Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 27

ಹರಕೆಗಳು ಪ್ರಾಮುಖ್ಯವಾಗಿವೆ

27 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಹೇಳು: ಯಾವನಾದರೂ ಯೆಹೋವನಿಗೆ ಒಬ್ಬ ವ್ಯಕ್ತಿಯನ್ನು ಪ್ರತಿಷ್ಠಿಸುವುದಕ್ಕಾಗಿ ಹರಕೆ ಮಾಡಿಕೊಂಡರೆ ಅವನಿಗೆ ಒಂದು ಬೆಲೆಯನ್ನು ನಿಗದಿಮಾಡಬೇಕು. ಅವನನ್ನು ಯೆಹೋವನಿಂದ ಮರಳಿ ಕೊಂಡುಕೊಳ್ಳ ಬಯಸುವವರು ಆ ಬೆಲೆಯನ್ನು ಕೊಡಬೇಕು. ಇಪ್ಪತ್ತರಿಂದ ಅರವತ್ತು ವರ್ಷದ ಒಳಗಿರುವ ಮನುಷ್ಯನ ಬೆಲೆ ಐವತ್ತು ಶೆಕೆಲ್ ಬೆಳ್ಳಿಯಾಗಿದೆ. (ಬೆಳ್ಳಿಯನ್ನು ಅಳೆಯಲು ಅಧಿಕೃತ ಅಳತೆಯನ್ನು ಉಪಯೋಗಿಸಬೇಕು.) ಇಪ್ಪತ್ತರಿಂದ ಅರವತ್ತು ವರ್ಷದೊಳಗಿರುವ ಸ್ತ್ರೀಯ ಬೆಲೆ ಮೂವತ್ತು ಶೆಕೆಲ್‌ಗಳಾಗಿದೆ. ಐದರಿಂದ ಇಪ್ಪತ್ತು ವರ್ಷದೊಳಗಿರುವ ಗಂಡಸಿನ ಬೆಲೆ ಇಪ್ಪತ್ತು ಶೆಕೆಲ್‌ಗಳಾಗಿದೆ. ಐದರಿಂದ ಇಪ್ಪತ್ತು ವರ್ಷದೊಳಗಿರುವ ಸ್ತ್ರೀಯ ಬೆಲೆ ಹತ್ತು ಶೆಕೆಲ್‌ಗಳಾಗಿದೆ. ಒಂದು ತಿಂಗಳಿಂದ ಐದು ವರ್ಷದೊಳಗಿನ ಗಂಡು ಮಗುವಿನ ಬೆಲೆ ಐದು ಶೆಕೆಲ್‌ಗಳಾಗಿದೆ. ಹೆಣ್ಣುಮಗುವಿನ ಬೆಲೆ ಮೂರು ಶೆಕೆಲ್‌ಗಳು. ಅರವತ್ತು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾದ ಪುರುಷನ ಬೆಲೆ ಹದಿನೈದು ಶೆಕೆಲ್‌ಗಳು. ಸ್ತ್ರೀಯ ಬೆಲೆ ಹತ್ತು ಶೆಕೆಲ್‌ಗಳು.

“ಒಬ್ಬನು ಬೆಲೆಯನ್ನು ಕೊಡಲಾಗದಷ್ಟು ಬಡವನಾಗಿದ್ದರೆ, ಅವನನ್ನು ಯಾಜಕನ ಬಳಿಗೆ ತನ್ನಿರಿ. ಅವನು ಎಷ್ಟು ಹಣ ಕೊಡಲು ಶಕ್ತನಾಗಿದ್ದಾನೆಂದು ಯಾಜಕನು ತೀರ್ಮಾನಿಸುವನು.

ಯೆಹೋವನಿಗೆ ಕಾಣಿಕೆ

“ಒಬ್ಬನು ಪಶುಗಳನ್ನು ಯೆಹೋವನಿಗೆ ಯಜ್ಞಕ್ಕಾಗಿ ಪ್ರತಿಷ್ಠಿಸಬಹುದು. ಯಾವನಾದರೂ ಅಂಥ ಪಶುವನ್ನು ತಂದರೆ, ಅದು ಪವಿತ್ರವಾಗುವುದು. 10 ಯಾಕೆಂದರೆ ಅದನ್ನು ಪ್ರತಿಷ್ಠಿಸಿದ ವ್ಯಕ್ತಿ ಅದನ್ನು ಯೆಹೋವನಿಗೆ ಅರ್ಪಿಸುತ್ತೇನೆಂದು ಹರಕೆ ಮಾಡಿರುತ್ತಾನೆ. ಆದ್ದರಿಂದ ಅವನು ಅದರ ಬದಲು ಇನ್ನೊಂದು ಪಶುವನ್ನು ಕೊಡಲು ಪ್ರಯತ್ನಿಸಬಾರದು; ಅದನ್ನು ಬದಲಾಯಿಸಲು ಪ್ರಯತ್ನಿಸಬಾರದು. ಅವನು ಒಳ್ಳೆಯ ಪಶುವಿನ ಬದಲಾಗಿ ಕೆಟ್ಟ ಪಶುವನ್ನು ಕೊಡಲು ಪ್ರಯತ್ನಿಸಬಾರದು. ಅವನು ಪಶುಗಳನ್ನು ಬದಲಾಯಿಸಲು ಪ್ರಯತ್ನಿಸಿದರೆ, ಆ ಎರಡು ಪಶುಗಳೂ ಪವಿತ್ರವಾಗುತ್ತವೆ. ಅವೆರಡೂ ಯೆಹೋವನದಾಗಿರುತ್ತವೆ.

11 “ಯೆಹೋವನಿಗೆ ಸಮರ್ಪಿಸಕೂಡದ ಕೆಲವು ಪ್ರಾಣಿಗಳಿರುವವು. ಒಬ್ಬನು ಅಂಥ ಅಶುದ್ಧ ಪಶುಗಳಲ್ಲೊಂದನ್ನು ಯೆಹೋವನಿಗಾಗಿ ಪ್ರತಿಷ್ಠಿಸಿದರೆ, ಅದನ್ನು ಯಾಜಕನ ಬಳಿಗೆ ತರಬೇಕು. 12 ಯಾಜಕನು ಆ ಪಶುವಿಗೆ ಬೆಲೆಯನ್ನು ಗೊತ್ತುಮಾಡುವನು. ಪಶುವು ಒಳ್ಳೆಯದ್ದಾಗಿದ್ದರೂ ಕೆಟ್ಟದ್ದಾಗಿದ್ದರೂ ಯಾಜಕನು ನಿರ್ಣಯಿಸಿದ ಬೆಲೆಯೇ ಅದರ ಬೆಲೆಯಾಗಿರುತ್ತದೆ. 13 ಹರಕೆ ಮಾಡಿದವನು ಪಶುವನ್ನು ಮರಳಿ ಕೊಂಡುಕೊಳ್ಳಬೇಕೆಂದಿದ್ದರೆ, ಅದರ ಬೆಲೆಯೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು.

ಮನೆಯ ಬೆಲೆ

14 “ಒಬ್ಬನು ತನ್ನ ಮನೆಯನ್ನು ಯೆಹೋವನಿಗೆ ಮೀಸಲಾಗಿ ಪ್ರತಿಷ್ಠಿಸಿದರೆ, ಯಾಜಕನು ಅದಕ್ಕೆ ಬೆಲೆಯನ್ನು ನಿರ್ಣಯಿಸುವನು. ಮನೆಯು ಒಳ್ಳೆಯದ್ದಾಗಿದ್ದರೂ ಕೆಟ್ಟದ್ದಾಗಿದ್ದರೂ ಯಾಜಕನು ನಿರ್ಣಯಿಸಿದ ಬೆಲೆಯೇ ಅದರ ಬೆಲೆಯಾಗಿರುತ್ತದೆ. 15 ಆದರೆ ಹರಕೆ ಮಾಡಿದವನು ಮನೆಯನ್ನು ಹಿಂದಕ್ಕೆ ಪಡೆಯಲು ಬಯಸಿದರೆ, ಆಗ ಅವನು ಅದರ ಬೆಲೆಯೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು. ಆಗ ಅದು ಅವನದಾಗುವುದು.

ಆಸ್ತಿಯ ಬೆಲೆ

16 “ಒಬ್ಬನು ತನ್ನ ಹೊಲಗಳಲ್ಲಿ ಒಂದು ಭಾಗವನ್ನು ಯೆಹೋವನಿಗಾಗಿ ಪ್ರತಿಷ್ಠಿಸಿದರೆ, ಅದರಲ್ಲಿ ಬಿತ್ತುವುದಕ್ಕೆ ಬೇಕಾಗಿರುವ ಬೀಜಗಳನ್ನು ಆಧಾರ ಮಾಡಿಕೊಂಡು ಬೆಲೆಯನ್ನು ನಿಗದಿ ಮಾಡಬೇಕು. ಪ್ರತಿಯೊಂದು ಹೋಮೆರ್ (ಎರಡು ಖಂಡುಗ) ಜವೆಗೋಧಿಯನ್ನು ಉತ್ಪಾದಿಸುವ ಹೊಲವು ಐವತ್ತು ಶೆಕೆಲ್ ಬೆಲೆಬಾಳುವುದು. 17 ಒಬ್ಬನು ಜ್ಯೂಬಿಲಿ ಸಂವತ್ಸರದಲ್ಲಿ ತನ್ನ ಹೊಲವನ್ನು ಕೊಟ್ಟರೆ, ಆಗ ಅದರ ಬೆಲೆಯು ಯಾಜಕನು ತೀರ್ಮಾನಿಸಿದಷ್ಟು ಇರುವುದು. 18 ಆದರೆ ಒಬ್ಬನು ಜ್ಯೂಬಿಲಿಯ ನಂತರ ತನ್ನ ಹೊಲವನ್ನು ಕೊಟ್ಟರೆ, ಯಾಜಕನು ಅದರ ಸರಿಯಾದ ಬೆಲೆಯನ್ನು ಲೆಕ್ಕಹಾಕಬೇಕು. ಅವನು ಮುಂದಿನ ಜ್ಯೂಬಿಲಿ ಸಂವತ್ಸರಕ್ಕೆ ಇರುವ ವರ್ಷಗಳನ್ನು ಲೆಕ್ಕಹಾಕಿ ಅದರಿಂದ ಬೆಲೆಯನ್ನು ನಿರ್ಣಯಿಸಬೇಕು. 19 ಹೊಲವನ್ನು ಕೊಟ್ಟವನು ಅದನ್ನು ಮರಳಿ ಕೊಂಡುಕೊಳ್ಳಬೇಕೆಂದು ಬಯಸುವುದಾದರೆ, ಅವನು ಅದರ ಬೆಲೆಗೆ ಐದನೆಯ ಒಂದಂಶವನ್ನು ಸೇರಿಸಿ ಕೊಡಬೇಕು. ಆಗ ಹೊಲವು ತಿರುಗಿ ಅವನದಾಗುವುದು. 20 ಅವನು ಹೊಲವನ್ನು ಮರಳಿ ಕೊಂಡುಕೊಳ್ಳದಿದ್ದರೆ ಅದು ಯಾವಾಗಲೂ ಯಾಜಕರುಗಳಿಗೆ ಸೇರಿದ್ದಾಗಿರುತ್ತದೆ. ಭೂಮಿಯು ಮತ್ತೊಬ್ಬನಿಗೆ ಮಾರಲ್ಪಟ್ಟಿದ್ದರೆ, ಮೊದಲನೆಯ ವ್ಯಕ್ತಿಯು ಅದನ್ನು ಮತ್ತೆ ಕೊಂಡುಕೊಳ್ಳಲು ಸಾಧ್ಯವಿಲ್ಲ. 21 ಅವನು ಭೂಮಿಯನ್ನು ಹಿಂದಕ್ಕೆ ಕೊಂಡುಕೊಳ್ಳದಿದ್ದರೆ, ಅದು ಜ್ಯೂಬಿಲಿ ಸಂವತ್ಸರದಲ್ಲಿ ಯೆಹೋವನಿಗೆ ಮೀಸಲಾದದ್ದಾಗಿರುವುದು. ಅದು ಎಂದೆಂದಿಗೂ ಯಾಜಕನದ್ದಾಗಿರುವುದು. ಅದು ಪೂರ್ಣವಾಗಿ ಯೆಹೋವನಿಗೆ ಪ್ರತಿಷ್ಠಿಸಿದ ಭೂಮಿಯಂತೆ ಇರುವುದು.

22 “ಒಬ್ಬನು ತಾನು ಕೊಂಡುಕೊಂಡ ಹೊಲವನ್ನು ಅಂದರೆ ಪಿತ್ರಾರ್ಜಿತ ಭೂಮಿಗೆ ಸೇರದಿರುವ ಹೊಲವನ್ನು ಯೆಹೋವನಿಗೆ ಪ್ರತಿಷ್ಠಿಸಿದರೆ, 23 ಯಾಜಕನು ಮುಂದಿನ ಜ್ಯೂಬಿಲಿ ಸಂವತ್ಸರದವರೆಗೆ ಇರುವ ವರ್ಷಗಳನ್ನು ಲೆಕ್ಕ ಹಾಕಿ ಅದರ ಬೆಲೆಯನ್ನು ನಿಗದಿ ಮಾಡಬೇಕು. ಆಗ ಭೂಮಿಯು ಯೆಹೋವನದಾಗಿರುವುದು. 24 ಜ್ಯೂಬಿಲಿ ಸಂವತ್ಸರದಲ್ಲಿ, ಆ ಭೂಮಿಯು ಅದರ ಮೊದಲ ಯಜಮಾನನಿಗೆ ಅಂದರೆ ಯಾವ ಕುಟುಂಬವು ಆ ಭೂಮಿಯನ್ನು ಮೊದಲು ಹೊಂದಿತ್ತೋ ಆ ಕುಟುಂಬಕ್ಕೆ ಸೇರುವುದು.

25 “ನೀವು ಅಧಿಕೃತ ಅಳತೆಯನ್ನು ಉಪಯೋಗಿಸಿ ಆ ಬೆಲೆಗಳನ್ನು ಕೊಡಬೇಕು. ಒಂದು ಶೆಕೆಲ್‌ನ ಬೆಲೆಯನ್ನು ಇಪ್ಪತ್ತು ಗೇರಾ ತೂಕದ ಪ್ರಕಾರ ನೀವು ಯಾವಾಗಲೂ ನಿರ್ಣಯಿಸಬೇಕು.

ಪಶುಗಳ ಬೆಲೆ

26 “ಜನರು ಯೆಹೋವನಿಗೆ ವಿಶೇಷ ಕಾಣಿಕೆಯಾಗಿ ದನಗಳನ್ನು ಮತ್ತು ಕುರಿಗಳನ್ನು ಕೊಡಬಹುದು. ಆದರೆ ಪಶುವು ಚೊಚ್ಚಲಾದದ್ದಾಗಿದ್ದರೆ, ಅದು ಈಗಾಗಲೇ ಯೆಹೋವನದ್ದಾಗಿರುತ್ತದೆ. ಆದ್ದರಿಂದ ಜನರು ಅಂಥ ಪಶುಗಳನ್ನು ಯೆಹೋವನಿಗೆ ವಿಶೇಷ ಕಾಣಿಕೆಯಾಗಿ ಕೊಡಲಾಗುವುದಿಲ್ಲ. 27 ಜನರು ಚೊಚ್ಚಲಾದ ಪಶುಗಳನ್ನು ಯೆಹೋವನಿಗೆ ಕೊಡಬೇಕು. ಆದರೆ ಚೊಚ್ಚಲಾದ ಪಶುವು ಅಶುದ್ಧವಾದ ಪಶುವಾಗಿದ್ದರೆ, ಆಗ ಹರಕೆ ಮಾಡಿದವನು ಅದನ್ನು ಮರಳಿ ಕೊಂಡುಕೊಳ್ಳಬೇಕು. ಯಾಜಕನು ಅದರ ಬೆಲೆಯನ್ನು ನಿರ್ಣಯಿಸುವನು ಮತ್ತು ಹರಕೆ ಮಾಡಿದವನು ಆ ಬೆಲೆಗೆ ಐದನೆಯ ಒಂದಂಶವನ್ನು ಸೇರಿಸಬೇಕು. ಅವನು ಅದನ್ನು ಮರಳಿ ಕೊಂಡುಕೊಳ್ಳದಿದ್ದರೆ, ಆಗ ಯಾಜಕನು ತಾನು ನಿರ್ಣಯಿಸಿದ ಬೆಲೆಗೆ ಆ ಪಶುವನ್ನು ಮಾರಬೇಕು.

ವಿಶೇಷ ಬಗೆಯ ಕಾಣಿಕೆಗಳು

28 “ಜನರು ಯೆಹೋವನಿಗೆ ಸಲ್ಲಿಸುವ ವಿಶೇಷ ಬಗೆಯ ಕಾಣಿಕೆಯು ಯೆಹೋವನಿಗೆ ಮಾತ್ರ ಸೇರಿದ್ದಾಗಿರುತ್ತದೆ. ಅದನ್ನು ಬಿಡಿಸಿಕೊಳ್ಳುವುದಕ್ಕಾಗಲಿ ಮಾರುವುದಕ್ಕಾಗಲಿ ಆಗುವುದಿಲ್ಲ. ಅದು ಯೆಹೋವನದ್ದಾಗಿರುತ್ತದೆ. ಈ ಕಾಣಿಕೆಗಳು ಜನರನ್ನು, ಪಶುಗಳನ್ನು ಮತ್ತು ಪಿತ್ರಾರ್ಜಿತ ಸ್ವತ್ತುಗಳನ್ನು ಒಳಗೊಂಡಿವೆ. 29 ಆ ವಿಶೇಷ ಬಗೆಯ ಕಾಣಿಕೆಯು ಒಬ್ಬ ವ್ಯಕ್ತಿಯಾಗಿದ್ದರೆ ಅವನನ್ನು ಮತ್ತೆ ಕೊಂಡುಕೊಳ್ಳಲು ಸಾಧ್ಯವಿಲ್ಲ. ಆ ವ್ಯಕ್ತಿಯು ಕೊಲ್ಲಲ್ಪಡಬೇಕು.

30 “ಎಲ್ಲಾ ಬೆಳೆಗಳಲ್ಲಿ ಹತ್ತರಲ್ಲಿ ಒಂದಂಶವು ಯೆಹೋವನದ್ದಾಗಿರುತ್ತದೆ. ಹೊಲಗಳ ಬೆಳೆಗಳಾಗಲಿ ಮರಗಳ ಫಲಗಳಾಗಲಿ ಅದರಲ್ಲಿ ಹತ್ತರಲ್ಲಿ ಒಂದಂಶ ಯೆಹೋವನದ್ದಾಗಿರುತ್ತದೆ. 31 ಆದ್ದರಿಂದ ಒಬ್ಬನು ತಾನು ಕೊಡಬೇಕಾದ ಹತ್ತನೆಯ ಪಾಲಿನಲ್ಲಿ ಏನಾದರೂ ಮರಳಿ ಪಡೆದುಕೊಳ್ಳಬೇಕೆಂದಿದ್ದರೆ, ಅವನು ಅದರ ಬೆಲೆಗೆ ಐದನೆಯ ಒಂದಂಶವನ್ನು ಸೇರಿಸಿಕೊಟ್ಟು ಮರಳಿ ಕೊಂಡುಕೊಳ್ಳಬೇಕು.

32 “ದನಗಳಲ್ಲಾಗಲಿ ಕುರಿಗಳಲ್ಲಾಗಲಿ ಪ್ರತಿ ಹತ್ತನೆಯ ಪಾಲನ್ನು ಯಾಜಕರು ತೆಗೆದುಕೊಳ್ಳುವರು. ಪ್ರತಿ ಹತ್ತನೆ ಪಶು ಯೆಹೋವನದಾಗಿರುವುದು. 33 ಆರಿಸಲ್ಪಟ್ಟ ಪಶುವು ಒಳ್ಳೆಯದೋ ಕೆಟ್ಟದ್ದೋ ಎಂದು ಅದರ ಮಾಲಿಕನು ಚಿಂತೆ ಮಾಡಬಾರದು. ಅವನು ಅದನ್ನು ಬದಲಾಯಿಸಬಾರದು. ಅವನು ಅದನ್ನು ಬದಲಾಯಿಸಲು ತೀರ್ಮಾನಿಸಿದರೆ, ಆಗ ಎರಡೂ ಪಶುಗಳು ಯೆಹೋವನದಾಗುತ್ತವೆ. ಆ ಪಶುವನ್ನು ಮರಳಿ ಕೊಂಡುಕೊಳ್ಳಲಾಗದು.”

34 ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ಇಸ್ರೇಲರಿಗೆ ಕೊಟ್ಟ ಆಜ್ಞೆಗಳು ಇವೇ.

ಕೀರ್ತನೆಗಳು 34

ದಾವೀದನು ಹುಚ್ಚನಂತೆ ವರ್ತಿಸಿ, ಅಬೀಮೆಲೆಕನಿಂದ ಹೊರಡಿಸಲ್ಪಟ್ಟಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

[a]34 ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು.
    ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿರುವುದು.
ದೀನರೇ, ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದನ್ನು
    ಕೇಳಿ ಸಂತೋಷಪಡಿರಿ.
ನನ್ನೊಂದಿಗೆ ಯೆಹೋವನನ್ನು ಸ್ತುತಿಸಿರಿ.
    ನಾವು ಒಟ್ಟಾಗಿ ಆತನ ಹೆಸರನ್ನು ಸನ್ಮಾನಿಸೋಣ.
ನಾನು ಯೆಹೋವನ ಸನ್ನಿಧಿಯಲ್ಲಿ ಮೊರೆಯಿಟ್ಟಾಗ ಆತನು ನನಗೆ ಸಹಾಯಮಾಡಿದನು.
    ನನ್ನನ್ನು ಎಲ್ಲಾ ಭೀತಿಗಳಿಂದ ಬಿಡಿಸಿದನು.
ಆತನನ್ನೇ ದೃಷ್ಟಿಸುವವರು ಸಹಾಯವನ್ನು ಹೊಂದಿಕೊಳ್ಳುವರು.[b]
    ಅವರಿಗೆ ಆಶಾಭಂಗವಾಗದು.
ಕಷ್ಟದಲ್ಲಿದ್ದ ಈ ಬಡಮನುಷ್ಯನು ಮೊರೆಯಿಡಲು
    ಯೆಹೋವನು ಕೇಳಿ ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದನು.
ಯೆಹೋವನ ಭಕ್ತರ ಸುತ್ತಲೂ ಆತನ ದೂತನು
    ದಂಡಿಳಿಸಿ ಕಾವಲಾಗಿದ್ದು ಕಾಪಾಡುವನು.
ಯೆಹೋವನು ಎಷ್ಟು ಒಳ್ಳೆಯವನೆಂಬುದನ್ನು ಅನುಭವದಿಂದಲೇ ತಿಳಿದುಕೊಳ್ಳಿರಿ.
    ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಭಾಗ್ಯವಂತರು.
ಯೆಹೋವನ ಜನರೇ, ಆತನನ್ನು ಆರಾಧಿಸಿರಿ.
    ಆತನ ಭಕ್ತರಿಗೆ ಬೇರೆ ಯಾವ ಆಶ್ರಯಸ್ಥಾನವೂ ಇಲ್ಲ.
10 ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು.
    ಆದರೆ ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರು ಸುವರಗಳನ್ನು ಹೊಂದಿಕೊಳ್ಳುವರು.
11 ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ;
    ಯೆಹೋವನಲ್ಲಿ ನಿಮಗಿರಬೇಕಾದ ಭಯಭಕ್ತಿಯನ್ನು ಕಲಿಸಿಕೊಡುವೆನು.
12 ದೀರ್ಘಾಯುಷ್ಯವು ಬೇಕೋ?
    ಬಹುಕಾಲ ಸುಖವನ್ನು ಅನುಭವಿಸಬೇಕೋ?
13 ಹಾಗಾದರೆ ಕೆಟ್ಟದ್ದನ್ನು ಮಾತಾಡದಂತೆ ನಾಲಿಗೆಯನ್ನು ಕಾದುಕೊಳ್ಳಿರಿ.
    ಸುಳ್ಳಾಡದಂತೆ ತುಟಿಗಳನ್ನು ಇಟ್ಟುಕೊಳ್ಳಿರಿ.
14 ಕೆಟ್ಟದ್ದನ್ನು ಬಿಟ್ಟು ಒಳ್ಳೆಯವುಗಳನ್ನು ಮಾಡಿರಿ.
    ಸಮಾಧಾನವನ್ನು ಬಯಸಿ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ.
15 ಯೆಹೋವನು ನೀತಿವಂತರನ್ನು ಕಾಪಾಡುವನು.
    ಆತನು ಅವರ ಪ್ರಾರ್ಥನೆಗಳಿಗೆ ಕಿವಿಗೊಡುವನು.
16 ಕೆಡುಕರಿಗಾದರೋ ಯೆಹೋವನು ವಿರೋಧವಾಗಿರುವನು.
    ಆತನು ಅವರನ್ನು ಸಂಪೂರ್ಣವಾಗಿ ನಾಶಮಾಡುವನು.

17 ಯೆಹೋವನಿಗೆ ಪ್ರಾರ್ಥಿಸಿರಿ, ಆತನು ನಿಮಗೆ ಕಿವಿಗೊಡುವನು;
    ನಿಮ್ಮನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸುವನು.
18 ಮನಗುಂದಿದವರಿಗೆ ಯೆಹೋವನು ಸಮೀಪವಾಗಿದ್ದಾನೆ;
    ಕುಗ್ಗಿಹೋದ ಅವರನ್ನು ಆತನು ರಕ್ಷಿಸುವನು.
19 ನೀತಿವಂತರಿಗೆ ಅನೇಕ ಕಷ್ಟಗಳು ಬಂದರೂ
    ಯೆಹೋವನು ಅವೆಲ್ಲವುಗಳಿಂದ ಬಿಡಿಸುವನು.
20 ಆತನು ಅವರ ಎಲುಬುಗಳನ್ನೆಲ್ಲ ಕಾಪಾಡುವನು.
    ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.
21 ದುಷ್ಟರಾದರೋ ಆಪತ್ತುಗಳಿಂದ ಸಾಯುವರು.
    ನೀತಿವಂತರ ವೈರಿಗಳು ನಾಶವಾಗುವರು.
22 ಯೆಹೋವನು ತನ್ನ ಸೇವಕರ ಪ್ರಾಣವನ್ನು ರಕ್ಷಿಸುವನು.
    ಆತನನ್ನು ಆಶ್ರಯಿಸಿಕೊಂಡಿರುವವರಲ್ಲಿ ಒಬ್ಬರಾದರೂ ನಾಶವಾಗುವುದಿಲ್ಲ.

ಪ್ರಸಂಗಿ 10

10 ಸತ್ತ ನೊಣಗಳಿಂದ ಉತ್ತಮವಾದ ಪರಿಮಳತೈಲವು ದುರ್ವಾಸನೆ ಬೀರುವುದು. ಅದೇರೀತಿಯಲ್ಲಿ ಚಿಕ್ಕ ಮೂಢತನವು ಬಹುಜ್ಞಾನವನ್ನೂ ಸನ್ಮಾನವನ್ನೂ ಹಾಳುಮಾಡಬಲ್ಲದು.

ಜ್ಞಾನಿಯ ಆಲೋಚನೆಗಳು ಅವನನ್ನು ಸರಿಯಾದ ದಾರಿಯಲ್ಲಿ ನಡೆಸುತ್ತವೆ. ಆದರೆ ಮೂಢನ ಆಲೋಚನೆಗಳು ಅವನನ್ನು ತಪ್ಪಾದ ದಾರಿಯಲ್ಲಿ ನಡೆಸುತ್ತವೆ. ಮೂಢನು ತನ್ನ ಮೂಢತನವನ್ನು ದಾರಿಯಲ್ಲಿ ನಡೆದುಹೋಗುತ್ತಿರುವಾಗಲೂ ತೋರಿಸುವನು. ಅವನು ತನ್ನ ವಿವೇಕಶೂನ್ಯವನ್ನು ಎಲ್ಲರಿಗೂ ಪ್ರಕಟಪಡಿಸುವನು.

ನಿನ್ನ ಯಜಮಾನನು ನಿನ್ನ ಮೇಲೆ ಕೋಪಗೊಂಡ ಮಾತ್ರಕ್ಕೆ ನಿನ್ನ ಉದ್ಯೋಗವನ್ನು ಬಿಡಬೇಡ. ನೀನು ತಾಳ್ಮೆಯಿಂದ ಸಹಾಯಕನಾಗಿದ್ದರೆ ದೊಡ್ಡ ತಪ್ಪುಗಳನ್ನು ಸಹ ನೀನು ಸರಿಪಡಿಸಲು ಸಾಧ್ಯ.

ಲೋಕದಲ್ಲಿ ನಾನು ಮತ್ತೊಂದು ಅನ್ಯಾಯವನ್ನು ನೋಡಿದ್ದೇನೆ. ಅದು ಅಧಿಪತಿಗಳು ಮಾಡುವ ತಪ್ಪಿನಂತೆ ಇದೆ. ಘನವಂತರಿಗೆ ಹೀನವಾದ ಸ್ಥಾನ ದೊರೆಯುವುದು; ಮೂಢರಿಗೆ ಮುಖ್ಯವಾದ ಪದವಿಗಳು ದೊರೆಯುವವು. ಸೇವಕರಾಗಿರಬೇಕಿದ್ದವರು ಕುದುರೆಸವಾರಿ ಮಾಡುವುದನ್ನೂ ಅಧಿಪತಿಗಳಾಗಬೇಕಿದ್ದವರು ಸೇವಕರಂತೆ ನಡೆದುಹೋಗುವುದನ್ನೂ ನಾನು ನೋಡಿದ್ದೇನೆ.

ಪ್ರತಿಯೊಂದು ಉದ್ಯೋಗವೂ ಅಪಾಯಕರ

ಗುಂಡಿತೋಡುವವನು ತಾನೇ ಅದರಲ್ಲಿ ಬೀಳಬಹುದು. ಗೋಡೆಯನ್ನು ಹೊಡೆದು ಉರುಳಿಸುವವನನ್ನು ಹಾವು ಕಚ್ಚುವುದು. ಬಂಡೆಗಳನ್ನು ಉರುಳಿಸುವವನಿಗೆ ನೋವಾಗುವುದು; ಮರಗಳನ್ನು ಕಡಿಯುವವನಿಗೆ ಕೇಡಾಗುವುದು.

10 ಮೊಂಡಕತ್ತಿಯನ್ನು ಹರಿತಗೊಳಿಸಿದರೆ ಕೆಲಸ ಸುಲಭವಾಗುವಂತೆಯೇ ಜ್ಞಾನವು ಯಾವ ಕೆಲಸವನ್ನಾದರೂ ಸುಲಭಗೊಳಿಸಬಲ್ಲದು. 11 ಹಾವುಗಳನ್ನು ಹಿಡಿಯಬಲ್ಲವನು ಇಲ್ಲದಿರುವಾಗ ಹಾವು ಬೇರೊಬ್ಬನನ್ನು ಕಚ್ಚಿದರೆ ಹಾವು ಹಿಡಿಯುವವನಿಂದ ಪ್ರಯೋಜನವೇನು? ಜ್ಞಾನವು ಸಹ ಹಾಗೆಯೇ.

12 ಜ್ಞಾನಿಯ ಮಾತುಗಳು ಅವನಿಗೆ ಘನತೆಯನ್ನು ತರುತ್ತವೆ;
    ಮೂಢನ ಮಾತುಗಳು ಅವನಿಗೆ ನಾಶನವನ್ನು ತರುತ್ತವೆ.

13 ಮೂಢನ ಮಾತು ಮೂರ್ಖತನದೊಡನೆ ಆರಂಭಗೊಂಡು ದುಷ್ಟಕರವಾದ ಹುಚ್ಚುತನದೊಡನೆ ಕೊನೆಗೊಳ್ಳುವುದು. 14 ಮೂಢನು ತಾನು ಮಾಡುವಂಥದ್ದರ ಬಗ್ಗೆ ಯಾವಾಗಲೂ ಮಾತಾಡುವನು. ಆದರೆ ಮುಂದೆ ಏನಾಗುವುದೋ ಯಾರಿಗೂ ತಿಳಿಯದು. ಮುಂದೆ ಸಂಭವಿಸುವುದನ್ನು ಯಾರೂ ಹೇಳಲಾರರು.

15 ಮೂಢನು ತನ್ನ ಮನೆದಾರಿಯನ್ನು ತಿಳಿದುಕೊಳ್ಳುವಷ್ಟು ಜಾಣನಲ್ಲ,
    ಆದ್ದರಿಂದ ಅವನು ತನ್ನ ಜೀವಮಾನವೆಲ್ಲಾ ಕಷ್ಟಪಟ್ಟು ಕೆಲಸ ಮಾಡಬೇಕು.

ದುಡಿಮೆಯ ಮೌಲ್ಯ

16 ರಾಜನು ಮಗುವಿನಂತೆ ಇದ್ದರೆ ದೇಶವು ಹಾಳಾಗುವುದು. ಅಧಿಪತಿಗಳು ಮುಂಜಾನೆಯಲ್ಲಿಯೇ ಔತಣ ಮಾಡಿದರೆ ದೇಶವು ಹಾಳಾಗುವುದು. 17 ಆದರೆ ರಾಜನು ಒಳ್ಳೆಯ ಕುಟುಂಬದಿಂದ ಬಂದವನಾಗಿದ್ದರೆ ದೇಶಕ್ಕೆ ತುಂಬ ಒಳ್ಳೆಯದಾಗುವುದು; ಅಧಿಪತಿಗಳು ತಿನ್ನುವುದನ್ನೂ ಕುಡಿಯುವುದನ್ನೂ ಹತೋಟಿಯಲ್ಲಿಟ್ಟುಕೊಂಡರೆ ದೇಶಕ್ಕೆ ತುಂಬ ಒಳ್ಳೆಯದಾಗುವುದು. ಅಧಿಪತಿಗಳು ತಿನ್ನುವುದೂ ಕುಡಿಯುವುದೂ ಬಲಹೊಂದುವುದಕ್ಕಾಗಿಯೇ ಹೊರತು ಮತ್ತರಾಗುವುದಕ್ಕಾಗಿಯಲ್ಲ.

18 ಒಬ್ಬನು ಕೆಲಸಮಾಡಲಾರದಷ್ಟು ತುಂಬ ಸೋಮಾರಿಯಾಗಿದ್ದರೆ,
    ಅವನ ಮನೆಯು ಸೋರಲಾರಂಭಿಸುವುದು; ಅದರ ಮೇಲ್ಛಾವಣಿಗೆಯು ಬೀಳತೊಡಗುವುದು.

19 ಊಟವು ಸಂತೋಷಗೊಳಿಸುವುದು; ದ್ರಾಕ್ಷಾರಸವು ಉಲ್ಲಾಸಗೊಳಿಸುವುದು; ಹಣವು ಅನೇಕ ಸಮಸ್ಯೆಗಳನ್ನು ಬಗೆಹರಿಸುವುದು.

ಹರಟೆ ಮಾತು

20 ರಾಜನನ್ನು ಮನಸ್ಸಿನಲ್ಲಿಯೂ ದೂಷಿಸಬೇಡ; ನಿನ್ನ ಮನೆಯಲ್ಲಿ ಒಬ್ಬಂಟಿಗನಾಗಿರುವಾಗಲೂ ಐಶ್ವರ್ಯವಂತರನ್ನು ದೂಷಿಸಬೇಡ. ಯಾಕೆಂದರೆ ಚಿಕ್ಕ ಪಕ್ಷಿಯೊಂದು ಹಾರಿಹೋಗಿ, ನೀನು ಹೇಳಿದ ಪ್ರತಿಯೊಂದನ್ನು ಅವರಿಗೆ ಹೇಳಬಹುದು.

ತೀತನಿಗೆ 2

ಸತ್ಯಬೋಧನೆಯನ್ನು ಅನುಸರಿಸಿರಿ

ಸತ್ಯಬೋಧನೆಯನ್ನು ಅನುಸರಿಸಲು ಜನರು ಮಾಡಬೇಕಾದ ಕಾರ್ಯಗಳನ್ನು ಅವರಿಗೆ ನೀನು ತಿಳಿಸು. ವೃದ್ಧರಾದವರು, ಜಿತೇಂದ್ರಿಯರೂ ಗಂಭೀರ ಸ್ವಭಾವದವರೂ ವಿವೇಕವುಳ್ಳವರೂ ಆಗಿರಬೇಕೆಂದು ತಿಳಿಸು. ಅವರು ತಮ್ಮ ನಂಬಿಕೆಯಲ್ಲಿ, ಪ್ರೀತಿಯಲ್ಲಿ ಮತ್ತು ತಾಳ್ಮೆಯಲ್ಲಿ ಬಲವಾಗಿರಬೇಕೆಂದು ತಿಳಿಸು.

ಅಂತೆಯೇ ವೃದ್ಧ ಸ್ತ್ರೀಯರು ಸಭ್ಯರಾಗಿ ವರ್ತಿಸಬೇಕು. ಅವರು ಚಾಡಿ ಹೇಳಬಾರದು; ಮದ್ಯಾಸಕ್ತರಾಗಿರಬಾರದು. ಅವರು ಒಳ್ಳೆಯದನ್ನೇ ಉಪದೇಶಿಸಬೇಕು. ಅವರು ಗೃಹಿಣಿಯರಿಗೆ, “ನಿಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸಿರಿ. ಜ್ಞಾನವುಳ್ಳವರಾಗಿರಿ, ಪರಿಶುದ್ಧರಾಗಿರಿ, ನಿಮ್ಮ ಮನೆಕೆಲಸವನ್ನು ನೋಡಿಕೊಳ್ಳಿರಿ, ದಯೆಯುಳ್ಳವರಾಗಿರಿ, ನಿಮ್ಮ ಗಂಡಂದಿರಿಗೆ ವಿಧೇಯರಾಗಿರಿ” ಎಂದು ಉಪದೇಶಿಸಬೇಕು. ಆಗ ದೇವರು ನಮಗೆ ದಯಪಾಲಿಸಿದ ಬೋಧನೆಯನ್ನು ಟೀಕಿಸಲು ಯಾರಿಗೂ ಸಾಧ್ಯವಾಗುವುದಿಲ್ಲ.

ಇದೇ ರೀತಿಯಲ್ಲಿ ಯುವಕರಿಗೆ ಜ್ಞಾನಿಗಳಾಗಿರಲು ತಿಳಿಸು. ನೀನು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಯುವಕರಿಗೆ ಸರ್ವವಿಧದಲ್ಲಿಯೂ ಮಾದರಿಯಾಗಿರಬೇಕು. ನಿನ್ನ ಉಪದೇಶದಲ್ಲಿ ಯಥಾರ್ಥತೆಯನ್ನು ಮತ್ತು ಗಂಭೀರತೆಯನ್ನು ತೋರಿಸಿಕೊಡು. ನೀನು ಸತ್ಯವನ್ನೇ ಮಾತನಾಡು. ಆಗ ನಿನ್ನನ್ನು ಟೀಕಿಸಲು ಸಾಧ್ಯವಿಲ್ಲದೆ ನಿನ್ನ ವಿರೋಧಿಗಳು ಅಪಮಾನಕ್ಕೆ ಗುರಿಯಾಗುವರು.

ಗುಲಾಮರಿಗೆ ಈ ಸಂಗತಿಗಳನ್ನು ತಿಳಿಸು: ಅವರು ತಮ್ಮ ಯಜಮಾನರಿಗೆ ಯಾವಾಗಲೂ ವಿಧೇಯರಾಗಿದ್ದು ಅವರನ್ನು ಮೆಚ್ಚಿಸಲು ಪ್ರಯತ್ನಿಸಬೇಕು. ಅವರು ತಮ್ಮ ಯಜಮಾನರ ಜೊತೆಯಲ್ಲಿ ವಾಗ್ವಾದ ಮಾಡಬಾರದು; 10 ಅವರು ವಸ್ತುಗಳನ್ನು ಕದಿಯಬಾರದು; ಮತ್ತು ತಾವು ನಂಬಿಗಸ್ತರೆಂಬುದನ್ನು ತೋರಿಸಿಕೊಡಬೇಕು. ಗುಲಾಮರು ಹೀಗೆ ನಡೆದುಕೊಳ್ಳುವುದಾದರೆ, ಅವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ನಮ್ಮ ರಕ್ಷಕನಾದ ದೇವರ ಉಪದೇಶವು ಶ್ರೇಷ್ಠವಾದದ್ದೆಂದು ತೋರ್ಪಡಿಸಲು ಸಾಧ್ಯವಾಗುತ್ತದೆ.

11 ಎಲ್ಲರಿಗೂ ರಕ್ಷಣೆಯನ್ನು ಕೊಡುವ ದೇವರ ಕೃಪೆಯು ಪ್ರತ್ಯಕ್ಷವಾಗಿದೆ. 12 ನಾವು ದೇವರಿಗೆ ವಿರುದ್ಧವಾಗಿ ಜೀವಿಸದಂತೆಯೂ ಲೋಕದ ಜನರು ಮಾಡಲಪೇಕ್ಷಿಸುವ ಕೆಟ್ಟಕಾರ್ಯಗಳನ್ನು ಮಾಡದಂತೆಯೂ ಅದು ತಡೆಯುತ್ತದೆ. ನಾವು ದೇವರ ಸೇವೆಯನ್ನು ಮಾಡುತ್ತಿದ್ದೇವೆ ಎಂಬುದನ್ನು ತೋರಿಸುವುದಕ್ಕಾಗಿ ನೀತಿವಂತರಾಗಿಯೂ ಜ್ಞಾನಿಗಳಾಗಿಯೂ ಲೋಕದಲ್ಲಿ ಈಗ ಬಾಳಬೇಕೆಂದು ಅದು ಬೋಧಿಸುತ್ತದೆ. 13 ನಮ್ಮ ಮಹಾದೇವರು ಮತ್ತು ರಕ್ಷಕನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯನ್ನು ಎದುರುನೋಡುತ್ತಿರುವ ನಾವು ಆ ರೀತಿಯಲ್ಲಿಯೇ ಬಾಳಬೇಕು. ಆತನೇ ನಮ್ಮ ಮಹಾ ನಿರೀಕ್ಷೆಯಾಗಿದ್ದಾನೆ. ಆತನು ತನ್ನ ಮಹಿಮೆಯೊಂದಿಗೆ ಬರುತ್ತಾನೆ. 14 ಆತನು ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು. ನಮ್ಮನ್ನು ಪಾಪದಿಂದ ಬಿಡುಗಡೆ ಮಾಡಲು ಮತ್ತು ಯಾವಾಗಲೂ ಒಳ್ಳೆಯ ಕಾರ್ಯಗಳನ್ನೇ ಮಾಡ ಬಯಸುವ ತನ್ನ ಪರಿಶುದ್ಧ ಜನರನ್ನಾಗಿ ಮಾಡಲು ಆತನು ಮರಣ ಹೊಂದಿದನು.

15 ಈ ಸಂಗತಿಗಳನ್ನು ಜನರಿಗೆ ತಿಳಿಸಲು ನಿನಗೆ ಸಂಪೂರ್ಣ ಅಧಿಕಾರವಿದೆ. ಜನರನ್ನು ಬಲಗೊಳಿಸಲು ಈ ಅಧಿಕಾರವನ್ನು ಬಳಸಿಕೊಂಡು, ಅವರು ಮಾಡಬೇಕಾದುದನ್ನು ತಿಳಿಸು. ನೀನು ಮುಖ್ಯನಾದವನಲ್ಲವೆಂದು ಯಾರೂ ನಿನ್ನನ್ನು ಪರಿಗಣಿಸದಂತೆ ನೋಡಿಕೊ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International