Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 2

ಪಾಳೆಯ ಮಾಡಿಕೊಳ್ಳುವ ಕ್ರಮ

ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ: “ಇಸ್ರೇಲರು ದೇವದರ್ಶನಗುಡಾರದ ಸುತ್ತಲೂ ಸ್ವಲ್ಪ ದೂರದಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಪ್ರತಿಯೊಬ್ಬನು ತನ್ನತನ್ನ ಗೋತ್ರಧ್ವಜದ ಹತ್ತಿರ ತನ್ನತನ್ನ ದಂಡಿನಲ್ಲೇ ಇಳಿದುಕೊಳ್ಳಬೇಕು.

“ವಿಭಾಗಗಳಿಗನುಸಾರವಾಗಿ ತಮ್ಮತಮ್ಮ ಸ್ವಂತ ಧ್ವಜಗಳೊಡನೆ ಮುನ್ನಡೆಯುವ ಯೆಹೂದ ಮತ್ತು ಅದರ ಗೋತ್ರಗಳವರು ದೇವದರ್ಶನಗುಡಾರದ ಪೂರ್ವದಿಕ್ಕಿನಲ್ಲಿ ಪಾಳೆಯ ಮಾಡಿಕೊಳ್ಳಬೇಕು. ಯೆಹೂದ ಕುಲದವರ ನಾಯಕನು ಅಮ್ಮೀನಾದಾಬನ ಮಗನಾದ ನಹಶೋನ. ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 74,600 ಮಂದಿ.

“ಇಸ್ಸಾಕಾರ್ ಕುಲದವರು ಯೆಹೂದ ಕುಲದವರ ನಂತರ ಪಾಳೆಯ ಹಾಕುವರು. ಇಸ್ಸಾಕಾರನ ಕುಲದವರ ನಾಯಕನು ಚೂವಾರನ ಮಗನಾದ ನೆತನೇಲ್. ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 54,400 ಮಂದಿ.

“ಜೆಬುಲೂನ್ ಕುಲದವರು ಸಹ ಯೆಹೂದ ಕುಲದವರ ನಂತರ ಪಾಳೆಯ ಹಾಕುವರು. ಜೆಬುಲೂನ್ ಕುಲದ ನಾಯಕನು ಹೇಲೋನನ ಮಗನಾದ ಎಲೀಯಾಬ್. ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 57,400 ಮಂದಿ.

“ಯೆಹೂದ ಪಾಳೆಯದಲ್ಲಿ ಮತ್ತು ಅದರೊಡನೆ ಮುನ್ನಡೆಯುವ ಗೋತ್ರಗಳವರ ಒಟ್ಟು ಸೈನಿಕರು 1,86,400 ಮಂದಿ. ಇವರೆಲ್ಲರು ವಿಭಾಗಗಳಿಗನುಸಾರವಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡವರು. ಇಸ್ರೇಲರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ, ಯೆಹೂದ ಕುಲವು ಮತ್ತು ಅದರೊಂದಿಗಿರುವ ಎರಡು ಕುಲಗಳವರು ಮೊದಲು ಹೊರಡುವರು.

10 “ರೂಬೇನ್ ಕುಲ ಮತ್ತು ಅದರೊಡನೆ ಮುನ್ನಡೆಯುವ ಕುಲಗಳು ದೇವದರ್ಶನಗುಡಾರದ ದಕ್ಷಿಣದಿಕ್ಕಿನಲ್ಲಿ ತಮ್ಮ ಧ್ವಜಗಳೊಡನೆ ವಿಭಾಗಗಳಿನುಸಾರವಾಗಿ ಪಾಳೆಯಮಾಡಿಕೊಳ್ಳಬೇಕು. ರೂಬೇನ್ ಕುಲದವರ ನಾಯಕನು ಶೆದೇಯೂರನ ಮಗನಾದ ಎಲೀಚೂರನು; 11 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 46,500 ಮಂದಿ.

12 “ರೂಬೇನ್ ಕುಲದವರ ಪಕ್ಕದಲ್ಲಿ ಸಿಮೆಯೋನ್ ಕುಲದವರು ಪಾಳೆಯ ಹಾಕುವರು. ಸಿಮೆಯೋನ್ ಕುಲದವರ ನಾಯಕನು ಚೂರೀಷದ್ದೈನ ಮಗನಾದ ಶೆಲುಮೀಯೇಲ. 13 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 59,300 ಮಂದಿ.

14 “ಗಾದ್ ಕುಲವು ಸಹ ರೂಬೇನ್ ಕುಲದ ಪಕ್ಕದಲ್ಲಿ ಪಾಳೆಯ ಮಾಡಿಕೊಳ್ಳಬೇಕು. ಗಾದನ ಕುಲದವರ ನಾಯಕನು ರೆಗೂವೇಲನ ಮಗನಾದ ಎಲ್ಯಾಸಾಫ್. 15 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 45,650 ಮಂದಿ.

16 “ರೂಬೇನ್ ಪಾಳೆಯದಲ್ಲಿರುವ ಎಲ್ಲಾ ತಂಡಗಳಲ್ಲಿರುವ ಒಟ್ಟು ಸೈನಿಕರು 1,51,450 ಮಂದಿ. ಇವರೆಲ್ಲರೂ ವಿಭಾಗಗಳಿಗನುಸಾರವಾಗಿ ಹೆಸರನ್ನು ನೊಂದಾಯಿಸಿಕೊಂಡವರು. ಇಸ್ರೇಲರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ ರೂಬೇನ್ ಕುಲವು ಮತ್ತು ಅದರ ನಂತರದಲ್ಲಿರುವ ಎರಡು ಕುಲಗಳವರು ಎರಡನೆಯದಾಗಿ ಹೊರಡುವರು.

17 “ಇಸ್ರೇಲರು ಪ್ರಯಾಣಮಾಡುವಾಗ ಅವರ ನಂತರ ಹೊರಡುವ ತಂಡದವರೇ ಲೇವಿ ಕುಲದವರು. ಇತರ ಪಾಳೆಯಗಳ ಮಧ್ಯೆ ದೇವದರ್ಶನಗುಡಾರವು ಅವರೊಡನೆ ಇರುವುದು. ಅವರು ತಾವು ಪಾಳೆಯ ಮಾಡಿಕೊಂಡ ಕ್ರಮಾನುಸಾರವಾಗಿ ತಮ್ಮ ಧ್ವಜಗಳೊಡನೆ ಮುನ್ನಡೆಯುವರು.

18 “ಎಫ್ರಾಯೀಮ್ ಕುಲದವರು ಮತ್ತು ಅವರೊಡನೆ ಮುನ್ನಡೆಯುವ ಕುಲಗಳವರು ದೇವದರ್ಶನಗುಡಾರದ ಪಶ್ಚಿಮ ದಿಕ್ಕಿನಲ್ಲಿ ತಮ್ಮ ಧ್ವಜಗಳೊಡನೆ ವಿಭಾಗಗಳಿಗನುಸಾರವಾಗಿ ಪಾಳೆಯ ಮಾಡಬೇಕು. ಎಫ್ರಾಯೀಮ್ ಕುಲದವರ ನಾಯಕನು ಅಮ್ಮೀಹೂದನ ಮಗನಾದ ಎಲೀಷಾಮ. 19 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 40,500 ಮಂದಿ.

20 “ಮನಸ್ಸೆ ಕುಲದವರು ಎಫ್ರಾಯೀಮ್ ಕುಲದವರ ಪಕ್ಕದಲ್ಲಿ ಪಾಳೆಯ ಹಾಕುವರು. ಮನಸ್ಸೆ ಕುಲದವರ ನಾಯಕನು ಪೆದಾಚೂರನ ಮಗನಾದ ಗಮ್ಲೀಯೇಲ. 21 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 32,200 ಮಂದಿ.

22 “ಬೆನ್ಯಾಮೀನ್ ಕುಲವು ಸಹ ಎಫ್ರಾಯೀಮ್ ಕುಲದ ಪಕ್ಕದಲ್ಲಿ ಪಾಳೆಯ ಹಾಕುವರು. ಬೆನ್ಯಾಮೀನ್ ಕುಲದವರ ನಾಯಕನು ಗಿದ್ಯೋನನ ಮಗನಾದ ಅಬೀದಾನನು. 23 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 35,400 ಮಂದಿ.

24 “ಎಫ್ರಾಯೀಮ್ ಪಾಳೆಯದಲ್ಲಿರುವ ಸೈನಿಕರು 1,08,100 ಮಂದಿ. ಇವರೆಲ್ಲರು ತಮ್ಮ ವಿಭಾಗಗಳಿಗನುಸಾರವಾಗಿ ಹೆಸರನ್ನು ನೊಂದಾಯಿಸಿಕೊಂಡವರು. ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ ಎಫ್ರಾಯೀಮರ ಕುಲದವರು ಮತ್ತು ಅವರ ನಂತರದಲ್ಲಿರುವ ಎರಡು ಕುಲಗಳವರು ಮೂರನೆಯ ಗುಂಪಾಗಿ ಹೊರಡುವರು.

25 “ದಾನ್ ಕುಲದವರು ಮತ್ತು ಅವರೊಡನೆ ಮುನ್ನಡೆಯುವ ಕುಲಗಳು ದೇವದರ್ಶನಗುಡಾರದ ಉತ್ತರ ದಿಕ್ಕಿನಲ್ಲಿ ತಮ್ಮ ಧ್ವಜದೊಡನೆ ವಿಭಾಗಗಳಿಗನುಸಾರವಾಗಿ ಪಾಳೆಯ ಮಾಡಬೇಕು. ದಾನ್ ಕುಲದ ನಾಯಕನು ಅಮ್ಮೀಷದ್ದೈಯನ ಮಗನಾದ ಅಹೀಗೆಜೆರ್. 26 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 62,700 ಮಂದಿ.

27 “ಆಶೇರ್ ಕುಲದವರು ದಾನ್ ಕುಲದ ಪಕ್ಕದಲ್ಲಿ ಪಾಳೆಯ ಹಾಕಬೇಕು. ಆಶೇರ್ ಕುಲದವರ ನಾಯಕನು ಒಕ್ರಾನನ ಮಗನಾದ ಪಗೀಯೇಲ. 28 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 41,500 ಮಂದಿ.

29 “ನಫ್ತಾಲಿ ಕುಲದವರು ಸಹ ದಾನ್ ಕುಲದ ಪಕ್ಕದಲ್ಲಿ ಪಾಳೆಯ ಹಾಕಬೇಕು. ನಫ್ತಾಲಿ ಕುಲದವರ ನಾಯಕನು ಏನಾನನ ಮಗನಾದ ಅಹೀರ. 30 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 53,400 ಮಂದಿ.

31 “ದಾನ್ ಕುಲದ ಪಾಳೆಯದಲ್ಲಿರುವ ಲೆಕ್ಕಿಸಲ್ಪಟ್ಟ ಸೈನಿಕರು 1,57,600 ಮಂದಿ. ಇಸ್ರೇಲರು ಸ್ಥಳದಿಂದ ಸ್ಥಳಕ್ಕೆ ಪ್ರಯಾಣಮಾಡುವಾಗ ದಾನ್ ಕುಲದವರು ಮತ್ತು ಅವರೊಂದಿಗಿರುವ ಎರಡು ಕುಲಗಳವರು ಕೊನೆಯಲ್ಲಿ ತಮ್ಮ ಧ್ವಜಗಳೊಡನೆ ಮುನ್ನಡೆಯುವರು.”

32 ತಮ್ಮ ಕುಟುಂಬಗಳಿಗನುಸಾರವಾಗಿ ಹೆಸರನ್ನು ನೊಂದಾಯಿಸಿಕೊಂಡ ಇಸ್ರೇಲರು ಇವರೇ. ಅವರ ವಿಭಾಗಗಳಿಗನುಸಾರವಾಗಿ ಪಾಳೆಯದಲ್ಲಿ ಲೆಕ್ಕಿಸಲ್ಪಟ್ಟ ಇಸ್ರೇಲರ ಸೈನಿಕರ ಸಂಖ್ಯೆ 6,03,550 ಮಂದಿ. 33 ಯೆಹೋವನ ಆಜ್ಞೆಯ ಪ್ರಕಾರ ಮೋಶೆಯು ಲೇವಿಯರನ್ನು ಇತರ ಇಸ್ರೇಲರೊಂದಿಗೆ ಲೆಕ್ಕಿಸಲಿಲ್ಲ.

34 ಹೀಗೆ ಯೆಹೋವನು ಮೋಶೆಗೆ ಹೇಳಿದ ಪ್ರತಿಯೊಂದನ್ನು ಇಸ್ರೇಲರು ಮಾಡಿದರು. ತಮ್ಮ ಕ್ರಮಕ್ಕನುಸಾರವಾಗಿ ಅವರು ಪಾಳೆಯ ಮಾಡಿಕೊಂಡರು. ನೇಮಕವಾದ ಪ್ರಕಾರವೇ ಪ್ರಯಾಣ ಮಾಡುತ್ತಿದ್ದರು; ಪ್ರತಿಯೊಬ್ಬನು ತನ್ನ ಸ್ವಂತ ಕುಲದೊಡನೆಯೂ ಕುಟುಂಬದೊಡನೆಯೂ ಇದ್ದನು.

ಕೀರ್ತನೆಗಳು 36

ರಚನೆಗಾರ: ದಾವೀದ.

36 ದುಷ್ಟನು ಪಾಪದಿಂದ ಪ್ರಭಾವಿತನಾಗಿ, “ನಾನು ದೇವರಿಗೆ ಭಯಪಡುವುದೂ ಇಲ್ಲ
    ಆತನನ್ನು ಗೌರವಿಸುವುದೂ ಇಲ್ಲ” ಎಂದುಕೊಳ್ಳುವನು.
ಅವನು ತನ್ನನ್ನು ವಂಚಿಸಿಕೊಳ್ಳುವನು.
    ಅವನು ತನ್ನ ತಪ್ಪುಗಳನ್ನು ಕಾಣುವುದೂ ಇಲ್ಲ,
    ಅವುಗಳಿಗಾಗಿ ಕ್ಷಮೆಯನ್ನು ಕೇಳುವುದೂ ಇಲ್ಲ.
ಅವನ ಮಾತುಗಳು ಕೇವಲ ಸುಳ್ಳುಗಳಾಗಿವೆ.
    ಅವನು ಜ್ಞಾನಿಯಾಗುವುದೂ ಇಲ್ಲ, ಒಳ್ಳೆಯದನ್ನು ಕಲಿತುಕೊಳ್ಳುವುದೂ ಇಲ್ಲ.
ರಾತ್ರಿಯಲ್ಲಿ, ಅವನು ಕೇಡನ್ನೇ ಆಲೋಚಿಸುವನು.
    ಮರುದಿನ ಮುಂಜಾನೆ ಎದ್ದಾಗ,
    ಒಳ್ಳೆಯದನ್ನು ಮಾಡದೆ ಕೇಡನ್ನು ಮಾಡಲು ಸಿದ್ಧನಾಗಿರುವನು.

ಯೆಹೋವನೇ, ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ.
    ನಿನ್ನ ನಂಬಿಗಸ್ತಿಕೆಯು ಮೇಘಗಳಿಗಿಂತಲೂ ಎತ್ತರವಾಗಿದೆ.
ನಿನ್ನ ನೀತಿಯು ಅತ್ಯುನ್ನತವಾದ ಬೆಟ್ಟಕ್ಕಿಂತಲೂ ಎತ್ತರವಾಗಿದೆ.
    ನಿನ್ನ ನ್ಯಾಯವು ಮಹಾಸಾಗರಕ್ಕಿಂತಲೂ ಆಳವಾಗಿದೆ.
ಯೆಹೋವನೇ, ಮನುಷ್ಯರನ್ನೂ ಪ್ರಾಣಿಗಳನ್ನೂ ಕಾಪಾಡುವಾತನು ನೀನೇ.
ನಿನ್ನ ಶಾಶ್ವತವಾದ ಪ್ರೀತಿಗಿಂತ ಅಮೂಲ್ಯವಾದದ್ದು ಬೇರೊಂದಿಲ್ಲ.
    ಜನರೂ ದೇವದೂತರೂ ನಿನ್ನನ್ನೇ ಆಶ್ರಯಿಸಿಕೊಳ್ಳುವರು.
ನಿನ್ನ ಆಲಯದ ಸಮೃದ್ಧಿಯಿಂದ ಅವರು ನವಚೈತನ್ಯವನ್ನು ಪಡೆದುಕೊಳ್ಳುವರು.
    ನಿನ್ನ ಶ್ರೇಷ್ಠ ನದಿಯಲ್ಲಿ ಕುಡಿಯಲು ಅವರಿಗೆ ಆಸ್ಪದನೀಡು.
ಜೀವಬುಗ್ಗೆಯು ನಿನ್ನ ಬಳಿಯಿಂದ ಹರಿಯುವುದು!
    ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ.
10 ನಿನ್ನನ್ನು ಅರಿತುಕೊಂಡವರ ಮೇಲೆ ನಿನ್ನ ಪ್ರೀತಿಯು ನೆಲೆಸಿರಲಿ.
    ಯಥಾರ್ಥವಂತರಿಗೆ ಒಳ್ಳೆಯದನ್ನು ಮಾಡು.
11 ಗರ್ವಿಷ್ಠರ ಬಲೆಗೆ ನನ್ನನ್ನು ಬೀಳಿಸಬೇಡ;
    ದುಷ್ಟರ ಕೈಹಿಡಿತಕ್ಕೆ ನನ್ನನ್ನು ಸಿಕ್ಕಿಸಬೇಡ.

12 “ದುಷ್ಟರು ಬಿದ್ದು ಜಜ್ಜಲ್ಪಟ್ಟದ್ದು ಇಲ್ಲಿಯೇ.
    ಅವರು ಮತ್ತೆಂದಿಗೂ ಮೇಲೇಳುವುದಿಲ್ಲ”
    ಎಂದು ಅವರ ಸಮಾಧಿಯ ಮೇಲೆ ಬರೆಯಿಸು.

ಪ್ರಸಂಗಿ 12

ಮುಪ್ಪಿನ ಸಮಸ್ಯೆಗಳು

12 ಕಷ್ಟಕಾಲಗಳು ಬರುವುದಕ್ಕಿಂತ ಮೊದಲೇ, ವರ್ಷಗಳು ಮುಗಿದು, “ನನಗೆ ಅವುಗಳಲ್ಲಿ ಸುಖವಿಲ್ಲ” ಎಂದು ಹೇಳುವ ಕಾಲಬರುವುದಕ್ಕಿಂತ ಮೊದಲೇ ಯೌವನಪ್ರಾಯದಲ್ಲಿ ನಿನ್ನ ಸೃಷ್ಟಿಕರ್ತನನ್ನು ಜ್ಞಾಪಿಸಿಕೊ.

ನೀನು ಮುದುಕನಾದಾಗ, ಸೂರ್ಯ, ಚಂದ್ರ, ನಕ್ಷತ್ರಗಳ ಬೆಳಕು ನಿನಗೆ ಕತ್ತಲೆಯಂತೆ ಕಾಣುತ್ತದೆ. ಮಳೆಯಾದ ಮೇಲೆಯೂ ಮತ್ತೆಮತ್ತೆ ಮೋಡಗಳಂತೆ ನಿನ್ನ ಜೀವನದಲ್ಲಿ ಕಷ್ಟಗಳು ತುಂಬಿರುತ್ತವೆ.

ಆ ಸಮಯದಲ್ಲಿ, ನಿನ್ನ ಬಲಿಷ್ಠವಾದ ತೋಳುಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ; ನಿನ್ನ ಬಲಿಷ್ಠವಾದ ಕಾಲುಗಳು ಬಲಹೀನವಾಗಿ ಬಗ್ಗಿಹೋಗುತ್ತವೆ; ನಿನ್ನ ಹಲ್ಲುಗಳು ಬಿದ್ದುಹೋಗುತ್ತವೆ; ಆಗ ನೀನು ಆಹಾರವನ್ನು ಅಗಿದು ತಿನ್ನಲಾರೆ. ನಿನ್ನ ಕಣ್ಣುಗಳು ಮೊಬ್ಬಾಗುತ್ತವೆ. ನಿನ್ನ ಕಿವಿ ಮಂದವಾಗುತ್ತದೆ. ನೀನು ಮಾರುಕಟ್ಟೆಯ ಶಬ್ದವನ್ನೂ ಕೇಳಲಾರೆ. ಅರೆಯುವ ಕಲ್ಲು ಸಹ ನಿನಗೆ ತುಂಬ ಮೌನವಾಗಿದೆಯೋ ಎಂಬಂತೆ ತೋರುವುದು. ಗಾಯನವೂ ನಿನಗೆ ಕೇಳುವುದಿಲ್ಲ. ನಿನಗೆ ನಿದ್ರೆಬಾರದಿರುವುದರಿಂದ ಕೇವಲ ಒಂದು ಹಕ್ಕಿಯ ಧ್ವನಿಯು ನಿನ್ನನ್ನು ಹೊತ್ತಾರೆಯಲ್ಲಿ ಎಬ್ಬಿಸುವುದು.

ನೀನು ಎತ್ತರವಾದ ಸ್ಥಳಗಳ ಬಗ್ಗೆ ಭಯದಿಂದಿರುವೆ; ನಿನ್ನ ಹಾದಿಯಲ್ಲಿರುವ ಪ್ರತಿಯೊಂದು ಚಿಕ್ಕ ವಸ್ತುವಿಗೂ ಹೆದರಿಕೊಂಡು ನಡೆದಾಡುವೆ. ನಿನ್ನ ಕೂದಲು ಬಾದಾಮಿ ಮರದ ಹೂವುಗಳಂತೆ ಬಿಳುಪಾಗುವುದು. ನೀನು ನಡೆಯುವಾಗ ಮಿಡತೆಯಂತೆ ನಿನ್ನನ್ನು ಎಳೆದಾಡಿಕೊಂಡು ನಡೆಯುವೆ; ಮಗುವನ್ನು ಪಡೆಯಲಾರದಷ್ಟು ವಯಸ್ಸಾಗುವುದು. ಆಮೇಲೆ ನೀನು ನಿನ್ನ ಹೊಸ ಮನೆಗೆ (ಸಮಾಧಿಗೆ) ಹೋಗುವೆ. ನಿನ್ನ ಶವಸಂಸ್ಕಾರಕ್ಕೆ ಹೋಗಲು ಜನರು ಬೀದಿಗಳಲ್ಲಿ ತುಂಬಿರುವರು.

ಮರಣ

ನಿನ್ನ ಜೀವನ ಮುಖ್ಯವಾದದ್ದು.
    ನಿನ್ನ ಜೀವನ ಬೆಳ್ಳಿಬಂಗಾರಗಳಂತೆ ಬೆಲೆಬಾಳುವಂಥದ್ದು.
    ಆದರೆ, ಅದು ಬಹುಬೇಗನೆ ತುಂಡಾದ ದಾರದಂತೆಯೂ ಮುರಿದುಹೋದ ಪಾತ್ರೆಯಂತೆಯೂ ಆಗುವುದು.
    ನಿನ್ನ ಜೀವನ ಬಾವಿಯಲ್ಲಿ ಒಡೆದುಹೋದ ಬಿಂದಿಗೆಯಂತೆ ನಿಷ್ಟ್ರಯೋಜಕವಾಗುವುದು.
    ನಿನ್ನ ಜೀವನವು, ಬಾವಿಯ ಕಟ್ಟೆಯ ಮೇಲೆ ಮುಚ್ಚಿದ್ದ ಚಪ್ಪಡಿಕಲ್ಲು ತಾನೇ ಒಡೆದು ಬಾವಿಯೊಳಗೆ ಬಿದ್ದು ಹೋದಂತೆ ನಿಷ್ಪ್ರಯೋಜಕವಾಗುವುದು.
ಆದ್ದರಿಂದಲೇ ಯೌವನ ಪ್ರಾಯದಲ್ಲಿರುವಾಗಲೇ
    ನೀನು ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.
ನಿನ್ನ ದೇಹ ಭೂಮಿಯಿಂದ ಬಂದಿದೆ.
    ನೀನು ಸತ್ತಾಗ ಅದು ಮತ್ತೆ ಭೂಮಿಯ ಪಾಲಾಗುವುದು.
ಆದರೆ ನಿನ್ನ ಆತ್ಮವು ದೇವರಿಂದ ಬಂದಿದೆ.
    ನಿನ್ನ ದೇಹವು ಸತ್ತ ಮೇಲೆ, ನಿನ್ನ ಆತ್ಮವು ಮತ್ತೆ ದೇವರ ಬಳಿಗೆ ಹೋಗುವುದು.

ಪ್ರತಿಯೊಂದು ಉಪಯೋಗವಿಲ್ಲದ್ದು! ಪ್ರಸಂಗಿಯು ಹೇಳುವುದೇನೆಂದರೆ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ.

ಅಂತಿಮ ನುಡಿಗಳು

ಪ್ರಸಂಗಿಯು ತುಂಬ ಜ್ಞಾನಿಯಾಗಿದ್ದನು. ಪ್ರಸಂಗಿಯು ಅನೇಕ ಜ್ಞಾನೋಪದೇಶಗಳನ್ನು ತುಂಬ ಎಚ್ಚರಿಕೆಯಿಂದ ಅಧ್ಯಯನ ಮಾಡಿ ಕ್ರಮಪಡಿಸಿದನು. 10 ಪ್ರಸಂಗಿಯು ಸರಿಯಾದ ಪದಗಳನ್ನು ಪ್ರಯಾಸದಿಂದ ಕಂಡುಹಿಡಿದು ಬಳಸಿದನು; ಸತ್ಯವೂ ಭರವಸೆಗೆ ಯೋಗ್ಯವೂ ಆದ ಉಪದೇಶಗಳನ್ನು ಬರೆದನು.

11 ಜ್ಞಾನಿಯ ನುಡಿಗಳು ಪ್ರಾಣಿಗಳನ್ನು ಮುನ್ನಡೆಸುವ ಚಾವಟಿಗಳಂತಿವೆ. ಅವನ ಉಪದೇಶಗಳು ಮುರಿಯದ ಮೊಳೆಗಳಂತಿವೆ. ಅವುಗಳೆಲ್ಲ ಒಬ್ಬನೇ ಕುರುಬನಿಂದ (ದೇವರಿಂದ) ಬಂದಿವೆ. 12 ಆದ್ದರಿಂದ ಮಗನೇ, ಆ ಉಪದೇಶಗಳನ್ನು ಅಧ್ಯಯನ ಮಾಡು, ಆದರೆ ಬೇರೆ ಪುಸ್ತಕಗಳ ಬಗ್ಗೆ ಎಚ್ಚರಿಕೆಯಿಂದಿರು. ಜನರು ಯಾವಾಗಲೂ ಪುಸ್ತಕಗಳನ್ನು ಬರೆಯುತ್ತಿರುತ್ತಾರೆ; ಅತಿಯಾದ ಅಧ್ಯಯನವು ನಿನ್ನನ್ನು ತುಂಬ ಆಯಾಸಗೊಳಿಸುತ್ತದೆ.

13-14 ಈ ಪುಸ್ತಕದಲ್ಲಿ ಬರೆಯಲಾಗಿರುವ ಎಲ್ಲಾ ವಿಷಯಗಳಿಂದ ನಾವು ಕಲಿತುಕೊಳ್ಳತಕ್ಕದ್ದೇನು? ಒಬ್ಬನು ಮಾಡಬಹುದಾದ ಅತ್ಯಂತ ಮುಖ್ಯವಾದ ಕಾರ್ಯವೆಂದರೆ, ದೇವರಲ್ಲಿ ಭಯಭಕ್ತಿಯಿಂದಿದ್ದು ಆತನ ಆಜ್ಞೆಗಳಿಗೆ ವಿಧೇಯನಾಗರುವುದೇ. ಯಾಕೆಂದರೆ ಜನರ ಎಲ್ಲಾ ಕಾರ್ಯಗಳೂ ರಹಸ್ಯಗಳೂ ದೇವರಿಗೆ ಗೊತ್ತಿವೆ. ಆತನು ಪ್ರತಿಯೊಂದು ಕಾರ್ಯವನ್ನೂ ತಿಳಿದಿರುವುದರಿಂದ ಪ್ರತಿಯೊಂದಕ್ಕೂ ನ್ಯಾಯತೀರ್ಪು ನೀಡುವನು.

ಫಿಲೆಮೋನನಿಗೆ

ಯೇಸು ಕ್ರಿಸ್ತನ ನಿಮಿತ್ತ ಸೆರೆಯಲ್ಲಿರುವ ಪೌಲನೂ ಸಹೋದರನಾದ ತಿಮೊಥೆಯನೂ ನಮಗೆ ಪ್ರಿಯನಾದ ಮತ್ತು ನಮ್ಮ ಜೊತೆಕೆಲಸದವನಾದ ಫಿಲೆಮೋನನಿಗೆ, ಸಹೋದರಿಯಾದ ಅಪ್ಫಿಯಳಿಗೆ, ನಮ್ಮ ಜೊತೆಸೈನಿಕನಾದ ಅರ್ಖಿಪ್ಪನಿಗೆ ಮತ್ತು ಫಿಲೆಮೋನನ ಮನೆಯಲ್ಲಿ ಸೇರಿಬರುವ ಸಭೆಯವರೆಲ್ಲರಿಗೆ ಬರೆಯುವ ಪತ್ರ.

ನಮ್ಮ ತಂದೆಯಾದ ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಕೃಪೆಯೂ ಶಾಂತಿಯೂ ನಿಮ್ಮೊಂದಿಗಿರಲಿ.

ಫಿಲೆಮೋನನ ಪ್ರೀತಿ ಮತ್ತು ನಂಬಿಕೆ

ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಯಾವಾಗಲೂ ನಿನಗಾಗಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ದೇವರ ಪರಿಶುದ್ಧ ಜನರ ಮೇಲೆ ನಿನಗಿರುವ ಪ್ರೀತಿಯನ್ನು ಮತ್ತು ಪ್ರಭುವಾದ ಯೇಸುವಿನಲ್ಲಿ ನಿನಗಿರುವ ನಂಬಿಕೆಯನ್ನು ಕೇಳಿದ್ದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನೀನು ನಿನ್ನ ನಂಬಿಕೆಯನ್ನು ಹಂಚಿಕೊಳ್ಳುವುದರಲ್ಲಿ ಕಾರ್ಯ ನಿರತನಾಗಿರುವುದರ ಮೂಲಕ ಕ್ರಿಸ್ತನಲ್ಲಿ ನಮಗಿರುವ ಎಲ್ಲಾ ಸುವರಗಳನ್ನು ಅರ್ಥಮಾಡಿಕೊಳ್ಳುವಂತಾಗಲೆಂದು ಪ್ರಾರ್ಥಿಸುತ್ತೇನೆ. ನನ್ನ ಸಹೋದರನೇ, ದೇವಜನರಿಗೆ ನೀನು ಪ್ರೀತಿಯನ್ನು ತೋರಿಸಿ ಅವರ ಹೃದಯಗಳನ್ನು ಸಂತೈಸಿರುವೆ. ಇದು ನನಗೆ ಹೆಚ್ಚಿನ ಸಂತಸವನ್ನೂ ನೆಮ್ಮದಿಯನ್ನೂ ತಂದುಕೊಟ್ಟಿದೆ.

ಒನೇಸಿಮನನ್ನು ಸಹೋದರನಂತೆ ಸೇರಿಸಿಕೊ

ನೀನು ಮಾಡಬೇಕಾದ ಕಾರ್ಯವೊಂದಿದೆ. ಅದನ್ನು ಮಾಡಬೇಕೆಂದು ಆಜ್ಞಾಪಿಸಲು ನನಗೆ ಕ್ರಿಸ್ತನಲ್ಲಿ ಅಧಿಕಾರವಿದೆ. ಆದರೆ ನಾನು ನಿನಗೆ ಆಜ್ಞಾಪಿಸದೆ ಪ್ರೀತಿಯಿಂದ ನಿನ್ನನ್ನು ಕೇಳಿಕೊಳ್ಳುತ್ತಿದ್ದೇನೆ. ಪೌಲನಾದ ನಾನು ಈಗ ವೃದ್ಧನಾಗಿದ್ದೇನೆ ಮತ್ತು ಕ್ರಿಸ್ತ ಯೇಸುವಿನ ನಿಮಿತ್ತ ಸೆರೆಯಲ್ಲಿದ್ದೇನೆ. 10 ನನ್ನ ಮಗನಾದ ಒನೇಸಿಮನಿಗಾಗಿ ನಿನ್ನನ್ನು ಕೇಳಿಕೊಳ್ಳುತ್ತೇನೆ. ನಾನು ಸೆರೆಮನೆಯಲ್ಲಿರುವಾಗ ಅವನು ನನ್ನ ಮಗನಾದನು. 11 ಹಿಂದೆ ಅವನು ನಿನಗೆ ನಿಷ್ಪ್ರಯೋಜಕನಾಗಿದ್ದನು. ಆದರೆ ಈಗ ಅವನು ನಿನಗೂ ನನಗೂ ಪ್ರಯೋಜನ ಉಳ್ಳವನಾಗಿದ್ದಾನೆ.

12 ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸುತ್ತಿದ್ದೇನೆ. ಅವನೊಂದಿಗೆ ನನ್ನ ಹೃದಯವನ್ನೇ ಕಳುಹಿಸುತ್ತಿದ್ದೇನೆ. 13 ನಾನೀಗ ಸುವಾರ್ತೆಗೋಸ್ಕರ ಸೆರೆಯಲ್ಲಿರುವಾಗ ನನ್ನ ಸಹಾಯಕ್ಕೆ ಅವನನ್ನು ಇರಿಸಿಕೊಳ್ಳಬೇಕೆಂದಿದ್ದೆನು. ಇಲ್ಲಿ ಅವನು ನನಗೆ ಸಹಾಯ ಮಾಡುತ್ತಾ ನಿನ್ನ ಸೇವೆಯನ್ನೂ ಮಾಡಬಹುದಾಗಿತ್ತು. 14 ಆದರೆ ಈ ವಿಷಯದಲ್ಲಿ ನಿನ್ನ ಒಪ್ಪಿಗೆ ಪಡೆಯದೆ ನಿರ್ಧಾರ ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ. ಏಕೆಂದರೆ ನೀನು ಮಾಡುವ ಒಳ್ಳೆಕಾರ್ಯವು ಮನಃ ಪೂರ್ವಕವಾಗಿರಬೇಕೇ ಹೊರತು ಬಲತ್ಕಾರದಿಂದಾಗಕೂಡದು.

15 ಒನೇಸಿಮನು ಸ್ವಲ್ಪಕಾಲ ನಿನ್ನನ್ನು ಅಗಲಿದ್ದನು. ಬಹುಶಃ ಅವನು ಎಂದೆಂದಿಗೂ ನಿನ್ನವನಾಗಬೇಕೆಂದು ಹಾಗಾಯಿತೇನೊ! 16 ಇನ್ನು ಮೇಲೆ ಅವನು ನಿನಗೆ ಕೇವಲ ಗುಲಾಮನಾಗಿರದೆ ಗುಲಾಮನಿಗಿಂತಲೂ ಹೆಚ್ಚಿನ ಪ್ರಿಯ ಸಹೋದರನಾಗಿದ್ದಾನೆ. ಅವನನ್ನು ಬಹಳವಾಗಿ ಪ್ರೀತಿಸುತ್ತೇನೆ. ಆದರೆ ನೀನು ಅವನನ್ನು ಮತ್ತಷ್ಟು ಹೆಚ್ಚಾಗಿ ಪ್ರೀತಿಸುವೆ. ನೀನು ಅವನನ್ನು ಮನುಷ್ಯನೆಂದು ಮತ್ತು ಪ್ರಭುವಿನಲ್ಲಿ ಒಬ್ಬ ಸಹೋದರನೆಂದು ಪ್ರೀತಿಸುವೆ.

17 ನನ್ನನ್ನು ನಿನ್ನ ಸಹಭಾಗಿಯೆಂದು ನೀನು ಒಪ್ಪಿಕೊಳ್ಳುವುದಾದರೆ, ಒನೇಸಿಮನನ್ನು ಮತ್ತೆ ಸೇರಿಸಿಕೊ. ನೀನು ನನ್ನನ್ನು ಬರಮಾಡಿಕೊಂಡಂತೆ ಅವನನ್ನೂ ಬರಮಾಡಿಕೊ. 18 ಅವನು ನಿನಗೇನಾದರೂ ತಪ್ಪು ಮಾಡಿದ್ದರೆ ಅದನ್ನು ನನ್ನ ಮೇಲೆ ಹೊರಿಸು; ನಿನಗೇನಾದರೂ ಕೊಡಬೇಕಿದ್ದರೆ, ಅದನ್ನು ನನ್ನ ಲೆಕ್ಕಕ್ಕೆ ಹಾಕು. 19 ಪೌಲನಾದ ನಾನು ನನ್ನ ಸ್ವಂತ ಕೈಗಳಿಂದ ಇದನ್ನು ಬರೆಯುತ್ತಿದ್ದೇನೆ. ಒನೇಸಿಮನು ನಿನಗೆ ಏನಾದರೂ ಕೊಡಬೇಕಾಗಿದ್ದರೆ ನಾನು ಅದನ್ನು ಕೊಡುತ್ತೇನೆ. ನಿನ್ನ ಆತ್ಮಿಕ ಜೀವಿತದ ವಿಷಯದಲ್ಲಿ ನೀನು ನಿನಗೆ ನನಗೆಷ್ಟು ಋಣಿಯಾಗಿರುವೆ ಎಂದು ನಾನೇನೂ ಹೇಳುವುದಿಲ್ಲ. 20 ನನ್ನ ಸಹೋದರನೇ, ಪ್ರಭುವಿನಲ್ಲಿ ನಾನು ನಿನ್ನಿಂದ ಒಂದು ಸಹಾಯವನ್ನು ಹೊಂದಿಕೊಳ್ಳಬಹುದೇ? ಅದೇನೆಂದರೆ ನೀನು ನನ್ನ ಹೃದಯವನ್ನು ಕ್ರಿಸ್ತನಲ್ಲಿ ಸಂತೈಸು. 21 ನಾನು ಕೇಳಿಕೊಂಡದ್ದನ್ನು ನೀನು ಮಾಡುವೆ ಎಂದು ನನಗೆ ಗೊತ್ತಿರುವುದರಿಂದಲೇ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ನಾನು ಕೇಳಿದ್ದಕ್ಕಿಂತಲೂ ಹೆಚ್ಚಿಗೆ ನೀನು ಮಾಡುವೆ ಎಂದು ನನಗೆ ತಿಳಿದಿದೆ.

22 ನಾನು ಇಳಿದುಕೊಳ್ಳಲು ಒಂದು ಕೊಠಡಿಯನ್ನು ದಯವಿಟ್ಟು ಸಿದ್ಧಗೊಳಿಸು. ದೇವರು ನಿನ್ನ ಪ್ರಾರ್ಥನೆಗಳನ್ನು ಕೇಳಿ ನನ್ನನ್ನು ನಿಮ್ಮ ಬಳಿಗೆ ಬರಲು ಅವಕಾಶ ನೀಡುವನೆಂಬ ಭರವಸೆ ನನಗಿದೆ.

ಅಂತಿಮ ವಂದನೆಗಳು

23 ಕ್ರಿಸ್ತಯೇಸುವಿನ ನಿಮಿತ್ತ ನನ್ನೊಂದಿಗೆ ಸೆರೆಮನೆಯಲ್ಲಿರುವ ಎಪಫ್ರನು ವಂದನೆ ತಿಳಿಸಿದ್ದಾನೆ. 24 ಮಾರ್ಕ, ಆರಿಸ್ತಾರ್ಕ, ದೇಮ, ಲೂಕ ಇವರುಗಳು ನಿನಗೆ ವಂದನೆ ತಿಳಿಸಿದ್ದಾರೆ. ಇವರೆಲ್ಲರೂ ನನ್ನ ಜೊತೆಕೆಲಸಗಾರರಾಗಿದ್ದಾರೆ.

25 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International