M’Cheyne Bible Reading Plan
ಬಿಳಾಮನ ಮೂರನೆಯ ಸಂದೇಶ
24 ಇಸ್ರೇಲರನ್ನು ಆಶೀರ್ವದಿಸುವುದೇ ಯೆಹೋವನ ಆಸೆಯೆಂದು ಬಿಳಾಮನು ತಿಳಿದುಕೊಂಡನು. ಆದ್ದರಿಂದ ಬಿಳಾಮನು ಮೊದಲಿನಂತೆ ಶಕುನ ನೋಡುವುದಕ್ಕೆ ಹೋಗದೆ ಮರುಭೂಮಿಯ ಕಡೆಗೆ ಮುಖವನ್ನು ತಿರುಗಿಸಿಕೊಂಡನು. 2 ಬಿಳಾಮನು ಕಣ್ಣೆತ್ತಿ ನೋಡಿದಾಗ ಇಸ್ರೇಲರೆಲ್ಲರನ್ನು ಕಂಡನು. ಅವರು ತಮ್ಮ ಕುಲಗಳ ಪ್ರಕಾರ ಡೇರೆಗಳನ್ನು ಹಾಕಿಕೊಂಡಿದ್ದರು. 3 ಆಗ ಅವನು ದೇವರಾತ್ಮ ಪ್ರೇರಿತನಾಗಿ ಹೀಗೆಂದನು:
“ಬೆಯೋರನ ಮಗನಾದ ಬಿಳಾಮನ ಸಂದೇಶವಿದು.
ನನ್ನ ಕಣ್ಣುಗಳು ತೆರೆಯಲ್ಪಟ್ಟಿವೆ. ನಾನು ನೋಡುವುದನ್ನೇ ಹೇಳುತ್ತೇನೆ.
4 ನಾನು ಈ ಸಂದೇಶವನ್ನು ದೇವರಿಂದ ಕೇಳಿದೆನು.
ಸರ್ವಶಕ್ತನಾದ ದೇವರು ತೋರಿಸಿದವುಗಳನ್ನು ನೋಡಿದೆನು.
ನಾನು ಸ್ಪಷ್ಟವಾಗಿ ನೋಡುವುದನ್ನು ದೀನತೆಯಿಂದ ತಿಳಿಸುತ್ತೇನೆ.
5 “ಯಾಕೋಬ್ಯರೇ, ನಿಮ್ಮ ಡೇರೆಗಳು ಬಹಳ ಸುಂದರವಾಗಿವೆ!
ಇಸ್ರೇಲರೇ, ನೀವು ವಾಸಿಸುವ ಸ್ಥಳಗಳು ಬಹಳ ರಮ್ಯವಾಗಿವೆ!
6 ನಿಮ್ಮ ಗುಡಾರಗಳು ಕಣಿವೆಗಳಂತೆ ಹರಡಿಕೊಂಡಿವೆ.
ನಿಮ್ಮ ಗುಡಾರಗಳು ನದಿಯ ಬಳಿಯಿರುವ ತೋಟಗಳಂತಿವೆ.
ನಿಮ್ಮ ಗುಡಾರಗಳು ಯೆಹೋವನು ನೆಟ್ಟ ಸುವಾಸನೆಯ ಪೊದೆಗಳಂತೆಯೂ
ನೀರಿನ ಬಳಿಯಿರುವ ದೇವದಾರಿನ ಮರಗಳಂತೆಯೂ ಇವೆ.
7 ನಿಮಗೆ ಯಾವಾಗಲೂ ಬೇಕಾದಷ್ಟು ನೀರು ಇರುವುದು;
ನೀವು ಬಿತ್ತಿದ ಬೀಜಗಳು ಬೆಳೆಯಲು ಸಾಕಷ್ಟು ನೀರು ಇರುವುದು.
ನಿಮ್ಮ ಅರಸನು ಆಗಾಗ್ ಎಂಬವನಿಗಿಂತಲೂ ದೊಡ್ಡವನಾಗಿದ್ದಾನೆ.
ನಿಮ್ಮ ರಾಜ್ಯವು ಬಹಳ ಬಲಿಷ್ಠವಾಗಿರುವುದು.
8 “ದೇವರು ಆ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು.
ಅವರು ಕಾಡುಕೋಣದಂತೆ ಬಲಿಷ್ಠರಾಗಿದ್ದಾರೆ.
ಅವರು ತಮ್ಮೆಲ್ಲಾ ಶತ್ರುಗಳನ್ನು ಸೋಲಿಸುವರು.
ಅವರು ತಮ್ಮ ವೈರಿಗಳ ಮೂಳೆಗಳನ್ನು ಮುರಿದುಹಾಕುವರು. ಅವರ ಬಾಣಗಳು ಅವರ ವೈರಿಗಳನ್ನು ಕೊಲ್ಲುವವು.
9 ಅವರು ಅಡಗಿಕೊಂಡಿರುವರು;
ಇಸ್ರೇಲರು ಸಿಂಹದಂತೆಯೂ
ಹೆಣ್ಣು ಸಿಂಹದಂತೆಯೂ ವಿಶ್ರಮಿಸುವರು.
ಅದನ್ನು ಎಬ್ಬಿಸಲು ಯಾರಿಗೆ ಧೈರ್ಯವಿದೆ?
ನಿಮ್ಮನ್ನು ಆಶೀರ್ವದಿಸುವವನು ಆಶೀರ್ವದಿಸಲ್ಪಡುವನು.
ನಿಮ್ಮನ್ನು ಶಪಿಸುವವನು ಶಪಿಸಲ್ಪಡುವನು.”
10 ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು, ಚಪ್ಪಾಳೆ ಹೊಡೆದು ಅವನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆನು. ಆದರೆ ನೀನು ಅವರನ್ನು ಮೂರು ಸಾರಿಯೂ ಆಶೀರ್ವದಿಸಿದೆ. 11 ಆದ್ದರಿಂದ ನೀನೀಗ ನೇರವಾಗಿ ಮನೆಗೆ ಹೋಗಿಬಿಡು. ನಿನಗೆ ಹೆಚ್ಚು ಹಣ ಕೊಡುವುದಾಗಿ ಆಲೋಚಿಸಿದ್ದೆನು. ಆದರೆ ನೀನು ನಿನ್ನ ಬಹುಮಾನವನ್ನು ಕಳೆದುಕೊಳ್ಳುವಂತೆ ಯೆಹೋವನು ಮಾಡಿದನು” ಎಂದು ಹೇಳಿದನು.
12-13 ಅದಕ್ಕೆ ಬಿಳಾಮನು ಬಾಲಾಕನಿಗೆ, “ಬಾಲಾಕನು, ಬೆಳ್ಳಿಬಂಗಾರಗಳಿಂದ ತುಂಬಿದ ತನ್ನ ಅರಮನೆಯನ್ನು ಕೊಟ್ಟರೂ ನಾನು ಯೆಹೋವನ ಆಜ್ಞೆಯನ್ನು ಮೀರಿ ನನಗೆ ಇಷ್ಟಬಂದಂತೆ ಕೆಟ್ಟದ್ದನ್ನಾಗಲಿ ಒಳ್ಳೆಯದನ್ನಾಗಲಿ ನಾನು ಮಾಡಲಾರೆನು; ಆದರೆ ಯೆಹೋವನು ಆಜ್ಞಾಪಿಸುವುದನ್ನೇ ಮಾತಾಡುವೆನೆಂದು ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ ಹೇಳಲಿಲ್ಲವೇ? 14 ಆಗಲಿ, ನಾನು ನನ್ನ ಸ್ವಜನರ ಬಳಿಗೆ ಹೋಗುತ್ತೇನೆ. ಆದರೆ ಮುಂದೆ ಆ ಜನರು ನಿನ್ನ ಜನರಿಗೆ ಏನು ಮಾಡುವರೋ ಅದನ್ನು ನಿನಗೆ ತಿಳಿಸುತ್ತೇನೆ, ಕೇಳು” ಎಂದು ಹೇಳಿದನು.
ಬಿಳಾಮನ ಕೊನೆಯ ಸಂದೇಶ
15 ಆಗ ಬಿಳಾಮನು ಹೀಗೆಂದನು:
“ಬೆಯೋರನ ಮಗನಾದ ಬಿಳಾಮನ ಸಂದೇಶವಿದು:
ನಾನು ಸ್ಪಷ್ಟವಾಗಿ ನೋಡುತ್ತಿರುವ ಸಂಗತಿಗಳ ಬಗ್ಗೆ ಮಾತಾಡುತ್ತಿದ್ದೇನೆ.
16 ನಾನು ದೇವರ ಮುಂದೆ ಅಡ್ಡಬೀಳುತ್ತೇನೆ,
ಆದರೆ ನನ್ನ ಕಣ್ಣುಗಳು ಮುಚ್ಚಲ್ಪಟ್ಟಿಲ್ಲ.
ನಾನು ದೇವರ ವಾಕ್ಯಗಳನ್ನು ಕೇಳುತ್ತಿದ್ದೇನೆ.
ನಾನು ಮಹೋನ್ನತನಾದ ದೇವರಿಂದ ಜ್ಞಾನವನ್ನು ಹೊಂದಿಕೊಳ್ಳುತ್ತಿದ್ದೇನೆ.
ಸರ್ವಶಕ್ತನಾದ ದೇವರು ತೋರಿಸುವ ಸಂಗತಿಗಳನ್ನು
ನಾನು ನೋಡುತ್ತಿದ್ದೇನೆ.
17 “ಬರುತ್ತಿರುವ ಒಬ್ಬನನ್ನು ನೋಡುತ್ತಿದ್ದೇನೆ.
ಆದರೆ ಈಗಲ್ಲ. ಬರುತ್ತಿರುವ ಒಬ್ಬನನ್ನು ನೋಡುತ್ತಿದ್ದೇನೆ, ಆದರೆ ಬೇಗನೆ ಅಲ್ಲ.
ಯಾಕೋಬನ ವಂಶದಿಂದ ನಕ್ಷತ್ರವೊಂದು ಬರುವುದು.
ಇಸ್ರೇಲರಿಂದ ಅರಸನೊಬ್ಬನು ಬರುವನು.
ಅವನು ಮೋವಾಬ್ಯರ ತಲೆಯನ್ನು ಜಜ್ಜುವನು.
ಆ ಅರಸನು ಶೇತನ ಪುತ್ರರೆಲ್ಲರ ತಲೆಗಳನ್ನು ಜಜ್ಜುವನು.
18 ಇಸ್ರೇಲರು ಬಲಿಷ್ಠರಾಗುವರು.
ಅವರು ಎದೋಮ್ ದೇಶವನ್ನು ಪಡೆಯುವರು.
ಅವರು ತಮ್ಮ ವೈರಿಯಾದ ಸೇಯೀರನ ದೇಶವನ್ನು ಪಡೆಯುವರು.
19 “ಯಾಕೋಬನ ವಂಶದಿಂದ ಹೊಸ ಅರಸನೊಬ್ಬನು ಬರುವನು.
ಆ ಅರಸನು ಆ ಪಟ್ಟಣದಲ್ಲಿ ಉಳಿದವರನ್ನು ನಾಶಮಾಡುವನು.”
20 “ತರುವಾಯ ಬಿಳಾಮನು ಅಮಾಲೇಕ್ಯರನ್ನು ನೋಡಿ ಹೀಗೆಂದನು:
“ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಬಲಿಷ್ಠರು; ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಮೊದಲನೆಯವರು;
ಆದರೆ ಕೊನೆಯಲ್ಲಿ ಅವರು ನಾಶವಾಗುವರು.”
21 ಆಗ ಬಿಳಾಮನು ಕೇನ್ಯರನ್ನು ನೋಡಿ ಹೀಗೆಂದನು:
“ನಿಮ್ಮ ಮನೆಯು ಬೆಟ್ಟದ ತುದಿಯಲ್ಲಿರುವ ಪಕ್ಷಿಯ ಗೂಡಿನಂತೆ[a]
ಸುರಕ್ಷಿತವಾಗಿದೆಯೆಂದು ನೀವು ನಂಬುತ್ತೀರಿ.
22 ಆದರೆ ಕೇನ್ಯರೇ, ಅಶ್ಶೂರ್ಯವು ನಿಮ್ಮನ್ನು ಸೆರೆ ಒಯ್ಯುವಾಗ
ಅದು ನಾಶವಾಗುವುದು.”
23 ಆಗ ಬಿಳಾಮನು ಹೀಗೆಂದನು:
“ದೇವರು ಇದನ್ನು ಮಾಡುವಾಗ ಯಾರೂ ಉಳಿಯರು.
24 ಸೈಪ್ರಸ್‌ನ ತೀರಗಳಿಂದ ಹಡಗುಗಳು ಬರುವವು.
ಅವರು ಅಶ್ಶೂರ್ಯವನ್ನೂ ಏಬೆರವನ್ನೂ ಸೋಲಿಸುವರು;
ಆದರೆ ಅವರು ಸಹ ನಾಶವಾಗುವರು.”
25 ಆಗ ಬಿಳಾಮನು ಎದ್ದು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು. ಬಾಲಾಕನೂ ಸಹ ಹೊರಟುಹೋದನು.
ಸ್ತುತಿಗೀತೆ.
66 ಸರ್ವಭೂನಿವಾಸಿಗಳೇ, ದೇವರಿಗೆ ಜಯಘೋಷ ಮಾಡಿರಿ!
2 ಆತನ ಹೆಸರಿನ ಮಹಿಮೆಯನ್ನು ಕೀರ್ತಿಸಿರಿ.
ಸ್ತುತಿಗೀತೆಗಳಿಂದ ಆತನನ್ನು ಸನ್ಮಾನಿಸಿರಿ.
3 ದೇವರೇ, ನಿನ್ನ ಕಾರ್ಯಗಳು ಎಷ್ಟು ಅದ್ಭುತವಾಗಿವೆ!
ನಿನ್ನ ಮಹಾಶಕ್ತಿಯಿಂದಾಗಿ ಶತ್ರುಗಳು ನಿನಗೆ ಭಯಪಟ್ಟು ಅಡ್ಡಬೀಳುವರು.
4 ಸರ್ವಭೂನಿವಾಸಿಗಳು ನಿನ್ನನ್ನು ಆರಾಧಿಸಲಿ.
ಪ್ರತಿಯೊಬ್ಬರೂ ನಿನ್ನ ಹೆಸರನ್ನು ಕೀರ್ತಿಸಲಿ.
5 ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ;
ಆತನ ಕಾರ್ಯಗಳು ಅತ್ಯದ್ಭುತವಾಗಿವೆ!
6 ಆತನು ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು.
ಆತನ ಜನರು ಕಾಲುನಡಿಗೆಯಿಂದ ನದಿಯನ್ನು ದಾಟಿದರು.
ಅದಕ್ಕಾಗಿ ನಾವು ಆತನಲ್ಲಿ ಉಲ್ಲಾಸಪಡೋಣ.
7 ಆತನು ಪ್ರಪಂಚವನ್ನು ತನ್ನ ಮಹಾಶಕ್ತಿಯಿಂದ ಆಳುತ್ತಾನೆ.
ಆತನು ಎಲ್ಲರನ್ನೂ ಗಮನಿಸುತ್ತಾನೆ.
ಆತನ ವಿರುದ್ಧ ದಂಗೆಯೇಳಲು ಯಾರಿಗೂ ಆಗದು.
8 ಜನಾಂಗಗಳೇ, ನಮ್ಮ ದೇವರನ್ನು ಕೊಂಡಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
9 ನಮಗೆ ಜೀವಕೊಟ್ಟವನು ಆತನೇ.
ನಮ್ಮನ್ನು ಕಾಪಾಡುವವನೂ ಆತನೇ.
10 ಜನರು ಬೆಳ್ಳಿಯನ್ನು ಬೆಂಕಿಯಿಂದ ಶೋಧಿಸುವಂತೆ ದೇವರು ನಮ್ಮನ್ನು ಪರೀಕ್ಷಿಸಿದನು.
11 ದೇವರೇ, ನೀನು ನಮ್ಮನ್ನು ಬಲೆಯಲ್ಲಿ ಸಿಕ್ಕಿಸಿದೆ.
ನೀನು ನಮಗೆ ಭಾರವಾದ ಹೊರೆಗಳನ್ನು ಹೊರಿಸಿದೆ;
12 ಶತ್ರುಗಳು ನಮ್ಮ ಮೇಲೆ ನಡೆಯಮಾಡಿದೆ.
ನೀನು ನಮ್ಮನ್ನು ಬೆಂಕಿಯಲ್ಲಿಯೂ ನೀರಿನಲ್ಲಿಯೂ ಹಾಯಿಸಿದೆ.
ಆದರೂ ಸುರಕ್ಷಿತ ಸ್ಥಳಕ್ಕೆ ನಮ್ಮನ್ನು ತಂದು ಸೇರಿಸಿದೆ.
13 ಆದ್ದರಿಂದ ನಾನು ನಿನ್ನ ಆಲಯಕ್ಕೆ ಬಂದು ಯಜ್ಞಗಳನ್ನು ನಿನಗೆ ಸಮರ್ಪಿಸುವೆನು.
14 ನಾನು ಇಕ್ಕಟ್ಟಿನಲ್ಲಿದ್ದಾಗ ಸಹಾಯಕ್ಕಾಗಿ ನಿನ್ನನ್ನು ಕೂಗಿಕೊಂಡಾಗ
ಮಾಡಿದ ಹರಕೆಗಳನ್ನು ಸಲ್ಲಿಸುವೆನು.
15 ಪಾಪಪರಿಹಾರಕ ಯಜ್ಞಗಳನ್ನು ನಿನಗೆ ಅರ್ಪಿಸುವೆನು;
ಟಗರುಗಳನ್ನೂ ಧೂಪವನ್ನೂ ಅರ್ಪಿಸುವೆನು;
ಹೋರಿಗಳನ್ನೂ ಹೋತಗಳನ್ನೂ ಅರ್ಪಿಸುವೆನು.
16 ದೇವಭಕ್ತರೆಲ್ಲರೂ ಬನ್ನಿರಿ,
ದೇವರು ನನಗೋಸ್ಕರ ಮಾಡಿರುವುದನ್ನು ನಿಮಗೆ ತಿಳಿಸುವೆನು.
17 ನಾನು ಆತನಿಗೆ ಪ್ರಾರ್ಥಿಸಿದೆನು;
ಆತನನ್ನು ಸ್ತುತಿಸಿದೆನು.
18 ನನ್ನ ಶುದ್ಧಹೃದಯವನ್ನು ಕಂಡು
ಯೆಹೋವನು ಕಿವಿಗೊಟ್ಟನು.
19 ದೇವರು ನನ್ನ ಮೊರೆಯನ್ನು ಕೇಳಿದನು;
ನನ್ನ ಪ್ರಾರ್ಥನೆಯನ್ನು ಆಲಿಸಿದನು.
20 ದೇವರಿಗೆ ಸ್ತೋತ್ರವಾಗಲಿ!
ಆತನು ನನಗೆ ವಿಮುಖನಾಗದೆ,
ನನ್ನ ಪ್ರಾರ್ಥನೆಯನ್ನು ಆಲಿಸಿ, ತನ್ನ ಪ್ರೀತಿಯನ್ನು ತೋರಿದನು!
ಸ್ತುತಿಗೀತೆ.
67 ದೇವರೇ, ನನ್ನನ್ನು ಕರುಣಿಸಿ ಆಶೀರ್ವದಿಸು.
ಪ್ರಸನ್ನಮುಖದಿಂದ ನಮ್ಮನ್ನು ನೋಡು.
2 ದೇವರೇ, ಸರ್ವಭೂನಿವಾಸಿಗಳು ನಿನ್ನನ್ನು ತಿಳಿದುಕೊಳ್ಳಲಿ.
ಜನರಿಗೆ ನಿನ್ನಿಂದಾಗುವ ರಕ್ಷಣೆಯನ್ನು ಸರ್ವಜನಾಂಗಗಳೂ ಕಾಣಲಿ.
3 ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
4 ಎಲ್ಲಾ ಜನಾಂಗಗಳು ಸಂತೋಷದಿಂದ ಉಲ್ಲಾಸಿಸಲಿ.
ಯಾಕೆಂದರೆ ಜನರಿಗೆ ನ್ಯಾಯವಾದ ತೀರ್ಪುಮಾಡುವಾತನು ನೀನೇ;
ಪ್ರತಿಯೊಂದು ಜನಾಂಗವನ್ನು ಆಳುವಾತನು ನೀನೇ.
5 ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
6 ದೇವರೇ, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸು.
ನಮ್ಮ ಭೂಮಿಯು ಮಹಾಸುಗ್ಗಿಯನ್ನು ಕೊಡಲಿ.
7 ಆತನು ನಮ್ಮನ್ನು ಆಶೀರ್ವದಿಸಲಿ.
ಸರ್ವಭೂನಿವಾಸಿಗಳೆಲ್ಲರೂ ಆತನಲ್ಲಿ ಭಯಭಕ್ತಿವುಳ್ಳವರಾಗಲಿ.
ಇಸ್ರೇಲರು ಸ್ವದೇಶಕ್ಕೆ ಹಿಂದಿರುಗುವರು
14 ಮುಂದಿನ ದಿವಸಗಳಲ್ಲಿ ಯೆಹೋವನು ಯಾಕೋಬನ ಮೇಲೆ ಮತ್ತೆ ಪ್ರೀತಿತೋರುವನು. ಯೆಹೋವನು ಮತ್ತೆ ಇಸ್ರೇಲರನ್ನು ಆರಿಸುವನು. ಆ ಸಮಯದಲ್ಲಿ ಅವರ ದೇಶವನ್ನು ಅವರಿಗೆ ಹಿಂತಿರುಗಿಸುವನು. ಆಗ ಯೆಹೂದ್ಯರಲ್ಲದವರು ಯೆಹೂದ್ಯರೊಂದಿಗೆ ಸೇರಿಕೊಳ್ಳುವರು. ಅವರೆಲ್ಲರೂ ಒಂದೇ ವಂಶದವರಾಗುವರು. ಅದು ಯಾಕೋಬನ ವಂಶ. 2 ಆ ಜನಾಂಗಗಳವರು ಇಸ್ರೇಲರನ್ನು ಇಸ್ರೇಲ್ ದೇಶಕ್ಕೆ ನಡಿಸುವರು. ಆ ಪರಜನಾಂಗಗಳ ಗಂಡಸರು ಹೆಂಗಸರು ಇಸ್ರೇಲರ ಗುಲಾಮರಾಗಿರುವರು. ಹಿಂದಿನ ದಿವಸಗಳಲ್ಲಿ ಆ ಜನರು ಇಸ್ರೇಲರನ್ನು ಬಲವಂತದಿಂದ ತಮ್ಮ ಗುಲಾಮರನ್ನಾಗಿ ಮಾಡಿದರು. ಆದರೆ ಈಗ ಇಸ್ರೇಲರು ಆ ಜನಾಂಗಗಳನ್ನು ಸೋಲಿಸಿ ಅವರನ್ನು ಆಳುವರು. 3 ಯೆಹೋವನು ನಿಮ್ಮ ಪ್ರಯಾಸವನ್ನು ನಿವಾರಿಸಿ ನಿಮ್ಮನ್ನು ಆದರಿಸುವನು. ಹಿಂದಿನ ದಿವಸಗಳಲ್ಲಿ ನೀವು ಗುಲಾಮರಾಗಿರುವಾಗ ಜನರು ನಿಮ್ಮನ್ನು ಬಹಳವಾಗಿ ಹಿಂಸಿಸಿದರು; ಬಲವಂತದಿಂದ ಕಷ್ಟಕರವಾದ ಕೆಲಸವನ್ನು ನಿಮ್ಮಿಂದ ಮಾಡಿಸಿದರು. ಆದರೆ ಯೆಹೋವನು ಆ ಸಂಕಟಗಳಿಂದ ನಿಮ್ಮನ್ನು ಪಾರುಮಾಡುವನು.
ಬಾಬಿಲೋನಿನ ಅರಸನ ಕುರಿತು ಹಾಡು
4 ಆ ಸಮಯದಲ್ಲಿ ಬಾಬಿಲೋನಿನ ಅರಸನ ಬಗ್ಗೆ ನೀವು ಹೀಗೆ ಹಾಡುವಿರಿ:
ಅರಸನು ನಮ್ಮನ್ನಾಳುವಾಗ ಬಹಳ ಕ್ರೂರವಾಗಿದ್ದನು.
ಆದರೆ ಈಗ ಅವನ ಆಳ್ವಿಕೆಯು ಅಂತ್ಯವಾಯಿತು.
5 ಯೆಹೋವನು ದುಷ್ಟರ ಕೋಲನ್ನೂ ಅರಸನ ರಾಜದಂಡವನ್ನೂ ಮುರಿದುಹಾಕಿದನು.
ಅವನ ಅಧಿಕಾರವನ್ನು ತೆಗೆದುಹಾಕಿದನು.
6 ಬಾಬಿಲೋನಿನ ಅರಸನು ತನ್ನ ದುಷ್ಟತನದಲ್ಲಿ ಜನರನ್ನು ಹೊಡೆಯಿಸಿದನು.
ಹೊಡೆಯುವದನ್ನು ಅವನು ನಿಲ್ಲಿಸಲೇ ಇಲ್ಲ.
ಆ ದುಷ್ಟ ಅರಸನು ಜನರನ್ನು ಸಿಟ್ಟಿನಿಂದಲೇ ಆಳಿದನು.
ಜನರನ್ನು ಹಿಂಸೆಪಡಿಸುವದನ್ನು ಅವನು ನಿಲ್ಲಿಸಲಿಲ್ಲ.
7 ಆದರೆ ಈಗ ಇಡೀ ರಾಜ್ಯದಲ್ಲಿ ವಿಶ್ರಾಂತಿ ಇದೆ.
ರಾಜ್ಯವು ಸಮಾಧಾನದಿಂದಿದೆ.
ಜನರು ಸಂತೋಷದಿಂದ ಇದನ್ನು ಆಚರಿಸುತ್ತಾರೆ.
8 ನೀನು ದುಷ್ಟ ಅರಸನಾಗಿದ್ದೆ,
ಈಗ ನಿನಗೆ ಅಂತ್ಯವು ಬಂತು.
ತುರಾಯಿ ಮರಗಳೂ
ಲೆಬನೋನಿನ ದೇವದಾರು ವೃಕ್ಷಗಳೂ ಹರ್ಷಗೊಂಡಿವೆ.
ಆ ಮರಗಳು ಹೀಗೆ ಹೇಳುತ್ತಿವೆ: ಅರಸನು ನಮ್ಮನ್ನು ಕಡಿದುರುಳಿಸಿದನು.
ಈಗ ಅರಸನೇ ಉರುಳಿಬಿದ್ದಿದ್ದಾನೆ.
ಅವನು ಮತ್ತೆಂದಿಗೂ ಏಳುವುದಿಲ್ಲ.
9 ನೀನು ಬರುವದರಿಂದ ಮರಣದ ಸ್ಥಳವಾಗಿರುವ ನರಕವು ಉತ್ಸಾಹಗೊಂಡಿದೆ.
ನಿನ್ನನ್ನು ಎದುರುಗೊಳ್ಳುವದಕ್ಕಾಗಿ ಪಾತಾಳವು ಲೋಕದ ಎಲ್ಲಾ ಅಧಿಪತಿಗಳ ಆತ್ಮಗಳನ್ನು ಎಬ್ಬಿಸಿದೆ.
ಅರಸರು ತಮ್ಮ ಸಿಂಹಾಸನದಲ್ಲಿ ನಿಂತುಕೊಳ್ಳುವಂತೆ ಪಾತಾಳವು ಮಾಡುತ್ತಿದೆ.
ಅವರು ನಿನ್ನ ಬರುವಿಕೆಯನ್ನು ಕಾಯುತ್ತಿದ್ದಾರೆ.
10 “ಈಗ ನೀನು ನಮ್ಮಂತೆಯೇ ಸತ್ತ ಶರೀರವಾಗಿರುವೆ.
ಈಗ ನೀನು ನಮ್ಮಂತೆಯೇ ಆಗಿರುವೆ”
ಎಂದು ಅವರು ನಿನ್ನನ್ನು ಗೇಲಿ ಮಾಡುವರು.
11 ನಿನ್ನ ಜಂಬವು ಪಾತಾಳಕ್ಕೆ ಕಳುಹಿಸಲಾಗಿದೆ.
ನಿನ್ನ ಹಾರ್ಪ್‌ವಾದ್ಯದ ಸ್ವರವು ನಿನ್ನ ಅಹಂಕಾರದ ಆತ್ಮವನ್ನು ಸಾರಿಹೇಳುತ್ತವೆ.
ಹುಳಗಳು ನಿನ್ನ ಶರೀರವನ್ನು ತಿಂದುಬಿಡುವವು.
ಹಾಸಿಗೆಯೋ ಎಂಬಂತೆ ನೀನು ಅವುಗಳ ಮೇಲೆ ಮಲಗಿಕೊಳ್ಳುವೆ.
ಹುಳಗಳು ನಿನ್ನ ಶರೀರವನ್ನು ಕಂಬಳಿಯಂತೆ ಮುಚ್ಚಿಕೊಳ್ಳುವವು.
12 ನೀನು ಉದಯ ನಕ್ಷತ್ರದಂತೆ ಇರುವೆ.
ಆದರೆ ನೀನು ಆಕಾಶದಿಂದ ಕೆಳಗೆ ಬಿದ್ದಿರುವೆ.
ಹಿಂದಿನ ಕಾಲದಲ್ಲಿ ಲೋಕದ ಎಲ್ಲಾ ರಾಜ್ಯಗಳು ನಿನಗೆ ಅಡ್ಡಬಿದ್ದವು.
ಆದರೆ ಈಗ ನೀನು ಉರುಳಿಸಲ್ಪಟ್ಟಿರುವೆ.
13 ನೀನು ಯಾವಾಗಲೂ ನಿನ್ನೊಳಗೆ,
“ನಾನು ಉನ್ನತವಾದ ಆಕಾಶಕ್ಕೆ ಹೋಗುವೆನು.
ನಾನು ದೇವರ ನಕ್ಷತ್ರಗಳಿಗಿಂತ ಮೇಲೆ ನನ್ನ ಸಿಂಹಾಸನವನ್ನು ಸ್ಥಾಪಿಸುವೆನು.
ನಾನು ಜಾಫೋನ್ ಎಂಬ ಪವಿತ್ರ ಪರ್ವತದಲ್ಲಿ ಕುಳಿತುಕೊಳ್ಳುವೆನು.
ಆ ಪರ್ವತದಲ್ಲಿ ನಾನು ದೇವರುಗಳನ್ನು ಸಂಧಿಸುವೆನು.
14 ನಾನು ಉನ್ನತ ಮೇಘಮಂಡಲದ ಮೇಲೆ ಏರಿ
ಮಹೋನ್ನತನಿಗೆ ಸರಿಸಮಾನನಾಗುತ್ತೇನೆ” ಎಂದುಕೊಳ್ಳುತ್ತಿದ್ದೆ.
15 ಆದರೆ ಅದು ಸಂಭವಿಸಲಿಲ್ಲ.
ನೀನು ಆಕಾಶಕ್ಕೆ ದೇವರೊಂದಿಗೆ ಹೋಗಲಿಲ್ಲ.
ನೀನು ಆಳವಾದ ಗುಂಡಿಗೆ ದಬ್ಬಲ್ಪಟ್ಟೆ.
ಮರಣಸ್ಥಳವಾಗಿರುವ ಪಾತಾಳಕ್ಕೆ ನೀನು ದಬ್ಬಲ್ಪಟ್ಟೆ.
16 ನಿನ್ನನ್ನು ನೋಡುವ ಜನರು ನಿನ್ನ ಬಗ್ಗೆ ಯೋಚಿಸುವರು.
ನೀನು ಕೇವಲ ಸತ್ತ ಹೆಣವೆಂದು ತಿಳಿದು,
“ಭೂಮಿಯ ಮೇಲಿನ ರಾಜ್ಯಗಳಲ್ಲಿ ಮಹಾಭೀತಿಯನ್ನುಂಟು ಮಾಡಿದವನು ಇವನೋ?
17 ನಗರಗಳನ್ನು ನಾಶಮಾಡಿ ಭೂಮಿಯನ್ನು ಬೆಂಗಾಡನ್ನಾಗಿ ಮಾಡಿದವನು ಇವನೋ?
ಯುದ್ಧದಲ್ಲಿ ಜನರನ್ನು ಸೆರೆಹಿಡಿದು ಅವರನ್ನು ಮನೆಗಳಿಗೆ ಬಿಡದೆ ಇದ್ದವನು ಇವನೋ?” ಎಂದು ಕೇಳುವರು.
18 ಭೂಲೋಕದ ಪ್ರತಿಯೊಬ್ಬ ಅರಸನು ವೈಭವದೊಂದಿಗೆ ಕಾಲವಾದನು.
ಪ್ರತಿಯೊಬ್ಬ ಅರಸನಿಗೆ ಸ್ವಂತ ಸಮಾಧಿ ಇರುವದು.
19 ಆದರೆ ದುಷ್ಟ ಅರಸನಾದ ನೀನು ನಿನ್ನ ಸಮಾಧಿಯಿಂದ ತೆಗೆದುಹಾಕಲ್ಪಟ್ಟಿರುವೆ.
ಮರದಿಂದ ಬೇರ್ಪಡಿಸಿದ ಕೊಂಬೆಯಂತೆ ನೀನಿರುವೆ.
ಯುದ್ಧದಲ್ಲಿ ಸತ್ತ ಸೈನಿಕನಂತೆ ನೀನಿರುವೆ.
ಬೇರೆ ಸೈನಿಕರು ಅವನ ಮೇಲೆ ನಡೆದಾಡುವರು.
ಈಗ ನೀನು ಸಾಧಾರಣ ಹೆಣದಂತೆ ಇರುವೆ.
ಸಮಾಧಿಯ ಬಟ್ಟೆಗಳಿಂದ ನೀನು ಸುತ್ತಲ್ಪಟ್ಟಿರುವೆ.
20 ಬೇರೆ ಅನೇಕ ಅರಸರು ಸತ್ತುಹೋದರು.
ಅವರೆಲ್ಲರಿಗೂ ಸ್ವಂತ ಸಮಾಧಿ ಇದೆ.
ಆದರೆ ನೀನು ಅವರೊಂದಿಗೆ ಸೇರಲಾರೆ.
ಯಾಕೆಂದರೆ ನಿನ್ನ ರಾಜ್ಯವನ್ನು ನೀನೇ ನಾಶಮಾಡಿರುವೆ.
ನೀನು ನಿನ್ನ ಜನರನ್ನೇ ಸಾಯಿಸಿರುವೆ.
ಆದರೆ ನೀನು ನಾಶಮಾಡಿದಂತೆ ನಾಶಮಾಡಲು ನಿನ್ನ ಮಕ್ಕಳಿಗೆ ಅವಕಾಶಕೊಡಲಾಗದು.
21 ಅವನ ಮಕ್ಕಳನ್ನು ಕೊಲ್ಲಲು ಸಿದ್ಧಗೊಳ್ಳಿರಿ.
ಅವರ ತಂದೆಯ ದುಷ್ಟತನಕ್ಕಾಗಿ ಅವರನ್ನು ಕೊಲ್ಲಿರಿ.
ಅವನ ಮಕ್ಕಳು ದೇಶವನ್ನು ಇನ್ನೆಂದಿಗೂ ತಮ್ಮ ವಶಕ್ಕೆ ತೆಗೆದುಕೊಳ್ಳಲಾರರು.
ಅವರು ಪ್ರಪಂಚವನ್ನು ಇನ್ನೆಂದಿಗೂ ತಮ್ಮ ಪಟ್ಟಣಗಳಿಂದ ತುಂಬಿಸಲಾರರು.
22 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನು ಎದ್ದುನಿಂತು ಅವರಿಗೆ ವಿರುದ್ಧವಾಗಿ ಹೋರಾಡುವೆನು. ನಾನು ಹೆಸರುವಾಸಿಯಾದ ಬಾಬಿಲೋನ್ ನಗರವನ್ನು ನಾಶಮಾಡುವೆನು. ಬಾಬಿಲೋನಿನ ಎಲ್ಲಾ ಜನರನ್ನು ನಾಶಮಾಡುವೆನು. ಅವರ ಮಕ್ಕಳನ್ನು ಮತ್ತು ಮರಿಮಕ್ಕಳನ್ನು ನಾಶಮಾಡುವೆನು” ಯೆಹೋವನೇ ಈ ಮಾತುಗಳನ್ನು ನುಡಿದಿದ್ದಾನೆ.
23 ಯೆಹೋವನು ಹೇಳುವುದೇನೆಂದರೆ: “ನಾನು ಬಾಬಿಲೋನನ್ನು ಪ್ರಾಣಿಗಳ ವಾಸಸ್ಥಳವನ್ನಾಗಿ ಬದಲಾಯಿಸುವೆನು. ಆ ಸ್ಥಳವು ಜವುಗು ನೆಲವಾಗಿರುವುದು. ‘ನಾಶನವೆಂಬ ಪೊರಕೆಯಿಂದ’ ಅದನ್ನು ಗುಡಿಸುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.
ದೇವರು ಅಶ್ಶೂರವನ್ನು ಶಿಕ್ಷಿಸುವನು
24 ಸರ್ವಶಕ್ತನಾದ ಯೆಹೋವನು ಒಂದು ವಾಗ್ದಾನವನ್ನು ಮಾಡಿದ್ದಾನೆ. ಆತನು ಹೇಳುವುದೇನೆಂದರೆ: “ನಾನು ಯೋಚಿಸಿದಂತೆಯೇ ಇವೆಲ್ಲವೂ ನೆರವೇರುವುದು ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ. 25 ನನ್ನ ದೇಶದಲ್ಲಿ ಅಶ್ಶೂರದ ರಾಜನನ್ನು ನಾಶಮಾಡುವೆನು. ನನ್ನ ಪರ್ವತಗಳ ಮೇಲೆ ಆ ರಾಜನ ಮೇಲೆ ತುಳಿದುಕೊಂಡು ನಡೆದಾಡುವೆನು. ಆ ರಾಜನು ನನ್ನ ಜನರನ್ನು ಗುಲಾಮರನ್ನಾಗಿ ಮಾಡಿದನು. ಅವರ ಹೆಗಲಿನ ಮೇಲೆ ನೊಗವನ್ನಿಟ್ಟನು. ಆ ನೊಗವು ಯೆಹೂದದ ಹೆಗಲಿನಿಂದ ತೆಗೆಯಲ್ಪಡುವದು. 26 ಹೀಗೆ ಮಾಡಲು ನಾನೇ ಆಲೋಚಿಸಿದ್ದೇನೆ. ನನ್ನ ಯೋಜನೆಯಂತೆಯೇ ಘಟನೆಗಳು ಸಂಭವಿಸುತ್ತವೆ. ನನ್ನ ಭುಜಬಲದಿಂದ ಜನಾಂಗಗಳನ್ನು ಶಿಕ್ಷಿಸುವೆನು.”
27 ಸರ್ವಶಕ್ತನಾದ ಯೆಹೋವನ ಈ ಸಂಕಲ್ಪವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಜನರನ್ನು ದಂಡಿಸಲು ಆತನು ಕೈಮೇಲೆತ್ತಿದಾಗ ಯಾರೂ ಆತನನ್ನು ತಡೆಯಲಾರರು.
ಫಿಲಿಷ್ಟಿಯ ಕುರಿತು ದೈವಸಂದೇಶ
28 ಅರಸನಾದ ಆಹಾಜನು ಸತ್ತ ವರ್ಷದಲ್ಲಿ ಈ ದುಃಖದ ಸಂದೇಶವು ಕೊಡಲ್ಪಟ್ಟಿತು:
29 ಫಿಲಿಷ್ಟಿಯ ದೇಶವೇ, ನಿನ್ನನ್ನು ಹೊಡೆದ ಅರಸನು ಸತ್ತದ್ದಕ್ಕಾಗಿ ನೀನು ಸಂತೋಷಗೊಂಡಿರುವೆ. ಆದರೆ ನೀನು ಸಂತೋಷಗೊಳ್ಳಬಾರದು. ಅವನ ರಾಜ್ಯಭಾರವು ಅಂತ್ಯವಾಯಿತು ಎಂಬುದು ಸತ್ಯ. ಆದರೆ ಅರಸನ ಮಗನು ರಾಜ್ಯವಾಳುವನು. ಒಂದು ಹಾವು ಇನ್ನೊಂದು ಭಯಂಕರ ಹಾವನ್ನು ಹೆರುವಂತೆ ಅದು ಇರುವದು. ಈ ಹೊಸ ಅರಸನು ನಿಮಗೆ ವೇಗವಾದ ಮತ್ತು ಅಪಾಯಕರವಾದ ಹಾವಾಗುವನು. 30 ಆದರೆ ನನ್ನ ಬಡಜನರು ಸುರಕ್ಷಿತವಾಗಿ ಊಟಮಾಡುವರು. ಅವರ ಮಕ್ಕಳೂ ಸುರಕ್ಷಿತವಾಗಿರುವರು. ನನ್ನ ಬಡಜನರು ಹಾಯಾಗಿ ಮಲಗಿ ಸುರಕ್ಷಿತರಾಗಿರುವರು. ಆದರೆ ನಿಮ್ಮ ಸಂತಾನದವರು ಹಸಿವೆಯಿಂದ ಸಾಯುವಂತೆ ಮಾಡುವೆನು. ನಿಮ್ಮ ದೇಶದಲ್ಲಿ ಉಳಿದಿರುವ ಜನರೆಲ್ಲರೂ ಸಾಯುವರು.
31 ಮಹಾದ್ವಾರಗಳ ಬಳಿಯಲ್ಲಿರುವ ಜನರೇ, ಗೋಳಾಡಿರಿ!
ಪಟ್ಟಣದೊಳಗಿರುವ ಜನರೇ, ಕೂಗಾಡಿರಿ!
ಫಿಲಿಷ್ಟಿಯದಲ್ಲಿರುವವರೆಲ್ಲರೂ ಭಯಪಡುವರು.
ನಿಮ್ಮ ಧೈರ್ಯವು ಮೇಣದಂತೆ ಕರಗಿಹೋಗುವದು.
ಇಗೋ, ಉತ್ತರದಿಕ್ಕಿನಲ್ಲಿ ಧೂಳು ಏಳುತ್ತಿದೆ.
ಅಶ್ಶೂರದ ಸೈನ್ಯವು ಬರುತ್ತಿದೆ.
ಅವರೆಲ್ಲರೂ ಬಲಶಾಲಿಗಳಾದ ವೀರರು.
32 ಆ ಸೈನ್ಯದವರು ತಮ್ಮ ದೇಶಕ್ಕೆ ಸಂದೇಶವಾಹಕರನ್ನು ಕಳುಹಿಸುತ್ತಾರೆ.
ಆ ಸಂದೇಶವು ಏನಿರಬಹುದು?
“ಫಿಲಿಷ್ಟಿಯರು ಸೋತುಹೋದರು.
ಆದರೆ ಯೆಹೋವನು ಚೀಯೋನನ್ನು ಬಲಪಡಿಸಿದ್ದಾನೆ.
ಆತನ ಬಡಜನರು ರಕ್ಷಣೆಗಾಗಿ ಅಲ್ಲಿಗೆ ಹೋಗಿದ್ದಾರೆ” ಎಂಬುದೇ ಆ ಸಂದೇಶ.
ಜೀವಂತವಾದ ಕಲ್ಲು ಮತ್ತು ಪವಿತ್ರವಾದ ದೇಶ
2 ಆದ್ದರಿಂದ ಇತರ ಜನರಿಗೆ ಕೇಡುಮಾಡಬೇಡಿ, ಸುಳ್ಳಾಡದಿರಿ, ಜನರನ್ನು ಮೋಸಗೊಳಿಸಬೇಡಿ, ಹೊಟ್ಟೆಕಿಚ್ಚುಪಡದಿರಿ, ಜನರ ಬಗ್ಗೆ ಕೆಟ್ಟಮಾತುಗಳನ್ನು ಆಡದಿರಿ. ಇವುಗಳನ್ನೆಲ್ಲಾ ನಿಮ್ಮ ಜೀವಿತದಿಂದ ಹೊರಕ್ಕೆ ಹಾಕಿರಿ. 2 ಹೊಸದಾಗಿ ಹುಟ್ಟಿದ ಕೂಸುಗಳಂತಿರಿ. ನಿಮ್ಮ ಆತ್ಮವನ್ನು ಪೋಷಿಸುವಂಥ ಶುದ್ಧ ಹಾಲನ್ನು (ದೇವರ ವಾಕ್ಯವೆಂಬ) ಬಯಸಿರಿ. ನೀವು ಅದನ್ನು ಕುಡಿಯುವುದರಿಂದ ಬೆಳವಣಿಗೆ ಹೊಂದಿ ರಕ್ಷಿಸಲ್ಪಡುವಿರಿ. 3 ನೀವು ಈಗಾಗಲೇ ದೇವರ ಒಳ್ಳೆಯತನವನ್ನು ರುಚಿ ನೋಡಿದ್ದೀರಿ.
4 ಪ್ರಭುವಾದ ಯೇಸುವೇ ಜೀವವುಳ್ಳ “ಕಲ್ಲು.” ಈ ಲೋಕದ ಜನರು ತಮಗೆ ಆ “ಕಲ್ಲು” (ಯೇಸು) ಬೇಡವೆಂದು ತೀರ್ಮಾನಿಸಿದರು. ಆದರೆ ಆತನು ದೇವರಿಂದ ಆರಿಸಲ್ಪಟ್ಟ “ಕಲ್ಲು.” ಆತನು ದೇವರಿಗೆ ಅಮೂಲ್ಯನಾಗಿದ್ದಾನೆ. ಆದ್ದರಿಂದ ಆತನ ಹತ್ತಿರಕ್ಕೆ ಬನ್ನಿರಿ. 5 ನೀವೂ ಸಹ ಜೀವವುಳ್ಳ ಕಲ್ಲುಗಳಾಗಿದ್ದೀರಿ. ಆತ್ಮಸಂಬಂಧವಾದ ದೇವಾಲಯವಾಗುವದಕ್ಕಾಗಿ ನೀವೇ ಕಟ್ಟಲ್ಪಡುತ್ತಿದ್ದೀರಿ; ದೇವರಿಂದ ಸ್ವೀಕೃತವಾಗುವಂಥ ಆತ್ಮಿಕ ಯಜ್ಞಗಳನ್ನು ಯೇಸು ಕ್ರಿಸ್ತನ ಮೂಲಕ ದೇವರಿಗೆ ಅರ್ಪಿಸುವ ಪವಿತ್ರ ಯಾಜಕರಾಗಿದ್ದೀರಿ. 6 ಪವಿತ್ರ ಗ್ರಂಥವು ಹೇಳುವುದೇನೆಂದರೆ,
“ನಾನು ಅಮೂಲ್ಯವಾದ ಮೂಲೆಗಲ್ಲನ್ನು ಆರಿಸಿದ್ದೇನೆ.
ನಾನು ಆ ಕಲ್ಲನ್ನು ಚಿಯೋನಿನಲ್ಲಿ ಇಟ್ಟಿರುವೆನು;
ಆತನನ್ನು ನಂಬುವವನು ಎಂದಿಗೂ ಆಶಾಭಂಗಪಡುವುದಿಲ್ಲ”(A)
7 ನಂಬಿಕೆಯುಳ್ಳ ಜನರಾದ ನಿಮಗೆ ಆ ಕಲ್ಲು (ಯೇಸು) ಹೆಚ್ಚು ಬೆಲೆಯುಳ್ಳದ್ದು. ಆದರೆ ನಂಬದ ಜನರಿಗೆ ಆತನು ಇಂತೆಂದಿದ್ದಾನೆ:
“ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ
ಮೂಲೆಗಲ್ಲಾಯಿತು.”(B)
8 ನಂಬದಿರುವ ಜನರಿಗೆ ಆತನು:
“ಜನರನ್ನು ಮುಗ್ಗರಿಸುವ ಕಲ್ಲೂ
ಜನರನ್ನು ಬೀಳಿಸುವ ಕಲ್ಲೂ ಆಗಿದ್ದಾನೆ.”(C)
ದೇವರ ಮಾತಿಗೆ ಅವಿಧೇಯರಾಗುವುದರಿಂದಲೇ ಜನರು ಮುಗ್ಗರಿಸಿ ಬೀಳುವರು. ಆ ಜನರಿಗೆ ಹೀಗಾಗಬೇಕೆಂಬುದು ದೇವರ ಯೋಜನೆಯಾಗಿತ್ತು.
9 ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನರೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ದೇವರು ತಾನು ಮಾಡಿದ ಅತ್ಯಾಶ್ಚರ್ಯ ಸಂಗತಿಗಳನ್ನು ತಿಳಿಸಲು ನಿಮ್ಮನ್ನು ಅಂಧಕಾರದಿಂದ (ಪಾಪಗಳಿಂದ) ತನ್ನ ಅದ್ಭುತವಾದ ಬೆಳಕಿಗೆ ಕರೆತಂದನು.
10 ಒಂದು ಕಾಲದಲ್ಲಿ, ನೀವು ದೇವರ ಜನರಾಗಿರಲಿಲ್ಲ.
ಆದರೆ ಈಗ ನೀವು ದೇವರ ಜನರಾಗಿದ್ದೀರಿ.
ಮೊದಲು ನೀವು ಕರುಣೆಯನ್ನು ಹೊಂದಿರಲಿಲ್ಲ.
ಆದರೆ ಈಗ ನೀವು ದೇವರ ಕರುಣೆಯನ್ನು ಹೊಂದಿಕೊಂಡಿದ್ದೀರಿ.[a]
ದೇವರಿಗಾಗಿ ಜೀವಿಸಿ
11 ಪ್ರಿಯ ಸ್ನೇಹಿತರೇ, ನೀವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಪರದೇಶದವರಂತೆ ಇದ್ದೀರಿ. ಆದ್ದರಿಂದ ನಿಮ್ಮ ದೇಹಗಳಿಗೆ ಇಷ್ಟವಾದ ಕೆಟ್ಟಸಂಗತಿಗಳಿಂದ ದೂರವಾಗಿರಿ. ಇವು ನಿಮ್ಮ ಜೀವಾತ್ಮಕ್ಕೆ ವಿರುದ್ಧವಾಗಿ ಹೋರಾಡುತ್ತವೆ. 12 ನಂಬಿಕೆಯಿಲ್ಲದ ಜನರು ನಿಮ್ಮ ಸುತ್ತಮುತ್ತಲೆಲ್ಲಾ ವಾಸಿಸುತ್ತಿದ್ದಾರೆ. ನೀವು ತಪ್ಪು ಮಾಡುತ್ತಿರುವಿರೆಂದು ಅವರು ಹೇಳುವ ಸಾಧ್ಯತೆಯಿದೆ. ಆದ್ದರಿಂದ ಒಳ್ಳೆಯವರಾಗಿ ಬಾಳಿರಿ. ನೀವು ಮಾಡುವ ಒಳ್ಳೆಯ ಕಾರ್ಯಗಳನ್ನು ಅವರು ನೋಡುವರು ಮತ್ತು ದೇವರು ಪ್ರತ್ಯಕ್ಷನಾದ ದಿನದಂದು ಆತನನ್ನು ಕೊಂಡಾಡುವರು.
ಈ ಲೋಕದ ಪ್ರತಿಯೊಬ್ಬ ಅಧಿಕಾರಿಗೂ ವಿಧೇಯರಾಗಿರಿ
13 ಈ ಲೋಕದ ಅಧಿಕಾರಿಗಳಿಗೆ ವಿಧೇಯರಾಗಿರಿ. ಪ್ರಭುವಿಗಾಗಿ ಇದನ್ನು ಮಾಡಿರಿ. ಸರ್ವಾಧಿಕಾರಿಯಾದ ರಾಜನಿಗೆ ವಿಧೇಯರಾಗಿರಿ. 14 ರಾಜನು ಕಳುಹಿಸುವ ಅಧಿಕಾರಿಗಳಿಗೆ ವಿಧೇಯರಾಗಿರಿ. ತಪ್ಪು ಮಾಡಿದವರನ್ನು ದಂಡಿಸಲೂ ಒಳ್ಳೆಯದನ್ನು ಮಾಡಿದವರನ್ನು ಹೊಗಳಲೂ ಅವರನ್ನು ಕಳುಹಿಸಲಾಗಿದೆ. 15 ನೀವು ಒಳ್ಳೆಯದನ್ನು ಮಾಡುವಾಗ ನಿಮ್ಮನ್ನು ಕುರಿತು ಕೆಟ್ಟಮಾತುಗಳನ್ನು ಆಡಲು ಮೂಢರಿಗೆ ಸಾಧ್ಯವಾಗುವುದಿಲ್ಲ. ದೇವರ ಅಪೇಕ್ಷೆಯೂ ಇದೇ ಆಗಿದೆ. 16 ಸ್ವತಂತ್ರ ಹೊಂದಿದವರಂತೆ ಜೀವಿಸಿರಿ. ಆದರೆ ನೀವು ಮಾಡುವ ಕೆಟ್ಟಕಾರ್ಯಗಳನ್ನು ಮರೆಮಾಡಲು ಆ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿ. ನೀವು ದೇವರ ಸೇವೆಯನ್ನು ಮಾಡುತ್ತಾ ಜೀವಿಸಿರಿ. 17 ಜನರೆಲ್ಲರಿಗೂ ಗೌರವವನ್ನು ತೋರಿಸಿರಿ. ದೇವರ ಕುಟುಂಬದ ಸಹೋದರ ಸಹೋದರಿಯರೆಲ್ಲರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ ಮತ್ತು ರಾಜನನ್ನು ಗೌರವಿಸಿರಿ.
ಕ್ರಿಸ್ತನ ಸಂಕಟದ ಉದಾಹರಣೆ
18 ಸೇವಕರೇ, ನಿಮ್ಮ ಒಡೆಯರ ಅಧಿಕಾರವನ್ನು ಒಪ್ಪಿಕೊಳ್ಳಿರಿ. ಇದನ್ನು ತುಂಬಾ ಗೌರವದಿಂದ ಮಾಡಿರಿ. ಒಳ್ಳೆಯವರಾದ ಮತ್ತು ದಯಾಪರರಾದ ಒಡೆಯರಿಗೆ ನೀವು ವಿಧೇಯರಾಗಿರಬೇಕು ಮತ್ತು ಕೆಟ್ಟವರಾದ ಒಡೆಯರಿಗೂ ವಿಧೇಯರಾಗಿರಬೇಕು. 19 ಒಬ್ಬನು ಅನ್ಯಾಯವಾಗಿ ಸಂಕಟಕ್ಕೆ ಒಳಗಾದಾಗ ದೇವರಿಗಾಗಿ ಅದನ್ನು ಸಹಿಸಿಕೊಂಡರೆ ದೇವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. 20 ಆದರೆ ನಿಮ್ಮ ತಪ್ಪಿಗಾಗಿ ನೀವು ದಂಡಿಸಲ್ಪಟ್ಟರೆ ಆ ದಂಡನೆಯನ್ನು ನೀವು ಅನುಭವಿಸಿದ್ದಕ್ಕೆ ನಿಮಗೇನೂ ಕೀರ್ತಿ ಬರುವುದಿಲ್ಲ. ಆದರೆ ನೀವು ಒಳ್ಳೆಯದನ್ನು ಮಾಡಿದ್ದರಿಂದ ಸಂಕಟಕ್ಕೆ ಒಳಗಾಗಿ ಅದನ್ನು ತಾಳ್ಮೆಯಿಂದ ಸಹಿಸಿಕೊಂಡರೆ ಅದು ದೇವರನ್ನು ಸಂತೋಷ ಪಡಿಸುತ್ತದೆ. 21 ಇದಕ್ಕಾಗಿಯೇ ನಿಮ್ಮನ್ನು ಕರೆಯಲಾಯಿತು. ನೀವು ಅನುಸರಿಸತಕ್ಕ ಮಾದರಿಯು ಕ್ರಿಸ್ತನೇ ಆಗಿದ್ದಾನೆ. ಆತನು ಮಾಡಿದಂತೆ ನೀವೂ ಮಾಡಿರಿ. ನೀವು ಸಂಕಟವನ್ನು ಅನುಭವಿಸುವಾಗ ತಾಳ್ಮೆಯಿಂದಿರಬೇಕು, ಏಕೆಂದರೆ ಕ್ರಿಸ್ತನು ನಿಮಗಾಗಿ ಸಂಕಟಪಟ್ಟನು.
22 “ಆತನು (ಕ್ರಿಸ್ತನು) ಪಾಪವನ್ನು ಮಾಡಲಿಲ್ಲ.
ಆತನ ಬಾಯಿಂದ ಯಾವ ಸುಳ್ಳು ಮಾತೂ ಬರಲಿಲ್ಲ.”(D)
23 ಜನರು ಕ್ರಿಸ್ತನನ್ನು ಬಯ್ದರೂ ಆತನು ಅವರನ್ನು ಬಯ್ಯಲಿಲ್ಲ. ಆತನು ಸಂಕಟವನ್ನು ಅನುಭವಿಸಿದರೂ ಜನರನ್ನು ಹೆದರಿಸಲಿಲ್ಲ. ಆತನು ತನ್ನ ಕಾರ್ಯವನ್ನು ದೇವರಿಗೆ ವಹಿಸಿದನು. ಸರಿಯಾದ ನ್ಯಾಯತೀರ್ಪು ನೀಡುವಾತನು ದೇವರೊಬ್ಬನೇ. 24 ಕ್ರಿಸ್ತನು ನಮ್ಮ ಪಾಪಗಳನ್ನೆಲ್ಲಾ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನೇರಿದನು. ನಾವು ಪಾಪಕ್ಕೋಸ್ಕರ ಜೀವಿಸದೆ, ನೀತಿವಂತರಾಗಿ ಜೀವಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು. ಆತನ (ಕ್ರಿಸ್ತನ) ಬಾಸುಂಡೆಗಳಿಂದ ನಿಮಗೆ ಗುಣವಾಯಿತು. 25 ನೀವು ದಾರಿ ತಪ್ಪಿದ ಕುರಿಗಳಾಗಿದ್ದಿರಿ. ಆದರೆ ಈಗ ನೀವು ನಿಮ್ಮ ಕುರುಬನ ಬಳಿಗೆ ಅಂದರೆ ನಿಮ್ಮ ಆತ್ಮಗಳನ್ನು ಕಾಪಾಡುವಾತನ ಬಳಿಗೆ ಹಿಂತಿರುಗಿ ಬಂದಿರುವಿರಿ.
Kannada Holy Bible: Easy-to-Read Version. All rights reserved. © 1997 Bible League International