M’Cheyne Bible Reading Plan
ಯಾಜಕರಾದ ಆರೋನನ ಕುಟುಂಬ
3 ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಯೊಡನೆ ಮಾತಾಡಿದ ಸಮಯದಲ್ಲಿದ್ದ ಆರೋನ ಮತ್ತು ಮೋಶೆಯ ವಂಶದವರು ಇವರೇ. 2 ಆರೋನನಿಗೆ ನಾಲ್ಕು ಮಂದಿ ಗಂಡುಮಕ್ಕಳಿದ್ದರು. ನಾದಾಬನು ಚೊಚ್ಚಲ ಮಗ. ಅನಂತರ ಹುಟ್ಟಿದವರು ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್. 3 ಈ ಗಂಡುಮಕ್ಕಳು ಯಾಜಕರಾಗಿ ಸೇವೆಮಾಡಲು ಅಭಿಷೇಕಿಸಲ್ಪಟ್ಟವರಾಗಿದ್ದರು ಮತ್ತು ಪ್ರತಿಷ್ಠೀತರಾದವರಾಗಿದ್ದರು.
4 ಆದರೆ ನಾದಾಬ ಮತ್ತು ಅಬೀಹೂ ಎಂಬಿಬ್ಬರು ಸೀನಾಯಿ ಮರುಭೂಮಿಯಲ್ಲಿ ಯೆಹೋವನಿಗೆ ಧೂಪವನ್ನು ಸಮರ್ಪಿಸುವಾಗ ಯೆಹೋವನು ಅಪ್ಪಣೆ ಕೊಡದೆ ಇದ್ದ ಬೆಂಕಿಯನ್ನು ಉಪಯೋಗಿಸಿದರು. ಆದ್ದರಿಂದ ನಾದಾಬ ಮತ್ತು ಅಬೀಹೂ ಅಲ್ಲಿ ಸತ್ತರು. ಅವರಿಗೆ ಗಂಡುಮಕ್ಕಳಿಲ್ಲದ್ದರಿಂದ ಎಲ್ಲಾಜಾರನು ಮತ್ತು ಈತಾಮಾರನು ಅವರ ತಂದೆಯಾದ ಆರೋನನ ಕೈಕೆಳಗೆ ಯೆಹೋವನ ಸೇವೆ ಮಾಡಿದರು.
ಯಾಜಕರ ಸಹಾಯಕರಾದ ಲೇವಿಯರು
5 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 6 “ಲೇವಿ ಕುಲದವರನ್ನು ಯಾಜಕನಾದ ಆರೋನನ ಬಳಿಗೆ ಕರೆದುಕೊಂಡು ಬಾ. ಅವರು ಆರೋನನಿಗೆ ಸಹಾಯಕರಾಗಿರುವರು. 7 ಲೇವಿಯರು ಅವನಿಗಾಗಿ ಮತ್ತು ಇಡೀ ಸಮೂಹಕ್ಕಾಗಿ ದೇವದರ್ಶನಗುಡಾರದ ಮುಂದೆ ಕಾವಲುಗಾರರಾಗಿರುವರು ಮತ್ತು ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸಗಳನ್ನು ಮಾಡುವರು. 8 ದೇವದರ್ಶನಗುಡಾರವು ಚಲಿಸುತ್ತಿರುವಾಗ ಲೇವಿಯರು ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸಗಳನ್ನು ಮಾಡುವುದಲ್ಲದೆ, ದೇವದರ್ಶನ ಗುಡಾರದ ಎಲ್ಲಾ ಉಪಕರಣಗಳನ್ನು ಇಸ್ರೇಲರಿಗೋಸ್ಕರ ಕಾಯಬೇಕು.
9 “ಲೇವಿಯರನ್ನು ಆರೋನನಿಗೂ ಅವನ ಪುತ್ರರಿಗೂ ಒಪ್ಪಿಸಿಕೊಡು. ಅವರು ಇಸ್ರೇಲರ ಮಧ್ಯದಿಂದ ಆರೋನನಿಗೋಸ್ಕರವಾಗಿ ಪ್ರತಿಷ್ಠಿತರಾಗಿದ್ದಾರೆ.
10 “ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸು. ಅವರು ತಮ್ಮತಮ್ಮ ಯಾಜಕ ಉದ್ಯೋಗವನ್ನು ಕಾಪಾಡಿಕೊಳ್ಳಬೇಕು. ಯಾಜಕರ ಕರ್ತವ್ಯಗಳನ್ನು ಮಾಡಲು ಪವಿತ್ರ ವಸ್ತುಗಳ ಬಳಿಗೆ ಬರಲು ಬೇರೆ ಯಾವನಾದರೂ ಪ್ರಯತ್ನಿಸಿದರೆ ಅವನು ಕೊಲ್ಲಲ್ಪಡಬೇಕು.”
11 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 12 “ಇಸ್ರೇಲಿನ ಪ್ರತಿ ಕುಟುಂಬವು ತನ್ನ ಚೊಚ್ಚಲ ಮಗನನ್ನು ನನಗೆ ಕೊಡಬೇಕೆಂದು ನಿನಗೆ ಹೇಳಿದ್ದೆ. ಆದರೆ ನನ್ನ ಸೇವೆಮಾಡುವುದಕ್ಕೆ ಈಗ ನಾನು ಲೇವಿಯರನ್ನು ಆರಿಸಿಕೊಂಡಿದ್ದೇನೆ. ಅವರು ನನ್ನವರಾಗಿರುವರು. ಆದ್ದರಿಂದ ಬೇರೆ ಎಲ್ಲಾ ಇಸ್ರೇಲರು ತಮ್ಮ ಚೊಚ್ಚಲು ಗಂಡುಮಕ್ಕಳನ್ನು ನನಗೆ ಕೊಡಬೇಕಾಗಿಲ್ಲ. 13 ನೀವು ಈಜಿಪ್ಟಿನಲ್ಲಿದ್ದಾಗ ನಾನು ಈಜಿಪ್ಟಿನವರ ಎಲ್ಲಾ ಚೊಚ್ಚಲು ಮಕ್ಕಳನ್ನು ಕೊಂದೆನು. ಆ ಕಾಲದಲ್ಲಿ ನಾನು ಇಸ್ರೇಲರ ಎಲ್ಲಾ ಚೊಚ್ಚಲು ಮಕ್ಕಳನ್ನು ನನ್ನವರನ್ನಾಗಿ ತೆಗೆದುಕೊಂಡೆನು. ಎಲ್ಲಾ ಚೊಚ್ಚಲು ಗಂಡುಮಕ್ಕಳು ಮತ್ತು ಚೊಚ್ಚಲು ಪಶುಗಳು ನನ್ನದಾಗಿದ್ದವು. ಆದರೆ ಈಗ ನಿಮ್ಮ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ನಿಮಗೇ ಹಿಂದಕ್ಕೆ ಕೊಡುತ್ತಿದ್ದೇನೆ ಮತ್ತು ಲೇವಿಯರನ್ನು ನನ್ನವರನ್ನಾಗಿ ಮಾಡುತ್ತಿದ್ದೇನೆ. ನಾನೇ ಯೆಹೋವನು!”
14 ಯೆಹೋವನು ತಿರುಗಿ ಸೀನಾಯಿ ಮರುಭೂಮಿಯಲ್ಲಿ ಮೋಶೆಯೊಡನೆ ಮಾತಾಡಿದನು. ಯೆಹೋವನು ಹೇಳಿದ್ದೇನೆಂದರೆ: 15 “ಲೇವಿಯರನ್ನು ಅವರ ಕುಟುಂಬಗಳಿಗನುಗುಣವಾಗಿಯೂ ಗೋತ್ರಗಳಿಗನುಸಾರವಾಗಿಯೂ ಲೆಕ್ಕಿಸು. ಪ್ರತಿಯೊಬ್ಬ ಗಂಡಸನ್ನೂ ಒಂದು ತಿಂಗಳು ಮೇಲ್ಪಟ್ಟ ಪ್ರತಿಯೊಬ್ಬ ಗಂಡುಮಗುವನ್ನೂ ಲೆಕ್ಕಿಸು.” 16 ಮೋಶೆ ಯೆಹೋವನಿಗೆ ವಿಧೇಯನಾಗಿ ಅವರೆಲ್ಲರನ್ನೂ ಲೆಕ್ಕಿಸಿದನು.
17 ಲೇವಿಗೆ ಮೂರು ಗಂಡುಮಕ್ಕಳಿದ್ದರು. ಅವರ ಹೆಸರುಗಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.
18 ಪ್ರತಿಯೊಬ್ಬ ಮಗನು ಅನೇಕ ಗೋತ್ರಗಳ ನಾಯಕನಾಗಿದ್ದನು.
ಗೇರ್ಷೋನನ ಗೋತ್ರಗಳು: ಲಿಬ್ನೀ ಮತ್ತು ಶಿಮ್ಮೀ.
19 ಕೆಹಾತನ ಗೋತ್ರಗಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
20 ಮೆರಾರೀಯ ಗೋತ್ರಗಳು: ಮಹ್ಲೀ ಮತ್ತು ಮೂಷೀ.
ಅವು ಲೇವಿ ಕುಲದ ಗೋತ್ರಗಳಾಗಿವೆ.
21 ಲಿಬ್ನೀ ಮತ್ತು ಶಿಮ್ಮೀಯ ಕುಟುಂಬಗಳು ಗೇರ್ಷೋನನ ಕುಟುಂಬಕ್ಕೆ ಸೇರಿದವುಗಳಾಗಿದ್ದವು. 22 ಈ ಎರಡು ಕುಲಗಳಲ್ಲಿ ಒಂದು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ 7,500 ಮಂದಿ ಗಂಡಸರು ಮತ್ತು ಗಂಡುಮಕ್ಕಳು ಇದ್ದರು. 23 ಗೇರ್ಷೋನನ ಕುಲದವರು ಪಶ್ಚಿಮ ದಿಕ್ಕಿನಲ್ಲಿ ದೇವದರ್ಶನಗುಡಾರದ ಹಿಂಭಾಗದಲ್ಲಿ ಪಾಳೆಯ ಮಾಡಿಕೊಂಡರು. 24 ಗೇರ್ಷೋನನ ಗೋತ್ರಗಳ ನಾಯಕನು ಲಾಯೇಲನ ಮಗನಾದ ಎಲ್ಯಾಸಾಫ್. 25 ದೇವದರ್ಶನಗುಡಾರದಲ್ಲಿ ಪವಿತ್ರ ಗುಡಾರವನ್ನು, ಹೊರಡೇರೆಯನ್ನು ಮತ್ತು ಅದರ ಮೇಲ್ಹೊದಿಕೆಯನ್ನು ನೋಡಿಕೊಳ್ಳವುದು ಗೇರ್ಷೋನ ವಂಶದವರ ಕೆಲಸವಾಗಿತ್ತು. ಇದಲ್ಲದೆ ಅವರು ಅಂಗಳದ ಪರದೆಯನ್ನೂ ನೋಡಿಕೊಳ್ಳುತ್ತಿದ್ದರು. 26 ಅವರು ಅಂಗಳದ ಪರದೆಗಳನ್ನೂ ಅಂಗಳದ ಪ್ರವೇಶದ್ವಾರದ ಪರದೆಯನ್ನೂ ನೋಡಿಕೊಳ್ಳಬೇಕು. ಈ ಅಂಗಳವು ಪವಿತ್ರ ಗುಡಾರದ ಮತ್ತು ವೇದಿಕೆಯ ಸುತ್ತಲೂ ಇತ್ತು. ಅವರು ಹಗ್ಗಗಳನ್ನೂ ಪರದೆಗಳೊಂದಿಗೆ ಉಪಯೋಗಿಸುವ ಪ್ರತಿಯೊಂದನ್ನೂ ನೋಡಿಕೊಂಡರು.
27 ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಗೋತ್ರಗಳವರು ಕೆಹಾತನ ಕುಲದವರಾಗಿದ್ದರು. 28 ಈ ಕುಲದಲ್ಲಿ ಒಂದು ತಿಂಗಳು ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳ 8,300[a] ಗಂಡಸರು ಮತ್ತು ಗಂಡುಮಕ್ಕಳು ಇದ್ದರು. ಕೆಹಾತ್ಯರಿಗೆ ಪವಿತ್ರಸ್ಥಳದ ವಸ್ತುಗಳನ್ನು ನೋಡಿಕೊಳ್ಳುವ ಕೆಲಸ ಕೊಡಲ್ಪಟ್ಟಿತು. 29 ಕೆಹಾತ್ಯರ ಗೋತ್ರಗಳವರು ಪವಿತ್ರ ಗುಡಾರದ ದಕ್ಷಿಣ ದಿಕ್ಕಿನ ಉದ್ದಕ್ಕೂ ಪಾಳೆಯ ಹಾಕಿಕೊಂಡರು. 30 ಕೆಹಾತ್ಯರ ನಾಯಕ ಉಜ್ಜೀಯೇಲನ ಮಗನಾದ ಎಲೀಚಾಫಾನ್. 31 ಅವರು ಪವಿತ್ರಪೆಟ್ಟಿಗೆ, ಮೇಜು, ದೀಪಸ್ತಂಭ, ವೇದಿಕೆಗಳನ್ನು ಮತ್ತು ಪವಿತ್ರಸ್ಥಳದ ಸಾಮಗ್ರಿಗಳನ್ನು, ಪರದೆಯನ್ನು ಮತ್ತು ಅವುಗಳಿಗೆ ಸಂಬಂಧಪಟ್ಟ ಎಲ್ಲಾ ಕಷ್ಟಕರವಾದ ಕೆಲಸಗಳನ್ನು ನೋಡಿಕೊಳ್ಳಬೇಕಾಗಿತ್ತು.
32 ಮಹಾಯಾಜಕ ಆರೋನನ ಮಗನಾದ ಎಲ್ಲಾಜಾರನು ಲೇವಿಯರಿಗೆ ನಾಯಕನಾಗಿದ್ದನು. ಪವಿತ್ರವಸ್ತುಗಳನ್ನು ನೋಡಿಕೊಳ್ಳುವ ಜನರಿಗೆಲ್ಲಾ ಎಲ್ಲಾಜಾರನು ಮೇಲ್ವಿಚಾರಕನಾಗಿದ್ದನು.
33-34 ಮಹ್ಲೀ ಮತ್ತು ಮೂಷೀಯ ಗೋತ್ರಗಳವರು ಮೆರಾರೀಯ ಕುಲದವರಾಗಿದ್ದರು. ಮಹ್ಲೀಯ ಗೋತ್ರದಲ್ಲಿ ಒಂದು ತಿಂಗಳು ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳ 6,200 ಮಂದಿ ಗಂಡಸರು ಮತ್ತು ಗಂಡುಮಕ್ಕಳು ಇದ್ದರು. 35 ಮೆರಾರೀ ಗೋತ್ರಗಳ ನಾಯಕನು ಅಬೀಹೈಲನ ಮಗನಾದ ಚೂರೀಯೇಲ್. ಮೆರಾರೀ ಗೋತ್ರಗಳವರು ಪವಿತ್ರ ಗುಡಾರದ ಉತ್ತರ ದಿಕ್ಕಿನಲ್ಲಿ ಪಾಳೆಯ ಮಾಡಿಕೊಂಡರು. 36 ಮೆರಾರೀ ಕುಲದವರಿಗೆ ಪವಿತ್ರ ಗುಡಾರದ ಚೌಕಟ್ಟುಗಳನ್ನು ನೋಡಿಕೊಳ್ಳುವ ಕೆಲಸ ಕೊಡಲ್ಪಟ್ಟಿತು. ಅವರು ಎಲ್ಲಾ ಅಗುಳಿಗಳನ್ನು, ಕಂಬಗಳನ್ನು, ಗದ್ದಿಗೇಕಲ್ಲುಗಳನ್ನು, ಅದರ ಎಲ್ಲ ಉಪಕರಣಗಳನ್ನು ಮತ್ತು ಅವುಗಳಿಗೆ ಸಂಬಂಧಪಟ್ಟ ಕಷ್ಟಕರವಾದ ಎಲ್ಲಾ ಕೆಲಸವನ್ನು ನೋಡಿಕೊಳ್ಳಬೇಕಾಗಿತ್ತು. 37 ಅವರು ಪವಿತ್ರ ಗುಡಾರದ ಸುತ್ತಲಿನ ಅಂಗಳದ ಎಲ್ಲಾ ಕಂಬಗಳನ್ನು ನೋಡಿಕೊಳ್ಳಬೇಕಾಗಿತ್ತು. ಇದರಲ್ಲಿ ಎಲ್ಲಾ ಗದ್ದಿಗೇಕಲ್ಲುಗಳೂ ಗುಡಾರದ ಗೂಟಗಳೂ ಹಗ್ಗಗಳೂ ಸೇರಿವೆ.
38 ಮೋಶೆ, ಆರೋನ ಮತ್ತು ಆರೋನನ ಪುತ್ರರು ದೇವದರ್ಶನಗುಡಾರದ ಮುಂದೆ ಪವಿತ್ರ ಗುಡಾರದ ಪೂರ್ವ ದಿಕ್ಕಿನಲ್ಲಿ ಪಾಳೆಯಮಾಡಿಕೊಂಡರು. ಪವಿತ್ರಸ್ಥಳವನ್ನು ನೋಡಿಕೊಳ್ಳುವ ಕೆಲಸ ಅವರಿಗೆ ಕೊಡಲ್ಪಟ್ಟಿತು. ಅವರು ಇಸ್ರೇಲರೆಲ್ಲರಿಗೋಸ್ಕರ ಇದನ್ನು ಮಾಡಿದರು. ಇವರ ಕರ್ತವ್ಯಗಳನ್ನು ಬೇರೆ ಯಾವನಾದರೂ ಮಾಡಲು ಪ್ರಯತ್ನಿಸಿದರೆ ಅವನು ಕೊಲ್ಲಲ್ಪಡಬೇಕು.
39 ಆ ಲೇವಿಯರಲ್ಲಿದ್ದ ಒಂದು ತಿಂಗಳು ಮೊದಲುಗೊಂಡು ಹೆಚ್ಚು ವಯಸ್ಸುಳ್ಳ ಎಲ್ಲಾ ಗಂಡಸರನ್ನು ಮತ್ತು ಗಂಡುಮಕ್ಕಳನ್ನು ಅವರ ಗೋತ್ರಗಳಿಗನುಸಾರವಾಗಿ ಲೆಕ್ಕಿಸಬೇಕೆಂದು ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದನು. ಅವರ ಒಟ್ಟು ಸಂಖ್ಯೆ 22,000.
ಲೇವಿಯರಿಗೆ ಚೊಚ್ಚಲು ಪುತ್ರರ ಸ್ಥಾನ
40 ಯೆಹೋವನು ಮೋಶೆಗೆ, “ನೀನು ಇಸ್ರೇಲರ ಒಂದು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲಾ ಚೊಚ್ಚಲು ಗಂಡಸರನ್ನು ಲೆಕ್ಕಿಸು. ಅವರ ಹೆಸರುಗಳ ಪಟ್ಟಿಮಾಡು. 41 ನಾನು ಈಗ ಇಸ್ರೇಲಿನ ಚೊಚ್ಚಲು ಗಂಡಸರನ್ನು ತೆಗೆದುಕೊಳ್ಳುವುದಿಲ್ಲ. ಯೆಹೋವನಾದ ನಾನು ಲೇವಿಯರನ್ನು ತೆಗೆದುಕೊಳ್ಳುವೆನು. ಮಾತ್ರವಲ್ಲದೆ ಇಸ್ರೇಲಿನಲ್ಲಿ ಇತರ ಜನರ ಚೊಚ್ಚಲು ಪ್ರಾಣಿಗಳ ಬದಲು, ಲೇವಿಯರ ಎಲ್ಲಾ ಚೊಚ್ಚಲು ಪ್ರಾಣಿಗಳನ್ನು ತೆಗೆದುಕೊಳ್ಳುವೆನು” ಎಂದು ಹೇಳಿದನು.
42 ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. ಮೋಶೆಯು ಇಸ್ರೇಲರ ಚೊಚ್ಚಲು ಗಂಡಸರನ್ನೆಲ್ಲ್ಲ ಲೆಕ್ಕಿಸಿದನು. 43 ಒಂದು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲಾ ಚೊಚ್ಚಲು ಗಂಡಸರ ಹೆಸರುಗಳನ್ನು ಮೋಶೆ ಪಟ್ಟಿ ಮಾಡಿದನು. ಆ ಪಟ್ಟಿಯಲ್ಲಿ 22,273 ಹೆಸರುಗಳಿದ್ದವು.
44 ಯೆಹೋವನು ಮೋಶೆಗೆ ಮತ್ತೆ ಹೇಳಿದ್ದೇನೆಂದರೆ: 45 “ದೇವರಾದ ನಾನು ಈ ಆಜ್ಞೆಯನ್ನು ಕೊಡುತ್ತೇನೆ: ‘ಇಸ್ರೇಲಿನ ಇತರ ಕುಟುಂಬಗಳಿಂದ ಚೊಚ್ಚಲು ಗಂಡಸರನ್ನು ತೆಗೆದುಕೊಳ್ಳುವ ಬದಲು ಲೇವಿಯರನ್ನೇ ತೆಗೆದುಕೊ. ಇಸ್ರೇಲರ ಚೊಚ್ಚಲು ಪಶುಗಳನ್ನು ತೆಗೆದುಕೊಳ್ಳುವ ಬದಲು ಲೇವಿಯರ ಪಶುಗಳನ್ನೇ ತೆಗೆದುಕೊ. ಲೇವಿಯರು ನನ್ನ ಸ್ವತ್ತಾಗಿದ್ದಾರೆ. 46 ಲೇವಿಯರ ಸಂಖ್ಯೆ 22,000. ಆದರೆ ಬೇರೆ ಕುಟುಂಬಗಳ ಚೊಚ್ಚಲು ಪುತ್ರರ ಸಂಖ್ಯೆ 22,273. ಹೀಗೆ ಲೇವಿಯರಿಗಿಂತ 273 ಮಂದಿ ಹೆಚ್ಚು ಚೊಚ್ಚಲು ಪುತ್ರರಿರುತ್ತಾರೆ. 47 ಅಧಿಕೃತ ಅಳತೆಯನ್ನು ಉಪಯೋಗಿಸಿ ಪ್ರತಿಯೊಬ್ಬನಿಗೆ ಅಂದರೆ 273 ಮಂದಿಗೆ ಐದೈದು ಶೆಕೆಲ್ ಬೆಳ್ಳಿಯನ್ನು ಸಂಗ್ರಹಿಸು. (ಅಧಿಕೃತ ಅಳತೆಯಲ್ಲಿ ಒಂದು ಶೆಕೆಲ್ ಅಂದರೆ ಇಪ್ಪತ್ತು ಗೆರಾ.) ಇಸ್ರೇಲರಿಂದ ಈ ಬೆಳ್ಳಿಯನ್ನು ಸಂಗ್ರಹಿಸು. 48 ಆ ಬೆಳ್ಳಿಯನ್ನು ಆರೋನನಿಗೂ ಅವನ ಪುತ್ರರಿಗೂ ಕೊಡು. ಈ ಹಣವು ಇಸ್ರೇಲರ 273 ಮಂದಿಗೆ ಈಡಾಗಿದೆ.’”
49 ಲೇವಿಯರಿಗಿಂತ ಇಸ್ರೇಲರಲ್ಲಿ 273 ಮಂದಿ ಚೊಚ್ಚಲು ಗಂಡಸರು ಹೆಚ್ಚಾಗಿದ್ದುದರಿಂದ ಮೋಶೆಯು ಆ 273 ಮಂದಿಗೆ ಈಡು ಕೊಡುವುದಕ್ಕಾಗಿ ಹಣವನ್ನು ಸಂಗ್ರಹಿಸಿದನು. 50 ಮೋಶೆಯು ಇಸ್ರೇಲರಲ್ಲಿ ಚೊಚ್ಚಲಾದ ಗಂಡಸರಿಂದ ಬೆಳ್ಳಿಯನ್ನು ಸಂಗ್ರಹಿಸಿದನು. ಅವನು ಅಧಿಕೃತ ಅಳತೆಯನ್ನು ಉಪಯೋಗಿಸಿ 1,365 ಶೆಕಲ್ ಬೆಳ್ಳಿಯನ್ನು ಸಂಗ್ರಹಿಸಿದನು. 51 ಮೋಶೆಯು ಯೆಹೋವನಿಗೆ ವಿಧೇಯನಾಗಿ ಆತನ ಆಜ್ಞೆಯಂತೆ ಬೆಳ್ಳಿಯನ್ನು ಆರೋನನಿಗೂ ಅವನ ಪುತ್ರರಿಗೂ ಕೊಟ್ಟನು.
ರಚನೆಗಾರ: ದಾವೀದ
37 ದುಷ್ಟರನ್ನು ನೋಡಿ ಉರಿಗೊಳ್ಳಬೇಡ.
ಕೆಡುಕರನ್ನು ಕಂಡು ಹೊಟ್ಟೆಕಿಚ್ಚುಪಡಬೇಡ.
2 ದುಷ್ಟರು ಹುಲ್ಲಿನಂತೆಯೂ
ಸೊಪ್ಪಿನಂತೆಯೂ ಬೇಗನೆ ಒಣಗಿಹೋಗುವರು.
3 ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ದೀರ್ಘಕಾಲ ಬದುಕುವೆ;
ಭೂಮಿಯ ಅನೇಕ ಫಲಗಳನ್ನು ಅನುಭವಿಸುವೆ.
4 ಯೆಹೋವನಿಗೆ ಸಂತೋಷದಿಂದ ಸೇವೆಮಾಡು.
ನಿನಗೆ ಬೇಕಾದುದನ್ನು ಆತನೇ ಕೊಡುವನು.
5 ಯೆಹೋವನನ್ನು ಆಶ್ರಯಿಸಿಕೊ, ಆತನಲ್ಲಿ ಭರವಸವಿಡು.
ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.
6 ನಿನ್ನ ನೀತಿಯೂ ನ್ಯಾಯವೂ
ಮಧಾಹ್ನದ ಸೂರ್ಯನಂತೆ ಪ್ರಕಾಶಿಸಲಿ.
7 ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು.
ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ.
ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.
8 ಕೋಪದಿಂದಿರಬೇಡ! ರೋಷದಿಂದಿರಬೇಡ! ಉರಿಗೊಳ್ಳಬೇಡ! ಅವು ನಿನ್ನನ್ನು ಕೆಡುಕಿಗೆ ನಡೆಸುತ್ತವೆ.
9 ದುಷ್ಟರಾದರೋ ನಾಶವಾಗುವರು.
ಯೆಹೋವನಲ್ಲಿ ಮೊರೆಯಿಡುವವರಾದರೋ ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ಪಡೆದುಕೊಳ್ಳುವರು.
10 ಇನ್ನು ಸ್ವಲ್ಪ ಕಾಲದೊಳಗೆ ದುಷ್ಟರು ಇರುವುದೇ ಇಲ್ಲ.
ನೀನು ಅವರಿಗಾಗಿ ಹುಡುಕಿದರೂ ಅವರು ಸಿಕ್ಕುವುದಿಲ್ಲ!
11 ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ದೀನರು ಪಡೆದುಕೊಳ್ಳುವರು;
ಸಮಾಧಾನವನ್ನು ಅನುಭವಿಸುವರು.
12 ದುಷ್ಟರು ನೀತಿವಂತರ ವಿರುದ್ಧ ದುರಾಲೋಚನೆಗಳನ್ನು ಮಾಡುವರು.
ನೀತಿವಂತರ ಮೇಲೆ ತಮಗಿರುವ ಕೋಪದಿಂದ ಅವರು ಹಲ್ಲುಕಡಿಯುವರು.
13 ಆದರೆ ನಮ್ಮ ಒಡೆಯನು ಆ ದುಷ್ಟರನ್ನು ನೋಡಿ ನಗುವನು.
ಅವರಿಗೆ ಬರಲಿರುವ ಆಪತ್ತುಗಳು ಆತನಿಗೆ ತಿಳಿದಿವೆ.
14 ಕೆಡುಕರು ಖಡ್ಗಗಳನ್ನು ಕೈಗೆತ್ತಿಕೊಳ್ಳುವರು; ತಮ್ಮ ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ಗುರಿಯಿಡುವರು.
ಅವರು ಬಡವರನ್ನೂ ಅಸಹಾಯಕರನ್ನೂ ಒಳ್ಳೆಯವರನ್ನೂ ಯಥಾರ್ಥವಂತರನ್ನೂ ಕೊಲ್ಲಬೇಕೆಂದಿದ್ದಾರೆ.
15 ಆದರೆ ಅವರ ಬಿಲ್ಲುಗಳು ಮುರಿದುಹೋಗುತ್ತವೆ.
ಅವರ ಖಡ್ಗಗಳು ಅವರ ಹೃದಯಗಳಿಗೇ ನಾಟಿಕೊಳ್ಳುತ್ತವೆ.
16 ದುಷ್ಟನ ಶ್ರೀಮಂತಿಕೆಗಿಂತಲೂ
ನೀತಿವಂತನ ಬಡತನವೇ ಮೇಲು.
17 ಯಾಕೆಂದರೆ ದುಷ್ಟರು ನಾಶವಾಗುವರು.
ನೀತಿವಂತರನ್ನಾದರೋ ಯೆಹೋವನು ಪರಿಪಾಲಿಸುವನು.
18 ಯೆಹೋವನು ತನ್ನ ಭಕ್ತರನ್ನು ಅವರ ಜೀವಮಾನ ಪೂರ್ತಿ ಕಾಪಾಡುವನು.
ಅವರ ಭೂಮಿಯು ಸದಾಕಾಲ ಅವರದೇ ಆಗಿರುವುದು.
19 ಆಪತ್ಕಾಲದಲ್ಲಿ ನೀತಿವಂತರು ನಾಶವಾಗುವುದಿಲ್ಲ.
ಬರಗಾಲದಲ್ಲಿಯೂ ಅವರಿಗೆ ಕೊರತೆಯಿರುವುದಿಲ್ಲ.
20 ದುಷ್ಟರಾದರೋ ಯೆಹೋವನ ವೈರಿಗಳಾಗಿದ್ದಾರೆ.
ಅವರು ನಾಶವಾಗುವರು.
ಅವರ ಕಣಿವೆಗಳು ಒಳಗೆ ಸುಟ್ಟುಹೋಗುತ್ತವೆ;
ಅವರು ಹೊಗೆಯಂತೆ ಇಲ್ಲವಾಗುವರು.
21 ದುಷ್ಟನು ತಾನು ಮಾಡಿದ ಸಾಲವನ್ನು ತೀರಿಸುವುದಿಲ್ಲ.
ನೀತಿವಂತನಾದರೋ ಬೇರೆಯವರಿಗೆ ಉದಾರವಾಗಿ ಕೊಡುವನು.
22 ನೀತಿವಂತರು ಆಶೀರ್ವದಿಸಿದರೆ, ವಾಗ್ದಾನಮಾಡಲ್ಪಟ್ಟ ಭೂಮಿಯನ್ನು ಜನರು ಪಡೆದುಕೊಳ್ಳುವರು.
ಆದರೆ ಅವರು ಶಪಿಸಿದರೆ, ಜನರು ನಾಶವಾಗುವರು.
23 ಯೆಹೋವನು ನೀತಿವಂತನನ್ನು ತನ್ನ ಮಾರ್ಗದಲ್ಲಿ ನಡೆಸುವನು
ಮತ್ತು ಅವನನ್ನು ಮೆಚ್ಚಿಕೊಳ್ಳುವನು.
24 ಅವನು ಎಡವಿದರೂ ಬೀಳುವುದಿಲ್ಲ;
ಯಾಕೆಂದರೆ ಯೆಹೋವನು ಅವನ ಕೈಹಿಡಿದುಕೊಂಡಿದ್ದಾನೆ.
25 ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ.
ನೀತಿವಂತರನ್ನು ದೇವರು ತೊರೆದುಬಿಟ್ಟದ್ದನ್ನಾಗಲಿ ಅವನ ಮಕ್ಕಳು ಆಹಾರಕ್ಕಾಗಿ ಬೇಡುವುದನ್ನಾಗಲಿ ನಾನೆಂದೂ ಕಾಣಲಿಲ್ಲ.
26 ನೀತಿವಂತನು ಬೇರೆಯವರಿಗೆ ಉದಾರವಾಗಿ ಕೊಡುವನು.
ಅವನ ಮಕ್ಕಳು ಆಶೀರ್ವಾದ ಹೊಂದುವರು.
27 ನೀನು ಕೆಟ್ಟದ್ದನ್ನು ಮಾಡದೆ
ಒಳ್ಳೆಯದನ್ನೇ ಮಾಡಿದರೆ ಸದಾಕಾಲ ಬದುಕುವೆ.
28 ಯೆಹೋವನು ನ್ಯಾಯವನ್ನು ಪ್ರೀತಿಸುವನು.
ಆತನು ತನ್ನ ಭಕ್ತರನ್ನು ತೊರೆದುಬಿಡದೆ
ಅವರನ್ನು ಯಾವಾಗಲೂ ಕಾಪಾಡುವನು.
ದುಷ್ಟರನ್ನಾದರೋ ಆತನು ನಾಶಮಾಡುವನು.
29 ದೇವರು ವಾಗ್ದಾನ ಮಾಡಿದ ಭೂಮಿಯನ್ನು
ನೀತಿವಂತರು ಪಡೆದುಕೊಂಡು ಅಲ್ಲಿ ಸದಾಕಾಲ ವಾಸಿಸುವರು.
30 ನೀತಿವಂತನು ಒಳ್ಳೆಯ ಬುದ್ಧಿವಾದ ಹೇಳುವನು.
ಅವನ ತೀರ್ಮಾನಗಳು ನ್ಯಾಯಬದ್ಧವಾಗಿರುತ್ತವೆ.
31 ಯೆಹೋವನ ಉಪದೇಶವು ನೀತಿವಂತನ ಹೃದಯದಲ್ಲಿರುತ್ತದೆ.
ಅವನು ನೀತಿಮಾರ್ಗದಲ್ಲಿ ನಡೆಯವನು.
32 ಕೆಡುಕರಾದರೋ ನೀತಿವಂತರಿಗೆ
ಕೇಡುಮಾಡಲು ಹೊಂಚುಹಾಕುವರು.
33 ಆದರೆ ಯೆಹೋವನು ನೀತಿವಂತರನ್ನು ತೊರೆದುಬಿಡುವುದಿಲ್ಲ.
ನೀತಿವಂತರಿಗೆ ಅಪರಾಧಿಗಳೆಂದು ತೀರ್ಪಾಗಲು ಆತನು ಬಿಡುವುದಿಲ್ಲ.
34 ಯೆಹೋವನನ್ನೇ ನಿರೀಕ್ಷಿಸಿಕೊಂಡು ಆತನ ಮಾರ್ಗವನ್ನು ಅನುಸರಿಸಿರಿ.
ಆಗ ಆತನು ನಿಮ್ಮನ್ನು ಜಯಶಾಲಿಗಳನ್ನಾಗಿ ಮಾಡುವನು;
ದೇವರು ವಾಗ್ದಾನ ಮಾಡಿದ ಭೂಮಿಯನ್ನು ನೀವು ಪಡೆದುಕೊಳ್ಳುವಿರಿ.
35 ಮಹಾದುಷ್ಟನನ್ನು ನಾನು ನೋಡಿದ್ದೇನೆ.
ಅವನು ಮಹಾವೃಕ್ಷದಂತೆ ಬಲಿಷ್ಠನಾಗಿದ್ದನು.
36 ಸ್ವಲ್ಪಕಾಲದ ಮೇಲೆ ಅವನು ಇಲ್ಲವಾದನು.
ನಾನು ಅವನಿಗಾಗಿ ಹುಡುಕಿದರೂ ಅವನು ಸಿಕ್ಕಲಿಲ್ಲ.
37 ಪವಿತ್ರರನ್ನೂ ಯಥಾರ್ಥರನ್ನೂ ಗಮನಿಸು.
ಶಾಂತಿಪ್ರಿಯರು ಅನೇಕ ಸಂತಾನಗಳನ್ನು ಹೊಂದಿಕೊಳ್ಳುವರು.
38 ಧರ್ಮಶಾಸ್ತ್ರವನ್ನು ಉಲ್ಲಂಘಿಸುವವರು ಸಂಪೂರ್ಣವಾಗಿ ನಾಶವಾಗುವರು.
ಅವರ ಮಕ್ಕಳೂ ನಾಶವಾಗುವರು.
39 ಯೆಹೋವನು ನೀತಿವಂತರನ್ನು ಕಾಪಾಡುತ್ತಾನೆ.
ಅವರು ಆಪತ್ತಿನಲ್ಲಿರುವಾಗ ಆತನೇ ಅವರಿಗೆ ಆಶ್ರಯಸ್ಥಾನವಾಗಿದ್ದಾನೆ.
40 ಯೆಹೋವನು ನೀತಿವಂತರಿಗೆ ಸಹಾಯಕನಾಗಿ ಅವರನ್ನು ರಕ್ಷಿಸುತ್ತಾನೆ.
ನೀತಿವಂತರು ಆತನನ್ನು ಆಶ್ರಯಿಸಿಕೊಂಡಾಗ ಆತನು ಅವರನ್ನು ದುಷ್ಟರಿಂದ ತಪ್ಪಿಸಿ ಕಾಪಾಡುವನು.
1 ಸೊಲೊಮೋನನ ಮನೋಹರವಾದ ಗೀತೆ
ಪ್ರಿಯತಮೆ ಪ್ರಿಯಕರನಿಗೆ
2 ನಿನ್ನ ಬಾಯಿಂದ ನನ್ನನ್ನು ಮುದ್ದಾಡು,
ನಿನ್ನ ಪ್ರೀತಿ ದ್ರಾಕ್ಷಾರಸಕ್ಕಿಂತಲೂ ಉತ್ತಮ.
3 ನಿನ್ನ ತೈಲವು ಪರಿಮಳಭರಿತವಾಗಿದೆ;
ನಿನ್ನ ಹೆಸರು ಸುಗಂಧದ್ರವ್ಯದಂತಿದೆ.
ಆದ್ದರಿಂದ ಯುವತಿಯರು ನಿನ್ನನ್ನು ಪ್ರೀತಿಸುವರು.
4 ನನ್ನನ್ನು ಕರೆದುಕೊಂಡು ಹೋಗು!
ನಾವು ಓಡಿಹೋಗೋಣ!
ರಾಜನು ನನ್ನನ್ನು ಅಂತಃಪುರಕ್ಕೆ ಬರಮಾಡಿದ್ದಾನೆ.
ಜೆರುಸಲೇಮಿನ ಸ್ತ್ರೀಯರು
ನಿನ್ನಲ್ಲಿ ಹರ್ಷಿಸಿ ಉಲ್ಲಾಸಿಸುವೆವು.
ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮ.
ಯುವತಿಯರು ನಿನ್ನನ್ನು ಹೃದಯಪೂರ್ವಕವಾಗಿ ಪ್ರೀತಿಸುವರು.
ಪ್ರಿಯತಮೆ ಜೆರುಸಲೇಮಿನ ಸ್ತ್ರೀಯರಿಗೆ
5 ಜೆರುಸಲೇಮಿನ ಸ್ತ್ರೀಯರೇ,
ನಾನು ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ
ಸೊಲೊಮೋನನ ಪರದೆಗಳಂತೆ ಸುಂದರಳಾಗಿರುವೆ.
6 ಸೂರ್ಯನ ತಾಪಕ್ಕೆ ನಾನೆಷ್ಟು ಕಪ್ಪಾಗಿದ್ದೇನೆಂದು ನೋಡಬೇಡಿರಿ.
ನನ್ನ ಸಹೋದರರು ನನ್ನ ಮೇಲೆ ಕೋಪಗೊಂಡು
ದ್ರಾಕ್ಷಿತೋಟಗಳನ್ನು ನೋಡಿಕೊಳ್ಳಲು ನನ್ನನ್ನು ನೇಮಿಸಿದರು.
ಆದರೆ ನಾನು ನನ್ನ ತೋಟವನ್ನು ಕಾಯಲಿಲ್ಲ.
ಪ್ರಿಯತಮೆ ಪ್ರಿಯಕರನಿಗೆ
7 ನನ್ನ ಪ್ರಾಣಪ್ರಿಯನೇ, ನಿನ್ನ ಕುರಿಗಳನ್ನು ಎಲ್ಲಿ ಮೇಯಿಸುವೆ?
ಮಧ್ಯಾಹ್ನದಲ್ಲಿ ಅವುಗಳನ್ನು ಎಲ್ಲಿ ಮಲಗಿಸುವೆ?
ಮುಸುಕುಹಾಕಿಕೊಂಡು
ನಿನ್ನ ಸ್ನೇಹಿತರ ಮಂದೆಗಳ ಹತ್ತಿರ ಅಲೆದಾಡುವ ಹುಡುಗಿಯಂತೆ ನಾನೇಕಿರಬೇಕು?
ಪ್ರಿಯಕರನು ಪ್ರಿಯತಮೆಗೆ
8 ಸ್ತ್ರೀಯರಲ್ಲಿ ಅತ್ಯಂತ ರೂಪವತಿಯೇ,
ನಿನ್ನ ಪ್ರಿಯನು ಎಲ್ಲಿದ್ದಾನೆಂಬುದು ನಿನಗೆ ಗೊತ್ತಿಲ್ಲದಿದ್ದರೆ,
ಹೋಗು, ಕುರಿಗಳನ್ನು ಹಿಂಬಾಲಿಸು.
ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಮರಿಗಳನ್ನು ಮೇಯಿಸು.
9 ನನ್ನ ಪ್ರಿಯೆ, ಫರೋಹನ ರಥಗಳ ಮಧ್ಯದಲ್ಲಿರುವ
ಹೆಣ್ಣು ಕುದುರೆಗಿಂತಲೂ ನೀನು ಸುಂದರಳಾಗಿರುವೆ.
10 ನಿನ್ನ ಕೆನ್ನೆಗಳು ಅಲಂಕಾರಗಳಿಂದ ಸುಂದರವಾಗಿವೆ.
ನಿನ್ನ ಕಂಠವು ಹಾರಗಳಿಂದ ಅಂದವಾಗಿದೆ.
11 ಬೆಳ್ಳಿಯ ತಿರುಪಿನಿಂದ ಕೂಡಿದ ಚಿನ್ನದ ಆಭರಣಗಳನ್ನು
ನಾವು ನಿನಗೋಸ್ಕರ ಮಾಡಿಸುವೆವು.
ಪ್ರಿಯತಮೆ
12 ಓಲಗದ ಮೇಲೆ ಮಲಗಿರುವ ರಾಜನಿಗೆ
ನನ್ನ ಸುಗಂಧದ್ರವ್ಯದ ಪರಿಮಳವು ಹರಡುವುದು.
13 ನನ್ನ ಪ್ರಿಯನು ರಾತ್ರಿಯೆಲ್ಲಾ ನನ್ನ ಸ್ತನಗಳ ನಡುವೆ ಇರುವ
ಗೋಲರಸದ ಚೀಲದಂತಿದ್ದಾನೆ.
14 ನನ್ನ ಪ್ರಿಯನು ನನಗೆ ಏನ್ಗೆದಿಯ ತೋಟಗಳ
ಗೋರಂಟೆಯ ಹೂಗೊಂಚಲು.
ಪ್ರಿಯಕರ
15 ನನ್ನ ಪ್ರಿಯೆ, ನೀನು ರೂಪವತಿ! ನೀನು ಸುಂದರಿ!
ನಿನ್ನ ಕಣ್ಣುಗಳು ಪಾರಿವಾಳಗಳಂತೆ ಕೋಮಲ.
ಪ್ರಿಯತಮೆ
16 ನನ್ನ ಪ್ರಿಯನೇ, ನೀನು ಬಹು ಸುಂದರ!
ಹೌದು, ನೀನು ಎಷ್ಟೋ ಮನೋಹರ!
ನಮ್ಮ ಹಾಸಿಗೆ ಎಷ್ಟೋ ಉಲ್ಲಾಸಕರ!
17 ನಮ್ಮ ಮನೆಯ ತೊಲೆಗಳು ದೇವದಾರು ಮರದ ತೊಲೆಗಳು.
ನಮ್ಮ ಮನೆಯ ಜಂತೆಗಳು ತುರಾಯಿ ಮರದ ಜಂತೆಗಳು.
ದೇವರು ತನ್ನ ಮಗನ ಮೂಲಕ ಮಾತನಾಡಿದನು
1 ಪೂರ್ವಕಾಲದಲ್ಲಿ ದೇವರು ಪ್ರವಾದಿಗಳ ಮೂಲಕ ನಮ್ಮ ಜನರೊಂದಿಗೆ ಹಲವಾರು ವಿಧದಲ್ಲಿ ಅನೇಕ ಸಲ ಮಾತನಾಡಿದನು. 2 ಈಗ, ಕೊನೆಯ ದಿನಗಳಲ್ಲಿ ದೇವರು ಮತ್ತೆ ನಮ್ಮ ಜೊತೆಯಲ್ಲಿ ತನ್ನ ಮಗನ ಮೂಲಕ ಮಾತನಾಡಿದನು. ದೇವರು ತನ್ನ ಮಗನ ಮೂಲಕ ಲೋಕವನ್ನೆಲ್ಲ ಸೃಷ್ಟಿಸಿ, ಸಮಸ್ತಕ್ಕೂ ಆತನನ್ನೇ ಬಾಧ್ಯಸ್ತನನ್ನಾಗಿ ಮಾಡಿದನು. 3 ದೇವರ ಮಹಿಮೆಯು ಆತನಲ್ಲಿ ತೋರಿಬಂದಿತು. ಆತನು ದೇವರ ಸ್ವಭಾವದ ಪ್ರತಿರೂಪವಾಗಿದ್ದಾನೆ. ಆತನು ತನ್ನ ಶಕ್ತಿಯ ಆಜ್ಞೆಯಿಂದ ಪರಿಪಾಲಿಸುತ್ತಿದ್ದಾನೆ. ಆತನು ಜನರನ್ನು ಅವರ ಪಾಪಗಳಿಂದ ಶುದ್ಧಿಮಾಡಿ, ಸ್ವರ್ಗದಲ್ಲಿ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು. 4 ದೇವರು ಆತನಿಗೆ ದೇವದೂತರಿಗಿಂತ ಎಷ್ಟೋ ಶ್ರೇಷ್ಠವಾದ ಹೆಸರನ್ನು ದಯಪಾಲಿಸಿದನು. ಆತನು ದೇವದೂತರಿಗಿಂತ ಅಷ್ಟೊಂದು ಶ್ರೇಷ್ಠನಾದನು.
5 ದೇವರು ಯಾವ ದೂತರಿಗೂ ಈ ಸಂಗತಿಗಳನ್ನು ಎಂದೂ ಹೇಳಿಲ್ಲ:
“ನೀನು ನನ್ನ ಮಗ;
ಈ ದಿನ ನಾನು ನಿನ್ನ ತಂದೆಯಾದೆನು.”(A)
ದೇವರು ದೂತನೊಬ್ಬನಿಗೆ ಎಂದೂ ಹೀಗೆ ಹೇಳಿಲ್ಲ:
“ನಾನು ಅವನ ತಂದೆಯಾಗಿರುವೆನು,
ಅವನು ನನ್ನ ಮಗನಾಗಿರುವನು.”(B)
6 ದೇವರು ತನ್ನ ಚೊಚ್ಚಲ ಮಗನನ್ನು ಈ ಲೋಕಕ್ಕೆ ಬರಮಾಡುವಾಗ, ಆತನು ಹೇಳುವುದೇನೆಂದರೆ,
“ದೇವದೂತರೆಲ್ಲರೂ ಆತನನ್ನು ಆರಾಧಿಸಲಿ.”[a]
7 ದೇವರು ತನ್ನ ದೂತರನ್ನು ಕುರಿತು ಹೇಳಿದ್ದು ಹೀಗಿದೆ:
“ದೇವರು ತನ್ನ ದೂತರನ್ನು ಗಾಳಿಗಳನ್ನಾಗಿ ಮಾಡಿದನು.
ಆತನು ತನ್ನ ಸೇವಕರನ್ನು ಬೆಂಕಿಯ ಜ್ವಾಲೆಗಳಂತೆ ಮಾಡಿದನು.”(C)
8 ಆದರೆ ದೇವರು ತನ್ನ ಮಗನನ್ನು ಕುರಿತು ಹೀಗೆ ಹೇಳಿದನು:
“ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲೂ ಇರುವುದು.
ನೀನು ನಿನ್ನ ರಾಜ್ಯವನ್ನು ಸಮರ್ಪಕವಾದ ತೀರ್ಪುಗಳೊಡನೆ ಆಳುವೆ.
9 ನೀನು ಒಳ್ಳೆಯದನ್ನು ಪ್ರೀತಿಸುವೆ, ಕೆಟ್ಟದ್ದನ್ನು ದ್ವೇಷಿಸುವೆ.
ಆದ್ದರಿಂದ ದೇವರು, ಹೌದು, ನಿನ್ನ ದೇವರೇ ನಿನ್ನನ್ನು
ನಿನ್ನ ಸಂಗಡಿಗರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದದ ತೈಲದಿಂದ ಅಭಿಷೇಕಿಸಿದ್ದಾನೆ.”(D)
10 ಇದಲ್ಲದೆ ದೇವರು ಹೀಗೆನ್ನುತ್ತಾನೆ:
“ಪ್ರಭುವೇ, ಆದಿಯಲ್ಲಿ ನೀನು ಈ ಲೋಕವನ್ನು ಸೃಷ್ಟಿಸಿದೆ.
ಗಗನಮಂಡಲವು ನಿನ್ನ ಕೈಕೆಲಸವಾಗಿದೆ.
11 ಇವೆಲ್ಲವು ನಾಶವಾಗುತ್ತವೆ, ಆದರೆ ನೀನು ಶಾಶ್ವತವಾಗಿರುವೆ.
ಎಲ್ಲಾ ವಸ್ತುಗಳೂ ವಸ್ತ್ರಗಳಂತೆ ಹಳೆಯವಾಗುವವು.
12 ನೀನು ಅವುಗಳನ್ನು ಮೇಲಂಗಿಯಂತೆ ಮಡಿಚಿಡುವೆ.
ಅವು ವಸ್ತ್ರಗಳಂತೆ ಬದಲಾಗುತ್ತವೆ.
ಆದರೆ ನೀನು ಎಂದೆಂದಿಗೂ ಬದಲಾಗುವುದಿಲ್ಲ.
ನಿನ್ನ ಜೀವಕ್ಕೆ ಅಂತ್ಯವೆಂಬುದಿಲ್ಲ.”(E)
13 ದೇವರು ಯಾವ ದೂತನಿಗೂ ಇದನ್ನೆಂದೂ ಹೇಳಿಲ್ಲ:
“ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವತನಕ,
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊ.”(F)
14 ದೇವದೂತರೆಲ್ಲರೂ ದೇವರ ಸೇವೆಮಾಡುವ ಆತ್ಮಗಳಾಗಿದ್ದಾರೆ ಮತ್ತು ರಕ್ಷಣೆಯನ್ನು ಹೊಂದಿಕೊಳ್ಳುವ ಜನರ ಸಹಾಯಕ್ಕಾಗಿ ಕಳುಹಿಸಲ್ಪಟ್ಟವರಾಗಿದ್ದಾರೆ.
Kannada Holy Bible: Easy-to-Read Version. All rights reserved. © 1997 Bible League International