Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 34

ಕಾನಾನಿನ ಮೇರೆಗಳು

34 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸಬೇಕು: ನೀವು ಕಾನಾನ್ ದೇಶವನ್ನು ಪ್ರವೇಶಿಸಿದಾಗ, ಇಡೀ ಕಾನಾನ್ ದೇಶವನ್ನು ಅದರ ಗಡಿಗಳೊಡನೆ ನಿಮಗೆ ಸ್ವಾಸ್ತ್ಯವಾಗಿ ಕೊಡಲಾಗುವುದು. ದಕ್ಷಿಣಭಾಗವು ಎದೋಮಿನ ಗಡಿಯಲ್ಲಿರುವ ಚಿನ್ ಮರುಭೂಮಿಯನ್ನು ಒಳಗೊಂಡಿದೆ. ಪೂರ್ವದ ಕಡೆಯಿರುವ ದಕ್ಷಿಣ ಗಡಿಯು ಉಪ್ಪುಸಮುದ್ರದ ದಕ್ಷಿಣಭಾಗದಿಂದ ಆರಂಭವಾಗುತ್ತದೆ. ಅಲ್ಲಿಂದ ಅದು ಅಕ್ರಬ್ಬೀಮ್ ಕಣಿವೆಗೆ ತಿರುಗಿಕೊಂಡು ಚಿನಿಗೆ ಮುಂದುವರಿಯುವುದು. ಅದರ ಪರಿಮಿತಿ ದಕ್ಷಿಣ ಕಾದೇಶ್ ಬರ್ನೇಯಾ. ಅಲ್ಲಿಂದ ಅದು ಹಚರದ್ದಾರ್‌ಗೆ ಹೋಗಿ ಅಚ್ಮೋನಿಗೆ ಮುಂದುವರಿಯುತ್ತದೆ. ಗಡಿಯು ಅಚ್ಮೋನಿನಿಂದ ಈಜಿಪ್ಟಿನ ನದಿಯ ಕಡೆಗೆ ತಿರುಗಿಕೊಂಡು ಸಮುದ್ರವನ್ನು ಸೇರುವುದು. ಪಶ್ಚಿಮದಿಕ್ಕಿನಲ್ಲಿ ಮೆಡಿಟೆರೇನಿಯನ್ ಸಮುದ್ರದ ತೀರ ನಿಮ್ಮ ದೇಶದ ಮೇರೆಯಾಗಿರುವುದು. ಉತ್ತರದಿಕ್ಕಿನ ಮೇರೆ ಮೆಡಿಟೆರೇನಿಯನ್ ಸಮುದ್ರದಿಂದ ಹಿಡಿದು ಲೆಬನೋನಿನಲ್ಲಿರುವ ಹೋರ್ ಬೆಟ್ಟದವರೆಗೂ ಇರುವುದು. ಹೋರ್ ಬೆಟ್ಟದಿಂದ ಅದು ಲೆಬೊಹಮಾತಿಗೆ ಹೋಗಿ ಅಲ್ಲಿಂದ ಚೆದಾದಿಗೆ ಹೋಗುವುದು. ಬಳಿಕ ಆ ಮೇರೆಯು ಜಿಫ್ರೋನಿಗೆ ಹೋಗಿ ಹಚರೇನಾನಿನಲ್ಲಿ ಮುಗಿಯುವುದು. ಹೀಗೆ ಅದು ನಿಮ್ಮ ಉತ್ತರ ಮೇರೆಯಾಗಿರುವುದು. 10 ನಿಮ್ಮ ಪೂರ್ವದಿಕ್ಕಿನಲ್ಲಿರುವ ಮೇರೆಯು ಹಚರೇನಾನಿನಿಂದ ಹೊರಟು ಶೆಫಾಮಿಗೆ ಹೋಗುವುದು. 11 ಶೆಫಾಮಿನಿಂದ ಆ ಮೇರೆಯು ಆಯಿನಿನ ಪೂರ್ವದಲ್ಲಿರುವ ರಿಬ್ಲಕ್ಕೆ ಹೋಗಿ ಗಲಿಲೇಯ ಸರೋವರದ ಪೂರ್ವದಲ್ಲಿರುವ ಬೆಟ್ಟಗಳನ್ನು ಮುಟ್ಟುವುದು. 12 ಬಳಿಕ ಈ ಮೇರೆಯು ಜೋರ್ಡನ್ ನದಿಯ ಉದ್ದಕ್ಕೂ ಮುಂದುವರೆಯುವುದು. ಅದು ಉಪ್ಪು ಸಮುದ್ರದಲ್ಲಿ ಕೊನೆಗೊಳ್ಳುವುದು. ಇವುಗಳೇ ನಿಮ್ಮ ದೇಶದ ಸುತ್ತಲಿನ ಮೇರೆಗಳು.”

13 ಮೋಶೆಯು ಇಸ್ರೇಲರಿಗೆ ಹೀಗೆ ಆಜ್ಞಾಪಿಸಿದನು: “ನೀವು ಚೀಟುಹಾಕಿ ಭಾಗಮಾಡಿಕೊಳ್ಳುವ ದೇಶವೇ ಇದು. ಒಂಭತ್ತುವರೆ ಕುಲಗಳವರಿಗೆ ಈ ದೇಶವನ್ನು ಕೊಡಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ. 14-15 ಬೇರೆ ಎರಡೂವರೆ ಕುಲಗಳವರು ಅಂದರೆ ರೂಬೇನ್ ಕುಲ ಮತ್ತು ಗಾದ್ ಕುಲ ಮತ್ತು ಮನಸ್ಸೆಯ ಅರ್ಧಕುಲವು ಜೆರಿಕೊ ಪಟ್ಟಣದ ಆಚೆಯಲ್ಲಿರುವ ಜೋರ್ಡನ್ ನದಿಯ ಪೂರ್ವಭಾಗದಲ್ಲಿ ಈಗಾಗಲೇ ಸ್ವಾಸ್ತ್ಯವನ್ನು ಹೊಂದಿ ತಮ್ಮ ಕುಟುಂಬಗಳ ಪ್ರಕಾರ ಹಂಚಿಕೊಂಡಿದ್ದಾರೆ.”

16 ಆಗ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ: 17 “ನಿಮಗೋಸ್ಕರ ದೇಶವನ್ನು ಹಂಚಿಕೊಡುವ ಕುಲಪ್ರಧಾನರು ಯಾರೆಂದರೆ: ಮಹಾಯಾಜಕನಾದ ಎಲ್ಲಾಜಾರ್, ನೂನನ ಮಗನಾದ ಯೆಹೋಶುವ 18 ಮತ್ತು ಪ್ರತಿಯೊಂದು ಕುಲದಿಂದ ಒಬ್ಬ ಕುಲಪ್ರಧಾನ. 19 ಪ್ರತಿಯೊಂದು ಕುಲದಿಂದ ನೀವು ನೇಮಿಸಬೇಕಾದವರು ಇವರೇ:

ಯೆಹೂದ ಕುಲದಿಂದ ಯೆಫುನ್ನೆಯ ಮಗನಾದ ಕಾಲೇಬ್.

20 ಸಿಮೆಯೋನ್ ಕುಲದಿಂದ ಅಮ್ಮೀಹೂದನ ಮಗನಾದ ಶೆಮೂವೇಲ್.

21 ಬೆನ್ಯಾಮೀನ್ ಕುಲದಿಂದ ಕಿಸ್ಲೋನನ ಮಗನಾದ ಎಲೀದಾದ್.

22 ದಾನ್ ಕುಲದಿಂದ ಯೊಗ್ಲೀಯ ಮಗನಾದ ಬುಕ್ಕೀ ಕುಲಾಧಿಪತಿ.

23 ಯೋಸೇಫನ ಸಂತತಿಯವರಲ್ಲಿ ಮನಸ್ಸೆ ಕುಲದಿಂದ ಏಫೋದನ ಮಗನಾದ ಹನ್ನೀಯೇಲ್ ಕುಲಾಧಿಪತಿ.

24 ಎಫ್ರಾಯೀಮ್ ಕುಲದಿಂದ ಶಿಫ್ಟಾನನ ಮಗನಾದ ಕೆಮೂವೇಲ್ ಕುಲಾಧಿಪತಿ.

25 ಜೆಬುಲೂನ್ ಕುಲದಿಂದ ಪರ್ನಾಕನ ಮಗನಾದ ಎಲೀಚಾಫಾನ್ ಕುಲಾಧಿಪತಿ.

26 ಇಸ್ಸಾಕಾರ್ ಕುಲದಿಂದ ಅಜ್ಜಾನನ ಮಗನಾದ ಪಲ್ಟೀಯೇಲ್ ಕುಲಾಧಿಪತಿ.

27 ಆಶೇರ್ ಕುಲದಿಂದ ಶೆಲೋಮಿಯ ಮಗನಾದ ಅಹೀಹೂದ್ ಕುಲಾಧಿಪತಿ.

28 ನಫ್ತಾಲಿ ಕುಲದಿಂದ ಅಮ್ಮೀಹೂದನ ಮಗನಾದ ಪೆದಹೇಲ್ ಕುಲಾಧಿಪತಿ.”

29 ಕಾನಾನ್ ದೇಶದಲ್ಲಿ, ಇಸ್ರೇಲರಿಗೆ ಅವರವರ ಸ್ವಾಸ್ತ್ಯಗಳನ್ನು ಹಂಚಿಕೊಡುವುದಕ್ಕೆ ಯೆಹೋವನು ಇವರನ್ನೆಲ್ಲಾ ನೇಮಿಸಿದನು.

ಕೀರ್ತನೆಗಳು 78:38-72

38 ಆದರೆ ಆತನು ಅವರಿಗೆ ಕರುಣೆತೋರಿ ಅವರ ಪಾಪಗಳನ್ನು ಕ್ಷಮಿಸಿದನು.
    ಆತನು ಅವರನ್ನು ನಾಶಮಾಡಲಿಲ್ಲ.
ಅನೇಕ ಸಲ ಆತನು ತನ್ನ ಕೋಪವನ್ನು ತಡೆಯುತ್ತಾ ಬಂದನು;
    ತಾನು ಬಹು ಕೋಪಗೊಳ್ಳದಂತೆ ನೋಡಿಕೊಂಡನು.
39 ಅವರು ಕೇವಲ ಮನುಷ್ಯರೆಂಬುದನ್ನು ಆತನು ಜ್ಞಾಪಿಸಿಕೊಂಡನು.
    ಜನರಾದರೋ ಬೀಸಿದ ನಂತರ ಹಿಂತಿರುಗಿ ಬಾರದ ಗಾಳಿಯಂತಿದ್ದಾರೆ.
40 ಅಯ್ಯೋ, ಅವರು ಅರಣ್ಯದಲ್ಲಿ ಆತನಿಗೆ ವಿರುದ್ಧವಾಗಿ ಅನೇಕ ಸಲ ದಂಗೆ ಎದ್ದರು.
    ಆತನನ್ನು ಬಹಳವಾಗಿ ನೋಯಿಸಿದರು.
41 ಪದೇಪದೇ ಅವರು ಆತನ ತಾಳ್ಮೆಯನ್ನು ಪರೀಕ್ಷಿಸಿದರು.
    ಅವರು ಇಸ್ರೇಲರ ಪರಿಶುದ್ಧನನ್ನು ಬಹಳವಾಗಿ ನೋಯಿಸಿದರು.
42 ಅವರು ಆತನ ಶಕ್ತಿಯನ್ನು ಮರೆತುಬಿಟ್ಟರು.
    ಅನೇಕ ಸಲ ಆತನು ತಮ್ಮನ್ನು ಶತ್ರುಗಳಿಂದ ರಕ್ಷಿಸಿದ್ದನ್ನು ಅವರು ಮರೆತುಬಿಟ್ಟರು.
43 ಈಜಿಪ್ಟಿನಲ್ಲಿಯೂ ಸೋನ್ ಬಯಲುಗಳಲ್ಲಿಯೂ
    ಮಾಡಿದ ಅದ್ಭುತಕಾರ್ಯಗಳನ್ನು ಅವರು ಮರೆತುಬಿಟ್ಟರು.
44 ಆತನು ನದಿಗಳನ್ನು ರಕ್ತವನ್ನಾಗಿ ಪರಿವರ್ತಿಸಿದನು!
    ಈಜಿಪ್ಟಿನವರಿಗೆ ನೀರನ್ನು ಕುಡಿಯಲಾಗಲಿಲ್ಲ.
45 ಆತನು ಹಿಂಡುಹಿಂಡು ಹುಳಗಳನ್ನು ಕಳುಹಿಸಿದನು;
    ಅವು ಈಜಿಪ್ಟಿನ ಜನರನ್ನು ಕಚ್ಚಿದವು.
ಆತನು ಕಪ್ಪೆಗಳನ್ನು ಕಳುಹಿಸಿದನು;
    ಅವು ಈಜಿಪ್ಟಿನವರ ಜೀವಿತಗಳನ್ನು ಹಾಳುಮಾಡಿದವು.
46 ಆತನು ಅವರ ಬೆಳೆಗಳನ್ನು ಜಿಟ್ಟೆಹುಳಗಳಿಗೂ
    ಇತರ ಗಿಡಗಳನ್ನು ಮಿಡತೆಗಳಿಗೂ ಕೊಟ್ಟನು.
47 ಈಜಿಪ್ಟ್ ಜನರ ದ್ರಾಕ್ಷಾಲತೆಗಳನ್ನು ನಾಶಮಾಡಲು ಆತನು ಆಲಿಕಲ್ಲು ಮಳೆ ಸುರಿಸಿದನು;
    ಅವರ ಮರಗಳನ್ನು ನಾಶಮಾಡಲು ಮಂಜುಮಳೆಯನ್ನು ಸುರಿಸಿದನು.
48 ಆತನು ಅವರ ದನಕರುಗಳನ್ನು ಆಲಿಕಲ್ಲಿನಿಂದಲೂ
    ಅವರ ಕುರಿಹಿಂಡುಗಳನ್ನು ಸಿಡಿಲಿನಿಂದಲೂ ಕೊಂದುಹಾಕಿದನು.
49 ಆತನು ಈಜಿಪ್ಟ್ ಜನರಿಗೆ ತನ್ನ ಭಯಂಕರವಾದ ಕೋಪವನ್ನು ತೋರಿದನು.
    ಆತನು ತನ್ನ ಸಂಹಾರ ದೂತರನ್ನು ಅವರಿಗೆ ವಿರೋಧವಾಗಿ ಕಳುಹಿಸಿದನು.
50 ಆತನು ತನ್ನ ಕೋಪವನ್ನು ತೋರಿಸಿದನು.
    ಅವರಲ್ಲಿ ಯಾರೂ ಬದುಕದಂತೆ ಆತನು ಮಾಡಿದನು.
    ಮರಣಕರವಾದ ರೋಗದಿಂದ ಅವರಿಗೆ ಸಾವನ್ನು ಬರಮಾಡಿದನು.
51 ಈಜಿಪ್ಟಿನವರ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ಆತನು ಕೊಂದುಹಾಕಿದನು.
    ಹಾಮನ ಕುಲಕ್ಕೆ ಸೇರಿದ ಪ್ರತಿಯೊಬ್ಬ ಚೊಚ್ಚಲ ಮಗನನ್ನು ಆತನು ಕೊಂದುಹಾಕಿದನು.
52 ಬಳಿಕ ಆತನು ಕುರುಬನಂತೆ ಇಸ್ರೇಲನ್ನು ನಡೆಸಿದನು.
    ಆತನು ತನ್ನ ಜನರನ್ನು ಕುರಿಗಳಂತೆ ಅರಣ್ಯದಲ್ಲಿ ನಡೆಸಿದನು.
53 ಆತನು ಅವರಿಗೆ ಮಾರ್ಗದರ್ಶನ ಮಾಡುತ್ತಾ
    ಸುರಕ್ಷಿತವಾಗಿ ಮುನ್ನಡೆಸಿದನು.
ಆತನ ಜನರು ಯಾವುದಕ್ಕೂ ಭಯಪಡುವ ಅಗತ್ಯವಿರಲಿಲ್ಲ.
    ಅವರ ಶತ್ರುಗಳನ್ನು ಆತನು ಕೆಂಪು ಸಮುದ್ರದಲ್ಲಿ ಮುಳುಗಿಸಿದನು.
54 ಆತನು ತನ್ನ ಜನರನ್ನು ತನ್ನ ಪವಿತ್ರನಾಡಿಗೂ
    ತನ್ನ ಭುಜಬಲದಿಂದ ತೆಗೆದುಕೊಂಡ ಪರ್ವತಕ್ಕೂ ನಡೆಸಿದನು.
55 ಆ ನಾಡಿನ ಜನಾಂಗಗಳನ್ನು ಆತನು ಬಲವಂತವಾಗಿ ಹೊರಗಟ್ಟಿದನು.
    ಆತನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಆ ನಾಡಿನಲ್ಲಿ ಪಾಲುಕೊಟ್ಟನು;
    ಆ ನಾಡಿನ ಮನೆಗಳಲ್ಲಿ ಅವರನ್ನು ನೆಲೆಗೊಳಿಸಿದನು.
56 ಆದರೆ ಇಸ್ರೇಲರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ಆತನನ್ನು ಬಹಳವಾಗಿ ನೋಯಿಸಿದರು.
    ಅವರು ಆತನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ.
57 ಇಸ್ರೇಲರು ಆತನಿಗೆ ವಿಮುಖರಾದರು; ತಮ್ಮ ಪೂರ್ವಿಕರಂತೆಯೇ ಆತನಿಗೆ ವಿರೋಧವಾಗಿ ತಿರುಗಿದರು.
    ತಿರುಗುಬಾಣದಂತೆ ತಮ್ಮ ದಿಕ್ಕನ್ನು ಬದಲಾಯಿಸಿಕೊಂಡರು.
58 ಇಸ್ರೇಲರು ಎತ್ತರವಾದ ಸ್ಥಳಗಳನ್ನು ನಿರ್ಮಿಸಿ, ಆತನನ್ನು ಕೋಪಗೊಳಿಸಿದರು.
    ಸುಳ್ಳುದೇವರುಗಳ ವಿಗ್ರಹಗಳನ್ನು ರೂಪಿಸಿ ಆತನನ್ನು ರೇಗಿಸಿದರು.
59 ದೇವರು ಇದನ್ನು ತಿಳಿದು ಬಹು ಕೋಪಗೊಂಡನು,
    ಆತನು ಇಸ್ರೇಲರನ್ನು ಸಂಪೂರ್ಣವಾಗಿ ತಿರಸ್ಕರಿಸಿದನು!
60 ಶೀಲೋವಿನಲ್ಲಿದ್ದ ತನ್ನ ಪವಿತ್ರ ಗುಡಾರವನ್ನು ಆತನು ತೊರೆದುಬಿಟ್ಟನು.
    ಅವರ ಮಧ್ಯದಲ್ಲಿ ಆತನು ವಾಸಮಾಡಿದ್ದು ಆ ಗುಡಾರದಲ್ಲಿಯೇ.
61 ಆತನು ತನ್ನ ಜನರನ್ನು ಇತರ ಜನಾಂಗಗಳ ವಶಕ್ಕೆ ಕೊಟ್ಟನು.
    ಶತ್ರುಗಳು ಆತನ “ಸುಂದರವಾದ ಆಭರಣವನ್ನು” ತೆಗೆದುಕೊಂಡರು.
62 ಆತನು ತನ್ನ ಜನರಿಗೆ ವಿರೋಧವಾಗಿ ತನ್ನ ಕೋಪವನ್ನು ತೋರಿದನು.
    ಯುದ್ಧದಲ್ಲಿ ಅವರಿಗೆ ಮರಣವಾಗುವಂತೆ ಮಾಡಿದನು.
63 ಯುವಕರು ಬೆಂಕಿಯ ಪಾಲಾದರು.
    ಅವರಿಗೆ ನಿಶ್ಚಿತಾರ್ಥವಾಗಿದ್ದ ಕನ್ಯೆಯರು ವಿವಾಹಗೀತೆಯನ್ನು ಹಾಡಲಿಲ್ಲ.
64 ಯಾಜಕರು ಕತ್ತಿಯಿಂದ ಕೊಲ್ಲಲ್ಪಟ್ಟರು,
    ಆದರೆ ವಿಧವೆಯರು ಅವರಿಗಾಗಿ ಗೋಳಾಡಲಿಲ್ಲ.
65 ಕೊನೆಗೆ, ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವ ಮನುಷ್ಯನಂತೆಯೂ
    ಅಮಲಿಳಿದು ಎಚ್ಚರಗೊಳ್ಳುತ್ತಿರುವ ಸೈನಿಕನಂತೆಯೂ ನಮ್ಮ ಯೆಹೋವನು ಎದ್ದನು.
66 ಆತನು ತನ್ನ ಶತ್ರುಗಳನ್ನು ಸದೆಬಡಿದು ಸೋಲಿಸಿದನು.
    ಆತನು ತನ್ನ ಶತ್ರುಗಳನ್ನು ಸೋಲಿಸಿ ಅವರನ್ನು ನಿತ್ಯನಿಂದೆಗೆ ಗುರಿಮಾಡಿದನು.
67 ಆದರೆ ಆತನು ಯೋಸೇಫನ ಕುಲವನ್ನು ತಿರಸ್ಕರಿಸಿದನು.
    ಎಫ್ರಾಯೀಮನ ಕುಲವನ್ನೂ ಆತನು ಆರಿಸಿಕೊಳ್ಳಲಿಲ್ಲ.
68 ಆತನು ಯೆಹೂದಕುಲವನ್ನೇ ಆರಿಸಿಕೊಂಡನು.
    ಆತನು ತನ್ನ ಪ್ರಿಯ ಚೀಯೋನ್ ಪರ್ವತವನ್ನೇ ಆರಿಸಿಕೊಂಡನು.
69 ಆತನು ತನ್ನ ಪವಿತ್ರಾಲಯವನ್ನು ಆ ಪರ್ವತದ ಮೇಲೆ ಕಟ್ಟಿ
    ಅದನ್ನು ಭೂಮಿಯಂತೆ ಶಾಶ್ವತಗೊಳಿಸಿದನು.
70 ಆತನು ದಾವೀದನನ್ನು ತನ್ನ ವಿಶೇಷ ಸೇವಕನನ್ನಾಗಿ ಆರಿಸಿಕೊಂಡನು.
    ದಾವೀದನು ಕುರಿಹಟ್ಟಿಗಳನ್ನು ಕಾಯುತ್ತಿದ್ದನು.
71 ಆತನು ದಾವೀದನಿಗೆ ಕುರಿಗಳನ್ನು ಪರಿಪಾಲನೆ ಮಾಡುವ ಕೆಲಸದಿಂದ ತೆಗೆದುಹಾಕಿ
    ತನ್ನ ಜನರಾದ ಯಾಕೋಬ್ಯರನ್ನೂ ತನ್ನ ಆಸ್ತಿಯಾದ ಇಸ್ರೇಲರನ್ನೂ ಪರಿಪಾಲಿಸುವ ಉದ್ಯೋಗವನ್ನು ಕೊಟ್ಟನು.
72 ದಾವೀದನು ಯಥಾರ್ಥಹೃದಯದಿಂದಲೂ
    ಬಹು ವಿವೇಕದಿಂದಲೂ ಇಸ್ರೇಲರನ್ನು ನಡೆಸಿದನು.

ಯೆಶಾಯ 26

ದೇವರಿಗೆ ಸ್ತೋತ್ರ ಗೀತೆ

26 ಆ ಸಮಯದಲ್ಲಿ ಜನರು ಈ ಹಾಡನ್ನು ಯೆಹೂದದಲ್ಲಿ ಹಾಡುವರು:

ಯೆಹೋವನು ನಮಗೆ ರಕ್ಷಣೆಯನ್ನು ಕೊಡುತ್ತಾನೆ.
    ನಮಗೆ ಬಲವಾದ ಪಟ್ಟಣವಿದೆ. ಅದಕ್ಕೆ ಬಲವಾದ ಗೋಡೆಗಳೂ ಕೋಟೆಗಳೂ ಇವೆ.
ದ್ವಾರಗಳನ್ನು ತೆರೆಯಿರಿ. ಒಳ್ಳೆಯ ಜನರು ಅದರಲ್ಲಿ ಪ್ರವೇಶಿಸುವರು.
    ಅವರು ದೇವರ ನಿಯಮಗಳನ್ನು ಅನುಸರಿಸುತ್ತಾರೆ.

ಯೆಹೋವನೇ, ನಿನ್ನಲ್ಲಿ ಭರವಸವಿಟ್ಟವರಿಗೆ
    ನೀನು ನಿಜವಾದ ಸಮಾಧಾನವನ್ನು ಅನುಗ್ರಹಿಸುವೆ.

ಆದ್ದರಿಂದ ಯೆಹೋವನ ಮೇಲೆ ಯಾವಾಗಲೂ ಭರವಸವಿಡಿರಿ.
    ಯಾಕೆಂದರೆ ನಿಮಗೆ ದೇವರಾದ ಯೆಹೋವನಲ್ಲಿ ಸುರಕ್ಷತೆಯ ಸ್ಥಳವಿದೆ.
ಆದರೆ ಯೆಹೋವನು ಗರ್ವದ ನಗರವನ್ನು ನಾಶಮಾಡುವನು.
    ಅಲ್ಲಿ ವಾಸಿಸುವವರನ್ನು ಆತನು ಶಿಕ್ಷಿಸುತ್ತಾನೆ.
ಯೆಹೋವನು ಆ ಉನ್ನತವಾದ ನಗರವನ್ನು ಧೂಳಿಗೆ ಹಾಕಿಬಿಡುವನು.
    ಅದು ಕಾಲುತುಳಿತಕ್ಕೆ ಈಡಾಗಿದೆ.
ಆಗ ದೀನರೂ ಬಡಜನರೂ ಆ ಅವಶೇಷಗಳ ಮೇಲೆ ನಡೆಯುವರು.

ಪ್ರಾಮಾಣಿಕತೆಯು ಒಳ್ಳೆಯವರ ಜೀವನ ಶೈಲಿ.
    ಅವರು ನೇರವಾದ ಮತ್ತು ಸತ್ಯವಾದ ಮಾರ್ಗವನ್ನು ಅನುಸರಿಸುವರು.
ಯೆಹೋವನೇ, ನೀನು ಆ ಮಾರ್ಗವನ್ನು ಅನುಸರಿಸಲು
    ಸುಲಭವಾಗುವಂತೆ ಮಾಡುವೆ.
ಆದರೆ ಯೆಹೋವನೇ, ನಾವು ನಿನ್ನ ನ್ಯಾಯವಿಚಾರಣೆಯ ರೀತಿಗಾಗಿ ಕಾಯುತ್ತಿದ್ದೇವೆ.
    ನಮ್ಮ ಆತ್ಮಗಳು ನಿನ್ನನ್ನೂ ನಿನ್ನ ನಾಮವನ್ನೂ ನೆನಪು ಮಾಡುತ್ತವೆ.
ನಮ್ಮ ಆತ್ಮವು ನಿನ್ನೊಂದಿಗೆ ರಾತ್ರಿಯಲ್ಲಿರಲು ಆಶಿಸುತ್ತದೆ.
    ನಮ್ಮೊಳಗಿರುವ ಆತ್ಮವು ನಿನ್ನ ಸಹವಾಸವನ್ನು ಬಯಸುತ್ತದೆ.
ಹೊಸ ದಿವಸಗಳ ಮುಂಜಾನೆಯಲ್ಲಿ ನಿನ್ನೊಂದಿಗಿರಲು ಆಶಿಸುತ್ತದೆ.
    ನಿನ್ನ ನ್ಯಾಯವು ಈ ಭೂಮಿಗೆ ಬಂದಾಗ ಜನರು ಜೀವನದ ಸತ್ಯಮಾರ್ಗವನ್ನು ಅರಿಯುವರು.
10 ದುಷ್ಟರಿಗೆ ದಯೆತೋರಿಸಿದರೆ
    ಅವರು ಸುಕಾರ್ಯಗಳನ್ನು ಮಾಡಲು ಕಲಿಯುವುದಿಲ್ಲ.
ದುಷ್ಟರು ಯಥಾರ್ಥರ ಲೋಕದಲ್ಲಿ ಜೀವಿಸಿದರೂ ಅವರು ದುಷ್ಕೃತ್ಯಗಳನ್ನೇ ಮಾಡುವರು.
    ಆ ದುಷ್ಟರು ಯೆಹೋವನ ಮಹತ್ವವನ್ನು ಎಂದೂ ಗಮನಿಸಲಾರರು.
11 ಆದರೆ ದೇವರೇ, ನೀನು ಅವರನ್ನು ಶಿಕ್ಷಿಸಿದರೆ
    ಅವರು ಅದನ್ನು ನೋಡುವರು.
ನಿನ್ನ ಜನರ ಮೇಲೆ ನಿನಗಿರುವ ಗಾಢಪ್ರೀತಿಯನ್ನು ಆ ದುಷ್ಟಜನರು ನೋಡಲಿ.
    ಆಗ ಅವರು ಅವಮಾನ ಹೊಂದುವರು.
    ನಿನ್ನ ಶತ್ರುಗಳು ತಮ್ಮ ದುಷ್ಟತನದ ಬೆಂಕಿಯಲ್ಲಿಯೇ ಸುಟ್ಟುಹೋಗುವರು.
12 ಯೆಹೋವನೇ, ನೀನು ಮಾಡಬಯಸಿದ ಎಲ್ಲವುಗಳಲ್ಲಿ ಯಶಸ್ವಿಯಾಗಿರುವೆ.
    ಆದ್ದರಿಂದ ನಮಗೆ ಶಾಂತಿಯನ್ನು ಅನುಗ್ರಹಿಸು.

ದೇವರು ತನ್ನ ಜನರಿಗೆ ಹೊಸ ಜೀವವನ್ನು ಕೊಡುವನು

13 ಯೆಹೋವನೇ, ನೀನೇ ನಮ್ಮ ದೇವರು. ಆದರೆ ಹಿಂದಿನ ಕಾಲದಲ್ಲಿ ನಾವು ಇತರ ಪ್ರಭುಗಳನ್ನು ಅನುಸರಿಸಿದೆವು.
ನಾವು ನಮ್ಮ ಒಡೆಯರುಗಳಿಗೆ ಸೇರಿದ್ದೆವು.
    ಆದರೆ ಈಗ ಜನರು ಒಂದೇ ಹೆಸರನ್ನು, ಅಂದರೆ ನಿನ್ನ ಹೆಸರನ್ನೇ ನೆನಪುಮಾಡಲಿ.
14 ಇತರ ದೇವರುಗಳಿಗೆ ಜೀವವಿಲ್ಲ.
    ಪ್ರೇತಗಳು ಸತ್ತವರೊಳಗಿಂದ ಏಳುವದಿಲ್ಲ.
ನೀನು ಅವುಗಳನ್ನು ನಾಶಮಾಡಲು ತೀರ್ಮಾನಿಸಿದೆ.
    ಅದರ ಬಗ್ಗೆ ನಮಗೆ ನೆನಪು ಹುಟ್ಟಿಸುವ ಎಲ್ಲಾ ವಿಚಾರಗಳನ್ನು ನೀನು ನಾಶಮಾಡಿದೆ.
15 ನೀನು ಪ್ರೀತಿಸುವ ಜನಾಂಗಕ್ಕೆ ನೀನು ಸಹಾಯ ಮಾಡಿದೆ.
    ಬೇರೆ ಜನಾಂಗದವರು ಅವರನ್ನು ಸೋಲಿಸದಂತೆ ಮಾಡಿದೆ.
16 ಯೆಹೋವನೇ, ಕಷ್ಟ ಬಂದಾಗ
    ಜನರಿಗೆ ನಿನ್ನ ನೆನಪಾಗುವುದು.
ನೀನು ಅವರನ್ನು ಶಿಕ್ಷಿಸಿದಾಗ
    ಅವರು ನಿನಗೆ ಮೌನ ಪ್ರಾರ್ಥನೆ ಮಾಡುವರು.
17 ಯೆಹೋವನೇ, ನಾವು ನಿನ್ನೊಂದಿಗೆ ಇಲ್ಲದಿರುವಾಗ
    ಪ್ರಸವವೇದನೆಯಿಂದ ನರಳುವ ಸ್ತ್ರೀಯರಂತಿದ್ದೇವೆ.
18 ಅದೇ ರೀತಿಯಲ್ಲಿ ನಾವು ನೋವನ್ನು ಅನುಭವಿಸುತ್ತೇವೆ.
    ನಾವು ಹೆರುವದು ಕೇವಲ ಗಾಳಿಯನ್ನೇ.
ನಾವು ಈ ಲೋಕದೊಳಗೆ ಹೊಸಜೀವಿಗಳನ್ನು ನಿರ್ಮಿಸುವದಿಲ್ಲ.
    ನಾವು ದೇಶಕ್ಕೆ ರಕ್ಷಣೆಯನ್ನು ತರುವದಿಲ್ಲ.
19 ಆದರೆ ಯೆಹೋವನು ಹೇಳುವುದೇನೆಂದರೆ,
“ನಿನ್ನ ಜನರು ಸತ್ತಿದ್ದಾರೆ.
    ಆದರೆ ಅವರು ಮತ್ತೆ ಬದುಕುವರು.
ನನ್ನ ಜನರ ದೇಹಗಳು
    ಸತ್ತವರೊಳಗಿಂದ ಏಳುವವು.
ಭೂಮಿಯ ಮೇಲೆ ಸತ್ತಿರುವ ಜನರೇ,
    ಎದ್ದುನಿಂತು ಸಂತೋಷಿಸಿರಿ.
ನಿಮ್ಮನ್ನು ಆವರಿಸಿದ ಮಂಜು
    ಮುಂಜಾನೆಯ ಬೆಳಕಿನಂತೆ ಪ್ರಕಾಶಿಸುತ್ತದೆ.
ಭೂಮಿಯು ತನ್ನಲ್ಲಿರುವ ಸತ್ತವರನ್ನು ಒಪ್ಪಿಸಿಕೊಡುವಾಗ
    ಪ್ರಾರಂಭವಾಗುವ ಹೊಸ ದಿನವನ್ನು ಅದು ಸೂಚಿಸುವದು.”

ಶಿಕ್ಷೆ ಅಥವಾ ಬಹುಮಾನ

20 ನನ್ನ ಜನರೇ, ನಿಮ್ಮ ನಿಮ್ಮ ಕೋಣೆಯೊಳಗೆ
    ಹೋಗಿ ಕದಮುಚ್ಚಿರಿ.
ಸ್ವಲ್ಪಕಾಲ ನೀವು ಅಲ್ಲಿಯೇ ಅಡಗಿಕೊಳ್ಳಿರಿ.
    ದೇವರ ಕೋಪ ತೀರುವ ತನಕ ಅಲ್ಲಿಯೇ ಅವಿತುಕೊಳ್ಳಿರಿ.
21 ಇಗೋ, ಈ ಲೋಕದ ಜನರು ಮಾಡಿದ ಪಾಪಕೃತ್ಯಗಳಿಗೆ
    ನ್ಯಾಯತೀರಿಸಲು ಯೆಹೋವನು ತನ್ನ ಸ್ಥಳದಿಂದ ಎದ್ದಿದ್ದಾನೆ.
ಭೂಮಿಯು ತನ್ನಲ್ಲಿರುವ ರಕ್ತವನ್ನು ತೋರಿಸುವದು.
    ಭೂಮಿಯು ಇನ್ನುಮುಂದೆ ಸತ್ತವರನ್ನು ಮರೆಮಾಡುವುದಿಲ್ಲ.

1 ಯೋಹಾನ 4

ಸುಳ್ಳುಬೋಧಕರ ವಿರುದ್ಧ ಯೋಹಾನನ ಎಚ್ಚರಿಕೆ

ನನ್ನ ಪ್ರಿಯ ಸ್ನೇಹಿತರೇ, ಈಗ ಲೋಕದಲ್ಲಿ ಅನೇಕ ಸುಳ್ಳುಪ್ರವಾದಿಗಳಿದ್ದಾರೆ. ಆದ್ದರಿಂದ ಪ್ರತಿಯೊಂದು ಆತ್ಮವನ್ನು ನಂಬಬೇಡಿ. ಆದರೆ ಆ ಆತ್ಮಗಳು ದೇವರಿಂದ ಬಂದವುಗಳೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ. ದೇವರಾತ್ಮವನ್ನು ನೀವು ಇದೇ ರೀತಿ ತಿಳಿದುಕೊಳ್ಳಲು ಸಾಧ್ಯ. “ಈ ಲೋಕಕ್ಕೆ ಮನುಷ್ಯನಾಗಿ ಬಂದ ಯೇಸುವೇ ಕ್ರಿಸ್ತನೆಂದು ನಾನು ನಂಬುತ್ತೇನೆ” ಎಂದು ಹೇಳುವ ಆತ್ಮವು ದೇವರಿಂದ ಬಂದದ್ದಾಗಿದೆ. ಯೇಸುವಿನ ಬಗ್ಗೆ ಹೀಗೆ ಹೇಳದ ಆತ್ಮವು ದೇವರಿಂದ ಬಂದದ್ದಲ್ಲ. ಅದು ಕ್ರಿಸ್ತವಿರೋಧಿಯ ಆತ್ಮ. ಕ್ರಿಸ್ತವಿರೋಧಿಯು ಬರುತ್ತಾನೆ ಎಂಬುದನ್ನು ನೀವು ಕೇಳಿರುವಿರಿ. ಕ್ರಿಸ್ತವಿರೋಧಿಯು ಈಗಾಗಲೇ ಈ ಲೋಕದಲ್ಲಿದ್ದಾನೆ.

ನನ್ನ ಪ್ರಿಯ ಮಕ್ಕಳೇ, ನೀವು ದೇವರಿಗೆ ಸೇರಿದವರು. ಆದ್ದರಿಂದ ನೀವು ಅವರನ್ನು (ಸುಳ್ಳುಬೋಧಕರು) ಸೋಲಿಸಿದ್ದೀರಿ. ಏಕೆಂದರೆ ನಿಮ್ಮಲ್ಲಿರುವಾತನು (ದೇವರು) ಈ ಲೋಕದ ಜನರಲ್ಲಿರುವವನಿಗಿಂತ (ಸೈತಾನ) ದೊಡ್ಡವನಾಗಿದ್ದಾನೆ. ಆ ಜನರು (ಸುಳ್ಳುಬೋಧಕರು) ಈ ಲೋಕಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಅವರು ಹೇಳುವುದೆಲ್ಲವೂ ಈ ಲೋಕಕ್ಕೆ ಸೇರಿವೆ. ಅವರು ಏನೇ ಹೇಳಿದರೂ ಲೋಕವು ಕೇಳುತ್ತದೆ. ನಾವಾದರೋ ದೇವರಿಂದ ಬಂದವರು. ಆದ್ದರಿಂದ ದೇವರನ್ನು ಬಲ್ಲ ಜನರು ನಮಗೆ ಕಿವಿಗೊಡುತ್ತಾರೆ, ಆದರೆ ದೇವರಿಂದ ಬಂದಿಲ್ಲದ ಜನರು ನಮ್ಮ ಮಾತುಗಳನ್ನು ಕೇಳುವುದಿಲ್ಲ. ಯಾವುದು ಸತ್ಯವನ್ನು ಬೋಧಿಸುವ ಆತ್ಮ, ಯಾವುದು ಸುಳ್ಳನ್ನು ಬೋಧಿಸುವ ಆತ್ಮ ಎಂಬುದನ್ನು ಹೀಗೆ ತಿಳಿದುಕೊಳ್ಳುತ್ತೇವೆ.

ಪ್ರೀತಿಯು ದೇವರಿಂದ ಬರುತ್ತದೆ

ಪ್ರಿಯ ಸ್ನೇಹಿತರೇ, ಪ್ರೀತಿಯು ದೇವರಿಂದ ಬಂದಿರುವುದರಿಂದ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಪ್ರೀತಿಸುವವನು ದೇವರಿಂದ ಹೊಸದಾಗಿ ಹುಟ್ಟಿದವನಾಗಿದ್ದಾನೆ. ಆದ್ದರಿಂದ ಅವನು ದೇವರನ್ನು ಬಲ್ಲವನಾಗಿರುತ್ತಾನೆ. ಪ್ರೀತಿಸದಿರುವವನು ದೇವರನ್ನು ತಿಳಿದಿಲ್ಲ. ಏಕೆಂದರೆ ದೇವರು ಪ್ರೀತಿಸ್ವರೂಪಿ. ದೇವರು ತನ್ನ ಒಬ್ಬನೇ ಮಗನ ಮೂಲಕ ನಮಗೆ ಜೀವವನ್ನು ಕೊಡುವುದಕ್ಕಾಗಿ ಆತನನ್ನು ಈ ಲೋಕಕ್ಕೆ ಕಳುಹಿಸಿದನು. ಹೀಗೆ ದೇವರು ತನ್ನ ಪ್ರೀತಿಯನ್ನು ನಮಗೆ ತೋರಿಸಿದ್ದಾನೆ. 10 ದೇವರಿಗೆ ನಮ್ಮ ಮೇಲಿರುವ ಪ್ರೀತಿಯೇ ನಿಜವಾದ ಪ್ರೀತಿ. ನಮಗೆ ದೇವರ ಮೇಲಿರುವ ಪ್ರೀತಿ ನಿಜವಾದ ಪ್ರೀತಿಯಲ್ಲ. ನಮ್ಮ ಪಾಪ ನಿವಾರಣೆಗಾಗಿ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು.

11 ಪ್ರಿಯ ಸ್ನೇಹಿತರೇ, ಹೀಗೆ ದೇವರು ನಮ್ಮನ್ನು ಬಹಳವಾಗಿ ಪ್ರೀತಿಸಿದನು! ಆದ್ದರಿಂದ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. 12 ದೇವರನ್ನು ಯಾರೂ ಎಂದೂ ನೋಡಿಲ್ಲ. ಆದರೆ ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರು ನಮ್ಮಲ್ಲಿ ನೆಲೆಸಿರುತ್ತಾನೆ. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರ ಪ್ರೀತಿಯು ನಮ್ಮಲ್ಲಿ ಪರಿಪೂರ್ಣವಾದ ಮಟ್ಟವನ್ನು ತಲುಪುತ್ತದೆ.

13 ನಾವು ದೇವರಲ್ಲಿ ನೆಲೆಸಿದ್ದೇವೆ ಮತ್ತು ದೇವರು ನಮ್ಮಲ್ಲಿ ನೆಲೆಸಿದ್ದಾನೆ ಎಂಬುದು ನಮಗೆ ತಿಳಿದದೆ. ದೇವರು ನಮಗೆ ತನ್ನ ಆತ್ಮವನ್ನು ಕೊಟ್ಟಿರುವುದರಿಂದ ಇದು ನಮಗೆ ತಿಳಿದಿದೆ. 14 ದೇವರು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿದ್ದನ್ನು ನಾವು ನೋಡಿದ್ದೇವೆ. ನಾವು ಈಗ ಜನರಿಗೆ ಹೇಳುತ್ತಿರುವುದು ಅದನ್ನೇ. 15 “ಯೇಸುವೇ ದೇವರ ಮಗನೆಂದು ನಾನು ನಂಬುತ್ತೇನೆ” ಎಂದು ಹೇಳುವವನಲ್ಲಿ ದೇವರು ನೆಲೆಸಿದ್ದಾನೆ ಮತ್ತು ಅವನು ದೇವರಲ್ಲಿ ನೆಲೆಸಿದ್ದಾನೆ. 16 ಹೀಗಿರಲಾಗಿ ನಮ್ಮ ಮೇಲೆ ದೇವರಿಗಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ನಾವು ಆ ಪ್ರೀತಿಯಲ್ಲಿ ಭರವಸವಿಟ್ಟಿದ್ದೇವೆ.

ದೇವರು ಪ್ರೀತಿಸ್ವರೂಪಿ. ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ. ದೇವರೂ ಅವನಲ್ಲಿ ನೆಲೆಸಿದ್ದಾನೆ. 17 ಹೀಗೆ ಪ್ರೀತಿಯು ನಮ್ಮಲ್ಲಿ ಪರಿಪೂರ್ಣವಾಗುವುದರಿಂದ ದೇವರು ನಮಗೆ ತೀರ್ಪು ನೀಡುವ ದಿನದಂದು ನಾವು ನಿರ್ಭಯದಿಂದಿರುತ್ತೇವೆ. ಈ ಲೋಕದಲ್ಲಿ ನಾವು ಆತನಂತೆಯೇ (ಕ್ರಿಸ್ತನು ಅಥವಾ ದೇವರು) ಇರುವುದರಿಂದ ನಾವು ಧೈರ್ಯದಿಂದಿರುತ್ತೇವೆ. 18 ದೇವರ ಪ್ರೀತಿಯು ಎಲ್ಲಿರುವುದೋ ಅಲ್ಲಿ ಭಯವಿರುವುದಿಲ್ಲ. ಏಕೆಂದರೆ ದೇವರ ಪರಿಪೂರ್ಣ ಪ್ರೀತಿಯು ಭಯವನ್ನು ತೆಗೆದುಹಾಕುತ್ತದೆ. ದೇವರ ದಂಡನೆಯೇ ಒಬ್ಬ ವ್ಯಕ್ತಿಯಲ್ಲಿ ಭಯವನ್ನು ಉಂಟುಮಾಡುವಂಥದ್ದು. ಆದ್ದರಿಂದ ಭಯವಿರುವವನಲ್ಲಿ ದೇವರ ಪ್ರೀತಿ ಪರಿಪೂರ್ಣವಾಗಿಲ್ಲ.

19 ದೇವರು ನಮ್ಮನ್ನು ಮೊದಲು ಪ್ರೀತಿಸಿದ್ದರಿಂದಲೇ ನಾವು ಆತನನ್ನು ಪ್ರೀತಿಸುತ್ತೇವೆ. 20 “ನಾನು ದೇವರನ್ನು ಪ್ರೀತಿಸುತ್ತೇನೆ” ಎಂದು ಹೇಳಿಕೊಳ್ಳುವವನು ತನ್ನ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ದ್ವೇಷಿಸಿದರೆ, ಅವನು ಸುಳ್ಳುಗಾರನಾಗಿದ್ದಾನೆ. ಅವನು ತನ್ನ ಸಹೋದರನನ್ನು ಕಣ್ಣಾರೆ ನೋಡುತ್ತಿದ್ದರೂ ಅವನನ್ನು ದ್ವೇಷಿಸುತ್ತಾನೆ. ಆದ್ದರಿಂದ ಅವನು ದೇವರನ್ನು ಪ್ರೀತಿಸಲಾಗುವುದಿಲ್ಲ. ಏಕೆಂದರೆ ಅವನು ದೇವರನ್ನು ಎಂದೂ ನೋಡಿಲ್ಲ! 21 ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬುದು ದೇವರು ನಮಗೆ ನೀಡಿರುವ ಆಜ್ಞೆಯಾಗಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International