M’Cheyne Bible Reading Plan
ದಿನನಿತ್ಯ ಸಲ್ಲಿಸತಕ್ಕ ಅರ್ಪಣೆಗಳು
28 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ನೀನು ಇಸ್ರೇಲರಿಗೆ ಈ ಆಜ್ಞೆಯನ್ನು ಕೊಡು. ನೀವು ಎಚ್ಚರಿಕೆಯಾಗಿದ್ದು ನೇಮಿತ ಕಾಲಗಳಲ್ಲಿ ನನಗೆ ಅರ್ಪಿಸತಕ್ಕ ಧಾನ್ಯಸಮರ್ಪಣೆಗಳನ್ನು ನನಗೆ ಸುಗಂಧ ಹೋಮಮಾಡಬೇಕು. 3 ಅವರಿಗೆ ಹೀಗೆ ಹೇಳು: ನೀವು ಯೆಹೋವನಿಗೆ ಕೊಡಬೇಕಾಗಿರುವ ತ್ಯಾಗಮಯವಾದ ಕಾಣಿಕೆಗಳು ಇವುಗಳೇ: ದಿನನಿತ್ಯದ ಸರ್ವಾಂಗಹೋಮಕ್ಕಾಗಿ ಒಂದು ವರ್ಷ ವಯಸ್ಸಿನ ಎರಡು ಗಂಡುಕುರಿಗಳು. 4 ನೀವು ಒಂದು ಕುರಿಮರಿಯನ್ನು ಹೊತ್ತಾರೆಯಲ್ಲಿಯೂ ಇನ್ನೊಂದನ್ನು ನಸುಸಂಜೆಯಲ್ಲಿಯೂ ಅರ್ಪಿಸಬೇಕು. 5 ಹೊತ್ತಾರೆಯ ಸಮರ್ಪಣೆಯೊಂದಿಗೆ ನೀವು ಧಾನ್ಯಸಮರ್ಪಣೆಗಾಗಿ ಒಂದೂವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನೂ ಮೂರು ಸೇರು ಗೋಧಿಹಿಟ್ಟನ್ನೂ ಬೆರೆಸಿ ಸಮರ್ಪಿಸಬೇಕು.” 6 (ಈ ಸರ್ವಾಂಗಹೋಮವನ್ನು ಸೀನಾಯಿ ಬೆಟ್ಟದ ಮೇಲೆ ಯೆಹೋವನಿಗೆ ತ್ಯಾಗಮಯವಾದ ಕಾಣಿಕೆಯಾಗಿಯೂ ಸುಗಂಧ ವಾಸನೆಯಾಗಿಯೂ ಕ್ರಮವಾಗಿ ಅರ್ಪಿಸಲಾಯಿತು.) 7 ಪ್ರತಿಯೊಂದು ಕುರಿಮರಿಯೊಂದಿಗೆ ಒಂದೂವರೆ ಸೇರು ದ್ರಾಕ್ಷಾರಸವನ್ನು ಪಾನದ್ರವ್ಯದ ಕಾಣಿಕೆಯಾಗಿ ಅರ್ಪಿಸಬೇಕು. ಯೆಹೋವನಿಗೆ ಪಾನದ್ರವ್ಯವಾಗಿ ಅರ್ಪಿಸತಕ್ಕ ದ್ರಾಕ್ಷಾರಸವನ್ನು ಪವಿತ್ರಸ್ಥಳದಲ್ಲಿ ಸುರಿಯಿರಿ. 8 ನೀವು ಎರಡನೆ ಕುರಿಮರಿಯನ್ನು ನಸುಸಂಜೆಯಲ್ಲಿ ಅರ್ಪಿಸುವಾಗ, ಮುಂಜಾನೆಯಲ್ಲಿ ಅರ್ಪಿಸಿದಂತೆಯೇ ಅದರೊಡನೆ ಸಮರ್ಪಕವಾದ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಮಾಡಬೇಕು. ಇದು ಯೆಹೋವನಿಗೆ ತ್ಯಾಗಮಯವಾದ ಅರ್ಪಣೆಯಾಗಿದ್ದು ಸುಗಂಧ ವಾಸನೆಯನ್ನು ಉಂಟುಮಾಡುವುದು.
ಸಬ್ಬತ್ತಿನ ಸಮರ್ಪಣೆಗಳು
9-10 “ಸಬ್ಬತ್‌ದಿನದಲ್ಲಿ ಎರಡು ಪೂರ್ಣಾಂಗವಾದ ಒಂದು ವರ್ಷದ ಗಂಡುಕುರಿಗಳನ್ನೂ ಧಾನ್ಯದ್ರವ್ಯಾರ್ಪಣೆಗಾಗಿ ಎಣ್ಣೆ ಬೆರೆಸಿದ ಆರು ಸೇರು ಗೋಧಿಹಿಟ್ಟನ್ನೂ ಅದಕ್ಕೆ ತಕ್ಕ ಪಾನದ್ರವ್ಯವನ್ನೂ ಸಮರ್ಪಿಸಬೇಕು. ಕ್ರಮವಾಗಿ ಅರ್ಪಿಸತಕ್ಕ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ, ಪ್ರತಿಸಬ್ಬತ್ ದಿನ ಸರ್ವಾಂಗಹೋಮವನ್ನು ಅರ್ಪಿಸಬೇಕು.
ತಿಂಗಳ ಯಜ್ಞಗಳು
11 “ಪ್ರತಿ ತಿಂಗಳ ಮೊದಲನೆಯ ದಿನದಲ್ಲಿ, ನೀವು ಯೆಹೋವನಿಗೆ ಸರ್ವಾಂಗಹೋಮವನ್ನು ಅರ್ಪಿಸಬೇಕು: ಎರಡು ಹೋರಿಗಳು, ಒಂದು ಟಗರು ಮತ್ತು ಒಂದು ವರ್ಷದ ಏಳು ಕುರಿಮರಿಗಳು. ಇವುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು. 12 ಇವುಗಳೊಡನೆ ಧಾನ್ಯನೈವೇದ್ಯಕ್ಕಾಗಿ ನೀವು ಪ್ರತಿಯೊಂದು ಹೋರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಒಂಭತ್ತು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು. ಪ್ರತಿಯೊಂದು ಟಗರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಆರು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು. 13 ಪ್ರತಿಯೊಂದು ಕುರಿಮರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಮೂರು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು. ಈ ಸರ್ವಾಂಗಹೋಮವು ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಇದೆ. 14 ಇವುಗಳಿಗೆ ತಕ್ಕ ಪಾನದ್ರವ್ಯಾರ್ಪಣೆಗಳನ್ನು ಮಾಡಬೇಕು. ಅವು ಯಾವುವೆಂದರೆ: ಒಂದು ಹೋರಿಯೊಡನೆ ಮೂರು ಸೇರು ದ್ರಾಕ್ಷಾರಸವನ್ನೂ ಟಗರಿನೊಡನೆ ಎರಡು ಸೇರು ದ್ರಾಕ್ಷಾರಸವನ್ನೂ ಕುರಿಮರಿಯೊಡನೆ ಒಂದೂವರೆ ಸೇರು ದ್ರಾಕ್ಷಾರಸವನ್ನೂ ಅರ್ಪಿಸಬೇಕು. ವರ್ಷದ ಪ್ರತಿತಿಂಗಳು ಅಮಾವಾಸ್ಯೆಯಲ್ಲಿ ಅರ್ಪಿಸತಕ್ಕ ಮಾಸಿಕ ಸರ್ವಾಂಗಹೋಮಗಳು ಇವುಗಳೇ. 15 ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ, ಪಾಪಪರಿಹಾರಕ ಯಜ್ಞವಾಗಿ ಒಂದು ಹೋತವನ್ನು ಯೆಹೋವನಿಗೆ ಅರ್ಪಿಸಬೇಕು.
ಪಸ್ಕಹಬ್ಬ
16 “ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಯೆಹೋವನಿಗೆ ಪಸ್ಕಹಬ್ಬದ ಯಜ್ಞವನ್ನು ಅರ್ಪಿಸಬೇಕು. 17 ಹುಳಿಯಿಲ್ಲದ ರೊಟ್ಟಿಯ ಹಬ್ಬವು ಅದೇ ತಿಂಗಳಿನ ಹದಿನೈದನೆಯ ದಿನದಿಂದ ಪ್ರಾರಂಭವಾಗುವುದು. ಏಳು ದಿನಗಳವರೆಗೂ ಹುಳಿಯಿಲ್ಲದ ರೊಟ್ಟಿಯನ್ನೇ ಊಟಮಾಡಬೇಕು. 18 ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ ಸೇರಬೇಕು. ಆ ದಿನದಲ್ಲಿ ಯಾವ ಪ್ರಯಾಸದ ಕೆಲಸವನ್ನು ಮಾಡಬಾರದು. 19 ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ಎರಡು ಹೋರಿಗಳನ್ನು, ಒಂದು ಟಗರನ್ನು ಮತ್ತು ಒಂದು ವರ್ಷದ ಏಳು ಗಂಡುಕುರಿಮರಿಗಳನ್ನು ಅರ್ಪಿಸಬೇಕು. ಈ ಪಶುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು. 20 ಇವುಗಳೊಂದಿಗೆ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ತಂದುಕೊಡಬೇಕು; ಹೇಗೆಂದರೆ, ಒಂದು ಹೋರಿಗೆ ಒಂಭತ್ತು ಸೇರು ಗೋಧಿಹಿಟ್ಟು, ಒಂದು ಟಗರಿಗೆ ಆರು ಸೇರು ಗೋಧಿಹಿಟ್ಟು, 21 ಏಳು ಕುರಿಮರಿಗಳಲ್ಲಿ ಪ್ರತಿಯೊಂದಕ್ಕೂ ಮೂರು ಸೇರು ಗೋಧಿಹಿಟ್ಟು. 22 ಇದಲ್ಲದೆ ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಒಂದು ಹೋತವನ್ನು ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು. 23 ಕ್ರಮವಾಗಿ ಮುಂಜಾನೆ ಅರ್ಪಿಸುವ ಸರ್ವಾಂಗಹೋಮವಲ್ಲದೆ ಇವುಗಳನ್ನೂ ಅರ್ಪಿಸಬೇಕು.
24 “ಈ ಎಲ್ಲ ಅರ್ಪಣೆಗಳನ್ನು ಆ ಏಳು ದಿನಗಳಲ್ಲಿ ಪ್ರತಿಯೊಂದು ದಿನವೂ ಆಹಾರವಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ಅರ್ಪಿಸಬೇಕು. ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ ಇವುಗಳನ್ನೂ ಅರ್ಪಿಸಬೇಕು.
25 “ಇದಲ್ಲದೆ ಏಳನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಆ ದಿನದಲ್ಲಿ ನೀವು ಪ್ರಯಾಸದ ಕೆಲಸವನ್ನು ಮಾಡಕೂಡದು.
ವಾರಗಳ ಹಬ್ಬ (ಪಂಚಾಶತ್ತಮ)
26 “ನಿಮ್ಮ ಪ್ರಥಮಫಲಗಳ ಹಬ್ಬದಲ್ಲಿ ಅಂದರೆ ವಾರಗಳ ಹಬ್ಬದಲ್ಲಿ ನೀವು ಹೊಸದಾಗಿ ಬೆಳೆದ ಗೋಧಿಯನ್ನು ಯೆಹೋವನಿಗೆ ಅರ್ಪಿಸುವಾಗ, ದೇವರನ್ನು ಆರಾಧಿಸಲು ನೀವು ಸಭೆ ಸೇರಬೇಕು. ನೀವು ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು. 27 ಆ ದಿನದಲ್ಲಿ ಎರಡು ಹೋರಿಗಳನ್ನು, ಒಂದು ಟಗರನ್ನು ಮತ್ತು ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನು ಯೆಹೋವನಿಗೆ ಸುಗಂಧ ವಾಸನೆಯಾಗಿರುವ ಸರ್ವಾಂಗಹೋಮವಾಗಿ ಅರ್ಪಿಸಬೇಕು. 28 ಇವುಗಳೊಂದಿಗೆ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಪ್ರತಿಯೊಂದು ಹೋರಿಗೆ ಒಂಭತ್ತು ಸೇರು, 29 ಟಗರಿಗೆ ಆರು ಸೇರು ಮತ್ತು ಪ್ರತಿಯೊಂದು ಕುರಿಗೆ ಮೂರು ಸೇರು ಈ ಮೇರೆಗೆ ಸಮರ್ಪಿಸಬೇಕು. 30 ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಒಂದು ಹೋತವನ್ನೂ ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು. 31 ಈ ಪಶುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು. ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಧಾನ್ಯಾರ್ಪಣೆಗಳಲ್ಲದೆ ಈ ಯಜ್ಞಗಳನ್ನು ಮತ್ತು ಅವುಗಳೊಡನೆ ಪಾನದ್ರವ್ಯಾರ್ಪಣೆಗಳನ್ನು ಅರ್ಪಿಸಬೇಕು. ನೀವು ಸಮರ್ಪಿಸುವ ಪಶುಗಳಲ್ಲಿಯೂ ಅಥವಾ ಪಾನದ್ರವ್ಯಸಮರ್ಪಣೆಗಳಲ್ಲಿಯೂ ಯಾವ ದೋಷವೂ ಇರಬಾರದು.
ರಚನೆಗಾರ: ಸೊಲೊಮೋನ.
72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
2 ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
ತೀರ್ಪುಮಾಡಲು ಅವನಿಗೆ ಸಹಾಯಮಾಡು.
3 ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
4 ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
5 ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
6 ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
7 ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.
8 ಅವನ ರಾಜ್ಯವು ಸಮುದ್ರದಿಂದ ಸಮುದ್ರದವರೆಗೂ
ಯೂಫ್ರೇಟೀಸ್ ನದಿಯಿಂದ ಭೂಮಿಯ ಬಹುದೂರದ ಸ್ಥಳದವರೆಗೂ ಬೆಳೆಯಲಿ.
9 ಅರಣ್ಯದಲ್ಲಿ ವಾಸಿಸುತ್ತಿರುವ ಜನರು ಅವನಿಗೆ ಅಡ್ಡಬೀಳಲಿ.
ಅವನ ವೈರಿಗಳೆಲ್ಲ ಅವನ ಮುಂದೆ ಬಿದ್ದು ಮಣ್ಣುಮುಕ್ಕಲಿ.
10 ತಾರ್ಷೀಷಿನ ರಾಜರುಗಳೂ ಬಹುದೂರದ ದೇಶಗಳವರೂ ಅವನಿಗೆ ಉಡುಗೊರೆಗಳನ್ನು ಕೊಡಲಿ.
ಶೆಬಾ ಮತ್ತು ಸೆಬಾ ಪ್ರಾಂತ್ಯಗಳ ರಾಜರುಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಕೊಡಲಿ.
11 ಅರಸರುಗಳೆಲ್ಲಾ ನಮ್ಮ ರಾಜನಿಗೆ ಅಡ್ಡಬೀಳಲಿ.
ಜನಾಂಗಗಳೆಲ್ಲಾ ಅವನ ಸೇವೆಮಾಡಲಿ.
12 ನಮ್ಮ ರಾಜನು ನಿಸ್ಸಹಾಯಕರಿಗೆ ಸಹಾಯ ಮಾಡುವನು.
ನಮ್ಮ ರಾಜನು ಬಡವರಿಗೂ ಅಸಹಾಯಕರಿಗೂ ಸಹಾಯ ಮಾಡುವನು.
13 ಬಡವರೂ ಅಸಹಾಯಕರೂ ಅವನನ್ನೇ ಅವಲಂಬಿಸಿಕೊಳ್ಳುವರು.
ರಾಜನು ಅವರ ಪ್ರಾಣಗಳನ್ನು ಕಾಪಾಡುವನು.
14 ಕ್ರೂರಿಗಳಿಂದ ಅವರನ್ನು ತಪ್ಪಿಸಿ ರಕ್ಷಿಸುವನು.
ಆ ಬಡವರ ಜೀವಗಳು ರಾಜನಿಗೆ ಅಮೂಲ್ಯವಾಗಿವೆ.
15 ರಾಜನು ಬಹುಕಾಲ ಬಾಳಲಿ!
ಅವನಿಗೆ ಶೆಬಾ ಪ್ರಾಂತ್ಯದಿಂದ ಬಂಗಾರವು ಬರಲಿ.
ರಾಜನಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
ಪ್ರತಿದಿನವೂ ಅವನನ್ನು ಆಶೀರ್ವದಿಸಿರಿ.
16 ಹೊಲಗಳು ಯಥೇಚ್ಚವಾಗಿ ಧಾನ್ಯಬೆಳೆಯಲಿ.
ಬೆಟ್ಟಗಳು ಬೆಳೆಗಳಿಂದ ತುಂಬಿಹೋಗಲಿ.
ಹೊಲಗಳು ಲೆಬನೋನಿನಲ್ಲಿರುವ ಹೊಲಗಳಂತೆ ಫಲವತ್ತಾಗಿರಲಿ.
ಬಯಲುಗಳು ಹುಲ್ಲಿನಿಂದ ಆವೃತಿಯಾಗಿರುವಂತೆ ಪಟ್ಟಣಗಳು ಜನರಿಂದ ತುಂಬಿಹೋಗಲಿ.
17 ರಾಜನು ಎಂದೆಂದಿಗೂ ಪ್ರಸಿದ್ಧನಾಗಿರಲಿ.
ಸೂರ್ಯನು ಇರುವವರೆಗೂ ಜನರು ಅವನ ಹೆಸರನ್ನು ಜ್ಞಾಪಿಸಿಕೊಳ್ಳಲಿ.
ಅವನಿಂದ ಜನರಿಗೆ ಆಶೀರ್ವಾದವಾಗಲಿ.
ಜನರೆಲ್ಲರೂ ಅವನನ್ನು ಆಶೀರ್ವದಿಸಲಿ.
18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
ಆಮೆನ್, ಆಮೆನ್!
20 (ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯಗೊಂಡವು.)
ಈಜಿಪ್ಟಿಗೆ ದೇವರ ಸಂದೇಶ
19 ಈಜಿಪ್ಟಿನ ವಿಷಯವಾಗಿ ದುಃಖಕರವಾದ ಸಂದೇಶ: ಯೆಹೋವನು ವೇಗವಾಗಿ ಬರುವ ಮೋಡದೊಂದಿಗೆ ಬರುತ್ತಿದ್ದಾನೆ. ಆತನು ಈಜಿಪ್ಟನ್ನು ಪ್ರವೇಶಿಸುವಾಗ ಈಜಿಪ್ಟಿನ ಸುಳ್ಳುದೇವರುಗಳೆಲ್ಲಾ ಹೆದರಿ ನಡುಗುವವು. ಈಜಿಪ್ಟು ಧೈರ್ಯಶಾಲಿ ದೇಶವಾಗಿದ್ದರೂ, ಅದರ ಧೈರ್ಯ ಮೇಣದಂತೆ ಕರಗಿಹೋಗುವದು.
2 ದೇವರು ಹೇಳುವುದೇನೆಂದರೆ: “ನಾನು ಈಜಿಪ್ಟಿನ ಜನರಲ್ಲಿ ಒಳಜಗಳವನ್ನು ಹುಟ್ಟಿಸುವೆನು. ಜನರು ತಮ್ಮ ಸಹೋದರರೊಂದಿಗೆ ಜಗಳವಾಡುವರು. ನೆರೆಹೊರೆಯವರು ಪರಸ್ಪರ ಜಗಳವಾಡುವರು. ನಗರವು ನಗರದೊಂದಿಗೆ ಯುದ್ಧ ಮಾಡುವದು. ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರದೊಂದಿಗೆ ಯುದ್ಧಮಾಡುವದು. 3 ಈಜಿಪ್ಟಿನ ಜನರಲ್ಲಿ ಗಲಿಬಿಲಿ ಉಂಟಾಗುವದು. ಆ ಜನರು ತಮ್ಮ ಸುಳ್ಳುದೇವರುಗಳ ಬಳಿಗೂ ಪಂಡಿತರ ಬಳಿಗೂ ಓಡಿ ತಾವು ಏನು ಮಾಡಬೇಕೆಂದು ವಿಚಾರಿಸುವರು. ಮಂತ್ರವಾದಿಗಳನ್ನೂ ಪ್ರೇತವಿಚಾರಕರನ್ನೂ ಬೇತಾಳಿಕರನ್ನೂ ಕೇಳುವರು. ಆದರೆ ಅವರ ಯಾವ ಸಲಹೆಗಳೂ ಪ್ರಯೋಜನಕ್ಕೆ ಬರುವದಿಲ್ಲ.” 4 ಸರ್ವಶಕ್ತನೂ ಒಡೆಯನೂ ಆಗಿರುವ ಯೆಹೋವನು ಹೇಳುವುದೇನೆಂದರೆ: “ನಾನು ಈಜಿಪ್ಟನ್ನು ಕಠಿಣನಾದ ಒಡೆಯನಿಗೆ ಒಪ್ಪಿಸುವೆನು. ಬಲಿಷ್ಠ ಒಡೆಯನು ಅವರನ್ನು ಆಳುವನು.”
5 ನೈಲ್ ನದಿಯು ಬತ್ತಿಹೋಗುವದು. ಪ್ರವಾಹದ ನೀರು ಇಲ್ಲವಾಗುವದು. 6 ಎಲ್ಲಾ ನದಿಗಳಿಂದ ದುರ್ವಾಸನೆ ಹೊರಡುವದು. ಈಜಿಪ್ಟಿನ ಕಾಲಿವೆಗಳು ಬತ್ತಿಹೋಗುತ್ತವೆ; ಜಲಸಸ್ಯಗಳೆಲ್ಲ ಒಣಗಿಹೋಗುತ್ತವೆ. 7 ನದಿಯ ದಡದಲ್ಲಿರುವ ಮರಗಳೆಲ್ಲಾ ಒಣಗಿಹೋಗಿ ಗಾಳಿಯಲ್ಲಿ ಹಾರಿಹೋಗುವವು. ನದಿಯ ತೀರದಲ್ಲಿರುವ ಮರಗಳೂ ಒಣಗಿಹೋಗುವವು.
8 ಬೆಸ್ತರೂ ಮೀನು ಹಿಡಿಯುವವರೂ ನೈಲ್ ನದಿಯ ನೀರು ಬತ್ತಿಹೋದದ್ದಕ್ಕಾಗಿ ದುಃಖಿಸುತ್ತಾ ಅಳುವರು. ಅವರು ಜೀವನೋಪಾಯಕ್ಕಾಗಿ ನೈಲ್ ನದಿಯನ್ನು ಆಧಾರ ಮಾಡಿಕೊಂಡಿದ್ದರು. 9 ಬಟ್ಟೆಗಳನ್ನು ನೇಯುವವರು ದುಃಖಿಸುವರು. ನದಿ ಬತ್ತಿಹೋದದ್ದರಿಂದಲೂ ನದಿಯ ತೀರದಲ್ಲಿ ನಾರಿನ ಗಿಡಗಳು ಬೆಳೆಯದೆ ಇರುವದರಿಂದಲೂ ಅವರಿಗೆ ಬಟ್ಟೆ ನೇಯಲು ನಾರು ಸಿಗುವುದಿಲ್ಲ. 10 ನೀರನ್ನು ಉಳಿಸುವದಕ್ಕಾಗಿ ನದಿಗೆ ಅಣೆಕಟ್ಟನ್ನು ಕಟ್ಟುವ ಜನರೂ ದುಃಖಿಸುವರು. ಯಾಕೆಂದರೆ ನದಿಯಲ್ಲಿ ನೀರಿಲ್ಲದ ನಿಮಿತ್ತ ಅವರಿಗೆ ಕೆಲಸವಿರುವುದಿಲ್ಲ.
11 ಚೋಯನಿನ ನಗರದ ಪ್ರಮುಖರು ಮೂರ್ಖರಾಗಿದ್ದಾರೆ. ಫರೋಹನ “ಜ್ಞಾನಿಗಳಾದ ಸಲಹೆಗಾರರು” ತಪ್ಪು ಸಲಹೆ ಕೊಡುತ್ತಾರೆ. ಅವರು ತಾವೇ ಬುದ್ಧಿವಂತರೆಂದೂ ರಾಜವಂಶದವರೆಂದೂ ಹೇಳಿಕೊಳ್ಳುವರು. ಆದರೆ ತಾವು ನೆನಸುವಷ್ಟರ ಮಟ್ಟಿಗೆ ಅವರು ಬುದ್ಧಿವಂತರಲ್ಲ. 12 ಈಜಿಪ್ಟೇ, ನಿನ್ನ ಜ್ಞಾನಿಗಳು ಎಲ್ಲಿ? ಸರ್ವಶಕ್ತನಾದ ಯೆಹೋವನು ಈಜಿಪ್ಟ್ ದೇಶಕ್ಕೆ ಮಾಡಿರುವ ಯೋಜನೆಯನ್ನು ನಿನ್ನ ಜ್ಞಾನಿಗಳು ಮೊದಲು ತಿಳಿದುಕೊಳ್ಳಬೇಕು. ನಿಮಗೆ ಸಂಭವಿಸಲಿರುವುದನ್ನು ಅವರು ನಿನಗೆ ತಿಳಿಸಬೇಕು.
13 ಚೋಯನಿನ ಅಧಿಪತಿಗಳು ಮೋಸಹೋದರು. ನೋಫಿನ ಪ್ರಮುಖರು ಸುಳ್ಳನ್ನು ನಂಬಿದರು. ಆದ್ದರಿಂದ ನಾಯಕರು ಈಜಿಪ್ಟನ್ನು ತಪ್ಪುದಾರಿಗೆ ನಡೆಸಿದರು. 14 ಯೆಹೋವನು ಆ ನಾಯಕರನ್ನು ಗಲಿಬಿಲಿಪಡಿಸಿದನು. ಅವರು ಈಜಿಪ್ಟನ್ನು ತಪ್ಪಾದ ದಾರಿಯಲ್ಲಿ ನಡೆಸಿದರು. ಅವರು ಮಾಡುವ ಪ್ರತಿಯೊಂದು ಕಾರ್ಯವೂ ತಪ್ಪಾದದ್ದೇ. ಅವರು ಕುಡಿದು ಮತ್ತರಾದವರಂತೆ ನೆಲದ ಮೇಲೆ ಬಿದ್ದು ಹೊರಳಾಡುತ್ತಾರೆ. 15 ಆ ನಾಯಕರುಗಳಿಗೆ ಏನೂ ಮಾಡಲಾಗದು. (ಈ ನಾಯಕರುಗಳು “ತಲೆಯೂ ಬಾಲವೂ” ಆಗಿದ್ದಾರೆ; “ಮರದ ಕೊಂಬೆಯೂ ಕಾಂಡವೂ” ಆಗಿದ್ದಾರೆ.)
16 ಆ ಸಮಯದಲ್ಲಿ ಈಜಿಪ್ಟಿನವರು ಭಯದಿಂದ ಕಂಗೆಟ್ಟ ಹೆಂಗಸರಂತಿರುವರು. ಅವರು ಸರ್ವಶಕ್ತನಾದವನಿಗೆ ಭಯಪಡುವರು. ಯೆಹೋವನು ಜನರನ್ನು ಶಿಕ್ಷಿಸಲು ತನ್ನ ಕೈಯನ್ನೆತ್ತುವನು. ಆಗ ಅವರೆಲ್ಲರೂ ಹೆದರಿಹೋಗುವರು. 17 ಯೆಹೂದ ಪ್ರಾಂತ್ಯದವರೂ ಈಜಿಪ್ಟಿನಲ್ಲಿರುವವರೂ ಭಯಪಡಬೇಕಾಗಿದೆ. ಈಜಿಪ್ಟಿನಲ್ಲಿ ಯಾರೇ ಆಗಲಿ ಯೆಹೂದದ ಹೆಸರು ಕೇಳಿದಾಗ ಭಯಪಡುವರು. ಯಾಕೆಂದರೆ ಭಯಂಕರ ಘಟನೆಗಳು ಈಜಿಪ್ಟಿನಲ್ಲಿ ಸಂಭವಿಸುವಂತೆ ಸರ್ವಶಕ್ತನಾದ ಯೆಹೋವನು ಮಾಡುತ್ತಾನೆ. 18 ಆ ಸಮಯದಲ್ಲಿ ಈಜಿಪ್ಟಿನಲ್ಲಿ ಕಾನಾನ್ ದೇಶದ (ಯೆಹೂದ್ಯರ) ಭಾಷೆಯನ್ನಾಡುವ ಐದು ಪಟ್ಟಣಗಳಿರುವವು. ಅದರಲ್ಲಿ ಒಂದರ ಹೆಸರು “ನಾಶನದ ನಗರ.” ಆ ಜನರು ಸರ್ವಶಕ್ತನಾದ ಯೆಹೋವನನ್ನು ಹಿಂಬಾಲಿಸಲು ತೀರ್ಮಾನಿಸುವರು.
19 ಆ ಸಮಯದಲ್ಲಿ ಈಜಿಪ್ಟಿನ ಮಧ್ಯದಲ್ಲಿ ಯೆಹೋವನಿಗಾಗಿ ಒಂದು ವೇದಿಕೆ ಇರುವದು. ಈಜಿಪ್ಟಿನ ಗಡಿಯಲ್ಲಿ ಯೆಹೋವನ ಗೌರವಾರ್ಥವಾಗಿ ಸ್ಮಾರಕಸ್ತಂಭ ಇರುವದು. 20 ಇದು ಸರ್ವಶಕ್ತನಾದ ಯೆಹೋವನು ಅದ್ಭುತವನ್ನು ನಡಿಸುತ್ತಾನೆಂಬುದಕ್ಕೆ ಗುರುತಾಗಿದೆ. ಜನರು ಯಾವಾಗಲಾದರೂ ಸರಿಯೇ ಸಹಾಯಕ್ಕಾಗಿ ಮೊರೆಯಿಟ್ಟರೆ ಆತನು ಸಹಾಯವನ್ನು ಕಳುಹಿಸುವನು. ಯೆಹೋವನು ಅವರನ್ನು ರಕ್ಷಿಸಲೂ ಕಾಪಾಡಲೂ ಒಬ್ಬನನ್ನು ಕಳುಹಿಸುವನು. ಆ ಮನುಷ್ಯನು ಬೇರೆಯವರಿಂದ ಶೋಷಿತರಾದವರನ್ನು ಸಂರಕ್ಷಿಸುವನು.
21 ಆ ಸಮಯದಲ್ಲಿ ಈಜಿಪ್ಟಿನ ಜನರು ಯೆಹೋವನನ್ನು ನಿಜವಾಗಿಯೂ ಅರಿತುಕೊಳ್ಳುವರು. ಅವರು ದೇವರನ್ನು ಪ್ರೀತಿಸುವರು. ಅವರು ಯೆಹೋವನನ್ನು ಸೇವಿಸಿ ಅನೇಕ ಯಜ್ಞಗಳನ್ನು ಸಮರ್ಪಿಸುವರು. ಯೆಹೋವನಿಗೆ ಹರಕೆ ಹೊತ್ತು ಸಲ್ಲಿಸುವರು. 22 ಯೆಹೋವನು ಈಜಿಪ್ಟಿನ ಜನರನ್ನು ಶಿಕ್ಷಿಸುವನು. ಆಮೇಲೆ ಆತನು ಅವರನ್ನು ಕ್ಷಮಿಸುವನು. ಆಗ ಅವರು ಆತನ ಬಳಿಗೆ ಹಿಂದಿರುಗಿ ಬರುವರು. ಯೆಹೋವನು ಅವರ ಪ್ರಾರ್ಥನೆಯನ್ನು ಕೇಳಿ ಅವರನ್ನು ಕ್ಷಮಿಸುವನು.
23 ಆ ಸಮಯದಲ್ಲಿ ಈಜಿಪ್ಟಿನಿಂದ ಅಶ್ಶೂರದವರೆಗೆ ಹೆದ್ದಾರಿ ಇರುವುದು. ಆಗ ಅಶ್ಶೂರದವರು ಈಜಿಪ್ಟಿಗೂ, ಈಜಿಪ್ಟಿನವರು ಅಶ್ಶೂರಕ್ಕೂ ಪ್ರಯಾಣ ಮಾಡುವರು. ಈಜಿಪ್ಟಿನವರು ಅಶ್ಶೂರದವರೊಟ್ಟಿಗೆ ಕೆಲಸ ಮಾಡುವರು. 24 ಆ ಸಮಯದಲ್ಲಿ ಇಸ್ರೇಲ್, ಅಶ್ಶೂರ ಮತ್ತು ಈಜಿಪ್ಟು ಒಟ್ಟಾಗಿ ಸೇರಿ ದೇಶವನ್ನು ನಿಯಂತ್ರಿಸುವರು. ಇದು ದೇಶಕ್ಕೆ ಆಶೀರ್ವಾದದಾಯಕವಾಗಿರುವದು. 25 ಸರ್ವಶಕ್ತನಾದ ಯೆಹೋವನು ಈ ದೇಶಗಳನ್ನು ಆಶೀರ್ವದಿಸುವನು. ಆತನು, “ಈಜಿಪ್ಟೇ, ನೀನು ನನ್ನವನು; ಅಶ್ಶೂರವೇ, ನಾನು ನಿನ್ನನ್ನು ನಿರ್ಮಿಸಿದೆನು. ಇಸ್ರೇಲೇ, ನೀನು ನನ್ನ ಸ್ವಾಸ್ತ್ಯ. ನೀವೆಲ್ಲರೂ ಆಶೀರ್ವದಿಸಲ್ಪಟ್ಟವರು” ಎನ್ನುವನು.
ಅಶ್ಶೂರವು ಈಜಿಪ್ಟ್ ಮತ್ತು ಇಥಿಯೋಪ್ಯವನ್ನು ಸೋಲಿಸುವದು
20 ಸರ್ಗೋನ್ ಅಶ್ಶೂರದ ರಾಜನಾಗಿದ್ದನು. ಇವನು ತರ್ತಾನನ್ನು ಅಷ್ಡೋದಿಗೆ ವಿರುದ್ಧವಾಗಿ ಯುದ್ಧಮಾಡಲು ಕಳುಹಿಸಿದನು. ತರ್ತಾನ್ ಎಂಬವನು ಅಷ್ಡೋದ್ ನಗರಕ್ಕೆ ಹೋಗಿ ಅದನ್ನು ವಶಪಡಿಸಿಕೊಂಡನು. 2 ಆ ಸಮಯದಲ್ಲಿ ಆಮೋಚನ ಮಗನಾದ ಯೆಶಾಯನೊಂದಿಗೆ ಯೆಹೋವನು ಮಾತನಾಡಿದನು. “ನಿನ್ನ ಶೋಕವಸ್ತ್ರಗಳನ್ನು ತೆಗೆದುಹಾಕು. ನಿನ್ನ ಕಾಲುಗಳಿಂದ ಪಾದರಕ್ಷೆಗಳನ್ನು ತೆಗೆದುಬಿಡು” ಎಂದು ಯೆಹೋವನು ಹೇಳಿದಾಗ ಯೆಶಾಯನು ಆತನಿಗೆ ವಿಧೇಯನಾದನು. ಯೆಶಾಯನು ಪಾದರಕ್ಷೆಗಳಿಲ್ಲದೆ, ಬಟ್ಟೆಗಳಿಲ್ಲದೆ ಅಡ್ಡಾಡಿದನು.
3 ಆಗ ಯೆಹೋವನು, “ಮೂರು ವರ್ಷಗಳ ತನಕ ನನ್ನ ಸೇವಕನಾದ ಯೆಶಾಯನು ಬಟ್ಟೆ ಇಲ್ಲದೆ, ಪಾದರಕ್ಷೆ ಇಲ್ಲದೆ ನಡೆದಾಡಿದ್ದಾನೆ. ಇದು ಈಜಿಪ್ಟಿಗೂ ಇಥಿಯೋಪ್ಯಕ್ಕೂ ಗುರುತಾಗಿದೆ. 4 ಅಶ್ಶೂರದ ಅರಸನು ಈಜಿಪ್ಟನ್ನೂ ಇಥಿಯೋಪ್ಯವನ್ನೂ ಸೋಲಿಸುವನು. ಅಶ್ಶೂರವು ಜನರನ್ನು ಸೆರೆಹಿಡಿದು ಅವರ ರಾಜ್ಯಗಳಿಂದ ಹೊರಗೆ ಕೊಂಡುಹೋಗುವದು. ವೃದ್ಧರೂ ಬಾಲಕರೂ ಬಟ್ಟೆಯಿಲ್ಲದೆಯೂ ಪಾದರಕ್ಷೆಗಳಿಲ್ಲದೆಯೂ ಇರುವರು. ಅವರು ಪೂರ್ಣ ಬೆತ್ತಲೆಯಾಗಿರುವರು. ಈಜಿಪ್ಟಿನ ಜನರು ನಾಚಿಕೆಗೆ ತುತ್ತಾಗುವರು. 5 ಜನರು ಇಥಿಯೋಪ್ಯದ ಕಡೆಗೆ ಸಹಾಯಕ್ಕಾಗಿ ನೋಡುವರು. ಅವರು ಕಂಗೆಟ್ಟು ಹೋಗುವರು. ಈಜಿಪ್ಟಿನ ಮಹಿಮೆಯನ್ನು ಗಮನಿಸಿದವರು ಈಗ ನಾಚಿಕೆಯಲ್ಲಿ ಬೀಳುವರು” ಎನ್ನುವನು.
6 ಸಮುದ್ರ ತೀರದಲ್ಲಿ ವಾಸಿಸುವವರು ಹೀಗೆ ಹೇಳುವರು: “ಆ ದೇಶದವರು ನಮಗೆ ಸಹಾಯ ಮಾಡುವರೆಂದು ಅವರನ್ನು ನಂಬಿದೆವು. ಅಶ್ಶೂರದ ಅರಸನಿಂದ ನಮ್ಮನ್ನು ಕಾಪಾಡುವಂತೆ ನಾವು ಅವರ ಬಳಿಗೆ ಓಡಿಹೋದೆವು. ಆದರೆ ಈಗ ನೋಡಿ, ಆ ದೇಶದವರು ಸೋತು ಹೋಗಿ ವೈರಿವಶವಾಗಿದ್ದಾರೆ. ಈಗ ನಾವು ಪಾರಾಗಲು ಹೇಗೆ ಸಾಧ್ಯ?”
1 ಯೇಸು ಕ್ರಿಸ್ತನ ಸೇವಕನೂ ಅಪೊಸ್ತಲನೂ ಆದ ಸಿಮೆಯೋನ ಪೇತ್ರನು ನಮ್ಮೊಂದಿಗೆ ಅಮೂಲ್ಯವಾದ ನಂಬಿಕೆಯನ್ನು ಹೊಂದಿರುವ ಜನರೆಲ್ಲರಿಗೂ ಬರೆಯುವ ಪತ್ರ. ನಮ್ಮ ದೇವರೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನು ನೀತಿವಂತನಾಗಿರುವುದರಿಂದ ನೀವು ಆ ನಂಬಿಕೆಯನ್ನು ಪಡೆದುಕೊಂಡಿರಿ. ಆತನು ಯೋಗ್ಯವಾದದ್ದನ್ನೇ ಮಾಡುತ್ತಾನೆ.
2 ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ. ದೇವರನ್ನು ಮತ್ತು ನಮ್ಮ ಪ್ರಭುವಾದ ಯೇಸುವನ್ನು ನೀವು ನಿಜವಾಗಿಯೂ ತಿಳಿದಿರುವುದರಿಂದ ನಿಮಗೆ ಕೃಪೆಯೂ ಶಾಂತಿಯೂ ದೊರೆಯಲಿ.
ನಮಗೆ ಬೇಕಾದುದನ್ನೆಲ್ಲಾ ದೇವರು ದಯಪಾಲಿಸಿದ್ದಾನೆ
3 ಯೇಸುವಿಗೆ ದೇವರ ಶಕ್ತಿಯಿದೆ. ಜೀವಿಸಲು ಮತ್ತು ದೇವರ ಸೇವೆ ಮಾಡಲು ಬೇಕಾದ ಪ್ರತಿಯೊಂದನ್ನು ಆತನ ಶಕ್ತಿಯು ನಮಗೆ ಒದಗಿಸಿದೆ. ನಾವು ಆತನನ್ನು ಬಲ್ಲವರಾದ್ದರಿಂದಲೇ ಅವುಗಳನ್ನು ಪಡೆದುಕೊಂಡಿದ್ದೇವೆ. ಯೇಸು ತನ್ನ ಪ್ರಭಾವದಿಂದಲೂ ಗುಣಾತಿಶಯದಿಂದಲೂ ನಮ್ಮನ್ನು ಕರೆದನು. 4 ಯೇಸು ತಾನು ಮಾಡಿದ ವಾಗ್ದಾನದಂತೆ, ತನ್ನ ಪ್ರಭಾವ ಮತ್ತು ಗುಣಾತಿಶಯಗಳ ಮೂಲಕ ನಮಗೆ ಅಮೂಲ್ಯವಾದ ಹಾಗೂ ಉತ್ಕೃಷ್ಟವಾದ ವರಗಳನ್ನು ದಯಪಾಲಿಸಿರುವನು. ಆ ವರಗಳಿಂದ ನೀವು ದೇವರ ಗುಣಾತಿಶಯದಲ್ಲಿ ಪಾಲುಗಾರರಾಗಲು ಸಾಧ್ಯ. ಹೀಗಿರಲಾಗಿ ನೀವು ಈ ಲೋಕದಲ್ಲಿ ದುರಾಶೆಯಿಂದುಂಟಾಗುವ ಕೆಟ್ಟತನಕ್ಕೆ ತಪ್ಪಿಸಿಕೊಂಡವರಾಗಿದ್ದೀರಿ.
5 ನೀವು ಈ ಆಶೀರ್ವಾದಗಳನ್ನು ಹೊಂದಿರುವುದರಿಂದ ಅವುಗಳನ್ನು ನಿಮ್ಮ ಜೀವಿತಕ್ಕೆ ಅಳವಡಿಸಿಕೊಳ್ಳಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿ. ನಿಮ್ಮ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ 6 ಜ್ಞಾನಕ್ಕೆ ದಮೆಯನ್ನೂ ದಮೆಗೆ ತಾಳ್ಮೆಯನ್ನೂ ತಾಳ್ಮೆಗೆ ದೇವರ ಸೇವೆಯನ್ನೂ 7 ದೇವರ ಸೇವೆಗೆ ಸಹೋದರ ಸ್ನೇಹವನ್ನೂ ಸಹೋದರ ಸ್ನೇಹಕ್ಕೆ ಪ್ರೀತಿಯನ್ನೂ ಸೇರಿಸಿರಿ 8 ಇವೆಲ್ಲವೂ ನಿಮ್ಮಲ್ಲಿದ್ದು ಬೆಳೆಯುತ್ತಿದ್ದರೆ, ನೀವು ಎಂದಿಗೂ ನಿರರ್ಥಕರಾಗದಂತೆ ಇವು ನಿಮಗೆ ಸಹಾಯ ಮಾಡುತ್ತವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಜ್ಞಾನದಲ್ಲಿ ಎಂದಿಗೂ ಅಯೋಗ್ಯರೆನಿಸಿಕೊಳ್ಳದಂತೆ ಇವು ನಿಮಗೆ ಸಹಾಯಮಾಡುತ್ತವೆ. 9 ಆದರೆ ಇವು ಯಾವನಲ್ಲಿ ಇರುವುದಿಲ್ಲವೋ ಅವನು ಸ್ಪಷ್ಟವಾಗಿ ನೋಡಲಾರನು. ಅವನು ಕುರುಡನಾಗಿದ್ದಾನೆ; ತಾನು ಶುದ್ಧನಾದದ್ದನ್ನು ಮರೆತವನಾಗಿದ್ದಾನೆ.
10 ನನ್ನ ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ತನ್ನವರನ್ನಾಗಿ ಆರಿಸಿಕೊಳ್ಳಲು ಕರೆದನು. ಆದ್ದರಿಂದಲೇ ನೀವು ದೇವರಿಂದ ನಿಜವಾಗಿಯೂ ಕರೆಯಲ್ಪಟ್ಟವರೆಂದೂ ಆರಿಸಲ್ಪಟ್ಟವೆರೆಂದೂ ತೋರಿಸಲು ಬಹಳವಾಗಿ ಪ್ರಯತ್ನಿಸಿರಿ. ಹೀಗೆ ನೀವು ಮಾಡಿದರೆ ಎಂದಿಗೂ ಎಡವಿಬೀಳುವುದಿಲ್ಲ. 11 ನಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸುಕ್ರಿಸ್ತನ ರಾಜ್ಯದಲ್ಲಿ ನಿಮಗೆ ಮಹಾ ಸ್ವಾಗತವನ್ನು ನೀಡಲಾಗುವುದು. ಆ ರಾಜ್ಯವು ಶಾಶ್ವತವಾದದ್ದು.
12 ಇವೆಲ್ಲವೂ ನಿಮಗೆ ತಿಳಿದಿದೆ. ನಿಮ್ಮಲ್ಲಿರುವ ಸತ್ಯದಲ್ಲಿ ನೀವು ಸ್ಥಿರವಾಗಿದ್ದೀರಿ. ಆದರೆ ಇವುಗಳನ್ನು ನೀವು ಜ್ಞಾಪಕ ಮಾಡಿಕೊಳ್ಳುವಂತೆ ನಾನು ನಿಮಗೆ ಯಾವಾಗಲೂ ಸಹಾಯ ಮಾಡುತ್ತೇನೆ. 13 ನಾನು ಈ ಲೋಕದಲ್ಲಿ ಇನ್ನೂ ಜೀವದಿಂದಿರುವಾಗಲೇ ಇವುಗಳನ್ನು ನಿಮ್ಮ ನೆನಪಿಗೆ ತರುವುದು ಯೋಗ್ಯವಾದದ್ದೆಂಬುದು ನನ್ನ ಆಲೋಚನೆ. 14 ನಾನು ಬಹುಬೇಗ ಈ ದೇಹವನ್ನು ತ್ಯಜಿಸಬೇಕೆಂಬುದೂ ನನಗೆ ತಿಳಿದಿದೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಅದನ್ನು ತೋರ್ಪಡಿಸಿದ್ದಾನೆ. 15 ನೀವು ಇವುಗಳನ್ನು ಯಾವಾಗಲೂ ನೆನಪು ಮಾಡಿಕೊಳ್ಳಲು ನಿಮಗೆ ನನ್ನಿಂದಾದಷ್ಟು ಸಹಾಯಮಾಡಲು ನಾನು ಪ್ರಯತ್ನಿಸುತ್ತೇನೆ. ನಾನು ಈ ಲೋಕವನ್ನು ಬಿಟ್ಟುಹೋದ ನಂತರವೂ ನೀವು ಈ ಸಂಗತಿಗಳನ್ನು ನೆನಪು ಮಾಡಿಕೊಳ್ಳಲು ಸಮರ್ಥರಾಗಿರಬೇಕೆಂಬುದು ನನ್ನ ಅಪೇಕ್ಷೆ.
ಕ್ರಿಸ್ತನ ಮಹಿಮೆಯನ್ನು ನಾವು ನೋಡಿದೆವು
16 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಶಕ್ತಿಯ ಕುರಿತಾಗಿ ಮತ್ತು ಆತನ ಬರುವಿಕೆಯ ಕುರಿತಾಗಿ ನಿಮಗೆ ತಿಳಿಸಿದ್ದೇವೆ. ಆ ಸಂಗತಿಗಳು ಜನರಿಂದ ಕಲ್ಪಿತವಾದ ಜಾಣ್ಮೆಯ ಕಥೆಗಳಲ್ಲ. ಯೇಸುವಿನ ಮಹಿಮೆಯನ್ನು ನಾವು ಕಣ್ಣಾರೆ ಕಂಡಿದ್ದೇವೆ. 17 ಆತನು ಅತ್ಯಂತ ಪ್ರಭಾವವುಳ್ಳ (ದೇವರ) ಸ್ವರವನ್ನು ಕೇಳಿದನು. ಆಗಲೇ ಆತನು ತಂದೆಯಾದ ದೇವರಿಂದ ಮಾನವನ್ನೂ ಪ್ರಭಾವವನ್ನೂ ಹೊಂದಿಕೊಂಡನು. ಆ ಸ್ವರವು, “ಈತನು ನನ್ನ ಪ್ರಿಯ ಮಗ. ಈತನನ್ನು ಬಹಳವಾಗಿ ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು. 18 ನಾವು ಪವಿತ್ರ ಪರ್ವತದ ಮೇಲೆ ಯೇಸುವಿನ ಜೊತೆಯಲ್ಲಿದ್ದಾಗ ಪರಲೋಕದಿಂದ ಬಂದ ಆ ಧ್ವನಿಯನ್ನು ನಾವೂ ಕೇಳಿದೆವು.[a]
19 ಪ್ರವಾದಿಗಳು ಹೇಳಿದ ಸಂಗತಿಗಳನ್ನು ಇದು ನಮಗೆ ಮತ್ತಷ್ಟು ಖಚಿತಪಡಿಸಿತು. ಅವರು ಹೇಳಿದ್ದನ್ನು ನೀವು ಚಾಚು ತಪ್ಪದೆ ಅನುಸರಿಸುವುದು ಒಳ್ಳೆಯದೇ ಸರಿ. ಅವರು ಹೇಳಿದ ಸಂಗತಿಗಳು ಅಂಧಕಾರದಲ್ಲಿ ಪ್ರಕಾಶಿಸುವ ಬೆಳಕಿನಂತಿವೆ. ನಿಮ್ಮ ಹೃದಯಗಳಲ್ಲಿ ಹಗಲು ಆರಂಭವಾಗಿ, ಮುಂಜಾನೆಯ ನಕ್ಷತ್ರವು ಮೂಡುವವರೆಗೂ ಆ ಬೆಳಕು ಪ್ರಕಾಶಿಸುತ್ತದೆ. 20 ನೀವು ಅರ್ಥಮಾಡಿಕೊಳ್ಳಬೇಕಾದ ಮುಖ್ಯವಾದ ಸಂಗತಿಯೇನೆಂದರೆ, ಪವಿತ್ರ ಗ್ರಂಥದಲ್ಲಿರುವ ಯಾವ ಪ್ರವಾದನವಾಕ್ಯವೂ ಒಬ್ಬ ವ್ಯಕ್ತಿಯ ವೈಯಕ್ತಿಕ ವಿವರಣೆಯಿಂದ ಬಂದಿಲ್ಲ. 21 ಯಾವ ಪ್ರವಾದನೆಯೇ ಆಗಲಿ ಮನುಷ್ಯನ ಚಿತ್ತದಿಂದ ಬಂದಿಲ್ಲ. ಆದರೆ ಜನರು ಪವಿತ್ರಾತ್ಮನಿಂದ ನಡೆಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತನಾಡಿದರು.
Kannada Holy Bible: Easy-to-Read Version. All rights reserved. © 1997 Bible League International