Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 11

ಜನರು ಮತ್ತೆ ಗುಣುಗುಟ್ಟಿದರು

11 ಜನರು ತಮಗೆ ತೊಂದರೆ ಉಂಟಾಯಿತೆಂದು ಗಟ್ಟಿಯಾಗಿ ಗುಣುಗುಟ್ಟಿದರು. ಅದನ್ನು ಯೆಹೋವನು ಕೇಳಿ ಕೋಪಗೊಂಡನು. ಯೆಹೋವನಿಂದ ಬಂದ ಬೆಂಕಿ ಅವರ ವಿರುದ್ಧವಾಗಿ ಹೊತ್ತಿಕೊಂಡದ್ದರಿಂದ ಪಾಳೆಯದ ಹೊರಭಾಗದಲ್ಲಿದ್ದವರು ಸುಟ್ಟುಹೋದರು. ಆಗ ಜನರು ಸಹಾಯಕ್ಕಾಗಿ ಮೋಶೆಗೆ ಮೊರೆಯಿಟ್ಟರು. ಮೋಶೆಯು ಅವರಿಗೋಸ್ಕರ ಯೆಹೋವನಿಗೆ ಪ್ರಾರ್ಥಿಸಲಾಗಿ ಬೆಂಕಿ ಆರಿಹೋಯಿತು. ಯೆಹೋವನು ಅವರಿಗೆ ವಿರುದ್ಧವಾಗಿ ಬೆಂಕಿ ಉರಿಯುವಂತೆ ಮಾಡಿದ್ದರಿಂದ ಜನರು ಆ ಸ್ಥಳಕ್ಕೆ “ತಬೇರ” ಎಂದು ಹೆಸರಿಟ್ಟರು.

ಎಪ್ಪತ್ತು ಮಂದಿ ಹಿರಿಯರು

ಅವರ ಮಧ್ಯದಲ್ಲಿದ್ದ ಕಿರುಕುಳಕೊಡುವ ಪರದೇಶಸ್ಥರು ಬೇರೆ ರೀತಿಯ ಆಹಾರಕ್ಕಾಗಿ ಬಹಳವಾಗಿ ಆಶಿಸಿದರು. ಇಸ್ರೇಲರು ಸಹ ಮತ್ತೆ ಅಳಲು ಆರಂಭಿಸಿ, “ನಮಗೆ ಯಾರು ಮಾಂಸವನ್ನು ಕೊಡುತ್ತಾರೆ? ನಾವು ಈಜಿಪ್ಟಿನಲ್ಲಿ ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸೌತೆಕಾಯಿ, ಕರ್ಬೂಜು, ಈರುಳ್ಳಿಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ ಇವುಗಳನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. ಆದರೆ ನಾವು ಈಗ ನಮ್ಮ ಬಲವನ್ನು ಕಳೆದುಕೊಂಡಿದ್ದೇವೆ. ಈ ಮನ್ನವನ್ನು ಬಿಟ್ಟು ನಮ್ಮಲ್ಲಿ ತಿನ್ನಲು ಬೇರೇನೂ ಇಲ್ಲ” ಎಂದರು. ಈ ಮನ್ನವು ಕೊತ್ತುಂಬರಿ ಕಾಳಿನಂತಿತ್ತು ಮತ್ತು ಅಂಟು ಪದಾರ್ಥದಂತೆ ಕಾಣಿಸಿತು. ಜನರು ಮನ್ನವನ್ನು ಕೂಡಿಸಿಕೊಂಡು ಬೀಸುವ ಕಲ್ಲುಗಳಿಂದ ಬೀಸಿ ಅಥವಾ ಒರಳಲ್ಲಿ ಕುಟ್ಟಿ, ಮಡಕೆಗಳಲ್ಲಿ ಬೇಯಿಸಿ ತೆಳುವಾದ ರೊಟ್ಟಿಗಳನ್ನು ಮಾಡಿಕೊಂಡರು. ಅದರ ರುಚಿ ಆಲಿವ್ ಎಣ್ಣೆಯಿಂದ ಮಾಡಿದ ಭಕ್ಷ್ಯಗಳಂತಿತ್ತು. ರಾತ್ರಿ ಕಾಲದಲ್ಲಿ ಮಂಜು ಪಾಳೆಯದಲ್ಲಿ ಬೀಳುತ್ತಿದ್ದಾಗ ಅದರೊಂದಿಗೆ ಮನ್ನವೂ ಬೀಳುತ್ತಿತ್ತು.

10 ಎಲ್ಲಾ ಕುಟುಂಬದವರೂ ತಮ್ಮತಮ್ಮ ಗುಡಾರದ ಬಾಗಿಲುಗಳಲ್ಲಿ ನಿಂತು ಗುಣಗುಟ್ಟುತ್ತಿರುವ ಶಬ್ದವು ಮೋಶೆಗೆ ಕೇಳಿಸಿತು. ಆಗ ಯೆಹೋವನು ಬಹು ಕೋಪಗೊಂಡನು. ಇದರಿಂದಾಗಿ ಮೋಶೆಗೆ ಬಹಳ ಬೇಸರವಾಯಿತು. 11 ಆಗ ಮೋಶೆ ಯೆಹೋವನಿಗೆ, “ನಿನ್ನ ಸೇವಕನಾದ ನನಗೆ ಯಾಕೆ ತೊಂದರೆಯನ್ನು ಉಂಟುಮಾಡಿದೆ? ನಾನು ನಿನಗೆ ಬೇಸರವನ್ನು ಉಂಟುಮಾಡಿದೆನೇ? ಈ ಜನರೆಲ್ಲರನ್ನು ಮುನ್ನಡೆಸಿಕೊಂಡು ಹೋಗುವ ಭಾರವನ್ನು ನೀನು ನನ್ನ ಮೇಲೆ ಯಾಕೆ ಹಾಕಿದೆ? 12 ನಾನು ಇವರಿಗೆ ಹೆತ್ತ ತಾಯಿಯೋ? ನಾನು ಅವರಿಗೆ ಜನ್ಮ ಕೊಡಲಿಲ್ಲವೆಂದು ನಿನಗೆ ಗೊತ್ತಿದೆ. ದಾದಿಯು ಮಗುವನ್ನು ಎತ್ತಿಕೊಂಡು ಹೋಗುವಂತೆ, ಈ ಜನರನ್ನು ನಾನು ನನ್ನ ಮಡಿಲಲ್ಲಿ ಇಟ್ಟು, ನೀನು ಅವರ ಪೂರ್ವಿಕರಿಗೆ ವಾಗ್ದಾನಮಾಡಿರುವ ದೇಶಕ್ಕೆ ಎತ್ತಿಕೊಂಡು ಹೋಗುವಂತೆ ನೀನು ನನಗೇಕೆ ಹೇಳುವೆ? 13 ಇವರು ನನ್ನ ಬಳಿಗೆ ಬಂದು, ‘ಮಾಂಸವನ್ನು ನಮಗೆ ತಿನ್ನಲಿಕ್ಕೆ ಕೊಡು’ ಎಂದು ಕೇಳಿಕೊಳ್ಳುತ್ತಾರಲ್ಲಾ! ಇಷ್ಟು ಜನಕ್ಕೆ ಬೇಕಾದ ಮಾಂಸವು ನನಗೆ ಎಲ್ಲಿಂದ ದೊರಕೀತು? 14 ಇಷ್ಟು ಜನರ ಭಾರವನ್ನು ನಾನೊಬ್ಬನೇ ಹೊರುವುದು ನನಗೆ ಅಸಾಧ್ಯ. ಅದು ನನ್ನ ಶಕ್ತಿಗೆ ಮೀರಿದ ಕೆಲಸ. 15 ನೀನು ಹೀಗೆಯೇ ನನಗೆ ಮಾಡುವುದಾಗಿದ್ದರೆ ಅದಕ್ಕೆ ಬದಲಾಗಿ ನನ್ನನ್ನು ಕೊಂದುಬಿಡು ಎಂದು ಬೇಡಿಕೊಳ್ಳುತ್ತೇನೆ. ಆಗ ನಾನು ಈ ದುರವಸ್ಥೆಗಳಿಂದ ವಿಮುಕ್ತನಾಗುವೆನು” ಎಂದು ಹೇಳಿದನು.

16 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಲ್ಲಿ ಹಿರಿಯರೆಂದೂ ಅಧಿಕಾರಿಗಳೆಂದೂ ನೀನು ತಿಳಿದುಕೊಂಡಿರುವ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನಗುಡಾರದ ಬಾಗಿಲಿಗೆ ಕರೆದುತಂದು ಅಲ್ಲೇ ನಿನ್ನೊಡನೆ ನಿಲ್ಲಿಸಿಕೊ. 17 ನಾನು ಅಲ್ಲಿಗೆ ಇಳಿದುಬಂದು ನಿನ್ನ ಸಂಗಡ ಮಾತಾಡುವೆನು. ಅದಲ್ಲದೆ ನಾನು ನಿನಗೆ ಅನುಗ್ರಹಿಸಿದ ಆತ್ಮವನ್ನೇ ಅವರ ಮೇಲೆ ಸುರಿಸುವೆನು. ಆಗ ಸ್ವತಃ ನೀನೇ ಈ ಜನರ ಭಾರವನ್ನು ವಹಿಸಬೇಕಾಗಿರುವುದಿಲ್ಲ. ಈ ಎಪ್ಪತ್ತು ಮಂದಿ ಹಿರಿಯರು ಆ ಭಾರವನ್ನು ಹೊರಲು ನಿನಗೆ ಸಹಾಯ ಮಾಡುವರು.

18 “ಇಸ್ರೇಲರಿಗೆ ಹೀಗೆ ಹೇಳು: ನಾಳೆಗಾಗಿ ನಿಮ್ಮನ್ನು ಪವಿತ್ರರನ್ನಾಗಿ ಮಾಡಿಕೊಳ್ಳಿರಿ. ನಾಳೆ ನೀವು ಮಾಂಸವನ್ನು ತಿನ್ನುವಿರಿ. ‘ನಮಗೆ ಮಾಂಸವನ್ನು ಕೊಡುವವರು ಯಾರು? ನಾವು ಈಜಿಪ್ಟಿನಲ್ಲಿ ಇದಕ್ಕಿಂತಲೂ ಚೆನ್ನಾಗಿದ್ದೆವಲ್ಲಾ’ ಎಂಬ ನಿಮ್ಮ ದೂರನ್ನು ಯೆಹೋವನು ಕೇಳಿದ್ದಾನೆ. ಆದ್ದರಿಂದ ಯೆಹೋವನು ನಿಮಗೆ ಮಾಂಸವನ್ನು ಕೊಡುವನು ಮತ್ತು ನೀವು ತಿನ್ನುವಿರಿ. 19 ನೀವು ಒಂದು ದಿನವಲ್ಲ, ಎರಡು ದಿನವಲ್ಲ, ಐದು ದಿನವಲ್ಲ, ಹತ್ತು ದಿನವಲ್ಲ, ಇಪ್ಪತ್ತು ದಿನವಲ್ಲ, 20 ಒಂದು ತಿಂಗಳು ಪೂರ್ತಿ ಮಾಂಸವನ್ನು ತಿನ್ನುವಿರಿ. ಅದು ನಿಮ್ಮ ಮೂಗಿನಲ್ಲಿ ಓಕರಿಕೆಯಾಗಿ ಹೊರಬರುವ ತನಕ ಮತ್ತು ನಿಮಗೆ ಅಸಹ್ಯವಾಗುವವರೆಗೆ ಅದನ್ನು ತಿನ್ನುವಿರಿ. ನೀವು ನಿಮ್ಮ ಮಧ್ಯದಲ್ಲಿರುವ ಯೆಹೋವನನ್ನು ತಿರಸ್ಕರಿಸಿದ್ದರಿಂದ ಮತ್ತು ‘ನಾವೇಕೆ ಈಜಿಪ್ಟನ್ನು ಬಿಟ್ಟು ಬಂದೆವು?’ ಎಂದು ಆತನ ಮುಂದೆ ದೂರು ಹೇಳಿದ್ದರಿಂದ ಇದು ನಿಮಗೆ ಸಂಭವಿಸುವುದು.”

21 ಅದಕ್ಕೆ ಮೋಶೆ, “ಯೆಹೋವನೇ, ಇಲ್ಲಿ ಆರು ಲಕ್ಷ ಗಂಡಸರು ನನ್ನೊಂದಿಗೆ ಇದ್ದಾರೆ. ಆದಾಗ್ಯೂ ನೀನು ಇವರಿಗೆ ಮಾಂಸ ಕೊಡುವುದಾಗಿಯೂ ಇವರು ಒಂದು ತಿಂಗಳೆಲ್ಲಾ ಅದನ್ನು ತಿನ್ನುವುದಾಗಿಯೂ ನೀನು ಹೇಳುತ್ತಿರುವೆ. 22 ನಾವು ಎಲ್ಲಾ ಕುರಿಗಳನ್ನು, ದನಕರುಗಳನ್ನು ಕೊಂದರೂ ಇಷ್ಟು ಜನರು ಒಂದು ತಿಂಗಳು ತಿನ್ನುವುದಕ್ಕೆ ಸಾಕಾಗದು. ಸಮುದ್ರದಲ್ಲಿರುವ ಮೀನುಗಳೆಲ್ಲವನ್ನು ಹಿಡಿದರೂ ಅದು ಇಷ್ಟು ಜನರಿಗೆ ಸಾಕಾಗದು” ಎಂದು ಹೇಳಿದನು.

23 ಆದರೆ ಯೆಹೋವನು ಮೋಶೆಗೆ, “ಯೆಹೋವನ ಶಕ್ತಿಗೆ ಮಿತಿಯಿಲ್ಲ. ನಾನು ಹೇಳುತ್ತಿರುವ ಸಂಗತಿಗಳು ನಡೆಯುವುದನ್ನು ನೀನು ನೋಡುವೆ” ಎಂದು ಹೇಳಿದನು.

24 ಮೋಶೆಯು ಹೊರಟುಹೋಗಿ, ಯೆಹೋವನು ಹೇಳಿದ್ದನ್ನು ಜನರಿಗೆ ತಿಳಿಸಿ, ಇಸ್ರೇಲರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಒಟ್ಟಾಗಿ ಸೇರಿಸಿದನು. ಅವರು ದೇವದರ್ಶನಗುಡಾರದ ಸುತ್ತಲೂ ನಿಲ್ಲುವಂತೆ ಆಜ್ಞಾಪಿಸಿದನು. 25 ಆಗ ಯೆಹೋವನು ಮೇಘದಲ್ಲಿ ಇಳಿದುಬಂದು ಮೋಶೆಯೊಡನೆ ಮಾತಾಡಿ ಅವನಲ್ಲಿದ್ದ ಆತ್ಮವನ್ನೇ[a] ಆ ಎಪ್ಪತ್ತು ಮಂದಿ ಹಿರಿಯರಿಗೆ ಕೊಟ್ಟನು. ಆತ್ಮಿಕ ವರಗಳು ಅವರಿಗೆ ಕೊಡಲ್ಪಟ್ಟಾಗ ಅವರು ಪ್ರವಾದಿಗಳಂತೆ ಪ್ರವಾದಿಸಿದರು. ಆದರೆ ಮತ್ತೆ ಅವರು ಹಾಗೆ ಪ್ರವಾದಿಸಲಿಲ್ಲ.

26 ಎಲ್ದಾದ್ ಮತ್ತು ಮೇದಾದ್ ಎಂಬ ಹಿರಿಯರಿಬ್ಬರು ಗುಡಾರದ ಬಳಿಗೆ ಹೋಗಲಿಲ್ಲ. ಹಿರಿಯರ ಹೆಸರುಗಳಿದ್ದ ಪಟ್ಟಿಯಲ್ಲಿ ಅವರ ಹೆಸರುಗಳಿದ್ದವು. ಆದರೆ ಅವರು ಪಾಳೆಯದಲ್ಲೇ ಉಳಿದುಕೊಂಡರು. ಆದರೆ ಅವರಿಗೆ ಆತ್ಮಿಕ ವರಗಳು ಕೊಡಲ್ಪಟ್ಟಿದ್ದರಿಂದ ಅವರು ಪಾಳೆಯದಲ್ಲಿ ಪ್ರವಾದಿಗಳಂತೆ ಪ್ರವಾದಿಸತೊಡಗಿದರು. 27 ಒಬ್ಬ ಯೌವನಸ್ಥನು ಮೋಶೆಯ ಬಳಿಗೆ ಓಡಿಹೋಗಿ, “ಎಲ್ದಾದ್ ಮತ್ತು ಮೇದಾದ್ ಎಂಬಿಬ್ಬರು ಪಾಳೆಯದಲ್ಲಿ ಪ್ರವಾದಿಗಳಂತೆ ಪ್ರವಾದಿಸುತ್ತಿದ್ದಾರೆ” ಎಂದು ಹೇಳಿದನು.

28 ನೂನನ ಮಗನಾದ ಯೆಹೋಶುವನು ಮೋಶೆಗೆ, “ಸ್ವಾಮೀ, ನೀನು ಅವರನ್ನು ತಡೆಯಬೇಕು” ಎಂದನು. (ಯೆಹೋಶುವನು ಯೌವನಸ್ಥನಾಗಿದ್ದಾಗಿನಿಂದಲೂ ಮೋಶೆಯ ಸಹಾಯಕನಾಗಿದ್ದನು.)

29 ಆದರೆ ಮೋಶೆಯು, “ನೀನು ನನ್ನ ವಿಷಯದಲ್ಲಿ ಚಿಂತೆಪಡುತ್ತಿರುವುದೇಕೆ? ಯೆಹೋವನ ಜನರೆಲ್ಲರೂ ಪ್ರವಾದಿಗಳಾಗಿರಬೇಕೆಂದು ನಾನು ಬಯಸುತ್ತೇನೆ. ಅವರೆಲ್ಲರ ಮೇಲೆ ಯೆಹೋವನು ತನ್ನ ಆತ್ಮನನ್ನು ಇರಿಸಬೇಕೆಂದು ನಾನು ಬಯಸುತ್ತೇನೆ” ಎಂದು ಉತ್ತರಿಸಿದನು. 30 ಬಳಿಕ ಮೋಶೆಯು ಮತ್ತು ಇಸ್ರೇಲರ ನಾಯಕರು ಪಾಳೆಯಕ್ಕೆ ಹಿಂತಿರುಗಿದರು.

ಲಾವಕ್ಕಿಗಳು

31 ಆಗ ಯೆಹೋವನು ಸಮುದ್ರದ ಕಡೆಯಿಂದ ಬಲವಾದ ಗಾಳಿಯು ಬೀಸುವಂತೆ ಮಾಡಿದನು. ಗಾಳಿಯು ಲಾವಕ್ಕಿಗಳನ್ನು ಹೊತ್ತುಕೊಂಡು ಬಂತು. ಲಾವಕ್ಕಿಗಳು ಪಾಳೆಯದ ಸುತ್ತಲೂ ಹಾರಿಬಂದವು. ಒಬ್ಬನು ಪ್ರತಿಯೊಂದು ದಿಕ್ಕಿನಲ್ಲಿ ಒಂದು ದಿನ ನಡೆಯಬಹುದಾದಷ್ಟು ದೂರದವರೆಗೂ ಲಾವಕ್ಕಿಗಳು ಭೂಮಿಯಿಂದ ಮೂರು ಅಡಿ ಎತ್ತರದಲ್ಲಿ ಹಾರಾಡುತ್ತಿದ್ದವು. 32 ಜನರು ಎದ್ದು ಆ ದಿನವೆಲ್ಲಾ ಮತ್ತು ರಾತ್ರಿಯೆಲ್ಲಾ ಮತ್ತು ಮರುದಿನವೆಲ್ಲಾ ಲಾವಕ್ಕಿಗಳನ್ನು ಕೂಡಿಸಿಕೊಂಡರು. ಸ್ವಲ್ಪ ಕೂಡಿಸಿಕೊಂಡವನು ಅರವತ್ತು ಕಿಲೋಗ್ರಾಂ ಕೂಡಿಸಿಕೊಂಡನು. ಬಳಿಕ ಜನರು ಲಾವಕ್ಕಿಗಳ ಮಾಂಸವನ್ನು ಪಾಳೆಯದ ಸುತ್ತಲೂ ಹರಡಿ ಬಿಸಿಲಿನಲ್ಲಿ ಒಣಗಿಸಿಕೊಂಡರು.

33 ಜನರು ಮಾಂಸವನ್ನು ಇನ್ನೂ ತಿನ್ನುತ್ತಿರುವಾಗಲೇ ಮತ್ತು ಲಾವಕ್ಕಿಗಳ ಸರಬರಾಜು ನಿಂತುಹೋಗುವುದಕ್ಕಿಂತ ಮೊದಲೇ ಯೆಹೋವನು ಬಹಳವಾಗಿ ಕೋಪಗೊಂಡು ಜನರ ಮಧ್ಯದಲ್ಲಿ ಭಯಂಕರವಾದ ಕಾಯಿಲೆಯನ್ನು ಉಂಟುಮಾಡಿದನು. ಜನರಲ್ಲಿ ಅನೇಕರು ಸತ್ತದ್ದರಿಂದ ಅವರನ್ನು ಅಲ್ಲೇ ಹೂಳಿಟ್ಟರು. 34 ಈ ಕಾರಣದಿಂದ ಆ ಸ್ಥಳಕ್ಕೆ, “ಕಿಬ್ರೋತ್ ಹತಾವಾ” ಎಂದು ಹೆಸರಿಟ್ಟರು. ಮಾಂಸಕ್ಕಾಗಿ ಅತ್ಯಾಶೆಪಟ್ಟವರನ್ನು ಅಲ್ಲಿ ಹೂಳಿಟ್ಟಿದ್ದರಿಂದ ಆ ಸ್ಥಳಕ್ಕೆ ಈ ಹೆಸರನ್ನು ಇಟ್ಟರು.

35 ಜನರು ಕಿಬ್ರೋತ್ ಹತಾವಾದಿಂದ ಪ್ರಯಾಣಮಾಡಿ ಹಚೇರೋತಿಗೆ ಹೋಗಿ ಅಲ್ಲಿ ಇಳಿದುಕೊಂಡರು.

ಕೀರ್ತನೆಗಳು 48

ರಚನೆಗಾರರು: ಕೋರಹೀಯರು.

48 ಯೆಹೋವನೇ ಮಹೋನ್ನತನು.
    ನಮ್ಮ ದೇವರನ್ನು ಆತನ ಪವಿತ್ರ ಪರ್ವತ ಪಟ್ಟಣದಲ್ಲಿ ಜನರು ಬಹಳವಾಗಿ ಕೊಂಡಾಡುವರು.
ದೇವರ ಪವಿತ್ರ ಪಟ್ಟಣವು ರಮ್ಯವಾಗಿದೆ.
    ಭೂಲೋಕದಲ್ಲೆಲ್ಲಾ ಇರುವ ಜನರನ್ನು ಅದು ಸಂತೋಷಗೊಳಿಸುವುದು.
ಸಿಯೋನ್ ಪರ್ವತವೇ ದೇವರ ನಿಜವಾದ ಪರ್ವತ.
    ಅದೇ ಆ ಮಹಾರಾಜನ ಪರ್ವತ.
ದೇವರು ಆ ಪಟ್ಟಣಗಳ ಅರಮನೆಗಳಲ್ಲಿ,
    ತಾನೇ ಆಶ್ರಯದುರ್ಗವೆಂದು ಹೆಸರುವಾಸಿಯಾಗಿದ್ದಾನೆ.
ಒಮ್ಮೆ, ಕೆಲವು ರಾಜರು ಒಟ್ಟಾಗಿ ಸೇರಿಬಂದರು.
    ಆ ಪಟ್ಟಣದ ಮೇಲೆ ದಾಳಿ ಮಾಡಲೆಂದು ಅವರೆಲ್ಲ ಅದರತ್ತ ನಡೆದರು.
ಆದರೆ ಅವರು ಅದನ್ನು ಕಂಡಾಗ ದಿಗ್ಭ್ರಮೆಗೊಂಡರು;
    ಭಯದಿಂದ ಓಡಿಹೋದರು.
ಭಯವು ಅವರನ್ನು
    ಪ್ರಸವವೇದನೆಯಂತೆ ಆವರಿಸಿಕೊಂಡಿತು.
ಪೂರ್ವದ ಬಿರುಗಾಳಿಯಿಂದ ಒಡೆದುಹೋದ ಹಡಗುಗಳಂತೆ
    ನೀನು ಅವರನ್ನು ನಾಶಮಾಡಿದೆ.
ಹೌದು, ಆ ರಾಜರುಗಳಿಗೆ ಸಂಭವಿಸಿದ್ದನ್ನು ನಾವು ಕಿವಿಯಾರೆ ಕೇಳಿದಂತೆಯೇ ಕಣ್ಣಾರೆಯೂ ಕಂಡೆವು.
    ನಮ್ಮ ದೇವರೂ ಸೇನಾಧೀಶ್ವರನೂ ಆಗಿರುವ ಯೆಹೋವನ ಪಟ್ಟಣದಲ್ಲಿ ನಾವು ಅದನ್ನು ನೋಡಿದ್ದೇವೆ.
ದೇವರು ಆ ಪಟ್ಟಣವನ್ನು ಶಾಶ್ವತವಾಗಿ ಭದ್ರಗೊಳಿಸುವನು.

ದೇವರೇ, ನಿನ್ನ ಆಲಯದಲ್ಲಿ ನಿನ್ನ ಶಾಶ್ವತ ಪ್ರೀತಿಯ ಕುರಿತು ಧ್ಯಾನಿಸುವೆವು.
10 ದೇವರೇ, ನೀನು ಪ್ರಖ್ಯಾತನಾಗಿರುವೆ.
    ಭೂಮಿಯ ಮೇಲೆಲ್ಲಾ ಜನರು ನಿನ್ನನ್ನು ಕೊಂಡಾಡುವರು.
    ನೀನು ಎಷ್ಟು ಒಳ್ಳೆಯವನೆಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.
11 ನಿನ್ನ ನ್ಯಾಯನಿರ್ಣಯಗಳಿಂದ ಚೀಯೋನ್ ಪರ್ವತವು ಹರ್ಷಿಸಲಿ;
    ಯೆಹೂದದ ಊರುಗಳು ಉಲ್ಲಾಸಿಸಲಿ.
12 ಚೀಯೋನಿನ ಸುತ್ತಲೂ ಸಂಚರಿಸಿ, ಆ ಪಟ್ಟಣವನ್ನು ನೋಡಿರಿ.
    ಅದರ ಬುರುಜುಗಳನ್ನು ಎಣಿಸಿರಿ.
13 ಅದರ ಕೋಟೆಗಳನ್ನು ನೋಡಿರಿ.
    ಚೀಯೋನಿನ ಅರಮನೆಗಳನ್ನು ಹೊಗಳಿರಿ.
ಆಗ ನೀವು ನಿಮ್ಮ ಮುಂದಿನ ಸಂತತಿಯವರಿಗೆ ಅದರ ಬಗ್ಗೆ ಹೇಳಬಲ್ಲಿರಿ.
14 ಈ ದೇವರೇ ಎಂದೆಂದಿಗೂ ನಮ್ಮ ದೇವರು!
    ನಮ್ಮನ್ನು ಶಾಶ್ವತವಾಗಿ ನಡೆಸುವಾತನು ಆತನೇ!

ಯೆಶಾಯ 1

ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ. ಯೆಹೂದ ಮತ್ತು ಜೆರುಸಲೇಮಿನಲ್ಲಿ ನಡೆಯಲಿದ್ದ ಘಟನೆಗಳ ಬಗ್ಗೆ ದೇವರು ಯೆಶಾಯನಿಗೆ ಈ ದರ್ಶನ ನೀಡಿದನು; ಯೆಹೂದದ ಅರಸರಾದ ಉಜ್ಜೀಯ, ಯೋಥಾಮ, ಆಹಾಜ ಮತ್ತು ಹಿಜ್ಕೀಯರ ಕಾಲದಲ್ಲಿ ಯೆಶಾಯನಿಗೆ ಈ ದರ್ಶನವಾಯಿತು.

ಸ್ವಜನರ ವಿರುದ್ಧವಾಗಿ ದೇವರ ದೂರು

ಭೂಮ್ಯಾಕಾಶಗಳೇ, ಯೆಹೋವನ ಮಾತನ್ನು ಆಲಿಸಿರಿ! ಯೆಹೋವನು ಹೇಳುತ್ತಿದ್ದಾನೆ:

“ನಾನು ಸಾಕಿ ಸಲಹಿದ ಮಕ್ಕಳೇ
    ನನಗೆ ದ್ರೋಹಮಾಡಿದ್ದಾರೆ.
ಎತ್ತು ತನ್ನ ದಣಿಯನ್ನು ತಿಳಿದದೆ;
    ಕತ್ತೆಯು ತನ್ನ ದಣಿಯ ಕೊಟ್ಟಿಗೆಯನ್ನು ತಿಳಿದದೆ.
ಆದರೆ ಇಸ್ರೇಲರು ನನ್ನನ್ನು ತಿಳಿದೇ ಇಲ್ಲ.
    ನನ್ನ ಜನರು ನನ್ನನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ.”

ಇಸ್ರೇಲ್ ದೇಶವು ಪಾಪದಿಂದ ತುಂಬಿಹೋಗಿದೆ; ಅವರ ಪಾಪವೇ ಅವರಿಗೆ ಭಾರವಾದ ಹೊರೆಯಾಗಿದೆ; ಅವರು ದುಷ್ಟಕುಟುಂಬಗಳ ಕೆಟ್ಟಮಕ್ಕಳಂತಿದ್ದಾರೆ. ಅವರು ಯೆಹೋವನನ್ನು ತ್ಯಜಿಸಿದ್ದಾರೆ; ಇಸ್ರೇಲಿನ ಪರಿಶುದ್ಧ ದೇವರನ್ನು ಅವಮಾನಪಡಿಸಿದ್ದಾರೆ; ಅವರು ಆತನನ್ನು ತೊರೆದು ಅಪರಿಚಿತನೋ ಎಂಬಂತೆ ಪರಿಗಣಿಸಿದ್ದಾರೆ.

ನಾನು ನಿಮ್ಮನ್ನು ಯಾಕೆ ಶಿಕ್ಷಿಸುತ್ತಲೇ ಇರಬೇಕು? ನಾನು ನಿಮ್ಮನ್ನು ಶಿಕ್ಷಿಸಿದೆನು, ಆದರೆ ನೀವು ಬದಲಾಗಲಿಲ್ಲ. ನೀವು ನನಗೆ ವಿರುದ್ಧವಾಗಿ ಏಳುತ್ತಲೇ ಇದ್ದೀರಿ. ಈಗ ಪ್ರತಿಯೊಂದು ತಲೆಯೂ ಪ್ರತಿಯೊಂದು ಹೃದಯವೂ ರೋಗಕ್ಕೆ ಬಲಿಯಾಗಿದೆ. ನಿಮ್ಮ ಅಂಗಾಲಿನಿಂದ ಹಿಡಿದು ನಡುನೆತ್ತಿಯವರೆಗೂ ನಿಮ್ಮ ದೇಹದಲ್ಲೆಲ್ಲಾ ಗಾಯಗಳೂ ಬಾಸುಂಡೆಗಳೂ ಹುಣ್ಣುಗಳೂ ತುಂಬಿಕೊಂಡಿವೆ. ಆದರೆ ಆ ಹುಣ್ಣುಗಳಿಗೆ ನೀವು ಸರಿಯಾಗಿ ಚಿಕಿತ್ಸೆ ಕೊಡಲಿಲ್ಲ; ಅವುಗಳನ್ನು ಒರೆಸಲಿಲ್ಲ, ಕಟ್ಟಲಿಲ್ಲ.

ನಿಮ್ಮ ದೇಶವು ಹಾಳಾಗಿದೆ; ನಿಮ್ಮ ನಗರಗಳು ಬೆಂಕಿಯಿಂದ ಸುಡಲ್ಪಟ್ಟಿವೆ. ನಿಮ್ಮ ಶತ್ರುಗಳು ನಿಮ್ಮ ದೇಶವನ್ನು ವಶಪಡಿಸಿಕೊಂಡಿದ್ದಾರೆ; ಅನ್ಯದೇಶವು ಶತ್ರುಸೈನ್ಯದಿಂದ ಹಾಳಾಗುವಂತೆಯೇ, ನಿಮ್ಮ ದೇಶವೂ ಹಾಳಾಗಿದೆ.

ಜೆರುಸಲೇಮಿಗೆ ಎಚ್ಚರಿಕೆ

ಚೀಯೋನ್ ನಗರಿಯು ದ್ರಾಕ್ಷಿತೋಟದಲ್ಲಿರುವ ಜನಶೂನ್ಯವಾದ ಡೇರೆಯಂತಿದೆ; ಸೌತೆಯ ಹೊಲದಲ್ಲಿ ಪಾಳುಬಿದ್ದಿರುವ ಮನೆಯಂತಿದೆ; ಶತ್ರುಗಳಿಗೆ ಸೋತುಹೋದ ನಗರದಂತಿದೆ. ಆದರೆ ಸರ್ವಶಕ್ತನಾದ ಯೆಹೋವನು ಸ್ವಲ್ಪ ಮಂದಿಯನ್ನಾದರೂ ಉಳಿಸಿ ಅಲ್ಲಿ ವಾಸಿಸುವಂತೆ ಮಾಡಿದ್ದಾನೆ. ನಾವು ಸೊದೋಮ್ ಗೊಮೋರ ಪಟ್ಟಣಗಳಂತೆ ಸಂಪೂರ್ಣವಾಗಿ ನಾಶವಾಗಲಿಲ್ಲ.

10 ಸೊದೋಮಿನ ಅಧಿಪತಿಗಳೇ, ಯೆಹೋವನ ಸಂದೇಶವನ್ನು ಕೇಳಿರಿ. ಗೊಮೋರದ ಜನರೇ, ಆತನ ಉಪದೇಶವನ್ನು ಕೇಳಿರಿ. 11 ಯೆಹೋವನು ಹೇಳುವುದೇನೆಂದರೆ, “ಈ ಯಜ್ಞಗಳನ್ನೆಲ್ಲ ನೀವು ನನಗೆ ಕೊಡುತ್ತಲೇ ಇರುವುದೇಕೆ? ನಿಮ್ಮ ಆಡುಗಳ ಯಜ್ಞಗಳೂ, ಹೋರಿಗಳ, ಕುರಿಗಳ, ಆಡುಗಳ ಕೊಬ್ಬೂ ನನಗೆ ಬೇಕಿಲ್ಲ. ಅವುಗಳ ರಕ್ತಕ್ಕೆ ನಾನು ಪ್ರಸನ್ನನಾಗುವುದಿಲ್ಲ. 12 ನೀವು ನನ್ನನ್ನು ಸಂಧಿಸಲು ಬರುವಾಗ, ನನ್ನ ಪ್ರಾಕಾರಗಳನ್ನು ತುಳಿದುಹಾಕುವಿರಿ. ಹಾಗೆ ಮಾಡಲು ನಿಮಗೆ ಹೇಳಿದವರು ಯಾರು?

13 “ನಿಮ್ಮ ಅಯೋಗ್ಯವಾದ ಯಜ್ಞಗಳನ್ನು ನನ್ನ ಬಳಿಗೆ ತರಬೇಡಿ; ನಿಮ್ಮ ಧೂಪವು ನನಗೆ ಅಸಹ್ಯ; ನಿಮ್ಮ ಅಮಾವಾಸ್ಯೆಯನ್ನಾಗಲಿ ಹಬ್ಬವನ್ನಾಗಲಿ ಸಬ್ಬತ್ತನ್ನಾಗಲಿ ನಾನು ಸಹಿಸಲಾರೆ. ನಿಮ್ಮ ಪವಿತ್ರಕೂಟಗಳಲ್ಲಿ ನೀವು ಮಾಡುವ ದುಷ್ಟತನವನ್ನು ನಾನು ಸಹಿಸಲಾರೆ. 14 ನಿಮ್ಮ ಮಾಸಿಕಕೂಟಗಳನ್ನೂ ಸಭಾಕೂಟಗಳನ್ನೂ ನಾನು ದ್ವೇಷಿಸುತ್ತೇನೆ. ಇವು ನನಗೆ ಭಾರವಾಗಿವೆ. ಈ ಭಾರದಿಂದ ನಾನು ಬೇಸತ್ತು ಹೋಗಿದ್ದೇನೆ.

15 “ನೀವು ನನಗೆ ಪ್ರಾರ್ಥಿಸುವಾಗ ನಿಮ್ಮ ಕೈಗಳನ್ನೆತ್ತುವಿರಿ, ಆದರೆ ನಾನು ನಿಮ್ಮ ಕಡೆಗೆ ನೋಡುವುದಿಲ್ಲ. ನೀವು ಹೆಚ್ಚೆಚ್ಚಾಗಿ ಪ್ರಾರ್ಥಿಸುವಿರಿ, ಆದರೂ ನಾನು ನಿಮಗೆ ಕಿವಿಗೊಡುವುದಿಲ್ಲ. ಯಾಕೆಂದರೆ ನಿಮ್ಮ ಕೈಗಳು ರಕ್ತದಿಂದ ತುಂಬಿವೆ.

16 “ನಿಮ್ಮನ್ನು ಶುದ್ಧಿಮಾಡಿಕೊಳ್ಳಿರಿ; ಶುಚಿಪಡಿಸಿಕೊಳ್ಳಿರಿ. ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ; ಅವುಗಳನ್ನು ನೋಡಲು ನನಗೆ ಮನಸ್ಸಿಲ್ಲ. ಕೆಟ್ಟದ್ದನ್ನು ಮಾಡದೆ ಒಳ್ಳೆಯದನ್ನೇ ಮಾಡಿರಿ; 17 ಒಳ್ಳೆಯದನ್ನೇ ಮಾಡಲು ಅಭ್ಯಾಸಮಾಡಿಕೊಳ್ಳಿರಿ. ಬೇರೆಯವರೊಂದಿಗೆ ನ್ಯಾಯವಂತರಾಗಿರಿ; ಕೆಡುಕರಿಗೆ ದಂಡನೆ ವಿಧಿಸಿರಿ; ಅನಾಥರಿಗೆ ಸಹಾಯಮಾಡಿರಿ; ವಿಧವೆಯರಿಗೂ ಸಹಾಯಮಾಡಿರಿ.”

18 ಯೆಹೋವನು ಹೀಗೆನ್ನುತ್ತಾನೆ: “ಬನ್ನಿರಿ, ನಾವು ಚರ್ಚೆ ಮಾಡೋಣ. ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಅವುಗಳನ್ನು ತೊಳೆದಾಗ ನೀವು ಹಿಮದಂತೆ ಬಿಳುಪಾಗುವಿರಿ. ನಿಮ್ಮ ಪಾಪಗಳು ಕಿರಮಂಜಿಬಣ್ಣವಾಗಿದ್ದರೂ ನೀವು ಉಣ್ಣೆಯಂತೆ ಬೆಳ್ಳಗಾಗುವಿರಿ.

19 “ನೀವು ನನ್ನ ಮಾತನ್ನು ಕೇಳಿದರೆ ನಿಮ್ಮ ದೇಶದ ಉತ್ತಮ ಫಸಲುಗಳಿಂದ ಆನಂದಿಸುವಿರಿ. 20 ನನ್ನ ಮಾತುಗಳನ್ನು ಕೇಳದೆ ಹೋದರೆ ನೀವು ನನಗೆ ವಿರೋಧಿಗಳಾಗಿದ್ದೀರಿ. ನಿಮ್ಮ ವೈರಿಯು ನಿಮ್ಮನ್ನು ನಾಶಮಾಡುವನು.”

ಯೋಹೋವನೇ ಇವುಗಳನ್ನು ನುಡಿದಿದ್ದಾನೆ.

ಜೆರುಸಲೇಮು ದೇವರಿಗೆ ದ್ರೋಹಮಾಡಿದೆ

21 ದೇವರು ಹೇಳುವುದೇನೆಂದರೆ: “ಜೆರುಸಲೇಮಿನ ಕಡೆಗೆ ನೋಡಿರಿ. ಆಕೆ ನನ್ನ ಮೇಲೆ ನಂಬಿಕೆ ಇಟ್ಟು ಹಿಂಬಾಲಿಸಿದಂಥ ನಗರಿಯಾಗಿದ್ದಳು. ಆದರೆ ಈಗ ಆಕೆ ಸೂಳೆಯಾಗಲು ಕಾರಣವೇನು? ಈಗ ಆಕೆ ನನ್ನನ್ನು ಹಿಂಬಾಲಿಸುತ್ತಿಲ್ಲ. ಜೆರುಸಲೇಮು ನ್ಯಾಯನೀತಿಗಳಿಂದ ತುಂಬಿರಬೇಕಿತ್ತು. ಅಲ್ಲಿ ವಾಸಿಸುವ ಜನರು ದೇವರ ಇಚ್ಛೆಯಂತೆ ನಡೆಯಬೇಕಿತ್ತು. ಆದರೆ ಈಗ ಕೊಲೆಗಡುಕರು ಅಲ್ಲಿ ವಾಸಿಸುತ್ತಿದ್ದಾರೆ.

22 “ಒಳ್ಳೆಯತನವು ಬೆಳ್ಳಿಯಂತಿದೆ. ಆದರೆ ನಿಮ್ಮ ಬೆಳ್ಳಿಯು ಬೆಲೆಯಿಲ್ಲದ್ದಾಗಿದೆ. ನಿಮ್ಮ ದ್ರಾಕ್ಷಾರಸ (ಒಳ್ಳೆಯತನ) ನೀರಿನೊಂದಿಗೆ ಬೆರತಿದೆ. ಅದು ತೆಳ್ಳಗಾಗಿದೆ. 23 ನಿಮ್ಮನ್ನಾಳುವವರು ದಂಗೆಕೋರರಾಗಿದ್ದಾರೆ; ಕಳ್ಳರ ಮಿತ್ರರಾಗಿದ್ದಾರೆ; ಲಂಚಕೋರರಾಗಿದ್ದಾರೆ; ಹಣಕ್ಕಾಗಿ ಕೆಟ್ಟದ್ದನ್ನು ಮಾಡುತ್ತಾರೆ; ಹಣಕ್ಕಾಗಿ ಮೋಸ ಮಾಡುತ್ತಾರೆ. ಅನಾಥರಿಗೆ ಸಹಾಯ ಮಾಡದವರಾಗಿದ್ದಾರೆ; ವಿಧವೆಯರ ಅಗತ್ಯತೆಗಳಿಗೆ ಲಕ್ಷ್ಯ ಕೊಡದವರಾಗಿದ್ದಾರೆ.”

24 ಇವೆಲ್ಲವುಗಳ ಕುರಿತಾಗಿ ಒಡೆಯನೂ ಇಸ್ರೇಲಿನ ಸರ್ವಶಕ್ತನೂ ಆಗಿರುವ ಯೆಹೋವನು ಹೇಳುವುದೇನೆಂದರೆ: “ನನ್ನ ಶತ್ರುಗಳೇ, ನಾನು ನಿಮ್ಮನ್ನು ಶಿಕ್ಷಿಸುವೆನು. ಇನ್ನು ಮುಂದೆ ನೀವು ನನಗೆ ಯಾವ ಕೇಡನ್ನೂ ಮಾಡುವುದಿಲ್ಲ. 25 ಜನರು ಬೆಳ್ಳಿಯನ್ನು ಶುದ್ಧಮಾಡುವದಕ್ಕೆ ದ್ರವವನ್ನು[a] ಉಪಯೋಗಿಸುವರು. ಅದೇರೀತಿಯಲ್ಲಿ ನಿಮ್ಮ ತಪ್ಪುಗಳನ್ನೆಲ್ಲ ನಾನು ಶುದ್ಧಮಾಡುವೆನು. ನಿಮ್ಮಲ್ಲಿರುವ ಎಲ್ಲಾ ಅಯೋಗ್ಯವಾದವುಗಳನ್ನು ತೆಗೆದುಬಿಡುವೆನು. 26 ಆರಂಭದಲ್ಲಿ ನಿಮಗಿದ್ದಂತಹ ನ್ಯಾಯಾಧೀಶರನ್ನು ನಾನು ತಿರುಗಿ ಬರಮಾಡುವೆನು. ನಿಮ್ಮ ಸಲಹೆಗಾರರು ಹಿಂದಿನ ಕಾಲದ ಸಲಹೆಗಾರರಂತೆ ಇರುವರು. ಆಗ ನೀನು ‘ನ್ಯಾಯವಾದ ಮತ್ತು ನಂಬಿಗಸ್ತಿಕೆಯುಳ್ಳ ಪಟ್ಟಣ’ವೆಂದು ಕರೆಯಲ್ಪಡುವೆ.”

27 ದೇವರು ಒಳ್ಳೆಯವನು; ನ್ಯಾಯವನ್ನೇ ಮಾಡುವವನು; ಆತನು ಚೀಯೋನನ್ನೂ ತನ್ನ ಬಳಿಗೆ ಬರುವ ಜನರನ್ನೂ ರಕ್ಷಿಸಿ ಕಾಪಾಡುವನು. 28 ಆದರೆ ಎಲ್ಲಾ ಕೊಲೆಗಾರರೂ ದುಷ್ಟರೂ ನಾಶಮಾಡಲ್ಪಡುವರು. ಅವರು ಯೆಹೋವನನ್ನು ಹಿಂಬಾಲಿಸುವವರಲ್ಲ.

29 ಮುಂದಿನ ದಿವಸಗಳಲ್ಲಿ ಜನರು ತಾವು ಆರಾಧಿಸಲು ಆರಿಸಿಕೊಳ್ಳುವ ಓಕ್ ಮರಗಳಲ್ಲಿಯೂ ವಿಶೇಷವಾದ ಉದ್ಯಾನವನಗಳಲ್ಲಿಯೂ ನಾಚಿಕೆಪಡುವರು. 30 ಎಲೆ ಒಣಗಿಹೋದ ಏಲಾ ಮರಗಳಂತೆ ನೀವು ಇದ್ದೀರಿ. ನೀರಿಲ್ಲದೆ ಸಾಯುತ್ತಿರುವ ಉದ್ಯಾನವನದಂತೆ ನೀವು ಇದ್ದೀರಿ. 31 ಬಲಿಷ್ಠರು ಸಣ್ಣಗಿರುವ ಒಣಮರದ ತುಂಡಿನಂತಿರುವರು. ಆ ಜನರು ಮಾಡುವ ಕಾರ್ಯಗಳು ಬೆಂಕಿಯನ್ನು ಪ್ರಾರಂಭಿಸುವ ಕಿಡಿಯಂತಿರುವವು. ಅವರ ಕಾರ್ಯಗಳೆಲ್ಲಾ ಸುಟ್ಟುಹೋಗುವವು; ಆ ಬೆಂಕಿಯನ್ನು ಯಾರೂ ನಿಲ್ಲಿಸಲಾರರು.

ಇಬ್ರಿಯರಿಗೆ 9

ಹಳೆಯ ಒಡಂಬಡಿಕೆಯ ಕ್ರಮಕ್ಕನುಸಾರವಾದ ಆರಾಧನೆ

ಮೊದಲನೆ ಒಡಂಬಡಿಕೆಯಲ್ಲಿ ಆರಾಧನೆಯ ನಿಯಮಗಳಿದ್ದವು. ಅದರಲ್ಲಿ ಮಾನವನಿರ್ಮಿತವಾದ ಆರಾಧನಾ ಸ್ಥಳವಿತ್ತು. ಈ ಸ್ಥಳವು ಗುಡಾರದ ಒಳಗಿತ್ತು. ಗುಡಾರದ ಮೊದಲ ಆವರಣವನ್ನು ಪವಿತ್ರ ಸ್ಥಳವೆಂದು ಕರೆಯುತ್ತಿದ್ದರು. ಪವಿತ್ರ ಸ್ಥಳದಲ್ಲಿ ದೀಪಸ್ತಂಭ, ಮೇಜು ಮತ್ತು ದೇವರಿಗೆ ಅರ್ಪಿಸಲ್ಪಟ್ಟ ರೊಟ್ಟಿಗಳಿದ್ದವು. ಎರಡನೆ ತೆರೆಯ ಹಿಂದೆ “ಮಹಾ ಪವಿತ್ರಸ್ಥಳ”ವೆಂದು ಕರೆಸಿಕೊಳ್ಳುವ ಒಂದು ಕೊಠಡಿಯಿತ್ತು. ಮಹಾ ಪವಿತ್ರಸ್ಥಳದಲ್ಲಿ ಧೂಪವನ್ನು ಸುಡುವುದಕ್ಕಾಗಿ ಬಂಗಾರದ ಯಜ್ಞವೇದಿಕೆಯಿತ್ತು. ಅಲ್ಲದೆ ಮೊದಲನೆ ಒಡಂಬಡಿಕೆಯನ್ನು ಇಡಲಾಗಿದ್ದ ಪವಿತ್ರ ಪೆಟ್ಟಿಗೆಯಿತ್ತು. ಅದಕ್ಕೆ ಚಿನ್ನದ ತಗಡನ್ನು ಹೊದಿಸಲಾಗಿತ್ತು. ಅದರ ಒಳಗಡೆ ಚಿನ್ನದ ಪಾತ್ರೆಯಲ್ಲಿಟ್ಟಿದ್ದ ಮನ್ನಾ ಮತ್ತು ಒಂದಾನೊಂದು ಕಾಲದಲ್ಲಿ ಚಿಗುರಿ ಎಲೆಗಳನ್ನು ಬಿಟ್ಟಿದ್ದ ಆರೋನನ ಕೋಲು ಇದ್ದವು. ಅಲ್ಲದೆ ಆ ಮೊದಲನೆ ಒಡಂಬಡಿಕೆಯ ಹತ್ತು ಆಜ್ಞೆಗಳನ್ನು ಬರೆಯಲಾಗಿದ್ದ ಕಲ್ಲಿನ ಹಲಗೆಗಳನ್ನು ಅದರಲ್ಲಿ ಇಡಲಾಗಿತ್ತು. ಆ ಪೆಟ್ಟಿಗೆಯ ಮೇಲ್ಗಡೆ ದೇವರ ವೈಭವವನ್ನು ತೋರ್ಪಡಿಸುವ ಕೆರೂಬಿಗಳಿದ್ದವು. ಈ ಕೆರೂಬಿಗಳು ಕೃಪಾಸನವನ್ನು ಆಚ್ಛಾದಿಸಿಕೊಂಡಿದ್ದವು. ಆದರೆ ಇವುಗಳ ಕುರಿತು ಎಲ್ಲವನ್ನೂ ನಾವು ಈಗ ಹೇಳಲು ಸಾಧ್ಯವಿಲ್ಲ.

ನಾನು ನಿಮಗೆ ವಿವರಿಸಿದಂತೆಯೇ ಗುಡಾರದಲ್ಲಿ ಎಲ್ಲವನ್ನೂ ಸಿದ್ಧಮಾಡಲಾಗಿತ್ತು. ಯಾಜಕರು ಪ್ರತಿದಿನವೂ ತಮ್ಮ ಆರಾಧನೆಯ ಕರ್ತವ್ಯಗಳನ್ನು ಮಾಡಲು ಮೊದಲನೆ ಕೊಠಡಿಯ ಒಳಗಡೆ ಹೋಗುತ್ತಿದ್ದರು. ಆದರೆ ಪ್ರಧಾನಯಾಜಕನು ಮಾತ್ರ ಎರಡನೆ ಕೊಠಡಿಯ ಒಳಗೆ ಹೋಗಬಹುದಿತ್ತು. ಅವನು ವರ್ಷಕ್ಕೊಮ್ಮೆ ಮಾತ್ರ ಅದರೊಳಗೆ ಹೋಗುತ್ತಿದ್ದನು. ಅವನು ತನ್ನೊಂದಿಗೆ ರಕ್ತವನ್ನು ತೆಗೆದುಕೊಳ್ಳದೆ ಎಂದೂ ಅದರೊಳಗೆ ಪ್ರವೇಶಿಸುತ್ತಿರಲಿಲ್ಲ. ತನಗೋಸ್ಕರವಾಗಿಯೂ ಜನರು ತಿಳಿಯದೆ ಮಾಡಿದ ಪಾಪಗಳಿಗಾಗಿಯೂ ಅವನು ಆ ರಕ್ತವನ್ನು ದೇವರಿಗೆ ಅರ್ಪಿಸುತ್ತಿದ್ದನು.

ಪವಿತ್ರಾತ್ಮನು ಆ ಎರಡು ಪ್ರತ್ಯೇಕವಾದ ಕೊಠಡಿಗಳ ಮೂಲಕ ನಮಗೆ ತಿಳಿಸುವುದೇನೆಂದರೆ, ಮೊದಲನೆ ಕೊಠಡಿಯು ಅಲ್ಲಿ ಇರುವವರೆಗೂ ಮಹಾ ಪವಿತ್ರಸ್ಥಳಕ್ಕೆ ಹೋಗುವ ಮಾರ್ಗವು ತೆರೆಯಲೇ ಇಲ್ಲ. ಈ ದಿನ ನಮಗೆ ಇದೊಂದು ಉದಾಹರಣೆಯಾಗಿದೆ. ದೇವರಿಗೆ ಅರ್ಪಿಸಲ್ಪಡುತ್ತಿದ್ದ ಕಾಣಿಕೆಗಳಿಗಾಗಲಿ ಯಜ್ಞಗಳಿಗಾಗಲಿ ದೇವಾರಾಧನೆ ಮಾಡುವ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿ ಮಾಡಲು ಸಾಧ್ಯವಿರಲಿಲ್ಲ ಎಂಬುದನ್ನು ಇದು ತೋರ್ಪಡಿಸುತ್ತದೆ. ಆ ವ್ಯಕ್ತಿಯ ಹೃದಯವನ್ನು ಪರಿಶುದ್ಧಗೊಳಿಸಲು ಆ ಯಜ್ಞಗಳಿಗೆ ಸಾಧ್ಯವಿರಲಿಲ್ಲ. 10 ಆ ಯಜ್ಞಗಳು ಮತ್ತು ಕಾಣಿಕೆಗಳು ಅನ್ನಪಾನಾದಿಗಳನ್ನೂ ವಿಶೇಷವಾದ ಸ್ನಾನಗಳನ್ನೂ ಕುರಿತಾಗಿದ್ದವು. ಅವು ದೇಹಕ್ಕೆ ಸಂಬಂಧಿಸಿದ ನಿಯಮಗಳೇ ಹೊರತು ಜನರ ಹೃದಯಕ್ಕೆ ಸಂಬಂಧಿಸಿದ್ದವುಗಳಲ್ಲ. ಜನರಿಗೆ ದೇವರ ಹೊಸ ಮಾರ್ಗವು ಲಭಿಸುವ ಕಾಲದವರೆಗೆ, ಅವರು ಅನುಸರಿಸಲೆಂದು ಆ ನಿಯಮಗಳನ್ನು ದೇವರೇ ಕೊಟ್ಟನು.

ಹೊಸ ಒಡಂಬಡಿಕೆಗನುಸಾರವಾಗಿ ಆರಾಧನೆ

11 ಆದರೆ ಕ್ರಿಸ್ತನು ಈಗಾಗಲೇ ಪ್ರಧಾನಯಾಜಕನಾಗಿ ಬಂದಿದ್ದಾನೆ. ಈಗ ನಾವು ಹೊಂದಿರುವ ಉತ್ತಮ ಸಂಗತಿಗಳಿಗೆ ಆತನು ಪ್ರಧಾನಯಾಜಕನಾಗಿದ್ದಾನೆ. ಇತರ ಯಾಜಕರಾದರೊ ಗುಡಾರದಲ್ಲಿ ಸೇವೆಯನ್ನು ಮಾಡಿದರು. ಆದರೆ ಕ್ರಿಸ್ತನು ಗುಡಾರದಲ್ಲಿ ಸೇವೆ ಮಾಡದೆ ಅದಕ್ಕಿಂತಲೂ ಶ್ರೇಷ್ಠವಾದ ಸ್ಥಳದಲ್ಲಿ ಸೇವೆ ಮಾಡುತ್ತಾನೆ. ಅದು ಮತ್ತಷ್ಟು ಪರಿಪೂರ್ಣವಾದದ್ದು. ಅದು ಮನುಷ್ಯರಿಂದ ನಿರ್ಮಿತವಾದದ್ದಲ್ಲ. ಲೋಕಕ್ಕೆ ಸೇರಿದ್ದೂ ಅಲ್ಲ. 12 ಆತನು ಒಂದೇ ಒಂದು ಸಾರಿ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿದನು. ಆತನು ಹೋತಗಳ ಮತ್ತು ಹೋರಿಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತದಿಂದಲೇ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿ ನಮಗೆ ನಿತ್ಯಸ್ವಾತಂತ್ರ್ಯವನ್ನು ತಂದುಕೊಟ್ಟನು.

13 ಹೋತಗಳ ಮತ್ತು ಹೋರಿಗಳ ರಕ್ತವನ್ನೂ ಹಸುಗಳ ಬೂದಿಯನ್ನೂ ಆ ಆರಾಧನೆಯ ಸ್ಥಳದಲ್ಲಿ ಪ್ರವೇಶಿಸುವಷ್ಟು ಶುದ್ಧರಾಗಿಲ್ಲದ ಜನರ ಮೇಲೆ ಚಿಮುಕಿಸಲಾಗುತ್ತಿತ್ತು. ಆ ರಕ್ತ ಮತ್ತು ಬೂದಿ ಜನರ ದೇಹಗಳನ್ನು ಮಾತ್ರ ಶುದ್ಧಿಗೊಳಿಸುತ್ತಿದ್ದವು. 14 ಆದ್ದರಿಂದ ಆತನ ರಕ್ತವು ಖಚಿತವಾಗಿ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸುತ್ತದೆ. ಆತನು ನಿತ್ಯಾತ್ಮನ ಮೂಲಕ ತನ್ನನ್ನು ತಾನೇ ದೇವರಿಗೆ ನಿಷ್ಕಳಂಕವಾದ ಯಜ್ಞವನ್ನಾಗಿ ಅರ್ಪಿಸಿಕೊಂಡನು. ಆತನ ರಕ್ತವು ನಮ್ಮನ್ನು ನಮ್ಮ ಕೆಟ್ಟಕಾರ್ಯಗಳಿಂದ ಪರಿಪೂರ್ಣವಾಗಿ ಬಿಡಿಸಿ ನಾವು ಜೀವಸ್ವರೂಪನಾದ ದೇವರನ್ನು ಆರಾಧಿಸಲು ಸಾಧ್ಯವಾಗುವಂತೆ ನಮ್ಮ ಹೃದಯವನ್ನೂ ಪರಿಶುದ್ಧಗೊಳಿಸುತ್ತದೆ.

15 ದೇವರಿಂದ ಕರೆಯಲ್ಪಟ್ಟ ಜನರು ದೇವರ ವಾಗ್ದಾನಗಳನ್ನು ಹೊಂದಿಕೊಳ್ಳಲೆಂದು ಕ್ರಿಸ್ತನು ಈ ಹೊಸ ಒಡಂಬಡಿಕೆಯನ್ನು ದೇವರಿಂದ ತಂದನು. ದೇವರ ಜನರು ಅವುಗಳನ್ನು ಶಾಶ್ವತವಾಗಿ ಹೊಂದಿಕೊಳ್ಳಲು ಸಾಧ್ಯ. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಜನರನ್ನು ಬಿಡುಗಡೆಗೊಳಿಸುವುದಕ್ಕಾಗಿ ಕ್ರಿಸ್ತನು ಮರಣ ಹೊಂದಿದನು.

16 ಒಬ್ಬನು ಸಾಯುವ ಮೊದಲೇ ಉಯಿಲನ್ನು[a] ಬರೆದಿಡುತ್ತಾನೆ. ಆದರೆ ಸತ್ತಿರುವಾತನೇ ಆ ಉಯಿಲನ್ನು ಬರೆದವನೆಂದು ಜನರು ಸಾಧಿಸಿ ತೋರಿಸಬೇಕು. 17 ಅದನ್ನು ಬರೆದವನು ಇನ್ನೂ ಬದುಕಿದ್ದರೆ ಅದಕ್ಕೆ ಬೆಲೆಯೇನೂ ಇಲ್ಲ. ಅದನ್ನು ಬರೆದಾತನು ಸತ್ತನಂತರ ಅದು ಉಪಯುಕ್ತವಾಗಿರುತ್ತದೆ. 18 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಮೊದಲನೆ ಒಡಂಬಡಿಕೆ ಇದಕ್ಕೆ ಹೋಲಿಕೆಯಾಗಿದೆ. ಮೊದಲನೆ ಒಡಂಬಡಿಕೆ ಉಪಯುಕ್ತಕ್ಕೆ ಬರಲು ರಕ್ತಾರ್ಪಣೆಯಾಗಬೇಕಿತ್ತು. 19 ಮೊದಲನೆಯದಾಗಿ, ಮೋಶೆಯು ಧರ್ಮಶಾಸ್ತ್ರದ ಪ್ರತಿಯೊಂದು ಆಜ್ಞೆಯನ್ನೂ ಜನರಿಗೆಲ್ಲ ತಿಳಿಸಿದನು. ನಂತರ ಅವನು ಕರುಗಳ ರಕ್ತವನ್ನು ತೆಗೆದುಕೊಂಡು ಅದನ್ನು ನೀರಿನೊಂದಿಗೆ ಬೆರೆಸಿದನು. ಬಳಿಕ ನೀರು ಮತ್ತು ರಕ್ತವನ್ನು ಧರ್ಮಶಾಸ್ತ್ರದ ಮೇಲೆ ಮತ್ತು ಜನರೆಲ್ಲರ ಮೇಲೆ ಚಿಮುಕಿಸಲು ಕೆಂಪು ಉಣ್ಣೆಯನ್ನೂ ಹಿಸ್ಸೋಪ್ ಗಿಡದ[b] ಕವಲನ್ನು ಉಪಯೋಗಿಸಿದನು. 20 ಚಿಮುಕಿಸುವಾಗ, “ನೀವು ಅನುಸರಿಸಬೇಕೆಂದು ದೇವರು ಆಜ್ಞಾಪಿಸಿದ ಒಡಂಬಡಿಕೆಯನ್ನು ಈ ರಕ್ತ ದೃಢಪಡಿಸುತ್ತದೆ”(A) ಎಂದು ಹೇಳಿದನು. 21 ಅದೇರೀತಿ, ಮೋಶೆಯು ರಕ್ತವನ್ನು ಗುಡಾರದ ಮೇಲೆಯೂ ಆರಾಧನೆಯಲ್ಲಿ ಬಳಸುವ ಎಲ್ಲಾ ವಸ್ತುಗಳ ಮೇಲೆಯೂ ಚಿಮುಕಿಸಿದನು. 22 ಬಹುಮಟ್ಟಿಗೆ ಪ್ರತಿಯೊಂದೂ ರಕ್ತದಿಂದ ಪರಿಶುದ್ಧವಾಗಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ರಕ್ತವಿಲ್ಲದೆ ಪಾಪಗಳನ್ನು ಕ್ಷಮಿಸಲು ಸಾಧ್ಯವಿಲ್ಲ.

ಕ್ರಿಸ್ತನ ಯಜ್ಞವು ಪಾಪಗಳನ್ನು ದೂರತಳ್ಳಿತು

23 ಈ ವಸ್ತುಗಳು ಪರಲೋಕದಲ್ಲಿರುವ ವಸ್ತುಗಳ ಪ್ರತಿರೂಪಗಳಾಗಿವೆ. ಇವುಗಳನ್ನು ಪ್ರಾಣಿಗಳ ಯಜ್ಞಗಳಿಂದ ಪರಿಶುದ್ಧಗೊಳಿಸಬೇಕಾಗಿದೆ. ಆದರೆ ಪರಲೋಕದಲ್ಲಿರುವ ನಿಜರೂಪಗಳಿಗಾಗಿ ಉತ್ತಮವಾದ ಯಜ್ಞಗಳನ್ನು ಅರ್ಪಿಸಬೇಕಾಗಿದೆ. 24 ಕ್ರಿಸ್ತನು ಮಹಾ ಪವಿತ್ರಸ್ಥಳದೊಳಕ್ಕೆ ಹೋದನು. ಆದರೆ ಆತನು ಮಾನವನಿರ್ಮಿತವಾದ ಮಹಾಪವಿತ್ರಸ್ಥಳಕ್ಕೆ ಹೋಗಲಿಲ್ಲ. ಈ ಮಹಾಪವಿತ್ರಸ್ಥಳವು ನಿಜವಾದದ್ದರ ಪ್ರತಿರೂಪ ಮಾತ್ರವಾಗಿದೆ. ಆತನು ಪರಲೋಕಕ್ಕೆ ಹೋದನು; ನಮಗೆ ಸಹಾಯ ಮಾಡುವುದಕ್ಕೋಸ್ಕರ ಈಗ ದೇವರ ಸನ್ನಿಧಿಯಲ್ಲಿದ್ದಾನೆ.

25 ಪ್ರಧಾನಯಾಜಕನು ವರ್ಷಕ್ಕೊಮ್ಮೆ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸುವಾಗ ಅರ್ಪಿಸುವುದಕ್ಕಾಗಿ ಪಶುರಕ್ತವನ್ನು ತನ್ನೊಡನೆ ತೆಗೆದುಕೊಂಡು ಹೋಗುತ್ತಿದ್ದನು. ಆದರೆ ಅವನು ತನ್ನ ಸ್ವಂತ ರಕ್ತವನ್ನು ಅರ್ಪಿಸುತ್ತಿರಲಿಲ್ಲ. ಕ್ರಿಸ್ತನು ಪರಲೋಕಕ್ಕೆ ಹೋದದ್ದು, ಪ್ರಧಾನ ಯಾಜಕನು ಮತ್ತೆಮತ್ತೆ ರಕ್ತವನ್ನು ಅರ್ಪಿಸಿದಂತೆ ತನ್ನನ್ನು ಮತ್ತೆಮತ್ತೆ ಅರ್ಪಿಸಿಕೊಳ್ಳುವುದಕ್ಕಾಗಿಯಲ್ಲ. 26 ಕ್ರಿಸ್ತನು ಅನೇಕ ಸಲ ತನ್ನನ್ನು ಅರ್ಪಿಸಿಕೊಂಡಿದ್ದರೆ, ಈ ಲೋಕವು ಸೃಷ್ಟಿಯಾದಂದಿನಿಂದ ಆತನು ಅನೇಕ ಸಲ ಸಂಕಟವನ್ನು ಅನಭವಿಸ ಬೇಕಾಗುತ್ತಿತ್ತು. ಆದರೆ ಕ್ರಿಸ್ತನು ಯುಗಾಂತ್ಯದಲ್ಲಿ ಪಾಪನಿವಾರಣೆ ಮಾಡುವುದಕ್ಕಾಗಿ ಬಂದು ಒಂದೇ ಸಲ ತನ್ನನ್ನು ಅರ್ಪಿಸಿಕೊಂಡನು.

27 ಪ್ರತಿಯೊಬ್ಬರೂ ಒಂದೇಸಾರಿ ಸಾಯುವರು. ಅನಂತರ ಅವರಿಗೆ ನ್ಯಾಯತೀರ್ಪಾಗುವುದು. 28 ಅದರಂತೆಯೇ ಕ್ರಿಸ್ತನು ಅನೇಕ ಜನರ ಪಾಪಗಳನ್ನು ತೆಗೆದುಹಾಕಲು ಒಂದು ಸಲ ಮಾತ್ರ ತನ್ನನ್ನು ಯಜ್ಞವನ್ನಾಗಿ ಅರ್ಪಿಸಿಕೊಂಡನು. ಕ್ರಿಸ್ತನು ಎರಡನೆ ಸಲ ಪ್ರತ್ಯಕ್ಷನಾಗುವುದು ಜನರ ಪಾಪನಿವಾರಣೆಗೋಸ್ಕರವಲ್ಲ. ತನಗಾಗಿ ಕಾಯುತ್ತಿರುವ ಜನರನ್ನು ಬಿಡುಗಡೆ ಮಾಡುವುದಕ್ಕಾಗಿಯಷ್ಟೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International