Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 20

ಮಿರ್ಯಾಮಳ ಮರಣ

20 ಮೊದಲನೆಯ ತಿಂಗಳಲ್ಲಿ ಇಡೀ ಇಸ್ರೇಲ್ ಸಮುದಾಯವು ಚಿನ್ ಮರುಭೂಮಿಗೆ ಬಂದಿತು. ಅವರು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ಸತ್ತಳು. ಆಕೆಯ ಶವವನ್ನು ಅಲ್ಲಿ ಸಮಾಧಿ ಮಾಡಲಾಯಿತು.

ಮೋಶೆಯ ತಪ್ಪು

ಅಲ್ಲಿ ನೀರಿಲ್ಲದಿದ್ದ ಕಾರಣ ಅವರು ಮೋಶೆ ಆರೋನರ ವಿರುದ್ಧವಾಗಿ ಸೇರಿಬಂದರು. ಜನರು ಮೋಶೆಯ ಸಂಗಡ ವಾದಮಾಡಿ, “ನಮ್ಮ ಸಹೋದರರು ಯೆಹೋವನ ಸನ್ನಿಧಿಯಲ್ಲಿ ಸತ್ತಾಗ ನಾವೂ ಸತ್ತುಹೋಗಿದ್ದರೆ ಎಷ್ಟೋ ಮೇಲಾಗಿತ್ತು. ಯೆಹೋವನ ಜನರನ್ನು ಈ ಮರುಭೂಮಿಗೆ ಯಾಕೆ ಕರೆದುಕೊಂಡು ಬಂದೆ? ನಾವು ಮತ್ತು ನಮ್ಮ ಪ್ರಾಣಿಗಳು ಇಲ್ಲಿ ಸಾಯಬೇಕೆಂದು ನೀನು ಇಚ್ಛಿಸುತ್ತೀಯೋ? ಈಜಿಪ್ಟಿನಿಂದ ನಮ್ಮನ್ನು ಇಲ್ಲಿಗೆ ಯಾಕೆ ಕರೆತಂದೆ? ಈ ಕೆಟ್ಟ ಸ್ಥಳಕ್ಕೆ ನಮ್ಮನ್ನು ಯಾಕೆ ಕರೆದುಕೊಂಡು ಬಂದೆ? ಇಲ್ಲಿ ಧಾನ್ಯವಾಗಲಿ ಅಂಜೂರವಾಗಲಿ ದ್ರಾಕ್ಷಿಯಾಗಲಿ ದಾಳಿಂಬೆಯಾಗಲಿ ಇಲ್ಲ, ಕುಡಿಯುವುದಕ್ಕೆ ನೀರೂ ಇಲ್ಲ” ಎಂದು ಹೇಳಿದರು.

ಮೋಶೆ ಆರೋನರು ಜನಸಮೂಹದ ಎದುರಿನಿಂದ ದೇವದರ್ಶನಗುಡಾರದ ಪ್ರವೇಶದ್ವಾರಕ್ಕೆ ಹೋಗಿ ಅಡ್ಡಬಿದ್ದರು. ಆಗ ಯೆಹೋವನ ಮಹಿಮೆಯು ಅವರಿಗೆ ಪ್ರತ್ಯಕ್ಷವಾಯಿತು.

ಆಗ ಯೆಹೋವನು ಮೋಶೆಯೊಡನೆ ಮಾತಾಡಿ, “ಬಳಿಕ ನೀನು ಮತ್ತು ನಿನ್ನ ಸಹೋದರನಾದ ಆರೋನನು ಜನರನ್ನು ಬಂಡೆಯ ಮುಂದೆ ಸಭೆಸೇರಿಸಿ, ಜನರ ಮುಂದೆ ಆ ಬಂಡೆಗೆ ಮಾತಾಡು. ಆಗ ನೀರು ಬಂಡೆಯಿಂದ ಹರಿಯುವುದು ಮತ್ತು ನೀರನ್ನು ಜನರಿಗೂ ಅವರ ಪಶುಗಳಿಗೂ ಕೊಡು” ಎಂದು ಹೇಳಿದನು.

ಕೋಲು ಪವಿತ್ರಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿತ್ತು. ಯೆಹೋವನು ಹೇಳಿದಂತೆ ಮೋಶೆ ಕೋಲನ್ನು ತೆಗೆದುಕೊಂಡನು. 10 ಜನರು ಬಂಡೆಯ ಮುಂದೆ ಒಟ್ಟಾಗಿ ಸೇರಿಬರಬೇಕೆಂದು ಮೋಶೆ ಆರೋನರು ಹೇಳಿದರು. ಆಗ ಮೋಶೆ, “ದ್ರೋಹಿಗಳೇ, ಈಗ ನನಗೆ ಕಿವಿಗೊಡಿರಿ. ನಿಮಗೋಸ್ಕರವಾಗಿ ಈ ಬಂಡೆಯಿಂದ ನೀರು ಹರಿಯುವಂತೆ ನಾವು ಮಾಡಬೇಕೋ?” ಎಂದು ಹೇಳಿ, 11 ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ಎರಡು ಸಾರಿ ಬಂಡೆಯನ್ನು ಹೊಡೆದನು. ಬಂಡೆಯಿಂದ ನೀರು ಹರಿಯತೊಡಗಿತು. ಜನರಿಗೆ ಮತ್ತು ಪಶುಗಳಿಗೆ ಕುಡಿಯಲು ನೀರು ದೊರೆಯಿತು.

12 ಆದರೆ ಯೆಹೋವನು ಮೋಶೆ ಆರೋನರಿಗೆ, “ನೀವು ನನ್ನನ್ನು ನಂಬದವರಾಗಿ ಇಸ್ರೇಲರ ಎದುರಿನಲ್ಲಿ ನನ್ನ ಪವಿತ್ರತೆಯನ್ನು ತೋರಿಸದೆ ಹೋದದ್ದರಿಂದ ಈ ಸಮುದಾಯದವರಿಗೆ ಕೊಡಲಿರುವ ದೇಶಕ್ಕೆ ನೀವು ಅವರನ್ನು ಕರೆದುಕೊಂಡು ಹೋಗುವುದಿಲ್ಲ.” ಎಂದು ಹೇಳಿದನು.

13 ಇಸ್ರೇಲರು ಅಲ್ಲಿ ಯೆಹೋವನೊಡನೆ ವಾದ ಮಾಡಿದ್ದರಿಂದ ಆ ಸ್ಥಳವು “ಮೆರೀಬಾ ಬುಗ್ಗೆ” ಎಂದು ಕರೆಯಲ್ಪಟ್ಟಿತು. ಅದಲ್ಲದೆ ಯೆಹೋವನು ತಾನು ಪರಿಶುದ್ಧನು ಎಂಬುದನ್ನು ಅವರಿಗೆ ತೋರಿಸಿದ ಸ್ಥಳವು ಇದೇ.

ಎದೋಮ್ಯರು ಇಸ್ರೇಲರನ್ನು ದಾಟಿಹೋಗಲು ಬಿಡುವುದಿಲ್ಲ

14 ಮೋಶೆಯು ಕಾದೇಶಿನಲ್ಲಿದ್ದಾಗ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ,

“ನಿಮ್ಮ ಸಂಬಂಧಿಕರವಾದ ಇಸ್ರೇಲರು ಕೇಳಿಕೊಳ್ಳುವುದೇನೆಂದರೆ: ನಮಗೆ ಸಂಭವಿಸಿದ ಎಲ್ಲಾ ಕಷ್ಟಗಳು ನಿಮಗೆ ಗೊತ್ತಿದೆ. 15 ನಮ್ಮ ಪೂರ್ವಿಕರು ಈಜಿಪ್ಟ್ ದೇಶಕ್ಕೆ ಇಳಿದುಹೋದದ್ದೂ ನಾವು ಅಲ್ಲಿ ಬಹುಕಾಲ ವಾಸವಾಗಿದ್ದದ್ದೂ ಈಜಿಪ್ಟಿನವರು ನಮಗೂ ನಮ್ಮ ಪೂರ್ವಿಕರಿಗೂ ಕ್ರೂರರಾಗಿದ್ದದ್ದೂ ನಿಮಗೆ ತಿಳಿದದೆ. 16 ನಾವು ಯೆಹೋವನಿಗೆ ಮೊರೆಯಿಡಲಾಗಿ ಆತನು ನಮ್ಮ ಪ್ರಾರ್ಥನೆಯನ್ನು ಕೇಳಿ ದೂತನನ್ನು ಕಳುಹಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡಿಸಿದ್ದನ್ನು ನೀವು ಬಲ್ಲಿರಿ.

“ಈಗ ನಾವು ನಿಮ್ಮ ಪ್ರದೇಶದ ಗಡಿಯಲ್ಲಿರುವ ಕಾದೇಶೆಂಬ ಊರಲ್ಲಿದ್ದೇವೆ. 17 ನಿಮ್ಮ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕೆಂದು ಬೇಡಿಕೊಳ್ಳುತ್ತೇವೆ. ನಾವು ಹೊಲಗಳಲ್ಲಿಯಾಗಲಿ ದ್ರಾಕ್ಷಿತೋಟಗಳಲ್ಲಿಯಾಗಲಿ ಹಾದುಹೋಗುವುದಿಲ್ಲ. ಬಾವಿಗಳ ನೀರನ್ನು ಕುಡಿಯುವುದಿಲ್ಲ. ರಾಜಮಾರ್ಗದಲ್ಲಿಯೇ ನಡೆದು ತಮ್ಮ ದೇಶದ ಮೇರೆಗಳನ್ನು ದಾಟುವ ತನಕ ಎಡಕ್ಕಾಗಲಿ ಬಲಕ್ಕಾಗಲಿ ತಿರುಗುವುದಿಲ್ಲ” ಎಂದು ಹೇಳಿಸಿದನು.

18 ಆದರೆ ಎದೋಮಿನ ಅರಸನು, “ನಮ್ಮ ದೇಶವನ್ನು ನೀವು ದಾಟಿಹೋಗಕೂಡದು. ದಾಟುವುದಾದರೆ, ನಾವು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತೇವೆ” ಎಂದು ಉತ್ತರಕೊಟ್ಟನು.

19 ಅದಕ್ಕೆ ಇಸ್ರೇಲರು, “ನಾವು ರಾಜಮಾರ್ಗದಲ್ಲಿಯೇ ಹೋಗುವೆವು. ನಾವೂ ನಮ್ಮ ಪಶುಗಳೂ ನಿಮ್ಮ ನೀರನ್ನು ಕುಡಿದರೆ ಅದಕ್ಕೆ ಬೆಲೆ ಕೊಡುವೆವು. ನಮಗೆ ಕೇವಲ ನಡೆದುಕೊಂಡು ಹೋಗಲು ಅನುಮತಿ ಕೊಡಿ. ಇದೊಂದೇ ನಮ್ಮ ಚಿಕ್ಕ ಬೇಡಿಕೆ” ಎಂದು ಹೇಳಿದರು.

20 ಆದರೆ ಮತ್ತೆ ಎದೋಮ್ಯರು, “ನೀವು ನಮ್ಮ ದೇಶವನ್ನು ದಾಟಿಹೋಗುವುದಕ್ಕೆ ನಾವು ಬಿಡುವುದಿಲ್ಲ” ಎಂದು ಉತ್ತರಿಸಿದರು.

ಬಳಿಕ ಎದೋಮ್ಯರ ಅರಸನು ಬಲಿಷ್ಠವಾದ ದೊಡ್ಡ ಸೈನ್ಯವನ್ನು ಕೂಡಿಸಿಕೊಂಡು ಇಸ್ರೇಲರ ವಿರುದ್ಧ ಯುದ್ಧಮಾಡಲು ಹೊರಟನು. 21 ಇಸ್ರೇಲರು ಅವನ ದೇಶವನ್ನು ಹಾದು ಹೋಗಲು ಎದೋಮ್ಯರ ಅರಸನು ಬಿಡಲಿಲ್ಲ. ಆಗ ಇಸ್ರೇಲರು ಬೇರೊಂದು ದಿಕ್ಕಿನಲ್ಲಿ ಹೋದರು.

ಆರೋನನ ಮರಣ

22 ಇಸ್ರೇಲರೆಲ್ಲರೂ ಕಾದೇಶಿನಿಂದ ಹೊರಟು ಹೋರ್ ಬೆಟ್ಟಕ್ಕೆ ಹೋದರು. 23 ಹೋರ್ ಬೆಟ್ಟವು ಎದೋಮ್ಯರ ಗಡಿಯ ಬಳಿಯಲ್ಲಿ ಇತ್ತು. ಯೆಹೋವನು ಮೋಶೆ ಆರೋನರಿಗೆ, 24 “ಆರೋನನು ಸತ್ತು ಪೂರ್ವಿಕರ ಬಳಿ ಸೇರುವ ಸಮಯ ಬಂದಿದೆ. ಇಸ್ರೇಲರಿಗೆ ನಾನು ವಾಗ್ದಾನ ಮಾಡಿದ ದೇಶದೊಳಗೆ ಆರೋನನು ಪ್ರವೇಶಿಸುವುದಿಲ್ಲ. ಯಾಕೆಂದರೆ ನೀವಿಬ್ಬರೂ ಮೆರೀಬಾ ಬುಗ್ಗೆಯ ಕುರಿತಾಗಿ ನಾನು ಕೊಟ್ಟ ಆಜ್ಞೆಗೆ ವಿಧೇಯರಾಗದಿದ್ದುದರಿಂದ ನಾನು ನಿಮಗೆ ಇದನ್ನು ಹೇಳುತ್ತಿದ್ದೇನೆ.

25 “ಈಗ ನೀನು ಆರೋನನನ್ನೂ ಅವನ ಮಗನಾದ ಎಲ್ಲಾಜಾರನನ್ನೂ ಕರೆದುಕೊಂಡು ಹೋರ್ ಬೆಟ್ಟಕ್ಕೆ ಬಾ. 26 ಆರೋನನ ಪ್ರತಿಷ್ಠಿತ ವಸ್ತ್ರಗಳನ್ನು ಅವನಿಂದ ತೆಗೆದು ಅವನ ಮಗನಾದ ಎಲ್ಲಾಜಾರನ ಮೇಲೆ ಹಾಕು. ಆರೋನನು ಅಲ್ಲಿ ಬೆಟ್ಟದ ಮೇಲೆ ಸತ್ತು ಪೂರ್ವಿಕರ ಬಳಿ ಸೇರುವನು” ಎಂದು ಹೇಳಿದನು.

27 ಮೋಶೆಯು ಯೆಹೋವನ ಅಪ್ಪಣೆಗೆ ವಿಧೇಯನಾದನು. ಮೋಶೆ, ಆರೋನ ಮತ್ತು ಎಲ್ಲಾಜಾರ ಇವರು ಹೋರ್ ಬೆಟ್ಟವನ್ನು ಹತ್ತಿದರು. ಅವರು ಹೋಗುತ್ತಿರುವುದನ್ನು ಇಸ್ರೇಲರೆಲ್ಲರೂ ನೋಡಿದರು. 28 ಮೋಶೆಯು ಆರೋನನ ಪ್ರತಿಷ್ಠಿತಾ ವಸ್ತ್ರಗಳನ್ನು ಅವನಿಂದ ತೆಗೆದು ಅವನ ಮಗನಾದ ಎಲ್ಲಾಜಾರನ ಮೇಲೆ ಹಾಕಿದನು. ಬಳಿಕ ಆರೋನನು ಬೆಟ್ಟದ ಮೇಲೆ ಸತ್ತನು. ಮೋಶೆ ಮತ್ತು ಎಲ್ಲಾಜಾರನು ಬೆಟ್ಟದಿಂದ ಇಳಿದುಬಂದರು. 29 ಆರೋನನು ಸತ್ತನೆಂದು ಇಸ್ರೇಲರೆಲ್ಲರಿಗೆ ತಿಳಿಯಿತು. ಆದ್ದರಿಂದ ಇಸ್ರೇಲಿನಲ್ಲಿ ಪ್ರತಿಯೊಬ್ಬನೂ ಆರೋನನಿಗಾಗಿ ಮೂವತ್ತು ದಿನಗಳವರೆಗೆ ಶೋಕಿಸಿದನು.

ಕೀರ್ತನೆಗಳು 58-59

ರಚನೆಗಾರ: ದಾವೀದ.

58 ಅಧಿಪತಿಗಳೇ, ನಿಮ್ಮ ತೀರ್ಪುಗಳು ನ್ಯಾಯವಾಗಿವೆಯೋ?
    ನ್ಯಾಯಾಧಿಪತಿಗಳೇ, ನಿಮ್ಮ ತೀರ್ಪುಗಳು ಯಥಾರ್ಥವಾಗಿವೆಯೋ?
ಇಲ್ಲ, ನಿಮ್ಮ ಆಲೋಚನೆಗಳೆಲ್ಲಾ ದುಷ್ಟತನವೇ;
    ನೀವು ಭೂಲೋಕದಲ್ಲಿ ತೂಗಿಕೊಡುವುದು ಅನ್ಯಾಯವನ್ನೇ.
ಆ ದುಷ್ಟರು ಹುಟ್ಟಿದಾಕ್ಷಣದಿಂದ ತಪ್ಪನ್ನು ಮಾಡತೊಡಗಿದರು.
    ಅವರು ಹುಟ್ಟಿದಂದಿನಿಂದ ಸುಳ್ಳುಗಾರರಾಗಿದ್ದಾರೆ.
ಅವರ ಕೋಪವು ನಾಗರಹಾವಿನ ವಿಷದಷ್ಟೇ ಅಪಾಯಕರ.[a]
    ಕಿವುಡು ನಾಗರಹಾವಿನಂತೆ ಅವರು ಸತ್ಯಕ್ಕೆ ಕಿವಿಗೊಡುವುದಿಲ್ಲ.
ಕಿವುಡು ನಾಗರಹಾವುಗಳು ಹಾವಾಡಿಗರ ಕೊಳಲ ನಾದವನ್ನು ಕೇಳಲಾರವು.
    ಆ ದುಷ್ಟರು ದುಷ್ಟಾಲೋಚನೆಗಳನ್ನು ಮಾಡುವಾಗ ಕಿವುಡು ನಾಗರಹಾವುಗಳಂತಿರುವರು.

ಯೆಹೋವನೇ, ಅವರು ಸಿಂಹಗಳಂತಿದ್ದಾರೆ.
    ದೇವರೇ, ಅವರ ಹಲ್ಲುಗಳನ್ನು ಮುರಿದುಹಾಕು.
ಹರಿದು ಕಾಣದೆಹೋಗುವ ನೀರಿನಂತೆ ಆ ಜನರು ಕಾಣದೆ ಹೋಗಲಿ.
    ಹಾದಿಯ ಮೇಲಿರುವ ಕಳೆಯಂತೆ ಅವರು ಜಜ್ಜಿಹೋಗಲಿ.
ಬಸವನಹುಳಗಳು ದಾರಿಯಲ್ಲೇ ಕರಗಿಹೋಗುವಂತೆ ಅವರೂ ಕರಗಿಹೋಗಲಿ.
    ಗರ್ಭದಲ್ಲೇ ಸತ್ತುಹೋದ ಮಗುವಿನಂತೆ ಅವರು ಹಗಲನ್ನು ಕಾಣದಂತಾಗಲಿ.
ಒಲೆಯಲ್ಲಿ ಉರಿದುಹೋಗುವ ಮುಳ್ಳುಕಡ್ಡಿಗಳನ್ನು
    ಗಾಳಿಯು ಹಾರಿಸಿಬಿಡುವಂತೆ ದೇವರ ಉಗ್ರಕೋಪವು ಅವರನ್ನು ನಾಶಮಾಡಲಿ.

10 ದುಷ್ಟರಿಗಾಗುವ ಪ್ರತಿದಂಡನೆಯನ್ನು
    ನೀತಿವಂತರು ಕಂಡು ಹರ್ಷಿಸುವರು;
ಆ ದುಷ್ಟರ ರಕ್ತದಲ್ಲಿ ಕಾಲಾಡಿಸುವರು.
11 ಆಗ ಜನರೆಲ್ಲರು, “ನೀತಿವಂತರಿಗೆ ಪ್ರತಿಫಲ ಸಿಕ್ಕೇಸಿಕ್ಕುವುದು;
    ಲೋಕಕ್ಕೆ ತೀರ್ಪು ನೀಡುವ ದೇವರಿರುವುದು ಸತ್ಯವೇ ಸರಿ” ಎಂದು ಹೇಳುವರು.

ಸೌಲನು ದಾವೀದನನ್ನು ಕೊಲ್ಲಲು ಮುತ್ತಿಗೆ ಹಾಕಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

59 ನನ್ನ ದೇವರೇ, ವೈರಿಗಳಿಂದ ನನ್ನನ್ನು ಬಿಡಿಸು.
    ನನಗೆ ವಿರೋಧವಾಗಿ ಎದ್ದಿರುವ ಜನರಿಂದ ನನ್ನನ್ನು ಸಂರಕ್ಷಿಸು.
ಆ ದುಷ್ಟರಿಂದ ನನ್ನನ್ನು ವಿಮೋಚಿಸು.
    ಆ ಕೊಲೆಪಾತಕರಿಂದ ನನ್ನನ್ನು ರಕ್ಷಿಸು.
ಇಗೋ, ನನ್ನನ್ನು ಕೊಲ್ಲಲು ಬಲಿಷ್ಠರು ಹೊಂಚುಹಾಕಿದ್ದ್ದಾರೆ.
    ಆದರೆ ನಾನು ಪಾಪವನ್ನಾಗಲಿ ಅಪರಾಧವನ್ನಾಗಲಿ ಮಾಡಿಲ್ಲ.
ಅವರು ನನ್ನ ಮೇಲೆ ಆಕ್ರಮಣಮಾಡಲು ಬರುತ್ತಿದ್ದಾರೆ, ಆದರೆ ನಾನೇನು ತಪ್ಪು ಮಾಡಿಲ್ಲ.
    ಯೆಹೋವನೇ, ಸ್ವತಃ ನೀನೇ ಬಂದು ನೋಡು!
ಸೇನಾಧೀಶ್ವರನಾದ ಯೆಹೋವನೇ, ಇಸ್ರೇಲರ ದೇವರೇ, ಎದ್ದೇಳು!
    ಅವರನ್ನು ದಂಡಿಸು!
ಆ ದುಷ್ಟ ದ್ರೋಹಿಗಳಿಗೆ ಕರುಣೆಯನ್ನೇ ತೋರಬೇಡ.

ಗುರುಗುಟ್ಟುತ್ತಾ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳಂತೆ
    ಅವರು ಸಾಯಂಕಾಲದಲ್ಲಿ ಪಟ್ಟಣದಲ್ಲೆಲ್ಲಾ ಸುತ್ತಾಡುತ್ತಾರೆ.
ತಮ್ಮ ನಾಲಿಗೆಗಳೇ ಆಯುಧಗಳೆಂಬಂತೆ
    ಅಪಮಾನಕರವಾದ ನುಡಿಗಳನ್ನು ಬೊಗಳುತ್ತಾರೆ.
    ಯಾರು ಕೇಳಿಸಿಕೊಂಡರೂ ಅವರಿಗೆ ಚಿಂತೆಯಿಲ್ಲ.

ಯೆಹೋವನೇ, ಅವರನ್ನು ನೋಡಿ ನಗು.
    ಅವರೆಲ್ಲರನ್ನು ಅಪಹಾಸ್ಯ ಮಾಡು.
ನನ್ನ ಬಲವೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ.
    ದೇವರೇ, ಬೆಟ್ಟಗಳ ಶಿಖರದಲ್ಲಿರುವ ಆಶ್ರಯದುರ್ಗ ನೀನೇ.
10 ದೇವರು ನನ್ನನ್ನು ಪ್ರೀತಿಸುವನು; ನನ್ನ ಜಯಕ್ಕೆ ಆತನೇ ಸಹಾಯ ಮಾಡುವನು.
    ನನ್ನ ಶತ್ರುಗಳನ್ನು ಸೋಲಿಸಲು ಆತನೇ ನನಗೆ ನೆರವು ನೀಡುವನು.
11 ಯೆಹೋವನೇ, ನಮ್ಮ ಗುರಾಣಿಯೇ, ಅವರನ್ನು ಫಕ್ಕನೆ ಕೊಲ್ಲಬೇಡ, ಇಲ್ಲವಾದರೆ, ನನ್ನ ಜನರು ಮರೆತುಬಿಡಬಹುದು.
    ನನ್ನ ಒಡಯನೇ, ಸಂರಕ್ಷಕನೇ, ಅವರನ್ನು ಚದರಿಸಿಬಿಡು; ನಿನ್ನ ಬಲದಿಂದ ಸೋಲಿಸಿಬಿಡು.
12 ಆ ದುಷ್ಟರು ಶಪಿಸುತ್ತಾರೆ, ಸುಳ್ಳಾಡುತ್ತಾರೆ.
    ಅವರ ಮಾತುಗಳ ನಿಮಿತ್ತವೇ ಅವರನ್ನು ದಂಡಿಸು.
    ಅವರು ತಮ್ಮ ಗರ್ವದಿಂದಲೇ ಸಿಕ್ಕಿಬೀಳಲಿ.
13 ನೀನು ಅವರನ್ನು ಕೋಪದಿಂದ ನಾಶಮಾಡು.
    ಅವರನ್ನು ಸಂಪೂರ್ಣವಾಗಿ ನಾಶಮಾಡು.
ಯಾಕೋಬನ ವಂಶದವರನ್ನು ಆಳುತ್ತಿರುವವನು ನೀನೇ ಎಂದು ಆಗ ಲೋಕದವರಿಗೆಲ್ಲಾ ಗೊತ್ತಾಗುವುದು.

14 ಗುರುಗುಟ್ಟುತ್ತಾ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳಂತೆ
    ಅವರು ಸಾಯಂಕಾಲದಲ್ಲಿ ಪಟ್ಟಣದಲ್ಲೆಲ್ಲಾ ಸುತ್ತಾಡುತ್ತಾರೆ.
15 ಅವರು ಊಟಕ್ಕಾಗಿ ಹುಡುಕಾಡಿದರೂ ಸಿಕ್ಕುವುದಿಲ್ಲ;
    ಮಲಗಲು ಸ್ಥಳವೂ ಸಿಕ್ಕುವುದಿಲ್ಲ.
16 ನಾನಾದರೋ ಮುಂಜಾನೆ ನಿನಗೆ ಸ್ತುತಿಗೀತೆಗಳನ್ನು ಹಾಡುವೆ;
    ನಿನ್ನ ಪ್ರೀತಿಯ ಕುರಿತು ಕೊಂಡಾಡುವೆನು;
ಯಾಕೆಂದರೆ ಇಕ್ಕಟ್ಟಿನಲ್ಲಿ ನೀನೇ ನನಗೆ ಆಶ್ರಯದುರ್ಗವಾಗಿರುವೆ.
17 ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆ.
    ಯಾಕೆಂದರೆ ನೀನೇ ನನಗೆ ಆಶ್ರಯದುರ್ಗವಾಗಿರುವೆ.
    ನನ್ನನ್ನು ಪ್ರೀತಿಸುವ ದೇವರು ನೀನೇ!

ಯೆಶಾಯ 9:8-10:4

ದೇವರು ಇಸ್ರೇಲನ್ನು ಶಿಕ್ಷಿಸುವನು

ಯಾಕೋಬನ ಜನರಿಗೆ, ನನ್ನ ದೇವರಾದ ಯೆಹೋವನು ಆಜ್ಞೆಯನ್ನು ಕೊಟ್ಟಿದ್ದಾನೆ. ಇಸ್ರೇಲರಿಗೆ ವಿರುದ್ಧವಾಗಿರುವ ಈ ಆಜ್ಞೆಯು ನೆರವೇರಲ್ಪಡುವುದು. ಆಗ ಎಫ್ರಾಯೀಮಿನಲ್ಲಿರುವ (ಇಸ್ರೇಲಿನಲ್ಲಿರುವ) ಪ್ರತಿಯೊಬ್ಬನೂ, ಸಮಾರ್ಯದ ನಾಯಕರೂ, ದೇವರು ತಮ್ಮನ್ನು ಶಿಕ್ಷಿಸಿದ್ದಾನೆಂದು ತಿಳಿದುಕೊಳ್ಳುವರು.

ಅವರು ಬಹು ಗರ್ವಿಷ್ಠರಾಗಿ ಹೆಚ್ಚಳಪಡುತ್ತಿದ್ದಾರೆ. ಅವರು ಹೇಳುವುದೇನೆಂದರೆ, 10 “ಈ ಇಟ್ಟಿಗೆಗಳು ಕೆಳಗೆ ಬಿದ್ದರೂ ನಾವು ಅವುಗಳನ್ನು ಮತ್ತೆ ಕಟ್ಟುತ್ತೇವೆ. ನಾವು ಅದನ್ನು ಬಲವಾದ ಕಲ್ಲುಗಳಿಂದ ಕಟ್ಟುವೆವು. ಈ ಸಣ್ಣಸಣ್ಣ ಮರಗಳು ಕಡಿದುಹಾಕಲ್ಪಟ್ಟರೂ ಆ ಸ್ಥಳದಲ್ಲಿ ನಾವು ದೇವದಾರು ಮರಗಳನ್ನು ನೆಡುವೆವು. ಆ ದೇವದಾರು ಮರಗಳು ಎತ್ತರವಾಗಿಯೂ ಬಲವಾಗಿಯೂ ಇರುತ್ತವೆ.”

11 ಹೀಗೆ ಯೆಹೋವನು ಇಸ್ರೇಲಿಗೆ ವಿರುದ್ಧವಾಗಿ ಯುದ್ಧ ಮಾಡುವವರನ್ನು ಕಂಡುಹಿಡಿಯುವನು. ಯೆಹೋವನು ರೆಚೀನನ ವೈರಿಗಳನ್ನು ಅವರಿಗೆ ವಿರುದ್ಧವಾಗಿ ಎಬ್ಬಿಸುವನು. 12 ಯೆಹೋವನು ಪೂರ್ವದಿಂದ ಅರಾಮ್ಯರನ್ನೂ ಪಶ್ಚಿಮದಿಂದ ಫಿಲಿಷ್ಟಿಯರನ್ನೂ ಕರೆತರುವನು. ಆ ಶತ್ರುಗಳು ಇಸ್ರೇಲರನ್ನು ಅವರ ಸೈನ್ಯದೊಂದಿಗೆ ಸೋಲಿಸಿಬಿಡುವರು. ಆದರೆ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡಿರುವುದರಿಂದ ಅವರನ್ನು ಶಿಕ್ಷಿಸಲು ಇನ್ನೂ ಸಿದ್ಧನಾಗಿರುವನು.

13 ದೇವರು ಜನರನ್ನು ಶಿಕ್ಷಿಸಿದರೂ ಅವರು ಪಾಪ ಮಾಡುವದನ್ನು ನಿಲ್ಲಿಸುವದಿಲ್ಲ. ಅವರು ಆತನ ಬಳಿಗೆ ಹಿಂದಿರುಗಿಬರುವದಿಲ್ಲ. ಸರ್ವಶಕ್ತನಾದ ಯೆಹೋವನನ್ನು ಅವರು ಹಿಂಬಾಲಿಸುವುದಿಲ್ಲ. 14 ಆದ್ದರಿಂದ ಯೆಹೋವನು ಇಸ್ರೇಲರ ತಲೆಯನ್ನೂ ಬಾಲವನ್ನೂ ಕತ್ತರಿಸುವನು. ಒಂದೇ ದಿವಸದಲ್ಲಿ ಯೆಹೋವನು ಮರದ ಕಾಂಡವನ್ನೂ ಕೊಂಬೆಗಳನ್ನೂ ಕತ್ತರಿಸಿಬಿಡುವನು. 15 ತಲೆ ಅಂದರೆ ಹಿರಿಯರು ಮತ್ತು ಪ್ರಮುಖರು. ಬಾಲವೆಂದರೆ ಸುಳ್ಳುಪ್ರವಾದಿಗಳು.

16 ಜನರಿಗೆ ಮಾರ್ಗದರ್ಶನ ಮಾಡುವ ನಾಯಕರು ಜನರನ್ನು ತಪ್ಪುದಾರಿಯಲ್ಲಿ ನಡಿಸುತ್ತಿದ್ದಾರೆ. ಅವರನ್ನು ಹಿಂಬಾಲಿಸುವ ಜನರು ನಾಶವಾಗುವರು. 17 ಜನರೆಲ್ಲರೂ ದುಷ್ಟರಾಗಿದ್ದಾರೆ. ಆದ್ದರಿಂದ ಯೆಹೋವನು ಯುವಕರಲ್ಲಿ ಸಂತೋಷಿಸುವದಿಲ್ಲ. ಅವರ ವಿಧವೆಯರಿಗೆ ಮತ್ತು ಅನಾಥರಿಗೆ ದೇವರು ದಯೆ ತೋರಿಸುವುದಿಲ್ಲ; ಯಾಕೆಂದರೆ ಎಲ್ಲಾ ಜನರು ದುಷ್ಟರಾಗಿದ್ದಾರೆ. ಅವರು ದೇವರಿಗೆ ವಿರುದ್ಧವಾಗಿ ನಡೆಯುತ್ತಾರೆ. ಅವರು ಸುಳ್ಳಾಡುತ್ತಾರೆ.

ಆದ್ದರಿಂದ ದೇವರು ಅವರ ಮೇಲೆ ಕೋಪದಿಂದಲೇ ಇರುವನು; ಅವರನ್ನು ದಂಡಿಸುತ್ತಲೇ ಇರುವನು.

18 ದುಷ್ಟತನವು ಒಂದು ಚಿಕ್ಕ ಬೆಂಕಿಯಂತಿದೆ. ಮೊಟ್ಟ ಮೊದಲು ಬೆಂಕಿಯು ಹಣಜಿಗಳನ್ನು ಮತ್ತು ಮುಳ್ಳುಗಿಡಗಳನ್ನು ಸುಡುವುದು. ಅನಂತರ ಬೆಂಕಿಯು ಕಾಡಿನ ದೊಡ್ಡ ಪೊದೆಗಳನ್ನು ಸುಡುವುದು. ಕೊನೆಗದು ದೊಡ್ಡ ಗಾತ್ರದ ಬೆಂಕಿಯಾಗಿ ಎಲ್ಲವನ್ನೂ ಸುಟ್ಟುಬಿಟ್ಟು ಎಲ್ಲವೂ ಹೊಗೆಯಾಗಿ ಪರಿಣಮಿಸುವದು.

19 ಸರ್ವಶಕ್ತನಾದ ಯೆಹೋವನು ಕೋಪಗೊಂಡಿರುವುದರಿಂದ ದೇಶವೆಲ್ಲಾ ಸುಟ್ಟುಹೋಗುವದು. ಆ ಬೆಂಕಿಯಲ್ಲಿ ಜನರೆಲ್ಲಾ ಸುಟ್ಟುಹೋಗುವರು. ಯಾರೂ ತನ್ನ ಸಹೋದರರನ್ನು ರಕ್ಷಿಸಲು ಪ್ರಯತ್ನಿಸುವದಿಲ್ಲ. 20 ಜನರು ತಮ್ಮ ಬಲಗಡೆಯಲ್ಲಿರುವದನ್ನು ಕಿತ್ತುಕೊಳ್ಳುವರು. ಆದರೆ ಅದು ಅವರ ಹಸಿವೆಯನ್ನು ನೀಗುವುದಿಲ್ಲ. ಜನರು ಎಡಬದಿಯಲ್ಲಿರುವದನ್ನು ತಿನ್ನುವರು; ಆದರೆ ಅವರ ಹೊಟ್ಟೆತುಂಬುವದಿಲ್ಲ. ಆ ಬಳಿಕ ಪ್ರತಿಯೊಬ್ಬನು ತನ್ನ ಶರೀರವನ್ನೇ ತಿನ್ನಲು ಪ್ರಾರಂಭಿಸುವನು. 21 ಇದರರ್ಥವೇನೆಂದರೆ ಮನಸ್ಸೆಯು ಎಫ್ರಾಯೀಮನೊಡನೆ ಯುದ್ಧ ಮಾಡುವನು ಮತ್ತು ಎಫ್ರಾಯೀಮನು ಮನಸ್ಸೆಯೊಂದಿಗೆ ಯುದ್ಧಮಾಡುವನು. ಆಮೇಲೆ ಅವರಿಬ್ಬರೂ ಸೇರಿ ಯೆಹೂದದೊಂದಿಗೆ ಯುದ್ಧ ಮಾಡುವರು.

ಯೆಹೋವನು ಇಸ್ರೇಲರ ಮೇಲೆ ಇನ್ನೂ ಕೋಪದಿಂದಿದ್ದಾನೆ; ತನ್ನ ಜನರನ್ನು ಇನ್ನೂ ಶಿಕ್ಷಿಸಲು ಸಿದ್ಧನಾಗಿದ್ದಾನೆ.

10 ಕೆಟ್ಟ ನಿಯಮವನ್ನು ಬರೆಯುವ ನ್ಯಾಯಶಾಸ್ತ್ರಿಗಳನ್ನು ನೋಡಿರಿ. ಆ ನ್ಯಾಯಶಾಸ್ತ್ರಿಗಳು ಜನರಿಗೆ ಕಷ್ಟವಾಗಿರುವ ನಿಯಮಗಳನ್ನೇ ಮಾಡುತ್ತಾರೆ. ಅವರು ಬಡವರಿಗೆ ನ್ಯಾಯವಂತರಾಗಿರುವುದಿಲ್ಲ. ಅವರು ಬಡಜನರ ಹಕ್ಕನ್ನು ತೆಗೆದುಬಿಡುವರು. ಜನರು ವಿಧವೆಯರಿಂದಲೂ ಅನಾಥರಿಂದಲೂ ಹಣ ಕಿತ್ತುಕೊಳ್ಳುವಂತೆ ಮಾಡುವರು.

ನ್ಯಾಯಶಾಸ್ತ್ರಿಗಳೇ, ನಿಮ್ಮ ಕಾರ್ಯಗಳಿಗೆ ನೀವೇ ಉತ್ತರ ಕೊಡಬೇಕು. ಆಗ ನೀವು ಏನು ಮಾಡುವಿರಿ? ದೂರದೇಶದಿಂದ ನಿಮ್ಮ ನಾಶನವು ಬರುತ್ತಲಿದೆ. ಸಹಾಯಕ್ಕಾಗಿ ಎಲ್ಲಿಗೆ ಓಡುವಿರಿ? ನಿಮ್ಮ ಐಶ್ವರ್ಯವೂ ನಿಮ್ಮ ಧನರಾಶಿಯೂ ನಿಮ್ಮನ್ನು ರಕ್ಷಿಸಲಾರವು. ನೀವು ಕೈದಿಗಳಂತೆ ತಲೆತಗ್ಗಿಸುವಿರಿ, ಸತ್ತಹೆಣಗಳಂತೆ ನೆಲದ ಮೇಲೆ ಬೀಳುವಿರಿ. ಆದರೆ ಅದರಿಂದ ನಿಮಗೆ ಪ್ರಯೋಜನವಾಗದು. ದೇವರು ನಿಮ್ಮ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ. ನಿಮ್ಮನ್ನು ಇನ್ನೂ ಶಿಕ್ಷಿಸಲು ಸಿದ್ಧನಾಗಿದ್ದಾನೆ.

ಯಾಕೋಬನು 3

ಹತೋಟಿಮೀರಿ ಮಾತಾಡಬೇಡಿ

ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಅನೇಕರು ಬೋಧಕರಾಗಬಾರದು. ಏಕೆಂದರೆ ಬೋಧಕರಾದ ನಮಗೆ ಇತರ ಜನರಿಗಿಂತ ಕಠಿಣವಾದ ತೀರ್ಪಾಗುತ್ತದೆ ಎಂಬುದು ನಿಮಗೆ ತಿಳಿದಿದೆ.

ನಾವೆಲ್ಲರೂ ಅನೇಕ ವಿಷಯಗಳಲ್ಲಿ ತಪ್ಪುವುದುಂಟು. ಆದರೆ ಮಾತಿನಲ್ಲಿ ಎಂದೂ ತಪ್ಪುಮಾಡಿಲ್ಲದ ವ್ಯಕ್ತಿಯು ಪರಿಪೂರ್ಣನೂ ತನ್ನ ದೇಹವನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಸಮರ್ಥನೂ ಆಗಿದ್ದಾನೆ. ನಾವು ಕುದುರೆಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ಸ್ವಾಧೀನ ಪಡಿಸಿಕೊಳ್ಳಬಹುದು. ಇದೇ ನಿಯಮ ಹಡಗುಗಳಿಗೂ ಅನ್ವಯಿಸುತ್ತದೆ. ಹಡಗು ಬಹಳ ದೊಡ್ಡದಾಗಿರುತ್ತದೆ ಮತ್ತು ಬಲವಾದ ಗಾಳಿಯು ಅದನ್ನು ತಳ್ಳಿಕೊಂಡು ಹೋಗುತ್ತದೆ. ಆದರೆ ಒಂದು ಸಣ್ಣ ಚುಕ್ಕಾಣಿಯು ಆ ದೊಡ್ಡ ಹಡಗನ್ನು ನಿಯಂತ್ರಿಸುತ್ತದೆ. ಚುಕ್ಕಾಣಿಯನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವವನು ಹಡಗು ಹೋಗಬೇಕಾದ ಮಾರ್ಗವನ್ನು ತೀರ್ಮಾನಿಸುತ್ತಾನೆ. ಅವನ ಅಪೇಕ್ಷೆಯಂತೇ ಹಡಗು ಹೋಗುತ್ತದೆ. ನಮ್ಮ ನಾಲಿಗೆಯೂ ಅದರಂತೆಯೆ. ಅದು ದೇಹದ ಒಂದು ಸಣ್ಣ ಭಾಗವಾದರೂ, ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ.

ಒಂದು ಚಿಕ್ಕ ಬೆಂಕಿಯ ಕಿಡಿಯು ದೊಡ್ಡ ಕಾಡ್ಗಿಚ್ಚಿಗೆ ಕಾರಣವಾಗುತ್ತದೆ. ನಾಲಿಗೆಯು ಬೆಂಕಿಯ ಕಿಡಿಯಂತೆ ನಮ್ಮ ದೇಹದ ಭಾಗಗಳಲ್ಲಿ ಅದು ಕೆಟ್ಟ ಲೋಕದಂತಿದೆ. ಹೇಗೆಂದರೆ, ನಾಲಿಗೆಯು ನಮ್ಮ ದೇಹದಲ್ಲೆಲ್ಲಾ ಕೆಟ್ಟತನವನ್ನು ಹರಡುತ್ತದೆ. ನಮ್ಮ ಜೀವಿತದ ಮೇಲೆಲ್ಲಾ ಪ್ರಭಾವ ಬೀರುವ ಬೆಂಕಿಯನ್ನು ಅದು ನರಕದಿಂದ ಪಡೆದು ಹೊತ್ತಿಸುತ್ತದೆ.

ಜನರು ಎಲ್ಲಾ ವಿಧವಾದ ಕಾಡುಮೃಗ, ಪಕ್ಷಿ, ಸರ್ಪ, ಮೀನುಗಳನ್ನು ಹತೋಟಿಗೆ ತರುತ್ತಾರೆ. ಜನರು ಈಗಾಗಲೇ ಇವುಗಳನ್ನು ಹತೋಟಿಗೆ ತಂದಿದ್ದಾರೆ. ಆದರೆ ಯಾರೂ ನಾಲಿಗೆಯನ್ನು ಹತೋಟಿಗೆ ತಂದಿಲ್ಲ. ಅದು ಕ್ರೂರವಾದದ್ದೂ ಕೆಟ್ಟದ್ದೂ ಆಗಿದೆ. ಅದು ಮರಣಕರವಾದ ವಿಷವನ್ನು ತುಂಬಿಕೊಂಡಿದೆ. ನಮ್ಮ ಪ್ರಭುವನ್ನು ಮತ್ತು ತಂದೆಯನ್ನು (ದೇವರು) ಸ್ತುತಿಸಲು ನಮ್ಮ ನಾಲಿಗೆಯನ್ನು ಬಳಸುತ್ತೇವೆ; ಆದರೆ ಅದರಿಂದಲೇ ಜನರನ್ನು ಶಪಿಸುತ್ತೇವೆ. ದೇವರು ಆ ಜನರನ್ನೂ ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿಸಿದ್ದಾನೆ. 10 ಹೊಗಳಿಕೆ ಮತ್ತು ತೆಗಳಿಕೆಗಳೆರಡೂ ಒಂದೇ ಬಾಯಿಂದ ಬರುತ್ತವೆ! ನನ್ನ ಸಹೋದರ ಸಹೋದರಿಯರೇ, ಇದು ಸಂಭವಿಸಲೇಬಾರದು. 11 ಸಿಹಿಯಾದ ನೀರು ಮತ್ತು ಕಹಿಯಾದ ನೀರು ಒಂದೇ ಬುಗ್ಗೆಯಿಂದ ಹರಿಯುತ್ತವೆಯೋ? ಇಲ್ಲ! 12 ನನ್ನ ಸಹೋದರ ಸಹೋದರಿಯರೇ, ಅಂಜೂರದ ಮರವು ಆಲಿವ್ ಕಾಯಿಗಳನ್ನು ಬಿಡುವುದೇ? ಇಲ್ಲ! ದ್ರಾಕ್ಷಿಬಳ್ಳಿಯು ಅಂಜೂರದ ಹಣ್ಣನ್ನು ಬಿಡುವುದೇ? ಇಲ್ಲ! ಉಪ್ಪು ನೀರಿನಿಂದ ತುಂಬಿದ ಬಾವಿಯು ಸಿಹಿ ನೀರನ್ನು ಕೊಡುವುದಿಲ್ಲ.

ನಿಜವಾದ ಜ್ಞಾನ

13 ನಿಮ್ಮಲ್ಲಿ ಜ್ಞಾನವಂತರಾಗಲಿ ಬದ್ಧಿವಂತರಾಗಲಿ ಇದ್ದಾರೋ? ಅಂಥವನು ತನ್ನ ಜ್ಞಾನವನ್ನು ಯೋಗ್ಯವಾಗಿ ಬದುಕುವುದರ ಮೂಲಕ ತೋರ್ಪಡಿಸಲಿ. ಅವನು ಒಳ್ಳೆಯ ಕಾರ್ಯಗಳನ್ನು ದೀನತೆಯಿಂದ ಮಾಡಲಿ. ಜ್ಞಾನಿಯಾದವನು ಕೊಚ್ಚಿಕೊಳ್ಳುವುದಿಲ್ಲ. 14 ನೀವು ಸ್ವಾರ್ಥಿಗಳೂ ತೀಕ್ಷ್ಣವಾದ ಮತ್ಸರವನ್ನು ಹೃದಯದಲ್ಲಿ ಹೊಂದಿರುವವರೂ ಆಗಿದ್ದರೆ, ನೀವು ಕೊಚ್ಚಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಅದು ಕೇವಲ ಸುಳ್ಳಷ್ಟೇ. 15 ಇಂಥ “ಜ್ಞಾನ”ವು ದೇವರಿಂದ ಬರದೆ ಲೋಕದಿಂದ ಬರುತ್ತದೆ. ಅದು ಆತ್ಮ ಸಂಬಂಧವಾದುದಲ್ಲ. ಅದು ದೆವ್ವಗಳಿಂದ ಬಂದುದು. 16 ಹೊಟ್ಟೆಕಿಚ್ಚು ಮತ್ತು ಸ್ವಾರ್ಥತೆಗಳು ಎಲ್ಲಿರುವವೋ ಅಲ್ಲಿ ಗಲಿಬಿಲಿಯೂ ಎಲ್ಲಾ ಬಗೆಯ ನೀಚತನಗಳೂ ಇರುತ್ತವೆ. 17 ಆದರೆ ದೇವರಿಂದ ಬರುವ ಜ್ಞಾನವು ಹೀಗಿರುತ್ತದೆ: ಮೊದಲನೆಯದಾಗಿ ಅದು ಪರಿಶುದ್ಧವಾದದ್ದು. ಅದು ಶಾಂತಿದಾಯಕವಾದದ್ದು, ಸಾತ್ವಿಕವಾದದ್ದು ಮತ್ತು ಸುಲಭವಾಗಿ ಮೆಚ್ಚಿಕೊಳ್ಳುವಂಥದ್ದು. ಈ ಜ್ಞಾನವು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ಇತರ ಜನರಿಗೆ ಒಳ್ಳೆಯದನ್ನು ಮಾಡಲು ಯಾವಾಗಲೂ ಸಿದ್ಧವಾಗಿರುತ್ತದೆ. ಈ ಜ್ಞಾನವು ಯಾವಾಗಲೂ ನ್ಯಾಯವಾದದ್ದು ಮತ್ತು ಯಥಾರ್ಥವಾದದ್ದು. 18 ಶಾಂತಿ ಸ್ಥಾಪಿಸುವುದಕ್ಕಾಗಿ ಸಮಾಧಾನಕರವಾದ ರೀತಿಯಲ್ಲಿ ಕಾರ್ಯ ಮಾಡುವವರು ಯೋಗ್ಯವಾದ ಬದುಕಿನಿಂದ ಬರುವ ಉತ್ತಮ ಫಲಗಳನ್ನು ಪಡೆಯುತ್ತಾರೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International