Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 10

ಬೆಳ್ಳಿಯ ತುತ್ತೂರಿಗಳು

10 ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ: “ನೀನು ಬೆಳ್ಳಿಯ ತಗಡುಗಳಿಂದ ಎರಡು ತುತ್ತೂರಿಗಳನ್ನು ಮಾಡಿಸಬೇಕು. ಜನಸಮೂಹದವರನ್ನು ಒಟ್ಟಾಗಿ ಕರೆಸುವುದಕ್ಕೂ ಅವರು ಯಾವಾಗ ಹೊರಡಬೇಕೆಂದು ಹೇಳುವುದಕ್ಕೂ ಇವುಗಳನ್ನು ಉಪಯೋಗಿಸಬೇಕು. ನೀನು ಎರಡು ತುತ್ತೂರಿಗಳನ್ನು ಲಘು ಸ್ವರದಿಂದ ಊದಿಸುವಾಗ ಜನಸಮೂಹದವರೆಲ್ಲರೂ ನಿನ್ನ ಹತ್ತಿರ ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿಯಲ್ಲಿ ಕೂಡಿರಬೇಕು. ಆದರೆ ನೀನು ಒಂದು ತುತ್ತೂರಿಯನ್ನು ಮಾತ್ರ ಊದಿಸಿದರೆ ಇಸ್ರೇಲಿನ ಕುಲಪ್ರಧಾನರಾದ ಮುಖ್ಯಸ್ಥರು ಮಾತ್ರ ನಿನ್ನನ್ನು ಸಂಧಿಸಲು ಬರಬೇಕು.

“ಜನರ ಕುಲಗಳು ಪಾಳೆಯದಿಂದ ಪ್ರಯಾಣ ಮಾಡಬೇಕೆಂಬುದಕ್ಕೆ ಸೂಚನೆಗಾಗಿ ತುತ್ತೂರಿಯನ್ನು ಆರ್ಭಟದಿಂದ ಊದಿಸಬೇಕು. ನೀವು ಮೊದಲನೆ ಸಲ ತುತ್ತೂರಿಯನ್ನು ಆರ್ಭಟದಿಂದ ಊದಿಸುವಾಗ ದೇವದರ್ಶನಗುಡಾರದ ಪೂರ್ವ ದಿಕ್ಕಿನಲ್ಲಿ ಪಾಳೆಯ ಹಾಕಿಕೊಂಡಿರುವ ಕುಲಗಳು ಹೊರಡಬೇಕು. ನೀವು ಎರಡನೆಯ ಸಲ ತುತ್ತೂರಿಗಳನ್ನು ಆರ್ಭಟ ಸ್ವರದಲ್ಲಿ ಊದಿಸುವಾಗ ದೇವದರ್ಶನಗುಡಾರದ ದಕ್ಷಿಣ ದಿಕ್ಕಿನಲ್ಲಿ ಪಾಳೆಯ ಹಾಕಿಕೊಂಡಿರುವ ಕುಲಗಳು ಹೊರಡಬೇಕು. ಆದರೆ ಜನಸಮುದಾಯವು ಕೂಡಿಬರಬೇಕಾದಾಗ ತುತ್ತೂರಿಗಳನ್ನು ಲಘುಸ್ವರದಲ್ಲಿ ಊದಿಸಬೇಕೇ ಹೊರತು ಆರ್ಭಟ ಸ್ವರದಲ್ಲಲ್ಲ. ಯಾಜಕರಾದ ಆರೋನನ ಪುತ್ರರು ಮಾತ್ರವೇ ಆ ತುತ್ತೂರಿಗಳನ್ನು ಊದಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮ.

“ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮ ಶತ್ರುಗಳನ್ನು ಎದುರಿಸುವುದಕ್ಕಾಗಿ ಯುದ್ಧಕ್ಕೆ ಹೊರಡುವಾಗ ತುತ್ತೂರಿಗಳನ್ನು ಆರ್ಭಟ ಸ್ವರದಲ್ಲಿ ಊದಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಜ್ಞಾಪಕಮಾಡಿಕೊಂಡು ಶತ್ರುಗಳಿಂದ ನಿಮ್ಮನ್ನು ರಕ್ಷಿಸುವನು. 10 ಇದಲ್ಲದೆ, ನೀವು ಉತ್ಸವಕಾಲಗಳಲ್ಲಿಯೂ ಹಬ್ಬಗಳಲ್ಲಿಯೂ ಅಮಾವಾಸ್ಯೆಯಲ್ಲಿಯೂ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುವಾಗ ಆ ತುತ್ತೂರಿಗಳನ್ನು ಊದಿಸಬೇಕು. ನಿಮ್ಮನ್ನು ಗಮನಿಸಬೇಕೆಂದು ಆ ತುತ್ತೂರಿ ಧ್ವನಿಗಳು ನಿಮ್ಮ ದೇವರಿಗೆ ನೆನಪನ್ನುಂಟುಮಾಡುತ್ತವೆ. ನೀವು ಇದನ್ನು ಮಾಡಬೇಕೆಂದು ನಾನು ಆಜ್ಞಾಪಿಸುತ್ತೇನೆ. ನಿಮ್ಮ ದೇವರಾದ ಯೆಹೋವನು ನಾನೇ.”

ಇಸ್ರೇಲರ ಪ್ರಯಾಣ

11 ಇಸ್ರೇಲರು ಈಜಿಪ್ಟನ್ನು ಬಿಟ್ಟ ನಂತರದ ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ಮೇಘವು ಒಡಂಬಡಿಕೆಯ ಗುಡಾರದಿಂದ ಮೇಲೆ ಎದ್ದಿತು. 12 ಆದ್ದರಿಂದ, ಇಸ್ರೇಲರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅವರು ಸೀನಾಯಿ ಮರುಭೂಮಿಯನ್ನು ಬಿಟ್ಟು ಮೇಘವು ಪಾರಾನ್ ಮರುಭೂಮಿಯಲ್ಲಿ ನಿಲ್ಲುವವರೆಗೆ ಪ್ರಯಾಣ ಮಾಡಿದರು. 13 ಯೆಹೋವನು ಮೋಶೆಯ ಮೂಲಕ ಕೊಟ್ಟ ಸೂಚನೆಯ ಪ್ರಕಾರ ಅವರು ಮೊಟ್ಟಮೊದಲನೆಯ ಸಲ ಪ್ರಯಾಣವನ್ನು ಆರಂಭಿಸಿದರು.

14 ಮೊದಲು ಯೆಹೂದ ಪಾಳೆಯದ ಮೂರು ದಂಡುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀನಾದಾಬನ ಮಗನಾದ ನಹಶೋನನು ಯೆಹೂದ ಕುಲದ ಸೇನಾಧಿಪತಿಯಾಗಿದ್ದನು. 15 ಚೂವಾರನ ಮಗನಾದ ನೆತನೇಲನು ಇಸ್ಸಾಕಾರನ ಕುಲದ ಸೇನಾಧಿಪತಿ. 16 ಹೇಲೋನನ ಮಗನಾದ ಎಲೀಯಾಬನು ಜೆಬುಲೂನ್ ಕುಲದ ಸೇನಾಧಿಪತಿ.

17 ಬಳಿಕ ಪವಿತ್ರ ಗುಡಾರವನ್ನು ಕೆಳಗಿಳಿಸಲಾಯಿತು. ಗೇರ್ಷೋನ್ ಮತ್ತು ಮೆರಾರೀ ಕುಲಗಳ ಗಂಡಸರು ಪವಿತ್ರ ಗುಡಾರವನ್ನು ಹೊತ್ತುಕೊಂಡು ಅವರ ಹಿಂದೆ ಹೊರಟರು.

18 ಅವರ ತರುವಾಯ ರೂಬೇನ್ ಕುಲದಿಂದ ಮುನ್ನಡೆಸಲ್ಪಟ್ಟ ಮೂರು ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಹೊರಟರು. ಶೆದೇಯೂರನ ಮಗನಾದ ಎಲೀಚೂರನು ರೂಬೇನ್ ಕುಲದ ಸೇನಾಧಿಪತಿಯಾಗಿದ್ದನು. 19 ಚೂರೀಷದ್ದೈನ ಮಗನಾದ ಶೆಲುಮೀಯೇಲನು ಸಿಮೆಯೋನ್ ಕುಲದ ಸೇನಾಧಿಪತಿ. 20 ದೆಗೂವೇಲನ ಮಗನಾದ ಎಲ್ಯಾಸಾಫನು ಗಾದ್ ಕುಲದ ಸೇನಾಧಿಪತಿ. 21 ಬಳಿಕ ಕೆಹಾತನ ಕುಲದವರು ಹೊರಟರು. ಅವರು ದೇವಸ್ಥಾನದ ಪವಿತ್ರವಸ್ತುಗಳನ್ನು ಹೊತ್ತುಕೊಂಡಿದ್ದರು. ಕೆಹಾತ್ಯರು ಪವಿತ್ರವಸ್ತುಗಳೊಡನೆ ಬರುವಷ್ಟರೊಳಗೆ ಇತರ ಲೇವಿಯರು ದೇವದರ್ಶನಗುಡಾರವನ್ನು ಎತ್ತಿ ನಿಲ್ಲಿಸಿದರು.

22 ಬಳಿಕ ಎಫ್ರಾಯೀಮ್ ಪಾಳೆಯದಿಂದ ಮೂರು ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀಹೂದನ ಮಗನಾದ ಎಲೀಷಾಮನು ಎಫ್ರಾಯೀಮ್ ಕುಲದ ಸೇನಾಧಿಪತಿ. 23 ಪೆದಾಚೂರನ ಮಗನಾದ ಗಮ್ಲೀಯೇಲನು ಮನಸ್ಸೆ ಕುಲದ ಸೇನಾಧಿಪತಿ. 24 ಗಿದ್ಯೋನಿಯ ಮಗನಾದ ಅಬೀದಾನನು ಬೆನ್ಯಾಮೀನ್ ಕುಲದ ಸೇನಾಧಿಪತಿ.

25 ಆಮೇಲೆ ಎಲ್ಲಾ ಕುಲಗಳ ಹಿಂಭಾಗದಲ್ಲಿ ದಾನ್ ಕುಲದಿಂದ ಮುನ್ನಡೆಸಲ್ಪಟ್ಟ ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀಷದ್ದೈನ ಮಗನಾದ ಅಹೀಗೆಜೆರನು ದಾನ್ ಕುಲದ ಸೇನಾಧಿಪತಿ. 26 ಆಶೇರನ ಕುಲಕ್ಕೆ ಒಕ್ರಾನನ ಮಗನಾದ ಪಗೀಯೇಲನು ಸೇನಾಧಿಪತಿಯಾಗಿದ್ದನು. 27 ನಫ್ತಾಲಿ ಕುಲಕ್ಕೆ ಏನಾನನ ಮಗನಾದ ಅಹೀರನು ಸೇನಾಧಿಪತಿಯಾಗಿದ್ದನು. 28 ಈ ರೀತಿಯಾಗಿ ಇಸ್ರೇಲರು ತಮ್ಮ ಗುಂಪುಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡಿದರು.

29 ಹೋಬಾಬನು ಮಿದ್ಯಾನ್ಯನಾದ ರೆಗೂವೇಲನ ಮಗನು. ರೆಗೂವೇಲನು ಮೋಶೆಯ ಮಾವ. ಮೋಶೆಯು ಹೋಬಾಬನಿಗೆ, “ದೇವರು ನಮಗೆ ಕೊಡುತ್ತೇನೆಂದು ವಾಗ್ದಾನ ಮಾಡಿದ ದೇಶಕ್ಕೆ ನಾವು ಪ್ರಯಾಣ ಮಾಡುತ್ತಿದ್ದೇವೆ. ನಮ್ಮೊಂದಿಗೆ ಬಾ. ನೀನು ನಮ್ಮೊಂದಿಗೆ ಉದ್ದಾರವಾಗುವೆ; ಯಾಕೆಂದರೆ ಯೆಹೋವನು ಇಸ್ರೇಲರಿಗೆ ಒಳ್ಳೆಯವುಗಳನ್ನು ವಾಗ್ದಾನ ಮಾಡಿದ್ದಾನೆ.”

30 ಆದರೆ ಹೋಬಾಬನು, “ಇಲ್ಲ. ನಾನು ನಿಮ್ಮೊಂದಿಗೆ ಬರುವುದಿಲ್ಲ. ನಾನು ನನ್ನ ದೇಶಕ್ಕೂ ನನ್ನ ಜನರ ಬಳಿಗೂ ಹೋಗುವೆನು” ಎಂದು ಉತ್ತರಕೊಟ್ಟನು.

31 ಆಗ ಮೋಶೆ, “ದಯಮಾಡಿ ನಮ್ಮನ್ನು ಬಿಟ್ಟು ಹೋಗಬೇಡ. ನಾವು ಮರುಭೂಮಿಯಲ್ಲಿ ಎಲ್ಲಿ ಪಾಳೆಯ ಮಾಡಿಕೊಳ್ಳಬಹುದೆಂಬುದು ನಿನಗೆ ಗೊತ್ತಿದೆ. ನೀನು ನಮ್ಮ ಮಾರ್ಗದರ್ಶಕನಾಗಿರಬಹುದು. 32 ನೀನು ನಮ್ಮೊಂದಿಗೆ ಬಂದರೆ, ಯೆಹೋವನು ನಮಗೆ ಕೊಡುವ ಎಲ್ಲಾ ಒಳ್ಳೆಯ ವಸ್ತುಗಳಲ್ಲಿ ನಿನಗೆ ಪಾಲು ಕೊಡುವೆವು” ಎಂದು ಹೇಳಿದನು.

33 ಅವರು ಯೆಹೋವನ ಬೆಟ್ಟದಿಂದ ಹೊರಟು ಮೂರು ದಿನ ಪ್ರಯಾಣ ಮಾಡಿದರು. ಲೇವಿಯರು ಹೊತ್ತುಕೊಂಡಿದ್ದ ಯೆಹೋವನ ಒಡಂಬಡಿಕೆ ಪೆಟ್ಟಿಗೆಯು ಮತ್ತೆ ಪಾಳೆಯ ಹಾಕಲು ಯೋಗ್ಯವಾದ ಸ್ಥಳವನ್ನು ಎದುರು ನೋಡುತ್ತಾ ಜನರ ಮುಂದೆ ಮೂರು ದಿನಗಳವರೆಗೆ ಹೋಯಿತು. 34 ಅವರು ಪಾಳೆಯದೊಡನೆ ಹೊರಟಾಗ ಪ್ರತಿದಿನವೂ ಯೆಹೋವನ ಮೋಡವು ಅವರ ಮೇಲಿರುತ್ತಿತ್ತು.

35 ಜನರು ಪವಿತ್ರ ಪೆಟ್ಟಿಗೆಯನ್ನು ಎತ್ತಿಕೊಂಡು ಹೊರಡುವಾಗ, ಮೋಶೆಯು,

“ಯೆಹೋವನೇ, ಎದ್ದೇಳು!
    ನಿನ್ನ ವೈರಿಗಳು ಚದರಿಹೋಗಲಿ,
    ನಿನ್ನ ಶತ್ರುಗಳು ಬೆನ್ನುಕೊಟ್ಟು ಓಡಿಹೋಗಲಿ”

ಎಂದು ಹೇಳುತ್ತಿದ್ದನು.

36 ಪವಿತ್ರ ಪೆಟ್ಟಿಗೆಯು ಕೆಳಗಿಳಿಸಲ್ಪಟ್ಟಾಗ, ಮೋಶೆಯು,

“ಯೆಹೋವನೇ ಇಸ್ರೇಲರ ಲಕ್ಷಾಂತರ ಕುಟುಂಬಗಳ
    ಬಳಿಗೆ ಹಿಂತಿರುಗಿ ಬಾ”

ಎಂದು ಹೇಳುತ್ತಿದ್ದನು.

ಕೀರ್ತನೆಗಳು 46-47

ರಚನೆಗಾರರು: ಕೋರಹೀಯರು.

46 ದೇವರು ನಮಗೆ ಆಶ್ರಯವೂ ಬಲವೂ ಆಗಿದ್ದಾನೆ.
    ಆತನು ಆಪತ್ತಿನಲ್ಲಿ ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿರುವನು.
ಆದ್ದರಿಂದ ಭೂಮಿಯು ನಡುಗಿದರೂ ಬೆಟ್ಟಗಳು
    ಸಮುದ್ರದೊಳಗೆ ಮುಳುಗಿಹೋದರೂ ನಮಗೇನೂ ಭಯವಿಲ್ಲ.
ಸಮುದ್ರಗಳು ಭೋರ್ಗರೆಯುತ್ತಾ ನೊರೆಕಾರಿದರೂ
    ಅವುಗಳ ಅಲ್ಲೋಲಕಲ್ಲೋಲಗಳಿಂದ ಬೆಟ್ಟಗಳು ನಡುಗಿದರೂ ನಮಗೇನೂ ಭಯವಿಲ್ಲ.

ಒಂದು ನದಿ ಅದೆ; ಅದರ ಕಾಲುವೆಗಳು ಮಹೋನ್ನತನಾದ ದೇವರ ಪವಿತ್ರ ಪಟ್ಟಣವಾಗಿರುವ
    ದೇವನಗರವನ್ನು ಸಂತೋಷಪಡಿಸುತ್ತದೆ.
ದೇವರು ಆ ಪಟ್ಟಣದಲ್ಲಿದ್ದಾನೆ, ಆದ್ದರಿಂದ ಅದೆಂದಿಗೂ ನಾಶವಾಗುವುದಿಲ್ಲ.
    ಸೂರ್ಯೋದಯಕ್ಕಿಂತ ಮೊದಲೇ ದೇವರು ಅದರ ಸಹಾಯಕ್ಕಾಗಿ ಬರುವನು.
ಆತನು ಗರ್ಜಿಸಲು, ಜನಾಂಗಗಳು ಭಯದಿಂದ ನಡುಗುತ್ತವೆ, ರಾಷ್ಟ್ರಗಳು ಬಿದ್ದುಹೋಗುತ್ತವೆ;
    ಭೂಮಿಯು ಕರಗಿಹೋಗುವುದು.
ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮ್ಮ ಆಶ್ರಯದುರ್ಗವಾಗಿದ್ದಾನೆ.
ಬನ್ನಿರಿ, ಯೆಹೋವನ ಕಾರ್ಯಗಳನ್ನು ನೋಡಿರಿ;
    ಭೂಮಿಯ ಮೇಲೆ ಆತನು ಮಾಡುತ್ತಿರುವ ಭಯಂಕರವಾದ ಕಾರ್ಯಗಳನ್ನು ನೋಡಿರಿ.
ಇಡೀ ಪ್ರಪಂಚದಲ್ಲಿ ಆತನು ಯುದ್ಧವನ್ನು ನಿಲ್ಲಿಸುವನು;
    ಬಿಲ್ಲುಗಳನ್ನೂ ಗುರಾಣಿಗಳನ್ನೂ[a] ಮುರಿದುಹಾಕುವನು; ಗುರಾಣಿಗಳನ್ನು ಬೆಂಕಿಯಿಂದ ಸುಟ್ಟುಹಾಕುವನು.

10 ದೇವರು ಹೀಗೆನ್ನುವನು: “ಹೋರಾಡುವುದನ್ನು ನಿಲ್ಲಿಸಿ, ನಾನೇ ದೇವರೆಂಬುದನ್ನು ಕಲಿತುಕೊಳ್ಳಿ!
    ನಾನು ಜನಾಂಗಗಳನ್ನು ಸೋಲಿಸುವೆನು!
    ಇಡೀ ಲೋಕವನ್ನು ಹತೋಟಿಗೆ ತೆಗೆದುಕೊಳ್ಳುವೆನು!”

11 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ.

ರಚನೆಗಾರರು: ಕೋರಹೀಯರು.

47 ಸರ್ವಜನಾಂಗಗಳೇ, ಚಪ್ಪಾಳೆ ತಟ್ಟಿರಿ;
    ದೇವರಿಗೆ ಆನಂದಘೋಷ ಮಾಡಿರಿ!
ಮಹೋನ್ನತನಾದ ಯೆಹೋವನು ಭಯಂಕರನಾಗಿದ್ದಾನೆ.
    ಆತನು ಭೂಲೋಕಕ್ಕೆಲ್ಲಾ ಮಹಾರಾಜನಾಗಿದ್ದಾನೆ.
ಆತನು ಜನಾಂಗಗಳನ್ನು ಸೋಲಿಸಲು ನಮಗೆ ಸಹಾಯಮಾಡಿ
    ಅವುಗಳನ್ನು ನಮಗೆ ಅಧೀನಪಡಿಸಿದ್ದಾನೆ.
ದೇವರು ಈ ದೇಶವನ್ನು ನಮಗೋಸ್ಕರವಾಗಿ ಆರಿಸಿಕೊಂಡನು;
    ತನಗೆ ಪ್ರಿಯರಾದ ಯಾಕೋಬನ ವಂಶಸ್ಥರಿಗಾಗಿ ಆತನು ಮನೋಹರವಾದ ಈ ದೇಶವನ್ನು ಆರಿಸಿಕೊಂಡನು.

ಯೆಹೋವನು ಆನಂದಘೋಷದೊಡನೆಯೂ
    ತುತ್ತೂರಿಗಳ ಧ್ವನಿಯೊಡನೆಯೂ ಸಿಂಹಾಸನಾರೂಢನಾಗುವನು.
ದೇವರನ್ನು ಸಂಕೀರ್ತಿಸಿರಿ, ಕೀರ್ತಿಸಿರಿ.
    ನಮ್ಮ ರಾಜನನ್ನು ಸಂಕೀರ್ತಿಸಿರಿ, ಸಂಕೀರ್ತಿಸಿರಿ.
ದೇವರು ಇಡೀಲೋಕಕ್ಕೆ ರಾಜನಾಗಿದ್ದಾನೆ;
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
ದೇವರು ತನ್ನ ಪರಿಶುದ್ಧ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ;
    ದೇವರು ಎಲ್ಲಾ ಜನಾಂಗಗಳನ್ನು ಆಳುವನು.
ಜನಾಂಗಗಳ ನಾಯಕರು
    ಅಬ್ರಹಾಮನ ದೇವಜನರೊಡನೆ ಕೂಡಿಬರುವರು.
ಎಲ್ಲಾ ಜನಾಂಗಗಳ ಎಲ್ಲಾ ನಾಯಕರುಗಳು ದೇವರಿಗೆ ಅಧೀನರಾಗಿದ್ದಾರೆ.
    ದೇವರು ಅವರಿಗೆ ಸರ್ವಾಧಿಕಾರಿ!

ಪರಮ ಗೀತ 8

ನೀನು ನನ್ನ ಅಣ್ಣನ ಹಾಗಿದ್ದರೆ, ತಾಯಿ ಹಾಲನ್ನು ಕುಡಿಯುವ ಮಗುವಿನಂತೆ ಇದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು.
    ನಾನು ನಿನ್ನನ್ನು ಹೊರಗೆ ಕಂಡು
ನಿನಗೆ ಮುದ್ದಿಡುತ್ತಿದ್ದೆನು;
    ಆಗ ಯಾರೂ ನನ್ನ ಮೇಲೆ ದೋಷಾರೋಪಣೆ ಮಾಡುತ್ತಿರಲಿಲ್ಲ!
ನಾನು ನಿನ್ನನ್ನು ನಡೆಸಿಕೊಂಡು
    ನನ್ನ ತಾಯಿಯು ನನಗೆ ಉಪದೇಶಿಸಿದ ಕೋಣೆಗೆ ಬರುತ್ತಿದ್ದೆನು.
ನಾನು ನಿನಗೆ ಸಾಂಬಾರ ಪದಾರ್ಥಗಳನ್ನು ಸೇರಿಸಿದ ದ್ರಾಕ್ಷಾರಸವನ್ನು,
    ದಾಳಿಂಬೆ ಹಣ್ಣಿನ ರಸವನ್ನು ಕುಡಿಯಲು ಕೊಡುತ್ತಿದ್ದೆನು.

ಪ್ರಿಯತಮೆ ಸ್ತ್ರೀಯರಿಗೆ

ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ
    ನಿನ್ನ ಬಲಗೈ ನನ್ನನ್ನು ಅಪ್ಪಿಕೊಳ್ಳುತ್ತಿತ್ತು.

ಜೆರುಸಲೇಮಿನ ಸ್ತ್ರೀಯರೇ,
    ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸುವುದಿಲ್ಲವೆಂದು
    ನನಗೆ ಪ್ರಮಾಣ ಮಾಡಿರಿ.

ಜೆರುಸಲೇಮಿನ ಸ್ತ್ರೀಯರು

ತನ್ನ ಪ್ರಿಯನನ್ನು ಒರಗಿಕೊಂಡು
    ಅಡವಿಯಿಂದ ಬರುತ್ತಿರುವ ಈ ಯುವತಿ ಯಾರು?

ಪ್ರಿಯತಮೆ ಪ್ರಿಯಕರನಿಗೆ

ನಾನು ನಿನ್ನನ್ನು ಸೇಬಿನ ಮರದ ಕೆಳಗೆ ಎಬ್ಬಿಸಿದೆನು.
    ನಿನ್ನ ತಾಯಿಯು ನಿನ್ನನ್ನು ಗರ್ಭಧರಿಸಿದ್ದು ಅಲ್ಲಿಯೇ.
    ನೀನು ಹುಟ್ಟಿದ್ದೂ ಅಲ್ಲಿಯೇ.
ನನ್ನನ್ನು ನಿನ್ನ ಹೃದಯದ ಮೇಲೆ ಮುದ್ರೆಯನ್ನಾಗಿಯೂ,
    ನಿನ್ನ ಬೆರಳಿನಲ್ಲಿರುವ ಮುದ್ರೆಯೊತ್ತಿದ ಉಂಗುರದಂತೆಯೂ ಇಟ್ಟುಕೋ.
ಪ್ರೀತಿಯು ಮರಣದಷ್ಟೇ ಬಲಿಷ್ಠ;
    ಕಾಮೋದ್ರೇಕವು ಸಮಾಧಿಯಷ್ಟೇ ಬಲಿಷ್ಠ.
ಅದರ ಜ್ವಾಲೆಗಳು ಧಗಧಗಿಸುವ ಬೆಂಕಿ.
    ಅದು ಅತಿ ತೀಕ್ಷ್ಣವಾದ ಅಗ್ನಿಯೇ.
ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು;
    ನದಿಗಳು ಪ್ರೀತಿಯನ್ನು ಮುಳುಗಿಸಲಾರವು.
ಒಬ್ಬನು ಪ್ರೀತಿಗೋಸ್ಕರ ತನ್ನ ಆಸ್ತಿಯನ್ನೆಲ್ಲ ಕೊಟ್ಟುಬಿಟ್ಟರೆ
    ಅವನು ಕೇವಲ ತಿರಸ್ಕಾರಕ್ಕೆ ಗುರಿಯಾಗುವನು.

ಪ್ರಿಯತಮೆಯ ಸಹೋದರರು

ನಮಗೆ ಚಿಕ್ಕ ತಂಗಿಯಿದ್ದಾಳೆ,
    ಆಕೆಯ ಸ್ತನಗಳು ಇನ್ನೂ ಬೆಳೆದಿಲ್ಲ.
ಆಕೆಯ ನಿಶ್ಚಿತಾರ್ಥ ದಿನದಲ್ಲಿ
    ನಮ್ಮ ತಂಗಿಗೋಸ್ಕರ ನಾವೇನು ಮಾಡಬೇಕು?

ಆಕೆ ಕೋಟೆಯಾಗಿದ್ದರೆ
    ಅದರ ಮೇಲೆ ಬೆಳ್ಳಿಯ ಗೋಪುರಗಳನ್ನು ಕಟ್ಟುತ್ತಿದ್ದೆವು.
ಆಕೆ ಬಾಗಿಲಾಗಿದ್ದರೆ,
    ಶ್ರೇಷ್ಠವಾದ ದೇವದಾರು ಮರದ ಹಲಗೆಗಳಿಂದ ಅದನ್ನು ಹೊದಿಸುತ್ತಿದ್ದೆವು.

ಪ್ರಿಯತಮೆಯು ಸಹೋದರರಿಗೆ ಕೊಡುವ ಉತ್ತರ

10 ನಾನು ಕೋಟೆ;
    ನನ್ನ ಸ್ತನಗಳೇ ಅದರ ಗೋಪುರಗಳು.
    ಹೀಗೆ ಸೊಲೊಮೋನನು ನನ್ನಲ್ಲಿ ತೃಪ್ತನಾದನು.

ಪ್ರಿಯಕರ

11 ಸೊಲೊಮೋನನಿಗೆ ಬಾಲ್ಹಾಮೋನಿನಲ್ಲಿ ದ್ರಾಕ್ಷಿತೋಟವಿತ್ತು.
    ಅವನು ಅದನ್ನು ರೈತರಿಗೆ ಒಪ್ಪಿಸಿದನು.
ಪ್ರತಿಯೊಬ್ಬನು ಹಣ್ಣಿಗಾಗಿ
    ಒಂದು ಸಾವಿರ ಬೆಳ್ಳಿನಾಣ್ಯಗಳನ್ನು ಕೊಡಬೇಕಿತ್ತು.

12 ಆದರೆ ನನ್ನ ಸ್ವಂತ ದ್ರಾಕ್ಷಿತೋಟವು ನನ್ನೆದುರಿನಲ್ಲಿದೆ.
    ಸೊಲೊಮೋನನೇ, ಆ ಸಾವಿರ ಬೆಳ್ಳಿನಾಣ್ಯಗಳು ನಿನಗಿರಲಿ.
    ತೋಟವನ್ನು ನೋಡಿಕೊಳ್ಳುವವರಿಗೆ ಇನ್ನೂರು ಬೆಳ್ಳಿನಾಣ್ಯಗಳಿರಲಿ.

ಪ್ರಿಯಕರ ಪ್ರಿಯತಮೆಗೆ

13 ಉದ್ಯಾನವನಗಳಲ್ಲಿ ವಾಸಿಸುವವಳೇ,
    ಗೆಳೆಯರು ನಿನ್ನ ಸ್ವರ ಕೇಳಬೇಕೆಂದಿದ್ದಾರೆ, ನನಗೂ ಸಹ ಕೇಳಿಸಲಿ.

ಪ್ರಿಯತಮೆ ಪ್ರಿಯಕರನಿಗೆ

14 ನನ್ನ ಪ್ರಿಯನೇ, ತ್ವರೆಪಡು.
    ಸುಗಂಧಸಸ್ಯ ಪರ್ವತಗಳ ಮೇಲೆ ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇರು.

ಇಬ್ರಿಯರಿಗೆ 8

ಯೇಸುವೇ ನಮ್ಮ ಪ್ರಧಾನಯಾಜಕನು

ನಾವು ಹೇಳುವ ಸಂಗತಿಗಳಲ್ಲಿ ಮುಖ್ಯವಾದದ್ದೇನೆಂದರೆ, ನಿಮಗೆ ಹೇಳಿದಂತೆಯೇ ನಮಗೊಬ್ಬ ಪ್ರಧಾನ ಯಾಜಕನಿದ್ದಾನೆ. ಆತನು ಪರಲೋಕದಲ್ಲಿ ದೇವರ ಸಿಂಹಾಸನದ ಬಲಭಾಗದಲ್ಲಿ ಈಗ ಕುಳಿತುಕೊಂಡಿದ್ದಾನೆ. ಆತನು ಮಹಾ ಪವಿತ್ರಸ್ಥಳದಲ್ಲಿ ಅಂದರೆ ಜನರಿಂದ ನಿರ್ಮಿತವಾಗದೆ, ದೇವರಿಂದಲೇ ನಿರ್ಮಿಸಲ್ಪಟ್ಟಿರುವ ನಿಜವಾದ ದೇವದರ್ಶನ ಗುಡಾರದಲ್ಲಿ ಸೇವೆಮಾಡುತ್ತಿದ್ದಾನೆ.

ಪ್ರತಿಯೊಬ್ಬ ಪ್ರಧಾನಯಾಜಕನೂ ದೇವರಿಗೆ ಯಜ್ಞಗಳನ್ನೂ ಕಾಣಿಕೆಗಳನ್ನೂ ಅರ್ಪಿಸಬೇಕು. ಆದ್ದರಿಂದ ನಮ್ಮ ಪ್ರಧಾನ ಯಾಜಕನೂ ದೇವರಿಗೆ ಏನನ್ನಾದರೂ ಅರ್ಪಿಸಲೇಬೇಕು. ಆತನು ಇನ್ನೂ ಭೂಮಿಯ ಮೇಲೆ ವಾಸಮಾಡುತ್ತಿದ್ದರೆ ಯಾಜಕನಾಗಿರುತ್ತಿರಲಿಲ್ಲ. ಕಾರಣವೇನೆಂದರೆ, ಧರ್ಮಶಾಸ್ತ್ರದ ಪ್ರಕಾರ ದೇವರಿಗೆ ಕಾಣಿಕೆಗಳನ್ನು ಅರ್ಪಿಸುವ ಯಾಜಕರು ಈಗಾಗಲೇ ಇಲ್ಲಿದ್ದಾರೆ. ಈ ಯಾಜಕರು ಮಾಡುವ ಕಾರ್ಯಗಳು ಪರಲೋಕದಲ್ಲಿನ ಕಾರ್ಯಗಳ ನಿಜವಾದ ಪ್ರತಿರೂಪಗಳೂ ಛಾಯೆಗಳೂ ಆಗಿವೆ. ಮೋಶೆಯು ದೇವದರ್ಶನ ಗುಡಾರವನ್ನು ನಿರ್ಮಿಸಲು ಸಿದ್ಧನಾದಾಗ ದೇವರು ಅವನಿಗೆ, “ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಎಚ್ಚರಿಕೆಯಿಂದ ನಿರ್ಮಿಸಬೇಕು”(A) ಎಂದು ಹೇಳಿದ್ದು ಈ ಕಾರಣದಿಂದಲೇ. ಆದರೆ ಯೇಸುವಿಗೆ ಕೊಡಲ್ಪಟ್ಟ ಕಾರ್ಯವು ಆ ಯಾಜಕರಿಗೆ ಕೊಡಲ್ಪಟ್ಟ ಕಾರ್ಯಕ್ಕಿಂತ ಅತ್ಯಂತ ಮಹತ್ವದ್ದಾಗಿದೆ. ಇದೇ ರೀತಿಯಲ್ಲಿ ಯೇಸು ತನ್ನ ಜನರಿಗಾಗಿ ದೇವರಿಂದ ತಂದ ಹೊಸ ಒಡಂಬಡಿಕೆಯು ಹಳೆಯದಕ್ಕಿಂತ ಶ್ರೇಷ್ಠವಾಗಿದೆ. ಉತ್ತಮ ಸಂಗತಿಗಳ ವಾಗ್ದಾನದ ಆಧಾರದ ಮೇಲೆ ಹೊಸ ಒಡಂಬಡಿಕೆಯು ಸ್ಥಾಪಿತವಾಗಿದೆ.

ಮೊದಲನೆ ಒಡಂಬಡಿಕೆ ಏನೂ ದೋಷವಿಲ್ಲದ್ದಾಗಿದ್ದರೆ, ಎರಡನೆ ಒಡಂಬಡಿಕೆಯ ಅಗತ್ಯವೇ ಇರಲಿಲ್ಲ. ಆದರೆ ದೇವರು ಜನರಲ್ಲಿ ಯಾವುದೋ ದೋಷವನ್ನು ಕಂಡು ಹೇಳಿದ್ದೇನೆಂದರೆ:

“ಇಸ್ರೇಲರೊಡನೆಯೂ ಯೆಹೂದ್ಯರೊಡನೆಯೂ
    ನಾನು ಹೊಸ ಒಡಂಬಡಿಕೆ ಮಾಡಿಕೊಳ್ಳುವ ಕಾಲ ಬರುತ್ತಿದೆ ಎಂದು ಪ್ರಭು ಹೇಳುತ್ತಾನೆ.
ಅದು, ಅವರ ಪಿತೃಗಳೊಡನೆ ನಾನು ಮಾಡಿಕೊಂಡ ಒಡಂಬಡಿಕೆಯಂತಿರುವುದಿಲ್ಲ.
    ಅವರನ್ನು ಈಜಿಪ್ಟಿನಿಂದ ಕೈಹಿಡಿದು ಹೊರಗೆ ಕರೆದುಕೊಂಡು ಬಂದ ಕಾಲದಲ್ಲಿ ಅವರೊಡನೆ ಆ ಒಡಂಬಡಿಕೆಯನ್ನೂ ಮಾಡಿಕೊಂಡೆನು.
ಆದರೆ ಅವರು ಅದನ್ನು ಅನುಸರಿಸಲಿಲ್ಲವಾದ್ದರಿಂದ
    ಅವರಿಗೆ ವಿಮುಖನಾದೆನು ಎಂದು ಪ್ರಭು ಹೇಳುತ್ತಾನೆ.
10 ನಾನು ಇಸ್ರೇಲರೊಡನೆ ಮುಂದಿನ ದಿನಗಳಲ್ಲಿ ಮಾಡಿಕೊಳ್ಳುವ
    ಹೊಸ ಒಡಂಬಡಿಕೆಯು ಇಂತಿದೆ:
ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇರಿಸುವೆನು;
    ಅವರ ಹೃದಯದ ಮೇಲೆ ಬರೆಯುವೆನು;
ನಾನು ಅವರ ದೇವರಾಗಿರುವೆನು;
    ಅವರು ನನ್ನ ಜನರಾಗಿರುವರು.
11 ಒಬ್ಬನು ಸಹೋದರನಿಗಾಗಲಿ, ಬೇರೆಯವರಿಗಾಗಲಿ ಬೋಧಿಸಬೇಕಾಗಿರುವುದಿಲ್ಲ;
ದೇವರನ್ನು ತಿಳಿದುಕೊಳ್ಳಿ ಎಂದು ಹೇಳಬೇಕಾಗಿರುವುದಿಲ್ಲ. ಏಕೆಂದರೆ ಅತ್ಯಂತ ಪ್ರಮುಖರನ್ನು ಮೊದಲುಗೊಂಡು ಅತ್ಯಂತ ಅಲ್ಪರಾದವರೆಲ್ಲರೂ ನನ್ನನ್ನು ತಿಳಿದುಕೊಂಡಿರುವರು.
12 ಅವರು ನನ್ನ ವಿರುದ್ಧವಾಗಿ ಮಾಡುವ ಎಲ್ಲಾ ಕೆಟ್ಟಕಾರ್ಯಗಳನ್ನು ಕ್ಷಮಿಸುವೆನು;
    ಅವರ ಪಾಪಗಳನ್ನು ನೆನಪಿಗೆ ತಂದುಕೊಳ್ಳುವುದಿಲ್ಲ.”(B)

13 ದೇವರು ಇದನ್ನು ಹೊಸ ಒಡಂಬಡಿಕೆ ಎಂದು ಕರೆದನು. ಆದ್ದರಿಂದ ಮೊದಲನೆ ಒಡಂಬಡಿಕೆಯನ್ನು ದೇವರು ಹಳೆಯದಾಗಿ ಮಾಡಿದನು. ಯಾವುದು ಹಳೆಯದಾಗಿ ಉಪಯೋಗಕ್ಕೆ ಬಾರದಾಗುತ್ತದೋ ಅದು ಅದೃಶ್ಯವಾಗುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International