M’Cheyne Bible Reading Plan
ಇಸ್ರೇಲರಿಗೆ ಮೋಶೆಯ ಸಂದೇಶ
1 ಇಸ್ರೇಲರಿಗೆ ಮೋಶೆಯು ಈ ಆಜ್ಞೆಗಳನ್ನು ಕೊಟ್ಟನು. ಆಗ ಅವರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿರುವ ಅಡವಿಯಲ್ಲಿ ಪಾಳೆಯ ಮಾಡಿಕೊಂಡಿದ್ದರು. ಇದು ಸೂಫಿಗೆ ಎದುರಾಗಿ, ಪಾರಾನಿನ ಮರುಭೂಮಿಗೂ ತೋಫೆಲ್, ಲಾಬಾನ್, ಹಚೇರೋತ್ ಮತ್ತು ದೀಜಾಹಾಬ್ ಪಟ್ಟಣಗಳ ನಡುವೆ ಇತ್ತು.
2 ಹೋರೇಬ್ (ಸೀನಾಯಿ) ಬೆಟ್ಟದಿಂದ ಸೇಯೀರ್ ಬೆಟ್ಟದ ಮಾರ್ಗವಾಗಿ ಕಾದೇಶ್‌ಬರ್ನೇಯಕ್ಕೆ ತಲುಪಲು ಹನ್ನೊಂದು ದಿವಸದ ಪ್ರಯಾಣ ಮಾಡಬೇಕಾಗುತ್ತದೆ. 3 ಆದರೆ ಇಸ್ರೇಲರು ಈಜಿಪ್ಟನ್ನು ಬಿಟ್ಟು ಈ ಸ್ಥಳಕ್ಕೆ ಬರಲು ನಲವತ್ತು ವರ್ಷಗಳು ಹಿಡಿದವು. ನಲವತ್ತನೆ ವರ್ಷದ ಹನ್ನೊಂದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಮೋಶೆಯು ಜನರೊಂದಿಗೆ ಮಾತಾಡಿ ಯೆಹೋವನು ಆಜ್ಞಾಪಿಸಿದ ಸಮಸ್ತ ವಿಷಯಗಳನ್ನು ತಿಳಿಸಿದನು. 4 ಸೀಹೋನನನ್ನು ಮತ್ತು ಓಗನನ್ನು ದೇವರಾದ ಯೆಹೋವನು ಸೋಲಿಸಿದ ಬಳಿಕ ನಡೆದ ಸಂಗತಿಯಿದು. (ಸೀಹೋನನು ಅಮೋರಿಯರ ರಾಜನಾಗಿದ್ದನು. ಅವನು ಹೆಷ್ಬೋನಿನಲ್ಲಿ ವಾಸಿಸುತ್ತಿದ್ದನು. ಓಗನು ಬಾಷಾನಿನ ಅರಸನು. ಇವನು ಅಷ್ಟಾರೋತ್ ಮತ್ತು ಎದ್ರೈ ಎಂಬಲ್ಲಿ ವಾಸವಾಗಿದ್ದನು.) 5 ಇಸ್ರೇಲರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿ ಮೋವಾಬ್ಯರ ಸ್ಥಳದಲ್ಲಿ ಪಾಳೆಯ ಮಾಡಿಕೊಂಡಿದ್ದರು. ದೇವರು ತಿಳಿಸಿದ ಕಟ್ಟಳೆಗಳನ್ನು ಮೋಶೆಯು ವಿವರಿಸುತ್ತಾ ಹೀಗೆಂದನು:
6 “ನಮ್ಮ ದೇವರಾದ ಯೆಹೋವನು ಹೋರೇಬ್ ಬೆಟ್ಟದಲ್ಲಿ ನಮ್ಮೊಂದಿಗೆ ಮಾತಾಡಿದನು. ಆತನು ಹೇಳಿದ್ದೇನೆಂದರೆ: ‘ನೀವು ಈ ಪ್ರದೇಶಕ್ಕೆ ಬಂದು ಬಹಳ ಕಾಲವಾಯಿತು. 7 ಅಮೋರಿಯರು ವಾಸಿಸುವ ಬೆಟ್ಟಪ್ರಾಂತ್ಯಗಳಿಗೆ ಹೋಗಿರಿ, ಅದರ ಸುತ್ತಲೂ ಇರುವ ಜೋರ್ಡನಿನ ಬಯಲು ಪ್ರದೇಶಕ್ಕೆ, ಬೆಟ್ಟಪ್ರದೇಶಕ್ಕೆ, ಪಶ್ಚಿಮದ ಇಳಕಲುಪ್ರದೇಶಕ್ಕೆ, ನೆಗೆವ್ ಮತ್ತು ಸಮುದ್ರ ಕರಾವಳಿ ಪ್ರದೇಶಗಳಿಗೆ ಹೋಗಿರಿ. ಕಾನಾನ್ ಮತ್ತು ಲೆಬನೋನ್ ಪ್ರದೇಶಗಳ ಮೂಲಕ ಯೂಫ್ರೇಟೀಸ್ ಮಹಾನದಿಯವರೆಗೂ ಹೋಗಿರಿ. 8 ನಾನು ನಿಮಗೆ ಆ ಪ್ರಾಂತ್ಯವನ್ನೆಲ್ಲಾ ಕೊಡುವೆನು. ಅಲ್ಲಿಗೆ ಹೋಗಿ ಅದನ್ನು ತೆಗೆದುಕೊಳ್ಳಿರಿ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಮತ್ತು ಅವರ ಸಂತತಿಯವರಿಗೆ ಆ ಪ್ರದೇಶವನ್ನು ಕೊಡುವೆನು ಎಂದು ನಾನು ವಾಗ್ದಾನ ಮಾಡಿದ್ದೇನೆ.’”
ಮೋಶೆಯಿಂದ ನಾಯಕರ ಆಯ್ಕೆ
9 “ಆ ಸಮಯದಲ್ಲಿ ನಾನು ನಿಮಗೆ, ‘ನಿಮ್ಮನ್ನು ಪರಾಂಬರಿಸಲು ನನಗೆ ಸಾಧ್ಯವಿಲ್ಲ’ ಎಂದು ಹೇಳಿದೆನು. 10 ಈಗ ನಿಮ್ಮ ಜನಸಂಖ್ಯೆಯು ಇನ್ನೂ ಅಧಿಕವಾಗಿರುತ್ತದೆ. ದೇವರಾದ ಯೆಹೋವನು ನಿಮ್ಮನ್ನು ವೃದ್ಧಿಪಡಿಸುತ್ತಿರುವುದರಿಂದ ನೀವು ಈಗ ಆಕಾಶದ ನಕ್ಷತ್ರಗಳಷ್ಟು ಇರುವಿರಿ. 11 ನಮ್ಮ ಪೂರ್ವಿಕರ ದೇವರಾದ ಯೆಹೋವನು ಈಗ ಇರುವುದಕ್ಕಿಂತ ಸಾವಿರಪಟ್ಟು ಅಧಿಕವಾಗಿ ನಿಮ್ಮ ಜನಸಂಖ್ಯೆಯನ್ನು ಹೆಚ್ಚಿಸಲಿ. ತನ್ನ ವಾಗ್ದಾನಕ್ಕನುಸಾರವಾಗಿ ನಿಮ್ಮನ್ನು ಆಶೀರ್ವದಿಸಲಿ. 12 ಆದರೆ ನಾನೇ ಸ್ವತಃ ನಿಮ್ಮನ್ನು ಪರಾಂಬರಿಸುವುದಕ್ಕಾಗಲಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಲಿ ಸಾಧ್ಯವಾಗಲಿಲ್ಲ. 13 ಆಗ ನಾನು ನಿಮಗೆ ಹೇಳಿದ್ದೇನೆಂದರೆ: ‘ನಿಮ್ಮನಿಮ್ಮ ಕುಲಗಳಿಂದ ಯೋಗ್ಯರಾದವರನ್ನು ಆರಿಸಿರಿ. ಅವರನ್ನು ನಿಮ್ಮ ನಾಯಕರನ್ನಾಗಿ ನೇಮಿಸುವೆನು. ಅವರು ವಿವೇಕಿಗಳಾಗಿಯೂ ಅನುಭವಶಾಲಿಗಳಾಗಿಯೂ ಇರಬೇಕು’ ಎಂದು ಹೇಳಿದೆನು.
14 “ಆಗ ನೀವು, ‘ಇದು ಒಳ್ಳೆಯ ಆಲೋಚನೆ’ ಎಂದು ಹೇಳಿದಿರಿ.
15 “ಆದ್ದರಿಂದ, ನಿಮ್ಮ ಕುಲಗಳಿಂದ ನೀವು ಆರಿಸಿಕೊಂಡ ಬುದ್ಧಿವಂತರಾದ ಮತ್ತು ಅನುಭವಸ್ಥರಾದ ಜನರನ್ನು ನಾನು ನೇಮಿಸಿದೆನು. ಈ ರೀತಿಯಾಗಿ ಅವರನ್ನು ಸಾವಿರ ಜನರ ಮೇಲೆಯೂ, ನೂರು ಜನರ ಮೇಲೆಯೂ, ಐವತ್ತು ಜನರ ಮೇಲೆಯೂ ಮತ್ತು ಹತ್ತು ಜನರ ಮೇಲೆಯೂ ನಾಯಕರನ್ನಾಗಿ ನೇಮಿಸಿದೆನು. ಅಲ್ಲದೆ ನಿಮ್ಮನಿಮ್ಮ ಕುಲಗಳಿಗೆ ಪ್ರಧಾನರನ್ನೂ ನೇಮಿಸಿದೆನು.
16 “ನಿಮ್ಮ ನ್ಯಾಯಗಳನ್ನು ತೀರಿಸುವ, ಆ ನಾಯಕರುಗಳಿಗೆ ಹೇಳಿದ್ದೇನೆಂದರೆ: ‘ನಿಮ್ಮ ಅಧೀನದಲ್ಲಿರುವ ಜನರ ದೂರುಗಳನ್ನು ಚೆನ್ನಾಗಿ ಕೇಳಿಕೊಂಡು ಪಕ್ಷಪಾತವಿಲ್ಲದೆ ನ್ಯಾಯತೀರಿಸಬೇಕು. ಅವರಿಬ್ಬರೂ ಇಸ್ರೇಲರೇ ಆಗಿರಬಹುದು ಅಥವಾ ಒಬ್ಬನು ಇಸ್ರೇಲನೂ ಮತ್ತೊಬ್ಬನು ಪರದೇಶಿಯೂ ಆಗಿರಬಹುದು. ನೀವು ಪ್ರತಿಯೊಂದು ದೂರನ್ನು ನ್ಯಾಯವಾಗಿ ಬಗೆಹರಿಸಿ ತೀರ್ಪು ನೀಡಬೇಕು. 17 ನ್ಯಾಯತೀರಿಸುವಾಗ ಒಬ್ಬನು ಇನ್ನೊಬ್ಬನಿಗಿಂತ ವಿಶೇಷ ವ್ಯಕ್ತಿಯಾಗಿದ್ದಾನೆ ಎಂಬುದನ್ನು ಲೆಕ್ಕಿಸದೆ ಇಬ್ಬರೂ ಸಮಾನರೆಂದು ಪರಿಗಣಿಸಿ ಸರಿಯಾದ ತೀರ್ಪು ಕೊಡಬೇಕು. ನೀವು ಯಾರಿಗೂ ಭಯಪಡಬೇಡಿರಿ. ಯಾಕೆಂದರೆ ನಿಮ್ಮ ತೀರ್ಪು ದೇವರಿಂದ ಬಂದ ತೀರ್ಪಾಗಿರುತ್ತದೆ. ನಿಮಗೆ ಬಗೆಹರಿಸಲು ಕಷ್ಟವಾಗುವ ದೂರುಗಳಿದ್ದಲ್ಲಿ ಅವುಗಳನ್ನು ನನ್ನ ಬಳಿಗೆ ತನ್ನಿರಿ. ಅವುಗಳಿಗೆ ನಾನು ನ್ಯಾಯತೀರ್ಪು ನೀಡುವೆನು.’ 18 ಅದೇ ಸಮಯದಲ್ಲಿ, ನೀವು ಮಾಡತಕ್ಕ ಬೇರೆ ಎಲ್ಲಾ ಸಂಗತಿಗಳನ್ನೂ ನಾನು ನಿಮಗೆ ತಿಳಿಸಿದೆನು.
ಕಾನಾನ್ ದೇಶಕ್ಕೆ ಗೂಢಚಾರರನ್ನು ಕಳುಹಿಸಿದ್ದು
19 “ಬಳಿಕ ನಾವು ನಮ್ಮ ದೇವರಾದ ಯೆಹೋವನ ಆಜ್ಞಾನುಸಾರವಾಗಿ ಹೋರೇಬ್ ಬೆಟ್ಟಪ್ರದೇಶವನ್ನು ಬಿಟ್ಟು ಅಮೋರಿಯರ ಗುಡ್ಡಗಾಡು ಪ್ರದೇಶದಲ್ಲಿ ಪ್ರಯಾಣಮಾಡುತ್ತಾ ನೀವು ನೋಡಿದ ಅತ್ಯಂತ ಭಯಂಕರವಾದ ಮತ್ತು ವಿಶಾಲವಾದ ಮರುಭೂಮಿಯನ್ನು ದಾಟಿ ಕಾದೇಶ್‌ಬರ್ನೇಯಕ್ಕೆ ಬಂದೆವು. 20 ಆಗ ನಾನು ನಿಮಗೆ ಹೇಳಿದ್ದೇನೆಂದರೆ: ‘ನೀವೀಗ ಅಮೋರಿಯರ ಬೆಟ್ಟಪ್ರದೇಶಕ್ಕೆ ಬಂದಿರುವಿರಿ. ನಮ್ಮ ದೇವರಾದ ಯೆಹೋವನು ಈ ದೇಶವನ್ನು ನಮಗೆ ಕೊಡುವನು. 21 ದೇಶ ನಿಮ್ಮೆದುರಿಗೇ ಇದೆ, ಎದ್ದು ವಶಪಡಿಸಿಕೊಳ್ಳಿರಿ. ನಿಮ್ಮ ಪೂರ್ವಿಕರ ದೇವರಾದ ಯೆಹೋವನು ಹೀಗೆಯೇ ಆಜ್ಞಾಪಿಸಿದ್ದಾನೆ. ಆದ್ದರಿಂದ ಭಯಪಡಬೇಡಿ; ಯಾವುದಕ್ಕೂ ಹೆದರಬೇಡಿ!’
22 “ಆದರೆ ನೀವೆಲ್ಲಾ ನನ್ನ ಬಳಿಗೆ ಬಂದು, ‘ಆ ದೇಶವನ್ನು ಸಂಚರಿಸಿ ಅದರ ಬಲವುಳ್ಳ ಮತ್ತು ಬಲಹೀನ ಸ್ಥಳಗಳನ್ನು ನೋಡಿಕೊಂಡು ನಾವು ಯಾವ ಮಾರ್ಗವಾಗಿ ಹೋಗಬೇಕು ಮತ್ತು ಯಾವಯಾವ ಪಟ್ಟಣಗಳನ್ನು ದಾಟಬೇಕು ಎಂಬುದನ್ನು ನಮಗೆ ತಿಳಿಸಲು ನಮ್ಮಲ್ಲಿ ಕೆಲವರನ್ನು ಕಳುಹಿಸಿ’ ಎಂದು ಹೇಳಿದಿರಿ.
23 “ಇದು ಒಂದು ಒಳ್ಳೆಯ ಆಲೋಚನೆ ಎಂದುಕೊಂಡು ನಿಮ್ಮ ಕುಲಗಳಿಂದ ಹನ್ನೆರಡು ಮಂದಿಯನ್ನು ಆರಿಸಿಕೊಂಡೆನು. 24 ಅವರು ಹೊರಟುಹೋಗಿ ಬೆಟ್ಟಪ್ರದೇಶಗಳನ್ನು ದಾಟಿ ಎಷ್ಕೋಲ್ ಕಣಿವೆಯನ್ನೆಲ್ಲಾ ಸಂಚರಿಸಿ ವಿಷಯಗಳನ್ನು ಸಂಗ್ರಹಿಸಿದರು. 25 ಅಲ್ಲಿ ಬೆಳೆಯುವ ಹಣ್ಣುಗಳನ್ನು ಕಿತ್ತು ನಮ್ಮ ಬಳಿಗೆ ತಂದರು. ಅವರು ಆ ದೇಶದ ವಿಷಯವಾಗಿ ತಿಳಿಸಿದರು. ‘ನಮ್ಮ ದೇವರಾದ ಯೆಹೋವನು ನಮಗೆ ಒಳ್ಳೆಯ ದೇಶವನ್ನು ಕೊಡುತ್ತಿದ್ದಾನೆ!’ ಅಂದರು.
26 “ಆದರೆ ನೀವು ದೇಶದೊಳಗೆ ಪ್ರವೇಶಿಸಿ ಸ್ವಾಧೀನ ಮಾಡಿಕೊಳ್ಳಲಿಲ್ಲ; ನಿಮ್ಮ ದೇವರಾದ ಯೆಹೋವನ ಮಾತನ್ನು ಕೇಳಲಿಲ್ಲ. 27 ನಿಮ್ಮನಿಮ್ಮ ಗುಡಾರಗಳಲ್ಲಿ ಯೆಹೋವನ ವಿರುದ್ಧವಾಗಿ ಗೊಣಗುಟ್ಟಿದಿರಿ, ‘ನಮ್ಮ ಯೆಹೋವನು ನಮ್ಮನ್ನು ದ್ವೇಷಿಸುತ್ತಾನೆ! ನಮ್ಮನ್ನು ಈಜಿಪ್ಟ್ ದೇಶದಿಂದ ಹೊರತಂದು ಅಮೋರಿಯರಿಂದ ನಾಶಪಡಿಸುತ್ತಿದ್ದಾನೆ! 28 ನಾವೀಗ ಎಲ್ಲಿಗೆ ಹೋಗೋಣ? ನಮ್ಮ ಸಹೋದರರು ತಮ್ಮ ವರದಿಯಿಂದ ನಮ್ಮನ್ನು ಹೆದರಿಸಿದ್ದಾರೆ. ಅಲ್ಲಿಯ ಜನರು ದೃಢಕಾಯರೂ ಬಲಶಾಲಿಗಳೂ ಎತ್ತರವಾದ ಪುರುಷರೂ ಆಗಿದ್ದಾರೆ. ಅವರ ಪಟ್ಟಣಗಳು ದೊಡ್ಡವುಗಳಾಗಿದ್ದು ಅವುಗಳ ಗೋಡೆಗಳು ಆಕಾಶಕ್ಕೆ ಮುಟ್ಟುವಷ್ಟು ಎತ್ತರವಾಗಿವೆ. ನಾವು ಅಲ್ಲಿ ಅನಾಕ್ಯರೆಂಬ ಮಹಾಶರೀರಗಳನ್ನು ನೋಡಿದೆವು!’ ಎಂದು ಅವರು ಹೇಳಿದಾಗ ನಾವು ಭಯದಿಂದ ತತ್ತರಿಸಿದೆವು.
29 “ಆಗ ನಾನು, ‘ನೀವು ಕಳವಳಗೊಳ್ಳಬೇಡಿರಿ! ಆ ಜನರಿಗೆ ಭಯಪಡಬೇಡಿರಿ! 30 ನಿಮ್ಮ ದೇವರಾದ ಯೆಹೋವನು ನಿಮ್ಮ ಮುಂದೆ ಹೋಗಿ ಅವರೊಂದಿಗೆ ಯುದ್ಧಮಾಡುವನು. ಈಜಿಪ್ಟ್‌ನಲ್ಲಿ ಆತನು ಮಾಡಿದಂತೆಯೇ ಇಲ್ಲಿಯೂ ಮಾಡುವನು. 31 ಅಡವಿಗಳಲ್ಲಿಯೂ ಮರುಭೂಮಿಗಳಲ್ಲಿಯೂ ಮನುಷ್ಯನು ತನ್ನ ಮಗುವನ್ನು ಹೊತ್ತುಕೊಂಡು ತರುವಂತೆ ದೇವರಾದ ಯೆಹೋವನು ನಿಮ್ಮನ್ನು ಹೊತ್ತುಕೊಂಡು ತಂದಿದ್ದಾನೆ. ಈ ಸ್ಥಳಕ್ಕೆ ಸುರಕ್ಷಿತವಾಗಿ ನಿಮ್ಮನ್ನು ತಂದು ಮುಟ್ಟಿಸಿದ್ದಾನೆ’ ಎಂದು ಹೇಳಿದೆನು.
32 “ಆದರೂ ನೀವು ಇನ್ನೂ ನಿಮ್ಮ ದೇವರಾದ ಯೆಹೋವನ ಮೇಲೆ ಭರವಸೆ ಇಡಲಿಲ್ಲ. 33 ನೀವು ಪ್ರಯಾಣ ಮಾಡುತ್ತಿರುವಾಗ ಆತನು ನಿಮ್ಮ ಮುಂದೆ ಹೋದನು. ತಂಗಲು ಯೋಗ್ಯವಾದ ಸ್ಥಳದಲ್ಲಿ ನೀವು ಪಾಳೆಯ ಮಾಡಿಕೊಳ್ಳುವಂತೆ ಮಾಡಿದನು. ಹಗಲಲ್ಲಿ ಮೇಘಸ್ತಂಭವಾಗಿಯೂ ರಾತ್ರಿಯಲ್ಲಿ ಅಗ್ನಿಸ್ತಂಭವಾಗಿಯೂ ಆತನು ನಿಮಗೆ ಮಾರ್ಗದರ್ಶಕನಾಗಿದ್ದನು.
ಜನರನ್ನು ಕಾನಾನ್ ದೇಶದೊಳಗೆ ಹೋಗದಂತೆ ಮಾಡಿದ್ದು
34 “ನೀವು ಹೇಳುತ್ತಿದ್ದದ್ದನ್ನು ಯೆಹೋವನು ಕೇಳಿ ಸಿಟ್ಟುಗೊಂಡು, 35 ‘ಈಗ ಜೀವಿಸುತ್ತಿರುವ ದುಷ್ಟಜನರಾದ ನಿಮ್ಮಲ್ಲಿ ಯಾರೂ ನಾನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಒಳ್ಳೆಯನಾಡಿಗೆ ಹೋಗುವುದಿಲ್ಲ. 36 ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಆ ದೇಶವನ್ನು ನೋಡುವನು. ಕಾಲೇಬನು ಸಂಚರಿಸಿದ ನಾಡನ್ನು ಅವನಿಗೂ ಅವನ ಸಂತತಿಯವರಿಗೂ ಕೊಡುವೆನು. ಯಾಕೆಂದರೆ ನಾನು ಆಜ್ಞಾಪಿಸಿದ್ದನ್ನೆಲ್ಲ ಕಾಲೇಬನು ಮಾಡಿದನು’ ಎಂದು ಪ್ರಮಾಣಮಾಡಿದನು.
37 “ದೇವರಾದ ಯೆಹೋವನು ನಿಮ್ಮಿಂದಾಗಿ ನನ್ನ ಮೇಲೂ ಸಿಟ್ಟುಗೊಂಡು, ‘ಮೋಶೆಯೇ, ನೀನೂ ಸಹ ವಾಗ್ದಾನದ ದೇಶವನ್ನು ಪ್ರವೇಶಿಸುವುದಿಲ್ಲ. 38 ಆದರೆ ನಿನ್ನ ಸಹಾಯಕನಾದ ನೂನನ ಮಗನಾದ ಯೆಹೋಶುವನು ಆ ದೇಶವನ್ನು ಪ್ರವೇಶಿಸುವನು. ಯೆಹೋಶುವನನ್ನು ಪ್ರೋತ್ಸಾಹಿಸು; ಯಾಕೆಂದರೆ ಆ ದೇಶವನ್ನು ವಶಪಡಿಸಿಕೊಳ್ಳಲು ಅವನು ಇಸ್ರೇಲರನ್ನು ಮುನ್ನಡೆಸಬೇಕು’ ಎಂದು ಹೇಳಿದನು. 39 ದೇವರಾದ ಯೆಹೋವನು ನಮಗೆ ಹೇಳಿದ್ದೇನೆಂದರೆ: ‘ವೈರಿಗಳ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕಮಕ್ಕಳಿಗೂ ಒಳ್ಳೆಯದು ಮತ್ತು ಕೆಟ್ಟದ್ದು ಅರಿಯದ ನಿಮ್ಮ ಮಕ್ಕಳಿಗೂ ಆ ದೇಶವನ್ನು ಕೊಡುವೆನು; ಅವರು ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವರು. 40 ಆದರೆ ನೀವು ಹಿಂತಿರುಗಿ ಕೆಂಪುಸಮುದ್ರಕ್ಕೆ ಹೋಗುವ ಮರುಭೂಮಿಯ ಮಾರ್ಗದಲ್ಲಿ ಹೋಗಬೇಕು.’
41 “ಆಗ ನೀವು ಹೀಗೆ ಹೇಳಿದಿರಿ: ‘ಮೋಶೆಯೇ, ನಾವು ಯೆಹೋವನಿಗೆ ವಿರುದ್ಧವಾಗಿ ಪಾಪ ಮಾಡಿದೆವು. ದೇವರಾದ ಯೆಹೋವನು ನಮಗೆ ಆಜ್ಞೆಮಾಡಿದ ಪ್ರಕಾರ ನಾವು ಈಗ ಹೋಗಿ ಅವರೊಂದಿಗೆ ಯುದ್ಧಮಾಡುತ್ತೇವೆ.’
“ಆಮೇಲೆ ನೀವು ಪ್ರತಿಯೊಬ್ಬರೂ ಆಯುಧಗಳನ್ನು ಧರಿಸಿಕೊಂಡಿರಿ. ಬೆಟ್ಟಪ್ರದೇಶಗಳನ್ನು ಜಯಿಸುವುದು ಸುಲಭವೆಂದು ನೀವು ಭಾವಿಸಿದ್ದಿರಿ. 42 ಆದರೆ ಯೆಹೋವನು ನನಗೆ ಹೇಳಿದ್ದೇನೆಂದರೆ: ‘ಆ ಜನರಿಗೆ ಬೆಟ್ಟವನ್ನೇರಿ ಯುದ್ಧಮಾಡಬಾರದೆಂದು ಹೇಳು. ಯಾಕೆಂದರೆ ನಾನು ಅವರೊಂದಿಗಿರುವುದಿಲ್ಲ ಮತ್ತು ಅವರ ವೈರಿಗಳು ಅವರನ್ನು ಸೋಲಿಸಿಬಿಡುವರು!’
43 “ನಾನು ನಿಮ್ಮೊಂದಿಗೆ ಮಾತನಾಡಿದರೂ ನೀವು ನನ್ನ ಮಾತನ್ನು ಕೇಳಲಿಲ್ಲ. ನೀವು ಯೆಹೋವನ ಆಜ್ಞೆಗೆ ವಿಧೇಯರಾಗಲು ಒಪ್ಪಲಿಲ್ಲ. ನೀವು ನಿಮ್ಮ ಸ್ವಂತ ಶಕ್ತಿಯಿಂದ ಜಯ ಹೊಂದುವುದಾಗಿ ಭಾವಿಸಿ ಬೆಟ್ಟಪ್ರದೇಶವನ್ನು ಏರಿದಿರಿ. 44 ಆದರೆ ಅಲ್ಲಿ ವಾಸಿಸುತ್ತಿದ್ದ ಅಮೋರಿಯರು ಹೊರಗೆ ಬಂದು ಜೇನುಹುಳಗಳಂತೆ ನಿಮ್ಮನ್ನು ಮುತ್ತಿ ಸೇಯೀರ್‌ನಿಂದ ಹೊರ್ಮದ ತನಕ ನಿಮ್ಮನ್ನು ಓಡಿಸಿದರು. 45 ಆಗ ನೀವು ಹಿಂತಿರುಗಿ ಬಂದು ಯೆಹೋವನ ಸಹಾಯಕ್ಕಾಗಿ ಮೊರೆಯಿಟ್ಟಿರಿ. ಆದರೆ ಯೆಹೋವನು ನಿಮಗೆ ಕಿವಿಗೊಡಲಿಲ್ಲ. 46 ಹೀಗೆ ನೀವು ಕಾದೇಶಿನಲ್ಲಿ ತುಂಬ ದಿನಗಳನ್ನು ಕಳೆದಿರುವಿರಿ.
ರಚನೆಗಾರ: ಆಸಾಫ.
81 ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ.
ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.
2 ವಾದ್ಯವನ್ನು ನುಡಿಸಲಾರಂಭಿಸಿರಿ;
ದಮ್ಮಡಿಯನ್ನು ಬಡಿಯಿರಿ.
ಇಂಪಾದ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನು ಬಾರಿಸಿರಿ.
3 ಅಮಾವಾಸ್ಯೆಯಲ್ಲಿಯೂ ನಮ್ಮ ರಜಾಕಾಲವಾದ
ಪೂರ್ಣಿಮೆಯಲ್ಲಿಯೂ ತುತ್ತೂರಿಯನ್ನು ಊದಿರಿ.
4 ಇದು ಇಸ್ರೇಲರಿಗೆ ಕಟ್ಟಳೆಯಾಗಿದೆ.
ಯಾಕೋಬ್ಯರ ದೇವರು ಈ ಆಜ್ಞೆಯನ್ನು ಕೊಟ್ಟನು.
5 ಆತನು ಯೋಸೇಫನನ್ನು[a] ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಾಗ
ಅವನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡನು.
ಈಜಿಪ್ಟಿನಲ್ಲಿ ನಾವು ಕೇಳಿದ್ದು ನಮಗೆ ಅರ್ಥವಾಗದ ಭಾಷೆಯನ್ನೇ!
6 ಆತನು ಹೀಗೆನ್ನುತ್ತಾನೆ: “ನಿಮ್ಮ ಹೆಗಲಿನಿಂದ ಹೊರೆಯನ್ನು ತೆಗೆದುಹಾಕಿದೆನು.
ಕೆಲಸಗಾರರ ಬುಟ್ಟಿಯನ್ನು ನೀವು ಬಿಸಾಕುವಂತೆ ಮಾಡಿದೆನು.
7 ನೀವು ಆಪತ್ತಿನಲ್ಲಿದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿರಿ.
ಆಗ ನಾನು ನಿಮ್ಮನ್ನು ಬಿಡಿಸಿದೆನು.
ನಾನು ಕಾರ್ಮೋಡದಲ್ಲಿ ಮರೆಯಾಗಿದ್ದರೂ ನಿಮಗೆ ಉತ್ತರಿಸಿದೆನು.
ನಾನು ನಿಮ್ಮನ್ನು ಮೆರೀಬಾದ ನೀರಿನಿಂದ ಪರೀಕ್ಷಿಸಿದೆನು.”
8 “ನನ್ನ ಜನರೇ, ನನಗೆ ಕಿವಿಗೊಡಿರಿ, ನಾನು ನಿಮಗೆ ಒಡಂಬಡಿಕೆಯನ್ನು ಕೊಡುತ್ತಿರುವೆ.
ಇಸ್ರೇಲೇ, ದಯವಿಟ್ಟು ಕಿವಿಗೊಡು!
9 ಪರದೇಶದವರು ಆರಾಧಿಸುವ
ಯಾವ ಸುಳ್ಳು ದೇವರುಗಳನ್ನೂ ಪೂಜಿಸಬೇಡ.
10 ಯೆಹೋವನಾದ ನಾನೇ ನಿನ್ನ ದೇವರು.
ನಿನ್ನನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ನಾನೇ.
ಇಸ್ರೇಲೇ, ನಿನ್ನ ಬಾಯನ್ನು ತೆರೆ,
ಆಗ ನಾನು ನಿನಗೆ ತಿನ್ನಿಸುವೆನು.
11 “ಆದರೆ ನನ್ನ ಜನರು ನನಗೆ ಕಿವಿಗೊಡಲಿಲ್ಲ.
ಇಸ್ರೇಲರು ನನಗೆ ವಿಧೇಯರಾಗಲಿಲ್ಲ.
12 ಆದ್ದರಿಂದ ತಮ್ಮ ಇಷ್ಟಾನುಸಾರ ಮಾಡಲೆಂದು ಅವರನ್ನು ಬಿಟ್ಟುಕೊಟ್ಟೆ.
ಇಸ್ರೇಲ್ ತನ್ನ ಇಷ್ಟಾನುಸಾರ ಮಾಡಿತು.
13 ನನ್ನ ಜನರು ನನಗೆ ಕಿವಿಗೊಟ್ಟು ನನ್ನ ಚಿತ್ತಾನುಸಾರವಾಗಿ ಜೀವಿಸಿದರೆ,
14 ಅವರ ಶತ್ರುಗಳನ್ನು ಸೋಲಿಸುವೆನು;
ಇಸ್ರೇಲಿಗೆ ಕೇಡುಮಾಡುವವರನ್ನು ದಂಡಿಸುವೆನು.
15 ಯೆಹೋವನ ಶತ್ರುಗಳು ಭಯದಿಂದ ನಡುಗುವರು.
ಅವರು ಶಾಶ್ವತವಾಗಿ ದಂಡಿಸಲ್ಪಡುವರು.
16 ದೇವರು ತನ್ನ ಜನರಿಗೆ ಉತ್ತಮವಾದ ಗೋಧಿಯನ್ನು ಒದಗಿಸುವನು.
ಬಂಡೆಯಾಗಿರುವ ಆತನು ತನ್ನ ಜನರಿಗೆ ಜೇನುತುಪ್ಪವನ್ನು ಸಂತೃಪ್ತಿಯಾಗುವ ತನಕ ಕೊಡುವನು.”
ಸ್ತುತಿಗೀತೆ. ರಚನೆಗಾರ: ಆಸಾಫ.
82 ದೇವಾದಿದೇವನು ತನ್ನ ಸಭೆಯಲ್ಲಿ[b] ನಿಂತುಕೊಂಡು
ದೇವರುಗಳಿಗೆ ನ್ಯಾಯತೀರ್ಪು ನೀಡುವನು.
2 ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ?
ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”
3 “ಅನಾಥರ ಮತ್ತು ಬಡಜನರ ಪರವಾಗಿ ವಾದಿಸಿರಿ.
ಅನ್ಯಾಯಕ್ಕೆ ಒಳಗಾಗಿರುವ ಬಡವರ ಹಕ್ಕುಗಳನ್ನು ಸಂರಕ್ಷಿಸಿರಿ.
4 ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿರಿ.
ಅವರನ್ನು ದುಷ್ಟರಿಂದ ರಕ್ಷಿಸಿರಿ.
5 “ಅವರಿಗೆ ಏನೂ ಗೊತ್ತಿಲ್ಲ.
ಅವರಿಗೆ ಏನೂ ಅರ್ಥವಾಗುವುದಿಲ್ಲ!
ತಾವು ಮಾಡುತ್ತಿರುವುದೂ ಅವರಿಗೆ ತಿಳಿಯದು.
ಅವರ ಪ್ರಪಂಚವು ಅವರ ಸುತ್ತಲೂ ಕುಸಿದುಬೀಳುತ್ತಿದೆ!”
6 ನಾಯಕರಾದ ನಿಮಗೆ ನಾನು ಹೇಳುವುದೇನೆಂದರೆ:
“ನೀವು ದೇವರುಗಳು. ನೀವು ಮಹೋನ್ನತನಾದ ದೇವರ ಪುತ್ರರು.
7 ಆದರೆ ಎಲ್ಲಾ ಜನರಂತೆ ನೀವೂ ಸಾಯುವಿರಿ.
ಬೇರೆಲ್ಲಾ ನಾಯಕರುಗಳಂತೆಯೇ ನೀವು ಸಾಯುವಿರಿ.”
8 ದೇವರೇ ಎದ್ದೇಳು! ನೀನೇ ನ್ಯಾಯಾಧೀಶನಾಗಿರು!
ಎಲ್ಲಾ ಜನಾಂಗಗಳಿಗೆ ನೀನೇ ನಾಯಕನಾಗಿರು!
ಜೆರುಸಲೇಮಿನ ಮೇಲೆ ದೇವರ ಪ್ರೀತಿ
29 ದೇವರು ಹೇಳುವುದೇನೆಂದರೆ, “ಅರೀಯೇಲನ್ನು ನೋಡು. ಅಲ್ಲಿ ದಾವೀದನು ಪಾಳೆಯಮಾಡಿಕೊಂಡಿದ್ದನು. ಆಕೆಯ ಹಬ್ಬಗಳು ಪ್ರತಿ ವರ್ಷವೂ ನಡೆಯುತ್ತಿವೆ. 2 ನಾನು ಅರೀಯೇಲನ್ನು ಶಿಕ್ಷಿಸಿದ್ದೇನೆ. ಆ ನಗರವು ದುಃಖರೋಧನಗಳಿಂದ ತುಂಬಿದೆ. ಆದರೆ ಆಕೆ ಯಾವಾಗಲೂ ನನ್ನ ಅರೀಯೇಲಾಗಿದ್ದಾಳೆ.
3 “ನಿನ್ನ ಸುತ್ತಲೂ ನಾನು ಸೈನ್ಯವನ್ನಿಟ್ಟಿದ್ದೇನೆ. ಅರೀಯೇಲೇ, ನಿನಗೆ ವಿರುದ್ಧವಾಗಿ ನಾನು ಯುದ್ಧದ ಬುರುಜನ್ನು ಕಟ್ಟಿಸಿರುತ್ತೇನೆ. 4 ನೀನು ಸೋತುಹೋಗಿರುವೆ ಮತ್ತು ನೆಲದ ಮೇಲೆ ಕೆಡವಲ್ಪಟ್ಟಿರುವೆ. ಈಗ ನಿನ್ನ ಸ್ವರವು ಪ್ರೇತದ ಸ್ವರದಂತೆ ನನಗೆ ಕೇಳಿಸುತ್ತದೆ. ಅದು ಬಲಹೀನವಾದ ಸ್ವರವಾಗಿದೆ.”
5 ನೆಲದ ಮೇಲೆ ಅನೇಕ ಅಪರಿಚಿತರು ಧೂಳಿನ ಕಣಗಳಂತೆ ಇದ್ದಾರೆ. ಅನೇಕ ಮಂದಿ ದುಷ್ಟಜನರು ಗಾಳಿಯಲ್ಲಿ ತೂರಿಹೋಗುವ ಹೊಟ್ಟಿನಂತಿದ್ದಾರೆ. 6 ಸರ್ವಶಕ್ತನಾದ ಯೆಹೋವನು ನಿಮ್ಮನ್ನು ಗುಡುಗು, ಮಹಾಶಬ್ದ, ಬಿರುಗಾಳಿ, ಚಂಡಮಾರುತ, ದಹಿಸುವ ಅಗ್ನಿಜ್ವಾಲೆ ಇವುಗಳಿಂದ ಶಿಕ್ಷಿಸಿದನು. 7 ಅರೀಯೇಲ್ ವಿರುದ್ಧವಾಗಿ ಅನೇಕಾನೇಕ ಜನಾಂಗಗಳು ಯುದ್ಧಮಾಡಿದರು. ಅವೆಲ್ಲಾ ರಾತ್ರಿಕಾಲದ ಭಯಂಕರ ಕನಸುಗಳಂತೆ ಇದ್ದವು. ಸೈನ್ಯವು ಅರೀಯೇಲ್‌ಗೆ ಮುತ್ತಿಗೆ ಹಾಕಿ ಅದನ್ನು ಶಿಕ್ಷಿಸಿದವು. 8 ಅದು ಕೂಡಾ ಸೈನ್ಯದವರಿಗೆ ಒಂದು ಕನಸಿನಂತಿರುವದು. ಅವರಿಗೆ ಬೇಕಾದದ್ದು ದೊರಕುವದಿಲ್ಲ. ಹಸಿವೆಯಲ್ಲಿರುವ ಒಬ್ಬನು ಆಹಾರದ ಕನಸು ಕಂಡಂತಿರುವದು. ಅವನು ಎಚ್ಚರವಾದಾಗ ಹಸಿವಿನಿಂದಲೇ ಇರುವನು. ಬಾಯಾರಿದ ಮನುಷ್ಯನು ನೀರಿಗಾಗಿ ಕಾಣುವ ಕನಸಿನಂತಿರುವುದು. ಅವನು ಎಚ್ಚರಗೊಂಡಾಗ ಬಾಯಾರಿಕೆಯು ಇನ್ನೂ ಇರುವದು. ಚೀಯೋನಿಗೆ ವಿರುದ್ಧ ಯುದ್ಧಮಾಡುವ ಆ ಜನಾಂಗಗಳ ಗತಿಯು ಅಂತೆಯೇ ಇರುವದು. ಅವರು ತಾವು ಆಶಿಸುವ ವಸ್ತುಗಳನ್ನು ಹೊಂದುವದಿಲ್ಲ.
9 ಆಶ್ಚರ್ಯಪಡಿರಿ! ಬೆರಗಾಗಿರಿ!
ನೀವು ಮತ್ತರಾಗಿರುವಿರಿ! ಆದರೆ ದ್ರಾಕ್ಷಾರಸದಿಂದಲ್ಲ.
ನೋಡಿ, ಆಶ್ಚರ್ಯಪಡಿರಿ!
ನೀವು ಮುಗ್ಗರಿಸಿಬೀಳುವಿರಿ, ಆದರೆ ಮದ್ಯಪಾನದಿಂದಲ್ಲ.
10 ಯೆಹೋವನು ನಿಮಗೆ ತೂಕಡಿಕೆ ಬರಮಾಡುವನು.
ಆತನು ನಿಮ್ಮ ಕಣ್ಣುಗಳನ್ನು ಮುಚ್ಚುವನು. (ಪ್ರವಾದಿಗಳು ನಿಮ್ಮ ಕಣ್ಣುಗಳಾಗಿದ್ದಾರೆ.)
ಯೆಹೋವನು ನಿಮ್ಮ ತಲೆಗಳನ್ನು ಮುಚ್ಚುವನು. (ಪ್ರವಾದಿಗಳು ನಿಮ್ಮ ತಲೆಗಳಾಗಿದ್ದಾರೆ.)
11 ನಾನು ಖಂಡಿತವಾಗಿ ಹೇಳುತ್ತೇನೆ, ಈ ಸಂಗತಿಗಳು ನೆರವೇರುವವು. ಆದರೆ ನೀವು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ. ನನ್ನ ಮಾತುಗಳು ಒಂದು ಪುಸ್ತಕದಲ್ಲಿ ಬರೆದು ಮುಚ್ಚಿ ಅದಕ್ಕೆ ಮುದ್ರೆಹಾಕಿ ಇರಿಸಿದಂತಿರುವದು. 12 ಓದುಬರುವವನಿಗೆ ಇದನ್ನು ಓದು ಎಂದು ಹೇಳಿದರೆ ಅವನು, “ಈ ಪುಸ್ತಕ ಮುಚ್ಚಲ್ಪಟ್ಟಿದೆ, ನನಗೆ ತೆರೆಯಲು ಸಾಧ್ಯವಿಲ್ಲ” ಎಂದು ಹೇಳುವನು. ಓದುಬಾರದ ಒಬ್ಬನಿಗೆ ಕೊಟ್ಟರೆ ಅವನು, “ನನಗೆ ಓದಲು ಬರುವದಿಲ್ಲ” ಎಂದು ಹೇಳಿ ಪುಸ್ತಕವನ್ನು ಹಿಂದಕ್ಕೆ ಕೊಡುವನು.
13 ನನ್ನ ಒಡೆಯನು ಹೇಳುವುದೇನೆಂದರೆ, “ನನ್ನನ್ನು ಪ್ರೀತಿಸುವದಾಗಿ ಇವರು ಹೇಳುತ್ತಾರೆ. ಅವರು ತಮ್ಮ ಮಾತುಗಳಿಂದ ನನ್ನನ್ನು ಗೌರವಿಸುತ್ತಾರೆ. ಆದರೆ ಅವರ ಹೃದಯಗಳು ನನ್ನಿಂದ ದೂರವಾಗಿವೆ. ಅವರು ನನಗೆ ತೋರಿಸುವ ಗೌರವವು ಅವರು ಬಾಯಿಪಾಠ ಮಾಡಿದ ಮಾನವ ನಿರ್ಮಿತವಾದ ನಿಯಮಗಳಾಗಿವೆ. 14 ನಾನು ಅದ್ಭುತಕಾರ್ಯಗಳಿಂದ ಅವರನ್ನು ಆಶ್ಚರ್ಯಗೊಳಿಸುತ್ತಾ ಇರುವೆನು. ಅವರ ಜ್ಞಾನಿಗಳು ತಮ್ಮ ಜ್ಞಾನವನ್ನು ಕಳೆದುಕೊಳ್ಳುವರು. ಅವರು ಅರ್ಥಮಾಡಿಕೊಳ್ಳಲಾರರು.”
15 ಯೆಹೋವನಿಗೆ ತಮ್ಮ ಆಲೋಚನೆಗಳು ತಿಳಿಯಬಾರದೆಂದು ಕುತಂತ್ರೋಪಾಯಗಳನ್ನು ಮಾಡಿ, ಕತ್ತಲೆಯಲ್ಲಿ ದುಷ್ಕೃತ್ಯಗಳನ್ನು ಮಾಡುತ್ತಾ, “ನಮ್ಮನ್ನು ಯಾರು ನೋಡಬಲ್ಲರು, ನಮ್ಮನ್ನು ಯಾರು ಗುರುತಿಸಬಲ್ಲರು?” ಎಂದುಕೊಳ್ಳುವವರ ಗತಿಯನ್ನು ಏನು ಹೇಳಲಿ.
16 ನೀವು ಗಲಿಬಿಲಿಗೊಂಡಿದ್ದೀರಿ. ಜೇಡಿಮಣ್ಣು ಕುಂಬಾರನಿಗೆ ಸಮಾನವಾಗಿದೆ ಎಂದು ಯೋಚಿಸುತ್ತೀರಿ. ಒಂದು ವಸ್ತು ಅದರ ನಿರ್ಮಾಣಿಕನಿಗೆ, “ನೀನು ನನ್ನನ್ನು ನಿರ್ಮಿಸಲಿಲ್ಲ” ಎಂದು ಕೇಳಬಹುದು ಎಂದು ನೆನಸುತ್ತೀರಿ. ಒಂದು ಮಡಿಕೆಯು ಅದನ್ನು ಮಾಡಿದವನಿಗೆ, “ನಿನಗೆ ಏನೂ ಗೊತ್ತಿಲ್ಲ” ಎಂದು ಹೇಳಿದ ಹಾಗಾಯಿತು.
ಒಳ್ಳೆಯ ಸಮಯವು ಬರುತ್ತಿದೆ
17 ಇದು ಸತ್ಯ: ಸ್ವಲ್ಪ ಸಮಯದ ನಂತರ, ಕರ್ಮೆಲ್ ಬೆಟ್ಟದಂತೆ ಲೆಬನೋನ್ ಫಲವತ್ತಾಗುವದು. ಕರ್ಮೆಲ್ ಬೆಟ್ಟವು ದಟ್ಟ ಅಡವಿಯಾಗುವದು. 18 ಪುಸ್ತಕದಲ್ಲಿರುವ ಮಾತುಗಳನ್ನು ಕಿವುಡನು ಕೇಳಿಸಿಕೊಳ್ಳುವನು. ಕುರುಡನು ಕತ್ತಲೆಯಲ್ಲಿಯೂ ಮಂಜು ತುಂಬಿದ್ದಾಗಲೂ ನೋಡುವನು. 19 ದೀನರನ್ನು ಯೆಹೋವನು ಸಂತೋಷಿಸುವಂತೆ ಮಾಡುವನು. ಬಡವರು ಇಸ್ರೇಲರ ಪರಿಶುದ್ಧನಲ್ಲಿ ಉಲ್ಲಾಸಿಸುವರು.
20 ಇದು ಕ್ರೂರಿಗಳೂ ದುಷ್ಟರೂ ನಾಶವಾದಾಗ ಆಗುವದು. ಕೆಟ್ಟಕಾರ್ಯಗಳನ್ನು ಮಾಡುವದರಲ್ಲಿ ಸಂತೋಷಿಸುವವರು ಇಲ್ಲದೆ ಹೋದಾಗ ಆ ಕಾರ್ಯಗಳು ನಡಿಯುವವು. 21 (ಅವರು ನೀತಿವಂತರ ವಿಷಯವಾಗಿ ಸುಳ್ಳಾಡುವರು. ನ್ಯಾಯಾಲಯದಲ್ಲಿ ಜನರನ್ನು ಸಿಕ್ಕಿಸಿ ಹಾಕುವರು. ದೀನರನ್ನು ನಾಶಮಾಡಲು ಅವರು ಪ್ರಯತ್ನಿಸುವರು.)
22 ಯೆಹೋವನು ಯಾಕೋಬನ ವಂಶಕ್ಕೆ ಹೀಗೆನ್ನುತ್ತಾನೆ: “ಅಬ್ರಹಾಮನನ್ನು ಬಿಡಿಸಿದ ಯೆಹೋವನೇ ನಾನು. ಈಗ ಯಾಕೋಬಿನ ಜನರು ನಾಚಿಕೆಪಡುವದಿಲ್ಲ ಮತ್ತು ಅವಮಾನ ಹೊಂದುವದಿಲ್ಲ. 23 ಅವನು ತನ್ನ ಎಲ್ಲಾ ಮಕ್ಕಳನ್ನು ನೋಡಿ ‘ಪವಿತ್ರ ಎಂಬುದೇ ನನ್ನ ಹೆಸರು’ ಎಂದು ಹೇಳುವನು. ನನ್ನ ಕೈಗಳಿಂದ ನಾನು ಆ ಮಕ್ಕಳನ್ನು ನಿರ್ಮಿಸಿದೆನು. ಆ ಮಕ್ಕಳು ಯಾಕೋಬನ ಪರಿಶುದ್ಧ ದೇವರು ವಿಶೇಷವಾದವನು ಎಂದು ಹೇಳುವರು. ಆ ಮಕ್ಕಳು ಇಸ್ರೇಲರ ದೇವರನ್ನು ಗೌರವಿಸುವರು. 24 ಅವರಲ್ಲಿ ಅನೇಕರು ಸರಿಯಾಗಿ ತಿಳಿದುಕೊಳ್ಳಲಿಲ್ಲ. ಆದ್ದರಿಂದ ಅವರು ತಪ್ಪಿಹೋದರು. ಆದರೆ ಅವರು ಪಾಠಗಳನ್ನು ಕಲಿತುಕೊಳ್ಳುವರು.”
1 ಸಭಾಹಿರಿಯನು, ತಾನು ಸತ್ಯವಾಗಿಯೂ ಪ್ರೀತಿಸುವ,
ತನ್ನ ಪ್ರಿಯ ಸ್ನೇಹಿತನಾದ ಗಾಯನಿಗೆ ಬರೆಯುವ ಪತ್ರ.
2 ನನ್ನ ಪ್ರಿಯ ಸ್ನೇಹಿತನೇ, ನಿನ್ನ ಆತ್ಮವು ಅಭಿವೃದ್ಧಿ ಹೊಂದುತ್ತಿದೆ ಎಂಬುದು ನನಗೆ ತಿಳಿದಿದೆ. ನೀನು ಸರ್ವವಿಧದಲ್ಲಿಯೂ ಅಭಿವೃದ್ಧಿ ಹೊಂದಬೇಕೆಂದೂ ಆರೋಗ್ಯದಿಂದಿರಬೇಕೆಂದೂ ನಾನು ಪ್ರಾರ್ಥಿಸುತ್ತೇನೆ. 3 ಕ್ರಿಸ್ತನಲ್ಲಿ ಸಹೋದರರಾದ ಕೆಲವರು ಬಂದು, ನಿನ್ನ ಜೀವನದಲ್ಲಿರುವ ಸತ್ಯವನ್ನು ನನಗೆ ತಿಳಿಸಿದರು. ನೀನು ಸತ್ಯಮಾರ್ಗದಲ್ಲಿ ನಡೆಯುತ್ತಿರುವೆ ಎಂಬುದನ್ನು ಅವರು ನನಗೆ ಹೇಳಿದರು. ಇದು ನನಗೆ ಬಹಳ ಸಂತೋಷವನ್ನು ಉಂಟುಮಾಡಿತು. 4 ನನ್ನ ಮಕ್ಕಳು ಸತ್ಯಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂಬುದನ್ನು ಕೇಳುವಾಗಲೆಲ್ಲಾ ನನಗೆ ಬಹಳ ಸಂತೋಷವಾಗುತ್ತದೆ.
5 ನನ್ನ ಪ್ರಿಯ ಸ್ನೇಹಿತನೇ, ಕ್ರಿಸ್ತನಲ್ಲಿ ಸಹೋದರರಾದವರಿಗೆ ನೀನು ಸಹಾಯ ಮಾಡುತ್ತಿರುವುದು ಒಳ್ಳೆಯದೇ ಸರಿ. ನಿನಗೆ ಗೊತ್ತಿಲ್ಲದ ಸಹೋದರರಿಗೂ ನೀನು ಸಹಾಯ ಮಾಡುತ್ತಿರುವೆ! 6 ನಿನಗಿರುವ ಪ್ರೀತಿಯನ್ನು ಕುರಿತು ಈ ಸಹೋದರರು ಸಭೆಗೆ ತಿಳಿಸಿದರು. ಅವರು ತಮ್ಮ ಪ್ರವಾಸವನ್ನು ಮುಂದುವರಿಸಲು ದಯವಿಟ್ಟು ಅವರಿಗೆ ಸಹಾಯಮಾಡು. ದೇವರಿಗೆ ಮೆಚ್ಚಿಗೆಕರವಾದ ರೀತಿಯಲ್ಲಿ ಅವರಿಗೆ ಸಹಾಯಮಾಡು. 7 ಈ ಸಹೋದರರು ಕ್ರಿಸ್ತನ ಸೇವೆಗಾಗಿ ಪ್ರವಾಸಹೊರಟಿದ್ದಾರೆ. ಅವಿಶ್ವಾಸಿಗಳಿಂದ ಅವರು ಯಾವ ಸಹಾಯವನ್ನೂ ತೆಗೆದುಕೊಳ್ಳಲಿಲ್ಲ. 8 ಆದ್ದರಿಂದ ನಾವು ಈ ಸಹೋದರರಿಗೆ ಸಹಾಯ ಮಾಡಬೇಕು. ನಾವು ಅವರಿಗೆ ಸಹಾಯಮಾಡಿದಾಗ, ಸತ್ಯಕ್ಕೋಸ್ಕರ ಅವರು ಮಾಡುವ ಕಾರ್ಯದಲ್ಲಿ ನಾವೂ ಪಾಲುಗಾರರಾಗುತ್ತೇವೆ.
9 ನಾನು ಸಭೆಗೆ ಒಂದು ಪತ್ರವನ್ನು ಬರೆದೆನು. ಆದರೆ ನಾವು ಹೇಳಿದುದನ್ನು ದಿಯೊತ್ರೇಫನು ಕೇಳುವುದಿಲ್ಲ. ಅವನು ತಾನೇ ಅವರ ನಾಯಕನಾಗಿರಬೇಕೆಂದು ಯಾವಾಗಲೂ ಇಚ್ಛಿಸುತ್ತಾನೆ. 10 ನಾನು ಬಂದಾಗ, ದಿಯೊತ್ರೇಫನು ಮಾಡುತ್ತಿರುವುದರ ಬಗ್ಗೆ ತಿಳಿಸುತ್ತೇನೆ. ಅವನು ನಮ್ಮನ್ನು ಕುರಿತು ಸುಳ್ಳನ್ನೂ ಕೆಟ್ಟ ಸಂಗತಿಗಳನ್ನೂ ಹೇಳುತ್ತಾನೆ. ಆದರೆ ಅಷ್ಟೇ ಅಲ್ಲ! ಕ್ರಿಸ್ತನ ಸೇವೆಮಾಡುತ್ತಿರುವ ಆ ಸಹೋದರರಿಗೆ ಸಹಾಯಮಾಡಲು ಅವನು ಒಪ್ಪುವುದಿಲ್ಲ. ಅಲ್ಲದೆ ಆ ಸಹೋದರರಿಗೆ ಸಹಾಯ ಮಾಡಲಿಚ್ಛಿಸುವ ಜನರನ್ನೂ ಅವನು ತಡೆಯುತ್ತಾನೆ. ಆ ಜನರು ಸಭೆಯನ್ನು ಬಿಟ್ಟುಹೋಗುವಂತೆ ಅವನು ಮಾಡುತ್ತಾನೆ.
11 ನನ್ನ ಪ್ರಿಯ ಸ್ನೇಹಿತನೇ, ಕೆಟ್ಟದ್ದನ್ನು ಅನುಸರಿಸಬೇಡ; ಒಳ್ಳೆಯದನ್ನೇ ಅನುಸರಿಸು. ಒಳ್ಳೆಯದನ್ನು ಮಾಡುವವನು ದೇವರಿಗೆ ಸೇರಿದವನಾಗಿದ್ದಾನೆ. ಆದರೆ ಕೆಟ್ಟದ್ದನ್ನು ಮಾಡುವವನು ದೇವರನ್ನು ಎಂದೂ ತಿಳಿಯದವನಾಗಿದ್ದಾನೆ.
12 ದೇಮೇತ್ರಿಯನ ಬಗ್ಗೆ ಜನರೆಲ್ಲರೂ ಒಳ್ಳೆಯ ಸಂಗತಿಗಳನ್ನು ಹೇಳುತ್ತಾರೆ. ಅವರು ಹೇಳುವುದನ್ನು ಸತ್ಯವೂ ಅಂಗೀಕರಿಸುತ್ತದೆ. ಅವನನ್ನು ಕುರಿತು ನಾವೂ ಸಹ ಒಳ್ಳೆಯದನ್ನು ಹೇಳುತ್ತೇವೆ. ನಾವು ಹೇಳುವುದು ನಿಜವೆಂಬುದು ನಿನಗೆ ತಿಳಿದಿದೆ.
13 ನಾನು ನಿನಗೆ ಹೇಳಲಿಚ್ಛಿಸುವ ಅನೇಕ ವಿಚಾರಗಳಿವೆ. ಆದರೆ ನಾನು ಕಾಗದವನ್ನೂ ಇಂಕನ್ನೂ ಬಳಸಲು ಇಚ್ಛಿಸುವುದಿಲ್ಲ. 14 ನಾನು ನಿನ್ನನ್ನು ನೋಡಲು ಬರಬೇಕೆಂದಿದ್ದೇನೆ. ಆಗ ನಾವಿಬ್ಬರೂ ಒಟ್ಟಿಗೆ ಮಾತನಾಡಬಹುದು. 15 ನಿನಗೆ ಶಾಂತಿಯಿರಲಿ. ಸ್ನೇಹಿತರು ನಿನಗೆ ವಂದನೆ ತಿಳಿಸಿದ್ದಾರೆ. ಅಲ್ಲಿರುವ ಸ್ನೇಹಿತರಿಗೆಲ್ಲ ದಯವಿಟ್ಟು ನಮ್ಮ ವಂದನೆಯನ್ನು ತಿಳಿಸು.
Kannada Holy Bible: Easy-to-Read Version. All rights reserved. © 1997 Bible League International