M’Cheyne Bible Reading Plan
ಮೋಶೆಯು ಇಸ್ರೇಲರನ್ನು ಲೆಕ್ಕಿಸಿದ್ದು
1 ಯೆಹೋವನು ದೇವದರ್ಶನಗುಡಾರದೊಳಗೆ ಮೋಶೆಯೊಡನೆ ಮಾತಾಡಿದನು. ಆಗ ದೇವದರ್ಶನಗುಡಾರವು ಸೀನಾಯಿ ಮರುಭೂಮಿಯಲ್ಲಿತ್ತು. ಇಸ್ರೇಲರು ಈಜಿಪ್ಟನ್ನು ಬಿಟ್ಟ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಇದು ನಡೆಯಿತು. ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಇಸ್ರೇಲ್ ಜನರೆಲ್ಲರನ್ನು ಅವರವರ ಗೋತ್ರ ಕುಟುಂಬಗಳ ಪ್ರಕಾರ ಲೆಕ್ಕಿಸಿ ಪ್ರತಿಯೊಬ್ಬನ ಹೆಸರನ್ನೂ ಪಟ್ಟಿಮಾಡಿ, 3 ನೀನೂ ಆರೋನನೂ ಇಸ್ರೇಲರಲ್ಲಿ ಎಲ್ಲಾ ಪುರುಷರನ್ನು ಲೆಕ್ಕಿಸಬೇಕು. ಇಸ್ರೇಲ್ ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸುಳ್ಳ ಪುರುಷರನ್ನು ಲೆಕ್ಕಿಸು. ಅವರನ್ನು ಅವರವರ ವಿಭಾಗಗಳಿಗೆ ಅನುಸಾರವಾಗಿ ಪಟ್ಟಿಮಾಡು. 4 ಪ್ರತಿಯೊಂದು ಕುಲದ ಕುಟುಂಬದ ನಾಯಕನು ನಿಮಗೆ ಸಹಾಯಮಾಡಬೇಕು 5 ನಿಮ್ಮೊಡನಿದ್ದು ನಿಮಗೆ ಸಹಾಯಮಾಡುವ ಪುರುಷರು ಯಾರೆಂದರೆ:
ರೂಬೇನ್ ಕುಲದಿಂದ ಶೆದೇಯೂರನ ಮಗನಾದ ಎಲೀಚೂರ್.
6 ಸಿಮೆಯೋನ್ ಕುಲದಿಂದ ಚೂರೀಷದ್ದೈಯ ಮಗನಾದ ಶೆಲುಮೀಯೇಲ್;
7 ಯೆಹೂದ ಕುಲದಿಂದ ಅಮ್ಮೀನಾದಾಬನ ಮಗನಾದ ನಹಶೋನ್;
8 ಇಸ್ಸಾಕಾರ್ ಕುಲದಿಂದ ಚೂವಾರನ ಮಗನಾದ ನೆತನೇಲ್;
9 ಜೆಬುಲೂನ್ ಕುಲದಿಂದ ಹೇಲೋನನ ಮಗನಾದ ಎಲೀಯಾಬ್;
10 ಯೋಸೇಫನ ಸಂತಾನದಿಂದ:
ಎಫ್ರಾಯೀಮ್ ಕುಲದಿಂದ ಅಮ್ಮೀಹೂದನ ಮಗನಾದ ಎಲೀಷಾಮಾ;
ಮನಸ್ಸೆ ಕುಲದಿಂದ ಪೆದಾಚೂರನ ಮಗನಾದ ಗಮ್ಲೀಯೇಲ್;
11 ಬೆನ್ಯಾಮೀನ್ ಕುಲದಿಂದ ಗಿದ್ಯೋನಿಯ ಮಗನಾದ ಅಬೀದಾನ್;
12 ದಾನ್ ಕುಲದಿಂದ ಅಮ್ಮಾಷದ್ದೈಯ ಮಗನಾದ ಅಹೀಗೆಜೆರ್;
13 ಆಶೇರ್ ಕುಲದಿಂದ ಒಕ್ರಾನನ ಮಗನಾದ ಪಗೀಯೇಲ್;
14 ಗಾದ್ ಕುಲದಿಂದ ರೆಗೂವೇಲನ ಮಗನಾದ ಎಲ್ಯಾಸಾಫ್;
15 ನಫ್ತಾಲಿ ಕುಲದಿಂದ ಏನಾನನ ಮಗನಾದ ಅಹೀರ.”
16 ಸರ್ವಸಮೂಹದವರೊಳಗಿಂದ ಆರಿಸಲ್ಪಟ್ಟಿದ್ದ ಇವರು ತಮ್ಮ ಪೂರ್ವಿಕರ ಕುಲಗಳಿಗೆ ನಾಯಕರು ಮತ್ತು ಇಸ್ರೇಲರಿಗೆ ಸಹಸ್ರಾಧಿಪತಿಗಳಾಗಿದ್ದರು. 17 ಹೆಸರೆಸರಾಗಿ ಆರಿಸಲ್ಪಟ್ಟ ಈ ಜನರನ್ನು ಮೋಶೆ ಆರೋನರು ತೆಗೆದುಕೊಂಡರು. 18 ಎರಡನೆ ತಿಂಗಳಿನ ಮೊದಲನೆ ದಿನದಲ್ಲಿ ಎಲ್ಲಾ ಜನರು ಒಟ್ಟಾಗಿ ಸೇರಿಬಂದರು. ಜನರು ತಮ್ಮತಮ್ಮ ಕುಟುಂಬಗಳಿಗನುಸಾರವಾಗಿ, ಗೋತ್ರಗಳಿಗನುಸಾರವಾಗಿ ಪಟ್ಟಿ ಮಾಡಿಸಿದರು. ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು.
19 ಯೆಹೋವನು ಆಜ್ಞಾಪಿಸಿದ ಪ್ರಕಾರವೇ ಮೋಶೆಯು ಮಾಡಿದನು. ಜನರು ಸೀನಾಯಿ ಮರುಭೂಮಿಯಲ್ಲಿದ್ದಾಗ ಮೋಶೆಯು ಅವರನ್ನು ಲೆಕ್ಕಿಸಿದನು.
20 ಅವರು ಇಸ್ರೇಲನ ಚೊಚ್ಚಲ ಮಗನಾದ ರೂಬೇನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿ ಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ ಮತ್ತು ಕುಟುಂಬಗಳಿಗನುಸಾರವಾಗಿ ಹೆಸರುಗಳನ್ನು ಪಟ್ಟಿಮಾಡಲಾಯಿತು. 21 ರೂಬೇನ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 46,500.
22 ಅವರು ಸಿಮೆಯೋನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ ಮತ್ತು ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 23 ಸಿಮೆಯೋನ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 59,300.
24 ಗಾದ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ ಮತ್ತು ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 25 ಗಾದ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 45,650.
26 ಯೆಹೂದನ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿಯೂ ಕುಟುಂಬಗಳಿಗನುಸಾರವಾಗಿಯೂ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 27 ಯೆಹೂದನ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 74,600.
28 ಇಸ್ಸಾಕಾರ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 29 ಇಸ್ಸಾಕಾರ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 54,400.
30 ಜೆಬುಲೂನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 31 ಜೆಬುಲೂನ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 57,400.
32 ಯೋಸೇಫನ ಮಗನಾದ ಎಫ್ರಾಯೀಮ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 33 ಎಫ್ರಾಯೀಮ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 40,500.
34 ಯೋಸೇಫನ ಮಗನಾದ ಮನಸ್ಸೆಯ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 35 ಮನಸ್ಸೆ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 32,200.
36 ಬೆನ್ಯಾಮೀನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 37 ಬೆನ್ಯಾಮೀನನ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 35,400.
38 ದಾನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 39 ದಾನನ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 62,700.
40 ಆಶೇರ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 41 ಆಶೇರ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 41,500.
42 ನಫ್ತಾಲಿ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 43 ನಫ್ತಾಲಿಯ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 53,400.
44 ಮೋಶೆ, ಆರೋನ ಮತ್ತು ಇಸ್ರೇಲರ ಹನ್ನೆರಡು ಮಂದಿ ನಾಯಕರು ಈ ಜನರನ್ನು ಲೆಕ್ಕಿಸಿದರು. (ಪ್ರತಿಯೊಬ್ಬ ನಾಯಕನು ತನ್ನ ಕುಲದ ಪ್ರತಿನಿಧಿಯಾಗಿದ್ದನು.) 45 ಅವರು ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಪ್ರತಿ ಪುರುಷನನ್ನು ಲೆಕ್ಕಿಸಿದರು. ಪ್ರತಿಯೊಬ್ಬನೂ ಅವನ ಕುಟುಂಬದೊಡನೆ ಲೆಕ್ಕಿಸಲ್ಪಟ್ಟನು. 46 ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 6,03,550.
47 ಆದರೆ ಲೇವಿ ಕುಲದ ಕುಟುಂಬಗಳು ಇತರ ಇಸ್ರೇಲರೊಡನೆ ಲೆಕ್ಕಿಸಲ್ಪಡಲಿಲ್ಲ. 48 ಯಾಕೆಂದರೆ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, 49 “ಲೇವಿ ಕುಲದ ಪುರುಷರನ್ನು ಲೆಕ್ಕಿಸಬೇಡ. ಅವರನ್ನು ಉಳಿದ ಇಸ್ರೇಲರ ಜನಗಣತಿಯೊಡನೆ ಸೇರಿಸಬಾರದು. 50 ಒಡಂಬಡಿಕೆಯ ಪವಿತ್ರ ಗುಡಾರವನ್ನು ನೋಡಿಕೊಳ್ಳುವ ಜವಾಬ್ದಾರಿಯು ಲೇವಿಯರಿಗೆ ಸೇರಿರುವುದರಿಂದ ಅವರಿಗೆ ಅದನ್ನು ತಿಳಿಸು. ಅವರು ಅದನ್ನೂ ಅದರ ಉಪಕರಣಗಳನ್ನೂ ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಯೊಂದನ್ನೂ ನೋಡಿಕೊಳ್ಳಬೇಕು. ಅವರು ಪವಿತ್ರ ಗುಡಾರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಹೊತ್ತುಕೊಂಡು ಹೋಗಬೇಕು. ಅವರು ಅದರ ಸುತ್ತಲೂ ಪಾಳೆಯಮಾಡಿಕೊಂಡು ಅದನ್ನು ನೋಡಿಕೊಳ್ಳಬೇಕು. 51 ಪವಿತ್ರ ಗುಡಾರವನ್ನು ತೆಗೆದುಕೊಂಡು ಹೋಗುವಾಗಲೆಲ್ಲಾ ಲೇವಿಯರೇ ಅದನ್ನು ಬಿಚ್ಚಬೇಕು, ಇಳಿಸುವಾಗಲೆಲ್ಲಾ ಲೇವಿಯರೇ ಅದನ್ನು ಹಾಕಬೇಕು. ಪವಿತ್ರ ಗುಡಾರವನ್ನು ನೋಡಿಕೊಳ್ಳುವವರು ಅವರೇ. ಲೇವಿ ಕುಲಕ್ಕೆ ಸೇರದ ಯಾವನಾದರೂ ಅದರ ಸಮೀಪಕ್ಕೆ ಬಂದರೆ, ಅವನಿಗೆ ಮರಣಶಿಕ್ಷೆಯಾಗಬೇಕು. 52 ಇಸ್ರೇಲರ ಆಯಾ ಸೈನ್ಯಗಳು ತಮ್ಮತಮ್ಮ ಕುಲದ ಧ್ವಜ ಇರುವಲ್ಲಿಯೇ ಪಾಳೆಯ ಮಾಡಿಕೊಳ್ಳಬೇಕು. 53 ಆದರೆ ಲೇವಿಯರು ಮಾತ್ರ ಪವಿತ್ರ ಗುಡಾರದ ಸುತ್ತಲೂ ತಮ್ಮ ಪಾಳೆಯ ಮಾಡಿಕೊಳ್ಳಬೇಕು. ಹೀಗೆ ಲೇವಿಯರು ಒಡಂಬಡಿಕೆಯ ಪವಿತ್ರ ಗುಡಾರವನ್ನು ಕಾಯುವರು; ಇಸ್ರೇಲರಿಗೆ ಯಾವ ಕೇಡೂ ಸಂಭವಿಸದಂತೆ ಅವರು ಪವಿತ್ರ ಗುಡಾರವನ್ನು ಸಂರಕ್ಷಿಸುವರು.”
54 ಹೀಗೆ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದ ಪ್ರತಿಯೊಂದನ್ನು ಇಸ್ರೇಲರು ಮಾಡಿದರು.
ರಚನೆಗಾರ: ದಾವೀದ.
35 ಯೆಹೋವನೇ, ನನ್ನ ವ್ಯಾಜ್ಯಗಳಲ್ಲಿ ವಾದಿಸು!
ನನ್ನ ಯುದ್ಧಗಳಲ್ಲಿ ಹೋರಾಡು!
2 ಯೆಹೋವನೇ, ಗುರಾಣಿಗಳನ್ನು ಹಿಡಿದುಕೊಂಡು
ನನಗೆ ಸಹಾಯಕನಾಗಿ ನಿಲ್ಲು.
3 ಈಟಿಯನ್ನೂ ಭಲ್ಲೆಯನ್ನೂ[a] ತೆಗೆದುಕೊ.
ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿರುವ ವೈರಿಗಳೊಡನೆ ಹೋರಾಡು.
“ನಾನು ನಿನ್ನನ್ನು ರಕ್ಷಿಸುತ್ತೇನೆ” ಎಂಬ ಅಭಯವಚನ ನೀಡು.
4 ನನ್ನನ್ನು ಕೊಲ್ಲಬೇಕೆಂದಿರುವವರು ನಿರಾಶೆಗೊಂಡು ನಾಚಿಕೆಗೀಡಾಗಲಿ.
ನನಗೆ ಕೇಡುಮಾಡಬೇಕೆಂದಿರುವವರು ಅವಮಾನಗೊಂಡು ಓಡಿಹೋಗಲಿ.
5 ಅವರು ಗಾಳಿಬಡಿದುಕೊಂಡು ಹೋಗುವ ಹೊಟ್ಟಿನಂತಾಗಲಿ;
ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
6 ಯೆಹೋವನೇ, ಅವರ ರಸ್ತೆಯು ಕತ್ತಲಾಗಿರಲಿ; ಜಾರುತ್ತಿರಲಿ.
ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
7 ನಾನು ನಿರಪರಾಧಿಯಾಗಿದ್ದರೂ ಅವರು ನನಗೆ ಬಲೆಯೊಡ್ಡಿದ್ದಾರೆ.
ನಿಷ್ಕಾರಣವಾಗಿ ಅವರು ನನಗೆ ಬಲೆಯೊಡ್ಡಿದ್ದಾರೆ.
8 ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಕೊಳ್ಳಲಿ;
ತಾವು ತೋಡಿದ ಗುಂಡಿಯೊಳಗೆ ತಾವೇ ಮುಗ್ಗರಿಸಿ ಬೀಳಲಿ.
ಇದ್ದಕ್ಕಿದಂತೆ ಅಪಾಯವು ಅವರನ್ನು ಹಿಡಿದುಕೊಳ್ಳಲಿ.
9 ಆಗ ನಾನು ಯೆಹೋವನಲ್ಲಿ ಹರ್ಷಿಸುವೆನು.
ಆತನು ನನ್ನನ್ನು ರಕ್ಷಿಸಿದ್ದರಿಂದ ಸಂತೋಷಪಡುವೆನು.
10 ಯೆಹೋವನೇ, ಹೃದಯಪೂರ್ವಕವಾಗಿ ಹೇಳುವೆ,
“ನಿನಗೆ ಸಮಾನರು ಇಲ್ಲವೇ ಇಲ್ಲ.
ಬಡವರನ್ನು ಬಲಿಷ್ಠರಿಂದ ತಪ್ಪಿಸಿ ರಕ್ಷಿಸುವಾತನು ನೀನೇ.
ಬಲಿಷ್ಠರನ್ನು ಸೂರೆಮಾಡಿ ಬಡವರಿಗೂ ಅಸಹಾಯಕರಿಗೂ ಕೊಡುವಾತನು ನೀನೇ.”
11 ಸುಳ್ಳುಸಾಕ್ಷಿಗಳು ನನಗೆ ಕೇಡುಮಾಡಬೇಕೆಂದಿದ್ದಾರೆ.
ನನಗೆ ತಿಳಿಯದ ವಿಷಯಗಳ ಮೇಲೆ ಅವರು ಪ್ರಶ್ನೆಗಳನ್ನು ಕೇಳುವರು.
12 ನಾನು ಅವರಿಗೆ ಉಪಕಾರಗಳನ್ನು ಮಾಡಿದ್ದರೂ ಅವರು ನನಗೆ ಅಪಕಾರಗಳನ್ನೇ ಮಾಡುತ್ತಾರೆ.
ಯೆಹೋವನೇ, ನನಗೆ ಯೋಗ್ಯವಾದವುಗಳನ್ನು ದಯಪಾಲಿಸು.
13 ಅವರು ಅಸ್ವಸ್ಥರಾಗಿದ್ದಾಗ ನಾನು ದುಃಖಪಟ್ಟೆನು; ಉಪವಾಸ ಮಾಡಿದೆನು.
ನಾನು ಅವರಿಗೋಸ್ಕರ ಪ್ರಾರ್ಥಿಸಿದ್ದಕ್ಕೆ ಇದು ನನಗೆ ಪ್ರತಿಫಲವೇ?
14 ಅವರು ಅಸ್ವಸ್ಥರಾಗಿದ್ದಾಗ ಶೋಕವಸ್ತ್ರಗಳನ್ನು ಧರಿಸುತ್ತಿದ್ದೆನು.
ಅವರನ್ನು ನನ್ನ ಸ್ನೇಹಿತರಂತೆಯೂ ಸಹೋದರರಂತೆಯೂ ಉಪಚರಿಸಿದೆನು;
ತಾಯಿ ಸತ್ತದ್ದಕ್ಕಾಗಿ ದುಃಖಿಸುವವನಂತೆ ನಾನು ತಲೆಬಾಗಿ ಅತ್ತೆನು.
15 ಆದರೆ ನಾನು ಆಪತ್ತಿನಲ್ಲಿದ್ದಾಗ ಅವರು ನನ್ನನ್ನು ಗೇಲಿಮಾಡಿದರು,
ಅವರು ನನ್ನ ನಿಜವಾದ ಸ್ನೇಹಿತರಲ್ಲ;
ಅವರ ಪರಿಚಯವೂ ನನಗಿರಲಿಲ್ಲ.
ಅವರು ನನ್ನ ಸುತ್ತಲೂ ಸೇರಿಬಂದು ನನ್ನ ಮೇಲೆ ಆಕ್ರಮಣ ಮಾಡಿದರು.
16 ಅವರು ಕೆಟ್ಟಮಾತಿನಿಂದ ನನ್ನನ್ನು ಹಾಸ್ಯಮಾಡಿದರು;
ನನ್ನ ಮೇಲಿನ ಕೋಪದಿಂದ ಹಲ್ಲುಕಡಿದರು.
17 ನನ್ನ ಒಡೆಯನೇ, ಇವುಗಳನ್ನು ಇನ್ನೆಷ್ಟುಕಾಲ ನೋಡುತ್ತಾ ಇರುವೆ?
ಅವರು ನನ್ನನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ.
ನನ್ನ ಪ್ರಾಣವನ್ನು ರಕ್ಷಿಸು;
ಸಿಂಹಗಳಂತಿರುವ ಆ ದುಷ್ಟರಿಂದ ನನ್ನ ಪ್ರಿಯ ಪ್ರಾಣವನ್ನು ರಕ್ಷಿಸು.
18 ಆಗ ನಾನು ನಿನ್ನನ್ನು ಮಹಾಸಭೆಯಲ್ಲಿ ಸ್ತುತಿಸುವೆನು;
ಬಲಿಷ್ಠರ ಸಮೂಹದಲ್ಲಿ ನಿನ್ನನ್ನು ಕೊಂಡಾಡುವೆನು.
19 ಸುಳ್ಳುಗಾರರಾದ ನನ್ನ ವೈರಿಗಳು ಇನ್ನು ಮೇಲೆ ಹಿಗ್ಗಲಾರರು.
ನನ್ನ ವೈರಿಗಳು ತಮ್ಮ ಒಳಸಂಚುಗಳಿಗೆ ಖಂಡಿತವಾಗಿ ದಂಡಿಸಲ್ಪಡುವರು.
20 ನನ್ನ ವೈರಿಗಳು ಶಾಂತಿಸ್ಥಾಪನೆಗಾಗಿ ಯಾವ ಆಲೋಚನೆಗಳನ್ನೂ ಮಾಡುತ್ತಿಲ್ಲ.
ಈ ದೇಶದಲ್ಲಿ ಶಾಂತಿಯಿಂದಿರುವ ಜನರಿಗೆ ಕೇಡುಮಾಡಲು ಅವರು ಒಳಸಂಚುಗಳನ್ನು ಮಾಡುತ್ತಿದ್ದಾರೆ.
21 ನನ್ನ ವೈರಿಗಳು ನನ್ನನ್ನು ದೂಷಿಸುವರು.
“ಆಹಾ! ನೀನು ಮಾಡುತ್ತಿರುವುದು ನಮಗೆ ಗೊತ್ತು!” ಎನ್ನುವರು.
22 ಯೆಹೋವನೇ, ಇದೆಲ್ಲವನ್ನೂ ನೀನು ನೋಡಿರುವೆ,
ಆದ್ದರಿಂದ ಸುಮ್ಮನಿರಬೇಡ; ನನ್ನ ಕೈಬಿಡಬೇಡ.
23 ಎಚ್ಚರಗೊಳ್ಳು! ಎದ್ದೇಳು!
ನನ್ನ ದೇವರೇ, ಯೆಹೋವನೇ, ನನಗಾಗಿ ಹೋರಾಡು; ನನಗೆ ನ್ಯಾಯವನ್ನು ದೊರಕಿಸು.
24 ನನ್ನ ದೇವರಾದ ಯೆಹೋವನೇ, ನಿನ್ನ ನೀತಿಗನುಸಾರವಾಗಿ ನನಗೆ ನ್ಯಾಯದೊರಕಿಸು.
ಅವರು ನನ್ನನ್ನು ನೋಡಿ ನಗಲು ಆಸ್ಪದ ಕೊಡಬೇಡ.
25 ಅವರು, “ಆಹಾ! ನಾವು ಬಯಸಿದ್ದನ್ನೇ ಪಡೆದೆವು!” ಎಂದು ಹೇಳಲು ಅವಕಾಶಕೊಡಬೇಡ.
“ನಾವು ಅವನನ್ನು ನಾಶಮಾಡಿದೆವು!” ಎಂದು ಹೇಳಲು ಅವರಿಗೆ ಆಸ್ಪದ ಕೊಡಬೇಡ.
26 ನನ್ನ ವೈರಿಗಳೆಲ್ಲಾ ಅವಮಾನಕ್ಕೂ ನಾಚಿಕೆಗೂ ಗುರಿಯಾಗಲಿ.
ನನಗೆ ಕೇಡಾದಾಗ ಅವರು ಸಂತೋಷಪಟ್ಟರು;
ತಮ್ಮನ್ನು ನನಗಿಂತಲೂ ಉತ್ತಮರೆಂದು ಭಾವಿಸಿಕೊಂಡರು!
ಆದ್ದರಿಂದ ಅವರನ್ನು ಅವಮಾನವೂ ನಾಚಿಕೆಯೂ ಆವರಿಸಿಕೊಳ್ಳಲಿ.
27 ನನಗೆ ನ್ಯಾಯ ದೊರೆಯಲೆಂದು ಅಪೇಕ್ಷಿಸುವವರು ಸಂತೋಷಪಡಲಿ.
“ಯೆಹೋವನು ಎಷ್ಟೋ ದೊಡ್ಡವನು!
ಆತನು ತನ್ನ ಸೇವಕನಿಗೆ ಅತ್ಯುತ್ತಮವಾದುದನ್ನೇ ಮಾಡಿದನು” ಎಂದು
ಅವರು ಹೇಳುತ್ತಲೇ ಇರಲಿ.
28 ನಿನ್ನ ನೀತಿಯ ಕುರಿತು ನಾನು ಜನರಿಗೆ ಹೇಳುವೆನು;
ಪ್ರತಿದಿನವೂ ನಿನ್ನನ್ನು ಸ್ತುತಿಸುವೆನು.
ಭವಿಷ್ಯತ್ತನ್ನು ಧೈರ್ಯವಾಗಿ ಎದುರಿಸಿ
11 ನೀನು ಹೋದಲ್ಲೆಲ್ಲಾ ಒಳ್ಳೆಯದನ್ನೇ ಮಾಡು. ಸ್ವಲ್ಪಕಾಲದ ಮೇಲೆ, ನಿನ್ನ ಸತ್ಕ್ರಿಯೆಗಳ ಫಲವನ್ನು ಹೊಂದಿಕೊಳ್ಳುವೆ.
2 ನಿನ್ನಲ್ಲಿರುವುದನ್ನೆಲ್ಲ ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸು; ಲೋಕಕ್ಕೆ ಮುಂದೆ ಸಂಭವಿಸುವ ಕೇಡು ನಿನಗೆ ತಿಳಿಯದು.
3 ಮೋಡಗಳು ನೀರಿನಿಂದ ತುಂಬಿದ್ದರೆ, ಅವು ಭೂಮಿಯ ಮೇಲೆ ಮಳೆಯನ್ನು ಸುರಿಸುತ್ತವೆ. ಮರವು ದಕ್ಷಿಣಕ್ಕಾಗಲಿ ಉತ್ತರಕ್ಕಾಗಲಿ ಬಿದ್ದರೆ, ಅದು ತಾನು ಬಿದ್ದಲ್ಲಿಯೇ ಇರುವುದು.
4 ಒಳ್ಳೆಯ ಹವಾಮಾನಕ್ಕಾಗಿ ಕಾದುಕೊಂಡಿರುವವನು ಬೀಜ ಬಿತ್ತುವುದಿಲ್ಲ; ಮಳೆ ಬರಬಹುದೆಂದು ಮೋಡವನ್ನು ನೋಡುತ್ತಿರುವವನು ಪೈರು ಕೊಯ್ಯನು.
5 ಗಾಳಿಯ ಬೀಸುವಿಕೆಯನ್ನೂ ತನ್ನ ತಾಯಿಯ ಗರ್ಭದಲ್ಲಿ ಮಗುವಿನ ಎಲುಬು ಬೆಳೆಯುವ ರೀತಿಯನ್ನೂ ನೀನು ಹೇಗೆ ತಿಳಿದಿಲ್ಲವೋ ಅದೇರೀತಿಯಲ್ಲಿ ಸೃಷ್ಟಿಕರ್ತನ ಕಾರ್ಯಗಳನ್ನು ನೀನು ಅರಿತುಕೊಳ್ಳಲಾರೆ.
6 ಆದ್ದರಿಂದ ಮುಂಜಾನೆಯಲ್ಲಿ ಬೀಜಬಿತ್ತಲು ಆರಂಭಿಸು; ಸಾಯಂಕಾಲದ ತನಕ ಕೆಲಸಮಾಡುವುದನ್ನು ನಿಲ್ಲಿಸಬೇಡ, ಯಾಕೆಂದರೆ ಇದು ಸಫಲವಾಗುವುದೋ ಅದು ಸಫಲವಾಗುವುದೋ ಒಂದುವೇಳೆ ಎರಡೂ ಸಫಲವಾಗುವುದೋ ನಿನಗೆ ತಿಳಿಯದು.
7 ಬೆಳಕು ಹಿತ! ಸೂರ್ಯನ ಬೆಳಕು ನೋಡಲು ಚೆಂದ. 8 ನಿನ್ನ ಜೀವನದ ಪ್ರತಿಯೊಂದು ದಿನದಲ್ಲಿಯೂ ಆನಂದಿಸು. ನೀನು ಎಷ್ಟುಕಾಲ ಬದುಕುವೆ ಎಂಬುದು ಮುಖ್ಯವಲ್ಲ. ಆದರೆ ಕತ್ತಲೆಯ ದಿನಗಳು ಬಹಳವೆಂದು ಜ್ಞಾಪಕದಲ್ಲಿಟ್ಟುಕೊ. ಮುಂದೆ ಸಂಭವಿಸುವುದೆಲ್ಲಾ ವ್ಯರ್ಥವೇ.
ಯೌವನದಲ್ಲಿ ದೇವರ ಸೇವೆ ಮಾಡಿ
9 ಆದ್ದರಿಂದ ಯೌವನಸ್ಥರೇ, ನಿಮ್ಮ ಯೌವನ ಕಾಲದಲ್ಲಿ ಆನಂದಿಸಿರಿ! ಸಂತೋಷವಾಗಿರಿ! ನಿಮ್ಮ ಹೃದಯವು ನಿಮ್ಮನ್ನು ನಡೆಸಿದಂತೆ ಮಾಡಿರಿ. ನೀವು ಬಯಸುವುದನ್ನೆಲ್ಲಾ ಮಾಡಿರಿ. ಆದರೆ ನೀವು ಮಾಡುವ ಪ್ರತಿಯೊಂದಕ್ಕೂ ದೇವರು ನಿಮಗೆ ನ್ಯಾಯತೀರಿಸುವನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. 10 ನಿಮ್ಮ ಕೋಪವು ನಿಮ್ಮನ್ನು ಹತೋಟಿಯಲ್ಲಿಡದಂತೆ ನೋಡಿಕೊಳ್ಳಿರಿ. ನಿಮ್ಮ ದೇಹವು ನಿಮ್ಮನ್ನು ಪಾಪಕ್ಕೆ ನಡೆಸದಂತೆ ನೋಡಿಕೊಳ್ಳಿರಿ. ಜನರು ಯೌವನಪ್ರಾಯದಲ್ಲಿರುವಾಗ, ಜೀವನದ ಆರಂಭದಲ್ಲಿಯೇ ಮೂಢಕಾರ್ಯಗಳನ್ನು ಮಾಡುವರು.
ಜೀವಿಸಲು ಯೋಗ್ಯವಾದ ಮಾರ್ಗ
3 ನೀನು ಜನರಿಗೆ ತಿಳಿಸಬೇಕಾದದ್ದೇನೆಂದರೆ: ನಿಮ್ಮ ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿರಿ; ಸಕಲ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ. 2 ಯಾರನ್ನೂ ದೂಷಿಸದೆ, ಯಾರೊಂದಿಗೂ ಜಗಳವಾಡದೆ ಮೃದುವಾಗಿ ಎಲ್ಲರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಿರಿ.
3 ಮೊದಲು ನಾವು ಸಹ ಅವಿವೇಕಿಗಳಾಗಿದ್ದೆವು. ನಾವು ವಿಧೇಯರಾಗಿರಲಿಲ್ಲ. ನಾವು ಮೋಸಹೋಗಿದ್ದೆವು. ಅನೇಕ ಬಗೆಯ ಆಸೆಗಳಿಗೆ ಮತ್ತು ಭೋಗಗಳಿಗೆ ದಾಸರಾಗಿದ್ದೆವು; ಕೆಟ್ಟದ್ದನ್ನು ಮಾಡುವವರೂ ಹೊಟ್ಟೆಕಿಚ್ಚುಳ್ಳವರೂ ಆಗಿದ್ದೆವು. ಜನರು ನಮ್ಮನ್ನು ದ್ವೇಷಿಸುತ್ತಿದ್ದರು. ನಾವು ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದೆವು. 4 ಆಗ ನಮ್ಮ ರಕ್ಷಕನಾದ ದೇವರ ಪ್ರೀತಿಯೂ ಕೃಪೆಯೂ ಪ್ರತ್ಯಕ್ಷವಾದವು. 5 ಆತನು ನಮ್ಮನ್ನು ರಕ್ಷಿಸಿದ್ದು ತನ್ನ ಕರುಣೆಯಿಂದಲೇ ಹೊರತು ನೀತಿವಂತರಾಗಲು ನಾವು ಮಾಡಿದ ಒಳ್ಳೆಯ ಕಾರ್ಯಗಳಿಂದಲ್ಲ. ಆತನು ನಮ್ಮನ್ನು ಸ್ನಾನದ ಮೂಲಕವಾಗಿಯೂ ಪವಿತ್ರಾತ್ಮನ ಮೂಲಕವಾಗಿಯೂ ಹೊಸಬರನ್ನಾಗಿ ಮಾಡಿ ರಕ್ಷಿಸಿದನು. 6 ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಮೂಲಕ ದೇವರು ಪವಿತ್ರಾತ್ಮನನ್ನು ನಮ್ಮ ಮೇಲೆ ಸಮೃದ್ಧಿಯಾಗಿ ಸುರಿಸಿದನು. 7 ದೇವರು ತನ್ನ ಕೃಪೆಯಿಂದ ನಮ್ಮನ್ನು ನೀತಿವಂತರನ್ನಾಗಿ ಮಾಡಿದನು. ನಾವು ನಿತ್ಯಜೀವವನ್ನು ಪಡೆಯುವಂತೆ ಆತನು ನಮಗೆ ಪವಿತ್ರಾತ್ಮನನ್ನು ಕೊಟ್ಟನು. ಅದೇ ನಮ್ಮ ನಿರೀಕ್ಷೆ. 8 ಈ ಬೋಧನೆಯು ಸತ್ಯವಾದದ್ದು.
ನೀನು ಜನರಿಗೆ ಈ ಸಂಗತಿಗಳನ್ನು ಒತ್ತಿಹೇಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಆಗ, ದೇವರಲ್ಲಿ ನಂಬಿಕೆ ಇಟ್ಟಿರುವವರು ಜಾಗರೂಕರಾಗಿದ್ದು ತಮ್ಮ ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವರು. ಇವು ಎಲ್ಲರಿಗೂ ಹಿತಕರವಾಗಿವೆ ಮತ್ತು ಪ್ರಯೋಜನಕರವಾಗಿವೆ.
9 ಬುದ್ಧಿಯಿಲ್ಲದೆ ಕುತರ್ಕ ಮಾಡುವ ಜನರಿಂದ, ನಿರರ್ಥಕವಾದ ವಂಶಾವಳಿಗಳ ಚರಿತ್ರೆಯ ಬಗ್ಗೆ ಮಾತನಾಡುವ ಜನರಿಂದ, ಮೋಶೆಯು ಬರೆದಿರುವ ಧರ್ಮಶಾಸ್ತ್ರದಲ್ಲಿರುವ ನಿಯಮಗಳ ಬಗ್ಗೆ ತೊಂದರೆಯನ್ನು ಉಂಟುಮಾಡುವ ಮತ್ತು ವಾಗ್ವಾದ ಮಾಡುವ ಜನರಿಂದ ದೂರವಾಗಿರು. ಅವುಗಳಿಗೆ ಯಾವ ಬೆಲೆಯೂ ಇಲ್ಲ, ಅವುಗಳಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ. 10 ಯಾವನಾದರೂ ಭೇದ ಹುಟ್ಟಿಸುತ್ತಿದ್ದರೆ, ಅವನಿಗೆ ಎಚ್ಚರಿಕೆ ನೀಡು. ಅವನಿನ್ನೂ ಮುಂದುವರಿಸಿದರೆ ಮತ್ತೊಮ್ಮೆ ಎಚ್ಚರಿಕೆ ನೀಡು. ಆದರೂ ಅವನು ಕೇಳದೆಹೋದರೆ ಅವನ ಸಹವಾಸವನ್ನು ತೊರೆದುಬಿಡು. 11 ಅಂಥವನು ಕೆಟ್ಟವನೂ ಪಾಪಪೂರಿತನೂ ಆಗಿದ್ದಾನೆ ಎಂಬುದು ನಿನಗೂ ತಿಳಿದಿದೆ. ಅವನು ತನ್ನ ಸ್ವಕಾರ್ಯಗಳಿಂದಲೇ ತಪ್ಪಿತಸ್ಥನೆಂಬ ತೀರ್ಪನ್ನು ಹೊಂದಿದ್ದಾನೆ.
ನೆನಪಿನಲ್ಲಿಡಬೇಕಾದ ಕೆಲವು ಸಂಗತಿಗಳು
12 ನಾನು ನಿನ್ನ ಬಳಿಗೆ ಅರ್ತೆಮನನ್ನು ಮತ್ತು ತುಖಿಕನನ್ನು ಕಳುಹಿಸಿದಾಗ, ನಿಕೊಪೊಲಿಯಲ್ಲಿರುವ ನನ್ನ ಬಳಿಗೆ ಬರಲು ಆದಷ್ಟು ಪ್ರಯತ್ನಿಸು. ನಾನು ಈ ಚಳಿಗಾಲವನ್ನು ಅಲ್ಲಿಯೇ ಕಳೆಯಬೇಕೆಂದಿದ್ದೇನೆ. 13 ವಕೀಲನಾದ ಜೇನನೂ ಅಪೊಲ್ಲೋಸನೂ ಅಲ್ಲಿಂದ ಪ್ರಯಾಣ ಮಾಡುತ್ತಾರೆ. ಅವರ ಪ್ರಯಾಣಕ್ಕೆ ನಿನ್ನಿಂದ ಸಾಧ್ಯವಾದಷ್ಟು ಸಹಾಯಮಾಡು. ಅವರಿಗೆ ಯಾವ ಕೊರತೆಯೂ ಆಗದಂತೆ ನೋಡಿಕೊ. 14 ನಮ್ಮ ಜನರು ತಮ್ಮ ಜೀವನವು ನಿಷ್ಪ್ರಯೋಜಕವಾಗದಂತೆ ಪರೋಪಕಾರವನ್ನು ಕಲಿತುಕೊಂಡು ಕೊರತೆಯಲ್ಲಿರುವವರಿಗೆ ಉಪಕಾರ ಮಾಡಬೇಕು.
15 ಇಲ್ಲಿ ನನ್ನೊಡನೆ ಇರುವ ಜನರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ಕ್ರಿಸ್ತನಲ್ಲಿ ನಂಬಿಕೆ ಇಟ್ಟವರಾಗಿದ್ದು ನಮ್ಮನ್ನು ಪ್ರೀತಿಸುವವರಿಗೆಲ್ಲ ನಮ್ಮ ವಂದನೆ ತಿಳಿಸು.
ದೇವರ ಕೃಪೆಯು ನಿಮ್ಮೊಂದಿಗಿರಲಿ.
Kannada Holy Bible: Easy-to-Read Version. All rights reserved. © 1997 Bible League International