Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 21

ಕಾನಾನ್ಯರೊಡನೆ ಯುದ್ಧ

21 ಕಾನಾನ್ಯನಾಗಿದ್ದ ಅರಾದಿನ ರಾಜನು ನೆಗೆವ್‌ನಲ್ಲಿದ್ದುಕೊಂಡು ರಾಜ್ಯಭಾರ ಮಾಡುತ್ತಿದ್ದನು. ಇಸ್ರೇಲರು ಅತಾರೀಮಿನ ಮಾರ್ಗವಾಗಿ ಬರುತ್ತಾರೆಂಬ ಸುದ್ದಿಯು ಅವನಿಗೆ ಮುಟ್ಟಿತು. ಆದ್ದರಿಂದ ಅವನು ಹೋಗಿ ಇಸ್ರೇಲರೊಡನೆ ಯುದ್ಧಮಾಡಿ ಅವರಲ್ಲಿ ಕೆಲವರನ್ನು ಸೆರೆಹಿಡಿದನು. ಇಸ್ರೇಲರು ಯೆಹೋವನಿಗೆ ಹರಕೆಯನ್ನು ಮಾಡಿಕೊಂಡು, “ನಾವು ಈ ಜನರನ್ನು ಜಯಿಸುವಂತೆ ನೀನು ಅನುಗ್ರಹಿಸಿದರೆ ನಾವು ಅವರ ಗ್ರಾಮಗಳನ್ನು ಪೂರ್ಣವಾಗಿ ಹಾಳುಮಾಡಿ ಯೆಹೋವನಿಗಾಗಿಯೇ ಬಿಟ್ಟುಬಿಡುತ್ತೇವೆ” ಅಂದರು.

ಯೆಹೋವನು ಅವರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಜಯಿಸಲು ಸಹಾಯಮಾಡಿದ್ದರಿಂದ ಅವರು ಕಾನಾನ್ಯರನ್ನೂ ಅವರ ಗ್ರಾಮಗಳನ್ನೂ ಸಂಪೂರ್ಣವಾಗಿ ನಾಶಮಾಡಿಬಿಟ್ಟರು. ಆದ್ದರಿಂದ ಆ ಪ್ರದೇಶಕ್ಕೆ ಹೊರ್ಮಾ ಎಂದು ಹೆಸರಾಯಿತು.

ತಾಮ್ರದ ಸರ್ಪ

ಇಸ್ರೇಲರು ಹೋರ್ ಬೆಟ್ಟದಿಂದ ಹೊರಟು ಕೆಂಪು ಸಮುದ್ರದ ಮಾರ್ಗವಾಗಿ ಪ್ರಯಾಣಮಾಡಿದರು. ಅವರು ಎದೋಮ್ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಹೀಗೆ ಮಾಡಿದರು. ಜನರು ಮಾರ್ಗದಲ್ಲಿ ತಾಳ್ಮೆ ತಪ್ಪಿದರು. ಆಗ ಅವರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತಾಡುತ್ತಾ, “ಈ ಮರುಭೂಮಿಯಲ್ಲಿ ಸಾಯಲೆಂದು ನಮ್ಮನ್ನು ಈಜಿಪ್ಟಿನಿಂದ ಯಾಕೆ ಬರಮಾಡಿದೆ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ. ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಯಿತು” ಎಂದು ಹೇಳಿದರು.

ಆದ್ದರಿಂದ ಯೆಹೋವನು ಅವರ ಮಧ್ಯದಲ್ಲಿ ವಿಷಕರವಾದ ಹಾವುಗಳನ್ನು ಕಳುಹಿಸಿದನು. ಅವುಗಳು ಅವರನ್ನು ಕಚ್ಚಿದ್ದರಿಂದ ಅನೇಕ ಇಸ್ರೇಲರು ಸತ್ತರು. ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿನಗೂ ಯೆಹೋವನಿಗೂ ವಿರೋಧವಾಗಿ ಮಾತಾಡಿ ಪಾಪ ಮಾಡಿದ್ದೇವೆ. ಈ ಸರ್ಪಗಳನ್ನು ನಮ್ಮಿಂದ ತೊಲಗಿ ಹೋಗುವಂತೆ ಪ್ರಾರ್ಥನೆ ಮಾಡು” ಎಂದು ಬೇಡಿಕೊಂಡರು. ಮೋಶೆ ಜನರಿಗೋಸ್ಕರ ಪ್ರಾರ್ಥಿಸಿದನು.

ಯೆಹೋವನು ಮೋಶೆಗೆ, “ನೀನು ತಾಮ್ರದಿಂದ ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು, ಸರ್ಪಗಳಿಂದ ಕಚ್ಚಿಸಿಕೊಂಡವನು ಅದನ್ನು ನೋಡಿದರೆ ಬದುಕಿಕೊಳ್ಳುವನು” ಎಂದು ಆಜ್ಞಾಪಿಸಿದನು. ಆದ್ದರಿಂದ ಮೋಶೆ ತಾಮ್ರದಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಕಚ್ಚಿಸಿಕೊಂಡಿದ್ದವನು ಆ ತಾಮ್ರದ ಸರ್ಪವನ್ನು ನೋಡಿ ಬದುಕಿಕೊಂಡನು.

ಹೋರ್ ಬೆಟ್ಟದಿಂದ ಮೋವಾಬಿಗೆ

10 ಇಸ್ರೇಲರು ಪ್ರಯಾಣವನ್ನು ಮುಂದುವರಿಸಿ ಓಬೋತ್ ಎಂಬ ಸ್ಥಳದಲ್ಲಿ ಇಳಿದುಕೊಂಡರು. 11 ಬಳಿಕ ಅವರು ಓಬೋತಿನಿಂದ ಇಯ್ಯೇ ಅಬಾರೀಮಿಗೆ ಹೋದರು. ಇದು ಮೋವಾಬಿನ ಪೂರ್ವದಲ್ಲಿರುವ ಮರುಭೂಮಿಯ ಪ್ರದೇಶದಲ್ಲಿತ್ತು. 12 ಬಳಿಕ ಜನರು ಅಲ್ಲಿಂದ ಹೊರಟು ಜೆರೆದ್ ಕಣಿವೆಗೆ ಪ್ರಯಾಣ ಮಾಡಿ ಅಲ್ಲಿ ಇಳಿದುಕೊಂಡರು. 13 ಅವರು ಅಲ್ಲಿಂದ ಹೊರಟು ಅರ್ನೋನ್ ಹೊಳೆಯ ಆಚೆ ಕಡೆಯಲ್ಲಿ ಅಂದರೆ ಅಮೋರಿಯರ ಪ್ರದೇಶದೊಳಗೆ ವಿಸ್ತರಿಸಿರುವ ಮರುಭೂಮಿಯಲ್ಲಿ ಪಾಳೆಯ ಮಾಡಿಕೊಂಡರು. ಅರ್ನೋನ್ ನದಿಯು ಮೋವಾಬ್ಯರಿಗೂ ಅಮೋರಿಯರಿಗೂ ಗಡಿಯಾಗಿದೆ. 14 ಅದಕ್ಕನುಸಾರವಾಗಿ “ಯೆಹೋವನ ಯುದ್ಧಗಳು” ಎಂಬ ಗ್ರಂಥದಲ್ಲಿ,

“ಸೂಫದಲ್ಲಿರುವ ವಾಹೇಬನ್ನು, ಅರ್ನೋನ್ ಹೊಳೆಗೆ ಕೂಡುವ ಕಣಿವೆಗಳನ್ನು ಮತ್ತು 15 ಆರ್ ವಸತಿ ಪ್ರದೇಶಕ್ಕೆ ನಡೆಸುವ ಮೋವಾಬಿನ ಗಡಿಯ ಉದ್ದಕ್ಕೂ ಇರುವ ಕಣಿವೆಗಳನ್ನು ದಾಟಿದ್ದಾಯಿತು” ಎಂದು ಬರೆದಿದೆ.

16 ಅಲ್ಲಿಂದ ಅವರು ಬೇರ್ ಎಂಬ ಸ್ಥಳಕ್ಕೆ ಬಂದರು. “ಜನರನ್ನು ಕೂಡಿಸಿಕೊ, ನಾನು ಅವರಿಗೆ ನೀರನ್ನು ಕೊಡುವೆನು” ಎಂದು ಯೆಹೋವನು ಮೋಶೆಗೆ ಹೇಳಿದ್ದು ಈ ಬಾವಿಯ ಸ್ಥಳದಲ್ಲೇ. 17 ಆಗ ಇಸ್ರೇಲರು ಈ ಹಾಡನ್ನು ಹಾಡಿದರು:

“ಬಾವಿಯೇ, ಉಕ್ಕುತ್ತಾ ಬಾ!
    ಜನರೇ, ಅದರ ಕುರಿತು ಹಾಡಿ!
18 ಪ್ರಧಾನರು ಈ ಬಾವಿಯನ್ನು ತೋಡಿದರು.
    ಪ್ರಮುಖ ನಾಯಕರು ಈ ಬಾವಿಯನ್ನು ತೋಡಿದರು.
ಅವರು ತಮ್ಮ ದೊಣ್ಣೆಗಳಿಂದ ಮತ್ತು ಕೋಲುಗಳಿಂದ ಈ ಬಾವಿಯನ್ನು ಅಗೆದರು.”

ಆಮೇಲೆ ಜನರು “ಮತ್ತಾನ” ಎಂಬ ಮರುಭೂಮಿಯಿಂದ ಹೊರಟರು. 19 ಬಳಿಕ ಅವರು ಮತ್ತಾನದಿಂದ ನಹಲೀಯೇಲಿಗೆ ಪ್ರಯಾಣ ಮಾಡಿದರು. ಬಳಿಕ ಅವರು ನಹಲೀಯೇಲಿನಿಂದ ಬಾಮೋತಿಗೆ ಪ್ರಯಾಣ ಮಾಡಿದರು. 20 ಜನರು ಬಾಮೋತಿನಿಂದ ಮೋವಾಬ್ಯರ ಪ್ರದೇಶದ ಕಣಿವೆಗೆ ಪ್ರಯಾಣ ಮಾಡಿದರು. ಪಿಸ್ಗಾ ಬೆಟ್ಟದ ತುದಿಯ ಸಮೀಪದಲ್ಲಿ ನಿಂತುಕೊಂಡರೆ ಮರುಭೂಮಿಯು ಕಾಣುವುದು.

ಸೀಹೋನ್ ಮತ್ತು ಓಗ್

21 ಇಸ್ರೇಲರು ಸಂದೇಶಕರನ್ನು ಅಮೋರಿಯರ ಅರಸನಾದ ಸೀಹೋನನ ಬಳಿಗೆ ಕಳುಹಿಸಿದರು. ಅವರು ಅರಸನಿಗೆ,

22 “ನಿಮ್ಮ ದೇಶವನ್ನು ಹಾದುಹೋಗುವುದಕ್ಕೆ ನಮಗೆ ಅಪ್ಪಣೆಕೊಡು. ನಿಮ್ಮ ಹೊಲಗಳಿಗಾಗಲಿ ದ್ರಾಕ್ಷಿತೋಟಗಳಿಗಾಗಲಿ ನಾವು ತಿರುಗಿಕೊಳ್ಳುವುದಿಲ್ಲ. ನಿಮ್ಮ ಯಾವ ಬಾವಿಗಳಿಂದಲೂ ನಾವು ನೀರು ಕುಡಿಯುವುದಿಲ್ಲ. ನಾವು ನಿಮ್ಮ ದೇಶವನ್ನು ದಾಟಿಹೋಗುವ ತನಕ ರಾಜಮಾರ್ಗದಲ್ಲಿಯೇ ಪ್ರಯಾಣ ಮಾಡುತ್ತೇವೆ” ಎಂದು ಹೇಳಿದರು.

23 ಆದರೆ ಅರಸನಾದ ಸೀಹೋನನು ಇಸ್ರೇಲರಿಗೆ ತನ್ನ ದೇಶದ ಮೂಲಕ ಹಾದುಹೋಗಲು ಬಿಡಲಿಲ್ಲ. ಅರಸನು ತನ್ನ ಇಡೀ ಸೈನ್ಯವನ್ನು ಕೂಡಿಸಿಕೊಂಡು ಇಸ್ರೇಲರ ವಿರುದ್ಧ ಯುದ್ಧಮಾಡಲು ಮರುಭೂಮಿಯ ಕಡೆಗೆ ಹೊರಟನು. ಅವನು ಯಹಜ್ ಎಂಬಲ್ಲಿಗೆ ಬಂದನು; ಅಲ್ಲಿ ರಾಜನ ಸೈನ್ಯವು ಇಸ್ರೇಲರಿಗೆ ವಿರೋಧವಾಗಿ ಯುದ್ಧಮಾಡಿತು.

24 ಆದರೆ ಇಸ್ರೇಲರು ಅರಸನನ್ನು ಕೊಂದುಹಾಕಿದರು. ಬಳಿಕ ಅವರು ಅರ್ನೋನ್ ನದಿಯಿಂದ ಹಿಡಿದು ಯಬ್ಬೋಕ್ ನದಿಯವರೆಗಿರುವ ಅವನ ಭೂಮಿಯನ್ನು ವಶಪಡಿಸಿಕೊಂಡರು. ಅವರು ಅಮ್ಮೋನಿಯರ ಮೇರೆಯವರೆಗಿರುವ ಪ್ರದೇಶವನ್ನೆಲ್ಲಾ ವಶಪಡಿಸಿಕೊಂಡರು. ಅಮ್ಮೋನಿಯರು ತಮ್ಮ ಗಡಿಯನ್ನು ಭದ್ರವಾಗಿ ರಕ್ಷಿಸಿಕೊಂಡದ್ದರಿಂದ ಇಸ್ರೇಲರು ಮುಂದಕ್ಕೆ ಹೋಗಲಿಲ್ಲ. 25 ಇಸ್ರೇಲರು ಅಮೋರಿಯರ ಪಟ್ಟಣಗಳನ್ನೆಲ್ಲಾ ವಶಪಡಿಸಿಕೊಂಡು ಅವುಗಳಲ್ಲಿ ವಾಸಿಸಿದರು. ಅವರು ಹೆಷ್ಬೋನನ್ನು ಮತ್ತು ಅದರ ಸುತ್ತಲಿರುವ ಎಲ್ಲಾ ಚಿಕ್ಕ ಪಟ್ಟಣಗಳನ್ನು ಸಹ ವಶಪಡಿಸಿಕೊಂಡರು. 26 ಹೆಷ್ಬೋನಿನಲ್ಲಿ ಅಮೋರಿಯರ ಅರಸನಾದ ಸೀಹೋನನು ವಾಸಿಸುತ್ತಿದ್ದನು. ಸೀಹೋನನು ಮೊದಲಿನ ಮೋವಾಬ್ಯರ ಅರಸನೊಡನೆ ಯುದ್ಧ ಮಾಡಿದ್ದನು. ಸೀಹೋನನು ಅರ್ನೋನ್ ನದಿಯವರೆಗಿರುವ ಆ ರಾಜನ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಿದ್ದನು. 27 ಆದಕಾರಣ ಹಾಡುವವರು ಈ ಗೀತೆಯನ್ನು ಹಾಡುತ್ತಾರೆ:

“ಹೆಷ್ಬೋನಿಗೆ, ಬಾ! ಮತ್ತೆ ಅದನ್ನು ನಿರ್ಮಿಸು!
    ಸೀಹೋನನ ಪಟ್ಟಣವನ್ನು ಮತ್ತೆ ಸ್ಥಾಪಿಸಿರಿ.
28 ಹೆಷ್ಬೋನಿನಲ್ಲಿ ಬೆಂಕಿಯುಂಟಾಯಿತು.
    ಆ ಬೆಂಕಿ ಸೀಹೋನನ ಪಟ್ಟಣದಲ್ಲಿ ಉಂಟಾಯಿತು.
ಆ ಬೆಂಕಿಯು ಮೋವಾಬಿನಲ್ಲಿರುವ ‘ಆರ್’ ಪಟ್ಟಣವನ್ನು ನಾಶಮಾಡಿತು.
    ಅದು ಅರ್ನೋನ್ ನದಿಯ ಬಳಿಯಲ್ಲಿರುವ ಬೆಟ್ಟಗಳನ್ನು ಸುಟ್ಟುಹಾಕಿತು.
29 ಮೋವಾಬೇ, ಇದು ನಿನಗೆ ಕೆಟ್ಟದ್ದಾಗಿದೆ.
    ಕೆಮೋಷಿನ ಜನರೇ, ನೀವು ನಾಶವಾದಿರಿ.
ಅವನ ಪುತ್ರರು ಓಡಿಹೋದರು.
    ಅಮೋರಿಯ ರಾಜನಾದ ಸೀಹೋನನು ಅವನ ಪುತ್ರಿಯರನ್ನು ಸೆರೆ ಒಯ್ದನು.
30 ಆದರೆ ನಾವು ಆ ಅಮೋರಿಯರನ್ನು ಸೋಲಿಸಿದೆವು.
    ಹೆಷ್ಬೋನಿನಿಂದ ದೀಬೋನಿನವರೆಗಿರುವ ಅವರ ಪಟ್ಟಣಗಳನ್ನೂ
    ನಾಶೀಮಿನಿಂದ ನೋಫಹದ (ಮೇದೆಬಾದ ಹತ್ತಿರ) ವರೆಗಿರುವ ಪಟ್ಟಣಗಳನ್ನೂ ನಾವು ನಾಶಮಾಡಿದೆವು.”

31 ಹೀಗೆ ಇಸ್ರೇಲರು ಅಮೋರಿಯರ ದೇಶದಲ್ಲಿ ತಮ್ಮ ಪಾಳೆಯ ಹಾಕಿದರು.

32 ಮೋಶೆಯು ಯಗ್ಜೇರ್ ಪಟ್ಟಣದ ಗುಟ್ಟನ್ನು ತಿಳಿದುಕೊಂಡು ಬರುವುದಕ್ಕೆ ಕೆಲವು ಜನರನ್ನು ಕಳುಹಿಸಿದ ನಂತರ, ಇಸ್ರೇಲರು ಆ ಪಟ್ಟಣವನ್ನು ವಶಪಡಿಸಿಕೊಂಡರು. ಅದರ ಸುತ್ತಲಿರುವ ಚಿಕ್ಕ ಪಟ್ಟಣಗಳನ್ನು ಅವರು ವಶಪಡಿಸಿಕೊಂಡರು. ಇಸ್ರೇಲರು ಅಲ್ಲಿದ್ದ ಅಮೋರಿಯರನ್ನು ಓಡಿಸಿದರು.

33 ಬಳಿಕ ಇಸ್ರೇಲರು ಬೇರೆ ದಿಕ್ಕಿಗೆ ತಿರುಗಿ ಬಾಷಾನಿನ ಮಾರ್ಗವಾಗಿ ಪ್ರಯಾಣಮಾಡಿದರು. ಆಗ ಬಾಷಾನಿನ ಅರಸನಾದ ಓಗನು ಎದ್ರೈ ಎಂಬಲ್ಲಿ ಇಸ್ರೇಲರೊಂದಿಗೆ ಯುದ್ಧಮಾಡಲು ತನ್ನ ಸೈನ್ಯ ಸಮೇತವಾಗಿ ಬಂದನು.

34 ಆದರೆ ಯೆಹೋವನು ಮೋಶೆಗೆ, “ಆ ಅರಸನಿಗೆ ಹೆದರಬೇಡ. ನೀನು ಅವನನ್ನು ಸೋಲಿಸುವಂತೆ ಮಾಡುವೆನು. ನೀನು ಅವನ ಸೈನ್ಯವನ್ನು ಮತ್ತು ಅವನ ದೇಶವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವೆ. ಹೆಷ್ಬೋನಿನಲ್ಲಿ ವಾಸಿಸಿದ್ದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದಂತೆ ಇವನಿಗೂ ಸಹ ಮಾಡುವಿರಿ” ಅಂದನು.

35 ಇಸ್ರೇಲರು ಓಗನನ್ನೂ ಅವನ ಸೈನ್ಯವನ್ನೂ ಸೋಲಿಸಿದರು. ಅವರು ಅವನನ್ನೂ ಅವನ ಪುತ್ರರನ್ನೂ ಕೊಂದುಹಾಕಿ ಅವನ ಸೈನ್ಯವನ್ನೆಲ್ಲಾ ನಾಶಮಾಡಿದರು. ಯಾರನ್ನೂ ಜೀವಂತವಾಗಿ ಉಳಿಸಲಿಲ್ಲ. ಇಸ್ರೇಲರು ಅವನ ದೇಶವನ್ನು ವಶಪಡಿಸಿಕೊಂಡರು.

ಕೀರ್ತನೆಗಳು 60-61

ದಾವೀದನು ಅರಾಮ್ ನಹಾರಾಯಿಮ್ ಮತ್ತು ಅರಾಮ್ ಜೋಬಾ ಎಂಬುವರೊಂದಿಗೆ ಹೋರಾಡಿದಾಗ ಮತ್ತು ಯೋವಾಬನು ಹಿಂತಿರುಗಿ ಬಂದು ಉಪ್ಪಿನ ಕಣಿವೆಯಲ್ಲಿ ಎದೋಮ್ಯರ 12,000 ಮಂದಿ ಸೈನಿಕರನ್ನು ಸೋಲಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

60 ದೇವರೇ, ನೀನು ನಮ್ಮನ್ನು ಕೋಪದಿಂದ ಕೈಬಿಟ್ಟಿರುವೆ;
    ನಮ್ಮನ್ನು ನಾಶಗೊಳಿಸಿರುವೆ.
    ನಮ್ಮನ್ನು ಪುನರ್‌ಸ್ಥಾಪಿಸು.
ನೀನು ಭೂಮಿಯನ್ನು ನಡುಗಿಸಿ ಸೀಳಿಬಿಟ್ಟಿರುವೆ.
    ನಮ್ಮ ದೇಶವು ಕುಸಿದುಬೀಳುತ್ತಿದೆ;
    ಅದನ್ನು ಸರಿಪಡಿಸು.
ನೀನು ನಿನ್ನ ಜನರಿಗೆ ಅನೇಕ ಕಷ್ಟಗಳನ್ನು ಕೊಟ್ಟಿರುವೆ.
    ನಾವು ಕುಡಿದವರಂತೆ ತೂರಾಡುತ್ತಾ ಬೀಳುತ್ತಿದ್ದೇವೆ.
ನಿನ್ನ ಆರಾಧಕರನ್ನು ನೀನು ಎಚ್ಚರಿಸುವೆ.
    ಈಗ ಅವರು ಶತ್ರುಗಳಿಂದ ಪಾರಾಗಬಹುದು.

ನಿನ್ನ ಮಹಾಶಕ್ತಿಯಿಂದ ನಮ್ಮನ್ನು ರಕ್ಷಿಸು!
    ನಮ್ಮ ಪ್ರಾರ್ಥನೆಗೆ ಉತ್ತರನೀಡಿ ನಿನ್ನ ಪ್ರಿಯರನ್ನು ರಕ್ಷಿಸು!

ದೇವರು ತನ್ನ ಆಲಯದೊಳಗೆ ಹೀಗೆಂದನು:
    “ನಾನು ಅವರಿಗೆ ಶೆಕೆಮನ್ನು ಕೊಡುವೆನು;
    ಸುಕ್ಕೋತ್ ಕಣಿವೆಯನ್ನೂ ಅವರಿಗೆ ಕೊಡುವೆನು.
    ಗಿಲ್ಯಾದ್ ಮತ್ತು ಮನಸ್ಸೆ ನನ್ನವೇ.
    ಎಫ್ರಾಯೀಮ್ ನನ್ನ ಶಿರಸ್ತ್ರಾಣ.
    ಯೆಹೂದ ನನ್ನ ರಾಜದಂಡ.
    ಮೋವಾಬ್ ನನ್ನ ಸ್ನಾನಪಾತ್ರೆ.
    ಎದೋಮ್ ನನ್ನ ಪಾದರಕ್ಷೆಗಳ ಸ್ಥಳ.
    ನಾನು ಫಿಲಿಷ್ಟಿಯರನ್ನು ಸೋಲಿಸಿ ಜಯಘೋಷ ಮಾಡುವೆ.”

9-10 ದೇವರೇ, ನೀನು ನಮ್ಮನ್ನು ಕೈಬಿಟ್ಟಿರುವೆ.
    ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲ.
ಹೀಗಿರಲು, ಕೋಟೆಕೊತ್ತಲುಗಳುಳ್ಳ ಪಟ್ಟಣಕ್ಕೆ ನನ್ನನ್ನು ನಡೆಸುವವರು ಯಾರು?
    ಎದೋಮಿನ ವಿರುದ್ಧ ನನ್ನನ್ನು ನಡೆಸುವವರು ಯಾರು?
11 ದೇವರೇ, ವೈರಿಗಳನ್ನು ಸೋಲಿಸಲು ನಮಗೆ ಸಹಾಯಮಾಡು!
    ಜನರು ನಮಗೆ ಸಹಾಯಮಾಡಲಾರರು!
12 ದೇವರೊಬ್ಬನೇ ನಮ್ಮನ್ನು ಬಲಗೊಳಿಸಬಲ್ಲನು.
    ಆತನೊಬ್ಬನೇ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು!

ರಚನೆಗಾರ: ದಾವೀದ.

61 ದೇವರೇ, ನನ್ನ ಮೊರೆಯನ್ನು ಕೇಳು.
    ನನ್ನ ಪ್ರಾರ್ಥನೆಗೆ ಕಿವಿಗೊಡು.
ನಾನೆಲ್ಲೇ ಇದ್ದರೂ, ಎಷ್ಟೇ ಬಲಹೀನನಾಗಿದ್ದರೂ
    ಸಹಾಯಕ್ಕಾಗಿ ನಿನಗೇ ಮೊರೆಯಿಡುವೆನು!
ಅತ್ಯುನ್ನತವಾದ ಆಶ್ರಯಗಿರಿಗೆ ನನ್ನನ್ನು ಹತ್ತಿಸು.
ನೀನೇ ನನ್ನ ಆಶ್ರಯಸ್ಥಾನ;
    ಶತ್ರುಗಳಿಂದ ಕಾಪಾಡುವ ಭದ್ರವಾದ ಬುರುಜು.
ನಿನ್ನ ಗುಡಾರದಲ್ಲಿ ಸದಾಕಾಲ ವಾಸಿಸುವುದಕ್ಕೂ,
    ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವುದಕ್ಕೂ ತವಕಪಡುತ್ತಿರುವೆ.

ದೇವರೇ, ನನ್ನ ಹರಕೆಗಳನ್ನೆಲ್ಲಾ ನೀನು ಕೇಳಿರುವೆ.
    ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಬರುವ ಸ್ವಾಸ್ತ್ಯವನ್ನು ನೀನು ನನಗೆ ಕೊಟ್ಟಿರುವೆ.
ರಾಜನಿಗೆ ದೀರ್ಘಾಯುಷ್ಯವನ್ನು ದಯಪಾಲಿಸು.
    ಅವನು ಸದಾಕಾಲ ಜೀವಿಸಲಿ!
ಅವನು ನಿನ್ನ ಸಾನಿಧ್ಯವನ್ನು ಪಡೆದು ಸದಾಕಾಲವೂ ರಾಜನಾಗಿರಲಿ!
    ನಿನ್ನ ನಿಜಪ್ರೀತಿಯಿಂದ ಅವನನ್ನು ಸಂರಕ್ಷಿಸು.
ಆಗ ನಾನು ನಿನ್ನ ಹೆಸರನ್ನು ಸದಾಕಾಲ ಕೊಂಡಾಡುವೆನು.
    ನನ್ನ ಹರಕೆಗಳನ್ನು ಪ್ರತಿದಿನವೂ ಸಲ್ಲಿಸುವೆನು.

ಯೆಶಾಯ 10:5-34

ಅಶ್ಶೂರದ ಶಕ್ತಿಯನ್ನು ದೇವರು ನಿಯಂತ್ರಿಸುತ್ತಾನೆ

ದೇವರು ಹೀಗೆ ಹೇಳುವನು: “ನಾನು ಕೋಪಗೊಂಡಾಗ ಬೆತ್ತವನ್ನು ಹೇಗೆ ಉಪಯೋಗಿಸುವೆನೋ ಹಾಗೆಯೇ ಇಸ್ರೇಲನ್ನು ಶಿಕ್ಷಿಸಲು ಅಶ್ಶೂರವನ್ನು ಉಪಯೋಗಿಸುವೆನು. ದುಷ್ಕೃತ್ಯಗಳನ್ನು ಮಾಡುವವರ ವಿರುದ್ಧವಾಗಿ ಯುದ್ಧಮಾಡಲು ನಾನು ಅಶ್ಶೂರವನ್ನು ಕಳುಹಿಸುವೆನು. ನಾನು ಅವರ ಮೇಲೆ ಕೋಪಗೊಂಡಿರುವೆನು. ಅಶ್ಶೂರಕ್ಕೆ ಅವರ ಮೇಲೆ ಯುದ್ಧ ಮಾಡುವಂತೆ ಆಜ್ಞಾಪಿಸುವೆನು. ಅಶ್ಶೂರವು ಅವರನ್ನು ಸೋಲಿಸಿ ಅವರ ಐಶ್ವರ್ಯವನ್ನೆಲ್ಲಾ ಸೂರೆಮಾಡುವದು. ಇಸ್ರೇಲು ಅಶ್ಶೂರದವರಿಗೆ ಬೀದಿಯ ಧೂಳಿನಂತಾಗುವದು.

“ಆದರೆ ನಾನು ಅಶ್ಶೂರವನ್ನು ಉಪಯೋಗಿಸುತ್ತೇನೆಂದು ಅದಕ್ಕೆ ತಿಳಿಯದು. ಅಶ್ಶೂರಕ್ಕೆ ತಾನು ನನ್ನ ಕೈಯಲ್ಲಿರುವ ಒಂದು ಸಾಧನವೆಂದು ಗೊತ್ತಿರದು. ಅನೇಕಾನೇಕ ಜನಾಂಗಗಳನ್ನು ನಾಶಮಾಡಲು ಅಶ್ಶೂರವು ಬಯಸುತ್ತದೆ ಮತ್ತು ಅದಕ್ಕಾಗಿ ಯೋಜನೆಗಳನ್ನು ಮಾಡುತ್ತದೆ. ಅಶ್ಶೂರವು ಹೀಗೆ ಹೇಳುತ್ತದೆ: ‘ನನ್ನ ನಾಯಕರೆಲ್ಲಾ ರಾಜರಂತಿರುತ್ತಾರೆ. ಕಲ್ನೋ ನಗರವು ಕರ್ಕೆಮೀಷ್ ಹಾಗೆ ಇರುವದು. ಹಮಾತ್ ನಗರವು ಅರ್ಪದ್ ನಗರದಂತಿರುವದು. ಸಮಾರ್ಯಪಟ್ಟಣವು ದಮಸ್ಕದಂತಿರುವದು. 10 ನಾನು ಆ ದುಷ್ಟರಾಜ್ಯಗಳನ್ನು ಸೋಲಿಸಿಬಿಟ್ಟೆನು, ಈಗ ನಾನು ಅವುಗಳನ್ನು ಆಳುತ್ತಿದ್ದೇನೆ. ಆ ಜನರು ಪೂಜಿಸುವ ವಿಗ್ರಹಗಳು ಜೆರುಸಲೇಮ್ ಮತ್ತು ಸಮಾರ್ಯಗಳಲ್ಲಿರುವ ವಿಗ್ರಹಗಳಿಗಿಂತ ವಿಶೇಷವಾಗಿವೆ. 11 ನಾನು ಸಮಾರ್ಯವನ್ನೂ ಅದರ ವಿಗ್ರಹಗಳನ್ನೂ ನಾಶಮಾಡಿದೆ. ಈಗ ಜೆರುಸಲೇಮನ್ನೂ ಅದರ ಜನರು ಮಾಡಿರುವ ವಿಗ್ರಹಗಳನ್ನೂ ನಾನು ನಾಶಮಾಡುವೆನು.’”

12 ಜೆರುಸಲೇಮಿಗೂ ಚೀಯೋನ್ ಪರ್ವತಕ್ಕೂ ಮಾಡಬೇಕೆಂದಿರುವ ಕಾರ್ಯಗಳನ್ನು ನನ್ನ ಒಡೆಯನು ಮಾಡಿ ತೀರಿಸುವನು. ಆ ಬಳಿಕ ಯೆಹೋವನು ಅಶ್ಶೂರವನ್ನು ಶಿಕ್ಷಿಸುವನು. ಅಶ್ಶೂರದ ಅರಸನು ಬಹಳವಾಗಿ ಉಬ್ಬಿಕೊಂಡಿರುತ್ತಾನೆ. ಅವನ ಗರ್ವವು ಅನೇಕ ದುಷ್ಕೃತ್ಯಗಳನ್ನು ನಡೆಸಿದೆ. ಅದಕ್ಕಾಗಿ ದೇವರು ಅವನನ್ನು ಶಿಕ್ಷಿಸುವನು.

13 ಅಶ್ಶೂರದ ಅರಸನು ಹೇಳುವುದೇನೆಂದರೆ, “ನಾನು ಜ್ಞಾನಿಯಾಗಿದ್ದೇನೆ, ನನ್ನ ಸ್ವಂತ ಜ್ಞಾನದಿಂದಲೂ ಸಾಮರ್ಥ್ಯದಿಂದಲೂ ನಾನು ಅನೇಕ ಮಹಾಕಾರ್ಯಗಳನ್ನು ನಡಿಸಿದ್ದೇನೆ. ಅನೇಕ ಜನಾಂಗಗಳನ್ನು ಸೋಲಿಸಿದ್ದೇನೆ; ಅವರ ಐಶ್ವರ್ಯಗಳನ್ನು ಸೂರೆಮಾಡಿದ್ದೇನೆ. ಅವರ ಜನರನ್ನು ನನ್ನ ಗುಲಾಮರನ್ನಾಗಿ ಮಾಡಿದ್ದೇನೆ. ನಾನು ಮಹಾ ವೀರನಾಗಿರುವೆ. 14 ಒಬ್ಬನು ಹಕ್ಕಿಯ ಗೂಡಿನಿಂದ ಮೊಟ್ಟೆಗಳನ್ನು ತೆಗೆಯುವಂತೆ ನಾನು ಅವರ ಐಶ್ವರ್ಯವನ್ನು ತೆಗೆದುಕೊಂಡಿರುವೆನು. ಹಕ್ಕಿಯು ತನ್ನ ಗೂಡಿಗೆ ಯಾವ ಭದ್ರತೆಯನ್ನೂ ಮಾಡದೆ ಆಹಾರಕ್ಕಾಗಿ ಹೋಗುವದು, ರೆಕ್ಕೆಯಾಡಿಸಿ, ಬಾಯಿದೆರೆದು, ಕಿಚುಗುಟ್ಟಿ ಮೊಟ್ಟೆಯನ್ನು ಶತ್ರುವಿನಿಂದ ರಕ್ಷಿಸಲು ಅದು ಗೂಡಿನಲ್ಲಿರದು, ಆದ್ದರಿಂದ ಅದರ ಮೊಟ್ಟೆಗಳು ತೆಗೆಯಲ್ಪಡುವವು. ಅದೇ ರೀತಿಯಲ್ಲಿ ನಾನು ಭೂಮಿಯ ಮೇಲಿನ ಜನರನ್ನು ಕೈದಿಗಳನ್ನಾಗಿ ಮಾಡುವಾಗ ನನ್ನನ್ನು ತಡೆಯುವವರು ಇಲ್ಲವೇ ಇಲ್ಲ.”

15 ಕೊಡಲಿಯು ಅದನ್ನು ಉಪಯೋಗಿಸುವವನಿಗಿಂತ ಉತ್ತಮವಲ್ಲ. ಗರಗಸವು ಅದನ್ನು ಉಪಯೋಗಿಸುವವನಿಗಿಂತ ಉತ್ತಮವಲ್ಲ. ಆದರೆ ಅಶ್ಶೂರವು ತಾನು ದೇವರಿಗಿಂತಲೂ ಶಕ್ತಿಶಾಲಿ, ಸಾಮರ್ಥ್ಯವುಳ್ಳವನು ಎಂದು ನೆನಸುತ್ತಾನೆ. ಬೆತ್ತವು, ತನ್ನನ್ನು ಎತ್ತಿಹಿಡಿದು ಬೇರೆಯವರನ್ನು ಶಿಕ್ಷಿಸುವವನಿಗಿಂತ ತಾನು ಬಲಿಷ್ಠನೂ ಪ್ರಮುಖನೂ ಎಂದು ಹೇಳುವಂತಿದೆ ಇದು. 16 ತಾನು ಮಹಾದೊಡ್ಡ ಜನವೆಂದು ಅಶ್ಶೂರವು ನೆನಸುತ್ತದೆ. ಆದರೆ ಸರ್ವಶಕ್ತನಾದ ಯೆಹೋವನು ಅಶ್ಶೂರದ ಮೇಲೆ ಭಯಂಕರವಾದ ವ್ಯಾಧಿಯನ್ನು ಬರಮಾಡುತ್ತಾನೆ. ಒಬ್ಬ ರೋಗಿ ತನ್ನ ಅಸ್ವಸ್ಥತೆಯಿಂದ ಹೇಗೆ ಕೃಶವಾಗುತ್ತಾನೋ ಹಾಗೆಯೇ ತನ್ನ ಶಕ್ತಿಯನ್ನೂ ಐಶ್ವರ್ಯವನ್ನೂ ಅಶ್ಶೂರವು ಕಳೆದುಕೊಂಡು ಬಲಹೀನನಾಗುವನು. ಅಶ್ಶೂರದ ಮಹಿಮಾಪ್ರಭಾವಗಳು ಇಲ್ಲದೆ ಹೋಗುವವು. ಬೆಂಕಿಯು ಸರ್ವವನ್ನು ಸುಟ್ಟು ನಾಶಮಾಡುವಂತೆ ಇರುವದು. 17 ಇಸ್ರೇಲಿನ ಬೆಳಕು ಬೆಂಕಿಯಂತಿದೆ. ಪರಿಶುದ್ಧನಾಗಿರುವಾತನು ಬೆಂಕಿಯ ಜ್ವಾಲೆಯಂತಿದ್ದಾನೆ. ಮೊದಲು ಹಣಜಿ ಕಸಕಡ್ಡಿಗಳನ್ನು ಸುಡುವ ಬೆಂಕಿಯಂತೆ ಆತನಿರುವನು. 18 ಆಮೇಲೆ ಆ ಬೆಂಕಿಯು ದೊಡ್ಡದೊಡ್ಡ ಮರಗಳನ್ನು ಮತ್ತು ದ್ರಾಕ್ಷಿತೋಟಗಳನ್ನು ಸುಟ್ಟುಹಾಕುವದು. ಕೊನೆಗೆ ಜನರನ್ನು ಮೊದಲುಗೊಂಡು ಪ್ರತಿಯೊಂದೂ ನಾಶವಾಗುವುದು. ದೇವರು ಅಶ್ಶೂರವನ್ನು ನಾಶಮಾಡುವಾಗ ಹಾಗೆಯೇ ಆಗುವದು. ಅಶ್ಶೂರವು ಗೆದ್ದಲುಹುಳ ತಿಂದ ಮರದ ದಿಮ್ಮಿಯಂತಿರುವದು. 19 ಆಗ ಅಡವಿಯಲ್ಲಿ, ಒಂದು ಮಗು ಎಣಿಸಲು ಸಾಧ್ಯವಾಗುವಷ್ಟು ಮರಗಳಿರುವವು.

20 ಆಗ ಯಾಕೋಬನ ಮನೆತನದವರು, ಇಸ್ರೇಲರಲ್ಲಿ ಅಳಿದುಳಿದವರು, ತಮ್ಮನ್ನು ಹೊಡೆಯುವವರನ್ನು ಆಧಾರಮಾಡಿಕೊಳ್ಳದೆ ಇಸ್ರೇಲಿನ ಅತೀ ಪರಿಶುದ್ಧನಾದ ಯೆಹೋವನನ್ನೇ ಆಧಾರಮಾಡಿಕೊಳ್ಳುವರು. 21 ಯಾಕೋಬನ ಮನೆತನದಲ್ಲಿ ಅಳಿದುಳಿದವರು ಪರಾಕ್ರಮಿಯಾದ ದೇವರನ್ನು ಮತ್ತೆ ಅನುಸರಿಸತೊಡಗುವರು.

22 ನಿನ್ನ ಜನರು ಸಮುದ್ರದ ಮರಳಿನಂತೆ ಬಹಳವಿರುವರು. ಆದರೆ ಅವರಲ್ಲಿ ಕೆಲವರೇ ಉಳಿದು ಕರ್ತನ ಬಳಿಗೆ ಬರುವರು. ಆ ಜನರು ದೇವರ ಬಳಿಗೆ ಹಿಂತಿರುಗುವರು. ಅದಕ್ಕಿಂತ ಮೊದಲು ನಿನ್ನ ದೇಶವು ನಾಶವಾಗುವದು. ದೇಶವು ನಾಶವಾಗುವದೆಂದು ದೇವರು ಪ್ರಕಟಿಸಿದ್ದಾನೆ. ಆ ಬಳಿಕ ದೇವರ ಒಳ್ಳೆತನವು ಆ ದೇಶಕ್ಕೆ ಬರುವದು. ಅದು ದಡತುಂಬಿ ಹರಿಯುವ ನದಿಯೋಪಾದಿಯಲ್ಲಿರುವದು. 23 ಸರ್ವಶಕ್ತನೂ ಒಡೆಯನೂ ಆದ ಯೆಹೋವನು ಖಂಡಿತವಾಗಿಯೂ ಈ ದೇಶವನ್ನು ನಾಶಮಾಡುತ್ತಾನೆ.

24 ನನ್ನ ಒಡೆಯನೂ ಸರ್ವಶಕ್ತನೂ ಆದ ಯೆಹೋವನು ಹೇಳುವುದೇನೆಂದರೆ: “ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, ಅಶ್ಶೂರಕ್ಕೆ ನೀವು ಭಯಪಡಬೇಡಿ. ಹಿಂದಿನ ಕಾಲದಲ್ಲಿ ಈಜಿಪ್ಟ್ ನಿಮ್ಮನ್ನು ಬಾಧಿಸಿದಂತೆ ಇವನೂ ನಿಮ್ಮನ್ನು ಬಾಧಿಸುವನು. ಅವನ ಬಾಧೆಯು ನಿಮ್ಮ ಬೆನ್ನಿನ ಮೇಲೆ ಬೆತ್ತದಿಂದ ಹೊಡೆದಂತೆ ಇರುವದು. 25 ಆದರೆ ಸ್ವಲ್ಪ ಸಮಯದ ನಂತರ ನನ್ನ ಸಿಟ್ಟು ತಣ್ಣಗಾಗುವದು. ಅಶ್ಶೂರವು ಸಾಕಷ್ಟು ನಿಮ್ಮನ್ನು ಶಿಕ್ಷಿಸಿದನೆಂದು ನಾನು ತೃಪ್ತಿಗೊಳ್ಳುವೆನು.”

26 ಆ ಬಳಿಕ ಸರ್ವಶಕ್ತನಾದ ಯೆಹೋವನು ಕೊರಡೆಯಿಂದ ಅಶ್ಶೂರವನ್ನು ಹೊಡೆಯುವನು. ಹಿಂದಿನ ಕಾಲದಲ್ಲಿ ಓರೇಬ್ ಬಂಡೆಯ ಮೇಲೆ ಮಿದ್ಯಾನ್ಯರನ್ನು ಯೆಹೋವನು ಹೇಗೆ ಸೋಲಿಸಿದನೋ ಹಾಗೆಯೇ ಅಶ್ಶೂರವನ್ನು ಸೋಲಿಸುವನು. ಹಿಂದಿನ ಕಾಲದಲ್ಲಿ ಯೆಹೋವನು ಈಜಿಪ್ಟನ್ನು ಶಿಕ್ಷಿಸಿದನು. ಆತನು ಕೋಲನ್ನೆತ್ತಿ ಸಮುದ್ರ ಮಾರ್ಗವಾಗಿ ತನ್ನ ಜನರನ್ನು ಈಜಿಪ್ಟಿನಿಂದ ಹೊರನಡಿಸಿದನು. ಅದೇ ರೀತಿಯಲ್ಲಿ ಅಶ್ಶೂರದಿಂದ ಯೆಹೋವನು ತನ್ನ ಜನರನ್ನು ರಕ್ಷಿಸಿ ಬಿಡಿಸುವನು.

27 ಅಶ್ಶೂರವು ನಿಮಗೆ ಸಂಕಟವನ್ನು ಉಂಟುಮಾಡುವದು. ಅದು ನಿಮಗೆ ನಿತ್ಯವೂ ಹೊರುವ ಭಾರವಾಗಿ ಪರಿಣಮಿಸುವದು. ನಿಮ್ಮ ಹೆಗಲಿನ ಮೇಲೆ ನೊಗವನ್ನು ಹಾಕುವದು. ಆದರೆ ಅದು ತೆಗೆದುಹಾಕಲ್ಪಡುವದು. ಅದು ನಿನ್ನ ದೇವರ ಶಕ್ತಿಯಿಂದ ಮುರಿಯಲ್ಪಡುವದು.

ಅಶ್ಶೂರದ ಸೈನ್ಯವು ಇಸ್ರೇಲನ್ನು ಮುತ್ತಿತು

28 ಸೈನಿಕರು ಅಯ್ಯಾಥಿನ ಮೇಲೆ ಬಂದಿದ್ದಾರೆ; ಮಿಗ್ರೋನನ್ನು ಹಾದುಹೋಗಿದ್ದಾರೆ. ಮಿಕ್ಮಾಷಿನಲ್ಲಿ ತಮ್ಮ ಉಪಕರಣಗಳನ್ನಿಟ್ಟಿರುತ್ತಾರೆ. 29 ಸೈನಿಕರು ಮಾಬರ ಎಂಬ ಸ್ಥಳದಲ್ಲಿ ಕಣಿವೆಯನ್ನು ದಾಟುತ್ತಾರೆ. ಗೆಬ ಎಂಬಲ್ಲಿ ಮಲಗುವರು. ಆಗ ರಾಮಾವು ಭಯಪಡುವದು. ಸೌಲನ ಗಿಬೆಯದ ಜನರು ಪಲಾಯನ ಮಾಡುವರು.

30 ಬಾತ್‌ಗಲ್ಲೀಮ್‌ನವರೇ, ಚೀರಾಡಿರಿ! ಲಯೆಷವೇ, ಕಿವಿಗೊಡು. ಅನಾತೋತೇ, ನನಗೆ ಉತ್ತರಕೊಡು! 31 ಮದ್ಮೇನಾದ ಜನರು ಓಡಿಹೋಗುತ್ತಿದ್ದಾರೆ. ಗೇಬೀಮಿನ ಜನರು ಅವಿತುಕೊಂಡಿದ್ದಾರೆ. 32 ಈ ದಿವಸ ನೋಬಿನಲ್ಲಿ ಸೈನ್ಯವು ತಂಗುವದು. ಜೆರುಸಲೇಮಿನ ಪರ್ವತವಾಗಿರುವ ಚೀಯೋನ್ ಪರ್ವತಕ್ಕೆ ವಿರುದ್ಧವಾಗಿ ಯುದ್ಧಮಾಡಲು ಸೈನ್ಯವು ಸಿದ್ಧವಾಗುವುದು.

33 ನಮ್ಮ ಸರ್ವಶಕ್ತನೂ ಒಡೆಯನೂ ಆಗಿರುವ ಯೆಹೋವನು ಆ ದೊಡ್ಡ ಮರವನ್ನು (ಅಶ್ಶೂರವನ್ನು) ಕಡಿದುಹಾಕುವದನ್ನು ನೋಡು! ತನ್ನ ಮಹಾಶಕ್ತಿಯಿಂದ ಆತನು ಮಹಾವೀರರೂ ದೊಡ್ಡಜನರೂ ಎನ್ನದೆ ಎಲ್ಲರನ್ನೂ ಕಡಿದುಹಾಕುವನು. ಇನ್ನುಮೇಲೆ ಅವರು ಮಹಾಜನರೆಂದು ಕರೆಯಲ್ಪಡರು. 34 ಯೆಹೋವನು ತನ್ನ ಕೊಡಲಿಯಿಂದ ಅಡವಿಯನ್ನು ಕಡಿದುಹಾಕುವನು. ಲೆಬನೋನಿನ ಉನ್ನತ ಮರಗಳು (ಪ್ರಮುಖರು) ಉರುಳಿಬೀಳುವವು.

ಯಾಕೋಬನು 4

ದೇವರಿಗೆ ನಿಮ್ಮನ್ನು ಒಪ್ಪಿಸಿಕೊಳ್ಳಿ

ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಎಲ್ಲಿಂದ ಬರುತ್ತವೆಯೆಂಬುದು ನಿಮಗೆ ತಿಳಿದಿದೆಯೋ? ನಿಮ್ಮ ಸ್ವಾರ್ಥಪರ ಆಸೆಗಳಿಂದ ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಬರುತ್ತವೆ. ಅವು ನಿಮ್ಮ ಅಂತರಂಗದಲ್ಲಿ ಯುದ್ಧ ಮಾಡುತ್ತಿವೆ. ನೀವು ಅನೇಕ ವಸ್ತುಗಳಿಗಾಗಿ ಆಶಿಸುತ್ತೀರಿ. ಆದರೆ ಅವುಗಳನ್ನು ಪಡೆಯುವುದರಲ್ಲಿ ವಿಫಲರಾಗುತ್ತೀರಿ. ಆದ್ದರಿಂದ ನೀವು ಕೊಲೆ ಮಾಡುತ್ತೀರಿ ಮತ್ತು ಇತರರ ಬಗ್ಗೆ ಅಸೂಯೆಪಡುತ್ತೀರಿ. ಆದರೆ ನೀವು ಆಸೆಪಟ್ಟದ್ದನ್ನು ಇನ್ನೂ ಪಡೆಯಲಾರದವರಾಗಿರುವಿರಿ. ಆದ್ದರಿಂದ ನೀವು ವಾದವಿವಾದ ಮಾಡುವಿರಿ ಮತ್ತು ಹೊಡೆದಾಡುವಿರಿ. ನೀವು ದೇವರನ್ನು ಕೇಳಿಕೊಳ್ಳಲಿಲ್ಲ. ಆದ್ದರಿಂದಲೇ, ನೀವು ಆಸೆ ಪಟ್ಟದ್ದು ನಿಮಗೆ ದೊರೆಯಲಿಲ್ಲ. ಮತ್ತು ನೀವು ಕೇಳಿಕೊಂಡಾಗ ನಿಮಗೆ ಅವು ಸಿಗಲಿಲ್ಲ. ಏಕೆಂದರೆ ನಿಮ್ಮ ಉದ್ದೇಶವು ಸರಿಯಾಗಿರಲಿಲ್ಲ. ನೀವು ಅವುಗಳನ್ನು ಕೇವಲ ನಿಮ್ಮ ಸ್ವಂತ ಸುಖಕ್ಕಾಗಿ ಕೇಳಿಕೊಂಡಿರಿ.

ಆದ್ದರಿಂದ ನೀವು ದೇವರಿಗೆ ನಂಬಿಗಸ್ತರಾಗಿಲ್ಲ! ಇಹಲೋಕದ ಮೇಲಿರುವ ವ್ಯಾಮೋಹ ದೇವರ ಮೇಲಿರುವ ದ್ವೇಷಕ್ಕೆ ಸಮಾನವಾಗಿದೆ. ಆದ್ದರಿಂದ ಈ ಲೋಕವನ್ನು ಪ್ರೀತಿಸುವವನು ತನ್ನನ್ನು ದೇವರಿಗೆ ಶತ್ರುವನ್ನಾಗಿ ಮಾಡಿಕೊಳ್ಳುತ್ತಾನೆ. ಪವಿತ್ರ ಗ್ರಂಥವು ಅರ್ಥವಿಲ್ಲದ್ದೆಂದು ಯೋಚಿಸುವಿರಾ? “ದೇವರು ನಮ್ಮಲ್ಲಿ ಇರಿಸಿರುವ ಆತ್ಮದ ಅಪೇಕ್ಷೆಯೇನೆಂದರೆ, ನಾವು ಆತನಿಗೋಸ್ಕರ ಮಾತ್ರ ಇರಬೇಕೆಂದಷ್ಟೆ”[a] ಎಂದು ಪವಿತ್ರ ಗ್ರಂಥವು ಹೇಳುತ್ತದೆ. ಆದರೆ ದೇವರು ದಯಪಾಲಿಸಿದ ಕೃಪೆಯು ಅದಕ್ಕಿಂತಲೂ ಹೆಚ್ಚಿನದು. ಪವಿತ್ರ ಗ್ರಂಥವು ಹೇಳುವಂತೆ, “ದೇವರು ಅಹಂಕಾರಿಗಳಿಗೆ ವಿರುದ್ಧವಾಗಿರುತ್ತಾನೆ, ದೀನರಿಗಾದರೆ ಕೃಪೆಯನ್ನು ದಯಪಾಲಿಸುತ್ತಾನೆ.”(A)

ಆದ್ದರಿಂದ ದೇವರಿಗೆ ನಿಮ್ಮನ್ನು ಒಪ್ಪಿಸಿಕೊಂಡು ಸೈತಾನನನ್ನು ಎದುರಿಸಿರಿ. ಆಗ ಅವನು ನಿಮ್ಮಿಂದ ದೂರ ಓಡಿಹೋಗುತ್ತಾನೆ. ದೇವರ ಸಮೀಪಕ್ಕೆ ಬನ್ನಿ, ಆಗ ದೇವರು ನಿಮ್ಮ ಸಮೀಪಕ್ಕೆ ಬರುತ್ತಾನೆ. ನೀವು ಪಾಪಿಗಳು, ಆದ್ದರಿಂದ ನಿಮ್ಮ ಜೀವಿತಗಳಿಂದ ಪಾಪಗಳನ್ನು ತೊಳೆದು ಹಾಕಿರಿ. ನೀವು ದೇವರನ್ನು ಮತ್ತು ಈ ಲೋಕವನ್ನು ಏಕಕಾಲದಲ್ಲಿ ಅನುಸರಿಸಲು ಪ್ರಯತ್ನಿಸುತ್ತಿರುವಿರಿ. ನಿಮ್ಮ ಆಲೋಚನೆಗಳನ್ನು ಪರಿಶುದ್ಧಗೊಳಿಸಿರಿ. ದುಃಖಪಡಿರಿ, ಗೋಳಾಡಿರಿ, ಕಣ್ಣೀರಿಡಿರಿ! ನಗುವುದನ್ನು ಬಿಟ್ಟು ಗೋಳಾಡಿರಿ. ಸಂತೋಷಿಸುವುದನ್ನು ಬಿಟ್ಟು ವ್ಯಸನಪಡಿರಿ. 10 ಪ್ರಭುವಿನ ಎದುರಿನಲ್ಲಿ ದೀನರಾಗಿರಿ, ಆತನು ನಿಮ್ಮನ್ನು ಉನ್ನತ ಮಟ್ಟಕ್ಕೆ ತರುತ್ತಾನೆ.

ನೀವು ತೀರ್ಪುಗಾರರಲ್ಲ

11 ಸಹೋದರ ಸಹೋದರಿಯರೇ, ಒಬ್ಬರ ವಿರುದ್ಧ ಮತ್ತೊಬ್ಬರು ನಿಂದೆಯ ಮಾತುಗಳನ್ನಾಡದಿರಿ. ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನನ್ನು ನೀವು ಟೀಕಿಸಿದರೆ ಅಥವಾ ಅವನ ಬಗ್ಗೆ ತೀರ್ಪು ನೀಡಿದರೆ, ಅವನು ಅನುಸರಿಸುವ ಧರ್ಮಶಾಸ್ತ್ರವನ್ನೇ ಟೀಕಿಸಿದಂತಾಯಿತು. ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ನೀವು ತೀರ್ಪು ನೀಡಿದರೆ, ಅವನು ಅನುಸರಿಸುತ್ತಿರುವ ಧರ್ಮಶಾಸ್ತ್ರದ ಬಗ್ಗೆ ನೀವು ತೀರ್ಪು ನೀಡಿದಂತಾಯಿತು. ನೀವು ಧರ್ಮಶಾಸ್ತ್ರಕ್ಕೆ ತೀರ್ಪು ನೀಡುವಾಗ ನೀವು ಧರ್ಮಶಾಸ್ತ್ರವನ್ನು ಅನುಸರಿಸುವವರಲ್ಲ. ನೀವು ನ್ಯಾಯಾಧಿಪತಿಗಳಾಗಿದ್ದೀರಿ! 12 ದೇವರೊಬ್ಬನೇ ನಿಯಮಗಳನ್ನು ಮಾಡುವಾತನು. ಆತನೊಬ್ಬನೇ ನಿಜವಾದ ನ್ಯಾಯಾಧಿಪತಿ. ದೇವರೊಬ್ಬನೇ ರಕ್ಷಿಸಬಲ್ಲನು ಮತ್ತು ನಾಶಮಾಡಬಲ್ಲನು. ಆದ್ದರಿಂದ ಬೇರೊಬ್ಬ ವ್ಯಕ್ತಿಯ ಬಗ್ಗೆ ತೀರ್ಪು ನೀಡುವುದು ನಿಮಗೆ ಯೋಗ್ಯವಾದುದಲ್ಲ.

ದೇವರೇ ನಿನ್ನ ಜೀವನದ ಬಗ್ಗೆ ಯೋಚಿಸಲಿ

13 ನಿಮ್ಮಲ್ಲಿ ಕೆಲವರು, “ಈ ಹೊತ್ತು ಅಥವಾ ನಾಳೆ ನಗರಕ್ಕೆ ಹೋಗುತ್ತೇವೆ. ಅಲ್ಲಿ ಒಂದು ವರ್ಷವಿದ್ದು ವ್ಯಾಪಾರಮಾಡಿ ಹಣ ಸಂಪಾದಿಸುತ್ತೇವೆ” ಎಂದು ಹೇಳುವಿರಿ. ಆಲಿಸಿರಿ! ಇದರ ಬಗ್ಗೆ ಯೋಚಿಸಿರಿ: 14 ನಾಳೆ ಏನಾಗುವುದೋ ನಿಮಗೆ ತಿಳಿಯದು! ನಿಮ್ಮ ಜೀವನವು ಹಬೆಯಂತಿದೆ. ನೀವು ಅದನ್ನು ಸ್ವಲ್ಪಕಾಲ ನೋಡುವಿರಿ. ನಂತರ ಅದು ಅದೃಶ್ಯವಾಗುವುದು. 15 ಆದ್ದರಿಂದ, ನೀವು ಹೀಗೆ ಹೇಳಬೇಕು, “ಪ್ರಭುವು ಇಚ್ಛೆಪಟ್ಟರೆ, ನಾವು ಜೀವಿಸಿರುತ್ತೇವೆ. ಇಂಥಿಂಥದ್ದನ್ನು ಮಾಡುತ್ತೇವೆ.” 16 ಆದರೆ ನೀವೀಗ ಜಂಬಗಾರರಾಗಿ ಹೊಗಳಿಕೊಳ್ಳುತ್ತೀರಿ. ನಿಮ್ಮ ಹೊಗಳಿಕೆಯೆಲ್ಲವೂ ಕೆಟ್ಟದ್ದು. 17 ಒಳ್ಳೆಯದನ್ನು ಹೇಗೆ ಮಾಡಬೇಕೆಂದು ತಿಳಿದಿದ್ದರೂ ಒಳ್ಳೆಯದನ್ನು ಮಾಡದಿರುವವನು ಪಾಪವನ್ನು ಮಾಡುವವನಾಗಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International