Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 25

ಭೂಮಿಗೆ ವಿಶ್ರಾಂತಿಯ ಸಮಯ

25 ಯೆಹೋವನು ಮೋಶೆಯೊಡನೆ ಸೀನಾಯಿ ಬೆಟ್ಟದಲ್ಲಿ ಮಾತಾಡಿದನು. ಯೆಹೋವನು ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಹೇಳು: ನಾನು ನಿಮಗೆ ಕೊಡುತ್ತಿರುವ ದೇಶಕ್ಕೆ ನೀವು ಪ್ರವೇಶಿಸುವಿರಿ. ಆ ಸಮಯದಲ್ಲಿ ನೀವು ಭೂಮಿಗೆ ವಿಶ್ರಾಂತಿಯ ಸಮಯವಿರುವುದಕ್ಕೆ ಬಿಡಬೇಕು. ಇದು ಯೆಹೋವನನ್ನು ಸನ್ಮಾನಿಸುವುದಕ್ಕಾಗಿರುವ ವಿಶೇಷವಾದ ವಿಶ್ರಾಂತಿಯ ಸಮಯವಾಗಿರುವುದು. ನೀವು ಆರು ವರ್ಷಗಳು ನಿಮ್ಮ ಹೊಲದಲ್ಲಿ ಬೀಜಬಿತ್ತುವಿರಿ. ಆರು ವರ್ಷಗಳು ನಿಮ್ಮ ದ್ರಾಕ್ಷಿತೋಟಗಳಲ್ಲಿ ಕೆಲಸಮಾಡುವಿರಿ. ಅದರ ಫಲಗಳನ್ನು ಒಟ್ಟುಗೂಡಿಸುವಿರಿ. ಆದರೆ ಏಳನೆಯ ವರ್ಷದಲ್ಲಿ ನೀವು ಭೂಮಿಗೆ ವಿಶ್ರಾಂತಿ ಕೊಡುವಿರಿ. ಇದು ಯೆಹೋವನನ್ನು ಸನ್ಮಾನಿಸಲು ನೇಮಕವಾದ ವಿಶ್ರಾಂತಿಯ ವಿಶೇಷ ಸಮಯವಾಗಿರುವುದು. ನೀವು ನಿಮ್ಮ ಹೊಲಗಳಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷಿತೋಟದ ಕೆಲಸವನ್ನು ಮಾಡಬಾರದು. ಕೊಯ್ಲಿನ ನಂತರ ತನ್ನಷ್ಟಕ್ಕೆ ತಾನೇ ಬೆಳೆದ ಪೈರನ್ನೂ ಕೊಯ್ಯಬಾರದು. ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಬಂದ ದ್ರಾಕ್ಷಿಯನ್ನು ಸಂಗ್ರಹಿಸಬಾರದು. ಭೂಮಿಗೆ ಒಂದು ವರ್ಷದ ವಿಶ್ರಾಂತಿಯಿರುವುದು.

“ಸಬ್ಬತ್ ವರ್ಷದಲ್ಲಿ ಭೂಮಿಯು ತಾನಾಗಿ ಫಲಿಸುವ ಬೆಳೆಯಿಂದ ನಿಮಗೆ ಸಾಕಷ್ಟು ಆಹಾರವಿರುವುದು. ನಿಮ್ಮ ದಾಸದಾಸಿಯರಿಗೂ ಸಾಕಷ್ಟು ಆಹಾರವಿರುವುದು. ನಿಮ್ಮ ದೇಶದಲ್ಲಿ ವಾಸವಾಗಿರುವ ಕೂಲಿಯಾಳುಗಳಿಗೂ ಪರದೇಶಸ್ಥರಿಗೂ ಸಾಕಷ್ಟು ಆಹಾರವಿರುವುದು. ನಿಮ್ಮ ದನಗಳಿಗೂ ಇತರ ಪ್ರಾಣಿಗಳಿಗೂ ತಿನ್ನುವುದಕ್ಕೆ ಸಾಕಷ್ಟು ಆಹಾರವಿರುವುದು.

ಜ್ಯೂಬಿಲಿ-ಬಿಡುಗಡೆಯ ವರ್ಷ

“ಅದಲ್ಲದೆ, ಏಳು ವರ್ಷಗಳ ಏಳು ಗುಂಪುಗಳನ್ನು ಲೆಕ್ಕಿಸಬೇಕು. ಈ ಏಳು ಗುಂಪುಗಳು ಸೇರಿ ನಲವತ್ತೊಂಭತ್ತು ವರ್ಷಗಳಾಗಿರುವವು. ಆ ಸಮಯದಲ್ಲಿ ಭೂಮಿಗೆ ಏಳು ವರ್ಷಗಳ ವಿಶ್ರಾಂತಿಯಿರುವುದು. ದೋಷಪರಿಹಾರಕ ದಿನದಲ್ಲಿ ಅಂದರೆ ಐವತ್ತನೆಯ ವರ್ಷದ ಏಳನೆಯ ತಿಂಗಳ ಹತ್ತನೆಯ ದಿನದಲ್ಲಿ ದೇಶದಲ್ಲೆಲ್ಲಾ ಕೊಂಬನ್ನೂದಿಸಬೇಕು. 10 ಐವತ್ತನೆಯ ವರ್ಷವನ್ನು ನೀವು ವಿಶೇಷ ವರ್ಷವನ್ನಾಗಿ ಮಾಡಬೇಕು. ನಿಮ್ಮ ದೇಶದಲ್ಲಿ ವಾಸಿಸುವ ಜನರೆಲ್ಲರಿಗೆ ನೀವು ಸ್ವಾತಂತ್ರ್ಯವನ್ನು ಘೋಷಿಸಬೇಕು. ಈ ಸಮಯವು ‘ಜ್ಯೂಬಿಲಿ’ ಎಂಬುದಾಗಿ ಕರೆಯಲ್ಪಡುವುದು. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಸ್ವಾಸ್ತ್ಯಕ್ಕೆ ಹಿಂತಿರುಗಿ ಹೋಗುವನು; ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಕುಟುಂಬಕ್ಕೆ ಹಿಂತಿರುಗುವನು. 11 ಐವತ್ತನೆಯ ವರ್ಷವು ನಿಮಗೆ ವಿಶೇಷವಾದ ಆಚರಣೆಯಾಗಿರುವುದು. ಬೀಜವನ್ನು ಬಿತ್ತಬೇಡಿರಿ. ತನ್ನಷ್ಟಕ್ಕೆ ತಾನೇ ಬೆಳೆದ ಪೈರುಗಳನ್ನು ಕೊಯ್ಯಬೇಡಿರಿ. ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಿಂದ ದ್ರಾಕ್ಷಿಯನ್ನು ಸಂಗ್ರಹಿಸಬೇಡಿರಿ. 12 ಆ ವರ್ಷ ಜ್ಯೂಬಿಲಿಯಾಗಿದೆ. ಅದು ನಿಮಗೆ ಪವಿತ್ರ ಸಮಯವಾಗಿರುವುದು. ಹೊಲದಿಂದ ದೊರಕುವ ಪೈರುಗಳು ನಿಮಗೆ ಆಹಾರವಾಗಿರುವುದು. 13 ಜ್ಯೂಬಿಲಿ ವರ್ಷದಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಸ್ವಾಸ್ತ್ಯಕ್ಕೆ ಹೋಗುವನು.

14 “ಭೂಮಿಯನ್ನು ನೆರೆಯವನಿಗೆ ಮಾರುವಾಗ ಅಥವಾ ಅವನಿಂದ ಭೂಮಿಯನ್ನು ಕೊಂಡುಕೊಳ್ಳುವಾಗ ಮೋಸ ಮಾಡಬೇಡಿ. 15 ನಿಮ್ಮ ನೆರೆಯವನ ಭೂಮಿಯನ್ನು ಕೊಂಡುಕೊಳ್ಳಲು ನೀವು ಬಯಸುವುದಾದರೆ, ಆಗ ಕಳೆದ ಜ್ಯೂಬಿಲಿ ವರ್ಷದಿಂದ ಈಗ ಎಷ್ಟು ವರ್ಷವಾಯಿತೆಂದು ಲೆಕ್ಕಿಸಿ ಸರಿಯಾದ ಬೆಲೆಯನ್ನು ನಿರ್ಣಯಿಸಿರಿ. ನೀವು ಭೂಮಿಯನ್ನು ಮಾರುವುದಾದರೆ, ಪೈರುಗಳನ್ನು ಕೊಯ್ಯುವುದಕ್ಕಿರುವ ವರ್ಷಗಳನ್ನು ಲೆಕ್ಕಿಸಿ ಸರಿಯಾದ ಬೆಲೆಯನ್ನು ನಿರ್ಣಯಿಸಿರಿ. 16 ಇನ್ನೂ ಅನೇಕ ವರ್ಷಗಳು ಇದ್ದರೆ, ಬೆಲೆ ಹೆಚ್ಚಾಗಿರುವುದು. ವರ್ಷಗಳು ಕಡಿಮೆಯಾಗಿದ್ದರೆ, ಬೆಲೆ ಕಡಿಮೆಯಾಗಿರುವುದು. ಯಾಕೆಂದರೆ ನಿಮ್ಮ ನೆರೆಯವನು ನಿಜವಾಗಿ ಕೇವಲ ಕೆಲವೇ ಪೈರುಗಳನ್ನು ನಿಮಗೆ ಮಾರುತ್ತಿದ್ದಾನೆ. ಮುಂದಿನ ಜ್ಯೂಬಿಲಿ ವರ್ಷದಲ್ಲಿ ಭೂಮಿಯು ತಿರುಗಿ ಅವನ ಕುಟುಂಬಕ್ಕೆ ಸೇರುವುದು. 17 ನೀವು ಒಬ್ಬರಿಗೊಬ್ಬರು ಮೋಸ ಮಾಡಬಾರದು. ನೀವು ದೇವರಿಗೆ ಭಯಪಡಬೇಕು! ನಾನೇ ನಿಮ್ಮ ದೇವರಾದ ಯೆಹೋವನು!

18 “ನನ್ನ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಜ್ಞಾಪಕಮಾಡಿಕೊಳ್ಳಿರಿ. ಅವುಗಳಿಗೆ ವಿಧೇಯರಾಗಿರಿ. ಆಗ ನೀವು ನಿಮ್ಮ ದೇಶದಲ್ಲಿ ಸುರಕ್ಷಿತವಾಗಿ ವಾಸಿಸುವಿರಿ. 19 ಮತ್ತು ಭೂಮಿಯು ಒಳ್ಳೆಯ ಪೈರುಗಳನ್ನು ಕೊಡುವುದು. ಆಗ ನಿಮಗೆ ಬೇಕಾದಷ್ಟು ಆಹಾರವಿರುವುದು ಮತ್ತು ನೀವು ದೇಶದಲ್ಲಿ ಸುರಕ್ಷಿತವಾಗಿ ಜೀವಿಸುವಿರಿ.

20 “ಒಂದುವೇಳೆ ನೀವು, ‘ನಾವು ಬೀಜಗಳನ್ನು ಬಿತ್ತದಿದ್ದರೆ ಅಥವಾ ಪೈರುಗಳನ್ನು ಸಂಗ್ರಹಿಸದಿದ್ದರೆ ಏಳನೆಯ ವರ್ಷದಲ್ಲಿ ನಮಗೆ ತಿನ್ನಲು ಏನೂ ಇರುವುದಿಲ್ಲ’ ಎಂದು ಹೇಳಬಹುದು. 21 ಚಿಂತೆ ಮಾಡಬೇಡಿರಿ! ಆರನೆಯ ವರ್ಷದಲ್ಲಿ ನನ್ನ ಆಶೀರ್ವಾದವು ನಿಮ್ಮ ಮೇಲಿರುವುದು. ಆ ವರ್ಷ ಭೂಮಿಯಲ್ಲಿ ಬೆಳೆದ ಪೈರುಗಳು ಮೂರು ವರ್ಷಗಳ ಬೆಳೆಯಷ್ಟಾಗುವದು. 22 ನೀವು ಎಂಟನೆಯ ವರ್ಷದಲ್ಲಿ ಬೀಜ ಬಿತ್ತಿದಾಗ, ನೀವು ಇನ್ನೂ ಹಳೆಯ ಬೆಳೆಯನ್ನು ತಿನ್ನುತ್ತಿರುವಿರಿ. ಒಂಭತ್ತನೆಯ ವರ್ಷದವರೆಗೆ ಅಂದರೆ ಎಂಟನೆಯ ವರ್ಷದಲ್ಲಿ ಬೀಜ ಫಸಲು ಕೊಡುವವರೆಗೆ ನೀವು ಹಳೆಯ ಬೆಳೆಯನ್ನು ತಿನ್ನುವಿರಿ.

ಆಸ್ತಿಯ ನಿಯಮಗಳು

23 “ಭೂಮಿಯು ನನಗೆ ಸೇರಿದ್ದು. ಆದ್ದರಿಂದ ನೀವು ನಿಜವಾಗಿಯೂ ಅದನ್ನು ಶಾಶ್ವತವಾಗಿ ಮಾರುವುದಕ್ಕಾಗುವುದಿಲ್ಲ. ನೀವು ಕೇವಲ ನನ್ನ ಆಶ್ರಯದಲ್ಲಿ ವಾಸಿಸುತ್ತಿರುವ ಪರದೇಶಸ್ಥರೂ ಪ್ರವಾಸಿಗಳೂ ಆಗಿದ್ದೀರಿ. 24 ಜನರು ತಮ್ಮ ಭೂಮಿಯನ್ನು ಮಾರಿದರೆ ಅದನ್ನು ಬಿಡಿಸಿಕೊಳ್ಳುವ ಹಕ್ಕು ಅವರ ಕುಟುಂಬಕ್ಕಿದೆ. 25 ನಿಮ್ಮ ದೇಶದಲ್ಲಿ ಒಬ್ಬನು ತನ್ನ ಆಸ್ತಿಯನ್ನು ಮಾರುವಷ್ಟು ಬಡವನಾದರೆ ಅವನ ಹತ್ತಿರದ ಸಂಬಂಧಿಯು ತನ್ನ ಸಂಬಂಧಿಯ ಆಸ್ತಿಯನ್ನು ಮರಳಿ ಕೊಂಡುಕೊಳ್ಳಬೇಕು. 26 ತನ್ನ ಭೂಮಿಯನ್ನು ಮರಳಿ ಪಡೆಯಲು ಒಬ್ಬನಿಗೆ ಹತ್ತಿರದ ಸಂಬಂಧಿ ಇಲ್ಲದಿರಬಹುದು. ಆದರೆ ತನ್ನ ಭೂಮಿಯನ್ನು ತನಗಾಗಿ ಮರಳಿ ಪಡೆಯುಲು ಅವನು ಸಾಕಷ್ಟು ಹಣವನ್ನು ಪಡೆಯಬಹುದು. 27 ಆಗ ಅವನು ಭೂಮಿಯನ್ನು ಮಾರಿ ಎಷ್ಟು ವರ್ಷವಾಯಿತೆಂದು ಲೆಕ್ಕ ಮಾಡಬೇಕು. ಅವನು ಆ ಸಂಖ್ಯೆಯನ್ನು ಉಪಯೋಗಿಸಿ ಭೂಮಿಗೆ ಕೊಡತಕ್ಕ ಹಣವನ್ನು ನಿರ್ಧರಿಸಬೇಕು. ಬಳಿಕ ಅವನು ಭೂಮಿಯನ್ನು ಮರಳಿ ಕೊಂಡುಕೊಳ್ಳಬೇಕು. ಆಗ ಭೂಮಿಯು ಮತ್ತೆ ಅವನ ಸ್ವತ್ತಾಗುವುದು. 28 ಆದರೆ ಭೂಮಿಯನ್ನು ಮರಳಿ ಕೊಂಡುಕೊಳ್ಳಲು ಬೇಕಾದಷ್ಟು ಹಣ ಅವನಿಗೆ ದೊರಕದಿದ್ದರೆ, ಅವನು ಆ ಭೂಮಿಯನ್ನು ಯಾರಿಗೆ ಮಾರಿದ್ದಾನೋ ಅವನ ವಶದಲ್ಲಿ ಜ್ಯೂಬಿಲಿ ವರ್ಷದವರೆಗೆ ಇಡಬೇಕು. ಬಳಿಕ ಆ ವಿಶೇಷ ಬಿಡುಗಡೆಯ ಕಾಲದಲ್ಲಿ ಭೂಮಿಯು ಮೊದಲಿನ ಯಜಮಾನನ ಕುಟುಂಬಕ್ಕೆ ಮರಳಿ ಹೋಗುವುದು. ಹೀಗಾಗಿ ಆಸ್ತಿಯು ಮತ್ತೆ ಅದರ ಸರಿಯಾದ ಕುಟುಂಬಕ್ಕೆ ಸೇರುವುದು.

29 “ಯಾವನಾದರೂ ಪೌಳಿಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯನ್ನು ಮಾರಿದರೆ, ಅದನ್ನು ಮಾರಿದ ದಿನ ಮೊದಲುಗೊಂಡು ಒಂದು ವರ್ಷ ಪೂರ್ಣಗೊಳ್ಳುವವರೆಗೆ ಹಿಂದಕ್ಕೆ ಪಡೆಯುವ ಹಕ್ಕು ಅವನಿಗೆ ಇನ್ನೂ ಇರುತ್ತದೆ. ಮನೆಯನ್ನು ಬಿಡಿಸಿಕೊಳ್ಳುವ (ಮರಳಿ ಪಡೆಯುವ) ಹಕ್ಕು ಒಂದು ವರ್ಷದವರೆಗೆ ಇರುವುದು. 30 ಆದರೆ ಮಾಲಿಕನು ಒಂದು ವರ್ಷ ಪೂರ್ಣಗೊಳ್ಳುವ ಮೊದಲು ಮನೆಯನ್ನು ಮರಳಿ ಕೊಂಡುಕೊಳ್ಳದಿದ್ದರೆ, ಆಗ ಪೌಳಿಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯು ಅದನ್ನು ಕೊಂಡುಕೊಂಡವನಿಗೂ ಅವನ ಸಂತತಿಯವರಿಗೂ ಸೇರುವುದು. ಮನೆಯು ಜ್ಯೂಬಿಲಿ ವರ್ಷದಲ್ಲಿ ಅದರ ಮೊದಲಿನ ಯಜಮಾನನಿಗೆ ಸೇರುವುದಿಲ್ಲ. 31 ಗೋಡೆಗಳಿಲ್ಲದ ಪಟ್ಟಣಗಳನ್ನು ಬಯಲಿನ ಹೊಲಗಳಂತೆ ಪರಿಗಣಿಸಬೇಕು. ಆದ್ದರಿಂದ ಆ ಸಣ್ಣ ಪಟ್ಟಣಗಳಲ್ಲಿ ಕಟ್ಟಿದ ಮನೆಗಳು ಜ್ಯೂಬಿಲಿ ವರ್ಷದಲ್ಲಿ ಅವುಗಳ ಮೊದಲಿನ ಯಜಮಾನನಿಗೆ ಮರುಳಿ ಹೋಗುತ್ತವೆ.

32 “ಆದರೆ ಲೇವಿಯರ ಪಟ್ಟಣಗಳ ಕುರಿತು ಹೇಳುವುದಾದರೆ, ಲೇವಿಯರು ತಮಗೆ ಸೇರಿದ ಪಟ್ಟಣಗಳಲ್ಲಿರುವ ತಮ್ಮ ಮನೆಗಳನ್ನು ಯಾವಾಗ ಬೇಕಾದರೂ ಹಿಂದಕ್ಕೆ ಕೊಂಡುಕೊಳ್ಳಬಹುದು. 33 ಒಬ್ಬನು ಲೇವಿಯಿಂದ ಮನೆಯನ್ನು ಕೊಂಡುಕೊಂಡರೆ, ಲೇವಿಯರ ಪಟ್ಟಣದಲ್ಲಿರುವ ಆ ಮನೆಯು ಜ್ಯೂಬಿಲಿ ಸಮಯದಲ್ಲಿ ತಿರುಗಿ ಲೇವಿಯರಿಗೆ ಸೇರುವುದು. ಯಾಕೆಂದರೆ ಲೇವಿಯರ ಪಟ್ಟಣಗಳಲ್ಲಿರುವ ಮನೆಗಳು ಲೇವಿ ಕುಟುಂಬಕ್ಕೆ ಸೇರಿದ್ದಾಗಿವೆ. ಇಸ್ರೇಲ್ ಜನರು ಆ ಪಟ್ಟಣಗಳನ್ನು ಲೇವಿಯರಿಗೆ ಕೊಟ್ಟಿದ್ದಾರೆ. ಅವು ಇಸ್ರೇಲರ ಮಧ್ಯದಲ್ಲಿರುವ ಲೇವಿಯರ ಆಸ್ತಿಯಾಗಿವೆ. 34 ಅಲ್ಲದೆ ಲೇವಿಯರ ಪಟ್ಟಣಗಳ ಸುತ್ತಲಿರುವ ಹೊಲಗಳನ್ನು ಮತ್ತು ಹುಲ್ಲುಗಾವಲುಗಳನ್ನು ಮಾರಬಾರದು. ಆ ಹೊಲಗಳು ಎಂದೆಂದಿಗೂ ಲೇವಿಯರಿಗೆ ಸೇರಿವೆ.

ಗುಲಾಮರ ಯಜಮಾನರು ಅನುಸರಿಸತಕ್ಕ ನಿಯಮಗಳು

35 “ಒಂದುವೇಳೆ ನಿಮ್ಮ ಸ್ವದೇಶದ ವ್ಯಕ್ತಿಯೊಬ್ಬನು ಬಹಳ ಬಡವನಾಗಿ ಗತಿಹೀನನಾಗಬಹುದು. ಅವನು ನಿಮ್ಮ ಮಧ್ಯದಲ್ಲಿ ಪ್ರವಾಸಿಯಂತೆ[a] ವಾಸಿಸಲು ನೀವು ಅವಕಾಶ ಕೊಡಬೇಕು. 36 ಅವನಿಗೆ ನೀವು ಸಾಲ ಕೊಡುವ ಹಣದ ಮೇಲೆ ಬಡ್ಡಿಯನ್ನು ಹೊರಿಸಬಾರದು. ದೇವರನ್ನು ಗೌರವಿಸಿರಿ. ನಿಮ್ಮ ಸ್ವಂತ ದೇಶದವನು[b] ನಿಮ್ಮ ಸಂಗಡ ವಾಸಿಸಲಿ. 37 ನೀವು ಅವನಿಗೆ ಸಾಲಕೊಡುವ ಹಣದ ಮೇಲೆ ಬಡ್ಡಿಯನ್ನು ಹೊರಿಸಬಾರದು. ನೀವು ಅವನಿಗೆ ಮಾರುವ ಆಹಾರಪದಾರ್ಥಗಳಿಂದ ಲಾಭವನ್ನು ಗಳಿಸಲು ಪ್ರಯತ್ನಿಸಬಾರದು. 38 ನಾನೇ ನಿಮ್ಮ ದೇವರಾದ ಯೆಹೋವನು! ನಾನು ನಿಮಗೆ ಕಾನಾನ್ ದೇಶವನ್ನು ಕೊಟ್ಟು ನಿಮ್ಮ ದೇವರಾಗಿರಲು ನಿಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದೆನು.

39 “ಒಂದುವೇಳೆ ನಿಮ್ಮ ಸ್ವದೇಶಸ್ಥನು ಬಹಳ ಬಡವನಾಗಿ ತನ್ನನ್ನು ಗುಲಾಮನನ್ನಾಗಿ ನಿಮಗೆ ಮಾರಿಕೊಂಡರೆ ನೀವು ಅವನನ್ನು ಗುಲಾಮನನ್ನಾಗಿ ದುಡಿಸಬಾರದು. 40 ಅವನು ಕೂಲಿಯಾಳಿನಂತೆಯೂ ಜ್ಯೂಬಿಲಿ ವರ್ಷದವರೆಗೆ ನಿಮ್ಮ ಮಧ್ಯದಲ್ಲಿ ಪ್ರವಾಸಿಯಂತೆಯೂ ಇರುವನು. 41 ಬಳಿಕ ನಿಮ್ಮನ್ನು ಬಿಟ್ಟುಹೋಗಲು ಅವನಿಗೆ ಹಕ್ಕಿದೆ. ಅವನು ತನ್ನ ಮಕ್ಕಳನ್ನು ಕರೆದುಕೊಂಡು ತನ್ನ ಕುಟುಂಬಕ್ಕೆ ಮರಳಿ ಹೋಗಬಹುದು. ಅವನು ತನ್ನ ಪೂರ್ವಿಕರ ಸ್ವತ್ತನ್ನು ಹಿಂದಕ್ಕೆ ಪಡೆಯಬಹುದು. 42 ಯಾಕೆಂದರೆ ಅವರು ನನ್ನ ಸೇವಕರಾಗಿದ್ದಾರೆ. ನಾನು ಅವರನ್ನು ಈಜಿಪ್ಟಿನಲ್ಲಿ ಗುಲಾಮತನದಿಂದ ಹೊರಗೆ ಬರಮಾಡಿದೆನು; ಅವರು ಮತ್ತೆ ಗುಲಾಮರಾಗಬಾರದು. 43 ನೀವು ಈ ವ್ಯಕ್ತಿಗೆ ಕ್ರೂರ ಯಾಜಮಾನರಾಗಿರಬಾರದು. ನೀವು ನಿಮ್ಮ ದೇವರನ್ನು ಗೌರವಿಸಬೇಕು.

44 “ನಿಮ್ಮ ಸುತ್ತಲಿರುವ ಬೇರೆ ಜನಾಂಗಗಳಿಂದ ನೀವು ಸೇವಕಸೇವಕಿಯರನ್ನು ಖರೀದಿ ಮಾಡಬಹುದು. 45 ಅಲ್ಲದೆ ನಿಮ್ಮ ದೇಶದಲ್ಲಿ ವಾಸಿಸುವ ಪರದೇಶಸ್ಥರಿಂದ ಮಕ್ಕಳನ್ನು ಗುಲಾಮರನ್ನಾಗಿ ಕೊಂಡುಕೊಳ್ಳಬಹುದು. ಗುಲಾಮರಾದ ಮಕ್ಕಳು ನಿಮಗೆ ಸೇರಿದವರಾಗಿದ್ದಾರೆ. 46 ಗುಲಾಮರಾದ ಈ ಪರದೇಶಸ್ಥರನ್ನು ನೀವು ಸತ್ತನಂತರ ನಿಮ್ಮ ಮಕ್ಕಳಿಗೆ ಕೊಡಬೇಕು. ಹೀಗೆ ಅವರು ನಿಮ್ಮ ಮಕ್ಕಳಿಗೆ ಸೇರಿದವರಾಗುವರು. ಅವರು ಎಂದೆಂದೂ ನಿಮ್ಮ ಗುಲಾಮರಾಗಿರುವರು. ನಿಮ್ಮ ಈ ಪರದೇಶಸ್ಥರನ್ನು ಗುಲಾಮರನ್ನಾಗಿ ಮಾಡಿಕೊಳ್ಳಬಹುದು. ಆದರೆ ನೀವು ಇಸ್ರೇಲ್ ಜನರಾದ ನಿಮ್ಮ ಸ್ವಂತ ಸಹೋದರರ ಮೇಲೆ ಕ್ರೂರವಾದ ಒಡೆಯರಾಗಿರಬಾರದು.

47 “ಒಂದುವೇಳೆ ನಿಮ್ಮ ಸ್ವದೇಶದವನು ಬಡವನಾಗಿದ್ದು, ನಿಮ್ಮ ಮಧ್ಯದಲ್ಲಿ ವಾಸಿಸಲು ಬಂದ ಐಶ್ವರ್ಯವಂತನಾದ ಪರದೇಶಸ್ಥನಿಗಾಗಲಿ ಅಥವಾ ಅವನ ಕುಟುಂಬದ ಸದಸ್ಯನಿಗಾಗಲಿ ತನ್ನನ್ನು ಮಾರಿಕೊಂಡಿದ್ದರೂ ಅವನಿಗೆ ತನ್ನನ್ನು ಬಿಡಿಸಿಕೊಳ್ಳುವ ಹಕ್ಕಿದೆ. 48 ಅವನ ಸಂಬಂಧಿಕರಲ್ಲಿ ಯಾರಾದರೂ ಅವನನ್ನು ಮರಳಿ ಕೊಂಡುಕೊಳ್ಳಬಹುದು. 49 ಅವನ ದೊಡ್ಡಪ್ಪನಾಗಲಿ ಚಿಕ್ಕಪ್ಪನಾಗಲಿ ಅವರ ಮಕ್ಕಳಾಗಲಿ ಅವನನ್ನು ಮರಳಿ ಕೊಂಡುಕೊಳ್ಳಬಹುದು. ಅವನ ಹತ್ತಿರದ ಸಂಬಂಧಿಯು ಅವನನ್ನು ಕೊಂಡುಕೊಳ್ಳಬಹುದು. ಅವನಿಗೆ ಸಾಕಷ್ಟು ಹಣ ದೊರಕಿದರೆ, ಅವನು ತಾನೇ ಹಣ ಕೊಟ್ಟು ಮತ್ತೆ ಸ್ವತಂತ್ರನಾಗಬಹುದು.

50 “ನೀವು ಬೆಲೆಯನ್ನು ತೀರ್ಮಾನಿಸುವುದು ಹೇಗೆಂದರೆ: ಅವನು ತನ್ನನ್ನು ಪರದೇಶಸ್ಥನಿಗೆ ಮಾರಿಕೊಂಡ ದಿನದಿಂದ ಹಿಡಿದು ಮುಂದಿನ ಜ್ಯೂಬಿಲಿ ವರ್ಷದವರೆಗೆ ವರ್ಷಗಳನ್ನು ಲೆಕ್ಕಿಸಿ ಬೆಲೆಯನ್ನು ತೀರ್ಮಾನಿಸಿರಿ. ಯಾಕೆಂದರೆ ಅವನು ತನ್ನನ್ನು ಕೇವಲ ಕೆಲವು ವರ್ಷಗಳವರೆಗೆ ಕೂಲಿಗೆ ಒಪ್ಪಿಸಿದ್ದಾನೆ. 51 ಜ್ಯೂಬಿಲಿ ವರ್ಷಕ್ಕೆ ಇನ್ನೂ ಹೆಚ್ಚು ವರ್ಷಗಳು ಇರುವುದಾದರೆ, ಅವನು ಬಹಳ ಹೆಚ್ಚು ಹಣವನ್ನು ಕೊಡಬೇಕಾಗುತ್ತದೆ. 52 ಜ್ಯೂಬಿಲಿ ವರ್ಷಕ್ಕೆ ಕೇವಲ ಸ್ವಲ್ಪ ವರ್ಷಗಳು ಉಳಿದಿದ್ದರೆ, ಸ್ವಲ್ಪ ಹಣವನ್ನು ಕೊಡಬೇಕಾಗುತ್ತದೆ. 53 ಆದರೆ ಅವನು ಪರದೇಶಸ್ಥನೊಡನೆ ಪ್ರತಿ ವರ್ಷ ಕೂಲಿಯಾಳಾಗಿ ವಾಸಿಸುವನು. ಪರದೇಶಸ್ಥನು ಆ ವ್ಯಕ್ತಿಯ ಮೇಲೆ ಕ್ರೂರ ಯಜಮಾನನಾಗಿ ಇರುವುದಕ್ಕೆ ಬಿಡಬೇಡಿರಿ.

54 “ಯಾರೂ ಅವನನ್ನು ಬಿಡಿಸದಿದ್ದರೂ ಜ್ಯೂಬಿಲಿ ವರ್ಷದಲ್ಲಿ ಅವನು ಮತ್ತು ಅವನ ಮಕ್ಕಳು ಬಿಡುಗಡೆ ಹೊಂದುವರು. 55 ಯಾಕೆಂದರೆ, ಇಸ್ರೇಲರು ನನ್ನ ಸೇವಕರಾಗಿದ್ದಾರೆ. ನಾನು ಅವರನ್ನು ಈಜಿಪ್ಟಿನಲ್ಲಿ ದಾಸತ್ವದಿಂದ ಬಿಡಿಸಿದ್ದರಿಂದ ಅವರು ನನ್ನ ದಾಸರಾಗಿದ್ದಾರೆ. ನಾನೇ ನಿಮ್ಮ ದೇವರಾದ ಯೆಹೋವನು!

ಕೀರ್ತನೆಗಳು 32

ರಚನೆಗಾರ: ದಾವೀದ.

32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
    ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
    ಅವನೇ ಧನ್ಯನು.
ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
    ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
    ಅವನೇ ಧನ್ಯನು.

ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
    ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
    ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
    ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.

ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
    ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
    ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
    ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
ನೀನು ನನಗೆ ಆಶ್ರಯದುರ್ಗವಾಗಿರುವೆ.
    ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
    ಮಾರ್ಗದರ್ಶನ ನೀಡುವೆನು;
    ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
    ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”

10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
    ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
    ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.

ಪ್ರಸಂಗಿ 8

ಜ್ಞಾನ ಮತ್ತು ಶಕ್ತಿ

ಜ್ಞಾನಿಯು ವಿಷಯಗಳನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ವಿವರಿಸುವಂತೆ ಬೇರೆ ಯಾರೂ ಅರ್ಥಮಾಡಿಕೊಳ್ಳಲಾರರು ಮತ್ತು ವಿವರಿಸಲಾರರು. ಜ್ಞಾನಿಯ ಮುಖವು ಜ್ಞಾನದಿಂದ ಪ್ರಕಾಶಮಾನವಾಗಿರುವುದು; ಅದು ವ್ಯಸನದ ಮುಖವನ್ನು ಸಂತೋಷದ ಮುಖವನ್ನಾಗಿ ಮಾರ್ಪಡಿಸುವುದು.

ನೀವು ದೇವರ ಮೇಲೆ ಆಣೆಯಿಟ್ಟಿರುವುದರಿಂದ ರಾಜನ ಆಜ್ಞೆಗೆ ವಿಧೇಯರಾಗಿರಬೇಕು. ರಾಜನಿಗೆ ನಿಮ್ಮ ಆಲೋಚನೆಗಳನ್ನು ತಿಳಿಸಲು ಭಯಪಡಬಾರದು; ನೀವು ಯಾವ ತಪ್ಪಿಗೂ ಬೆಂಬಲ ಕೊಡಬಾರದು. ಆದರೆ ರಾಜನು ತನಗೆ ಇಷ್ಟಬಂದಂತೆ ಆಜ್ಞೆಗಳನ್ನು ಕೊಡುತ್ತಾನೆಂಬುದು ಜ್ಞಾಪಕದಲ್ಲಿರಲಿ. ಆಜ್ಞೆಗಳನ್ನು ಕೊಡಲು ರಾಜನಿಗೆ ಅಧಿಕಾರವಿದೆ. ಅವನನ್ನು ಬಲವಂತ ಮಾಡಲು ಯಾರಿಗೂ ಸಾಧ್ಯವಿಲ್ಲ. ರಾಜನ ಆಜ್ಞೆಗೆ ವಿಧೇಯನಾಗುವವನು ಸುರಕ್ಷಿತವಾಗಿರುವನು. ಆದರೆ ಜ್ಞಾನಿಯು ಸೂಕ್ತ ಸಮಯದಲ್ಲಿ ಸೂಕ್ತ ಕಾರ್ಯವನ್ನು ಮಾಡಲು ತಿಳಿದಿದ್ದಾನೆ.

ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವೂ ಸೂಕ್ತ ಮಾರ್ಗವೂ ಮನುಷ್ಯನಿಗೆ ಇವೆ. ಮನುಷ್ಯನು ತನ್ನ ಅನೇಕ ತೊಂದರೆಗಳಲ್ಲಿಯೂ ಅವುಗಳಿಗೆ ತಕ್ಕಂತೆ ನಿರ್ಧಾರವನ್ನು ಕೈಕೊಳ್ಳಬೇಕು. ಯಾಕೆಂದರೆ ಮುಂದೆ ಏನಾಗುವುದೋ ಅವನಿಗೆ ತಿಳಿಯದು. ಮುಂದೆ ಅದು ಹೇಗೆ ಆಗುವುದೋ ಎಂದು ಅವನಿಗೆ ತಿಳಿಸುವವರು ಯಾರು ಇಲ್ಲ.

ಯಾರಿಗೂ ತಮ್ಮ ಆತ್ಮವನ್ನು ತಡೆದು ನಿಲ್ಲಿಸಿಕೊಳ್ಳುವ ಶಕ್ತಿ ಇಲ್ಲ. ಯಾರಿಗೂ ತಮ್ಮ ಮರಣವನ್ನು ತಡೆದು ನಿಲ್ಲಿಸುವ ಶಕ್ತಿಯಿಲ್ಲ. ಯುದ್ಧಕಾಲದಲ್ಲಿ ಸೈನಿಕರಿಗೆ ರಜೆ ದೊರೆಯುವುದಿಲ್ಲ. ಅದೇ ರೀತಿಯಲ್ಲಿ, ಪಾಪವು ಪಾಪಿಯನ್ನು ಬಿಟ್ಟುಹೋಗುವುದಿಲ್ಲ.

ನಾನು ಇವುಗಳನ್ನೆಲ್ಲಾ ನೋಡಿ ಈ ಲೋಕದ ಕಾರ್ಯಗಳನ್ನು ಪರಿಶೀಲಿಸಿದೆನು. ಮನುಷ್ಯರು ಇನ್ನೊಬ್ಬರ ಮೇಲೆ ಅಧಿಪತಿಗಳಾಗಿರಲು ಪ್ರಯಾಸಪಡುತ್ತಾರೆ. ಇದು ಅವರಿಗೆ ಹಾನಿಕರ.

10 ಇದಲ್ಲದೆ ದುಷ್ಟರಿಗೆ ಶವಸಂಸ್ಕಾರವನ್ನು ವೈಭವದಿಂದ ಮಾಡುವುದನ್ನು ನಾನು ನೋಡಿದ್ದೇನೆ. ಶವಸಂಸ್ಕಾರವಾದ ಮೇಲೆ ಜನರು ಸತ್ತುಹೋದ ದುಷ್ಟರನ್ನು ಹೊಗಳುತ್ತಾ ತಮ್ಮ ಮನೆಗಳಿಗೆ ಹೋದರು; ನೀತಿವಂತರಾದರೋ ಪರಿಶುದ್ಧ ಸ್ಥಾನದಿಂದ ತೊಲಗಬೇಕಾಯಿತು. ನಗರದಲ್ಲಿ ಅವರ ಜ್ಞಾಪಕವೇ ಇಲ್ಲವಾಯಿತು. ಇದು ಸಹ ವ್ಯರ್ಥ.

ನ್ಯಾಯ, ಪ್ರತಿಫಲ ಮತ್ತು ದಂಡನೆ

11 ಜನರ ಅಪರಾಧಗಳಿಗೆ ದಂಡನೆಯು ಕೂಡಲೇ ಬರದಿರುವುದರಿಂದ ದುಷ್ಕೃತ್ಯಗಳನ್ನು ಮಾಡಲು ಇತರರು ಸಹ ಪ್ರೇರಿತರಾಗುತ್ತಾರೆ.

12 ಒಬ್ಬ ಪಾಪಿಯು ನೂರು ದುಷ್ಕೃತ್ಯಗಳನ್ನು ಮಾಡಿ ಬಹುಕಾಲ ಬದುಕಬಹುದು. ಆದರೆ ದೇವರಲ್ಲಿ ಭಯಭಕ್ತಿಯುಳ್ಳವರಿಗೆ ಅದಕ್ಕಿಂತಲೂ ಮೇಲೇ ಆಗುವುದು. 13 ದುಷ್ಟರಿಗೆ ದೇವರಲ್ಲಿ ಭಯಭಕ್ತಿಯಿಲ್ಲದಿರುವುದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ; ಅವರ ಜೀವಿತವು ಸಾಯಂಕಾಲದ ನೆರಳಿನಂತೆ ಇಲ್ಲವಾಗುವುದು.

14 ಲೋಕದಲ್ಲಿ ಮತ್ತೊಂದು ಅನ್ಯಾಯವಿದೆ. ದುಷ್ಟರಿಗೆ ಕೇಡಾಗಬೇಕು, ಕೆಟ್ಟವುಗಳು ಕೆಟ್ಟ ಜನರಿಗೆ ಆಗಬೇಕು. ನೀತಿವಂತರಿಗೆ ಒಳ್ಳೆಯದಾಗಬೇಕು. ಆದರೆ ಕೆಲವು ಸಲ ನೀತಿವಂತರಿಗೆ ಕೇಡಾಗುತ್ತದೆ. ದುಷ್ಟರಿಗೆ ಒಳ್ಳೆಯದಾಗುತ್ತದೆ. ಅದು ನ್ಯಾಯವಲ್ಲ. 15 ಆದ್ದರಿಂದ ಜೀವನದಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ಸಂತೋಷಪಡುವುದೇ ಉತ್ತಮವೆಂದು ನಿರ್ಧರಿಸಿದೆನು. ಯಾಕೆಂದರೆ ದೇವರು ಮನುಷ್ಯನಿಗೆ ಈ ಲೋಕದಲ್ಲಿ ಅನುಗ್ರಹಿಸಿರುವ ಪ್ರಯಾಸಕರ ಕೆಲಸಗಳಲ್ಲಿಯೂ ಮನುಷ್ಯನು ಸಂತೋಷವಾಗಿರಬೇಕು.

ದೇವರ ಕಾರ್ಯ ಗ್ರಹಿಕೆಗೆ ಮೀರಿದೆ

16 ಈ ಲೋಕದಲ್ಲಿ ಜನರ ಕಾರ್ಯಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದೆ. ಅವರು ಹಗಲುರಾತ್ರಿ ಕೆಲಸ ಮಾಡುವರು; ಕೆಲವೊಮ್ಮೆ ನಿದ್ರೆಯನ್ನೂ ಮಾಡುವುದಿಲ್ಲ. 17 ಇದಲ್ಲದೆ ದೇವರ ಅನೇಕ ಕಾರ್ಯಗಳನ್ನು ಸಹ ನಾನು ನೋಡಿದ್ದೇನೆ. ಭೂಮಿಯ ಮೇಲೆ ದೇವರು ಮಾಡುವ ಕಾರ್ಯಗಳನ್ನೆಲ್ಲಾ ಜನರು ಅರ್ಥಮಾಡಿಕೊಳ್ಳಲಾರರು. ಒಬ್ಬನು ಅರ್ಥಮಾಡಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅವನು ಅರ್ಥಮಾಡಿಕೊಳ್ಳಲಾರನು. ದೇವರ ಕಾರ್ಯವನ್ನು ಅರ್ಥಮಾಡಿಕೊಳ್ಳಬಲ್ಲೆನೆಂದು ಜ್ಞಾನಿಯು ಹೇಳಿಕೊಂಡರೂ ಅದು ಸತ್ಯವಲ್ಲ. ಅವುಗಳನ್ನೆಲ್ಲ ಯಾರೂ ಅರ್ಥಮಾಡಿಕೊಳ್ಳಲಾರರು.

2 ತಿಮೊಥೆಯನಿಗೆ 4

ಜೀವಂತರಾಗಿರುವ ಜನರಿಗೂ ಸತ್ತುಹೋಗಿರುವ ಜನರಿಗೂ ನ್ಯಾಯತೀರಿಸುವಾತನು ಕ್ರಿಸ್ತ ಯೇಸುವೇ. ಆತನು ತನ್ನ ರಾಜ್ಯವನ್ನು ಹೊಂದಿದ್ದಾನೆ. ಆತನು ಮತ್ತೆ ಬರುವನು. ಆದ್ದರಿಂದ ಯೇಸು ಕ್ರಿಸ್ತನ ಮತ್ತು ದೇವರ ಸನ್ನಿಧಿಯಲ್ಲಿ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, ಸುವಾರ್ತೆಯನ್ನು ಜನರಿಗೆ ತಿಳಿಸು. ಕಾಲವು ಅನುಕೂಲವಾಗಿದ್ದರೂ ಅನಾನುಕೂಲವಾಗಿದ್ದರೂ ಬೋಧನೆಯನ್ನು ಮುಂದುವರಿಸು. ಜನರು ಮಾಡಬೇಕಾದುದನ್ನು ಅವರಿಗೆ ತಿಳಿಸು. ಅವರು ತಪ್ಪು ಮಾಡಿದಾಗ ಅದನ್ನು ಅವರಿಗೆ ತೋರಿಸಿಕೊಡು. ಅವರನ್ನು ಗದರಿಸು, ಇವುಗಳನ್ನು ಬಹಳ ತಾಳ್ಮೆಯಿಂದಲೂ ಎಚ್ಚರಿಕೆಯಿಂದಲೂ ಮಾಡು.

ಜನರು ಸತ್ಯೋಪದೇಶವನ್ನು ಕೇಳದಿರುವ ಕಾಲವು ಬರಲಿದೆ. ಜನರು ತಮ್ಮನ್ನು ಮೆಚ್ಚಿಸುವಂಥ ಬೋಧಕರನ್ನು ಮತ್ತು ತಮ್ಮ ಕಿವಿಗೆ ಹಿತವೆನಿಸುವ ಬೋಧನೆಯನ್ನು ನೀಡುವ ಬೋಧಕರನ್ನು ಕಂಡುಕೊಳ್ಳುವರು. ಜನರು ಸತ್ಯವನ್ನು ಕೇಳದೆ ಸುಳ್ಳುಕಥೆಗಳನ್ನು ಕೇಳಲಾರಂಭಿಸುತ್ತಾರೆ. ಆದರೆ ನೀನು ಎಲ್ಲಾ ಕಾಲದಲ್ಲಿಯೂ ಸ್ವಸ್ಥಚಿತ್ತನಾಗಿರು. ತೊಂದರೆಗಳು ಬಂದಾಗ ಸಹಿಸಿಕೊ. ಸುವಾರ್ತೆಯನ್ನು ಪ್ರಚಾರಮಾಡು. ದೇವರ ಸೇವಕನಿಗೆ ಯೋಗ್ಯವಾದ ಎಲ್ಲಾ ಕಾರ್ಯಗಳನ್ನು ಮಾಡುತ್ತಿರು.

ನನ್ನ ಜೀವಿತವನ್ನು ದೇವರಿಗಾಗಿ ಅರ್ಪಿಸುತ್ತಿದ್ದೇನೆ. ನಾನು ಈ ಲೋಕವನ್ನು ಬಿಟ್ಟುಹೋಗುವ ಕಾಲವು ಸಮೀಪಿಸಿದೆ. ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ. ಪಂದ್ಯದಲ್ಲಿ ನನ್ನ ಓಟವನ್ನು ಮುಗಿಸಿದ್ದೇನೆ; ನನ್ನ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ. ನೀತಿವಂತರಿಗೆ ದೊರೆಯುವ ಜಯಮಾಲೆಯು ಈಗ ನನಗೆ ಸಿದ್ಧವಾಗಿದೆ. ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಪ್ರಭುವೇ ನನಗೆ ಅದನ್ನು ಆ ದಿನದಂದು ಕೊಡುವನು. ನನಗೆ ಮಾತ್ರವಲ್ಲದೆ ಆತನ ಬರುವಿಕೆಯನ್ನು ಅಪೇಕ್ಷಿಸಿ ಅದಕ್ಕಾಗಿ ಕಾಯುತ್ತಿದ್ದವರಿಗೆಲ್ಲ ಆತನು ಆ ಜಯಮಾಲೆಯನ್ನು ದಯಪಾಲಿಸುವನು.

ವೈಯಕ್ತಿಕ ಮಾತುಗಳು

ನಿನಗೆ ಸಾಧ್ಯವಾದಷ್ಟು ಬೇಗನೆ ನನ್ನ ಬಳಿಗೆ ಬಾ. 10 ದೇಮನು ಈ ಲೋಕವನ್ನು ಬಹಳ ಪ್ರೀತಿಸಿದನು. ಆದಕಾರಣವೇ ಅವನು ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೆ ಹೋದನು. ತೀತನು ದಲ್ಮಾತ್ಯಕ್ಕೆ ಹೋದನು. 11 ಲೂಕನೊಬ್ಬನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ನೀನು ಬರುವಾಗ ಮಾರ್ಕನನ್ನೂ ನಿನ್ನ ಜೊತೆಯಲ್ಲಿ ಕರೆದುಕೊಂಡು ಬಾ. ಅವನು ನನ್ನ ಸೇವೆಗೆ ಸಹಾಯ ಮಾಡಬಲ್ಲನು. 12 ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು.

13 ನಾನು ತ್ರೋವದಲ್ಲಿದ್ದಾಗ ಕರ್ಪನ ಬಳಿ ನನ್ನ ಮೇಲಂಗಿಯನ್ನು ಬಿಟ್ಟು ಬಂದಿದ್ದೇನೆ. ನೀನು ನನ್ನ ಬಳಿಗೆ ಬರುವಾಗ ಅದನ್ನು ತೆಗೆದುಕೊಂಡು ಬಾ. ನನ್ನ ಪುಸ್ತಕಗಳನ್ನೂ ಮುಖ್ಯವಾಗಿ, ಕುರಿಚರ್ಮದಿಂದ ಮಾಡಿದ ಪುಸ್ತಕಗಳನ್ನು ತೆಗೆದುಕೊಂಡು ಬಾ.

14 ಕಂಚುಗಾರನಾದ ಅಲೆಗ್ಸಾಂಡರನು ನನಗೆ ಅನೇಕ ಕೆಡಕುಗಳನ್ನು ಮಾಡಿದನು. ಅವನು ಮಾಡಿದ ಕೃತ್ಯಗಳಿಗಾಗಿ ಪ್ರಭುವು ಅವನನ್ನು ದಂಡಿಸುವನು. 15 ಅವನು ನಿನಗೂ ತೊಂದರೆ ಕೊಡಲಾಗದಂತೆ ಎಚ್ಚರವಾಗಿರು. ಅವನು ನಮ್ಮ ಉಪದೇಶದ ವಿರುದ್ಧ ಬಹಳ ಹೋರಾಡಿದನು.

16 ಮೊದಲ ಸಲ ನಾನು ನನ್ನನ್ನು ಸಮರ್ಥಿಸಿಕೊಂಡಾಗ ನನಗೆ ಯಾರೂ ಸಹಾಯಮಾಡಲಿಲ್ಲ. ಎಲ್ಲರೂ ನನ್ನನ್ನು ಬಿಟ್ಟುಹೋದರು. ದೇವರು ಅವರನ್ನು ಕ್ಷಮಿಸಲಿ ಎಂದು ಪ್ರಾರ್ಥಿಸುತ್ತೇನೆ. 17 ಆದರೆ ಪ್ರಭುವು ನನ್ನ ಬಳಿಯೇ ಇದ್ದನು. ನಾನು ಸುವಾರ್ತೆಯನ್ನು ಯೆಹೂದ್ಯರಲ್ಲದವರಿಗೆ ಸಂಪೂರ್ಣವಾಗಿ ಬೋಧಿಸಲು ಪ್ರಭುವು ನನಗೆ ಶಕ್ತಿಯನ್ನು ದಯಪಾಲಿಸಿದನು. ಆ ಸುವಾರ್ತೆಯನ್ನು ಯೆಹೂದ್ಯರಲ್ಲದ ಜನರೆಲ್ಲರೂ ಕೇಳುವುದು ಪ್ರಭುವಿನ ಇಷ್ಟವಾಗಿತ್ತು. ಆತನು ನನ್ನನ್ನು ಸಿಂಹದ (ಶತ್ರು) ಬಾಯಿಂದ ರಕ್ಷಿಸಿದನು. 18 ಯಾರಾದರೂ ನನಗೆ ತೊಂದರೆ ಮಾಡಲು ಪ್ರಯತ್ನಿಸಿದರೆ, ಪ್ರಭುವು ನನ್ನನ್ನು ರಕ್ಷಿಸುವನು. ಪ್ರಭುವು ನನ್ನನ್ನು ಸುರಕ್ಷಿತವಾಗಿ ತನ್ನ ಪರಲೋಕರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಪ್ರಭುವಿಗೆ ಮಹಿಮೆಯಾಗಲಿ.

ಅಂತಿಮ ವಂದನೆಗಳು

19 ಪ್ರಿಸ್ಕಳಿಗೆ, ಅಕ್ವಿಲ್ಲನಿಗೆ ಮತ್ತು ಒನೇಸಿಫೋರನ ಮನೆಯವರಿಗೆ ವಂದನೆಗಳನ್ನು ಹೇಳು. 20 ಎರಸ್ತನು ಕೊರಿಂಥದಲ್ಲಿ ನೆಲಸಿದನು. ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ನಾನು ಅವನನ್ನು ಮಿಲೇತದಲ್ಲಿ ಇರಿಸಬೇಕಾಯಿತು. 21 ಚಳಿಗಾಲಕ್ಕೆ ಮುಂಚೆಯೇ ನನ್ನ ಬಳಿಗೆ ಬರಲು ನಿನ್ನಿಂದಾದಷ್ಟು ಪ್ರಯತ್ನಿಸು.

ಯುಬೂಲ, ಪೊದೇಯ, ಲೀನ, ಕ್ಲೌದ್ಯ, ಇವರುಗಳು ಮತ್ತು ಇತರ ಸಹೋದರರೆಲ್ಲರೂ ನಿನಗೆ ವಂದನೆಗಳನ್ನು ಹೇಳಿದ್ದಾರೆ.

22 ಪ್ರಭುವು ನಿನ್ನ ಆತ್ಮದ ಸಂಗಡ ಇರಲಿ. ಆತನ ಕೃಪೆಯು ನಿನ್ನೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International