನಿಗೆ, “ನೀನೇ ನನ್ನ ಆಶ್ರಯಸ್ಥಾನವೂ
    ನನ್ನ ಕೋಟೆಯೂ ನಾನು ಭರವಸವಿಟ್ಟಿರುವ ನನ್ನ ದೇವರೂ” ಎಂದು ಹೇಳುವೆನು.
ನಿನ್ನನ್ನು ಬೇಟೆಗಾರನ ಬಲೆಯಿಂದಲೂ
    ಮರಣಕರವಾದ ವ್ಯಾಧಿಯಿಂದಲೂ ತಪ್ಪಿಸುವವನು ಆತನೇ.
ಆತನು ನಿನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸಿಕೊಳ್ಳುವನು.
    ಆತನ ರೆಕ್ಕೆಗಳನ್ನು ನೀನು ಆಶ್ರಯಿಸಿಕೊಳ್ಳುವೆ.
    ಆತನ ನಂಬಿಗಸ್ತಿಕೆಯು ನಿನಗೆ ಗುರಾಣಿಯೂ ಕೋಟೆಯೂ ಆಗಿದೆ.
ಇರುಳಲ್ಲಿ ನೀನು ಯಾವುದಕ್ಕೂ ಭಯಪಡಬೇಕಿಲ್ಲ;
    ಹಗಲಲ್ಲಿ ಶತ್ರುಗಳ ಬಾಣಗಳಿಗೂ ನೀನು ಹೆದರಬೇಕಿಲ್ಲ.
ಕತ್ತಲೆಯಲ್ಲಿ ಬರುವ ರೋಗಗಳಿಗಾಗಲಿ
    ಮಧ್ಯಾಹ್ನದಲ್ಲಿ ಬರುವ ಭಯಂಕರ ಕಾಯಿಲೆಗಳಿಗಾಗಲಿ ನೀನು ಹೆದರಬೇಕಿಲ್ಲ.
ನೀನು ಸಾವಿರ ವೈರಿಗಳನ್ನು ಸೋಲಿಸುವೆ.
    ನಿನ್ನ ಬಲಗೈ ಹತ್ತುಸಾವಿರ ಶತ್ರು ಸೈನಿಕರನ್ನು ಸೋಲಿಸುವುದು.
    ನಿನ್ನ ಶತ್ರುಗಳಿಗೆ ನಿನ್ನನ್ನು ಮುಟ್ಟಲೂ ಸಾಧ್ಯವಾಗದು.
ನೀನು ಅದನ್ನು ಕಣ್ಣಾರೆ ಕಂಡು
    ದುಷ್ಟರಿಗೆ ದಂಡನೆಯಾಯಿತೆಂದು ತಿಳಿದುಕೊಳ್ಳುವೆ.
ಯಾಕೆಂದರೆ ನಿನ್ನ ಭರವಸವು ಯೆಹೋವನಲ್ಲಿಯೇ.
    ನಿನ್ನ ಆಶ್ರಯಸ್ಥಾನವು ಮಹೋನ್ನತನಾದ ದೇವರೇ.
10 ಯಾವ ಕೇಡೂ ನಿನಗೆ ಸಂಭವಿಸದು.
    ನಿನ್ನ ಮನೆಯಲ್ಲಿ ಯಾವ ರೋಗಗಳೂ ಇರದು.
11 ನೀನು ಹೋದಲ್ಲೆಲ್ಲಾ ನಿನ್ನನ್ನು ಕಾಯಲು ಆತನು ತನ್ನ ದೂತರಿಗೆ ಆಜ್ಞಾಪಿಸುವನು.
12 ನಿನ್ನ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರುಗಳು
    ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.
13 ಸಿಂಹಗಳ ಮೇಲೆಯೂ ಮತ್ತು
    ವಿಷಸರ್ಪಗಳ ಮೇಲೆಯೂ ನಡೆಯಲು ನೀನು ಶಕ್ತನಾಗಿರುವೆ.
14 ಯೆಹೋವನು ಹೇಳುವುದೇನೆಂದರೆ: “ನನ್ನಲ್ಲಿ ಭರವಸವಿಡುವವನನ್ನು ರಕ್ಷಿಸುವೆನು;
    ನನ್ನ ಹೆಸರನ್ನು ಆರಾಧಿಸುವ ಭಕ್ತರನ್ನು ಸಂರಕ್ಷಿಸುವೆನು.
15 ನನ್ನ ಭಕ್ತರು ಸಹಾಯಕ್ಕಾಗಿ ಮೊರೆಯಿಡುವಾಗ, ಸದುತ್ತರವನ್ನು ದಯಪಾಲಿಸುವೆನು.
    ಆಪತ್ತಿನಲ್ಲಿಯೂ ನಾನು ಅವರೊಂದಿಗಿರುವೆನು;
    ಅವರನ್ನು ತಪ್ಪಿಸಿ ಘನಪಡಿಸುವೆನು.
16 ನನ್ನ ಭಕ್ತರಿಗೆ ದೀರ್ಘಾಯುಷ್ಯವನ್ನು ನೀಡಿ ತೃಪ್ತಿಪಡಿಸುವೆನು;
    ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸಿ ಕಾಪಾಡುವೆನು.”

ಯೆಶಾಯ 36

ಅಶ್ಶೂರರು ಯೆಹೂದದ ಪ್ರವೇಶ ಮಾಡುವರು

36 ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೇ ವರ್ಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಯೆಹೂದದಲ್ಲಿ ಕೋಟೆಗಳನ್ನು ಹೊಂದಿದ್ದ ಎಲ್ಲಾ ಪಟ್ಟಣಗಳ ವಿರುದ್ಧ ದಂಡೆತ್ತಿ ಬಂದು ಅವುಗಳನ್ನೆಲ್ಲ ಸೋಲಿಸಿದನು. ಅಶ್ಶೂರದ ರಾಜನಾದ ಸನ್ಹೇರೀಬನು ತನ್ನ ಸೇನಾದಂಡನಾಯಕನನ್ನು ಒಂದು ದೊಡ್ಡ ಸೈನ್ಯದೊಡನೆ ಜೆರುಸಲೇಮಿನಲ್ಲಿದ್ದ ಅರಸನಾದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಸೇನಾದಂಡನಾಯಕ ತನ್ನ ಸೈನ್ಯದೊಡನೆ ಲಾಕೀಷಿನಿಂದ ಜೆರುಸಲೇಮಿಗೆ ಹೊರಟನು. ಅವರು ಮೇಲಿನ ಕೊಳದ ಬಳಿಯಲ್ಲಿರುವ ನೀರುಕಾಲುವೆಯ ಬಳಿ ನಿಂತರು. ಮೇಲಿನ ಕೊಳವು ಅಗಸರ ಬಯಲಿಗೆ ಹೋಗುವ ಮಾರ್ಗದಲ್ಲಿದೆ.

ಜೆರುಸಲೇಮಿನಿಂದ ಮೂರು ಮಂದಿ ಸೇನಾದಂಡನಾಯಕನೊಂದಿಗೆ ಮಾತನಾಡಲು ಹೊರಟರು. ಅವರು ಯಾರೆಂದರೆ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಆಸಾಫನ ಮಗನಾದ ಯೋವ ಮತ್ತು ಶೆಬ್ನ. ಎಲ್ಯಾಕೀಮನು ಅರಮನೆಯ ಆಡಳಿತಗಾರನಾಗಿದ್ದನು; ಯೋವನು ದಾಖಲೆಕಾರನಾಗಿದ್ದನು; ಶೆಬ್ನ ಅರಮನೆಯ ಕಾರ್ಯದರ್ಶಿಯಾಗಿದ್ದನು.

ಸೇನಾದಂಡನಾಯಕನು ಅವರಿಗೆ, “ಮಹಾರಾಜನಾದ ಅಶ್ಶೂರದ ಅರಸನು ಹಿಜ್ಕೀಯನಿಗೆ ಹೇಳುವುದನ್ನು ನೀವು ಹೋಗಿ ಅವನಿಗೆ ತಿಳಿಸಿರಿ. ಅವನು ಹೇಳುವುದೇನೆಂದರೆ:

“‘ನೀನು ಯಾವುದರ ಮೇಲೆ ಭರವಸವಿಟ್ಟಿರುವೆ? ನೀನು ನಿನ್ನ ಶಕ್ತಿಯಲ್ಲಿಯೂ ಯುದ್ಧದ ತಂತ್ರೋಪಾಯಗಳ ಮೇಲೆಯೂ ಭರವಸವಿಟ್ಟಿದ್ದರೆ ಅವು ಕೇವಲ ನಿಷ್ಪ್ರಯೋಜಕವಾಗಿವೆ; ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಿರುವೆ? ನೀನು ನನ್ನ ವಿರುದ್ಧ ದಂಗೆ ಏಳಬೇಕಾದರೆ ಯಾರ ಮೇಲೆ ಭರವಸವಿಟ್ಟಿರುವೆ? ಈಜಿಪ್ಟು ನಿನಗೆ ಸಹಾಯ ಮಾಡುವುದೆಂದು ನಂಬಿರುವಿಯಾ? ಈಜಿಪ್ಟು ಒಂದು ಮುರಿದ ದಂಟು. ಅದರ ಮೇಲೆ ನೀನು ಭಾರಹಾಕಿದರೆ ಅದು ನಿನ್ನ ಅಂಗೈಯಲ್ಲಿ ರಂಧ್ರಮಾಡುವುದು. ಈಜಿಪ್ಟಿನ ರಾಜನಾದ ಫರೋಹನ ಸಹಾಯಕ್ಕಾಗಿ ಆಶ್ರಯಿಸಿಕೊಂಡ ಯಾವ ಜನರೂ ಅವನಲ್ಲಿ ಭರವಸೆ ಇಡಲಾಗದು.

“‘ಒಂದುವೇಳೆ ನೀವು, “ನಾವು ನಮ್ಮ ದೇವರಾದ ಯೆಹೋವನ ಮೇಲೆ ಭರವಸವಿಟ್ಟಿದ್ದೇವೆ” ಎಂದು ಹೇಳಬಹುದು. ಆದರೆ ಜನರು ಯೆಹೋವನನ್ನು ಆರಾಧಿಸುತ್ತಿದ್ದ ವೇದಿಕೆಗಳನ್ನೂ ಎತ್ತರವಾದ ಸ್ಥಳಗಳನ್ನೂ ಹಿಜ್ಕೀಯನು ನಾಶಮಾಡಿದ್ದಾನೆ. ಅಲ್ಲದೆ, ಯೆಹೂದ ಮತ್ತು ಜೆರುಸಲೇಮಿನಲ್ಲಿರುವ ಜನರಿಗೆ, “ನೀವು ಜೆರುಸಲೇಮಿನಲ್ಲಿರುವ ಯಜ್ಞವೇದಿಕೆಯಲ್ಲಿಯೇ ಆರಾಧಿಸಬೇಕು” ಎಂದು ಆಜ್ಞಾಪಿಸಿರುವುದು ನನಗೆ ಗೊತ್ತಿದೆ.

“‘ನೀವು ನನ್ನ ಒಡೆಯನಾದ ಅರಸನೊಂದಿಗೆ ಯುದ್ಧಮಾಡುವ ಆಲೋಚನೆಯನ್ನು ಇನ್ನೂ ಹೊಂದಿದ್ದರೆ, ನಿಮ್ಮೊಂದಿಗೆ ಈ ಒಪ್ಪಂದವನ್ನು ಮಾಡಿಕೊಳ್ಳುವೆನು. ಯುದ್ಧಕ್ಕೆ ಬರಲು ನಿಮ್ಮಲ್ಲಿ ಸಾಕಷ್ಟು ಸೈನಿಕರಿದ್ದಾರೆ. ನಾನು ನಿಮಗೆ ಎರಡುಸಾವಿರ ಕುದುರೆಗಳನ್ನು ಕೊಡುವುದಾಗಿ ವಾಗ್ದಾನ ಮಾಡುತ್ತೇನೆ. ಹೀಗಿದ್ದರೂ ನನ್ನ ಒಡೆಯನ ಸೈನ್ಯಾಧಿಕಾರಿಗಳಲ್ಲಿ ಕನಿಷ್ಠನಾದವನನ್ನು ಸೋಲಿಸಲು ನಿಮ್ಮಿಂದಾಗದು. ಆದ್ದರಿಂದ ನೀವು ಈಜಿಪ್ಟಿನವರ ಅಶ್ವದಳದ ಮೇಲೆ ಯಾಕೆ ಭರವಸವಿಡುತ್ತೀರಿ?

10 “‘ಈಗ ನಾನು ಯೆಹೋವನ ಸಹಾಯವಿಲ್ಲದೆ ಈ ದೇಶವನ್ನು ನಾಶಮಾಡಲು ಬಂದೆನೆಂದು ನೆನಸುತ್ತೀರೋ? “ಎದ್ದುಹೋಗಿ ಈ ದೇಶದ ವಿರುದ್ಧ ಯುದ್ಧ ನಡೆಸಿ ಅದನ್ನು ಸಂಪೂರ್ಣವಾಗಿ ನಾಶಮಾಡು” ಎಂದು ಯೆಹೋವನು ನನಗೆ ಹೇಳಿದ್ದಾನೆ.’”

11 ಆಗ ಎಲ್ಯಾಕೀಮ್, ಶೆಬ್ನ ಮತ್ತು ಯೋವ ಎಂಬವರು ಆ ಸೇನಾದಂಡನಾಯಕನಿಗೆ, “ದಯಮಾಡಿ ನಮ್ಮೊಂದಿಗೆ ಅರಮೇಯಿಕ್ ಭಾಷೆಯಲ್ಲಿ ಮಾತನಾಡು. ಆ ಭಾಷೆಯು ನಮಗೆ ಗೊತ್ತು. ಯೆಹೂದದ ಭಾಷೆಯಲ್ಲಿ ನಮ್ಮೊಂದಿಗೆ ಮಾತನಾಡಬೇಡ. ನೀವು ನಮ್ಮ ಭಾಷೆಯಲ್ಲಿ ಮಾತನಾಡಿದರೆ ಗೋಡೆಯ ಮೇಲಿರುವ ನಮ್ಮ ಜನರು ತಿಳಿದುಕೊಳ್ಳುವರು” ಎಂದು ಹೇಳಿದರು.

12 ಸೇನಾದಂಡನಾಯಕನು ಅದಕ್ಕುತ್ತರವಾಗಿ, “ನನ್ನ ಒಡೆಯನು ನಿಮ್ಮೊಂದಿಗೂ ನಿಮ್ಮ ಅರಸನೊಂದಿಗೂ ಮಾತ್ರ ಮಾತನಾಡಲು ಕಳುಹಿಸಲಿಲ್ಲ. ನನ್ನ ಒಡೆಯನು ಕೋಟೆಗೋಡೆಯ ಮೇಲೆ ಕುಳಿತಿರುವ ಜನರೊಂದಿಗೆ ಮಾತಾಡಲು ಕಳುಹಿಸಿದ್ದಾನೆ. ಆ ಜನರಿಗೆ ಊಟಕ್ಕೆ ಆಹಾರ, ಕುಡಿಯಲು ನೀರು ದೊರಕುವದಿಲ್ಲ. ಅವರು ನಿಮ್ಮ ಹಾಗೆ ತಮ್ಮ ಸ್ವಂತ ಮಲವನ್ನು ತಿಂದು ಮೂತ್ರವನ್ನು ಕುಡಿಯುವರು” ಎಂದು ಹೇಳಿದನು.

13 ಬಳಿಕ ಸೇನಾದಂಡನಾಯಕನು ಯೆಹೂದ್ಯ ಭಾಷೆಯಲ್ಲಿ ಗಟ್ಟಿಯಾಗಿ, 14 “ಮಹಾರಾಜನಾಗಿರುವ ಅಶ್ಶೂರದ ಅರಸನ ಮಾತುಗಳನ್ನು ಕೇಳಿರಿ:

“‘ಹಿಜ್ಕೀಯನು ನಿಮ್ಮನ್ನು ಮೋಸಪಡಿಸದಂತೆ ನೋಡಿಕೊಳ್ಳಿರಿ. ಅವನು ನಮ್ಮ ಸಾಮರ್ಥ್ಯದಿಂದ ನಿಮ್ಮನ್ನು ರಕ್ಷಿಸಲಾರನು. 15 “ಯೆಹೋವನನ್ನು ನಂಬಿರಿ. ಆತನು ನಮ್ಮನ್ನು ರಕ್ಷಿಸುವನು. ಅಶ್ಶೂರದ ಅರಸನು ನಮ್ಮ ಪಟ್ಟಣವನ್ನು ಸೋಲಿಸಲು ಬಿಡುವದಿಲ್ಲ” ಎಂದು ಹಿಜ್ಕೀಯನು ಹೇಳಿದರೆ ಅವನನ್ನು ನಂಬಬೇಡಿ.

16 “‘ಹಿಜ್ಕೀಯನ ಮಾತುಗಳನ್ನು ಕೇಳಬೇಡಿ. ಅಶ್ಶೂರದ ಅರಸನ ಮಾತುಗಳಿಗೆ ಕಿವಿಗೊಡಿರಿ. ಅವನು ಹೇಳುವುದೇನೆಂದರೆ: “ನೀವು ನನ್ನೊಡನೆ ಒಪ್ಪಂದ ಮಾಡಿಕೊಂಡು ನಿಮ್ಮ ನಗರದಿಂದ ಹೊರಗೆ ಬಂದು ನನ್ನನ್ನು ಸಂಧಿಸಬೇಕು. ಆಗ ನೀವೆಲ್ಲರೂ ನಿಮ್ಮ ಮನೆಗಳಿಗೆ ಹೋಗಬಹುದು; ನಿಮ್ಮ ಸ್ವಂತ ದ್ರಾಕ್ಷಿತೋಟದ ದ್ರಾಕ್ಷಿಹಣ್ಣುಗಳನ್ನು ತಿನ್ನಬಹುದು; ಅಂಜೂರದ ಮರದ ಹಣ್ಣನ್ನು ತಿನ್ನಬಹುದು ನೀವೆಲ್ಲರೂ ನಿಮ್ಮ ಬಾವಿಯ ನೀರನ್ನು ಕುಡಿಯಬಹುದು. 17 ಹೀಗೆ ನೀವು ಸೇವಿಸುತ್ತಾ ಇದ್ದರೆ ನಾನು ಬಂದು ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ನಿಮ್ಮನ್ನು ಕರೆದೊಯ್ಯವೆನು. ಆ ಹೊಸ ದೇಶದಲ್ಲಿ ನೀವು ಒಳ್ಳೆಯ ಧಾನ್ಯವನ್ನು ಮತ್ತು ಹೊಸ ದ್ರಾಕ್ಷಾರಸವನ್ನು, ರೊಟ್ಟಿಯನ್ನು ಮತ್ತು ದ್ರಾಕ್ಷಿತೋಟಗಳನ್ನು ಹೊಂದುವಿರಿ.”

18 “‘ಹಿಜ್ಕೀಯನು ತನ್ನ ಮಾತುಗಳಿಂದ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ. ಅವನು, “ಯೆಹೋವನು ನಮ್ಮನ್ನು ರಕ್ಷಿಸುತ್ತಾನೆ” ಎಂದು ಹೇಳುತ್ತಾನೆ. ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ. ಬೇರೆ ದೇಶದ ದೇವರುಗಳು ಅವರ ದೇಶವನ್ನು ಅಶ್ಶೂರದ ಅರಸನಿಂದ ಕಾಪಾಡಲು ಶಕ್ತರಾದರೋ? ಇಲ್ಲ! 19 ಹಮಾತಿನ, ಅರ್ಪಾದಿನ ದೇವರೆಲ್ಲಿ? ಅವರು ಸೋತುಹೋದರು. ಸೆಫರ್ವಯಿಮಿನ ದೇವರುಗಳೆಲ್ಲಿ? ಅವರು ಸಮಾರ್ಯವನ್ನು ನನ್ನ ಬಲದಿಂದ ರಕ್ಷಿಸಿದರೋ? ಇಲ್ಲ! 20 ಬೇರೆ ಯಾವ ದೇಶದ ದೇವರುಗಳು ನನ್ನ ಕೈಯಿಂದ ತಮ್ಮ ಜನರನ್ನು ತಪ್ಪಿಸಿ ಕಾಪಾಡಿದರು? ಹೀಗಿರಲು ಯೆಹೋವನು ಜೆರುಸಲೇಮನ್ನು ನನ್ನಿಂದ ರಕ್ಷಿಸುವನೋ? ಇಲ್ಲ.’”

21 ಇದನ್ನು ಕೇಳಿ ಜೆರುಸಲೇಮಿನ ಜನರು ಮೌನವಾದರು. ಅವರು ಸೇನಾದಂಡನಾಯಕನಿಗೆ ಯಾವ ಉತ್ತರವನ್ನೂ ಕೊಡಲಿಲ್ಲ. ಯಾಕೆಂದರೆ ಹಿಜ್ಕೀಯನು ಅವರ ಸಂಗಡ ಮಾತಾಡಬಾರದೆಂದು ಹೇಳಿದ್ದನು.

22 ಹಿಲ್ಕೀಯನ ಮಗನೂ ಅರಮನೆಯ ಆಡಳಿತಾಧಿಕಾರಿಯೂ ಆಗಿದ್ದ ಎಲ್ಯಾಕೀಮ್, ಲೇಖಕನಾದ ಶೆಬ್ಹ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬವರು ತಮ್ಮ ಬಟ್ಟೆಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ಅಶ್ಶೂರದ ಸೇನಾದಂಡನಾಯಕ ಹೇಳಿದ್ದನ್ನೆಲ್ಲಾ ತಿಳಿಸಿದರು.

ಪ್ರಕಟನೆ 6

ಕುರಿಮರಿಯು ಸುರುಳಿಯನ್ನು ಬಿಚ್ಚಿತು

ನಂತರ ಕುರಿಮರಿಯು ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ಗಮನಿಸಿದೆನು. ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಗುಡುಗಿನಂತೆ ಮಾತನಾಡುವುದನ್ನು ನಾನು ಕೇಳಿದೆನು. ಅದು “ಬಾ!” ಎಂದು ಹೇಳಿತು. ನಾನು ನೋಡಿದಾಗ ನನ್ನ ಮುಂದೆ ಒಂದು ಬಿಳಿ ಕುದುರೆಯಿರುವುದು ನನಗೆ ಕಾಣಿಸಿತು. ಕುದುರೆಯ ಮೇಲಿದ್ದ ಸವಾರನ ಕೈಯಲ್ಲಿ ಒಂದು ಬಿಲ್ಲು ಇತ್ತು. ಆ ಸವಾರನಿಗೆ ಒಂದು ಕಿರೀಟವನ್ನು ಕೊಡಲಾಯಿತು. ಅವನು ಶತ್ರುವನ್ನು ಸೋಲಿಸುತ್ತಾ ಜಯಗಳಿಸುವುದಕ್ಕಾಗಿ ಹೊರಟನು.

ಆ ಕುರಿಮರಿಯು ಎರಡನೆಯ ಮುದ್ರೆಯನ್ನು ತೆಗೆಯಿತು. ಆಗ ಎರಡನೆಯ ಜೀವಿಯು, “ಬಾ!” ಎಂದು ಹೇಳಿದ್ದನ್ನು ಕೇಳಿದೆನು. ಆಗ ಮತ್ತೊಂದು ಕುದುರೆಯು ಹೊರಗೆ ಬಂದಿತು. ಇದು ಕೆಂಪು ಕುದುರೆಯಾಗಿತ್ತು. ಈ ಕುದುರೆಯ ಮೇಲೆ ಕುಳಿತಿದ್ದ ಸವಾರನಿಗೆ ಲೋಕದಲ್ಲಿದ್ದ ಶಾಂತಿಯನ್ನು ತೆಗೆದುಹಾಕಲೂ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡಲೂ ಅವನಿಗೆ ಅಧಿಕಾರವನ್ನು ನೀಡಲಾಗಿತ್ತು. ಈ ಸವಾರನಿಗೆ ಒಂದು ಮಹಾಖಡ್ಗವನ್ನೂ ಕೊಡಲಾಗಿತ್ತು.

ಆ ಕುರಿಮರಿಯು ಮೂರನೆಯ ಮುದ್ರೆಯನ್ನು ತೆಗೆಯಿತು. ಆಗ ಮೂರನೆಯ ಜೀವಿಯು, “ಬಾ” ಎಂದು ಹೇಳುವುದನ್ನು ನಾನು ಕೇಳಿದೆನು. ನಾನು ನೋಡಿದಾಗ, ನನ್ನ ಮುಂದೆ ಒಂದು ಕಪ್ಪು ಕುದುರೆಯಿರುವುದು ನನಗೆ ಕಾಣಿಸಿತು. ಆ ಕುದುರೆಯ ಮೇಲಿದ್ದ ಸವಾರನು ತನ್ನ ಕೈಯಲ್ಲಿ ಎರಡು ತಕ್ಕಡಿಗಳನ್ನು ಹಿಡಿದಿದ್ದನು. ಆಗ ಒಬ್ಬನ ಸ್ವರವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಆ ನಾಲ್ಕು ಜೀವಿಗಳಿದ್ದ ಸ್ಥಳದಿಂದ ಈ ಧ್ವನಿಯು ಹೊರ ಹೊಮ್ಮಿತು. ಆ ಧ್ವನಿಯು, “ಒಂದು ದಿನದ ಕೆಲಸಕ್ಕೆ ಒಂದು ಕಿಲೋಗ್ರಾಂ ಗೋಧಿ. ಒಂದು ದಿನದ ಕೆಲಸಕ್ಕೆ ಮೂರು ಕಿಲೋಗ್ರಾಂ ಬಾರ್ಲಿ. ಆದರೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಕೆಡಿಸಬೇಡಿ!” ಎಂದು ಹೇಳಿತು.

ಆ ಕುರಿಮರಿಯು ನಾಲ್ಕನೆಯ ಮುದ್ರೆಯನ್ನು ತೆರೆಯಿತು. ಆಗ ನಾಲ್ಕನೆಯ ಜೀವಿಯು, “ಬಾ” ಎಂದು ಹೇಳಿದ ಧ್ವನಿಯು ನನಗೆ ಕೇಳಿಸಿತು. ನಾನು ನೋಡಿದಾಗ, ನನ್ನ ಮುಂದೆ ಒಂದು ಬೂದುಬಣ್ಣದ ಕುದುರೆಯಿರುವುದು ನನಗೆ ಕಾಣಿಸಿತು. ಆ ಕುದುರೆಯ ಮೇಲೆ ಕುಳಿತಿದ್ದ ಸವಾರನೇ ಮೃತ್ಯು.[a] ಅವನ ಹಿಂದೆ ಪಾತಾಳ ಎಂಬುವನು ಬಂದನು. ಅವರಿಗೆ ಭೂಮಿಯ ಕಾಲುಭಾಗದ ಮೇಲೆ ಅಧಿಕಾರವನ್ನು ನೀಡಲಾಯಿತು. ಕತ್ತಿಯಿಂದಲೂ ಬರಗಾಲದಿಂದಲೂ ರೋಗಗಳಿಂದಲೂ ಮತ್ತು ಲೋಕದ ಮೇಲಿರುವ ಕಾಡುಮೃಗಗಳಿಂದಲೂ ಜನರನ್ನು ಕೊಲ್ಲುವ ಅಧಿಕಾರವನ್ನು ಅವರಿಗೆ ನೀಡಲಾಯಿತು.

ಕುರಿಮರಿಯು ಐದನೆಯ ಮುದ್ರೆಯನ್ನು ತೆರೆಯಿತು. ಆಗ ಯಜ್ಞವೇದಿಕೆಯ ಕೆಳಗೆ ಕೆಲವು ಆತ್ಮಗಳಿರುವುದನ್ನು ನಾನು ನೋಡಿದೆನು. ದೇವರ ಸಂದೇಶಕ್ಕೂ ತಾವು ಸ್ವೀಕರಿಸಿ ಕೊಂಡ ಸತ್ಯಕ್ಕೂ ನಂಬಿಗಸ್ತರಾಗಿದ್ದ ಕಾರಣ ಕೊಲ್ಲಲ್ಪಟ್ಟವರ ಆತ್ಮಗಳೇ ಅವು. 10 ಈ ಆತ್ಮಗಳು, “ಪವಿತ್ರನಾದ ಮತ್ತು ಸತ್ಯವಂತನಾದ ಪ್ರಭುವೇ, ನಮ್ಮನ್ನು ಕೊಂದ ಜನರಿಗೆ ತೀರ್ಪು ನೀಡಲು ಮತ್ತು ಅವರನ್ನು ದಂಡಿಸಲು ನೀನು ಎಷ್ಟು ಕಾಲ ತೆಗೆದುಕೊಳ್ಳುವೆ?” ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದವು. 11 ಆ ಆತ್ಮಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ಬಿಳಿ ನಿಲುವಂಗಿಯನ್ನು ಕೊಡಲಾಯಿತು. ಇನ್ನೂ ಸ್ವಲ್ಪಕಾಲ ಕಾಯುವಂತೆ ಅವುಗಳಿಗೆ ತಿಳಿಸಲಾಯಿತು. ಅವರ ಸಹೋದರರಲ್ಲಿ ಕೆಲವರು ಇನ್ನೂ ಕ್ರಿಸ್ತನ ಸೇವೆಯಲ್ಲಿದ್ದಾರೆ. ಅವರೂ ಕೊಲ್ಲಲ್ಪಡಬೇಕು. ಈ ಕೊಲೆಗಳೆಲ್ಲಾ ಮುಗಿಯುವ ತನಕ ಕಾಯಬೇಕೆಂದು ಆ ಆತ್ಮಗಳಿಗೆ ಹೇಳಲಾಯಿತು.

12 ಆ ಕುರಿಮರಿಯು ಆರನೆಯ ಮುದ್ರೆಯನ್ನು ತೆರೆಯುವುದನ್ನು ನಾನು ನೋಡುತ್ತಲೇ ಇದ್ದೆನು. ಆಗ ಮಹಾಭೂಕಂಪವಾಯಿತು. ಸೂರ್ಯನು ಕಪ್ಪು ಕಂಬಳಿಯಂತೆ ಕಪ್ಪಾದನು. ಪೂರ್ಣಚಂದ್ರನು ರಕ್ತದಂತೆ ಕೆಂಪಾದನು. 13 ಆಕಾಶದಲ್ಲಿದ್ದ ನಕ್ಷತ್ರಗಳು, ಬಿರುಗಾಳಿ ಬೀಸಿದಾಗ ಅಂಜೂರದ ಹಣ್ಣುಗಳು ಮರದಿಂದ ಭೂಮಿಯ ಮೇಲೆ ಉದುರುವಂತೆ ಉದುರಿದವು. 14 ಆಕಾಶವು ವಿಭಾಗಗೊಂಡು ಸುರುಳಿಯಂತೆ ಸುತ್ತಲ್ಪಟ್ಟಿತು. ಪ್ರತಿಯೊಂದು ಬೆಟ್ಟ ಮತ್ತು ದ್ವೀಪಗಳು ತಮ್ಮ ನೆಲೆಯಿಂದ ಚಲಿಸಿದವು.

15 ಆಗ ಲೋಕದ ರಾಜರುಗಳೂ ಅಧಿಪತಿಗಳೂ ಸೇನಾಧಿಪತಿಗಳೂ ಶ್ರೀಮಂತರೂ ಬಲಿಷ್ಠರೂ ಪ್ರತಿಯೊಬ್ಬ ಗುಲಾಮನೂ ಸ್ವತಂತ್ರ ಪ್ರಜೆಯೂ ಗವಿಗಳಲ್ಲಿ ಮತ್ತು ಬೆಟ್ಟಗಳ ಮೇಲಿನ ಬಂಡೆಗಳ ಮರೆಯಲ್ಲಿ ಅಡಗಿಕೊಂಡರು. 16 ಆ ಜನರು ಬೆಟ್ಟಗಳಿಗೆ ಮತ್ತು ಬಂಡೆಗಳಿಗೆ, “ನಮ್ಮ ಮೇಲೆ ಬೀಳಿರಿ. ಸಿಂಹಾಸನದ ಮೇಲೆ ಕುಳಿತಿರುವಾತನ ದೃಷ್ಟಿಯಿಂದ ನಮ್ಮನ್ನು ಮರೆಮಾಡಿ; ಕುರಿಮರಿಯಾದಾತನ ಕೋಪದಿಂದ ನಮ್ಮನ್ನು ಮರೆಮಾಡಿ; 17 ಆತನ ಕೋಪವು ಪ್ರಕಟವಾಗುವ ಮಹಾದಿನವು ಬಂದುಬಿಟ್ಟಿದೆ. ಆ ಕೋಪದ ಎದುರಿನಲ್ಲಿ ನಿಲ್ಲಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International