Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 30

ವಿಶೇಷ ಹರಕೆಗಳು

30 ಮೋಶೆಯು ಇಸ್ರೇಲರ ಕುಲಪ್ರಧಾನರಿಗೆ ಹೇಳಿದ್ದೇನೆಂದರೆ: ಯೆಹೋವನು ಹೀಗೆ ಆಜ್ಞಾಪಿಸಿದ್ದಾನೆ:

“ಯಾವನಾದರೂ ಯೆಹೋವನಿಗೆ ಇಂಥದ್ದನ್ನು ಕೊಡುತ್ತೇನೆಂದು ಹರಕೆ ಮಾಡಿದರೆ ಅಥವಾ ತಾನು ಇಂಥದ್ದನ್ನು ಮಾಡುವುದಿಲ್ಲ ಎಂದು ಆಣೆಯಿಟ್ಟುಕೊಂಡರೆ, ಅವನು ತನ್ನ ಮಾತನ್ನು ಮೀರದೆ ತಾನು ಹೇಳಿದಂತೆಯೇ ನೆರವೇರಿಸಬೇಕು.

“ಇನ್ನೂ ತನ್ನ ತಂದೆಯ ಮನೆಯಲ್ಲಿರುವ ಯುವತಿಯು ಯೆಹೋವನಿಗೆ ಇಂಥದ್ದನ್ನು ಕೊಡುತ್ತೇನೆಂದು ಹರಕೆ ಮಾಡಿಕೊಂಡರೆ ಅಥವಾ ಇಂಥದ್ದನ್ನು ಮಾಡುವುದಿಲ್ಲ ಎಂದು ಆಣೆಯಿಟ್ಟುಕೊಂಡರೆ, ಅವಳ ತಂದೆಯು ಅವಳ ಹರಕೆಯನ್ನಾಗಲಿ ಆಣೆಯನ್ನಾಗಲಿ ಕೇಳಿಯೂ ಅದರ ಬಗ್ಗೆ ಅವಳಿಗೆ ಏನೂ ಹೇಳದಿದ್ದರೆ, ಆಕೆಯು ಅಂಥಾ ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು. ಆದರೆ ತಂದೆಯು ಆ ಸಂಗತಿಯನ್ನು ತಿಳಿದ ದಿನವೇ ಅದನ್ನು ಆಕ್ಷೇಪಿಸಿದರೆ, ಆಕೆಯು ಮಾಡಿದ ಹರಕೆಯನ್ನಾಗಲಿ ಇಟ್ಟುಕೊಂಡ ಆಣೆಯನ್ನಾಗಲಿ ನೆರವೇರಿಸಬೇಕಿಲ್ಲ. ತಂದೆಯು ಆಕ್ಷೇಪಿಸಿದ್ದರಿಂದ ಯೆಹೋವನು ಅವಳನ್ನು ಕ್ಷಮಿಸುವನು.

“ಆದರೆ ಅವಳು ತನ್ನ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಿಲ್ಲದಿರುವಾಗಲೇ ಮದುವೆಯಾದರೆ, ಗಂಡನು ಅದರ ಬಗ್ಗೆ ತಿಳಿದ ದಿನದಂದು ಆಕೆಗೆ ಅದರ ಬಗ್ಗೆ ಏನೂ ಹೇಳದಿದ್ದರೆ, ಆಕೆ ತಾನು ಮಾಡಿದ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಬೇಕು. ಆದರೆ ಗಂಡನು ಅದನ್ನು ಕೇಳಿದ ದಿನವೇ ಆಕ್ಷೇಪಿಸಿದರೆ, ಆಕೆಯು ಮಾಡಿದ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಬೇಕಿಲ್ಲ. ಯೆಹೋವನು ಅವಳನ್ನು ಕ್ಷಮಿಸುವನು.

“ವಿಧವೆಯಾಗಲಿ ವಿವಾಹವಿಚ್ಛೇಧನ ಹೊಂದಿದ ಸ್ತ್ರೀಯಾಗಲಿ ತಾನು ಮಾಡಿದ ಪ್ರತಿಯೊಂದು ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು.

10 “ವಿವಾಹಿತ ಸ್ತ್ರೀಯು ಅಂಥಾ ಹರಕೆಯನ್ನಾಗಲಿ ಪ್ರಮಾಣವನ್ನಾಗಲಿ ಮಾಡಿದಾಗ, 11 ಅವಳ ಗಂಡನು ತಿಳಿದು ಅಡ್ಡಿಮಾಡದೆ ಏನೂ ಹೇಳದಿದ್ದರೆ ಆಕೆಯು ಆ ಹರಕೆಗಳನ್ನೂ ಆಣೆಗಳನ್ನೂ ನೆರವೇರಿಸಬೇಕು. 12 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ರದ್ದುಗೊಳಿಸಿದರೆ, ಅವಳ ಎಲ್ಲ ಹರಕೆಗಳಿಗೆ ಮತ್ತು ಆಣೆಗಳಿಗೆ ಬೆಲೆಯಿರುವುದಿಲ್ಲ. ಯಾಕೆಂದರೆ ಗಂಡನು ಅವುಗಳನ್ನು ರದ್ದುಪಡಿಸಿದನು. ಆದ್ದರಿಂದ ಯೆಹೋವನು ಆಕೆಯನ್ನು ಕ್ಷಮಿಸುತ್ತಾನೆ. 13 ಹೆಂಡತಿ ಮಾಡಿದ ಹರಕೆಯನ್ನೂ ಆಣೆಯನ್ನೂ ಸ್ಥಿರಪಡಿಸುವುದಕ್ಕಾಗಲಿ ರದ್ದುಪಡಿಸುವುದಕ್ಕಾಗಲಿ ಗಂಡನಿಗೆ ಅಧಿಕಾರವಿರುವುದು. 14 ಆದರೆ ಅವಳ ಗಂಡನು ಅದನ್ನು ಕೇಳಿದ ದಿನದಿಂದ ಅದರ ಬಗ್ಗೆ ಆಕ್ಷೇಪಿಸದಿದ್ದರೆ, ಅವನು ಅವಳ ಎಲ್ಲಾ ಹರಕೆಗಳನ್ನು ಮತ್ತು ಆಣೆಗಳನ್ನು ಸ್ಥಿರಪಡಿಸಿದ್ದಾನೆ. ಯಾಕೆಂದರೆ ಅವನು ಅದರ ಬಗ್ಗೆ ಕೇಳಿದ ದಿನದಂದು ಅವಳಿಗೆ ಏನೂ ಹೇಳಲಿಲ್ಲ. 15 ಆದರೆ ಅವನು ಅವುಗಳ ಬಗ್ಗೆ ಕೇಳಿ ಸ್ವಲ್ಪ ದಿನಗಳಾದ ಮೇಲೆ ಆಕೆಯ ಹರಕೆಗಳನ್ನಾಗಲಿ ಆಣೆಗಳನ್ನಾಗಲಿ ರದ್ದುಪಡಿಸಿದರೆ, ಆಕೆಯ ಹರಕೆಯನ್ನು ಮುರಿದದ್ದಕ್ಕಾಗಿ ಅವನು ಶಿಕ್ಷೆಯನ್ನು ಅನುಭವಿಸುವನು.”

16 ಗಂಡಹೆಂಡತಿಯರ ಬಗ್ಗೆ ಮತ್ತು ತಂದೆಯೊಡನೆ ಇನ್ನೂ ಮನೆಯಲ್ಲಿರುವ ಮಗಳ ವಿಷಯದಲ್ಲಿ ಯೆಹೋವನು ಮೋಶೆಗೆ ಈ ಆಜ್ಞೆಗಳನ್ನು ಕೊಟ್ಟನು.

ಕೀರ್ತನೆಗಳು 74

ರಚನೆಗಾರ: ಆಸಾಫ.

74 ದೇವರೇ, ನಮ್ಮನ್ನು ಶಾಶ್ವತವಾಗಿ ಕೈಬಿಟ್ಟಿರುವೆಯಾ?
    ನಿನ್ನ ಜನರ ಮೇಲೆ ಇನ್ನೂ ಕೋಪದಿಂದಿರುವೆಯಾ?
ಬಹುಕಾಲದ ಹಿಂದೆ ನೀನು ಕೊಂಡುಕೊಂಡ ನಿನ್ನ ಜನರನ್ನು ಜ್ಞಾಪಿಸಿಕೊ.
    ನೀನು ನಮ್ಮನ್ನು ರಕ್ಷಿಸಿದೆ. ನಾವು ನಿನ್ನವರೇ.
ನೀನು ವಾಸಿಸಿದ ಚೀಯೋನ್ ಪರ್ವತವನ್ನು ಜ್ಞಾಪಿಸಿಕೊ.
ಬಹುಕಾಲದಿಂದ ಹಾಳುಬಿದ್ದಿರುವ ಕಟ್ಟಡಗಳ ಬಳಿಗೆ ಆಗಮಿಸು.
    ಶತ್ರುವು ನಾಶಮಾಡಿದ ನಿನ್ನ ಪವಿತ್ರ ಸ್ಥಳಕ್ಕೆ ಹಿಂತಿರುಗಿ ಬಾ.

ಆಲಯದಲ್ಲಿ ಶತ್ರುಗಳು ಯುದ್ಧಾರ್ಭಟ ಮಾಡಿದರು.
    ಆಲಯದಲ್ಲಿ ತಮ್ಮ ಧ್ವಜಾರೋಹಣ ಮಾಡಿ ತಮ್ಮ ಜಯವನ್ನು ಸೂಚಿಸಿದರು.
ಶತ್ರು ಸೈನಿಕರಾದರೋ ಕಳೆಗುದ್ದಲಿಯಿಂದ
    ಕಳೆ ಕೀಳುತ್ತಿರುವ ಜನರಂತಿದ್ದಾರೆ.
ನಿನ್ನ ಆಲಯದ ಕೆತ್ತನೆ ಕೆಲಸಗಳನ್ನು ಅವರು ಕೊಡಲಿಗಳಿಂದಲೂ
    ಮಚ್ಚುಗತ್ತಿಗಳಿಂದಲೂ ಕತ್ತರಿಸಿ ಹಾಕಿದರು.
ಆ ಸೈನಿಕರು ನಿನ್ನ ಪವಿತ್ರ ಸ್ಥಳವನ್ನು ಸುಟ್ಟು ನೆಲಸಮಮಾಡಿದರು.
    ಆ ಆಲಯವು ನಿನ್ನ ನಾಮ ಘನತೆಗಾಗಿ ಕಟ್ಟಲ್ಪಟ್ಟಿತ್ತಲ್ಲಾ!
ನಮ್ಮನ್ನು ಸಂಪೂರ್ಣವಾಗಿ ಜಜ್ಜಿಹಾಕಲು ಶತ್ರುಗಳು ನಿರ್ಧರಿಸಿ
    ದೇಶದ ಪ್ರತಿಯೊಂದು ಪವಿತ್ರ ಸ್ಥಳವನ್ನೂ ಸುಟ್ಟುಹಾಕಿದರು.
ನಮ್ಮ ಯಾವ ಚಿಹ್ನೆಗಳೂ ನಮಗೆ ಕಾಣಲಿಲ್ಲ.
    ಪ್ರವಾದಿಗಳಲ್ಲಿ ಯಾರೂ ಉಳಿದಿಲ್ಲ.
    ಯಾರಿಗೂ ದಿಕ್ಕೇ ತೋಚುತ್ತಿಲ್ಲ.
10 ದೇವರೇ, ಇನ್ನೆಷ್ಟರವರೆಗೆ ಶತ್ರುಗಳು ನಮ್ಮನ್ನು ಗೇಲಿಮಾಡುತ್ತಿರಬೇಕು?
    ನಿನ್ನ ಹೆಸರಿಗೆ ಅವರು ಅವಮಾನ ಮಾಡುತ್ತಲೇ ಇರಬೇಕೇ?
11 ನೀನು ನಮ್ಮನ್ನು ಬಹು ಕಠಿಣವಾಗಿ ದಂಡಿಸಿದ್ದೇಕೆ?
    ನಿನ್ನ ಮಹಾಶಕ್ತಿಯಿಂದ ನಮ್ಮನ್ನು ಸಂಪೂರ್ಣವಾಗಿ ನಾಶಮಾಡಿರುವಿಯಲ್ಲಾ!
12 ದೇವರೇ, ಬಹುಕಾಲದಿಂದ ನೀನು ನಮ್ಮರಾಜ.
    ಈ ದೇಶದಲ್ಲಿ ಅನೇಕ ಯುದ್ಧಗಳನ್ನು ಗೆಲ್ಲಲು ನೀನು ನಮಗೆ ಸಹಾಯಮಾಡಿದೆ.
13 ಮಹಾಶಕ್ತಿಯಿಂದ ಕೆಂಪು ಸಮುದ್ರವನ್ನು ಇಬ್ಭಾಗ ಮಾಡಿದಾತನು ನೀನೇ.
    ಸಮುದ್ರದಲ್ಲಿ ಮಹಾ ತಿಮಿಂಗಲಗಳ ತಲೆಗಳನ್ನು ಜಜ್ಜಿ ಹಾಕಿದಾತನು ನೀನೇ.
14 ಲಿವ್ಯಾತಾನನ ತಲೆಗಳನ್ನು ಜಜ್ಜಿಹಾಕಿ ಪ್ರಾಣಿಗಳಿಗೆ ಆಹಾರವನ್ನಾಗಿ ಮಾಡಿದಾತನು ನೀನೇ.
15 ತೊರೆಗಳೂ ನದಿಗಳೂ ಹರಿಯುವಂತೆ ಮಾಡುವಾತನು ನೀನೇ.
    ನದಿಗಳನ್ನು ಒಣಗಿಸುವಾತನೂ ನೀನೇ.
16 ನೀನು ಹಗಲನ್ನೂ ರಾತ್ರಿಯನ್ನೂ ನಿನ್ನ ಹತೋಟಿಯಲ್ಲಿಟ್ಟುಕೊಂಡಿರುವೆ.
    ಸೂರ್ಯನನ್ನೂ ಚಂದ್ರನನ್ನೂ ಸೃಷ್ಟಿಮಾಡಿದಾತನು ನೀನೇ.
17 ಭೂಮಿಯ ಮೇಲೆ ಮೇರೆಗಳನ್ನು ಹಾಕಿರುವಾತನು ನೀನೇ.
    ಬೇಸಿಗೆಕಾಲವನ್ನೂ ಚಳಿಗಾಲವನ್ನೂ ನಿರ್ಮಿಸಿದಾತನು ನೀನೇ.
18 ದೇವರೇ, ಇವುಗಳನ್ನೆಲ್ಲಾ ಜ್ಞಾಪಿಸಿಕೊ.
    ವೈರಿಯು ನಿನಗೆ ಮಾಡಿದ ಅವಮಾನವನ್ನು ನೆನಸಿಕೊ!
    ಆ ಮೂರ್ಖರು ನಿನ್ನ ನಾಮವನ್ನು ದ್ವೇಷಿಸುತ್ತಾರೆ.
19 ದೇವರೇ, ನಿನ್ನ ಪಾರಿವಾಳವನ್ನು ಆ ದುಷ್ಟ ಪ್ರಾಣಿಗಳು ತೆಗೆದುಕೊಳ್ಳದಿರಲಿ.
    ನಿನ್ನ ಬಡಜನರನ್ನು ಮರೆತುಬಿಡಬೇಡ.
20 ನಿನ್ನ ಒಡಂಬಡಿಕೆಯನ್ನು ಜ್ಞಾಪಿಸಿಕೊ.
    ಈ ದೇಶದ ಕತ್ತಲೆಯ ಸ್ಥಳಗಳಲ್ಲೆಲ್ಲಾ ಹಿಂಸೆಯೂ ತುಂಬಿಕೊಂಡಿದೆ.
21 ದೇವರೇ, ನಿನ್ನ ಜನರಿಗೆ ಅವಮಾನವಾಗಿದೆ.
    ಅವರಿಗೆ ಕೇಡಾಗಲು ಬಿಡಬೇಡ.
    ನಿನ್ನ ಬಡಜನರೂ ನಿಸ್ಸಹಾಯಕರೂ ನಿನ್ನನ್ನು ಕೊಂಡಾಡಲಿ.
22 ದೇವರೇ, ಎದ್ದು ಹೋರಾಡು!
    ನಿನಗೆ ಸವಾಲೊಡ್ಡಿದ ಆ ನಿಂದಕರನ್ನು ಜ್ಞಾಪಿಸಿಕೊ!
23 ನಿನ್ನ ವೈರಿಗಳ ಆರ್ಭಟವನ್ನು ಮರೆತುಬಿಡಬೇಡ.
    ಅವರು ನಿನಗೆ ಪದೇಪದೇ ಅವಮಾನಮಾಡಿದರು.

ಯೆಶಾಯ 22

ಜೆರುಸಲೇಮಿಗೆ ದೇವರ ಸಂದೇಶ

22 ದಿವ್ಯದರ್ಶನದ ಕಣಿವೆಯ ವಿಷಯವಾಗಿ ದುಃಖದ ಸಂದೇಶ:

ಜನಗಳೇ, ನಿಮಗೆ ಏನಾಯಿತು?
    ನಿಮ್ಮ ಮನೆ ಮಾಳಿಗೆಯ ಮೇಲೆ ಯಾಕೆ ಅಡಗಿರುತ್ತೀರಿ?
ಹಿಂದಿನ ಕಾಲದಲ್ಲಿ ಈ ನಗರವು ಅತ್ಯಂತ ಜನಸಂದಣಿಯಿಂದ ಕೂಡಿತ್ತು.
ಈ ನಗರದಲ್ಲಿ ಗದ್ದಲವೂ ಜನರ ಸಂತಸದ ಧ್ವನಿಯೂ ತುಂಬಿತ್ತು.
    ಆದರೆ ಈಗ ಎಲ್ಲವೂ ಬದಲಾಯಿತು.
ನಿಮ್ಮ ಜನರು ಸತ್ತದ್ದು ಖಡ್ಗದಿಂದಲ್ಲ.
    ಯುದ್ಧದಲ್ಲಿ ಸಾಯದೆ ಬೇರೆ ರೀತಿಯಲ್ಲಿ ಸತ್ತರು.
ಅಧಿಪತಿಗಳೆಲ್ಲಾ ಒಟ್ಟಾಗಿ ಪಲಾಯನಗೈದರು.
    ಆದರೆ ಅವರೆಲ್ಲಾ ಬಿಲ್ಲುಗಳಿಲ್ಲದೆ ಹಿಡಿಯಲ್ಪಟ್ಟರು.
ನಿಮ್ಮ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಬಹು ದೂರಪ್ರದೇಶಗಳಿಗೆ ಓಡಿದರು.
    ಆದರೆ ಅವರೆಲ್ಲಾ ಹಿಡಿಯಲ್ಪಟ್ಟರು.

ಆದ್ದರಿಂದ ನಾನು ಹೇಳುವುದೇನೆಂದರೆ: “ನೀವು ನನ್ನ ಕಡೆಗೆ ನೋಡಬೇಡಿ!
    ನನ್ನನ್ನು ಅಳಲು ಬಿಡಿರಿ!
ಜೆರುಸಲೇಮಿನ ನಾಶನದ ಕುರಿತಾಗಿ ನನ್ನನ್ನು ಕೂಡಲೇ ಸಂತೈಸಬೇಡಿರಿ.”

ಯೆಹೋವನು ಒಂದು ವಿಶೇಷ ದಿನವನ್ನು ಆರಿಸಿರುತ್ತಾನೆ. ಆ ದಿನದಲ್ಲಿ ಗಲಭೆ ಮತ್ತು ಗಲಿಬಿಲಿಯು ಇರುವದು. ದಿವ್ಯದರ್ಶನದ ಕಣಿವೆಯಲ್ಲಿ ಜನರು ಒಬ್ಬರನ್ನೊಬ್ಬರು ತುಳಿದುಕೊಂಡು ಅವರ ಮೇಲೆಯೇ ನಡೆದುಕೊಂಡು ಹೋಗುವರು. ನಗರದ ಕೋಟೆಗೋಡೆಗಳು ಕೆಡವಲ್ಪಡುವವು. ಕಣಿವೆಯಲ್ಲಿ ವಾಸಿಸುವ ಜನರು ಬೆಟ್ಟದ ಮೇಲಿನ ನಗರದ ಜನರಿಗೆ ಚೀರಾಡುವರು. ಏಲಾಮಿನ ಅಶ್ವಸೈನಿಕರು ತಮ್ಮ ಬತ್ತಳಿಕೆಯನ್ನು ತೆಗೆದುಕೊಂಡು ರಣರಂಗಕ್ಕೆ ಹೊರಡುವರು. ಕೀರ್ ಸ್ಥಳದ ಜನರು ತಮ್ಮ ಗುರಾಣಿಗಳಿಂದ ಶಬ್ದಮಾಡುವರು. ಸೈನ್ಯಗಳು ನಿಮ್ಮ ವಿಶೇಷವಾದ ಕಣಿವೆಯಲ್ಲಿ ಎದುರುಬದುರಾಗಿ ಭೇಟಿಯಾಗುವರು. ಕಣಿವೆಯು ರಥಗಳಿಂದ ತುಂಬಿಹೋಗುವದು. ಅಶ್ವದಳದವರನ್ನು ದ್ವಾರದ ಮುಂದೆ ನಿಲ್ಲಿಸಲಾಗುವದು. ಆ ಸಮಯದಲ್ಲಿ ಯೆಹೂದದ ಜನರು ತಾವು ಕಾಡಿನ ಅರಮನೆಯಲ್ಲಿಟ್ಟಿದ್ದ ಆಯುಧಗಳನ್ನು ಉಪಯೋಗಿಸುವುದಕ್ಕೆ ಮನಸ್ಸು ಮಾಡುವರು. ಯೆಹೂದವನ್ನು ರಕ್ಷಿಸುವ ಗೋಡೆಗಳನ್ನು ಶತ್ರುಗಳು ಕೆಡವಿಹಾಕುವರು.

9-11 ದಾವೀದ ನಗರದ ಕೋಟೆಗೋಡೆಗಳಲ್ಲಿ ಬಿರುಕುಗಳು ಉಂಟಾಗುವವು. ಆ ಬಿರುಕುಗಳನ್ನು ನೀವು ಸ್ಪಷ್ಟವಾಗಿ ಕಾಣಬಹುದು. ಅದರೊಳಗಿರುವ ಮನೆಗಳನ್ನು ಲೆಕ್ಕ ಮಾಡಬಹುದು. ಆ ಮನೆಗಳ ಕಲ್ಲುಗಳನ್ನು ತೆಗೆದು ಬಿರುಕು ಮುಚ್ಚಲಾಗುವದು. ಎರಡು ಸಾಲು ಕೋಟೆಗೋಡೆಗಳ ಮಧ್ಯದಲ್ಲಿ ಹಳೆಯ ಕಾಲುವೆಯ ಮೂಲಕ ನೀರನ್ನು ತರಿಸಿ ಆ ನೀರನ್ನು ಉಳಿತಾಯ ಮಾಡುವಿರಿ.

ಇವೆಲ್ಲವನ್ನು ನೀವು ನಿಮ್ಮನ್ನು ಸಂರಕ್ಷಿಸಿಕೊಳ್ಳುವದಕ್ಕೋಸ್ಕರ ಮಾಡುವಿರಿ. ಆದರೆ ಇವೆಲ್ಲವನ್ನು ನಿರ್ಮಿಸಿದ ದೇವರ ಮೇಲೆ ನೀವು ನಂಬಿಕೆ ಇಡುವದಿಲ್ಲ. ಇದನ್ನು ಬಹಳ ಕಾಲದ ಹಿಂದೆ ನಿರ್ಮಿಸಿದ ದೇವರನ್ನು ನೀವು ನೋಡುವದಿಲ್ಲ. 12 ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಜನರಿಗೆ, ಅವರ ಸತ್ತುಹೋದ ಸ್ನೇಹಿತರಿಗೋಸ್ಕರ ರೋಧಿಸಿ ದುಃಖಿಸಿರಿ ಎಂದು ಹೇಳುವನು. ಜನರು ತಮ್ಮ ತಲೆಗಳನ್ನು ಬೋಳಿಸಿ ಶೋಕವಸ್ತ್ರಗಳನ್ನು ಧರಿಸುವರು. 13 ಇಗೋ, ಈಗ ಜನರು ಸಂತೋಷಪಡುತ್ತಿದ್ದಾರೆ. ಅವರು ಹರ್ಷಿಸುತ್ತಾ:

“ದನಕುರಿಗಳನ್ನು ಕೊಯ್ಯಿರಿ, ನಾವು ಹಬ್ಬ ಆಚರಿಸೋಣ,
ಊಟಮಾಡಿ ದ್ರಾಕ್ಷಾರಸ ಕುಡಿಯೋಣ,
    ತಿಂದು, ಕುಡಿದು ಸಂತೋಷವಾಗಿರೋಣ. ಯಾಕೆಂದರೆ ನಾಳೆ ನಾವು ಸಾಯುವೆವು” ಎಂದು ಹೇಳುವರು.

14 ಸರ್ವಶಕ್ತನಾದ ಯೆಹೋವನು ನನಗೆ ತಿಳಿಸಿದ ಈ ಮಾತುಗಳನ್ನು ಕಿವಿಯಾರೆ ಕೇಳಿದೆನು: “ನೀವು ಕೆಟ್ಟಕಾರ್ಯಗಳನ್ನು ನಡೆಸಿ ಅಪರಾಧಿಗಳಾಗಿರುವಿರಿ. ನಿಮ್ಮ ದುಷ್ಟತ್ವವು ಕ್ಷಮಿಸಲ್ಪಡುವ ಮುಂಚೆ ನೀವು ಸಾಯುವಿರಿ ಎಂದು ಖಂಡಿತವಾಗಿ ಹೇಳುತ್ತೇನೆ” ಇದು ನನ್ನ ಒಡೆಯನಾದ ಸರ್ವಶಕ್ತನ ನುಡಿಗಳು.

ಶೆಬ್ನಕ್ಕೆ ದೇವರ ಸಂದೇಶ

15 ನನ್ನ ಒಡೆಯನೂ ಸರ್ವಶಕ್ತನೂ ಆದ ಯೆಹೋವನು, “ಸೇವಕನಾದ ಶೆಬ್ನನ ಬಳಿಗೆ ಹೋಗು. ಅವನು ಅರಮನೆಯ ಮೇಲ್ವಿಚಾರಕನಾಗಿದ್ದಾನೆ. 16 ಆ ಸೇವಕನನ್ನು ‘ನೀನಿಲ್ಲಿ ಏನು ಮಾಡುತ್ತಿರುವೆ? ನಿನ್ನ ಕುಟುಂಬದವರಲ್ಲಿ ಯಾರನ್ನಾದರೂ ಇಲ್ಲಿ ಸಮಾಧಿ ಮಾಡಿರುವಿಯಾ? ಇಲ್ಲಿ ಸಮಾಧಿಯನ್ನು ಯಾಕೆ ನಿರ್ಮಿಸಿರುವೆ? ಎಂದು ಕೇಳು.’” ಅದಕ್ಕೆ ಯೆಶಾಯನು, “ಈ ಮನುಷ್ಯನನ್ನು ನೋಡು. ಅವನು ತನ್ನ ಸಮಾಧಿಯನ್ನು ಎತ್ತರವಾದ ಸ್ಥಳದಲ್ಲಿ ಸಿದ್ಧಪಡಿಸುತ್ತಿದ್ದಾನೆ. ಅವನು ಸಮಾಧಿ ಸಿದ್ಧಪಡಿಸಲು ಬಂಡೆಯನ್ನು ಕೊರೆಯುತ್ತಿದ್ದಾನೆ.

17-18 “ಮನುಷ್ಯನೇ, ಯೆಹೋವನು ನಿನ್ನನ್ನು ಧ್ವಂಸ ಮಾಡುವನು. ಆತನು ನಿನ್ನನ್ನು ಚೆಂಡಿನಂತೆ ಉರುಳಿಸಿ ಬಹುದೂರಕ್ಕೆ ಅಂದರೆ ಬೇರೊಂದು ದೇಶದ ತೆರೆದ ತೋಳುಗಳಿಗೆ ಎಸೆದುಬಿಡುವನು. ಅಲ್ಲಿ ನೀನು ಸಾಯುವೆ” ಎಂದು ಹೇಳಿದನು.

ಅದಕ್ಕೆ ಯೆಹೋವನು, “ನೀನು ನಿನ್ನ ರಥಗಳಲ್ಲಿ ಹೆಚ್ಚಳಪಡುತ್ತಿರುವೆ. ಆದರೆ ಆ ದೂರದೇಶದಲ್ಲಿರುವ ನಿನ್ನ ಹೊಸ ಅರಸನ ಬಳಿಯಲ್ಲಿ ಇದಕ್ಕಿಂತಲೂ ಶ್ರೇಷ್ಠವಾದ ರಥಗಳಿವೆ. ಅವನ ಅರಮನೆಯಲ್ಲಿ ನಿನ್ನ ರಥಗಳು ಮುಖ್ಯವಾದವುಗಳಾಗಿರುವುದಿಲ್ಲ. 19 ಇಲ್ಲಿ ನೀನಿರುವ ಮುಖ್ಯ ಹುದ್ದೆಯಿಂದ ನಿನ್ನನ್ನು ತಳ್ಳಿಬಿಡುವೆನು. ನಿನ್ನ ಹೊಸ ಅರಸನು ನಿನ್ನನ್ನು ಆ ಹುದ್ದೆಯಿಂದ ತೆಗೆದುಬಿಡುವನು. 20 ಆ ಸಮಯದಲ್ಲಿ ನನ್ನ ಸೇವಕನೂ ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ನಾನು ಕರೆಯುವೆನು. 21 ನಿನ್ನ ಬಟ್ಟೆಯನ್ನು ತೆಗೆದು ಆ ಸೇವಕನಿಗೆ ಕೊಡುವೆನು. ನಿನ್ನ ರಾಜದಂಡವನ್ನು ಅವನಿಗೆ ಕೊಡುವೆನು. ನಿನ್ನ ವಿಶೇಷ ಹುದ್ದೆಯನ್ನು ಅವನಿಗೆ ಕೊಡುವೆನು. ಆ ಸೇವಕನು ಯೆಹೂದದ ಜನರಿಗೂ ಜೆರುಸಲೇಮಿನ ಜನರಿಗೂ ತಂದೆಯಂತಿರುವನು.

22 “ದಾವೀದನ ಮನೆಯ ಬೀಗದ ಕೈಯನ್ನು ಅವನ ಕುತ್ತಿಗೆಯಲ್ಲಿರಿಸುವೆನು. ಅವನು ಬಾಗಿಲನ್ನು ತೆರೆದರೆ ಅದು ತೆರೆದೇ ಇರುವದು. ಅದನ್ನು ಯಾರೂ ಮುಚ್ಚಲಾರರು. ಅವನು ಬಾಗಿಲನ್ನು ಮುಚ್ಚಿದರೆ ಅದು ಮುಚ್ಚಿಯೇ ಇರುವದು. ಅದನ್ನು ತೆರೆಯಲು ಯಾರಿಂದಲೂ ಆಗುವದಿಲ್ಲ. 23 ಒಂದು ಗಟ್ಟಿಯಾದ ಹಲಗೆಯಲ್ಲಿ ಮೊಳೆಯನ್ನು ಹೊಡೆದು ಗಟ್ಟಿಯಾಗಿರಿಸುವಂತೆ ಅವನನ್ನು ನಾನು ಬಲಪಡಿಸುವೆನು. ಆ ಸೇವಕನು ತನ್ನ ಕುಟುಂಬದವರಿಗೆ ಗೌರವಪೀಠದಂತಿರುವನು. 24 ಅವನ ತಂದೆಯ ಮನೆಯ ಎಲ್ಲಾ ವಿಶೇಷ ಸಂಗತಿಗಳನ್ನು, ವಸ್ತುಗಳನ್ನು ಅವನಿಗೆ ತೂಗುಹಾಕುವರು. ಎಲ್ಲಾ ಹಿರಿಕಿರಿಯರು ಅವನ ಮೇಲೆ ಆತುಕೊಂಡಿರುವರು. ಅವರು ಅವನಿಗೆ ತೂಗುಹಾಕಲ್ಪಟ್ಟ ಚಿಕ್ಕಚಿಕ್ಕ ಪಾತ್ರೆಗಳಂತೆಯೂ ನೀರಿನ ದೊಡ್ಡ ಸೀಸೆಗಳಂತೆಯೂ ಇರುವರು.”

25 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಹಲಗೆಗೆ ಬಲವಾಗಿ ಹೊಡೆಯಲ್ಪಟ್ಟ ಆ ಮೊಳೆಯು (ಶೆಬ್ನ) ಬಲಹೀನವಾಗಿ ತುಂಡಾಗುವದು. ಆ ಮೊಳೆಯು ನೆಲಕ್ಕೆ ಬಿದ್ದು ನಾಶವಾಗುವದು. ಆಗ ಆ ಮೊಳೆಗೆ ತೂಗುಹಾಕಿದ್ದೆಲ್ಲವೂ ಅದರೊಂದಿಗೆ ನೆಲಕ್ಕೆ ಬೀಳುವದು. ಆಗ ನಾನು ಈ ಸಂದೇಶದಲ್ಲಿ ಹೇಳಿದ್ದೆಲ್ಲವೂ ಸಂಭವಿಸುವದು. ಅವುಗಳು ನೆರವೇರುತ್ತವೆ ಯಾಕೆಂದರೆ ಅವುಗಳನ್ನು ಹೇಳಿದಾತನು ಯೆಹೋವನೇ.”

2 ಪೇತ್ರನು 3

ಯೇಸು ಮತ್ತೆ ಪ್ರತ್ಯಕ್ಷನಾಗುತ್ತಾನೆ

ನನ್ನ ಸ್ನೇಹಿತರೇ, ನಾನು ನಿಮಗೆ ಬರೆಯುತ್ತಿರುವ ಎರಡನೆ ಪತ್ರವಿದು. ನಿಮ್ಮ ಯಥಾರ್ಥವಾದ ಮನಸ್ಸು ಮತ್ತೆ ನೆನಪು ಮಾಡಿಕೊಳ್ಳಲಿ ಎಂದು ನಾನು ಈ ಎರಡು ಪತ್ರಗಳನ್ನು ಬರೆದಿದ್ದೇನೆ. ಪರಿಶುದ್ಧರಾದ ಪ್ರವಾದಿಗಳು ಹಿಂದಿನಕಾಲದಲ್ಲಿ ಹೇಳಿದ್ದನ್ನು ನೀವು ಜ್ಞಾಪಿಸಿಕೊಳ್ಳಬೇಕೆಂಬುದೇ ನನ್ನ ಅಪೇಕ್ಷೆ. ನಮ್ಮ ರಕ್ಷಕನಾದ ಪ್ರಭುವು ನಿಮ್ಮ ಅಪೊಸ್ತಲರ ಮೂಲಕ ನೀಡಿದ ಆಜ್ಞೆಯನ್ನು ನೆನಪು ಮಾಡಿಕೊಳ್ಳಿರಿ.

ಅಂತಿಮ ದಿನಗಳಲ್ಲಿ ಏನು ಸಂಭವಿಸುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಜನರು ನಿಮ್ಮನ್ನು ನೋಡಿ ಕುಚೋದ್ಯ ಮಾಡುವರು. ಅವರು ತಮ್ಮ ಇಚ್ಛೆಗನುಸಾರವಾದ ಕೆಟ್ಟಕಾರ್ಯಗಳನ್ನೇ ಮಾಡುತ್ತಾ ಜೀವಿಸುತ್ತಾರೆ. ಆ ಜನರು, “ಆತನು ಮತ್ತೆ ಬರುವುದಾಗಿ ವಾಗ್ದಾನ ಮಾಡಿದ್ದನು. ಆತನು ಎಲ್ಲಿದ್ದಾನೆ? ನಮ್ಮ ಪಿತೃಗಳು ಸತ್ತುಹೋದರು. ಆದರೆ ಈ ಲೋಕವು ಆದಿಯಿಂದಲೂ ಇದ್ದ ರೀತಿಯಲ್ಲಿಯೇ ಇದೆ” ಎಂದು ಹೇಳುವರು.

ಆದರೆ ಬಹಕಾಲದ ಹಿಂದೆ ಏನು ನಡೆಯಿತೆಂಬುದನ್ನು ನೆನಪು ಮಾಡಿಕೊಳ್ಳಲು ಅವರಿಗೆ ಇಷ್ಟವಿಲ್ಲ. ಆದಿಯಲ್ಲಿ ದೇವರು ಆಕಾಶವನ್ನು ಸೃಷ್ಟಿಸಿದನು. ದೇವರು ಲೋಕವನ್ನು ನೀರೊಳಗಿಂದ ಮತ್ತು ನೀರಿನಿಂದ ಸೃಷ್ಟಿಸಿದನು. ದೇವರ ವಾಕ್ಯದಿಂದ ಇವೆಲ್ಲಾ ಸಂಭವಿಸಿದವು. ಬಳಿಕ ಆ ಲೋಕವು ಜಲಪ್ರಳಯದಿಂದ ನಾಶವಾಯಿತು. ಈಗಿರುವ ಆಕಾಶಕ್ಕೂ ಭೂಮಿಗೂ ಅದೇ ದೇವರ ವಾಕ್ಯವು ಆಧಾರವಾಗಿದೆ. ಆಕಾಶ ಮತ್ತು ಭೂಮಿಗಳು ಬೆಂಕಿಯಿಂದ ನಾಶಗೊಳ್ಳಲು ಇಡಲ್ಪಟ್ಟಿವೆ. ದೇವರಿಗೆ ವಿರುದ್ಧವಾಗಿರುವ ಜನರೆಲ್ಲರಿಗೆ ಆಗುವ ನ್ಯಾಯತೀರ್ಪಿನ ದಿನಕ್ಕಾಗಿಯೂ ನಾಶನಕ್ಕಾಗಿಯೂ ಭೂಮ್ಯಾಕಾಶಗಳು ಇಡಲ್ಪಟ್ಟಿವೆ.

ಆದರೆ ಪ್ರಿಯ ಸ್ನೇಹಿತರೇ, ಇದೊಂದನ್ನು ಮಾತ್ರ ಮರೆಯದಿರಿ. ಪ್ರಭುವಿಗೆ ಒಂದು ದಿನವು ಸಾವಿರ ವರ್ಷಗಳಂತಿದೆ ಮತ್ತು ಸಾವಿರ ವರ್ಷಗಳು ಒಂದು ದಿನದಂತಿದೆ.(A) ಕೆಲವು ಜನರು ತಿಳಿದುಕೊಂಡಿರುವಂತೆ, ಪ್ರಭುವು ತಾನು ವಾಗ್ದಾನ ಮಾಡಿದ್ದನ್ನು ತಡವಾಗಿ ನೆರವೇರಿಸುವುದಿಲ್ಲ. ದೇವರು ನಿಮ್ಮ ವಿಷಯದಲ್ಲಿ ಇನ್ನೂ ತಾಳ್ಮೆಯಿಂದಿದ್ದಾನಷ್ಟೆ. ಯಾವ ವ್ಯಕ್ತಿಯೂ ಕಳೆದುಹೋಗಬಾರದೆಂಬುದು ದೇವರ ಅಪೇಕ್ಷೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಹೃದಯಗಳನ್ನು ಪರಿವರ್ತಿಸಿಕೊಂಡು, ಪಾಪ ಮಾಡುವುದನ್ನು ನಿಲ್ಲಿಸಬೇಕೆಂಬುದು ದೇವರ ಅಪೇಕ್ಷೆ.

10 ಆದರೆ ಪ್ರಭುವು ಮತ್ತೆ ಪ್ರತ್ಯಕ್ಷನಾಗುವ ದಿನವು ಕಳ್ಳನು ಬರುವಂತೆ ಅನಿರೀಕ್ಷಿತವಾಗಿ ಬರುತ್ತದೆ. ಆಕಾಶವು ಮಹಾ ಘೋಷದೊಂದಿಗೆ ಅದೃಶ್ಯವಾಗುತ್ತದೆ. ಆಕಾಶಮಂಡಲದಲ್ಲಿರುವ ಎಲ್ಲಾ ಸೃಷ್ಟಿಗಳು ಬೆಂಕಿಯಿಂದ ನಾಶವಾಗುತ್ತವೆ. ಈ ಲೋಕವೂ ಅದರಲ್ಲಿರುವ ಸಮಸ್ತವೂ ಸುಟ್ಟುಹೋಗುತ್ತದೆ. 11 ನಾನು ನಿಮಗೆ ಹೇಳಿದಂತಹ ರೀತಿಯಲ್ಲಿಯೇ ಎಲ್ಲವೂ ನಾಶಗೊಳ್ಳುತ್ತವೆ. ಆದ್ದರಿಂದ ನೀವು ಎಂತಹ ಜನರಾಗಿರಬೇಕು? ನೀವು ಪರಿಶುದ್ಧರಾಗಿರಬೇಕು ಮತ್ತು ಭಕ್ತಿವುಳ್ಳವರಾಗಿರಬೇಕು. 12 ನೀವು ದೇವರ ದಿನಕ್ಕಾಗಿ ಅಪೇಕ್ಷಿಸುತ್ತಾ ಎದುರು ನೋಡುತ್ತಿರಬೇಕು. ಆ ದಿನವು ಬಂದಾಗ, ಆಕಾಶವು ಬೆಂಕಿಯಿಂದ ನಾಶವಾಗುತ್ತದೆ ಮತ್ತು ಆಕಾಶದಲ್ಲಿರುವ ಪ್ರತಿಯೊಂದೂ ಬೆಂಕಿಯಿಂದ ಕರಗಿ ಹೋಗುತ್ತದೆ. 13 ನಾವಾದರೋ ದೇವರು ವಾಗ್ದಾನ ಮಾಡಿರುವ ನೂತನ ಆಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಎದುರುನೋಡುತ್ತಿದ್ದೇವೆ. ನೀತಿಯು ಅವುಗಳಲ್ಲಿ ವಾಸವಾಗಿರುವುದು.

14 ಪ್ರಿಯ ಸ್ನೇಹಿತರೇ, ಇವುಗಳಿಗಾಗಿಯೇ ನಾವು ಎದುರುನೋಡುತ್ತಿದ್ದೇವೆ. ಆದ್ದರಿಂದ ನೀವು ಪಾಪವಿಲ್ಲದವರಾಗಿರಲು ಮತ್ತು ತಪ್ಪಿಲ್ಲದವರಾಗಿರಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿರಿ. ದೇವರೊಂದಿಗೆ ಸಮಾಧಾನದಿಂದಿರಲು ಪ್ರಯತ್ನಿಸಿರಿ. 15 ನಾವು ರಕ್ಷಣೆ ಹೊಂದಿಕೊಂಡದ್ದು ನಮ್ಮ ಪ್ರಭುವಿನ ತಾಳ್ಮೆಯಿಂದಲೇ ಎಂಬುದನ್ನು ನೆನಪು ಮಾಡಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ದೇವರಿಂದ ತನಗೆ ದೊರೆತ ಜ್ಞಾನದಿಂದ ನಿಮಗೆ ಪತ್ರ ಬರೆದಾಗ ಇದನ್ನೇ ತಿಳಿಸಿದನು. 16 ಪೌಲನು ತನ್ನ ಎಲ್ಲ ಪತ್ರಗಳಲ್ಲಿಯೂ ಇವುಗಳನ್ನು ಕುರಿತು ಇದೇ ರೀತಿ ಬರೆಯುತ್ತಾನೆ. ಕೆಲವು ಸಂದರ್ಭಗಳಲ್ಲಿ ಪೌಲನ ಪತ್ರಗಳಲ್ಲಿರುವವುಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಕೆಲವರು ಅವುಗಳನ್ನು ಬೇಕೆಂದೇ ತಪ್ಪಾಗಿ ಅರ್ಥೈಸುತ್ತಾರೆ. ಅವರು ಮೂಢರಾಗಿದ್ದಾರೆ ಮತ್ತು ನಂಬಿಕೆಯಲ್ಲಿ ಬಲಹೀನರಾಗಿದ್ದಾರೆ. ಅವರು ಪವಿತ್ರ ಗ್ರಂಥದ ಇತರ ಭಾಗಗಳನ್ನೂ ತಪ್ಪಾಗಿ ವಿವರಿಸುತ್ತಾರೆ. ಹೀಗೆ ಅವರು ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ.

17 ಪ್ರಿಯ ಸ್ನೇಹಿತರೇ, ನೀವು ಈಗಾಗಲೇ ಇದರ ಬಗ್ಗೆ ತಿಳಿದಿರುವಿರಿ. ಆದ್ದರಿಂದ ನೀವು ಎಚ್ಚರದಿಂದಿರಿ. ಆ ಕೆಟ್ಟಜನರು ತಾವು ಮಾಡುವ ಕೆಟ್ಟಕಾರ್ಯಗಳಿಂದ ನಿಮ್ಮನ್ನು ದಾರಿತಪ್ಪಿಸದಂತೆ ನೋಡಿಕೊಳ್ಳಿರಿ. ನಿಮ್ಮ ಬಲವಾದ ನಂಬಿಕೆಯನ್ನು ತೊರೆದುಬಿಡದಂತೆ ಎಚ್ಚರಿಕೆಯಾಗಿರಿ. 18 ನಿಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಲ್ಲಿಯೂ ತಿಳುವಳಿಕೆಯಲ್ಲಿಯೂ ಬೆಳೆಯುತ್ತಲೇ ಇರಿ. ಆತನಿಗೆ ಈಗಲೂ ಎಂದೆಂದಿಗೂ ಮಹಿಮೆಯಾಗಲಿ! ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International