M’Cheyne Bible Reading Plan
ಮರುಭೂಮಿಯಲ್ಲಿ ಇಸ್ರೇಲರ ಅಲೆದಾಟ
2 “ಆಗ ಯೆಹೋವನು ನನಗೆ ಆಜ್ಞಾಪಿಸಿದಂತೆ ನಾವು ಮರುಭೂಮಿಗೆ ತಿರುಗಿಹೋದೆವು. ಆ ಮಾರ್ಗವು ಕೆಂಪುಸಮುದ್ರದ ಕಡೆ ಹೋಗುತ್ತಿತ್ತು. ಸೇಯೀರ್ ಬೆಟ್ಟವನ್ನು ಸುತ್ತಿಕೊಂಡು ಹೋಗುವುದಕ್ಕೆ ನಮಗೆ ತುಂಬಾ ದಿವಸಗಳಾದವು. 2 ಆಗ ಯೆಹೋವನು ನನಗೆ ಹೀಗೆ ಹೇಳಿದನು: 3 ‘ನೀವು ಬೆಟ್ಟದ ಸುತ್ತ ಸುತ್ತುತ್ತಾ ಬಹಳ ದಿವಸಗಳನ್ನು ಕಳೆದಿರಿ. ಈಗ ನೀವು ಉತ್ತರದಿಕ್ಕಿಗೆ ತಿರುಗಿರಿ. 4 ಇದನ್ನು ಜನರಿಗೆ ತಿಳಿಸು: ನೀವು ಸೇಯೀರ್ ದೇಶದ ಮೂಲಕ ದಾಟಿಹೋಗುವಿರಿ. ಇದು ನಿಮ್ಮ ಸಂಬಂಧಿಕರ ದೇಶ. ಇವರು ಏಸಾವನ ಸಂತತಿಯವರು. ಅವರು ನಿಮಗೆ ಭಯಪಡುವರು; ಆದರೆ ನೀವು ಅವರ ವಿಷಯದಲ್ಲಿ ಎಚ್ಚರಿಕೆಯಾಗಿರಿ. 5 ಅವರ ವಿರುದ್ಧ ಯುದ್ಧ ಮಾಡಬಾರದು. ನಾನು ನಿಮಗೆ ಅವರ ದೇಶದಲ್ಲಿ ಯಾವ ಪಾಲನ್ನೂ ಕೊಡುವುದಿಲ್ಲ. ಅದರ ಒಂದು ಅಡಿ ಜಾಗವನ್ನೂ ಕೊಡುವುದಿಲ್ಲ. ಯಾಕೆಂದರೆ ಸೇಯೀರ್ ಬೆಟ್ಟಪ್ರದೇಶವನ್ನು ಏಸಾವನ ಸ್ವಂತ ದೇಶವನ್ನಾಗಿ ಕೊಟ್ಟಿರುತ್ತೇನೆ. 6 ನೀವು ಅವರ ದೇಶವನ್ನು ದಾಟುವಾಗ ಅವರ ಆಹಾರಸಾಮಾಗ್ರಿಗಳಿಗೂ ನೀರಿಗೂ ಹಣವನ್ನು ಕೊಡಬೇಕು. 7 ನಿಮ್ಮ ದೇವರಾದ ಯೆಹೋವನು ಪ್ರತಿಯೊಂದು ವಿಷಯದಲ್ಲಿ ನಿಮ್ಮನ್ನು ಆಶೀರ್ವದಿಸಿದ್ದನ್ನು ನೆನಪಿಗೆ ತಂದುಕೊಳ್ಳಿರಿ. ಈ ಮಹಾ ಮರುಭೂಮಿಯ ಮೂಲಕ ನೀವು ನಡೆದುಹೋದದ್ದರ ಬಗ್ಗೆಯೂ ಆತನಿಗೆ ತಿಳಿದಿದೆ. ಕಳೆದ ನಲವತ್ತು ವರ್ಷಗಳಿಂದ ದೇವರು ನಿಮ್ಮೊಂದಿಗಿದ್ದು ನಿಮ್ಮನ್ನು ನಡಿಸಿದ್ದಾನೆ. ನಿಮಗೆ ಬೇಕಾದವುಗಳನ್ನೆಲ್ಲಾ ಒದಗಿಸಿರುತ್ತಾನೆ.’
8 “ಹಾಗೆ ನಾವು ನಮ್ಮ ಸಂಬಂಧಿಕರಾದ ಏಸಾವನ ಜನರ ದೇಶದ ಮೂಲಕ ಪ್ರಯಾಣ ಬೆಳೆಸಿದೆವು. ಜೋರ್ಡನ್ ಕಣಿವೆಯಿಂದ ಏಲತ್ ಮತ್ತು ಎಚ್ಯೋನ್ಗೆಬೆರ್ ಪಟ್ಟಣಗಳಿಗೆ ಹೋಗುವ ಮಾರ್ಗವನ್ನು ಬಿಟ್ಟು, ನಾವು ಮೋವಾಬ್ ದೇಶದ ಮರುಭೂಮಿಗೆ ಹೋಗುವ ರಸ್ತೆಯಲ್ಲಿ ನಡೆದೆವು.
ಆರ್‌ನಲ್ಲಿ ಇಸ್ರೇಲರು
9 “ಯೆಹೋವನು ನನಗೆ ಹೀಗೆ ಹೇಳಿದನು: ‘ಮೋವಾಬಿನ ಜನರಿಗೆ ತೊಂದರೆ ಕೊಡಬೇಡ. ಅವರ ವಿರುದ್ಧ ಯುದ್ಧಕ್ಕೆ ಹೋಗಬೇಡ; ಅವರ ದೇಶದಲ್ಲಿ ನಿಮಗೆ ಯಾವ ಪಾಲೂ ಸಿಗದು. ಅವರು ಲೋಟನ ಸಂತತಿಯವರು. ನಾನು ಅವರಿಗೆ ಆರ್ ಪಟ್ಟಣವನ್ನು ಕೊಟ್ಟಿರುತ್ತೇನೆ.’”
10 (ಹಿಂದಿನ ಕಾಲದಲ್ಲಿ, ಏಮಿಯ ಜನರು ಆರ್‌ನಲ್ಲಿ ವಾಸಮಾಡುತ್ತಿದ್ದರು. ಅವರು ಬಲಾಢ್ಯರೂ ಉನ್ನತ ಪುರುಷರೂ ಆಗಿದ್ದರು ಮತ್ತು ಅವರ ಸಂಖ್ಯೆ ಹೆಚ್ಚಾಗಿತ್ತು. 11 ಅವರು ಅನಾಕ್ಯರಂತೆ ರೆಫಾಯರಿಗೆ ಸೇರಿದವರೆಂದು ಹೇಳಲಾಗುತ್ತಿತ್ತು. ಆದರೆ ಮೋವಾಬ್ಯರು ಅವರನ್ನು ಏಮಿಯರು ಎಂದೇ ಕರೆಯುತ್ತಿದ್ದರು. 12 ಹೋರಿಯರು ಕೂಡಾ ಸೇಯೀರ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು. ಆದರೆ ಏಸಾವನ ಜನರು ಅವರಿಂದ ದೇಶವನ್ನು ವಶಮಾಡಿಕೊಂಡು, ಹೋರಿಯರನ್ನು ಸಂಹರಿಸಿ ಆ ದೇಶದಲ್ಲಿ ನೆಲೆಸಿದರು. ಇಸ್ರೇಲರೂ ಅದೇ ರೀತಿಯಲ್ಲಿ ಯೆಹೋವನು ವಾಗ್ದಾನ ಮಾಡಿದ ದೇಶದಲ್ಲಿದ್ದ ನಿವಾಸಿಗಳನ್ನು ಸೋಲಿಸಿ ಅವರ ದೇಶವನ್ನು ಸ್ವಾಧೀನ ಮಾಡಿಕೊಂಡರು.)
13 “ಯೆಹೋವನು ನನಗೆ, ‘ಜೆರೆದ್ ಕಣಿವೆಯ ಆಚೆಕಡೆಗೆ ಹೋಗು’ ಎಂದು ಹೇಳಿದನು. ಆದ್ದರಿಂದ ನಾವು ಜೆರೆದ್ ಕಣಿವೆಯನ್ನು ದಾಟಿದೆವು. 14 ಕಾದೇಶ್‌ಬರ್ನೇಯದಿಂದ ಜೆರೆದ್ ಕಣಿವೆಯನ್ನು ದಾಟಿ ಆಗಲೇ ಮೂವತ್ತೆಂಟು ವರ್ಷಗಳು ದಾಟಿದ್ದವು. ನಮ್ಮ ಸಮೂಹದಲ್ಲಿದ್ದ ಯುದ್ಧಭಟರೆಲ್ಲಾ ಸತ್ತುಹೋಗಿದ್ದರು. ಹೀಗೆ ಆಗುವುದೆಂದು ದೇವರು ಪ್ರಮಾಣ ಮಾಡಿದ್ದನು. 15 ಯೆಹೋವನು ಅವರಿಗೆ ವಿರುದ್ಧವಾಗಿ ಇದ್ದುದರಿಂದ ಅವರೆಲ್ಲಾ ಸತ್ತು ಜನಸಮೂಹದಿಂದ ಇಲ್ಲವಾದರು.
16 “ಯುದ್ಧಭಟರೆಲ್ಲಾ ಸತ್ತುಹೋದ ಬಳಿಕ 17 ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: 18 ‘ಈ ಹೊತ್ತು ಆರ್ ಎಂಬ ಪಟ್ಟಣದ ಗಡಿಯನ್ನು ದಾಟಿ ಮೋವಾಬ್ ದೇಶವನ್ನು ಪ್ರವೇಶಿಸಬೇಕು. 19 ನೀನು ಅಮ್ಮೋನಿಯರ ಬಳಿಗೆ ಹೋಗಬೇಕು. ಆದರೆ ಅವರಿಗೆ ತೊಂದರೆ ಕೊಡಬೇಡ. ಅವರೊಂದಿಗೆ ಯುದ್ಧಮಾಡಬೇಡ. ಯಾಕೆಂದರೆ ಅವರ ದೇಶದಲ್ಲಿ ನಿನಗೆ ಪಾಲಿಲ್ಲ. ಅವರು ಲೋಟನ ಸಂತತಿಯವರು, ಆ ದೇಶವನ್ನು ನಾನು ಅವರಿಗೆ ಕೊಟ್ಟಿರುತ್ತೇನೆ.’”
20 (ಆ ಪ್ರದೇಶವನ್ನು ರೆಫಾಯ ದೇಶವೆಂದೂ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ರೆಫಾಯರು ಅಲ್ಲಿ ವಾಸಿಸುತ್ತಿದ್ದರು. ಅಮ್ಮೋನಿಯರು ಅವರನ್ನು ಜಮ್‌ಜುಮ್ಯರು ಎಂದು ಕರೆಯುತ್ತಿದ್ದರು. 21 ಜಮ್‌ಜುಮ್ಯರು ತುಂಬಾ ಬಲಶಾಲಿಗಳಾಗಿದ್ದರು; ಅನಾಕ್ಯರಂತೆ ಉನ್ನತ ಪುರುಷರಾಗಿದ್ದರು. ಆದರೆ ಯೆಹೋವನು ಜಮ್‌ಜುಮ್ಯರನ್ನು ಸೋಲಿಸಲು ಅಮೋರಿಯರಿಗೆ ಸಹಾಯ ಮಾಡಿದನು. ಅಮೋರಿಯರು ಆ ದೇಶವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಈಗ ಅದರಲ್ಲಿ ನೆಲೆಸಿರುತ್ತಾರೆ. 22 ಏಸಾವನ ಜನರಿಗೂ ದೇವರು ಅದೇ ರೀತಿ ಮಾಡಿದನು. ಹಿಂದಿನ ಕಾಲದಲ್ಲಿ ಹೋರಿಯರು ಸೇಯೀರ್‌ನಲ್ಲಿ ವಾಸಿಸುತ್ತಿದ್ದರು. ಆದರೆ ಏಸಾವನ ಜನರು ಅವರನ್ನು ಸೋಲಿಸಿದರು. ಅವನ ಸಂತತಿಯವರು ಈಗಲೂ ಅಲ್ಲಿ ವಾಸಮಾಡುತ್ತಿದ್ದಾರೆ. 23 ಕಫ್ತೋರ್ಯದವರಿಗೂ ದೇವರು ಅದೇ ರೀತಿ ಮಾಡಿದ್ದನು. ಗಾಜಾದ ಸುತ್ತಲಿನ ಪಟ್ಟಣಗಳಲ್ಲಿ ಅವ್ವಿಯ ಜನರು ವಾಸಿಸುತ್ತಿದ್ದರು. ಆದರೆ ಕಫ್ತೋರ್ಯದಿಂದ ಬಂದ ಜನರು ಅವ್ವಿಯರನ್ನು ನಾಶಮಾಡಿ ಅವರ ದೇಶದಲ್ಲಿ ಈಗಲೂ ಅವರು ವಾಸಿಸಿರುತ್ತಾರೆ.)
ಅಮೋರಿಯರೊಂದಿಗೆ ಯುದ್ಧ
24 “ಯೆಹೋವನು ನನಗೆ ಹೇಳಿದ್ದೇನೆಂದರೆ: ‘ಅರ್ನೋನ್ ಕಣಿವೆಯನ್ನು ದಾಟಲು ಸಿದ್ಧಪಡಿಸಿಕೊ. ಅಮೋರಿಯನೂ ಹೆಷ್ಬೋನಿನ ರಾಜನೂ ಆಗಿರುವ ಸೀಹೋನನನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುವೆನು. ಅವನ ರಾಜ್ಯವನ್ನು ನಾನು ನಿನಗೆ ಕೊಡುವೆನು. ಆದುದರಿಂದ ಅವನಿಗೆ ವಿರುದ್ಧವಾಗಿ ಯುದ್ಧಮಾಡಿ ದೇಶವನ್ನು ಸ್ವಾಧೀನಪಡಿಸಿಕೊ. 25 ಸುತ್ತಲಿರುವ ಜನಾಂಗಗಳು ನಿಮಗೆ ಹೆದರಿ ನಡುಗುವಂತೆ ನಾನು ಮಾಡುತ್ತಿದ್ದೇನೆ. ಅವರು ನಿಮ್ಮ ಬಗ್ಗೆ ಸುದ್ದಿಯನ್ನು ಕೇಳಿ ಹೆದರಿಕೊಳ್ಳುವರು ಮತ್ತು ಭಯದಿಂದ ನಡುಗುವರು.’
26 “ನಾವು ಕೆದೇಮೋತಿನ ಮರುಭೂಮಿಯಲ್ಲಿರುವಾಗ ಹೆಷ್ಬೋನಿನ ಅರಸನಾದ ಸೀಹೋನನ ಬಳಿಗೆ ದೂತರನ್ನು ಸಮಾಧಾನದ ಸಂದೇಶದೊಂದಿಗೆ ಕಳುಹಿಸಿದೆನು. ಆ ದೂತರು ಸೀಹೋನನಿಗೆ ಸಮಾಧಾನವನ್ನು ತಂದಿದ್ದರು. 27 ಅವರು ಸೀಹೋನನಿಗೆ, ‘ನಿನ್ನ ರಾಜ್ಯವನ್ನು ನಾವು ದಾಟುವಂತೆ ನಮಗೆ ಅಪ್ಪಣೆ ಕೊಡು. ನಾವು ಮಾರ್ಗದಲ್ಲಿ ಬಲಕ್ಕಾಗಲಿ ಎಡಕ್ಕಾಗಲಿ ಹೋಗುವುದಿಲ್ಲ. 28 ನಾವೇನಾದರೂ ನಿನ್ನ ದೇಶದ ಆಹಾರಪದಾರ್ಥಗಳನ್ನು ತೆಗೆದುಕೊಂಡರೆ, ನೀರನ್ನು ಉಪಯೋಗಿಸಿದರೆ ಅದಕ್ಕೆ ಪ್ರತಿಯಾಗಿ ಬೆಳ್ಳಿಯನ್ನು ಪಾವತಿ ಮಾಡುವೆವು. ನಿಮ್ಮ ದೇಶದ ಮೂಲಕ ನಾವು ಹಾದುಹೋಗಬೇಕಾಗಿದೆಯಷ್ಟೇ. 29 ನಾವು ಜೋರ್ಡನ್ ನದಿಯನ್ನು ದಾಟುವವರೆಗೆ ನಿಮ್ಮ ದೇಶದ ಮೂಲಕ ಹೋಗಿ, ನಮ್ಮ ದೇವರಾದ ಯೆಹೋವನು ಕೊಡಲಿರುವ ದೇಶವನ್ನು ಪ್ರವೇಶಿಸುತ್ತೇವೆ. ಸೇಯೀರ್‌ನಲ್ಲಿ ವಾಸಿಸುವ ಏಸಾವನ ಜನರೂ, ಆರ್‌ನಲ್ಲಿ ವಾಸಿಸುವ ಮೋವಾಬ್ಯರೂ ತಮ್ಮ ದೇಶಗಳ ಮೂಲಕ ಹೋಗಲು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಹೇಳಿದರು.
30 “ಆದರೆ ಸೀಹೋನನು ನಮಗೆ ದಾಟಿಹೋಗಲು ಬಿಡಲಿಲ್ಲ. ನಮ್ಮ ದೇವರಾದ ಯೆಹೋವನು ಅವನ ಹೃದಯವನ್ನು ಕಠಿಣಗೊಳಿಸಿದನು. ನಾವು ಅವನನ್ನು ಸೋಲಿಸಿ ಅವನ ರಾಜ್ಯವನ್ನು ವಶಪಡಿಸಿಕೊಳ್ಳಬೇಕೆಂದು ಯೆಹೋವನು ಹಾಗೆ ಮಾಡಿದನು. ಆ ರಾಜ್ಯವು ಇಂದಿಗೂ ನಮ್ಮ ವಶದಲ್ಲಿದೆ.
31 “ಯೆಹೋವನು ನನಗೆ, ‘ನಾನು ನಿನಗೆ ಸೀಹೋನನನ್ನೂ ಅವನ ಎಲ್ಲಾ ಜನರನ್ನೂ ಅವನ ದೇಶವನ್ನೂ ನಿನಗೆ ಕೊಡುತ್ತೇನೆ. ಈಗ ಹೋಗಿ ಅವನ ದೇಶವನ್ನು ವಶಪಡಿಸಿಕೊ!’ ಎಂದು ಹೇಳಿದನು.
32 “ಅನಂತರ ಸೀಹೋನ್ ಅರಸನೂ ಅವನ ಜನರೂ ನಮ್ಮೊಂದಿಗೆ ಕಾದಾಡಲು ಯಹಜಿ ಎಂಬ ಸ್ಥಳಕ್ಕೆ ಬಂದರು. 33 ಆದರೆ ನಮ್ಮ ದೇವರಾದ ಯೆಹೋವನು ಅವನನ್ನು ನಮ್ಮ ವಶಕ್ಕೆ ಕೊಟ್ಟನು. ನಾವು ಸೀಹೋನ್ ಅರಸನನ್ನೂ ಅವನ ಮಕ್ಕಳನ್ನೂ ಅವನ ಎಲ್ಲಾ ಜನರನ್ನೂ ಸದೆಬಡೆದು ಸೋಲಿಸಿದೆವು. 34 ಅವನಿಗೆ ಒಳಪಟ್ಟ ಪಟ್ಟಣಗಳನ್ನೆಲ್ಲಾ ವಶಪಡಿಸಿಕೊಂಡೆವು. ಪ್ರತಿಯೊಂದು ಪಟ್ಟಣದಲ್ಲಿದ್ದ ಗಂಡಸರು, ಹೆಂಗಸರು, ಮಕ್ಕಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದೆವು. ಯಾರನ್ನೂ ಜೀವಂತವಾಗಿ ಉಳಿಸಲಿಲ್ಲ. 35 ಅವರ ದನಕರುಗಳನ್ನು ಮತ್ತು ಅವರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಸೂರೆಮಾಡಿದೆವು. 36 ನಾವು ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಎಂಬ ಊರನ್ನು ಮತ್ತು ಆ ಕಣಿವೆಯ ಮಧ್ಯದಲ್ಲಿದ್ದ ಇನ್ನೊಂದು ಊರನ್ನು ವಶಪಡಿಸಿಕೊಂಡೆವು. ಅರ್ನೋನ್ ಕಣಿವೆ ಮತ್ತು ಗಿಲ್ಯಾದ್‌ಗಳ ನಡುವೆ ಇರುವ ಎಲ್ಲಾ ಪಟ್ಟಣಗಳನ್ನು ಸೋಲಿಸಲು ಯೆಹೋವನು ಅವಕಾಶ ಮಾಡಿಕೊಟ್ಟನು. ಯಾವ ಪಟ್ಟಣವೂ ನಮಗೆ ಅಸಾಧ್ಯವಾಗಿ ಕಂಡುಬರಲಿಲ್ಲ. 37 ಆದರೆ ಅಮ್ಮೋನಿಯರಿಗೆ ಸೇರಿದ ದೇಶದ ಸಮೀಪಕ್ಕೆ ನಾವು ಹೋಗಲಿಲ್ಲ: ಯಬ್ಬೋಕ್ ನದಿಯ ಬದಿಗೂ ನಾವು ಹೋಗಲಿಲ್ಲ: ಬೆಟ್ಟಪ್ರದೇಶಗಳ ಪಟ್ಟಣಗಳಿಗೂ ನಾವು ಹೋಗಲಿಲ್ಲ: ನಮ್ಮ ದೇವರಾದ ಯೆಹೋವನು ನಮಗೆ ಕೊಡದೆ ಇರುವ ದೇಶಗಳ ಬಳಿಗೆ ನಾವು ಹೋಗಲೇ ಇಲ್ಲ.
ಸ್ತುತಿಗೀತೆ. ರಚನೆಗಾರ: ಆಸಾಫ.
83 ದೇವರೇ, ಸುಮ್ಮನಿರಬೇಡ!
ನಿನ್ನ ಕಣ್ಣುಗಳನ್ನು ಮುಚ್ಚಿಕೊಳ್ಳಬೇಡ.
ದೇವರೇ, ದಯವಿಟ್ಟು ಮಾತನಾಡು.
2 ದೇವರೇ, ನಿನ್ನ ಶತ್ರುಗಳು ನಿನಗೆ ವಿರೋಧವಾಗಿ ಸಂಚು ಮಾಡುತ್ತಿದ್ದಾರೆ.
ಬಹುಬೇಗನೆ ಅವರು ಆಕ್ರಮಣ ಮಾಡಲಿದ್ದಾರೆ.
3 ನಿನ್ನ ಜನರಿಗೆ ವಿರೋಧವಾಗಿ ರಹಸ್ಯ ಯೋಜನೆಗಳನ್ನು ಮಾಡುತ್ತಿದ್ದಾರೆ.
ನಿನ್ನ ಪ್ರಿಯರ ವಿರೋಧವಾಗಿ ಅವರು ಸಂಚು ಮಾಡುತ್ತಿದ್ದಾರೆ.
4 ಅವರು ಹೀಗೆಂದುಕೊಳ್ಳುತ್ತಿದ್ದಾರೆ: “ಬನ್ನಿರಿ, ಅವರನ್ನು ಸಂಪೂರ್ಣವಾಗಿ ನಾಶಮಾಡೋಣ.
ಆಗ ‘ಇಸ್ರೇಲ್’ ಎಂಬ ಹೆಸರೇ ಅಳಿದುಹೋಗುವುದು.”
5 ನಿನಗೂ ನೀನು ನಮ್ಮೊಂದಿಗೆ ಮಾಡಿಕೊಂಡ ಒಪ್ಪಂದಕ್ಕೂ
ವಿರೋಧವಾಗಿ ಅವರೆಲ್ಲರೂ ಒಂದು ಗೂಡಿದ್ದಾರೆ.
6-7 ಅವರು ಯಾರೆಂದರೆ: ಎದೋಮ್ಯರು, ಇಷ್ಮಾಯೇಲ್ಯರು, ಮೋವಾಬ್ಯರು ಮತ್ತು ಹಗ್ರೀಯ ಸಂತತಿಯವರು,
ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು,
ಫಿಲಿಷ್ಟಿಯರು ಮತ್ತು ತೂರ್ ಸಂಸ್ಥಾನದವರು.
ಇವರೆಲ್ಲರೂ ನಮಗೆ ವಿರೋಧವಾಗಿ ಸೇರಿಬಂದಿದ್ದಾರೆ.
8 ಅಶ್ಶೂರ್ಯದವರು ಸಹ ಅವರೊಡನೆ ಸೇರಿಕೊಂಡು
ಲೋಟನ ಸಂತತಿಯವರನ್ನು ಪ್ರಬಲರನ್ನಾಗಿ ಮಾಡಿದ್ದಾರೆ.
9 ನೀನು ಮಿದ್ಯಾನ್ಯರನ್ನೂ ಕೀಷೋನ್ ನದಿಯ ಸಮೀಪದಲ್ಲಿ
ಸೀಸೆರನನ್ನೂ ಯಾಬೀನನನ್ನೂ ಸೋಲಿಸಿದಂತೆ ಅವರನ್ನು ಸೋಲಿಸು.
10 ನೀನು ಅವರನ್ನು ಎಂದೋರಿನಲ್ಲಿ ಸೋಲಿಸಿದೆ.
ಅವರ ದೇಹಗಳು ನೆಲದ ಮೇಲೆ ಕೊಳೆತುಹೋದವು.
11 ದೇವರೇ, ಶತ್ರುಗಳ ನಾಯಕರುಗಳನ್ನು ಸೋಲಿಸು.
ನೀನು ಓರೇಬ್ ಮತ್ತು ಜೇಬ್ ಪ್ರಾಂತ್ಯಗಳಿಗೆ ಮಾಡಿದಂತೆಯೇ ಅವರಿಗೆ ಮಾಡು.
ನೀನು ಜೇಬಹ ಮತ್ತು ಚಲ್ಮುನ್ನ ಪ್ರಾಂತ್ಯಗಳಿಗೆ ಮಾಡಿದಂತೆಯೇ ಅವರಿಗೆ ಮಾಡು.
12 ನನ್ನ ದೇವರೇ, ಅವರು ನಿನ್ನ ನಾಡಿನಿಂದ ನಮ್ಮನ್ನು ಹೊರಗಟ್ಟಬೇಕೆಂದಿದ್ದರು.
13 ಗಾಳಿಗೆ ತೂರಿಹೋಗುವ ಮೊಟಕುಬೇರಿನ ಕಳೆಯಂತೆ ಅವರನ್ನು ಮಾಡು.
ಗಾಳಿಯು ಹೊಟ್ಟನ್ನು ಚದರಿಸುವಂತೆ ಅವರನ್ನು ಚದರಿಸು.
14 ಕಾಡನ್ನು ನಾಶಮಾಡುವ ಬೆಂಕಿಯಂತೆಯೂ
ಬೆಟ್ಟಗಳನ್ನು ಸುಟ್ಟುಹಾಕುವ ಅಗ್ನಿಜ್ವಾಲೆಯಂತೆಯೂ ಅವರನ್ನು ನಾಶಮಾಡು.
15 ಬಿರುಗಾಳಿಯಿಂದ ಕೊಚ್ಚಿಕೊಂಡು ಹೋಗುವ ಧೂಳಿನಂತೆ ಅವರನ್ನು ಬೆನ್ನಟ್ಟಿಹೋಗು.
ಸುಂಟರ ಗಾಳಿಯಂತೆ ಅವರನ್ನು ನಡುಗಿಸು.
16 ಯೆಹೋವನೇ, ತಾವು ನಿಜವಾಗಿಯೂ ಬಲಹೀನರೆಂಬುದನ್ನು ಅವರು ಕಲಿತುಕೊಳ್ಳುವಂತೆ ಮಾಡು;
ಆಗ ಅವರು ನಿನ್ನ ಹೆಸರನ್ನು ಆರಾಧಿಸಬೇಕೆನ್ನುವರು.
17 ಅವರನ್ನು ಭಯವೂ ನಾಚಿಕೆಯೂ ಕವಿದುಕೊಂಡೇ ಇರಲಿ.
ಅವರು ಅವಮಾನಗೊಂಡು ನಾಶವಾಗಲಿ.
18 ಆಗ ಅವರು ನೀನೊಬ್ಬನೇ ದೇವರೆಂದೂ
ನಿನ್ನ ಹೆಸರು ಯೆಹೋವನೆಂದೂ ತಿಳಿದುಕೊಳ್ಳುವರು.
ಭೂಲೋಕಕ್ಕೆಲ್ಲಾ ಮಹೋನ್ನತನಾದ ದೇವರೊಬ್ಬನೇ
ದೇವರೆಂದು ಅವರು ಅರಿತುಕೊಳ್ಳುವರು.
ರಚನೆಗಾರರು: ಕೋರಹೀಯರು.
84 ಸೇನಾಧೀಶ್ವರನಾದ ಯೆಹೋವನೇ, ನಿನ್ನ ಆಲಯವು ಎಷ್ಟೋ ರಮ್ಯವಾಗಿದೆ.
2 ಯೆಹೋವನೇ, ನಿನ್ನ ಆಲಯದೊಳಗೆ ಪ್ರವೇಶಿಸಲು ಕಾತುರಗೊಂಡಿರುವೆ.
ನನ್ನ ಅಂಗಾಂಗಗಳೆಲ್ಲಾ ಚೈತನ್ಯಸ್ವರೂಪನಾದ ದೇವರೊಂದಿಗೆ ಇರಲು ಬಯಸುತ್ತಿವೆ.
3 ಸೇನಾಧೀಶ್ವರನಾದ ಯೆಹೋವನೇ, ನನ್ನ ರಾಜನೇ,
ನನ್ನ ದೇವರೇ, ಗುಬ್ಬಚ್ಚಿಗಳಿಗೂ ಪಾರಿವಾಳಗಳಿಗೂ ನಿನ್ನ ಆಲಯದಲ್ಲಿ ಗೂಡುಗಳಿವೆ.
ನಿನ್ನ ಯಜ್ಞವೇದಿಕೆಯ ಸಮೀಪದಲ್ಲಿಯೇ
ಗೂಡು ಕಟ್ಟಿಕೊಂಡು ಮರಿ ಮಾಡುತ್ತವೆ.
4 ನಿನ್ನ ಆಲಯದಲ್ಲಿ ವಾಸಿಸುವವರು ಭಾಗ್ಯವಂತರೇ ಸರಿ!
ಅವರು ನಿನ್ನನ್ನು ನಿತ್ಯವೂ ಸ್ತುತಿಸುತ್ತಿರುವರು.
5 ನಿನ್ನ ಶಕ್ತಿಯನ್ನೇ ಆಶ್ರಯಿಸಿಕೊಂಡು ಚೀಯೋನ್ ಪರ್ವತಕ್ಕೆ
ಯಾತ್ರಿಕರಾಗಿ ಬರಲು ಬಯಸುವವರು ಎಷ್ಟೋ ಭಾಗ್ಯವಂತರು.
6 ಒರತೆಯನ್ನಾಗಿ ಮಾಡಿರುವ ಬಾಕಾ ಕಣಿವೆಯ ಮೂಲಕ ಅವರು ಪ್ರಯಾಣಮಾಡುವರು.
ಮುಂಗಾರು ಮಳೆಯು ಅದನ್ನು ನೀರಿನ ತೊರೆಗಳಿಂದ ಸಮೃದ್ಧಿಗೊಳಿಸುವುದು.
7 ಜನರು ದೇವರನ್ನು ಸಂದರ್ಶಿಸಲು
ಊರಿಂದ ಊರಿಗೆ ಪ್ರಯಾಣ ಮಾಡುತ್ತಾ ಚೀಯೋನಿಗೆ ಬರುವರು.
8 ಸೇನಾಧೀಶ್ವರ ಯೆಹೋವ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ಯಾಕೋಬನ ದೇವರೇ, ನನ್ನ ಮೊರೆಯನ್ನು ಕೇಳು.
9 ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು.
ನೀನು ಅಭಿಷೇಕಿಸಿದವನಿಗೆ ಕರುಣೆತೋರು.
10 ಬೇರೊಂದು ಸ್ಥಳದಲ್ಲಿ ಸಾವಿರ ದಿನಗಳಿರುವುದಕ್ಕಿಂತಲೂ
ನಿನ್ನ ಆಲಯದಲ್ಲಿ ಒಂದು ದಿನವಿರುವುದೇ ಉತ್ತಮ.
ದುಷ್ಟರ ಮನೆಯಲ್ಲಿ ವಾಸಿಸುವುದಕ್ಕಿಂತಲೂ
ನನ್ನ ದೇವರ ಆಲಯದಲ್ಲಿ ದ್ವಾರಪಾಲಕನಾಗಿರುವುದೇ ಉತ್ತಮ.[a]
11 ಯೆಹೋವ ದೇವರು ನಮ್ಮ ಸಂರಕ್ಷಕನೂ ಮಹಿಮಾ ಪೂರ್ಣನಾದ ರಾಜನೂ ಆಗಿದ್ದಾನೆ.[b]
ಯೆಹೋವನು ನಮಗೆ ದಯೆಯನ್ನೂ ಘನತೆಯನ್ನೂ ಅನುಗ್ರಹಿಸುವನು.
ಆತನು ಎಲ್ಲಾ ಒಳ್ಳೆಯವುಗಳನ್ನು
ತನ್ನ ಭಕ್ತರಿಗೆ ಕೊಡುವನು.
12 ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವವರು ಭಾಗ್ಯವಂತರೇ ಸರಿ!
ಇಸ್ರೇಲರು ದೇವರ ಮೇಲೆ ಭರವಸವಿಡಬೇಕು
30 ಯೆಹೋವನು ಹೀಗೆನ್ನುತ್ತಾನೆ: “ಈ ಮಕ್ಕಳನ್ನು ನೋಡಿರಿ, ಅವರು ನನಗೆ ವಿಧೇಯರಾಗುತ್ತಿಲ್ಲ. ಅವರು ಯೋಜನೆಗಳನ್ನು ತಯಾರಿಸುತ್ತಾರೆ, ಆದರೆ ನನ್ನಿಂದ ಸಹಾಯವನ್ನು ಕೇಳುತ್ತಿಲ್ಲ. ಅವರು ಬೇರೆ ರಾಜ್ಯಗಳೊಂದಿಗೆ ಒಪ್ಪಂದ ಮಾಡುತ್ತಾರೆ; ಆದರೆ ನನ್ನ ಆತ್ಮವು ಅದಕ್ಕೆ ಒಪ್ಪುತ್ತಿಲ್ಲ. ಈ ಜನರು ತಮ್ಮ ಪಾಪಗಳಿಗೆ ಇನ್ನೂ ಹೆಚ್ಚು ಪಾಪವನ್ನು ಕೂಡಿಸಿಟ್ಟುಕೊಳ್ಳುತ್ತಾರೆ. 2 ಈ ಮಕ್ಕಳು ಈಜಿಪ್ಟಿಗೆ ಸಹಾಯಕ್ಕಾಗಿ ಹೋಗುತ್ತಾರೆ, ಆದರೆ ಅವರು ಹಾಗೆ ಮಾಡುವದು ಸರಿಯೋ ಎಂದು ನನ್ನ ಹತ್ತಿರ ಕೇಳುವದಿಲ್ಲ. ಫರೋಹನು ತಮ್ಮನ್ನು ರಕ್ಷಿಸುತ್ತಾನೆಂದು ಅವರು ತಿಳಿದಿದ್ದಾರೆ. ಈಜಿಪ್ಟೇ ತಮ್ಮನ್ನು ಕಾಪಾಡಬೇಕು ಎಂಬುದು ಅವರ ಇಷ್ಟ.
3 “ಆದರೆ ನಾನು ನಿಮಗೆ ಹೇಳುವುದೇನೆಂದರೆ, ಈಜಿಪ್ಟಿನಲ್ಲಿ ಅಡಗಿಕೊಂಡರೆ ಏನೂ ಪ್ರಯೋಜನವಾಗದು. ಈಜಿಪ್ಟು ನಿಮ್ಮನ್ನು ರಕ್ಷಿಸಲಾರದು. 4 ನಿಮ್ಮ ಅಧಿಕಾರಿಗಳು ಚೋವನಿಗೆ ಹೋಗಿದ್ದಾರೆ, ನಿಮ್ಮ ರಾಯಭಾರಿಗಳು ಹಾನೇಸಿಗೆ ಹೋಗಿದ್ದಾರೆ. 5 ಆದರೆ ಅವರು ನಿರಾಶರಾಗುವರು. ತಮಗೆ ಸಹಾಯ ಮಾಡಲಶಕ್ಯವಾದ ರಾಜ್ಯಗಳಿಗೆ ಸಹಾಯಕ್ಕಾಗಿ ಹೋಗಿದ್ದಾರೆ. ಈಜಿಪ್ಟು, ನಿಷ್ಪ್ರಯೋಜಕವಾಗಿದೆ. ಅದು ಸಹಾಯ ಮಾಡದು. ಅದು ನಾಚಿಕೆ, ಅವಮಾನಗಳನ್ನು ಕೊಡುವದು.”
ಯೆಹೂದಕ್ಕೆ ದೇವರ ಸಂದೇಶ
6 ನೆಗೆವ್‌ನಲ್ಲಿರುವ ಪ್ರಾಣಿಗಳ ದುಃಖಕರವಾದ ಸಂದೇಶ:
ನೆಗೆವ್ ಬಹು ಅಪಾಯಕಾರಿ ಸ್ಥಳ. ಸಿಂಹ, ವಿಷದ ಹಾವುಗಳು, ವೇಗವಾಗಿ ಚಲಿಸುವ ಹಾವುಗಳಿಂದ ಅದು ತುಂಬಿದೆ. ಆದರೆ ಕೆಲವರು ನೆಗೆವ್ ಮೂಲಕ ಪ್ರಯಾಣ ಮಾಡಿ ಈಜಿಪ್ಟಿಗೆ ಹೋಗುತ್ತಾರೆ. ಅವರು ತಮ್ಮ ಸಂಪತ್ತನ್ನೆಲ್ಲಾ ಕತ್ತೆಯ ಮೇಲೆ ಹೊರಿಸಿರುತ್ತಾರೆ. ಅವರು ತಮ್ಮ ಧನವನ್ನು ಒಂಟೆಯ ಮೇಲೆ ಹೊರಿಸಿರುತ್ತಾರೆ. ತಮಗೆ ಸಹಾಯ ಮಾಡಲಾರದ ದೇಶದ ಮೇಲೆ ಜನರು ಭರವಸವಿಟ್ಟಿದ್ದಾರೆ ಎಂಬುದೇ ಇದರರ್ಥ. 7 ಈಜಿಪ್ಟ್ ಯಾವ ಪ್ರಯೋಜನಕ್ಕೂ ಬಾರದು. ಅದರ ಸಹಾಯವು ಏನೂ ಅಲ್ಲ. ಅದಕ್ಕಾಗಿ ನಾನು ಈಜಿಪ್ಟನ್ನು “ಏನೂ ಮಾಡದ ದೈತ್ಯಾಕಾರದ ಮೃಗ” ಎಂದು ಕರೆಯುತ್ತೇನೆ.
8 ಎಲ್ಲಾ ಜನರಿಗೆ ಕಾಣುವಂತೆ ಇದನ್ನು ಹಲಗೆಯ ಮೇಲೆ ಬರೆ; ಪುಸ್ತಕದಲ್ಲೂ ಬರೆ. ಕೊನೆಯ ದಿವಸಗಳಿಗಾಗಿ ಇದನ್ನು ಬರೆ. ಬಹುಕಾಲದ ನಂತರ ಇದು ಸಂಭವಿಸುವದು.
9 ಈ ಜನರು ಹೆತ್ತವರಿಗೆ ವಿಧೇಯರಾಗದ ಮಕ್ಕಳಂತಿದ್ದಾರೆ. ಅವರು ಸುಳ್ಳಾಡಿಕೊಂಡು ಯೆಹೋವನ ಬೋಧನೆಯನ್ನು ನಿರಾಕರಿಸುತ್ತಾರೆ. 10 ಅವರು ಪ್ರವಾದಿಗಳಿಗೆ, “ನಾವು ಮಾಡಬೇಕಿರುವ ಕಾರ್ಯಗಳ ಬಗ್ಗೆ ದೈವೋಕ್ತಿ ನುಡಿಯಬೇಡಿ, ನಮಗೆ ಸತ್ಯವನ್ನು ತಿಳಿಸಬೇಡಿ. ನಮಗೊಪ್ಪುವ ಮನರಂಜನೆಯ ಮಾತುಗಳನ್ನಾಡಿ. ನಮಗೋಸ್ಕರ ಒಳ್ಳೆಯ ಸಂಗತಿಗಳನ್ನೇ ನಿಮ್ಮ ದರ್ಶನಗಳಲ್ಲಿ ನೋಡಿರಿ. 11 ಸತ್ಯವಾಗಿ ನಡೆಯುವ ವಿಷಯಗಳನ್ನು ನೀವು ದರ್ಶನದಲ್ಲಿ ನೋಡಬೇಡಿ. ನಮ್ಮ ದಾರಿಯಿಂದ ತೊಲಗಿರಿ. ಇಸ್ರೇಲಿನ ಪರಿಶುದ್ಧನ ಬಗ್ಗೆ ನಮಗೆ ಹೇಳುವುದನ್ನು ನಿಲ್ಲಿಸಿಬಿಡಿರಿ” ಎಂದು ಹೇಳುವರು.
ಯೆಹೂದಕ್ಕೆ ಸಹಾಯವು ಯೆಹೋವನಿಂದಲೇ ಬರುವದು
12 ಇಸ್ರೇಲಿನ ಪರಿಶುದ್ಧನು ಹೇಳುವುದೇನೆಂದರೆ, “ಯೆಹೋವನಿಂದ ಬರುವ ಸಂದೇಶವನ್ನು ಅಂಗೀಕರಿಸಲು ನೀವು ನಿರಾಕರಿಸುತ್ತೀರಿ. ನೀವು ನಿಮ್ಮ ಯುದ್ಧಗಳಿಂದಲೂ ಸುಳ್ಳಾಡುವದರಿಂದಲೂ ನಿಮಗೆ ಸಹಾಯ ಸಿಗುವದೆಂದು ಭರವಸೆಯಿಂದಿದ್ದೀರಿ. 13 ನೀವು ತಪ್ಪಿತಸ್ಥರಾಗಿದ್ದೀರಿ. ನೀವು ಬಿರುಕು ಬಿಟ್ಟಿರುವ ಎತ್ತರದ ಗೋಡೆಯಂತಿದ್ದೀರಿ. ಆ ಗೋಡೆಯು ಇದ್ದಕ್ಕಿದ್ದಂತೆ ನೆಲಕ್ಕುರುಳಿ ಚೂರುಚೂರಾಗುವದು. ಒಳ್ಳೆಯ ಸಮಯವು ಬರುತ್ತಿದೆ. 14 ಒಂದು ದೊಡ್ಡ ಆವೆಮಣ್ಣಿನ ಭರಣಿ ನಚ್ಚುನೂರಾಗಿ ಹೋಗುವಂತೆ ನೀವಿದ್ದೀರಿ. ಅದರ ತುಂಡುಗಳಿಂದ ಏನೂ ಪ್ರಯೋಜನವಿಲ್ಲ. ಆ ಭರಣಿಯ ಚೂರಿನಿಂದ ಸುಡುವ ಕಲ್ಲಿದ್ದಲನ್ನು ಹೊರತೆಗೆಯಲು ಅಥವಾ ಅದರಿಂದ ನೀರು ಸೇದಲು ಆಗುವದಿಲ್ಲ.”
15 ನನ್ನ ಒಡೆಯನೂ ದೇವರೂ ಇಸ್ರೇಲಿನ ಪರಿಶುದ್ಧನೂ ಹೇಳುವುದೇನೆಂದರೆ, “ನೀವು ನನ್ನ ಕಡೆಗೆ ತಿರುಗಿಕೊಳ್ಳುವುದಾದರೆ ನೀವು ರಕ್ಷಿಸಲ್ಪಡುವಿರಿ. ನೀವು ತಾಳ್ಮೆಯಿಂದ ನನ್ನ ಮೇಲೆ ಭರವಸೆಯಿಟ್ಟರೆ, ನೀವು ಬಲವನ್ನು ಹೊಂದುವಿರಿ.”
ಆದರೆ ಹಾಗೆ ಮಾಡಲು ನಿಮಗೆ ಇಷ್ಟವಿಲ್ಲ. 16 ನೀವು, “ನಮಗೆ ಸಹಾಯ ಬೇಡ. ಓಡಿಹೋಗಲು ಕುದುರೆಗಳು ಬೇಕು” ಎಂದು ಹೇಳುವಿರಿ. ಅದು ಸರಿಯಾದ ಮಾತು. ನೀವು ಕುದುರೆಗಳ ಮೂಲಕವೇ ಓಡುವಿರಿ. ಆದರೆ ಶತ್ರುಗಳು ನಿಮ್ಮನ್ನು ಹಿಂದಟ್ಟುವರು. ಅವರು ನಿಮ್ಮ ಕುದುರೆಗಳಿಗಿಂತ ವೇಗಶಾಲಿಗಳಾಗಿದ್ದಾರೆ. 17 ಶತ್ರುವಿನಲ್ಲಿ ಒಬ್ಬನು ಬೆದರಿಸಿದರೆ ನಿಮ್ಮಲ್ಲಿರುವ ಸಾವಿರ ಮಂದಿ ಓಡುವರು. ಐದು ಮಂದಿ ವೈರಿಗಳು ಬೆದರಿಕೆ ಹಾಕಿದರೆ ನೀವೆಲ್ಲರೂ ಅವರ ಮುಂದಿನಿಂದ ಓಡಿಹೋಗುವಿರಿ. ಕೊನೆಗೆ ನಿಮ್ಮ ಸೈನ್ಯದಲ್ಲಿ ಉಳಿಯುವ ವಸ್ತು ಯಾವದೆಂದರೆ ಬೆಟ್ಟದ ಮೇಲೆ ನೆಟ್ಟಿರುವ ನಿಮ್ಮ ಧ್ವಜಸ್ತಂಭವೊಂದೇ.
ದೇವರು ತನ್ನ ಜನರಿಗೆ ಸಹಾಯ ಮಾಡುವನು
18 ಯೆಹೋವನು ನಿಮಗೆ ಕರುಣೆ ತೋರಿಸಲು ಇಷ್ಟಪಡುತ್ತಾನೆ. ಆತನು ನಿಮ್ಮನ್ನು ಎದುರು ನೋಡುತ್ತಿದ್ದಾನೆ. ಆತನು ಎದ್ದು ನಿಮ್ಮನ್ನು ಸಂತೈಸಲು ಬಯಸುತ್ತಾನೆ. ದೇವರಾದ ಯೆಹೋವನು ನ್ಯಾಯವಂತನಾಗಿದ್ದಾನೆ. ಆತನ ಸಹಾಯವನ್ನು ನಿರೀಕ್ಷಿಸುವವರೆಲ್ಲರೂ ಆಶೀರ್ವದಿಸಲ್ಪಡುವರು.
19 ಚೀಯೋನ್ ಪರ್ವತದಲ್ಲಿರುವ ಜೆರುಸಲೇಮಿನಲ್ಲಿ ಯೆಹೋವನ ಜನರು ವಾಸಿಸುವರು. ನೀವು ಇನ್ನು ಮೇಲೆ ಅಳುವದಿಲ್ಲ. ಯೆಹೋವನು ನಿಮ್ಮ ಅಳುವಿಕೆಯನ್ನು ನೋಡಿ ನಿಮ್ಮನ್ನು ಆದರಿಸುವನು. ಆತನು ನಿಮ್ಮ ಮೊರೆಯನ್ನು ಕೇಳಿ ನಿಮಗೆ ಸಹಾಯಿಸುವನು.
20 ಹಿಂದಿನ ದಿವಸಗಳಲ್ಲಿ ನನ್ನ ಒಡೆಯನು ನಿಮಗೆ ದುಃಖವನ್ನೂ ಬೇನೆಯನ್ನೂ ಕೊಟ್ಟನು. ಅದು ನಿಮಗೆ ದಿನನಿತ್ಯ ತಿನ್ನುವಂಥ ರೊಟ್ಟಿಯಂತೆಯೂ ನೀರಿನಂತೆಯೂ ಇತ್ತು. ಆದರೆ ನಿಮ್ಮ ಬೋಧಕನಾದ ದೇವರು ನಿಮ್ಮಿಂದ ಎಂದಿಗೂ ಅಡಗಿಕೊಂಡಿರಲಾರನು. ನಿಮ್ಮ ಬೋಧಕನನ್ನು ನೀವು ಕಣ್ಣಾರೆ ಕಾಣುವಿರಿ. 21 ಆದರೆ ನೀವು ತಪ್ಪು ಕಾರ್ಯಮಾಡಿದರೆ, ದುಷ್ಟತ್ವದಲ್ಲಿ ಜೀವಿಸಿದರೆ ನಿಮ್ಮ ಹಿಂದಿನಿಂದ ಒಂದು ಸ್ವರ, “ಇದು ಸರಿಯಾದ ಮಾರ್ಗ. ಈ ಮಾರ್ಗದಲ್ಲಿ ಮುಂದುವರಿಯಿರಿ” ಎಂದು ಹೇಳುವುದು ಕೇಳಿಸುವದು.
22 ನಿಮ್ಮಲ್ಲಿ ಬೆಳ್ಳಿಬಂಗಾರಗಳ ವಿಗ್ರಹಗಳಿವೆ. ಆ ಸುಳ್ಳುದೇವರುಗಳು ನಿಮ್ಮನ್ನು ಹೊಲೆಯನ್ನಾಗಿ ಮಾಡಿವೆ. ನೀವು ಅವುಗಳ ಸೇವೆಯನ್ನು ನಿಲ್ಲಿಸುವಿರಿ. ಅವು ಹೊಲಸು ವಸ್ತುಗಳೋ ಎಂಬಂತೆ ಅವುಗಳನ್ನೆತ್ತಿ ಬಿಸಾಡಿಬಿಡುವಿರಿ.
23 ಆ ಸಮಯದಲ್ಲಿ ಯೆಹೋವನು ನಿಮಗಾಗಿ ಮಳೆ ಸುರಿಸುವನು. ನೀವು ಭೂಮಿಯಲ್ಲಿ ಬೀಜಬಿತ್ತಿದ್ದಾಗ ಫಸಲನ್ನು ಹೊಂದುವಿರಿ. ನಿಮಗೆ ಬಹುದೊಡ್ಡ ಸುಗ್ಗಿ ಆಗುವದು. ಹೊಲದಲ್ಲಿ ನಿಮ್ಮ ಪಶುಗಳಿಗೆ ಬೇಕಾದಷ್ಟು ಹುಲ್ಲು ಇರುವದು. ಮೇಯಲು ನಿಮ್ಮ ಕುರಿಗಳಿಗೆ ಬೇಕಾದಷ್ಟು ಬಯಲಿವೆ. 24 ನಿಮ್ಮ ದನಕರುಗಳಿಗೂ ಕತ್ತೆಗಳಿಗೂ ಬೇಕಾದಷ್ಟು ಮೇವಿದೆ. ಆಹಾರವು ಯಥೇಚ್ಛವಾಗಿರುವದು. ನಿಮ್ಮ ದನಕರುಗಳು ಮೊರದಿಂದಲೂ ಕವೇಕೋಲಿನಿಂದಲೂ ತೂರಿದ ಉಪ್ಪುಪ್ಪಾದ ಮೇವನ್ನು ತಿನ್ನುವವು. 25 ಪ್ರತಿಯೊಂದು ಬೆಟ್ಟದಲ್ಲಿಯೂ ಪರ್ವತದಲ್ಲಿಯೂ ಹರಿಯುವ ನೀರಿನ ತೊರೆಗಳಿರುವವು. ಇವೆಲ್ಲಾ ಅನೇಕ ಜನರು ಕೊಲ್ಲಲ್ಪಟ್ಟ ನಂತರವೂ ಬುರುಜುಗಳು ಕೆಡವಲ್ಪಟ್ಟ ನಂತರವೂ ಸಂಭವಿಸುವವು.
26 ಆ ಸಮಯದಲ್ಲಿ ಚಂದ್ರನ ಪ್ರಕಾಶವು ಸೂರ್ಯನಂತಿರುವದು. ಸೂರ್ಯನ ಪ್ರಕಾಶವು ಈಗ ಇರುವದಕ್ಕಿಂತ ಏಳರಷ್ಟು ಹೆಚ್ಚಾಗಿರುವದು. ಸೂರ್ಯನ ಒಂದು ದಿವಸದ ಬೆಳಕು ಒಂದು ವಾರದ ಬೆಳಕಿನಷ್ಟಿರುವದು. ಯೆಹೋವನು ತನ್ನ ಮುರಿದುಹೋದ ಜನರಿಗೆ ಆದ ಗಾಯದ ಪೆಟ್ಟುಗಳನ್ನು ಗುಣಪಡಿಸುವಾಗ ಇವೆಲ್ಲಾ ಸಂಭವಿಸುತ್ತವೆ.
27 ಇಗೋ, ಯೆಹೋವನ ನಾಮವು ಬಹುದೂರದಿಂದ ಬರುವದು. ಆತನ ಕೋಪವು ದಟ್ಟವಾದ ಹೊಗೆಯೊಂದಿಗೆ ಇರುವ ಬೆಂಕಿಯೋಪಾದಿಯಲ್ಲಿರುವದು. ಯೆಹೋವನ ಬಾಯಿ ಕೋಪದಿಂದಲೂ ನಾಲಿಗೆಯು ಸುಡುವ ಬೆಂಕಿಯಂತೆಯೂ ಇರುವದು. 28 ಆತನ ಶ್ವಾಸವು (ಆತ್ಮ) ಒಂದು ಮಹಾನದಿಯಂತಿರುವದು. ಅದರ ನೀರು ಕುತ್ತಿಗೆಯ ತನಕ ಏರುವದು. ಯೆಹೋವನು ಜನಾಂಗಗಳಿಗೆ ನ್ಯಾಯತೀರಿಸುವನು. ಅವುಗಳನ್ನು ಜರಡಿಯಿಂದ ಜಾಲಾಡಿಸುವನು. ಯೆಹೋವನು ಅವುಗಳನ್ನು ನಿಯಂತ್ರಿಸುವನು. ಅದು ಪ್ರಾಣಿಗಳನ್ನು ನಿಯಂತ್ರಿಸುವ ಬಾಯಿಯಲ್ಲಿ ಹಾಕುವ ಕಡಿವಾಣದಂತಿರುವದು.
29 ಆ ಸಮಯದಲ್ಲಿ ನೀವು ಹರ್ಷಗಾನ ಹಾಡುವಿರಿ. ಅದು ಹಬ್ಬದ ರಾತ್ರಿಯ ಸಮಯದಂತಿರುವದು. ದೇವರ ಪರ್ವತದಲ್ಲಿ ನಡೆಯುತ್ತಿರುವಾಗ ನೀವು ಅತ್ಯಂತ ಸಂತೋಷಪಡುವಿರಿ. ಇಸ್ರೇಲಿನ ಬಂಡೆಯಾಗಿರುವ ಯೆಹೋವನನ್ನು ಆರಾಧಿಸಲು ಹೋಗುವಾಗ ಕೊಳಲಿನ ಗಾನವನ್ನು ಕೇಳಿ ಸಂತೋಷಿಸುವಿರಿ.
30 ಯೆಹೋವನು ತನ್ನ ಮಹಾಸ್ವರವನ್ನು ಜನರು ಕೇಳುವಂತೆ ಮಾಡುವನು. ತನ್ನ ಸಾಮರ್ಥ್ಯದ ಬಾಹುವು ಕೋಪದಿಂದ ನಡುಗುವದನ್ನು ಜನರು ನೋಡುವಂತೆ ಮಾಡುವನು. ಆ ಬಾಹುವು ಎಲ್ಲವನ್ನು ಸುಡುವ ದೊಡ್ಡ ಅಗ್ನಿಯಂತಿರುವದು. ಯೆಹೋವನ ಶಕ್ತಿಯು ಆಲಿಕಲ್ಲಿನಿಂದಲೂ ಮಳೆಯಿಂದಲೂ ಕೂಡಿರುವ ಬಿರುಗಾಳಿಯಂತಿರುವುದು. 31 ಯೆಹೋವನ ಸ್ವರವನ್ನು ಕೇಳುವಾಗ ಅಶ್ಶೂರವು ನಡುಗುವದು. ಆತನು ಕೋಲಿನಿಂದ ಅಶ್ಶೂರವನ್ನು ಹೊಡೆಯುವನು. 32 ಅಶ್ಶೂರವನ್ನು ಆತನು ಹೊಡೆಯುವಾಗ ಹಾರ್ಪ್‌ವಾದ್ಯಗಳನ್ನು ಮತ್ತು ದಮ್ಮಡಿಗಳನ್ನು ಬಾರಿಸಿದಂತಾಗುವದು. ಯೆಹೋವನು ಅಶ್ಶೂರವನ್ನು ತನ್ನ ಮಹಾಶಕ್ತಿಯಿಂದ ಸೋಲಿಸುವನು.
33 ಬಹುಕಾಲದವರೆಗೆ ಅಗ್ನಿಕುಂಡ[a] ಸಿದ್ಧವಾಗಿತ್ತು. ಅದು ರಾಜನಿಗಾಗಿ ಸಿದ್ಧವಾಗಿದೆ. ಅದು ಆಳವಾಗಿಯೂ ಅಗಲವಾಗಿಯೂ ಮಾಡಲ್ಪಟ್ಟಿದೆ. ಅಲ್ಲಿ ಒಂದು ದೊಡ್ಡ ಕಟ್ಟಿಗೆಯ ರಾಶಿಯೂ ಬೆಂಕಿಯೂ ಇದೆ ಮತ್ತು ಯೆಹೋವನ ಬಾಯುಸಿರು ಗಂಧಕದ ಪ್ರವಾಹದಂತೆ ಬಂದು ಎಲ್ಲವನ್ನು ನಾಶಮಾಡುವದು.
1 ಯೇಸು ಕ್ರಿಸ್ತನ ಸೇವಕನೂ ಯಾಕೋಬನ ಸಹೋದರನೂ ಆಗಿರುವ ಯೂದನು ದೇವರಿಂದ ಕರೆಯಲ್ಪಟ್ಟವರಿಗೂ ತಂದೆಯಾದ ದೇವರಿಗೆ ಪ್ರಿಯರಾದವರಿಗೂ ಯೇಸು ಕ್ರಿಸ್ತನಲ್ಲಿ ಸುರಕ್ಷಿತವಾಗಿಡಲ್ಪಟ್ಟವರಿಗೂ ಬರೆಯವ ಪತ್ರ.
2 ನಿಮಗೆ ಕರುಣೆ, ಶಾಂತಿ ಮತ್ತು ಪ್ರೀತಿ ಹೆಚ್ಚಾಗಲಿ.
ತಪ್ಪು ಮಾಡಿದ ಜನರನ್ನು ದೇವರು ದಂಡಿಸುತ್ತಾನೆ
3 ಪ್ರಿಯ ಸ್ನೇಹಿತರೇ, ನಾವೆಲ್ಲರೂ ಹಂಚಿಕೊಳ್ಳುವ ರಕ್ಷಣೆಯನ್ನು ಕುರಿತು ನಿಮಗೆ ಬರೆಯಬೇಕೆಂದು ನಾನು ಬಹಳವಾಗಿ ಇಚ್ಛಿಸಿದ್ದೆನು. ಆದರೆ ಮತ್ತೊಂದು ವಿಷಯದ ಬಗ್ಗೆ ನಾನು ನಿಮಗೆ ಬರೆಯುವುದು ಅಗತ್ಯವೆನಿಸಿತು. ದೇವರು ತನ್ನ ಪರಿಶುದ್ಧ ಜನರಿಗೆ ದಯಪಾಲಿಸಿರುವ ನಂಬಿಕೆಗಾಗಿ ನೀವು ಪ್ರಯಾಸಪಟ್ಟು ಹೋರಾಡುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸಲು ಇಚ್ಛಿಸುತ್ತೇನೆ. ದೇವರು ನಮಗೆ ಈ ನಂಬಿಕೆಯನ್ನು ಒಂದೇಸಲ ದಯಪಾಲಿಸಿದನು. ಅದು ಸರ್ವಕಾಲಗಳಲ್ಲಿಯೂ ಒಳ್ಳೆಯದಾಗಿದೆ. 4 ಕೆಲವು ಜನರು ರಹಸ್ಯವಾಗಿ ನಿಮ್ಮ ಸಭೆಯಲ್ಲಿ ಪ್ರವೇಶಿಸಿದ್ದಾರೆ. ಇವರಿಗಾಗುವ ದಂಡನೆಯ ಕುರಿತು ಬಹುಕಾಲದ ಹಿಂದೆಯೇ ಪ್ರವಾದಿಗಳು ಬರೆದಿದ್ದಾರೆ. ಈ ಜನರು ದೇವರಿಗೆ ವಿರುದ್ಧವಾಗಿದ್ದಾರೆ. ಅವರು ಪಾಪಕೃತ್ಯಗಳನ್ನು ಮಾಡುವುದಕ್ಕಾಗಿ ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ಅವರು ನಮ್ಮ ಒಬ್ಬನೇ ಒಡೆಯನಾದ ಮತ್ತು ಪ್ರಭುವಾದ ಯೇಸು ಕ್ರಿಸ್ತನನ್ನು ಹಿಂಬಾಲಿಸದವರಾಗಿದ್ದಾರೆ.
5 ನೀವು ಈಗಾಗಲೇ ತಿಳಿದುಕೊಂಡಿರುವ ಕೆಲವು ವಿಚಾರಗಳನ್ನು ನೆನಪು ಮಾಡಿಕೊಳ್ಳಲು ನಾನು ನಿಮಗೆ ಸಹಾಯ ಮಾಡಲಿಚ್ಛಿಸುತ್ತೇನೆ. ಪ್ರಭುವು ತನ್ನ ಜನರನ್ನು ಈಜಿಪ್ಟ್ ದೇಶದಿಂದ ಹೊರಗೆ ತಂದು ಅವರನ್ನು ರಕ್ಷಿಸಿದನೆಂಬುದನ್ನು ನೆನಪು ಮಾಡಿಕೊಳ್ಳಿರಿ. ತರುವಾಯ ಪ್ರಭುವು ನಂಬಿಕೆಯಿಲ್ಲದ ಜನರೆಲ್ಲರನ್ನೂ ನಾಶಪಡಿಸಿದನು. 6 ದೇವದೂತರು ಅಧಿಕಾರವನ್ನು ಹೊಂದಿದ್ದರೂ ಅದನ್ನು ಉಳಿಸಿಕೊಳ್ಳಲಾರದೆ ಸ್ವಂತ ವಾಸಸ್ಥಾನವನ್ನು ಬಿಟ್ಟುಹೋದದ್ದನ್ನು ನೆನಸಿಕೊಳ್ಳಿರಿ. ಆದ್ದರಿಂದ ಪ್ರಭುವು ಈ ದೇವದೂತರನ್ನು ಅಂಧಕಾರದಲ್ಲಿಟ್ಟನು. ಅವರನ್ನು ಶಾಶ್ವತವಾದ ಬೇಡಿಗಳಿಂದ ಬಂಧಿಸಲಾಯಿತು. ಮಹಾದಿನದಂದು ಅವರಿಗೆ ತೀರ್ಪು ನೀಡುವುದಕ್ಕಾಗಿ ಆತನು ಅವರನ್ನು ಅಲ್ಲಿಟ್ಟಿದ್ದಾನೆ. 7 ಸೊದೋಮ್ ಮತ್ತು ಗೊಮೋರ ನಗರಗಳನ್ನೂ ಅವುಗಳ ಸುತ್ತಲಿನ ಪಟ್ಟಣಗಳನ್ನೂ ನೆನಪು ಮಾಡಿಕೊಳ್ಳಿರಿ. ಅವುಗಳೂ ಆ ದೇವದೂತರಂತಾದವು. ಆ ಪಟ್ಟಣಗಳಲ್ಲಿ ಲೈಂಗಿಕ ಪಾಪಗಳು ಮತ್ತು ಕೆಟ್ಟಕಾರ್ಯಗಳು ತುಂಬಿಕೊಂಡಿದ್ದವು. ಅವರು ನಿತ್ಯವಾದ ಬೆಂಕಿಯ ದಂಡನೆಯಿಂದ ಸಂಕಟಪಡುವರು. ಅವರಿಗೆ ನೀಡಿದ ದಂಡನೆಯು ನಮಗೊಂದು ದೃಷ್ಟಾಂತವಾಗಿದೆ.
8 ನಿಮ್ಮ ಸಭೆಯಲ್ಲಿ ಪ್ರವೇಶಿಸಿರುವ ಜನರಿಗೂ ಇದೇ ರೀತಿಯಾಗುವುದು. ಅವರ ಕನಸುಗಳೇ ಅವರಿಗೆ ಮಾರ್ಗದರ್ಶಿಯಾಗಿವೆ. ಅವರು ಪಾಪಗಳಿಂದಲೇ ತಮ್ನನ್ನು ಮಲಿನ ಮಾಡಿಕೊಳ್ಳುತ್ತಾರೆ. ಅವರು ಪ್ರಭುವಿನ ಅಧಿಕಾರವನ್ನು ತಿರಸ್ಕರಿಸುತ್ತಾರೆ; ಪ್ರಭಾವದಿಂದ ಕೂಡಿದ ದೇವದೂತರ ವಿರುದ್ಧ ಕೆಟ್ಟದ್ದನ್ನು ಹೇಳುತ್ತಾರೆ. 9 ಪ್ರಧಾನ ದೇವದೂತನಾದ ಮಿಕಾಯೇಲನೂ ಸಹ ಹೀಗೆ ಮಾಡಲಿಲ್ಲ. ಮೋಶೆಯ ದೇಹವು ಯಾರಿಗೆ ಸೇರಬೇಕೆಂಬುದರ ಬಗ್ಗೆ ಮಿಕಾಯೇಲನು ಸೈತಾನನ ಬಗ್ಗೆ ದೂಷಣೆ ಮಾಡಲು ಧೈರ್ಯಗೊಳ್ಳದೆ, “ಪ್ರಭುವು ನಿನ್ನನ್ನು ದಂಡಿಸುತ್ತಾನೆ” ಎಂದು ಹೇಳಿದನು.
10 ಆದರೆ ಈ ಜನರು ತಮಗೆ ಅರ್ಥವಾಗದ್ದನ್ನೂ ಟೀಕಿಸುತ್ತಾರೆ. ಅವರಿಗೂ ಸ್ವಲ್ಪ ಅರ್ಥವಾಗುತ್ತದೆ. ಆದರೆ ಅವರು ವಿವೇಕಶೂನ್ಯ ಪ್ರಾಣಿಗಳಂತೆ ಸಹಜಪ್ರವೃತ್ತಿಯಿಂದ ಅವುಗಳನ್ನು ಅರ್ಥಮಾಡಿಕೊಳ್ಳುತ್ತಾರೆಯೇ ಹೊರತು ವಿವೇಚನೆಯಿಂದ ಅರ್ಥಮಾಡಿಕೊಳ್ಳುವುದಿಲ್ಲ. ಇವುಗಳೇ ಅವರನ್ನು ನಾಶಮಾಡುತ್ತವೆ. 11 ಅವರಿಗೆ ದುರ್ಗತಿಯಾಗುವುದು. ಈ ಜನರು ಕಾಯಿನನ ಮಾರ್ಗವನ್ನು ಅನುಸರಿಸುತ್ತಾರೆ. ಇವರು ದ್ರವ್ಯ ಸಂಪಾದನೆಗಾಗಿ, ಬಿಳಾಮನ ತಪ್ಪುಮಾರ್ಗದಲ್ಲಿ ನಡೆಯಲು ತಮ್ಮನ್ನೇ ಒಪ್ಪಿಸಿಕೊಟ್ಟಿದ್ದಾರೆ. ಕೋರಹನು ಮಾಡಿದಂತೆ ಈ ಜನರೂ ದೇವರ ವಿರುದ್ಧವಾಗಿ ಹೋರಾಡುತ್ತಿದ್ದಾರೆ. ಅವರು ಕೋರಹನಂತೆ ನಾಶವಾಗುತ್ತಾರೆ.
12 ನಿಮ್ಮ ಅನ್ಯೋನ್ಯತೆಯ ಭೋಜನದಲ್ಲಿ ಈ ಜನರು ಮುಳುಗಿಹೋದ ಬಂಡೆಗಳಂತಿದ್ದಾರೆ. ಅವರು ಭಯವಿಲ್ಲದೆ ನಿಮ್ಮ ಜೊತೆಯಲ್ಲಿ ತಿನ್ನುತ್ತಾರೆ. ಅವರು ತಮ್ಮ ಬಗ್ಗೆ ಮಾತ್ರ ಚಿಂತಿಸುವ ಕುರುಬರಾಗಿದ್ದಾರೆ. ಅವರು ನೀರಿಲ್ಲದ ಮೋಡಗಳಂತಿದ್ದಾರೆ. ಗಾಳಿಯು ಆ ಮೋಡಗಳನ್ನು ಬಡಿದುಕೊಂಡು ಹೋಗುವುದು. ಅವರು ಕಾಲಕ್ಕೆ ತಕ್ಕಂತೆ ಫಲಬಿಡದ ಮತ್ತು ಬೇರುಸಹಿತ ಕಿತ್ತುಬಂದು ಉರುಳಿಹೋದ ಮರಗಳಿಂತಿದ್ದಾರೆ. 13 ಇವರು ಸಮುದ್ರದಲ್ಲಿನ ಭೀಕರವಾದ ಅಲೆಗಳಂತಿದ್ದಾರೆ. ಈ ಅಲೆಗಳು ನೊರೆಯನ್ನು ಕಾರುವಂತೆ ಇವರು ನಾಚಿಕೆಯಿಲ್ಲದ ಕೆಲಸಗಳನ್ನು ಮಾಡುತ್ತಾರೆ. ಈ ಜನರು ಆಕಾಶದಲ್ಲಿ ಅಲೆಯುವ ನಕ್ಷತ್ರಗಳಂತಿದ್ದಾರೆ. ಇವರಿಗಾಗಿ ಶಾಶ್ವತವಾದ ಕಾರ್ಗತ್ತಲಿನ ಸ್ಥಳವನ್ನು ಕಾದಿರಿಸಲಾಗಿದೆ.
14 ಆದಾಮನ ಏಳನೆಯ ತಲೆಮಾರಿನವನಾದ ಹನೋಕನು ಈ ಜನರನ್ನು ಕುರಿತು ಹೀಗೆ ಹೇಳಿದ್ದಾನೆ: “ಇಗೋ, ಪ್ರಭುವು ತನ್ನ ಲಕ್ಷಾಂತರ ಪರಿಶುದ್ಧ ದೂತರೊಂದಿಗೆ ಬರುತ್ತಿದ್ದಾನೆ. 15 ಪ್ರಭುವು ಪ್ರತಿಯೊಬ್ಬರಿಗೂ ನ್ಯಾಯತೀರಿಸುತ್ತಾನೆ. ಭಕ್ತಿಹೀನರು ತನಗೆ ವಿರುದ್ಧವಾಗಿ ಮಾಡಿದ ಎಲ್ಲಾ ದುಷ್ಕೃತ್ಯಗಳನ್ನು ಮತ್ತು ಪಾಪಿಷ್ಠರು ತನಗೆ ವಿರುದ್ಧವಾಗಿ ಆಡಿದ ಎಲ್ಲಾ ದೂಷಣೆಗಳನ್ನು ಖಂಡಿಸಲು ಆತನು ಬರುತ್ತಾನೆ.”
16 ಈ ದುರ್ಬೋಧಕರಾದರೋ ಗುಣುಗುಟ್ಟುವವರೂ ತಪ್ಪು ಹುಡುಕುವವರೂ ದುರಾಶೆಗಳಿಗೆ ಬಲಿಯಾದವರೂ ಬಡಾಯಿಕೊಚ್ಚುವವರೂ ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುವವರೂ ಆಗಿದ್ದಾರೆ.
ಎಚ್ಚರಿಕೆ ಮತ್ತು ಮಾಡಬೇಕಾದ ಕಾರ್ಯಗಳು
17 ಪ್ರಿಯ ಸ್ನೇಹಿತರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಅಪೊಸ್ತಲರು ಮುಂಚೆ ಏನು ಹೇಳಿದರೆಂಬುದನ್ನು ನೆನಪು ಮಾಡಿಕೊಳ್ಳಿ. 18 ಅಪೊಸ್ತಲರು ನಿಮಗೆ, “ಅಂತ್ಯಕಾಲದಲ್ಲಿ ದೇವರನ್ನು ಕುರಿತು ನಗುವ ಜನರಿರುತ್ತಾರೆ” ಎಂದು ಹೇಳಿದರು. ಈ ಜನರು ತಮ್ಮ ಇಚ್ಛೆಗನುಸಾರವಾದ ಮತ್ತು ದೇವರಿಗೆ ವಿರುದ್ಧವಾದವುಗಳನ್ನು ಮಾತ್ರ ಮಾಡುವವರಾಗಿರುತ್ತಾರೆ. 19 ಈ ಜನರು ನಿಮ್ಮಲ್ಲಿ ಭೇದವನ್ನು ಹುಟ್ಟಿಸುತ್ತಾರೆ. ಈ ಜನರು ತಮ್ಮ ಪಾಪಸ್ವಭಾವದ ಅಪೇಕ್ಷೆಯಂತೆ ಮಾತ್ರ ಮಾಡುತ್ತಾರೆ. ಅವರಲ್ಲಿ ಪವಿತ್ರಾತ್ಮನಿಲ್ಲ.
20 ಆದರೆ ಪ್ರಿಯ ಸ್ನೇಹಿತರೇ, ನೀವು ನಿಮ್ಮ ಅತಿಪರಿಶುದ್ಧ ನಂಬಿಕೆಯ ಮೂಲಕ ದೃಢವಾಗಿರಿ. ಪವಿತ್ರಾತ್ಮಭರಿತರಾಗಿ ಪ್ರಾರ್ಥಿಸಿರಿ. 21 ದೇವರ ಪ್ರೀತಿಯಲ್ಲಿ ನೆಲೆಗೊಂಡಿರಿ. ನಿತ್ಯಜೀವವನ್ನು ಹೊಂದಿಕೊಳ್ಳುವುದಕ್ಕಾಗಿ ಪ್ರಭುವಾದ ಯೇಸು ಕ್ರಿಸ್ತನ ಕರುಣೆಯನ್ನೇ ಎದುರುನೋಡುತ್ತಿರಿ.
22 ಸಂದೇಹವಿರುವ ಜನರಿಗೆ ಕರುಣೆ ತೋರಿ. 23 ಇತರ ಜನರನ್ನು ರಕ್ಷಿಸಿ. ಆ ಜನರನ್ನು ಬೆಂಕಿಯಿಂದ ಹೊರಕ್ಕೆ ತನ್ನಿರಿ. ನೀವು ಕೆಲವು ಜನರಿಗೆ ಕರುಣೆ ತೋರುವಾಗ ಎಚ್ಚರದಿಂದಿರಿ. ಪಾಪಗಳಿಂದ ಹೊಲಸಾಗಿರುವ ಅವರ ಬಟ್ಟೆಗಳನ್ನು ಸಹ ದ್ವೇಷಿಸಿರಿ.
ದೇವರಿಗೆ ಸ್ತೋತ್ರ ಮಾಡಿರಿ
24 ಆತನು (ದೇವರು) ಬಲಶಾಲಿಯಾಗಿದ್ದಾನೆ. ನೀವು ಬೀಳದಂತೆ ಆತನು ನಿಮಗೆ ಸಹಾಯ ಮಾಡಬಲ್ಲನು. ಆತನು ನಿಮ್ಮಲ್ಲಿ ಯಾವ ತಪ್ಪೂ ಇಲ್ಲದಂತೆ ಮಾಡಿ, ತನ್ನ ಮಹಿಮಾ ಸನ್ನಿಧಿಗೆ ತರುವುದಕ್ಕೂ ನಿಮಗೆ ಮಹಾಸಂತೋಷವನ್ನು ಕೊಡುವುದಕ್ಕೂ ಶಕ್ತನಾಗಿದ್ದಾನೆ. 25 ಆತನೊಬ್ಬನೇ ದೇವರು. ನಮ್ಮನ್ನು ರಕ್ಷಿಸುವಾತನು ಆತನೊಬ್ಬನೇ. ಆದಿಯಿಂದ ಇದ್ದಹಾಗೆ ಈಗಲೂ ಯಾವಾಗಲೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ಆತನಿಗೆ ಪ್ರಭಾವ, ಮಹತ್ವ, ಆಧಿಪತ್ಯ ಮತ್ತು ಅಧಿಕಾರಗಳು ಇರಲಿ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International