M’Cheyne Bible Reading Plan
ಪಸ್ಕಹಬ್ಬ
9 ಇಸ್ರೇಲರು ಈಜಿಪ್ಟ್ ದೇಶವನ್ನು ಬಿಟ್ಟುಬಂದ ನಂತರ ಎರಡನೆ ವರ್ಷದ ಮೊದಲನೆಯ ತಿಂಗಳಲ್ಲಿ ಸೀನಾಯಿ ಮರುಭೂಮಿಯಲ್ಲಿ ಯೆಹೋವನು ಮೋಶೆಯೊಡನೆ ಮಾತಾಡಿದನು. ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಇಸ್ರೇಲರು ನೇಮಕವಾದ ಕಾಲದಲ್ಲಿ ಪಸ್ಕಹಬ್ಬವನ್ನು ಆಚರಿಸಬೇಕು. 3 ಅವರು ಈ ತಿಂಗಳ ಹದಿನಾಲ್ಕನೆಯ ದಿನದ ನಸುಸಂಜೆಯ ವೇಳೆ ಪಸ್ಕದ ಊಟವನ್ನು ಮಾಡಬೇಕು. ಅವರು ಇದನ್ನು ಪಸ್ಕಹಬ್ಬದ ಎಲ್ಲಾ ನಿಯಮಗಳ ಪ್ರಕಾರ ನೇಮಕವಾದ ಕಾಲದಲ್ಲಿ ಮಾಡಬೇಕು.”
4 ಆದ್ದರಿಂದ ಮೋಶೆ ಇಸ್ರೇಲರಿಗೆ, ಪಸ್ಕಹಬ್ಬವನ್ನು ಆಚರಿಸಬೇಕೆಂದು ಹೇಳಿದನು. 5 ಜನರು ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ನಸುಸಂಜೆಯ ವೇಳೆಯಲ್ಲಿ ಸೀನಾಯಿ ಮರುಭೂಮಿಯಲ್ಲಿ ಇದನ್ನು ಆಚರಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಪ್ರತಿಯೊಂದನ್ನೂ ಮಾಡಿದರು.
6 ಆದರೆ ಕೆಲವು ಜನರು ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿ ಆ ದಿನದಲ್ಲಿ ಪಸ್ಕಹಬ್ಬವನ್ನು ಆಚರಿಸಲಾಗಲಿಲ್ಲ. ಆದ್ದರಿಂದ ಅವರು ಆ ದಿನ ಮೋಶೆ ಆರೋನರ ಬಳಿಗೆ ಬಂದು, 7 “ನಾವು ಮನುಷ್ಯ ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿದ್ದೇವೆ. ಆದರೆ ನೇಮಕವಾದ ಕಾಲದಲ್ಲಿ ಯೆಹೋವನ ಪಸ್ಕಹಬ್ಬದ ಯಜ್ಞವನ್ನು ಇತರ ಇಸ್ರೇಲರೊಡನೆ ಅರ್ಪಿಸುವುದಕ್ಕೆ ಸಾಧ್ಯವಿಲ್ಲವೇ?” ಎಂದು ಕೇಳಿದರು.
8 ಮೋಶೆಯು ಅವರಿಗೆ, “ಇಲ್ಲೇ ಇರಿ. ಇದರ ವಿಷಯದಲ್ಲಿ ಯೆಹೋವನು ಏನು ಹೇಳುತ್ತಾನೆಂದು ನಾನು ಆತನನ್ನು ವಿಚಾರಿಸುತ್ತೇನೆ” ಎಂದು ಹೇಳಿದನು.
9 ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 10 “ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸು: ನಿಮ್ಮಲ್ಲಿಯಾಗಲಿ ನಿಮ್ಮ ಸಂತತಿಯವರಲ್ಲಿಯಾಗಲಿ ಮನುಷ್ಯಶವ ಸೋಂಕಿದ್ದರಿಂದ ಅಶುದ್ಧರಾದವರೂ ದೂರಪ್ರಯಾಣದಲ್ಲಿರುವವರೂ ಸಹ ಯೆಹೋವನ ಪಸ್ಕಹಬ್ಬವನ್ನು ಆಚರಿಸಲೇಬೇಕು. 11 ಅಂಥವರು ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದ ನಸುಸಂಜೆ ವೇಳೆಯಲ್ಲಿ ಪಸ್ಕಹಬ್ಬವನ್ನು ಆಚರಿಸಬೇಕು. ಆ ಸಮಯದಲ್ಲಿ ಅವರು ಪಸ್ಕದ ಕುರಿಮರಿಯ ಮಾಂಸವನ್ನು ಹುಳಿಯಿಲ್ಲದ ರೊಟ್ಟಿಗಳೊಡನೆ ಮತ್ತು ಕಹಿಯಾದ ಸೊಪ್ಪುಗಳೊಡನೆ ಊಟಮಾಡಬೇಕು. 12 ಅದರಲ್ಲಿ ಯಾವುದನ್ನೂ ಮರುದಿನದವರೆಗೆ ಇಡಬಾರದು. ಅವರು ಅದೆಲ್ಲವನ್ನು ತಿಂದುಬಿಡಬೇಕು. ಆ ಕುರಿಮರಿಯ ಎಲುಬುಗಳನ್ನು ಮುರಿಯಬಾರದು. ಅವರು ಪಸ್ಕಹಬ್ಬದ ವಿಷಯವಾಗಿ ನೇಮಕವಾಗಿರುವ ನಿಯಮಗಳ ಪ್ರಕಾರವೇ ಅದನ್ನು ಆಚರಿಸಬೇಕು. 13 ಆದರೆ ಯಾವನಾದರೂ ಶುದ್ಧನಾಗಿದ್ದರೂ ಪ್ರಯಾಣದಲ್ಲಿಲ್ಲದಿದ್ದರೂ ಪಸ್ಕಹಬ್ಬವನ್ನು ಆಚರಿಸದಿದ್ದರೆ, ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು. ಅವನು ಯೆಹೋವನಿಂದ ನೇಮಕವಾದ ಯಜ್ಞವನ್ನು ಸರಿಯಾದ ಕಾಲದಲ್ಲಿ ಸಮರ್ಪಿಸದೆ ಹೋದದ್ದರಿಂದ ಅವನು ದೋಷಿಯಾಗಿದ್ದಾನೆ ಮತ್ತು ಅವನಿಗೆ ಶಿಕ್ಷೆಯಾಗಬೇಕು.
14 “ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯದೇಶಸ್ಥನು ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ, ಅದರ ವಿಷಯವಾದ ನಿಯಮಗಳ ಪ್ರಕಾರವೇ ಅದನ್ನು ಆಚರಿಸಬೇಕು. ಪರದೇಶದವನಿಗೂ ಸ್ವದೇಶದವನಿಗೂ ಒಂದೇ ವಿಧಿಯಿರಬೇಕು.”
ಮೇಘಸ್ತಂಭ ಮತ್ತು ಅಗ್ನಿಸ್ತಂಭ
15 ಇಸ್ರೇಲರು ಒಡಂಬಡಿಕೆಯ ಗುಡಾರವಾದ ಪವಿತ್ರ ಗುಡಾರವನ್ನು ಎತ್ತಿ ನಿಲ್ಲಿಸಿದ ದಿನದಲ್ಲಿ ಮೇಘವು ಅದರ ಮೇಲೆ ಮುಚ್ಚಿಕೊಂಡಿತು ಮತ್ತು ಅದು ರಾತ್ರಿಯಲ್ಲಿ ಬೆಂಕಿಯಂತೆ ಕಾಣಿಸುತ್ತಿತ್ತು. 16 ಹೀಗೆ ಮೇಘವು ಯಾವಾಗಲೂ ದೇವದರ್ಶನಗುಡಾರವನ್ನು ಮುಚ್ಚಿಕೊಂಡಿರುವುದು. ರಾತ್ರಿವೇಳೆಯಲ್ಲಿ ಆ ಮೇಘವು ಬೆಂಕಿಯಂತೆ ಕಾಣಿಸುವುದು. 17 ಆ ಮೇಘವು ಪವಿತ್ರ ಗುಡಾರದಿಂದ ಮೇಲಕ್ಕೆ ಎದ್ದಾಗಲೆಲ್ಲಾ ಇಸ್ರೇಲರು ಮುಂದಕ್ಕೆ ಪ್ರಯಾಣಮಾಡುವರು. ಆ ಮೇಘವು ನಿಂತಲ್ಲೆಲ್ಲಾ ಇಸ್ರೇಲರು ಪಾಳೆಯ ಮಾಡಿಕೊಳ್ಳುವರು. 18 ಇಸ್ರೇಲರು ಯೆಹೋವನ ಸೂಚನೆಯನ್ನು ಹೊಂದಿದ ಮೇಲೆ ಪ್ರಯಾಣಮಾಡುವರು. ಆ ಮೋಡವು ಪವಿತ್ರಗುಡಾರದ ಮೇಲಿರುವ ತನಕ ಅವರು ತಾವಿರುವಲ್ಲಿಯೇ ಇರುವರು. 19 ಕೆಲವು ಬಾರಿ ಆ ಮೇಘವು ಬಹುದಿನಗಳವರೆಗೂ ಪವಿತ್ರಗುಡಾರದ ಮೇಲೆ ಇರುವ ಸಂದರ್ಭದಲ್ಲಿ ಇಸ್ರೇಲರು ಯೆಹೋವನಿಗೆ ವಿಧೇಯರಾಗಿ ಮುಂದಕ್ಕೆ ಪ್ರಯಾಣಮಾಡಲಿಲ್ಲ. 20 ಒಂದೊಂದು ವೇಳೆಯಲ್ಲಿ ಮೇಘವು ಕೆಲವು ದಿವಸ ಮಾತ್ರ ಪವಿತ್ರ ಗುಡಾರದ ಮೇಲೆ ನಿಂತಿರುವುದು. ಯೆಹೋವನ ಆಜ್ಞೆಯ ಪ್ರಕಾರ ಅವರು ಇಳಿದುಕೊಳ್ಳುತ್ತಿದ್ದರು ಮತ್ತು ಯೆಹೋವನ ಆಜ್ಞೆಯ ಪ್ರಕಾರ ಹೊರಡುತ್ತಿದ್ದರು. 21 ಕೆಲವು ಸಮಯಗಳಲ್ಲಿ ಮೇಘವು ಸಾಯಂಕಾಲದಿಂದ ಹೊತ್ತಾರೆಯವರೆಗೂ ಇರುತ್ತಿತ್ತು; ಬೆಳಿಗ್ಗೆ ಅದು ಮೇಲಕ್ಕೆ ಎದ್ದಾಗ ಜನರು ಪ್ರಯಾಣ ಮಾಡುತ್ತಿದ್ದರು. ಮೋಡವು ಚಲಿಸಿದಾಗ ಅದು ಹಗಲಾಗಿರಲಿ ರಾತ್ರಿಯಾಗಿರಲಿ ಜನರು ಅದನ್ನು ಹಿಂಬಾಲಿಸುವರು. 22 ಆ ಮೇಘವು ಪವಿತ್ರಗುಡಾರದ ಮೇಲೆ ಎರಡು ದಿನವಾಗಲಿ ಒಂದು ತಿಂಗಳಾಗಲಿ ಒಂದು ವರ್ಷವಾಗಲಿ ನಿಂತರೆ ಅದು ನಿಂತಿರುವ ತನಕ ಇಸ್ರೇಲರು ಪ್ರಯಾಣ ಮಾಡದೆ ಇಳಿದುಕೊಂಡೇ ಇರುವರು. ಅದು ಮೇಲಕ್ಕೆ ಎದ್ದಾಗ ಅವರು ಹೊರಡುವರು. 23 ಹೀಗೆ ಯೆಹೋವನ ಸೂಚನೆಯಂತೆ ಜನರು ಪಾಳೆಯ ಮಾಡಿಕೊಳ್ಳುವರು; ಪ್ರಯಾಣ ಮುಂದುವರಿಸುವರು. ಮೋಶೆಯ ಮೂಲಕವಾಗಿ ಆಜ್ಞಾಪಿಸಿದಂತೆ ಜನರು ಯೆಹೋವನ ಸೂಚನೆಗಳನ್ನು ಲಕ್ಷ್ಯವಿಟ್ಟು ಅನುಸರಿಸಿ ನಡೆಯುತ್ತಿದ್ದರು.
ರಚನೆಗಾರರು: ಕೋರಹೀಯರು.
45 ಒಂದು ದಿವ್ಯ ವಿಷಯವನ್ನು ಹೇಳಲು
ನನ್ನ ಹೃದಯವು ತವಕಪಡುತ್ತದೆ;
ನನ್ನ ರಾಜನನ್ನು ಕುರಿತು ಸುಂದರವಾದ ಗೀತೆಯೊಂದನ್ನು ರಚಿಸುವೆ.
ನನ್ನ ನಾಲಿಗೆಯು ಕವಿಯ ಲೇಖನಿಯಂತೆ ಸಿದ್ಧವಾಗಿದೆ.
2 ನೀನು ಎಲ್ಲರಿಗಿಂತಲೂ ಅತಿಸುಂದರನಾಗಿರುವೆ.
ನಿನ್ನ ಮಾತುಗಳು ಮನೋಹರವಾಗಿವೆ.
ದೇವರ ಆಶೀರ್ವಾದವು ನಿನ್ನ ಮೇಲೆ ಸದಾಕಾಲವಿರುವುದು.
3 ನಿನ್ನ ಖಡ್ಗವನ್ನು ಕಟ್ಟಿಕೊ.
ನಿನ್ನ ಮಹಿಮಾವಸ್ತ್ರವನ್ನು ಧರಿಸಿಕೊ.
4 ನೀನು ವೈಭವಯುತವಾಗಿ ಕಾಣುತ್ತಿರುವೆ! ಒಳ್ಳೆಯದಕ್ಕಾಗಿಯೂ ನ್ಯಾಯಕ್ಕಾಗಿಯೂ ಹೋರಾಡಿ ಗೆಲ್ಲು.
ಶಕ್ತಿಯುತವಾದ ನಿನ್ನ ಬಲತೋಳಿನಿಂದ ಮಹತ್ಕಾರ್ಯಗಳನ್ನು ಮಾಡು.
5 ನಿನ್ನ ಬಾಣಗಳು ತೀಕ್ಷ್ಣವಾಗಿವೆ.
ಅವು ನಿನ್ನ ಶತ್ರುಗಳ ಎದೆಗೆ ನಾಟಿಕೊಳ್ಳುತ್ತವೆ;
ಶತ್ರುಗಳು ನಿನ್ನ ಕಣ್ಣೆದುರಿನಲ್ಲೇ ನೆಲಕ್ಕುರುಳುವರು.
6 ದೇವರೇ,[a] ನಿನ್ನ ಸಿಂಹಾಸನವು ಶಾಶ್ವತವಾದದ್ದು.
ಒಳ್ಳೆಯತನವು ನಿನ್ನ ರಾಜದಂಡವಾಗಿದೆ.
7 ನೀನು ನೀತಿಯನ್ನು ಪ್ರೀತಿಸುವೆ; ದುಷ್ಟತನವನ್ನು ದ್ವೇಷಿಸುವೆ.
ಆದ್ದರಿಂದ ನಿನ್ನ ದೇವರಾಗಿರುವಾತನು
ನಿನ್ನನ್ನು ನಿನ್ನ ಸ್ನೇಹಿತರಿಗೆ ರಾಜನನ್ನಾಗಿ ಆರಿಸಿಕೊಂಡಿದ್ದಾನೆ.[b]
8 ನಿನ್ನ ಬಟ್ಟೆಗಳು ಪರಿಮಳದ್ರವ್ಯಗಳಾದ ಗೋಲರಸ, ಅಗರು ಮತ್ತು ಚಂದನಗಳಿಂದ ಕೂಡಿವೆ.
ಗಜದಂತದಿಂದ ಶೃಂಗರಿಸಿರುವ ಅರಮನೆಗಳಲ್ಲಿ ನಿನ್ನನ್ನು ಸಂತೋಷಪಡಿಸಲು ವಾದ್ಯಗಳನ್ನು ನುಡಿಸುವರು.
9 ನಿನ್ನ ಸ್ತ್ರೀಪರಿವಾರದಲ್ಲಿರುವವರು ರಾಜಕುಮಾರಿಯರೇ,
ನಿನ್ನ ಪಟ್ಟದರಾಣಿಯು ಓಫೀರ್ ದೇಶದ ಬಂಗಾರದಿಂದ ಮಾಡಿದ ಕಿರೀಟವನ್ನು ಧರಿಸಿಕೊಂಡು ನಿನ್ನ ಬಲಗಡೆಯಲ್ಲಿ ನಿಂತಿರುವಳು.
10 ರಾಣಿಯೇ, ನನಗೆ ಕಿವಿಗೊಡು.
ಸೂಕ್ಷ್ಮವಾಗಿ ಗಮನಿಸಿ ಅರ್ಥಮಾಡಿಕೊ.
ಸ್ವಜನರನ್ನೂ ತವರುಮನೆಯನ್ನೂ ಮರೆತುಬಿಡು.
11 ಆಗ ರಾಜನು ನಿನ್ನ ಸೌಂದರ್ಯವನ್ನು ಮೆಚ್ಚಿಕೊಳ್ಳುವನು.
ಅವನು ನಿನಗೆ ಹೊಸ ಯಜಮಾನನಾಗಿರುವನು.
ಆದ್ದರಿಂದ ನೀನು ಅವನನ್ನು ಗೌರವಿಸಬೇಕು.[c]
12 ತೂರ್ ಪಟ್ಟಣದ ಶ್ರೀಮಂತರು
ನಿನ್ನನ್ನು ಸಂಧಿಸಲು ನಿನಗಾಗಿ ಉಡುಗೊರೆಗಳನ್ನು ತರುವರು.
13 ಅಂತಃಪುರದಲ್ಲಿ ರಾಜಕುಮಾರಿಯು ವೈಭವದಿಂದಿರುವಳು;
ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.
14 ಆಕೆಯು ಕಸೂತಿ ರಚಿತವಾದ ವಸ್ತ್ರಗಳನ್ನು ಧರಿಸಿಕೊಂಡು
ತನ್ನ ಸಖಿಯರಾದ ಕನ್ಯಾಪರಿವಾರದೊಡನೆ ರಾಜನ ಬಳಿಗೆ ಬರುವಳು.
15 ಅವರು ಸಂತೋಷದಿಂದಲೂ ಉಲ್ಲಾಸದಿಂದಲೂ
ರಾಜನ ಅರಮನೆಯೊಳಕ್ಕೆ ಪ್ರವೇಶಿಸುವರು.
16 ರಾಜನೇ, ನಿನ್ನ ಗಂಡುಮಕ್ಕಳು ನಿನ್ನ ತರುವಾಯ ಆಡಳಿತ ಮಾಡುವರು;
ನೀನು ಅವರನ್ನು ನಿನ್ನ ದೇಶದಲ್ಲೆಲ್ಲಾ ಅಧಿಪತಿಗಳನ್ನಾಗಿ ನೇಮಿಸುವೆ.
17 ನಾನು ನಿನ್ನ ಹೆಸರನ್ನು ಯಾವಾಗಲೂ ಪ್ರಖ್ಯಾತಿಪಡಿಸುವೆನು;
ಜನಾಂಗಗಳು ನಿನ್ನನ್ನು ಸದಾಕಾಲ ಕೊಂಡಾಡುವರು.
ಪ್ರಿಯಕರನ ಪ್ರಶಂಸೆ
7 ರಾಜಕುಮಾರಿಯೇ, ಪಾದರಕ್ಷೆಗಳಲ್ಲಿರುವ ನಿನ್ನ ಪಾದಗಳು ಎಷ್ಟೋ ಸುಂದರವಾಗಿವೆ.
ನಿನ್ನ ದುಂಡಾದ ತೊಡೆಗಳು ಶಿಲ್ಪಿಯು ಮಾಡಿದ ಆಭರಣಗಳಂತಿವೆ.
2 ನಿನ್ನ ಹೊಕ್ಕಳು ದ್ರಾಕ್ಷಾರಸದಿಂದ ತುಂಬಿರುವ
ಗುಂಡು ಬಟ್ಟಲಿನಂತಿದೆ.[a]
ನಿನ್ನ ಉದರವು ನೆಲದಾವರೆಗಳಿಂದ ಅಲಂಕರಿಸಲ್ಪಟ್ಟಿರುವ
ಗೋಧಿಯ ರಾಶಿಯಂತಿದೆ.
3 ನಿನ್ನ ಸ್ತನಗಳು ಪ್ರಾಯದ ಸಾರಂಗದ
ಎರಡು ಅವಳಿ ಮರಿಗಳಂತಿವೆ.
4 ನಿನ್ನ ಕೊರಳು ದಂತಗೋಪುರದಂತಿದೆ.
ನಿನ್ನ ಕಣ್ಣುಗಳು ಬತ್‌ರಬ್ಬೀಮ್‌ನ ಬಾಗಿಲ ಬಳಿಯಲ್ಲಿರುವ
ಹೆಷ್ಬೋನಿನ ಸರೋವರಗಳಂತಿವೆ.
ನಿನ್ನ ಮೂಗು ದಮಸ್ಕದ ಕಡೆಗಿರುವ
ಲೆಬನೋನಿನ ಗೋಪುರದಂತಿದೆ.
5 ನಿನ್ನ ತಲೆಯು ಕರ್ಮೆಲ್ ಬೆಟ್ಟದಂತಿದೆ.
ನಿನ್ನ ತಲೆಕೂದಲು ರೇಷ್ಮೆಯಂತಿದೆ.
ನಿನ್ನ ಉದ್ದವಾದ, ಸುಂದರವಾದ ಕೂದಲು
ರಾಜನನ್ನು ಸಹ ಆಕರ್ಷಿಸುತ್ತದೆ!
6 ಪ್ರಿಯಳೇ, ನೀನೆಷ್ಟೋ ಸೌಂದರ್ಯವತಿ.
ನಿನ್ನ ರೂಪ ಮನೋಹರ; ನಿನ್ನ ಪ್ರೇಮವು ಆನಂದ ಪೂರ್ಣವಾಗಿದೆ.
7 ನೀನು ಖರ್ಜೂರದ ಮರದಂತೆ ಎತ್ತರವಾಗಿರುವೆ.
ನಿನ್ನ ಸ್ತನಗಳು ಖರ್ಜೂರ ಮರದ ಹಣ್ಣಿನ ಗೊಂಚಲುಗಳಂತಿವೆ.
8 ನಾನು ಖರ್ಜೂರದ ಮರವನ್ನು ಹತ್ತುವೆನು.
ನಾನು ಅದರ ಕೊಂಬೆಗಳನ್ನು ಹಿಡಿದುಕೊಳ್ಳುವೆನು.
ನಿನ್ನ ಸ್ತನಗಳು ದ್ರಾಕ್ಷಿಯ ಗೊಂಚಲುಗಳಂತಿರಲಿ.
ನಿನ್ನ ಉಸಿರಿನ ವಾಸನೆಯು ಸೇಬು ಹಣ್ಣುಗಳಂತಿರಲಿ.
9 ನಿನ್ನ ಬಾಯಿ ಉತ್ತಮವಾದ ದ್ರಾಕ್ಷಾರಸದಂತಿರಲಿ.
ನನ್ನ ಪ್ರಿಯೆಗಾಗಿ ಈ ದ್ರಾಕ್ಷಾರಸವು ಮೆಲ್ಲನೆ ಇಳಿದುಹೋಗುವುದು.
ನಿದ್ರಿಸುವವರ ತುಟಿಗಳಲ್ಲಿ ಅದು ಸರಾಗವಾಗಿ ಹರಿದುಹೋಗುವುದು.
ಪ್ರಿಯತಮೆ ಪ್ರಿಯಕರನಿಗೆ
10 ನಾನು ನನ್ನ ಪ್ರಿಯನವಳೇ.
ಅವನಿಗೆ ನನ್ನ ಮೇಲೇ ಆಸೆ.
11 ನನ್ನ ಪ್ರಿಯನೇ, ಬಾ!
ನಾವು ತೋಟಕ್ಕೆ ಹೋಗೋಣ,
ನಾವು ಹಳ್ಳಿಗಳಲ್ಲಿ ಇರೋಣ.
12 ನಾವು ಹೊತ್ತಾರೆಯಲ್ಲಿ ಎದ್ದು ದ್ರಾಕ್ಷಾತೋಟಗಳಿಗೆ ಹೋಗೋಣ.
ದ್ರಾಕ್ಷೆಯು ಚಿಗುರಿದೆಯೋ
ಅದರ ಹೂವು ಅರಳಿದೆಯೋ
ದಾಳಿಂಬೆ ಹಣ್ಣುಗಳು ಮಾಗಿವಿಯೋ ನೋಡೋಣ.
ನನ್ನ ಪ್ರೀತಿಯನ್ನು ನಿನಗೆ ಅಲ್ಲಿ ಸಲ್ಲಿಸುವೆನು.
13 ಕಾಮಜನಕ ಸಸಿಗಳು ಸುವಾಸನೆ ಬೀರುತ್ತವೆ.
ನನ್ನ ಪ್ರಿಯನೇ, ನಾನು ನಿನಗೋಸ್ಕರ ಉಳಿಸಿದ
ರುಚಿಕರವಾದ ಬಗೆಬಗೆಯ ಹೊಸ ಮತ್ತು ಹಳೆ ಹಣ್ಣುಗಳು
ನಮ್ಮ ಬಾಗಿಲ ಬಳಿಯಲ್ಲಿವೆ.
ಯಾಜಕ ಮೆಲ್ಕಿಜೆದೇಕ
7 ಮೆಲ್ಕಿಜೆದೇಕನು ಸಾಲೇಮಿನ ರಾಜನಾಗಿದ್ದನು ಮತ್ತು ಪರಾತ್ಪರನಾದ ದೇವರ ಯಾಜಕನಾಗಿದ್ದನು. ಅಬ್ರಹಾಮನು ರಾಜರುಗಳನ್ನು ಸೋಲಿಸಿ ಹಿಂದಿರುಗಿ ಬರುತ್ತಿರುವಾಗ ಅವನು ಅಬ್ರಹಾಮನನ್ನು ಸಂಧಿಸಿ ಆಶೀರ್ವದಿಸಿದನು. 2 ಅಬ್ರಹಾಮನು ಅವನಿಗೆ ತನ್ನಲ್ಲಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು.
ಸಾಲೇಮಿನ ರಾಜನಾದ ಮೆಲ್ಕಿಜೆದೇಕನೆಂಬ ಹೆಸರಿಗೆ ಎರಡು ಅರ್ಥಗಳಿವೆ. ಮೆಲ್ಕಿಜೆದೇಕನೆಂದರೆ, “ನೀತಿರಾಜ” ಎಂಬರ್ಥ. “ಸಾಲೇಮಿನ ರಾಜ”ನೆಂದರೆ “ಸಮಾಧಾನದ ರಾಜ” ಎಂದರ್ಥ. 3 ಮೆಲ್ಕಿಜೆದೇಕನ ತಂದೆತಾಯಿಗಳು ಯಾರೆಂಬುದಾಗಲಿ ಅವನು ಎಲ್ಲಿಂದ ಬಂದನೆಂಬುದಾಗಲಿ ಅವನು ಯಾವಾಗ ಹುಟ್ಟಿದನೆಂಬುದಾಗಲಿ ಅವನು ಯಾವಾಗ ಸತ್ತನೆಂಬುದಾಗಲಿ ಯಾರಿಗೂ ತಿಳಿದಿಲ್ಲ. ಅವನು ದೇವರ ಮಗನಂತೆ ಸದಾಕಾಲವೂ ಯಾಜಕನಾಗಿದ್ದಾನೆ.
4 ಮೆಲ್ಕಿಜೆದೇಕನು ಎಷ್ಟು ದೊಡ್ಡವನೆಂಬುದನ್ನು ಸ್ವಲ್ಪ ಆಲೋಚಿಸಿರಿ. ನಮ್ಮ ಮೂಲಪಿತೃವಾದ ಅಬ್ರಹಾಮನು, ಯುದ್ಧದಲ್ಲಿ ತಾನು ಜಯಿಸಿದ್ದರಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನು. 5 ಲೇವಿಯಕುಲದ ಜನರಲ್ಲಿ ಯಾಜಕರಾಗುವವರು ಯೆಹೂದ್ಯರಿಂದ ಹತ್ತನೆಯ ಒಂದು ಭಾಗವನ್ನು ಪಡೆಯಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ಯಾಜಕರು ತಮ್ಮ ಸ್ವಂತ ಜನರಿಂದಲೇ (ಯೆಹೂದ್ಯರು) ಅದನ್ನು ಸಂಗ್ರಹಿಸುತ್ತಾರೆ ಮತ್ತು ಅವರ ಜನರು ಅಬ್ರಹಾಮನ ಕುಟುಂಬಕ್ಕೆ ಸೇರಿದವರಾಗಿದ್ದಾರೆ. 6 ಮೆಲ್ಕಿಜೆದೇಕನು ಲೇವಿಯರ ಕುಲಕ್ಕೆ ಸೇರಿದವನಾಗಿರಲಿಲ್ಲ. ಆದರೆ ಅವನು ಹತ್ತನೆ ಒಂದು ಭಾಗವನ್ನು ಅಬ್ರಹಾಮನಿಂದ ಪಡೆದನು. ದೇವರ ವಾಗ್ದಾನಗಳನ್ನು ಹೊಂದಿದ್ದ ಅಬ್ರಹಾಮನನ್ನು ಅವನು ಆಶೀರ್ವದಿಸಿದನು. 7 ಮುಖ್ಯನಾದ ವ್ಯಕ್ತಿಯು ಅಲ್ಪನಾದವನಿಗೆ ಆಶೀರ್ವಾದ ಮಾಡುತ್ತಾನೆಂಬುದು ಜನರೆಲ್ಲರಿಗೂ ತಿಳಿದಿರುವ ವಿಷಯ.
8 ಯಾಜಕರು ಹತ್ತನೆಯ ಒಂದು ಭಾಗವನ್ನು ಪಡೆಯುತ್ತಾರೆ. ಆದರೆ ಅವರು ಸ್ವಲ್ಪಕಾಲ ಜೀವಿಸಿದ್ದು ನಂತರ ಸಾಯುತ್ತಾರೆ. ಆದರೆ ಅಬ್ರಹಾಮನಿಂದ ಹತ್ತನೆಯ ಒಂದು ಭಾಗವನ್ನು ಪಡೆದ ಮೆಲ್ಕಿಜೆದೇಕನು ಜೀವಂತನಾಗಿಯೇ ಇರುತ್ತಾನೆಂದು ಪವಿತ್ರ ಗ್ರಂಥವು ಹೇಳುತ್ತದೆ. 9 ಲೇವಿಯರು ಜನರಿಂದ ಹತ್ತನೆಯ ಒಂದು ಭಾಗವನ್ನು ತೆಗೆದುಕೊಳ್ಳುತ್ತಾರೆ. ಆದರೆ ಅಬ್ರಹಾಮನು ಮೆಲ್ಕಿಜೆದೇಕನಿಗೆ ಹತ್ತನೆಯ ಒಂದು ಭಾಗವನ್ನು ಕೊಟ್ಟನೆಂದರೆ, ಲೇವಿಯೂ ಕೊಟ್ಟಂತಾಯಿತೆಂದು ಹೇಳಬಹುದು. 10 ಲೇವಿಯು ಇನ್ನೂ ಹುಟ್ಟಿರಲಿಲ್ಲ. ಆದರೆ ಮೆಲ್ಕಿಜೆದೇಕನು ಅಬ್ರಹಾಮನನ್ನು ಎದುರುಗೊಂಡಾಗ, ಲೇವಿಯು ತನ್ನ ಪೂರ್ವಿಕನಾದ ಅಬ್ರಹಾಮನ ದೇಹದಲ್ಲಿದ್ದನು.
11 ಲೇವಿಕುಲದ ಯಾಜಕತ್ವದ ಆಧಾರದ ಮೇಲೆ ಧರ್ಮಶಾಸ್ತ್ರವನ್ನು ಜನರಿಗೆ ಕೊಡಲಾಯಿತು. ಆದರೆ ಆ ಯಾಜಕತ್ವದಿಂದ ಜನರನ್ನು ಆತ್ಮಿಕತೆಯಲ್ಲಿ ಪರಿಪೂರ್ಣರನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಬೇರೊಂದು ರೀತಿಯ ಯಾಜಕನು ಬರುವುದು ಅತ್ಯವಶ್ಯಕವಾಗಿತ್ತು. ಅಂದರೆ ಮೆಲ್ಕಿಜೆದೇಕನಂತಹ ಯಾಜಕನೇ ಹೊರತು ಆರೋನನಂತವನಲ್ಲ ಎಂಬುದು ಅದರ ಅರ್ಥ. 12 ಬೇರೊಬ್ಬ ಯಾಜಕನು ಬಂದರೆ, ಆಗ ಧರ್ಮಶಾಸ್ತ್ರವು ಬದಲಾಗಲೇಬೇಕು. 13 ನಾವು ಕ್ರಿಸ್ತನನ್ನು ಕುರಿತು ಇವುಗಳನ್ನು ಹೇಳುತ್ತಿರುವೆವು. ಆತನು ಬೇರೊಂದು ಕುಲಕ್ಕೆ ಸೇರಿದವನು. ಆ ಕುಲದವರಲ್ಲಿ ಯಾರೇ ಆಗಲಿ ಎಂದೂ ಯಾಜಕರಾಗಿ ಸೇವೆ ಮಾಡಿರಲಿಲ್ಲ. 14 ನಮ್ಮ ಪ್ರಭು (ಕ್ರಿಸ್ತನು) ಯೆಹೂದಕುಲದಿಂದ ಬಂದವನೆಂಬುದು ಸ್ಪಷ್ಟವಾಗಿದೆ. ಆ ಕುಲಕ್ಕೆ ಸೇರಿದ ಯಾಜಕರನ್ನು ಕುರಿತು ಮೋಶೆಯು ಏನನ್ನೂ ಹೇಳಲಿಲ್ಲ.
ಯೇಸು ಮೆಲ್ಕಿಜೆದೇಕನಂತಹ ಯಾಜಕನು
15 ಮೆಲ್ಕಿಜೆದೇಕನಂತಹ ಮತ್ತೊಬ್ಬ ಯಾಜಕನು (ಯೇಸು) ಬಂದಿರುವುದರಿಂದ ಇವು ಮತ್ತಷ್ಟು ಸ್ಪಷ್ಟವಾಗಿವೆ. 16 ಆತನು ಯಾಜಕನಾದದ್ದು ವಂಶಾನುಗತವಾಗಿ ಬಂದ ನಿಯಮಗಳ ಮತ್ತು ಶಾಸ್ತ್ರಗಳ ಪ್ರಕಾರವಲ್ಲ. ಆತನು ನಾಶವಾಗದ ತನ್ನ ಜೀವಶಕ್ತಿಯಿಂದ ಯಾಜಕನಾದನು. 17 ಪವಿತ್ರ ಗ್ರಂಥದಲ್ಲಿ ಆತನನ್ನು ಕುರಿತು ಹೀಗೆ ಹೇಳಿದೆ: “ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ ಯಾಜಕನಾಗಿರುವೆ.”(A)
18 ಹಳೆಯ ನಿಯಮವು ದುರ್ಬಲವೂ ನಿಷ್ಪ್ರಯೋಜಕವೂ ಆಗಿದ್ದರಿಂದ ರದ್ದಾಯಿತು. 19 ಮೋಶೆಯ ಧರ್ಮಶಾಸ್ತ್ರವು ಯಾವುದನ್ನೂ ಸಿದ್ಧಿಗೆ ತರಲಿಲ್ಲ. ಈಗ ನಮಗೆ ಉತ್ತಮವಾದ ಒಂದು ನಿರೀಕ್ಷೆಯನ್ನು ಕೊಡಲಾಗಿದೆ. ಈ ನಿರೀಕ್ಷೆಯು ನಮ್ಮನ್ನು ದೇವರ ಬಳಿಗೆ ಕೊಂಡೊಯ್ಯಬಲ್ಲದು.
20 ದೇವರು ಯೇಸುವನ್ನು ಪ್ರಧಾನಯಾಜಕನನ್ನಾಗಿ ಮಾಡಿದಾಗ, ಒಂದು ವಾಗ್ದಾನವನ್ನೂ ಮಾಡಿದನು. ಆದರೆ ಬೇರೆಯವರು ಯಾಜಕರಾದಾಗ ಆತನು ವಾಗ್ದಾನ ಮಾಡಲಿಲ್ಲ. 21 ಕ್ರಿಸ್ತನು ದೇವರ ವಾಗ್ದಾನದಂತೆ ಯಾಜಕನಾದನು. ದೇವರು ಆತನಿಗೆ ಹೇಳಿದ್ದೇನೆಂದರೆ:
“‘ನೀನು ಸದಾಕಾಲವೂ ಯಾಜಕನಾಗಿರುವೆ’
ಎಂದು ಪ್ರಭುವೆಂಬ ನಾನು ವಾಗ್ದಾನ ಮಾಡಿದೆನು.
ಇದಕ್ಕಾಗಿ ನಾನೆಂದಿಗೂ ಪಶ್ಚಾತ್ತಾಪಪಡುವುದಿಲ್ಲ.”(B)
22 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಶ್ರೇಷ್ಠವಾದ ಒಡಂಬಡಿಕೆಗೆ ಯೇಸುವೇ ಆಧಾರ ಎಂಬುದೇ ಇದರರ್ಥ.
23 ಇದಲ್ಲದೆ ಇತರ ಯಾಜಕರಲ್ಲಿ ಮರಣದ ಕಾರಣದಿಂದ ಒಬ್ಬನೇ ಶಾಶ್ವತವಾಗಿ ಯಾಜಕನಾಗಿ ಮುಂದುವರೆಯಲಾಗಲಿಲ್ಲ. ಆದ್ದರಿಂದ ಅಲ್ಲಿ ಅನೇಕ ಮಂದಿ ಯಾಜಕರಿದ್ದರು. 24 ಆದರೆ ಯೇಸು ಸದಾಕಾಲವೂ ಜೀವಿಸುವವನಾಗಿದ್ದಾನೆ. ಆತನು ತನ್ನ ಯಾಜಕ ಸೇವೆಯನ್ನು ಎಂದೆಂದಿಗೂ ನಿಲ್ಲಿಸುವುದಿಲ್ಲ. 25 ಆದ್ದರಿಂದಲೇ ತನ್ನ ಮೂಲಕ ದೇವರ ಬಳಿಗೆ ಬರುವ ಜನರನ್ನು ಯೇಸು ಯಾವಾಗಲೂ ರಕ್ಷಿಸಬಲ್ಲನು. ಏಕೆಂದರೆ ಆತನು ಸದಾಕಾಲ ಜೀವಿಸುವವನಾಗಿದ್ದಾನೆ ಮತ್ತು ಜನರು ದೇವರ ಸನ್ನಿಧಿಗೆ ಬಂದಾಗ ಜನರಿಗೆ ಸಹಾಯ ಮಾಡಲು ಸಿದ್ಧನಾಗಿದ್ದಾನೆ.
26 ಯೇಸುವೇ ನಮಗೆ ಬೇಕಾಗಿದ್ದ ಪ್ರಧಾನ ಯಾಜಕನು. ಆತನು ಪಾಪರಹಿತನೂ ಪರಿಶುದ್ಧನೂ ನಿಷ್ಕಳಂಕನೂ ಪಾಪಿಗಳ ಪ್ರಭಾವಕ್ಕೆ ಒಳಗಾಗದವನೂ ಆಕಾಶಮಂಡಲಕ್ಕಿಂತ ಉನ್ನತನೂ ಆಗಿದ್ದಾನೆ. 27 ಆತನು ಬೇರೆ ಯಾಜಕರಂತಲ್ಲ. ಅವರಾದರೋ ಪ್ರತಿ ದಿನವೂ ಯಜ್ಞಗಳನ್ನು ಅರ್ಪಿಸಬೇಕು. ಅವರು ತಮ್ಮ ಸ್ವಂತ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಿದ ನಂತರ ಬೇರೆಯವರ ಪಾಪಗಳಿಗಾಗಿ ಅರ್ಪಿಸಬೇಕು. ಆದರೆ ಕ್ರಿಸ್ತನು ಹಾಗೆ ಮಾಡಬೇಕಾಗಿಲ್ಲ. ಆತನು ತನ್ನನ್ನೇ ಯಜ್ಞವಾಗಿ ಅರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು. 28 ಧರ್ಮಶಾಸ್ತ್ರವು ಮನುಷ್ಯರೊಳಗಿಂದ ಪ್ರಧಾನ ಯಾಜಕರನ್ನು ಆರಿಸುತ್ತದೆ. ಆರಿಸಲ್ಪಟ್ಟ ಈ ಜನರು ಮಾನವ ದೌರ್ಬಲ್ಯಗಳನ್ನು ಹೊಂದಿದವರಾಗಿದ್ದಾರೆ. ಆದರೆ ದೇವರು ಧರ್ಮಶಾಸ್ತ್ರದ ನಂತರ ಮಾಡಿದ ವಾಗ್ದಾನ ದೇವರ ಮಗನನ್ನು ಪ್ರಧಾನ ಯಾಜಕನನ್ನಾಗಿ ಮಾಡಿತು. ಆ ಮಗನು ಎಂದೆಂದಿಗೂ ಸರ್ವಸಂಪೂರ್ಣನಾಗಿ ಮಾಡಲ್ಪಟ್ಟಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International