M’Cheyne Bible Reading Plan
ಇಸ್ರೇಲರು ಮಿದ್ಯಾನ್ಯರನ್ನು ಸಂಹರಿಸಿದ್ದು
31 ಯೆಹೋವನು ಮೋಶೆಯೊಡನೆ ಮಾತಾಡಿ ಹೀಗೆಂದನು: 2 “ನೀನು ಇಸ್ರೇಲರಿಗೋಸ್ಕರ ಮಿದ್ಯಾನ್ಯರ ಮೇಲೆ ಆಕ್ರಮಣಮಾಡಿ ಸೇಡು ತೀರಿಸಿಕೊ. ಇದಾದ ನಂತರ ನೀನು ಸಾಯುವಿ.”[a]
3 ಆಗ ಮೋಶೆ ಇಸ್ರೇಲರಿಗೆ, “ಮಿದ್ಯಾನ್ಯರು ಯೆಹೋವನಿಗೆ ವಿರೋಧವಾಗಿ ಮಾಡಿದ ಕೃತ್ಯಗಳಿಗಾಗಿ ಅವರ ಮೇಲೆ ಆಕ್ರಮಣ ಮಾಡಿ ದಂಡಿಸಲು ನಿಮ್ಮಲ್ಲಿರುವ ಗಂಡಸರಲ್ಲಿ ಕೆಲವರನ್ನು ದಂಡೆಯಾತ್ರೆಗೆ ಆರಿಸಿಕೊಳ್ಳಬೇಕು. 4 ಇಸ್ರೇಲಿನ ಕುಲಗಳವರಲ್ಲಿ ಪ್ರತಿಯೊಂದು ಕುಲದಿಂದ ಒಂದು ಸಾವಿರ ಗಂಡಸರನ್ನು ದಂಡೆಯಾತ್ರೆಗೆ ಕಳುಹಿಸಬೇಕು. 5 ಆದ್ದರಿಂದ ಇಸ್ರೇಲರ ಕುಲಗಳಿಂದ ಪ್ರತಿಯೊಂದು ಕುಲಕ್ಕೆ ಒಂದು ಸಾವಿರ ಗಂಡಸರ ಪ್ರಕಾರ ಹನ್ನೆರಡು ಸಾವಿರ ಗಂಡಸರನ್ನು ಯುದ್ಧಕ್ಕೆ ಆರಿಸಿಕೊಳ್ಳಬೇಕು” ಅಂದನು.
6 ಮೋಶೆಯು ಅವರನ್ನು ಯುದ್ಧಕ್ಕೆ ಕಳುಹಿಸಿದನು. ಅವರ ಸಂಗಡ ಎಲ್ಲಾಜಾರನ ಮಗನಾದ ಫೀನೆಹಾಸನನ್ನೂ ಕಳುಹಿಸಿದನು. ಫೀನೆಹಾಸನು ಪವಿತ್ರವಸ್ತುಗಳನ್ನು ತೆಗೆದುಕೊಂಡನು ಮತ್ತು ಸೂಚನೆ ಕೊಡುವುದಕ್ಕಾಗಿ ತುತ್ತೂರಿಗಳನ್ನು ತೆಗೆದುಕೊಂಡನು. 7 ಯೆಹೋವನು ಆಜ್ಞಾಪಿಸಿದಂತೆಯೇ ಇಸ್ರೇಲರು ಮಿದ್ಯಾನ್ಯರೊಡನೆ ಯುದ್ಧಮಾಡಿದರು. ಅವರು ಮಿದ್ಯಾನ್ಯರ ಗಂಡಸರೆಲ್ಲರನ್ನು ಕೊಂದರು. 8 ಅವರು ಕೊಂದವರಲ್ಲಿ ಎವೀ, ರೆಕೆಮ್, ಜೂರ್, ಹೂರ್ ಮತ್ತು ರೆಬಾ ಎಂಬ ಮಿದ್ಯಾನ್ಯರ ಐದು ಮಂದಿ ರಾಜರು ಸೇರಿದ್ದರು. ಅವರು ಕತ್ತಿಯಿಂದ ಬೆಯೋರನ ಮಗನಾದ ಬಿಳಾಮನನ್ನೂ ಕೊಂದರು.
9 ಇಸ್ರೇಲರು ಮಿದ್ಯಾನ್ಯರ ಹೆಂಗಸರನ್ನು ಮತ್ತು ಮಕ್ಕಳನ್ನು ಸೆರೆಹಿಡಿದರು. ಅವರು ಮಿದ್ಯಾನ್ಯರ ಎಲ್ಲಾ ಪಶುಗಳನ್ನು ಮತ್ತು ಇತರ ಅಮೂಲ್ಯವಾದ ವಸ್ತುಗಳನ್ನು ತೆಗೆದುಕೊಂಡರು. 10 ಅವರು ನೆಲೆಸಿದ್ದ ಊರುಗಳನ್ನೂ ಪಾಳೆಯಗಳನ್ನೂ ಸುಟ್ಟುಹಾಕಿದರು. 11 ಎಲ್ಲಾ ಜನರನ್ನೂ ಪಶುಗಳನ್ನೂ ಹಿಡಿದು, 12 ತಾವು ಸೆರೆಹಿಡಿದವರನ್ನೂ ಪಶುಗಳನ್ನೂ ಆಸ್ತಿಯನ್ನೂ ತೆಗೆದುಕೊಂಡು ಜೆರಿಕೊ ಪಟ್ಟಣದ ಆಚೆ ಜೋರ್ಡನ್ ಹೊಳೆಯ ತೀರದಲ್ಲಿ ಮೋವಾಬ್ಯರ ಬಯಲಿನಲ್ಲಿದ್ದ ಪಾಳೆಯಕ್ಕೆ ಅಂದರೆ ಮೋಶೆ, ಯಾಜಕನಾದ ಎಲ್ಲಾಜಾರ್ ಮತ್ತು ಇಸ್ರೇಲರ ಸರ್ವಸಮೂಹದವರು ಇದ್ದಲ್ಲಿಗೆ ಬಂದರು. 13 ಮೋಶೆಯೂ ಯಾಜಕನಾದ ಎಲ್ಲಾಜಾರನೂ ಸಮೂಹದ ಪ್ರಧಾನರೂ ಪಾಳೆಯದ ಹೊರಗೆ ಬಂದು ಸೈನಿಕರನ್ನು ಎದುರುಗೊಂಡರು.
14 ಮೋಶೆಯು ಯುದ್ಧದಿಂದ ಹಿಂತಿರುಗಿ ಬರುತ್ತಿದ್ದ ಸೈನ್ಯಾಧಿಕಾರಿಗಳ ಮೇಲೆ ಅಂದರೆ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಮೇಲೆ ಕೋಪಗೊಂಡನು. 15 ಅವನು ಅವರಿಗೆ, “ನೀವು ಎಲ್ಲಾ ಹೆಂಗಸರನ್ನು ಉಳಿಸಿದ್ದೇಕೆ? 16 ಬಿಳಾಮನ ಸಲಹೆಯನ್ನು ಅನುಸರಿಸಿ, ಯೆಹೋವನಿಗೆ ವಿರೋಧವಾಗಿ ಇಸ್ರೇಲರು ಪಾಪಮಾಡುವಂತೆ ಮಾಡಿ ಪೆಗೋರದ ಬಾಳನ ಸಂಗತಿಗೆ ಕಾರಣರಾದವರು ಇವರೇ ಅಲ್ಲವೇ? ಅದರ ಫಲವಾಗಿ ಭಯಂಕರವಾದ ಕಾಯಿಲೆಯು ಜನರಿಗೆ ಬಂದಿತು. 17 ಆದ್ದರಿಂದ ಈ ಗುಂಪಿನಲ್ಲಿರುವ ಎಲ್ಲಾ ಗಂಡುಮಕ್ಕಳನ್ನೂ ಪುರುಷಸಂಗಮ ಮಾಡಿದ ಎಲ್ಲಾ ಮಿದ್ಯಾನ್ ಹೆಂಗಸರನ್ನೂ ಕೊಲ್ಲಬೇಕು. 18 ಪುರುಷಸಂಗಮ ಮಾಡದಿರುವ ಕನ್ಯೆಯರನ್ನು ನಿಮಗಾಗಿ ಉಳಿಸಿರಿ. 19 ನೀವಾದರೋ ಏಳು ದಿನಗಳವರೆಗೂ ಪಾಳೆಯದ ಹೊರಗೆ ಇರಬೇಕು. ಮನುಷ್ಯರನ್ನು ಕೊಂದವರೂ ಶವಸೋಂಕಿದವರೂ ನಿಮ್ಮವರಾಗಿರಲಿ ಸೆರೆಯವರಾಗಿರಲಿ ಮೂರನೆಯ ಮತ್ತು ಏಳನೆಯ ದಿನದಲ್ಲಿ ನಿಮ್ಮನ್ನು ಶುದ್ಧೀಕರಿಸಿಕೊಳ್ಳಬೇಕು. 20 ಅದಲ್ಲದೆ ಎಲ್ಲಾ ಬಟ್ಟೆಗಳನ್ನೂ ತೊಗಲಿನ ಸಾಮಾನುಗಳನ್ನೂ ಮೇಕೆ ಕೂದಲಿನ ವಸ್ತುಗಳನ್ನೂ ಮರದ ಸಾಮಾನನ್ನೂ ಶುದ್ಧ ಮಾಡಬೇಕು.”
21 ಆಗ ಯಾಜಕನಾದ ಎಲ್ಲಾಜಾರನು ಸೈನಿಕರೊಡನೆ ಮಾತಾಡಿ ಇಂತೆಂದೆನು: “ಯೆಹೋವನು ಮೋಶೆಗೆ ಯುದ್ಧದಿಂದ ಮರಳಿಬರುವ ಸೈನಿಕರ ಬಗ್ಗೆ ಆ ನಿಯಮಗಳನ್ನು ಕೊಟ್ಟನು: 22-23 ಬೆಂಕಿಯನ್ನು ಸಹಿಸಬಲ್ಲ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸ ಮೊದಲಾದವುಗಳನ್ನು ಬೆಂಕಿಯಲ್ಲಿ ಹಾಯಿಸಿ ಶುದ್ಧಮಾಡಬೇಕು. ಬಳಿಕ ಶುದ್ಧೀಕರಣದ ನೀರಿನಿಂದ ಅವುಗಳನ್ನು ಶುದ್ಧೀಕರಿಸಬೇಕು. ಬೆಂಕಿಯನ್ನು ಸಹಿಸಲಾರದ ವಸ್ತುಗಳನ್ನು ನೀರಿನಿಂದ ಮಾತ್ರ ತೊಳೆಯಬೇಕು. 24 ಏಳನೆಯ ದಿನದಲ್ಲಿ ನಿಮ್ಮ ಬಟ್ಟೆಗಳನ್ನು ಒಗೆದುಕೊಂಡ ನಂತರ ನೀವು ಶುದ್ಧರಾಗುವಿರಿ. ಆಮೇಲೆ ನೀವು ಪಾಳೆಯದೊಳಗೆ ಬರಬಹುದು.”
25 ತರುವಾಯ ಯೆಹೋವನು ಮೋಶೆಗೆ, 26 “ನೀನೂ ಯಾಜಕನಾದ ಎಲ್ಲಾಜಾರನೂ ಸಮುದಾಯದ ಎಲ್ಲಾ ಕುಲಪ್ರಧಾನರೂ ಸೆರೆಸಿಕ್ಕಿದ ಮನುಷ್ಯರನ್ನು ಮತ್ತು ಪಶುಗಳನ್ನು ಲೆಕ್ಕಿಸಿ ಪಟ್ಟಿಮಾಡಬೇಕು. 27 ಅವುಗಳನ್ನು ಎರಡು ಭಾಗಮಾಡಿ ಯುದ್ಧಕ್ಕೆ ಹೋದ ಸೈನಿಕರಿಗೆ ಅರ್ಧವನ್ನು ಮಿಕ್ಕ ಸಮೂಹದವರಿಗೆ ಅರ್ಧವನ್ನು ಹಂಚಿಕೊಡಬೇಕು. 28 ಯುದ್ಧಕ್ಕೆ ಹೋದ ಸೈನಿಕರಿಗೆ ಬರುವ ಭಾಗದಿಂದ ಮನುಷ್ಯರನ್ನು, ದನಕರುಗಳನ್ನು, ಕತ್ತೆಗಳನ್ನು ಮತ್ತು ಕುರಿಗಳನ್ನು 29 ನೀನು ಐನೂರರಲ್ಲಿ ಒಂದರ ಮೇರೆಗೆ ಯೆಹೋವನಿಗೋಸ್ಕರ ಕಪ್ಪಕಾಣಿಕೆಯನ್ನು ತೆಗೆದುಕೊಂಡು, ಅದನ್ನು ಪ್ರತ್ಯೇಕಿಸಿ ಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಬೇಕು. 30 ಮಿಕ್ಕ ಇಸ್ರೇಲರಿಗೆ ಬರುವ ಭಾಗದಿಂದ ಮನುಷ್ಯರನ್ನು, ದನಕರುಗಳನ್ನು, ಕತ್ತೆಗಳನ್ನು, ಕುರಿಗಳನ್ನು ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಳ್ಳಬೇಕು. ಅದನ್ನು ಯೆಹೋವನ ಪವಿತ್ರ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಡಬೇಕು” ಎಂದು ಆಜ್ಞಾಪಿಸಿದನು.
31 ಯೆಹೋವನು ಆಜ್ಞಾಪಿಸಿದ್ದಂತೆಯೇ ಮೋಶೆ ಮತ್ತು ಎಲ್ಲಾಜಾರನು ಮಾಡಿದರು. 32 ಸೈನಿಕರು ಆರು ಲಕ್ಷದ ಎಪ್ಪತ್ತೈದು ಸಾವಿರ ಕುರಿಗಳನ್ನು, 33 ಎಪ್ಪತ್ತೆರಡು ಸಾವಿರ ದನಕರುಗಳನ್ನು, 34 ಅರವತ್ತೊಂದು ಸಾವಿರ ಕತ್ತೆಗಳನ್ನು, 35 ಮೂವತ್ತೆರಡು ಸಾವಿರ ಕನ್ನಿಕೆಯರನ್ನು ಪಡೆದುಕೊಂಡರು. 36 ಯುದ್ಧಕ್ಕೆ ಹೋದ ಸೈನಿಕರು ಅರ್ಧಭಾಗವನ್ನು ಅಂದರೆ ಮೂರು ಲಕ್ಷದ ಮೂವತ್ತೇಳು ಸಾವಿರದ ಐನೂರು ಕುರಿಗಳನ್ನು ಪಡೆದುಕೊಂಡರು. 37 ಅವರು ಆರುನೂರ ಐವತ್ತೇಳು ಕುರಿಗಳನ್ನು ಯೆಹೋವನಿಗೆ ಕೊಟ್ಟರು. 38 ಸೈನಿಕರು ಮೂವತ್ತಾರು ಸಾವಿರ ದನಕರುಗಳನ್ನು ಪಡೆದುಕೊಂಡರು. ಅವುಗಳಲ್ಲಿ ಎಪ್ಪತ್ತೆರಡು ದನಕರುಗಳನ್ನು ಯೆಹೋವನಿಗೆ ಕೊಟ್ಟರು. 39 ಸೈನಿಕರು ಮೂವತ್ತು ಸಾವಿರದ ಐನೂರು ಕತ್ತೆಗಳನ್ನು ಪಡೆದುಕೊಂಡರು. ಅವರು ಅರವತ್ತೊಂದು ಕತ್ತೆಗಳನ್ನು ಯೆಹೋವನಿಗೆ ಕೊಟ್ಟರು. 40 ಸೈನಿಕರು ಹದಿನಾರು ಸಾವಿರ ಮಂದಿ ಕನ್ನಿಕೆಯರನ್ನು ಪಡೆದುಕೊಂಡರು. ಅವರು ಮೂವತ್ತೆರಡು ಮಂದಿ ಕನ್ನಿಕೆಯರನ್ನು ಯೆಹೋವನಿಗೆ ಕೊಟ್ಟರು. 41 ಮೋಶೆಯು ಯೆಹೋವನ ಅಪ್ಪಣೆಯ ಮೇರೆಗೆ ಆ ಕಪ್ಪವನ್ನೆಲ್ಲ ಯೆಹೋವನಿಗೆ ಕೊಡುಗೆಯಾಗಿ ಯಾಜಕನಾದ ಎಲ್ಲಾಜಾರನಿಗೆ ಕೊಟ್ಟನು.
42-43 ಮೋಶೆಯು ಜನರಿಗೆ ಸೇರಿದ ಅರ್ಧಭಾಗವನ್ನು ಎಣಿಸಿದನು. ಯುದ್ಧಕ್ಕೆ ಹೋಗಿದ್ದ ಸೈನಿಕರಿಂದ ಮೋಶೆಯು ತೆಗೆದುಕೊಂಡ ಅರ್ಧಭಾಗ: ಮೂರು ಲಕ್ಷದ ಮೂವತ್ತೇಳು ಸಾವಿರದ ಐನೂರು ಕುರಿಗಳು, 44 ಮೂವತ್ತಾರು ಸಾವಿರ ದನಕರುಗಳು, 45 ಮೂವತ್ತು ಸಾವಿರದ ಐನೂರು ಕತ್ತೆಗಳು 46 ಮತ್ತು ಹದಿನಾರು ಸಾವಿರ ಕನ್ನಿಕೆಯರು. 47 ಇಸ್ರೇಲ್ ಜನರಿಗೆ ದೊರಕಿದ ಅರ್ಧ ಭಾಗದಿಂದ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಮೋಶೆ ಐವತ್ತನೆ ಒಂದು ಭಾಗವನ್ನು ತೆಗೆದುಕೊಂಡು ಯೆಹೋವನ ಪವಿತ್ರಗುಡಾರವನ್ನು ನೋಡಿಕೊಳ್ಳುತ್ತಿದ್ದ ಲೇವಿಯರಿಗೆ ಕೊಟ್ಟನು.
48 ಆಗ ದಂಡಿನ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಮೋಶೆಯ ಬಳಿಗೆ ಬಂದು, 49 “ನಿನ್ನ ದಾಸರಾದ ನಾವು ನಮ್ಮ ಅಧಿಕಾರದೊಳಗೆ ಇದ್ದ ಸೈನಿಕರನ್ನು ಲೆಕ್ಕಿಸಲಾಗಿ ಒಬ್ಬನಾದರೂ ಕಡಿಮೆಯಾಗಿಲ್ಲವೆಂದು ತಿಳಿಯಿತು. 50 ಆದಕಾರಣ ಯೆಹೋವನು ಕಾಪಾಡಿದ ನಮ್ಮ ಪ್ರಾಣಗಳಿಗೆ ಈಡಾಗಿ ಆತನಿಗೋಸ್ಕರ ಕಾಣಿಕೆಯಾಗಿ ನಮ್ಮಲ್ಲಿ ಒಬ್ಬೊಬ್ಬನು ತನಗೆ ಸಿಕ್ಕಿದ ಚಿನ್ನದ ಒಡವೆಗಳನ್ನು ಅಂದರೆ ತೋಳ್ಬಳೆ, ಕಡಗ, ಮುದ್ರೆಯುಂಗುರ, ಮುರುವು, ಕಂಠಮಾಲೆ ಮುಂತಾದವುಗಳನ್ನು ನಮ್ಮ ಶುದ್ಧೀಕರಣಕ್ಕಾಗಿ ಯೆಹೋವನಿಗೆ ತಂದಿದ್ದೇವೆ” ಅಂದರು.
51 ಅವರು ಕೊಟ್ಟ ಎಲ್ಲಾ ಚಿನ್ನದ ಒಡವೆಗಳನ್ನು ಮೋಶೆಯು ಮತ್ತು ಯಾಜಕನಾದ ಎಲ್ಲಾಜಾರನು ತೆಗೆದುಕೊಂಡರು. ಅವುಗಳನ್ನು ಕುಶಲತೆಯಿಂದ ತಯಾರಿಸಿದ ಒಡವೆಗಳಾಗಿದ್ದವು. 52 ಸಹಸ್ರಾಧಿಪತಿಗಳು ಮತ್ತು ಶತಾಧಿಪತಿಗಳು ಯೆಹೋವನಿಗೆ ಕೊಟ್ಟ ಚಿನ್ನವು ನಾನೂರಿಪ್ಪತ್ತು ಪೌಂಡು ತೂಕವಿತ್ತು. 53 ಉಳಿದದ್ದನ್ನು ಸೈನಿಕರು ತಮಗಾಗಿ ಇಟ್ಟುಕೊಂಡರು. 54 ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಕೊಟ್ಟ ಚಿನ್ನವನ್ನು ಮೋಶೆಯೂ ಯಾಜಕನಾದ ಎಲ್ಲಾಜಾರನೂ ತೆಗೆದುಕೊಂಡು ದೇವದರ್ಶನಗುಡಾರದಲ್ಲಿ ಇಟ್ಟರು. ಇಸ್ರೇಲರ ವಿಷಯದಲ್ಲಿ ಜ್ಞಾಪಕಾರ್ಥವಾಗಿ ಇದು ಯೆಹೋವನ ಸನ್ನಿಧಿಯಲ್ಲಿ ಇಡಲ್ಪಟ್ಟಿತು.
ಸ್ತುತಿಗೀತೆ. ರಚನೆಗಾರ: ಆಸಾಫ.
75 ದೇವರೇ, ನಿನ್ನನ್ನು ಕೊಂಡಾಡುವೆವು!
ನಿನ್ನ ಹೆಸರನ್ನು ಸ್ತುತಿಸುವೆವು; ಯಾಕೆಂದರೆ ನೀನು ನನ್ನ ಸಾಮಿಪ್ಯದಲ್ಲಿರುವೆ;
ನಿನ್ನ ಮಹತ್ಕಾರ್ಯಗಳ ಬಗ್ಗೆ ಜನರು ಹೇಳುತ್ತಲೇ ಇದ್ದಾರೆ.
2 ದೇವರು ಹೀಗೆನ್ನುತ್ತಾನೆ: “ನಾನು ನ್ಯಾಯತೀರ್ಪಿಗಾಗಿ ತಕ್ಕ ಸಮಯವನ್ನು ಗೊತ್ತುಪಡಿಸುವೆ;
ನಾನು ನೀತಿಯಿಂದಲೇ ತೀರ್ಪುಕೊಡುವೆ.
3 ಭೂಮಿಯು ಅದರ ಮೇಲಿರುವ ಸಮಸ್ತದೊಡನೆ ನಡುಗುತ್ತಿದ್ದರೂ
ಭೂಸ್ತಂಭಗಳನ್ನು ಸ್ಥಿರಗೊಳಿಸುವಾತನು ನಾನೇ.
4-5 “ಗರ್ವಿಷ್ಠರೇ, ‘ಕೊಚ್ಚಿಕೊಳ್ಳಬೇಡಿ’ ದುಷ್ಟರೇ, ‘ಅಹಂಕಾರ ಪಡಬೇಡಿ!
ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿ’” ಎಂದು ಹೇಳುವೆನು.
6 ಭೂಲೋಕದ ಯಾವ ಶಕ್ತಿಯೂ
ಮನುಷ್ಯನನ್ನು ಉದ್ಧಾರ ಮಾಡಲಾರದು.
7 ನ್ಯಾಯಾಧಿಪತಿಯು ದೇವರೇ.
ಯಾರನ್ನು ಉದ್ಧಾರಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಾತನು ದೇವರೇ.
ದೇವರು ಒಬ್ಬನನ್ನು ಉನ್ನತಿಗೇರಿಸುವನು; ಮತ್ತೊಬ್ಬನನ್ನು ಅವನತಿಗಿಳಿಸುವನು.
8 ಯೆಹೋವನ ಕೈಯಲ್ಲಿ ಪಾತ್ರೆಯಿದೆ.
ಆ ಪಾತ್ರೆಯು ವಿಷ ದ್ರಾಕ್ಷಾರಸದಿಂದ ತುಂಬಿದೆ.
ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು;
ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು!
9 ನಾನು ಇವುಗಳ ಬಗ್ಗೆ ಜನರಿಗೆ ಹೇಳುತ್ತಲೇ ಇರುವೆನು;
ಇಸ್ರೇಲರ ದೇವರನ್ನು ಸಂಕೀರ್ತಿಸುವೆನು.
10 ದುಷ್ಟರಿಂದ ಅಧಿಕಾರವನ್ನು ಕಿತ್ತುಕೊಂಡು
ಒಳ್ಳೆಯವರಿಗೆ ಅದನ್ನು ಒಪ್ಪಿಸಿಕೊಡುವೆನು.
ಸ್ತುತಿಗೀತೆ. ರಚನೆಗಾರ: ಆಸಾಪ.
76 ಯೆಹೂದದ ಜನರು ದೇವರನ್ನು ಬಲ್ಲವರೇ ಸರಿ!
ಇಸ್ರೇಲಿನ ಜನರು ಆತನ ನಾಮವನ್ನು ಗೌರವಿಸುವರು.
2 ಆತನ ಗುಡಾರವು ಸಾಲೇಮಿನಲ್ಲಿದೆ.
ಆತನ ಆಲಯವು ಸಿಯೋನ್ ಬೆಟ್ಟದ ಮೇಲಿದೆ.
3 ಆ ಸ್ಥಳದಲ್ಲಿ ದೇವರು ಬಿಲ್ಲುಬಾಣಗಳನ್ನೂ ಗುರಾಣಿಗಳನ್ನೂ
ಖಡ್ಗಗಳನ್ನೂ ಇತರ ಯುದ್ಧಾಯುಧಗಳನ್ನೂ ನುಚ್ಚುನೂರು ಮಾಡಿದ್ದಾನೆ.
4 ದೇವರೇ, ಶತ್ರುಗಳನ್ನು ಸೋಲಿಸಿ
ಬೆಟ್ಟಗಳಿಂದ ಇಳಿದುಬರುವಾಗ ನೀನು ತೇಜೋಮಯನಾಗಿರುವೆ.
5 ಆ ಸೈನಿಕರು ತಾವೇ ಶಕ್ತಿವಂತರೆಂದುಕೊಂಡಿದ್ದರು.
ಆದರೆ ಈಗ ಅವರು ಬಯಲುಗಳಲ್ಲಿ ಸತ್ತುಬಿದ್ದಿದ್ದಾರೆ.
ಅವರು ಧರಿಸಿಕೊಂಡಿದ್ದವುಗಳನ್ನೆಲ್ಲ ಸುಲಿಗೆ ಮಾಡಲಾಗಿದೆ.
ಆ ಸೈನಿಕರಲ್ಲಿ ಯಾರೂ ತಮ್ಮನ್ನು ಸಂರಕ್ಷಿಸಿಕೊಳ್ಳಲಾಗಲಿಲ್ಲ.
6 ಯಾಕೋಬನ ದೇವರು ಆ ಸೈನಿಕರನ್ನು ಗದರಿಸಲು
ರಥಾಶ್ವಗಳ ಸೇನೆಯು ಮೂರ್ಛೆಗೊಂಡಿತು.
7 ದೇವರೇ, ನೀನು ಭಯಂಕರನೇ ಸರಿ!
ನೀನು ಕೋಪಗೊಂಡಿರುವಾಗ ನಿನಗೆ ವಿರೋಧವಾಗಿ ಯಾರು ನಿಂತುಕೊಳ್ಳಬಲ್ಲರು?
8 ಯೆಹೋವನು ಎದ್ದುನಿಂತು
ತನ್ನ ನ್ಯಾಯತೀರ್ಪನ್ನು ಪ್ರಕಟಿಸಿದನು.
9 ದೇವರು ಲೋಕದ ದೀನರನ್ನು ರಕ್ಷಿಸಿದನು.
ಆತನು ಪರಲೋಕದಿಂದ ತೀರ್ಮಾನ ನೀಡುತ್ತಿರಲು ಭೂಲೋಕವೆಲ್ಲಾ ಭಯದಿಂದ ಸ್ತಬ್ಧವಾಯಿತು.
10 ದೇವರೇ, ನೀನು ದುಷ್ಟರನ್ನು ದಂಡಿಸುವಾಗ ಜನರು ನಿನ್ನನ್ನು ಕೊಂಡಾಡುವರು;
ನಿನ್ನ ಕೋಪವನ್ನು ತೋರಿಸುವಾಗ ಅಳಿದುಳಿದವರು ಬಲಿಷ್ಠರಾಗುವರು.
11 ದೇವರಾದ ಯೆಹೋವನಿಗೆ ಹರಕೆಗಳನ್ನು ಮಾಡಿದವರೇ,
ನಿಮ್ಮ ಹರಕೆಗಳನ್ನು ಸಲ್ಲಿಸಿರಿ.
ಸರ್ವಭೂನಿವಾಸಿಗಳೇ, ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.
12 ಆತನು ಮಹಾನಾಯಕರುಗಳನ್ನು ಸೋಲಿಸುವನು.
ಭೂರಾಜರುಗಳೆಲ್ಲಾ ಆತನಿಗೆ ಭಯಪಡುವರು.
ಲೆಬನೋನಿಗೆ ದೇವರ ಸಂದೇಶ
23 ತೂರಿನ ವಿಷಯವಾಗಿ ದುಃಖಕರವಾದ ಸಂದೇಶ:
“ತಾರ್ಷೀಷಿನ ಹಡಗುಗಳೇ, ದುಃಖಿಸಿರಿ!
ನಿಮ್ಮ ರೇವು ಕೆಡವಲ್ಪಟ್ಟಿದೆ.”
ಕಿತ್ತಿಮಿನಿಂದ ಹೊರಟ ಹಡಗುಗಳಿಗೆ ಈ ವಾರ್ತೆಯು ತಲುಪಿತು.
2 ಸಮುದ್ರ ತೀರದಲ್ಲಿ ವಾಸಿಸುವ ಜನರೇ, ನೀವು ಸ್ತಬ್ಧರಾಗಿದ್ದು ದುಃಖಿಸಿರಿ.
ತೂರು “ಚೀದೋನಿನ ವ್ಯಾಪಾರಿ” ಆಗಿತ್ತು. ಆ ನಗರವು ವರ್ತಕರನ್ನು ಸಮುದ್ರದಾಚೆ ಕಳುಹಿಸಿತು.
ಆ ಜನರು ನಿನ್ನನ್ನು ಐಶ್ವರ್ಯಗಳಿಂದ ತುಂಬಿಸಿದರು.
3 ಅವರು ಸಮುದ್ರ ಪ್ರಯಾಣ ಮಾಡುತ್ತಾ ಧಾನ್ಯಕ್ಕಾಗಿ ಹುಡುಕುತ್ತಿದ್ದಾರೆ.
ತೂರಿನ ಜನರು ನೈಲ್ ನದಿಯ ಬದಿಗಳಲ್ಲಿ ಬೆಳೆಸುವ ಧಾನ್ಯವನ್ನು ಕೊಂಡುಕೊಂಡು
ಇತರ ದೇಶಗಳಿಗೆ ಮಾರುವರು.
4 ಚೀದೋನೇ, ನೀನು ತುಂಬಾ ದುಃಖದಿಂದಿರಬೇಕು.
ಯಾಕೆಂದರೆ ಸಮುದ್ರವೂ ಸಮುದ್ರದ ಕೋಟೆಯೂ ಹೇಳುವುದೇನೆಂದರೆ,
“ನನಗೆ ಮಕ್ಕಳಿಲ್ಲ, ನಾನು ಪ್ರಸವವೇದನೆ ಅನುಭವಿಸಲಿಲ್ಲ.
ನಾನು ಮಕ್ಕಳನ್ನು ಹೆರಲಿಲ್ಲ.
ನಾನು ಗಂಡುಮಕ್ಕಳನ್ನಾಗಲಿ ಹೆಣ್ಣುಮಕ್ಕಳನ್ನಾಗಲಿ ಬೆಳೆಸಲಿಲ್ಲ.”
5 ತೂರಿನ ವಿಷಯವಾದ ವಾರ್ತೆಯನ್ನು ಈಜಿಪ್ಟ್ ಕೇಳಿಸಿಕೊಳ್ಳುವದು.
ಆ ವರ್ತಮಾನವು ಈಜಿಪ್ಟನ್ನು ದುಃಖದಲ್ಲಿ ಮುಳುಗಿಸುವದು.
6 ಹಡಗುಗಳೇ, ನೀವು ತಾರ್ಷೀಷಿಗೆ ಹಿಂದಿರುಗಿರಿ!
ಸಮುದ್ರ ತೀರದಲ್ಲಿ ವಾಸಿಸುವವರಾದ ನೀವು ದುಃಖಿಸಬೇಕು!
7 ಹಿಂದಿನ ಕಾಲದಲ್ಲಿ ನೀವು ತೂರ್ ನಗರದಲ್ಲಿ ಉಲ್ಲಾಸಿಸಿದಿರಿ.
ಪ್ರಾರಂಭದಿಂದಲೇ ಆ ನಗರವು ಅಭಿವೃದ್ಧಿಹೊಂದುತ್ತಿತ್ತು.
ಆ ನಗರದ ಜನರು ಬಹುದೂರ ಪ್ರಯಾಣಮಾಡಿ ನೆಲೆಸಿರುವರು.
8 ತೂರ್ ಪಟ್ಟಣವು ಅನೇಕ ಗಣ್ಯವ್ಯಕ್ತಿಗಳನ್ನು ಕೊಟ್ಟಿರುತ್ತದೆ.
ಅಲ್ಲಿಯ ವರ್ತಕರಿಗೆ ಪ್ರಪಂಚದ ಎಲ್ಲಾ ಕಡೆಯೂ ಗೌರವವಿದೆ.
ಆದ್ದರಿಂದ ಇಂಥ ತೂರ್ ವಿರುದ್ಧ ಯೋಜನೆ ಮಾಡಿದವರಾರು?
9 ಸರ್ವಶಕ್ತನಾದ ಯೆಹೋವನೇ.
ಅದು ಪ್ರಾಮುಖ್ಯವಾಗದಂತೆ ಆತನೇ ತೀರ್ಮಾನಿಸಿದ್ದಾನೆ.
ಆತನು ಗೌರವಿಸಲ್ಪಡುವ ಜನರನ್ನು ಅವಮಾನಪಡಿಸಬೇಕೆಂತಲೂ ಮಾಡಿದ್ದಾನೆ.
10 ತಾರ್ಷೀಷಿನ ಹಡಗಿನವರೇ, ನೀವು ಊರಿಗೆ ಹಿಂತಿರುಗಿರಿ.
ಸಮುದ್ರವನ್ನು ಸಣ್ಣ ನದಿಯೋ ಎಂಬಂತೆ ದಾಟಿರಿ.
ಯಾರೂ ನಿಮ್ಮನ್ನು ನಿಲ್ಲಿಸಲಾರರು.
11 ಯೆಹೋವನು ಸಮುದ್ರದ ಮೇಲೆ ತನ್ನ ಕೈಯನ್ನು ಚಾಚಿದ್ದಾನೆ.
ಆತನು ತೂರಿಗೆ ವಿರುದ್ಧವಾಗಿ ಯುದ್ಧಮಾಡಲು ರಾಜ್ಯಗಳನ್ನು ಒಟ್ಟುಗೂಡಿಸುತ್ತಾನೆ.
ಯೆಹೋವನು ಕಾನಾನಿಗೆ ತೂರಿನ ಆಶ್ರಯಸ್ಥಳಗಳನ್ನು ನಾಶಮಾಡಲು ಆಜ್ಞಾಪಿಸುತ್ತಾನೆ.
12 ಯೆಹೋವನು ಹೇಳುವುದೇನೆಂದರೆ, “ಚೀದೋನ್ ಕುಮಾರಿಯೇ, ನೀನು ನಾಶವಾಗುವೆ;
ಎಂದಿಗೂ ನೀನು ಹರ್ಷಿಸುವದಿಲ್ಲ.
ತೂರಿನ ಜನರು, ‘ನಮಗೆ ಸೈಪ್ರಸ್‌ನವರು ಸಹಾಯ ಮಾಡುತ್ತಾರೆ’ ಎಂದು ಹೇಳುತ್ತಾರೆ.
ಆದರೆ ನೀನು ಸಮುದ್ರ ಮಾರ್ಗವಾಗಿ ಸೈಪ್ರಸ್‌ಗೆ ಹೋದರೆ ಅಲ್ಲಿ ನಿನಗೆ ವಿಶ್ರಮಿಸಲು ಸ್ಥಳ ದೊರಕುವದಿಲ್ಲ.”
13 ಆಗ ತೂರಿನ ಜನರು ಹೀಗೆನ್ನುವರು: “ಬಾಬಿಲೋನಿನವರು ನಮಗೆ ಸಹಾಯಮಾಡುವರು.” ಆದರೆ ಕಸ್ದೀಯರ ದೇಶವನ್ನು ನೋಡಿ.
ಬಾಬಿಲೋನ್ ಈಗ ದೇಶವಲ್ಲ.
ಬಾಬಿಲೋನನ್ನು ಅಶ್ಶೂರವು ವಶಪಡಿಸಿಕೊಂಡು ಅದರ ಸುತ್ತಲೂ ಕಾವಲು ಬುರುಜುಗಳನ್ನು ಕಟ್ಟಿಸಿದೆ.
ಅಲ್ಲಿದ್ದ ಸುಂದರ ಮನೆಗಳಿಂದ ಸೈನಿಕರು ಎಲ್ಲವನ್ನು ದೋಚಿರುತ್ತಾರೆ.
ಅಶ್ಶೂರ ಬಾಬಿಲೋನನ್ನು ಕಾಡುಪ್ರಾಣಿಗಳ ವಾಸಸ್ಥಳವನ್ನಾಗಿ ಮಾಡಿದೆ.
ಅವರು ಬಾಬಿಲೋನನ್ನು ಪಾಳುಬಿದ್ದ ಅವಶೇಷವನ್ನಾಗಿ ಮಾಡಿದ್ದಾರೆ.
14 ಆದ್ದರಿಂದ ತಾರ್ಷೀಷಿನ ಹಡಗುಗಳವರೇ, ದುಃಖಿಸಿರಿ!
ನಿಮ್ಮ ಆಶ್ರಯದ ರೇವು ನಾಶವಾಗಿದೆ.
15 ಎಪ್ಪತ್ತು ವರ್ಷಗಳ ತನಕ ಜನರಿಗೆ ತೂರಿನ ಜ್ಞಾಪಕವಿರುವದಿಲ್ಲ. ಇದು ಒಬ್ಬ ಅರಸನು ಆಳುವ ಕಾಲ. ಎಪ್ಪತ್ತು ವರ್ಷಗಳ ತರುವಾಯ ತೂರ್ ಈ ಹಾಡಿನಲ್ಲಿರುವ ವೇಶ್ಯೆಯಂತಿರುವದು:
16 “ಪುರುಷರು ಮರೆತಿರುವ ವೇಶ್ಯೆಯೇ,
ನಿನ್ನ ಕಿನ್ನರಿಯನ್ನು ತೆಗೆದುಕೊಂಡು ಊರೊಳಗೆ ಹೋಗಿ ನಿನ್ನ ಹಾಡನ್ನು ನುಡಿಸು,
ಮತ್ತೆಮತ್ತೆ ಹಾಡು.
ಆಗ ಯಾರಾದರೂ ನಿನ್ನನ್ನು ನೆನಪುಮಾಡಿಕೊಳ್ಳಬಹುದೇನೋ.”
17 ಎಪ್ಪತ್ತು ವರ್ಷಗಳ ನಂತರ ಯೆಹೋವನು ತೂರಿನ ಕುರಿತು ಮತ್ತೆ ಆಲೋಚಿಸಿ ತೀರ್ಮಾನಿಸುವನು. ತೂರಿನಲ್ಲಿ ವ್ಯಾಪಾರವು ಮತ್ತೆ ಪ್ರಾರಂಭವಾಗುವದು. ಅದು ಲೋಕದ ಎಲ್ಲಾ ರಾಜ್ಯಗಳಿಗೆ ವೇಶ್ಯೆಯಂತಿದೆ. 18 ಆದರೆ ಆಕೆ ತಾನು ಗಳಿಸಿದ ಹಣವನ್ನು ತನ್ನಲ್ಲಿ ಇಟ್ಟುಕೊಳ್ಳುವದಿಲ್ಲ. ತೂರ್ ತನ್ನ ವ್ಯಾಪಾರದಲ್ಲಿ ಗಳಿಸಿದ ಲಾಭವನ್ನು ಯೆಹೋವನಿಗಾಗಿ ಶೇಖರಿಸಿಟ್ಟಿದ್ದಾಳೆ. ಯೆಹೋವನನ್ನು ಸೇವಿಸುವವರಿಗೆ ಆ ಲಾಭವನ್ನು ಮೀಸಲಾಗಿಟ್ಟಿದ್ದಾಳೆ. ಹೀಗೆ ಯೆಹೋವನ ಸೇವಕರು ಹೊಟ್ಟೆತುಂಬ ಊಟಮಾಡುವರು, ಒಳ್ಳೆಯ ಬಟ್ಟೆ ಧರಿಸಿಕೊಳ್ಳುವರು.
1 ಈ ಲೋಕವು ಆರಂಭವಾಗುವುದಕ್ಕಿಂತ ಮುಂಚಿನಿಂದಲೂ ಇದ್ದ ಜೀವವಾಕ್ಯದ ಕುರಿತಾಗಿ ನಾವು ನಿಮಗೆ ಬರೆಯುತ್ತಿದ್ದೇವೆ: ಅದನ್ನು ಕಿವಿಯಾರೆ ಕೇಳಿದೆವು; ಕಣ್ಣಾರೆ ನೋಡಿದೆವು, ಮನಸ್ಸಿಟ್ಟು ಗಮನಿಸಿದೆವು, ಕೈಗಳಿಂದ ಮುಟ್ಟಿ ನೋಡಿದೆವು. 2 ಆ ಜೀವವು ನಮಗೆ ಪ್ರತ್ಯಕ್ಷವಾಯಿತು. ನಾವು ಅದನ್ನು ನೋಡಿದ್ದರಿಂದ ಅದರ ಬಗ್ಗೆ ಸಾಕ್ಷಿ ಹೇಳ ಬಲ್ಲೆವು. ನಾವೀಗ ನಿಮಗೆ ಆ ಜೀವದ ಬಗ್ಗೆ ಸಾಕ್ಷಿ ಹೇಳುತ್ತೇವೆ. ಅದು ತಂದೆಯಾದ ದೇವರ ಸಂಗಡವಿದ್ದ ನಿತ್ಯವಾದ ಜೀವ. ದೇವರು ಈ ಜೀವವನ್ನು ನಮಗೆ ತೋರಿಸಿದನು. 3 ನಾವು ನೋಡಿದವುಗಳನ್ನೂ ಕೇಳಿದವುಗಳನ್ನೂ ಈಗ ನಿಮಗೆ ಹೇಳುತ್ತೇವೆ. ಏಕೆಂದರೆ ನೀವು ನಮ್ಮ ಅನ್ಯೋನ್ಯತೆಯಲ್ಲಿ ಪಾಲುಗಾರರಾಗಬೇಕೆಂಬುದು ನಮ್ಮ ಅಪೇಕ್ಷೆ. ನಮ್ಮ ಈ ಅನ್ಯೋನ್ಯತೆಯು ತಂದೆಯಾದ ದೇವರ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಸಂಗಡವಿರುವಂಥದ್ದು. 4 ನಮ್ಮ[a] ಸಂತೋಷವು ಪರಿಪೂರ್ಣವಾಗಲೆಂದು ನಾವು ನಿಮಗೆ ಈ ಸಂಗತಿಗಳನ್ನು ಬರೆಯುತ್ತಿದ್ದೇವೆ.
ದೇವರು ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ
5 ನಾವು ದೇವರಿಂದ ಕೇಳಿ ನಿಮಗೆ ತಿಳಿಸುವ ವಾರ್ತೆ ಏನೆಂದರೆ, ದೇವರು ಬೆಳಕಾಗಿದ್ದಾನೆ; ಆತನಲ್ಲಿ ಅಂಧಕಾರವಿಲ್ಲ. 6 ಆದ್ದರಿಂದ ದೇವರ ಜೊತೆಯಲ್ಲಿ ಅನ್ಯೋನ್ಯತೆಯಿಂದ ಇದ್ದೇವೆ ಎಂದು ನಾವು ಹೇಳಿಕೊಂಡು, ಅಂಧಕಾರದಲ್ಲಿ ಜೀವಿಸುತ್ತಿದ್ದರೆ ಸುಳ್ಳು ಹೇಳಿದಂತಾಯಿತು. ಏಕೆಂದರೆ ನಾವು ಸತ್ಯವನ್ನು ಅನುಸರಿಸುತ್ತಿಲ್ಲ. 7 ದೇವರು ಬೆಳಕಿನಲ್ಲಿದ್ದಾನೆ. ಆದ್ದರಿಂದ ನಾವೂ ಬೆಳಕಿನಲ್ಲಿ ಜೀವಿಸಬೇಕಾಗಿದೆ. ನಾವು ಬೆಳಕಿನಲ್ಲಿ ಜೀವಿಸುವವರಾಗಿದ್ದರೆ ಪರಸ್ಪರ ಅನ್ಯೋನ್ಯತೆಯಲ್ಲಿದ್ದೇವೆ ಮತ್ತು ದೇವರ ಮಗನಾದ ಯೇಸುವಿನ ರಕ್ತವು ನಮ್ಮ ಪಾಪಗಳನ್ನೆಲ್ಲಾ ನಿವಾರಣೆ ಮಾಡುತ್ತದೆ.
8 ನಮ್ಮಲ್ಲಿ ಪಾಪವಿಲ್ಲವೆಂದು ಹೇಳಿಕೊಂಡರೆ, ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುವವರಾಗಿದ್ದೇವೆ ಮತ್ತು ನಮ್ಮಲ್ಲಿ ಸತ್ಯವೇ ಇಲ್ಲ. 9 ಆದರೆ ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿ ನಮ್ಮನ್ನು ಶುದ್ಧೀಕರಿಸುತ್ತಾನೆ. 10 ನಾವು ಪಾಪಮಾಡಿಲ್ಲವೆಂದು ಹೇಳಿದರೆ ದೇವರನ್ನೇ ಸುಳ್ಳುಗಾರನನ್ನಾಗಿ ಮಾಡುವವರಾಗಿದ್ದೇವೆ ಮತ್ತು ದೇವರ ವಾಕ್ಯವನ್ನು ಒಪ್ಪಿಕೊಳ್ಳದವರಾಗಿದ್ದೇವೆ.
Kannada Holy Bible: Easy-to-Read Version. All rights reserved. © 1997 Bible League International