M’Cheyne Bible Reading Plan
ಜನರು ಲೆಕ್ಕಿಸಲ್ಪಟ್ಟದ್ದು
26 ಆ ಘೋರ ವ್ಯಾಧಿ ನಿಂತಮೇಲೆ ಯೆಹೋವನು ಮೋಶೆಗೂ ಯಾಜಕ ಆರೋನನ ಮಗನಾದ ಎಲ್ಲಾಜಾರನಿಗೂ, 2 “ನೀವು ಇಸ್ರೇಲರ ಸರ್ವಸಮೂಹದವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸುಳ್ಳವರನ್ನು ಮತ್ತು ಇಸ್ರೇಲ್ ಸೈನ್ಯದಲ್ಲಿ ಸೇವೆಮಾಡಲು ಶಕ್ತರಾಗಿರುವ ಗಂಡಸರನ್ನು ಕುಟುಂಬ ಕುಟುಂಬಗಳ ಪ್ರಕಾರ ಲೆಕ್ಕಿಸಬೇಕು” ಎಂದು ಆಜ್ಞಾಪಿಸಿದನು.
3 ಈ ಸಮಯದಲ್ಲಿ ಜನರು ಮೋವಾಬಿನ ಬಯಲುಗಳಲ್ಲಿ ತಂಗಿದ್ದರು. ಇದು ಜೆರಿಕೊ ಪಟ್ಟಣದ ಆಚೆಕಡೆಯಲ್ಲಿರುವ ಜೋರ್ಡನ್ ನದಿಯ ಸಮೀಪದಲ್ಲಿತ್ತು. ಮೋಶೆ ಮತ್ತು ಯಾಜಕನಾದ ಎಲ್ಲಾಜಾರನು ಜನರೊಡನೆ ಮಾತಾಡಿ ಹೇಳಿದ್ದೇನೆಂದರೆ: 4 “ಮೋಶೆ ಮತ್ತು ಇಸ್ರೇಲರು ಈಜಿಪ್ಟಿನಿಂದ ಹೊರಬಂದಾಗ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದಂತೆಯೇ ನೀವು ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚು ವಯಸ್ಸಾದ ಗಂಡಸರನ್ನು ಲೆಕ್ಕಿಸಬೇಕು.”
5 ರೂಬೇನ್ ಕುಲದ ಜನರು: (ರೂಬೇನನು ಇಸ್ರೇಲನ ಚೊಚ್ಚಲ ಮಗನು.)
ಹನೋಕನ ಕುಟುಂಬದವರಾದ ಹನೋಕ್ಯರು;
ಪಲ್ಲೂವಿನ ಕುಟುಂಬದವರಾದ ಪಲ್ಲೂವಿನವರು;
6 ಹೆಚ್ರೋನನ ಕುಟುಂಬದವರಾದ ಹೆಚ್ರೋನ್ಯರು;
ಕರ್ಮೀಯ ಕುಟುಂಬದವರಾದ ಕರ್ಮೀಯರು.
7 ರೂಬೇನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 43,730.
8 ಪಲ್ಲೂವಿನ ಮಗನು ಎಲೀಯಾಬ್. 9 ಎಲೀಯಾಬನ ಗಂಡುಮಕ್ಕಳು: ನೆಮೂವೇಲ್, ದಾತಾನ್, ಅಬೀರಾಮ್ ಎಂಬವರೆ. ಕೋರಹನ ಗುಂಪಿನವರು ಯೆಹೋವನಿಗೆ ವಿರೋಧವಾಗಿ ದಂಗೆಯೆದ್ದ ಕಾಲದಲ್ಲಿ ಅವರೊಳಗೆ ಸೇರಿಕೊಂಡು ಮೋಶೆ ಆರೋನರಿಗೆ ವಿರೋಧವಾಗಿ ದಂಗೆ ಎದ್ದವರೇ ದಾತಾನ್ ಮತ್ತು ಅಬೀರಾಮ್. 10 ಭೂಮಿಯು ಬಾಯ್ದೆರೆದು ಅವರನ್ನೂ ಕೋರಹನನ್ನೂ ನುಂಗಿಬಿಟ್ಟಿತು ಮತ್ತು ಬೆಂಕಿಯು ಆ ಗುಂಪಿನವರಲ್ಲಿ ಇತರ ಇನ್ನೂರೈವತ್ತು ಮಂದಿಯನ್ನು ದಹಿಸಿ ಇಸ್ರೇಲರಿಗೆ ಎಚ್ಚರಿಕೆಯುಂಟಾಗುವ ಹಾಗೆ ಮಾಡಿತು. 11 ಆ ಗುಂಪಿನವರೆಲ್ಲರು ಸತ್ತರೂ ಕೋರಹನ ಮಕ್ಕಳು ಆ ಕಾಲದಲ್ಲಿ ಸಾಯಲಿಲ್ಲ.
12 ಸಿಮೆಯೋನ್ ಕುಲದ ಕುಟುಂಬಗಳು:
ನೆಮೂವೇಲನ ಕುಟುಂಬದವರಾದ ನೆಮೂವೇಲ್ಯರು;
ಯಾಮೀನನ ಕುಟುಂಬದವರಾದ ಯಾಮೀನ್ಯರು;
ಯಾಕೀನನ ಕುಟುಂಬದವರಾದ ಯಾಕೀನ್ಯರು;
13 ಜೆರಹನ ಕುಟುಂಬದವರಾದ ಜೆರಹಿಯರು;
ಸೌಲನ ಕುಟುಂಬದವರಾದ ಸೌಲ್ಯರು.
14 ಸಿಮೆಯೋನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 22,200.
15 ಗಾದ್ ಕುಲದ ಕುಟುಂಬಗಳು:
ಚೆಫೋನನ ಕುಟುಂಬದವರಾದ ಚೆಫೋನ್ಯರು;
ಹಗ್ಗೀಯನ ಕುಟುಂಬದವರಾದ ಹಗ್ಗೀಯರು;
ಶೂನೀಯ ಕುಟುಂಬದವರಾದ ಶೂನೀಯರು;
16 ಒಜ್ನೀಯ ಕುಟುಂಬದವರಾದ ಒಜ್ನೀಯರು;
ಏರೀಯ ಕುಟುಂಬದವರಾದ ಏರೀಯರು;
17 ಅರೋದನ ಕುಟುಂಬದವರಾದ ಆರೋದ್ಯರು;
ಅರೇಲೀಯ ಕುಟುಂಬದವರಾದ ಅರೇಲೀಯರು.
18 ಗಾದ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 40,500.
19-20 ಯೆಹೂದ ಕುಲದ ಕುಟುಂಬಗಳು:
ಶೇಲಹನ ಕುಟುಂಬದವರಾದ ಶೇಲಾನ್ಯರು;
ಪೆರೆಚನ ಕುಟುಂಬದವರಾದ ಪೆರೆಚ್ಯರು;
ಜೆರಹನ ಕುಟುಂಬದವರಾದ ಜೆರಹಿಯರು.
(ಯೆಹೂದನ ಇಬ್ಬರು ಗಂಡುಮಕ್ಕಳಾದ ಏರ್ ಮತ್ತು ಓನಾನನು ಕಾನಾನ್‌ನಲ್ಲಿ ಸತ್ತರು.)
21 ಪೆರೆಚನ ಕುಟುಂಬಗಳು:
ಹೆಚ್ರೋನನ ಕುಟುಂಬದವರಾದ ಹೆಚ್ರೋನ್ಯರು,
ಹಾಮೂಲನ ಕುಟುಂಬದವರಾದ ಹಾಮೂಲ್ಯರು;
22 ಯೆಹೂದ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 76,500.
23 ಇಸ್ಸಾಕಾರನ ಕುಟುಂಬಗಳು:
ತೋಲನ ಕುಟುಂಬದವರಾದ ತೋಲಾಯರು;
ಪುವ್ವನ ಕುಟುಂಬದವರಾದ ಪೂನ್ಯರು;
24 ಯಾಶೂಬನ ಕುಟುಂಬದವರಾದ ಯಾಶೂಬ್ಯರು;
ಶಿಮ್ರೋನನ ಕುಟುಂಬದವರಾದ ಶಿಮ್ರೋನ್ಯರು.
25 ಇಸ್ಸಾಕಾರ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 64,300 ಮಂದಿ.
26 ಜೆಬುಲೂನ್ ಕುಲದ ಕುಟುಂಬಗಳು:
ಸೆರೆದನ ಕುಟುಂಬದವರಾದ ಸೆರೆದ್ಯರು;
ಏಲೋನನ ಕುಟುಂಬದವರಾದ ಏಲೋನ್ಯರು;
ಯಹಲೇಲನ ಕುಟುಂಬದವರಾದ ಯಹಲೇಲ್ಯರು.
27 ಜೆಬುಲೂನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 60,500.
28 ಯೋಸೇಫನ ಇಬ್ಬರು ಗಂಡುಮಕ್ಕಳು: ಮನಸ್ಸೆ ಮತ್ತು ಎಫ್ರಾಯೀಮ್. 29 ಮನಸ್ಸೆ ಕುಲದ ಕುಟುಂಬಗಳು:
ಮಾಕೀರನ ಕುಟುಂಬದವರಾದ ಮಾಕೀರ್ಯರು;
ಮಾಕೀರನ ಮಗನಾದ ಗಿಲ್ಯಾದನ ಕುಟುಂಬದವರಾದ ಗಿಲ್ಯಾದ್ಯರು.
30 ಗಿಲ್ಯಾದನ ಕುಟುಂಬದವರು:
ಈಯೆಜೆರನ ಕುಟುಂಬದವರಾದ ಈಯೆಜೆರ್ಯರು;
ಹೇಲೆಕನ ಕುಟುಂಬದವರಾದ ಹೇಲೆಕ್ಯರು;
31 ಅಸ್ರೀಯೇಲನ ಕುಟುಂಬದವರಾದ ಅಸ್ರೀಯೇಲ್ಯರು;
ಶೆಕೆಮನ ಕುಟುಂಬದವರಾದ ಶೆಕೆಮ್ಯರು;
32 ಶೆಮೀದಾಯನ ಕುಟುಂಬದವರಾದ ಶೆಮೀದಾಯರು;
ಹೇಫೆರನ ಕುಟುಂಬದವರಾದ ಹೇಫೆರ್ಯರು.
33 ಹೇಫೆರನ ಮಗನಾದ ಚಲ್ಫಹಾದನಿಗೆ ಹೆಣ್ಣುಮಕ್ಕಳು ಮಾತ್ರ ಹುಟ್ಟಿದರು. ಗಂಡುಮಕ್ಕಳು ಹುಟ್ಟಲಿಲ್ಲ. ಅವನ ಹೆಣ್ಣುಮಕ್ಕಳ ಹೆಸರು: ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ.
34 ಮನಸ್ಸೆ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 52,700.
35 ಎಫ್ರಾಯೀಮ್ ಕುಲದ ಕುಟುಂಬಗಳು:
ಶೂತೆಲಹನ ಕುಟುಂಬದವರಾದ ಶೂತೆಲಹ್ಯರು;
ಬೆಕೆರನ ಕುಟುಂಬದವರಾದ ಬೆಕೆರ್ಯರು;
ತಹನನ ಕುಟುಂಬದವರಾದ ತಹನಿಯರು.
36 ಏರಾನನು ಶೂತೆಲಹನ ಕುಟುಂಬದವನು;
ಏರಾನನ ಕುಟುಂಬದವರಾದ ಏರಾನ್ಯರು.
37 ಎಫ್ರಾಯೀಮ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 32,500.
ಇದೇ ಯೋಸೇಫನ ಕುಲದ ಕುಟುಂಬಗಳ ವಿವರ.
38 ಬೆನ್ಯಾಮೀನ್ ಕುಲದ ಕುಟುಂಬಗಳು:
ಬೆಲಗನ ಕುಟುಂಬದವರಾದ ಬೆಲಗ್ಯರು;
ಅಷ್ಬೇಲನ ಕುಟುಂಬದವರಾದ ಅಷ್ಬೇಲ್ಯರು;
ಅಹೀರಾಮನ ಕುಟುಂಬದವರಾದ ಅಹೀರಾಮ್ಯರು;
39 ಶೂಫಾಮನ ಕುಟುಂಬದವರಾದ ಶೂಫಾಮ್ಯರು;
ಹೂಫಾಮನ ಕುಟುಂಬದವರಾದ ಹೂಫಾಮ್ಯರು.
40 ಬೆಲಗನಿಗೆ ಅರ್ದ್ ಮತ್ತು ನಾಮಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಬೆಲಗನ ಕುಟುಂಬಗಳು:
ಅರ್ದನ ಕುಟುಂಬದವರಾದ ಅರ್ದ್ಯರು;
ನಾಮಾನನ ಕುಟುಂಬದವರಾದ ನಾಮಾನ್ಯರು.
41 ಬೆನ್ಯಾಮೀನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 45,600.
42 ದಾನ್ ಕುಲದ ಕುಟುಂಬಗಳು:
ಶೂಹಾಮನ ಕುಟುಂಬದವರಾದ ಶೂಹಾಮ್ಯರು.
43 ದಾನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 64,400.
44 ಆಶೇರ್ ಕುಲದ ಕುಟುಂಬಗಳು:
ಇಮ್ನಾಹನ ಕುಟುಂಬದವರಾದ ಇಮ್ನಾಹ್ಯರು;
ಇಷ್ವೀಯ ಕುಟುಂಬದವರಾದ ಇಷ್ವೀಯರು;
ಬೆರೀಯನ ಕುಟುಂಬದವರಾದ ಬೆರೀಯರು;
45 ಬೆರೀಯನ ಮಕ್ಕಳ ಕುಟುಂಬಗಳು:
ಹೇಬೆರನ ಕುಟುಂಬದವರಾದ ಹೇಬೆರ್ಯರು;
ಮಲ್ಕೀಯೇಲನ ಕುಟುಂಬದವರಾದ ಮಲ್ಕೀಯೇಲ್ಯರು.
46 (ಆಶೇರನಿಗೆ ಸೆರಹ ಎಂಬ ಮಗಳೂ ಇದ್ದಳು.) 47 ಆಶೇರನ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 53,400.
48 ನಫ್ತಾಲಿಯ ಕುಲದ ಕುಟುಂಬಗಳು:
ಯಹಚೇಲನ ಕುಟುಂಬದವರಾದ ಯಹಚೇಲ್ಯರು;
ಗೂನೀಯ ಕುಟುಂಬದವರಾದ ಗೂನೀಯರು;
49 ಯೇಚೆರನ ಕುಟುಂಬದವರಾದ ಯೇಚೆರ್ಯರು;
ಶಿಲ್ಲೇಮನ ಕುಟುಂಬದವರಾದ ಶಿಲ್ಲೇಮ್ಯರು.
50 ನಫ್ತಾಲಿಯ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 45,400.
51 ಹೀಗೆ ಇಸ್ರೇಲರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 6,01,730.
52 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 53 “ನೀವು ಈ ಕುಲಗಳಿಗೆ ಅವರವರ ಸಂಖ್ಯೆಯ ಪ್ರಕಾರ ಆ ದೇಶವನ್ನು ಹಂಚಿಕೊಡಬೇಕು. 54 ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಲಕ್ಕೆ ಕಡಿಮೆಯಾಗಿಯೂ ಕೊಡಬೇಕು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿಯೊಂದು ಕುಲಕ್ಕೆ ಭೂಮಿಯನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು. 55 ಪ್ರತಿಯೊಂದು ಕುಲದ ಪಿತೃವಿನ ಹೆಸರನ್ನು ಬರೆದು ಚೀಟುಹಾಕಿ ಆಯಾ ಕುಲಕ್ಕೆ ಸ್ವಾಸ್ತ್ಯವನ್ನು ಗೊತ್ತುಮಾಡಬೇಕು. 56 ಕುಲವು ದೊಡ್ಡದಾಗಿರಲಿ ಚಿಕ್ಕದಾಗಿರಲಿ ಚೀಟುಬಂದ ಪ್ರಕಾರವೇ ಸ್ವಾಸ್ತ್ಯವನ್ನು ಗೊತ್ತುಪಡಿಸಬೇಕು.”
57 ಲೇವಿಯರೊಳಗಿನ ಕುಲಗಳನ್ನು ಲೆಕ್ಕಿಸಲಾಗಿ, ಅವರಲ್ಲಿನ ಕುಟುಂಬಗಳು:
ಗೇರ್ಷೋನನ ಕುಟುಂಬದವರಾದ ಗೇರ್ಷೋನ್ಯರು;
ಕೆಹಾತನ ಕುಟುಂಬದವರಾದ ಕೆಹಾತ್ಯರು;
ಮೆರಾರೀಯ ಕುಟುಂಬದವರಾದ ಮೆರಾರೀಯರು.
58 ಲೇವಿ ಕುಲದವರ ಕುಟುಂಬಗಳು:
ಲಿಬ್ನೀಯರ ಕುಟುಂಬ,
ಹೆಬ್ರೋನ್ಯರ ಕುಟುಂಬ,
ಮಹ್ಲೀಯರ ಕುಟುಂಬ,
ಮೂಷೀಯರ ಕುಟುಂಬ,
ಕೋರಹಿಯರ ಕುಟುಂಬ.
59 ಅಮ್ರಾಮನು ಕೆಹಾತನ ಕುಲಕ್ಕೆ ಸೇರಿದವನು. ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಅವಳು ಲೇವಿ ಕುಟುಂಬದವಳು. ಅವಳು ಈಜಿಪ್ಟಿನಲ್ಲಿ ಹುಟ್ಟಿದಳು. ಅಮ್ರಾಮ್ ಮತ್ತು ಯೋಕೆಬೆದಳಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು. ಅವರು ಯಾರೆಂದರೆ ಆರೋನ ಮತ್ತು ಮೋಶೆ. ಅವರಿಗೆ ಒಬ್ಬ ಮಗಳೂ ಇದ್ದಳು. ಅವಳ ಹೆಸರು ಮಿರ್ಯಾಮಳು.
60 ಆರೋನನು ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಇವರ ತಂದೆ. 61 ಆದರೆ ನಾದಾಬ್ ಮತ್ತು ಅಬೀಹೂ ಸತ್ತರು. ಯೆಹೋವನು ತಿಳಿಸದ ಹೊಸ ಬೆಂಕಿಯಿಂದ ಧೂಪವನ್ನು ಯೆಹೋವನ ಮುಂದೆ ಅರ್ಪಿಸಿದ್ದರಿಂದ ಅವರು ಸತ್ತರು.
62 ಲೇವಿ ಕುಟುಂಬಗಳಲ್ಲಿ ಒಂದು ತಿಂಗಳು ಮೊದಲುಗೊಂಡು ಹೆಚ್ಚು ವಯಸ್ಸಾದ ಪುರುಷರ ಒಟ್ಟು ಸಂಖ್ಯೆ 23,000. ಆದರೆ ಈ ಜನರು ಇತರ ಇಸ್ರೇಲರೊಡನೆ ಲೆಕ್ಕಿಸಲ್ಪಡಲಿಲ್ಲ. ಯೆಹೋವನು ಬೇರೆ ಇಸ್ರೇಲರಿಗೆ ಕೊಟ್ಟ ಸ್ವಾಸ್ತ್ಯದಲ್ಲಿ ಅವರಿಗೆ ಪಾಲು ಸಿಕ್ಕಲಿಲ್ಲ.
63 ಮೋಶೆ ಮತ್ತು ಯಾಜಕನಾದ ಎಲ್ಲಾಜಾರನು ಈ ಜನರನ್ನೆಲ್ಲಾ ಲೆಕ್ಕಿಸಿದರು. ಇಸ್ರೇಲರು ಜೋರ್ಡನ್ ಹೊಳೆಯ ತೀರದಲ್ಲಿ ಜೆರಿಕೊ ಪಟ್ಟಣದ ಆಚೆಯಲ್ಲಿ ಮೋವಾಬ್ಯರ ಬಯಲುಗಳಲ್ಲಿದ್ದಾಗ ಇವರನ್ನು ಲೆಕ್ಕಿಸಿದರು. 64 ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಮರುಭೂಮಿಯಲ್ಲಿ ಇಸ್ರೇಲರ ಸಂಖ್ಯೆಯನ್ನು ನೋಡಿದಾಗ ಲೆಕ್ಕಿಸಲ್ಪಟ್ಟವರೊಳಗೆ ಒಬ್ಬರಾದರೂ ಇವರಲ್ಲಿ ಇರಲಿಲ್ಲ. 65 ಯೆಹೋವನು ಅವರೆಲ್ಲರೂ ಮರುಭೂಮಿಯಲ್ಲಿಯೇ ಸಾಯುವರೆಂದು ಹೇಳಿದ್ದನು. ಆದ್ದರಿಂದ ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರ ಹೊರತಾಗಿ ಅವರಲ್ಲಿ ಯಾರೂ ಉಳಿಯಲಿಲ್ಲ.
ರಚನೆಗಾರ: ದಾವೀದ.
69 ದೇವರೇ, ನನ್ನನ್ನು ರಕ್ಷಿಸು!
ನನ್ನ ಕತ್ತಿನವರೆಗೂ ನೀರು ಏರಿಬಂದಿದೆ.
2 ನಿಂತುಕೊಳ್ಳಲು ನೆಲೆ ಸಿಕ್ಕುತ್ತಿಲ್ಲ;
ಆಳವಾದ ಮರಳಿನೊಳಕ್ಕೆ ಮುಳುಗಿಹೋಗುತ್ತಿದ್ದೇನೆ.
ನಾನು ಆಳವಾದ ನೀರಿನಲ್ಲಿದ್ದೇನೆ.
ಅಲೆಗಳು ನನ್ನನ್ನು ಆವರಿಸಿಕೊಳ್ಳುತ್ತಿವೆ.
3 ಸಹಾಯಕ್ಕಾಗಿ ಕೂಗಿಕೂಗಿ ಬಲಹೀನನಾಗಿರುವೆ.
ನನ್ನ ಗಂಟಲು ನೋಯುತ್ತಿದೆ.
ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಾ
ನನ್ನ ಕಣ್ಣುಗಳು ನೋಯುತ್ತಿವೆ.
4 ಶತ್ರುಗಳು ನನ್ನ ತಲೆಕೂದಲುಗಳಿಗಿಂತ ಹೆಚ್ಚಾಗಿದ್ದಾರೆ.
ಅವರು ನಿಷ್ಕಾರಣವಾಗಿ ನನ್ನನ್ನು ದ್ವೇಷಿಸುತ್ತಾರೆ;
ನನ್ನನ್ನು ನಾಶಮಾಡಲು ಬಹು ಪ್ರಯತ್ನ ಮಾಡುತ್ತಿದ್ದಾರೆ.
ನನ್ನ ಶತ್ರಗಳು ನನ್ನ ಬಗ್ಗೆ ಸುಳ್ಳು ಹೇಳುವರು.
ನಾನು ಕದ್ದಿಲ್ಲದಿದ್ದರೂ ಸುಳ್ಳು ಅಪವಾದ ಹೊರಿಸಿ
ನನ್ನಿಂದ ದಂಡ ವಸೂಲಿ ಮಾಡಿದರು.
5 ದೇವರೇ, ನಾನೇನೂ ತಪ್ಪುಮಾಡಿಲ್ಲವೆಂದು ನಿನಗೆ ಗೊತ್ತಿದೆ.
ನನ್ನ ಪಾಪಗಳನ್ನು ನಿನಗೆ ಮರೆಮಾಡಲು ನನ್ನಿಂದಾಗದು.
6 ಸೇನಾಧೀಶ್ವರನಾದ ನನ್ನ ಯೆಹೋವನೇ, ನಿನ್ನ ಹಿಂಬಾಲಕರಿಗೆ ನನ್ನಿಂದ ನಾಚಿಕೆಯಾಗದಿರಲಿ.
ಇಸ್ರೇಲರ ದೇವರೇ, ನಿನ್ನ ಆರಾಧಕರಿಗೆ ನನ್ನಿಂದ ಅವಮಾನವಾಗದಿರಲಿ.
7 ನಾಚಿಕೆಯು ನನ್ನ ಮುಖವನ್ನು ಕವಿದಿದೆ.
ನಿನಗೋಸ್ಕರವಾಗಿ ಈ ನಾಚಿಕೆಯನ್ನು ಹೊತ್ತುಕೊಂಡಿದ್ದೇನೆ.
8 ನನ್ನ ಸಹೋದರರು ನನ್ನನ್ನು ಅಪರಿಚಿತನಂತೆ ಕಾಣುತ್ತಾರೆ.
ನನ್ನ ತಾಯಿಯ ಪುತ್ರರು ನನ್ನನ್ನು ಪರಕೀಯನಂತೆ ಕಾಣುತ್ತಾರೆ.
9 ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತಿದೆ.
ನಿನ್ನನ್ನು ಗೇಲಿಮಾಡುವ ಜನರಿಂದ ನನಗೆ ಅಪಮಾನವಾಗುತ್ತಿದೆ.
10 ನಾನು ಅಳುತ್ತಾ ಉಪವಾಸಮಾಡುವೆನು.
ಅವರು ಅದಕ್ಕೂ ನನ್ನನ್ನು ಗೇಲಿಮಾಡುವರು.
11 ನಾನು ಶೋಕವಸ್ತ್ರವನ್ನು ಧರಿಸಿಕೊಂಡದ್ದು
ಗಾದೆಯ ಮಾತಾಯಿತು.
12 ಅವರು ನನ್ನ ಬಗ್ಗೆ ಬಹಿರಂಗ ಸ್ಥಳಗಳಲ್ಲಿ ಮಾತಾಡುವರು.
ಕುಡುಕರು ನನ್ನ ವಿಷಯದಲ್ಲಿ ಹಾಡನ್ನು ರಚಿಸುವರು.
13 ಯೆಹೋವನೇ, ನಾನಾದರೋ, ನಿನಗೆ ಮೊರೆಯಿಟ್ಟಿದ್ದೇನೆ;
ನಿನ್ನ ಕೃಪೆಗೆ ತಕ್ಕಕಾಲ ಇದೇ.
ದೇವರೇ, ನಿನ್ನ ಮಹಾಪ್ರೀತಿಯಿಂದಲೂ
ನಿಶ್ಚಿತವಾದ ರಕ್ಷಣೆಯಿಂದಲೂ ನನಗೆ ಉತ್ತರಿಸು.
14 ನನ್ನನ್ನು ಕಳ್ಳುಸುಬಿನಿಂದ ಮೇಲೆತ್ತು;
ಮುಳುಗಿಹೋಗಲು ಬಿಡಬೇಡ.
ನನ್ನನ್ನು ದ್ವೇಷಿಸುವ ಜನರಿಂದ ನನ್ನನ್ನು ರಕ್ಷಿಸು.
ಈ ಆಳವಾದ ನೀರಿನಿಂದ ನನ್ನನ್ನು ರಕ್ಷಿಸು.
15 ಅಲೆಗಳು ನನ್ನನ್ನು ಮುಳುಗಿಸಲು ಬಿಡಬೇಡ.
ಆಳವಾದ ಹಳ್ಳವು ನನ್ನನ್ನು ಎಳೆದುಕೊಳ್ಳಲು ಬಿಡಬೇಡ.
ಸಮಾಧಿಯು ನನ್ನನ್ನು ನುಂಗಲು ಬಿಡಬೇಡ.
16 ಯೆಹೋವನೇ, ನಿನ್ನ ಪ್ರೀತಿ ಎಷ್ಟೋ ಒಳ್ಳೆಯದು.
ನಿನ್ನ ಪೂರ್ಣಪ್ರೀತಿಯಿಂದ ನನಗೆ ಉತ್ತರಿಸು.
ನಿನ್ನ ಪೂರ್ಣ ಕರುಣೆಯಿಂದ ನನ್ನ ಕಡೆಗೆ ತಿರುಗಿ ಸಹಾಯಮಾಡು.
17 ನಿನ್ನ ಸೇವಕನಿಗೆ ವಿಮುಖನಾಗಬೇಡ.
ನಾನು ಆಪತ್ತಿನಲ್ಲಿದ್ದೇನೆ! ಬೇಗನೆ ನನಗೆ ಸಹಾಯಮಾಡು!
18 ಬಂದು ನನ್ನ ಪ್ರಾಣವನ್ನು ರಕ್ಷಿಸು.
ನನ್ನ ಶತ್ರುಗಳಿಂದ ನನ್ನನ್ನು ವಿಮೋಚಿಸು.
19 ನನ್ನ ನಾಚಿಕೆ ನಿನಗೆ ಗೊತ್ತಿದೆ.
ಶತ್ರುಗಳು ನನಗೆ ಮಾಡಿದ ಅವಮಾನ ನಿನಗೆ ಗೊತ್ತಿದೆ.
ಅವರು ಮಾಡಿದ್ದನ್ನೆಲ್ಲಾ ನೀನು ಕಣ್ಣಾರೆ ನೋಡಿರುವೆ.
20 ಅವಮಾನವು ನನ್ನನ್ನು ಜಜ್ಜಿಹಾಕಿದೆ!
ನಾನು ನಾಚಿಕೆಯಿಂದ ಸಾಯುವಂತಿದ್ದೇನೆ.
ಕರುಣಾಳುಗಳನ್ನು ನಿರೀಕ್ಷಿಸಿದೆ,
ಆದರೆ ಯಾರೂ ದೊರೆಯಲಿಲ್ಲ.
ಸಂತೈಸುವವರನ್ನು ಹಾರೈಸಿದೆ,
ಆದರೆ ಯಾರೂ ಸಿಗಲಿಲ್ಲ.
21 ಅವರು ನನಗೆ ಕೊಟ್ಟದ್ದು ವಿಷ, ಆಹಾರವಲ್ಲ.
ಅವರು ನನಗೆ ಕೊಟ್ಟದ್ದು ಹುಳಿರಸ, ದ್ರಾಕ್ಷಾರಸವಲ್ಲ.
22 ಅವರ ಮೇಜಿನ ಮೇಲಿರುವ ಆಹಾರ, ಪಾನೀಯಗಳು ಅವರಿಗೆ ವಿಷವಾಗಲಿ.
23 ಅವರು ಕುರುಡರಾಗಲಿ; ಅವರ ಬೆನ್ನುಗಳು ಗೂನಾಗಲಿ.
24 ನಿನ್ನ ಕೋಪವನ್ನೆಲ್ಲಾ ಅವರು ಅನುಭವಿಸಲಿ.
25 ಅವರ ಮನೆಗಳು ಬರಿದಾಗಲಿ;
ಅವುಗಳಲ್ಲಿ ಯಾರೂ ವಾಸಿಸದಂತಾಗಲಿ.
26 ಅವರನ್ನು ದಂಡಿಸು. ಆಗ ಅವರು ಓಡಿಹೋಗುವರು.
ಅಲ್ಲದೆ ಅವರಿಗಾದ ನೋವುಗಳು, ಗಾಯಗಳು ಅವರ ಆಡಿಕೆಗೆ ಕಾರಣವಾಗುವವು.
27 ಅವರ ದುಷ್ಕೃತ್ಯಗಳಿಗಾಗಿ ಅವರನ್ನು ದಂಡಿಸು.
ನಿನ್ನ ರಕ್ಷಣೆಯಲ್ಲಿ ಅವರಿಗೆ ಪಾಲುಕೊಡಬೇಡ.
28 ಜೀವಬಾಧ್ಯರ ಪುಸ್ತಕದಿಂದ ಅವರ ಹೆಸರುಗಳನ್ನು ಅಳಿಸಿಬಿಡು.
ನೀತಿವಂತರ ಹೆಸರುಗಳೊಂದಿಗೆ ಅವರು ಹೆಸರುಗಳನ್ನು ಜೀವಬಾಧ್ಯರ ಪುಸ್ತಕದಲ್ಲಿ ಬರೆಯಬೇಡ.
29 ನಾನು ನೋವಿನಿಂದ ದುಃಖಗೊಂಡಿರುವೆ.
ದೇವರೇ, ನನ್ನನ್ನು ಮೇಲೆತ್ತಿ ರಕ್ಷಿಸು!
30 ನಾನು ದೇವರ ಹೆಸರನ್ನು ಹಾಡಿಕೊಂಡಾಡುವೆನು;
ಕೃತಜ್ಞತಾಗೀತೆಯೊಂದಿಗೆ ಆತನನ್ನು ಸ್ತುತಿಸುವೆನು.
31 ಇದು ಯೆಹೋವನಿಗೆ ಹೋರಿಗಳ ಸರ್ವಾಂಗಹೋಮಕ್ಕಿಂತಲೂ
ಬಹು ಪ್ರಿಯವಾದದ್ದು.
32 ದೇವರನ್ನು ಆರಾಧಿಸಲು ಬಂದ ಬಡವರೇ,
ಇದನ್ನು ಕೇಳಿ ಹರ್ಷಿಸಿರಿ.
33 ಯೆಹೋವನು ಬಡವರಿಗೂ ನಿಸ್ಸಹಾಯಕರಿಗೂ ಕಿವಿಗೊಡುತ್ತಾನೆ.
ಸೆರೆಯಲ್ಲಿರುವ ತನ್ನ ಜನರನ್ನು ಸಹ ಕಡೆಗಣಿಸುವುದಿಲ್ಲ.
34 ಭೂಮ್ಯಾಕಾಶಗಳೇ, ಸಮುದ್ರವೇ,
ಸಮುದ್ರದಲ್ಲಿರುವ ಸಮಸ್ತವೇ, ಯೆಹೋವನನ್ನು ಸ್ತುತಿಸಿರಿ!
35 ಯೆಹೋವನು ಚೀಯೋನನ್ನು ರಕ್ಷಿಸುವನು!
ಆತನು ಯೆಹೂದದ ಪಟ್ಟಣಗಳನ್ನು ಮತ್ತೆ ಕಟ್ಟುವನು.
ಆತನ ಜನರು ಅಲ್ಲಿ ವಾಸವಾಗಿದ್ದು ಸ್ವದೇಶವಾಗಿ ಮಾಡಿಕೊಳ್ಳುವರು!
36 ಆತನ ಸೇವಕರ ಸಂತತಿಗಳವರು ಆ ದೇಶವನ್ನು ಪಡೆದುಕೊಳ್ಳುವರು.
ಆತನ ಹೆಸರನ್ನು ಪ್ರೀತಿಸುವ ಜನರು ಅಲ್ಲಿ ವಾಸಿಸುವರು.
16 ನೀವು ದೇಶದ ಅಧಿಪತಿಗೆ ಕಾಣಿಕೆಗಳನ್ನು ಕಳುಹಿಸಬೇಕು. ನೀವು ಸೇಲದ ಕುರಿಮರಿಯನ್ನು ಮರುಭೂಮಿಯ ಮೂಲಕ ಚೀಯೋನ್ ಕುಮಾರ್ತೆಯ ಪರ್ವತಕ್ಕೆ ಕಳುಹಿಸಿಕೊಡಬೇಕು.
2 ಮೋವಾಬಿನ ಸ್ತ್ರೀಯರು ಅರ್ನೋನ್ ಹೊಳೆಯನ್ನು ದಾಟಲು ಪ್ರಯತ್ನಿಸುವರು.
ಅವರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಹಾಯಕ್ಕಾಗಿ ಓಡುವರು.
ಗೂಡಿನಿಂದ ಕೆಳಗೆ ಬಿದ್ದ ಪಕ್ಷಿಮರಿಗಳಂತೆ ಅವರಿರುವರು.
3 ಅವರು, “ನಮಗೆ ಸಹಾಯ ಮಾಡಿರಿ!
ನಾವು ಮಾಡಬೇಕಾದದ್ದನ್ನು ತಿಳಿಸಿರಿ!
ವೈರಿಗಳಿಂದ ನಮ್ಮನ್ನು ರಕ್ಷಿಸಿರಿ.
ನಮ್ಮನ್ನು ನಡುಮಧ್ಯಾಹ್ನದ ಸೂರ್ಯನ ಶಾಖದಿಂದ ನೆರಳು ಕಾಪಾಡುವಂತೆ ನಮ್ಮನ್ನು ಕಾಪಾಡಿರಿ.
ನಾವು ನಮ್ಮ ಶತ್ರುಗಳಿಂದ ಓಡಿಹೋಗುತ್ತಿದ್ದೇವೆ.
ನಮ್ಮನ್ನು ಅಡಗಿಸಿಡಿರಿ,
ವೈರಿಗಳ ಕೈಗೆ ನಮ್ಮನ್ನು ಕೊಡಬೇಡಿರಿ.
4 ತಮ್ಮ ಮನೆಯನ್ನು ಬಿಟ್ಟುಹೋಗುವಂತೆ ಮೋವಾಬಿನ ಆ ಜನರನ್ನು ಬಲವಂತ ಮಾಡಲಾಯಿತು.
ಆದ್ದರಿಂದ ಅವರು ನಿಮ್ಮ ದೇಶದಲ್ಲಿ ವಾಸಿಸಲಿ.
ಶತ್ರುಗಳ ಕೈಗೆ ಸಿಗದಂತೆ ಅವರನ್ನು ಅಡಗಿಸಿಡಿರಿ” ಎಂದು ಹೇಳುವರು.
ದರೋಡೆಯು ನಿಂತುಹೋಗುವದು.
ಶತ್ರುಗಳು ಸೋಲಿಸಲ್ಪಡುವರು.
ಇತರರಿಗೆ ಕೇಡುಮಾಡುವವರು ದೇಶವನ್ನು ಬಿಟ್ಟುಹೋಗುವರು.
5 ಆಗ ಹೊಸ ಅರಸನು ಬರುವನು.
ಆತನು ನ್ಯಾಯವಾದವುಗಳನ್ನು ಮತ್ತು ಒಳ್ಳೆಯವುಗಳನ್ನು ಮಾಡುವನು.
ಆತನು ದಾವೀದನ ವಂಶದವನಾಗಿದ್ದಾನೆ.
ಆತನು ಪ್ರಾಮಾಣಿಕನೂ ಪ್ರೀತಿದಯೆಗಳಿಂದ ತುಂಬಿದವನೂ ಆಗಿರುವನು.
ಆತನ ನ್ಯಾಯತೀರ್ಪು ನ್ಯಾಯಕ್ಕನುಸಾರವಾಗಿರುವದು.
6 ಮೋವಾಬಿನ ಜನರು ತುಂಬ ಹೆಚ್ಚಳಪಡುವವರೂ
ಜಂಬದವರೂ ಎಂದು ನಾವು ಕೇಳಿದ್ದೇವೆ.
ಇವರು ಹಿಂಸಕರಾಗಿದ್ದಾರೆ; ಬಡಾಯಿ ಕೊಚ್ಚುವವರಾಗಿದ್ದಾರೆ,
ಅವರ ಬಡಾಯಿ ಕೇವಲ ಮಾತುಗಳಷ್ಟೇ.
7 ಆ ಜಂಬದ ಪರಿಣಾಮವಾಗಿ ಇಡೀ ಮೋವಾಬ್ ಪ್ರದೇಶ ಸಂಕಟಕ್ಕೊಳಗಾಗುವದು.
ಮೋವಾಬಿನ ಜನರೆಲ್ಲಾ ಅಳುವರು.
ಜನರು ತಮಗೆ ಹಿಂದೆ ಇದ್ದದ್ದೆಲ್ಲಾ ಬೇಕು ಎನ್ನುತ್ತಾ ದುಃಖಿಸುವರು.
ಕೀರ್ ಹರೆಷೆಥಿನಲ್ಲಿ ತಯಾರಿಸಿದ ಅಂಜೂರದ ತಿಂಡಿ ಪದಾರ್ಥಗಳು ತಮಗೆ ಬೇಕು ಅನ್ನುವರು.
8 ಹೆಷ್ಬೋನಿನ ತೋಟಗಳು ಮತ್ತು ಸಿಬ್ಮದ ದ್ರಾಕ್ಷಾಲತೆಗಳು
ದ್ರಾಕ್ಷಿಯನ್ನು ಫಲಿಸಲಾರದ ಕಾರಣ ಜನರು ವ್ಯಸನದಿಂದಿರುವರು.
ಶತ್ರುಸೈನ್ಯವು ಯೆಜ್ಜೇರಿನಿಂದ ಮರುಭೂಮಿಯವರೆಗೂ ಮತ್ತು ಸಮುದ್ರದವರೆಗೂ ಆವರಿಸಿಕೊಂಡಿರುವರು.
9 ದ್ರಾಕ್ಷಾಫಲವು ನಾಶವಾಗಿರುವದಕ್ಕಾಗಿ
ನಾನು ಯೆಜ್ಜೇರ್ ಮತ್ತು ಸಿಬ್ಮದವರೊಂದಿಗೆ ಅಳುವೆನು.
ಸುಗ್ಗಿ ಇಲ್ಲದಿರುವದಕ್ಕಾಗಿ
ನಾನು ಹೆಷ್ಬೋನ್ ಮತ್ತು ಎಲೆಯಾಲೆಯ ಜನರೊಂದಿಗೆ ಅಳುವೆನು.
ಬೇಸಿಗೆ ಕಾಲದ ಹಣ್ಣುಗಳಿರದು;
ಹರ್ಷಧ್ವನಿಯೂ ಇರದು.
10 ಕರ್ಮೆಲ್ ಬೆಟ್ಟದಲ್ಲಿ ಗಾಯನವಾಗಲಿ ಹರ್ಷಧ್ವನಿಯಾಗಲಿ ಇರದು.
ಸುಗ್ಗಿಕಾಲದ ಎಲ್ಲಾ ಸಂತಸಗಳನ್ನು ನಾನು ನಿಲ್ಲಿಸುವೆನು.
ದ್ರಾಕ್ಷಿಯ ಹಣ್ಣುಗಳು ರಸ ತೆಗೆಯಲು ಪಕ್ವವಾಗಿವೆ.
ಆದರೆ ಅವುಗಳೆಲ್ಲ ವ್ಯರ್ಥವಾಗುತ್ತವೆ.
11 ನಾನು ಮೋವಾಬಿಗಾಗಿ ತುಂಬಾ ದುಃಖದಲ್ಲಿದ್ದೇನೆ.
ನಾನು ಕೀರ್‌ಹೆರೆಸಿಗಾಗಿಯೂ ತುಂಬಾ ದುಃಖದಲ್ಲಿದ್ದೇನೆ.
ಈ ನಗರಗಳಿಗಾಗಿ ನಾನು ಬಹಳವಾಗಿ ದುಃಖದಲ್ಲಿದ್ದೇನೆ.
12 ಮೋವಾಬಿನ ಜನರು ತಮ್ಮ ಪೂಜಾಸ್ಥಳಗಳಿಗೆ ಹೋಗಿ ಆರಾಧನೆ ಮಾಡುವರು.
ಸಂಭವಿಸುವ ಸಂಗತಿಗಳನ್ನು ನೋಡಿದಾಗ
ಪ್ರಾರ್ಥಿಸಲೂ ಅವರಲ್ಲಿ ಉತ್ಸಾಹವಿರುವುದಿಲ್ಲ.
13 ಮೋವಾಬಿನ ವಿಷಯವಾಗಿ ಯೆಹೋವನು ಅನೇಕ ಸಾರಿ ಇವುಗಳನ್ನು ಮುಂತಿಳಿಸಿದ್ದಾನೆ. 14 ಈಗ ಯೆಹೋವನು ಹೇಳುವುದೇನೆಂದರೆ: “ಇನ್ನು ಮೂರು ವರ್ಷದೊಳಗೆ ಕೂಲಿಗಾರನು ತನ್ನ ಸಮಯವನ್ನು ಲೆಕ್ಕಿಸುವಂತೆ ಎಲ್ಲಾ ಜನರು ಮತ್ತು ಅವರು ಹೆಮ್ಮೆಪಡುವ ವಸ್ತುಗಳು ಹೋಗಿಬಿಡುತ್ತವೆ. ಕೇವಲ ಸ್ವಲ್ಪ ಮಂದಿ ಮಾತ್ರ ಉಳಿಯುವರು. ದೇಶದಲ್ಲಿ ಹೆಚ್ಚುಮಂದಿ ಉಳಿಯರು.”
ಮಾರ್ಪಾಟಾದ ಜೀವಿತ
4 ಕ್ರಿಸ್ತನು ದೇಹಾರೂಢನಾಗಿದ್ದಾಗ ಸಂಕಟಪಟ್ಟನು. ಆದ್ದರಿಂದ ಕ್ರಿಸ್ತನಲ್ಲಿದ್ದ ಮನೋಭಾವವನ್ನೇ ನೀವೂ ಹೊಂದಿದವರಾಗಿ ನಿಮ್ಮನ್ನು ಬಲಪಡಿಸಿಕೊಳ್ಳಿರಿ. ಶಾರೀರಿಕವಾಗಿ ಸಂಕಟವನ್ನು ಅನುಭವಿಸಿದ ವ್ಯಕ್ತಿಯು ಪಾಪದಿಂದ ಮುಕ್ತನಾಗಿದ್ದಾನೆ. 2 ಆದ್ದರಿಂದ ಈ ಲೋಕದಲ್ಲಿ ನೀವು ಜನರ ಅಪೇಕ್ಷೆಗೆ ತಕ್ಕಂತೆ ಕೆಟ್ಟಕಾರ್ಯಗಳನ್ನು ಮಾಡದೆ, ದೇವರು ಅಪೇಕ್ಷಿಸುವಂಥ ಕಾರ್ಯಗಳನ್ನೇ ಮಾಡುತ್ತಾ ಜೀವಿಸಲು ನಿಮ್ಮನ್ನು ಬಲಪಡಿಸಿಕೊಳ್ಳಿರಿ. 3 ಮೊದಲು, ನಂಬಿಕೆಯಿಲ್ಲದ ಜನರು ಮಾಡುವಂತಹ ಕಾರ್ಯಗಳನ್ನು ಮಾಡುತ್ತಾ ಬಹಳ ಕಾಲವನ್ನು ವ್ಯರ್ಥಗೊಳಿಸಿ ಬಿಟ್ಟಿರುವಿರಿ. ನೀವು ಲೈಂಗಿಕ ಪಾಪಗಳನ್ನು ಮಾಡುತ್ತಿದ್ದಿರಿ; ಇಷ್ಟವಾದ ಕೆಟ್ಟಕಾರ್ಯಗಳನ್ನು ಮಾಡುತ್ತಿದ್ದಿರಿ; ಕುಡುಕರಾಗಿದ್ದಿರಿ, ಕ್ರೂರಿಗಳಾಗಿದ್ದಿರಿ; ಅಸಹ್ಯಕರವಾದ ನಿರರ್ಥಕ ಗೋಷ್ಠಿಗಳನ್ನು ಮತ್ತು ಮದ್ಯಪಾನಗೋಷ್ಠಿಗಳನ್ನು ನಡೆಸುತ್ತಿದ್ದಿರಿ; ವಿಗ್ರಹಾರಾಧನೆ ಮಾಡುತ್ತಿದ್ದಿರಿ.
4 ನೀವು ಅಸಹ್ಯಕರವಾದ ನಿರರ್ಥಕಗೋಷ್ಠಿಗಳನ್ನು ಮಾಡದಿರುವುದನ್ನು ಕಂಡ ಅವಿಶ್ವಾಸಿಗಳು ನಿಮ್ಮ ವಿಷಯದಲ್ಲಿ ಆಶ್ಚರ್ಯಪಡುವರು. ಆದ್ದರಿಂದಲೇ ಅವರು ನಿಮ್ಮ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳುವರು. 5 ಆದರೆ ಅವಿಶ್ವಾಸಿಗಳು ತಾವು ಮಾಡುವ ಕಾರ್ಯಗಳ ಬಗ್ಗೆ ತಾವೇ ವಿವರಣೆಯನ್ನು ನೀಡಬೇಕಾಗುತ್ತದೆ. ಜೀವಂತವಾಗಿರುವ ಮತ್ತು ಸತ್ತಿರುವ ಜನರಿಗೆ ತೀರ್ಪು ನೀಡಲು ಸಿದ್ಧನಾಗಿರುವ ಕ್ರಿಸ್ತನಿಗೆ ಅವರು ವಿವರಣೆ ನೀಡಬೇಕಾಗುವುದು. 6 ಸತ್ತುಹೋಗಿರುವ ಜನರಿಗೂ ಸುವಾರ್ತೆಯನ್ನು ಉಪದೇಶಿಸಲಾಯಿತು. ಅವರು ಶರೀರಸಂಬಂಧವಾಗಿ ಮರಣದಂಡನೆಗೆ ಗುರಿಯಾಗಿದ್ದರೂ ಸಹ ಆತ್ಮ ಸಂಬಂಧವಾಗಿ ದೇವರಂತೆ ಸದಾಕಾಲ ಜೀವಿಸಲೆಂದೇ ಅವರಿಗೆ ಉಪದೇಶಿಸಲಾಯಿತು.
ದೇವರ ವರಗಳಿಗೆ ಉತ್ತಮ ಕಾರ್ಯ ನಿರ್ವಾಹಕರಾಗಿರಿ
7 ಎಲ್ಲಾ ಸಂಗತಿಗಳೂ ಅಂತ್ಯಗೊಳ್ಳುವ ಕಾಲ ಸಮೀಪಿಸಿದೆ. ನೀವು ವಿವೇಕಿಗಳಾಗಿದ್ದು ನಿಮ್ಮನ್ನು ಹತೋಟಿಯಲ್ಲಿಟ್ಟು ಕೊಳ್ಳಿರಿ. ನೀವು ಪ್ರಾರ್ಥಿಸಲು ಇದು ಸಹಾಯ ಮಾಡುತ್ತದೆ. 8 ನೀವು ಒಬ್ಬರನ್ನೊಬ್ಬರು ಎಡಬಿಡದೆ ಪ್ರೀತಿಸುವುದು ಬಹಳ ಮುಖ್ಯವಾದುದು. ಪ್ರೀತಿಯು ಅನೇಕ ಪಾಪಗಳನ್ನು ಅಡಗಿಸಿಬಿಡುತ್ತದೆ. 9 ಗುಣುಗುಟ್ಟದೆ ಅತಿಥಿಸತ್ಕಾರ ಮಾಡಿರಿ. 10 ನಿಮ್ಮಲ್ಲಿ ಪ್ರತಿಯೊಬ್ಬರೂ ದೇವರಿಂದ ಆತ್ಮಿಕ ವರವನ್ನು ಪಡೆದುಕೊಂಡಿರಿ. ದೇವರು ನಿಮಗೆ ಅನೇಕ ವಿಧಗಳಲ್ಲಿ ತನ್ನ ಕೃಪೆಯನ್ನು ದಯಪಾಲಿಸಿರುವನು. ನೀವು ದೇವರ ವರಗಳನ್ನು ಉಪಯೋಗಿಸುವ ಜವಾಬ್ದಾರಿಯುತರಾದ ಸೇವಕರಾಗಿದ್ದೀರಿ. ಆದ್ದರಿಂದ ಒಳ್ಳೆಯ ಸೇವಕರಾಗಿರಿ; ಪರಸ್ಪರ ಸೇವೆ ಮಾಡಲು ನಿಮ್ಮ ವರಗಳನ್ನು ಉಪಯೋಗಿಸಿರಿ. 11 ಬೋಧಿಸುವವನು ದೇವರ ನುಡಿಗಳನ್ನೇ ಬೋಧಿಸಲಿ. ಸೇವೆ ಮಾಡುವವನು ದೇವರೇ ದಯಪಾಲಿಸಿದ ಶಕ್ತಿಯಿಂದ ಸೇವೆ ಮಾಡಲಿ. ನೀವು ಹೀಗೆ ಮಾಡಿದರೆ, ನೀವು ಮಾಡುವ ಪ್ರತಿಯೊಂದರಲ್ಲೂ ಯೇಸು ಕ್ರಿಸ್ತನ ಮೂಲಕ ದೇವರು ಸ್ತುತಿಸಲ್ಪಡುವನು. ಅಧಿಕಾರವೂ ಮಹಿಮೆಯೂ ಯುಗಯುಗಾಂತರಗಳಲ್ಲಿ ಆತನಿಗೆ ಸೇರಿದವುಗಳಾಗಿವೆ. ಆಮೆನ್.
ಕ್ರೈಸ್ತನಾಗಿ ಸಂಕಟಪಡುವುದು
12 ನನ್ನ ಸ್ನೇಹಿತರೇ, ನೀವು ಈಗ ಅನುಭವಿಸುತ್ತಿರುವ ಸಂಕಟಗಳ ವಿಷಯದಲ್ಲಿ ಆಶ್ಚರ್ಯಪಡದಿರಿ. ಅವು ನಿಮ್ಮ ನಂಬಿಕೆಯನ್ನು ಪರೀಕ್ಷಿಸುತ್ತಿವೆ. ವಿಪರೀತವಾದದ್ದು ನಿಮಗೆ ಸಂಭವಿಸುತ್ತಿದೆಯೆಂದು ಯೋಚಿಸದಿರಿ. 13 ಆದರೆ ನೀವು ಕ್ರಿಸ್ತನ ಸಂಕಟಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಸಂತೋಷಿಸಿರಿ. ಕ್ರಿಸ್ತನು ತನ್ನ ಮಹಿಮೆಯನ್ನು ತೋರ್ಪಡಿಸುವಾಗ ನೀವು ಸಂತೋಷಪಡುವಿರಿ ಮತ್ತು ಆನಂದಿಸುವಿರಿ. 14 ನೀವು ಕ್ರಿಸ್ತನನ್ನು ಅನುಸರಿಸುತ್ತಿರುವುದರ ನಿಮಿತ್ತವಾಗಿ ನಿಮ್ಮ ಬಗ್ಗೆ ಜನರು ಕೆಟ್ಟದ್ದನ್ನು ನುಡಿದರೆ ನೀವು ಭಾಗ್ಯವಂತರಾಗಿದ್ದೀರಿ. ತೇಜೋಮಯವಾದ ಆತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನೆ. ಆತನು ದೇವರಾತ್ಮನಾಗಿದ್ದಾನೆ. 15 ನೀವು ಕೆಡುಕರಾಗಬಾರದು ಅಂದರೆ ಕೊಲೆಗಾರರಾಗಬಾರದು, ಕಳ್ಳರಾಗಬಾರದು ಮತ್ತು ಇತರರಿಗೆ ತೊಂದರೆ ಕೊಡಬಾರದು. ಇಂಥವುಗಳನ್ನು ಮಾಡುವವನು ಸಂಕಟಕ್ಕೆ ಒಳಗಾಗುವನು. ನಿಮ್ಮಲ್ಲಿ ಯಾರೂ ಆ ರೀತಿಯ ಸಂಕಟಕ್ಕೆ ಒಳಗಾಗಬಾರದು. 16 ನೀವು ಕ್ರೈಸ್ತರಾಗಿರುವುದರಿಂದ ಸಂಕಟಪಟ್ಟರೆ, ನಾಚಿಕೊಳ್ಳಬಾರದು. ಆ (ಕ್ರೈಸ್ತ) ಹೆಸರಿನ ನಿಮಿತ್ತ ನೀವು ದೇವರಿಗೆ ಸ್ತೋತ್ರ ಮಾಡಬೇಕು. 17 ನಿಮ್ಮ ನ್ಯಾಯನಿರ್ಣಯದ ಕಾಲ ಬಂದಿದೆ. ಅದು ದೇವರ ಕುಟುಂಬದಿಂದಲೇ ಆರಂಭವಾಗುವುದು. ನಮ್ಮಲ್ಲಿಯೇ ಅದು ಆರಂಭವಾದರೆ, ದೇವರ ಸುವಾರ್ತೆಗೆ ವಿಧೇಯರಾಗದ ಜನರಿಗೆ ಏನಾಗಬಹುದು?
18 “ನೀತಿವಂತನೇ ರಕ್ಷಣೆ ಹೊಂದಲು ಕಷ್ಟವಾದರೆ,
ಭಕ್ತಿಹೀನನ ಮತ್ತು ಪಾಪಿಷ್ಠನ ಗತಿಯೇನು?”(A)
19 ಆದ್ದರಿಂದ ದೇವರ ಅಪೇಕ್ಷೆಯಂತೆ ಸಂಕಟಪಡುವವರು ತಮ್ಮ ಜೀವಾತ್ಮಗಳನ್ನು ಆತನಿಗೆ ಒಪ್ಪಿಸಿಕೊಡಬೇಕು. ಅವರನ್ನು ಸೃಷ್ಟಿಸಿದಾತನು ದೇವರೇ. ಆದ್ದರಿಂದ ಅವರು ಆತನಲ್ಲಿ ಭರವಸವಿಡತಕ್ಕದ್ದು. ಹೀಗಿರಲಾಗಿ ಅವರು ಒಳ್ಳೆಯದನ್ನು ಮಾಡುತ್ತಲೇ ಇರಬೇಕು.
Kannada Holy Bible: Easy-to-Read Version. All rights reserved. © 1997 Bible League International