M’Cheyne Bible Reading Plan
ಶುದ್ಧಾಚಾರದ ಕುರಿತು ನಿಯಮಗಳು
5 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಭಯಂಕರವಾದ ಚರ್ಮರೋಗವುಳ್ಳವರನ್ನೂ ದೈಹಿಕಸ್ರಾವವುಳ್ಳವರನ್ನೂ ಹೆಣದ ಸೋಂಕಿನಿಂದ ಅಶುದ್ಧರಾದವರನ್ನೂ ಪಾಳೆಯದಿಂದ ಹೊರಗಿಡಬೇಕೆಂದು ಇಸ್ರೇಲರಿಗೆ ಆಜ್ಞಾಪಿಸು. 3 ಅಂಥವರು ಗಂಡಸರೇ ಆಗಲಿ ಹೆಂಗಸರೇ ಆಗಲಿ ಅವರೆಲ್ಲರನ್ನೂ ಪಾಳೆಯದಿಂದ ಹೊರಡಿಸಬೇಕು. ನಾನೇ ಅವರ ಪಾಳೆಯದಲ್ಲಿ ವಾಸಮಾಡುವುದರಿಂದ ಅವರು ಅದನ್ನು ಅಪವಿತ್ರ ಮಾಡಬಾರದು.”
4 ಯೆಹೋವನ ಅಪ್ಪಣೆಯ ಮೇರೆಗೆ ಇಸ್ರೇಲರು ತಮ್ಮಲ್ಲಿರುವ ಅಂಥವರೆಲ್ಲರನ್ನೂ ಪಾಳೆಯದ ಹೊರಗಿರಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಮಾಡಿದರು.
ತಪ್ಪುಕಾರ್ಯಗಳಿಗೆ ಪ್ರಾಯಶ್ಚಿತ್ತ ವಿಧಿ
5 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 6 “ಇದನ್ನು ಇಸ್ರೇಲರಿಗೆ ತಿಳಿಸು: ಯಾವ ಪುರುಷನಾಗಲಿ ಸ್ತ್ರೀಯಾಗಲಿ ಮತ್ತೊಬ್ಬನನ್ನು ಆಸ್ತಿಯ ವಿಷಯದಲ್ಲಿ ಮೋಸಗೊಳಿಸಿದರೆ ಅವನು ಸುಳ್ಳುಪ್ರಮಾಣ ಮಾಡುವುದರ ಮೂಲಕ ಯೆಹೋವನಿಗೆ ವಿರೋಧವಾಗಿ ಹೊಲಸಾದ ಕಾರ್ಯವನ್ನು ಮಾಡಿದಂತಾಯಿತು. ಆದ್ದರಿಂದ ಅವನು ದೋಷಿಯಾಗಿದ್ದಾನೆ. 7 ಆದ್ದರಿಂದ ಅಂಥವನು ತನ್ನ ಪಾಪವನ್ನು ಅರಿಕೆಮಾಡಬೇಕು. ಅದಲ್ಲದೆ, ಅಪರಾಧ ಮಾಡಿದವನು ನಷ್ಟಪಟ್ಟವನಿಗೆ ಮೂಲದ್ರವ್ಯದ ಬೆಲೆಯೊಡನೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಡಬೇಕು. 8 ದಂಡವನ್ನು ತೆಗೆದುಕೊಳ್ಳತಕ್ಕವನು ತೀರಿಹೋಗಿ, ಹತ್ತಿರ ಸಂಬಂಧಿಯೂ ಇಲ್ಲದ ಪಕ್ಷಕ್ಕೆ, ಆ ದ್ರವ್ಯವನ್ನು ಯೆಹೋವನಿಗೆ ಕೊಡಬೇಕು. ಅವನು ಯಾಜಕನಿಗೆ ಪೂರ್ಣ ಬೆಲೆಯನ್ನು ಕೊಡಬೇಕು. ತಪ್ಪು ಮಾಡಿದವನು ಯಾಜಕನಿಗೆ ಒಂದು ಟಗರನ್ನೂ ತಂದುಕೊಡಬೇಕು. ಈ ಟಗರನ್ನು ತಪ್ಪುಮಾಡಿದವನ ಪ್ರಾಯಶ್ಚಿತ್ತಕ್ಕಾಗಿ ಯಜ್ಞಮಾಡಬೇಕು. ಆದರೆ ಉಳಿದದ್ದನ್ನು ಯಾಜಕನು ಇಟ್ಟುಕೊಳ್ಳಬಹುದು.
9-10 “ಒಬ್ಬನು ದೇವರಿಗೆ ವಿಶೇಷ ಕಾಣಿಕೆಯನ್ನು ಅರ್ಪಿಸಿದರೆ, ಅದನ್ನು ಸ್ವೀಕರಿಸುವ ಯಾಜಕನು ತನಗಾಗಿ ಅದನ್ನು ಇಟ್ಟುಕೊಳ್ಳಬಹುದು. ಅದು ಅವನದಾಗಿರುತ್ತದೆ. ಒಬ್ಬನು ಈ ವಿಶೇಷ ಕಾಣಿಕೆಗಳನ್ನು ಕೊಡಬೇಕಾಗಿಲ್ಲ. ಆದರೆ ಅವನು ಅವುಗಳನ್ನು ಕೊಟ್ಟರೆ ಅವು ಯಾಜಕನಿಗೆ ಸೇರುತ್ತವೆ.”
ಸಂಶಯಪಡುವ ಗಂಡಂದಿರು
11 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 12 “ಈ ವಿಷಯಗಳನ್ನು ಇಸ್ರೇಲರಿಗೆ ಹೇಳು: ಒಬ್ಬನ ಹೆಂಡತಿ ಸನ್ಮಾರ್ಗವನ್ನು ಬಿಟ್ಟು ತನ್ನ ಗಂಡನಿಗೆ ಅಪನಂಬಿಗಸ್ತಳಾಗಿದ್ದು, 13 ಇನ್ನೊಬ್ಬನೊಡನೆ ಲೈಂಗಿಕ ಸಂಬಂಧ ಮಾಡಿರಬಹುದು. ಅವಳ ಈ ಕಾರ್ಯವು ಗಂಡನಿಗೆ ಗೊತ್ತಿಲ್ಲದಿರಬಹುದು; ಯಾವ ಸಾಕ್ಷಿಯೂ ಇಲ್ಲದಿರುವುದರಿಂದ ಮತ್ತು ಅವಳು ಈ ಕಾರ್ಯ ಮಾಡುತ್ತಿರುವಾಗಲೇ ಸಿಕ್ಕಿಕೊಂಡಿಲ್ಲದಿರುವುದರಿಂದ ತಾನು ತನ್ನನ್ನು ಅಶುದ್ಧಳನ್ನಾಗಿ ಮಾಡಿಕೊಂಡ ಸತ್ಯಾಂಶವನ್ನು ಆಕೆ ಗುಪ್ತವಾಗಿಡಬಹುದು. 14 ಆದರೆ ಗಂಡನು ಈರ್ಷೆ ಉಳ್ಳವನಾಗಿ ತನ್ನ ಹೆಂಡತಿ ತನ್ನನ್ನು ಅಶುದ್ಧಳನ್ನಾಗಿ ಮಾಡಿಕೊಂಡಿದ್ದಾಳೆ ಎಂದು ಸಂಶಯಪಡುವುದಾಗಿದ್ದರೆ ಅವಳು ಮಾಡಿಕೊಂಡಿರಲಿ ಮಾಡಿಕೊಂಡಿಲ್ಲದಿರಲಿ 15 ಅವನು ಅವಳನ್ನು ಯಾಜಕನ ಬಳಿಗೆ ಕರೆದುಕೊಂಡು ಹೋಗಬೇಕು. ಅಲ್ಲದೆ ಅವನು ಮೂರು ಸೇರು ಗೋಧಿಹಿಟ್ಟನ್ನು ಕಾಣಿಕೆಯಾಗಿ ಯಾಜಕನಿಗೆ ತಂದು ಕೊಡಬೇಕು. ಅವನು ಅದರ ಮೇಲೆ ಎಣ್ಣೆ ಹಾಕಬಾರದು; ಅವನು ಅದರ ಮೇಲೆ ಧೂಪಹಾಕಬಾರದು; ಯಾಕೆಂದರೆ ಇದು ಈರ್ಷೆಯುಳ್ಳ ಗಂಡನ ಧಾನ್ಯಸಮರ್ಪಣೆಯಾಗಿದೆ. ಆಕೆಯ ದೋಷವನ್ನು ಹೊರಪಡಿಸಲು ಕೊಟ್ಟಂಥ ಧಾನ್ಯಸಮರ್ಪಣೆ ಇದಾಗಿದೆ.
16 “ಯಾಜಕನು ಅವಳನ್ನು ತಂದು ಯೆಹೋವನ ಎದುರಿನಲ್ಲಿ ನಿಲ್ಲಿಸಬೇಕು. 17 ಬಳಿಕ ಅವನು ಮಣ್ಣಿನ ಪಾತ್ರೆಯಲ್ಲಿ ಸ್ವಲ್ಪ ಪವಿತ್ರ ಜಲವನ್ನು ತೆಗೆದುಕೊಂಡು ಪವಿತ್ರ ಗುಡಾರದ ನೆಲದಿಂದ ಸ್ವಲ್ಪ ಧೂಳನ್ನು ಆ ನೀರಿನಲ್ಲಿ ಹಾಕಬೇಕು. 18 ಯಾಜಕನು ಅವಳನ್ನು ಯೆಹೋವನ ಮುಂದೆ ನಿಲ್ಲಿಸಿ ಅವಳ ತಲೆಯ ಕೂದಲನ್ನು ಕೆದರಿಸಿ ಆಕೆಯ ದೋಷವನ್ನು ಹೊರಪಡಿಸುವ ಧಾನ್ಯಸಮರ್ಪಣೆಯನ್ನು ಅವಳ ಕೈಯಲ್ಲಿ ಇಡಬೇಕು. ಅದು ಈರ್ಷೆಯುಳ್ಳ ಗಂಡನ ಧಾನ್ಯಸಮರ್ಪಣೆ. ಅದೇ ಸಮಯದಲ್ಲಿ ಶಾಪವನ್ನು ಉಂಟುಮಾಡುವ ನೀರಿನ ವಿಶೇಷ ಪಾತ್ರೆಯನ್ನು ಯಾಜಕನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕು.
19 “ಬಳಿಕ ಯಾಜಕನು ಸ್ತ್ರೀಗೆ ಸುಳ್ಳಾಡದೆ ಸತ್ಯವನ್ನೇ ಹೇಳಬೇಕೆಂದು ಪ್ರಮಾಣ ಮಾಡಿಸುವನು. ಯಾಜಕನು ಅವಳಿಗೆ ಹೀಗೆನ್ನಬೇಕು: ‘ನೀನು ಪರಪುರುಷನ ಸಂಗ ಮಾಡದೆ ಗಂಡನ ಅಧೀನದಲ್ಲಿದ್ದು ಪಾತಿವ್ರತ್ಯವನ್ನು ಬಿಡದೆ ದುಷ್ಕೃತ್ಯವನ್ನು ಮಾಡದೆ ಇರುವವಳಾದರೆ, ಶಾಪವನ್ನು ಉಂಟುಮಾಡುವ ಕಹಿನೀರಿನಿಂದ ನಿನಗೆ ಹಾನಿಯಾಗಬಾರದು. 20 ಆದರೆ ನೀನು ನಿನ್ನ ಗಂಡನಲ್ಲದ ಪರಪುರುಷನೊಡನೆ ಸಂಗಮಾಡಿ ನಿನ್ನ ಗಂಡನಿಗೆ ವಿರುದ್ಧವಾಗಿ ಪಾಪಮಾಡಿದ್ದರೆ, ನೀನು ಶುದ್ಧಳಲ್ಲ. 21 ಆದ್ದರಿಂದ ನೀನು ಈ ವಿಶೇಷ ಜಲವನ್ನು ಕುಡಿಯುವಾಗ, ನಿನಗೆ ಹಾನಿಯುಂಟಾಗುವುದು. ನಿನಗೆ ಮಕ್ಕಳಾಗುವುದಿಲ್ಲ. ನೀನು ಬಸುರಾಗಿದ್ದರೆ, ನಿನ್ನ ಮಗು ಸಾಯುವುದು. ಆಗ ನಿನ್ನ ಜನರು ನಿನ್ನನ್ನು ದೂರಮಾಡಿ ನಿನ್ನ ವಿರುದ್ಧವಾಗಿ ಕೆಟ್ಟ ಸಂಗತಿಗಳನ್ನು ಹೇಳುವರು.’
“ಬಳಿಕ ಯಾಜಕನು ಆ ಸ್ತ್ರೀಗೆ ಪ್ರಮಾಣ ಮಾಡಲು ಹೇಳಬೇಕು. ಅವಳು, ‘ನಾನು ಸುಳ್ಳಾಡಿದ್ದರೆ, ಈ ಕೆಟ್ಟ ಸಂಗತಿಗಳು ನನಗೆ ಸಂಭವಿಸಲಿ’ ಎಂದು ಹೇಳಬೇಕು. 22 ಯಾಜಕನು, ‘ಹಾನಿಯನ್ನು ಉಂಟುಮಾಡುವ ಈ ನೀರನ್ನು ನೀನು ಕುಡಿಯಬೇಕು. ನೀನು ಪಾಪ ಮಾಡಿದ್ದರೆ ನಿನಗೆ ಮಕ್ಕಳಾಗುವುದಿಲ್ಲ ಮತ್ತು ನೀನು ಪಡೆಯುವ ಮಗು ಹುಟ್ಟುವ ಮೊದಲೇ ಸಾಯುವುದು’ ಎಂದು ಹೇಳಬೇಕು. ಅದಕ್ಕೆ ಸ್ತ್ರೀಯು, ‘ಹಾಗೆಯೇ ಆಗಲಿ’ ಎಂದು ಹೇಳಬೇಕು.
23 “ಯಾಜಕನು ಈ ಶಾಪಗಳನ್ನು ಒಂದು ಸುರುಳಿಯಲ್ಲಿ ಬರೆಯಬೇಕು. ಬಳಿಕ ಆ ಕಹಿ ನೀರಿನಿಂದ ಆ ಸುರುಳಿಯ ವಾಕ್ಯವನ್ನು ತೊಳೆಯಬೇಕು. 24 ಆಮೇಲೆ ಶಾಪವನ್ನು ಬರಮಾಡುವ ಆ ನೀರನ್ನು ಆ ಸ್ತ್ರೀಗೆ ಕುಡಿಸಬೇಕು. ಈ ನೀರು ಅವಳೊಳಗೆ ಸೇರುವುದು. ಅವಳು ದೋಷಿಯಾಗಿದ್ದರೆ ಅವಳಿಗೆ ಮಹಾಸಂಕಟವನ್ನು ಉಂಟುಮಾಡುವುದು.
25 “ಯಾಜಕನು ಈರ್ಷೆಯುಳ್ಳ ಗಂಡನ ಧಾನ್ಯಸಮರ್ಪಣೆಯನ್ನು ಆಕೆಯ ಕೈಗಳಿಂದ ತೆಗೆದುಕೊಂಡು ಅದನ್ನು ಯೆಹೋವನ ಮುಂದೆ ಪ್ರತಿಷ್ಠಿಸಿ, ಬಳಿಕ ಅದನ್ನು ವೇದಿಕೆಯ ಮೇಲೆ ಅರ್ಪಿಸಬೇಕು. 26 ಯಾಜಕನು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಆ ಹಿಟ್ಟಿನಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಯಜ್ಞವೇದಿಕೆಯ ಮೇಲೆ ಹೋಮಮಾಡಬೇಕು. ತರುವಾಯ ಅವನು ಆ ನೀರನ್ನು ಕುಡಿಯಲು ಸ್ತ್ರೀಗೆ ಕೊಡಬೇಕು. 27 ಅವಳು ಅಶುದ್ಧಳಾಗಿದ್ದರೆ ಮತ್ತು ತನ್ನ ಗಂಡನಿಗೆ ವಿರುದ್ಧವಾಗಿ ಪಾಪಮಾಡಿದ್ದರೆ, ನೀರು ಅವಳಿಗೆ ಹಾನಿಯನ್ನು ಉಂಟುಮಾಡುವುದು, ನೀರು ಅವಳೊಳಗೆ ಹೋಗಿ ಅವಳಿಗೆ ಮಹಾಸಂಕಟವನ್ನು ಉಂಟುಮಾಡುವುದು. ನೀರು ಅವಳನ್ನು ಆ ಕೂಡಲೇ ಬಂಜೆಯನ್ನಾಗಿ ಮಾಡುವುದು. ಅವಳು ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗಿರುವಳು. 28 ಆದರೆ ಅವಳು ತನ್ನ ಗಂಡನಿಗೆ ವಿರುದ್ಧವಾಗಿ ಪಾಪ ಮಾಡದೆ ಶುದ್ಧಳಾಗಿದ್ದರೆ, ಯಾಜಕನು ಅವಳನ್ನು ದೋಷಿಯಲ್ಲವೆಂದು ಹೇಳುವನು. ಆಗ ಅವಳಿಗೆ ಯಾವ ಹಾನಿಯಾಗದೆ, ಇನ್ನೂ ಮಕ್ಕಳನ್ನು ಹೆರಲು ಶಕ್ತಳಾಗಿರುವಳು.
29 “ಇದೇ ವ್ಯಭಿಚಾರ ಸಂಶಯವನ್ನು ಪರಿಹರಿಸುವ ವಿಧಿ. ಗಂಡನ ಸ್ವಾಧೀನದಲ್ಲಿರುವ ಹೆಂಡತಿಯು 30 ಪಾತಿವ್ರತ್ಯವನ್ನು ಬಿಟ್ಟು ಜಾರತ್ವ ಮಾಡಿರುವಾಗಲೂ ಗಂಡನು ಹೆಂಡತಿಯ ವಿಷಯದಲ್ಲಿ ಸಂಶಯಪಡುವಾಗಲೂ ಅವನು ಮಾಡಬೇಕಾದದ್ದು ಇದೇ. ಯಾಜಕನು ಸ್ತ್ರೀಗೆ ಯೆಹೋವನ ಮುಂದೆ ನಿಲ್ಲಲು ಹೇಳಬೇಕು. ಆಗ ಯಾಜಕನು ಈ ಎಲ್ಲಾ ಸಂಗತಿಗಳನ್ನು ಮಾಡುವನು. ಇದು ನಿಯಮವಾಗಿದೆ. 31 ಗಂಡನು ನಿರಪರಾಧಿಯಾಗಿರುವನು. ಆದರೆ ಸ್ತ್ರೀಯು ಪಾಪಮಾಡಿದ್ದರೆ, ಆಕೆ ಅದರ ಫಲವನ್ನು ಅನುಭವಿಸಬೇಕು.”
ರಚನೆಗಾರ: ದಾವೀದ.
39 “ನಾನು ಜಾಗರೂಕನಾಗಿ ಮಾತಾಡುವೆ.
ನನ್ನ ನಾಲಿಗೆ ನನ್ನನ್ನು ಪಾಪಕ್ಕೆ ಸಿಕ್ಕಿಸದಂತೆ ನೋಡಿಕೊಳ್ಳುವೆ.
ದುಷ್ಟರ ಮಧ್ಯದಲ್ಲಿ ಬಾಯಿಮುಚ್ಚಿಕೊಂಡಿರುವೆ” ಅಂದುಕೊಂಡೆನು.
2 ನಾನು ಮೌನವಾಗಿದ್ದೆನು.
ಒಳ್ಳೆಯದನ್ನೂ ಹೇಳದೆ ಸುಮ್ಮನಿದ್ದೆನು.
ಆದರೆ ನನ್ನ ವೇದನೆಯು ಹೆಚ್ಚಾಯಿತು.
3 ನಾನು ಬಹುಕೋಪಗೊಂಡಿದ್ದೆ.
ಅದರ ಕುರಿತು ಆಲೋಚಿಸಿದಷ್ಟೂ ಕೋಪವು ಅಧಿಕವಾಯಿತು.
ಆಗ ನಾನು ಬಾಯಿತೆರೆದು,
4 ಯೆಹೋವನೇ, ನನ್ನ ಗತಿಯನ್ನು ತಿಳಿಸು!
ನನ್ನ ಈ ಅಲ್ಪ ಜೀವಿತವು ಇನ್ನೆಷ್ಟು ಕಾಲವಿರುವುದು?
ನಾನೆಷ್ಟು ಕಾಲ ಬದುಕುವೆ?
5 ನೀನು ನನಗೆ ಕೇವಲ ಅಲ್ಪಾಯುಷ್ಯವನ್ನು ಕೊಟ್ಟಿರುವೆ.
ನನ್ನ ಅಲ್ಪ ಜೀವಿತವು ನಿನ್ನ ದೃಷ್ಟಿಯಲ್ಲಿ ಗಣನೆಗೂ ಬಾರದು.
ಮನುಷ್ಯನ ಜೀವಿತವು ಕೇವಲ ಮೋಡದಂತೆ ಕ್ಷಣಿಕವಾಗಿದೆ.
ಯಾವನೂ ಸದಾಕಾಲ ಬದುಕುವುದಿಲ್ಲ!
6 ನಮ್ಮ ಜೀವಿತವು ಕೇವಲ ಕನ್ನಡಿಯ ಪ್ರತಿಬಿಂಬದಂತಿದೆ.
ನಾವು ಗಡಿಬಿಡಿಯಿಂದ ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತೇವೆ.
ನಾವು ಸತ್ತ ಮೇಲೆ ಅವು ಯಾರ ಪಾಲಾಗುವುದೋ ನಮಗೆ ತಿಳಿಯದು.
7 ಯೆಹೋವನೇ, ನನಗಿರುವ ನಿರೀಕ್ಷೆ ಯಾವುದು?
ನನ್ನ ನಿರೀಕ್ಷೆಯು ನೀನೇ.
8 ನನ್ನ ಎಲ್ಲಾ ಅಪರಾಧಗಳಿಂದ ನನ್ನನ್ನು ಬಿಡಿಸು.
ಮೂರ್ಖರ ನಿಂದೆಗೆ ನನ್ನನ್ನು ಗುರಿಮಾಡಬೇಡ.
9 ನಾನು ಬಾಯಿತೆರೆದು ಮಾತಾಡುವುದಿಲ್ಲ.
ನೀನು ನ್ಯಾಯಕ್ಕೆ ತಕ್ಕಂತೆ ಮಾಡಿರುವೆ.
10 ನನ್ನನ್ನು ಶಿಕ್ಷಿಸುವುದನ್ನು ನಿಲ್ಲಿಸು.
ಇಲ್ಲವಾದರೆ, ನಾನು ಸತ್ತೇ ಹೋಗುವೆನು.
11 ನೀನು ಅಪರಾಧಗಳಿಗೆ ತಕ್ಕಂತೆ ಜನರನ್ನು ದಂಡಿಸಿ, ನಿನ್ನ ಜೀವಮಾರ್ಗವನ್ನು ಅವರಿಗೆ ಉಪದೇಶಿಸುವೆ.
ನುಸಿಯು ಬಟ್ಟೆಯನ್ನು ತಿಂದುಬಿಡುವಂತೆ ಜನರಿಗೆ ಇಷ್ಟವಾದವುಗಳನ್ನು ನೀನು ನಾಶಮಾಡುವೆ.
ಹೌದು, ನಮ್ಮ ಜೀವಿತಗಳು ಬೇಗನೆ ಕಣ್ಮರೆಯಾಗುವ ಒಂದು ಚಿಕ್ಕ ಮೋಡದಂತಿವೆ.
12 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು!
ನನ್ನ ಮೊರೆಗೆ ಕಿವಿಗೊಡು!
ನನ್ನ ಕಣ್ಣೀರನ್ನು ನೋಡು!
ನಾನು ಈ ಜೀವಿತವನ್ನು ಕೇವಲ ಒಬ್ಬ ಪ್ರಯಾಣಿಕನಂತೆ ನಿನ್ನೊಂದಿಗೆ ಸಾಗಿಸುತ್ತಿರುವೆ.
ನನ್ನ ಎಲ್ಲಾ ಪೂರ್ವಿಕರಂತೆ, ನಾನು ಇಲ್ಲಿ ಕೇವಲ ಸ್ವಲ್ಪಕಾಲ ಜೀವಿಸುವೆನು.
13 ನೀನು ಕೋಪದಿಂದ ನನ್ನ ಕಡೆಗೆ ನೋಡಬೇಡ! ಸಾಯುವುದಕ್ಕಿಂತ ಮೊದಲು ನನಗೆ ಸಂತೋಷವಿರಲಿ.
ಇನ್ನು ಸ್ವಲ್ಪಕಾಲದಲ್ಲಿ ನಾನು ಇಲ್ಲವಾಗುವೆನು!
ಪ್ರಿಯತಮೆ
3 ರಾತ್ರಿಯಲ್ಲಿಯೂ ನನ್ನ ಪ್ರಾಣಪ್ರಿಯನಿಗಾಗಿ
ಹಾಸಿಗೆಯ ಮೇಲೆ ಹುಡುಕಿದೆನು.
ಎಷ್ಟು ಹುಡುಕಿದರೂ
ಅವನು ಸಿಕ್ಕಲಿಲ್ಲ.
2 ಈಗ ನಾನು ಎದ್ದು
ನಗರದಲ್ಲೆಲ್ಲಾ ಸುತ್ತಾಡುವೆನು.
ನನ್ನ ಪ್ರಿಯನಿಗಾಗಿ
ಬೀದಿಗಳಲ್ಲಿಯೂ ಚೌಕಗಳಲ್ಲಿಯೂ ಹುಡುಕುವೆನು.
ನಾನು ಅವನಿಗಾಗಿ ಹುಡುಕಿದೆ,
ಆದರೆ ಅವನು ಸಿಕ್ಕಲಿಲ್ಲ.
3 ನಗರದಲ್ಲಿ ಗಸ್ತು ತಿರುಗುವ ಕಾವಲುಗಾರರನ್ನು ಕಂಡು,
“ನನ್ನ ಪ್ರಿಯನನ್ನು ನೋಡಿದಿರಾ?” ಎಂದು ಕೇಳಿದೆನು.
4 ಅಲ್ಲಿಂದ ಸ್ವಲ್ಪದೂರ ಹೋದಾಗ,
ನನ್ನ ಪ್ರಿಯನನ್ನು ಕಂಡು ಅಪ್ಪಿಕೊಂಡೆ.
ನನ್ನ ತಾಯಿಯ ಮನೆಗೆ,
ಅಂದರೆ ನನ್ನನ್ನು ಹೆತ್ತವಳ ಕೋಣೆಗೆ ಸೇರುವತನಕ
ಅವನನ್ನು ಬಿಡದೆ ಹಿಡಿದುಕೊಂಡೇ ಹೋದೆನು.
ಪ್ರಿಯತಮೆ ಸ್ತ್ರೀಯರಿಗೆ
5 ಜೆರುಸಲೇಮಿನ ಸ್ತ್ರೀಯರೇ,
ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ, ಬೆಳೆಯಿಸುವುದಿಲ್ಲವೆಂದು
ಜಿಂಕೆಗಳ ಮೇಲೆಯೂ ಕಾಡುಹುಲ್ಲೆಗಳ ಮೇಲೆಯೂ
ನನಗೆ ಪ್ರಮಾಣಮಾಡಿರಿ.
ಜೆರುಸಲೇಮಿನ ಸ್ತ್ರೀಯರ ಮಾತುಗಳು
6 ಮಹಾ ಜನಸಮೂಹದೊಡನೆ
ಅಡವಿಯಿಂದ ಬರುತ್ತಿರುವ ಈ ಸ್ತ್ರೀ ಯಾರು?
ಗೋಲರಸ, ಧೂಪ, ವರ್ತಕರ ಸಕಲ ಸುಗಂಧ ದ್ರವ್ಯಗಳನ್ನು ಸುಡುವಾಗ
ಮೇಲೇರುವ ಹೊಗೆಯಂತೆ ಧೂಳು ಮೇಲೇರುತ್ತಿದೆ.
7 ನೋಡಿ, ಅದು ಸೊಲೊಮೋನನ ಪಲ್ಲಕ್ಕಿ.
ಅದರ ಸುತ್ತಲೂ ಅರವತ್ತು ಮಂದಿ ಸೈನಿಕರಿದ್ದಾರೆ.
ಅವರು ಇಸ್ರೇಲಿನ ಸೈನಿಕರು!
8 ಯುದ್ಧವೀರರಾದ ಅವರು ಕೈಯಲ್ಲಿ ಕತ್ತಿ ಹಿಡಿದಿದ್ದಾರೆ;
ರಾತ್ರಿಯ ಅಪಾಯದ ನಿಮಿತ್ತ
ಅವರು ಸೊಂಟಕ್ಕೆ ಕತ್ತಿ ಕಟ್ಟಿಕೊಂಡಿದ್ದಾರೆ.
9 ರಾಜನಾದ ಸೊಲೊಮೋನನು ತನಗೋಸ್ಕರ ಪಲ್ಲಕ್ಕಿಯನ್ನು
ಲೆಬನೋನಿನ ದೇವದಾರು ಮರದಿಂದ ಮಾಡಿಸಿದ್ದಾನೆ.
10 ಅದರ ಕಂಬಗಳನ್ನು ಬೆಳ್ಳಿಯಿಂದಲೂ
ಅದರ ಅಡ್ಡಕಂಬಗಳನ್ನು ಚಿನ್ನದಿಂದಲೂ ಮಾಡಲಾಗಿದೆ.
ಅದರ ಆಸನವನ್ನು ನೇರಳೆ ಬಣ್ಣದ ಬಟ್ಟೆಯಿಂದ ಹೊದಿಸಲಾಗಿದೆ.
ಆ ಬಟ್ಟೆಯನ್ನು ಜೆರುಸಲೇಮಿನ ಸ್ತ್ರೀಯರು ಕಸೂತಿ ಕೆಲಸದಿಂದ ಅಲಂಕರಿಸಿದ್ದಾರೆ.
11 ಚೀಯೋನಿನ ಸ್ತ್ರೀಯರೇ,
ಹೊರಗೆ ಹೋಗಿ ರಾಜನಾದ ಸೊಲೊಮೋನನನ್ನು ನೋಡಿರಿ.
ಅವನ ಮದುವೆಯ ದಿನದಲ್ಲಿ
ಹೃದಯವು ಹರ್ಷಗೊಂಡಿದ್ದಾಗ
ಅವನ ತಾಯಿ ತಲೆಗಿಟ್ಟ ಕಿರೀಟವನ್ನು ಧರಿಸಿಕೊಂಡಿದ್ದಾನೆ.
ಯೇಸು ಮೋಶೆಗಿಂತ ಶ್ರೇಷ್ಠನು
3 ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ಪರಿಶುದ್ಧ ಜನರಾಗುವುದಕ್ಕಾಗಿ ದೇವರಿಂದ ಕರೆಯಲ್ಪಟ್ಟವರಾದ ನೀವು ಯೇಸುವನ್ನೇ ಕುರಿತು ಆಲೋಚಿಸಿರಿ. ದೇವರು ಆತನನ್ನು ನಮ್ಮ ಬಳಿಗೆ ಕಳುಹಿಸಿದನು. ಆತನೇ ನಮ್ಮ ನಂಬಿಕೆಯ ಪ್ರಧಾನಯಾಜಕನು. 2 ಯೇಸುವನ್ನು ದೇವರು ನಮ್ಮ ಬಳಿಗೆ ಕಳುಹಿಸಿ, ಆತನನ್ನು ನಮ್ಮ ಪ್ರಧಾನಯಾಜಕನನ್ನಾಗಿ ಮಾಡಿದನು. ಆತನು ಮೋಶೆಯಂತೆ ದೇವರಿಗೆ ನಂಬಿಗಸ್ತನಾಗಿದ್ದನು. ದೇವರ ಮನೆಯಲ್ಲಿ ದೇವರ ಇಷ್ಟಕ್ಕನುಗುಣವಾಗಿ ಮಾಡಬೇಕಾದುದನ್ನೆಲ್ಲ ಆತನು ಮಾಡಿದನು. 3 ಒಬ್ಬ ಮನುಷ್ಯನು ಮನೆಯನ್ನು ಕಟ್ಟಿದಾಗ, ಜನರು ಮನೆಗಿಂತಲೂ ಅವನಿಗೇ ಹೆಚ್ಚು ಮಾನ್ಯತೆಯನ್ನು ಕೊಡುವಂತೆಯೇ ಯೇಸು ಮೋಶೆಗಿಂತ ಹೆಚ್ಚು ಮಾನ್ಯತೆಯನ್ನು ಹೊಂದಿದ್ದಾನೆ. 4 ಪ್ರತಿಯೊಂದು ಮನೆಯು ಯಾರಾದರೊಬ್ಬರಿಂದ ಕಟ್ಟಲ್ಪಟ್ಟಿರಬೇಕು. ಆದರೆ ದೇವರು ಎಲ್ಲವನ್ನು ನಿರ್ಮಿಸಿದನು. 5 ದೇವರ ಮನೆಯಲ್ಲೆಲ್ಲಾ ಮೋಶೆಯು ಸೇವಕನಂತೆ ನಂಬಿಗಸ್ತನಾಗಿದ್ದನು. ಮುಂದೆ ಪ್ರಕಟವಾಗಲಿದ್ದ ಸಂಗತಿಗಳಿಗೆ ಅವನು ಸಾಕ್ಷಿಯಾಗಿದ್ದನು. 6 ಕ್ರಿಸ್ತನಾದರೋ ಮಗನಾಗಿ ದೇವರ ಮನೆಯನ್ನು ಆಳುವುದರಲ್ಲಿ ನಂಬಿಗಸ್ತನಾಗಿದ್ದಾನೆ. ವಿಶ್ವಾಸಿಗಳಾದ ನಾವು ನಮಗಿರುವ ಮಹಾ ನಿರೀಕ್ಷೆಯಲ್ಲಿ ದೃಢವಾಗಿಯೂ ಹೆಮ್ಮೆಯಿಂದಲೂ ಇರುವುದಾಗಿದ್ದರೆ ದೇವರ ಮನೆಯವರಾಗಿದ್ದೇವೆ.
ನಾವು ದೇವರನ್ನು ಅನುಸರಿಸಲೇಬೇಕು
7 ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ,
“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
8 ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.
ಅಂದು ಅವರು ಮರುಭೂಮಿಯಲ್ಲಿ ದೇವರನ್ನು ಪರೀಕ್ಷಿಸಿದರು.
9 ನಾನು ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಮಾಡಿದ್ದನ್ನು ನಿಮ್ಮ ಪೂರ್ವಿಕರು ನೋಡಿದರೂ
ನನ್ನನ್ನೂ ನನ್ನ ತಾಳ್ಮೆಯನ್ನೂ ಪರೀಕ್ಷಿಸಿದರು.
10 ಆದ್ದರಿಂದ ಅವರ ಮೇಲೆ ನಾನು ಕೋಪಗೊಂಡಿದ್ದೆನು.
‘ಅವರ ಆಲೋಚನೆಗಳು ಯಾವಾಗಲೂ ತಪ್ಪಾಗಿವೆ.
ನನ್ನ ಮಾರ್ಗವನ್ನು ಅವರು ಅರ್ಥಮಾಡಿಕೊಳ್ಳಲೇ ಇಲ್ಲ’ ಎಂದು ನಾನು ಹೇಳಿದೆನು.
11 ‘ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ’
ಎಂದು ನಾನು ಕೋಪಗೊಂಡು ಪ್ರಮಾಣ ಮಾಡಿದೆನು.”(A)
12 ಆದ್ದರಿಂದ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಯಾರೂ ಕೆಟ್ಟಬುದ್ಧಿಯುಳ್ಳವರಾಗದಂತೆ, ನಂಬದವರಾಗದಂತೆ, ಜೀವಸ್ವರೂಪನಾದ ದೇವರನ್ನು ತೊರೆಯದಂತೆ ಎಚ್ಚರಿಕೆಯಿಂದಿರಿ. 13 ಆದರೆ ಒಬ್ಬರನ್ನೊಬ್ಬರು ಪ್ರತಿದಿನವೂ ಸಂತೈಸಿರಿ. “ಈ ದಿನ”ವು ಇನ್ನೂ ಇರುವಾಗಲೇ ಇದನ್ನೆಲ್ಲ ಮಾಡಿರಿ. ಪಾಪದಿಂದಾಗಲಿ ಪಾಪವು ಮೋಸಗೊಳಿಸುವ ರೀತಿಯಿಂದಾಗಲಿ ನಿಮ್ಮಲ್ಲಿ ಯಾರೂ ಕಠಿಣರಾಗದಂತೆ ಒಬ್ಬರಿಗೊಬ್ಬರು ಸಹಾಯ ಮಾಡಿರಿ. 14 ನಾವೆಲ್ಲರೂ ಒಟ್ಟಾಗಿ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವೆ. ಆರಂಭದಲ್ಲಿ ನಮಗಿದ್ದ ದೃಢನಂಬಿಕೆಯನ್ನು ಅಂತ್ಯದವರೆಗೂ ಬಲವಾಗಿ ಹಿಡಿದುಕೊಳ್ಳುವುದಾದರೆ ಇದು ನಿಜವಾಗುತ್ತದೆ. 15 ಪವಿತ್ರ ಗ್ರಂಥವು ಹೇಳುವುದೇನೆಂದರೆ:
“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”(B)
16 ದೇವರ ಸ್ವರವನ್ನು ಕೇಳಿಯೂ ಆತನಿಗೆ ವಿರುದ್ಧರಾದವರು ಯಾರು? ಮೋಶೆಯ ಮೂಲಕ ಈಜಿಪ್ಟಿನಿಂದ ಬಿಡುಗಡೆ ಹೊಂದಿದವರಲ್ಲವೇ? 17 ನಲವತ್ತು ವರ್ಷಗಳ ಕಾಲ ದೇವರು ಯಾರ ಮೇಲೆ ಕೋಪಗೊಂಡಿದ್ದನು? ಪಾಪವನ್ನು ಮಾಡಿದವರ ಮೇಲಲ್ಲವೇ? ಅವರೆಲ್ಲರೂ ಮರುಭೂಮಿಯಲ್ಲಿ ಸತ್ತುಹೋದರು. 18 ತನ್ನ ವಿಶ್ರಾಂತಿಯಲ್ಲಿ ಅವರು ಸೇರುವುದೇ ಇಲ್ಲವೆಂದು ದೇವರು ಪ್ರಮಾಣ ಮಾಡಿದಾಗ, ಆತನು ಯಾರೊಡನೆ ಮಾತಾಡುತ್ತಿದ್ದನು? ತನಗೆ ಅವಿಧೇಯರಾದ ಜನರ ಬಗ್ಗೆ ಅಲ್ಲವೇ? 19 ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ಆ ಜನರಿಗೆ ಅವಕಾಶ ದೊರೆಯಲಿಲ್ಲ. ಅವರಲ್ಲಿ ನಂಬಿಕೆ ಇಲ್ಲದಿದ್ದ ಕಾರಣವೇ ಅವರು ಪ್ರವೇಶಿಸಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International