Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 25

ಪೆಯೋರಿನಲ್ಲಿ ಇಸ್ರೇಲರು

25 ಇಸ್ರೇಲರು ಅಖಾಸಿಯದ ಸಮೀಪದಲ್ಲಿ ಇಳಿದುಕೊಂಡಿದ್ದರು. ಅವರು ಅಲ್ಲಿದ್ದಾಗ ಮೋವಾಬ್ ಸ್ತ್ರೀಯರೊಡನೆ ಲೈಂಗಿಕ ಪಾಪಗಳನ್ನು ಮಾಡತೊಡಗಿದರು. 2-3 ಮೋವಾಬ್ ಸ್ತ್ರೀಯರು ತಮ್ಮ ಸುಳ್ಳುದೇವರಿಗೆ ಮಾಡಿದ ಔತಣಯಜ್ಞಗಳಿಗೆ ಅವರನ್ನು ಆಮಂತ್ರಿಸಿದರು. ಆದ್ದರಿಂದ ಇಸ್ರೇಲರು ಅವರ ಯಜ್ಞಗಳ ಆಹಾರವನ್ನು ತಿಂದರು ಮತ್ತು ಅವರ ದೇವರನ್ನು ಪೂಜಿಸಿದರು. ಈ ರೀತಿ ಇಸ್ರೇಲರು ಸುಳ್ಳುದೇವರಾದ ಪೆಗೋರ್ ಬಾಳನ ಭಕ್ತರಾದರು. ಹೀಗಾಗಿ ಯೆಹೋವನು ಅವರ ಮೇಲೆ ಬಹಳವಾಗಿ ಕೋಪಗೊಂಡನು.

ಯೆಹೋವನು ಮೋಶೆಗೆ, “ನೀನು ಜನರ ನಾಯಕರನ್ನೆಲ್ಲ ಬಂಧಿಸಿ ಯೆಹೋವನ ಮುಂದೆ ಬಹಿರಂಗವಾಗಿ ಅವರನ್ನು ನೇಣುಗಂಬಕ್ಕೆ ಏರಿಸು. ಹೀಗೆ ಯೆಹೋವನ ಕೋಪಾಗ್ನಿಯನ್ನು ಇಸ್ರೇಲರಿಂದ ತೊಲಗಿಸಬೇಕು” ಎಂದು ಹೇಳಿದನು.

ಆದಕಾರಣ ಮೋಶೆ ಇಸ್ರೇಲರ ನ್ಯಾಯಾಧಿಪತಿಗಳಿಗೆ, “ನಿಮ್ಮಲ್ಲಿ ಪ್ರತಿಯೊಬ್ಬನೂ ಸುಳ್ಳುದೇವರಾದ ಪೆಗೋರದ ಬಾಳನನ್ನು ಆರಾಧಿಸುವಂತೆ ಜನರನ್ನು ಪ್ರೋತ್ಸಾಹಿಸಿದವರನ್ನು ಕಂಡುಹಿಡಿದು ಅವರನ್ನು ಕೊಲ್ಲಬೇಕು” ಎಂದು ಆಜ್ಞಾಪಿಸಿದನು.

ಆಗ ಮೋಶೆ ಮತ್ತು ಇಡೀ ಇಸ್ರೇಲ್ ಸಮುದಾಯವು ಒಟ್ಟಾಗಿ ಸೇರಿಬಂದು ದೇವದರ್ಶನಗುಡಾರದ ಬಾಗಿಲಲ್ಲಿ ಅಳುತ್ತಿದ್ದರು. ಅಷ್ಟರಲ್ಲಿ ಇಸ್ರೇಲ್ ಮನುಷ್ಯನೊಬ್ಬನು ಮಿದ್ಯಾನ್ ಸ್ತ್ರೀಯೊಬ್ಬಳನ್ನು ತನ್ನ ಸಂಬಂಧಿಕರ ಬಳಿಗೆ ಕರೆದುಕೊಂಡು ಬಂದನು. ಮೋಶೆಯ ಮತ್ತು ಎಲ್ಲಾ ಜನರ ಕಣ್ಣೆದುರಿನಲ್ಲೇ ಅವನು ಹೀಗೆ ಮಾಡಿದನು. ಕೂಡಲೇ ಯಾಜಕನಾಗಿದ್ದ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಸಭೆಯ ನಡುವೆಯಿಂದೆದ್ದು ಈಟಿಯನ್ನು ತೆಗೆದುಕೊಂಡು ಆ ಇಸ್ರೇಲನನ್ನು ಹಿಂಬಾಲಿಸಿ ಮಲಗುವ ಕೋಣೆಯೊಳಗೆ ಹೋಗಿ ಅವನನ್ನೂ ಆ ಮಿದ್ಯಾನ್ ಸ್ತ್ರೀಯನ್ನೂ ಒಂದೇ ಏಟಿನಿಂದ ಹೊಟ್ಟೆಯಲ್ಲಿ ತಿವಿದು ಕೊಂದನು. ಆಗ ಇಸ್ರೇಲರಿಗುಂಟಾದ ವ್ಯಾಧಿ ನಿಂತುಹೋಯಿತು. ಆ ವ್ಯಾಧಿಯಿಂದ ಒಟ್ಟು 24,000 ಜನರು ಸತ್ತುಹೋದರು.

10-11 ಆಗ ಯೆಹೋವನು ಮೋಶೆಗೆ, “ನಾನೇ ನನ್ನ ಗೌರವವನ್ನು ಕಾಪಾಡಿಕೊಳ್ಳುವ ಮೇರೆಗೆ ಯಾಜಕನಾಗಿದ್ದ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆಗಿರುವ ಫೀನೆಹಾಸನು ನನ್ನ ಗೌರವವನ್ನು ಕಾಪಾಡಿ ಇಸ್ರೇಲರ ಮೇಲಿದ್ದ ನನ್ನ ಕೋಪವನ್ನು ತೊಲಗಿಸಿದ್ದಾನೆ. ಹೀಗಿರುವುದರಿಂದ ನಾನು ನನ್ನ ಗೌರವವನ್ನು ಕಾಪಾಡಿಕೊಳ್ಳುವುದಕ್ಕಾಗಿ ಇಸ್ರೇಲರನ್ನು ನಿರ್ಮೂಲ ಮಾಡುವ ಅಗತ್ಯವಿಲ್ಲ. 12 ಆದಕಾರಣ ನಾನು ಅವನ ಸಂಗಡ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆಂದು ಎಲ್ಲರಿಗೂ ತಿಳಿಸು; 13 ಆ ಒಡಂಬಡಿಕೆಯ ಪ್ರಕಾರವಾಗಿ ಅವನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಯಾಜಕತ್ವವು ಶಾಶ್ವತವಾಗಿಯೇ ಇರುವುದೆಂದು ಮಾತುಕೊಡುತ್ತೇನೆ. ಅವನು ತನ್ನ ದೇವರ ಗೌರವವನ್ನು ಕಾಪಾಡಿ ಇಸ್ರೇಲರಿಗೋಸ್ಕರ ದೋಷಪರಿಹಾರವನ್ನು ಮಾಡಿದ್ದರಿಂದ ನಾನು ಅವನಿಗೆ ಈ ಮಾತನ್ನು ಕೊಟ್ಟಿದ್ದೇನೆ” ಎಂದು ಹೇಳಿದನು.

14 ಆ ಮಿದ್ಯಾನ್ ಸ್ತ್ರೀಯೊಡನೆ ಕೊಲ್ಲಲ್ಪಟ್ಟವನು ಸಿಮೆಯೋನ್ ಕುಲದವರಲ್ಲಿ ಗೋತ್ರಪ್ರಧಾನನಾಗಿದ್ದ ಜಿಮ್ರೀ. ಇವನು ಸಾಲೂ ಎಂಬವನ ಮಗ. 15 ಹತಳಾದ ಮಿದ್ಯಾನ್ ಸ್ತ್ರೀಯ ಹೆಸರು ಕೊಜ್ಬೀ. ಅವಳು ಮಿದ್ಯಾನ್ಯರಲ್ಲಿ ಗೋತ್ರ ಪ್ರಧಾನನಾದ ಜೂರ್ ಎಂಬವನ ಮಗಳು.

16 ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 17 “ನೀನು ಮಿದ್ಯಾನ್ಯರನ್ನು ವೈರಿಗಳೆಂದು ಪರಿಗಣಿಸಿರುವುದರಿಂದ ಅವರನ್ನು ಸಂಹರಿಸಬೇಕು. 18 ಯಾಕೆಂದರೆ ಅವರು ನಿಮ್ಮನ್ನು ವೈರಿಗಳೆಂದು ಪರಿಗಣಿಸಿ ಪೆಗೋರನ ಘಟನೆಯಲ್ಲಿ ನಿಮ್ಮನ್ನು ಮೋಸಗೊಳಿಸಿದರು. ಮಿದ್ಯಾನಿನ ನಾಯಕನೊಬ್ಬನ ಮಗಳೂ ತಮ್ಮ ರಕ್ತಸಂಬಂಧಿಯೂ ಆಗಿದ್ದ ಕೊಜ್ಬೀಯ ವಿಷಯದಲ್ಲಿಯೂ ಅವರು ನಿಮ್ಮನ್ನು ಮೋಸಗೊಳಿಸಿದರು. ಪೆಗೋರಿನ ಘಟನೆಯಿಂದ ಇಸ್ರೇಲರಿಗೆ ಕಾಯಿಲೆ ಉಂಟಾದಾಗ ಆ ಸ್ತ್ರೀಯೂ ಸತ್ತಳು.”

ಕೀರ್ತನೆಗಳು 68

ರಚನೆಗಾರ: ದಾವೀದ.

68 ದೇವರೇ, ಎದ್ದೇಳು! ನಿನ್ನ ವೈರಿಗಳನ್ನು ಚದರಿಸಿಬಿಡು.
    ಆತನ ಶತ್ರುಗಳೆಲ್ಲಾ ಆತನ ಬಳಿಯಿಂದ ಓಡಿಹೋಗಲಿ.
ಗಾಳಿ ಬಡಿದುಕೊಂಡು ಹೋಗುವ ಹೊಗೆಯಂತೆ
    ನಿನ್ನ ಶತ್ರುಗಳು ಚದರಿಹೋಗಲಿ.
ಬೆಂಕಿಯಲ್ಲಿ ಕರಗಿಹೋಗುವ ಮೇಣದಂತೆ
    ನಿನ್ನ ಶತ್ರುಗಳು ನಾಶವಾಗಲಿ.
ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ;
    ಅವರು ಉಲ್ಲಾಸಿಸುತ್ತಾ ಸಂತೋಷವಾಗಿರಲಿ!
ದೇವರಿಗೆ ಗಾಯನ ಮಾಡಿರಿ; ಆತನ ಹೆಸರನ್ನು ಕೊಂಡಾಡಿರಿ.
    ಅರಣ್ಯದಲ್ಲಿ ರಥದ ಮೇಲೆ ಸವಾರಿ ಮಾಡುತ್ತಾ ಬರುವಾತನಿಗೆ ಹಾದಿಯನ್ನು ಸಿದ್ಧಗೊಳಿಸಿರಿ.
ಆತನ ಹೆಸರು ಯಾಹು.
    ಆತನ ಹೆಸರನ್ನು ಕೊಂಡಾಡಿರಿ!
ದೇವರು ತನ್ನ ಪವಿತ್ರ ಆಲಯದಲ್ಲಿ,
    ಅನಾಥರಿಗೆ ತಂದೆಯೂ ವಿಧವೆಯರಿಗೆ ಪಾಲಕನೂ ಆಗಿದ್ದಾನೆ.
ದೇವರು ಒಬ್ಬಂಟಿಗರಿಗೆ ಸಂಸಾರವನ್ನು ದಯಪಾಲಿಸುವನು.
    ಆತನು ತನ್ನ ಜನರನ್ನು ಸೆರೆಯಿಂದ ಬಿಡಿಸಿ ಸಂತೋಷಗೊಳಿಸುವನು.
    ದೇವದ್ರೋಹಿಗಳಾದರೋ ಉರಿಬಿಸಿಲಿನ ಸೆರೆಯಲ್ಲಿ ಉಳಿಯುವರು.

ದೇವರೇ, ನಿನ್ನ ಜನರನ್ನು ಈಜಿಪ್ಟಿನಿಂದ ನಡೆಸಿದೆ.
    ನೀನು ಅರಣ್ಯದಲ್ಲಿ ಅವರ ಮುಂದೆ ಪ್ರಯಾಣ ಮಾಡುತ್ತಿರಲು,
ಭೂಮಿಯೇ ಕಂಪಿಸಿತು.
    ಇಸ್ರೇಲರ ದೇವಾಧಿದೇವನು ಸೀನಾಯಿ ಬೆಟ್ಟಕ್ಕೆ ಬಂದಾಗ ಆಕಾಶವೇ ಕರಗಿಹೋಯಿತು.
ದೇವರೇ, ನೀನು ಮಳೆ ಸುರಿಸಿ,
    ಒಣಗಿ ಕೃಶವಾಗಿದ್ದ ಭೂಮಿಯನ್ನು ಫಲವತ್ತು ಮಾಡಿದೆ.
10 ನಿನ್ನ ಜನರು ಆ ನಾಡಿನಲ್ಲಿ ನೆಲಸಿದರು.
    ದೇವರೇ, ಅಲ್ಲಿಯ ಬಡಜನರಿಗೆ ನೀನು ಶ್ರೇಷ್ಠವಾದವುಗಳನ್ನೇ ನೀಡಿದೆ.
11 ದೇವರು ಆಜ್ಞಾಪಿಸಲು ಅನೇಕರು
    ಈ ಸುವಾರ್ತೆಯನ್ನು ಸಾರಲು ಹೋದರು:
12 “ಬಲಿಷ್ಠ ರಾಜರುಗಳ ಸೈನ್ಯಗಳು ಓಡಿಹೋಗುತ್ತಿವೆ!
    ಸೈನಿಕರು ಯುದ್ಧದಿಂದ ತಂದ ಕೊಳ್ಳೆವಸ್ತುಗಳನ್ನು ಮನೆಯಲ್ಲಿದ್ದ ಸ್ತ್ರೀಯರು ಹಂಚಿಕೊಳ್ಳುವರು.
13 ಕುರಿಹಟ್ಟಿಯೊಳಗೆ ಇದ್ದವರೂ ಐಶ್ವರ್ಯವನ್ನು ಪಾಲುಮಾಡಿಕೊಳ್ಳುವರು.
    ಬಂಗಾರದ ಗರಿಗಳಿಂದ ಥಳಥಳಿಸುವ ಬೆಳ್ಳಿ ಹೊದಿಸಿರುವ ಪಾರಿವಾಳದ ರೆಕ್ಕೆಗಳನ್ನು ಅವರು ಪಡೆದುಕೊಳ್ಳುವರು.”

14 ಸಲ್ಮೋನ್ ಪರ್ವತದ ಮೇಲೆ ದೇವರು ಶತ್ರು ರಾಜರುಗಳನ್ನು ಚದರಿಸಿಬಿಟ್ಟನು.
    ಅವರು ಸುರಿಯುತ್ತಿರುವ ಹಿಮದಂತಿದ್ದರು.
15 ಬಾಷಾನ್ ಬೆಟ್ಟವು ಅನೇಕ ಶಿಖರಗಳುಳ್ಳ ಮಹಾಪರ್ವತ.
16 ಬಾಷಾನ್ ಪರ್ವತವೇ, ಚೀಯೋನ್ ಪರ್ವತವನ್ನು ನೀನು ಕೀಳಾಗಿ ಕಾಣುವುದೇಕೆ?
    ಯೆಹೋವನು ತನಗೆ ಪ್ರಿಯವಾದ ಚೀಯೋನ್ ಪರ್ವತವನ್ನೇ
    ತನ್ನ ಶಾಶ್ವತ ವಾಸಸ್ಥಾನವಾಗಿ ಆರಿಸಿಕೊಂಡಿದ್ದಾನೆ.
17 ಯೆಹೋವನು ಪವಿತ್ರವಾದ ಚೀಯೋನ್ ಪರ್ವತಕ್ಕೆ ಬರುತ್ತಾನೆ.
    ಆತನ ಹಿಂದೆ ಆತನ ಲಕ್ಷಾಂತರ ರಥಗಳಿವೆ.
18 ಆತನು ಸೆರೆಯಾಳುಗಳನ್ನು ನಡೆಸಿಕೊಂಡು
    ಬೆಟ್ಟದ ಮೇಲೇರಿ ಹೋದನು;
ತನಗೆ ದ್ರೋಹಮಾಡಿದ ಜನರಿಂದ
    ಆತನು ಕಷ್ಟಕಾಣಿಕೆಗಳನ್ನು ತೆಗೆದುಕೊಳ್ಳುವನು.
ದೇವರಾದ ಯೆಹೋವನು ಮೇಲೇರಿಹೋದದ್ದು ಅಲ್ಲಿ ವಾಸಿಸುವುದಕ್ಕಾಗಿಯೇ.
19 ನಮ್ಮ ಅನುದಿನದ ಭಾರವನ್ನು ಹೊರುವ ಯೆಹೋವನಿಗೆ ಸ್ತೋತ್ರವಾಗಲಿ!
    ನಮ್ಮನ್ನು ರಕ್ಷಿಸುವವನು ಆತನೇ.

20 ಆತನೇ ನಮ್ಮ ದೇವರು. ನಮ್ಮನ್ನು ರಕ್ಷಿಸುವ ದೇವರು ಆತನೇ.
    ನಮ್ಮ ದೇವರಾದ ಯೆಹೋವನು ನಮ್ಮನ್ನು ಮರಣದಿಂದ ರಕ್ಷಿಸುವನು.
21 ದೇವರು ತನ್ನ ವೈರಿಗಳ ಶಿರಸ್ಸುಗಳನ್ನೂ
    ಪಾಪದಲ್ಲಿ ಜೀವಿಸುವವರ ತಲೆಗಳನ್ನೂ ಜಜ್ಜಿಬಿಡುವನು.
22 ನನ್ನ ಯೆಹೋವನು ಹೀಗೆಂದನು: “ನಾನು ಪೂರ್ವ ದಿಕ್ಕಿನಲ್ಲಿರುವ ಬಾಷಾನಿನಿಂದಲೂ
    ಪಶ್ಚಿಮ[a] ದಿಕ್ಕಿನಿಂದಲೂ ಶತ್ರುಗಳನ್ನು ಹಿಡಿದು ತರುವೆನು.
23 ಆಗ ನೀನು ಅವರ ರಕ್ತದಲ್ಲಿ ಕಾಲಾಡಿಸುವೆ.
    ನಿನ್ನ ನಾಯಿಗಳು ಅವರ ರಕ್ತವನ್ನು ನೆಕ್ಕುತ್ತವೆ.”

24 ಇಗೋ, ದೇವರು ವಿಜಯದ ಮೆರವಣಿಗೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.
    ನನ್ನ ರಾಜನಾದ ಪರಿಶುದ್ಧ ದೇವರು ವಿಜಯದ ಮೆರವಣಿಗೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.
25 ಮುಂಭಾಗದಲ್ಲಿ ಗಾಯಕರೂ ಹಿಂಭಾಗದಲ್ಲಿ ವಾದ್ಯ ಬಾರಿಸುವವರೂ
    ಸುತ್ತಲು ದಮ್ಮಡಿ ಬಡಿಯುವ ಯುವತಿಯರೂ ಹೋಗುತ್ತಿದ್ದಾರೆ.
26 ಮಹಾಸಭೆಯಲ್ಲಿ ದೇವರಿಗೆ ಸ್ತೋತ್ರವಾಗಲಿ!
    ಇಸ್ರೇಲ್ ಜನರೇ, ಯೆಹೋವನಿಗೆ ಸ್ತೋತ್ರಮಾಡಿರಿ!
27 ಅವರನ್ನು ಮುನ್ನಡೆಸಿಕೊಂಡು ಹೋಗುವವರಲ್ಲಿ ಮೊದಲನೆಯದಾಗಿ ಬೆನ್ಯಾಮೀನನ ಚಿಕ್ಕ ಕುಲವಿದೆ;
    ಅದರ ನಂತರ ಯೆಹೂದನ ಮಹಾಕುಲವಿದೆ.
    ಅದರ ನಂತರ ಜೆಬುಲೂನ್ ಮತ್ತು ನಫ್ತಾಲಿ ಕುಲಗಳ ನಾಯಕರು ಇದ್ದಾರೆ.

28 ದೇವರೇ, ನಿನ್ನ ಬಲವನ್ನು ನಮಗೆ ತೋರಿಸು!
    ಹಿಂದಿನ ಕಾಲದಲ್ಲಿ ನಮಗಾಗಿ ಮಾಡಿದ ಬಲಪ್ರಯೋಗವನ್ನು ನಮಗೆ ತೋರಿಸು.
29 ರಾಜರುಗಳು ತಮ್ಮ ಕಾಣಿಕೆಗಳನ್ನು ತೆಗೆದುಕೊಂಡು
    ಜೆರುಸಲೇಮಿನ ನಿನ್ನ ಆಲಯಕ್ಕೆ ಬರುವರು.
30 ಕೋಲಿನಿಂದ ಬಡಿದು ನಿನಗೆ ಬೇಕಾದದ್ದನ್ನೆಲ್ಲಾ ಆ ಪ್ರಾಣಿಗಳಿಂದ ಮಾಡಿಸು.
    ಆ ಜನಾಂಗಗಳಲ್ಲಿರುವ “ಹೋರಿಗಳು” ಮತ್ತು “ಹಸುಗಳು” ನಿನಗೆ ವಿಧೇಯವಾಗಿರುವಂತೆ ಮಾಡು.
ನೀನು ಆ ಜನಾಂಗಗಳನ್ನು ಯುದ್ಧದಲ್ಲಿ ಸೋಲಿಸಿರುವುದರಿಂದ
    ಅವರು ನಿನಗೆ ಬೆಳ್ಳಿಯನ್ನು ತಂದುಕೊಡುವಂತೆ ಮಾಡು.
31 ಅವರು ಈಜಿಪ್ಟಿನಿಂದ ಐಶ್ವರ್ಯವನ್ನು ನಿನಗೆ ತಂದುಕೊಡುವಂತೆ ಮಾಡು.
    ದೇವರೇ, ಇಥಿಯೋಪಿಯದವರು ತಮ್ಮ ಐಶ್ವರ್ಯವನ್ನು ನಿನಗೆ ತಂದುಕೊಡುವಂತೆ ಮಾಡು.
32 ಭೂರಾಜರುಗಳೇ, ದೇವರಿಗೆ ಗಾಯನ ಮಾಡಿರಿ!
    ನಮ್ಮ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಿರಿ!

33 ದೇವರಿಗೆ ಗಾಯನ ಮಾಡಿರಿ!
ಅನಾದಿಕಾಲದಿಂದಿರುವ ಆತನು ಮಹೋನ್ನತವಾದ ಆಕಾಶದಲ್ಲಿ ರಥಾಶ್ವರೂಢನಾಗಿ ಸವಾರಿ ಮಾಡುವನು.
    ಆತನ ಗರ್ಜನೆಗೆ ಕಿವಿಗೊಡಿರಿ!
34 ದೇವರ ಬಲವನ್ನು ಕೊಂಡಾಡಿರಿ.
    ಆತನ ಗಾಂಭೀರ್ಯವು ಇಸ್ರೇಲರ ಆಶ್ರಯವಾಗಿದೆ.
    ಆತನ ಶಕ್ತಿಯು ಆಕಾಶಗಳಲ್ಲಿ ವ್ಯಾಪಿಸಿದೆ.
35 ದೇವರೇ, ನಿನ್ನ ಪರಿಶುದ್ಧಾಲಯದಲ್ಲಿರುವ ನೀನು ಅದ್ಭುತಸ್ವರೂಪನಾಗಿರುವೆ.
ಇಸ್ರೇಲರ ದೇವರು ತನ್ನ ಜನರಿಗೆ ಬಲವನ್ನೂ ಶಕ್ತಿಯನ್ನೂ ದಯಪಾಲಿಸುವನು.
ದೇವರಿಗೆ ಸ್ತೋತ್ರ!

ಯೆಶಾಯ 15

ಮೋವಾಬಿನ ಕುರಿತು ದೈವಸಂದೇಶ

15 ಇದು ಮೋವಾಬನ್ನು ಕುರಿತ ದುಃಖಕರವಾದ ಸಂದೇಶ:

ಒಂದು ರಾತ್ರಿ ಮೋವಾಬಿನ ಆರ್ ಪಟ್ಟಣದಿಂದ ಸಂಪತ್ತನ್ನು ಸೈನ್ಯವು ಸೂರೆ ಮಾಡಿತು.
    ಆ ರಾತ್ರಿ ನಗರವು ನಾಶಮಾಡಲ್ಪಟ್ಟಿತು.
ಒಂದು ರಾತ್ರಿ ಸೈನ್ಯವು ಮೋವಾಬಿನ ಕೀರ್ ಪಟ್ಟಣದಿಂದ ಸಂಪತ್ತನ್ನು ಸೂರೆ ಮಾಡಿತು.
    ಆ ರಾತ್ರಿ ಪಟ್ಟಣವು ಕೆಡವಲ್ಪಟ್ಟಿತು.
ಅರಸನ ಪರಿವಾರದವರು ಮತ್ತು ದೀಬೋನಿನ ಜನರು ಪೂಜಾಸ್ಥಳಕ್ಕೆ ದುಃಖಿಸಲು ಹೋಗುತ್ತಿದ್ದಾರೆ.
    ಮೋವಾಬಿನ ಜನರು ನೆಬೋ ಮತ್ತು ಮೇದೆಬದವರಿಗಾಗಿ ರೋಧಿಸುತ್ತಾರೆ.
    ಜನರು ತಮ್ಮ ಗಡ್ಡಗಳನ್ನೂ ತಲೆಗಳನ್ನೂ ಬೋಳಿಸಿ ತಮ್ಮ ದುಃಖವನ್ನು ಪ್ರದರ್ಶಿಸುತ್ತಾರೆ.
ಮೋವಾಬಿನ ಎಲ್ಲಾ ಕಡೆಗಳಲ್ಲೂ ಮನೆಯ ಚಾವಣಿಯ ಮೇಲೂ ಬೀದಿಗಳಲ್ಲೂ
    ಜನರು ಗೋಣಿತಟ್ಟುಗಳನ್ನು ಧರಿಸಿಕೊಂಡು ರೋಧಿಸುತ್ತಾರೆ.
ಹೆಷ್ಬೋನ್ ಮತ್ತು ಎಲೆಯಾಲೆಯಲ್ಲಿರುವ ಜನರು ಗಟ್ಟಿಯಾಗಿ ಅಳುತ್ತಿದ್ದಾರೆ.
    ದೂರದಲ್ಲಿರುವ ಯಹಜ್ ಪಟ್ಟಣದವರಿಗೆ ಅವರ ರೋಧನವು ಕೇಳಿಸುತ್ತದೆ.
ಸೈನಿಕರೂ ಭಯಗೊಂಡಿದ್ದಾರೆ.
    ಹೆದರಿಕೆಯಿಂದ ನಡುಗುತ್ತಿದ್ದಾರೆ.

ಮೋವಾಬಿನ ಬಗ್ಗೆ ನನ್ನ ಹೃದಯವು ಮರುಗುತ್ತಿದೆ.
ಜನರು ಸುರಕ್ಷತೆಗಾಗಿ ಅತ್ತಿತ್ತ ಓಡಾಡುತ್ತಿದ್ದಾರೆ.
    ಅವರು ಬಹುದೂರವಿರುವ ಚೋಯರಿಗೆ ಓಡುತ್ತಿದ್ದಾರೆ.
    ಎಗ್ಲತ್ ಶೆಲಿಶೀಯಕ್ಕೂ ಓಡುತ್ತಾರೆ.
ಪರ್ವತಮಾರ್ಗವಾಗಿ ಲೂಹೀಥ್ ಗೆ
    ಹೋಗುತ್ತಿರುವಾಗ ಜನರು ಅಳುತ್ತಾ ಹೋಗುತ್ತಾರೆ.
ಹೊರೊನಯಿಮಿಗೆ ಹೋಗುವ ಮಾರ್ಗದಲ್ಲಿ
    ಜನರು ಜೋರಾಗಿ ಅಳುತ್ತಾ ಹೋಗುತ್ತಿದ್ದಾರೆ.
ಆದರೆ ನಿಮ್ರೀಮ್ ಹಳ್ಳವು ಒಣಗಿಹೋಗಿ ಮರುಭೂಮಿಗೆ ಸಮಾನವಾಗಿದೆ.
    ಹಸಿಹುಲ್ಲುಗಳೆಲ್ಲಾ ಬಾಡಿವೆ;
    ಸಸಿಗಳೆಲ್ಲಾ ಸತ್ತಿವೆ;
    ಎಲ್ಲಿಯೂ ಹಸಿರು ಕಾಣಿಸುವದಿಲ್ಲ.
ಆದಕಾರಣ ಜನರು ತಮ್ಮ ವಸ್ತುಗಳನ್ನು ಒಟ್ಟಾಗಿ ಸೇರಿಸಿ ಮೋವಾಬನ್ನು ಬಿಟ್ಟುಹೋಗುತ್ತಿದ್ದಾರೆ.
    ಅವರು ತಮ್ಮ ವಸ್ತುಗಳನ್ನು ಹೊತ್ತುಕೊಂಡು ಪೊಪ್ಲಾರ್ ಹೊಳೆಯ ಬದಿಯಲ್ಲಿ ಗಡಿದಾಟುವರು.

ಮೋವಾಬ್ ದೇಶದಲ್ಲೆಲ್ಲಾ ಅಳುವ ಸದ್ದು ಕೇಳಿಸುತ್ತದೆ.
    ದೂರದಲ್ಲಿರುವ ಎಗ್ಲಯಿಮಿನಲ್ಲೂ ಜನರು ಅಳುತ್ತಿದ್ದಾರೆ.
    ಬೆಯೇರ್ ಏಲೀಮ್ ಪಟ್ಟಣದಲ್ಲೂ ಜನರು ರೋಧಿಸುತ್ತಾರೆ.
ದೀಮೋನಿನ ನೀರು ರಕ್ತಮಯವಾಗಿದೆ.
    ಮತ್ತು ಯೆಹೋವನಾದ ನಾನು ದೀಮೋನಿಗೆ ಇನ್ನೂ ಕೇಡುಗಳನ್ನು ಬರಮಾಡುವೆನು.
ಮೋವಾಬಿನಲ್ಲಿ ವಾಸಿಸುವ ಕೆಲವೇ ಜನರು ಶತ್ರುಗಳಿಂದ ಪಾರಾಗಿದ್ದಾರೆ.
    ಆದರೆ ಅವರನ್ನು ಸಾಯಿಸಲು ನಾನು ಸಿಂಹಗಳನ್ನು ಕಳುಹಿಸುವೆನು.

1 ಪೇತ್ರನು 3

ಗಂಡ ಮತ್ತು ಹೆಂಡತಿ

ಸ್ತ್ರೀಯರೇ, ಇದೇ ರೀತಿಯಲ್ಲಿ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ದೇವರಲ್ಲಿ ಭಯಭಕ್ತಿಯುಳ್ಳವರಾಗಿದ್ದು ನಿಷ್ಕಳಂಕರಾಗಿ ಜೀವಿಸುವುದನ್ನು ಕಂಡು ವಾಕ್ಯೋಪದೇಶವಿಲ್ಲದಿದ್ದರೂ ದೇವರ ವಾಕ್ಯದ ಮೇಲೆ ನಂಬಿಕೆಯಿಡಲು ನಿಮ್ಮ ನಡತೆಯಿಂದಲೇ ಪ್ರೋತ್ಸಾಹಿಸಲ್ಪಡುವರು. ತಲೆಕೂದಲನ್ನು ಸುಂದರವಾಗಿ ಬಾಚಿಕೊಳ್ಳುವುದಾಗಲಿ ಬಂಗಾರದ ಒಡವೆಗಳಾಗಲಿ ಒಳ್ಳೆಯ ಬಟ್ಟೆಗಳಾಗಲಿ ನಿಮ್ಮ ಸೌಂದರ್ಯದ ಸಾಧನಗಳಾಗದಿರಲಿ. ಸಾತ್ವಿಕವೂ ಶಾಂತವೂ ಆದ ಆಂತರ್ಯವೇ ನಿಮ್ಮ ಸೌಂದರ್ಯವಾಗಿರಬೇಕು. ಆ ಸೌಂದರ್ಯ ನಶಿಸಿಹೋಗುವುದಿಲ್ಲ. ಅದು ದೇವರಿಗೆ ಬಹು ಅಮೂಲ್ಯವಾದದ್ದು.

ಬಹು ಕಾಲದ ಹಿಂದೆ ಜೀವಿಸಿದ್ದು ದೇವರನ್ನು ಅನುಸರಿಸುತ್ತಾ ಪರಿಶುದ್ಧರಾಗಿದ್ದ ಸ್ತ್ರೀಯರು ಇದೇ ರೀತಿಯಲ್ಲಿ ತಮ್ಮನ್ನು ಶೃಂಗರಿಸಿಕೊಂಡರು. ಅವರು ತಮ್ಮ ಗಂಡಂದಿರಿಗೆ ಅಧೀನರಾಗಿದ್ದರು. ನಾನು ಸಾರಳಂತಹ ಸ್ತ್ರೀಯರ ಬಗ್ಗೆ ಹೇಳುತ್ತಿದ್ದೇನೆ. ಅವಳು ತನ್ನ ಗಂಡನಾದ ಅಬ್ರಹಾಮನಿಗೆ ವಿಧೇಯಳಾಗಿದ್ದು, ಅವನನ್ನು ತನ್ನ ಒಡೆಯನೆಂದು ಕರೆದಳು. ಸ್ತ್ರೀಯರಾದ ನೀವು ಭಯಪಡದೆ ಯಾವಾಗಲೂ ಯೋಗ್ಯವಾದುದನ್ನು ಮಾಡಿದರೆ, ನೀವು ಸಾರಳ ನಿಜವಾದ ಮಕ್ಕಳಾಗುವಿರಿ.

ಪುರುಷರೇ, ಇದೇ ರೀತಿಯಲ್ಲಿ ನೀವು ನಿಮ್ಮ ಪತ್ನಿಯರನ್ನು ಅರ್ಥಮಾಡಿಕೊಂಡು ಅವರೊಂದಿಗೆ ಬಾಳಬೇಕು. ನೀವು ನಿಮ್ಮ ಪತ್ನಿಯರಿಗೆ ಗೌರವ ತೋರಬೇಕು. ಅವರು ನಿಮಗಿಂತ ದುರ್ಬಲರು. ಆದರೆ ದೇವರು ನಿಮಗೆ ಕೊಡುವ ಆಶೀರ್ವಾದವನ್ನೇ ಅಂದರೆ ನಿಜಜೀವವನ್ನು ನೀಡುವ ಕೃಪೆಯನ್ನೇ ನಿಮ್ಮ ಪತ್ನಿಯರಿಗೂ ಕೊಡುವನು. ನೀವು ಹೀಗೆ ಜೀವಿಸುವುದಾಗಿದ್ದರೆ ಪ್ರಾರ್ಥಿಸಲು ನಿಮಗೆ ಅಡ್ಡಿಯಾಗುವುದಿಲ್ಲ.

ಒಳ್ಳೆಯದರ ನಿಮಿತ್ತ ಉಂಟಾಗುವ ಸಂಕಟ

ಆದ್ದರಿಂದ ನೀವೆಲ್ಲರೂ ಒಟ್ಟಾಗಿ ಶಾಂತಿಯಿಂದ ಬಾಳಿರಿ; ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಒಬ್ಬರನ್ನೊಬ್ಬರು ಸಹೋದರರಂತೆ ಪ್ರೀತಿಸಿರಿ. ದಯೆ ತೋರುವವರೂ ಮತ್ತು ದೀನತೆ ಉಳ್ಳವರೂ ಆಗಿರಿ. ಅಪಕಾರ ಮಾಡಿದವನಿಗೆ ಅಪಕಾರ ಮಾಡದೆ, ನಿಂದಿಸಿದವನನ್ನು ನಿಂದಿಸದೆ, ಅವನನ್ನು ಆಶೀರ್ವದಿಸುವಂತೆ ದೇವರಲ್ಲಿ ಬೇಡಿಕೊಳ್ಳಿರಿ. ಏಕೆಂದರೆ ಆಶೀರ್ವಾದವನ್ನು ಹೊಂದಿಕೊಳ್ಳಲು ನೀವು ಕರೆಯಲ್ಪಟ್ಟವರಾಗಿದ್ದೀರಿ. 10 ಪವಿತ್ರ ಗ್ರಂಥವು ಹೇಳುವುದೇನೆಂದರೆ,

“ಈ ಜೀವಿತದಲ್ಲಿ ಸಂತೋಷಿಸುತ್ತಾ
    ಸುದಿನಗಳನ್ನು ನೋಡಲು ಅಪೇಕ್ಷಿಸುವವನು
ಕೆಟ್ಟ ಮಾತುಗಳನ್ನಾಡದಿರಲಿ;
    ಸುಳ್ಳನ್ನು ನುಡಿಯದಿರಲಿ.
11 ಅವನು ಕೆಟ್ಟದ್ದನ್ನು ಮಾಡದೆ ಒಳ್ಳೆಯದನ್ನೇ ಮಾಡಲಿ.
    ಅವನು ಶಾಂತಿಯನ್ನು ಎದುರುನೋಡುತ್ತಾ ಅದನ್ನು ಪಡೆಯಲು ಪ್ರಯತ್ನಿಸಲಿ.
12 ನೀತಿವಂತರನ್ನು ಪ್ರಭುವು ಕಾಯುತ್ತಾನೆ;
    ಅವರ ಪ್ರಾರ್ಥನೆಗಳನ್ನು ಆಲಿಸುತ್ತಾನೆ.
ಆದರೆ ಕೆಟ್ಟದ್ದನ್ನು ಮಾಡುವ ಜನರನ್ನು ಪ್ರಭುವು ವಿರೋಧಿಸುತ್ತಾನೆ.”(A)

13 ನೀವು ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಿದ್ದರೆ, ಯಾರೂ ನಿಮಗೆ ಕೇಡು ಮಾಡುವುದಿಲ್ಲ. 14 ಆದರೆ ಯೋಗ್ಯವಾದುದನ್ನು ಮಾಡುವಾಗ ನೀವು ಸಂಕಟಪಡಬೇಕಾಗಬಹುದು. ಆದರೆ “ನಿಮ್ಮನ್ನು ಸಂಕಟಕ್ಕೆ ಒಳಪಡಿಸುವ ಜನರಿಗೆ ಹೆದರಬೇಡಿರಿ ಮತ್ತು ಚಿಂತಿಸಬೇಡಿರಿ.”(B) 15 ನಿಮ್ಮ ಹೃದಯಗಳಲ್ಲಿ ಕ್ರಿಸ್ತನೇ ಪ್ರಭುವಾಗಿರಲಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ನಿಮ್ಮನ್ನು ಕೇಳುವ ಪ್ರತಿಯೊಬ್ಬರಿಗೂ ಉತ್ತರ ಹೇಳಲು ಯಾವಾಗಲೂ ಸಿದ್ಧವಾಗಿರಿ. 16 ಆದರೆ ಸಾತ್ವಿಕತೆಯಿಂದ ಗೌರವಕರವಾದ ರೀತಿಯಲ್ಲಿ ಅವರಿಗೆ ಉತ್ತರವನ್ನು ಹೇಳಿ. ನೀವು ಮಾಡುತ್ತಿರುವುದು ಯೋಗ್ಯವಾದದ್ದೆಂಬುದು ನಿಮಗೆ ಯಾವಾಗಲೂ ಖಚಿತವಾಗಿ ತಿಳಿದಿರಬೇಕು. ಆಗ, ನೀವು ಕ್ರಿಸ್ತನಲ್ಲಿ ಒಳ್ಳೆಯವರಾಗಿ ಜೀವಿಸುವುದನ್ನು ನೋಡಿ ನಿಮ್ಮ ಬಗ್ಗೆ ಕೆಟ್ಟಮಾತುಗಳನ್ನು ಹೇಳುವವರು ತಾವು ಹೇಳಿದ ಕೆಟ್ಟ ಸಂಗತಿಗಳಿಗಾಗಿ ನಾಚಿಕೆಪಡುವರು.

17 ಕೆಟ್ಟದ್ದನ್ನು ಮಾಡಿ ಸಂಕಟ ಪಡುವುದಕ್ಕಿಂತ ಒಳ್ಳೆಯದನ್ನು ಮಾಡಿ ಸಂಕಟಪಡುವುದು ಉತ್ತಮ. ಹೌದು, ಅದು ದೇವರ ಅಪೇಕ್ಷೆಯಾಗಿದ್ದರೆ ಅದೇ ಒಳ್ಳೆಯದು.

18 ನಿಮ್ಮ ಪಾಪಗಳಿಗಾಗಿ ಕ್ರಿಸ್ತನು ಒಂದೇಸಾರಿ
    ಬಾಧೆ ಅನುಭವಿಸಿ ಸತ್ತನು.
ನೀತಿವಂತನಾಗಿದ್ದ ಆತನು
    ಅಪರಾಧಿಗಳಿಗಾಗಿ ಪ್ರಾಣಕೊಟ್ಟನು.
    ನಿಮ್ಮೆಲ್ಲರನ್ನು ದೇವರ ಬಳಿಗೆ ನಡೆಸುವುದಕ್ಕಾಗಿ ಆತನು ಹೀಗೆ ಮಾಡಿದನು.
ಆತನ ದೇಹವು ಕೊಲ್ಲಲ್ಪಟ್ಟಿತು,
    ಆದರೆ ಆತನು ಆತ್ಮಸಂಬಂಧದಲ್ಲಿ ಮತ್ತೆ ಜೀವಂತನಾದನು.

19 ಬಳಿಕ ಆತನು ಆತ್ಮರೂಪದಲ್ಲಿ ಹೋಗಿ ಸೆರೆಮನೆಯಲ್ಲಿದ್ದ ಆತ್ಮಗಳಿಗೆ ಸುವಾರ್ತೆ ಸಾರಿದನು. 20 ಬಹಳ ಹಿಂದೆ ನೋಹನ ಕಾಲದಲ್ಲಿ ದೇವರಿಗೆ ಅವಿಧೇಯರಾಗಿದ್ದವರೇ ಅವರು. ನೋಹನು ನಾವೆಯನ್ನು ಕಟ್ಟುತ್ತಿದ್ದಾಗ ದೇವರು ತಾಳ್ಮೆಯಿಂದ ಕಾಯುತ್ತಿದ್ದನು. ಕೆಲವರು ಅಂದರೆ ಎಂಟು ಮಂದಿ ಮಾತ್ರ, ಆ ನಾವೆಯಲ್ಲಿ ನೀರಿನ ಮೂಲಕ ರಕ್ಷಿಸಲ್ಪಟ್ಟರು. 21 ಆ ನೀರು ಈಗ ನಿಮ್ಮನ್ನು ರಕ್ಷಿಸುತ್ತಿರುವ ದೀಕ್ಷಾಸ್ನಾನದಂತಿದೆ. ದೀಕ್ಷಾಸ್ನಾನವು ಮೈಕೊಳೆಯನ್ನು ತೊಳೆಯುವಂಥದ್ದಲ್ಲ. ಅದು ಪರಿಶುದ್ಧ ಹೃದಯ ಬೇಕೆಂದು ವಿಜ್ಞಾಪಿಸಿಕೊಳ್ಳುವಂಥದಾಗಿದೆ. ಯೇಸು ಕ್ರಿಸ್ತನು ಸಾವಿನಿಂದ ಎದ್ದುಬಂದದ್ದರಿಂದ ಅದು ನಿಮ್ಮನ್ನು ರಕ್ಷಿಸುತ್ತದೆ. 22 ಈಗ ಯೇಸು ಪರಲೋಕಕ್ಕೆ ಹೋಗಿರುವನು. ಆತನು ದೇವರ ಬಲಗಡೆಯಲ್ಲಿದ್ದಾನೆ. ಆತನು ದೇವದೂತರನ್ನೂ ಅಧಿಕಾರಿಗಳನ್ನೂ ಶಕ್ತಿಗಳನ್ನೂ ಆಳುತ್ತಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International