M’Cheyne Bible Reading Plan
ಕೆಹಾತ್ ಗೋತ್ರದವರ ಕೆಲಸಗಳು
4 ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ: 2 “ಕೆಹಾತ್ ಗೋತ್ರದ ಪುರುಷರನ್ನು ಲೆಕ್ಕಿಸು. (ಕೆಹಾತ್ಯರು ಲೇವಿ ವಂಶದವರಾಗಿದ್ದಾರೆ.) 3 ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡಲು ಯೋಗ್ಯರಾದ ಮೂವತ್ತರಿಂದ ಐವತ್ತರೊಳಗಿನ ಎಲ್ಲಾ ಪುರುಷರನ್ನು ಲೆಕ್ಕಿಸು. 4 ಅವರು ದೇವದರ್ಶನಗುಡಾರದಲ್ಲಿರುವ ಮಹಾ ಪರಿಶುದ್ಧವಸ್ತುಗಳನ್ನು ನೋಡಿಕೊಳ್ಳಬೇಕು.
5 “ಇಸ್ರೇಲರು ಹೊಸ ಸ್ಥಳಕ್ಕೆ ಪ್ರಯಾಣ ಮಾಡುವಾಗ ಆರೋನನೂ ಅವನ ಪುತ್ರರೂ ದೇವದರ್ಶನಗುಡಾರದೊಳಕ್ಕೆ ಹೋಗಿ, ಮಹಾ ಪವಿತ್ರ ಸ್ಥಳವನ್ನು ಮರೆಮಾಡುವ ತೆರೆಯನ್ನು ಇಳಿಸಿ, ಅದನ್ನು ಒಡಂಬಡಿಕೆಯ ಪವಿತ್ರ ಪೆಟ್ಟಿಗೆಗೆ ಹೊದಿಸಬೇಕು. 6 ಬಳಿಕ ಅವರು ಇವುಗಳಿಗೆಲ್ಲ ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನು ಹೊದಿಸಬೇಕು. ಆಮೇಲೆ ಅವರು ನೀಲಿಬಟ್ಟೆಯನ್ನು ತೊಗಲಿನ ಮೇಲೆ ಹಾಸಿ ಪವಿತ್ರ ಪೆಟ್ಟಿಗೆಯ ಬಳೆಗಳಲ್ಲಿ ಹೊರುವ ಕೋಲುಗಳನ್ನು ಸೇರಿಸಬೇಕು.”
7 “ಬಳಿಕ ಅವರು ಪವಿತ್ರ ಮೇಜಿನ ಮೇಲೆ ನೀಲಿಬಟ್ಟೆಯನ್ನು ಹಾಸಬೇಕು. ಪಾನದ್ರವ್ಯಾರ್ಪಣೆಗಳಿಗಾಗಿ ತಟ್ಟೆಗಳನ್ನೂ ಚಮಚಗಳನ್ನೂ ಬಟ್ಟಲುಗಳನ್ನೂ ಹೂಜೆಗಳನ್ನೂ ವಿಶೇಷ ರೊಟ್ಟಿಯನ್ನೂ ಮೇಜಿನ ಮೇಲೆ ಇಡಬೇಕು. 8 ಬಳಿಕ ಅವುಗಳ ಮೇಲೆ ಕೆಂಪುಬಟ್ಟೆಯನ್ನು ಹಾಸಿ, ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನು ಅದಕ್ಕೆ ಹೊದಿಸಬೇಕು. ಬಳಿಕ ಹೊರುವ ಕೋಲುಗಳನ್ನು ಮೇಜಿನ ಬಳೆಗಳಲ್ಲಿ ಸೇರಿಸಬೇಕು.
9 “ಆಮೇಲೆ ದೀಪಸ್ತಂಭಕ್ಕೂ ಅದರ ದೀಪಗಳಿಗೂ ದೀಪಗಳ ಉಪಕರಣಗಳಿಗೂ ಬೂದಿ ತೆಗೆಯುವ ಅಗ್ಗಿಷ್ಠಿಕೆಗೂ ಮತ್ತು ಅದಕ್ಕಾಗಿ ಉಪಯೋಗಿಸುವ ಎಲ್ಲಾ ಎಣ್ಣೆಯ ಪಾತ್ರೆಗಳಿಗೂ ನೀಲಿಬಟ್ಟೆಯನ್ನು ಹೊದಿಸಬೇಕು. 10 ಬಳಿಕ ದೀಪಸ್ತಂಭಕ್ಕೂ ಅದರ ಎಲ್ಲಾ ಉಪಕರಣಗಳಿಗೂ ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನು ಹೊದಿಸಬೇಕು. ಆಮೇಲೆ ಅವರು ಈ ಎಲ್ಲಾ ವಸ್ತುಗಳನ್ನು ಹೊರುವ ಕೋಲುಗಳಿಗೆ ಕಟ್ಟಬೇಕು.
11 “ಅವರು ಚಿನ್ನದ ವೇದಿಕೆಯ ಮೇಲೆ ನೀಲಿ ಬಟ್ಟೆಯನ್ನು ಹಾಸಿ, ಶ್ರೇಷ್ಠ ತೊಗಲಿಂದ ಅದನ್ನು ಮುಚ್ಚಬೇಕು. ಬಳಿಕ ಅವರು ಹೊರುವ ಕೋಲುಗಳನ್ನು ವೇದಿಕೆಯ ಬಳೆಗಳಿಗೆ ಸೇರಿಸಬೇಕು.
12 “ಬಳಿಕ ಆರಾಧನೆಗಾಗಿ ಪವಿತ್ರಸ್ಥಳದಲ್ಲಿ ಉಪಯೋಗಿಸಲ್ಪಡುವ ಎಲ್ಲಾ ವಿಶೇಷ ವಸ್ತುಗಳನ್ನು ಒಟ್ಟಾಗಿ ಸೇರಿಸಬೇಕು. ಅವುಗಳನ್ನು ನೀಲಿಬಟ್ಟೆಯಿಂದ ಮುಚ್ಚಬೇಕು. ಬಳಿಕ ಅವುಗಳಿಗೆ ಶ್ರೇಷ್ಠವಾದ ತೊಗಲನ್ನು ಹೊದಿಸಬೇಕು. ಅವರು ಈ ವಸ್ತುಗಳನ್ನು ಹೊರುವುದಕ್ಕಾಗಿ ಚೌಕಟ್ಟಿಗೆ ಕಟ್ಟಬೇಕು.
13 “ಅವರು ತಾಮ್ರದ ವೇದಿಕೆಯಿಂದ ಬೂದಿಯನ್ನು ತೆಗೆದು, ನೇರಳೆಬಟ್ಟೆಯನ್ನು ಅದರ ಮೇಲೆ ಹಾಸಬೇಕು. 14 ಬಳಿಕ ಅವರು ವೇದಿಕೆಯಲ್ಲಿ ಆರಾಧನೆಗಾಗಿ ಉಪಯೋಗಿಸಲ್ಪಡುವ ಎಲ್ಲಾ ವಸ್ತುಗಳನ್ನು ಒಟ್ಟಾಗಿ ಸೇರಿಸಬೇಕು. ಅವುಗಳು ಯಾವುವೆಂದರೆ, ಅಗ್ಗಿಷ್ಟಿಗೆಗಳು, ಮುಳ್ಳುಚಮಚಗಳು, ಸಲಿಕೆಗಳು ಮತ್ತು ಬೋಗುಣಿಗಳು. ಅವರು ಇವುಗಳನ್ನು ತಾಮ್ರದ ವೇದಿಕೆಯ ಮೇಲೆ ಇಡಬೇಕು. ಬಳಿಕ ಅವರು ಶ್ರೇಷ್ಠವಾದ ತೊಗಲಿನ ಹೊದಿಕೆಯನ್ನು ಇವುಗಳಿಗೆಲ್ಲ ಹೊದಿಸಿ, ಹೊರುವ ಕೋಲುಗಳನ್ನು ವೇದಿಕೆಯ ಬಳೆಗಳಲ್ಲಿ ಸೇರಿಸಬೇಕು.
15 “ಇಸ್ರೇಲರು ಪ್ರಯಾಣಮಾಡುವ ಸಮಯದಲ್ಲಿ ಆರೋನನು ಮತ್ತು ಅವನ ಪುತ್ರರು ಪವಿತ್ರವಸ್ತುಗಳಿಗೂ ಪವಿತ್ರ ಉಪಕರಣಗಳಿಗೂ ಹೊದಿಸಿದ ನಂತರ, ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಹೋಗಬಹುದು. ಈ ರೀತಿ ಅವರು ಪವಿತ್ರವಸ್ತುಗಳನ್ನು ಮುಟ್ಟಬಾರದು; ಅವರು ಮುಟ್ಟಿದರೆ ಸಾಯುತ್ತಾರೆ.
16 “ಮಹಾಯಾಜಕನಾದ ಆರೋನನ ಮಗನಾದ ಎಲ್ಲಾಜಾರನು ಇಡೀ ಪವಿತ್ರ ಗುಡಾರವನ್ನು ಮತ್ತು ಎಲ್ಲಾ ಪವಿತ್ರಸ್ಥಳವನ್ನು ಮತ್ತು ಅದರೊಳಗಿರುವ ಎಲ್ಲಾ ಪಾತ್ರೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾನೆ. ದೀಪದ ಎಣ್ಣೆಗೂ ಪರಿಮಳಧೂಪಕ್ಕೂ ದೈನಂದಿನ ಧಾನ್ಯಸಮರ್ಪಣೆಗೂ ಅಭಿಷೇಕತೈಲಕ್ಕೂ ಅವನು ಜವಾಬ್ದಾರನಾಗಿದ್ದಾನೆ.”
17 ಯೆಹೋವನು ಮೋಶೆ ಆರೋನರಿಗೆ, 18 “ಕೆಹಾತ್ಯರು ಲೇವಿಯರ ಮಧ್ಯದಿಂದ ಇಲ್ಲವಾಗದಂತೆ ಎಚ್ಚರಿಕೆಯಾಗಿರಿ. 19 ಅವರು ಮಹಾಪರಿಶುದ್ಧ ವಸ್ತುಗಳ ಹತ್ತಿರ ಬಂದಾಗ ಸಾಯದಂತೆ ನೀವು ಅವರ ವಿಷಯದಲ್ಲಿ ಮಾಡಬೇಕಾದದ್ದೇನೆಂದರೆ, ಆರೋನನೂ ಅವನ ಪುತ್ರರೂ ಒಳಗೆ ಬಂದು, ಪ್ರತಿಯೊಬ್ಬ ಕೆಹಾತ್ಯನು ಮಾಡಬೇಕಾದ ಕೆಲಸವನ್ನು ಮತ್ತು ಹೊತ್ತುಕೊಂಡು ಹೋಗಬೇಕಾದದ್ದನ್ನು ತೋರಿಸಲಿ. 20 ಇಲ್ಲವಾದರೆ, ಕೆಹಾತ್ಯರು ಒಳಗೆ ಬಂದು ಪರಿಶುದ್ಧವಸ್ತುಗಳನ್ನು ಮುಟ್ಟುವರು. ಆ ಮಹಾ ಪರಿಶುದ್ಧವಸ್ತುಗಳನ್ನು ಅವರು ಒಂದು ಕ್ಷಣ ಮುಟ್ಟಿದರೂ ಸಾಯುತ್ತಾರೆ” ಎಂದು ಹೇಳಿದನು.
ಗೇರ್ಷೋನ್ ಕುಟುಂಬದವರ ಕೆಲಸಗಳು
21 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 22-23 “ನೀನು ಗೇರ್ಷೋನ್ಯರನ್ನು ಕುಟುಂಬಗಳಿಗನುಸಾರವಾಗಿ ಮತ್ತು ಕುಲಗಳಿಗನುಸಾರವಾಗಿ ಲೆಕ್ಕಿಸು. ಅಲ್ಲದೆ ದೇವದರ್ಶನಗುಡಾರದ ಸೇವೆಯನ್ನು ಮಾಡಲು ಯೋಗ್ಯರಾದ ಗಂಡಸರನ್ನು ಪಟ್ಟಿಮಾಡು. ಅವರ ವಯಸ್ಸು ಮೂವತ್ತರಿಂದ ಐವತ್ತು ವರ್ಷದೊಳಗಿರಬೇಕು.
24 “ವರ್ಗಾವಣೆಗಾಗಿ ಸಾಮಾನುಗಳನ್ನು ಕಟ್ಟುವುದರಲ್ಲಿಯೂ ವರ್ಗಾವಣೆಯಲ್ಲಿಯೂ ಗೇರ್ಷೋನ್ಯರು ಮಾಡತಕ್ಕ ಕೆಲಸ ಯಾವುದೆಂದರೆ: 25 ಅವರು ಪವಿತ್ರ ಗುಡಾರದ ಬಟ್ಟೆಗಳನ್ನು, ದೇವದರ್ಶನಗುಡಾರ ಮತ್ತು ಅದರ ಹೊದಿಕೆ, ಅದರ ಮೇಲಿರುವ ಶ್ರೇಷ್ಠವಾದ ತೊಗಲಿನ ಹೊದಿಕೆ ಮತ್ತು ದೇವದರ್ಶನಗುಡಾರದಲ್ಲಿರುವ ಪ್ರವೇಶದ್ವಾರದ ಪರದೆಯನ್ನು ವರ್ಗಾಯಿಸಬೇಕು. 26 ಅಂಗಳದ ಪರದೆಗಳನ್ನು, ಪವಿತ್ರ ಗುಡಾರವನ್ನು ಮತ್ತು ವೇದಿಕೆಯ ಸುತ್ತಲೂ ಇರುವ ಅಂಗಳ ಪ್ರವೇಶದ್ವಾರದ ಪರದೆಯನ್ನು, ಅವುಗಳ ಹಗ್ಗಗಳನ್ನು ಮತ್ತು ಇವುಗಳ ಎಲ್ಲಾ ಉಪಕರಣಗಳನ್ನು ವರ್ಗಾಯಿಸಬೇಕು. 27 ಗೇರ್ಷೋನ್ಯರು ಮಾಡುವ ಎಲ್ಲಾ ಕೆಲಸಗಳನ್ನು ಅಂದರೆ ವರ್ಗಾವಣೆಗಾಗಿ ಸಾಮಾನುಗಳನ್ನು ಕಟ್ಟುವುದರಲ್ಲಿಯೂ ವರ್ಗಾವಣೆ ಮಾಡುವುದರಲ್ಲಿಯೂ ಆರೋನ ಮತ್ತು ಅವನ ಪುತ್ರರು ಮಾರ್ಗದರ್ಶನ ನೀಡುವರು. ಗೇರ್ಷೋನ್ಯರು ವರ್ಗಾಯಿಸುವ ಎಲ್ಲವನ್ನು ಅವರೇ ಕಾಯಬೇಕೆಂಬ ಜವಾಬ್ದಾರಿಕೆಯನ್ನು ನೀನು ಅವರಿಗೆ ಕೊಡು. 28 ದೇವದರ್ಶನಗುಡಾರಕ್ಕೋಸ್ಕರ ಮತ್ತು ತಮ್ಮ ಕಾವಲಿನ ಕರ್ತವ್ಯದಲ್ಲಿ ಗೇರ್ಷೋನ್ಯರು ಮಾಡಬೇಕಾದ ಕೆಲಸ ಇದೇ. ಆರೋನನ ಮಗನಾದ ಈತಾಮಾರನು ಅವರ ಮೇಲ್ವಿಚಾರಕನಾಗಿರಬೇಕು.”
ಮೆರಾರೀ ಕುಟುಂಬದವರ ಕೆಲಸಗಳು
29 “ನೀನು ಮೆರಾರೀಯರನ್ನೂ ಅವರ ಕುಲಗಳಿಗನುಗುಣವಾಗಿ ಮತ್ತು ಕುಟುಂಬಗಳಿಗನುಗುಣವಾಗಿ ಲೆಕ್ಕಿಸು. 30 ದೇವದರ್ಶನಗುಡಾರದ ಸೇವೆಯ ದಳದಲ್ಲಿ ಕೆಲಸಮಾಡಲು ಯೋಗ್ಯರಾದ ಗಂಡಸರನ್ನು ಲೆಕ್ಕಿಸು. ಅವರ ವಯಸ್ಸು ಮೂವತ್ತರಿಂದ ಮೊದಲುಗೊಂಡು ಐವತ್ತರೊಳಗಿರಬೇಕು. 31 ಈ ಕೆಳಕಂಡ ವಸ್ತುಗಳನ್ನು ಮೆರಾರೀಯರು ವರ್ಗಾವಣೆಗಾಗಿ ಕಟ್ಟುವರು, ವರ್ಗಾಯಿಸುವರು ಮತ್ತು ಕಾವಲುಕಾಯುವರು: ಪವಿತ್ರ ಡೇರೆಯ ಚೌಕಟ್ಟುಗಳು, ಅದರ ಅಡ್ಡಪಟ್ಟಿಗಳು, ಅದರ ಸ್ತಂಭಗಳು, ಅದರ ಗದ್ದಿಗೇಕಲ್ಲುಗಳು, 32 ಅಂಗಳದ ಸ್ತಂಭಗಳು ಮತ್ತು ಅವುಗಳ ಗದ್ದಿಗೇಕಲ್ಲುಗಳು, ಅಗುಳಿಗಳು, ಹಗ್ಗಗಳು ಮತ್ತು ಅವರ ಕೆಲಸಕ್ಕೆ ಬೇಕಾದ ಎಲ್ಲಾ ಉಪಕರಣಗಳು. ಅವರು ವರ್ಗಾಯಿಸಬೇಕಾದ ಮತ್ತು ಕಾವಲುಕಾಯಬೇಕಾದ ವಸ್ತುಗಳನ್ನು ನೀನು ಹೆಸರೆಸರಾಗಿ ಅವರಿಗೆ ವಹಿಸಿಕೊಡಬೇಕು. 33 ದೇವದರ್ಶನಗುಡಾರಕ್ಕೋಸ್ಕರ ಮೆರಾರೀಯರು ಮಾಡತಕ್ಕ ಕೆಲಸ ಇದೇ. ಅವರ ಕೆಲಸವನ್ನು ಮೇಲ್ವಿಚಾರಣೆ ಮಾಡುವುದು ಮಹಾಯಾಜಕ ಆರೋನನ ಮಗನಾದ ಈತಾಮಾರನ ಜವಾಬ್ದಾರಿಯಾಗಿದೆ.”
ಲೇವಿ ಕುಟುಂಬಗಳು
34-35 ಮೋಶೆ ಆರೋನರೂ, ಸಮುದಾಯದ ಪ್ರಧಾನರೂ ಕುಲ ಮತ್ತು ಕುಟುಂಬಗಳಿಗನುಗುಣವಾಗಿ ಕೆಹಾತ್ಯರಲ್ಲಿ ಮೂವತ್ತು ವರ್ಷದಿಂದ ಮೊದಲುಗೊಂಡು ಐವತ್ತು ವರ್ಷದೊಳಗಿರುವ ಗಂಡಸರನ್ನು ಲೆಕ್ಕಿಸಿದರು. ದೇವದರ್ಶನಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸ ಮಾಡಲು ಯೋಗ್ಯರಾದ ಗಂಡಸರನ್ನೇ ಅವರು ಲೆಕ್ಕಿಸಿದರು.
36 ಅವರಲ್ಲಿ ಈ ಕೆಲಸವನ್ನು ಮಾಡಲು ಅರ್ಹರಾಗಿ ಗೋತ್ರ ಕುಟುಂಬಗಳ ಪ್ರಕಾರ ಲೆಕ್ಕಿಸಲ್ಪಟ್ಟವರು 2,750 ಮಂದಿ. 37 ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮೋಶೆ ಆರೋನರು ಕೆಹಾತ್ಯರನ್ನು ಲೆಕ್ಕಿಸಲಾಗಿ ಅವರಲ್ಲಿ ದೇವದರ್ಶನಗುಡಾರಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡತಕ್ಕವರು ಇವರೇ.
38-39 ಗೇರ್ಷೋನ್ಯರಲ್ಲಿಯೂ ಮೂವತ್ತು ವರ್ಷ ಮೊದಲುಗೊಂಡು ಐವತ್ತು ವರ್ಷದೊಳಗಿರುವ ಮತ್ತು ದೇವದರ್ಶನಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸ ಮಾಡಲು ಯೋಗ್ಯರಾದ ಗಂಡಸರನ್ನು ಕುಲ ಮತ್ತು ಕುಟುಂಬಗಳಿಗನುಗುಣವಾಗಿ ಲೆಕ್ಕಿಸಲಾಯಿತು. 40 ಅವರ ಸಂಖ್ಯೆ 2,630. 41 ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಗೇರ್ಷೋನ್ಯರನ್ನು ಲೆಕ್ಕಿಸಿದರು. ಅವರಲ್ಲಿ ದೇವದರ್ಶನಗುಡಾರದ ವಿಶೇಷ ಕೆಲಸವನ್ನು ಮಾಡತಕ್ಕವರು ಇವರೇ.
42-43 ಮೆರಾರೀಯರಲ್ಲಿಯೂ ಮೂವತ್ತರಿಂದ ಐವತ್ತು ವರ್ಷದ ಒಳಗಿರುವ ಮತ್ತು ದೇವದರ್ಶನ ಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸಮಾಡಲು ಯೋಗ್ಯರಾದ ಗಂಡಸರನ್ನು ಕುಲ ಮತ್ತು ಕುಟುಂಬಗಳಿಗೆ ಅನುಗುಣವಾಗಿ ಲೆಕ್ಕಿಸಲಾಯಿತು. 44 ಅವರ ಒಟ್ಟು ಸಂಖ್ಯೆ 3,200. 45 ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಅವರನ್ನು ಲೆಕ್ಕಿಸಿದರು. ಮೆರಾರೀಯರ ಕುಲಗಳಿಂದ ಈ ಗಂಡಸರನ್ನು ದಾಖಲಾತಿ ಮಾಡಿಕೊಳ್ಳಲಾಯಿತು.
46 ಹೀಗೆ ಮೋಶೆ ಆರೋನರು ಇಸ್ರೇಲರ ಪ್ರಧಾನರನ್ನೂ ಎಲ್ಲಾ ಲೇವಿಯರನ್ನೂ ಕುಲ ಮತ್ತು ಕುಟುಂಬಗಳಿಗೆ ಅನುಗುಣವಾಗಿ ಲೆಕ್ಕಿಸಿದರು. 47 ಮೂವತ್ತರಿಂದ ಐವತ್ತು ವರ್ಷದೊಳಗಿರುವ ಮತ್ತು ದೇವದರ್ಶನಗುಡಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ವರ್ಗಾವಣೆಗಾಗಿ ಕಟ್ಟುವುದಕ್ಕೂ ವರ್ಗಾವಣೆಯ ಕೆಲಸಕ್ಕೂ ಯೋಗ್ಯರಾದ ಎಲ್ಲಾ ಗಂಡಸರನ್ನು ಲೆಕ್ಕಿಸಿದರು. 48 ಅವರ ಒಟ್ಟು ಸಂಖ್ಯೆ 8,580. 49 ಹೀಗೆ ಯೆಹೋವನು ಮೋಶೆಗೆ ಆಜ್ಞಾಪಿಸಿದ ಮೇರೆಗೆ ಅವನಿಂದ ಪ್ರತಿಯೊಬ್ಬನೂ ಲೆಕ್ಕಿಸಲ್ಪಟ್ಟನು. ಪ್ರತಿಯೊಬ್ಬನಿಗೂ ವರ್ಗಾವಣೆಗಾಗಿ ವಸ್ತುಗಳನ್ನು ಕಟ್ಟುವ ಮತ್ತು ವರ್ಗಾವಣೆ ಕೆಲಸದ ಕರ್ತವ್ಯಗಳನ್ನು ಗೊತ್ತುಪಡಿಸಲಾಯಿತು. ಯೆಹೋವನು ಆಜ್ಞಾಪಿಸಿದ ಮೇರೆಗೆ ಇದು ಮಾಡಲ್ಪಟ್ಟಿತು.
ಜ್ಞಾಪಕಾರ್ಥ ನೈವೇದ್ಯ ಸಮರ್ಪಣೆಯ ಹಾಡು. ರಚನೆಗಾರ: ದಾವೀದ.
38 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ.
ರೋಷದಿಂದ ನನ್ನನ್ನು ಶಿಸ್ತುಗೊಳಿಸಬೇಡ.
2 ನಿನ್ನಿಂದ ನನಗೆ ನೋವಾಗಿದೆ.
ನಿನ್ನ ಬಾಣಗಳು ನನಗೆ ನಾಟಿಕೊಂಡಿವೆ.
3 ನೀನು ಶಿಕ್ಷಿಸಿದ್ದರಿಂದ ನನ್ನ ಇಡೀ ದೇಹ ಹುಣ್ಣಾಗಿದೆ.
ನಾನು ಪಾಪಮಾಡಿದ್ದರಿಂದ ನನ್ನ ಎಲುಬುಗಳೆಲ್ಲ ನೋಯುತ್ತಿವೆ.
4 ನಾನು ಅಪರಾಧಿಯಾಗಿದ್ದೇನೆ.
ನನ್ನ ಅಪರಾಧಗಳು ನನ್ನ ಭುಜಗಳ ಮೇಲೆ ಭಾರವಾದ ಹೊರೆಯಂತಿವೆ.
5 ನಾನೊಂದು ಮೂರ್ಖ ಕೆಲಸವನ್ನು ಮಾಡಿದೆನು.
ಈಗ ನನಗೆ ಕೀವು ಸೋರಿ ದುರ್ವಾಸನೆಯಿಂದಿರುವ ಹುಣ್ಣುಗಳಾಗಿವೆ.
6 ನಾನು ಬಾಗಿ ಕುಗ್ಗಿಹೋಗಿದ್ದೇನೆ.
ನಾನು ದಿನವೆಲ್ಲಾ ನಿರುತ್ಸಾಹನಾಗಿದ್ದೇನೆ.
7 ನನಗೆ ಜ್ವರವಿದೆ,
ನನ್ನ ಇಡೀ ದೇಹ ನೋಯುತ್ತಿದೆ.
8 ನನಗೆ ಬಹಳ ನೋವಿರುವುದರಿಂದ ಜೋಮು ಹಿಡಿದಂತಿದೆ.
ಹೃದಯದ ವೇದನೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ.
9 ನನ್ನ ಒಡೆಯನೇ, ನೀನು ನನ್ನ ನರಳಾಟವನ್ನು ಕೇಳಿರುವೆ.
ನನ್ನ ನಿಟ್ಟುಸಿರು ನಿನಗೆ ಮರೆಯಾಗಿಲ್ಲ.
10 ನನ್ನ ಹೃದಯದ ವೇದನೆಯಿಂದ ಶಕ್ತಿಯು ಕುಂದಿಹೋಗಿದೆ;
ನನ್ನ ದೃಷ್ಟಿಯು ಹಿಂಗಿಹೋಗಿದೆ.
11 ನಾನು ಅಸ್ವಸ್ಥನಾಗಿರುವುದರಿಂದ
ನನ್ನ ಸ್ನೇಹಿತರಾಗಲಿ ನೆರೆಯವರಾಗಲಿ ನನ್ನನ್ನು ನೋಡಲು ಬರುವುದಿಲ್ಲ.
ನನ್ನ ಕುಟುಂಬದವರು ನನ್ನ ಸಮೀಪಕ್ಕೂ ಬರುವುದಿಲ್ಲ.
12 ನನ್ನ ವೈರಿಗಳು ಬಲೆಗಳನ್ನು ಒಡ್ಡಿದ್ದಾರೆ;
ನನ್ನ ನಾಶನದ ಕುರಿತು ಅವರು ಮಾತಾಡುತ್ತಿದ್ದಾರೆ;
ದಿನವೆಲ್ಲಾ ಕುತಂತ್ರವನ್ನು ಮಾಡುತ್ತಿದ್ದಾರೆ.
13 ಆದರೆ ನಾನು ಕಿವುಡನಂತೆ ಕೇಳದವನಾಗಿದ್ದೇನೆ.
ಮೂಕನಂತೆ ಮಾತಾಡದವನಾಗಿದ್ದೇನೆ.
14 ನಾನು ಕಿವಿಕೇಳಿಸದವನಂತೆಯೂ
ಪ್ರತ್ಯುತ್ತರ ಕೊಡಲಾರದವನಂತೆಯೂ ಆದೆನು.
15 ಯೆಹೋವನೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ.
ನನ್ನ ಒಡೆಯನಾದ ದೇವರೇ, ನನಗೆ ಉತ್ತರ ನೀಡು.
16 ನಾನು ಏನೇ ಹೇಳಿದರೂ ವೈರಿಗಳು ನನ್ನನ್ನು ನೋಡಿ ನಗುವರು.
ನನ್ನ ಕಾಯಿಲೆಯು ಪಾಪದ ಫಲವೆಂದು ಹೇಳುವರು.
17 ನಾನು ಅಪರಾಧಿಯೆಂದು ನನಗೆ ಗೊತ್ತಿದೆ;
ನನ್ನ ನೋವನ್ನು ಮರೆಯಲಾರೆ.
18 ನನ್ನ ಅಪರಾಧಗಳನ್ನು ನಿನಗೆ ಅರಿಕೆ ಮಾಡಿಕೊಂಡಿದ್ದೇನೆ.
ನನ್ನ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟಿದ್ದೇನೆ.
19 ನನ್ನ ವೈರಿಗಳು ಚುರುಕಾಗಿಯೂ ಬಲಶಾಲಿಗಳಾಗಿಯೂ ಇದ್ದಾರೆ.
ಅವರು ಎಷ್ಟೋ ಸುಳ್ಳುಗಳನ್ನು ಹೇಳಿದರು.
20 ನಾನು ಉಪಕಾರವನ್ನು ಮಾಡಿದ್ದರೂ
ನನ್ನ ವೈರಿಗಳು ನನಗೆ ಅಪಕಾರವನ್ನೇ ಮಾಡುವರು.
ನಾನು ಒಳ್ಳೆಯದನ್ನು ಮಾಡಬೇಕೆಂದರೂ
ಅವರು ನನ್ನನ್ನು ವಿರೋಧಿಸುತ್ತಾರೆ.
21 ಯೆಹೋವನೇ, ನನ್ನನ್ನು ಕೈಬಿಡಬೇಡ!
ನನ್ನ ದೇವರೇ, ನನ್ನ ಸಮೀಪದಲ್ಲೇ ಇರು!
22 ಯೆಹೋವನೇ, ನನ್ನ ರಕ್ಷಕನೇ,
ಬೇಗನೆ ಬಂದು ನನಗೆ ಸಹಾಯಮಾಡು!
2 ನಾನು ಶಾರೋನಿನಲ್ಲಿರುವ ಗುಲಾಬಿ;
ತಗ್ಗುಗಳಲ್ಲಿರುವ ತಾವರೆ.
ಪ್ರಿಯಕರ
2 ನನ್ನ ಪ್ರಿಯೆ, ಮುಳ್ಳುಗಳ ನಡುವೆ ಇರುವ ತಾವರೆ ಹೂವಿನಂತೆ
ನೀನು ಯುವತಿಯರಲ್ಲೆಲ್ಲಾ ಶ್ರೇಷ್ಠಳು.
ಪ್ರಿಯತಮೆ
3 ನನ್ನ ಪ್ರಿಯನೇ, ಕಾಡುಮರಗಳ ನಡುವೆ ಇರುವ ಒಂದು ಸೇಬಿನ ಮರದಂತೆ
ನೀನು ಯುವಕರಲ್ಲೆಲ್ಲಾ ಶ್ರೇಷ್ಠನು.
ಪ್ರಿಯತಮೆ ಸ್ತ್ರೀಯರಿಗೆ
ನಾನು ಅವನ ನೆರಳಲ್ಲಿ ಕುಳಿತುಕೊಂಡು ಸಂತೋಷಿಸಿದೆ;
ಅವನ ಫಲವು ನನ್ನ ನಾಲಿಗೆಗೆ ಸಿಹಿಯಾಗಿತ್ತು.
4 ನನ್ನ ಪ್ರಿಯಕರನು ನನ್ನನ್ನು ದ್ರಾಕ್ಷಾರಸದ ಮನೆಗೆ ಕರೆದುಕೊಂಡು ಬಂದನು;
ನನ್ನ ಕುರಿತು ಆತನಿಗಿದ್ದ ಉದ್ದೇಶ ಪ್ರೀತಿಯೇ.
5 ದ್ರಾಕ್ಷಿಯಿಂದ ನನ್ನನ್ನು ಉಪಚರಿಸಿರಿ;
ಸೇಬು ಹಣ್ಣುಗಳಿಂದ ನನ್ನನ್ನು ಆದರಿಸಿರಿ;
ನಾನು ಅನುರಾಗದಿಂದ ಅಸ್ವಸ್ಥಳಾಗಿರುವೆ.
6 ನನ್ನ ಪ್ರಿಯನ ಎಡಗೈ ತಲೆದಿಂಬಾಗಿ
ಅವನ ಬಲಗೈ ನನ್ನನ್ನು ತಬ್ಬಿಕೊಳ್ಳುವುದು!
7 ಜೆರುಸಲೇಮಿನ ಸ್ತ್ರೀಯರೇ, ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ,
ಬೆಳೆಯಿಸುವುದಿಲ್ಲವೆಂದು ಜಿಂಕೆಗಳ ಮೇಲೆಯೂ
ಕಾಡುಹುಲ್ಲೆಗಳ ಮೇಲೆಯೂ ನನಗೆ ಪ್ರಮಾಣ ಮಾಡಿರಿ.
ಪ್ರಿಯತಮೆ
8 ಅಗೋ, ನನ್ನ ಪ್ರಿಯನ ಸ್ವರ!
ಅವನು ಬೆಟ್ಟಗಳ ಮೇಲೆ ನೆಗೆಯುತ್ತಾ
ಗುಡ್ಡಗಳ ಮೇಲೆ ಕುಪ್ಪಳಿಸುತ್ತಾ ಬರುತ್ತಿದ್ದಾನೆ.
9 ನನ್ನ ಪ್ರಿಯನು ಸಾರಂಗದಂತೆಯೂ
ಪ್ರಾಯದ ಜಿಂಕೆಯಂತೆಯೂ ಇದ್ದಾನೆ.
ಅಗೋ, ಅವನು ನಮ್ಮ ಗೋಡೆಯ ಆಚೆ ನಿಂತಿದ್ದಾನೆ;
ತಡಕೆಗಳಿಂದ ಇಣಿಕಿಹಾಕುತ್ತಿದ್ದಾನೆ;
ಕಿಟಕಿಗಳಿಂದ ನೋಡುತ್ತಿದ್ದಾನೆ.
10 ನನ್ನ ಪ್ರಿಯನು ನನಗೆ ಹೀಗೆಂದನು:
“ನನ್ನ ಪ್ರಿಯಳೇ, ನನ್ನ ಸುಂದರಿಯೇ,
ಎದ್ದೇಳು, ನಾವು ದೂರ ಹೋಗೋಣ!
11 ಇಗೋ, ಚಳಿಗಾಲ ಕಳೆಯಿತು;
ಮಳೆಗಾಲ ಮುಗಿದುಹೋಯಿತು.
12 ಭೂಮಿಯ ಮೇಲೆ ಹೂವುಗಳು ಕಾಣುತ್ತವೆ;
ಪಕ್ಷಿಗಳು ಹಾಡುವ ಸಮಯವು ಬಂದಿದೆ.
ದೇಶದಲ್ಲಿ ಪಾರಿವಾಳದ ಸ್ವರವು ಕೇಳಿಸುತ್ತದೆ.
13 ಅಂಜೂರದ ಮರ ಕಾಯಿಗಳನ್ನು ಬಿಡುತ್ತಿದೆ;
ದ್ರಾಕ್ಷಿಬಳ್ಳಿಯ ಹೂವುಗಳಿಂದ ಸುವಾಸನೆಯು ಬರುತ್ತಿದೆ.
ನನ್ನ ಪ್ರಿಯಳೇ, ನನ್ನ ಸುಂದರಿಯೇ, ಎದ್ದೇಳು,
ನಾವು ದೂರ ಹೋಗೋಣ!”
ಪ್ರಿಯಕರ
14 ಬಂಡೆಯ ಬಿರುಕುಗಳಲ್ಲಿಯೂ ಜರಿಯ ಮರೆಯಲ್ಲಿಯೂ ಇರುವ
ನನ್ನ ಪಾರಿವಾಳವೇ,
ನಿನ್ನ ರೂಪವನ್ನು ತೋರಿಸು;
ನಿನ್ನ ಸ್ವರವನ್ನು ಕೇಳಿಸು.
ನಿನ್ನ ಸ್ವರ ಎಷ್ಟೋ ಮಧುರ!
ನಿನ್ನ ರೂಪ ಎಷ್ಟೋ ಅಂದ!
ಪ್ರಿಯತಮೆ ಸ್ತ್ರೀಯರಿಗೆ
15 ದ್ರಾಕ್ಷಿತೋಟಗಳನ್ನು ಹಾಳುಮಾಡುವ
ನರಿಗಳನ್ನೂ
ನರಿಮರಿಗಳನ್ನೂ ಹಿಡಿಯಿರಿ!
ನಮ್ಮ ದ್ರಾಕ್ಷಿತೋಟಗಳು ಈಗ ಹೂಬಿಡುತ್ತಿವೆ.
16 ನನ್ನ ಪ್ರಿಯನು ನನ್ನವನೇ!
ನಾನು ಅವನವಳೇ!
ಹಗಲು ತನ್ನ ಕೊನೆ ಉಸಿರೆಳೆಯುವತನಕ, ನೆರಳು ಓಡಿಹೋಗುವ ತನಕ
17 ನನ್ನ ಪ್ರಿಯನು ನೆಲದಾವರೆಗಳ ಮಧ್ಯದಲ್ಲಿ ಮೇಯಿಸುವನು.
ನನ್ನ ಪ್ರಿಯನೇ, ಹೊರಡು,
ಬೆತೇರ್ ಬೆಟ್ಟಗಳ ಮೇಲೆ ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇರು!
ನಮ್ಮ ರಕ್ಷಣೆಯು ಧರ್ಮಶಾಸ್ತ್ರಕ್ಕಿಂತ ಉತ್ತಮವಾದುದು
2 ಆದ್ದರಿಂದ ನಮಗೆ ಬೋಧಿಸಲ್ಪಟ್ಟ ಸಂಗತಿಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಬೇಕು. ಸತ್ಯಮಾರ್ಗವನ್ನು ಬಿಟ್ಟು ತಪ್ಪಿಹೋಗದಂತೆ ಎಚ್ಚರಿಕೆಯಿಂದಿರಬೇಕು. 2 ದೇವರು ತನ್ನ ದೂತರ ಮೂಲಕ ಕೊಟ್ಟ ವಾಕ್ಯವು ನಿಜವಾದದ್ದೆಂದು ತೋರಿಸಲ್ಪಟ್ಟಿದೆ. ಯೆಹೂದ್ಯರು ಈ ವಾಕ್ಯಕ್ಕೆ ವಿರುದ್ಧವಾಗಿ ತಪ್ಪು ಮಾಡಿದಾಗಲೆಲ್ಲಾ ಮತ್ತು ಅವಿಧೇಯರಾದಾಗಲೆಲ್ಲಾ ತಕ್ಕ ದಂಡನೆ ಹೊಂದುತ್ತಿದ್ದರು. 3 ನಮಗೆ ದಯಪಾಲಿಸಲ್ಪಟ್ಟ ಈ ವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ದಂಡನೆಯಂತೂ ಖಂಡಿತ. ಇದು ಪ್ರಭುವಿನಿಂದ ಮೊದಲು ಹೇಳಲ್ಪಟ್ಟಿತು. ಆತನಿಂದ ಕೇಳಿದವರೇ ಈ ರಕ್ಷಣೆಯ ಕುರಿತಾಗಿ ನಮಗೆ ಸ್ಥಿರಪಡಿಸಿದರು. 4 ಇದಲ್ಲದೆ, ದೇವರು ಅದ್ಭುತಕಾರ್ಯಗಳಿಂದ, ಸೂಚಕಕಾರ್ಯಗಳಿಂದ, ನಾನಾ ವಿಧವಾದ ಮಹತ್ಕಾರ್ಯಗಳಿಂದ ಮತ್ತು ಪವಿತ್ರಾತ್ಮನ ವರಗಳನ್ನು ತನ್ನ ಇಷ್ಟಾನುಸಾರವಾಗಿ ದಯಪಾಲಿಸುವುದರ ಮೂಲಕ ಅದನ್ನು ಸ್ಥಿರಪಡಿಸಿದನು.
ಜನರನ್ನು ರಕ್ಷಿಸಲು ಕ್ರಿಸ್ತನು ಜನರಂತೆಯೇ ಆದನು
5 ಮುಂದೆ ಬರುವ ನೂತನ ಲೋಕವನ್ನು ಆಳಲು ದೇವರು ದೇವದೂತರನ್ನು ಆರಿಸಲಿಲ್ಲ. ಈಗ ನಾವು ನಿಮಗೆ ಹೇಳುತ್ತಿರುವುದು ಆ ಲೋಕದ ಕುರಿತಾಗಿಯೇ. 6 ಅದನ್ನು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ:
“ದೇವರೇ, ನೀನು ಮಾನವರನ್ನು ಏಕೆ ನೆನಪುಮಾಡಿಕೊಳ್ಳಬೇಕು?
ನೀನು ಮನುಷ್ಯನಿಗೋಸ್ಕರ ಏಕೆ ಚಿಂತಿಸಬೇಕು?
ಅವನು ಅಷ್ಟೊಂದು ಮುಖ್ಯನಾದವನೇ?
7 ಕೇವಲ ಸ್ವಲ್ಪಕಾಲದವರೆಗೆ ನೀನು ಅವನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆ ಮಾಡಿದೆ.
ನೀನು ಅವನಿಗೆ ವೈಭವವನ್ನೂ ಗೌರವವನ್ನೂ ಕಿರೀಟವಾಗಿ ಇಟ್ಟಿರುವೆ.
8 ನೀನು ಎಲ್ಲವನ್ನು ಅವನಿಗೆ ಅಧೀನಗೊಳಿಸಿರುವೆ.”(A)
ದೇವರು ಎಲ್ಲವನ್ನೂ ಆತನಿಗೆ ಅಧೀನಗೊಳಿಸಿದ್ದರೆ, ಆತನು ಆಳದೆ ಇರುವಂಥದ್ದು ಒಂದಾದರೂ ಇಲ್ಲ. ಆದರೆ ಸಮಸ್ತದ ಮೇಲೆ ಅವನು ಆಳ್ವಿಕೆ ಮಾಡುತ್ತಿರುವುದು ನಮಗಿನ್ನೂ ಕಾಣುತ್ತಿಲ್ಲ. 9 ಕೇವಲ ಸ್ವಲ್ಪಕಾಲದವರೆಗೆ ಯೇಸುವು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಲ್ಪಟ್ಟನು. ಆದರೆ ನಾವೀಗ ವೈಭವ, ಗೌರವಗಳೆಂಬ ಕಿರೀಟ ಧರಿಸಿರುವ ಆತನನ್ನು ನೋಡುತ್ತೇವೆ. ಏಕೆಂದರೆ ದೇವರ ಕೃಪೆಯ ನಿಮಿತ್ತ ಆತನು ಎಲ್ಲರಿಗೋಸ್ಕರ ಸಂಕಟ ಅನುಭವಿಸಿ ಮರಣಹೊಂದಿದನು.
10 ಸಮಸ್ತವನ್ನು ಸೃಷ್ಟಿಸಿದಾತನು ದೇವರೇ. ಸಮಸ್ತವು ಆತನ ಮಹಿಮೆಗಾಗಿಯೇ ಸೃಷ್ಟಿಯಾಯಿತು. ದೇವರು ತನ್ನವರೇ ಆದ ಅನೇಕ ಜನರನ್ನು ಹೊಂದಿಕೊಂಡು ಅವರೊಂದಿಗೆ ತನ್ನ ಮಹಿಮೆಯನ್ನು ಹಂಚಿಕೊಳ್ಳಲು ಬಯಸಿದನು. ಆದ್ದರಿಂದ ಆತನು ಅವರನ್ನು ರಕ್ಷಣೆಗೆ ನಡೆಸಲು ಪರಿಪೂರ್ಣನಾದ ಒಬ್ಬಾತನನ್ನು ನಿರ್ಮಿಸಿದನು. ಆತನೇ ಯೇಸು. ದೇವರು ಆತನನ್ನು ಬಾಧೆಗಳ ಮೂಲಕವೇ ಪರಿಪೂರ್ಣನಾದ ರಕ್ಷಕನನ್ನಾಗಿ ಮಾಡಿದನು.
11 ಜನರನ್ನು ಪರಿಶುದ್ಧರನ್ನಾಗಿ ಮಾಡುವ ಯೇಸುವೂ ಮತ್ತು ಆತನಿಂದ ಪರಿಶುದ್ಧರಾಗುವ ಜನರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಆ ಜನರನ್ನು ಸಹೋದರರೆಂದೂ ಸಹೋದರಿಯರೆಂದೂ ಕರೆಯಲು ಆತನು (ಯೇಸು) ನಾಚಿಕೆಪಡುವುದಿಲ್ಲ. 12 ಯೇಸು ಹೇಳುತ್ತಾನೆ:
“ದೇವರೇ, ನಿನ್ನನ್ನು ಕುರಿತು ನನ್ನ ಸಹೋದರ ಸಹೋದರಿಯರಿಗೆ ತಿಳಿಸುತ್ತೇನೆ;
ನಿನ್ನ ಜನರೆಲ್ಲರ ಮುಂದೆ ನಿನ್ನ ಸ್ತೋತ್ರಗೀತೆಗಳನ್ನು ಹಾಡುತ್ತೇನೆ.”(B)
13 ಆತನು ಮತ್ತೆ ಹೇಳುತ್ತಾನೆ:
“ನಾನು ದೇವರಲ್ಲಿ ಭರವಸೆ ಇಡುತ್ತೇನೆ.”(C)
ಆತನು ಹೇಳುತ್ತಾನೆ:
“ನಾನಿಲ್ಲಿದ್ದೇನೆ. ದೇವರು ನನಗೆ ದಯಪಾಲಿಸಿರುವ ಮಕ್ಕಳು ನನ್ನೊಂದಿಗಿದ್ದಾರೆ.”(D)
14 ಆ ಮಕ್ಕಳು ಭೌತಿಕ ಶರೀರ ಹೊಂದಿದ್ದರು. ಆದ್ದರಿಂದ ಯೇಸು ತಾನೇ ಅವರಂತಾದನು. ಆತನು ತನ್ನ ಸಾವಿನ ಮೂಲಕ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಗೊಳಿಸಿ, 15 ಅವರನ್ನು ಬಿಡುಗಡೆಗೊಳಿಸಬೇಕೆಂದು, ಅವರಂತೆಯೇ ಆಗಿ, ಮರಣ ಹೊಂದಿದನು. ಅವರು ಮರಣಭಯದಿಂದ, ಜೀವಮಾನವೆಲ್ಲ ಗುಲಾಮರಂತೆ ಜೀವಿಸುತ್ತಿದ್ದರು. 16 ಆತನು ಸಹಾಯ ಮಾಡುವುದು ಅಬ್ರಹಾಮನ ಸಂತತಿಯವರಿಗೇ ಹೊರತು ದೇವದೂತರಿಗಲ್ಲ. 17 ಈ ಕಾರಣದಿಂದಲೇ ಆತನು ಎಲ್ಲಾ ವಿಧದಲ್ಲಿಯೂ ತನ್ನ ಸಹೋದರ ಸಹೋದರಿಯರಿಗೆ ಸಮಾನನಾಗಬೇಕಾಯಿತು. ದೇವರ ಸೇವೆಯಲ್ಲಿ ಆತನು ಜನರಿಗೆ ಕರುಣೆಯುಳ್ಳವನೂ ನಂಬಿಗಸ್ತನೂ ಆದ ಪ್ರಧಾನ ಯಾಜಕನಾದನು. ಹೀಗೆ ಆತನು ಜನರ ಪಾಪಗಳಿಗೆ ಕ್ಷಮೆಯನ್ನು ತರಲು ಸಾಧ್ಯವಾಯಿತು. 18 ತಾನೇ ಶೋಧಿಸಲ್ಪಟ್ಟು ಸಂಕಟಕ್ಕೆ ಒಳಗಾದುದರಿಂದ, ಶೋಧಿಸಲ್ಪಡುವ ಜನರಿಗೆ ಸಹಾಯ ಮಾಡಲು ಈಗ ಆತನು ಸಮರ್ಥನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International