Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 26

ದೇವರಿಗೆ ವಿಧೇಯರಾಗುವುದರಿಂದ ದೊರಕುವ ಪ್ರತಿಫಲಗಳು

26 “ವಿಗ್ರಹಗಳನ್ನು ಮಾಡಿಕೊಳ್ಳಬೇಡಿರಿ. ಆರಾಧಿಸಲು ಕೆತ್ತಿದ ವಿಗ್ರಹಗಳನ್ನಾಗಲಿ ಕಲ್ಲುಕಂಬಗಳನ್ನಾಗಲಿ ನಿಮ್ಮ ದೇಶದಲ್ಲಿ ಸ್ಥಾಪಿಸಬೇಡಿರಿ. ಯಾಕೆಂದರೆ ನಾನೇ ನಿಮ್ಮ ದೇವರಾದ ಯೆಹೋವನು!

“ನನ್ನ ವಿಶ್ರಾಂತಿಯ ವಿಶೇಷ ದಿನಗಳನ್ನು ಜ್ಞಾಪಕಮಾಡಿಕೊಂಡು ನನ್ನ ಪವಿತ್ರಸ್ಥಳವನ್ನು ಸನ್ಮಾನಿಸಿರಿ. ನಾನೇ ಯೆಹೋವನು!

“ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಜ್ಞಾಪಕಮಾಡಿಕೊಂಡು ಅವುಗಳಿಗೆ ವಿಧೇಯರಾಗಿರಿ. ನೀವು ಅವುಗಳನ್ನು ಅನುಸರಿಸಿದರೆ, ನಾನು ಸರಿಯಾದ ಸಮಯದಲ್ಲಿ ಮಳೆಯನ್ನು ಅನುಗ್ರಹಿಸುವೆನು. ಭೂಮಿಯು ಒಳ್ಳೆಯ ಬೆಳೆಯನ್ನು ಕೊಡುವುದು ಮತ್ತು ತೋಟದ ಮರಗಳು ತಮ್ಮ ಫಲಗಳನ್ನು ಕೊಡುವವು. ಕಣತುಳಿಸುವ ಕೆಲಸವು ದ್ರಾಕ್ಷಿಯನ್ನು ಸಂಗ್ರಹಿಸುವ ಸಮಯದವರೆಗೂ ಮುಂದುವರಿಯುವುದು; ದ್ರಾಕ್ಷಿಯನ್ನು ಸಂಗ್ರಹಿಸುವ ಕೆಲಸವು ಬಿತ್ತನೆಯ ಕಾಲದವರೆಗೂ ಮುಂದುವರಿಯುವುದು. ಆಗ ನಿಮಗೆ ಆಹಾರವು ಸಮೃದ್ಧಿಯಾಗಿರುವುದು; ನೀವು ದೇಶದಲ್ಲಿ ಸುರಕ್ಷಿತವಾಗಿ ವಾಸಿಸುವಿರಿ. ನಾನು ನಿಮ್ಮ ದೇಶಕ್ಕೆ ಸಮಾಧಾನವನ್ನು ಅನುಗ್ರಹಿಸುವೆನು. ನೀವು ನಿರ್ಭಯವಾಗಿ ಮಲಗಿಕೊಳ್ಳುವಿರಿ. ನಿಮ್ಮನ್ನು ಭಯಪಡಿಸಲು ಯಾರೂ ಬರುವುದಿಲ್ಲ. ದುಷ್ಟಮೃಗಗಳು ನಿಮ್ಮ ದೇಶದಲ್ಲಿರದಂತೆ ಮಾಡುವೆ. ಶತ್ರುಸೈನ್ಯಗಳು ನಿಮ್ಮ ದೇಶದೊಳಕ್ಕೆ ಬರುವುದಿಲ್ಲ.

“ನೀವು ನಿಮ್ಮ ವೈರಿಗಳನ್ನು ಸೋಲಿಸಿ ಓಡಿಸಿಬಿಡುವಿರಿ. ನಿಮ್ಮ ಕತ್ತಿಗಳಿಂದ ಅವರನ್ನು ಕೊಲ್ಲುವಿರಿ. ನಿಮ್ಮಲ್ಲಿ ಐದು ಮಂದಿ ನೂರು ಮಂದಿಯನ್ನು ಓಡಿಸುವರು; ನಿಮ್ಮಲ್ಲಿ ನೂರು ಮಂದಿ ಹತ್ತು ಸಾವಿರ ಮಂದಿಯನ್ನು ಓಡಿಸುವರು; ನೀವು ನಿಮ್ಮ ವೈರಿಗಳನ್ನು ಸೋಲಿಸಿ ಕತ್ತಿಯಿಂದ ಕೊಲ್ಲುವಿರಿ.

“ಬಳಿಕ ನಾನು ನಿಮ್ಮ ಮೇಲೆ ಕಟಾಕ್ಷವಿಟ್ಟು ನಿಮಗೆ ಅನೇಕ ಮಕ್ಕಳನ್ನು ಅನುಗ್ರಹಿಸುವೆನು. ನಾನು ನಿಮ್ಮೊಡನೆ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ನೆರವೇರಿಸುವೆನು. 10 ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದವರೆಗೆ ಉಳಿಯುವಂತೆ ನಿಮಗೆ ಬೇಕಾದಷ್ಟು ದವಸಧಾನ್ಯಗಳಿರುತ್ತದೆ. ನೀವು ಹೊಸ ಬೆಳೆಯನ್ನು ಕೊಯ್ಯುವಿರಿ. ಆದರೆ ಹೊಸ ಬೆಳೆಯನ್ನು ಸಂಗ್ರಹಿಸಬೇಕಾದರೆ ಹಳೆ ಬೆಳೆಯನ್ನು ಬಿಸಾಡಬೇಕಾಗುತ್ತದೆ. 11 ಅಲ್ಲದೆ ನಾನು ನಿಮ್ಮ ಮಧ್ಯದಲ್ಲಿ ನನ್ನ ಪವಿತ್ರಗುಡಾರವನ್ನು ಇಡುವೆನು. ನಾನು ನಿಮ್ಮಿಂದ ದೂರ ಹೋಗುವುದಿಲ್ಲ. 12 ನಾನು ನಿಮ್ಮೊಂದಿಗೆ ನಡೆಯುತ್ತಾ ನಿಮ್ಮ ದೇವರಾಗಿರುವೆನು ಮತ್ತು ನೀವು ನನ್ನ ಜನರಾಗಿರುವಿರಿ. 13 ನಿಮ್ಮ ದೇವರಾಗಿರುವ ಯೆಹೋವನು ನಾನೇ! ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಿರಿ. ಆದರೆ ನಾನು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆನು. ನೀವು ಗುಲಾಮರಾಗಿ ಭಾರವಾದ ಹೊರೆಗಳನ್ನು ಹೊರುತ್ತಾ ಗೂನಾಗಿದ್ದಿರಿ. ಆದರೆ ನಿಮ್ಮ ಭುಜದ ಮೇಲಿದ್ದ್ದ ನೊಗವನ್ನು ನಾನು ಮುರಿದುಹಾಕಿ ನೀವು ಮತ್ತೆ ನೆಟ್ಟಗೆ ನಡೆಯುವಂತೆ ಮಾಡಿದೆನು.

ದೇವರಿಗೆ ವಿಧೇಯರಾಗದಿದ್ದರೆ ಬರುವ ಶಿಕ್ಷೆ

14 “ಆದರೆ ನೀವು ನನಗೆ ಮತ್ತು ನನ್ನ ಆಜ್ಞೆಗಳಿಗೆಲ್ಲಾ ವಿಧೇಯರಾಗದಿದ್ದರೆ, ಕೆಟ್ಟ ಸಂಗತಿಗಳು ನಿಮಗೆ ಸಂಭವಿಸುತ್ತವೆ. 15 ನೀವು ನನ್ನ ಕಟ್ಟಳೆಗಳಿಗೆ ಮತ್ತು ಆಜ್ಞೆಗಳಿಗೆ ವಿಧೇಯರಾಗದಿದ್ದರೆ, ಆಗ ನೀವು ನನ್ನ ಒಡಂಬಡಿಕೆಯನ್ನು ಮುರಿದವರಾಗುತ್ತೀರಿ. 16 ಆಗ ನಾನು ನಿಮ್ಮ ಮಧ್ಯೆ ಭಯಂಕರ ಸಂಗತಿಗಳು ನಡೆಯುವಂತೆ ಮಾಡುವೆ. ನೀವು ವ್ಯಾಧಿಯಿಂದಲೂ ಜ್ವರದಿಂದಲೂ ನರಳುವಂತೆ ಮಾಡುವೆ. ಅವು ನಿಮ್ಮ ಕಣ್ಣುಗಳನ್ನು ನಾಶಮಾಡಿ ನಿಮ್ಮ ಪ್ರಾಣವನ್ನು ತೆಗೆದುಬಿಡುತ್ತವೆ; ನೀವು ಬೀಜ ಬಿತ್ತಿದರೂ ಅದರ ಫಲವು ದೊರೆಯುವುದಿಲ್ಲ: ನಿಮ್ಮ ವೈರಿಗಳು ನಿಮ್ಮ ಬೆಳೆಗಳನ್ನು ತಿಂದುಬಿಡುವರು! 17 ನಾನು ನಿಮಗೆ ವಿಮುಖನಾಗಿರುವುದರಿಂದ ಆ ವೈರಿಗಳು ನಿಮ್ಮನ್ನು ಸೋಲಿಸುವರು. ಆ ವೈರಿಗಳು ನಿಮ್ಮನ್ನು ದ್ವೇಷಿಸುವರು ಮತ್ತು ನಿಮ್ಮನ್ನು ಆಳುವರು. ಯಾರೂ ನಿಮ್ಮನ್ನು ಬೆನ್ನಟ್ಟದಿದ್ದರೂ ಹೆದರಿಕೊಂಡು ಓಡುವಿರಿ.

18 “ಇಷ್ಟಾದರೂ ನೀವು ನನಗೆ ವಿಧೇಯರಾಗದಿದ್ದರೆ ನಿಮ್ಮ ಪಾಪಗಳಿಗಾಗಿ ಇನ್ನೂ ಏಳರಷ್ಟು ನಿಮ್ಮನ್ನು ಶಿಕ್ಷಿಸುವೆನು. 19 ನಿಮ್ಮ ಗರ್ವಕ್ಕೆ ಕಾರಣವಾದ ಬಲಿಷ್ಠವಾದ ಪಟ್ಟಣಗಳನ್ನು ನಾಶಮಾಡುವೆ. ಆಕಾಶವು ಮಳೆಗರೆಯುವುದಿಲ್ಲ. ಭೂಮಿಯು ಬೆಳೆಯನ್ನು ಫಲಿಸುವುದಿಲ್ಲ.[a] 20 ನೀವು ಕಷ್ಟಪಟ್ಟು ದುಡಿದರೂ ನಿಮಗೆ ಪ್ರಯೋಜನವಿರುವುದಿಲ್ಲ. ನಿಮ್ಮ ಭೂಮಿ ಯಾವ ಬೆಳೆಗಳನ್ನೂ ಫಲಿಸುವುದಿಲ್ಲ; ನಿಮ್ಮ ಮರಗಳೂ ಫಲಗಳನ್ನು ಬಿಡುವುದಿಲ್ಲ.

21 “ನೀವು ಇನ್ನೂ ನನಗೆ ವಿರುದ್ಧವಾಗಿ ತಿರುಗಿ ಅವಿಧೇಯರಾದರೆ, ನಾನು ಇನ್ನೂ ಏಳರಷ್ಟು ಕಠಿಣವಾಗಿ ನಿಮ್ಮನ್ನು ಬಾಧಿಸುವೆನು. ನೀವು ಹೆಚ್ಚು ಪಾಪಮಾಡಿದಂತೆಲ್ಲಾ ಹೆಚ್ಚೆಚ್ಚಾಗಿ ಶಿಕ್ಷಿಸಲ್ಪಡುವಿರಿ. 22 ನಿಮಗೆ ವಿರುದ್ಧವಾಗಿ ನಾನು ಕ್ರೂರ ಮೃಗಗಳನ್ನು ಕಳುಹಿಸುವೆನು. ಅವುಗಳು ನಿಮ್ಮ ಮಕ್ಕಳನ್ನು ತಿಂದು ಬಿಡುವವು; ನಿಮ್ಮ ಪಶುಗಳನ್ನು ನಾಶಮಾಡುವವು. ಅವು ನಿಮ್ಮಲ್ಲಿ ಅನೇಕ ಜನರನ್ನು ಕೊಲ್ಲುವವು. ದಾರಿಗಳು ಜನಸಂಚಾರವಿಲ್ಲದೆ ಬರಿದಾಗಿರುವವು.

23 “ಇಷ್ಚಾದರೂ ನೀವು ತಿದ್ದಿಕೊಳ್ಳದೆ ನನಗೆ ವಿರೋಧವಾಗಿ ನಡೆದರೆ, 24 ಆಗ ನಾನು ಸಹ ನಿಮಗೆ ವಿರೋಧವಾಗಿ ನಡೆಯುವೆನು. ಹೌದು, ನಾನೇ ನಿಮ್ಮನ್ನು ನಿಮ್ಮ ಪಾಪಗಳಿಗಾಗಿ ಏಳರಷ್ಟಾಗಿ ದಂಡಿಸುವೆನು. 25 ನೀವು ನನ್ನ ಒಡಂಬಡಿಕೆಯನ್ನು ಮೀರಿದ್ದರಿಂದ ನಾನು ನಿಮ್ಮನ್ನು ದಂಡಿಸುವೆನು. ನಿಮಗೆ ವಿರೋಧವಾಗಿ ಸೈನ್ಯಗಳನ್ನು ಬರಮಾಡುವೆ. ನೀವು ಭದ್ರತೆಗಾಗಿ ನಿಮ್ಮ ಪಟ್ಟಣಗಳೊಳಗೆ ಹೋಗುವಿರಿ. ಆದರೆ ವ್ಯಾಧಿಯು ನಿಮ್ಮಲ್ಲಿ ಹಬ್ಬುವಂತೆ ಮಾಡುವೆ. ನಿಮ್ಮ ವೈರಿಗಳು ನಿಮ್ಮನ್ನು ಸೋಲಿಸುವರು. 26 ನಿಮಗೆ ರೊಟ್ಟಿ ದಯಪಾಲಿಸುವುದನ್ನು ನಾನು ನಿಲ್ಲಿಸಿದಾಗ, ಹತ್ತು ಮಂದಿ ಸ್ತ್ರೀಯರು ತಮ್ಮಲ್ಲಿರುವ ಎಲ್ಲಾ ರೊಟ್ಟಿಗಳನ್ನು ಒಂದೇ ಒಲೆಯಲ್ಲಿ ಸುಡುವರು. ಅವರು ಪ್ರತಿ ರೊಟ್ಟಿಯ ತುಂಡನ್ನು ತೂಕ ಮಾಡಿ ಹಂಚಿಕೊಳ್ಳುವರು. ನೀವು ತಿಂದರೂ ಹಸಿದವರಾಗಿಯೇ ಇರುವಿರಿ.

27 “ನೀವು ನನ್ನ ಮಾತನ್ನು ಇನ್ನೂ ಕೇಳದೆ ನನಗೆ ವಿರೋಧವಾಗಿ ನಡೆದರೆ, 28 ನಾನು ನಿಜವಾಗಿ ನನ್ನ ಕೋಪವನ್ನು ತೋರಿಸುವೆನು. ಹೌದು, ನಾನೇ ನಿಮ್ಮ ಪಾಪಗಳಿಗಾಗಿ ನಿಮ್ಮನ್ನು ಏಳರಷ್ಟಾಗಿ ದಂಡಿಸುವೆನು. 29 ನೀವು ಬಹಳವಾಗಿ ಹಸಿದು ನಿಮ್ಮ ಮಕ್ಕಳ ಮಾಂಸವನ್ನೇ ತಿನ್ನುವಿರಿ. 30 ನಾನು ನಿಮ್ಮ ಉನ್ನತವಾದ ಪೂಜಾಸ್ಥಳಗಳನ್ನು ನಾಶಮಾಡುವೆ. ನಾನು ನಿಮ್ಮ ಧೂಪವೇದಿಕೆಗಳನ್ನು ಕಡಿದುಹಾಕುವೆನು. ನಿಮ್ಮ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಹಾಕುವೆನು. ನೀವು ನನಗೆ ಬಹಳ ಅಸಹ್ಯರಾಗಿರುವಿರಿ. 31 ನಾನು ನಿಮ್ಮ ಪಟ್ಟಣಗಳನ್ನು ನಾಶಮಾಡುವೆ. ನಿಮ್ಮ ಪವಿತ್ರಸ್ಥಳಗಳನ್ನು ಬರಿದುಮಾಡುವೆ. ನಿಮ್ಮ ಯಜ್ಞಗಳ ಸುವಾಸನೆಯನ್ನು ನಾನು ಮೂಸಿ ನೋಡುವುದಿಲ್ಲ. 32 ನಿಮ್ಮ ಭೂಮಿಯನ್ನು ಬರಿದುಮಾಡುವೆ. ಅದರಲ್ಲಿ ವಾಸಿಸಲು ಬರುವ ನಿಮ್ಮ ವೈರಿಗಳೂ ಅದನ್ನು ನೋಡಿ ಆಶ್ಚರ್ಯಪಡುವರು. 33 ನಾನು ನಿಮ್ಮನ್ನು ಜನಾಂಗಗಳ ಮಧ್ಯದಲ್ಲಿ ಚದರಿಸಿಬಿಡುವೆನು. ಕತ್ತಿಯನ್ನು ಇರಿದು ನಿಮ್ಮನ್ನು ನಾಶಮಾಡುವೆ. ನಿಮ್ಮ ಭೂಮಿ ಬರಿದಾಗುವುದು ಮತ್ತು ನಿಮ್ಮ ಪಟ್ಟಣಗಳು ನಾಶವಾಗುವವು.

34 “ನೀವು ನಿಮ್ಮ ವೈರಿಗಳ ದೇಶಕ್ಕೆ ಒಯ್ಯಲ್ಪಟ್ಟಾಗ, ನಿಮ್ಮ ದೇಶ ಬರಿದಾಗುವುದಲ್ಲದೆ ಭೂಮಿಯು ಹಾಳುಬಿದ್ದು ವಿಶ್ರಾಂತಿಯನ್ನು ಅನುಭವಿಸುವುದು. 35 ಪ್ರತಿ ಏಳು ವರ್ಷದ ನಂತರ ಭೂಮಿಗೆ ವಿಶ್ರಾಂತಿ ಕೊಡಬೇಕೆಂದು ಧರ್ಮಶಾಸ್ತ್ರ ಹೇಳಿದಂತೆ, ನೀವು ವೈರಿಗಳ ದೇಶದಲ್ಲಿ ವಾಸಿಸಿದ ಕಾಲವೆಲ್ಲಾ ನೀವು ಭೂಮಿಗೆ ಕೊಡದೆ ಇದ್ದ ವಿಶ್ರಾಂತಿಯನ್ನು ಆ ಸಮಯದಲ್ಲಿ ಭೂಮಿಯು ಪಡೆದುಕೊಳ್ಳುವುದು. 36 ಜೀವಂತವಾಗಿ ಉಳಿದವರು ತಮ್ಮ ವೈರಿಗಳ ದೇಶದಲ್ಲಿ ಅಧೈರ್ಯಗೊಳ್ಳುವರು. ಅವರು ಪ್ರತಿಯೊಂದಕ್ಕೂ ದಿಗಿಲುಪಡುವರು. ಗಾಳಿಯಿಂದ ತೂರಿಹೋಗುವ ಎಲೆಯ ಶಬ್ದಕ್ಕೆ ಅವರು ಓಡಿಹೋಗುವರು. ಕತ್ತಿಯನ್ನು ಹಿಡಿದುಕೊಂಡು ಬೆನ್ನಟ್ಟುತ್ತಿದ್ದಾರೋ ಎಂಬಂತೆ ಅವರು ಓಡಿಹೋಗುವರು. ಯಾರೂ ಬೆನ್ನಟ್ಟದಿದ್ದಾಗಲೂ ಅವರು ಎಡವಿ ಬೀಳುವರು. 37 ಒಬ್ಬನು ಕತ್ತಿಯನ್ನು ಹಿಡಿದುಕೊಂಡು ಬೆನ್ನಟ್ಟುವಾಗ ಓಡಿಹೋಗುವಂತೆ ಅವರು ಓಡಿಹೋಗುವರು. ಯಾರೂ ಅವರನ್ನು ಬೆನ್ನಟ್ಟದಿದ್ದಾಗಲೂ ಅವರು ಒಬ್ಬರ ಮೇಲೊಬ್ಬರು ಬೀಳುವರು.

“ನೀವು ನಿಮ್ಮ ವೈರಿಗಳ ವಿರುದ್ಧವಾಗಿ ನಿಲ್ಲುವಷ್ಟು ಶಕ್ತಿಯುಳ್ಳವರಾಗಿರುವುದಿಲ್ಲ. 38 ನೀವು ಬೇರೆ ಜನಾಂಗಗಳಲ್ಲಿ ಬೆರೆತು ಇಲ್ಲದಂತಾಗುವಿರಿ. ನಿಮ್ಮ ವೈರಿಗಳ ದೇಶದಲ್ಲಿ ನೀವು ಮಾಯವಾಗಿ ಹೋಗುವಿರಿ. 39 ಆದ್ದರಿಂದ ನಿಮ್ಮಲ್ಲಿ ಜೀವಂತವಾಗಿ ಉಳಿದವರು ತಮ್ಮ ಪಾಪದ ದೆಸೆಯಿಂದಲೂ ತಮ್ಮ ಪೂರ್ವಿಕರ ಪಾಪದ ದೆಸೆಯಿಂದಲೂ ಅವರಂತೆಯೇ ಶತ್ರುಗಳ ದೇಶಗಳಲ್ಲಿ ಕ್ಷಯಿಸಿಹೋಗುವರು.

40 “ಒಂದುವೇಳೆ ಜನರು ತಮ್ಮ ಪಾಪಗಳನ್ನೂ ತಮ್ಮ ಪೂರ್ವಿಕರ ಪಾಪಗಳನ್ನೂ ಅರಿಕೆ ಮಾಡಬಹುದು; ನನಗೆ ವಿರುದ್ಧವಾಗಿ ಪಾಪಮಾಡಿರುವುದಾಗಿಯೂ ನನಗೆ ವಿರೋಧವಾಗಿ ತಿರುಗಿರುವುದಾಗಿಯೂ ಅವರು ಒಪ್ಪಿಕೊಂಡು 41 ನಾನು ಅವರಿಗೆ ವಿಮುಖನಾಗಿ ಅವರನ್ನು ಶತ್ರುಗಳ ದೇಶಕ್ಕೆ ಕರೆದುಕೊಂಡು ಬಂದೆನೆಂದು ಅವರು ಅರಿತುಕೊಂಡು ತಮ್ಮನ್ನು ತಗ್ಗಿಸಿಕೊಂಡು[b] ತಮ್ಮ ಪಾಪಕ್ಕೆ ಬರತಕ್ಕ ಶಿಕ್ಷೆಯನ್ನು ಸ್ವೀಕರಿಸಲು ಯೋಗ್ಯರೆಂದು ಹೇಳಿಕೊಂಡರೆ 42 ಆಗ ನಾನು ಯಾಕೋಬನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನೂ ಇಸಾಕನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನೂ ಅಬ್ರಹಾಮನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನೂ ದೇಶವನ್ನೂ ಜ್ಞಾಪಕಮಾಡಿಕೊಳ್ಳುವೆನು.

43 “ದೇಶವು ಬರಿದಾಗಿದ್ದು ವಿಶ್ರಾಂತಿಯನ್ನು ಅನುಭವಿಸುವುದು. ಆಗ ಜೀವಂತವಾಗಿ ಉಳಿದವರು ತಮ್ಮ ಪಾಪಗಳಿಗೆ ಬರತಕ್ಕ ಶಿಕ್ಷೆಯನ್ನು ಅನುಭವಿಸುವರು. ನನ್ನ ನಿಯಮಗಳನ್ನು ದ್ವೇಷಿಸಿ ನನ್ನ ವಿಧಿಗಳಿಗೆ ಅವಿಧೇಯರಾದ್ದರಿಂದ ತಮಗೆ ಶಿಕ್ಷೆಯಾಯಿತೆಂದು ಅವರು ಅರಿತುಕೊಳ್ಳುವರು. 44 ಅವರು ನಿಜವಾಗಿ ಪಾಪಮಾಡಿದ್ದರೂ ಸಹಾಯಕ್ಕಾಗಿ ಅವರು ನನ್ನ ಬಳಿಗೆ ಬಂದರೆ ನಾನು ಅವರಿಗೆ ವಿಮುಖನಾಗುವುದಿಲ್ಲ. ಅವರು ತಮ್ಮ ಶತ್ರುಗಳ ದೇಶದಲ್ಲಿದ್ದರೂ ನಾನು ಅವರಿಗೆ ಕಿವಿಗೊಡುವೆನು. ಅವರನ್ನು ಸಂಪೂರ್ಣವಾಗಿ ನಾಶಮಾಡುವುದಿಲ್ಲ. ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಮರೆಯುವುದಿಲ್ಲ. ಯಾಕೆಂದರೆ ನಾನೇ ಅವರ ದೇವರಾದ ಯೆಹೋವನು! 45 ಅವರಿಗೋಸ್ಕರ ಅವರ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ಅವರಿಗೆ ಹಿತವನ್ನು ಮಾಡುವೆ. ನಾನು ಅವರ ದೇವರಾಗಿರಬೇಕೆಂದು ಅವರ ಪೂರ್ವಿಕರನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆದುಕೊಂಡು ಬಂದೆನು. ಬೇರೆ ಜನಾಂಗಗಳವರು ಆ ಸಂಗತಿಗಳನ್ನು ನೋಡಿದರು. ನಾನೇ ಯೆಹೋವನು!”

46 ಯೆಹೋವನು ಇಸ್ರೇಲರಿಗೆ ಕೊಟ್ಟ ಕಟ್ಟಳೆಗಳು, ನಿಯಮಗಳು ಮತ್ತು ಉಪದೇಶಗಳು ಇವೇ. ಇದು ಯೆಹೋವನ ಮತ್ತು ಇಸ್ರೇಲರ ನಡುವೆ ಆದ ಒಡಂಬಡಿಕೆಯ ನಿಯಮಗಳಾಗಿವೆ. ಯೆಹೋವನು ಆ ನಿಯಮಗಳನ್ನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಕೊಟ್ಟನು. ಮೋಶೆ ಅವುಗಳನ್ನು ಜನರಿಗೆ ಕೊಟ್ಟನು.

ಕೀರ್ತನೆಗಳು 33

33 ನೀತಿವಂತರೇ, ಯೆಹೋವನಲ್ಲಿ ಉಲ್ಲಾಸಪಡಿರಿ.
    ಯಥಾರ್ಥವಂತರು ಆತನನ್ನು ಸ್ತುತಿಸುವುದು ಯೋಗ್ಯವಾಗಿದೆ.
ಲೈರ್‌[a] ವಾದ್ಯವನ್ನು ನುಡಿಸುತ್ತಾ ಯೆಹೋವನನ್ನು ಸ್ತುತಿಸಿರಿ!
    ಹತ್ತುತಂತಿಗಳ ಹಾರ್ಪ್‌ವಾದ್ಯವನ್ನು ಬಾರಿಸುತ್ತಾ ಆತನನ್ನು ಕೊಂಡಾಡಿರಿ.
ಆತನಿಗೆ ಹೊಸ ಹಾಡನ್ನು[b] ಹಾಡಿರಿ!
    ಹಾರ್ಪ್‌ವಾದ್ಯಗಳನ್ನು ಇಂಪಾಗಿ ನುಡಿಸುತ್ತಾ ಆನಂದದಿಂದ ಆರ್ಭಟಿಸಿರಿ.
ಯೆಹೋವನ ವಾಕ್ಯವು ಸತ್ಯವಾದದ್ದು!
    ಆತನ ಕಾರ್ಯಗಳೆಲ್ಲಾ ಭರವಸೆಗೆ ಯೋಗ್ಯವಾಗಿವೆ.
ಆತನು ನೀತಿಯನ್ನೂ ನ್ಯಾಯವನ್ನೂ ಪ್ರೀತಿಸುವನು.
    ಯೆಹೋವನ ಶಾಶ್ವತವಾದ ಪ್ರೀತಿಯು ಭೂಲೋಕವನ್ನೆಲ್ಲಾ ತುಂಬಿಕೊಂಡಿದೆ.
ಯೆಹೋವನು ಆಜ್ಞಾಪಿಸಲು ಆಕಾಶವು ಸೃಷ್ಟಿಯಾಯಿತು!
    ಆತನ ಉಸಿರು ಭೂಮಿಯ ಮೇಲಿರುವ ಸಮಸ್ತವನ್ನು ಸೃಷ್ಟಿಸಿತು.
ಆತನು ನೀರುಗಳನ್ನು ಒಟ್ಟುಗೂಡಿಸಿ ಸಮುದ್ರವನ್ನು ನಿರ್ಮಿಸಿದನು;
    ಮಹಾಸಾಗರಕ್ಕೆ ಸ್ಥಳವನ್ನು ಗೊತ್ತುಪಡಿಸಿದನು.[c]
ಭೂಲೋಕದವರೆಲ್ಲರೂ ಯೆಹೋವನಲ್ಲಿ ಭಯಭಕ್ತಿಯಿಂದಿರಲಿ.
    ಭೂನಿವಾಸಿಗಳೆಲ್ಲರೂ ಆತನಿಗೆ ಭಯಪಡಲಿ.
ಯಾಕೆಂದರೆ ಆತನು ನುಡಿದಾಗ ಭೂಲೋಕವು ಸೃಷ್ಟಿಯಾಯಿತು;
    ಆತನು ಆಜ್ಞಾಪಿಸಿದಾಗ ಸಮಸ್ತವು ಉಂಟಾಯಿತು.
10 ಯೆಹೋವನು ಜನಾಂಗಗಳ ಉದ್ದೇಶಗಳನ್ನು ವ್ಯರ್ಥಗೊಳಿಸಬಲ್ಲನು;
    ಅವರ ಆಲೋಚನೆಗಳನ್ನು ನಿಷ್ಪಲ ಮಾಡಬಲ್ಲನು.
11 ಆದರೆ ಯೆಹೋವನ ಯೋಜನೆಗಳು ಶಾಶ್ವತವಾಗಿವೆ.
    ಆತನ ಆಲೋಚನೆಗಳು ಸದಾಕಾಲಕ್ಕೂ ಒಳ್ಳೆಯದಾಗಿವೆ.
12 ಯಾರಿಗೆ ಯೆಹೋವನು ದೇವರಾಗಿದ್ದಾನೋ ಅವರೇ ಧನ್ಯರು.
    ಯಾಕೆಂದರೆ ಆತನು ಅವರನ್ನು ಸ್ವಕೀಯರನ್ನಾಗಿ ಆರಿಸಿಕೊಂಡಿದ್ದಾನೆ.
13 ಯೆಹೋವನು ಪರಲೋಕದಿಂದ
    ಮನುಷ್ಯರನ್ನು ದೃಷ್ಟಿಸಿ ನೋಡುವನು.
14 ಆತನು ತನ್ನ ಮಹಾಸಿಂಹಾಸನದಿಂದ
    ಭೂನಿವಾಸಿಗಳೆಲ್ಲರನ್ನು ನೋಡುವನು.
15 ಅವರೆಲ್ಲರ ಮನುಸ್ಸುಗಳನ್ನು ಸೃಷ್ಟಿಸಿದವನು ಆತನೇ.
    ಅವರೆಲ್ಲರ ಆಲೋಚನೆಗಳು ಆತನಿಗೆ ತಿಳಿದಿವೆ.
16 ಮಹಾಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ.
    ಭುಜಬಲದಿಂದಲೇ ಯಾವ ಯುದ್ಧವೀರನೂ ಸುರಕ್ಷಿತನಾಗಿರಲಾರನು.
17 ಯುದ್ಧದಲ್ಲಿ ದೊರೆಯುವ ಜಯ ಕುದುರೆಗಳಿಂದಲ್ಲ.
    ಅವುಗಳ ಬಲವು ನಿನ್ನನ್ನು ರಕ್ಷಿಸಲಾರದು.
18 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಲಕ್ಷಿಸುವನು.
    ಆತನ ಶಾಶ್ವತವಾದ ಪ್ರೀತಿಯು ಆತನ ಭಕ್ತರನ್ನು ಕಾಪಾಡುವುದು.
19 ಅವರನ್ನು ಸಾವಿನಿಂದ ರಕ್ಷಿಸುವಾತನು ಆತನೇ.
    ಅವರು ಹಸಿವೆಯಿಂದಿರುವಾಗ ಆತನು ಅವರಿಗೆ ಶಕ್ತಿಕೊಡುವನು.
20 ಆದ್ದರಿಂದ ಯೆಹೋವನಿಗಾಗಿಯೇ ಕಾದುಕೊಂಡಿರುತ್ತೇವೆ.
    ಆತನೇ ನಮ್ಮ ಸಹಾಯಕನೂ ಗುರಾಣಿಯೂ ಆಗಿದ್ದಾನೆ.
21 ದೇವರು ನನ್ನನ್ನು ಸಂತೋಷಗೊಳಿಸುವನು.
    ನಾನು ಆತನ ಪರಿಶುದ್ಧ ಹೆಸರಿನಲ್ಲಿಯೇ ಭರವಸವಿಟ್ಟಿದ್ದೇನೆ.
22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ.
    ನಿನ್ನ ಶಾಶ್ವತವಾದ ಪ್ರೀತಿಯು ನಮ್ಮ ಮೇಲಿರಲಿ.

ಪ್ರಸಂಗಿ 9

ಸಾವು ನ್ಯಾಯವಾದದ್ದೇ?

ನಾನು ಇವೆಲ್ಲವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಆಲೋಚಿಸಿದೆ. ಒಳ್ಳೆಯವರಿಗೂ ಜ್ಞಾನಿಗಳಿಗೂ ಅವರ ಕಾರ್ಯಗಳಿಗೂ ಸಂಭವಿಸುವುದೆಲ್ಲಾ ದೇವರ ಹತೋಟಿಯಲ್ಲಿದೆ. ತಾವು ಪ್ರೀತಿಗೆ ಗುರಿಯಾಗುವರೋ ದ್ವೇಷಕ್ಕೆ ಗುರಿಯಾಗುವರೋ ಅವರಿಗೆ ಗೊತ್ತಿಲ್ಲ. ಮುಂದೆ ಸಂಭವಿಸುವುದೂ ಅವರಿಗೆ ಗೊತ್ತಿಲ್ಲ.

ಆದರೆ ಎಲ್ಲರಿಗೂ ಸಂಭವಿಸುವುದು ಒಂದೇ. ಅದೇ ಮರಣ. ಒಳ್ಳೆಯವರಿಗೂ ಕೆಟ್ಟವರಿಗೂ ಶುದ್ಧರಿಗೂ ಅಶುದ್ಧರಿಗೂ ಯಜ್ಞಗಳನ್ನು ಅರ್ಪಿಸುವವರಿಗೂ ಅರ್ಪಿಸದವರಿಗೂ ಮರಣವಾಗುತ್ತದೆ. ಒಳ್ಳೆಯವನು ಸಹ ಕೇವಲ ಪಾಪಿಯಂತೆ ಸಾಯುವನು. ದೇವರಿಗೆ ವಿಶೇಷವಾದ ಹರಕೆಗಳನ್ನು ಮಾಡುವವನು ಸಹ ಆ ಹರಕೆಗಳನ್ನು ಮಾಡಲು ಭಯಪಡುವ ವ್ಯಕ್ತಿಯಂತೆ ಸಾಯುವನು.

ಈ ಲೋಕದ ಎಲ್ಲಾ ಕಾರ್ಯಗಳಲ್ಲಿ ಎಲ್ಲಕ್ಕಿಂತಲೂ ದುಃಖಕರವಾದದ್ದೇನೆಂದರೆ, ಎಲ್ಲರೂ ಒಂದೇ ರೀತಿಯಲ್ಲಿ ಅಂತ್ಯವಾಗುವರು. ಆದರೆ ಜನರು ದುಷ್ಟತನವನ್ನೂ ಮೂರ್ಖತನವನ್ನೂ ಆಲೋಚಿಸುತ್ತಲೇ ಇರುವುದು ಅಪಾಯಕರ. ಆಲೋಚನೆಗಳು ಅವರನ್ನು ಮರಣಕ್ಕೆ ನಡೆಸುತ್ತವೆ. ಇನ್ನೂ ಜೀವದಿಂದಿರುವ ಪ್ರತಿಯೊಬ್ಬರಿಗೂ ನಿರೀಕ್ಷೆಯಿದೆ.

ಜೀವಂತವಾಗಿರುವ ನಾಯಿ ಸತ್ತ ಸಿಂಹಕ್ಕಿಂತಲೂ ಉತ್ತಮ

ಎಂಬ ನುಡಿ ಎಷ್ಟೋ ಸತ್ಯ.

ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯಿದೆ. ಆದರೆ ಸತ್ತವರಿಗೆ ಯಾವ ತಿಳುವಳಿಕೆಯೂ ಇಲ್ಲ. ಸತ್ತವರಿಗೆ ಯಾವ ಪ್ರತಿಫಲವೂ ಇಲ್ಲ. ಜನರು ಅವರನ್ನು ಬೇಗನೆ ಮರೆತುಬಿಡುವರು. ಅವರು ಸತ್ತಾಗಲೇ, ಅವರ ಪ್ರೀತಿ, ದ್ವೇಷ ಮತ್ತು ಹೊಟ್ಟೆಕಿಚ್ಚು ಅಳಿದುಹೋದವು; ಸತ್ತವರು ಭೂಲೋಕದ ಕಾರ್ಯಗಳಲ್ಲಿ ಇನ್ನೆಂದಿಗೂ ಪಾಲುಗಾರರಾಗುವುದಿಲ್ಲ.

ಜೀವನದಲ್ಲಿ ಆನಂದಿಸಿ

ಆದ್ದರಿಂದ ಹೋಗು, ಊಟಮಾಡಿ ಸಂತೋಷಪಡು; ದ್ರಾಕ್ಷಾರಸವನ್ನು ಕುಡಿದು ಉಲ್ಲಾಸಿಸು; ನಿನ್ನ ಈ ನಡತೆಯು ದೇವರಿಗೆ ಮೆಚ್ಚಿಕೆಯಾಗಿದೆ. ಒಳ್ಳೆಯ ಉಡುಪುಗಳನ್ನು ಧರಿಸಿಕೊಂಡು ನಿನ್ನನ್ನು ಅಲಂಕರಿಸಿಕೊ. ನೀನು ಪ್ರಿಯ ಪತ್ನಿಯೊಡನೆ ಸುಖಪಡು. ನಿನ್ನ ಅಲ್ಪಕಾಲ ಜೀವಿತದ ದಿನಗಳಲ್ಲೆಲ್ಲಾ ಸುಖಪಡು. ಈ ಜೀವಿತವನ್ನು ನಿನಗೆ ಅನುಗ್ರಹಿಸಿರುವಾತನು ದೇವರೇ, ಇದೇ ನಿನ್ನ ಪಾಲು. ನಿನ್ನ ಈ ಜೀವಿತದ ಕೆಲಸಕಾರ್ಯಗಳನ್ನು ಸಂತೋಷದಿಂದ ಮಾಡು. 10 ನಿನ್ನ ಕೆಲಸಕಾರ್ಯಗಳನ್ನು ನಿನ್ನಿಂದಾದಷ್ಟು ಉತ್ತಮವಾಗಿ ಮಾಡು. ಸಮಾಧಿಯಲ್ಲಿ ನಿನಗೆ ಕೆಲಸವಿಲ್ಲ. ಅಲ್ಲಿ ಆಲೋಚನೆಯಾಗಲಿ ಜ್ಞಾನವಾಗಲಿ ವಿವೇಕವಾಗಲಿ ಇರುವುದಿಲ್ಲ. ನಾವೆಲ್ಲರೂ ಮರಣದ ಆ ಸ್ಥಳಕ್ಕೆ ಹೋಗುತ್ತಿದ್ದೇವೆ.

ಅದೃಷ್ಟವೇ? ನತಾದೃಷ್ಟವೇ?

11 ಇದಲ್ಲದೆ ಲೋಕದಲ್ಲಿ ಇನ್ನೂ ಕೆಲವು ಅನ್ಯಾಯಗಳನ್ನು ಗಮನಿಸಿದ್ದೇನೆ. ಅತಿವೇಗದ ಓಟಗಾರನಿಗೆ ಓಟದಲ್ಲಿ ಯಾವಾಗಲೂ ಗೆಲುವಾಗದು; ಬಲಿಷ್ಠವಾದ ಸೈನ್ಯಕ್ಕೆ ಯುದ್ಧದಲ್ಲಿ ಯಾವಾಗಲೂ ಜಯವಾಗದು; ಜ್ಞಾನಿಗೆ ಯಾವಾಗಲೂ ಆಹಾರ ದೊರಕದು; ಜಾಣನಿಗೆ ಯಾವಾಗಲೂ ಐಶ್ವರ್ಯ ದೊರೆಯದು; ಪ್ರವೀಣರಿಗೆ ಯಾವಾಗಲೂ ಹೊಗಳಿಕೆಬಾರದು; ಸಮಯ ಬಂದಾಗ, ಪ್ರತಿಯೊಬ್ಬರಿಗೂ ಕೇಡುಗಳಾಗುತ್ತವೆ.

12 ಮನುಷ್ಯನಿಗೆ ಮುಂದೆ ಏನಾಗುವುದೋ ತಿಳಿಯದು. ಬಲೆಯಲ್ಲಿ ಸಿಕ್ಕಿಕೊಂಡಿರುವ ಮೀನಿನಂತೆಯೂ ಬೋನಿನಲ್ಲಿ ಸಿಕ್ಕಿಕೊಂಡ ಪಕ್ಷಿಯಂತೆಯೂ ಮನುಷ್ಯನು ತನಗೆ ಸಂಭವಿಸುವ ಕೇಡುಗಳಿಗೆ ಗುರಿಯಾಗುವನು.

ಜ್ಞಾನದ ಶಕ್ತಿ

13 ಇದಲ್ಲದೆ ಲೋಕದಲ್ಲಿ ಜ್ಞಾನದ ಕಾರ್ಯವನ್ನು ಮಾಡುವ ಒಬ್ಬನನ್ನು ನಾನು ಕಂಡೆನು. ಅದು ತುಂಬ ಮುಖ್ಯವಾದದ್ದೆಂದು ನನಗೆ ತೋರಿತು. 14 ಕೆಲವು ಜನರಿದ್ದ ಒಂದು ಚಿಕ್ಕ ನಗರವಿತ್ತು. ಒಬ್ಬ ದೊಡ್ಡ ರಾಜನು ಆ ನಗರದ ಮೇಲೆ ದಂಡೆತ್ತಿ ಬಂದು ಮುತ್ತಿಗೆ ಹಾಕಿದನು. 15 ಆ ನಗರದಲ್ಲಿ ಒಬ್ಬ ಜ್ಞಾನಿ ಇದ್ದನು. ಆದರೆ ಅವನು ಬಡವನಾಗಿದ್ದನು, ಅವನು ತನ್ನ ಜ್ಞಾನದಿಂದ ಆ ನಗರವನ್ನು ಕಾಪಾಡಿದನು; ಆದರೆ ಜನರು ಅವನನ್ನು ಮರೆತೇಬಿಟ್ಟರು. 16 ನಾನು ಹೇಳುವುದೇನೆಂದರೆ, ಜ್ಞಾನವು ಶಕ್ತಿಗಿಂತಲೂ ಉತ್ತಮ. ಅವರು ಆ ಬಡವನ ಜ್ಞಾನವನ್ನು ಮರೆತುಬಿಟ್ಟರೂ ಅವನ ಮಾತುಗಳನ್ನು ಕೇಳದಿದ್ದರೂ ಜ್ಞಾನವು ಉತ್ತಮವಾದದ್ದೇ.

17 ಜ್ಞಾನಿಯ ಮೆಲ್ಲನೆಯ ಮಾತುಗಳು
    ಮೂಢನಾದ ಅಧಿಪತಿಯು ಕೂಗಿಹೇಳಿದ ಮಾತುಗಳಿಗಿಂತಲೂ ಎಷ್ಟೋ ಉತ್ತಮ.
18 ಜ್ಞಾನವು ಯುದ್ಧಾಯುಧಗಳಿಗಿಂತಲೂ ಉತ್ತಮ,
    ಆದರೆ ಮೂಢನು ಒಳ್ಳೆಯದನ್ನು ಹಾಳು ಮಾಡುವನು.

ತೀತನಿಗೆ 1

ದೇವರ ಸೇವಕನಾದ ಮತ್ತು ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನು ಬರೆಯುವ ಪತ್ರ. ದೇವರು ಆರಿಸಿಕೊಂಡ ಜನರ ನಂಬಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಮತ್ತು ಅವರಿಗೆ ಸತ್ಯವನ್ನು ತಿಳಿಸುವುದಕ್ಕಾಗಿ ನನ್ನನ್ನು ಕಳುಹಿಸಲಾಯಿತು. ದೇವರ ಸೇವೆಯನ್ನು ಹೇಗೆ ಮಾಡಬೇಕೆಂಬುದನ್ನು ಆ ಸತ್ಯವು ತೋರ್ಪಡಿಸುತ್ತಿದೆ. ನಿತ್ಯಜೀವದ ಮೇಲೆ ನಮಗಿರುವ ನಿರೀಕ್ಷೆಯಿಂದಲೇ ಆ ನಂಬಿಕೆ ಮತ್ತು ಜ್ಞಾನಗಳು ಉಂಟಾಗಿವೆ. ನಿತ್ಯಜೀವವನ್ನು ಕೊಡುವುದಾಗಿ ದೇವರು ನಮಗೆ ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ್ದನು. ದೇವರು ಸುಳ್ಳು ಹೇಳುವುದಿಲ್ಲ. ತಕ್ಕಕಾಲ ಬಂದಾಗ ದೇವರು ಆ ನಿತ್ಯಜೀವವನ್ನು ಲೋಕಕ್ಕೆ ಪ್ರಕಟಿಸಿದನು. ನನಗೊಪ್ಪಿಸಿರುವ ಈ ಸಂದೇಶವನ್ನು ನಮ್ಮ ರಕ್ಷಕನಾದ ದೇವರ ಆಜ್ಞೆಗನುಸಾರವಾಗಿ ಸಾರುತ್ತಿದ್ದೇನೆ.

ನಾನು ಈ ಪತ್ರವನ್ನು ತೀತನಿಗೆ ಬರೆಯುತ್ತಿದ್ದೇನೆ. ನಮ್ಮೆಲ್ಲರ ನಂಬಿಕೆಯ ಸಂಬಂಧದಲ್ಲಿ ನೀನು ನನಗೆ ನಿಜವಾದ ಮಗನಂತಿರುವೆ.

ನಮ್ಮ ತಂದೆಯಾದ ದೇವರಿಂದಲೂ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಶಾಂತಿಯೂ ಲಭಿಸಲಿ.

ಕ್ರೇತದಲ್ಲಿ ತೀತನ ಕಾರ್ಯ

ಇನ್ನೂ ಪೂರ್ಣವಾಗಿಲ್ಲದ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿಯೂ ಪ್ರತಿಯೊಂದು ಪಟ್ಟಣದಲ್ಲಿ ಸಭಾಹಿರಿಯರನ್ನು ಆರಿಸುವುದಕ್ಕಾಗಿಯೂ ನಾನು ನಿನ್ನನ್ನು ಕ್ರೇತದಲ್ಲಿ ಬಿಟ್ಟು ಬಂದೆನು. ಸಭೆಯ ಹಿರಿಯನಾಗುವವನು ಅಪರಾಧಿಯೆಂಬ ನಿಂದನೆಗೆ ಗುರಿಯಾಗಿರಬಾರದು. ಅವನಿಗೆ ಒಬ್ಬಳೇ ಪತ್ನಿಯಿರಬೇಕು. ಅವನ ಮಕ್ಕಳು ವಿಶ್ವಾಸಿಗಳಾಗಿರಬೇಕು; ಅವರು ದುಷ್ಟರೆಂದಾಗಲಿ ಅವಿಧೇಯರೆಂದಾಗಲಿ ಹೇಳಿಸಿಕೊಂಡಿರಬಾರದು. ಸಭಾಹಿರಿಯನು ದೇವರ ಸೇವೆಯ ಜವಾಬ್ದಾರಿಯನ್ನು ಹೊತ್ತು ಕೊಂಡವನಾಗಿದ್ದಾನೆ. ಆದ್ದರಿಂದ ಅವನು ಅಪರಾಧಿಯೆಂಬ ನಿಂದನೆಗೆ ಒಳಗಾಗಿರಬಾರದು; ಗರ್ವಿಷ್ಠನಾಗಿರಬಾರದು; ಸ್ವಾರ್ಥಿಯಾಗಿರಬಾರದು ಮತ್ತು ಮುಂಗೋಪಿಯಾಗಿರಬಾರದು; ದ್ರಾಕ್ಷಾರಸವನ್ನು ಅತಿಯಾಗಿ ಕುಡಿಯುವವನಾಗಿರಬಾರದು; ಜಗಳಗಂಟನಾಗಿರಬಾರದು; ಜನರನ್ನು ವಂಚಿಸಿ ಶ್ರೀಮಂತನಾಗಲು ಪ್ರಯತ್ನಿಸುವವನಾಗಿರಬಾರದು. ಸಭಾಹಿರಿಯನು ಜನರನ್ನು ತನ್ನ ಮನೆಗೆ ಆಹ್ವಾನಿಸಿ ಅತಿಥಿಸತ್ಕಾರ ಮಾಡಲು ಸಿದ್ಧನಾಗಿರಬೇಕು. ಅವನು ಒಳ್ಳೆಯದನ್ನು ಪ್ರೀತಿಸಬೇಕು; ಜ್ಞಾನಿಯಾಗಿರಬೇಕು; ನ್ಯಾಯವಂತನಾಗಿರಬೇಕು; ಪವಿತ್ರನಾಗಿರಬೇಕು. ಅವನು ತನ್ನನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ನಾವು ಬೋಧಿಸುವ ಸತ್ಯವಾಕ್ಯವನ್ನು ಅವನು ನಂಬಿಗಸ್ತಿಕೆಯಿಂದ ಅನುಸರಿಸಬೇಕು. ಸತ್ಯವಾದ ಮತ್ತು ಯೋಗ್ಯವಾದ ಬೋಧನೆಯಿಂದ ಅವನು ಜನರಿಗೆ ಸಹಾಯ ಮಾಡುವವನಾಗಿರಬೇಕು. ಅವನು ಸತ್ಯಬೋಧನೆಗೆ ವಿರುದ್ಧವಾದ ಜನರಿಗೆ ಅವರ ತಪ್ಪನ್ನು ತೋರಿಸಿಕೊಡುವ ಸಾಮರ್ಥ್ಯ ಉಳ್ಳವನಾಗಿರಬೇಕು.

10 ಅವಿಧೇಯರಾಗಿರುವ ಜನರು ಅನೇಕರಿದ್ದಾರೆ. ಅವರು ನಿರರ್ಥಕವಾದುದನ್ನು ಕುರಿತು ಮಾತನಾಡುತ್ತಲೇ ಇರುತ್ತಾರೆ ಮತ್ತು ಉಳಿದ ಜನರನ್ನು ತಪ್ಪುದಾರಿಗೆ ಎಳೆಯುತ್ತಾರೆ. ಯೆಹೂದ್ಯರಲ್ಲದ ಜನರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವ ಜನರ ಬಗ್ಗೆಯೇ ನಾನು ಹೇಳುತ್ತಿರುವುದು. 11 ಆ ಜನರ ಬೋಧನೆ ತಪ್ಪೆಂದು ನಿರೂಪಿಸಲು ಮತ್ತು ಉಪಯೋಗವಿಲ್ಲದ ಆ ಸಂಗತಿಗಳನ್ನು ಬೋಧಿಸದಂತೆ ಮಾಡಲು ಸಭಾಹಿರಿಯನು ಸಮರ್ಥನಾಗಿರಬೇಕು. ಅವರು ಉಪದೇಶ ಮಾಡಬಾರದ ಸಂಗತಿಗಳನ್ನು ಉಪದೇಶಿಸುತ್ತಾ ಇಡೀ ಕುಟುಂಬಗಳನ್ನೇ ಸಂಪೂರ್ಣವಾಗಿ ನಾಶಗೊಳಿಸುತ್ತಿದ್ದಾರೆ. ಅವರು ಜನರನ್ನು ವಂಚಿಸಿ, ಹಣವನ್ನು ಸಂಪಾದಿಸುವುದಕ್ಕೋಸ್ಕರ ಆ ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ. 12 ಅವರ ಪ್ರವಾದಿಗಳಲ್ಲಿ ಒಬ್ಬನು, “ಕ್ರೇತದ ಜನರು ಯಾವಾಗಲೂ ಸುಳ್ಳು ಹೇಳುತ್ತಾರೆ. ಅವರು ದುಷ್ಟ ಮೃಗಗಳಾಗಿದ್ದಾರೆ; ಸೋಮಾರಿತನದಿಂದ ಕೆಲಸವನ್ನೇ ಮಾಡದೆ ಹೊಟ್ಟೆಬಾಕರಾಗಿದ್ದಾರೆ” ಎಂದು ಹೇಳಿದ್ದಾನೆ. 13 ಪ್ರವಾದಿಯು ಹೇಳಿದ ಮಾತುಗಳು ಸತ್ಯವಾಗಿವೆ. ಆದ್ದರಿಂದ ಅವರು ಮಾಡುತ್ತಿರುವ ತಪ್ಪುಗಳನ್ನು ಅವರಿಗೆ ತಿಳಿಸು. ನೀನು ಅವರ ವಿಷಯದಲ್ಲಿ ಕಟ್ಟುನಿಟ್ಟಾಗಿರಬೇಕು. ಆಗ ಅವರು ತಮ್ಮ ನಂಬಿಕೆಯಲ್ಲಿ ದೃಢವಾಗಿದ್ದು, 14 ಯೆಹೂದ್ಯರ ಕಟ್ಟುಕಥೆಗಳನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸತ್ಯವನ್ನು ಒಪ್ಪಿಕೊಳ್ಳದ ಜನರ ಆಜ್ಞೆಗಳನ್ನು ಅನುಸರಿಸುವುದಿಲ್ಲ.

15 ಪರಿಶುದ್ಧರಾದ ಜನರಿಗೆ ಎಲ್ಲಾ ಸಂಗತಿಗಳು ಪರಿಶುದ್ಧವಾಗಿರುತ್ತವೆ. ಆದರೆ ಪಾಪಗಳನ್ನೇ ತುಂಬಿಕೊಂಡಿರುವ ಮತ್ತು ನಂಬಿಕೆಯಿಲ್ಲದ ಜನರಿಗೆ ಯಾವುದೂ ಪರಿಶುದ್ಧವಾಗಿರುವುದಿಲ್ಲ. ನಿಜವಾಗಿಯೂ, ಅವರ ಮನಸ್ಸುಗಳು ಮತ್ತು ಮನಸ್ಸಾಕ್ಷಿಗಳು ಮಲಿನವಾಗಿವೆ. 16 ದೇವರ ಬಗ್ಗೆ ತಮಗೆ ತಿಳಿದಿದೆಯೆಂದು ಅವರು ಹೇಳಿದರೂ ಅವರು ದೇವರನ್ನು ತಿಳಿದಿಲ್ಲವೆಂದು ಅವರ ಕೆಟ್ಟಕಾರ್ಯಗಳೇ ಸ್ಪಷ್ಟಪಡಿಸುತ್ತವೆ. ಅವರು ಭಯಂಕರವಾದ ಜನರು ಮತ್ತು ಅವಿಧೇಯರು. ಯಾವ ಸತ್ಕಾರ್ಯಗಳನ್ನು ಮಾಡುವುದಕ್ಕೂ ಅವರು ಯೋಗ್ಯರಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International