Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 17-18

ಆರೋನನು ಪ್ರಧಾನಯಾಜಕನಾಗಿದ್ದಾನೆಂದು ದೇವರು ಸಾಕ್ಷೀಕರಿಸಿದ್ದು

17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರ ಸಂಗಡ ಮಾತಾಡಿ ಹೀಗೆ ಮಾಡಬೇಕು: ಅವರ ಕುಲಗಳ ಪ್ರತಿಯೊಬ್ಬ ಪ್ರಧಾನನಿಂದ ಒಂದೊಂದು ಕೋಲಿನ ಮೇರೆಗೆ ಹನ್ನೆರಡು ಕೋಲುಗಳನ್ನು ತೆಗೆದುಕೊಳ್ಳಬೇಕು. ಅವನವನ ಕೋಲಿನ ಮೇಲೆ ಆಯಾ ಕುಲಪ್ರಧಾನನ ಹೆಸರನ್ನು ಬರೆಯಿಸಬೇಕು. ಲೇವಿ ಕುಲದ ಕೋಲಿನ ಮೇಲೆ ಆರೋನನ ಹೆಸರನ್ನು ಬರೆಯಿಸಬೇಕು. ನೀನು ಆ ಕುಲಗಳನ್ನು ದೇವದರ್ಶನಗುಡಾರದಲ್ಲಿ ಅಂದರೆ ನಾನು ನಿನ್ನನ್ನು ಸಂಧಿಸುವ ಒಡಂಬಡಿಕೆ ಪೆಟ್ಟಿಗೆಯ ಮುಂದೆ ಇಡಬೇಕು. ನಾನು ಒಬ್ಬನನ್ನು ನನ್ನ ಯಾಜಕನನ್ನಾಗಿ ಆರಿಸಿಕೊಳ್ಳುವೆನು; ಅವನ ಕೋಲು ಚಿಗುರುವುದು, ಇಸ್ರೇಲ್ ಜನರು ನಿಮ್ಮ ವಿರುದ್ಧವಾಗಿ ಹೇಳುತ್ತಿರುವ ದೂರುಗಳನ್ನು ನಾನು ಹೀಗೆ ನಿಲ್ಲಿಸುವೆನು.”

ಅದಕ್ಕನುಸಾರವಾಗಿ ಮೋಶೆಯು ಇಸ್ರೇಲರ ಸಂಗಡ ಮಾತಾಡಲಾಗಿ ಅವರ ಕುಲಪ್ರಧಾನರೆಲ್ಲ ಅವನಿಗೆ, ಒಬ್ಬ ಕುಲಪ್ರಧಾನನಿಗೆ ಒಂದು ಕೋಲಿನಂತೆ, ಹನ್ನೆರಡು ಕೋಲುಗಳನ್ನು ಕೊಟ್ಟರು. ಅವುಗಳೊಡನೆ ಆರೋನನ ಕೋಲೂ ಇತ್ತು. ಮೋಶೆ ಆ ಕೋಲುಗಳನ್ನು ಒಡಂಬಡಿಕೆಯ ಗುಡಾರದಲ್ಲಿ ಯೆಹೋವನ ಮುಂದೆ ಇಟ್ಟನು.

ಮರುದಿನ ಮೋಶೆ ಗುಡಾರದೊಳಗೆ ಹೋಗಿ ನೋಡಲಾಗಿ ಲೇವಿಕುಲದ ಆರೋನನ ಕೋಲು ಚಿಗುರಿ ಮೊಗ್ಗುಬಿಟ್ಟು ಹೂವರಳಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು. ಮೋಶೆ ಎಲ್ಲಾ ಕೋಲುಗಳನ್ನು ಯೆಹೋವನ ಸನ್ನಿಧಿಯಿಂದ ಹೊರಗೆ ತೆಗೆದುಕೊಂಡು ಬಂದು ಅವುಗಳನ್ನೆಲ್ಲಾ ಇಸ್ರೇಲರಿಗೆ ತೋರಿಸಿದನು. ಪ್ರಧಾನರು ಆ ಕೋಲುಗಳನ್ನು ನೋಡಿ, ತಮ್ಮತಮ್ಮ ಕೋಲುಗಳನ್ನು ತೆಗೆದುಕೊಂಡರು.

10 ತರುವಾಯ ಯೆಹೋವನು ಮೋಶೆಗೆ, “ಆರೋನನ ಕೋಲನ್ನು ಮತ್ತೆ ಒಡಂಬಡಿಕೆಯ ಪೆಟ್ಟಿಗೆಯ ಮುಂದಿಡು. ದಂಗೆಕೋರರಿಗೆ ಅದು ಎಚ್ಚರಿಕೆಯಾಗಿ ಅಲ್ಲೇ ಇರಬೇಕು, ಇವರು ಇನ್ನು ಮುಂದೆ ನನಗೆ ವಿರೋಧವಾಗಿ ಗುಣುಗುಟ್ಟಿ, ಮರಣಕ್ಕೆ ಗುರಿಯಾಗದಂತೆ ನೀನು ಹೀಗೆ ಮಾಡಬೇಕು” ಎಂದು ಆಜ್ಞಾಪಿಸಿದನು. 11 ಆದ್ದರಿಂದ ಯೆಹೋವನ ಅಪ್ಪಣೆಯ ಪ್ರಕಾರವೇ ಮೋಶೆ ಮಾಡಿದನು.

12 ಇಸ್ರೇಲರು ಮೋಶೆಗೆ, “ನಾವೆಲ್ಲರು ಪ್ರಾಣ ಕಳೆದುಕೊಂಡು ನಾಶವಾಗುತ್ತೇವಲ್ಲಾ, ನಮ್ಮಲ್ಲಿ ಯಾರೂ ಉಳಿಯುವುದಿಲ್ಲ. 13 ಯೆಹೋವನ ಗುಡಾರದ ಹತ್ತಿರಕ್ಕೆ ಬಂದವರೆಲ್ಲರೂ ಸಾಯುತ್ತಾರಲ್ಲಾ, ನಾವೆಲ್ಲರೂ ಹಾಗೆಯೇ ಸಾಯುತ್ತೇವೋ?” ಎಂದು ಹೇಳಿದರು.

ಯಾಜಕರ ಮತ್ತು ಲೇವಿಯರ ಕಾರ್ಯಗಳು

18 ಆಗ ಯೆಹೋವನು ಆರೋನನಿಗೆ, “ಪವಿತ್ರ ವಸ್ತುಗಳ ವಿಷಯದಲ್ಲಿ ಏನಾದರೂ ಹೊಲಸುತನ ನಡೆದರೆ, ನೀನೂ ನಿನ್ನ ಗಂಡುಮಕ್ಕಳೂ ನಿನ್ನ ಕುಲದವರೆಲ್ಲರೂ ಅದರ ಅಪರಾಧದ ಫಲವನ್ನು ಅನುಭವಿಸಬೇಕು. ಯಾಜಕತ್ವದ ವಿಷಯದಲ್ಲಿ ಏನಾದರೂ ಹೊಲಸುತನ ನಡೆದರೆ, ನೀನು ಮತ್ತು ನಿನ್ನ ಗಂಡುಮಕ್ಕಳು ಮಾತ್ರ ಅದರ ಅಪರಾಧದ ಫಲವನ್ನು ಅನುಭವಿಸಬೇಕು. ನಿನ್ನ ತಂದೆಯ ಕುಲದವರೂ ನಿನ್ನ ರಕ್ತಸಂಬಂಧಿಗಳೂ ಆಗಿರುವ ಲೇವಿಕುಲದವರನ್ನು ನಿನ್ನೊಡನೆ ಸೇರಿಸಿಕೊ; ನೀನು ಮತ್ತು ನಿನ್ನ ಗಂಡುಮಕ್ಕಳು ಒಡಂಬಡಿಕೆಯ ಮುಂದೆ ಇರುವಾಗ ಅವರು ನಿನ್ನೊಂದಿಗಿದ್ದು ನಿನಗೆ ಸಹಾಯ ಮಾಡುವರು. ಆ ಲೇವಿಯರು ನಿನಗೆ ಕಾವಲುಗಾರರಾಗಿರಬೇಕು ಅಂದರೆ ಇಡೀ ಗುಡಾರವನ್ನು ಕಾಯಬೇಕು. ಆದರೆ ಅವರು ಪವಿತ್ರವಾದ ಪಾತ್ರೆಯನ್ನಾಗಲಿ ಯಜ್ಞವೇದಿಕೆಯನ್ನಾಗಲಿ ಮುಟ್ಟಬಾರದು; ಮುಟ್ಟಿದರೆ ಅವರೂ ಸಾಯುವರು ಮತ್ತು ನೀವೂ ಸಾಯುವಿರಿ. ಅವರು ದೇವದರ್ಶನಗುಡಾರವನ್ನು ಕಾಯಬೇಕು ಮತ್ತು ಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸವನ್ನು ಮಾಡಬೇಕು. ಬೇರೆ ಯಾರೂ ನಿನ್ನೊಂದಿಗೆ ಭಾಗಿಗಳಾಗಿರಬಾರದು.

“ನಾನು ಮತ್ತೆ ಕೋಪಗೊಂಡು ಇಸ್ರೇಲರನ್ನು ದಂಡಿಸದಂತೆ ನೀವು ಪವಿತ್ರಸ್ಥಳವನ್ನು ಮತ್ತು ಯಜ್ಞವೇದಿಕೆಯನ್ನು ಕಾಯಬೇಕು. ಎಲ್ಲಾ ಇಸ್ರೇಲರಿಂದ ನಾನೇ ಲೇವಿಯರನ್ನು ಆರಿಸಿಕೊಂಡಿದ್ದೇನೆ. ಅವರು ನಿನಗೆ ಕೊಡಲ್ಪಟ್ಟ ಬಹುಮಾನವಾಗಿದ್ದಾರೆ. ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸವನ್ನು ಮಾಡಲು ಅವರು ಯೆಹೋವನಿಗೆ ಪ್ರತಿಷ್ಠಿತರಾಗಿದ್ದಾರೆ. ಆದರೆ ಆರೋನನೇ, ನೀನೂ ನಿನ್ನ ಪುತ್ರರೂ ನಿಮ್ಮ ಯಾಜಕತ್ವವನ್ನು ಕಾಪಾಡಿಕೊಳ್ಳಬೇಕು. ಅಯೋಗ್ಯನಾದ ಯಾವನೂ ಯಜ್ಞವೇದಿಕೆಯ ಬಳಿ ಕೆಲಸ ಮಾಡುವುದಕ್ಕಾಗಲೀ ತೆರೆಯ ಆಚೆಯಿರುವ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸುವುದಕ್ಕಾಗಲೀ ನೀವು ಬಿಡಕೂಡದು. ನಾನು ನಿಮಗೆ ಅಮೂಲ್ಯವಾದ ಯಾಜಕತ್ವವನ್ನು ಕೊಟ್ಟಿದ್ದೇನೆ. ಆದರೆ ಅಯೋಗ್ಯನಾದ ಯಾವನಾದರೂ ಯಾಜಕತ್ವದ ಈ ಕರ್ತವ್ಯಗಳನ್ನು ಮಾಡಲು ಪ್ರಯತ್ನಿಸಿದರೆ ಅವನು ಕೊಲ್ಲಲ್ಪಡುವನು.”

ಆಗ ಯೆಹೋವನು ಆರೋನನಿಗೆ ಹೀಗೆ ಹೇಳಿದನು: “ನನಗೆ ಬರಬೇಕಾಗಿರುವ ಕೊಡುಗೆಗಳನ್ನು ಮತ್ತು ಇಸ್ರೇಲರ ಪವಿತ್ರವಾದ ಎಲ್ಲಾ ಕಾಣಿಕೆಗಳನ್ನು ಕಾಯುವ ಜವಾಬ್ದಾರಿಕೆಯನ್ನು ನಾನೇ ನಿನಗೆ ವಹಿಸಿದ್ದೇನೆ. ಅವುಗಳನ್ನು ನಿನಗೂ ನಿನ್ನ ಸಂತತಿಯವರಿಗೂ ಪಾಲಾಗಿ ಕೊಟ್ಟಿದ್ದೇನೆ. ಅವು ಯಾವಾಗಲೂ ನಿಮ್ಮವೇ. ಯಜ್ಞವೇದಿಕೆಯ ಬೆಂಕಿಯಲ್ಲಿ ಹೋಮಮಾಡದೆ ಉಳಿಸಿರುವ ಮಹಾಪರಿಶುದ್ಧ ಪದಾರ್ಥಗಳಲ್ಲಿ ನಿಮಗೆ ದೊರೆಯಬೇಕಾದವುಗಳು ಯಾವುವೆಂದರೆ: ಅವರು ನನಗೆ ಕೊಡಲಿರುವ ಯಜ್ಞಗಳು, ಧಾನ್ಯಾರ್ಪಣೆಗಳು, ಪಾಪಪರಿಹಾರಕ ಯಜ್ಞಗಳು, ದೋಷಪರಿಹಾರಕ ಯಜ್ಞಗಳು ಮತ್ತು ಅಂತಹ ಪ್ರತಿಯೊಂದು ಅರ್ಪಣೆಗಳು ನಿನಗೂ ನಿನ್ನ ಗಂಡುಮಕ್ಕಳಿಗೂ ಮಹಾಪವಿತ್ರವಾಗಿವೆ. 10 ನೀವು ಮಹಾ ಪವಿತ್ರವಾದ ಸ್ಥಳದಲ್ಲಿ ಅದನ್ನು ಊಟಮಾಡಬೇಕು. ನಿಮ್ಮಲ್ಲಿರುವ ಪುರುಷರೆಲ್ಲರೂ ಅವುಗಳನ್ನು ತಿನ್ನಬಹುದು; ಅವು ಮಹಾ ಪವಿತ್ರವಾದವುಗಳೆಂದು ನೀವು ಪರಿಗಣಿಸಬೇಕು.

11 “ಅದಲ್ಲದೆ, ಅವರ ಪ್ರತಿಷ್ಠಿತಾ ಕಾಣಿಕೆಗಳು ಮತ್ತು ಇಸ್ರೇಲರ ನಿವಾಳಿಸಲ್ಪಟ್ಟ ಕಾಣಿಕೆಗಳು ನಿಮಗೆ ಸೇರಿವೆ. ಅವುಗಳನ್ನು ನಾನು ನಿನಗೂ ನಿನ್ನ ಗಂಡುಮಕ್ಕಳಿಗೂ ಹೆಣ್ಣುಮಕ್ಕಳಿಗೂ ಶಾಶ್ವತವಾದ ಪಾಲಾಗಿ ಕೊಡುವೆನು.

12 “ಇದಲ್ಲದೆ, ಇಸ್ರೇಲರು ಯೆಹೋವನಿಗೆ ಸಮರ್ಪಿಸುವ ಪ್ರಥಮಫಲದ ಪದಾರ್ಥಗಳಲ್ಲಿ ಅಂದರೆ ಉತ್ತಮವಾದ ಎಣ್ಣೆ, ಹೊಸ ದ್ರಾಕ್ಷಾರಸ, ಧಾನ್ಯ ಇವುಗಳನ್ನೆಲ್ಲ ನಾನು ನಿಮಗೆ ಕೊಡುತ್ತೇನೆ. 13 ಅವರು ತಮ್ಮ ದೇಶದ ಎಲ್ಲಾ ಬೆಳೆಗಳಲ್ಲಿ ಯೆಹೋವನಿಗೋಸ್ಕರ ತರುವ ಪ್ರಥಮಫಲವು ನಿಮಗೆ ಸಲ್ಲಬೇಕು. ನಿಮ್ಮ ಕುಟುಂಬಗಳಲ್ಲಿ ಶುದ್ಧರಾಗಿರುವವರೆಲ್ಲರೂ ಅವುಗಳನ್ನು ಊಟಮಾಡಬಹುದು.

14 “ಇಸ್ರೇಲರು ಯೆಹೋವನಿಗೆ ಹರಕೆ ಹೊತ್ತುಕೊಂಡು ಕೊಡುವ ಪ್ರತಿಯೊಂದೂ ನಿಮ್ಮದಾಗಿದೆ.

15 “ಮನುಷ್ಯರಲ್ಲಾಗಲಿ ಪ್ರಾಣಿಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲು ಮಕ್ಕಳಿಗೂ ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಳ್ಳಬೇಕು. 16 ಒಂದು ತಿಂಗಳಿನ ಪ್ರಾಯಕ್ಕೆ ಬಂದಿರುವ ಎಲ್ಲರಿಂದಲೂ ನಿಗದಿಪಡಿಸಿದ ಐದು ಶೆಕೆಲ್‌ಗಳನ್ನು ಈಡಾಗಿ ತೆಗೆದುಕೊಳ್ಳಬೇಕು.

17 “ಆದರೆ ಚೊಚ್ಚಲು ಆಕಳಿಗಾಗಲಿ ಕುರಿಗಾಗಲಿ ಆಡಿಗಾಗಲಿ ಈಡನ್ನು ಕೊಡಕೂಡದು. ಆ ಪಶುಗಳು ಪವಿತ್ರವಾಗಿವೆ. ಅವುಗಳ ರಕ್ತವನ್ನು ವೇದಿಕೆಯ ಮೇಲೆ ಚೆಲ್ಲಿ ಅವುಗಳ ಕೊಬ್ಬನ್ನು ಯೆಹೋವನಿಗೆ ಮೆಚ್ಚಿಗೆಕರವಾದ ಸುಗಂಧ ವಾಸನೆಯ ತ್ಯಾಗಮಯವಾದ ಕಾಣಿಕೆಯನ್ನಾಗಿ ಹೋಮಮಾಡಿರಿ. 18 ಆದರೆ ಅವುಗಳ ಮಾಂಸದಲ್ಲಿ ನಿವಾಳಿಸಲ್ಪಡುವ ಕಾಣಿಕೆಯಂತೆ ಎದೆಯ ಭಾಗ ಮತ್ತು ಬಲತೊಡೆ ನಿಮ್ಮದಾಗಿವೆ. 19 ಇಸ್ರೇಲರು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ಪವಿತ್ರ ವಸ್ತುಗಳೆಲ್ಲವನ್ನು ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತವಾದ ಪಾಲಾಗಿ ಅನುಗ್ರಹಿಸಿದ್ದೇನೆ. ಇದು ಯೆಹೋವನ ಸನ್ನಿಧಿಯಲ್ಲಿ ನಿನ್ನೊಡನೆಯೂ ನಿನ್ನ ನಂತರದ ಸಂತತಿಯವರೊಡನೆಯೂ ಮಾಡಿಕೊಂಡ ಶಾಶ್ವತವಾದ ಉಪ್ಪಿನ ಒಡಂಬಡಿಕೆ.”

20 ಇದಲ್ಲದೆ ಯೆಹೋವನು ಆರೋನನಿಗೆ, “ಅವರ ಭೂಮಿಯಲ್ಲಿ ನಿನಗೆ ಯಾವ ಪಾಲೂ ದೊರೆಯುವುದಿಲ್ಲ. ಅವರ ಮಧ್ಯದಲ್ಲಿ ನೀನು ಭೂಮಿಯ ಯಾವ ಭಾಗವನ್ನೂ ಹೊಂದಿರುವುದಿಲ್ಲ. ಇಸ್ರೇಲರ ಮಧ್ಯದಲ್ಲಿ ಯೆಹೋವನಾದ ನಾನೇ ನಿನ್ನ ಪಾಲೂ ಭಾಗವೂ ಆಗಿದ್ದೇನೆ.

21 “ಲೇವಿಯರು ದೇವದರ್ಶನಗುಡಾರಕ್ಕೋಸ್ಕರ ಮಾಡುವ ಭಾರವಾದ ಕೆಲಸಕ್ಕೆ ಪ್ರತಿಫಲವಾಗಿ ಪ್ರತಿಯೊಬ್ಬ ಇಸ್ರೇಲನ ದಶಾಂಶವನ್ನು ನಾನು ಲೇವಿಯರಿಗೆ ಅವರ ಪಾಲಾಗಿ ಕೊಡುತ್ತಿದ್ದೇನೆ. 22 ಈಗಿನಿಂದ ಇಸ್ರೇಲರು ದೇವದರ್ಶನಗುಡಾರದೊಳಗೆ ಅತಿಕ್ರಮಿಸಿ ಬರಕೂಡದು; ಬಂದರೆ ತಮ್ಮ ಮೇಲೆ ದಂಡನೆಯನ್ನು ಬರಮಾಡಿಕೊಂಡು ಸಾಯುವರು. 23 ದೇವದರ್ಶನಗುಡಾರಕ್ಕೋಸ್ಕರ ಲೇವಿಯರು ಮಾತ್ರ ಕೆಲಸ ಮಾಡಬೇಕು. ದೇವದರ್ಶನಗುಡಾರದಲ್ಲಿ ಏನಾದರೂ ಅತಿಕ್ರಮಣ ನಡೆದರೆ ಇಸ್ರೇಲರ ದಂಡನೆಯನ್ನು ಅವರೇ ಪಡೆಯುವರು. ಈಗಿನಿಂದ ಇದೇ ಶಾಶ್ವತ ಕಟ್ಟಳೆ. ಇತರ ಇಸ್ರೇಲರಿಗೆ ನಾನು ವಾಗ್ದಾನ ಮಾಡಿದ ಭೂಮಿಯಲ್ಲಿ ಲೇವಿಯರಿಗೆ ಯಾವ ಪಾಲೂ ದೊರೆಯುವುದಿಲ್ಲ. 24 ಇಸ್ರೇಲರು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸುವ ಹತ್ತನೆಯ ಪಾಲನ್ನು ಲೇವಿಯರಿಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದೇನೆ. ಇವರಿಗೆ ಇಸ್ರೇಲರೊಂದಿಗೆ ಪಾಲು ದೊರೆಯುವುದಿಲ್ಲವೆಂದು ನಾನು ಲೇವಿಯರ ಕುರಿತು ಹೇಳಿದ ಮಾತಿಗೆ ಇದೇ ಕಾರಣ” ಎಂದು ಹೇಳಿದನು.

25 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 26 “ನೀನು ಲೇವಿಯರಿಗೆ ಇದನ್ನು ತಿಳಿಸಬೇಕು: ಇಸ್ರೇಲರು ತಮ್ಮ ಆದಾಯದಲ್ಲಿ ಕೊಡುವ ದಶಾಂಶವನ್ನು ನಿಮ್ಮ ಪಾಲೆಂದು ನಾನು ನಿಗದಿಪಡಿಸಿದ್ದೇನೆ. ಇಸ್ರೇಲರು ದಶಾಂಶ ಕೊಟ್ಟಾಗ ನೀವು ಆ ದಶಾಂಶದಲ್ಲಿ ಹತ್ತನೆಯ ಒಂದು ಭಾಗವನ್ನು ಯೆಹೋವನಿಗೆ ಸಲ್ಲಿಸಬೇಕು. 27 ನೀವು ಹೀಗೆ ಸಮರ್ಪಿಸಿದ ಹತ್ತನೆಯ ಪಾಲು ಕಣದಲ್ಲಿನ ದವಸವನ್ನೂ ದ್ರಾಕ್ಷಿಆಲೆಯಿಂದ ರಸವನ್ನೂ ಕೊಟ್ಟಂತೆ ನಿಮ್ಮ ಲೆಕ್ಕದಲ್ಲಿ ಎಣಿಸಲ್ಪಡುವುದು. 28 ಇಸ್ರೇಲರಿಂದ ನಿಮಗೆ ಸಲ್ಲುವ ಹತ್ತನೆಯ ಪಾಲಿನಲ್ಲಿ ನೀವು ಯೆಹೋವನಿಗೋಸ್ಕರ ಹತ್ತನೆಯ ಭಾಗವನ್ನು ಪ್ರತ್ಯೇಕಿಸಿ ಯಾಜಕನಾದ ಆರೋನನಿಗೆ ಒಪ್ಪಿಸಬೇಕು. 29 ಇಸ್ರೇಲರು ನಿಮಗೆ ಕೊಡುವ ಸಕಲ ಪದಾರ್ಥಗಳಿಂದ ನೀವು ಯೆಹೋವನಿಗೆ ಕೊಡಬೇಕಾಗಿರುವ ಪಾಲನ್ನು ಮತ್ತು ಪ್ರತಿಷ್ಠಿಸಲ್ಪಟ್ಟಿರುವ ಉತ್ತಮ ಭಾಗವನ್ನು ನೀವು ಪ್ರತ್ಯೇಕವಾಗಿಡಬೇಕು.

30 “ಮೋಶೆಯೇ, ಲೇವಿಯರಿಗೆ ಹೀಗೆ ಹೇಳು: ಆ ಕಾಣಿಕೆಗಳಲ್ಲಿ ಉತ್ತಮವಾದ ಭಾಗವನ್ನು ನೀವು ಯೆಹೋವನಿಗೆ ಕೊಡುವಾಗ, ಲೇವಿಯರಾದ ನಿಮಗೆ ಅದು ಕಣದ ಉತ್ಪಾದನೆಯಂತೆಯೂ ದ್ರಾಕ್ಷಿಆಲೆಯ ಉತ್ಪಾದನೆಯಂತೆಯೂ ಪರಿಗಣಿಸಲ್ಪಡುವುದು. 31 ಉಳಿದದ್ದನ್ನು ನೀವು ಮತ್ತು ನಿಮ್ಮ ಕುಟುಂಬದವರು ಎಲ್ಲಿ ಬೇಕಾದರೂ ತಿನ್ನಬಹುದು. ನೀವು ದೇವದರ್ಶನಗುಡಾರದಲ್ಲಿ ಮಾಡುವ ಕೆಲಸಕ್ಕೆ ಇದು ನಿಮಗೆ ಪ್ರತಿಫಲವಾಗಿದೆ. 32 ನೀವು ಯಾವಾಗಲೂ ಉತ್ತಮ ಭಾಗವನ್ನು ಯೆಹೋವನಿಗೆ ಕೊಟ್ಟರೆ, ಸಂಕಟದ ದಂಡನೆಯಿಂದ ತಪ್ಪಿಸಿಕೊಳ್ಳುವಿರಿ. ಇಸ್ರೇಲರು ಕೊಟ್ಟ ಪವಿತ್ರವಾದ ಕಾಣಿಕೆಗಳಿಗೆ ನೀವು ಅಪಮಾನ ಮಾಡುವುದಿಲ್ಲ ಮತ್ತು ನೀವು ಸಾಯುವುದಿಲ್ಲ.”

ಕೀರ್ತನೆಗಳು 55

ರಚನೆಗಾರ: ದಾವೀದ.

55 ದೇವರೇ, ನನ್ನ ಪ್ರಾರ್ಥನೆಯನ್ನು ಕೇಳು.
    ನನ್ನ ವಿಜ್ಞಾಪನೆಗೆ ಕಿವಿಗೊಡು.
ನನ್ನ ಮೊರೆಯನ್ನು ಆಲಿಸಿ ಸದುತ್ತರವನ್ನು ದಯಪಾಲಿಸು.
    ನಾನು ನಿನ್ನೊಂದಿಗೆ ಮಾತಾಡುವೆನು; ನನಗಾಗಿರುವ ದುಃಖವನ್ನು ನಿನ್ನ ಮುಂದೆ ತೋಡಿಕೊಳ್ಳುವೆನು.
ನನ್ನ ವೈರಿಗಳು ನನ್ನ ಬಗ್ಗೆ ಕೆಟ್ಟದ್ದನ್ನೇ ಹೇಳಿದರು. ಆ ದುಷ್ಟರು ನನ್ನ ಮೇಲೆ ಅಬ್ಬರಿಸಿದರು.
    ನನ್ನ ವೈರಿಗಳು ಕೋಪದಿಂದ ನನ್ನ ಮೇಲೆ ಆಕ್ರಮಣ ಮಾಡಿದರು.
    ಅವರು ನನ್ನ ಮೇಲೆ ಆಪತ್ತುಗಳನ್ನು ಬರಮಾಡಿದರು.
ನನ್ನ ಹೃದಯ ಬಡಿತವು ಮಿತಿಮೀರಿದೆ;
    ಮರಣ ಭಯವು ನನ್ನನ್ನು ಆವರಿಸಿಕೊಂಡಿದೆ.
ನಾನು ಭಯದಿಂದ ನಡುಗುತ್ತಿದ್ದೇನೆ.
    ನಾನು ದಿಗಿಲುಗೊಂಡಿದ್ದೇನೆ.
ಆಹಾ, ನನಗೆ ಪಾರಿವಾಳದಂತೆ ರೆಕ್ಕೆಗಳಿದ್ದರೆ,
    ನಾನು ಹಾರಿಹೋಗಿ ಆಶ್ರಯ ಸೇರಿಕೊಳ್ಳುತ್ತಿದ್ದೆನು.
    ನಾನು ಅರಣ್ಯದಲ್ಲಿ ಬಹು ದೂರಕ್ಕೆ ಹಾರಿಹೋಗುತ್ತಿದ್ದೆನು.

ನಾನು ಓಡಿಹೋಗಿ
    ಹಾನಿಕರವಾದ ಈ ಬಿರುಗಾಳಿಯಿಂದ ತಪ್ಪಿಸಿಕೊಳ್ಳುತ್ತಿದ್ದೆನು.
ನನ್ನ ಒಡೆಯನೇ, ಅವರ ಸುಳ್ಳುಗಳನ್ನು ನಿಲ್ಲಿಸು.
    ಈ ಪಟ್ಟಣದಲ್ಲಿ ಹಿಂಸೆಕಲಹಗಳು ಕಾಣುತ್ತಿವೆ.
10 ಹಗಲಿರುಳು, ಈ ನಗರದಲ್ಲೆಲ್ಲಾ ಅಪರಾಧ
    ಮತ್ತು ಬಲಾತ್ಕಾರಗಳು ತುಂಬಿಕೊಂಡಿವೆ.
11 ಬೀದಿಗಳಲ್ಲಿ ಅಪರಾಧಗಳು ಅತಿಯಾಗಿವೆ.
    ಜನರು ಎಲ್ಲೆಲ್ಲಿಯೂ ಸುಳ್ಳು ಹೇಳಿ ಮೋಸಮಾಡುತ್ತಿದ್ದಾರೆ.

12 ನನಗೆ ಅವಮಾನ ಮಾಡುವವನು
    ವೈರಿಯಾಗಿದ್ದಿದ್ದರೆ ತಾಳಿಕೊಳ್ಳಬಹುದಿತ್ತು.
ನನ್ನ ಮೇಲೆ ಆಕ್ರಮಣ ಮಾಡುವವರು ನನ್ನ ಶತ್ರುವಾಗಿದ್ದಿದ್ದರೆ
    ಅಡಗಿಕೊಳ್ಳಬಹುದಿತ್ತು.
13 ಆದರೆ ನನಗೆ ಕೇಡುಮಾಡುತ್ತಿರುವವನು ನನ್ನ ಸಂಗಡಿಗನಾದ ನೀನೇ;
    ನನ್ನ ಸಹೋದ್ಯೋಗಿಯೂ ನನ್ನ ಸ್ನೇಹಿತನೂ ಆದ ನೀನೇ.
14 ನಾವು ಜನಸಮೂಹದ ನಡುವೆ ದೇವಾಲಯಕ್ಕೆ ಹೋಗುವಾಗ,
    ಗುಟ್ಟಾದ ವಿಷಯಗಳನ್ನು ಮಾತಾಡುತ್ತಿದ್ದೆವಲ್ಲಾ!

15 ನನ್ನ ಶತ್ರುಗಳಿಗೆ ಮರಣವು ಇದ್ದಕ್ಕಿದ್ದಂತೆ ಬರಲಿ!
    ಭೂಮಿಯು ಬಾಯ್ದೆರೆದು ಅವರನ್ನು ಜೀವಂತವಾಗಿ ನುಂಗಿಬಿಡಲಿ!
    ಯಾಕೆಂದರೆ ಅವರು ಒಟ್ಟಾಗಿ ಸೇರಿ ಅಂಥಾ ಭಯಂಕರವಾದವುಗಳನ್ನು ಆಲೋಚಿಸುವರು.

16 ನಾನು ಸಹಾಯಕ್ಕಾಗಿ ದೇವರಲ್ಲಿ ಮೊರೆಯಿಡುವೆನು.
    ಯೆಹೋವನು ನನಗೆ ಉತ್ತರ ಕೊಡುವನು.
17 ನಾನು ದೇವರೊಂದಿಗೆ ಸಾಯಂಕಾಲದಲ್ಲಿಯೂ ಮುಂಜಾನೆಯಲ್ಲಿಯೂ ಮಧ್ಯಾಹ್ನದಲ್ಲಿಯೂ ಮಾತಾಡುವೆನು.
    ನನಗಾಗಿರುವ ದುಃಖವನ್ನು ಆತನಿಗೆ ಹೇಳಿಕೊಳ್ಳುವೆನು. ಆತನು ನನಗೆ ಕಿವಿಗೊಡುವನು!
18 ನಾನು ಅನೇಕ ಯುದ್ಧಗಳಲ್ಲಿ ಹೋರಾಡಿದ್ದೇನೆ.
    ಆದರೆ ಪ್ರತಿಸಲವೂ ದೇವರು ನನ್ನನ್ನು ಪಾರುಮಾಡಿ, ಸುರಕ್ಷಿತವಾಗಿ ಬರಮಾಡಿದನು.
19 ದೇವರು ನನಗೆ ಕಿವಿಗೊಡುವನು.
    ಅನಾದಿಕಾಲದ ರಾಜನು ನನಗೆ ಸಹಾಯ ಮಾಡುವನು.

ನನ್ನ ವೈರಿಗಳು ತಮ್ಮ ಜೀವಿತಗಳನ್ನು ಪರಿವರ್ತಿಸಿಕೊಳ್ಳುವುದಿಲ್ಲ.
    ಅವರಿಗೆ ದೇವರಲ್ಲಿ ಭಯಭಕ್ತಿಯಿಲ್ಲ.
20 ನನ್ನ ವೈರಿಗಳು ತಮ್ಮ ಸ್ನೇಹಿತರ ಮೇಲೆಯೇ ಆಕ್ರಮಣ ಮಾಡುವರು;
    ತಮ್ಮ ಒಡಂಬಡಿಕೆಗಳನ್ನು ತಾವೇ ಉಲ್ಲಂಘಿಸುವರು.
21 ನನ್ನ ವೈರಿಗಳು ನಯ ನಾಜೂಕಿನಿಂದ ಶಾಂತಿಯ ಕುರಿತು ಮಾತಾಡುವರು;
    ಅಂತರಂಗದಲ್ಲಿಯೇ ಯುದ್ಧಗಳ ಕುರಿತು ಆಲೋಚಿಸುವರು.
ಅವರ ಮಾತುಗಳು ಬೆಣ್ಣೆಯಂತೆ ನುಣುಪಾಗಿದ್ದರೂ
    ಅವರ ಹೃದಯಗಳು ಬಿಚ್ಚುಗತ್ತಿಗಳೇ ಸರಿ.

22 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು.
    ಆತನು ನಿನ್ನನ್ನು ಉದ್ಧಾರ ಮಾಡುವನು.
    ಸಜ್ಜನರಿಗೆ ಸೋಲಾಗಲು ಯೆಹೋವನೆಂದಿಗೂ ಬಿಡನು.

23 ದೇವರೇ, ನೀನು ದುಷ್ಟರನ್ನು ಪಾತಾಳಕ್ಕೆ ದಬ್ಬಿಬಿಡುವೆ.
    ಕೊಲೆಪಾತಕರೂ ವಂಚಕರೂ ತಮ್ಮ ಅರ್ಧಾಯುಷ್ಯವಾದರೂ ಬದುಕರು.
ನಾನಾದರೊ ನಿನ್ನನ್ನೇ ನಂಬಿಕೊಂಡಿರುವೆನು.

ಯೆಶಾಯ 7

ಅರಾಮ್ಯರೊಂದಿಗೆ ವೈಮನಸ್ಸು

ಆಹಾಜನು ಯೋಥಾಮನ ಮಗನು. ಯೋಥಾಮನು ಉಜ್ಜೀಯನ ಮಗನು. ರೆಚೀನ್ ಎಂಬವನು ಅರಾಮ್ಯರ ಅರಸನಾಗಿದ್ದನು. ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ಅರಸನಾಗಿದ್ದನು. ಆಗ ಆಹಾಜನು ಯೆಹೂದದ ಅರಸನಾಗಿದ್ದನು. ರೆಚೀನ್ ಮತ್ತು ಪೆಕಹ ಇವರಿಬ್ಬರೂ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಟರು. ಆದರೆ ಆ ನಗರವನ್ನು ಸೋಲಿಸಲು ಅವರಿಂದಾಗಲಿಲ್ಲ.

ದಾವೀದನ ವಂಶದವರಿಗೆ ಒಂದು ಸಂದೇಶವು ಕಳುಹಿಸಲ್ಪಟ್ಟಿತು, “ಅರಾಮ್ಯರ ಸೈನ್ಯ ಮತ್ತು ಎಫ್ರಾಯೀಮ್ಯರ ಸೈನ್ಯ (ಇಸ್ರೇಲ್) ಒಟ್ಟಾಗಿ ಶಿಬಿರ ಹೂಡಿದ್ದಾರೆ” ಎಂಬುದೇ ಆ ಸಂದೇಶ. ಅರಸನಾದ ಆಹಾಜನು ಈ ಸಂದೇಶವನ್ನು ಕೇಳಿದಾಗ, ಅವನೂ ಅವನ ಜನರೂ ಬಹಳವಾಗಿ ಭಯಹಿಡಿದವರಾದರು. ಅಡವಿಯ ಮರಗಳು ಬಿರುಗಾಳಿಗೆ ತತ್ತರಿಸುತ್ತವೋ ಎಂಬಂತೆ ಅವರು ತತ್ತರಿಸಿದರು.

ಆಗ ಯೆಹೋವನು ಯೆಶಾಯನಿಗೆ, “ನೀನೂ ನಿನ್ನ ಮಗನಾದ ಶೆಯಾರ್ ಯಾಶೂಬನೂ ಆಹಾಜನ ಬಳಿಗೆ ಹೋಗಿ ಮಾತನಾಡಬೇಕು. ನೀರು ಮೇಲಿನ ಕೊಳಕ್ಕೆ ಸೇರುವ ಸ್ಥಳಕ್ಕೆ ಹೋಗು. ಇದು ಅಗಸನ ಹೊಲಕ್ಕೆ ಹೋಗುವ ಮಾರ್ಗದಲ್ಲಿದೆ.

“ಆಹಾಜನಿಗೆ ಹೀಗೆ ಹೇಳು: ‘ಶಾಂತನಾಗಿದ್ದು ಜಾಗ್ರತೆಯಿಂದಿರು. ಭಯಪಡಬೇಡ. ರೆಚೀನ್ ಮತ್ತು ರೆಮಲ್ಯನ ಮಗ ಇವರಿಬ್ಬರೂ ಸೇರಿ ನಿನ್ನನ್ನು ಬೆದರಿಸದಂತೆ ನೋಡಿಕೋ. ಅವರಿಬ್ಬರೂ ಸುಟ್ಟುಹೋದ ಕೋಲಿನಂತಿದ್ದಾರೆ. ಹಿಂದೆ ಅವರು ಬೆಂಕಿಯಿಂದ ಉರಿಯುತ್ತಿದ್ದರು. ಆದರೆ ಈಗ ಅವರು ಕೇವಲ ಹೊಗೆಯಾಡುತ್ತಿದ್ದಾರೆ. ರೆಚೀನ್, ಅರಾಮ್ ಮತ್ತು ರೆಮಲ್ಯನ ಮಗ ಕೋಪಗೊಂಡಿದ್ದಾರೆ. ಅವರು ನಿನ್ನ ವಿರುದ್ಧವಾಗಿ ಕುತಂತ್ರ ನಡಿಸಿದ್ದಾರೆ. ಅವರು, “ನಾವು ಹೋಗಿ ಯೆಹೂದಕ್ಕೆ ವಿರುದ್ಧವಾಗಿ ಯುದ್ಧ ಮಾಡೋಣ. ಯೆಹೂದ ರಾಜ್ಯವನ್ನು ನಾವಿಬ್ಬರೂ ಭಾಗ ಮಾಡಿಕೊಳ್ಳೋಣ ಮತ್ತು ಟಾಬೇಲನ ಮಗನನ್ನು ಯೆಹೂದದ ಹೊಸ ಅರಸನಾಗಿ ಮಾಡೋಣ ಎಂದು ಮಾತಾಡಿಕೊಳ್ಳುತ್ತಿದ್ದಾರೆ.”’”

ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: “ಅವರ ಕುತಂತ್ರವು ನಡೆಯದು. ಅದು ನೆರವೇರದು. ದಮಸ್ಕದಲ್ಲಿ ರೆಚೀನನು ಅರಸನಾಗಿರುವಷ್ಟು ಸಮಯ ಅದು ನಡೆಯದು. ಎಫ್ರಾಯೀಮ್ (ಇಸ್ರೇಲ್) ಈಗ ಒಂದು ದೇಶವಾಗಿದೆ. ಆದರೆ ಇನ್ನು ಅರವತ್ತೈದು ವರ್ಷಗಳೊಳಗೆ ಎಫ್ರಾಯೀಮ್ ಒಂದು ದೇಶವಾಗಿರದು. ಸಮಾರ್ಯವು ಎಫ್ರಾಯೀಮಿನ ರಾಜಧಾನಿಯಾಗಿರುವಷ್ಟು ಕಾಲ ಮತ್ತು ರೆಮಲ್ಯನ ಮಗನು ಸಮಾರ್ಯದಲ್ಲಿ ಅರಸನಾಗಿರುವಷ್ಟು ಕಾಲ ಅವರ ಯೋಜನೆಗಳು ಕೈಗೂಡುವುದಿಲ್ಲ. ನೀನು ಈ ವಾರ್ತೆಯನ್ನು ನಂಬದಿದ್ದರೆ ಜನರು ನಿನ್ನ ಮಾತನ್ನು ನಂಬದಿರಲಿ.”

ಇಮ್ಮಾನುವೇಲ್: ದೇವರು ನಮ್ಮೊಂದಿಗಿದ್ದಾನೆ

10 ಬಳಿಕ ಯೆಹೋವನು ಆಹಾಜನೊಡನೆ ಮಾತನ್ನು ಮುಂದುವರಿಸಿದನು. 11 ಯೆಹೋವನು ಅವನಿಗೆ, “ಇವೆಲ್ಲಾ ಸತ್ಯವೆಂದು ಮನದಟ್ಟು ಮಾಡಿಕೊಳ್ಳಲು ಒಂದು ಗುರುತನ್ನು ಕೇಳಿಕೊ. ನಿನಗೆ ಯಾವ ಗುರುತನ್ನು ಬೇಕಾದರೂ ಕೇಳಿಕೊ. ಆ ಗುರುತು ಆಳವಾದ ನರಕದಿಂದ ಬಂದ ಗುರುತಾದರೂ ಸರಿಯೇ ಅಥವಾ ಉನ್ನತವಾದ ಆಕಾಶದಿಂದ ಬಂದ ಗುರುತಾದರೂ ಸರಿಯೇ, ನಿನಗೆ ದಯಪಾಲಿಸುವೆನು” ಎಂದು ಹೇಳಿದನು.

12 ಅದಕ್ಕೆ ಆಹಾಜನು, “ಇದು ಸತ್ಯವೆಂಬುದಕ್ಕೆ ನಾನು ಯಾವ ಗುರುತನ್ನೂ ಕೇಳಲಾರೆ. ನಾನು ಯೆಹೋವನನ್ನು ಪರೀಕ್ಷಿಸುವುದಿಲ್ಲ” ಎಂದು ಹೇಳಿದನು.

13 ಆಗ ಯೆಶಾಯನು ಹೇಳಿದ್ದೇನೆಂದರೆ, “ದಾವೀದನ ಮನೆತನದವರೇ, ಕಿವಿಗೊಟ್ಟು ಕೇಳಿರಿ. ನೀವು ಜನರ ತಾಳ್ಮೆಯನ್ನು ಪರೀಕ್ಷಿಸುತ್ತೀರಿ. ಆದರೆ ಅದು ನಿಮಗೆ ದೊಡ್ಡ ವಿಷಯವಲ್ಲ. ಆದರೆ ಈಗ ನೀವು ನನ್ನ ದೇವರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀರಿ. 14 ನನ್ನ ಒಡೆಯನಾದ ದೇವರು ನಿಮಗೊಂದು ಗುರುತನ್ನು ಕೊಡುವನು:

ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನಿಗೆ ಜನ್ಮ ನೀಡುವಳು.
    ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವಳು.
15 ಆತನು ಒಳ್ಳೆಯದನ್ನು ಆರಿಸಿಕೊಳ್ಳಲು ಮತ್ತು ಕೆಟ್ಟದ್ದನ್ನು ನಿರಾಕರಿಸಲು ಕಲಿತುಕೊಳ್ಳುವವರೆಗೆ
    ಮೊಸರನ್ನೂ ಜೇನುತುಪ್ಪವನ್ನೂ ತಿನ್ನುವನು.
16 ಆ ಮಗುವು ಒಳ್ಳೆಯದರ ಬಗ್ಗೆ ಮತ್ತು ಕೆಟ್ಟದ್ದರ ಬಗ್ಗೆ ಕಲಿತುಕೊಳ್ಳುವಷ್ಟು ವಯಸ್ಸಾಗುವ ಮೊದಲೇ
    ಎಫ್ರಾಯೀಮ್ ದೇಶ ಮತ್ತು ಅರಾಮ್ಯರ ದೇಶ ನಿರ್ಜನವಾಗುವುದು.
    ನೀವೀಗ, ಆ ಇಬ್ಬರು ಅರಸರಿಗೆ ಭಯಪಡುತ್ತಿದ್ದೀರಿ.

17 “ಆದರೆ ನೀವು ಯೆಹೋವನಿಗೆ ಭಯಪಡುವವರಾಗಿರಬೇಕು. ಯಾಕೆಂದರೆ ಆತನು ನಿಮಗೆ ಸಂಕಟದ ಕಾಲವನ್ನು ತಂದೊಡ್ಡುವನು. ಅದು ಎಫ್ರಾಯೀಮ್ ಯೆಹೂದದಿಂದ ಅಗಲಿಹೋದ ಸಮಯದಲ್ಲಾದ ಸಂಕಟದಂತಿರುವುದು. ಆ ಸಂಕಟವು ನಿಮ್ಮ ಜನಗಳಿಗೂ ನಿಮ್ಮ ಪೂರ್ವಿಕರ ಕುಟುಂಬಕ್ಕೂ ಬರುವದು. ದೇವರು ಏನು ಮಾಡುವನು? ಆತನು ಅಶ್ಶೂರದ ರಾಜನನ್ನು ನಿಮಗೆ ವಿರುದ್ಧವಾಗಿ ಯುದ್ಧಕ್ಕೆ ಬರಮಾಡುವನು.

18 “ಆ ಸಮಯದಲ್ಲಿ ಯೆಹೋವನು ನೊಣಗಳನ್ನು ಕರೆಯುವನು. ಆ ನೊಣಗಳು ಈಗ ಈಜಿಪ್ಟಿನ ನದಿಗಳ ಸಮೀಪದಲ್ಲಿವೆ. ಯೆಹೋವನು ದುಂಬಿಗಳನ್ನು ಕರೆಯುವನು. ಆ ದುಂಬಿಗಳು ಈಗ ಅಶ್ಶೂರ್ ದೇಶದಲ್ಲಿವೆ. ಈ ವೈರಿಗಳು ನಿಮ್ಮ ದೇಶಕ್ಕೆ ಬಂದು 19 ಮರುಭೂಮಿಯ ಹಳ್ಳಗಳ ಸಮೀಪದಲ್ಲಿರುವ ಬಂಡೆಯ ಸಂದುಗೊಂದುಗಳಲ್ಲಿಯೂ ನೀರಿನ ಬಾವಿಗಳ ಬಳಿಯಲ್ಲಿರುವ ಮುಳ್ಳುಪೊದೆಗಳಲ್ಲಿಯೂ ಶಿಬಿರ ಹಾಕಿಕೊಳ್ಳುವರು. 20 ಯೆಹೋವನು ಅಶ್ಶೂರದವರ ಮೂಲಕ ಯೆಹೂದವನ್ನು ಶಿಕ್ಷಿಸುವನು. ಆತನು ಅಶ್ಶೂರವನ್ನು ಬಾಡಿಗೆಗೆ ತೆಗೆದುಕೊಂಡ ಕ್ಷೌರಿಕನ ಕತ್ತಿಯಂತೆ ತೆಗೆದುಕೊಂಡು ಯೆಹೂದದ ತಲೆಕೂದಲನ್ನೂ ಕೈಕಾಲುಗಳ ಕೂದಲನ್ನೂ ಗಡ್ಡವನ್ನೂ ಬೋಳಿಸಿಬಿಡುವನು.

21 “ಆ ಕಾಲದಲ್ಲಿ ಯಾವನೇ ಆಗಲಿ ಹಸುವನ್ನೂ ಎರಡು ಕುರಿಗಳನ್ನೂ ಸಾಕಿ, 22 ಅವು ಕರೆಯುವ ಹಾಲಿನಿಂದ ಮೊಸರನ್ನು ತಿನ್ನುವನು; ದೇಶದಲ್ಲಿರುವ ಪ್ರತಿಯೊಬ್ಬನೂ ಮೊಸರನ್ನೂ ಜೇನುತುಪ್ಪವನ್ನೂ ತಿಂದು ಜೀವಿಸುವನು. 23 ಒಂದುಸಾವಿರ ದ್ರಾಕ್ಷಾಲತೆಗಳಿರುವ ತೋಟಗಳಿರುತ್ತವೆ. ಪ್ರತಿಯೊಂದು ದ್ರಾಕ್ಷಾಲತೆಯು ಒಂದುಸಾವಿರ ಬೆಳ್ಳಿನಾಣ್ಯಗಳಷ್ಟು ಬೆಲೆಬಾಳುವಂಥದ್ದಾಗಿರುತ್ತದೆ. ಆದರೆ ಅಂಥ ತೋಟಗಳು ಹಣಜಿಗಳಿಂದಲೂ ಮುಳ್ಳುಗಿಡಗಳಿಂದಲೂ ತುಂಬಿಕೊಂಡಿರುವವು. 24 ದೇಶವು ಕಾಡಾಗುವುದರಿಂದ ಜನರು ಬಿಲ್ಲುಬಾಣಗಳೊಡನೆ ಸಂಚರಿಸುವರು. 25 ಒಂದು ಕಾಲದಲ್ಲಿ ಜನರು ಈ ಬೆಟ್ಟಗಳ ಮೇಲೆ ವ್ಯವಸಾಯ ಮಾಡಿ ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ಆ ಸಮಯದಲ್ಲಿ ಜನರು ಅಲ್ಲಿಗೆ ಹೋಗುವುದಿಲ್ಲ. ದೇಶವು ಹಣಜಿಯಿಂದಲೂ ಮುಳ್ಳುಗಿಡಗಳಿಂದಲೂ ತುಂಬಿರುವದು. ಆ ಸ್ಥಳಗಳಿಗೆ ದನಕುರಿಗಳು ಮಾತ್ರವೇ ಹೋಗುತ್ತವೆ.”

ಯಾಕೋಬನು 1

ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಸೇವಕನಾದ ಯಾಕೋಬನು ಲೋಕದಲ್ಲೆಲ್ಲಾ ಚದರಿಹೋಗಿರುವ (ಇಸ್ರೇಲಿನ) ಹನ್ನೆರಡು ಕುಲದವರಿಗೆ ಬರೆದ ಪತ್ರ. ನಿಮಗೆ ಶುಭವಾಗಲಿ.

ನಂಬಿಕೆ ಮತ್ತು ಜ್ಞಾನ

ನನ್ನ ಸಹೋದರ ಸಹೋದರಿಯರೇ, ನಿಮಗೆ ಅನೇಕ ತೊಂದರೆಗಳು ಬರುತ್ತವೆ. ಆದರೆ ಅವುಗಳು ಬಂದಾಗ ನೀವು ಬಹಳ ಸಂತೋಷಪಡಬೇಕು. ಏಕೆಂದರೆ ಅವುಗಳು ನಿಮ್ಮ ನಂಬಿಕೆಯನ್ನು ಪರಿಶೋಧಿಸಲು ಬಂದಿವೆ ಎಂಬುದು ನಿಮಗೆ ತಿಳಿದದೆ. ಅವು ನಿಮ್ಮಲ್ಲಿ ತಾಳ್ಮೆಯನ್ನು ಉಂಟುಮಾಡುತ್ತವೆ. ತಾಳ್ಮೆಯು ತನ್ನ ಕಾರ್ಯವನ್ನು ಪೂರೈಸಲಿ. ಆಗ ನೀವು ನಿಷ್ಕಳಂಕರೂ ಮತ್ತು ಪರಿಪೂರ್ಣರೂ ಆಗುವಿರಿ ಮತ್ತು ನಿಮಗೆ ಬೇಕಾದುದೆಲ್ಲವೂ ದೊರೆಯುವುದು.

ಆದರೆ ನಿಮ್ಮಲ್ಲಿ ಯಾರಿಗಾದರೂ ಜ್ಞಾನವು ಬೇಕಾಗಿದ್ದರೆ ಅಂಥವರು ದೇವರಲ್ಲಿ ಕೇಳಿಕೊಳ್ಳಲಿ. ದೇವರು ಉದಾರಿಯಾಗಿರುವುದರಿಂದ ಮತ್ತು ಎಲ್ಲಾ ಜನರಿಗೆ ಸಂತೋಷದಿಂದ ಕೊಡುವುದರಿಂದ ನಿಮಗೆ ಜ್ಞಾನವನ್ನು ದಯಪಾಲಿಸುತ್ತಾನೆ. ಆದರೆ ನೀವು ದೇವರನ್ನು ಕೇಳಿಕೊಳ್ಳುವಾಗ ಆತನಲ್ಲಿ ನಿಮಗೆ ನಂಬಿಕೆಯಿರಬೇಕು. ದೇವರ ಬಗ್ಗೆ ಸಂದೇಹಪಡದಿರಿ. ಸಂದೇಹಪಡುವವನು ಸಾಗರದಲ್ಲಿನ ಅಲೆಯಂತಿದ್ದಾನೆ. ಗಾಳಿಯು ಬೀಸಿದಾಗ ಅಲೆಯು ಮೇಲೆದ್ದು ಬೀಳುತ್ತದೆ. ಸಂದೇಹಪಡುವವನು ಆ ಅಲೆಯಂತಿರುವನು. 7-8 ಅವನು ಒಂದೇ ಕಾಲದಲ್ಲಿ ಎರಡು ರೀತಿಯ ಸಂಗತಿಗಳನ್ನು ಯೋಚಿಸುತ್ತಾನೆ. ಅವನು ತಾನು ಮಾಡುವ ಯಾವುದೇ ಕಾರ್ಯದಲ್ಲಾಗಲಿ ಒಂದು ತೀರ್ಮಾನಕ್ಕೆ ಬರಲಾರನು. ಅಂಥವನು ತನಗೆ ಪ್ರಭುವಿನಿಂದ ಏನಾದರೂ ದೊರೆಯುತ್ತದೆ ಎಂದು ಯೋಚಿಸದಿರಲಿ.

ನಿಜ ಶ್ರೀಮಂತಿಕೆ

ಬಡವನಾಗಿರುವ ವಿಶ್ವಾಸಿಯು ಹೆಮ್ಮೆಪಡಲಿ, ಏಕೆಂದರೆ ದೇವರು ಅವನನ್ನು ಆತ್ಮಿಕ ವಿಷಯದಲ್ಲಿ ಐಶ್ವರ್ಯವಂತನನ್ನಾಗಿ ಮಾಡಿದ್ದಾನೆ. 10 ಐಶ್ವರ್ಯವಂತನಾಗಿರುವ ವಿಶ್ವಾಸಿಯೂ ಹೆಮ್ಮೆಪಡಬೇಕು. ಏಕೆಂದರೆ ಆತ್ಮಿಕ ವಿಷಯದಲ್ಲಿ ಅವನಿಗಿರುವ ಬಡತನವನ್ನು ದೇವರು ಅವನಿಗೆ ತೋರಿಸಿಕೊಟ್ಟಿದ್ದಾನೆ. ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸುವನು. 11 ಸೂರ್ಯನು ಮೇಲೇರಿದಂತೆ ಬಿಸಿಲು ಹೆಚ್ಚಾಗುವುದು. ಸೂರ್ಯನ ತಾಪದಿಂದ ಗಿಡಗಳು ಒಣಗಿಹೋಗುವವು; ಹೂವುಗಳು ಉದುರಿ ಹೋಗುವವು. ಹೂವು ಸುಂದರವಾಗಿತ್ತು, ಆದರೆ ಈಗ ಅದು ಒಣಗಿಹೋಯಿತು. ಐಶ್ವರ್ಯವಂತನಿಗೂ ಇದೇ ರೀತಿಯಾಗುವುದು. ಅವನು ತನ್ನ ವ್ಯಾಪಾರದ ಬಗ್ಗೆ ಯೋಜನೆಗಳನ್ನು ಮಾಡುತ್ತಿರುವಾಗಲೇ ಸತ್ತುಹೋಗುವನು.

ಶೋಧನೆಯು ದೇವರಿಂದ ಬರುವುದಿಲ್ಲ

12 ಶೋಧನೆಯನ್ನು ಎದುರಿಸುತ್ತಿದ್ದರೂ ದೃಢವಾಗಿರುವವನೇ ಧನ್ಯನು. ಏಕೆಂದರೆ ಅವನು ತನ್ನ ನಂಬಿಕೆಯನ್ನು ನಿರೂಪಿಸಿದಾಗ, ಜೀವವೆಂಬ ಜಯಮಾಲೆಯನ್ನು ಹೊಂದುವನು. ದೇವರು ತನ್ನನ್ನು ಪ್ರೀತಿಸುವ ಜನರಿಗೆಲ್ಲರಿಗೂ ಇದನ್ನು ವಾಗ್ದಾನ ಮಾಡಿದ್ದಾನೆ. 13 ಶೋಧನೆಗೆ ಗುರಿಯಾಗಿರುವ ವ್ಯಕ್ತಿಯು, “ದೇವರು ನನ್ನನ್ನು ಶೋಧಿಸುತ್ತಿದ್ದಾನೆ” ಎಂದು ಹೇಳಬಾರದು. ಕೆಟ್ಟದ್ದು ದೇವರನ್ನು ಶೋಧಿಸಲಾರದು. ದೇವರು ತಾನಾಗಿಯೇ ಯಾರನ್ನೂ ಶೋಧಿಸುವುದಿಲ್ಲ. 14 ಶೋಧನೆಗೆ ಗುರಿಯಾಗಿರುವವನು ತಾನು ಇಷ್ಟಪಡುವ ಕೆಟ್ಟಕಾರ್ಯಗಳಿಂದಲೇ ಶೋಧನೆಗೆ ಒಳಗಾಗಿದ್ದಾನೆ. ಅವನ ಕೆಟ್ಟ ಆಸೆಗಳೇ ಅವನನ್ನು ದೂರ ಸೆಳೆದು, ಬಿಡದೆ ಹಿಡಿದುಕೊಳ್ಳುತ್ತವೆ. 15 ಈ ಆಸೆಗಳು ಅವನಿಂದ ಪಾಪವನ್ನು ಮಾಡಿಸುತ್ತದೆ. ನಂತರ ಪಾಪವು ಬೆಳೆದು ಸಾವನ್ನು ತರುತ್ತದೆ.

16 ನನ್ನ ಪ್ರಿಯ ಸಹೋದರ ಸಹೋದರಿಯರೇ, ಈ ವಿಷಯದಲ್ಲಿ ನೀವು ಮೋಸಹೋಗಬೇಡಿರಿ. 17 ಎಲ್ಲಾ ಒಳ್ಳೆಯ ದಾನಗಳೂ ಕುಂದಿಲ್ಲದ ವರಗಳೂ, ಎಲ್ಲಾ ಬೆಳಕುಗಳಿಗೆ (ಸೂರ್ಯ, ಚಂದ್ರ, ನಕ್ಷತ್ರಗಳು) ಮೂಲ ಕಾರಣನಾದ ಸೃಷ್ಟಿ ಕರ್ತನಿಂದ ಬರುತ್ತವೆ. ದೇವರು ಬದಲಾಗುವುದಿಲ್ಲ. ಆತನು ಎಲ್ಲಾ ಕಾಲದಲ್ಲಿಯೂ ಒಂದೇ ರೀತಿಯಲ್ಲಿರುತ್ತಾನೆ. 18 ದೇವರು ಸತ್ಯವಾಕ್ಯದ ಮೂಲಕ ನಮಗೆ ಜೀವವನ್ನು ದಯಪಾಲಿಸಲು ತೀರ್ಮಾನಿಸಿದ್ದಾನೆ. ತನ್ನಿಂದ ಸೃಷ್ಟಿಸಲ್ಪಟ್ಟ ಎಲ್ಲಾ ವಸ್ತುಗಳಲ್ಲಿಯೂ ನಾವು ಅತ್ಯಂತ ಮುಖ್ಯರಾಗಬೇಕೆಂಬುದೇ ಆತನ ಅಪೇಕ್ಷೆ.

ಕೇಳುವಿಕೆ ಮತ್ತು ವಿಧೇಯತೆ

19 ನನ್ನ ಸಹೋದರ ಸಹೋದರಿಯರೇ, ಯಾವಾಗಲೂ ಮಾತನಾಡುವುದಕ್ಕಿಂತ ಕೇಳುವುದರಲ್ಲಿ ಆಸಕ್ತರಾಗಿರಿ. ಸುಲಭವಾಗಿ ಕೋಪಗೊಳ್ಳದಿರಿ. 20 ಒಬ್ಬ ವ್ಯಕ್ತಿಯ ಕೋಪವು ದೇವರು ಅಪೇಕ್ಷಿಸಿದಂತೆ ಯೋಗ್ಯ ಜೀವನವನ್ನು ನಡೆಸಲು ಅವನಿಗೆ ಸಹಾಯಕವಾಗುವುದಿಲ್ಲ. 21 ಆದ್ದರಿಂದ ಎಲ್ಲಾ ನೀಚತನವನ್ನೂ ದುಷ್ಟತನವನ್ನೂ ನಿಮ್ಮ ಜೀವನದಿಂದ ದೂರತಳ್ಳಿರಿ. ನಿಮ್ಮ ಹೃದಯದಲ್ಲಿ ಬೇರೂರಿರುವ ದೇವರ ವಾಕ್ಯವನ್ನು ದೀನತೆಯಿಂದ ಒಪ್ಪಿಕೊಳ್ಳಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುತ್ತದೆ.

22 ದೇವರ ವಾಕ್ಯವನ್ನು ಕೇವಲ ಕೇಳುವವರಾಗಿರದೆ ಅದನ್ನು ಕಾರ್ಯರೂಪಕ್ಕೆ ತನ್ನಿರಿ. ಇಲ್ಲವಾದರೆ ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳುವಿರಿ. 23 ದೇವರ ವಾಕ್ಯವನ್ನು ಕೇಳಿಯೂ ಅದರಂತೆ ನಡೆಯದವನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡವನಂತಿರುವನು. 24 ಅವನು ಅಲ್ಲಿಂದ ಹೊರಟು ಹೋಗಿ, ತಾನು ಹೇಗಿದ್ದೇನೆಂಬುದನ್ನು ಬೇಗನೆ ಮರೆತುಬಿಡುತ್ತಾನೆ. 25 ಜನರನ್ನು ಬಿಡುಗಡೆ ಮಾಡುವ ದೇವರ ಪರಿಪೂರ್ಣ ನಿಯಮವನ್ನು ಎಚ್ಚರಿಕೆಯಿಂದ ಅಭ್ಯಾಸ ಮಾಡುವವನು ನಿಜವಾಗಿಯೂ ಸಂತೋಷಭರಿತನಾಗಿದ್ದಾನೆ. ಅವನು ಅದನ್ನು ಅಭ್ಯಾಸ ಮಾಡುತ್ತಲೇ ಇರುತ್ತಾನೆ. ಅವನು ದೇವರ ವಾಕ್ಯವನ್ನು ಕೇಳುತ್ತಾನೆ ಮತ್ತು ತಾನು ಕೇಳಿದ್ದನ್ನು ಮರೆತುಬಿಡುವುದಿಲ್ಲ. ಅವನು ದೇವರ ವಾಕ್ಯಕ್ಕೆ ವಿಧೇಯನಾಗಿರುತ್ತಾನೆ. ಆದ್ದರಿಂದಲೇ ಅವನು ಸಂತೋಷಭರಿತನಾಗಿರುತ್ತಾನೆ.

ದೇವರನ್ನು ಆರಾಧಿಸತಕ್ಕ ನಿಜವಾದ ಮಾರ್ಗ

26 ಸದ್ಭಕ್ತನೆಂದು ತನ್ನ ಬಗ್ಗೆ ಹೇಳಿಕೊಳ್ಳುವವನು ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆಹೋದರೆ ಅವನು ತನ್ನನ್ನು ತಾನೇ ಮೋಸಗೊಳಿಸಿಕೊಂಡಂತಾಗುವುದು. ಅವನ “ಭಕ್ತಿ”ಗೆ ಬೆಲೆಯಿಲ್ಲ. 27 ದೇವರು ಒಪ್ಪಿಕೊಳ್ಳುವ ಭಕ್ತಿಯು ಹೀಗಿದೆ: ಕೊರತೆಯಲ್ಲಿರುವ ಅನಾಥರನ್ನೂ ವಿಧವೆಯರನ್ನೂ ನೋಡಿಕೊಳ್ಳುವುದು ಮತ್ತು ಲೋಕದ ಕೆಟ್ಟತನದಿಂದ ಪ್ರಭಾವಿತರಾಗದಂತೆ ಅದರಿಂದ ದೂರವಿರುವುದು. ದೇವರು ಇಂಥ ಭಕ್ತಿಯನ್ನು ಪರಿಶುದ್ಧವಾದದ್ದೆಂದೂ ಒಳಿತಾದದ್ದೆಂದೂ ಪರಿಗಣಿಸಿ ಸ್ವೀಕರಿಸಿಕೊಳ್ಳುವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International