M’Cheyne Bible Reading Plan
ಪವಿತ್ರಗುಡಾರದ ಪ್ರತಿಷ್ಠೆ
7 ಮೋಶೆ ಪವಿತ್ರಗುಡಾರದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿದ ಮೇಲೆ ಅದನ್ನು ಅದರ ವಸ್ತುಗಳೊಡನೆ, ಯಜ್ಞವೇದಿಕೆಯೊಡನೆ ಮತ್ತು ಅದರ ಎಲ್ಲಾ ಉಪಕರಣಗಳೊಡನೆ ಯೆಹೋವನಿಗಾಗಿ ಅಭಿಷೇಕಿಸಿ ಪ್ರತಿಷ್ಠಿಸಿದನು. ಇವು ಯೆಹೋವನ ಆರಾಧನೆಗಾಗಿ ಮಾತ್ರ ಉಪಯೋಗಿಸಲ್ಪಡುತ್ತವೆಂದು ಹೀಗೆ ಪ್ರತ್ಯೇಕಿಸಲ್ಪಟ್ಟವು.
2 ಬಳಿಕ ಇಸ್ರೇಲಿನ ಪ್ರಧಾನ ಪುರುಷರು, ಅವರ ಕುಟುಂಬಗಳ ನಾಯಕರು ಅಂದರೆ ಜನಗಣತಿಯ ಮೇಲ್ವಿಚಾರಣೆಯನ್ನು ಸಹ ವಹಿಸಿಕೊಂಡಿದ್ದ 3 ಗೋತ್ರಪ್ರಧಾನರು ಮುಂದೆ ಬಂದು, ತಮ್ಮ ಕಾಣಿಕೆಗಳನ್ನು ಸಮರ್ಪಿಸಿದರು. ಇಬ್ಬಿಬ್ಬರು ಆರು ಕಮಾನು ಬಂಡಿಗಳನ್ನೂ ಅವುಗಳನ್ನು ಎಳೆಯುವುದಕ್ಕೆ ಆರು ಜೊತೆ ಎತ್ತುಗಳನ್ನೂ ಕೊಟ್ಟರು. ಪ್ರಧಾನರು ಇವುಗಳನ್ನು ಪವಿತ್ರಗುಡಾರದಲ್ಲಿ ಯೆಹೋವನಿಗೆ ಒಪ್ಪಿಸಿದರು.
4 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 5 “ಪ್ರಧಾನರಿಂದ ಈ ಕಾಣಿಕೆಗಳನ್ನು ಸ್ವೀಕರಿಸು. ಇವು ದೇವದರ್ಶನಗುಡಾರದ ವರ್ಗಾವಣೆಗೆ ಉಪಯೋಗಿಸಲ್ಪಡಲಿ. ಇವುಗಳನ್ನು ಲೇವಿಯರಿಗೆ ಕೊಡು. ಅವರು ತಮ್ಮ ಕೆಲಸಗಳನ್ನು ಮಾಡಲು ಇದು ಸಹಾಯ ಮಾಡುವುದು.”
6 ಆದ್ದರಿಂದ ಮೋಶೆಯು ಆ ಬಂಡಿಗಳನ್ನೂ ಎತ್ತುಗಳನ್ನೂ ಸ್ವೀಕರಿಸಿ ಅವುಗಳನ್ನು ಲೇವಿಯರಿಗೆ ಕೊಟ್ಟನು. 7 ಅವನು ಗೇರ್ಷೋನ್ ಗೋತ್ರಪುರುಷರಿಗೆ ಅವರ ಕೆಲಸಕ್ಕೆ ಅಗತ್ಯವಾಗಿದ್ದ ಎರಡು ಬಂಡಿಗಳನ್ನು ಮತ್ತು ಎರಡು ಜೊತೆ ಎತ್ತುಗಳನ್ನು ಕೊಟ್ಟನು. 8 ಬಳಿಕ ಮೆರಾರೀಯರ ಕೆಲಸಕ್ಕೆ ಬೇಕಾಗಿದ್ದ ನಾಲ್ಕು ಬಂಡಿಗಳನ್ನೂ ನಾಲ್ಕು ಜೊತೆ ಎತ್ತುಗಳನ್ನೂ ಅವರಿಗೆ ಕೊಟ್ಟನು. ಇವರೆಲ್ಲರು ಮಾಡುವ ಕೆಲಸಕ್ಕೆ ಯಾಜಕನಾದ ಆರೋನನ ಮಗನಾದ ಈತಾಮಾರನು ಮೇಲ್ವಿಚಾರಕನಾಗಿದ್ದನು. 9 ಮೋಶೆಯು ಕೆಹಾತ್ಯರಿಗೆ ಎತ್ತುಗಳನ್ನಾಗಲಿ ಬಂಡಿಗಳನ್ನಾಗಲಿ ಕೊಡಲಿಲ್ಲ. ಯಾಕೆಂದರೆ ಅವರು ಪವಿತ್ರವಸ್ತುಗಳನ್ನು ತಮ್ಮ ಭುಜದ ಮೇಲೆ ಹೊರಬೇಕು. ಅವರಿಗೆ ಈ ಕೆಲಸವು ಕೊಡಲ್ಪಟ್ಟಿತು.
10 ವೇದಿಕೆಯು ಅಭಿಷೇಕಿಸಲ್ಪಟ್ಟಾಗ, ಯಜ್ಞವೇದಿಕೆಯ ಆರಂಭಕ್ಕಾಗಿ ಪ್ರಧಾನರು ಸಹ ತಮ್ಮ ಕಾಣಿಕೆಗಳನ್ನು ವೇದಿಕೆಯ ಮುಂದೆ ತಂದರು. 11 ಯೆಹೋವನು ಮೋಶೆಗೆ, “ಪ್ರತಿದಿನ ಒಬ್ಬ ಪ್ರಧಾನನು ವೇದಿಕೆಯ ಪ್ರತಿಷ್ಠೆಗಾಗಿ ತನ್ನ ಕಾಣಿಕೆಯನ್ನು ತರಬೇಕು” ಎಂದು ಆಜ್ಞಾಪಿಸಿದನು.
12-83 ಹನ್ನೆರಡು ಪ್ರಧಾನರಲ್ಲಿ ಪ್ರತಿಯೊಬ್ಬನೂ ತನ್ನ ಕಾಣಿಕೆಯನ್ನು ತಂದನು. ಅವರು ಕೊಟ್ಟ ಕಾಣಿಕೆಗಳು ಹೀಗಿವೆ:
ಪ್ರತಿಯೊಬ್ಬ ಪ್ರಧಾನನು ಮೂರುಕಾಲು ಪೌಂಡು ತೂಕವುಳ್ಳ ಬೆಳ್ಳಿಯ ತಟ್ಟೆಯನ್ನೂ ಒಂದು ಮುಕ್ಕಾಲು ಪೌಂಡು ತೂಕವುಳ್ಳ ಬೆಳ್ಳಿಯ ಬಟ್ಟಲನ್ನೂ ತಂದನು. ಇವೆರಡನ್ನೂ ಅಧಿಕೃತ ಅಳತೆಯಿಂದ ತೂಕ ಮಾಡಲಾಯಿತು. ಧಾನ್ಯಸಮರ್ಪಣೆಗಾಗಿ ಉಪಯೋಗವಾಗುವ ಎಣ್ಣೆ ಬೆರೆಸಿದ ಶ್ರೇಷ್ಠ ಗೋಧಿಹಿಟ್ಟನ್ನು ಬಟ್ಟಲಲ್ಲಿ ಮತ್ತು ತಟ್ಟೆಯಲ್ಲಿ ತುಂಬಿಡಲಾಗಿತ್ತು.
ಧೂಪದ್ರವ್ಯ ತುಂಬಿದ್ದ ನಾಲ್ಕು ತೊಲೆ ತೂಕವುಳ್ಳ ಚಿನ್ನದ ಧೂಪಾರತಿಯನ್ನೂ ಒಂದು ಎಳೆಯ ಹೋರಿಯನ್ನೂ ಸರ್ವಾಂಗಹೋಮಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಗಂಡು ಕುರಿಮರಿಯನ್ನೂ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ ಸಮಾಧಾನಯಜ್ಞಕ್ಕಾಗಿ ಎರಡು ಎತ್ತುಗಳನ್ನೂ ಐದು ಟಗರುಗಳನ್ನೂ ಐದು ಹೋತಗಳನ್ನೂ ಒಂದು ವರ್ಷದ ಐದು ಗಂಡು ಕುರಿಮರಿಗಳನ್ನೂ ಪ್ರತಿಯೊಬ್ಬ ಯಾಜಕನೂ ತಂದನು. ಇವೆಲ್ಲವೂ ಯಜ್ಞವಾಗಿ ಸಮರ್ಪಿಸಲ್ಪಟ್ಟವು.
ಮೊದಲನೆಯ ದಿನದಲ್ಲಿ ಯೆಹೂದ ಕುಲಾಧಿಪತಿ ಅಮ್ಮೀನಾದಾಬನ ಮಗನಾದ ನಹಶೋನನು ತನ್ನ ಕಾಣಿಕೆಗಳನ್ನು ತಂದನು.
ಎರಡನೆಯ ದಿನದಲ್ಲಿ ಇಸ್ಸಾಕಾರ್ ಕುಲಾಧಿಪತಿ ಚೂವಾರನ ಮಗನಾದ ನೆತನೇಲನು ತನ್ನ ಕಾಣಿಕೆಗಳನ್ನು ತಂದನು.
ಮೂರನೆಯ ದಿನದಲ್ಲಿ ಜೆಬುಲೂನ್ ಕುಲಾಧಿಪತಿ ಹೇಲೋನನ ಮಗನಾದ ಎಲೀಯಾಬನು ತನ್ನ ಕಾಣಿಕೆಗಳನ್ನು ತಂದನು.
ನಾಲ್ಕನೆಯ ದಿನದಲ್ಲಿ ರೂಬೇನ್ ಕುಲಾಧಿಪತಿ ಶೆದೇಯೂರನ ಮಗನಾದ ಎಲೀಚೂರನು ತನ್ನ ಕಾಣಿಕೆಗಳನ್ನು ತಂದನು.
ಐದನೆಯ ದಿನದಲ್ಲಿ ಸಿಮೆಯೋನ್ ಕುಲಾಧಿಪತಿ ಚೂರೀಷದ್ದೈಯ ಮಗನಾದ ಶೆಲುಮೀಯೇಲನು ತನ್ನ ಕಾಣಿಕೆಗಳನ್ನು ತಂದನು.
ಆರನೆಯ ದಿನದಲ್ಲಿ ಗಾದ್ ಕುಲಾಧಿಪತಿ ದೆಗೂವೇಲನ ಮಗನಾದ ಎಲ್ಯಾಸಾಫನು ತನ್ನ ಕಾಣಿಕೆಗಳನ್ನು ತಂದನು.
ಏಳನೆಯ ದಿನದಲ್ಲಿ ಎಫ್ರಾಯೀಮ್ ಕುಲಾಧಿಪತಿ ಅಮ್ಮೀಹೂದನ ಮಗನಾದ ಎಲೀಷಾಮನು ತನ್ನ ಕಾಣಿಕೆಗಳನ್ನು ತಂದನು.
ಎಂಟನೆಯ ದಿನದಲ್ಲಿ ಮನಸ್ಸೆ ಕುಲಾಧಿಪತಿ ಪೆದಾಚೂರನ ಮಗನಾದ ಗಮ್ಲೀಯೇಲನು ತನ್ನ ಕಾಣಿಕೆಗಳನ್ನು ತಂದನು.
ಒಂಭತ್ತನೆಯ ದಿನದಲ್ಲಿ ಬೆನ್ಯಾಮೀನ್ ಕುಲಾಧಿಪತಿ ಗಿದ್ಯೋನಿಯ ಮಗನಾದ ಅಬೀದಾನನು ತನ್ನ ಕಾಣಿಕೆಗಳನ್ನು ತಂದನು.
ಹತ್ತನೆಯ ದಿನದಲ್ಲಿ ದಾನ್ ಕುಲಾಧಿಪತಿ ಅಮ್ಮೀಷದ್ದೈನ ಮಗನಾದ ಅಹೀಗೆಜರನು ತನ್ನ ಕಾಣಿಕೆಗಳನ್ನು ತಂದನು.
ಹನ್ನೊಂದನೆಯ ದಿನದಲ್ಲಿ ಆಶೇರ್ ಕುಲಾಧಿಪತಿ ಒಕ್ರಾನನ ಮಗನಾದ ಪಗೀಯೇಲನು ತನ್ನ ಕಾಣಿಕೆಗಳನ್ನು ತಂದನು.
ಹನ್ನೆರಡನೆಯ ದಿನದಲ್ಲಿ ನಫ್ತಾಲಿ ಕುಲಾಧಿಪತಿ ಏನಾನನ ಮಗನಾದ ಅಹೀರನು ತನ್ನ ಕಾಣಿಕೆಗಳನ್ನು ತಂದನು.
84 ಇವೆಲ್ಲವೂ ಇಸ್ರೇಲರ ಪ್ರಧಾನರು ತಂದ ಕಾಣಿಕೆಗಳು. ಯಜ್ಞವೇದಿಕೆಯನ್ನು ಅಭಿಷೇಕಿಸಿ ಪ್ರತಿಷ್ಠಿಸಿದಾಗ ಯಜ್ಞವೇದಿಕೆಗೋಸ್ಕರ ಅವರು ಕೊಟ್ಟ ಕಾಣಿಕೆಗಳು ಇವುಗಳೇ. ಅವರು ಹನ್ನೆರಡು ಬೆಳ್ಳಿಯ ತಟ್ಟೆಗಳನ್ನೂ ಹನ್ನೆರಡು ಬೆಳ್ಳಿಯ ಬಟ್ಟಲುಗಳನ್ನೂ ಹನ್ನೆರಡು ಚಿನ್ನದ ಧೂಪಾರತಿಗಳನ್ನೂ ತಂದರು. 85 ಪ್ರತಿಯೊಂದು ಬೆಳ್ಳಿಯ ತಟ್ಟೆಯ ತೂಕ ಸುಮಾರು ಮೂರುಕಾಲು ಪೌಂಡುಗಳು, ಪ್ರತಿ ಬಟ್ಟಲು ಸುಮಾರು ಮೂರುಮುಕ್ಕಾಲು ಪೌಂಡು ತೂಕವುಳ್ಳದ್ದಾಗಿದ್ದವು. ಬೆಳ್ಳಿಯ ತಟ್ಟೆಗಳು ಮತ್ತು ಬೆಳ್ಳಿಯ ಬಟ್ಟಲುಗಳು ಒಟ್ಟಿಗೆ ಅಧಿಕೃತ ಅಳತೆಯ ಪ್ರಕಾರ ಅರವತ್ತು ಪೌಂಡುಗಳಷ್ಟು ತೂಕವಾಗಿದ್ದವು. 86 ಧೂಪವುಳ್ಳ ಹನ್ನೆರಡು ಚಿನ್ನದ ಧೂಪಾರತಿಗಳಲ್ಲಿ ಪ್ರತಿಯೊಂದು ಧೂಪಾರತಿ ಅಧಿಕೃತ ಅಳತೆಯ ಪ್ರಕಾರ ಹತ್ತು ತೊಲೆ ತೂಕವುಳ್ಳದ್ದಾಗಿತ್ತು. ಹನ್ನೆರಡು ಚಿನ್ನದ ಧೂಪಾರತಿಗಳು ಒಟ್ಟಿಗೆ ನೂರಿಪ್ಪತ್ತು ತೊಲೆಗಳಷ್ಟು ತೂಕವುಳ್ಳದ್ದಾಗಿದ್ದವು.
87 ಸರ್ವಾಂಗಹೋಮಕ್ಕಾಗಿ ಉಪಯೋಗಿಸಲ್ಪಟ್ಟ ಒಟ್ಟು ಪಶುಗಳು: ಹನ್ನೆರಡು ಹೋರಿಗಳು, ಹನ್ನೆರಡು ಟಗರುಗಳು, ಒಂದು ವರ್ಷದ ಎರಡು ಗಂಡು ಕುರಿಮರಿಗಳು. ಆ ಸಮರ್ಪಣೆಗಳೊಂದಿಗೆ ಧಾನ್ಯಸಮರ್ಪಣೆಗಳೂ ಅರ್ಪಿಸಲ್ಪಟ್ಟವು. ದೋಷಪರಿಹಾರಕ ಯಜ್ಞವಾಗಿ ಹನ್ನೆರಡು ಹೋತಗಳು ಯೆಹೋವನಿಗೆ ಸಮರ್ಪಿಸಲ್ಪಟ್ಟವು. 88 ಸಮಾಧಾನಯಜ್ಞಕ್ಕಾಗಿಯೂ ಪ್ರಧಾನರು ಪಶುಗಳನ್ನು ಕೊಟ್ಟರು. ಅವುಗಳ ಒಟ್ಟು ಸಂಖ್ಯೆ ಇಪ್ಪತ್ನಾಲ್ಕು ಹೋರಿಗಳು, ಅರವತ್ತು ಟಗರುಗಳು, ಅರವತ್ತು ಹೋತಗಳು, ಒಂದು ವರ್ಷದ ಅರವತ್ತು ಗಂಡು ಕುರಿಮರಿಗಳು. ಯಜ್ಞವೇದಿಕೆಯನ್ನು ಅಭಿಷೇಕಿಸಿ ಪ್ರತಿಷ್ಠಿಸಿದಾಗ ಅದಕೋಸ್ಕರ ಅವರು ಕೊಟ್ಟ ಕಾಣಿಕೆಗಳು ಇವೇ.
89 ಮೋಶೆ ಯೆಹೋವನ ಸಂಗಡ ಮಾತಾಡಲು ದೇವದರ್ಶನಗುಡಾರದೊಳಗೆ ಹೋದಾಗ, ಒಡಂಬಡಿಕೆಯ ಪವಿತ್ರ ಪೆಟ್ಟಿಗೆಯ ಹೊದಿಕೆಯ ಮೇಲಿದ್ದ ಎರಡು ಕೆರೂಬಿಗಳ ಮಧ್ಯದಿಂದ ಯೆಹೋವನ ಸ್ವರವು ಮೋಶೆಗೆ ಕೇಳಿಸಿತು. ಹೀಗೆ ಆತನು ಅವನ ಸಂಗಡ ಮಾತಾಡಿದನು.
ಎರಡನೆ ಭಾಗ
(ಕೀರ್ತನೆಗಳು 42–72)
ರಚನೆಗಾರರು: ಕೋರಹೀಯರು.
42 ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಬಯಸುವಂತೆಯೇ
ನನ್ನ ಆತ್ಮವು ನಿನ್ನನ್ನು ಬಯಸುತ್ತದೆ.
2 ನನ್ನ ಆತ್ಮವು ಜೀವಸ್ವರೂಪನಾದ ದೇವರಿಗಾಗಿ ಬಾಯಾರಿದೆ.
ನಾನು ಯಾವಾಗ ಆತನನ್ನು ಸಂಧಿಸುವೆನು?
3 “ನಿನ್ನ ದೇವರು ಎಲ್ಲಿ?” ಎಂದು ನನ್ನ ವೈರಿಗಳು ಯಾವಾಗಲೂ ಗೇಲಿಮಾಡುವುದರಿಂದ
ಹಗಲಿರುಳು ಕಣ್ಣೀರೇ ನನಗೆ ಆಹಾರವಾಯಿತು.
4 ಆಗ ನಾನು, ಹಬ್ಬದ ಉತ್ಸಾಹದಲ್ಲಿ ಜನಸಮೂಹದೊಡನೆ ಹರ್ಷಿಸುತ್ತಾ
ಸ್ತುತಿಗೀತೆಗಳನ್ನು ಹಾಡುತ್ತಾ ಅವರನ್ನು ದೇವಾಲಯಕ್ಕೆ ಮುನ್ನಡೆಸುತ್ತಿದ್ದದ್ದನ್ನು
ನೆನಪಿಗೆ ತಂದುಕೊಂಡು ಹೃದಯದಲ್ಲಿ ಕೊರಗುವೆ.
5 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
6 ನನ್ನ ದೇವರೇ, ನಾನು ಕುಗ್ಗಿಹೋಗಿದ್ದೇನೆ.
ಆದ್ದರಿಂದ ಹೆರ್ಮೊನ್ ಪರ್ವತದಲ್ಲಿಯೂ ಜೋರ್ಡನ್ ನದಿಯ ಪ್ರದೇಶದಲ್ಲಿಯೂ
ಮಿಸ್ಸಾರ್ ಬೆಟ್ಟದಲ್ಲಿಯೂ ನಾನು ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
7 ಜಲಪಾತದ ಘೋಷದಂತೆಯೂ
ಪ್ರವಾಹದ ಘರ್ಜನೆಯಂತೆಯೂ ಇಕ್ಕಟ್ಟುಗಳು ನನಗೆ ಬಂದಿವೆ.
ಸಮುದ್ರದ ಅಲೆಗಳಂತೆ
ದುಃಖವು ನನ್ನನ್ನು ಆವರಿಸಿಕೊಂಡಿದೆ.
8 ಹಗಲಲ್ಲಿ ಯೆಹೋವನು ನನಗೆ ನಿಜಪ್ರೀತಿಯನ್ನು ತೋರುವುದರಿಂದ
ಜೀವಸ್ವರೂಪನಾದ ಆತನಿಗೆ ಪ್ರತಿ ರಾತ್ರಿಯಲ್ಲಿಯೂ ನೂತನ ಕೀರ್ತನೆಯನ್ನು ಹಾಡುವೆ; ಆತನಲ್ಲಿ ಪ್ರಾರ್ಥಿಸುವೆ.
9 ನನ್ನ ಬಂಡೆಯಾದ ದೇವರಿಗೆ,
“ನೀನು ನನ್ನನ್ನು ಯಾಕೆ ಮರೆತುಬಿಟ್ಟೆ?
ನನ್ನ ಶತ್ರುಗಳ ಕ್ರೂರತೆಯಿಂದ ನಾನೇಕೆ ಸಂಕಟಪಡಬೇಕು?” ಎಂದು ಕೇಳುವೆ.
10 ನನ್ನ ವಿರೋಧಿಗಳು ಸತತವಾಗಿ,
“ನಿನ್ನ ದೇವರು ಎಲ್ಲಿ?” ಎಂದು ಕೇಳುವುದರಿಂದ ನನ್ನ ಮೂಳೆಗಳು ಮುರಿದಂತಾಗಿವೆ.
11 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
43 ದೇವರೇ, ನನ್ನನ್ನು ನಿರಪರಾಧಿಯೆಂದು ತೀರ್ಪು ನೀಡು.
ವ್ಯಾಜ್ಯದಲ್ಲಿ ನನ್ನ ಪರವಾಗಿಯೂ ಅನ್ಯ ಜನಾಂಗಗಳಿಗೆ ವಿರೋಧವಾಗಿಯೂ ವಾದಿಸು.
ಸುಳ್ಳುಗಾರರಿಂದಲೂ ಕೆಡುಕರಿಂದಲೂ ನನ್ನನ್ನು ರಕ್ಷಿಸು.
2 ದೇವರೇ, ನೀನೇ ನನಗೆ ಆಶ್ರಯಸ್ಥಾನವಾಗಿರುವೆ!
ನೀನು ನನ್ನನ್ನು ಯಾಕೆ ಕೈಬಿಟ್ಟಿರುವೆ?
ಶತ್ರು ಬಾಧೆಯಿಂದ ನಾನೇಕೆ
ದುಃಖಿಸುತ್ತಾ ಸಂಕಟಪಡಬೇಕು?
3 ನಿನ್ನ ಬೆಳಕೂ ಸತ್ಯವೂ ನನ್ನ ಮೇಲೆ ಪ್ರಕಾಶಿಸಲಿ.
ನಿನ್ನ ಬೆಳಕೂ ಸತ್ಯವೂ ನನಗೆ ಮಾರ್ಗದರ್ಶನ ನೀಡಲಿ.
ಅವು ನನ್ನನ್ನು ನಿನ್ನ ಪವಿತ್ರ ಪರ್ವತಕ್ಕೂ ನಿನ್ನ ನಿವಾಸಕ್ಕೂ ನಡೆಸುತ್ತವೆ.
4 ನನ್ನ ದೇವರೇ, ನಿನ್ನ ಯಜ್ಞವೇದಿಕೆಯ ಬಳಿಗೆ ಬರುವೆನು.
ನನ್ನ ಸಂತೋಷಕ್ಕೆ ನೀನೇ ಆಧಾರನಾಗಿರುವೆ.
ದೇವರೇ, ನನ್ನ ದೇವರೇ,
ಹಾರ್ಪ್‌ವಾದ್ಯವನ್ನು ಬಾರಿಸುತ್ತಾ ನಿನ್ನನ್ನು ಕೊಂಡಾಡುವೆನು.
5 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
ಪ್ರಿಯಕರ
5 ನನ್ನ ಪ್ರಿಯೇ, ನನ್ನ ವಧುವೇ, ನನ್ನ ತೋಟವನ್ನು ಪ್ರವೇಶಿಸಿದ್ದೇನೆ.
ನನ್ನ ಸುಗಂಧದ್ರವ್ಯದೊಡನೆ ಗೋಲರಸವನ್ನು ಶೇಖರಿಸಿದ್ದೇನೆ.
ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿದ್ದೇನೆ.
ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿದ್ದೇನೆ.
ಪ್ರಿಯತಮೆಯು ಸ್ನೇಹಿತರಿಗೆ
ಸ್ನೇಹಿತರೇ, ತಿನ್ನಿರಿ, ಕುಡಿಯಿರಿ!
ಪ್ರೀತಿಯಿಂದ ಮತ್ತರಾಗಿ!
ಪ್ರಿಯತಮೆ
2 ನಾನು ನಿದ್ರೆಮಾಡುತ್ತಿರುವಾಗಲೂ
ಹೃದಯ ಎಚ್ಚರವಾಗಿರುವುದು.
ನನ್ನ ಪ್ರಿಯನು ಬಾಗಿಲು ತಟ್ಟುತ್ತಿರುವುದು ನನಗೆ ಕೇಳುತ್ತಿದೆ.
“ನನ್ನ ಪ್ರಿಯಳೇ, ನನ್ನ ಕಾಂತಳೇ,
ನನ್ನ ಪಾರಿವಾಳವೇ, ನನ್ನ ನಿರ್ಮಲೆಯೇ, ಬಾಗಿಲು ತೆರೆ!
ನನ್ನ ತಲೆಯು ಇಬ್ಬನಿಯಿಂದ ತೇವವಾಗಿದೆ;
ನನ್ನ ಕೂದಲು ರಾತ್ರಿ ಬೀಳುವ
ಹನಿಗಳಿಂದ ತೇವವಾಗಿದೆ.”
3 “ನಾನು ನನ್ನ ಮೇಲಂಗಿಯನ್ನು ತೆಗೆದಿದ್ದೇನೆ;
ಅದನ್ನು ಮತ್ತೆ ಹಾಕಿಕೊಳ್ಳಲು ನನಗೆ ಇಷ್ಟವಿಲ್ಲ.
ನಾನು ನನ್ನ ಪಾದಗಳನ್ನು ತೊಳೆದಿದ್ದೇನೆ.
ಅವುಗಳನ್ನು ಮತ್ತೆ ಕೊಳೆಮಾಡಲು ನನಗೆ ಇಷ್ಟವಿಲ್ಲ.”
4 ನನ್ನ ಪ್ರಿಯನು ಬಾಗಿಲ ಚಿಲಕದ ರಂಧ್ರದಲ್ಲಿ ಕೈ ನೀಡಿದಾಗ
ಅವನ ಮೇಲೆ ನನಗೆ ಮರುಕವಾಯಿತು.
5 ನನ್ನ ಪ್ರಿಯನಿಗೆ ಬಾಗಿಲು ತೆರೆಯಲು ನಾನು ಎದ್ದಾಗ
ಅಗುಳಿಯ ಹಿಡಿಗಳ ಮೇಲೆ ನನ್ನ ಕೈಗಳಿಂದ ಗೋಲರಸವೂ
ನನ್ನ ಬೆರಳುಗಳಿಂದ ಸುವಾಸನೆಯ ಗೋಲರಸವೂ
ತೊಟ್ಟಿಕ್ಕಿದವು.
6 ನಾನು ನನ್ನ ಪ್ರಿಯನಿಗಾಗಿ ಬಾಗಿಲನ್ನು ತೆರೆಯುವಷ್ಟರಲ್ಲಿ
ನನ್ನ ಪ್ರಿಯನು ಹೊರಟುಹೋಗಿದ್ದನು!
ಅವನು ಇಲ್ಲದಿರುವುದನ್ನು ಕಂಡು
ನನ್ನ ಹೃದಯವು ಕುಸಿದುಹೋಯಿತು.
ನಾನು ಅವನಿಗಾಗಿ ಹುಡುಕಿದರೂ ಅವನು ಸಿಕ್ಕಲಿಲ್ಲ.
ನಾನು ಅವನಿಗಾಗಿ ಕೂಗಿದರೂ ಅವನು ಉತ್ತರಿಸಲಿಲ್ಲ.
7 ನಗರದಲ್ಲಿ ಗಸ್ತು ತಿರುಗುವ ಕಾವಲುಗಾರರು ನನ್ನನ್ನು ಕಂಡು
ಹೊಡೆದು ಗಾಯಮಾಡಿದರು.
ಕೋಟೆಯ ಕಾವಲುಗಾರರು ನನ್ನ ಮೇಲ್ಹೋದಿಕೆಯನ್ನು
ತೆಗೆದುಕೊಂಡರು.
8 ಜೆರುಸಲೇಮಿನ ಸ್ತ್ರೀಯರೇ,
ನೀವು ನನ್ನ ಪ್ರಿಯನನ್ನು ಕಂಡರೆ, ಅವನಿಗೆ ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆಂದು ತಿಳಿಸಿರಿ.
ಜೆರುಸಲೇಮಿನ ಸ್ತ್ರೀಯರು ಪ್ರಿಯತಮೆಗೆ
9 ಸ್ತ್ರೀಯರಲ್ಲಿ ಅತ್ಯಂತ ಸೌಂದರ್ಯವತಿಯೇ,
ನಿನ್ನ ಪ್ರಿಯನ ಅತಿಶಯವೇನು?
ನೀನು ಹೀಗೆ ನಮ್ಮಿಂದ ಪ್ರಮಾಣ ಮಾಡಿಸಲು
ನಿನ್ನ ಪ್ರಿಯನ ಅತಿಶಯವೇನು?
ಪ್ರಿಯತಮೆಯು ಜೆರುಸಲೇಮಿನ ಸ್ತ್ರೀಯರಿಗೆ
10 ನನ್ನ ಪ್ರಿಯನದು ಹೊಳಪಾದ ಕಂದುಬಣ್ಣ.
ಹತ್ತು ಸಾವಿರ ಪುರುಷರಲ್ಲಿ ಅವನೇ ಆಕರ್ಷಕ ಪುರುಷ.
11 ಅವನ ತಲೆಯು ಚೊಕ್ಕ ಬಂಗಾರದಂತಿದೆ;
ಅವನ ಗುಂಗುರು ಕೂದಲು ಕಾಗೆಯಷ್ಟೇ ಕಪ್ಪಾಗಿದೆ.
12 ಅವನ ಕಣ್ಣುಗಳು
ಹಾಲಿನಲ್ಲಿ ಸ್ನಾನಮಾಡಿದ ಪಾರಿವಾಳಗಳಂತೆಯೂ
ಆಭರಣದಲ್ಲಿ ಜೋಡಿಸಿರುವ ಮುತ್ತಿನಂತೆಯೂ ಇವೆ.
13 ಅವನ ಕೆನ್ನೆಗಳು ಸುಗಂಧಸಸ್ಯಗಳ ದಿಬ್ಬಗಳಂತೆಯೂ
ಸುವಾಸನೆಯುಳ್ಳ ಹೂವುಗಳಂತೆಯೂ ಇವೆ.
ಅವನ ತುಟಿಗಳು ಕೆಂದಾವರೆಗಳಂತಿವೆ;
ಅವನ ತುಟಿಗಳಲ್ಲಿ ಗೋಲರಸವು ತೊಟ್ಟಿಕ್ಕುತ್ತದೆ.
14 ಅವನ ಕೈಗಳು ಪೀತರತ್ನದಿಂದ ಕೂಡಿದ
ಬಂಗಾರದ ಸಲಾಕೆಯಂತಿವೆ;
ಅವನ ದೇಹವು ನೀಲಿಬಣ್ಣದ ಕಲ್ಲುಗಳಿಂದ ಕೂಡಿದ
ನಯವಾದ ದಂತದಂತಿದೆ.
15 ಅವನ ಕಾಲುಗಳು ಬಂಗಾರದ ಪಾದಗಳುಳ್ಳ
ಅಮೃತ ಶಿಲೆಯ ಕಂಬಗಳಂತಿವೆ.
ಅವನು ಲೆಬನೋನಿನ
ದೇವದಾರು ವೃಕ್ಷದಂತೆ ಎತ್ತರವಾಗಿದ್ದಾನೆ.
16 ಹೌದು, ಜೆರುಸಲೇಮಿನ ಸ್ತ್ರೀಯರೇ,
ನನ್ನ ಪ್ರಿಯನು ಅತ್ಯಂತ ಮನೋಹರನು;
ಅವನ ನುಡಿ ಬಹು ಇಂಪು.
ಅವನೇ ನನ್ನ ಪ್ರಿಯನು; ಅವನೇ ನನ್ನ ಕಾಂತನು.
5 ಪ್ರತಿಯೊಬ್ಬ ಯೆಹೂದ್ಯ ಪ್ರಧಾನಯಾಜಕನೂ ಮನುಷ್ಯರೊಳಗಿಂದ ಆರಿಸಲ್ಪಟ್ಟು ದೇವರಿಗೆ ಸಂಬಂಧಿಸಿದ ಕಾರ್ಯಗಳನ್ನು ಮನುಷ್ಯರಿಗೋಸ್ಕರ ಮಾಡಲು ನೇಮಿಸಲ್ಪಡುತ್ತಾನೆ. ಆ ಯಾಜಕನು ಪಾಪಗಳಿಗಾಗಿ ದೇವರಿಗೆ ಕಾಣಿಕೆಗಳನ್ನೂ ಯಜ್ಞಗಳನ್ನೂ ಅರ್ಪಿಸಬೇಕು. 2 ಅವನು ಜನರೆಲ್ಲರಂತೆ ದುರ್ಬಲನಾಗಿರುವುದರಿಂದ ಅರ್ಥಮಾಡಿಕೊಳ್ಳದ ಮತ್ತು ದಾರಿತಪ್ಪಿದ ಜನರ ವಿಷಯದಲ್ಲಿ ತಾಳ್ಮೆಯಿಂದ ಸಹಿಸಿಕೊಳ್ಳಲು ಶಕ್ತನಾಗಿದ್ದಾನೆ. 3 ತಾನೂ ಬಲಹೀನನಾಗಿರುವುದರಿಂದ ಅವನು ಮನುಷ್ಯರ ಪಾಪಗಳಿಗಾಗಿಯೂ ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಗಳನ್ನು ಅರ್ಪಿಸುತ್ತಾನೆ.
4 ಪ್ರಧಾನಯಾಜಕನಾಗಿ ನೇಮಿಸಲ್ಪಡುವುದು ಒಂದು ಗೌರವ. ಆದರೆ ಯಾರೂ ತಮ್ಮನ್ನು ತಾವೇ ಈ ಕಾರ್ಯಕ್ಕೆ ಆರಿಸಿಕೊಳ್ಳುವುದಿಲ್ಲ. ದೇವರು ಆರೋನನನ್ನು ಕರೆದಂತೆ, ಆ ವ್ಯಕ್ತಿಯನ್ನು ಕರೆಯಬೇಕು. 5 ಕ್ರಿಸ್ತನೂ ಇದೇ ರೀತಿ ನೇಮಿಸಲ್ಪಟ್ಟನು. ಆತನು ಪ್ರಭಾವದ ಪ್ರಧಾನಯಾಜಕನಾಗಿ ತನ್ನನ್ನು ತಾನೇ ಆರಿಸಿಕೊಳ್ಳಲಿಲ್ಲ. ಆದರೆ ದೇವರು ಆತನನ್ನು ಆರಿಸಿದನು. ದೇವರು ಕ್ರಿಸ್ತನಿಗೆ ಹೀಗೆ ಹೇಳಿದನು:
“ನೀನು ನನ್ನ ಮಗನು.
ಈ ದಿನ ನಾನು ನಿನ್ನ ತಂದೆಯಾದೆನು.”(A)
6 ಪವಿತ್ರ ಗ್ರಂಥದ ಮತ್ತೊಂದು ಕಡೆಯಲ್ಲಿ ದೇವರು ಹೀಗೆನ್ನುತ್ತಾನೆ:
“ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ
ಪ್ರಧಾನಯಾಜಕನಾಗಿರುವೆ.”(B)
7 ಕ್ರಿಸ್ತನು ಭೂಲೋಕದಲ್ಲಿ ಜೀವಿಸಿದ್ದಾಗ, ದೇವರಲ್ಲಿ ಪ್ರಾರ್ಥಿಸಿ, ಸಹಾಯವನ್ನು ಬೇಡಿದನು. ಆತನನ್ನು ಸಾವಿನಿಂದ ರಕ್ಷಿಸುವ ಶಕ್ತಿ ದೇವರೊಬ್ಬನಿಗೇ ಇತ್ತು. ಆದ್ದರಿಂದ ಆತನು ಗಟ್ಟಿಯಾಗಿ ರೋದಿಸುತ್ತಾ ಕಣ್ಣೀರು ಸುರಿಸುತ್ತಾ ದೇವರಲ್ಲಿ ಪ್ರಾರ್ಥಿಸಿದನು. ದೇವರ ಇಷ್ಟದಂತೆ ಆತನು ಎಲ್ಲವನ್ನೂ ಮಾಡಿದವನಾಗಿದ್ದನು ಮತ್ತು ದೀನಭಾವವನ್ನು ಹೊಂದಿದ್ದನು. ಆದ್ದರಿಂದ ದೇವರು ಆತನ ಪ್ರಾರ್ಥನೆಗಳಿಗೆ ಉತ್ತರಿಸಿದನು. 8 ಆತನು ದೇವರ ಮಗನಾಗಿದ್ದಾನೆ. ಆದರೂ ಹಿಂಸೆಗೊಳಗಾಗಿ, ತಾನು ಅನುಭವಿಸಿದ ಹಿಂಸೆಗಳಿಂದಲೇ ವಿಧೇಯನಾಗಿರುವುದನ್ನು ಕಲಿತುಕೊಂಡನು. 9 ಹೀಗಿರಲಾಗಿ ಆತನು ಪರಿಶುದ್ಧನಾಗಿದ್ದನು. ದೇವರಿಗೆ ವಿಧೇಯರಾಗುವ ಜನರೆಲ್ಲರೂ ಶಾಶ್ವತವಾದ ರಕ್ಷಣೆಯನ್ನು ಹೊಂದಿಕೊಳ್ಳಲು ಆತನೇ ಕಾರಣ. 10 ದೇವರು ಆತನನ್ನು ಮೆಲ್ಕಿಜೆದೇಕನಂತೆ ಪ್ರಧಾನ ಯಾಜಕನನ್ನಾಗಿ ಮಾಡಿದನು.
ಶೋಧನೆಗೆ ಸೋತುಹೋಗದಿರಲು ಎಚ್ಚರಿಕೆ
11 ಈ ವಿಷಯದಲ್ಲಿ ನಾವು ನಿಮಗೆ ಹೇಳಬೇಕಾದ ಅನೇಕ ಸಂಗತಿಗಳಿವೆ. ಆದರೆ ನೀವು ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸದಿರುವುದರಿಂದ ವಿವರಿಸುವುದು ಕಷ್ಟಕರವಾಗಿದೆ. 12 ನಿಮಗೆ ಕಾಲವು ಬೇಕಾದಷ್ಟಿದ್ದುದರಿಂದ ಈಗಾಗಲೇ ನೀವು ಉಪದೇಶಕರಾಗಿರಬೇಕಿತ್ತು. (ಆದರೆ ನೀವಿನ್ನೂ ಆಗಿಲ್ಲ.) ಹೀಗಿರಲು ದೇವರ ಉಪದೇಶಗಳನ್ನು ಮೊದಲ ಪಾಠದಿಂದ ಮತ್ತೆ ಉಪದೇಶಿಸಲು ನಿಮಗೆ ಮತ್ತೊಬ್ಬ ವ್ಯಕ್ತಿಯ ಅಗತ್ಯವಿದೆ. ಹಾಲಿನಂತಿರುವ ಉಪದೇಶವನ್ನು ನಾವು ನಿಮಗೆ ಮಾಡಬೇಕಾಗಿದೆ. ನೀವು ಗಟ್ಟಿ ಆಹಾರವನ್ನು ತಿನ್ನುವವರಾಗಿಲ್ಲ. 13 ನೀವು ಹಾಲು ಕುಡಿಯುವ ಮಕ್ಕಳಂತಿರುವಿರಿ. ನಿಮಗೆ ಯೋಗ್ಯ ಬೋಧನೆಗಳ ಬಗ್ಗೆ ಏನೂ ತಿಳಿದಿಲ್ಲ. 14 ಆದರೆ ಗಟ್ಟಿಯಾದ ಆಹಾರವು ಜ್ಞಾನದಲ್ಲಿ ಬೆಳವಣಿಗೆ ಹೊಂದಿರುವವರಿಗೇ ಹೊರತು ಮಕ್ಕಳಿಗಲ್ಲ. ಇವರು ಅನುಭವದಿಂದ ತಮ್ಮ ಮನಸ್ಸುಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿರುವುದರಿಂದ ಒಳಿತು ಕೆಡುಕುಗಳಿಗಿರುವ ಭೇದವನ್ನು ತಿಳಿದುಕೊಳ್ಳಬಲ್ಲವರಾಗಿದ್ದಾರೆ.
Kannada Holy Bible: Easy-to-Read Version. All rights reserved. © 1997 Bible League International