Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 19

ಕೆಂಪು ಹಸುವಿನ ಬೂದಿ

19 ಯೆಹೋವನು ಮೋಶೆ ಮತ್ತು ಆರೋನರೊಡನೆ ಮಾತಾಡಿ ಹೀಗೆಂದನು: “ಯೆಹೋವನು ಆಜ್ಞಾಪಿಸಿದ ಸಂಪ್ರದಾಯದ ನಿಯಮವಿದು. ಯಾವ ದೋಷವಿಲ್ಲದ ಕೆಂಪು ಹಸುವನ್ನು ನಿನಗೆ ತಂದುಕೊಡುವಂತೆ ಇಸ್ರೇಲರಿಗೆ ಹೇಳು. ಆ ಹಸುವಿನಲ್ಲಿ ಯಾವ ಗಾಯಗಳಿರಬಾರದು ಮತ್ತು ಆ ಹಸುವು ಎಂದಿಗೂ ನೊಗವನ್ನು ಹೊತ್ತಿರಬಾರದು. ಅದನ್ನು ಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಿರಿ. ಅವನು ಅದನ್ನು ಪಾಳೆಯದ ಹೊರಗೆ ಹೊಡಿಸಿಕೊಂಡು ಹೋಗಿ ತನಗೆದುರಾಗಿಯೇ ಒಬ್ಬನ ಕೈಯಿಂದ ವಧೆ ಮಾಡಿಸಬೇಕು. ಬಳಿಕ ಅವನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ದೇವದರ್ಶನಗುಡಾರದ ಮುಂಭಾಗದ ಕಡೆಗೆ ಏಳು ಸಾರಿ ಚಿಮಿಕಿಸಬೇಕು. ಬಳಿಕ ಅವನು ಆ ಹಸುವನ್ನು ಚರ್ಮ, ಮಾಂಸ, ರಕ್ತ ಮತ್ತು ಕಲ್ಮಶಗಳ ಸಹಿತವಾಗಿ ತನ್ನ ಎದುರಿನಲ್ಲಿಯೇ ಸುಡಿಸಬೇಕು. ಯಾಜಕನು ದೇವದಾರು ಮರದ ಕಟ್ಟಿಗೆಯನ್ನೂ ಹಿಸ್ಸೋಪ್ ಗಿಡದ ಎಳೆಕೊಂಬೆಯನ್ನೂ ಕೆಂಪು ದಾರವನ್ನೂ ತೆಗೆದುಕೊಂಡು, ಉರಿಯುತ್ತಿರುವ ಆ ಹಸುವಿನ ಮೇಲೆ ಎಸೆಯಬೇಕು. ಆ ಯಾಜಕನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನ ಮಾಡಿದ ನಂತರ ಪಾಳೆಯದೊಳಗೆ ಬರಬಹುದು. ಆದರೆ ಆ ದಿನದ ಸಾಯಂಕಾಲದವರೆಗೆ ಅವನು ಅಶುದ್ಧನಾಗಿರುವನು. ಆ ಹಸುವನ್ನು ಸುಟ್ಟು ಹಾಕಿದವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನ ಮಾಡಿಕೊಳ್ಳಬೇಕು; ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

“ಆಗ ಶುದ್ಧನಾದವನೊಬ್ಬನು ಹಸುವಿನ ಬೂದಿಯನ್ನು ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಇಡಬೇಕು. ಇಸ್ರೇಲರ ಶುದ್ಧೀಕರಣದ ನೀರನ್ನು ಸಿದ್ಧಪಡಿಸುವುದಕ್ಕಾಗಿ ಆ ಬೂದಿಯನ್ನು ಉಪಯೋಗಿಸಬೇಕು. ಅದು ದೋಷಪರಿಹಾರಕವಾದದ್ದು.

10 “ಆ ಬೂದಿಯನ್ನು ಕೂಡಿಸಿದವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

“ಇದು ಇಸ್ರೇಲರಿಗೂ ಅವರ ಮಧ್ಯದಲ್ಲಿ ಇಳಿದುಕೊಂಡಿರುವ ಪರದೇಶಸ್ಥರಿಗೂ ಶಾಶ್ವತ ನಿಯಮ. 11 ಯಾವನಾದರೂ ಮನುಷ್ಯನ ಶವವನ್ನು ಮುಟ್ಟಿದರೆ, ಏಳು ದಿನಗಳವರೆಗೆ ಅಶುದ್ಧನಾಗಿರುವನು. 12 ಅವನು ಶುದ್ಧೀಕರಣದ ನೀರಿನಿಂದ ಮೂರನೆಯ ದಿನದಲ್ಲಿ ಮತ್ತು ತಿರುಗಿ ಏಳನೆಯ ದಿನದಲ್ಲಿ ತನ್ನನ್ನು ಶುದ್ಧೀಕರಿಸಿಕೊಳ್ಳಬೇಕು. ಆಗ ಅವನು ಶುದ್ಧನಾಗಿರುವನು. 13 ಒಬ್ಬನು ಮನುಷ್ಯನ ಶವವನ್ನು ಮುಟ್ಟಿ ತನ್ನನ್ನು ಶುದ್ಧೀಕರಿಸಿಕೊಳ್ಳದೆ ಹೋದರೆ ಅವನು ಯೆಹೋವನ ಪವಿತ್ರ ಗುಡಾರವನ್ನು ಅಶುದ್ಧಮಾಡುತ್ತಾನೆ. ಆದ್ದರಿಂದ ಆ ವ್ಯಕ್ತಿಯನ್ನು ಇಸ್ರೇಲರಿಂದ ಬಹಿಷ್ಕರಿಸಬೇಕು. ಶುದ್ಧೀಕರಣದ ವಿಶೇಷ ನೀರು ಅವನ ಮೇಲೆ ಚಿಮಿಕಿಸಲ್ಪಡದ ಕಾರಣ ಅವನು ಅಶುದ್ಧನಾಗಿಯೇ ಇರುವನು. ಅವನ ಅಶುದ್ಧತ್ವ ಅವನಲ್ಲಿ ನೆಲೆಸುವುದು. ಅವನು ಅಶುದ್ಧನಾಗಿಯೇ ಇರುವನು.

14 “ಯಾವನಾದರೂ ಗುಡಾರದಲ್ಲಿ ಸತ್ತರೆ ಅನುಸರಿಸಬೇಕಾದ ನಿಯಮವಿದು: ಒಬ್ಬನು ಗುಡಾರದಲ್ಲಿ ಸತ್ತರೆ, ಆ ಗುಡಾರವನ್ನು ಪ್ರವೇಶಿಸುವ ಪ್ರತಿಯೊಬ್ಬನು ಮತ್ತು ಆ ಗುಡಾರದಲ್ಲಿರುವ ಪ್ರತಿಯೊಬ್ಬನು ಅಶುದ್ಧನಾಗುವನು. ಅವರು ಏಳು ದಿನಗಳವರೆಗೆ ಅಶುದ್ಧರಾಗಿರುವರು. 15 ಮತ್ತು ಮುಚ್ಚಳವಿಲ್ಲದಿರುವ ಪ್ರತಿಯೊಂದು ಪಾತ್ರೆಯೂ ಅಶುದ್ಧವಾಗಿರುವುದು. 16 ಹೊರಗೆ ಹೋಗಿರುವವನು ಯುದ್ಧದಲ್ಲಿ ಸತ್ತವನ ಶವವನ್ನಾಗಲಿ ಸಹಜವಾಗಿ ಸತ್ತವನ ಶವವನ್ನಾಗಲಿ ಮನುಷ್ಯನ ಮೂಳೆಯನ್ನಾಗಲಿ ಅಥವಾ ಸಮಾಧಿಯನ್ನಾಗಲಿ ಮುಟ್ಟಿದರೆ ಅವನು ಏಳು ದಿನಗಳವರೆಗೆ ಅಶುದ್ಧನಾಗಿರವನು.

17 “ಆದ್ದರಿಂದ ಅಶುದ್ಧ ವ್ಯಕ್ತಿಯನ್ನು ಶುದ್ಧೀಕರಿಸುವುದಕ್ಕಾಗಿ ಶುದ್ಧೀಕರಣ ಯಜ್ಞದ ಬೂದಿಯಲ್ಲಿ ಸ್ವಲ್ಪವನ್ನು ಪಾತ್ರೆಯಲ್ಲಿ ತೆಗೆದುಕೊಂಡು ಹರಿಯುವ ನೀರನ್ನು ಅದರ ಮೇಲೆ ಸುರಿಯಬೇಕು. 18 ಆಗ ಶುದ್ಧನಾಗಿರುವ ಒಬ್ಬನು ಹಿಸ್ಸೋಪ್ ಗಿಡದ ಎಳೆಕೊಂಬೆಯನ್ನು ಆ ನೀರಿನಲ್ಲಿ ಅದ್ದಿ ಗುಡಾರದ ಮೇಲೆಯೂ ಪಾತ್ರೆಗಳ ಮೇಲೆಯೂ ಮತ್ತು ಅದರೊಳಗಿದ್ದ ವ್ಯಕ್ತಿಗಳ ಮೇಲೆಯೂ ಚಿಮಿಕಿಸಬೇಕು. ಸತ್ತವನ ದೇಹವನ್ನು ಮುಟ್ಟಿದವನಿಗೂ ಯುದ್ಧದಲ್ಲಿ ಕೊಲ್ಲಲ್ಪಟ್ಟವನ ದೇಹವನ್ನು ಮುಟ್ಟಿದವನಿಗೂ ಸತ್ತವನ ಮೂಳೆಗಳನ್ನು ಮುಟ್ಟಿದವನಿಗೂ ನೀವು ಹೀಗೆ ಮಾಡಲೇಬೇಕು.

19 “ಶುದ್ಧನಾಗಿರುವವನು ಮೂರನೆಯ ದಿನದಲ್ಲಿಯೂ ಏಳನೆಯ ದಿನದಲ್ಲಿಯೂ ಅಶುದ್ಧನಾದವನ ಮೇಲೆ ಚಿಮಿಕಿಸಬೇಕು. ಹೀಗೆ ಅವನು ಏಳನೆಯ ದಿನದಲ್ಲಿ ಶುದ್ಧನಾಗುವನು. ಬಳಿಕ ಅಶುದ್ಧನಾದವನು ತನ್ನ ಬಟ್ಟೆಯನ್ನು ತೊಳೆದುಕೊಳ್ಳಬೇಕು.

20 “ಅಶುದ್ಧನಾಗಿದ್ದರೂ ತನ್ನನ್ನು ಶುದ್ಧಮಾಡಿಕೊಳ್ಳದವನು ಯೆಹೋವನ ಗುಡಾರವನ್ನು ಅಶುದ್ಧಮಾಡಿದವನಾಗಿರುತ್ತಾನೆ. ಆದ್ದರಿಂದ ಅವನನ್ನು ಇಸ್ರೇಲರಿಂದ ಬಹಿಷ್ಕರಿಸಬೇಕು. ಶುದ್ಧಪಡಿಸಿಕೊಳ್ಳುವ ನೀರನ್ನು ಚಿಮಿಕಿಸಿಕೊಳ್ಳದೆ ಹೋದದರಿಂದ ಅವನು ಅಶುದ್ಧನೇ. 21 ಇದು ನಿಮಗೆ ಶಾಶ್ವತನಿಯಮ. ಶುದ್ಧಪಡಿಸುವ ಆ ನೀರನ್ನು ಚಿಮಿಕಿಸಿದವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು; ಮತ್ತು ಆ ನೀರನ್ನು ಯಾವನಾದರೂ ಮುಟ್ಟಿದರೆ, ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು. 22 ಅಶುದ್ಧನಾದವನು ಮುಟ್ಟುವುದೆಲ್ಲಾ ಅಶುದ್ಧವಾಗುತ್ತದೆ. ಅಲ್ಲದೆ ಅವನನ್ನು ಮಟ್ಟುವವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು.”

ಕೀರ್ತನೆಗಳು 56-57

ಗತ್ ಎಂಬ ಊರಲ್ಲಿ ಫಿಲಿಷ್ಟಿಯರು ಸೆರೆಹಿಡಿದಾಗ ರಚಿಸಿಲ್ಪಟ್ಟಿತು. ರಚನೆಗಾರ: ದಾವೀದ.

56 ದೇವರೇ, ನನ್ನನ್ನು ಕರುಣಿಸು; ವೈರಿಗಳು ನನ್ನ ಮೇಲೆ ಆಕ್ರಮಣಮಾಡಿದ್ದಾರೆ.
    ಅವರು ಸತತವಾಗಿ ನನ್ನನ್ನು ಬೆನ್ನಟ್ಟಿ ಹೋರಾಡುತ್ತಿದ್ದಾರೆ.
ನನ್ನ ವೈರಿಗಳು ಸತತವಾಗಿ ನನ್ನ ಮೇಲೆ ಆಕ್ರಮಣ ಮಾಡುವರು.
    ಅವರಲ್ಲಿರುವ ಹೋರಾಟಗಾರರು ಅಸಂಖ್ಯಾತ.
ನಾನು ಭಯಗೊಂಡಾಗ, ನಿನ್ನಲ್ಲೇ ಭರವಸೆ ಇಡುವೆ.
ನಾನು ದೇವರಲ್ಲಿ ಭರವಸೆ ಇಟ್ಟಿರುವುದರಿಂದ ಜನರಿಗೆ ಭಯಪಡುವುದಿಲ್ಲ.
    ಕ್ಷಣಿಕರಾದ ಮಾನವರು ನನಗೇನು ಮಾಡಬಲ್ಲರು?
    ದೇವರ ವಾಗ್ದಾನಕ್ಕಾಗಿ ಆತನನ್ನು ಕೊಂಡಾಡುವೆನು.
ನನ್ನ ವೈರಿಗಳು ನನ್ನ ಮಾತುಗಳಿಗೆ ಅಪಾರ್ಥ ಮಾಡುವರು.
    ನನಗೆ ಕೇಡುಮಾಡಬೇಕೆಂದೇ ಅವರು ಯಾವಾಗಲೂ ಯೋಚಿಸುವರು.
ಅವರು ಒಟ್ಟುಗೂಡಿ ನನ್ನನ್ನು ಕೊಲ್ಲಲು
    ನನ್ನ ಹೆಜ್ಜೆಯನ್ನೇ ಹಿಂಬಾಲಿಸಿಕೊಂಡು ಬರುತ್ತಾರೆ.
ದೇವರೇ, ಅವರ ದುಷ್ಟತನದ ನಿಮಿತ್ತ ಅವರನ್ನು ಸೆರೆಯಾಳುಗಳಾಗಿ ಕಳುಹಿಸು.
    ಅವರು ಅನ್ಯ ಜನಾಂಗಗಳ ಕೋಪವನ್ನು ಅನುಭವಿಸುವಂತೆ ಹೊರಗಟ್ಟು.
ನನಗಾಗಿರುವ ದುಃಖವು ನಿನಗೆ ಗೊತ್ತಿದೆ.
    ನಾನು ಎಷ್ಚು ಅತ್ತಿರುವೆನೆಂದು ನಿನಗೆ ಗೊತ್ತಿದೆ.
ನನ್ನ ಕಣ್ಣೀರಿಗೆ ನೀನು ಖಂಡಿತವಾಗಿ ಲೆಕ್ಕವಿಟ್ಟಿರುವೆ.

ಆದ್ದರಿಂದ, ಸಹಾಯಕ್ಕಾಗಿ ನಾನು ನಿನಗೆ ಮೊರೆಯಿಡುವಾಗ ನನ್ನ ಶತ್ರುಗಳನ್ನು ಸೋಲಿಸು.
ನೀನು ಮಾಡಬಲ್ಲೆ ಎಂದು ನನಗೆ ಗೊತ್ತಿದೆ; ನೀನೇ ದೇವರು!

10 ನಾನು ದೇವರನ್ನು ಆತನ ವಾಗ್ದಾನಕ್ಕಾಗಿ ಕೊಂಡಾಡುವೆನು.
    ಯೆಹೋವನು ನನಗೆ ಮಾಡಿರುವ ವಾಗ್ದಾನಕ್ಕಾಗಿ ನಾನು ಆತನನ್ನು ಕೊಂಡಾಡುವೆನು.
11 ನಾನು ದೇವರಲ್ಲಿ ಭರವಸವಿಟ್ಟಿರುವುದರಿಂದ ಜನರಿಗೆ ಭಯಪಡುವುದಿಲ್ಲ.
    ಕ್ಷಣಿಕರಾದ ಮಾನವರು ನನಗೇನು ಮಾಡಬಲ್ಲರು?

12 ದೇವರೇ, ನಾನು ನಿನಗೆ ವಿಶೇಷ ಹರಕೆಗಳನ್ನು ಮಾಡಿದ್ದೇನೆ.
    ನಾನು ಮಾಡಿದ ಹರಕೆಗಳನ್ನು ಸಲ್ಲಿಸುವೆನು.
    ನಾನು ನಿನಗೆ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸುವೆನು.
13 ಯಾಕೆಂದರೆ ನೀನು ನನ್ನನ್ನು ಮರಣದಿಂದ ರಕ್ಷಿಸಿದೆ;
    ನೀನು ನನ್ನನ್ನು ಸೋಲಿನಿಂದ ತಪ್ಪಿಸಿದೆ.
ಆದ್ದರಿಂದ, ಜೀವಂತರಾಗಿರುವ ಜನರು ಮಾತ್ರ
    ನೋಡಬಹುದಾದ ಬೆಳಕಿನಲ್ಲಿ ನಾನು ದೇವರನ್ನು ಆರಾಧಿಸುವೆನು.

ಗುಹೆಯಲ್ಲಿ ಸೌಲನಿಂದ ಪಾರಾದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ

57 ದೇವರೇ, ನನ್ನನ್ನು ಕರುಣಿಸು, ನನ್ನನ್ನು ಕನಿಕರಿಸು.
    ನನ್ನ ಆತ್ಮವು ನಿನ್ನನ್ನೇ ಆಶ್ರಯಿಸಿಕೊಂಡಿದೆ.
ಆಪತ್ತು ಕೊನೆಗೊಳ್ಳುವ ತನಕ ಸಂರಕ್ಷಣೆಗಾಗಿ
    ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.
ಸಹಾಯಕ್ಕಾಗಿ ಮಹೋನ್ನತನಾದ ದೇವರಿಗೆ ಮೊರೆಯಿಡುವೆನು.
    ಆತನು ಕೊರತೆಗಳನ್ನೆಲ್ಲಾ ನೀಗಿಸುವನು.
ಆತನು ಪರಲೋಕದಿಂದ ನನಗೆ ಸಹಾಯಮಾಡಿ,
    ನನ್ನನ್ನು ಕಾಡಿಸುವವರನ್ನು ಸೋಲಿಸುವನು.
ದೇವರು ತನ್ನ ಪ್ರೀತಿಯನ್ನೂ
    ನಂಬಿಗಸ್ತಿಕೆಯನ್ನೂ ತೋರ್ಪಡಿಸುವನು.

ನನ್ನ ಪ್ರಾಣವು ಅಪಾಯದಲ್ಲಿದೆ.
    ನನ್ನ ಶತ್ರುಗಳು ನನ್ನನ್ನು ಮುತ್ತಿಕೊಂಡಿದ್ದಾರೆ.
ಅವರು ಸಿಂಹಗಳಂತಿದ್ದಾರೆ.
    ಅವರ ಹಲ್ಲುಗಳು ಬಾಣಗಳಂತಿವೆ;
    ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.

ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
    ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
ನನ್ನನ್ನು ಬಂಧಿಸಲು
    ನನ್ನ ವೈರಿಗಳು ನನಗೆ ಬಲೆಯೊಡ್ಡಿದ್ದಾರೆ.
ನನ್ನನ್ನು ಬೀಳಿಸಲು ಕುಣಿ ತೋಡಿದರು.
    ಆದರೆ ಅವರೇ ಅದರಲ್ಲಿ ಬಿದ್ದುಹೋದರು.

ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನನ್ನ ಹೃದಯವು ದೃಢವಾಗಿದೆ.
    ನಾನು ವಾದ್ಯ ಬಾರಿಸುತ್ತಾ ಹಾಡುವೆನು.
ನನ್ನ ಮನವೇ, ಎಚ್ಚರಗೊಳ್ಳು!
    ಹಾರ್ಪ್ ಮತ್ತು ಲೈರ್ ವಾದ್ಯಗಳೇ, ಎಚ್ಚರಗೊಳ್ಳಿರಿ.
    ಸಂಕೀರ್ತನೆಯಿಂದ ಸೂರ್ಯೋದಯವನ್ನು ಎದುರುಗೊಳ್ಳೋಣ.
ನನ್ನ ಒಡೆಯನೇ, ಜನಾಂಗಗಳ ನಡುವೆ ನಿನ್ನನ್ನು ಕೊಂಡಾಡುವೆನು.
    ಎಲ್ಲಾ ದೇಶಗಳಲ್ಲಿ ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
10 ಯಾಕೆಂದರೆ ನಿನ್ನ ಪ್ರೀತಿಯು ಮುಗಿಲನ್ನು ಮುಟ್ಟುವಷ್ಟೂ
    ನಿನ್ನ ನಂಬಿಗಸ್ತಿಕೆಯು ಆಕಾಶವನ್ನು ನಿಲುಕುವಷ್ಟೂ ದೊಡ್ಡದಾಗಿದೆ.
11 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
    ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.

ಯೆಶಾಯ 8:1-9:7

ಅಶ್ಶೂರವು ಬೇಗನೇ ಬರುವದು

ಯೆಹೋವನು ಹೇಳಿದ್ದೇನೆಂದರೆ, “ಒಂದು ದೊಡ್ಡ ಸುರುಳಿಯನ್ನು ತಂದು ಅದರ ಮೇಲೆ ಹೀಗೆ ಲೇಖನಿಯಿಂದ ಬರೆ: ‘ಮಹೇರ್ ಶಾಲಾಲ್ ಹಾಷ್ ಬಜ್‌.’” (ಇದರರ್ಥ: “ಕೊಳ್ಳೆಗೆ ಅವಸರ, ಸೂರೆಗೆ ಆತುರ.”)

ನಾನು ನಂಬಿಗಸ್ತರಾದ ಕೆಲವು ಜನರನ್ನು ಸಾಕ್ಷಿಗೋಸ್ಕರವಾಗಿ ಆರಿಸಿಕೊಂಡೆನು. (ಅವರು ಯಾರೆಂದರೆ, ಯಾಜಕನಾದ ಊರೀಯ ಮತ್ತು ಯೆಬೆರೆಕ್ಯನ ಮಗನಾದ ಜೆಕರ್ಯ.) ನಾನು ಆ ವಾಕ್ಯವನ್ನು ಬರೆಯುವಾಗ ಇವರು ನೋಡುತ್ತಿದ್ದರು. ಆಮೇಲೆ ನಾನು ಒಬ್ಬ ಪ್ರವಾದಿನಿಯ ಬಳಿಗೆ ಹೋದೆನು. ಆಕೆಯನ್ನು ಕೂಡಲು, ಆಕೆ ಗರ್ಭವತಿಯಾಗಿ ಒಬ್ಬ ಮಗನನ್ನು ಹಡೆದಳು. ಆಗ ಯೆಹೋವನು ನನಗೆ, “‘ಆ ಮಗನಿಗೆ ಮಹೇರ್ ಶಾಲಾಲ್ ಹಾಷ್ ಬಜ್‌’ ಎಂಬ ಹೆಸರನ್ನಿಡು. ಯಾಕೆಂದರೆ ಆ ಮಗನು ಅಪ್ಪಾ, ಅಮ್ಮಾ ಎಂದು ಕರೆಯಲು ತೊಡಗುವ ಮೊದಲೇ ದೇವರು ದಮಸ್ಕ ಮತ್ತು ಸಮಾರ್ಯದ ಎಲ್ಲಾ ಐಶ್ವರ್ಯವನ್ನು ತೆಗೆದು ಅದನ್ನು ಅಶ್ಶೂರದ ಅರಸನಿಗೆ ಕೊಡುವನು” ಎಂದು ಹೇಳಿದನು.

ಮತ್ತೆ ಯೆಹೋವನು ನನ್ನೊಂದಿಗೆ ಮಾತನಾಡಿದನು. ನನ್ನ ಒಡೆಯನು ಹೀಗೆಂದನು: “ಈ ಜನರು ನಿಧಾನವಾಗಿ ಹರಿಯುವ ಸಿಲೋವ ಕೊಳದ ನೀರನ್ನು ಸ್ವೀಕರಿಸುವುದಿಲ್ಲ. ಇವರು ರೆಚೀನ್ ಮತ್ತು ರೆಮಲ್ಯನ ಮಗನೊಂದಿಗೆ ಸಂತೋಷದಲ್ಲಿದ್ದಾರೆ. ಯೆಹೋವನಾದ ನಾನು ನಿಮಗೆ ವಿರುದ್ಧವಾಗಿ ಅಶ್ಶೂರದ ಅರಸನನ್ನೂ ಅವನ ಸಮಸ್ತ ಸೈನ್ಯವನ್ನೂ ತರುವೆನು. ಅವರು ಯೂಫ್ರೇಟೀಸ್ ನದಿಯ ರಭಸದ ಪ್ರವಾಹದ ನೀರಿನಂತೆ ಬರುವರು. ಅವರು ನದಿಯ ದಂಡೆಯ ಮೇಲೆ ಏರಿಬರುವ ನೀರಿನಂತಿರುವರು. ಆ ನೀರು ಹೊಳೆಯಿಂದಾಚೆ ಬಂದು ಯೆಹೂದದ ಮೇಲೆ ಹರಿಯುವುದು. ಆ ನೀರು ಏರುತ್ತಾಬಂದು ಯೆಹೂದವನ್ನು ಕುತ್ತಿಗೆಯ ತನಕ ಮುಳುಗಿಸುವದು ಮಾತ್ರವಲ್ಲ ಅದನ್ನು ಸಂಪೂರ್ಣವಾಗಿ ಮುಳುಗಿಸಿಬಿಡುವದು.

“ಇಮ್ಮಾನುವೇಲನೇ, ಈ ಜಲಪ್ರವಾಹವು ಎಲ್ಲಾ ಕಡೆಗಳಿಗೆ ಹಬ್ಬುತ್ತಾ ನಿಮ್ಮ ದೇಶವನ್ನು ಪೂರ್ತಿಯಾಗಿ ಮುಚ್ಚಿಬಿಡುವದು.”

ಸಮಸ್ತ ಜನಾಂಗಗಳೇ, ಯುದ್ಧಕ್ಕೆ ಸಿದ್ಧರಾಗಿ!
    ನೀವು ಸೋಲುವಿರಿ.
ದೂರದೇಶದವರೇ, ಕೇಳಿರಿ,
    ರಣರಂಗಕ್ಕಿಳಿಯಲು ಸಿದ್ಧರಾಗಿ!
    ನೀವು ಸೋಲುವಿರಿ.
10 ಯುದ್ಧ ಮಾಡಲು ಯೋಜನೆ ಹಾಕಿರಿ.
    ಆದರೆ ನಿಮ್ಮ ಯೋಜನೆಯೆಲ್ಲಾ ನಿಷ್ಫಲವಾಗುವುದು.
ನಿಮ್ಮ ಸೈನ್ಯಕ್ಕೆ ಆಜ್ಞೆಕೊಡಿರಿ.
    ಆದರೆ ಅದು ನಿಷ್ಪ್ರಯೋಜಕವಾಗುವುದು.
    ಯಾಕೆಂದರೆ ದೇವರು ನಮ್ಮೊಂದಿಗಿದ್ದಾನೆ!

ಯೆಶಾಯನಿಗೆ ಎಚ್ಚರಿಕೆ

11 ಯೆಹೋವನು ತನ್ನ ಮಹಾಶಕ್ತಿಯಿಂದ ನನ್ನೊಡನೆ ಮಾತನಾಡಿದನು. ನಾನು ಇತರರಂತೆ ಇರಬಾರದೆಂದು ಯೆಹೋವನು ನನ್ನನ್ನು ಎಚ್ಚರಿಸಿದನು. ಆತನು ನನಗೆ, 12 “ಪ್ರತಿಯೊಬ್ಬನೂ ‘ಇನ್ನೊಬ್ಬನು ನಿನಗೆ ವಿರುದ್ಧವಾಗಿ ಕೇಡು ಬಗೆಯುತ್ತಾನೆ’ ಎಂದು ಹೇಳುವನು. ಅದನ್ನು ನೀನು ನಂಬಬೇಡ. ಆ ಜನರು ಭಯಪಡುವ ವಿಷಯಗಳಿಗೆ ನೀನು ಭಯಪಡಬೇಡ.

13 “ಸರ್ವಶಕ್ತನಾದ ಯೆಹೋವನೊಬ್ಬನಿಗೇ ನೀನು ಭಯಪಡಬೇಕು. ಆತನನ್ನೇ ನೀನು ಗೌರವಿಸಬೇಕು. ನೀನು ಭಯಪಡಬೇಕಾದದ್ದು ಆತನೊಬ್ಬನಿಗೇ. 14 ನೀನು ಯೆಹೋವನನ್ನು ಪರಿಶುದ್ಧನೆಂದು ಪರಿಗಣಿಸಿ ಗೌರವಿಸಿದರೆ, ಆತನು ನಿನಗೆ ಆಶ್ರಯನಾಗುವನು. ಆದರೆ ನೀನು ಆತನನ್ನು ಸನ್ಮಾನಿಸದೆ ಹೋದರೆ ಆತನು ನಿನಗೆ ಮುಗ್ಗರಿಸುವ ಕಲ್ಲಾಗಿ ಪರಿಣಮಿಸುವನು. ಆತನು ಇಸ್ರೇಲಿನ ಎರಡು ಕುಟುಂಬಗಳವರಿಗೆ ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ ಆಗಿರುವನು. ಯೆಹೋವನು ಜೆರುಸಲೇಮಿನ ಎಲ್ಲಾ ಜನರನ್ನು ಹಿಡಿಯುವ ಬಲೆಯಾಗಿರುವನು. 15 ಎಷ್ಟೋ ಜನರು ಈ ಬಂಡೆಯಿಂದ ಎಡವಿಬೀಳುವರು. ಅವರು ಬಿದ್ದು ಮುರಿಯಲ್ಪಡುವರು; ಬಲೆಗೆ ಸಿಕ್ಕಿಕೊಳ್ಳುವರು.”

16 ಯೆಹೋವನು, “ಒಡಂಬಡಿಕೆ ಮಾಡಿಕೊಂಡು ಅದಕ್ಕೆ ಮುದ್ರೆಹಾಕು. ಮುಂದಿನ ಪೀಳಿಗೆಗಾಗಿ ನನ್ನ ಬೋಧನೆಯನ್ನು ಜೋಪಾನವಾಗಿರಿಸು. ನನ್ನ ಹಿಂಬಾಲಕರ ಕಣ್ಣೆದುರಿನಲ್ಲೇ ಹೀಗೆ ಮಾಡು” ಎಂದು ಹೇಳಿದನು. 17 ಆ ಒಡಂಬಡಿಕೆಯು ಹೀಗಿತ್ತು:

ನನ್ನ ದೇವರಾದ ಯೆಹೋವನ ಸಹಾಯಕ್ಕಾಗಿ ನಾನು ಕಾಯುತ್ತಿರುವೆನು.
ಯಾಕೋಬನ ಕುಟುಂಬದ ಬಗ್ಗೆ ಯೆಹೋವನು ನಾಚಿಕೊಂಡಿದ್ದಾನೆ.
    ಅವರ ಕಡೆ ನೋಡಲು ಆತನು ನಿರಾಕರಿಸುತ್ತಾನೆ.
ಆದರೆ ನಾನು ಯೆಹೋವನನ್ನು ನಿರೀಕ್ಷಿಸುವೆನು.
ಆತನು ನನ್ನನ್ನು ರಕ್ಷಿಸುವನು.

18 “ನಾನೂ ನನ್ನ ಮಕ್ಕಳೂ ಇಸ್ರೇಲ್ ಜನರಿಗೆ ಒಂದು ಗುರುತಾಗಿದ್ದೇವೆ. ಸರ್ವಶಕ್ತನಾದ ಯೆಹೋವನು ನಮ್ಮನ್ನು ಕಳುಹಿಸಿದ್ದಾನೆ. ಆತನು ಚೀಯೋನ್ ಬೆಟ್ಟದಲ್ಲಿ ವಾಸಿಸುತ್ತಾನೆ.”

19 ಕೆಲವರು, “ಏನು ಮಾಡಬೇಕೆಂದು ಕಣಿಹೇಳುವವರನ್ನೂ ಬೇತಾಳಿಕರನ್ನೂ ವಿಚಾರಿಸು” ಎಂದು ಹೇಳುತ್ತಾರೆ. (ಕಣಿಹೇಳುವವರು ತಾವು ಮಂತ್ರಶಕ್ತಿಯುಳ್ಳವರೆಂದು ಜನರಿಗೆ ತೋರಿಸಲು ಪಕ್ಷಿಗಳು ಮಾಡುವ ಶಬ್ದವನ್ನು ಬಾಯಿಂದ ಮಾಡಿ ತಮಗೆ ರಹಸ್ಯಗಳು ಗೊತ್ತಿವೆ ಎಂದು ತೋರಿಸಿಕೊಳ್ಳುತ್ತಾರೆ.) ನಾನು ಹೇಳುವುದೇನೆಂದರೆ, “ಜನರು ಸಹಾಯಕ್ಕಾಗಿ ದೇವರನ್ನೇ ಕೇಳಿಕೊಳ್ಳಬೇಕು. ಆ ಕಣಿಹೇಳುವವರೂ ಬೇತಾಳಿಕರೂ ತಾವು ಏನು ಮಾಡಬೇಕೆಂದು ಸತ್ತವರನ್ನು ವಿಚಾರಿಸುವರು. ಜೀವಿಸುವವರು ಸತ್ತವರನ್ನು ಯಾಕೆ ವಿಚಾರಿಸಬೇಕು?” 20 ನೀವು ಉಪದೇಶಗಳಿಗೂ ಒಡಂಬಡಿಕೆಗೂ ವಿಧೇಯರಾಗಿರಬೇಕು. ನೀವು ಈ ಆಜ್ಞೆಗಳನ್ನು ಅನುಸರಿಸದಿದ್ದರೆ, ತಪ್ಪು ಆಜ್ಞೆಗಳನ್ನು ಹಿಂಬಾಲಿಸುವಿರಿ. ಬೇತಾಳಿಕರಿಂದ, ಕಣಿಹೇಳುವವರಿಂದ ಬರುವ ಆಜ್ಞೆಗಳೇ ತಪ್ಪು ಆಜ್ಞೆಗಳು. ಅವುಗಳಿಗೆ ಯಾವ ಬೆಲೆಯೂ ಇಲ್ಲ. ಅವುಗಳನ್ನು ಅನುಸರಿಸುವುದರಿಂದ ನಿಮಗೆ ಯಾವ ಪ್ರಯೋಜನವೂ ಇಲ್ಲ. 21 ನೀವು ಆ ತಪ್ಪಾದ ಆಜ್ಞೆಗಳನ್ನು ಅನುಸರಿಸಿದರೆ ನಿಮ್ಮ ದೇಶದಲ್ಲಿ ಸಂಕಟವೂ ಹಸಿವೆಯೂ ಉಂಟಾಗುತ್ತವೆ. ಜನರು ಹಸಿವಿನಿಂದ ಬಳಲುವರು. ಆಗ ಅವರಲ್ಲಿ ಸಿಟ್ಟು ಉಂಟಾಗಿ ತಮ್ಮ ಅರಸನನ್ನೂ ಅವನ ದೇವರುಗಳನ್ನೂ ಬೈಯುವರು ಮತ್ತು ಸಹಾಯಕ್ಕಾಗಿ ದೇವರಿಗೆ ಮೊರೆಯಿಡುವರು. 22 ತಮ್ಮ ದೇಶದಲ್ಲಿ ಸುತ್ತಲೂ ನೋಡುವಾಗ ಕೇವಲ ಸಂಕಟಗಳೇ ಕುಗ್ಗಿಸುವ ಕಾರ್ಗತ್ತಲೆಗಳೇ ಕಾಣಿಸುವವು. ಆ ದುಃಖವು ಅವರನ್ನು ದೇಶದಿಂದ ತೊಲಗಿಸಿಬಿಡುವುದು. ಕಾರ್ಗತ್ತಲೆಯಲ್ಲಿ ಸಿಕ್ಕಿಬಿದ್ದ ಜನರಿಗೆ ತಮ್ಮನ್ನು ಬಿಡಿಸಿಕೊಳ್ಳಲಾಗುವುದಿಲ್ಲ.

ಒಂದು ಹೊಸ ದಿನ ಬರುವುದು

ಹಿಂದಿನ ಕಾಲದಲ್ಲಿ, ಜೆಬುಲೋನ್ ಮತ್ತು ನಫ್ತಾಲಿ ಪ್ರಾಂತ್ಯಗಳು ವಿಶೇಷವಾದವುಗಳಲ್ಲ ಎಂದು ಜನರು ತಿಳಿದುಕೊಂಡಿದ್ದರು. ಆದರೆ ಆಮೇಲೆ ಸಮುದ್ರಕ್ಕೆ ಸಮೀಪದಲ್ಲಿರುವ ಪ್ರಾಂತ್ಯ, ಜೋರ್ಡನಿನ ಆಚೆಗಿರುವ ಸ್ಥಳ ಮತ್ತು ಯೆಹೂದ್ಯರಲ್ಲದವರು ವಾಸಿಸುವ ಗಲಿಲಾಯ ಪ್ರಾಂತ್ಯ ಇವುಗಳನ್ನು ಮುಂದೆ ದೇವರು ಮಹಾದೇಶವನ್ನಾಗಿ ಮಾಡುವನು. ಈಗ ಅವರು ಕತ್ತಲಲ್ಲಿ ವಾಸಿಸುವರು. ಆದರೆ ಒಂದು ದೊಡ್ಡ ಬೆಳಕನ್ನು ಅವರು ನೋಡುವರು. ಅವರಿರುವ ಸ್ಥಳವು ಮರಣದ ಸ್ಥಳದಂತೆ ಅಂಧಕಾರದಿಂದ ತುಂಬಿದೆ. ಆದರೆ ದೊಡ್ಡ ಬೆಳಕು ಅವರ ಮೇಲೆ ಪ್ರಕಾಶಿಸುವದು.

ದೇವರೇ, ಆ ದೇಶವನ್ನು ನೀನು ಅಭಿವೃದ್ಧಿಪಡಿಸುವೆ. ನೀನು ಆ ಜನರನ್ನು ಸಂತೋಷಪಡಿಸುವೆ. ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸುವರು. ಅದು ಸುಗ್ಗಿಕಾಲದಲ್ಲಿರುವ ಸಂತಸದಂತೆಯೂ ಯುದ್ಧದಲ್ಲಿ ಗಳಿಸಿದ ಕೊಳ್ಳೆಯ ಪಾಲು ದೊರೆತಾಗ ಉಂಟಾಗುವ ಸಂತಸದಂತೆಯೂ ಇರುವುದು. ಯಾಕೆಂದರೆ ಅವರ ಮೇಲಿದ್ದ ಭಾರವನ್ನು ನೀನು ತೆಗೆದುಬಿಡುವೆ. ಅವರ ಬೆನ್ನಿನ ಮೇಲಿದ್ದ ಭಾರವಾದ ನೊಗವನ್ನು ನೀನು ತೆಗೆದುಹಾಕುವೆ; ವೈರಿಗಳು ನಿನ್ನ ಜನರನ್ನು ಶಿಕ್ಷಿಸಲು ಉಪಯೋಗಿಸುವ ಬೆತ್ತವನ್ನು ತೆಗೆದುಬಿಡುವೆ. ಆ ಸಮಯವು ನೀನು ಮಿದ್ಯಾನರನ್ನು ಸೋಲಿಸಿದ ಸಮಯದಂತಿರುವದು.

ರಣರಂಗದಲ್ಲಿ ನಡೆಯುವ ಪ್ರತಿಯೊಂದು ಪಾದರಕ್ಷೆಯನ್ನೂ ನಾಶಮಾಡಲಾಗುವುದು; ರಕ್ತದ ಕಲೆಯಿರುವ ಪ್ರತಿಯೊಂದು ಸಮವಸ್ತ್ರವನ್ನೂ ನಾಶಮಾಡಲಾಗುವದು. ಅವುಗಳೆಲ್ಲವನ್ನು ಬೆಂಕಿಯಲ್ಲಿ ಹಾಕಲಾಗುವದು. ವಿಶೇಷವಾದ ಗಂಡುಮಗುವು ಜನಿಸಿದಾಗ ಇವೆಲ್ಲಾ ಸಂಭವಿಸುವದು. ದೇವರು ನಮಗೊಬ್ಬ ವರದ ಮಗನನ್ನು ಕೊಡುವನು. ಈ ವರದ ಮಗನು ಜನರನ್ನು ನಡಿಸುವದಕ್ಕೆ ಜವಾಬ್ದಾರಿಯನ್ನು ಹೊಂದಿದವನಾಗುವನು. ಆತನ ಹೆಸರು “ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭುವು” ಎಂಬುದಾಗಿ ಇರುವದು. ಆತನ ರಾಜ್ಯದಲ್ಲಿ ಸಮಾಧಾನವೂ ಅಧಿಕಾರವೂ ಇರುತ್ತದೆ. ದಾವೀದನ ಕುಟುಂಬದವನ ರಾಜ್ಯದಲ್ಲಿ ಅವು ಸ್ಥಿರವಾಗಿರುತ್ತವೆ. ಈ ಅರಸನು ನ್ಯಾಯನೀತಿಗಳಿಂದ ನಿತ್ಯಕಾಲಕ್ಕೂ ರಾಜ್ಯವಾಳುವನು. ಸರ್ವಶಕ್ತನಾದ ಯೆಹೋವನಿಗೆ ತನ್ನ ಜನರ ಮೇಲೆ ಬಲವಾದ ಪ್ರೀತಿಯಿದೆ. ಆತನ ಈ ಕಾರ್ಯಗಳನ್ನೆಲ್ಲಾ ಮಾಡಲು ಬಲವಾದ ಪ್ರೀತಿಯೇ ಕಾರಣ.

ಯಾಕೋಬನು 2

ಜನರೆಲ್ಲರನ್ನೂ ಪ್ರೀತಿಸಿ

ನನ್ನ ಪ್ರಿಯ ಸಹೋದರ ಸಹೋದರಿಯರೇ, ಮಹಿಮಾಪೂರ್ಣನಾದ ಪ್ರಭು ಯೇಸು ಕ್ರಿಸ್ತನಲ್ಲಿ ನೀವು ನಂಬಿಕೆಯಿಟ್ಟಿದ್ದೀರಿ. ಆದ್ದರಿಂದ ಕೆಲವರು ಇತರ ಜನರಿಗಿಂತ ಬಹಳ ಮುಖ್ಯರೆಂದು ಯೋಚಿಸಬೇಡಿ. ನಿಮ್ಮ ಸಭೆಗೆ ಒಬ್ಬನು ಬರುತ್ತಾನೆಂದು ನೆನೆಸಿರಿ. ಅವನು ಒಳ್ಳೆಯ ವಸ್ತ್ರಗಳನ್ನೂ ಬಂಗಾರದ ಉಂಗುರವನ್ನೂ ಧರಿಸಿರುತ್ತಾನೆ. ಅದೇ ಸಮಯಕ್ಕೆ ಕೊಳೆಯಾದ ಮತ್ತು ಹಳೆಯದಾದ ವಸ್ತ್ರಗಳನ್ನು ಧರಿಸಿರುವ ಒಬ್ಬ ಬಡವನೂ ಬರುತ್ತಾನೆ. ಒಳ್ಳೆಯ ವಸ್ತ್ರಗಳನ್ನು ಧರಿಸಿರುವವನಿಗೆ ವಿಶೇಷ ಗಮನವನ್ನು ನೀಡುವಿರಿ. “ಉತ್ತಮವಾದ ಈ ಸ್ಥಳದಲ್ಲಿ ನೀವು ಕುಳಿತುಕೊಳ್ಳಿ” ಎಂದು ಅವನಿಗೆ ಹೇಳುವಿರಿ. ಆದರೆ ಆ ಬಡ ಮನುಷ್ಯನಿಗೆ “ಅಲ್ಲೇ ನಿಂತುಕೊ!” ಎಂದಾಗಲಿ, “ನಮ್ಮ ಪಾದಗಳ ಬಳಿ ನೆಲದ ಮೇಲೆ ಕುಳಿತುಕೊ!” ಎಂದಾಗಲಿ ಹೇಳುವಿರಿ. ನೀವು ಮಾಡುತ್ತಿರುವುದೇನು? ಕೆಲವರನ್ನು ಇತರ ಜನರಿಗಿಂತ ಬಹಳ ಮುಖ್ಯರೆಂದು ಪರಿಗಣಿಸುತ್ತಿರುವಿರಿ. ನಿಮ್ಮ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ.

ನನ್ನ ಪ್ರಿಯ ಸಹೋದರ ಸಹೋದರಿಯರೇ, ಕೇಳಿರಿ! ಈ ಲೋಕದಲ್ಲಿ ಬಡವರು ನಂಬಿಕೆಯಲ್ಲಿ ಶ್ರೀಮಂತರಾಗಿರಲೆಂದು ದೇವರು ಅವರನ್ನು ಆರಿಸಿಕೊಂಡಿದ್ದಾನೆ. ತನ್ನನ್ನು ಪ್ರೀತಿಸುವ ಜನರಿಗೆ ದೇವರು ವಾಗ್ದಾನಮಾಡಿದ ರಾಜ್ಯವನ್ನು ಹೊಂದಿಕೊಳ್ಳಲು ಆತನು ಅವರನ್ನು ಆರಿಸಿಕೊಂಡಿದ್ದಾನೆ. ಆದರೆ ಬಡವನಿಗೆ ನೀವು ಗೌರವವನ್ನೇ ತೋರುವುದಿಲ್ಲ. ಶ್ರೀಮಂತ ಜನರು ಯಾವಾಗಲೂ ನಿಮ್ಮ ಬದುಕನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆಂಬುದು ನಿಮಗೆ ತಿಳಿದಿದೆ. ನಿಮ್ಮನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವವರು ಅವರೇ. ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿರುವ ಯೇಸುವಿನ ಶ್ರೇಷ್ಠವಾದ ಹೆಸರಿಗೆ ವಿರುದ್ಧವಾಗಿ ಕೆಟ್ಟಮಾತುಗಳನ್ನು ಆಡುವವರು ಶ್ರೀಮಂತರೇ.

ಪವಿತ್ರ ಗ್ರಂಥದಲ್ಲಿ ಬರೆದಿರುವ, “ನಿನ್ನನ್ನು ಪ್ರೀತಿಸುವಂತೆ ಇತರರನ್ನೂ ಪ್ರೀತಿಸು”(A) ಎಂಬ ರಾಜಾಜ್ಞೆಗೆ ನೀವು ವಿಧೇಯರಾಗಿದ್ದರೆ ಸರಿಯಾದುದನ್ನೇ ಮಾಡುವವರಾಗಿದ್ದೀರಿ. ಆದರೆ ನೀವು ಒಬ್ಬನನ್ನು ಇನ್ನೊಬ್ಬನಿಗಿಂತ ಮುಖ್ಯನೆಂದು ಪರಿಗಣಿಸಿ ಪಕ್ಷಪಾತ ಮಾಡಿದರೆ ಪಾಪವನ್ನು ಮಾಡುವವರಾಗಿದ್ದೀರಿ. ದೇವರ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೋಷಿಗಳಾಗಿದ್ದೀರೆಂದು ಆ ರಾಜಾಜ್ಞೆಯು ನಿರೂಪಿಸುತ್ತದೆ.

10 ಒಬ್ಬನು ದೇವರ ಎಲ್ಲಾ ಆಜ್ಞೆಗಳನ್ನು ಅನುಸರಿಸುತ್ತಿರಬಹುದು. ಆದರೆ ಅವನು ಒಂದು ಆಜ್ಞೆಗೆ ಅವಿಧೇಯನಾದರೆ ಅವನು ಧರ್ಮಶಾಸ್ತ್ರದ ಎಲ್ಲಾ ಆಜ್ಞೆಗಳನ್ನು ಮೀರಿದನೆಂಬ ಅಪರಾಧಕ್ಕೆ ಗುರಿಯಾಗುವನು. 11 “ವ್ಯಭಿಚಾರ ಮಾಡಬಾರದು”(B) ಎಂದು ದೇವರು ಹೇಳಿದನು. “ಕೊಲ್ಲಬಾರದು”(C) ಎಂದೂ ಅದೇ ದೇವರು ಹೇಳಿದನು. ಹೀಗಿರಲಾಗಿ, ನೀವು ವ್ಯಭಿಚಾರವನ್ನು ಮಾಡದಿದ್ದರೂ ಯಾರನ್ನೇ ಆಗಲಿ ಕೊಂದರೆ, ದೇವರ ಇಡೀ ಧರ್ಮಶಾಸ್ತ್ರವನ್ನೇ ಉಲ್ಲಂಘಿಸಿದವರಾಗಿದ್ದೀರಿ.

12 ಜನರನ್ನು ಬಿಡುಗಡೆ ಮಾಡುವ ಧರ್ಮಶಾಸ್ತ್ರದಿಂದಲೇ ನಿಮಗೆ ತೀರ್ಪಾಗುವುದು. ನೀವು ಕೇಳುವ ಮತ್ತು ಮಾಡುವ ಪ್ರತಿಯೊಂದರಲ್ಲಿಯೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. 13 ಹೌದು, ಇತರರಿಗೆ ನೀವು ಕರುಣೆ ತೋರಬೇಕು. ಇಲ್ಲವಾದರೆ ದೇವರು ತೀರ್ಪು ನೀಡುವಾಗ ನಿಮಗೂ ಕರುಣೆ ತೋರನು. ಕರುಣೆ ತೋರುವವನು ದೇವರ ನ್ಯಾಯತೀರ್ಪಿನಲ್ಲಿ ಭಯವಿಲ್ಲದೆ ಇರುವನು.

ನಂಬಿಕೆ ಮತ್ತು ಉತ್ತಮ ಕಾರ್ಯಗಳು

14 ನನ್ನ ಸಹೋದರ ಸಹೋದರಿಯರೇ, ಒಬ್ಬ ವ್ಯಕ್ತಿಯು ತನ್ನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವನ ನಂಬಿಕೆಯಿಂದ ಪ್ರಯೋಜನವೇನೂ ಇಲ್ಲ. ಆ ರೀತಿಯ ನಂಬಿಕೆಯು ಅವನನ್ನು ರಕ್ಷಿಸಬಲ್ಲದೇ? ಇಲ್ಲ! 15 ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ಅಥವಾ ಸಹೋದರಿಯಾಗಿರುವವಳಿಗೆ ಬಟ್ಟೆಗಳು ಬೇಕಾಗಿರಬಹುದು ಅಥವಾ ತಿನ್ನಲು ಆಹಾರ ಬೇಕಾಗಿರಬಹುದು. 16 ಆದರೆ ನೀವು ಆ ವ್ಯಕ್ತಿಗೆ, “ದೇವರು ನಿನ್ನೊಂದಿಗಿರಲಿ! ಚಳಿಕಾಯಿಸಿಕೊಂಡು ತೃಪ್ತಿಯಾಗುವಷ್ಟು ಊಟ ಮಾಡು” ಎಂಬುದಾಗಿ ಹೇಳಿ ಬೇಕಾದವುಗಳನ್ನು ಅವನಿಗೆ ಕೊಡದೆ ಹೋದರೆ ನಿಮ್ಮ ಮಾತುಗಳಿಗೆ ಯಾವ ಬೆಲೆಯೂ ಇಲ್ಲ. 17 ಇದೇ ನಿಯಮ ನಂಬಿಕೆಗೂ ಅನ್ವಯಿಸುತ್ತದೆ. ಕ್ರಿಯೆಯಿಲ್ಲದ ನಂಬಿಕೆಯು ತನ್ನಲ್ಲಿಯೇ ಸತ್ತುಹೋಗಿದೆ.

18 ಆದರೆ ಯಾವನಾದರೂ, “ನಿನ್ನಲ್ಲಿ ನಂಬಿಕೆಯಿದೆ; ನನ್ನಲಿ ಕ್ರಿಯೆಗಳಿವೆ” ಎಂದು ವಾದಿಸಬಹುದು. ಅದಕ್ಕೆ ನನ್ನ ಉತ್ತರವೇನೆಂದರೆ ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸಲಾರೆ. ನಾನಾದರೊ ನನ್ನ ಒಳ್ಳೆಯ ಕಾರ್ಯಗಳ ಮೂಲಕ ನನ್ನ ನಂಬಿಕೆಯನ್ನು ನಿನಗೆ ತೋರಿಸುವೆ ಎಂದು ಹೇಳಬಹುದು. 19 ಒಬ್ಬನೇ ದೇವರಿರುವನೆಂದು ನೀವು ನಂಬಿದ್ದೀರಿ. ಒಳ್ಳೆಯದು! ಆದರೆ ದೆವ್ವಗಳೂ ಅದನ್ನು ನಂಬುತ್ತವೆ ಮತ್ತು ಭಯದಿಂದ ನಡುಗುತ್ತವೆ.

20 ಬುದ್ಧಿಹೀನರೇ, ಕ್ರಿಯೆಯಿಲ್ಲದ ನಂಬಿಕೆಯು ನಿಷ್ಪ್ರಯೋಜಕವೆಂದು ನಿಮಗೆ ತೋರಿಸಬೇಕೋ? 21 ಅಬ್ರಹಾಮನು ನಮ್ಮ ಪಿತೃ. ಅವನು ತನ್ನ ಕ್ರಿಯೆಗಳಿಂದ ನೀತಿವಂತನಾದನು. ಅವನು ಯಜ್ಞವೇದಿಕೆಯ ಮೇಲೆ ತನ್ನ ಮಗನಾದ ಇಸಾಕನನ್ನು ದೇವರಿಗೆ ಅರ್ಪಿಸಿದನು. 22 ಆದ್ದರಿಂದ ಅವನ ನಂಬಿಕೆ ಮತ್ತು ಅವನ ಕ್ರಿಯೆ ಒಟ್ಟಿಗೆ ಕಾರ್ಯ ಮಾಡಿದವು. ಅವನ ನಂಬಿಕೆಯು ಅವನ ಕ್ರಿಯೆಗಳಿಂದಲೇ ಪರಿಪೂರ್ಣಗೊಂಡಿತು. 23 ಹೀಗೆ ಪವಿತ್ರಗ್ರಂಥದ ಈ ಮಾತುಗಳು ನೆರವೇರಿದವು: “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಒಪ್ಪಿಕೊಂಡು ಅವನನ್ನು ನೀತಿವಂತನೆಂದು ಪರಿಗಣಿಸಿದನು.”(D) ಅಬ್ರಹಾಮನನ್ನು “ದೇವರ ಸ್ನೇಹಿತ”(E) ನೆಂದು ಕರೆಯಲಾಯಿತು. 24 ಹೀಗಿರಲು ಒಬ್ಬನು ತನ್ನ ಕ್ರಿಯೆಗಳಿಂದ ನೀತಿವಂತನಾಗುತ್ತಾನೆ ಎಂಬುದು ಸ್ಪಷ್ಟವಾಗಿದೆ. ಒಬ್ಬನು ಕೇವಲ ನಂಬಿಕೆಯೊಂದರಿಂದಲೇ ನೀತಿವಂತನಾಗಲು ಸಾಧ್ಯವಿಲ್ಲ.

25 ರಹಾಬಳು ಮತ್ತೊಬ್ಬ ಉದಾಹರಣೆಯಾಗಿದ್ದಾಳೆ. ಆಕೆ ಒಬ್ಬ ವೇಶ್ಯೆ. ಆದರೆ ಅವಳು ತನ್ನ ಕ್ರಿಯೆಗಳಿಂದಲೇ ನೀತಿವಂತಳಾದಳು. ಅವಳು ದೇವರ ಜನರಿಗೋಸ್ಕರ ಗೂಢಚಾರರನ್ನು ತನ್ನ ಮನೆಗೆ ಬರಮಾಡಿಕೊಂಡು, ಬೇರೊಂದು ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗಲು ಅವರಿಗೆ ಸಹಾಯ ಮಾಡಿದಳು.[a]

26 ಒಬ್ಬ ವ್ಯಕ್ತಿಯ ದೇಹದಲ್ಲಿ ಆತ್ಮವಿಲ್ಲದಿದ್ದರೆ, ಅವನ ದೇಹವು ಸತ್ತದ್ದೇ. ಅದೇ ರೀತಿಯಲ್ಲಿ ಕ್ರಿಯೆಯಿಲ್ಲದ ನಂಬಿಕೆಯು ಸತ್ತದ್ದೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International