Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 35

ಲೇವಿಯರ ಪಟ್ಟಣಗಳು

35 ಜೆರಿಕೊ ಪಟ್ಟಣದ ಆಚೆಕಡೆಯಲ್ಲಿ ಜೋರ್ಡನ್ ನದಿಯ ತೀರದ ಬಳಿಯಿಂದ ಮೋವಾಬ್ಯರ ಬಯಲಿನಲ್ಲಿ ಯೆಹೋವನು ಮೋಶೆಯೊಡನೆ ಮಾತಾಡಿ ಹೇಳಿದ್ದೇನೆಂದರೆ: “ಇಸ್ರೇಲರು ತಾವು ಹೊಂದುವ ಸ್ವಾಸ್ತ್ಯದಲ್ಲಿ ಕೆಲವು ಊರುಗಳನ್ನೂ ಆ ಊರುಗಳ ಸುತ್ತಲಿರುವ ಭೂಮಿಯನ್ನೂ ಲೇವಿಯರಿಗೆ ಕೊಡಬೇಕೆಂದು ಆಜ್ಞಾಪಿಸು. ಅವರು ಆ ಪಟ್ಟಣಗಳಲ್ಲಿ ವಾಸಿಸುವರು. ಆ ಊರುಗಳು ಲೇವಿಯರ ನಿವಾಸಕ್ಕಾಗಿ, ಸುತ್ತಲಿರುವ ಭೂಮಿಗಳು ಅವರ ಪಶುಗಳಿಗಾಗಿ ಮತ್ತು ಇತರ ಪ್ರಾಣಿಗಳಿಗಾಗಿ ಇರುವವು. ನೀವು ಲೇವಿಯರಿಗೆ ಕೊಡುವ ಹುಲ್ಲುಗಾವಲುಗಳು ಅಂದರೆ ಪಟ್ಟಣಗಳ ಸುತ್ತಲೂ ಇರುವ ಹುಲ್ಲುಗಾವಲುಗಳು ಪಟ್ಟಣದ ಗೋಡೆಯ ಹೊರಗೆ ಎಲ್ಲಾ ದಿಕ್ಕಿನಲ್ಲೂ ಒಂದು ಸಾವಿರ ಮೊಳ ವಿಸ್ತರಿಸಬೇಕು. ಪಟ್ಟಣದ ಹೊರಗೆ ಪ್ರತಿಯೊಂದು ದಿಕ್ಕಿನಲ್ಲಿ ಎರಡು ಸಾವಿರ ಮೊಳಗಳನ್ನು ಅಳೆದು ಪಟ್ಟಣಕ್ಕೆ ಗಡಿಯನ್ನು ಗೊತ್ತುಪಡಿಸಬೇಕು; ಪೂರ್ವದಿಕ್ಕಿನಲ್ಲಿ ಎರಡು ಸಾವಿರ ಮೊಳಗಳು; ದಕ್ಷಿಣದಿಕ್ಕಿನಲ್ಲಿ ಎರಡು ಸಾವಿರ ಮೊಳಗಳು; ಪಶ್ಚಿಮದಿಕ್ಕಿನಲ್ಲಿ ಎರಡು ಸಾವಿರ ಮೊಳಗಳು ಮತ್ತು ಉತ್ತರದಿಕ್ಕಿನಲ್ಲಿ ಎರಡು ಸಾವಿರ ಮೊಳಗಳು. ಇವುಗಳ ಮಧ್ಯದಲ್ಲಿ ಪಟ್ಟಣವಿರಬೇಕು. ಅದು ಅವರ ಪಟ್ಟಣಗಳಿಗೆ ಹುಲ್ಲುಗಾವಲುಗಳಾಗಿರುವುದು. ನೀವು ಲೇವಿಯರಿಗೆ ಕೊಡುವ ಆರು ಪಟ್ಟಣಗಳು ಆಶ್ರಯ ನಗರಗಳಾಗಿರುತ್ತವೆ. ಬೇರೊಬ್ಬನನ್ನು ಕೊಂದು ಸಂರಕ್ಷಣೆಗಾಗಿ ಓಡಿಹೋಗುವವರು ಈ ಪಟ್ಟಣಗಳಿಗೆ ಬಂದು ಸಂರಕ್ಷಣೆ ಪಡೆಯಲು ನೀವು ಅವಕಾಶ ಕೊಡಬೇಕು. ಇದಲ್ಲದೆ ಇತರ ನಲವತ್ತೆರಡು ಪಟ್ಟಣಗಳನ್ನು ನೀವು ಲೇವಿಯರಿಗೆ ಕೊಡಬೇಕು. ಅಂದರೆ ನೀವು ಲೇವಿಯರಿಗೆ ಒಟ್ಟು ನಲವತ್ತೆಂಟು ಪಟ್ಟಣಗಳನ್ನು ಅವುಗಳ ಸುತ್ತಲಿರುವ ಹುಲ್ಲುಗಾವಲಿನ ಸಮೇತವಾಗಿ ಕೊಡುತ್ತೀರಿ. ನೀವು ಇತರ ಇಸ್ರೇಲರ ಆಸ್ತಿಯಿಂದ ಲೇವಿಯರಿಗೆ ಪಟ್ಟಣಗಳನ್ನು ಕೊಡುವಾಗ, ಪ್ರತಿಯೊಂದು ಕುಲವು ಹೊಂದಿರುವ ಭೂಮಿಗನುಸಾರವಾಗಿ ಕೊಡಬೇಕು. ದೊಡ್ಡಕುಲಗಳಿಂದ ಹೆಚ್ಚು ಪಟ್ಟಣಗಳನ್ನೂ ಚಿಕ್ಕಕುಲಗಳಿಂದ ಕೆಲವು ಪಟ್ಟಣಗಳನ್ನೂ ತೆಗೆದುಕೊಳ್ಳಿ.”

ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 10 “ಇಸ್ರೇಲರಿಗೆ ಈ ಸಂಗತಿಗಳನ್ನು ತಿಳಿಸು: ನೀವು ಜೋರ್ಡನ್ ನದಿಯನ್ನು ದಾಟಿ ಕಾನಾನ್ ದೇಶವನ್ನು ಸೇರಿದ ನಂತರ 11 ಆಶ್ರಯ ಸ್ಥಳಗಳಾಗುವುದಕ್ಕೆ ಪಟ್ಟಣಗಳನ್ನು ಆರಿಸಿಕೊಳ್ಳಬೇಕು. ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಅವುಗಳಲ್ಲಿ ಒಂದಕ್ಕೆ ಓಡಿಹೋಗಿ ಸುರಕ್ಷಿತನಾಗಿರಬಹುದು. 12 ಕೊಂದವನು ನ್ಯಾಯ ವಿಚಾರಣಾಸಭೆಯ ಮುಂದೆ ನಿಂತುಕೊಳ್ಳುವುದಕ್ಕಿಂತ ಮೊದಲೇ ಕೊಲ್ಲಲ್ಪಟ್ಟವನ ಸಂಬಂಧಿಕನಿಂದ ಕೊಲ್ಲಲ್ಪಡದೆ ಸುರಕ್ಷಿತನಾಗಿರಲು ಆ ಆಶ್ರಯ ಸ್ಥಳಗಳು ನಿಮ್ಮ ಮಧ್ಯದಲ್ಲಿ ಇರಲೇಬೇಕು. 13-14 ಹೀಗೆ ಆಶ್ರಯ ಸ್ಥಳಗಳಾಗಿರುವುದಕ್ಕೆ ನೀವು ಜೋರ್ಡನ್ ನದಿಯ ಈಚೆ ಮೂರು ಮತ್ತು ಕಾನಾನ್ ದೇಶದಲ್ಲಿ ಮೂರು, ಹೀಗೆ ಒಟ್ಟು ಆರು ಪಟ್ಟಣಗಳನ್ನು ನೇಮಿಸಬೇಕು. 15 ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರೇಲನಾಗಲಿ ಪರದೇಶದವನಾಗಲಿ ನಿಮ್ಮಲ್ಲಿ ಇಳಿದುಕೊಂಡವನಾಗಲಿ, ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯ ಹೊಂದಬಹುದು.

16 “ಯಾವನಾದರೂ ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನನ್ನು ಕೊಲೆಗಾರನೆಂದು ನೀವು ತೀರ್ಮಾನಿಸಬೇಕು. ಅಂಥವನಿಗೆ ಮರಣಶಿಕ್ಷೆಯಾಗಬೇಕು. 17 ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಕಲ್ಲನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ, ಅವನು ನರಹತ್ಯ ಮಾಡಿದವನಾಗಿದ್ದಾನೆ. ಅವನಿಗೆ ಮರಣಶಿಕ್ಷೆಯಾಗಬೇಕು. 18 ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಮರದ ವಸ್ತುವನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ, ಅವನು ಕೊಲೆಗಾರ. ಅವನಿಗೆ ಮರಣಶಿಕ್ಷೆಯಾಗಬೇಕು. 19 ಕೊಲ್ಲಲ್ಪಟ್ಟವನ ಸಮೀಪ ಬಂಧುವು ಕೊಲೆಗಾರನನ್ನು ಮರಣಕ್ಕೀಡುಮಾಡಬೇಕು. ಅವನು ಕೊಲೆಗಾರನನ್ನು ಯಾವಾಗ ಕಂಡರೂ ಅವನನ್ನು ಕೊಲ್ಲಬೇಕು.

20 “ಯಾವನಾದರೂ ಮತ್ತೊಬ್ಬನನ್ನು ದ್ವೇಷಿಸಿ ನೂಕುವುದರಿಂದಾಗಲಿ ಉದ್ದೇಶಪೂರ್ವಕವಾಗಿ ಅವನ ಮೇಲೆ ಏನಾದರೂ ಎಸೆಯುವುದರಿಂದಾಗಲಿ 21 ದ್ವೇಷದಿಂದ ಕೈಯಾರೆ ಹೊಡೆಯುವುದರಿಂದಾಗಲಿ ಕೊಂದರೆ, ಅವನು ನರಹತ್ಯ ಮಾಡಿದವನೇ. ಅವನಿಗೆ ಮರಣ ಶಿಕ್ಷೆಯಾಗಬೇಕು. ಹತನಾದವನ ಸಮೀಪ ಬಂಧುವು ಅವನನ್ನು ಎಲ್ಲಿ ಕಂಡರೂ ಕೊಲ್ಲಲಿ.

22 “ಆದರೆ ಒಬ್ಬನು ಯಾವ ದ್ವೇಷವೂ ಇಲ್ಲದೆ ನಿರುದ್ದೇಶದಿಂದ ಎಸೆದ ಯಾವುದೋ ವಸ್ತುವಿನಿಂದ ಒಬ್ಬನನ್ನು ಕೊಂದರೆ, 23 ಅಥವಾ ದೊಡ್ಡ ಕಲ್ಲನ್ನು ತಿಳಿಯದೆ ಬೀಳಿಸಿದ್ದರಿಂದ ಮತ್ತೊಬ್ಬನು ಸತ್ತರೆ, ಅವನು ಕೊಲ್ಲಲ್ಪಟ್ಟವನ ವೈರಿಯಾಗಿರದೆಯೂ ಹಾನಿಯನ್ನು ಮಾಡಬೇಕೆಂಬ ಉದ್ದೇಶವಿಲ್ಲದೆಯೂ ಇದ್ದ ಪಕ್ಷಕ್ಕೆ 24 ಸಭೆಯವರು ಕೊಂದವನಿಗೂ ಕೊಲ್ಲಲ್ಪಟ್ಟವನಿಗೂ ಈ ನಿಯಮಗಳಿಗನುಸಾರವಾಗಿ ನ್ಯಾಯತೀರ್ಪು ನೀಡಬೇಕು. 25 ಕೊಂದವನು ಓಡಿಹೋಗಿದ್ದ ಆಶ್ರಯ ನಗರಕ್ಕೆ ಸಭೆಯವರು ಅವನನ್ನು ಮತ್ತೆ ಕರೆದುಕೊಂಡು ಹೋಗಿ ಕೊಲ್ಲಲ್ಪಟ್ಟವನ ಸಮೀಪಬಂಧುವಿನಿಂದ ರಕ್ಷಿಸಬೇಕು. ಅಭಿಷೇಕ ಹೊಂದಿದ ಮಹಾಯಾಜಕನು ಜೀವದಿಂದಿರುವ ತನಕ ಅವನು ಆ ಪಟ್ಟಣದಲ್ಲೇ ವಾಸಿಸಬೇಕು.

26-27 “ಆ ವ್ಯಕ್ತಿಯು ತನ್ನ ಆಶ್ರಯನಗರದ ಮೇರೆಯನ್ನು ಎಂದಿಗೂ ದಾಟಿ ಹೊರಗೆ ಹೋಗಬಾರದು. ಆ ಮೇರೆಗಳನ್ನು ದಾಟಿ ಹೊರಗೆ ಹೋದರೆ, ಹತವಾದವನ ಸಮೀಪಬಂಧುವು ಅವನನ್ನು ಕಂಡು ಕೊಂದುಹಾಕಿದರೆ, ಆಗ ಆ ಸಮೀಪ ಬಂಧುವು ನರಹತ್ಯ ಮಾಡಿದ ದೋಷಿಯಾಗುವುದಿಲ್ಲ. 28 ಮಹಾಯಾಜಕನು ಜೀವದಿಂದಿರುವ ತನಕ ಅವನು ಆಶ್ರಯನಗರದೊಳಗೆ ಇರಬೇಕು. ಮಹಾಯಾಜಕನು ತೀರಿಹೋದ ನಂತರ ಅವನು ತನ್ನ ಸ್ವಾಸ್ತ್ಯವಿರುವ ಸ್ಥಳಕ್ಕೆ ಹೋಗಬಹುದು. 29 ನೀವೂ ನಿಮ್ಮ ಸಂತತಿಯವರೂ ನಿಮ್ಮ ಎಲ್ಲಾ ನಿವಾಸಗಳಲ್ಲಿ ಈ ಕಟ್ಟಳೆಗೆ ಅನುಸಾರವಾಗಿ ನ್ಯಾಯತೀರಿಸಬೇಕು.

30 “ಯಾವನಾದರೂ ಮತ್ತೊಬ್ಬನನ್ನು ಕೊಂದರೆ, ಸಾಕ್ಷ್ಯಾಧಾರಗಳು ಇದ್ದರೆ ಮಾತ್ರ ಕೊಂದವನು ಕೊಲ್ಲಲ್ಪಡಬೇಕು.

31 “ಮರಣಶಿಕ್ಷೆಗೆ ಒಳಗಾಗಿರುವ ಕೊಲೆಪಾತಕನನ್ನು ಉಳಿಸಲು ನೀವು ಯಾವ ಈಡನ್ನೂ ತೆಗೆದುಕೊಳ್ಳಕೂಡದು. ಅವನಿಗೆ ಮರಣಶಿಕ್ಷೆಯೇ ಆಗಬೇಕು.

32 “ಆಶ್ರಯನಗರಕ್ಕೆ ಓಡಿಹೋದವನಿಂದ ಹಣವನ್ನು ಈಡಾಗಿ ತೆಗೆದುಕೊಂಡು ಮಹಾಯಾಜಕನು ಜೀವದಿಂದಿರುವಾಗಲೇ ತನ್ನ ಸ್ವಂತ ಸ್ಥಳಕ್ಕೆ ಹೋಗಿ ವಾಸಿಸಲು ನೀವು ಅವಕಾಶ ಕೊಡಕೂಡದು.

33 “ನೀವು ವಾಸವಾಗಿರುವ ದೇಶವನ್ನು ಕೆಡಿಸಬಾರದು. ಕೊಲೆಯು ದೇಶವನ್ನು ಕೆಡಿಸುತ್ತದೆ. ಕೊಲೆಯು ನಡೆಯಲ್ಪಟ್ಟಿರುವ ದೇಶಕ್ಕೆ ಕೊಲೆಗಾರನ ರಕ್ತವೇ ಹೊರತು ಬೇರೆ ಯಾವ ಈಡೂ ಇಲ್ಲ. 34 ನಾನು ವಾಸಿಸುವ ದೇಶವನ್ನು ನೀವು ಅಶುದ್ಧಮಾಡಬಾರದು, ಯಾಕೆಂದರೆ ಯೆಹೋವನಾದ ನಾನೇ ಇಸ್ರೇಲರೊಂದಿಗೆ ವಾಸಿಸುತ್ತೇನೆ.”

ಕೀರ್ತನೆಗಳು 79

ಸ್ತುತಿಗೀತೆ. ರಚನೆಗಾರ: ಆಸಾಫ.

79 ದೇವರೇ, ಅನ್ಯ ಜನಾಂಗಗಳು ನಿನ್ನ ಜನರಿಗೆ ಮುತ್ತಿಗೆ ಹಾಕಿದ್ದಾರೆ.
    ಅವರು ನಿನ್ನ ಪವಿತ್ರಾಲಯವನ್ನು ಹೊಲಸು ಮಾಡಿದರು;
    ಜೆರುಸಲೇಮನ್ನು ನಾಶ ಮಾಡಿದರು.
ಅವರು ನಿನ್ನ ಸೇವಕರ ಸತ್ತದೇಹಗಳನ್ನು ಕ್ರೂರ ಪಕ್ಷಿಗಳಿಗೆ ಆಹಾರ ಮಾಡಿದರು.
    ಅವರು ನಿನ್ನ ಭಕ್ತರ ದೇಹಗಳನ್ನು ಕ್ರೂರ ಪ್ರಾಣಿಗಳಿಗೆ ಹಾಕಿದರು.
ರಕ್ತವು ನೀರಿನಂತೆ ಹರಿಯುವ ತನಕ ಶತ್ರುಗಳು ನಿನ್ನ ಜನರನ್ನು ಕೊಂದುಹಾಕಿದರು.
    ಶವಗಳನ್ನು ಹೂಳಲು ಯಾರೂ ಉಳಿದಿಲ್ಲ.
ನಮ್ಮ ನೆರೆಹೊರೆಯ ದೇಶಗಳವರು ನಮಗೆ ಅವಮಾನ ಮಾಡಿದರು.
    ನಮ್ಮ ಸುತ್ತಮುತ್ತಲಿನ ಜನರೆಲ್ಲರೂ ನಮ್ಮನ್ನು ನೋಡಿ ನಗುತ್ತಾ ಗೇಲಿ ಮಾಡಿದರು.
ದೇವರೇ, ಇನ್ನೆಷ್ಟರವರೆಗೆ ನೀನು ನಮ್ಮ ಮೇಲೆ ಕೋಪದಿಂದಿರುವೆ?
    ನಿನ್ನ ಕೋಪಾಗ್ನಿಯು ಉರಿಯುತ್ತಲೇ ಇರಬೇಕೇ?
ನಿನ್ನನ್ನು ಅರಿಯದ ಜನಾಂಗಗಳ ಮೇಲೆಯೂ
    ನಿನ್ನ ಹೆಸರನ್ನು ಆರಾಧಿಸದ ಜನಾಂಗಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು.
ಯಾಕೆಂದರೆ ಆ ಜನಾಂಗಗಳು
    ಯಾಕೋಬ್ಯರನ್ನೂ ಅವರ ದೇಶವನ್ನೂ ನಾಶಮಾಡಿದರು.
ನಮ್ಮ ಪೂರ್ವಿಕರು ಮಾಡಿದ ಪಾಪಕ್ಕೆ ಬರಬೇಕಾದ ದಂಡನೆಯನ್ನು ನಮ್ಮ ಮೇಲೆ ಬರಗೊಡಿಸಬೇಡ.
    ಬೇಗನೆ ನಿನ್ನ ಕರುಣೆಯನ್ನು ನಮಗೆ ತೋರು!
    ನೀನು ನಮಗೆ ಎಷ್ಟೋ ಅಗತ್ಯವಾಗಿರುವೆ!
ನಮ್ಮ ರಕ್ಷಕನಾದ ದೇವರೇ, ನಮಗೆ ಸಹಾಯಮಾಡು!
    ನಿನ್ನ ಹೆಸರಿನ ಘನತೆಗಾಗಿ ನಮಗೆ ಸಹಾಯಮಾಡು!
ನಮ್ಮನ್ನು ರಕ್ಷಿಸಿ ನಿನ್ನ ಹೆಸರಿನ ಘನತೆಗೋಸ್ಕರ
    ನಮ್ಮ ಪಾಪಗಳನ್ನು ಅಳಿಸಿಬಿಡು.
10 ಅನ್ಯ ಜನಾಂಗಗಳು, “ನಿಮ್ಮ ದೇವರು ಎಲ್ಲಿ? ಆತನು ನಿಮಗೆ ಸಹಾಯಮಾಡಲಾರನೇ?”
    ಎಂದು ಹೇಳಲು ಅವಕಾಶ ಕೊಡಬೇಡ.
ದೇವರೇ, ಅವರು ನಿನ್ನ ಸೇವಕರನ್ನು ಕೊಂದದ್ದಕ್ಕಾಗಿ
    ನಮ್ಮ ಕಣ್ಣೆದುರಿನಲ್ಲಿಯೇ ಅವರನ್ನು ದಂಡಿಸು.
11 ದಯವಿಟ್ಟು, ಸೆರೆಯಾಳುಗಳ ಗೋಳಾಟಕ್ಕೆ ಕಿವಿಗೊಡು!
    ಸಾಯಲಿರುವವರನ್ನು ನಿನ್ನ ಮಹಾಶಕ್ತಿಯಿಂದ ಕಾಪಾಡು.
12 ಒಡೆಯನೇ, ನಮ್ಮ ಸುತ್ತಮುತ್ತಲಿನ ಜನರು ಮಾಡಿದ ಕಾರ್ಯಗಳಿಗಾಗಿ
    ಅವರನ್ನು ಏಳರಷ್ಟು ದಂಡಿಸು.
    ನಿನಗೆ ಅವಮಾನಮಾಡಿದ್ದರಿಂದ ಅವರನ್ನು ದಂಡಿಸು.
13 ನಾವು ನಿನ್ನ ಜನರೂ ನೀನು ಪಾಲಿಸುವ ಮಂದೆಯೂ ಆಗಿದ್ದೇವೆ.
    ನಾವು ನಿನ್ನನ್ನು ಎಂದೆಂದಿಗೂ ಕೊಂಡಾಡುವೆವು.
    ನಿನ್ನನ್ನು ಸದಾಕಾಲ ಸ್ತುತಿಸುವೆವು.

ಯೆಶಾಯ 27

27 ಆ ಸಮಯದಲ್ಲಿ ಯೆಹೋವನು ವಂಚನೆಯ ಸರ್ಪವಾದ ಲಿವ್ಯಾತಾನನಿಗೆ ನ್ಯಾಯತೀರಿಸುವನು.
ಯೆಹೋವನು ಕಠಿಣವೂ ಮಹತ್ವವೂ ಬಲವೂ ಆಗಿರುವ ತನ್ನ ಖಡ್ಗದಿಂದ
    ಸುತ್ತಿಕೊಂಡಿರುವ ಸರ್ಪವಾದ ಲಿವ್ಯಾತಾನನನ್ನು ಕೊಲ್ಲುವನು.
    ಯೆಹೋವನು ಸಮುದ್ರದಲ್ಲಿರುವ ಘಟಸರ್ಪವನ್ನು ಕೊಲ್ಲುವನು.

ಆ ಸಮಯದಲ್ಲಿ ಜನರು ಮನೋಹರವಾದ ದ್ರಾಕ್ಷಿತೋಟದ ವಿಷಯವಾಗಿ ಹಾಡುವರು.
“ಯೆಹೋವನಾದ ನಾನು ಆ ತೋಟವನ್ನು ಚೆನ್ನಾಗಿ ನೋಡಿಕೊಳ್ಳುವೆನು;
    ಸರಿಯಾದ ಕಾಲದಲ್ಲಿ ತೋಟಕ್ಕೆ ನೀರು ಹೊಯ್ಯುವೆನು.
ಹಗಲಿರುಳು ತೋಟವನ್ನು ಕಾಯುವೆನು.
    ಆ ತೋಟವನ್ನು ಯಾರೂ ಹಾಳುಮಾಡುವದಿಲ್ಲ.
ನಾನು ಕೋಪಗೊಂಡಿಲ್ಲ.
ಆದರೆ ಯುದ್ಧ ನಡೆಯುತ್ತಿರುವಾಗ ಯಾರಾದರೂ ಮುಳ್ಳುಬೇಲಿಯನ್ನು ಹಾಕಿದರೆ,
    ನಾನು ಮುನ್ನುಗ್ಗಿ ಅದನ್ನು ಸುಟ್ಟುಹಾಕುವೆನು.
ಆದರೆ ಯಾವನಾದರೂ ಆಶ್ರಯಕ್ಕಾಗಿ ನನ್ನ ಬಳಿಗೆ ಬಂದು ನನ್ನೊಡನೆ ಸಮಾಧಾನ ಮಾಡಿಕೊಳ್ಳುವುದಾದರೆ
    ಅವನು ನನ್ನ ಬಳಿಗೆ ಬಂದು ಸಮಾಧಾನದಲ್ಲಿರಲಿ.
ಜನರು ನನ್ನ ಬಳಿಗೆ ಬರುವರು.
    ಆ ಜನರು ಮುಂದಿನ ಕಾಲದಲ್ಲಿ ಯಾಕೋಬನನ್ನು ಆಳವಾದ ಬೇರುಳ್ಳ ಗಿಡದಂತೆ ಬಲಶಾಲಿಯನ್ನಾಗಿ ಮಾಡುವರು.
ಬೆಳೆದು ಹೂಬಿಡುವ ಗಿಡದಂತೆ ಅವರು ಇಸ್ರೇಲಿಗೆ ಮಾಡುವರು.
    ಹಣ್ಣುಗಳಂತೆ ಇಸ್ರೇಲರ ಮಕ್ಕಳು ಭೂಮಿಯ ಮೇಲೆ ತುಂಬಿಹೋಗುವರು.”

ದೇವರು ಇಸ್ರೇಲರನ್ನು ಕಳುಹಿಸಿ ಬಿಡುವನು

ಯೆಹೋವನು ತನ್ನ ಜನರನ್ನು ಹೇಗೆ ಶಿಕ್ಷಿಸುವನು? ಹಿಂದಿನ ಕಾಲದಲ್ಲಿ ಶತ್ರುಗಳು ಜನರನ್ನು ಗಾಯಪಡಿಸಿದರು. ಯೆಹೋವನೂ ಹಾಗೆ ಮಾಡುವನೇ? ಹಿಂದಿನ ಕಾಲದಲ್ಲಿ ಅನೇಕ ಮಂದಿ ಕೊಲ್ಲಲ್ಪಟ್ಟರು. ಹಾಗೆಯೇ ಯೆಹೋವನು ಜನರನ್ನು ಕೊಲ್ಲುವನೇ?

ಯೆಹೋವನು ತನ್ನ ಜನರನ್ನು ದೂರದೇಶಕ್ಕೆ ಕಳುಹಿಸುವದರ ಮೂಲಕ ಅವರನ್ನು ಶಿಕ್ಷಿಸುವನು. ಇಸ್ರೇಲರೊಂದಿಗೆ ಯೆಹೋವನು ಕಟುವಾಗಿ ಮಾತನಾಡುವನು. ಆತನ ಮಾತುಗಳು ಮರುಭೂಮಿಯ ಬಿಸಿಗಾಳಿಯಂತೆ ಸುಡುವವು.

ಯಾಕೋಬನ ದೋಷವು ಹೇಗೆ ಕ್ಷಮಿಸಲ್ಪಡುವದು? ಅವನ ಪಾಪಗಳು ನಿವಾರಣೆಯಾಗುವದಕ್ಕೆ ಏನು ಮಾಡಬೇಕಾಗುವದು? ಇತರ ದೇವತೆಗಳ ಪೂಜಾಸ್ಥಳಗಳೂ ವೇದಿಕೆಯ ಕಲ್ಲುಗಳೂ ಪುಡಿಪುಡಿಯಾಗಿ ನಾಶವಾಗುವವು.

10 ಆ ಸಮಯದಲ್ಲಿ ಆ ಮಹಾನಗರವು ನಿರ್ಜನವಾಗಿರುವದು. ಅದು ಮರುಭೂಮಿಯಂತಿರುವದು. ಜನರೆಲ್ಲರೂ ಹೊರಟುಹೋಗಿರುವರು. ಅವರು ಪಲಾಯನಗೈದಿದ್ದಾರೆ. ನಗರವು ತೆರೆದ ಹುಲ್ಲುಗಾವಲಿನಂತಿರುವುದು. ಪಶುಗಳು ಅಲ್ಲಿ ಹುಲ್ಲನ್ನು ಮೇಯುತ್ತವೆ. ದನಗಳು ದ್ರಾಕ್ಷಾಲತೆಯ ಚಿಗುರೆಲೆಗಳನ್ನು ತಿನ್ನುವವು. 11 ದ್ರಾಕ್ಷಿಬಳ್ಳಿ ಒಣಗಿಹೋಗುವದು. ಅದರ ಕೊಂಬೆಗಳು ಮುರಿದುಬೀಳುವವು. ಹೆಂಗಸರು ಆ ಕೊಂಬೆಗಳನ್ನು ಸೌದೆಯಾಗಿ ಉಪಯೋಗಿಸುವರು.

ಜನರು ತಿಳಿದುಕೊಳ್ಳುವದಕ್ಕೆ ಮನಸ್ಸು ಕೊಡುವದಿಲ್ಲ. ಆದ್ದರಿಂದ ಅವರ ನಿರ್ಮಾಣಿಕನಾದ ದೇವರು ಅವರನ್ನು ಸಂತೈಸುವದಿಲ್ಲ. ಅವರ ನಿರ್ಮಾಣಿಕನು ಅವರಿಗೆ ದಯೆ ತೋರುವದಿಲ್ಲ.

12 ಆ ಸಮಯದಲ್ಲಿ, ಯೆಹೋವನು ತನ್ನ ಜನರನ್ನು ಬೇರೆಯವರಿಂದ ಬೇರ್ಪಡಿಸುವನು. ಆತನು ಯೂಫ್ರೇಟೀಸ್ ನದಿಯಿಂದ ಪ್ರಾರಂಭಿಸಿ ಈಜಿಪ್ಟಿನ ನದಿಯತನಕ ಎಲ್ಲಾ ಜನರನ್ನು ಒಟ್ಟುಗೂಡಿಸುವನು.

ಇಸ್ರೇಲ್ ಜನರೇ, ನೀವು ಒಬ್ಬೊಬ್ಬರಾಗಿಯೇ ಒಟ್ಟುಗೂಡಿಸಲ್ಪಡುವಿರಿ. 13 ನನ್ನ ಜನರಲ್ಲಿ ಹೆಚ್ಚಿನವರು ಅಶ್ಶೂರದಲ್ಲಿ ಈಗ ಕಳೆದುಹೋಗಿರುತ್ತಾರೆ; ಕೆಲವರು ಈಜಿಪ್ಟಿಗೆ ಓಡಿಹೋಗಿದ್ದಾರೆ. ಆ ಸಮಯದಲ್ಲಿ ಮಹಾದೊಡ್ಡ ತುತ್ತೂರಿಯ ಶಬ್ದವು ಕೇಳಿಸುವದು. ಆಗ ಆ ಜನರೆಲ್ಲರೂ ಜೆರುಸಲೇಮಿಗೆ ಹಿಂತಿರುಗುವರು. ಆ ಜನರು ಪರಿಶುದ್ಧ ಪರ್ವತದ ಮೇಲೆ ಯೆಹೋವನ ಮುಂದೆ ಅಡ್ಡಬೀಳುವರು.

1 ಯೋಹಾನ 5

ದೇವರ ಮಕ್ಕಳು ಲೋಕದ ವಿರುದ್ಧ ಜಯಗಳಿಸುವರು

ಯೇಸುವೇ ಕ್ರಿಸ್ತನೆಂದು ನಂಬುವವರು ದೇವರ ಮಕ್ಕಳಾಗಿದ್ದಾರೆ. ತಂದೆಯನ್ನು (ದೇವರನ್ನು) ಪ್ರೀತಿಸುವವನು ತಂದೆಯ ಮಕ್ಕಳನ್ನೂ ಪ್ರೀತಿಸುತ್ತಾನೆ. ನಾವು ದೇವರ ಮಕ್ಕಳನ್ನು ಪ್ರೀತಿಸುತ್ತಿದ್ದೇವೆಂಬುದು ನಮಗೆ ಹೇಗೆ ತಿಳಿದಿದೆ? ನಾವು ದೇವರನ್ನು ಪ್ರೀತಿಸುತ್ತಿರುವುದರಿಂದ ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗಿರುವುದರಿಂದ ದೇವರ ಆಜ್ಞೆಗಳು ನಮಗೆ ತಿಳಿದಿವೆ. ದೇವರನ್ನು ಪ್ರೀತಿಸುವುದು ಎಂದರೆ ಆತನ ಆಜ್ಞೆಗಳಿಗೆ ವಿಧೇಯರಾಗಿರುವುದು. ದೇವರ ಆಜ್ಞೆಗಳು ನಮಗೆ ಕಠಿಣವಾದವುಗಳಲ್ಲ. ಏಕೆಂದರೆ ದೇವರಿಂದ ಹೊಸದಾಗಿ ಹುಟ್ಟಿರುವ ಪ್ರತಿಯೊಬ್ಬನೂ ಲೋಕದ ವಿರುದ್ಧ ಗೆಲ್ಲುವ ಶಕ್ತಿಯನ್ನು ಹೊಂದಿದ್ದಾನೆ. ಲೋಕದ ವಿರುದ್ಧ ಜಯಗಳಿಸಿದ್ದು ನಮ್ಮ ನಂಬಿಕೆಯೇ. ಆದ್ದರಿಂದ ಲೋಕದ ವಿರುದ್ಧ ಜಯಗಳಿಸುವವನು ಯಾರು? ಯೇಸುವನ್ನು ದೇವರ ಮಗನೆಂದು ನಂಬುವ ವ್ಯಕ್ತಿಯು ಮಾತ್ರ ಜಯಗಳಿಸುತ್ತಾನೆ.

ದೇವರು ತನ್ನ ಮಗನನ್ನು ಕುರಿತು ನಮಗೆ ತಿಳಿಸಿದನು

ಬಂದಾತನೇ ಯೇಸು ಕ್ರಿಸ್ತನು. ಯೇಸು ನೀರಿನಿಂದ ಮಾತ್ರವಲ್ಲದೆ ರಕ್ತದಿಂದ ಬಂದನು. ಇದು ನಿಜವೆಂದು ನಮಗೆ ಆತ್ಮನು ತಿಳಿಸುತ್ತಾನೆ. ಏಕೆಂದರೆ ಆತ್ಮನು ಸತ್ಯಸ್ವರೂಪನಾಗಿದ್ದಾನೆ. ಆದ್ದರಿಂದ ಯೇಸುವಿನ ಬಗ್ಗೆ ನಮಗೆ ತಿಳಿಸಲು ಮೂರು ಸಾಕ್ಷಿಗಳಿವೆ: ಆತ್ಮ, ನೀರು ಮತ್ತು ರಕ್ತ. ಈ ಮೂರು ಸಾಕ್ಷಿಗಳ ಅಭಿಪ್ರಾಯವು ಒಂದೇ.

ಜನರು ಸಾಕ್ಷಿ ಹೇಳಿದಾಗ ನಾವು ನಂಬುತ್ತೇವೆ. ಆದರೆ ದೇವರ ಸಾಕ್ಷಿಯು ಅದಕ್ಕಿಂತಲೂ ವಿಶೇಷವಾಗಿದೆ. ದೇವರು ತನ್ನ ಸ್ವಂತ ಮಗನ ಕುರಿತು ಹೇಳಿದ ಸತ್ಯವೇ ಆತನು ನಮಗೆ ನೀಡಿದ ಸಾಕ್ಷಿಯಾಗಿದೆ. 10 ದೇವರ ಮಗನನ್ನು ನಂಬುವವನು ದೇವರಿಂದ ಸಾಕ್ಷೀಕರಿಸಲ್ಪಟ್ಟ ಸತ್ಯವನ್ನು ಹೊಂದಿರುತ್ತಾನೆ. ದೇವರನ್ನು ನಂಬದೆ ಇರುವವನು, ದೇವರನ್ನು ಸುಳ್ಳುಗಾರನನ್ನಾಗಿ ಮಾಡುತ್ತಾನೆ. ಏಕೆಂದರೆ ದೇವರು ತನ್ನ ಮಗನ ಬಗ್ಗೆ ನಮಗೆ ಹೇಳಿದುದನ್ನು ಅವನು ನಂಬುವುದಿಲ್ಲ. 11 ನಮಗೆ ನಿತ್ಯಜೀವವನ್ನು ತಾನು ದಯಪಾಲಿಸಿರುವುದಾಗಿ ದೇವರು ಹೇಳಿದನು. ಈ ನಿತ್ಯಜೀವವು ಆತನ ಮಗನಲ್ಲಿದೆ. (ಯೇಸು) 12 ಯಾವನಲ್ಲಿ ಆ ಮಗನಿರುತ್ತಾನೋ ಅವನಲ್ಲಿ ಆ ಜೀವವಿದೆ. ಆದರೆ ಯಾವನಲ್ಲಿ ದೇವರ ಮಗನು ಇರುವುದಿಲ್ಲವೋ ಅವನಲ್ಲಿ ಆ ಜೀವವಿಲ್ಲ.

ಈಗ ನಮಗೆ ನಿತ್ಯಜೀವವಿದೆ

13 ದೇವರ ಮಗನಲ್ಲಿ ನಂಬಿಕೆಯಿಟ್ಟಿರುವ ನಿಮಗೆ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಈಗ ನಿಮಗೆ ನಿತ್ಯಜೀವವಿದೆ ಎಂಬುದು ನಿಮಗೆ ಗೊತ್ತಾಗುವಂತೆ ನಾನು ಈ ಪತ್ರ ಬರೆಯುತ್ತಿದ್ದೇನೆ. 14 ನಾವು ಯಾವ ಸಂದೇಹಗಳೂ ಇಲ್ಲದೆ ದೇವರ ಬಳಿಗೆ ಬರಲು ಸಾಧ್ಯವಿದೆ. ಇದರ ಅರ್ಥವೇನೆಂದರೆ (ದೇವರ ಚಿತ್ತಕ್ಕನುಸಾರವಾಗಿ) ನಮಗೆ ಬೇಕಾದವುಗಳಿಗಾಗಿ ದೇವರನ್ನು ಕೇಳಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ. 15 ನಾವು ದೇವರನ್ನು ಬೇಡಿಕೊಂಡಾಗಲೆಲ್ಲಾ ಆತನು ನಮ್ಮ ಬೇಡಿಕೆಗಳನ್ನು ಕೇಳುವುದರಿಂದ ಆತನಲ್ಲಿ ಬೇಡಿಕೊಂಡದ್ದನ್ನು ಆತನು ನಮಗೆ ದಯಪಾಲಿಸುತ್ತಾನೆಂಬುದು ನಮಗೆ ತಿಳಿದಿದೆ.

16 ಕ್ರಿಸ್ತನಲ್ಲಿ ಸಹೋದರನಾಗಲಿ ಅಥವಾ ಸಹೋದರಿಯಾಗಲಿ ಪಾಪ ಮಾಡುವುದನ್ನು (ನಿತ್ಯವಾದ ಮರಣಕ್ಕೆ ನಡೆಸುವ ಪಾಪವನ್ನಲ್ಲ) ಕಂಡ ವ್ಯಕ್ತಿಯು ತನ್ನ ಆ ಸಹೋದರನಿಗಾಗಿ ಅಥವಾ ಆ ಸಹೋದರಿಗಾಗಿ ಪ್ರಾರ್ಥಿಸಬೇಕು. ಆಗ ದೇವರು ಆ ಸಹೋದರನಿಗೆ ಅಥವಾ ಆ ಸಹೋದರಿಗೆ ಜೀವವನ್ನು ದಯಪಾಲಿಸುತ್ತಾನೆ. ಶಾಶ್ವತವಾದ ಮರಣದ ಕಡೆಗೆ ನಡೆಸದಿರುವ ಪಾಪವನ್ನು ಮಾಡುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಮರಣದ ಕಡೆಗೆ ನಡೆಸುವ ಪಾಪವಿದೆ. ಈ ಪಾಪ ಮಾಡುವವರಿಗಾಗಿ ಪ್ರಾರ್ಥಿಸಬೇಕೆಂದು ನಾನು ಹೇಳುತ್ತಿಲ್ಲ. 17 ನೀತಿಗೆ ವಿರುದ್ಧವಾದುದೆಲ್ಲಾ ಪಾಪವಾಗಿದೆ. ಆದರೆ ಶಾಶ್ವತ ಮರಣದ ಕಡೆಗೆ ಕೊಂಡೊಯ್ಯದಿರುವ ಪಾಪವೂ ಇದೆ.

18 ದೇವರಿಂದ ಹೊಸದಾಗಿ ಹುಟ್ಟಿದವನು ಪಾಪದಲ್ಲೇ ಮುಂದುವರಿಯುವುದಿಲ್ಲವೆಂದು ನಮಗೆ ತಿಳಿದಿದೆ. ದೇವರ ಮಗನಾದ ಯೇಸು ಅವನನ್ನು ಸುರಕ್ಷಿತವಾಗಿ ಕಾಪಾಡುತ್ತಾನೆ. ಕೆಡುಕನು ಅವನಿಗೆ ಕೇಡುಮಾಡಲಾಗುವುದಿಲ್ಲ. 19 ನಾವು ದೇವರಿಗೆ ಸೇರಿದವರೆಂಬುದು ನಮಗೆ ತಿಳಿದಿದೆ. ಆದರೆ ಈ ಲೋಕವು ಕೆಡುಕನ ವಶದಲ್ಲಿದೆ. 20 ದೇವರ ಮಗನು ಬಂದಿದ್ದಾನೆಂಬುದು ನಮಗೆ ತಿಳಿದಿದೆ. ದೇವರ ಮಗನು ನಮಗೆ ತಿಳುವಳಿಕೆಯನ್ನು ದಯಪಾಲಿಸಿರುವನು. ಈಗ ನಾವು ದೇವರನ್ನು ತಿಳಿದುಕೊಳ್ಳಬಲ್ಲೆವು. ಸತ್ಯವಾಗಿರುವಾತನು ದೇವರೇ. ಸತ್ಯ ದೇವರಲ್ಲಿಯೂ ಮತ್ತು ಆತನ ಮಗನಾದ ಯೇಸು ಕ್ರಿಸ್ತನಲ್ಲಿಯೂ ನಾವು ನೆಲೆಸಿದ್ದೇವೆ. ಆತನು ಸತ್ಯದೇವರೂ ನಿತ್ಯಜೀವವೂ ಆಗಿದ್ದಾನೆ. 21 ಆದ್ದರಿಂದ ಪ್ರಿಯ ಮಕ್ಕಳೇ, ನೀವು ಸುಳ್ಳುದೇವರುಗಳಿಂದ ದೂರವಾಗಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International