M’Cheyne Bible Reading Plan
ಮೋಶೆಗೆ ವಿರುದ್ಧ ದಂಗೆ ಎದ್ದದ್ದು
16 ಕೋರಹ, ದಾತಾನ್, ಅಬೀರಾಮ್ ಮತ್ತು ಓನ್ ಎಂಬವರು ಮೋಶೆಗೆ ವಿರುದ್ಧವಾಗಿ ಎದ್ದರು. (ಕೋರಹನು ಇಚ್ಹಾರನ ಮಗನು, ಇಚ್ಹಾರನು ಕೆಹಾತನ ಮಗನು. ಕೆಹಾತನು ಲೇವಿಯ ಮಗನು. ದಾತಾನ್ ಮತ್ತು ಅಬೀರಾಮ್ ಇವರು ಎಲೀಯಾಬನ ಗಂಡುಮಕ್ಕಳು ಮತ್ತು ಓನನು ಪೆಲೆತನ ಮಗನು. ದಾತಾನ್, ಅಬೀರಾಮ್ ಮತ್ತು ಓನ್ ಇವರು ರೂಬೇನನ ಸಂತತಿಯವರು.) 2 ಈ ನಾಲ್ಕು ಮಂದಿ ಇಸ್ರೇಲರು ಇನ್ನಿತರ ಇನ್ನೂರೈವತ್ತು ಗಂಡಸರೊಂದಿಗೆ ಮೋಶೆಗೆ ವಿರುದ್ಧವಾಗಿ ಎದ್ದರು. ಅವರು ಜನರಿಂದ ಆರಿಸಲ್ಪಟ್ಟ ನಾಯಕರಾಗಿದ್ದುದರಿಂದ ಜನರೆಲ್ಲರೂ ಅವರನ್ನು ಬಲ್ಲವರಾಗಿದ್ದರು. 3 ಅವರು ಮೋಶೆ ಮತ್ತು ಆರೋನರ ವಿರುದ್ಧ ಒಟ್ಟಾಗಿ ಸೇರಿಬಂದು, ಅವರಿಗೆ, “ನೀವು ಅಧಿಕಾರವನ್ನು ಮತ್ತು ಘನತೆಯನ್ನು ಅತಿಯಾಗಿ ಅಪೇಕ್ಷಿಸುತ್ತಿರುವಿರಿ. ಈ ಸಮೂಹದವರಲ್ಲಿರುವ ಪ್ರತಿಯೊಬ್ಬನೂ ದೇವರಿಗೆ ಪ್ರತಿಷ್ಠಿತನೇ. ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ಯೆಹೋವನ ಜನರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದೇನು?” ಎಂದು ಕೇಳಿದರು.
4 ಮೋಶೆ ಇದನ್ನು ಕೇಳಿ ನೆಲದವರೆಗೆ ಬಾಗಿ 5 ಕೋರಹ ಮತ್ತು ಅವನ ಹಿಂಬಾಲಕರೆಲ್ಲರಿಗೆ ಹೇಳಿದ್ದೇನೆಂದರೆ: “ನಾಳೆ ಮುಂಜಾನೆ ಯಾವನು ತನ್ನವನೆಂದು ಮತ್ತು ಪವಿತ್ರನೆಂದು ಯೆಹೋವನು ತೋರಿಸುವನು. ತಾನು ಆರಿಸಿಕೊಂಡವನನ್ನು ಯೆಹೋವನು ತನ್ನ ಹತ್ತಿರ ಬರಮಾಡಿಕೊಳ್ಳುವನು. 6 ಆದ್ದರಿಂದ ಕೋರಹನೇ, ನೀನೂ ನಿನ್ನ ಹಿಂಬಾಲಕರೆಲ್ಲರೂ ಈ ಕಾರ್ಯವನ್ನು ಮಾಡಬೇಕು: 7 ನಾಳೆ ಅಗ್ಗಿಷ್ಠಿಕೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ಉರಿಯುವ ಕೆಂಡಗಳನ್ನು ಹಾಕಿರಿ ಮತ್ತು ಯೆಹೋವನ ಮುಂದೆ ಅವುಗಳ ಮೇಲೆ ಧೂಪವನ್ನು ಹಾಕಿರಿ. ಆಗ ಯೆಹೋವನು ಯಾರನ್ನು ಆರಿಸಿಕೊಳ್ಳುವನೋ ಅವನೇ ನಿಜವಾಗಿಯೂ ಪವಿತ್ರನಾದವನು. ಲೇವಿಯರಾದ ನೀವು ಅಧಿಕಾರವನ್ನು ಮತ್ತು ಘನತೆಯನ್ನು ಅತಿಯಾಗಿ ಅಪೇಕ್ಷಿಸುತ್ತೀರಿ.” ಎಂದು ಹೇಳಿದನು
8 ಮೋಶೆಯು ಕೋರಹನಿಗೆ, “ಲೇವಿಯರೇ, ಕೇಳಿರಿ! 9 ಇಸ್ರೇಲರ ದೇವರು ನಿಮ್ಮನ್ನು ಸರ್ವಸಮೂಹದಿಂದ ಆರಿಸಿಕೊಂಡದ್ದಕ್ಕಾಗಿ ನೀವು ಸಂತೋಷಪಡಬೇಕು. ದೇವರ ಪವಿತ್ರ ಗುಡಾರಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವುದಕ್ಕೂ ಇಸ್ರೇಲರ ಸೇವೆಯನ್ನು ಮಾಡುವುದಕ್ಕೂ ಮತ್ತು ಯಜ್ಞಗಳನ್ನು ಸಿದ್ಧಪಡಿಸುವುದರಲ್ಲಿ ಅವರಿಗೆ ಸಹಾಯಮಾಡುವುದಕ್ಕೂ ಯೆಹೋವನು ನಿಮ್ಮನ್ನು ತನ್ನ ಸಮೀಪಕ್ಕೆ ಬರಗೊಡಿಸಿದ್ದಾನೆ. ಅದು ನಿಮಗೆ ಸಾಕಾಗಲಿಲ್ಲವೇ? 10 ಈ ರೀತಿ ಆತನ ಬಳಿಯಲ್ಲಿ ಸೇವೆಮಾಡಲು ನಿನಗೂ ನಿನ್ನ ಸಹೋದ್ಯೋಗಿಗಳಾದ ಎಲ್ಲಾ ಲೇವಿಯರಿಗೂ ಯೆಹೋವನು ಅವಕಾಶ ಕೊಟ್ಟಿದ್ದಾನೆ. ಆದರೆ ಈಗ ನೀವು ಯಾಜಕರಾಗಬೇಕೆಂದು ಸಹ ಪ್ರಯತ್ನಿಸುತ್ತಿದ್ದೀರಿ. 11 ನೀನು ಮತ್ತು ನಿನ್ನ ಹಿಂಬಾಲಕರು ಒಟ್ಟಾಗಿ ಸೇರಿಕೊಂಡು ಯೆಹೋವನಿಗೆ ವಿರೋಧವಾಗಿ ದಂಗೆ ಎದ್ದಿದ್ದೀರಿ. ಆರೋನನು ತನ್ನನ್ನು ತಾನೇ ಮಹಾಯಾಜಕನನ್ನಾಗಿ ಆರಿಸಿಕೊಂಡನೋ? ಇಲ್ಲ! ಹೀಗಿರಲು ಆರೋನನಿಗೆ ವಿರೋಧವಾಗಿ ಗುಣುಗುಟ್ಟುವುದೇಕೆ?” ಎಂದು ಹೇಳಿದನು.
12 ಬಳಿಕ ಮೋಶೆ ಎಲೀಯಾಬನ ಗಂಡುಮಕ್ಕಳಾದ ದಾತಾನನನ್ನೂ ಅಬೀರಾಮನನ್ನೂ ಕರೇಕಳುಹಿಸಲಾಗಿ, ಅವರು ಅವನಿಗೆ, “ನಾವು ಬರುವುದಿಲ್ಲ. 13 ನೀನು ಹಾಲೂ ಜೇನೂ ಹರಿಯುವ ದೇಶದಿಂದ ನಮ್ಮನ್ನು ಕರೆದುಕೊಂಡು ಬಂದು ಮರಳುಗಾಡಿನಲ್ಲಿ ಸಾಯಿಸುವುದು ಸಾಕಾಗಲಿಲ್ಲವೆಂದು ಭಾವಿಸಿ ನಮ್ಮ ಮೇಲೆ ದೊರೆತನ ಮಾಡಲು ಅಪೇಕ್ಷಿಸುತ್ತಿರುವೆಯೋ? 14 ನಾವು ನಿನ್ನನ್ನು ಯಾಕೆ ಹಿಂಬಾಲಿಸಬೇಕು? ನೀನು ನಮ್ಮನ್ನು ಹಾಲೂ ಜೇನೂ ಹರಿಯುವ ದೇಶಕ್ಕೆ ಕರೆದುಕೊಂಡು ಬರಲಿಲ್ಲ. ನೀನು ನಮ್ಮ ಸ್ವಂತಕ್ಕೆ ಹೊಲಗಳನ್ನಾಗಲಿ ದ್ರಾಕ್ಷೇತೋಟಗಳನ್ನಾಗಲಿ ಕೊಡಲಿಲ್ಲ! ನೀನು ಈ ಜನರಿಗೆ ಇದೇ ರೀತಿ ಮೋಸಮಾಡಬೇಕೆಂದಿರುವೆಯೋ? ನಾವು ಬರುವುದಿಲ್ಲ” ಎಂದು ಹೇಳಿದರು.
15 ಇದರಿಂದ ಮೋಶೆ ಬಹಳ ಕೋಪಗೊಂಡನು. ಅವನು ಯೆಹೋವನಿಗೆ, “ನಾನು ಈ ಜನರಿಗೆ ಎಂದೂ ತೊಂದರೆ ಮಾಡಲಿಲ್ಲ. ಅವರಿಂದ ನಾನು ಒಂದು ಕತ್ತೆಯನ್ನಾದರೂ ತೆಗೆದುಕೊಂಡವನಲ್ಲ. ಯೆಹೋವನೇ, ಅವರ ಕಾಣಿಕೆಯನ್ನು ಸ್ವೀಕರಿಸಬೇಡ” ಎಂದು ಮನವಿ ಮಾಡಿದನು.
16 ಆಗ ಮೋಶೆಯು ಕೋರಹನಿಗೆ, “ನೀನು ಮತ್ತು ನಿನ್ನ ಹಿಂಬಾಲಕರೆಲ್ಲರು ನಾಳೆ ಯೆಹೋವನ ಸನ್ನಿಧಿಯಲ್ಲಿ ಆರೋನನೊಡನೆ ನಿಲ್ಲಬೇಕು. 17 ನಿಮ್ಮಲ್ಲಿ ಪ್ರತಿಯೊಬ್ಬನು ತನ್ನತನ್ನ ಧೂಪಾರತಿಯನ್ನು ಅಂದರೆ ಒಟ್ಟಾಗಿ ಇನ್ನೂರೈವತ್ತು ಧೂಪಾರತಿಗಳನ್ನು ತೆಗೆದುಕೊಂಡು ಧೂಪಹಾಕಿ ಯೆಹೋವನ ಸನ್ನಿಧಿಗೆ ಬರಬೇಕು. ಹಾಗೆಯೇ ನೀನೂ ಆರೋನನೂ ನಿಮ್ಮನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು” ಎಂದು ಹೇಳಿದನು.
18 ಅದಕ್ಕನುಸಾರವಾಗಿ ಅವರೆಲ್ಲರೂ ತಮ್ಮತಮ್ಮ ಧೂಪಾರತಿಗಳನ್ನು ಕೈಯಲ್ಲಿ ತೆಗೆದುಕೊಂಡು ಅವುಗಳಲ್ಲಿ ಕೆಂಡಗಳನ್ನಿಟ್ಟು ಧೂಪದ್ರವ್ಯಗಳನ್ನು ಹಾಕಿ ಮೋಶೆ ಆರೋನರ ಜೊತೆಯಲ್ಲಿ ದೇವದರ್ಶನಗುಡಾರದ ಪ್ರವೇಶದ್ವಾರದಲ್ಲಿ ನಿಂತುಕೊಂಡರು. 19 ಕೋರಹನು ತಮಗೆ ಎದುರಾಗಿ ಸರ್ವಸಮೂಹದವರನ್ನು ದೇವದರ್ಶನಗುಡಾರದ ಪ್ರವೇಶದ್ವಾರದ ಹತ್ತಿರಕ್ಕೆ ಕೂಡಿಸಿದನು. ಆಗ ಯೆಹೋವನ ಮಹಿಮೆ ಸಮೂಹದವರೆಲ್ಲರಿಗೂ ಪ್ರತ್ಯಕ್ಷವಾಯಿತು.
20 ಯೆಹೋವನು ಮೋಶೆ ಆರೋನರಿಗೆ, 21 “ಈ ಜನರನ್ನು ಬಿಟ್ಟು ಪ್ರತ್ಯೇಕವಾಗಿ ನಿಲ್ಲಿರಿ. ನಾನು ಅವರನ್ನು ಈಗ ನಾಶ ಮಾಡಬಯಸುತ್ತೇನೆ” ಅಂದನು.
22 ಆದರೆ ಮೋಶೆ ಆರೋನರು ನೆಲದವರೆಗೆ ಬಾಗಿ, “ದೇವರೇ, ಎಲ್ಲಾ ಜನರ ಆಲೋಚನೆ ನಿನಗೆ ಗೊತ್ತಿದೆ. ದಯಮಾಡಿ ಎಲ್ಲಾ ಜನರ ಮೇಲೆ ಕೋಪಗೊಳ್ಳಬೇಡ. ನಿಜವಾಗಿ ಪಾಪಮಾಡಿದವನು ಕೇವಲ ಒಬ್ಬನಲ್ಲವೇ?” ಎಂದು ಮೊರೆಯಿಟ್ಟರು.
23 ಆಗ ಯೆಹೋವನು ಮೋಶೆಗೆ, 24 “ಜನರಿಗೆ ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದ ಸುತ್ತಮುತ್ತಲಿಂದ ದೂರಹೋಗಬೇಕೆಂದು ಆಜ್ಞಾಪಿಸು” ಎಂದು ಹೇಳಿದನು.
25 ಮೋಶೆಯು ಎದ್ದು ಕೋರಹ, ದಾತಾನ್ ಮತ್ತು ಅಬೀರಾಮರ ಬಳಿಗೆ ಹೋದನು. ಇಸ್ರೇಲರ ಹಿರಿಯರೆಲ್ಲರೂ ಅವನನ್ನು ಹಿಂಬಾಲಿಸಿದರು. 26 ಮೋಶೆಯು ಜನರನ್ನು ಎಚ್ಚರಿಸಿ, “ಈ ಕೆಟ್ಟ ಜನರ ಗುಡಾರಗಳಿಂದ ಹೊರಟುಹೋಗಿರಿ. ಇವರ ಸ್ವತ್ತಿನಲ್ಲಿ ಯಾವುದನ್ನೂ ಮುಟ್ಟಬಾರದು. ಇಲ್ಲವಾದರೆ ಅವರ ಪಾಪಗಳ ದೆಸೆಯಿಂದ ನೀವೂ ನಾಶವಾಗುವಿರಿ” ಎಂದು ಹೇಳಿದನು.
27 ಆದ್ದರಿಂದ ಜನರು ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರಗಳನ್ನು ಬಿಟ್ಟು ದೂರಹೋದರು. ದಾತಾನ್ ಮತ್ತು ಅಬೀರಾಮ್ ಹೊರಗೆ ಬಂದು ತಮ್ಮ ತಮ್ಮ ಡೇರೆಗಳ ಪ್ರವೇಶದ್ವಾರದ ಬಳಿ ತಮ್ಮ ಹೆಂಡತಿಯರೊಡನೆ, ಮಕ್ಕಳೊಡನೆ ಮತ್ತು ಕೂಸುಗಳೊಡನೆ ನಿಂತುಕೊಂಡರು.
28 ಆಗ ಮೋಶೆ ಜನರಿಗೆ, “ಈ ಕಾರ್ಯಗಳೆಲ್ಲಾ ನನ್ನ ಆಲೋಚನೆಯಿಂದ ಆಗಲಿಲ್ಲವೆಂದೂ ಯೆಹೋವನೇ ಈ ಕಾರ್ಯಗಳನ್ನು ಮಾಡುವುದಕ್ಕೆ ನನ್ನನ್ನು ಕಳುಹಿಸಿದನೆಂದೂ ನೀವು ತಿಳಿದುಕೊಳ್ಳುವಂತೆ ನಾನು ಸಾಕ್ಷಿಯನ್ನು ಕೊಡುವೆನು. 29 ಇಲ್ಲಿರುವ ಜನರು ಸಾಯುವರು. ಆದರೆ ಇವರ ಅಂತ್ಯವು ಎಲ್ಲರಿಗೂ ಸಂಭವಿಸುವ ಅಂತ್ಯವಾಗಿದ್ದರೆ, ಯೆಹೋವನು ನನ್ನನ್ನು ಕಳುಹಿಸಲಿಲ್ಲವೆಂದು ತಿಳಿದುಕೊಳ್ಳಬೇಕು. 30 ಆದರೆ ಯೆಹೋವನು ಇವರಿಗೋಸ್ಕರ ಅಪೂರ್ವ ಶಿಕ್ಷೆಯನ್ನು ಕಲ್ಪಿಸಿದರೆ ಅಂದರೆ ಭೂಮಿಯು ಬಾಯ್ದೆರೆದು ಇವರನ್ನೂ ಇವರ ಸರ್ವಸ್ವವನ್ನೂ ನುಂಗುವುದರಿಂದ ಇವರೆಲ್ಲರೂ ಸಜೀವಿಗಳಾಗಿ ಸಮಾಧಿಯಾದರೆ, ಇವರು ನಿಜವಾಗಿಯೂ ಯೆಹೋವನನ್ನು ತಿರಸ್ಕರಿಸಿದವರೆಂದು ನೀವು ತಿಳಿದುಕೊಳ್ಳಬೇಕು” ಎಂದನು.
31 ಕೂಡಲೇ, ಆ ಜನರು ನಿಂತಿದ್ದ ನೆಲವು ಸೀಳಿತು. 32 ಭೂಮಿಯೇ ಬಾಯಿತೆರೆದು ಅವರನ್ನು ನುಂಗಿಬಿಟ್ಟಿತೊ ಎಂಬಂತೆ, ಅವರ ಕುಟುಂಬಗಳವರನ್ನು ಕೋರಹನ ಎಲ್ಲಾ ಹಿಂಬಾಲಕರನ್ನು ಮತ್ತು ಅವರ ಆಸ್ತಿಯೆಲ್ಲವನ್ನು ನುಂಗಿಬಿಟ್ಟಿತು. 33 ಆ ಜನರೆಲ್ಲಾ ಸಜೀವ ಸಮಾಧಿಯಾದರು. ಅವರ ಆಸ್ತಿಪಾಸ್ತಿಯೆಲ್ಲಾ ಅವರೊಡನೆ ಭೂಸಮಾಧಿಯಾಯಿತು. ಆ ಬಳಿಕ ಭೂಮಿ ಅವರ ಸಮೇತವಾಗಿ ಮುಚ್ಚಿಕೊಂಡಿತು. ಅದೇ ಅವರ ಅಂತ್ಯವಾಯಿತು. ಅವರು ಸಮುದಾಯದಿಂದ ಶಾಶ್ವತವಾಗಿ ಇಲ್ಲವಾದರು!
34 ನಾಶವಾಗುತ್ತಿರುವ ಜನರ ಗೋಳಾಟವನ್ನು ಕೇಳಿದ ಇಸ್ರೇಲ್ ಜನರು, “ಭೂಮಿಯು ನಮ್ಮನ್ನೂ ನುಂಗಿಬಿಡುತ್ತದೆ!” ಎಂದುಕೊಂಡು ನಾನಾ ದಿಕ್ಕುಗಳಿಗೆ ಓಡಿಹೋದರು.
35 ಅಲ್ಲದೆ ಯೆಹೋವನಿಂದ ಬೆಂಕಿಯು ಹೊರಟುಬಂದು ಧೂಪವನ್ನು ಅರ್ಪಿಸುತ್ತಿದ್ದ ಇನ್ನೂರೈವತ್ತು ಮಂದಿಯನ್ನು ದಹಿಸಿಬಿಟ್ಟಿತು.
36 ಆಗ ಯೆಹೋವನು ಮೋಶೆಗೆ, 37 “ಯಾಜಕ ಆರೋನನ ಮಗನಾದ ಎಲ್ಲಾಜಾರನು ಸುಟ್ಟುಹೋದವರ ನಡುವೆಯಿಂದ ಧೂಪಾರತಿಗಳನ್ನು ಎತ್ತಬೇಕೆಂದು ಆಜ್ಞಾಪಿಸು ಮತ್ತು ನೀನು ಅವುಗಳಲ್ಲಿರುವ ಕೆಂಡಗಳನ್ನು ದೂರಕ್ಕೆ ಚೆಲ್ಲು. ಯಾಕೆಂದರೆ ಆ ಧೂಪಾರತಿಗಳು ಪವಿತ್ರವಾದವುಗಳು. 38 ಪ್ರಾಣವನ್ನು ಕಳೆದುಕೊಂಡ ಆ ದೋಷಿಗಳ ಧೂಪಾರತಿಗಳು ಯೆಹೋವನ ಸನ್ನಿಧಿಗೆ ತರಲ್ಪಟ್ಟ ಕಾರಣ ಪರಿಶುದ್ಧವಾಗಿವೆ. ಆದ್ದರಿಂದ ಅವುಗಳನ್ನು ತೆಗೆದು ತಗಡುಗಳಾಗಿ ಹೊಡೆದು ಯಜ್ಞವೇದಿಕೆಗೆ ಮುಚ್ಚಳವನ್ನು ಮಾಡಿಸಬೇಕು. ಇದು ಇಸ್ರೇಲರೆಲ್ಲರಿಗೆ ಎಚ್ಚರಿಕೆಯಾಗಿರುವುದು” ಎಂದು ಹೇಳಿದನು.
39 ಯೆಹೋವನು ಮೋಶೆಗೆ ಕೊಟ್ಟ ಅಪ್ಪಣೆಯ ಮೇರೆಗೆ ಯಾಜಕನಾದ ಎಲ್ಲಾಜಾರನು ಸುಟ್ಟುಹೋದವರಿಂದ ತರಲ್ಪಟ್ಟಿದ್ದ ಆ ತಾಮ್ರದ ಧೂಪಾರತಿಗಳನ್ನು ತೆಗೆದುಕೊಂಡು ತಗಡುಗಳಾಗಿ ಹೊಡಿಸಿ ಯಜ್ಞವೇದಿಕೆಗೆ ಮುಚ್ಚಳವನ್ನು ಮಾಡಿಸಿದನು. 40 ಆರೋನನ ಕುಟುಂಬದವನು ಮಾತ್ರ ಯೆಹೋವನ ಎದುರಿನಲ್ಲಿ ಧೂಪವನ್ನು ಹಾಕತಕ್ಕದ್ದು ಮತ್ತು ಬೇರೆ ಯಾರಾದರೂ ಹಾಕಿದರೆ ಅವರು ಕೋರಹ ಮತ್ತು ಅವನ ಹಿಂಬಾಲಕರಂತೆ ಸಾಯುವರು ಎಂಬುದನ್ನು ಇಸ್ರೇಲರಿಗೆ ಆ ಮುಚ್ಚಳವು ನೆನಪು ಮಾಡುವ ಗುರುತಾಯಿತು.
ಆರೋನನು ಜನರನ್ನು ರಕ್ಷಿಸಿದ್ದು
41 ಮರುದಿನ ಇಸ್ರೇಲರೆಲ್ಲರೂ ಮೋಶೆ ಆರೋನರ ವಿರುದ್ಧ ಗುಣುಗುಟ್ಟುತ್ತಾ, “ನೀವೇ ಯೆಹೋವನ ಜನರನ್ನು ಸಾಯಿಸಿದಿರಿ” ಎಂದು ಹೇಳಿದರು.
42 ಮೋಶೆ ಆರೋನರನ್ನು ಎದುರಿಸಲು ಜನರು ಒಟ್ಟಾಗಿ ಸೇರಿಬಂದಿದ್ದಾಗ, ದೇವದರ್ಶನಗುಡಾರದ ಕಡೆಗೆ ತಿರುಗಿ ನೋಡಲಾಗಿ, ದೇವದರ್ಶನಗುಡಾರವನ್ನು ಮೋಡ ಮುಚ್ಚಿಕೊಂಡಿರುವುದನ್ನೂ ಯೆಹೋವನ ಮಹಿಮೆಯು ಪ್ರತ್ಯಕ್ಷವಾಗಿರುವುದನ್ನೂ ಅವರು ಕಂಡರು. 43 ಆಗ ಮೋಶೆ ಆರೋನರು ದೇವದರ್ಶನಗುಡಾರದ ಮುಂದಕ್ಕೆ ಬಂದರು.
44 ಯೆಹೋವನು ಮೋಶೆಗೆ, 45 “ಆ ಜನರಿಂದ ನೀವಿಬ್ಬರೂ ದೂರಹೋಗಿರಿ. ನಾನು ಈಗ ಅವರನ್ನು ನಾಶಮಾಡುತ್ತೇನೆ” ಎಂದು ಹೇಳಿದನು. ಆಗ ಮೋಶೆ ಆರೋನರು ಅಡ್ಡಬಿದ್ದರು.
46 ಮೋಶೆಯು ಆರೋನನಿಗೆ, “ಯೆಹೋವನಿಗೆ ಕೋಪವುಂಟಾಗಿ ಈ ಜನರೊಳಗೆ ಘೋರವ್ಯಾಧಿ ಪ್ರಾರಂಭವಾಗಿದೆ. ನೀನು ಧೂಪಾರತಿಯನ್ನು ತೆಗೆದುಕೊಂಡು ಅದರಲ್ಲಿ ಯಜ್ಞವೇದಿಕೆಯಿಂದ ತೆಗೆದ ಕೆಂಡಗಳನ್ನು ಇಟ್ಟು ಧೂಪಹಾಕಿ ಸಮೂಹದವರ ಬಳಿಗೆ ಬೇಗ ಹೋಗಿ ಅವರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು” ಎಂದು ಹೇಳಿದನು.
47 ಮೋಶೆ ಹೇಳಿದಂತೆ ಆರೋನನು ಧೂಪಾರತಿಯನ್ನು ತೆಗೆದುಕೊಂಡು ಸಮೂಹದವರ ಮಧ್ಯಕ್ಕೆ ಓಡಿಹೋದಾಗ, ಘೋರವ್ಯಾಧಿ ಆ ಜನರಲ್ಲಿ ಹರಡಿಕೊಳ್ಳುತ್ತಾ ಇತ್ತು. ಆದ್ದರಿಂದ ಅವನು ಧೂಪಹಾಕಿ ಜನರಿಗೋಸ್ಕರ ದೋಷಪರಿಹಾರವನ್ನು ಮಾಡಿದನು. 48 ಅವನು ಸತ್ತವರಿಗೂ ಬದುಕಿರುವವರಿಗೂ ನಡುವೆ ನಿಂತುಕೊಂಡನು. ಆಗ ಕಾಯಿಲೆ ನಿಂತುಹೋಯಿತು. 49 ಕೋರಹನೂ ಸೇರಿದಂತೆ ಆ ಕಾಯಿಲೆಯಿಂದ ಸತ್ತವರು ಹದಿನಾಲ್ಕು ಸಾವಿರದ ಏಳುನೂರು ಮಂದಿ. 50 ಕಾಯಿಲೆಯು ನಿಂತುಹೋದಾಗ, ಆರೋನನು ದೇವದರ್ಶನಗುಡಾರದ ಪ್ರವೇಶದ್ವಾರದಲ್ಲಿದ್ದ ಮೋಶೆಯ ಬಳಿಗೆ ತಿರುಗಿ ಬಂದನು.
ಎದೋಮ್ಯನಾದ ದೋಯೇಗನು ಸೌಲನ ಬಳಿಗೆ ಹೋಗಿ, “ದಾವೀದನು ಅಹೀಮೆಲೆಕನ ಮನೆಯಲ್ಲಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.
52 ದುಷ್ಟಾಧಿಕಾರಿಯೇ, ನಿನ್ನ ದುಷ್ಕೃತ್ಯಗಳ ಕುರಿತು ಜಂಬಪಡುವುದೇಕೇ?
ದೇವರ ದೃಷ್ಟಿಗೆ ನೀನು ಅಸಹ್ಯಕರವಾಗಿರುವೆ.
2 ಮೋಸಗಾರನೇ, ನಿನ್ನ ನಾಲಗೆಯು ಹರಿತವಾದ ಕ್ಷೌರ ಕತ್ತಿಯಂತಿದ್ದು
ನಾಶನದ ಸಂಚುಗಳನ್ನೇ ಮಾಡುವುದು.
3 ಒಳ್ಳೆಯದಕ್ಕಿಂತಲೂ ಕೆಟ್ಟದ್ದನ್ನೇ ನೀನು ಹೆಚ್ಚು ಪ್ರೀತಿಸುವೆ.
ನಿನಗೆ ಸತ್ಯಕ್ಕಿಂತಲೂ ಸುಳ್ಳೇ ಇಷ್ಟ.
4 ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.
5 ದೇವರು ನಿನ್ನನ್ನು ಶಾಶ್ವತವಾಗಿ ನಾಶಮಾಡುವನು,
ಗಿಡವನ್ನು ಬೇರು ಸಹಿತ ಕಿತ್ತುಹಾಕುವಂತೆ ಆತನು ನಿನ್ನನ್ನು ಹಿಡಿದು ನಿನ್ನ ಮನೆಯೊಳಗಿಂದ[a] ಕಿತ್ತು ಬೀಸಾಡುವನು.
6 ಒಳ್ಳೆಯವರು ಇದನ್ನು ಕಂಡು
ದೇವರಲ್ಲಿ ಭಯಭಕ್ತಿಯುಳ್ಳವರಾಗುವರು.
ಅವರು ನಿಮ್ಮನ್ನು ನೋಡಿ ನಗುತ್ತಾ ಹೀಗೆನ್ನುವರು:
7 “ದೇವರ ಮೇಲೆ ಅವಲಂಬಿಸಿಕೊಳ್ಳದ ಇವನಿಗೆ ಏನಾಯಿತು?
ತನ್ನ ಐಶ್ವರ್ಯವೂ ಸುಳ್ಳುಗಳೂ ತನ್ನನ್ನು ಕಾಪಾಡುತ್ತವೆ ಎಂದು ಭಾವಿಸಿಕೊಂಡವನು ಇವನೇ.”
8 ನಾನಾದರೋ ದೇವರ ಆಲಯದ ಅಂಗಳದಲ್ಲಿ ಹಸಿರಸಿರಾಗಿ ಬೆಳೆಯುವ ಆಲೀವ್ ಮರದಂತಿದ್ದೇನೆ.
ನಾನು ದೇವರ ಶಾಶ್ವತವಾದ ಪ್ರೀತಿಯಲ್ಲೇ ಯಾವಾಗಲೂ ಭರವಸವಿಟ್ಟಿರುವೆ.
9 ದೇವರೇ, ನಿನ್ನ ಉಪಕಾರಗಳಿಗಾಗಿ ನಾನು ನಿನ್ನನ್ನು ಎಂದೆಂದಿಗೂ ಕೊಂಡಾಡುವೆನು.
ನಿನ್ನ ಹೆಸರಿನಲ್ಲೇ ಭರವಸವಿಟ್ಟಿರುವೆ; ಯಾಕೆಂದರೆ ನಿನ್ನ ಹೆಸರು ಎಷ್ಟೋ ಒಳ್ಳೆಯದು.
ನಿನ್ನ ಪವಿತ್ರ ಜನರ ಸನ್ನಿಧಿಯಲ್ಲಿ ನಿನ್ನನ್ನು ಕೊಂಡಾಡುವೆನು.
ರಚನೆಗಾರ: ದಾವೀದ.
53 ಮೂಢರು ದೇವರಿಲ್ಲವೆಂದು ಮನಸ್ಸಿನಲ್ಲಿ ಅಂದುಕೊಳ್ಳುವರು.
ಅವರು ಕೆಟ್ಟುಹೋಗಿದ್ದಾರೆ; ದುಷ್ಕೃತ್ಯಗಳನ್ನು ನಡೆಸುವವರಾಗಿದ್ದಾರೆ.
ಅವರು ಒಳ್ಳೆಯದನ್ನು ಮಾಡುವುದೇ ಇಲ್ಲ.
2 ಮನುಷ್ಯರಲ್ಲಿ ತನಗೋಸ್ಕರ ಹುಡುಕುತ್ತಿರುವ ಬುದ್ಧಿವಂತರು ಇದ್ದಾರೋ
ಎಂದು ದೇವರು ಪರಲೋಕದಿಂದ ನೋಡುತ್ತಿದ್ದಾನೆ.
3 ಆದರೆ ಪ್ರತಿಯೊಬ್ಬರೂ ದೇವರಿಗೆ ವಿಮುಖರಾಗಿದ್ದಾರೆ.
ಪ್ರತಿಯೊಬ್ಬನೂ ಕೆಟ್ಟುಹೋಗಿದ್ದಾನೆ.
ಯಾವನೂ ಒಳ್ಳೆಯದನ್ನು ಮಾಡುತ್ತಿಲ್ಲ.
ಇಲ್ಲ, ಒಬ್ಬನಾದರೂ ಮಾಡುತ್ತಿಲ್ಲ!
4 ದೇವರು ಹೀಗೆನ್ನುತ್ತಾನೆ: “ಆ ದುಷ್ಟರಿಗೆ ಖಂಡಿತವಾಗಿ ಸತ್ಯವು ತಿಳಿದಿದೆ!
ಆದರೆ ಅವರು ನನ್ನಲ್ಲಿ ಪ್ರಾರ್ಥಿಸುತ್ತಿಲ್ಲ.
ಆಹಾರ ತಿನ್ನುವಂತೆ ಅವರು ನನ್ನ ಜನರನ್ನು ನಾಶಮಾಡಲು ಸಿದ್ಧರಾಗಿದ್ದಾರೆ.”
5 ಆ ದುಷ್ಟರು ಹಿಂದೆಂದೂ ಭಯಗೊಂಡಿಲ್ಲದ ರೀತಿಯಲ್ಲಿ ಭಯಭ್ರಾಂತರಾಗುವರು!
ಅವರು ಇಸ್ರೇಲರ ಶತ್ರುಗಳು.
ದೇವರು ಅವರನ್ನು ತಿರಸ್ಕರಿಸಿದ್ದಾನೆ.
ಆದ್ದರಿಂದ ದೇವಜನರು ಅವರನ್ನು ಸೋಲಿಸುವರು,
ದೇವರು ಆ ದುಷ್ಟರ ಎಲುಬುಗಳನ್ನು ಚದರಿಸಿಬಿಡುವನು.
6 ಚೀಯೋನ್ ಪರ್ವತದ ಮೇಲಿರುವಾತನು
ಇಸ್ರೇಲಿಗೆ ಜಯವನ್ನು ತರುವನು!
ಆಗ ದೇವರು ತನ್ನ ಜನರನ್ನು ಸೆರೆವಾಸದಿಂದ ಬರಮಾಡುವನು.
ಯಾಕೋಬನೇ ಉಲ್ಲಾಸಿಸು!
ಇಸ್ರೇಲೇ ಬಹು ಸಂತೋಷಪಡು.
ಜಿಫೆಂಬ ಸ್ಥಳದವರು ಸೌಲನ ಬಳಿಗೆ ಹೋಗಿ, “ದಾವೀದನು ನಮ್ಮಲ್ಲಿ ಅಡಗಿಕೊಂಡಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.
54 ದೇವರೇ, ನಿನ್ನ ಹೆಸರಿನಿಂದ ನನ್ನನ್ನು ರಕ್ಷಿಸು!
ನಿನ್ನ ಮಹಾಶಕ್ತಿಯಿಂದ ನನ್ನ ನ್ಯಾಯವನ್ನು ಸ್ಥಾಪಿಸು.
2 ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ನನ್ನ ಮಾತುಗಳನ್ನು ಕೇಳು.
3 ದೇವರ ಕುರಿತು ಆಲೋಚಿಸದ ಅನ್ಯರು ನನಗೆ ವಿರೋಧವಾಗಿ ತಿರುಗಿದ್ದಾರೆ.
ಆ ಬಲಾತ್ಕಾರಿಗಳು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ.
4 ಇಗೋ, ನನ್ನ ದೇವರೇ ನನಗೆ ಸಹಾಯಮಾಡುವನು.
ನನ್ನ ಒಡಯನೇ ನನಗೆ ಆಧಾರ ನೀಡುವನು.
5 ನನಗೆ ವಿರೋಧವಾಗಿ ತಿರುಗಿರುವ ಜನರನ್ನು ನನ್ನ ದೇವರು ದಂಡಿಸುವನು.
ದೇವರು ನನಗೆ ನಂಬಿಗಸ್ತನಾಗಿದ್ದಾನೆ. ಆತನು ಅವರನ್ನು ನಾಶಮಾಡುವನು.
6 ದೇವರೇ, ನಾನು ನಿನಗೆ ಸ್ವಇಚ್ಛೆಯಿಂದ ಯಜ್ಞಗಳನ್ನು ಅರ್ಪಿಸುವೆನು.
ಯೆಹೋವನೇ, ನಿನ್ನ ಒಳ್ಳೆಯ ಹೆಸರನ್ನು ನಾನು ಕೊಂಡಾಡುವೆನು.
7 ಯಾಕೆಂದರೆ ನನ್ನೆಲ್ಲಾ ಆಪತ್ತುಗಳಿಂದ ರಕ್ಷಿಸಿದಾತನು ನೀನೇ.
ನನ್ನ ವೈರಿಗಳಿಗಾದ ಸೋಲನ್ನು ನಾನು ಕಣ್ಣಾರೆ ಕಂಡೆನು.
ಪ್ರವಾದಿಯಾಗಲು ಯೆಶಾಯನಿಗೆ ದೇವರಿಂದ ಕರೆ
6 ಅರಸನಾದ ಉಜ್ಜೀಯನು ಮರಣಹೊಂದಿದ ವರ್ಷದಲ್ಲಿ ನಾನು ನನ್ನ ಒಡೆಯನನ್ನು ಕಂಡೆನು. ಆತನು ಅದ್ಭುತವೂ ಉನ್ನತವೂ ಆಗಿರುವ ಸಿಂಹಾಸನದ ಮೇಲೆ ಕುಳಿತಿದ್ದನು. ಆತನ ಉದ್ದವಾದ ನಿಲುವಂಗಿಯು ಆಲಯವನ್ನು ತುಂಬಿಕೊಂಡಿತ್ತು. 2 ಆರು ರೆಕ್ಕೆಗಳುಳ್ಳ ಸೆರಾಫಿಯರು ಯೆಹೋವನ ಸುತ್ತ್ತಲೂ ನಿಂತಿದ್ದರು. ಆ ದೇವದೂತರು ಎರಡು ರೆಕ್ಕೆಗಳಿಂದ ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು; ಎರಡು ರೆಕ್ಕೆಗಳಿಂದ ತಮ್ಮ ಕಾಲುಗಳನ್ನು ಮುಚ್ಚಿಕೊಂಡಿದ್ದರು; ಉಳಿದ ಎರಡು ರೆಕ್ಕೆಗಳಿಂದ ಹಾರಾಡುತ್ತಿದ್ದರು. 3 ಪ್ರತಿಯೊಬ್ಬ ದೂತನು ಇನ್ನೊಬ್ಬ ದೂತನನ್ನು ಕರೆದು, “ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಸರ್ವಶಕ್ತನಾದ ಯೆಹೋವನು ಮಹಾ ಪರಿಶುದ್ಧನು. ಆತನ ಮಹಿಮೆಯು ಇಡೀ ಭೂಮಂಡಲವನ್ನು ಆವರಿಸಿಕೊಂಡಿದೆ” ಎಂದು ಗಟ್ಟಿಯಾದ ಸ್ವರದಲ್ಲಿ ಹೇಳುತ್ತಿದ್ದರು. 4 ಅವರ ಗಟ್ಟಿಯಾದ ಸ್ವರಕ್ಕೆ ಬಾಗಿಲಿನ ನಿಲುವುಗಳು ಅಲುಗಾಡುತ್ತಿದ್ದವು; ಆಲಯವು ಹೊಗೆಯಿಂದ ತುಂಬಿಹೋಯಿತು.
5 ಆಗ ನಾನು ಬಹು ಭಯಗೊಂಡು, “ಅಯ್ಯೋ, ನಾನು ನಾಶವಾಗುತ್ತಿದ್ದೇನೆ. ನಾನು ದೇವರೊಂದಿಗೆ ಮಾತನಾಡುವಷ್ಟು ಯೋಗ್ಯನಲ್ಲ. ದೇವರೊಂದಿಗೆ ಮಾತಾಡಲು ಯೋಗ್ಯರಲ್ಲದ ಜನರೊಂದಿಗೆ ನಾನು ಜೀವಿಸುತ್ತಿದ್ದೇನೆ. ಆದರೂ ನಾನು ಸರ್ವಶಕ್ತನಾದ ಯೆಹೋವನನ್ನು, ರಾಜಾಧಿರಾಜನನ್ನು ನೋಡಿದೆನು” ಎಂದೆನು.
6 ಯಜ್ಞವೇದಿಕೆಯ ಮೇಲೆ ಬೆಂಕಿ ಇತ್ತು. ಸೆರಾಫಿಯರಲ್ಲೊಬ್ಬನು ಇಕ್ಕುಳಿಯಲ್ಲಿ ಬೆಂಕಿಯೊಳಗಿಂದ ಉರಿಯುವ ಕೆಂಡವನ್ನು ತೆಗೆದು ನನ್ನ ಬಳಿಗೆ ಹಾರಿಬಂದನು. 7 ಆ ಸೆರಾಫಿಯನು ಉರಿಯುವ ಕೆಂಡವನ್ನು ನನ್ನ ಬಾಯಿಗೆ ಮುಟ್ಟಿಸಿದನು. ಆಗ ಆ ದೂತನು, “ಇಗೋ, ಈ ಉರಿಯುವ ಕೆಂಡವು ನಿನ್ನ ತುಟಿಗಳಿಗೆ ತಗಲಿದ್ದರಿಂದ ನೀನು ಮಾಡಿದ ಕೆಟ್ಟಕಾರ್ಯಗಳೆಲ್ಲಾ ನಿನ್ನಿಂದ ತೊಲಗಿ ಹೋದವು. ಈಗ ನಿನ್ನ ಪಾಪವು ಅಳಿಸಿಹಾಕಲ್ಪಟ್ಟಿದೆ”[a] ಎಂದು ಹೇಳಿದನು.
8 ಆಗ ನಾನು ನನ್ನ ಒಡೆಯನಾದ ಯೆಹೋವನ ಸ್ವರವನ್ನು ಕೇಳಿದೆನು. ಆತನು, “ನಾನು ಯಾರನ್ನು ಕಳುಹಿಸಲಿ? ನಮಗೋಸ್ಕರ ಯಾರು ಹೋಗುವರು?” ಎಂದು ಕೇಳಿದನು.
ಆಗ ನಾನು, “ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದೆನು.
9 ಆಗ ಯೆಹೋವನು, “ನೀನು ಹೋಗಿ ಇದನ್ನು ಜನರಿಗೆ ಸಾರು: ‘ಸರಿಯಾಗಿ ಕೇಳಿಸಿಕೊಳ್ಳಿ, ಆದರೆ ಅರ್ಥಮಾಡಿಕೊಳ್ಳಬೇಡಿ. ಸೂಕ್ಷ್ಮವಾಗಿ ನೋಡಿ, ಆದರೆ ಕಲಿತುಕೊಳ್ಳಬೇಡಿ.’ 10 ಜನರಲ್ಲಿ ಗಲಿಬಿಲಿಯನ್ನು ಉಂಟುಮಾಡು. ಜನರು ತಾವು ನೋಡಿದ್ದನ್ನು, ಕೇಳಿದ್ದನ್ನು ಅರ್ಥಮಾಡಿಕೊಳ್ಳದ ಹಾಗೆ ಮಾಡು. ನೀನು ಹೀಗೆ ಮಾಡದಿದ್ದಲ್ಲಿ ಜನರು ತಾವು ಕೇಳಿದ್ದನ್ನು ಅರ್ಥಮಾಡಿಕೊಳ್ಳುವರು; ಜನರು ತಮ್ಮ ಮನಸ್ಸಿನಲ್ಲಿ ಅರ್ಥಮಾಡಿಕೊಳ್ಳುವರು. ಅವರು ಹಾಗೆ ಮಾಡಿದ್ದಲ್ಲಿ, ಅವರು ನನ್ನ ಬಳಿಗೆ ಹಿಂದಿರುಗಿ ಬಂದು ಗುಣಹೊಂದುವರು” ಎಂದು ಹೇಳಿದನು.
11 ಆಗ ನಾನು, “ಒಡೆಯನೇ, ಎಷ್ಟರ ತನಕ ನಾನು ಹೀಗೆ ಮಾಡಬೇಕು?” ಎಂದು ವಿಚಾರಿಸಿದೆನು.
ಅದಕ್ಕೆ ಯೆಹೋವನು, “ನಗರಗಳು ನಾಶವಾಗುವ ತನಕ ಹೀಗೆಯೇ ಮಾಡು. ಮನೆಗಳಲ್ಲಿ ಜನರು ಇಲ್ಲದೆ ಹೋಗುವವರೆಗೆ ಹೀಗೆಯೇ ಮಾಡು. ಇಡೀ ದೇಶವು ಹಾಳಾಗಿ ಬೆಂಗಾಡಾಗುವ ತನಕ ಹೀಗೆಯೇ ಮಾಡುತ್ತಿರು” ಎಂದು ಹೇಳಿದನು.
12 ಜನರು ಬಹುದೂರ ಹೋಗುವಂತೆ ಯೆಹೋವನು ಮಾಡುವನು. ದೇಶದೊಳಗೆ ನಿರ್ಜನವಾದ ಸ್ಥಳಗಳು ಬೇಕಾದಷ್ಟು ಇರುವವು. 13 ಆದರೆ ದೇಶದಲ್ಲಿ ಹತ್ತನೆ ಒಂದು ಭಾಗದಷ್ಟು ಜನರು ಮಾತ್ರ ಉಳಿಯುವರು. ಇವರು ನಾಶವಾಗುವುದಿಲ್ಲ. ಯಾಕೆಂದರೆ ಇವರು ಯೆಹೋವನ ಬಳಿಗೆ ಹಿಂತಿರುಗಿ ಬಂದವರು. ಇವರು ಓಕ್ ಮರದಂತಿರುವರು. ಆ ಮರವು ಕಡಿಯಲ್ಪಟ್ಟರೂ ಅದರ ಬುಡವು ಹಾಗೆಯೇ ಉಳಿಯುವದು. ಈ ಕಾಂಡದ ಬುಡವು ಬಹು ವಿಶೇಷವಾದ ಬೀಜವಾಗಿರುವದು ಮತ್ತು ಅದು ಪುನಃ ಬೆಳೆಯುವುದು.
ದೇವರಿಗೆ ಮೆಚ್ಚಿಕೆಯಾದ ಆರಾಧನೆ
13 ನೀವು ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾಗಿರುವುದರಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ. 2 ಅತಿಥಿಸತ್ಕಾರ ಮಾಡಿರಿ. ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ. 3 ಸೆರೆಮನೆಯಲ್ಲಿರುವ ಜನರನ್ನು ಮರೆಯದಿರಿ. ನೀವೂ ಅವರ ಜೊತೆಯಲ್ಲಿ ಸೆರೆಮನೆಯಲ್ಲಿದ್ದೀರೋ ಎಂಬಂತೆ ನೆನಪುಮಾಡಿಕೊಳ್ಳಿ ಮತ್ತು ಸಂಕಟಕ್ಕೊಳಗಾಗಿರುವ ಜನರನ್ನು ಮರೆಯದಿರಿ. ನೀವೂ ಅವರ ಜೊತೆಯಲ್ಲಿ ಸಂಕಟಪಡುತ್ತಿರುವಿರೋ ಎಂಬಂತೆ ನೆನಪು ಮಾಡಿಕೊಳ್ಳಿ.
4 ಮದುವೆಯನ್ನು ಜನರೆಲ್ಲರೂ ಗೌರವಿಸಬೇಕು. ಗಂಡ ಹೆಂಡತಿಯರ ಸಂಬಂಧ ಪರಿಶುದ್ಧವಾಗಿರಬೇಕು. ಲೈಂಗಿಕ ಪಾಪಗಳನ್ನು ಮಾಡುವವರು ಮತ್ತು ವ್ಯಭಿಚಾರವನ್ನು ಮಾಡುವವರು ದೇವರ ತೀರ್ಪಿಗೆ ಒಳಗಾಗಿದ್ದಾರೆ. 5 ಹಣದ ಮೇಲೆ ನಿಮಗಿರುವ ವ್ಯಾಮೋಹವನ್ನು ದೂರತಳ್ಳಿರಿ. ನಿಮ್ಮಲ್ಲಿರುವ ವಸ್ತುಗಳಲ್ಲಿ ತೃಪ್ತಿಯಿಂದಿರಿ. ದೇವರು ಹೀಗೆ ಹೇಳಿದ್ದಾನೆ:
“ನಾನು ನಿಮ್ಮನ್ನು ಎಂದೆಂದಿಗೂ ಕೈಬಿಡುವುದಿಲ್ಲ.
ನಾನು ನಿಮ್ಮನ್ನು ಎಂದೆಂದಿಗೂ ತೊರೆದುಬಿಡುವುದಿಲ್ಲ.”(A)
6 ಆದ್ದರಿಂದ ನಾವು ಖಚಿತವಾಗಿ ಹೀಗೆ ಹೇಳಬಹುದು:
“ಪ್ರಭುವೇ ನನ್ನ ಸಹಾಯಕನು;
ನಾನು ಹೆದರುವುದಿಲ್ಲ.
ಜನರು ನನಗೆ ಏನೂ ಮಾಡಲಾರರು.”(B)
7 ನಿಮ್ಮ ಸಭಾನಾಯಕರನ್ನು ನೆನಪು ಮಾಡಿಕೊಳ್ಳಿ. ಅವರು ನಿಮಗೆ ದೇವರ ಸಂದೇಶವನ್ನು ಬೋಧಿಸಿದರು. ಅವರು ಹೇಗೆ ಜೀವಿಸಿದ್ದರು ಮತ್ತು ಹೇಗೆ ಸತ್ತರು ಎಂಬುದನ್ನು ನೆನಪಿಸಿಕೊಳ್ಳಿ. ಅವರ ನಂಬಿಕೆಯನ್ನು ಅನುಸರಿಸಿರಿ. 8 ಯೇಸು ಕ್ರಿಸ್ತನು ನಿನ್ನೆ ಇದ್ದಂತೆ ಇಂದಿಗೂ ಇದ್ದಾನೆ. ಸದಾಕಾಲ ಹಾಗೆಯೇ ಇರುವನು. 9 ನಿಮ್ಮನ್ನು ತಪ್ಪು ಮಾರ್ಗಕ್ಕೆ ಎಳೆಯುವಂತಹ ಅನ್ಯೋಪದೇಶಗಳ ಕಡೆಗೆ ಗಮನಕೊಡಬೇಡಿ. ನಿಮ್ಮ ಹೃದಯಗಳು ದೇವರ ಕೃಪೆಯಿಂದ ಬಲವಾಗಬೇಕೇ ಹೊರತು ಆಹಾರದ ನಿಯಮಗಳ ಪಾಲನೆಯಿಂದಲ್ಲ. ಆ ನಿಯಮಗಳ ಪಾಲನೆಯು ಜನರಿಗೆ ಸಹಾಯಕವಾಗುವುದಿಲ್ಲ.
10 ನಮಗೊಂದು ಯಜ್ಞವಿದೆ. ಪವಿತ್ರ ಗುಡಾರದಲ್ಲಿ ಸೇವೆ ಸಲ್ಲಿಸುತ್ತಿರುವ ಯಾಜಕರು ನಮ್ಮ ಯಜ್ಞದಿಂದ ತಿನ್ನಲಾಗುವುದಿಲ್ಲ. 11 ಪ್ರಧಾನಯಾಜಕನು ಪಶುಗಳ ರಕ್ತವನ್ನು ಮಹಾ ಪವಿತ್ರಸ್ಥಳದೊಳಕ್ಕೆ ತೆಗೆದುಕೊಂಡು ಹೋಗುತ್ತಾನೆ. ಅವನು ಪಾಪಗಳಿಗಾಗಿ ಆ ರಕ್ತವನ್ನು ಅರ್ಪಿಸುತ್ತಾನೆ. ಆದರೆ ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವೆ. 12 ಆದ್ದರಿಂದ ಯೇಸುವು ನಗರದ ಹೊರಗಡೆ ಸಂಕಟವನ್ನು ಅನುಭವಿಸಿದನು. ಆತನು ತನ್ನ ಜನರನ್ನು ಪವಿತ್ರರನ್ನಾಗಿಸಲು, ತನ್ನ ಸ್ವಂತ ರಕ್ತವನ್ನೇ ಅರ್ಪಿಸಿ ಸತ್ತನು. 13 ನಾವು ಪಾಳೆಯದ ಹೊರಗಡೆಯಲ್ಲಿರುವ ಆತನ ಬಳಿಗೆ ಹೋಗಬೇಕು. ಆತನಿಗಾದ ಅಪಮಾನವನ್ನು ನಾವೂ ಸ್ವೀಕರಿಸಿಕೊಳ್ಳಬೇಕು. 14 ಈ ಲೋಕದಲ್ಲಿ ಶಾಶ್ವತವಾಗಿರುವ ನಗರವೇ ಇಲ್ಲ. ಆದರೆ ನಾವು ಮುಂದೆ ಬರುವ ನಗರಕ್ಕಾಗಿ ಕಾಯುತ್ತಿದ್ದೇವೆ. 15 ಆದ್ದರಿಂದ ಆತನ ಮೂಲಕ ನಾವು ದೇವರಿಗೆ ಯಜ್ಞಗಳನ್ನು ಅರ್ಪಿಸುವುದನ್ನು ನಿಲ್ಲಿಸಬಾರದು. ಆತನೇ ಪ್ರಭುವೆಂದು ನಮ್ಮ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ. 16 ಇದಲ್ಲದೆ ಪರೋಪಕಾರವನ್ನೂ ದಾನಧರ್ಮವನ್ನೂ ಮರೆಯದಿರಿ. ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.
17 ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ ಮತ್ತು ಅವರ ಅಧಿಕಾರದ ಅಧೀನದಲ್ಲಿರಿ. ಅವರೇ ನಿಮಗೆ ಜವಾಬ್ದಾರರು. ಅವರು ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ಈ ಕಾರ್ಯವನ್ನು ವ್ಯಸನದಿಂದ ಮಾಡದೆ ಸಂತೋಷದಿಂದ ಮಾಡಲು ಸಾಧ್ಯವಾಗುವಂತೆ ಅವರಿಗೆ ವಿಧೇಯರಾಗಿರಿ. ಅವರ ಕಾರ್ಯವನ್ನು ಕಷ್ಟಕರವನ್ನಾಗಿ ಮಾಡುವುದರಿಂದ ನಿಮಗೇನೂ ಪ್ರಯೋಜನವಿಲ್ಲ.
18 ನಮಗೋಸ್ಕರ ಪ್ರಾರ್ಥಿಸುವುದನ್ನು ಮುಂದುವರಿಸಿರಿ. ನಾವು ಯಾವಾಗಲೂ ಉತ್ತಮ ಕಾರ್ಯಗಳನ್ನು ಮಾಡಲು ಪ್ರಯತ್ನಿಸುವುದರಿಂದ, ನಮ್ಮ ಹೃದಯಗಳು ಶುದ್ಧವಾಗಿವೆ ಎಂಬ ನಂಬಿಕೆ ನಮಗಿದೆ. 19 ದೇವರು ನನ್ನನ್ನು ನಿಮ್ಮ ಬಳಿಗೆ ಬೇಗನೆ ಕಳುಹಿಸುವಂತೆ ನೀವು ಆತನಲ್ಲಿ ಪ್ರಾರ್ಥನೆಯನ್ನು ಮಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ. ನನಗೆ ಅತ್ಯಗತ್ಯವಾದದ್ದು ಇದೇ.
20-21 ಶಾಂತಿಸ್ವರೂಪನಾದ ದೇವರು ನಿಮಗೆ ಬೇಕಾದ ತನ್ನ ವರದಾನಗಳನ್ನು ದಯಪಾಲಿಸಲಿ ಎಂದು ನಾನು ಆತನಲ್ಲಿ ಪ್ರಾರ್ಥಿಸುತ್ತೇನೆ. ಏಕೆಂದರೆ ಆಗ ನೀವು ಆತನ ಇಷ್ಟಕ್ಕನುಸಾರವಾದವುಗಳನ್ನೆಲ್ಲಾ ಮಾಡಲು ಸಾಧ್ಯವಾಗುವುದು. ತನ್ನ ರಕ್ತವನ್ನು ಸುರಿಸಿ ಸಭೆಯೆಂಬ ಹಿಂಡಿಗೆ ಮಹಾಕುರುಬನಾಗಿರುವ ನಮ್ಮ ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಮೇಲಕ್ಕೆ ಎಬ್ಬಿಸಿದವನು ದೇವರೇ. ಆತನ ರಕ್ತವು ಶಾಶ್ವತವಾದ ಹೊಸ ಒಡಂಬಡಿಕೆಯನ್ನಾರಂಭಿಸಿತು. ದೇವರು ತನಗೆ ಸಂತೋಷವನ್ನು ಉಂಟುಮಾಡುವ ಕಾರ್ಯಗಳನ್ನು ಯೇಸು ಕ್ರಿಸ್ತನ ಮೂಲಕ ನಮ್ಮಲ್ಲಿ ನಡೆಸಲಿ. ಯೇಸುವಿಗೆ ಎಂದೆಂದಿಗೂ ಮಹಿಮೆಯಾಗಲಿ. ಆಮೆನ್.
22 ನನ್ನ ಸಹೋದರ ಸಹೋದರಿಯರೇ, ನಾನು ಹೇಳಿದ ಈ ಸಂಗತಿಗಳನ್ನು ನೀವು ತಾಳ್ಮೆಯಿಂದ ಆಲಿಸಬೇಕೆಂದು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ನಿಮ್ಮನ್ನು ಬಲಪಡಿಸುವುದಕ್ಕಾಗಿ ಈ ಪತ್ರವನ್ನು ಬರೆದಿರುವೆನು. ಈ ಪತ್ರವು ಬಹುದೀರ್ಘವಾದದ್ದೇನೂ ಅಲ್ಲ. 23 ನಮ್ಮ ಸಹೋದರನಾದ ತಿಮೊಥೆಯನಿಗೆ ಸೆರೆಮನೆಯಿಂದ ಬಿಡುಗಡೆ ಆಯಿತೆಂಬುದು ನಿಮಗೆ ತಿಳಿದಿರಲಿ. ಅವನು ನನ್ನ ಬಳಿಗೆ ಬೇಗನೆ ಬಂದರೆ, ನಾವಿಬ್ಬರೂ ನಿಮ್ಮನ್ನು ನೋಡಲು ಬರುತ್ತೇವೆ.
24 ನಿಮ್ಮ ಸಭಾನಾಯಕರಿಗೆಲ್ಲ ಮತ್ತು ದೇವಜನರಿಗೆಲ್ಲ ನಮ್ಮ ವಂದನೆಗಳನ್ನು ತಿಳಿಸಿ. ಇಟಲಿಯ ದೇವಜನರೆಲ್ಲರೂ ನಿಮಗೆ ವಂದನೆಗಳನ್ನು ಹೇಳುತ್ತಾರೆ.
25 ದೇವರ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.
Kannada Holy Bible: Easy-to-Read Version. All rights reserved. © 1997 Bible League International