M’Cheyne Bible Reading Plan
ಇಸ್ರೇಲರು ಈಜಿಪ್ಟಿನಿಂದ ಪ್ರಯಾಣ ಮಾಡಿದ ಸ್ಥಳಗಳ ಪಟ್ಟಿ
33 ಮೋಶೆ ಮತ್ತು ಆರೋನರ ನೇತೃತ್ವದಲ್ಲಿ ಈಜಿಪ್ಟ್ ದೇಶದಿಂದ ಹೊರಬಂದ ಇಸ್ರೇಲರ ಪ್ರಯಾಣಗಳ ವಿವರ: 2 ಮೋಶೆ ಯೆಹೋವನ ಅಪ್ಪಣೆಯನ್ನು ಹೊಂದಿ ಇಸ್ರೇಲರು ಪ್ರಯಾಣಗಳಲ್ಲಿ ಇಳಿದುಕೊಂಡ ಸ್ಥಳಗಳ ಹೆಸರುಗಳನ್ನು ಬರೆದನು.
3 ಮೊದಲನೆ ತಿಂಗಳಿನ ಹದಿನೈದನೆಯ ದಿನದಲ್ಲಿ ಅವರು ರಮ್ಸೇಸ್ ಪಟ್ಟಣವನ್ನು ಬಿಟ್ಟು ಹೊರಟರು. ಪಸ್ಕಹಬ್ಬದ ಮರುದಿನದಲ್ಲಿ ಇಸ್ರೇಲರು ಜಯದೊಂದಿಗೆ ತಮ್ಮ ಕೈಗಳನ್ನು ಎತ್ತಿಕೊಂಡು ಈಜಿಪ್ಟಿನಿಂದ ಹೊರಗೆ ನಡೆದರು. ಈಜಿಪ್ಟಿನ ಜನರೆಲ್ಲರೂ ಇದನ್ನು ನೋಡಿದರು. 4 ಈಜಿಪ್ಟಿನವರು ಯೆಹೋವನು ಕೊಂದುಹಾಕಿದ ತಮ್ಮ ಚೊಚ್ಚಲು ಮಕ್ಕಳನ್ನು ಹೂಳಿಡುತ್ತಿದ್ದರು. ಯೆಹೋವನು ಈಜಿಪ್ಟಿನ ದೇವರುಗಳನ್ನು ಶಿಕ್ಷಿಸಿದನು.
5 ಇಸ್ರೇಲರು ರಮ್ಸೇಸ್‌ನಿಂದ ಹೊರಟು ಸುಕ್ಕೋತಿಗೆ ಪ್ರಯಾಣಮಾಡಿ ಅಲ್ಲಿ ಪಾಳೆಯ ಮಾಡಿಕೊಂಡರು. 6 ಸುಕ್ಕೋತಿನಿಂದ ಅವರು ಏತಾಮಿಗೆ ಪ್ರಯಾಣಮಾಡಿ ಅಲ್ಲಿ ಪಾಳೆಯ ಮಾಡಿಕೊಂಡರು. ಜನರು ಅಲ್ಲಿ ಮರುಭೂಮಿಯ ಗಡಿಯಲ್ಲಿ ಪಾಳೆಯಮಾಡಿಕೊಂಡರು. 7 ಅವರು ಏತಾಮನ್ನು ಬಿಟ್ಟು ಪೀಹಹೀರೋತಿಗೆ ಪ್ರಯಾಣಮಾಡಿ ಅಲ್ಲಿ ಪಾಳೆಯ ಮಾಡಿಕೊಂಡರು. ಇದು ಬಾಳ್ಚೆಫೋನಿನ ಹತ್ತಿರವಿತ್ತು. ಜನರು ಮಿಗ್ದೋಲಿನ ಬಳಿ ಪಾಳೆಯ ಮಾಡಿಕೊಂಡರು.
8 ಜನರು ಪೀಹಹೀರೋತನ್ನು ಬಿಟ್ಟು ಸಮುದ್ರದ ಮಧ್ಯದಲ್ಲೇ ನಡೆದು ಮರುಭೂಮಿಗೆ ಬಂದರು. ಅವರು ಏತಾಮ್ ಮರುಭೂಮಿಯಲ್ಲಿ ಮೂರು ದಿನಗಳವರೆಗೆ ಪ್ರಯಾಣಮಾಡಿ ಅಲ್ಲಿ ಪಾಳೆಯ ಮಾಡಿಕೊಂಡರು.
9 ಜನರು ಮಾರವನ್ನು ಬಿಟ್ಟು ಏಲೀಮಿಗೆ ಪ್ರಯಾಣ ಮಾಡಿ ಅಲ್ಲಿ ಇಳಿದುಕೊಂಡರು. ಅಲ್ಲಿ ಹನ್ನೆರಡು ನೀರಿನ ಒರತೆಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದವು.
10 ಜನರು ಏಲೀಮನ್ನು ಬಿಟ್ಟು ಕೆಂಪುಸಮುದ್ರದ ಹತ್ತಿರ ಪಾಳೆಯ ಮಾಡಿಕೊಂಡರು.
11 ಕೆಂಪುಸಮುದ್ರದಿಂದ ಹೊರಟು ಸೀನ್ ಅರಣ್ಯದಲ್ಲಿ ಪಾಳೆಯ ಮಾಡಿಕೊಂಡರು.
12 ಸೀನ್ ಅರಣ್ಯದಿಂದ ಹೊರಟು ದೊಫ್ಕದಲ್ಲಿ ಇಳಿದುಕೊಂಡರು.
13 ದೊಫ್ಕದಿಂದ ಹೊರಟು ಆಲೂಷಿನಲ್ಲಿ ಇಳಿದುಕೊಂಡರು.
14 ಆಲೂಷಿನಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಅಲ್ಲಿ ಜನರಿಗೆ ಕುಡಿಯಲು ನೀರು ಇರಲಿಲ್ಲ.
15 ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲಿ ಇಳಿದುಕೊಂಡರು.
16 ಸೀನಾಯಿ ಮರುಭೂಮಿಯಿಂದ ಹೊರಟು ಕಿಬ್ರೋತ್ ಹತಾವದಲ್ಲಿ ಇಳಿದುಕೊಂಡರು.
17 ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿನಲ್ಲಿ ಇಳಿದುಕೊಂಡರು.
18 ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು.
19 ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚಿನಲ್ಲಿ ಇಳಿದುಕೊಂಡರು.
20 ರಿಮ್ಮೋನ್ ಪೆರೆಚಿನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು.
21 ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು.
22 ರಿಸ್ಸದಿಂದ ಹೊರಟು ಕೆಹೇಲಾತದಲ್ಲಿ ಇಳಿದುಕೊಂಡರು.
23 ಕೆಹೇಲಾತದಿಂದ ಹೊರಟು ಶೆಫೆರ್ ಬೆಟ್ಟದಲ್ಲಿ ಇಳಿದುಕೊಂಡರು.
24 ಶೆಫೆರ್ ಬೆಟ್ಟದಿಂದ ಹೊರಟು ಹರಾದದಲ್ಲಿ ಇಳಿದುಕೊಂಡರು.
25 ಹರಾದದಿಂದ ಹೊರಟು ಮಖೇಲೋತಿನಲ್ಲಿ ಇಳಿದುಕೊಂಡರು.
26 ಮಖೇಲೋತಿನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು.
27 ತಹತಿನಿಂದ ಹೊರಟು ತೆರಹದಲ್ಲಿ ಇಳಿದುಕೊಂಡರು.
28 ತೆರಹದಿಂದ ಹೊರಟು ಮಿತ್ಕದಲ್ಲಿ ಇಳಿದುಕೊಂಡರು.
29 ಮಿತ್ಕದಿಂದ ಹೊರಟು ಹಷ್ಮೋನದಲ್ಲಿ ಇಳಿದುಕೊಂಡರು.
30 ಹಷ್ಮೋನದಿಂದ ಹೊರಟು ಮೋಸೇರೋತಿನಲ್ಲಿ ಇಳಿದುಕೊಂಡರು.
31 ಮೋಸೇರೋತಿನಿಂದ ಹೊರಟು ಬೆನೇಯಾಕಾನಿನಲ್ಲಿ ಇಳಿದುಕೊಂಡರು.
32 ಬೆನೇಯಾಕಾನಿನಿಂದ ಹೊರಟು ಹೋರ್ಹಗಿದ್ಗಾದ್‌ನಲ್ಲಿ ಇಳಿದುಕೊಂಡರು.
33 ಹೋರ್ಹಗಿದ್ಗಾದ್‌ನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು.
34 ಯೊಟ್ಬಾತದಿಂದ ಹೊರಟು ಅಬ್ರೋನದಲ್ಲಿ ಇಳಿದುಕೊಂಡರು.
35 ಅಬ್ರೋನದಿಂದ ಹೊರಟು ಎಚ್ಯೋನ್‌ಗೆಬೆರಿನಲ್ಲಿ ಇಳಿದುಕೊಂಡರು.
36 ಎಚ್ಯೋನ್‌ಗೆಬೆರಿನಿಂದ ಹೊರಟು ಚಿನ್ ಮರುಭೂಮಿಯಲ್ಲಿ ಇಳಿದುಕೊಂಡರು. ಅದು ಕಾದೇಶ್.
37 ಕಾದೇಶಿನಿಂದ ಹೊರಟು ಎದೋಮ್ಯರ ದೇಶದ ಅಂಚಿನಲ್ಲಿರುವ ಹೋರ್ ಬೆಟ್ಟದ ಬಳಿಯಲ್ಲಿ ಇಳಿದುಕೊಂಡರು. 38 ಮಹಾಯಾಜಕನಾದ ಆರೋನನು ಯೆಹೋವನಿಂದ ಆಜ್ಞಾಪಿಸಲ್ಪಟ್ಟ ಹೋರ್ ಬೆಟ್ಟವನ್ನು ಹತ್ತಿದನು. ಇಸ್ರೇಲರು ಈಜಿಪ್ಟನ್ನು ಬಿಟ್ಟು ಹೊರಟ ನಂತರ ನಲವತ್ತನೆ ವರ್ಷದ ಐದನೆ ತಿಂಗಳಿನ ಮೊದಲನೆ ದಿನದಲ್ಲಿ ಆರೋನನು ಅಲ್ಲಿ ಪ್ರಾಣಬಿಟ್ಟನು. 39 ಆರೋನನು “ಹೋರ್” ಬೆಟ್ಟದಲ್ಲಿ ಸತ್ತಾಗ ಅವನಿಗೆ ನೂರಿಪ್ಪತ್ಮೂರು ವರ್ಷ ವಯಸ್ಸಾಗಿತ್ತು.
40 ಇಸ್ರೇಲರು ಬರುತ್ತಾರೆಂಬ ಸುದ್ದಿಯನ್ನು ನೆಗೆವ್‌ನಲ್ಲಿ ವಾಸವಾಗಿದ್ದ ಅರಾದ್ ಪಟ್ಟಣದ ಅರಸನು ಕೇಳಿದನು. 41 ಇಸ್ರೇಲರು ಹೋರ್ ಬೆಟ್ಟದಿಂದ ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು.
42 ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು.
43 ಪೂನೋನಿನಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು.
44 ಓಬೋತಿನಿಂದ ಹೊರಟು ಮೋವಾಬ್ಯರ ಸರಹದ್ದಿನಲ್ಲಿರುವ ಜೋರ್ಡನ್ ಆಚೆ ಇರುವ ಇಯ್ಯಿಮಿನಲ್ಲಿ ಇಳಿದುಕೊಂಡರು.
45 ಇಯ್ಯಿಮಿನಿಂದ ಹೊರಟು ದೀಬೋನ್‌ಗಾದಿನಲ್ಲಿ ಇಳಿದುಕೊಂಡರು.
46 ದೀಬೋನ್‌ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದುಕೊಂಡರು.
47 ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ಅಬಾರೀಮ್ ಬೆಟ್ಟಗಳಲ್ಲಿರುವ ನೆಬೋವಿನ ಪೂರ್ವದಿಕ್ಕಿನಲ್ಲಿ ಇಳಿದುಕೊಂಡರು.
48 ಅಬಾರೀಮ್ ಬೆಟ್ಟಗಳಿಂದ ಹೊರಟು, ಜೆರಿಕೊ ಪಟ್ಟಣದ ಆಚೆಕಡೆಯಲ್ಲಿರುವ ಜೋರ್ಡನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿ ಇಳಿದುಕೊಂಡರು. 49 ಅವರು ಮೋವಾಬ್ಯರ ಮೈದಾನದಲ್ಲಿ ಬೇತ್‌ಯೆಷೀಮೋತಿನಿಂದ ಅಬೇಲ್ ಶಿಟ್ಟೀಮಿನವರೆಗೂ ಜೋರ್ಡನ್ ನದಿಯ ತೀರದಲ್ಲಿ ಇಳಿದುಕೊಂಡರು.
50 ಆ ಸ್ಥಳದಲ್ಲಿದ್ದಾಗ ಯೆಹೋವನು ಮೋಶೆಯೊಡನೆ ಮಾತಾಡಿ ಹೇಳಿದ್ದೇನೆಂದರೆ: 51 “ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸು: ನೀವು ಜೋರ್ಡನ್ ಹೊಳೆದಾಟಿ ಕಾನಾನ್ ದೇಶವನ್ನು ಸೇರಿದಾಗ 52 ಆ ದೇಶದ ನಿವಾಸಿಗಳನ್ನೆಲ್ಲ ಹೊರಡಿಸಿಬಿಟ್ಟು ಅವರ ಕೆತ್ತಿದ ಪ್ರತಿಮೆಗಳನ್ನು ಮತ್ತು ಲೋಹದ ವಿಗ್ರಹಗಳನ್ನು ನಾಶಮಾಡಿ ಅವರ ಪೂಜಾಸ್ಥಳಗಳನ್ನು ಹಾಳುಮಾಡಬೇಕು. 53 ನಾನು ನಿಮಗೆ ಆ ದೇಶವನ್ನು ಸ್ವದೇಶವಾಗುವುದಕ್ಕೆ ಕೊಟ್ಟಿದ್ದೇನೆ. ನೀವು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸಬೇಕು. 54 ನೀವು ಚೀಟುಹಾಕಿ ಆ ದೇಶವನ್ನು ನಿಮ್ಮನಿಮ್ಮ ಕುಲಗಳಿಗೆ ಹಂಚಿಕೊಳ್ಳಬೇಕು. ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆ ಮಂದಿಯುಳ್ಳ ಕುಲಕ್ಕೆ ಕಡಿಮೆಯಾಗಿಯೂ ಸ್ವಾಸ್ತ್ಯವು ದೊರೆಯಬೇಕು. ಒಂದೊಂದು ಕುಲಕ್ಕೆ ಯಾವ ಯಾವ ಸ್ಥಳವನ್ನು ಸೂಚಿಸುತ್ತದೋ ಆ ಸ್ಥಳದಲ್ಲಿಯೇ ಆ ಕುಲದ ಸ್ವಾಸ್ತ್ಯವಿರಬೇಕು. ಒಂದೊಂದು ಕುಲದ ಕುಟುಂಬಗಳು ಒಂದೇ ಪ್ರದೇಶದಲ್ಲಿರಬೇಕು.
55 “ನೀವು ಆ ದೇಶದ ನಿವಾಸಿಗಳನ್ನು ಹೊರಡಿಸದೆ ಹೋದರೆ, ಅವರು ಉಳಿದುಕೊಂಡು ನಿಮ್ಮ ಕಣ್ಣುಗಳಲ್ಲಿ ಮರದ ಚೂರಿನಂತೆಯೂ ನಿಮ್ಮ ಪಕ್ಕೆಗಳಲ್ಲಿ ಮುಳ್ಳುಗಳಂತೆಯೂ ಇರುವರು. ನೀವು ವಾಸಿಸುವ ದೇಶದಲ್ಲಿ ನಿಮಗೆ ತೊಂದರೆ ಮಾಡುವರು. 56 ಅದಲ್ಲದೆ, ನಾನು ಅವರಿಗೆ ಏನನ್ನು ಮಾಡಲು ಯೋಚಿಸಿದೆನೋ ಅದನ್ನು ನಿಮಗೆ ಮಾಡುವೆನು.”
ರಚನೆಗಾರ: ಆಸಾಫ.
78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
ನನ್ನ ನುಡಿಗಳನ್ನು ಲಾಲಿಸಿರಿ.
2 ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
3 ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
4 ನಾವು ಅವುಗಳನ್ನು ಮರೆಯುವುದೇ ಇಲ್ಲ.
ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
5 ಆತನು ಯಾಕೋಬನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು.
ಆತನು ಇಸ್ರೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
ಆತನು ನಮ್ಮ ಪೂರ್ವಿಕರಿಗೆ ಆಜ್ಞೆಗಳನ್ನು ಕೊಟ್ಟನು.
ನಿಮ್ಮ ಸಂತತಿಗಳವರಿಗೆ ಧರ್ಮಶಾಸ್ತ್ರವನ್ನು ಉಪದೇಶಿಸಿರಿ ಎಂದು ಆತನು ನಮ್ಮ ಪೂರ್ವಿಕರಿಗೆ ಹೇಳಿದನು.
6 ಹೊಸ ತಲೆಮಾರುಗಳವರು ಬೆಳೆದು ದೊಡ್ಡವರಾದಾಗ ತಮ್ಮ ಮಕ್ಕಳಿಗೆ ಅವುಗಳನ್ನು ಹೇಳಿಕೊಡುವರು.
ಹೀಗೆ ಜನರು ಕೊನೆಯ ತಲೆಮಾರಿನವರೆಗೂ ಧರ್ಮಶಾಸ್ತ್ರವನ್ನು ತಿಳಿದಿರುವರು.
7 ಆಗ ಅವರೆಲ್ಲರೂ ದೇವರಲ್ಲಿ ಭರವಸೆ ಇಡುವರು.
ದೇವರ ಮಹತ್ಕಾರ್ಯಗಳನ್ನು ಅವರು ಮರೆಯುವುದೇ ಇಲ್ಲ.
ಅವರು ಜಾಗ್ರತೆಯಿಂದ ದೇವರ ಆಜ್ಞೆಗಳಿಗೆ ವಿಧೇಯರಾಗುವರು.
8 ಜನರು ತಮ್ಮ ಮಕ್ಕಳಿಗೆ ದೇವರ ಆಜ್ಞೆಗಳನ್ನು ಉಪದೇಶಿಸಿದರೆ,
ಮಕ್ಕಳು ತಮ್ಮ ಪೂರ್ವಿಕರಂತಾಗುವುದಿಲ್ಲ.
ಅವರ ಪೂರ್ವಿಕರು ದೇವರಿಗೆ ವಿಮುಖರಾಗಿ ಆತನಿಗೆ ವಿಧೇಯರಾಗಲಿಲ್ಲ.
ಅವರು ಮೊಂಡರಾಗಿದ್ದರು.
ಅವರು ದೇವರಿಗೆ ನಂಬಿಗಸ್ತರಾಗಿರಲಿಲ್ಲ.
9 ಎಫ್ರಾಯೀಮ್ ಕುಲದವರು ಬಿಲ್ಲುಗಳಿಂದ ಸುಸಜ್ಜಿತರಾಗಿದ್ದರು.
ಆದರೆ ಅವರು ಯುದ್ಧದಿಂದ ಓಡಿಹೋದರು.
10 ದೇವರೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಅವರು ಪಾಲಿಸಲಿಲ್ಲ.
ಅವರು ಆತನ ಉಪದೇಶಗಳಿಗೆ ವಿಧೇಯರಾಗಲಿಲ್ಲ.
11 ದೇವರ ಮಹತ್ಕಾರ್ಯಗಳನ್ನೂ ಆತನು ಅವರಿಗೆ ತೋರಿಸಿದ ಸೂಚಕಕಾರ್ಯಗಳನ್ನೂ
ಎಫ್ರಾಯಿಮಿನ ಜನರು ಮರೆತುಬಿಟ್ಟರು.
12 ಈಜಿಪ್ಟಿನ ಸೋನ್ ಪ್ರದೇಶದಲ್ಲಿ ಅವರ ಪೂರ್ವಿಕರಿಗೆ
ದೇವರು ತನ್ನ ಮಹಾಶಕ್ತಿಯನ್ನು ತೋರಿಸಿದನು.
13 ದೇವರು ಕೆಂಪು ಸಮುದ್ರವನ್ನು ಇಬ್ಭಾಗಮಾಡಿ ಅವರನ್ನು ದಾಟಿಸಿದನು.
ಅವರ ಎರಡು ಕಡೆಗಳಲ್ಲಿ ನೀರು ಬಲವಾದ ಗೋಡೆಯಂತೆ ನಿಂತುಕೊಂಡಿತು.
14 ಹಗಲಿನಲ್ಲಿ ಮೋಡದಿಂದಲೂ
ಇರುಳಿನಲ್ಲಿ ಬೆಂಕಿಯ ಬೆಳಕಿನಿಂದಲೂ ಅವರನ್ನು ಮುನ್ನಡೆಸಿದನು.
15 ದೇವರು ಅರಣ್ಯದಲ್ಲಿ ಬಂಡೆಯನ್ನು ಸೀಳಿ ಅವರಿಗೆ ಸಾಗರದಿಂದಲೋ
ಎಂಬಂತೆ ನೀರನ್ನು ಸಮೃದ್ಧಿಕರವಾಗಿ ಒದಗಿಸಿದನು.
16 ಆತನು ಬಂಡೆಯಿಂದ ನೀರನ್ನು
ನದಿಯಂತೆ ಬರಮಾಡಿದನು.
17 ಆದರೂ ಅವರು ಅರಣ್ಯದಲ್ಲಿ
ಮಹೋನ್ನತನಾದ ಆತನ ವಿರೋಧವಾಗಿ ಪಾಪಮಾಡುತ್ತಾ ಬಂದರು.
18 ಬಳಿಕ ಅವರು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು
ಇಷ್ಟಪದಾರ್ಥವನ್ನು ಕೇಳಿ ದೇವರನ್ನೇ ಪರೀಕ್ಷೆಗೊಡ್ಡಿದರು.
19 ಅವರು ಆತನಿಗೆ ವಿರೋಧವಾಗಿ ಮಾತಾಡಿ,
“ದೇವರು ನಮಗೆ ಅರಣ್ಯದಲ್ಲಿ ಆಹಾರವನ್ನು ಕೊಡಬಲ್ಲನೇ?
20 ಆತನು ಬಂಡೆಯನ್ನು ಹೊಡೆದಾಗ ನೀರು ಪ್ರವಾಹದಂತೆ ಹೊರಬಂದದ್ದೇನೊ ನಿಜ!
ಆದರೆ ಆತನು ನಮಗೆ ರೊಟ್ಟಿಯನ್ನೂ ಮಾಂಸವನ್ನೂ ಕೊಡಬಲ್ಲನೇ!” ಎಂದು ಹೇಳಿದರು.
21 ಆ ಜನರು ಹೇಳಿದ್ದನ್ನು ಕೇಳಿ
ಯೆಹೋವನು ಕೋಪಗೊಂಡನು.
ಆತನು ಯಾಕೋಬ್ಯರ ಮೇಲೆಯೂ
ಇಸ್ರೇಲರ ಮೇಲೆಯೂ ಕೋಪಗೊಂಡನು.
22 ಯಾಕೆಂದರೆ ಜನರು ಆತನಲ್ಲಿ ಭರವಸೆ ಇಡಲಿಲ್ಲ.
ದೇವರು ತಮ್ಮನ್ನು ರಕ್ಷಿಸಬಲ್ಲನೆಂದು ಅವರು ನಂಬಲಿಲ್ಲ.
23 ಆಗ ಆತನು ಉನ್ನತದಲ್ಲಿರುವ ಮೇಘಗಳನ್ನು ತೆರೆದನು,
ಅವರ ಆಹಾರಕ್ಕಾಗಿ ಮನ್ನವನ್ನು ಮಳೆಗರೆಸಿದನು.
24 ಆಕಾಶದ ದ್ವಾರಗಳು ತೆರೆದು
ಆಕಾಶದ ಉಗ್ರಾಣದಿಂದ ಧಾನ್ಯವು ಸುರಿದಂತೆ ಮನ್ನವು ಸುರಿಯಿತು.
25 ಜನರು ದೇವದೂತರ ಆಹಾರವನ್ನು ತಿಂದರು.
ಅವರನ್ನು ತೃಪ್ತಿಗೊಳಿಸುವುದಕ್ಕಾಗಿ ಆತನು ಆಹಾರವನ್ನು ಹೇರಳವಾಗಿ ಒದಗಿಸಿದನು.
26 ಬಳಿಕ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು.
ಆಗ ಲಾವಕ್ಕಿಗಳು ಮಳೆಯಂತೆ ಅವರಿದ್ದಲ್ಲಿಗೆ ಬಂದು ಬಿದ್ದವು.
27 ಆತನು ತೇಮಾನಿನಿಂದ ಗಾಳಿಬೀಸುವಂತೆ ಮಾಡಿದಾಗ
ಪಕ್ಷಿಗಳು ಸಮುದ್ರದ ಮರಳಿನಷ್ಟು ಅವರಿದ್ದಲ್ಲಿ ಬಂದು ಬಿದ್ದವು.
28 ಪಕ್ಷಿಗಳು ಪಾಳೆಯದ ಮಧ್ಯಭಾಗದಲ್ಲಿ,
ಆ ಜನರ ಗುಡಾರಗಳ ಸುತ್ತಲೆಲ್ಲಾ ಬಿದ್ದವು.
29 ಅವರಿಗೆ ತಿನ್ನಲು ಹೇರಳವಾಗಿತ್ತು.
ಆದರೆ ತಮ್ಮ ಆಸೆಗಳೇ ತಮ್ಮನ್ನು ಪಾಪಕ್ಕೆ ನಡೆಸುವಂತೆ ಅವರು ಮಾಡಿದರು.
30 ಅವರು ತಮ್ಮ ಆಸೆಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲಿಲ್ಲ.
ಆ ಲಾವಕ್ಕಿಗಳ ರಕ್ತವನ್ನು ಪೂರ್ತಿಯಾಗಿ ತೆಗೆಯುವ ಮೊದಲೇ ಅವುಗಳ ಮಾಂಸವನ್ನು ತಿಂದುಬಿಟ್ಟರು.
31 ಆಗ ಆತನು ಅವರ ಮೇಲೆ ಬಹು ಕೋಪಗೊಂಡು, ಅವರಲ್ಲಿ ಅನೇಕರನ್ನು ಕೊಂದುಹಾಕಿದನು.
ದೃಢಕಾಯರಾಗಿದ್ದ ಅನೇಕ ಯುವಕರಿಗೆ ಆತನು ಸಾವನ್ನು ಬರಮಾಡಿದನು.
32 ಆದರೂ ಅವರು ಪಾಪಮಾಡುತ್ತಾ ಬಂದರು.
ಆತನ ಅದ್ಭುತಕಾರ್ಯಗಳನ್ನು ಅವರು ನಂಬದೆ ಹೋದರು.
33 ಆದ್ದರಿಂದ ಆತನು ಆಪತ್ತುಗಳನ್ನು ಬರಮಾಡಿ
ಅವರ ಅಯೋಗ್ಯ ಜೀವಿತಗಳನ್ನು ಉಸಿರಿನಂತೆ ಅಂತ್ಯಗೊಳಿಸಿದನು.
34 ಅವರಲ್ಲಿ ಕೆಲವರನ್ನು ದೇವರು ಕೊಂದಾಗಲೆಲ್ಲಾ,
ಉಳಿದವರು ಆತನ ಕಡೆಗೆ ತಿರುಗಿಕೊಂಡು ಓಡಿ ಬರುತ್ತಿದ್ದರು.
35 ದೇವರೇ ತಮ್ಮ ಆಶ್ರಯಸ್ಥಾನವೆಂಬುದನ್ನೂ
ಮಹೋನ್ನತನಾದ ದೇವರೇ ತಮ್ಮ ರಕ್ಷಕನೆಂಬುದನ್ನೂ ಅವರು ಜ್ಞಾಪಿಸಿಕೊಳ್ಳುತ್ತಿದ್ದರು.
36 ಆದರೆ ಅವರು ಯಥಾರ್ಥವಾಗಿರದೆ ಸುಳ್ಳಾಡಿದರು.
37 ಅವರ ಹೃದಯಗಳು ಆತನಲ್ಲಿ ನೆಲೆಗೊಂಡಿರಲಿಲ್ಲ.
ಆತನ ಒಡಂಬಡಿಕೆಗೆ ಅವರು ನಂಬಿಗಸ್ತರಾಗಿರಲಿಲ್ಲ.
ದೇವರಿಗೆ ಸ್ತೋತ್ರಗಾನ
25 ಯೆಹೋವನೇ, ನೀನೇ ನನ್ನ ದೇವರು.
ನಿನ್ನನ್ನು ಗೌರವಿಸಿ ನಿನ್ನ ನಾಮವನ್ನು ಸ್ತುತಿಸುವೆನು.
ನೀನು ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
ಬಹಳ ಕಾಲದ ಹಿಂದೆ ನೀನು ಹೇಳಿರುವ ವಿಷಯಗಳು ಸತ್ಯವೇ ಸರಿ.
ನೀನು ಮುಂತಿಳಿಸಿದಂತೆಯೇ ಎಲ್ಲವೂ ಸಂಭವಿಸಿದವು.
2 ನೀನು ವಿದೇಶದ ಪಟ್ಟಣವನ್ನು ಕೆಡವಿಹಾಕಿರುವೆ.
ಆ ಪಟ್ಟಣವು ಮಹಾಗೋಡೆಗಳಿಂದ ಸಂರಕ್ಷಿಸಲ್ಪಟ್ಟದ್ದಾಗಿತ್ತು.
ಆದರೆ ಈಗ ಅದು ಕೇವಲ ಕಲ್ಲುಗಳ ರಾಶಿ.
ಅರಮನೆಯು ಕೆಡವಲ್ಪಟ್ಟಿದೆ.
ಅದನ್ನು ತಿರುಗಿ ಕಟ್ಟಲು ಸಾಧ್ಯವೇ ಇಲ್ಲ.
3 ಬಲಾಢ್ಯ ದೇಶಗಳ ಜನರು ನಿನ್ನನ್ನು ಸನ್ಮಾನಿಸುವರು.
ಬಲಿಷ್ಠ ನಗರಗಳ ಬಲಶಾಲಿಗಳು ನಿನಗೆ ಭಯಪಡುವರು.
4 ಯೆಹೋವನೇ, ನೀನೇ ನಮ್ಮ ಆಶ್ರಯವು. ಬಡವರಿಗೆ ನೀನೇ ಆಧಾರ.
ಅವರ ಸಮಸ್ಯೆಗಳು ಅವರನ್ನು ಕಷ್ಟಕ್ಕೆ ಗುರಿಪಡಿಸುವವು. ಆದರೆ ನೀನು ಅವರನ್ನು ಸಂರಕ್ಷಿಸುವೆ.
ಯೆಹೋವನೇ, ಒಂದು ಮನೆಯ ಜನರನ್ನು ಪ್ರವಾಹದಿಂದಲೂ,
ಬಿಸಿಲಿನ ತಾಪದಿಂದಲೂ ಕಾಪಾಡುವಂತೆ ನೀನಿರುವೆ.
ಮುಂದಿನ ತೊಂದರೆಗಳು ಬಿರುಗಾಳಿಯಂತೆಯೂ ಮಳೆಯಂತೆಯೂ ಇವೆ.
ಮಳೆಯು ಗೋಡೆಗೆ ಬಡಿದು ಕೆಳಗೆ ಇಳಿಯುವದು. ಆದರೆ ಮನೆಯೊಳಗಿರುವವರಿಗೆ ಹಾನಿಯೇ ಆಗದು.
5 ವೈರಿಯು ಆರ್ಭಟಿಸುತ್ತಾ ಗದ್ದಲ ಮಾಡುತ್ತಾನೆ.
ಆ ಭಯಂಕರ ಶತ್ರುವು ಯುದ್ಧಕ್ಕೆ ಬಾ ಎಂದು ಸವಾಲು ಹಾಕುತ್ತಾನೆ.
ಆದರೆ ದೇವರೇ, ನೀನು ಅವನನ್ನು ತಡೆಯುವೆ.
ಬೇಸಿಗೆ ಕಾಲದಲ್ಲಿ ಮರುಭೂಮಿಯಲ್ಲಿರುವ ಸಸಿಗಳು ಬಾಡಿಹೋಗಿ ನೆಲದ ಮೇಲೆ ಬಿದ್ದುಹೋಗುವವು.
ಅದೇ ರೀತಿಯಲ್ಲಿ ನೀನು ವೈರಿಯನ್ನು ಸೋಲಿಸಿ ಅವನು ಮೊಣಕಾಲೂರುವಂತೆ ಮಾಡುವೆ.
ಕಾರ್ಮುಗಿಲು ಬೇಸಿಗೆಯ ತಾಪವನ್ನು ನಿವಾರಿಸುವದು.
ಅದೇ ರೀತಿಯಲ್ಲಿ ನೀನು ಶತ್ರುವಿನ ಆರ್ಭಟವನ್ನು ನಿಲ್ಲಿಸುವೆ.
ಸೇವಕರಿಗಾಗಿ ದೇವರ ಔತಣ
6 ಆ ಸಮಯದಲ್ಲಿ, ಸರ್ವಶಕ್ತನಾದ ಯೆಹೋವನು ಎಲ್ಲಾ ಜನರಿಗಾಗಿ ಈ ಪರ್ವತದ ಮೇಲೆ ಔತಣವನ್ನು ಏರ್ಪಡಿಸುವನು. ಅದು ಉತ್ಕೃಷ್ಟವಾದ ದ್ರಾಕ್ಷಾರಸದಿಂದಲೂ ಮೃಷ್ಠಾನ್ನದಿಂದಲೂ ಕೂಡಿರುವದು.
7 ಆದರೆ ಎಲ್ಲಾ ಜನಾಂಗಗಳನ್ನು ಮತ್ತು ಜನರನ್ನು ಮುಚ್ಚುವ ಒಂದು ಮುಸುಕು ಇದೆ. ಆ ಮುಸುಕು ಯಾವದೆಂದರೆ ಮರಣ. 8 ಆದರೆ ಮರಣವು ಎಂದೆಂದಿಗೂ ನಾಶಮಾಡಲ್ಪಡುವದು. ನನ್ನ ಒಡೆಯನಾಗಿರುವ ಯೆಹೋವನು ಪ್ರತೀ ಮುಖದಲ್ಲಿರುವ ಕಣ್ಣೀರನ್ನು ಒರೆಸುವನು. ಹಿಂದೆ ಆತನ ಜನರೆಲ್ಲಾ ದುಃಖಕ್ಕೆ ಒಳಗಾಗಿದ್ದರು. ಆದರೆ ದೇವರು ಆ ದುಃಖವನ್ನು ಈ ಭೂಮಿಯಿಂದಲೇ ತೆಗೆದುಹಾಕುವನು. ಇವೆಲ್ಲಾ ಯೆಹೋವನು ಹೇಳಿದಂತೆಯೇ ಸಂಭವಿಸುವದು.
9 ಆ ಸಮಯದಲ್ಲಿ ಜನರು,
“ನಮ್ಮ ದೇವರು ಇಲ್ಲಿದ್ದಾನೆ.
ಆತನಿಗಾಗಿಯೇ ನಾವು ಕಾಯುತ್ತಿದ್ದೆವು.
ಆತನು ನಮ್ಮನ್ನು ರಕ್ಷಿಸಲು ಬಂದಿದ್ದಾನೆ.
ನಾವು ನಮ್ಮ ದೇವರಾದ ಯೆಹೋವನಿಗಾಗಿ ಕಾಯುತ್ತಿದ್ದೆವು.
ಆತನು ನಮ್ಮನ್ನು ರಕ್ಷಿಸುವಾಗ ನಾವು ಹರ್ಷಭರಿತರಾಗಿ ಸಂತೋಷಿಸುವೆವು” ಎಂದು ಹೇಳುವರು.
10 ಏಕೆಂದರೆ ಯೆಹೋವನ ಬಲವು ಈ ಪರ್ವತದಲ್ಲಿದೆ.
ಮೋವಾಬ್ ಸೋಲಿಸಲ್ಪಡುವದು.
ಯೆಹೋವನು ವೈರಿಯನ್ನು ಹುಲ್ಲಿನಂತೆ ತುಳಿದುಬಿಡುವನು.
11 ಯೆಹೋವನು ತನ್ನ ಕೈಗಳನ್ನು ಈಜುವವನಂತೆ ಅಗಲವಾಗಿ ತೆರೆದು
ಮನುಷ್ಯರು ಹೆಚ್ಚಳಪಡುವ ವಸ್ತುಗಳನ್ನೆಲ್ಲಾ ಬಾಚಿಕೊಳ್ಳುವನು.
ಜನರು ತಯಾರಿಸಿದ ಅಂದವಾದ ವಸ್ತುಗಳನ್ನು
ಒಟ್ಟುಗೂಡಿಸಿ ಬಿಸಾಡುವನು.
12 ಯೆಹೋವನು ಜನರ ಉನ್ನತವಾದ ಗೋಡೆಗಳನ್ನೂ ಸುರಕ್ಷಿತ ಸ್ಥಳಗಳನ್ನೂ ನಾಶಮಾಡುವನು.
ಯೆಹೋವನು ಅವುಗಳನ್ನೆಲ್ಲಾ ನೆಲಸಮಮಾಡಿ ಧೂಳಿಗೇ ತರುವನು.
ನಾವು ದೇವರ ಮಕ್ಕಳಾಗಿದ್ದೇವೆ
3 ತಂದೆಯು ನಮ್ಮನ್ನು ಬಹಳವಾಗಿ ಪ್ರೀತಿಸಿದನು! ದೇವರ ಮಕ್ಕಳು ಎಂಬ ಹೆಸರನ್ನು ನಮಗೆ ಕೊಡುವಷ್ಟರ ಮಟ್ಟಿಗೆ ದೇವರು ನಮ್ಮನ್ನು ಪ್ರೀತಿಸಿದನು. ನಾವು ನಿಜವಾಗಿಯೂ ದೇವರ ಮಕ್ಕಳಾಗಿದ್ದೇವೆ. ಆದರೆ ಲೋಕದಲ್ಲಿರುವ ಜನರಾದರೋ ನಾವು ದೇವರ ಮಕ್ಕಳೆಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವರು ದೇವರನ್ನು ತಿಳಿದಿಲ್ಲ. 2 ಪ್ರಿಯ ಸ್ನೇಹಿತರೇ, ಈಗ ನಾವು ದೇವರ ಮಕ್ಕಳಾಗಿದ್ದೇವೆ. ನಾವು ಮುಂದೆ ಏನಾಗುವೆವೆಂಬುದನ್ನು ನಮಗಿನ್ನೂ ತೋರ್ಪಡಿಸಿಲ್ಲ. ಆದರೆ ಕ್ರಿಸ್ತನು ಮರಳಿ ಬಂದಾಗ ಅದನ್ನು ತಿಳಿದುಕೊಳ್ಳುತ್ತೇವೆ. ನಾವು ಆತನಂತಾಗುವೆವು. ನಾವು ಆತನ ನಿಜಸ್ವರೂಪವನ್ನೇ ನೋಡುವೆವು. 3 ಕ್ರಿಸ್ತನಲ್ಲಿ ಈ ನಿರೀಕ್ಷೆಯನ್ನು ಹೊಂದಿರುವ ಪ್ರತಿಯೊಬ್ಬನೂ ಕ್ರಿಸ್ತನು ಶುದ್ಧನಾಗಿರುವಂತೆ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.
4 ಪಾಪ ಮಾಡುವವನು ದೇವರ ಕಟ್ಟಳೆಗಳನ್ನು ಉಲ್ಲಂಘಿಸುವವನಾಗಿದ್ದಾನೆ. ಹೌದು, ಪಾಪಮಾಡುವುದಕ್ಕೂ ದೇವರ ಕಟ್ಟಳೆಗಳಿಗೆ ವಿರುದ್ಧವಾಗಿ ಜೀವಿಸುವುದಕ್ಕೂ ಯಾವ ವ್ಯತ್ಯಾಸವಿಲ್ಲ. 5 ಕ್ರಿಸ್ತನು ಜನರ ಪಾಪಗಳನ್ನು ಹೋಗಲಾಡಿಸಲು ಬಂದನೆಂಬುದು ನಿಮಗೆ ತಿಳಿದಿದೆ. ಆತನಲ್ಲಿ ಪಾಪವೆಂಬುದಿಲ್ಲ. 6 ಆದ್ದರಿಂದ ಕ್ರಿಸ್ತನಲ್ಲಿ ನೆಲಸಿರುವ ವ್ಯಕ್ತಿಯು ಪಾಪದಲ್ಲೇ ಮುಂದುವರಿಯುವುದಿಲ್ಲ. ಪಾಪವನ್ನು ಮಾಡುತ್ತಲೇ ಇರುವವನು ಆತನನ್ನು ಎಂದೂ ಅರ್ಥಮಾಡಿಕೊಂಡವನಲ್ಲ ಮತ್ತು ಎಂದೂ ತಿಳಿದವನಲ್ಲ.
7 ಪ್ರಿಯ ಮಕ್ಕಳೇ, ನಿಮ್ಮನ್ನು ಯಾರೂ ತಪ್ಪುಮಾರ್ಗಕ್ಕೆ ಎಳೆಯದಂತೆ ನೋಡಿಕೊಳ್ಳಿರಿ. ಕ್ರಿಸ್ತನು ನೀತಿವಂತನಾಗಿದ್ದಾನೆ. ಆತನಂತೆ ನೀತಿವಂತನಾಗಿರಲು ಬಯಸುವವನು ಒಳ್ಳೆಯದನ್ನು ಮಾಡಬೇಕು. 8 ಸೈತಾನನು ಆರಂಭದಿಂದಲೂ ಪಾಪಗಳನ್ನು ಮಾಡುತ್ತಿದ್ದಾನೆ. ಪಾಪಗಳನ್ನು ಮಾಡುತ್ತಲೇ ಇರುವವನು ಸೈತಾನನಿಗೆ ಸೇರಿದವನಾಗಿದ್ದಾನೆ. ದೇವರ ಮಗನಾದ ಕ್ರಿಸ್ತನು ಸೈತಾನನ ಕಾರ್ಯವನ್ನು ನಾಶಪಡಿಸುವುದಕ್ಕಾಗಿಯೇ ಬಂದನು.
9 ದೇವರಿಂದ ಹೊಸದಾಗಿ ಹುಟ್ಟಿದವನು ಪಾಪಗಳಲ್ಲಿ ನೆಲೆಗೊಂಡಿರುವುದಿಲ್ಲ. ಏಕೆಂದರೆ ದೇವರು ದಯಪಾಲಿಸಿದ ಹೊಸ ಜೀವವು ಅವನಲ್ಲಿ ನೆಲೆಸಿರುತ್ತದೆ. ಅವನು ದೇವರಿಂದ ಹೊಸದಾಗಿ ಹುಟ್ಟಿದ ಕಾರಣ ಪಾಪದಲ್ಲೇ ಮುಂದುವರಿಯಲು ಅವನಿಗೆ ಸಾಧ್ಯವಿಲ್ಲ. 10 ಆದ್ದರಿಂದ ದೇವರ ಮಕ್ಕಳು ಯಾರೆಂಬುದನ್ನೂ ಸೈತಾನನ ಮಕ್ಕಳು ಯಾರೆಂಬುದನ್ನೂ ನಾವು ತಿಳಿದುಕೊಳ್ಳಬಹುದು. ಯೋಗ್ಯವಾದುದನ್ನು ಮಾಡದಿರುವ ಜನರು ದೇವರ ಮಕ್ಕಳಲ್ಲ. ತನ್ನ ಸಹೋದರನನ್ನು ಪ್ರೀತಿಸದಿರುವವನು ದೇವರ ಮಗನಲ್ಲ.
ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು
11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ ನೀವು ಆರಂಭದಿಂದಲೂ ಕೇಳಿದ ವಾಕ್ಯ. 12 ನೀವು ಕಾಯಿನನಂತಿರಬೇಡಿ. ಅವನು ಕೆಡುಕನಿಗೆ ಸೇರಿದವನಾಗಿದ್ದನು. ಅವನು ತನ್ನ ತಮ್ಮನನ್ನು (ಹೇಬೆಲ) ಕೊಂದುಹಾಕಿದನು. ಅವನು ತನ್ನ ತಮ್ಮನನ್ನು ಕೊಂದದ್ದೇಕೆ? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ಒಳ್ಳೆಯವುಗಳೂ ಆಗಿದ್ದರಿಂದಲೇ.
13 ಸಹೋದರ ಸಹೋದರಿಯರೇ, ಈ ಲೋಕದ ಜನರು ನಿಮ್ನನ್ನು ದ್ವೇಷಿಸುವಾಗ ಆಶ್ಚರ್ಯಗೊಳ್ಳದಿರಿ. 14 ನಾವು ಮರಣವನ್ನು (ಪಾಪಗಳನ್ನು) ತೊರೆದು ಜೀವಕ್ಕೆ ಬಂದಿದ್ದೇವೆ ಎಂಬುದು ನಮಗೆ ಗೊತ್ತಿದೆ. ಕ್ರಿಸ್ತನಲ್ಲಿ ನಮ್ಮ ಸಹೋದರ ಸಹೋದರಿಯರನ್ನು ನಾವು ಪ್ರೀತಿಸುತ್ತಿರುವುದರಿಂದಲೇ ಇದನ್ನು ತಿಳಿದುಕೊಂಡಿದ್ದೇನೆ. ಪ್ರೀತಿಸದಿರುವ ವ್ಯಕ್ತಿಯು ಇನ್ನೂ ಮರಣದಲ್ಲಿದ್ದಾನೆ. 15 ತನ್ನ ಸಹೋದರನನ್ನು ದ್ವೇಷಿಸುವ ಪ್ರತಿಯೊಬ್ಬನೂ ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರನಲ್ಲಿಯೂ ನಿತ್ಯಜೀವ ಇರುವುದಿಲ್ಲವೆಂಬುದು ನಿಮಗೆ ತಿಳಿದಿದೆ.
16 ಯೇಸು ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ನಿಜವಾದ ಪ್ರೀತಿಯೆಂದರೇನೆಂಬುದನ್ನು ನಾವು ತಿಳಿದುಕೊಂಡೆವು. ಆದ್ದರಿಂದ ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾದವರಿಗೋಸ್ಕರ ನಾವೂ ನಮ್ಮ ಪ್ರಾಣಗಳನ್ನು ಕೊಡಬೇಕು. 17 ಈ ಲೋಕದ ಐಶ್ವರ್ಯವನ್ನು ಹೊಂದಿರುವ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿದರೂ ಸಹಾಯ ಮಾಡದೆ ಹೋದರೆ, ಅವನಲ್ಲಿ ದೇವರ ಪ್ರೀತಿಯು ನೆಲೆಗೊಂಡಿಲ್ಲ. ಅವನೇಕೆ ಸಹಾಯ ಮಾಡಲಿಲ್ಲ? ಏಕೆಂದರೆ ಅವನ ಹೃದಯದಲ್ಲಿ ದೇವರ ಮೇಲೆ ಪ್ರೀತಿಯೇ ಇಲ್ಲ. 18 ನನ್ನ ಮಕ್ಕಳೇ, ನಮ್ಮ ಪ್ರೀತಿಯು ಕೇವಲ ಶಬ್ಧಗಳಲ್ಲಿ ಮತ್ತು ಮಾತಿನಲ್ಲಿ ಇರಬಾರದು. ನಮ್ಮ ಪ್ರೀತಿಯು ನಿಜವಾದ ಪ್ರೀತಿಯಾಗಿರಬೇಕು. ನಾವು ಮಾಡುವ ಕಾರ್ಯಗಳಲ್ಲಿಯೇ ನಮ್ಮ ಪ್ರೀತಿಯನ್ನು ತೋರ್ಪಡಿಸಬೇಕು.
19-20 ನಾವು ಸತ್ಯಮಾರ್ಗಕ್ಕೆ ಸೇರಿದವರೆಂಬುದನ್ನು ಈ ಮೂಲಕವಾಗಿಯೇ ತಿಳಿದುಕೊಳ್ಳುತ್ತೇವೆ. ನಮ್ಮ ಮನಸ್ಸಾಕ್ಷಿಯು ನಮ್ಮನ್ನು ತಪ್ಪಿತಸ್ಥರೆಂದು ಹೇಳಿದರೂ ನಾವು ದೇವರ ಎದುರಿನಲ್ಲಿ ಸಮಾಧಾನದಿಂದಿರಲು ಸಾಧ್ಯ. ಏಕೆಂದರೆ ನಮ್ಮ ಮನಸ್ಸಾಕ್ಷಿಗಿಂತ ದೇವರೇ ದೊಡ್ಡವನು. ಆತನಿಗೆ ಎಲ್ಲವೂ ತಿಳಿದಿದೆ.
21 ನನ್ನ ಪ್ರಿಯ ಸ್ನೇಹಿತರೇ, ನಾವು ತಪ್ಪು ಮಾಡುತ್ತಿಲ್ಲ ಎಂದು ನಮಗೆ ತಿಳಿದಿದ್ದರೆ, ನಾವು ದೇವರ ಬಳಿಗೆ ಧೈರ್ಯವಾಗಿ ಬರಲು ಸಾಧ್ಯ. 22 ಮತ್ತು ನಾವು ಕೇಳಿಕೊಳ್ಳುವವುಗಳನ್ನು ದೇವರು ನಮಗೆ ನೀಡುತ್ತಾನೆ. ನಾವು ಆತನಿಗೆ ವಿಧೇಯರಾಗಿರುವುದರಿಂದ ಮತ್ತು ಆತನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡುವುದರಿಂದ ಅವುಗಳನ್ನು ಆತನಿಂದ ಪಡೆದುಕೊಳ್ಳುತ್ತೇವೆ. 23 ದೇವರ ಆಜ್ಞೆ ಏನೆಂದರೆ ಆತನ ಮಗನಾದ ಯೇಸು ಕ್ರಿಸ್ತನಲ್ಲಿ ನಾವು ನಂಬಿಕೆಯಿಟ್ಟು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ. 24 ದೇವರ ಆಜ್ಞೆಗಳಿಗೆ ವಿಧೇಯನಾಗಿರುವವನು ದೇವರಲ್ಲಿ ನೆಲೆಸಿರುತ್ತಾನೆ ಮತ್ತು ದೇವರು ಆತನಲ್ಲಿ ನೆಲೆಸಿರುತ್ತಾನೆ. ದೇವರು ನಮ್ಮಲ್ಲಿ ನೆಲೆಸಿದ್ದಾನೆ ಎಂಬುದು ನಮಗೆ ಹೇಗೆ ತಿಳಿದದೆ? ದೇವರು ನಮಗೆ ದಯಪಾಲಿಸಿರುವ ಪವಿತ್ರಾತ್ಮನಿಂದಲೇ ನಮಗೆ ತಿಳಿದದೆ.
Kannada Holy Bible: Easy-to-Read Version. All rights reserved. © 1997 Bible League International