M’Cheyne Bible Reading Plan
ದಶಾಜ್ಞೆಗಳು
5 ಇಸ್ರೇಲ್ ಸಮೂಹದವರನ್ನೆಲ್ಲಾ ಮೋಶೆ ಒಟ್ಟಾಗಿ ಸೇರಿಸಿ ಅವರಿಗೆ ಹೇಳಿದ್ದೇನೆಂದರೆ: “ಇಸ್ರೇಲ್ ಜನರೇ, ನಾನು ಈ ಹೊತ್ತು ಹೇಳುವ ಕಟ್ಟಳೆಗಳಿಗೆ ಕಿವಿಗೊಡಿರಿ. ಇವುಗಳನ್ನು ಕಲಿತುಕೊಂಡು ಪಾಲಿಸುವವರಾಗಿರಿ. 2 ಹೋರೇಬ್ ಎಂಬ ಸೀನಾಯಿ ಪರ್ವತದಲ್ಲಿ ಯೆಹೋವ ದೇವರು ನಮ್ಮೊಂದಿಗೆ ಒಡಂಬಡಿಕೆಯನ್ನು ಮಾಡಿರುತ್ತಾನೆ. 3 ಯೆಹೋವನು ನಮ್ಮ ಪೂರ್ವಿಕರೊಂದಿಗೆ ಒಡಂಬಡಿಕೆ ಮಾಡದೆ ಈಗ ಇಲ್ಲಿ ಜೀವಂತರಾಗಿರುವ ನಮ್ಮೊಂದಿಗೆ ಮಾಡಿರುತ್ತಾನೆ. 4 ಆ ಪರ್ವತದಲ್ಲಿ ಯೆಹೋವನು ನಿಮ್ಮೊಂದಿಗೆ ಮುಖಾಮುಖಿಯಾಗಿ ಬೆಂಕಿಯೊಳಗಿಂದ ನಿಮ್ಮೊಂದಿಗೆ ಮಾತಾಡಿರುತ್ತಾನೆ. 5 ಆದರೆ ನೀವು ಬೆಂಕಿಗೆ ಭಯಪಟ್ಟಿದ್ದರಿಂದ ಬೆಟ್ಟವನ್ನು ಏರಲಿಲ್ಲ. ಆಗ ನಾನು ನಿಮಗೂ ಯೆಹೋವನಿಗೂ ಮಧ್ಯದಲ್ಲಿದ್ದುಕೊಂಡು ಯೆಹೋವನು ಹೇಳಿದ್ದನ್ನು ತಿಳಿಸಿದೆನು.
6 “ಯೆಹೋವನು ಹೇಳಿದ್ದೇನೆಂದರೆ:
‘ನಾನು ನಿಮ್ಮ ದೇವರಾದ ಯೆಹೋವನು. ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ನಿಮ್ಮನ್ನು ಅಲ್ಲಿಂದ ಬಿಡುಗಡೆ ಮಾಡಿದೆನು. ಆದ್ದರಿಂದ ನೀವು ಈ ಆಜ್ಞೆಗಳಿಗೆ ವಿಧೇಯರಾಗಬೇಕು:
7 ‘ನೀವು ನನ್ನ ಹೊರತು ಬೇರೆ ಯಾವ ದೇವರುಗಳನ್ನೂ ಪೂಜಿಸಬಾರದು.
8 ‘ನೀವು ವಿಗ್ರಹಗಳನ್ನು ಮಾಡಿಕೊಳ್ಳಬಾರದು. ಆಕಾಶದ ಮೇಲಾಗಲಿ ಭೂಮಿಯ ಮೇಲಾಗಲಿ ಭೂಮಿಯ ಕೆಳಗಿರುವ ನೀರಿನಲ್ಲಾಗಲಿ ಯಾವ ವಸ್ತುಗಳ ವಿಗ್ರಹಗಳನ್ನಾಗಲಿ ಪ್ರತಿಮೆಗಳನ್ನಾಗಲಿ ಮಾಡಿಕೊಳ್ಳಬಾರದು. 9 ನಾನೇ ನಿಮ್ಮ ದೇವರಾದ ಯೆಹೋವನು. ಆದ್ದರಿಂದ ನೀವು ಯಾವ ವಿಗ್ರಹವನ್ನೂ ಪೂಜಿಸಬಾರದು ಮತ್ತು ಅದರ ಸೇವೆ ಮಾಡಬಾರದು. ನನ್ನ ಜನರು ಇತರ ದೇವರುಗಳನ್ನು ಆರಾಧಿಸುವುದನ್ನು ನಾನು ದ್ವೇಷಿಸುತ್ತೇನೆ. ನನಗೆ ವಿರುದ್ಧವಾಗಿ ಪಾಪ ಮಾಡಿದವರನ್ನು ನಾನು ಶಿಕ್ಷಿಸುತ್ತೇನೆ. ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ನನ್ನ ದಂಡನೆಗೆ ಗುರಿಯಾಗುವರು. 10 ಆದರೆ ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳಿಗೆ ವಿಧೇಯರಾಗುವವರ ಮೇಲೆ ನಾನು ದಯೆ ತೋರಿಸುವೆನು. ಅವರ ಕುಟುಂಬಗಳವರಿಗೆ ಸಾವಿರ ತಲೆಮಾರುಗಳವರೆಗೂ ಕರುಣೆಯನ್ನು ತೋರಿಸುವೆನು.
11 ‘ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತಬಾರದು. ಯಾರಾದರೂ ಅಯೋಗ್ಯ ಕಾರ್ಯಕ್ಕಾಗಿ ನನ್ನ ಹೆಸರನ್ನು ಉಪಯೋಗಿಸಿದರೆ ನಾನು ಅವನನ್ನು ಶಿಕ್ಷಿಸುವೆನು.
12 ‘ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ಸಬ್ಬತ್ ದಿನವನ್ನು ವಿಶೇಷದಿನವೆಂದು ಪರಿಗಣಿಸಬೇಕು. 13 ವಾರದ ಆರು ದಿನಗಳಲ್ಲಿ ಕೆಲಸಮಾಡಿರಿ. 14 ಆದರೆ ಏಳನೆಯ ದಿನವು ವಿಶ್ರಾಂತಿಯ ದಿನವಾಗಿದೆ. ಆ ದಿನ ಯಾರೂ ಕೆಲಸ ಮಾಡಬಾರದು. ನೀವು ಮಾತ್ರವೇ ಅಲ್ಲ, ನಿಮ್ಮ ಮಕ್ಕಳು, ಸೇವಕರು, ನಿಮ್ಮ ಪಶುಗಳು, ನಿಮ್ಮಲ್ಲಿರುವ ಪರದೇಶಿಯರು ಕೆಲಸಮಾಡದೆ ವಿಶ್ರಾಂತಿಯಲ್ಲಿರಬೇಕು. ನಿಮ್ಮ ದೇವರಾದ ಯೆಹೋವನ ಗೌರವಾರ್ಥವಾಗಿ ಸಬ್ಬತ್ ದಿನವು ವಿಶ್ರಾಂತಿಯ ದಿನವಾಗಿದೆ. 15 ನೀವು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಿರೆಂಬುದನ್ನು ಮರೆಯಬೇಡಿ. ನಿಮ್ಮ ದೇವರಾದ ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದಲೇ ನಿಮ್ಮ ದೇವರು ಸಬ್ಬತ್ ದಿನವನ್ನು ಆಚರಿಸಬೇಕೆಂದು ಆಜ್ಞೆ ಮಾಡಿದ್ದು.
16 ‘ನಿಮ್ಮ ತಂದೆತಾಯಿಗಳನ್ನು ನೀವು ಸನ್ಮಾನಿಸಬೇಕು. ಇದು ನಿಮ್ಮ ದೇವರ ಆಜ್ಞೆ. ನೀವು ಇದಕ್ಕೆ ವಿಧೇಯರಾದರೆ ದೇವರು ನಿಮಗೆ ಕೊಡುವ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ ಮತ್ತು ನಿಮಗೆ ಯಾವಾಗಲೂ ಶುಭವಿರುವುದು.
17 ‘ಕೊಲೆ ಮಾಡಬಾರದು.
18 ‘ವ್ಯಭಿಚಾರ ಮಾಡಬಾರದು.
19 ‘ಕದಿಯಬಾರದು.
20 ‘ಇತರರ ವಿಷಯವಾಗಿ ಸುಳ್ಳುಸಾಕ್ಷಿ ಹೇಳಬಾರದು.
21 ‘ಇನ್ನೊಬ್ಬನ ಹೆಂಡತಿಯನ್ನು ಆಶಿಸಬಾರದು. ಅವನ ಮನೆಯನ್ನಾಗಲಿ ಹೊಲವನ್ನಾಗಲಿ ಸೇವಕರನ್ನಾಗಲಿ ದನವನ್ನಾಗಲಿ ಕತ್ತೆಯನ್ನಾಗಲಿ ನೀವು ಅಪೇಕ್ಷಿಸಬಾರದು. ಇನ್ನೊಬ್ಬನ ವಸ್ತುಗಳಲ್ಲಿ ಯಾವುದನ್ನೂ ಆಶಿಸಬಾರದು!’”
ಜನರು ದೇವರಿಗೆ ಹೆದರಿದರು
22 ಮೋಶೆಯು ಹೇಳಿದ್ದೇನೆಂದರೆ: “ನೀವೆಲ್ಲಾ ಆ ಬೆಟ್ಟದ ಬಳಿಯಲ್ಲಿರುವಾಗ ದೇವರಾದ ಯೆಹೋವನು ಈ ಆಜ್ಞೆಗಳನ್ನು ನಿಮಗೆ ಕೊಟ್ಟನು. ಬೆಂಕಿ, ಮೋಡ ಮತ್ತು ಕಾರ್ಗತ್ತಲೊಳಗಿನಿಂದ ಯೆಹೋವನು ಗಟ್ಟಿಯಾದ ಸ್ವರದಲ್ಲಿ ಮಾತಾಡಿದ್ದನ್ನು ನೀವು ಕೇಳಿದಿರಿ. ಆತನು ಈ ಆಜ್ಞೆಗಳನ್ನು ಕೊಟ್ಟ ಬಳಿಕ ಬೇರೆ ಏನನ್ನೂ ಹೇಳಲಿಲ್ಲ. ಆತನು ತನ್ನ ಮಾತುಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದು ನನಗೆ ಕೊಟ್ಟನು.
23 “ಬೆಟ್ಟವು ಬೆಂಕಿಯಿಂದ ಉರಿಯುತ್ತಿರುವಾಗ ಕಾರ್ಗತ್ತಲೆಯಿಂದ ಬಂದ ಸ್ವರವನ್ನು ನೀವು ಕೇಳಿದಿರಿ. ಆಗ ನಿಮ್ಮ ಹಿರಿಯರು, ಕುಲಪ್ರಧಾನರು ನನ್ನ ಬಳಿಗೆ ಬಂದು ಹೇಳಿದ್ದೇನೆಂದರೆ: 24 ‘ನಮ್ಮ ದೇವರಾದ ಯೆಹೋವನು ತನ್ನ ಮಹಿಮೆಯನ್ನೂ ಪ್ರತಾಪವನ್ನೂ ನಮಗೆ ತೋರಿಸಿದ್ದಾನೆ. ಬೆಂಕಿಯೊಳಗಿಂದ ಆತನು ಮಾತನಾಡಿದ್ದನ್ನು ನಾವು ಕೇಳಿದ್ದೇವೆ. ದೇವರು ಒಬ್ಬನೊಡನೆ ಸ್ವತಃ ಮಾತನಾಡಿದ ಬಳಿಕವೂ ಅವನು ಜೀವದಿಂದುಳಿಯಲು ಸಾಧ್ಯ ಎಂಬುದನ್ನು ನಾವು ಕಣ್ಣಾರೆ ಕಂಡೆವು. 25 ಆದರೆ ನಮ್ಮ ದೇವರಾದ ಯೆಹೋವನು ಮಾತನಾಡುವುದನ್ನು ನಾವು ಮತ್ತೆ ಕೇಳಿದರೆ ಖಂಡಿತವಾಗಿ ಸಾಯುವೆವು. ಆ ಭಯಂಕರವಾದ ಬೆಂಕಿಯು ನಮ್ಮನ್ನು ದಹಿಸುವುದು. ನಮಗೆ ಸಾಯಲು ಇಷ್ಟವಿಲ್ಲ. 26 ಜೀವಸ್ವರೂಪನಾದ ದೇವರ ನುಡಿಯನ್ನು ಪ್ರತ್ಯಕ್ಷವಾಗಿ ನಾವು ಕೇಳಿದ ಹಾಗೆ ಬೇರೆ ಯಾರೂ ಕೇಳಿಲ್ಲ. ಆದರೂ ನಾವು ಜೀವದಿಂದಿದ್ದೇವೆ. 27 ಮೋಶೆಯೇ, ನೀನು ಹತ್ತಿರ ಹೋಗಿ ಯೆಹೋವನು ಹೇಳುವುದನ್ನೆಲ್ಲಾ ಕೇಳಿ ನಮಗೆ ಅದನ್ನು ತಿಳಿಸು. ನಾವು ನಿನ್ನ ಮಾತುಗಳನ್ನು ಕೇಳಿ ನೀನು ಹೇಳಿದ ಹಾಗೆ ಮಾಡುವೆವು.’
ಯೆಹೋವನು ಮೋಶೆಯ ಸಂಗಡ ಮಾತನಾಡುತ್ತಾನೆ
28 “ನೀವು ಹೇಳಿದ್ದನ್ನು ಯೆಹೋವನು ಕೇಳಿ ನನ್ನೊಡನೆ ಹೀಗೆಂದನು: ‘ನಿನ್ನ ಜನರು ಹೇಳುವುದನ್ನು ನಾನು ಕೇಳಿದೆನು. ಆ ಮಾತುಗಳೆಲ್ಲಾ ಒಳ್ಳೆಯವೇ. 29 ಆದರೆ ಅವರು ಆಲೋಚಿಸುವ ರೀತಿಯನ್ನು ನಾನು ಬದಲಾಯಿಸಬೇಕಾಗಿದೆ. ಅವರು ನನಗೆ ವಿಧೇಯರಾಗಿ ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸಿ ತಮ್ಮ ಹೃದಯಗಳಿಂದ ನನ್ನನ್ನು ಗೌರವಿಸಬೇಕು. ಆಗ ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿ ಶುಭವಿರುವುದು.
30 “‘ನೀನು ಹೋಗಿ ಜನರಿಗೆ ಅವರವರ ಗುಡಾರಗಳಿಗೆ ಹಿಂದಿರುಗಿ ಹೋಗಲು ತಿಳಿಸು. 31 ಆದರೆ ಮೋಶೆಯೇ, ನೀನು ನನ್ನ ಬಳಿಯಲ್ಲಿಯೇ ನಿಂತಿರು. ನೀನು ಅವರಿಗೆ ಉಪದೇಶಿಸಬೇಕಾಗಿರುವ ಎಲ್ಲಾ ಆಜ್ಞೆಗಳನ್ನು, ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ನಾನು ನಿನಗೆ ತಿಳಿಸುತ್ತೇನೆ. ಅವರ ವಾಸಕ್ಕಾಗಿ ನಾನು ಕೊಡಲಿರುವ ದೇಶದಲ್ಲಿ ಅವರು ಇವುಗಳೆಲ್ಲವನ್ನು ಪರಿಪಾಲಿಸಬೇಕು.’
32 “ಆದ್ದರಿಂದ, ಇಸ್ರೇಲ್ ಜನರೇ, ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಅನುಸರಿಸಲು ನೀವು ಎಚ್ಚರದಿಂದಿರಬೇಕು. ಆತನನ್ನು ಹಿಂಬಾಲಿಸುವುದನ್ನು ನಿಲ್ಲಿಸಬೇಡಿ. 33 ನಿಮ್ಮ ದೇವರಾದ ಯೆಹೋವನು ಹೇಳಿದ ಆಜ್ಞೆಗಳಿಗನುಸಾರವಾಗಿ ನಡೆದರೆ ನೀವು ಜೀವಿಸುವಿರಿ. ಆಗ ನೀವು ಶುಭವನ್ನೇ ಹೊಂದುವಿರಿ. ನಿಮಗೆ ದೊರಕಿದ ಸ್ವಾಸ್ತ್ಯಭೂಮಿಯಲ್ಲಿ ನೀವು ಬಹುಕಾಲ ಬಾಳುವಿರಿ.
ಸ್ತುತಿಗೀತೆ. ರಚನೆಗಾರರು: ಕೋರಹೀಯರಿಗೆ ಸೇರಿದ ಜೇರಹ ಕುಟುಂಬದ ಹೇಮಾನ.
88 ಯೆಹೋವ ದೇವರೇ, ನೀನೇ ನನ್ನ ರಕ್ಷಕನು.
ಹಗಲಿರುಳು ನಿನಗೆ ಪ್ರಾರ್ಥಿಸುತ್ತಿದ್ದೇನೆ.
2 ನನ್ನ ಪ್ರಾರ್ಥನೆಗಳಿಗೆ ದಯವಿಟ್ಟು ಗಮನಕೊಡು.
ಕರುಣೆಗೋಸ್ಕರ ನಾನಿಡುವ ಮೊರೆಗಳನ್ನು ಆಲಿಸು.
3 ನನ್ನ ಜೀವವು ನೋವಿನಿಂದ ತುಂಬಿಹೋಯಿತು.
ಮರಣವು ನನಗೆ ಸಮೀಪವಾಗಿದೆ.
4 ಜನರು ನನ್ನನ್ನು ಸತ್ತವನಂತೆಯೂ
ಬದುಕಲಾರದ ಬಲಹೀನನಂತೆಯೂ ಪರಿಗಣಿಸಿದ್ದಾರೆ.
5 ಸತ್ತವರ ಮಧ್ಯದಲ್ಲಿ ನನಗಾಗಿ ಹುಡುಕು.
ಸಮಾಧಿಯಲ್ಲಿ ಬಿದ್ದಿರುವ ಶವದಂತಾಗಿದ್ದೇನೆ,
ನೀನು ಮರೆತುಬಿಟ್ಟ ಸತ್ತ ಜನರಂತೆ ಆಗಿದ್ದೇನೆ.
ನಿನ್ನಿಂದಲೂ ನಿನ್ನ ಪರಿಪಾಲನೆಯಿಂದಲೂ ದೂರವಾದವನಾಗಿದ್ದೇನೆ.
6 ನೀನು ನನ್ನನ್ನು ಪಾತಾಳಕ್ಕೆ ದಬ್ಬಿರುವೆ;
ನನ್ನನ್ನು ಕತ್ತಲೆಯ ಸ್ಥಳಕ್ಕೆ ನೂಕಿರುವೆ.
7 ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದಲೇ
ನನ್ನನ್ನು ಶಿಕ್ಷಿಸಿದೆ.
8 ಸ್ನೇಹಿತರು ನನ್ನನ್ನು ತೊರೆದುಬಿಟ್ಟರು.
ಹೊಲೆಯಾದ ಮನುಷ್ಯನಂತೆ ಅವರೆಲ್ಲರೂ ನನ್ನನ್ನು ದೂರ ಮಾಡಿದ್ದಾರೆ.
ನನ್ನನ್ನು ಮನೆಯೊಳಗೆ ದೊಬ್ಬಿ ಬೀಗ ಹಾಕಿದ್ದಾರೆ; ನಾನು ಹೊರಗೆ ಹೋಗಲಾರೆನು.
9 ನನ್ನ ಎಲ್ಲಾ ಸಂಕಟಗಳಿಂದ ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ.
ಯೆಹೋವನೇ, ನಾನು ನಿನಗೆ ಎಡಬಿಡದೆ ಪ್ರಾರ್ಥಿಸುವೆನು!
ನನ್ನ ಕೈಗಳನ್ನು ಎತ್ತಿ ನಿನಗೆ ಪ್ರಾರ್ಥಿಸುವೆನು!
10 ಯೆಹೋವನೇ, ಸತ್ತ ಜನರಿಗಾಗಿ ನೀನು ಮಹತ್ಕಾರ್ಯಗಳನ್ನು ಮಾಡುವೆಯಾ?
ಇಲ್ಲ! ದೆವ್ವಗಳು ಎದ್ದುನಿಂತು ನಿನ್ನನ್ನು ಕೊಂಡಾಡುತ್ತವೆಯೋ? ಇಲ್ಲ!
11 ಸತ್ತ ಜನರು ತಮ್ಮ ಸಮಾಧಿಗಳಲ್ಲಿ ನಿನ್ನ ಪ್ರೀತಿಯ ಬಗ್ಗೆ ಮಾತಾಡಲಾರರು.
ಸತ್ತವರು, ಸತ್ತವರ ಲೋಕದಲ್ಲಿ ನಿನ್ನ ನಂಬಿಗಸ್ತಿಕೆಯ ಬಗ್ಗೆ ಮಾತಾಡಲಾರರು.
12 ಸತ್ತು ಕತ್ತಲೆಯಲ್ಲಿ ಬಿದ್ದಿರುವ ಜನರು ನಿನ್ನ ಅದ್ಭುತಕಾರ್ಯಗಳನ್ನು ನೋಡಲಾರರು.
ಸತ್ತವರು, ಮರೆಯಲ್ಪಟ್ಟವರ ಲೋಕದಲ್ಲಿ ನಿನ್ನ ನೀತಿಯ ಬಗ್ಗೆ ಮಾತಾಡಲಾರರು.
13 ಯೆಹೋವನೇ, ನಿನ್ನ ಸಹಾಯಕ್ಕಾಗಿ ಮೊರೆಯಿಡುತ್ತಿದ್ದೇನೆ.
ಪ್ರತಿ ಮುಂಜಾನೆಯೂ ನಿನಗೆ ಪ್ರಾರ್ಥಿಸುತ್ತಿದ್ದೇನೆ.
14 ಯೆಹೋವನೇ, ನೀನು ನನ್ನನ್ನು ತೊರೆದುಬಿಟ್ಟಿದ್ದೇಕೆ?
ನೀನು ನನಗೆ ಕಿವಿಗೊಡದಿರುವುದೇಕೆ?
15 ನಾನು ಚಿಕ್ಕಂದಿನಿಂದಲೂ ಬಲಹೀನನಾಗಿದ್ದೇನೆ ಮತ್ತು ಕಾಯಿಲೆಯವನಾಗಿದ್ದೇನೆ.
ನಿನ್ನ ಕೋಪದಿಂದ ನಾನು ಸಂಕಟಪಡುತ್ತಿರುವೆ.
ನಾನು ನಿಸ್ಸಹಾಯನಾಗಿರುವೆ.
16 ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದ
ನಿನ್ನ ದಂಡನೆಯು ನನ್ನನ್ನು ಕೊಲ್ಲುತ್ತಿದೆ.
17 ಬಾಧೆಗಳೂ ನೋವುಗಳೂ ಯಾವಾಗಲೂ ನನ್ನೊಂದಿಗಿವೆ.
ಬಾಧೆಗಳಿಂದಲೂ ನೋವುಗಳಿಂದಲೂ ಮುಳುಗಿ ಹೋಗುತ್ತಿದ್ದೇನೆ.
18 ಯೆಹೋವನೇ, ಸ್ನೇಹಿತರೆಲ್ಲರನ್ನೂ ಪ್ರಿಯರನ್ನೂ ನೀನು ನನ್ನಿಂದ ದೂರಮಾಡಿದೆ.
ಕೇವಲ ಕತ್ತಲೆಯೊಂದೇ ನನ್ನೊಂದಿಗೆ ಉಳಿದುಕೊಂಡಿದೆ.
ದುಷ್ಟತನವು ಹೆಚ್ಚಿನ ದುಷ್ಟತನಕ್ಕೆ ಕಾರಣ
33 ನೀವು ಯುದ್ಧಮಾಡಿ ಇತರರಿಂದ ಸುಲಿದುಕೊಳ್ಳುತ್ತೀರಿ. ಆದರೆ ಅವರು ನಿಮ್ಮಿಂದ ಏನೂ ಕದ್ದುಕೊಳ್ಳಲಿಲ್ಲ. ನೀವು ಜನರಿಗೆ ವಿರುದ್ಧವಾಗಿ ತಿರುಗುತ್ತೀರಿ. ಆದರೆ ಅವರು ನಿಮಗೆ ವಿರುದ್ಧವಾಗಲಿಲ್ಲ. ಆದ್ದರಿಂದ ನೀವು ಕದ್ದುಕೊಳ್ಳುವದನ್ನು ಬಿಟ್ಟಾಗ ಇತರರು ನಿಮ್ಮದನ್ನು ಕದ್ದುಕೊಳ್ಳುತ್ತಾರೆ. ನೀವು ಇತರರಿಗೆ ಹಾನಿ ಮಾಡುವದನ್ನು ನಿಲ್ಲಿಸಿದಾಗ ಇತರರು ನಿಮಗೆ ಹಾನಿ ಮಾಡುವರು. ಆಗ ನೀವು ಹೀಗೆ ಹೇಳುವಿರಿ:
2 “ಯೆಹೋವನೇ, ನಮಗೆ ದಯೆತೋರು.
ನಾವು ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಿದ್ದೇವೆ.
ಯೆಹೋವನೇ, ಪ್ರತಿಮುಂಜಾನೆ ನಮಗೆ ಶಕ್ತಿ ದಯಪಾಲಿಸು,
ಕಷ್ಟದಲ್ಲಿರುವಾಗ ನಮ್ಮನ್ನು ರಕ್ಷಿಸು.
3 ನಿನ್ನ ಬಲಯುತವಾದ ಸ್ವರವು ಜನರಿಗೆ ಹೆದರಿಕೆಯನ್ನು ಉಂಟುಮಾಡುತ್ತದೆ, ಅವರು ನಿನ್ನಿಂದ ಓಡಿಹೋಗುವರು.
ನಿನ್ನ ಮಹೋನ್ನತೆಯು ಜನಾಂಗಗಳನ್ನು ದಿಕ್ಕಾಪಾಲಾಗಿ ಮಾಡುತ್ತದೆ.”
4 ನೀವು ಯುದ್ಧದಲ್ಲಿ ದೋಚಿಕೊಂಡಿದ್ದೀರಿ. ಅವುಗಳು ನಿಮ್ಮಿಂದ ತೆಗೆಯಲ್ಪಡುವವು. ಅನೇಕಾನೇಕ ಜನರು ಬಂದು ನಿಮ್ಮ ಸಂಪತ್ತನ್ನು ದೋಚಿಕೊಳ್ಳುವರು. ಮಿಡತೆಗಳು ನಿಮ್ಮ ಬೆಳೆಯನ್ನು ತಿಂದು ನಾಶಮಾಡಿದಂತೆ ಅದಿರುವದು.
5 ಯೆಹೋವನೇ ಉನ್ನತೋನ್ನತನು. ಆತನು ಬಹು ಉನ್ನತವಾದ ಸ್ಥಳದಲ್ಲಿ ವಾಸಿಸುತ್ತಾನೆ. ಆತನು ಚೀಯೋನನ್ನು ನ್ಯಾಯನೀತಿಗಳಿಂದ ತುಂಬಿಸುವನು.
6 ಜೆರುಸಲೇಮೇ, ನೀನು ಐಶ್ವರ್ಯವಂತಳಾಗಿರುವೆ. ನೀನು ದೇವರ ವಿಷಯವಾದ ಜ್ಞಾನ, ತಿಳುವಳಿಕೆ ಮತ್ತು ರಕ್ಷಣೆಗಳಿಂದ ಐಶ್ವರ್ಯವಂತಳಾಗಿರುವೆ. ಯೆಹೋವನ ಮೇಲೆ ನಿನಗಿರುವ ಗೌರವವೇ ನಿನ್ನ ಭಂಡಾರವಾಗಿದೆ. ನೀನು ಹೀಗೆಯೇ ಮುಂದುವರಿಯುವೆ.
7 ಆದರೆ ಕಿವಿಗೊಟ್ಟು ಕೇಳಿಸಿಕೊ, ದೂತರು ಹೊರಗೆ ಅಳುತ್ತಿದ್ದಾರೆ. ಸಮಾಧಾನದ ಸಮಾಚಾರವನ್ನು ತರುವವರು ಗಟ್ಟಿಯಾಗಿ ರೋಧಿಸುತ್ತಿದ್ದಾರೆ. 8 ರಸ್ತೆಗಳು ಹಾಳಾಗಿ ಯಾರೂ ಅದರಲ್ಲಿ ನಡಿಯುವದಿಲ್ಲ. ಜನರು ತಾವು ಮಾಡಿದ ಒಪ್ಪಂದವನ್ನು ನಡಿಸುತ್ತಿಲ್ಲ. ಸಾಕ್ಷಿಗಳ ಮಾತುಗಳನ್ನು ಜನರು ಗೌರವಿಸಲು ನಿರಾಕರಿಸುತ್ತಾರೆ. ಜನರು ಒಬ್ಬರನ್ನೊಬ್ಬರು ನಂಬುವದಿಲ್ಲ. 9 ದೇಶವು ಅಸ್ವಸ್ಥತೆಯಿಂದ ಸಾಯುತ್ತಿದೆ. ಲೆಬನೋನ್ ನಾಚಿಗೊಂಡು ಒಣಗುತ್ತಿದೆ. ಶಾರೋನ್ ತಗ್ಗು ಒಣಗಿ ನಿರ್ಜನವಾಗಿದೆ. ಬಾಷಾನ್ ಮತ್ತು ಕರ್ಮೆಲ್ ಹಿಂದೆ ಬಹು ಅಂದವಾದ ಸಸಿಗಳನ್ನು ಬೆಳೆಯಿಸುತ್ತಿದ್ದವು. ಈಗ ಅವುಗಳು ಅಲ್ಲಿ ಬೆಳೆಯುವದಿಲ್ಲ.
10 ಯೆಹೋವನು ಹೀಗೆನ್ನುತ್ತಾನೆ, “ಈಗ ನಾನು ಎದ್ದುನಿಂತು ನನ್ನ ಮಹತ್ವವನ್ನು ತೋರಿಸುವೆನು. ಈಗ ನಾನು ಜನರಿಗೆ ಉನ್ನತೋನ್ನತನಾಗುವೆನು. 11 ಜನರೇ, ನೀವು ಪ್ರಯೋಜನವಿಲ್ಲದ ಕಾರ್ಯಗಳನ್ನು ಮಾಡಿದಿರಿ. ಆ ಕೆಲಸಗಳು ಒಣಹುಲ್ಲಿನಂತೆಯೂ ದಂಟಿನಂತೆಯೂ ಇವೆ. ನಿಮ್ಮ ಆತ್ಮವು ನಿಮ್ಮಲ್ಲಿ ಬೆಂಕಿಯಂತಿದ್ದು ನಿಮ್ಮನ್ನು ಸುಡುವದು. 12 ಎಲುಬುಗಳು ಬೂದಿಯಾಗುವ ತನಕ ಜನರು ಸುಡಲ್ಪಡುವರು. ಅವರು ಮುಳ್ಳುಗಳಂತೆಯೂ ಒಣಪೊದೆಗಳಂತೆಯೂ ಬೇಗನೆ ಸುಟ್ಟುಹೋಗುವರು.
13 “ದೂರದೇಶದಲ್ಲಿರುವವರೇ, ನಾನು ಮಾಡಿದ ಕಾರ್ಯಗಳ ವಿಷಯವಾಗಿ ಕೇಳಿರಿ. ನನ್ನ ಹತ್ತಿರವಿರುವವರೇ, ನನ್ನ ಸಾಮರ್ಥ್ಯದ ವಿಷಯವಾಗಿ ಕಲಿತುಕೊಳ್ಳಿರಿ.”
14 ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಕೆಟ್ಟಕಾರ್ಯಗಳನ್ನು ಮಾಡುವವರು ಹೆದರಿಕೆಯಿಂದ ನಡುಗುವರು. ಜನರು, “ನಮ್ಮಲ್ಲಿ ಯಾರು ನಾಶಮಾಡುವ ಈ ಬೆಂಕಿಯ ಜೊತೆ ಜೀವಿಸಬಲ್ಲರು? ನಿತ್ಯಕಾಲಕ್ಕೂ ಸುಡುವ ಈ ಬೆಂಕಿಯ ಬಳಿಯಲ್ಲಿ ಯಾರು ವಾಸಮಾಡಬಲ್ಲರು?” ಎಂದು ಹೇಳುವರು.
15 ಪ್ರಾಮಾಣಿಕರಾಗಿರುವ ನೀತಿವಂತರು ಹಣಕ್ಕಾಗಿ ಇತರರಿಗೆ ಹಾನಿಮಾಡದವರಾಗಿದ್ದಾರೆ. ಅವರು ಆ ಬೆಂಕಿಯಲ್ಲಿ ವಾಸಿಸುವರು. ಅವರು ಲಂಚ ತೆಗೆದುಕೊಳ್ಳಲು ನಿರಾಕರಿಸುವರು. ಇತರರನ್ನು ಕೊಲೆಮಾಡುವ ಯೋಜನೆಯನ್ನು ಕೇಳಲು ಅವರು ಇಷ್ಟಪಡುವುದಿಲ್ಲ. ಅವರು ಕೆಟ್ಟಕಾರ್ಯಗಳ ಯೋಜನೆಗಳನ್ನು ನೋಡುವುದಿಲ್ಲ. 16 ಅಂಥವರು ಉನ್ನತವಾದ ಸ್ಥಳದಲ್ಲಿ ಸುರಕ್ಷಿತವಾಗಿ ವಾಸಿಸುವರು. ಎತ್ತರವಾದ ಬಂಡೆಕಲ್ಲಿನ ಕೋಟೆಯೊಳಗೆ ಅವರು ಕಾಪಾಡಲ್ಪಡುವರು. ಅವರ ಬಳಿ ಆಹಾರ ಮತ್ತು ನೀರು ಯಾವಾಗಲೂ ಇರುವದು.
17 ನಿಮ್ಮ ಕಣ್ಣುಗಳು ಸೌಂದರ್ಯ ಪ್ರಭಾವಗಳಿಂದ ತುಂಬಿದ ರಾಜನನ್ನು (ದೇವರನ್ನು) ನೋಡುವವು. ನೀವು ಮಹಾ ದೊಡ್ಡ ದೇಶವನ್ನು ನೋಡುವಿರಿ. 18-19 ಹಿಂದಿನ ಕಾಲದಲ್ಲಿ ನೀವು ಅನುಭವಿಸಿದ ಸಂಕಟಗಳನ್ನು ನೆನಪುಮಾಡಿಕೊಳ್ಳುವಿರಿ. ನೀವು ಹೀಗೆ ಭಾವಿಸಿಕೊಳ್ಳುವಿರಿ: “ಬೇರೆ ದೇಶಗಳಿಂದ ಬಂದ ಜನರೆಲ್ಲಿದ್ದಾರೆ? ನಮಗೆ ಅರ್ಥವಾಗದಂಥ ಭಾಷೆಯಲ್ಲಿ ಅವರು ಮಾತಾಡುತ್ತಿದ್ದರು. ಪರದೇಶದ ಅಧಿಕಾರಿಗಳು, ತೆರಿಗೆ ಎತ್ತುವವರು ಎಲ್ಲಿ? ನಮ್ಮ ಕೋಟೆಗಳನ್ನು, ಬುರುಜುಗಳನ್ನು ಲೆಕ್ಕಿಸಲು ಬಂದ ಗೂಢಚಾರರೆಲ್ಲಿ? ಅವರೆಲ್ಲಾ ಹೋಗಿಬಿಟ್ಟರು. ನೀವೆಂದೂ ಆ ಜನರನ್ನು ಕಾಣದೆ ಇರುವಿರಿ.”
ದೇವರು ಜೆರುಸಲೇಮನ್ನು ರಕ್ಷಿಸುತ್ತಾನೆ
20 ನಮ್ಮ ಹಬ್ಬಗಳನ್ನು ಆಚರಿಸುವ ನಗರವಾದ ಚೀಯೋನನ್ನು ನೋಡಿರಿ. ಮನೋಹರವಾದ ವಿಶ್ರಾಂತಿ ಸ್ಥಳವಾದ ಜೆರುಸಲೇಮನ್ನು ನೋಡಿರಿ. ಜೆರುಸಲೇಮು ಎಂದಿಗೂ ಕದಲದ ಗುಡಾರವಾಗಿದೆ. ಆಕೆಯನ್ನು ಭದ್ರವಾಗಿ ಹಿಡಿದುಕೊಂಡಿರುವ ಗೂಟಗಳು ಎಂದಿಗೂ ಕೀಳಲ್ಪಡುವದಿಲ್ಲ. ಆಕೆಯ ಹಗ್ಗಗಳು ಎಂದಿಗೂ ತುಂಡಾಗುವದಿಲ್ಲ. 21-23 ಕೆಂದರೆ ಬಲಿಷ್ಠನಾದ ಯೆಹೋವನು ಅಲ್ಲಿದ್ದಾನೆ. ಆ ದೇಶವು ತೊರೆಗಳೂ ಅಗಲವಾಗಿ ಹರಿಯುವ ನದಿಗಳೂ ಇರುವ ದೇಶವಾಗಿದೆ. ಆದರೆ ಆ ನದಿಯಲ್ಲಿ ವೈರಿಯ ದೋಣಿಯಾಗಲಿ, ಹಡಗುಗಳಾಗಲಿ ಇರುವದಿಲ್ಲ. ಆ ಹಡುಗುಗಳಲ್ಲಿ ಕೆಲಸಮಾಡುವವರೇ, ನೀವು ಅದರ ಹಗ್ಗಗಳಲ್ಲಿ ಕೆಲಸಮಾಡುವದನ್ನು ಬಿಟ್ಟುಬಿಡಿರಿ. ಹಡಗಿನ ಸ್ತಂಭವನ್ನು ನೀವು ಬಲಪಡಿಸಲಾರಿರಿ. ಹಡಗಿನ ಹಾಯಿಗಳನ್ನು ನಿಮ್ಮಿಂದ ತೆರೆಯಲು ಆಗುವದಿಲ್ಲ. ಯಾಕೆಂದರೆ ದೇವರೇ ನಮ್ಮ ನ್ಯಾಯಾಧೀಶನು. ಆತನು ಧರ್ಮಶಾಸ್ತ್ರವನ್ನು ಸಿದ್ಧಪಡಿಸಿದಾತನು. ಯೆಹೋವನೇ ನಮ್ಮ ಅರಸನು. ಆತನೇ ನಮ್ಮನ್ನು ರಕ್ಷಿಸುವನು, ನಮಗೆ ಸಂಪತ್ತನ್ನು ದಯಪಾಲಿಸುವನು. ಕೈಕಾಲು ಊನವಾದವರೂ ಸಹ ಯುದ್ಧದಲ್ಲಿ ಸಂಪತ್ತನ್ನು ಗಳಿಸುವರು. 24 ಅಲ್ಲಿ ವಾಸಿಸುವವರಲ್ಲಿ ಯಾರೂ “ನನಗೆ ಸೌಖ್ಯವಿಲ್ಲ” ಎಂದು ಹೇಳುವುದಿಲ್ಲ. ಅಲ್ಲಿ ವಾಸಿಸುವವರೆಲ್ಲಾ ತಮ್ಮ ಪಾಪಗಳಿಗೆ ಕ್ಷಮೆಹೊಂದಿದವರಾಗಿದ್ದಾರೆ.
ಸಾರ್ದಿಸ್‌ನಲ್ಲಿರುವ ಸಭೆಗೆ ಯೇಸುವಿನ ಪತ್ರ
3 “ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ಏಳು ಆತ್ಮಗಳು ಮತ್ತು ಏಳು ನಕ್ಷತ್ರಗಳನ್ನು ಹೊಂದಿರುವಾತನು ಹೇಳುವುದೇನೆಂದರೆ: ನೀನು ಮಾಡುತ್ತಿರುವುದು ನನಗೆ ತಿಳಿದಿದೆ. ನೀನು ಜೀವವುಳ್ಳವನೆಂದು ಜನರು ಹೇಳುತ್ತಾರೆ. ಆದರೆ ನೀನು ನಿಜವಾಗಿಯೂ ಸತ್ತು ಹೋಗಿರುವೆ. 2 ಎದ್ದೇಳು! ಸಾಯುವ ಸ್ಥಿತಿಯಲ್ಲಿರುವಂಥವುಗಳನ್ನು ಬಲಪಡಿಸು. ನೀನು ಮಾಡಿರುವ ಕಾರ್ಯಗಳನ್ನು ನನ್ನ ದೇವರ ದೃಷ್ಟಿಯಲ್ಲಿ ನಿಷ್ಕಳಂಕವಾಗಿರುವುದನ್ನು ನಾನು ಕಾಣಲಿಲ್ಲ. 3 ಆದ್ದರಿಂದ ನೀನು ಸ್ವೀಕರಿಸಿಕೊಂಡ ಮತ್ತು ಕೇಳಿದ ಉಪದೇಶವನ್ನು ಮರೆಯದೆ ಅದಕ್ಕೆ ವಿಧೇಯನಾಗಿರು. ನಿನ್ನ ಹೃದಯವನ್ನೂ ಜೀವಿತವನ್ನೂ ಪರಿವರ್ತಿಸಿಕೊ! ಎಚ್ಚರಗೊಳ್ಳು! ಇಲ್ಲವಾದರೆ, ನಾನು ಕಳ್ಳನಂತೆ ನಿನ್ನ ಬಳಿಗೆ ಬಂದು ಆಶ್ಚರ್ಯಗೊಳಿಸುತ್ತೇನೆ. ನಾನು ಯಾವಾಗ ಬರುತ್ತೇನೆ ಎಂಬುದು ನಿನಗೆ ಗೊತ್ತಿರುವುದಿಲ್ಲ.
4 “ನಿಮ್ಮ ಸಭೆಗೆ ಸೇರಿದ ಸಾರ್ದಿಸಿನ ಕೆಲವರು ಇನ್ನೂ ಪರಿಶುದ್ಧರಾಗಿದ್ದಾರೆ. ಅವರು ತಮ್ಮ ಬಟ್ಟೆಗಳನ್ನು ಕೊಳಕು ಮಾಡಿಕೊಂಡಿಲ್ಲ. ಅವರು ನನ್ನೊಂದಿಗೆ ನಡೆಯುವರು. ಅವರು ಯೋಗ್ಯರಾಗಿರುವುದರಿಂದ ಬಿಳಿವಸ್ತ್ರಗಳನ್ನು ಧರಿಸುತ್ತಾರೆ. 5 ಜಯಗಳಿಸುವ ಪ್ರತಿಯೊಬ್ಬನೂ ಈ ಜನರಂತೆ ಬಿಳಿಯ ವಸ್ತ್ರಗಳನ್ನು ಧರಿಸುತ್ತಾನೆ. ಆ ವ್ಯಕ್ತಿಯ ಹೆಸರನ್ನು ನಾನು ಜೀವಭಾದ್ಯರ ಪುಸ್ತಕದಿಂದ ತೆಗೆದು ಹಾಕುವುದಿಲ್ಲ. ಅವನು ನನಗೆ ಸೇರಿದವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಹೇಳುತ್ತೇನೆ. 6 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.
ಫಿಲದೆಲ್ಫಿಯದಲ್ಲಿರುವ ಸಭೆಗೆ ಯೇಸುವಿನ ಪತ್ರ
7 “ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ಪವಿತ್ರನೂ ಸತ್ಯವಂತನೂ ಆಗಿರುವಾತನು ನೀಡುವ ಸಂದೇಶವಿದು: ದಾವೀದನ ಬೀಗದ ಕೈ ನನ್ನಲ್ಲಿದೆ. ನಾನು ತೆರೆದದ್ದನ್ನು ಯಾರೂ ಮುಚ್ಚಲಾರರು;(A) ಮುಚ್ಚಿದ್ದನ್ನು ಯಾರೂ ತೆರೆಯಲಾರರು.
8 “ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಮುಂದೆ ತೆರೆದ ಬಾಗಿಲನ್ನು ಇಟ್ಟಿದ್ದೇನೆ. ಅದನ್ನು ಯಾರೂ ಮುಚ್ಚಲಾರರು. ನೀನು ದುರ್ಬಲನೆಂಬುದು ನನಗೆ ತಿಳಿದಿದೆ. ಆದರೆ ನೀನು ನನ್ನ ಬೋಧನೆಯನ್ನು ಅನುಸರಿಸಿದೆ. ನನ್ನ ಹೆಸರನ್ನು ಹೇಳಲು ನೀನು ಹಿಂಜರಿಯಲಿಲ್ಲ. 9 ಆಲಿಸು! ಅಲ್ಲಿ ಸೈತಾನನ ಗುಂಪಿಗೆ ಸೇರಿದವರಿದ್ದಾರೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅದು ಸುಳ್ಳು. ಅವರು ನಿಜವಾದ ಯೆಹೂದ್ಯರಲ್ಲ. ಆ ಜನರು ನಿನ್ನ ಮುಂದೆ ಬಂದು ನಿನ್ನ ಪಾದಗಳಿಗೆ ಅಡ್ಡಬಿದ್ದು ನಮಸ್ಕರಿಸುವಂತೆ ಮಾಡುತ್ತೇನೆ. ನಾನು ಪ್ರೀತಿಸಿದ ಜನರು ನೀವೇ ಎಂಬುದನ್ನು ಆಗ ಅವರು ತಿಳಿದುಕೊಳ್ಳುತ್ತಾರೆ. 10 ನೀನು ನನ್ನ ಆಜ್ಞೆಯನ್ನು ಸಹನೆಯಿಂದ ಮತ್ತು ತಾಳ್ಮೆಯಿಂದ ಅನುಸರಿಸಿದೆ. ಆದ್ದರಿಂದ ಈ ಲೋಕಕ್ಕೆಲ್ಲಾ ಉಂಟಾಗುವ ಕಡುಶೋಧನೆಯಿಂದ ನಾನು ನಿನ್ನನ್ನು ತಪ್ಪಿಸುತ್ತೇನೆ. ಭೂನಿವಾಸಿಗಳೆಲ್ಲರನ್ನು ಈ ಶೋಧನೆಯು ಪರಿಶೋಧಿಸುತ್ತದೆ.
11 “ನಾನು ಬೇಗನೆ ಬರುತ್ತೇನೆ. ಈಗ ನೀನಿರುವಂತೆಯೇ ಇರು. ಆಗ ಯಾರೂ ನಿನ್ನ ಕಿರೀಟವನ್ನು ಕಸಿದುಕೊಳ್ಳಲಾರರು. 12 ಜಯಗಳಿಸಿದ ವ್ಯಕ್ತಿಯನ್ನು ನನ್ನ ದೇವರ ಆಲಯದಲ್ಲಿ ಆಧಾರಸ್ತಂಭವನ್ನಾಗಿ ಮಾಡುವೆನು. ಅವನು ದೇವರ ಆಲಯವನ್ನು ಮತ್ತೆಂದಿಗೂ ಬಿಟ್ಟುಹೋಗುವ ಅಗತ್ಯವಿಲ್ಲ. ನನ್ನ ದೇವರ ಹೆಸರನ್ನೂ ನನ್ನ ದೇವರ ಪಟ್ಟಣದ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. ಹೊಸ ಜೆರುಸಲೇಮೇ ಆ ಪಟ್ಟಣ. ಆ ಪಟ್ಟಣವು ನನ್ನ ದೇವರ ಬಳಿಯಿಂದ ಪರಲೋಕದಿಂದ ಇಳಿದುಬರುತ್ತದೆ. ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. 13 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.
ಲವೊದಿಕೀಯದ ಸಭೆಗೆ ಯೇಸುವಿನ ಪತ್ರ
14 “ಲವೊದಿಕೀಯದ ಸಭೆಗೆ ಈ ಪತ್ರವನ್ನು ಬರೆ:
“ಆಮೆನ್[a] ಎಂಬಾತನು ಅಂದರೆ ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಅಧಿಪತಿಯೂ ಆಗಿರುವಾತನು ಹೇಳುವುದೇನೆಂದರೆ:
15 “ನೀನು ಮಾಡುವುದೆಲ್ಲಾ ನನಗೆ ತಿಳಿದದೆ. ನೀನು ಬಿಸಿಯೂ ಇಲ್ಲ, ತಣ್ಣಗೂ ಇಲ್ಲ! ನೀನು ಬಿಸಿಯಾದರೂ ಇರಬೇಕಿತ್ತು ಅಥವಾ ತಣ್ಣಗಾದರೂ ಇರಬೇಕಿತ್ತು! 16 ಆದರೆ ನೀನು ಬಿಸಿಯೂ ಇಲ್ಲದೆ ತಣ್ಣಗೂ ಇಲ್ಲದೆ ಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯಿಂದ ಉಗುಳಿ ಬಿಡುವೆನು. 17 ನೀನು ನಿನ್ನನ್ನು ಐಶ್ವರ್ಯವಂತನೆಂದು ಹೇಳಿಕೊಳ್ಳುತ್ತಿರುವೆ. ನೀನು ಐಶ್ವರ್ಯವಂತನಾಗಿರುವುದರಿಂದ ನಿನಗೇನೂ ಕೊರತೆ ಇಲ್ಲವೆಂದು ನೀನು ಯೋಚಿಸಿಕೊಂಡಿರುವೆ. ಆದರೆ ನಿಜವಾಗಿಯೂ ನೀನು ದುರವಸ್ಥೆಗೆ ಒಳಗಾದವನಾಗಿರುವೆ, ದೌರ್ಭಾಗ್ಯನಾಗಿರುವೆ, ದರಿದ್ರನಾಗಿರುವೆ, ಕುರುಡನಾಗಿರುವೆ ಮತ್ತು ಬೆತ್ತಲಾಗಿರುವೆ. ಆದರೂ ಇದು ನಿನಗೆ ತಿಳಿದೇ ಇಲ್ಲ. 18 ಬೆಂಕಿಯಲ್ಲಿ ಪುಟಹಾಕಿದ ಅಪ್ಪಟ ಚಿನ್ನವನ್ನು ನೀನು ನನ್ನಿಂದ ಕೊಂಡುಕೊಳ್ಳಬೇಕೆಂದು ನಾನು ಸಲಹೆ ನೀಡುತ್ತೇನೆ. ಆಗ ನೀನು ನಿಜವಾಗಿಯೂ ಶ್ರೀಮಂತನಾಗಲು ಸಾಧ್ಯ. ನಾನು ನಿನಗೆ ಹೇಳುವುದೇನೆಂದರೆ: ಬಿಳಿವಸ್ತ್ರಗಳನ್ನು ಕೊಂಡುಕೊ. ಆಗ ನೀನು ನಾಚಿಕೆಕರವಾದ ನಿನ್ನ ಬೆತ್ತಲೆಯನ್ನು ಮುಚ್ಚಿಕೊಳ್ಳಲು ಸಾಧ್ಯವಾಗುವುದು. ನೀನು ನಿನ್ನ ಕಣ್ಣುಗಳಿಗೆ ಹಚ್ಚಲು ಔಷಧಿಯನ್ನು ಕೊಂಡುಕೊಳ್ಳಬೇಕೆಂತಲೂ ನಾನು ನಿನಗೆ ಹೇಳುತ್ತೇನೆ. ಆಗ ನಿನಗೆ ನಿಜವಾಗಿಯೂ ದೃಷ್ಟಿ ಬರುವುದು.
19 “ನಾನು ಪ್ರೀತಿಸುವ ಜನರನ್ನೇ ನಾನು ತಿದ್ದುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀವು ಆಸಕ್ತಿಯಿಂದಿರಿ! ದೇವರ ಕಡೆಗೆ ತಿರುಗಿಕೊಳ್ಳಿರಿ. 20 ಇಗೋ, ನಾನು ಬಾಗಿಲ ಬಳಿ ನಿಂತುಕೊಂಡು ತಟ್ಟುತ್ತಿದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ, ನಾನು ಒಳಗೆ ಬಂದು ಅವನೊಂದಿಗೆ ಊಟ ಮಾಡುತ್ತೇನೆ ಮತ್ತು ಅವನು ನನ್ನೊಂದಿಗೆ ಊಟ ಮಾಡುತ್ತಾನೆ.
21 “ನಾನು ಜಯಗಳಿಸಿ ನನ್ನ ತಂದೆಯೊಡನೆ ಆತನ ಸಿಂಹಾಸನದ ಮೇಲೆ ಕುಳಿತುಕೊಂಡೆನು. ಅಂತೆಯೇ ಜಯಗಳಿಸುವ ಪ್ರತಿಯೊಬ್ಬನೂ ನನ್ನ ಸಂಗಡ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು. 22 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.”
Kannada Holy Bible: Easy-to-Read Version. All rights reserved. © 1997 Bible League International