M’Cheyne Bible Reading Plan
ತುತ್ತೂರಿಗಳ ಹಬ್ಬ
29 “ಏಳನೆಯ ತಿಂಗಳಿನ ಮೊದಲನೆ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಆ ದಿನದಲ್ಲಿ ನೀವು ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು. ಅದು ತುತ್ತೂರಿಗಳ ಧ್ವನಿಯಿಂದ ಪ್ರಕಟವಾಗುವ ದಿನವಾಗಿದೆ. 2 ಅದರಲ್ಲಿ ನೀವು ಯೆಹೋವನಿಗೆ ಸುಗಂಧಕರವಾದ ಸರ್ವಾಂಗಹೋಮಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ ಸಮರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು. 3 ಇವುಗಳೊಡನೆ ಧಾನ್ಯಸಮರ್ಪಣೆಗಾಗಿ ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು ಮತ್ತು 4 ಪ್ರತಿಯೊಂದು ಕುರಿಮರಿಗೆ ಮೂರು ಸೇರು, ಈ ಮೇರೆಗೆ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಸಮರ್ಪಿಸಬೇಕು. 5 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಅರ್ಪಿಸಬೇಕು. 6 ಅಮಾವಾಸ್ಯೆಯಲ್ಲಿ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆ ಇವುಗಳಲ್ಲದೆ ಈ ಅರ್ಪಣೆಗಳನ್ನು ಅರ್ಪಿಸಬೇಕು. ಇವುಗಳನ್ನು ನಿಯಮಗಳ ಪ್ರಕಾರವಾಗಿ ಮಾಡಬೇಕು. ಅವು ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಇವೆ.
ದೋಷಪರಿಹಾರಕ ದಿನ
7 “ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಆ ದಿನದಲ್ಲಿ ನೀವು ಉಪವಾಸ ಮಾಡಬೇಕು; ಯಾವ ಕೆಲಸವನ್ನೂ ಮಾಡಬಾರದು. 8 ನೀವು ಯೆಹೋವನಿಗೆ ಸುಗಂಧಕರವಾಗಿರುವ ಸರ್ವಾಂಗಹೋಮವನ್ನಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನೂ ಅರ್ಪಿಸಬೇಕು. ಇವು ಪೂರ್ಣಾಂಗವಾದವುಗಳಾಗಿರಬೇಕು. 9 ಇವುಗಳೊಡನೆ, ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಒಂದು ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು 10 ಮತ್ತು ಒಂದು ಕುರಿಮರಿಗೆ ಮೂರು ಸೇರು ಸಮರ್ಪಿಸಬೇಕು. 11 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ದೋಷಪರಿಹಾರಕ ದಿನಕ್ಕೋಸ್ಕರ ಅರ್ಪಿಸುವ ಪಾಪಪರಿಹಾರಕ ಯಜ್ಞ, ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರ ಧಾನ್ಯಾರ್ಪಣೆ ಮತ್ತು ಇವುಗಳೊಡನೆ ಅರ್ಪಿಸುವ ದ್ರವ್ಯಾರ್ಪಣೆ ಇವುಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು. ಇವು ಯೆಹೋವನಿಗೆ ಸುಗಂಧಕರವಾಗಿವೆ.
ಪರ್ಣಶಾಲೆಗಳ ಹಬ್ಬ
12 “ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಇದು ಪರ್ಣಶಾಲೆಗಳ ಹಬ್ಬವಾಗಿದೆ. ಆ ದಿವಸ ನೀವು ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು. ಯೆಹೋವನಿಗೆ ಗೌರವಾರ್ಥವಾಗಿ “ಪರ್ಣಶಾಲೆಗಳ ಹಬ್ಬ” ವನ್ನು ನೀವು ಏಳು ದಿನಗಳವರೆಗೆ ಆಚರಿಸಬೇಕು. 13 ನೀವು ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸಬೇಕು. ಅದರ ಸುವಾಸನೆಯು ಯೆಹೋವನಿಗೆ ಮೆಚ್ಚಿಗೆಕರವಾಗಿದೆ. ಸರ್ವಾಂಗಹೋಮವಾಗಿ ಹದಿಮೂರು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. 14 ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಅರ್ಪಿಸಬೇಕು. ಅಂದರೆ ಪ್ರತಿಯೊಂದು ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು 15 ಮತ್ತು ಒಂದು ಕುರಿಮರಿಗೆ ಮೂರು ಸೇರು ಸಮರ್ಪಿಸಬೇಕು. 16 ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು.
17 “ಆ ಉತ್ಸವದ ಎರಡನೆಯ ದಿನದಲ್ಲಿ ನೀವು ಹನ್ನೆರಡು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು. 18 ಅಲ್ಲದೆ ಈ ಪಶುಗಳಲ್ಲಿ ಪ್ರತಿಯೊಂದಕ್ಕೂ ನೇಮಕಗೊಂಡ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು. 19 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
20 “ಈ ಉತ್ಸವದ ಮೂರನೆಯ ದಿನದಲ್ಲಿ ನೀವು ಹನ್ನೊಂದು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳು ಪೂರ್ಣಾಂಗವಾದವುಗಳಾಗಿರಬೇಕು. 21 ಈ ಪಶುಗಳಲ್ಲಿ ಪ್ರತಿಯೊಂದಕ್ಕೂ ನೇಮಕವಾಗಿರುವ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು. 22 ದೋಷಪರಿಹಾರಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮಾನುಸಾರವಾದ ದೈನಂದಿನ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲ್ಕಂಡವುಗಳನ್ನು ಅರ್ಪಿಸಬೇಕು.
23 “ಈ ಉತ್ಸವದ ನಾಲ್ಕನೆಯ ದಿನದಲ್ಲಿ ನೀವು ಹತ್ತು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವು ಪೂರ್ಣಾಂಗವುಳ್ಳವುಗಳಾಗಿರಬೇಕು. 24 ಈ ಪಶುಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು. 25 ಪಾಪಪರಿಹಾರಕಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
26 “ಈ ಉತ್ಸವದ ಐದನೆಯ ದಿನದಲ್ಲಿ ನೀವು ಒಂಭತ್ತು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು. 27 ಈ ಪಶುಗಳಲ್ಲಿ ಪ್ರತಿಯೊಂದಕ್ಕೂ ನೇಮಕಗೊಂಡ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು. 28 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾದ ದೈನಂದಿನ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸಬೇಕಾದ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
29 “ಈ ಉತ್ಸವದ ಆರನೆಯ ದಿನದಲ್ಲಿ ನೀವು ಎಂಟು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವುಳ್ಳವುಗಳಾಗಿರಬೇಕು. 30 ಈ ಪಶುಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯಾರ್ಪಣೆಯನ್ನೂ ಪಾನದ್ರವ್ಯಾರ್ಪಣೆಯನ್ನೂ ಸರಿಯಾದ ಪ್ರಮಾಣದಲ್ಲಿ ಮಾಡಬೇಕು. 31 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
32 “ಈ ಉತ್ಸವದ ಏಳನೆಯ ದಿನದಲ್ಲಿ ನೀವು ಏಳು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಅವುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು. 33 ಈ ಪಶುಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯಾರ್ಪಣೆಗಳನ್ನು ಮತ್ತು ಪಾನದ್ರವ್ಯಾರ್ಪಣೆಗಳನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು. 34 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
35 “ಎಂಟನೆಯ ದಿನದಲ್ಲಿ ಮುಕ್ತಾಯ ಸಭಾಕೂಟವಿರುವುದು. ಆ ದಿನದಲ್ಲಿ ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು. 36 ನೀವು ಈ ಕೆಳಕಂಡವುಗಳನ್ನು ಯೆಹೋವನಿಗೆ ಸುಗಂಧಕರವಾದ ತ್ಯಾಗಮಯವಾದ ಸರ್ವಾಂಗಹೋಮವನ್ನಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನೂ ಅರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು. 37 ಈ ಪಶುಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯಾರ್ಪಣೆಗಳನ್ನು ಮತ್ತು ಪಾನದ್ರವ್ಯಾರ್ಪಣೆಗಳನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು. 38 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
39 “ಮೇಲೆ ತಿಳಿಸಿರುವ ಸಾರ್ವಜನಿಕ ಯಜ್ಞಗಳನ್ನು ಇಡೀ ಸಮುದಾಯಕ್ಕೋಸ್ಕರ ಹಬ್ಬದ ದಿನಗಳಲ್ಲಿ ನಿಮ್ಮ ಸರ್ವಾಂಗಹೋಮಗಳನ್ನಾಗಿಯೂ ಧಾನ್ಯಾರ್ಪಣೆಗಳನ್ನಾಗಿಯೂ ಪಾನದ್ರವ್ಯಾರ್ಪಣೆಗಳನ್ನಾಗಿಯೂ ಮತ್ತು ಸಮಾಧಾನಯಜ್ಞಗಳನ್ನಾಗಿಯೂ ಅರ್ಪಿಸಬೇಕು. ನಿಮ್ಮ ವೈಯಕ್ತಿಕ ಹರಕೆಯ ಅರ್ಪಣೆ ಮತ್ತು ಸ್ವಯಿಚ್ಛಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.”
40 ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಮೋಶೆಯು ಇಸ್ರೇಲರಿಗೆ ತಿಳಿಸಿದನು.
ಮೂರನೆ ಭಾಗ
(ಕೀರ್ತನೆಗಳು 73–89)
ಸ್ತುತಿಗೀತೆ. ರಚನೆಗಾರ: ಆಸಾಫ.
73 ದೇವರು ಇಸ್ರೇಲಿಗೆ ಒಳ್ಳೆಯವನೇ ನಿಜ!
ಶುದ್ಧ ಹೃದಯವುಳ್ಳವರಿಗೆ ದೇವರು ಒಳ್ಳೆಯವನೇ ಸರಿ!
2 ಆದರೆ ನನ್ನ ಕಾಲುಗಳು ಜಾರಿದವು;
ನನ್ನ ಹೆಜ್ಜೆಗಳು ತಪ್ಪಿದವು.
3 ದುಷ್ಟರ ಏಳಿಗೆಯನ್ನು ಕಂಡು
ಗರ್ವಿಷ್ಠರ ಮೇಲೆ ಅಸೂಯೆಗೊಂಡೆನು.
4 ಅವರು ಆರೋಗ್ಯವಂತರಾಗಿದ್ದಾರೆ.
ಜೀವನೋಪಾಯಕ್ಕಾಗಿ ಅವರು ಹೋರಾಡಬೇಕಿಲ್ಲ.[a]
5 ಆ ಗರ್ವಿಷ್ಠರು ನಮ್ಮಂತೆ ಕಷ್ಟಪಡುವುದಿಲ್ಲ.
ಅವರಿಗೆ ಬೇರೆಯವರಂತೆ ತೊಂದರೆಗಳಿಲ್ಲ.
6 ಆದ್ದರಿಂದ ಗರ್ವವು ಅವರಿಗೆ ಆಭರಣವಾಗಿದೆ;
ದ್ವೇಷವು ಅವರಿಗೆ ಉಡುಪಾಗಿದೆ.
7 ಅವರ ಕಣ್ಣುಗಳು ಕೊಬ್ಬಿವೆ;
ಅವರ ಮನಸ್ಸು ದುಷ್ಕಲ್ಪನೆಗಳಿಂದ ತುಂಬಿತುಳುಕುತ್ತದೆ.
8 ಅವರು ಗೇಲಿಮಾಡುತ್ತಾ ಬೇರೆಯವರ ವಿರುದ್ಧ ಕೆಟ್ಟದ್ದನ್ನೇ ಮಾತಾಡುವರು.
ಗರ್ವಿಷ್ಠರಾದ ಅವರು ಬೇರೆಯವರ ಮೇಲೆ ಬಲಾತ್ಕಾರ ನಡೆಸಲು ಸಂಚು ಮಾಡುವರು.
9 ಆ ಗರ್ವಿಷ್ಠರು ತಮ್ಮನ್ನು ದೇವರುಗಳೆಂದು ಭಾವಿಸಿಕೊಂಡಿದ್ದಾರೆ,
ತಾವೇ ಭೂಮಿಯ ಅಧಿಪತಿಗಳೆಂದು ಆಲೋಚಿಸಿಕೊಂಡಿದ್ದಾರೆ.
10 ಆದ್ದರಿಂದ ದೇವರ ಮಕ್ಕಳೂ ಅವರ ಪಕ್ಷ ಹಿಡಿಯುವರು;
ಅವರು ಹೇಳಿದಂತೆಯೇ ಮಾಡುವರು.
11 “ನಮ್ಮ ಕಾರ್ಯಗಳು ದೇವರಿಗೆ ಗೊತ್ತಿಲ್ಲ! ಮಹೋನ್ನತನಾದ ದೇವರಿಗೆ ಗೊತ್ತೇ ಇಲ್ಲ!”
ಎಂದು ಆ ದುಷ್ಟರು ಹೇಳಿಕೊಳ್ಳುವರು.
12 ಆ ಗರ್ವಿಷ್ಠರು ದುಷ್ಟರೇ ಸರಿ!
ಆದರೂ ಅವರ ಐಶ್ವರ್ಯವು ಹೆಚ್ಚಾಗುತ್ತಲೇ ಇದೆ.
13 ಹೀಗಿರಲು, ನನ್ನ ಹೃದಯವನ್ನು ನಾನೇಕೆ ನಿರ್ಮಲಗೊಳಿಸಿಕೊಳ್ಳಲಿ?
ನನ್ನ ಕೈಗಳನ್ನು ನಾನೇಕೆ ಸ್ವಚ್ಛಗೊಳಿಸಿಕೊಳ್ಳಲಿ?
14 ದೇವರೇ ದಿನವೆಲ್ಲಾ ನಾನು ಕಷ್ಟಪಡುತ್ತಿರುವೆ.
ಪ್ರತಿ ಮುಂಜಾನೆಯೂ ನೀನು ನನ್ನನ್ನು ಶಿಕ್ಷಿಸುವೆ.
15 ಇವುಗಳ ಬಗ್ಗೆ ನಾನು ಬೇರೆಯವರಿಗೆ ಹೇಳಬೇಕೆಂದಿದ್ದೆ.
ಒಂದುವೇಳೆ ಹೇಳಿದ್ದರೆ, ನಿನ್ನ ಜನರಿಗೆ ದ್ರೋಹಿಯಾಗುತ್ತಿದ್ದೆ.
16 ಇವುಗಳನ್ನು ಅರ್ಥಮಾಡಿಕೊಳ್ಳಲು ನಾನು ಬಹಳವಾಗಿ ಪ್ರಯತ್ನಿಸಿದರೂ
ನಿನ್ನ ಆಲಯಕ್ಕೆ ಹೋಗುವವರೆಗೂ ಕಷ್ಟಕರವಾಗಿತ್ತು.
17 ಆದರೆ ನಿನ್ನ ಆಲಯಕ್ಕೆ ಹೋದಮೇಲೆ
ನನಗೆ ಅರ್ಥವಾಯಿತು.
18 ನೀನು ಅವರನ್ನು ಅಪಾಯಕರವಾದ ಪರಿಸ್ಥಿತಿಯಲ್ಲಿ ಇಟ್ಟಿರುವೆ.
ಅವರು ಸುಲಭವಾಗಿ ಬಿದ್ದು ನಾಶವಾಗುವರು.
19 ಇದ್ದಕ್ಕಿದ್ದಂತೆ ಆಪತ್ತು ಬರುವುದು,
ಆಗ ಆ ಗರ್ವಿಷ್ಠರು ನಾಶವಾಗುವರು.
ಭಯಂಕರವಾದ ಸಂಗತಿಗಳು ಅವರಿಗೆ ಸಂಭವಿಸುತ್ತವೆ;
ಆಗ ಅವರು ಅಂತ್ಯಗೊಳ್ಳುವರು.
20 ಯೆಹೋವನೇ, ನಾವು ನಿದ್ರೆಯಿಂದ ಎಚ್ಚರಗೊಂಡಾಗ
ಮರೆತುಬಿಡುವ ಕನಸಿನಂತಿದ್ದಾರೆ ಆ ಜನರು.
ನಾವು ಕನಸಿನಲ್ಲಿ ಕಾಣುವ ರಾಕ್ಷಸರಂತೆ
ನೀನು ಅವರನ್ನು ಮಾಯಗೊಳಿಸುವೆ.
21-22 ನಾನು ಬಹು ಮೂಢನಾಗಿದ್ದೆ.
ಶ್ರೀಮಂತರ ಕುರಿತಾಗಿಯೂ ದುಷ್ಟರ ಕುರಿತಾಗಿಯೂ ಆಲೋಚಿಸಿ ಗಲಿಬಿಲಿಗೊಂಡೆ.
ದೇವರೇ, ನಾನು ನಿನ್ನ ಮೇಲೆ ಕೋಪಗೊಂಡಿದ್ದೆನು; ಬೇಸರಗೊಂಡಿದ್ದೆನು!
ನಾನು ಮೂಢ ಪಶುವಿನಂತೆ ವರ್ತಿಸಿದೆನು.
23 ಆದರೂ ನಾನು ಯಾವಾಗಲೂ ನಿನ್ನ ಸಂಗಡವಿದ್ದೇನೆ.
ನನ್ನ ಕೈಯನ್ನು ಹಿಡಿದುಕೊ.
24 ನನಗೆ ಉಪದೇಶಿಸುತ್ತಾ ನನ್ನನ್ನು ಮುನ್ನಡೆಸು.
ಬಳಿಕ ನಿನ್ನ ಮಹಿಮೆಗೆ ನನ್ನನ್ನು ಸೇರಿಸಿಕೊ.
25 ಪರಲೋಕದಲ್ಲಿ ನೀನಲ್ಲದೆ ನನಗೆ ಬೇರೆ ಯಾರ ಅಗತ್ಯವಿದೆ?
ಈ ಲೋಕದಲ್ಲಿ ನಿನ್ನನ್ನಲ್ಲದೆ ಬೇರೆ ಯಾರನ್ನು ಬಯಸಲಿ?
26 ನನ್ನ ಹೃದಯವೂ ದೇಹವೂ ನಾಶವಾಗುತ್ತವೆ;
ಆದರೆ ಎಂದೆಂದಿಗೂ ನೀನೇ ನನಗೆ ಆಶ್ರಯಸ್ಥಾನವೂ
ನನ್ನ ದೇವರೂ ಆಗಿರುವೆ.
27 ನಿನ್ನನ್ನು ತೊರೆದುಬಿಟ್ಟವರು ನಾಶವಾಗುವರು.
ನಿನಗೆ ದ್ರೋಹಮಾಡಿದವರನ್ನೆಲ್ಲ ನೀನು ನಾಶಮಾಡುವೆ.
28 ನನಗಾದರೋ ದೇವರ ಸಮೀಪದಲ್ಲಿರುವುದೇ ಭಾಗ್ಯವಾಗಿದೆ.
ನನ್ನ ಒಡೆಯನಾದ ಯೆಹೋವನನ್ನು ನನ್ನ ಆಶ್ರಯಸ್ಥಾನವನ್ನಾಗಿ ಮಾಡಿಕೊಂಡಿರುವೆ.
ದೇವರೇ, ನಿನ್ನ ಎಲ್ಲಾ ಕಾರ್ಯಗಳ ಕುರಿತಾಗಿ ಹೇಳಲು ಬಂದಿರುವೆ.
ಬಾಬಿಲೋನಿಗೆ ದೇವರ ಸಂದೇಶ
21 ಸಮುದ್ರದ ಮರುಭೂಮಿಗೆ ದುಃಖದ ಸಂದೇಶ:
ನೆಗೆವ್ ಮೂಲಕ ಬೀಸುವ ಬಿರುಗಾಳಿಯಂತೆ ಮರುಭೂಮಿಯಿಂದಲೂ
ಭಯಂಕರ ದೇಶದಿಂದಲೂ ಒಬ್ಬನು ದಂಡೆತ್ತಿ ಬರುವನು.
2 ನಡೆಯಲಿರುವ ಒಂದು ಭಯಂಕರ ಘಟನೆಯನ್ನು ನಾನು ದರ್ಶನದಲ್ಲಿ ನೋಡಿದ್ದೇನೆ.
ನಿನಗೆ ವಿರುದ್ಧವಾಗಿ ದ್ರೋಹಿಗಳು ಏಳುತ್ತಿದ್ದಾರೆ.
ನಿನ್ನ ಧನೈಶ್ವರ್ಯಗಳನ್ನು ಜನರು ಕಿತ್ತುಕೊಳ್ಳುತ್ತಿದ್ದಾರೆ.
ಏಲಾಮೇ, ಹೋಗಿ ಆ ಜನರೊಂದಿಗೆ ಹೋರಾಡು.
ಮೇದ್ಯವೇ, ಆ ಪಟ್ಟಣವನ್ನು ನಿನ್ನ ಸೈನ್ಯದಿಂದ ಸೋಲಿಸು.
ಆ ನಗರದ ಎಲ್ಲಾ ದುಷ್ಟತನವನ್ನು ನಾನು ಕೊನೆಗಾಣಿಸುವೆನು.
3 ನಾನು ಆ ಭಯಂಕರ ಸಂಗತಿಗಳನ್ನು ನೋಡಿದ್ದರಿಂದ ಈಗ ಭಯಪೀಡಿತನಾಗಿದ್ದೇನೆ.
ಭಯದಿಂದ ನನ್ನ ಹೊಟ್ಟೆಯು ನೋಯುತ್ತಿದೆ. ಆ ನೋವು ಪ್ರಸವವೇದನೆಯಂತಿದೆ.
ನಾನು ಕೇಳುವ ವಿಷಯಗಳು ನನ್ನನ್ನು ಭಯಪಡಿಸಿವೆ;
ನಾನು ನೋಡುವ ವಿಷಯಗಳು ನನ್ನನ್ನು ನಡುಗಿಸುತ್ತಿವೆ.
4 ನಾನು ಚಿಂತೆಯಿಂದಲೂ ಭಯದಿಂದಲೂ ನಡುಗುತ್ತಿದ್ದೇನೆ.
ನನ್ನ ಆನಂದದ ರಾತ್ರಿಯು ಭಯಂಕರವಾಗಿದೆ.
5 ಜನರಾದರೋ, “ಊಟ ಬಡಿಸಿರಿ!
ತಿನ್ನೋಣ, ಕುಡಿಯೋಣ” ಎಂದು ಹೇಳುತ್ತಿದ್ದಾರೆ.
ಅದೇ ಸಮಯದಲ್ಲಿ ಸೈನಿಕರು, “ಕಾವಲುಗಾರರನ್ನು ಇರಿಸಿರಿ,
ಸೇನಾಪತಿಗಳೇ ಎದ್ದೇಳಿರಿ,
ನಿಮ್ಮ ಗುರಾಣಿಗಳನ್ನು ಉಜ್ಜಿ ನಯಗೊಳಿಸಿರಿ” ಎಂದು ಹೇಳುತ್ತಿದ್ದಾರೆ.
6 ನನ್ನ ಒಡೆಯನು ನನಗೆ, “ಹೋಗಿ ಈ ನಗರವನ್ನು ಕಾಯಲು ಒಬ್ಬ ಮನುಷ್ಯನನ್ನು ಕಂಡುಹಿಡಿ. ಅವನು ಏನೂ ನೋಡಿದರೂ ನಮಗೆ ತಿಳಿಸಬೇಕು. 7 ಅವನು ಸಾಲಾಗಿ ಬರುತ್ತಿರುವ ಸೈನಿಕರನ್ನೋ, ಕತ್ತೆಗಳನ್ನೋ, ಒಂಟೆಗಳನ್ನೋ ನೋಡಿದರೆ ಬಹಳ ಸೂಕ್ಷ್ಮವಾಗಿ ಆಲಿಸಬೇಕು.”
8 ಒಂದು ದಿವಸ ಆ ಕಾವಲುಗಾರನು,
“ನನ್ನ ಒಡೆಯನೇ, ಪ್ರತಿ ದಿನವೂ ನಾನು ಹಗಲಿರುಳು
ಕಾವಲಿನ ಬುರುಜಿನಲ್ಲಿ ನಿಂತುಕೊಂಡು ಕಾವಲು ಕಾಯುತ್ತಿದ್ದೇನೆ;
9 ನೋಡು, ಅವರು ಬರುತ್ತಿದ್ದಾರೆ. ಅಶ್ವದಳಗಳು ಸಾಲುಸಾಲಾಗಿಯೂ ಬರುತ್ತಿವೆ” ಎಂದು ಕೂಗಿಕೊಂಡನು.
ಆಗ ಒಬ್ಬ ದೂತನು,
“ಬಾಬಿಲೋನಿಗೆ ಸೋಲಾಯಿತು.
ಬಾಬಿಲೋನು ನೆಲಕ್ಕೆ ಅಪ್ಪಳಿಸಲ್ಪಟ್ಟಿತು.
ಅದರ ದೇವ ದೇವತೆಯರ ವಿಗ್ರಹಗಳೆಲ್ಲಾ
ನೆಲದ ಮೇಲೆ ಚೂರುಚೂರಾಗಿ ಬಿದ್ದಿವೆ” ಎಂದು ಹೇಳಿದನು.
10 ನನ್ನ ಬಡಿತಕ್ಕೆ ಈಡಾದ ಜನರೇ, ಸರ್ವಶಕ್ತನೂ ದೇವರೂ ಆಗಿರುವ ಯೆಹೋವನು ಹೇಳಿದ್ದನ್ನೆಲ್ಲಾ ಇಸ್ರೇಲರಾದ ನಿಮಗೆ ತಿಳಿಸಿದ್ದೇನೆ. ಕಣದಲ್ಲಿ ಧಾನ್ಯವು ನುಚ್ಚುನೂರಾಗುವಂತೆ ನೀವು ನಜ್ಜುಗುಜ್ಜಾಗುವಿರಿ.
ಎದೋಮಿಗೆ ದೇವರ ಸಂದೇಶ
11 ದೂಮದ ಕುರಿತು ದುಃಖದ ದೈವೋಕ್ತಿ:
ಸೇಯಿರ್‌ನಿಂದ ಎದೋಮನ್ನು ಯಾರೋ ಒಬ್ಬನು,
“ಕಾವಲುಗಾರನೇ, ರಾತ್ರಿ ಮುಗಿಯಲು ಎಷ್ಟು ಸಮಯ ಉಂಟು?
ರಾತ್ರಿಗೆ ಇನ್ನು ಎಷ್ಟು ಕಾಲ ಉಂಟು?” ಎಂದು ಕೇಳಿದನು.
12 ಅದಕ್ಕೆ ಕಾವಲುಗಾರ,
“ಮುಂಜಾನೆ ಬರುತ್ತಿದೆ. ಆದರೆ ರಾತ್ರಿ ತಿರುಗಿ ಬರುತ್ತಿದೆ.
ನೀನೇನಾದರೋ ಕೇಳಬೇಕಿದ್ದರೆ ಮತ್ತೆ ಬಂದು ವಿಚಾರಿಸು”
ಎಂದು ಉತ್ತರಿಸಿದನು.
ಅರೇಬಿಯಕ್ಕೆ ದೇವರ ಸಂದೇಶ
13 ಅರೇಬಿಯದ ಬಗ್ಗೆ ದುಃಖಕರವಾದ ಸಂದೇಶ:
ದೇದಾನಿನಿಂದ ಬಂದ ಪ್ರಯಾಣಿಕರು
ಅರೇಬಿಯ ಮರುಭೂಮಿಯಲ್ಲಿನ ಪೊದೆಗಳಲ್ಲಿ ರಾತ್ರಿ ತಂಗಿದರು.
14 ಬಾಯಾರಿದ ಪ್ರಯಾಣಿಕರಿಗೆ ಅವರು ಕುಡಿಯಲು ನೀರು ಕೊಟ್ಟರು.
ತೇಮದ ಕೆಲವರು ಹಸಿದ ಪ್ರವಾಸಿಗಳಿಗೆ ಊಟ ಕೊಟ್ಟರು.
15 ಅವರು ತಮ್ಮನ್ನು ಸಾಯಿಸಲಿಕ್ಕಿದ್ದ
ಕತ್ತಿಯಿಂದ ತಪ್ಪಿಸಿಕೊಂಡು ಬಂದವರು.
ಅವರು ತಮ್ಮನ್ನು ಹೊಡೆಯಲು ಸಿದ್ಧವಾಗಿದ್ದ
ಬಾಣಗಳಿಂದ ಪಾರಾಗಿ ಬಂದವರು.
ಅವರು ಘೋರ ರಣರಂಗದಿಂದ ಓಡಿಬಂದವರು.
16 ನನ್ನ ಒಡೆಯನಾದ ಯೆಹೋವನು ಈ ವಿಷಯಗಳು ಸಂಭವಿಸುವವೆಂದು ಹೇಳಿದನು. ಆತನು ಹೇಳಿದ್ದೇನೆಂದರೆ: “ಇನ್ನೊಂದು ವರ್ಷದಲ್ಲಿ ಕೂಲಿಗಾರನು ತನ್ನ ಸಮಯವನ್ನು ಲೆಕ್ಕಿಸುವಂತೆ ಕೇದಾರಿನ ಘನತೆಯೆಲ್ಲವೂ ಹೋಗಿ ಬಿಡುವದು. 17 ಆ ಸಮಯದಲ್ಲಿ ಕೆಲವೇ ಮಂದಿ ಬಿಲ್ಲುಗಾರರು ಕೇದಾರಿನ ವೀರರೊಳಗಿಂದ ಉಳಿಯುವರು.” ಇಸ್ರೇಲರ ದೇವರಾದ ಯೆಹೋವನು ಇದನ್ನು ನುಡಿದನು.
ಸುಳ್ಳುಬೋಧಕರು
2 ಹಿಂದಿನ ಕಾಲದಲ್ಲಿ, ದೇವಜನರಲ್ಲಿ ಸುಳ್ಳುಪ್ರವಾದಿಗಳಿದ್ದರು. ಈಗಲೂ ಇದ್ದಾರೆ. ನಿಮ್ಮಲ್ಲಿಯೂ ಸಹ ಕೆಲವು ಸುಳ್ಳುಪ್ರವಾದಿಗಳಿರುತ್ತಾರೆ. ಜನರನ್ನು ನಾಶನಕ್ಕೆ ನಡೆಸುವ ಸುಳ್ಳುಬೋಧನೆಗಳನ್ನು ಅವರು ಬೋಧಿಸುತ್ತಾರೆ. ತಾವು ಸುಳ್ಳುಬೋಧಕರೆಂಬುದು ನಿಮಗೆ ಸುಲಭವಾಗಿ ತಿಳಿಯದ ರೀತಿಯಲ್ಲಿ ಅವರು ಬೋಧಿಸುತ್ತಾರೆ. ಅವರು ತಮಗೆ ಬಿಡುಗಡೆ ತಂದುಕೊಟ್ಟ ಒಡೆಯನನ್ನೇ (ಯೇಸು) ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಅವರು ಬಹುಬೇಗನೆ ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ. 2 ಅವರು ಮಾಡುವ ಕೆಟ್ಟಕಾರ್ಯಗಳನ್ನು ಅನೇಕ ಜನರು ಅನುಸರಿಸುತ್ತಾರೆ. ಆ ಜನರ ದೆಸೆಯಿಂದ ಸತ್ಯಮಾರ್ಗದ ಕುರಿತಾಗಿ ಇತರರು ಕೆಟ್ಟಮಾತುಗಳನ್ನು ಆಡುತ್ತಾರೆ. 3 ಆ ಸುಳ್ಳುಬೋಧಕರಿಗೆ ಬೇಕಾಗಿರುವುದು ಕೇವಲ ನಿಮ್ಮ ಹಣವಷ್ಟೆ. ಆದ್ದರಿಂದ ಅವರು ನಿಜವಲ್ಲದ ಸಂಗತಿಗಳನ್ನು ನಿಮಗೆ ಹೇಳಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ಆದರೆ ಬಹಳ ಹಿಂದಿನಿಂದಲೇ ಆ ಸುಳ್ಳುಬೋಧಕರ ವಿರುದ್ಧವಾದ ತೀರ್ಪು ಸಿದ್ಧವಾಗಿದೆ. ಅವರನ್ನು ನಾಶಪಡಿಸುವಾತನಿಂದ (ದೇವರಿಂದ) ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
4 ದೇವದೂತರು ಪಾಪಗಳನ್ನು ಮಾಡಿದಾಗ, ದೇವರು ಅವರನ್ನು ದಂಡಿಸದೆ ಬಿಡಲಿಲ್ಲ. ಆತನು ಅವರನ್ನು ನರಕಕ್ಕೆ ದಬ್ಬಿದನು. ಕತ್ತಲೆಯ ಗುಂಡಿಗಳಿಗೆ ಹಾಕಿದನು. ಅವರಿಗೆ ನ್ಯಾಯತೀರ್ಪಾಗುವವರೆಗೂ ಅವರು ಅಲ್ಲಿಯೇ ಇರುವರು.
5 ಬಹಳ ಹಿಂದೆ ಬದುಕಿದ್ದ ಕೆಟ್ಟ ಜನರನ್ನು ದೇವರು ದಂಡಿಸಿದನು. ಈ ಲೋಕದಲ್ಲಿ ತನಗೆ ವಿರುದ್ಧವಾದ ಜನರು ತುಂಬಿಕೊಂಡಿದ್ದಾಗ ಆತನು ಜಲಪ್ರಳಯವನ್ನು ಬರಮಾಡಿ ದನು. ಆದರೆ ನೋಹನನ್ನೂ ಅವನೊಂದಿಗಿದ್ದ ಏಳು ಮಂದಿಯನ್ನೂ ರಕ್ಷಿಸಿದನು. ಯೋಗ್ಯರಾಗಿ ಜೀವಿಸಬೇಕೆಂದು ಆ ಜನರಿಗೆ ತಿಳಿಸಿದವನೇ ನೋಹ.
6 ದೇವರು ಸೊದೋಮ್, ಗೊಮೋರ ಎಂಬ ಕೆಟ್ಟ ಪಟ್ಟಣಗಳನ್ನು ದಂಡಿಸಿದನು. ಆತನು ಆ ಪಟ್ಟಣಗಳಲ್ಲಿ ಏನೂ ಉಳಿಯದಂತೆ, ಸುಟ್ಟು ಬೂದಿಮಾಡಿದನು. ತನಗೆ ವಿರುದ್ಧವಾಗಿರುವ ಜನರಿಗೆ ಏನಾಗುತ್ತದೆ ಎಂಬುದಕ್ಕೆ ಆತನು ಆ ಪಟ್ಟಣಗಳನ್ನು ನಿದರ್ಶನಗಳನ್ನಾಗಿ ಇಟ್ಟಿದ್ದಾನೆ. 7 ಆದರೆ ದೇವರು ಆ ಪಟ್ಟಣಗಳಿಂದ ಲೋಟನನ್ನು ರಕ್ಷಿಸಿದನು. ಲೋಟನು ನೀತಿವಂತನಾಗಿದ್ದನು. ದುಷ್ಟ ಜನರ ಕೆಟ್ಟ ನಡತೆಯಿಂದ ಅವನು ದುಃಖಗೊಂಡಿದ್ದನು. 8 (ಲೋಟನು ನೀತಿವಂತನಾಗಿದ್ದನು. ಆದರೆ ಅವನು ಪ್ರತಿದಿನವೂ ಆ ದುಷ್ಟಜನರ ಮಧ್ಯೆ ಜೀವಿಸುತ್ತಿದ್ದನು. ಕೆಟ್ಟಕಾರ್ಯಗಳನ್ನು ನೋಡಿ ಮತ್ತು ಕೇಳಿ ಅವನ ಒಳ್ಳೆಯ ಹೃದಯವು ವೇದನೆಗೆ ಒಳಗಾಗಿತ್ತು.)
9 ಹೌದು, ಪ್ರಭುವಾದ ದೇವರು ತನ್ನ ಭಕ್ತರನ್ನು ತೊಂದರೆಗಳಿಂದ ಯಾವಾಗಲೂ ರಕ್ಷಿಸುತ್ತಾನೆ. ಆತನು ದುಷ್ಟಜನರನ್ನು ನ್ಯಾಯತೀರ್ಪಿನ ದಿನ ಬರುವತನಕ ದಂಡಿಸುತ್ತಾನೆ. 10 ಪ್ರಭುವಿನ ಅಧಿಕಾರವನ್ನು ದ್ವೇಷಿಸುವ ಜನರನ್ನು ಮತ್ತು ತಮ್ಮ ಪಾಪಸ್ವಭಾವದ ಇಚ್ಚೆಗನುಸಾರವಾಗಿ ಕೆಟ್ಟಕಾರ್ಯಗಳನ್ನು ಮಾಡುವ ಜನರನ್ನು ದೇವರು ಹೀಗೆ ದಂಡಿಸುತ್ತಾನೆ.
ಈ ಸುಳ್ಳುಬೋಧಕರು ತಮಗೆ ಬೇಕಾದದ್ದನ್ನೆಲ್ಲಾ ಮಾಡುತ್ತಾರೆ ಮತ್ತು ತಮ್ಮ ಬಗ್ಗೆ ಹೊಗಳಿಕೊಳ್ಳುತ್ತಾರೆ. ಪ್ರಭಾವದಿಂದ ಕೂಡಿರುವ ದೇವದೂತರ ಬಗ್ಗೆ ಕೆಟ್ಟದ್ದನ್ನು ಹೇಳಲು ಅವರು ಹೆದರುವುದಿಲ್ಲ. 11 ದೇವದೂತರು ಈ ಸುಳ್ಳುಬೋಧಕರಿಗಿಂತ ಹೆಚ್ಚು ಬಲಿಷ್ಠರಾಗಿದ್ದಾರೆ ಮತ್ತು ಹೆಚ್ಚು ಶಕ್ತಿಯುಳ್ಳವರಾಗಿದ್ದಾರೆ. ಆದರೂ ದೇವದೂತರು ಸುಳ್ಳುಬೋಧಕರನ್ನು ಪ್ರಭುವಿನ ಸನ್ನಿಧಿಯಲ್ಲಿ ದೂಷಿಸುವುದಿಲ್ಲ.
12 ಆದರೆ ಈ ಸುಳ್ಳುಬೋಧಕರು ತಮಗೆ ಅರ್ಥವಾಗದ ಸಂಗತಿಗಳ ವಿರುದ್ಧ ಕೆಟ್ಟದ್ದನ್ನು ಮಾತಾಡುತ್ತಾರೆ. ಅವರು ವಿವೇಚಿಸದೆ ಕಾರ್ಯ ಮಾಡುವ ಪ್ರಾಣಿಗಳಂತಿದ್ದಾರೆ. ಹಿಡಿಯಲ್ಪಟ್ಟು ಕೊಲ್ಲಲ್ಪಡುವುದಕ್ಕಾಗಿಯೇ ಹುಟ್ಟಿರುವ ಕ್ರೂರಪ್ರಾಣಿಗಳಂತೆ ಅವರು ನಾಶವಾಗುವರು. 13 ಅವರಿಂದ ಅನೇಕ ಜನರು ಸಂಕಟಕ್ಕೆ ಒಳಗಾಗುವರು. ಅವರು ಮಾಡಿದ್ದಕ್ಕೆ ಅದೇ ಪ್ರತಿಫಲವಾಗಿರುವುದು. ಈ ಸುಳ್ಳುಬೋಧಕರು ಜನರೆಲ್ಲರ ಎದುರಿನಲ್ಲಿ ಕೆಟ್ಟದ್ದನ್ನು ಮಾಡಲು ಸಂತೋಷಿಸುತ್ತಾರೆ.
ತಮ್ಮನ್ನು ಸಂತಸಗೊಳಿಸುವ ಕೆಟ್ಟಕಾರ್ಯಗಳಿಂದ ಅವರು ಆನಂದಿಸುತ್ತಾರೆ. ಅವರು ನಿಮ್ಮ ಮಧ್ಯದಲ್ಲಿ ಕೊಳಕಾದ ಕಲೆಗಳಂತಿದ್ದಾರೆ. ನೀವು ಒಟ್ಟಾಗಿ ಊಟ ಮಾಡುವಾಗ ಅವರು ನಿಮಗೆ ಅಪಮಾನಕರವಾಗಿದ್ದಾರೆ. 14 ಅವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರಾಗಿದ್ದಾರೆ. ಅವರು ದುರ್ಬಲರನ್ನು ಪಾಪವೆಂಬ ಉರುಲಿನಲ್ಲಿ ಬೀಳಿಸುತ್ತಾರೆ. ಅವರು ತಮ್ಮ ಹೃದಯಗಳಿಗೆ ಸ್ವಾರ್ಥವನ್ನೇ ಕಲಿಸಿದ್ದಾರೆ. ಅವರು ಶಾಪಗ್ರಸ್ತರಾಗಿದ್ದಾರೆ.
15 ಈ ಸುಳ್ಳುಬೋಧಕರು ಸರಿಯಾದ ಮಾರ್ಗವನ್ನು ತೊರೆದು, ಕೆಟ್ಟಮಾರ್ಗವನ್ನು ಅನುಸರಿಸಿದ್ದಾರೆ. ಬಿಳಾಮನು ಬೆಯೋರನ ಮಗ. ಅವನು ಅಧರ್ಮದಿಂದ ದೊರೆಯುವ ಲಾಭವನ್ನು ಪ್ರೀತಿಸಿದನು. 16 ಆದರೆ ಅವನು ಮಾಡುತ್ತಿರುವುದು ತಪ್ಪೆಂದು ಒಂದು ಹೇಸರಕತ್ತೆಯು ಅವನಿಗೆ ತಿಳಿಸಿತು. ಅದು ಒಂದು ಮೂಕಪ್ರಾಣಿ. ಆದರೆ ಅದು ಮಾನವನಂತೆ ಮಾತಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿ ಮಾಡಿತು.
17 ಈ ಸುಳ್ಳುಬೋಧಕರು ನೀರಿಲ್ಲದ ಒರತೆಗಳಂತಿದ್ದಾರೆ. ಅವರು ಬಿರುಗಾಳಿಯಿಂದ ಬಡಿದುಕೊಂಡು ಹೋಗುವ ಮೋಡಗಳಂತಿದ್ದಾರೆ. ಅವರಿಗಾಗಿ ಒಂದು ಕಗ್ಗತ್ತಲಾದ ಸ್ಥಳವನ್ನು ಕಾದಿರಿಸಲಾಗಿದೆ. 18 ಅವರು ಅರ್ಥವಿಲ್ಲದ ಮಾತು ಗಳಿಂದ ಬಡಾಯಿಕೊಚ್ಚಿಕೊಳ್ಳುತ್ತಾರೆ; ಜನರನ್ನು ಪಾಪಗಳ ಬಲೆಗೆ ನಡೆಸುತ್ತಿದ್ದಾರೆ. ತಪ್ಪುಮಾರ್ಗದಲ್ಲಿ ನಡೆಯುವ ಜನರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡು ಬಂದ ಜನರನ್ನು ದಾರಿತಪ್ಪಿಸುತ್ತಾರೆ. ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಮಾಡಲು ಇಚ್ಛಿಸುವ ಕೆಟ್ಟಕಾರ್ಯಗಳನ್ನು ಬಳಸಿಕೊಂಡು ಈ ಸುಳ್ಳುಬೋಧಕರು ಅವರನ್ನು ದಾರಿ ತಪ್ಪಿಸುತ್ತಾರೆ. 19 ಈ ಸುಳ್ಳುಬೋಧಕರು ಆ ಜನರಿಗೆ ಸ್ವಾತಂತ್ರ್ಯವನ್ನು ಕೊಡುವುದಾಗಿ ವಾಗ್ದಾನ ಮಾಡುತ್ತಾರೆ. ಆದರೆ ಈ ಸುಳ್ಳುಬೋಧಕರೇ ಸ್ವತಂತ್ರರಾಗದೆ ನಾಶವಾಗುವಂಥ ಸಂಗತಿಗಳಿಗೆ ಗುಲಾಮರಾಗಿದ್ದಾರೆ. ಒಬ್ಬನು ಯಾವುದಕ್ಕೆ ಸೋತುಹೋಗಿದ್ದಾನೋ ಅದಕ್ಕೆ ಗುಲಾಮನಾಗಿದ್ದಾನೆ.
20 ಈ ಲೋಕದಲ್ಲಿನ ಕೆಟ್ಟಕಾರ್ಯಗಳಿಂದ ಆ ಜನರನ್ನು ಪಾರುಮಾಡಲಾಯಿತು. ನಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದರ ಮೂಲಕ ಅವರಿಗೆ ಬಿಡುಗಡೆಯಾಯಿತು. ಆದರೆ ಆ ಜನರು ತಮ್ಮ ಹಿಂದಿನ ಸಂಗತಿಗಳ ಕಡೆಗೆ ಹಿಂದಿರುಗಿಹೋದರೆ ಮತ್ತು ಅವುಗಳು ಅವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದರೆ ಅವರು ಮೊದಲಿಗಿಂತಲೂ ಹೆಚ್ಚು ಕೆಟ್ಟುಹೋಗುತ್ತಾರೆ. 21 ಹೌದು, ಆ ಜನರು ಸರಿಯಾದ ಮಾರ್ಗವನ್ನು ತಿಳಿಯದೆ ಹೋಗಿದ್ದರೇ ಒಳ್ಳೆಯದಾಗುತ್ತಿತ್ತು. ಸರಿಯಾದ ಮಾರ್ಗವನ್ನು ಅರಿತುಕೊಂಡು, ಪವಿತ್ರ ಬೋಧನೆಗಳಿಗೆ ವಿಮುಖರಾಗುವುದಕ್ಕಿಂತ ಅದನ್ನು ತಿಳಿದುಕೊಳ್ಳದಿದ್ದರೇ ಚೆನ್ನಾಗಿರುತ್ತಿತ್ತು. 22 ನಿಜವಾಗಿ ಈ ಗಾದೆಗಳಂತೆಯೇ ಅವರು ಮಾಡಿದರು: “ನಾಯಿಯು ತಾನು ಕಕ್ಕಿದ್ದನ್ನೇ ನೆಕ್ಕಲು ತಿರುಗಿಕೊಂಡಿತು”(A) ಮತ್ತು “ತೊಳೆದ ಹಂದಿಯು ಕೆಸರಿನಲ್ಲಿ ಹೊರಳಾಡಲು ಹೋಯಿತು.”
Kannada Holy Bible: Easy-to-Read Version. All rights reserved. © 1997 Bible League International