M’Cheyne Bible Reading Plan
ದೀಪಸ್ತಂಭ ಮತ್ತು ಪವಿತ್ರ ರೊಟ್ಟಿ
24 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಎಣ್ಣೆ ಮರದ ಕಾಯಿಗಳನ್ನು ಕುಟ್ಟಿ ತೆಗೆದ ಶುದ್ಧವಾದ ಎಣ್ಣೆಯನ್ನು ಇಸ್ರೇಲರು ನಿನ್ನ ಬಳಿಗೆ ತರಬೇಕೆಂದು ಆಜ್ಞಾಪಿಸು. ದೇವದರ್ಶನಗುಡಾರದಲ್ಲಿರುವ ದೀಪಗಳನ್ನು ಉರಿಸಲು ಆ ಎಣ್ಣೆ ಬೇಕಾಗಿರುತ್ತದೆ. ಆ ದೀಪಗಳು ಆರಿಹೋಗದೆ ಉರಿಯುತ್ತಲೇ ಇರಬೇಕು. 3 ದೇವದರ್ಶನಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಉದಯದವರೆಗೆ ದೀಪಗಳು ಉರಿಯುತ್ತಿರುವಂತೆ ಆರೋನನು ಅವುಗಳನ್ನು ಸರಿಪಡಿಸುವನು. ಇದು ತೆರೆಯ ಹೊರಗೆ ಒಡಂಬಡಿಕೆಯ ಪೆಟ್ಟಿಗೆಯ ಮುಂದೆ ಇರುವುದು. ಈ ನಿಯಮ ಶಾಶ್ವತವಾದದ್ದು. 4 ಶುದ್ಧಚಿನ್ನದಿಂದ ಮಾಡಿದ ದೀಪಸ್ತಂಭದಲ್ಲಿ ದೀಪಗಳು ಯೆಹೋವನ ಸನ್ನಿಧಿಯಲ್ಲಿ ಯಾವಾಗಲೂ ಉರಿಯುತ್ತಿರುವಂತೆ ಆರೋನನು ನೋಡಿಕೊಳ್ಳಬೇಕು.
5 “ಶ್ರೇಷ್ಠ ಗೋಧಿಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಮಾಡಬೇಕು. ಪ್ರತಿ ರೊಟ್ಟಿಯನ್ನು ಮಾಡಲು ಆರು ಸೇರು ಹಿಟ್ಟನ್ನು ಉಪಯೋಗಿಸಬೇಕು. 6 ಅವುಗಳನ್ನು ಯೆಹೋವನ ಸನ್ನಿಧಿಯಲ್ಲಿರುವ ಚಿನ್ನದ ಮೇಜಿನ ಮೇಲೆ ಎರಡು ಸಾಲಾಗಿ ಇಡಬೇಕು. ಒಂದೊಂದು ಸಾಲಿನಲ್ಲಿ ಆರಾರು ರೊಟ್ಟಿಗಳಿರುವವು. 7 ಪ್ರತಿ ಸಾಲಿನಲ್ಲಿ ಶುದ್ಧವಾದ ಧೂಪದ್ರವ್ಯವನ್ನಿಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿತವಾದ ಸಮರ್ಪಣೆಯನ್ನು ಯೆಹೋವನ ಜ್ಞಾಪಕಕ್ಕೆ ತರುವುದು. 8 ಪ್ರತಿ ಸಬ್ಬತ್‌ದಿನದಲ್ಲಿ ಆರೋನನು ಯೆಹೋವನ ಸನ್ನಿಧಿಯಲ್ಲಿ ರೊಟ್ಟಿಯನ್ನು ಕ್ರಮವಾಗಿ ಯಾವಾಗಲೂ ಇಡಬೇಕು. ಇಸ್ರೇಲರೊಂದಿಗೆ ಮಾಡಲ್ಪಟ್ಟ ಒಡಂಬಡಿಕೆಯು ಶಾಶ್ವತವಾದದ್ದು. 9 ಆ ರೊಟ್ಟಿಯು ಆರೋನನಿಗೆ ಮತ್ತು ಅವನ ಪುತ್ರರಿಗೆ ಸಲ್ಲತಕ್ಕದ್ದು. ಅವರು ರೊಟ್ಟಿಯನ್ನು ಪವಿತ್ರಸ್ಥಳದಲ್ಲಿ ತಿನ್ನುವರು. ಯಾಕೆಂದರೆ ಅದು ಮಹಾ ಪವಿತ್ರವಾದದ್ದು. ಅದು ಅಗ್ನಿಯ ಮೂಲಕ ಅರ್ಪಿಸಿದ ಯಜ್ಞಗಳಲ್ಲಿ ಒಂದಾಗಿದೆ. ಆ ರೊಟ್ಟಿಯು ಶಾಶ್ವತವಾಗಿ ಆರೋನನಿಗೆ ಸಲ್ಲತಕ್ಕದ್ದು.”
ದೇವರನ್ನು ಶಪಿಸಿದ ಮನುಷ್ಯನು
10 ಇಸ್ರೇಲಿನ ಒಬ್ಬ ಸ್ತ್ರೀಗೆ ಒಬ್ಬ ಮಗನಿದ್ದನು. ಅವನ ತಂದೆ ಈಜಿಪ್ಟಿನವನು. ಪಾಳೆಯದಲ್ಲಿದ್ದ ಇಸ್ರೇಲರ ಮಧ್ಯದಿಂದ ಅವನು ಹೊರಬಂದನು. ಅವನು ಒಬ್ಬ ಇಸ್ರೇಲನೊಡನೆ ಜಗಳವಾಡತೊಡಗಿದನು. 11 ಅವನು ದೂಷಿಸಲು ಪ್ರಾರಂಭಿಸಿ ಯೆಹೋವನ ನಾಮದ ಬಗ್ಗೆ ಕೆಟ್ಟಮಾತುಗಳನ್ನು ಹೇಳತೊಡಗಿದನು. ಆದ್ದರಿಂದ ಜನರು ಅವನನ್ನು ಮೋಶೆಯ ಬಳಿಗೆ ಹಿಡಿದು ತಂದರು. (ಆ ಮನುಷ್ಯನ ತಾಯಿಯ ಹೆಸರು ಶೆಲೋಮೀತ್. ಅವಳು ದಾನ್ ಕುಲದವನಾದ ದಿಬ್ರೀಯನ ಮಗಳು.) 12 ಜನರು ಅವನನ್ನು ಸೆರೆಹಿಡಿದು, ಯೆಹೋವನ ಸ್ಪಷ್ಟವಾದ ಆಜ್ಞೆಗಾಗಿ ಕಾದುಕೊಂಡಿದ್ದರು.
13 ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 14 “ದೂಷಣೆ ಮಾಡಿದ ಮನುಷ್ಯನನ್ನು ಪಾಳೆಯದ ಹೊರಗಿರುವ ಸ್ಥಳಕ್ಕೆ ತನ್ನಿರಿ. ಬಳಿಕ ಅವನ ದೂಷಣೆ ಮಾತುಗಳನ್ನು ಕೇಳಿದ ಎಲ್ಲಾ ಜನರನ್ನು ಒಟ್ಟಾಗಿ ಕರೆಸಿರಿ. ಆ ಜನರು ತಮ್ಮ ಕೈಗಳನ್ನು ಅವನ ತಲೆಯ ಮೇಲೆ ಇಡುವರು. ಆ ಬಳಿಕ ಎಲ್ಲಾ ಜನರು ಅವನಿಗೆ ಕಲ್ಲೆಸೆದು ಕೊಲ್ಲಬೇಕು. 15 ನೀನು ಇಸ್ರೇಲರಿಗೆ ಹೀಗೆ ಹೇಳಬೇಕು: ದೇವದೂಷಣೆ ಮಾಡಿದವನಿಗೆ ಶಿಕ್ಷೆಯಾಗಬೇಕು. 16 ಯಾವನಾದರೂ ಯೆಹೋವನ ನಾಮದ ವಿರುದ್ಧ ಮಾತಾಡಿದರೆ, ಅವನಿಗೆ ಮರಣಶಿಕ್ಷೆಯಾಗಬೇಕು. ಜನರೆಲ್ಲರೂ ಅವನಿಗೆ ಕಲ್ಲೆಸೆದು ಕೊಲ್ಲಬೇಕು. ಯೆಹೋವನ ನಾಮವನ್ನು ನಿಂದಿಸುವ ಪರದೇಶಸ್ಥರಿಗೂ ಅದೇ ರೀತಿಯ ಶಿಕ್ಷೆಯಾಗಬೇಕು. ಯೆಹೋವನ ನಾಮವನ್ನು ನಿಂದಿಸುವವನಿಗೆ ಮರಣಶಿಕ್ಷೆಯಾಗಬೇಕು.
17 “ಒಬ್ಬನು ಇನ್ನೊಬ್ಬನನ್ನು ಕೊಂದರೆ, ಕೊಂದವನಿಗೆ ಮರಣಶಿಕ್ಷೆಯಾಗಬೇಕು. 18 ಇನ್ನೊಬ್ಬನಿಗೆ ಸೇರಿದ ಪಶುವನ್ನು ಕೊಲ್ಲುವವನು ಅದಕ್ಕೆ ಪ್ರತಿಯಾಗಿ ಇನ್ನೊಂದು ಪಶುವನ್ನು ಕೊಡಬೇಕು.
19 “ಒಬ್ಬನು ತನ್ನ ನೆರೆಯವನನ್ನು ಅಂಗವಿಕಲನನ್ನಾಗಿ ಮಾಡಿದರೆ, ಅವನಿಗೂ ಅದೇ ರೀತಿ ಮಾಡಬೇಕು. 20 ಮುರಿದ ಮೂಳೆಗೆ ಬದಲಾಗಿ ಅವನ ಮೂಳೆಯನ್ನು ಮುರಿಯಬೇಕು. ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗೆಯಬೇಕು. 21 ಒಬ್ಬನು ಪಶುವೊಂದನ್ನು ಕೊಂದರೆ, ಅವನು ಅದಕ್ಕೆ ಬದಲಾಗಿ ಈಡು ಕೊಡಬೇಕು. ಆದರೆ ಒಬ್ಬನು ಇನ್ನೊಬ್ಬನನ್ನು ಕೊಂದರೆ, ಕೊಂದವನಿಗೆ ಮರಣಶಿಕ್ಷೆಯಾಗಬೇಕು.
22 “ಈ ಕಟ್ಟಳೆ ನ್ಯಾಯವಾದದ್ದು. ಅದು ನಿಮ್ಮ ಸ್ವದೇಶದವರಿಗೆ ಅನ್ವಯಿಸುವಂತೆ ಪರದೇಶಸ್ಥರಿಗೂ ಅನ್ವಯಿಸುವುದು. ಯಾಕೆಂದರೆ ನಾನೇ ನಿಮ್ಮ ದೇವರಾದ ಯೆಹೋವನು!”
23 ಬಳಿಕ ಮೋಶೆಯು ಇಸ್ರೇಲರೊಂದಿಗೆ ಮಾತಾಡಿದನು. ಆಗ ಅವರು ದೂಷಣೆ ಮಾಡಿದ ಮನುಷ್ಯನನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಅವನಿಗೆ ಕಲ್ಲೆಸೆದು ಕೊಂದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಮಾಡಿದರು.
ರಚನೆಗಾರ: ದಾವೀದ.
31 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ನನ್ನನ್ನು ನಿರಾಶೆಗೊಳಿಸಬೇಡ.
ಕರುಣೆತೋರಿ ನನ್ನನ್ನು ರಕ್ಷಿಸು.
2 ನನಗೆ ಕಿವಿಗೊಡು.
ಬೇಗನೆ ಬಂದು, ನನ್ನನ್ನು ರಕ್ಷಿಸು.
ನನಗೆ ಬಂಡೆಯೂ ನನ್ನ ಆಶ್ರಯಸ್ಥಾನವೂ ಕೋಟೆಯೂ ಆಗಿದ್ದು
ನನ್ನನ್ನು ಕಾಪಾಡು!
3 ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವುದರಿಂದ
ನಿನ್ನ ಹೆಸರಿನ ಘನತೆಗಾಗಿ ನನ್ನನ್ನು ನಡೆಸು; ನನಗೆ ಮಾರ್ಗದರ್ಶನ ನೀಡು.
4 ನನ್ನ ವೈರಿಗಳು ನನಗೆ ಬಲೆಬೀಸಿದ್ದಾರೆ.
ಅವರ ಬಲೆಗೆ ಸಿಕ್ಕಿಬೀಳದಂತೆ ನನ್ನನ್ನು ರಕ್ಷಿಸು.
ನೀನೇ ನನ್ನ ಆಶ್ರಯಸ್ಥಾನವಾಗಿರುವೆ.
5 ಯೆಹೋವನೇ, ನಮ್ಮ ಭರವಸೆಗೆ ಯೋಗ್ಯನಾದ ದೇವರು ನೀನೊಬ್ಬನೇ.
ನನ್ನ ಜೀವವನ್ನು ನಿನ್ನ ಕೈಗಳಲ್ಲಿ ಇಟ್ಟಿರುವೆ.
ನನ್ನನ್ನು ರಕ್ಷಿಸು!
6 ಸುಳ್ಳುದೇವರುಗಳನ್ನು ಪೂಜಿಸುವವರನ್ನು ನಾನು ದ್ವೇಷಿಸುವೆನು.
ನಾನು ಯೆಹೋವನಲ್ಲಿಯೇ ಭರವಸವಿಡುವೆನು.
7 ದೇವರೇ, ನಿನ್ನ ಕರುಣೆಯು ನನ್ನನ್ನು ಉಲ್ಲಾಸಗೊಳಿಸುವುದು.
ನನ್ನ ಸಂಕಟವನ್ನು ನೀನು ನೋಡಿರುವೆ;
ನನಗಿರುವ ಆಪತ್ತುಗಳು ನಿನಗೆ ತಿಳಿದಿವೆ.
8 ವೈರಿಗಳು ನನ್ನನ್ನು ಸೆರೆಹಿಡಿದೊಯ್ಯಲು ನೀನು ಬಿಟ್ಟುಕೊಡುವುದಿಲ್ಲ;
ನನ್ನನ್ನು ಅವರ ಬಲೆಗಳಿಂದ ಬಿಡುಗಡೆ ಮಾಡುವೆ.
9 ಯೆಹೋವನೇ, ನನಗೆ ಅನೇಕ ಇಕ್ಕಟ್ಟುಗಳಿವೆ;
ನನ್ನನ್ನು ಕರುಣಿಸು.
ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ,
ನನ್ನ ಗಂಟಲು ನೋಯುತ್ತಿದೆ, ಹೊಟ್ಟೆಯೂ ನೋಯುತ್ತಿದೆ.
10 ನನ್ನ ಜೀವಿತವು[a] ದುಃಖದಲ್ಲಿ ಕೊನೆಗೊಳ್ಳುತ್ತಿದೆ.
ನನ್ನ ವರ್ಷಗಳು ನಿಟ್ಟುಸಿರಿನಲ್ಲೇ ಕಳೆದುಹೋಗುತ್ತಿವೆ.
ನನ್ನ ಇಕ್ಕಟ್ಟುಗಳು ನನ್ನ ಶಕ್ತಿಯನ್ನು ಕುಂದಿಸುತ್ತಿವೆ.
ನನ್ನ ಬಲವು ನನ್ನನ್ನು ಬಿಟ್ಟುಹೋಗುತ್ತಿದೆ.[b]
11 ವೈರಿಗಳು ನನ್ನನ್ನು ಕೀಳಾಗಿ ಕಾಣುತ್ತಿದ್ದಾರೆ;
ನನ್ನ ನೆರೆಹೊರೆಯವರೂ ನನ್ನನ್ನು ನಿಂದಿಸುವರು;
ನನ್ನ ಸಂಬಂಧಿಕರೂ ನನ್ನ ವಿಷಯದಲ್ಲಿ ಭಯಪಡುವರು;
ನನ್ನನ್ನು ದಾರಿಯಲ್ಲಿ ಕಂಡರೂ ಕಾಣದಂತೆ ಹೊರಟುಹೋಗುವರು.
12 ನಾನು ಸತ್ತವರಂತೆ ಯಾರ ಜ್ಞಾಪಕಕ್ಕೂ ಬಾರದವನಾದೆನು.
ಕಳೆದುಹೋದ ಉಪಕರಣದಂತೆ ಅವರು ನನ್ನನ್ನು ಮರೆತೇಬಿಟ್ಟಿದ್ದಾರೆ.
13 ಜನರು ನನ್ನನ್ನು ಕುರಿತು ಭಯಂಕರವಾದ ಸಂಗತಿಗಳನ್ನು ಮಾತಾಡಿಕೊಳ್ಳುತ್ತಿದ್ದಾರೆ.
ಅವರು ದಂಗೆಯೆದ್ದು ನನ್ನನ್ನು ಕೊಲ್ಲಬೇಕೆಂದುಕೊಂಡಿದ್ದಾರೆ.
14 ಯೆಹೋವನೇ, ನಾನಂತೂ ನಿನ್ನಲ್ಲೇ ಭರವಸವಿಟ್ಟಿದ್ದೇನೆ.
ನೀನೇ ನನ್ನ ದೇವರು.
15 ನನ್ನ ಜೀವವು ನಿನ್ನ ಕೈಯಲ್ಲಿದೆ.
ವೈರಿಗಳಿಂದ ನನ್ನನ್ನು ರಕ್ಷಿಸು; ನನ್ನನ್ನು ಅಟ್ಟಿಸಿಕೊಂಡು[c] ಬರುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
16 ದಯವಿಟ್ಟು ನಿನ್ನ ಸೇವಕನನ್ನು ಸ್ವೀಕರಿಸಿಕೊ.
ಕರುಣೆಯಿಂದ ನನ್ನನ್ನು ರಕ್ಷಿಸು!
17 ಯೆಹೋವನೇ, ನಾನು ನಿನ್ನಲ್ಲಿ ಪ್ರಾರ್ಥಿಸಿದೆನು.
ಆದ್ದರಿಂದ ನಾನು ನಿರಾಶನಾಗುವುದಿಲ್ಲ.
ಕೆಡುಕರಾದರೋ ನಿರಾಶರಾಗುವರು.
ಅವರು ಮೌನವಾಗಿ ಸಮಾಧಿಗೆ ಹೋಗುವರು.
18 ಕೆಡುಕರು ಜಂಬಕೊಚ್ಚಿಕೊಳ್ಳುತ್ತಾ
ಒಳ್ಳೆಯವರ ಬಗ್ಗೆ ಸುಳ್ಳು ಹೇಳುವರು.
ಅವರು ದುರಹಂಕಾರಿಗಳಾಗಿದ್ದಾರೆ;
ಅವರ ಸುಳ್ಳುತುಟಿಗಳು ಮೌನಗೊಳ್ಳುತ್ತವೆ.
19 ದೇವರೇ, ನೀನು ನಿನ್ನ ಭಕ್ತರಿಗಾಗಿ ಅಮೂಲ್ಯವಾದವುಗಳನ್ನು ಅಡಗಿಸಿಟ್ಟಿರುವೆ.
ನಿನ್ನಲ್ಲಿ ಭರವಸವಿಟ್ಟಿರುವ ಜನರಿಗಾಗಿ
ಎಲ್ಲರ ಮುಂದೆ ನೀನು ಮಾಡುವ ಒಳ್ಳೆಯ ಕಾರ್ಯಗಳು ಎಷ್ಟೋ ವಿಶೇಷವಾಗಿವೆ.
20 ನೀತಿವಂತರಿಗೆ ಕೇಡುಮಾಡಲು ಕೆಡುಕರು ಒಟ್ಟಾಗಿ ಸೇರಿದ್ದಾರೆ.
ನೀನಾದರೋ ನೀತಿವಂತರನ್ನು ಮರೆಮಾಡಿ ಕಾಪಾಡುವೆ;
ಅವರನ್ನು ನಿನ್ನ ಆಶ್ರಯಸ್ಥ್ಥಾನದಲ್ಲಿ ಅಡಗಿಸಿಡುವೆ.
21 ಯೆಹೋವನಿಗೆ ಸ್ತೋತ್ರವಾಗಲಿ! ವೈರಿಗಳು ಈ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ
ಆತನು ತನ್ನ ಶಾಶ್ವತ ಪ್ರೀತಿಯನ್ನು ಆಶ್ಚರ್ಯಕರವಾಗಿ ತೋರಿದ್ದಾನೆ.
22 ನಾನು ಭಯಗೊಂಡು, “ದೇವರು ನನ್ನನ್ನು ತನ್ನ ಸಾನಿಧ್ಯದಿಂದ ಹೊರಗಟ್ಟಿದ್ದಾನೆ” ಎಂದುಕೊಂಡೆನು.
ಆದರೆ ನಾನು ನಿನ್ನನ್ನು ಕೂಗಿಕೊಂಡಾಗ ನೀನು ಕಿವಿಗೊಟ್ಟೆ.
23 ದೇವರ ಭಕ್ತರೇ, ನೀವು ಯೆಹೋವನನ್ನು ಪ್ರೀತಿಸಲೇಬೇಕು!
ಆತನು ನಂಬಿಗಸ್ತರನ್ನು ಕಾಪಾಡುವನು; ಗರ್ವಿಷ್ಠರನ್ನಾದರೋ ದಂಡಿಸುವನು.
24 ಯೆಹೋವನನ್ನು ನಿರೀಕ್ಷಿಸಿಕೊಂಡಿರುವವರೇ, ದೃಢವಾಗಿಯೂ ಧೈರ್ಯವಾಗಿಯೂ ಇರಿ.
ಜ್ಞಾನೋಪದೇಶಗಳ ಭಂಡಾರ
7 ಸುಗಂಧತೈಲಕ್ಕಿಂತಲೂ ಒಳ್ಳೆಯ ಹೆಸರೇ ಉತ್ತಮ.
ಜನನ ದಿನಕ್ಕಿಂತಲೂ ಮರಣ ದಿನವೇ ಉತ್ತಮ.
2 ಔತಣಕೂಟಕ್ಕೆ ಹೋಗುವುದಕ್ಕಿಂತ ಶವಸಂಸ್ಕಾರಕ್ಕೆ ಹೋಗುವುದು ಇನ್ನೂ ಉತ್ತಮ.
ಯಾಕೆಂದರೆ ಎಲ್ಲರೂ ಒಂದು ದಿನ ಸಾಯಲೇಬೇಕು.
ಸಾವನ್ನು ಕಂಡ ಪ್ರತಿಯೊಬ್ಬನು ಇದನ್ನು ಸ್ಮರಿಸಿಕೊಳ್ಳುವನು.
3 ನಗುವಿಗಿಂತ ವ್ಯಸನವು ಇನ್ನೂ ಉತ್ತಮ.
ಯಾಕೆಂದರೆ ನಮ್ಮ ಮುಖವು ವ್ಯಸನದಿಂದಿರುವಾಗ ನಮ್ಮ ಹೃದಯಕ್ಕೆ ಒಳ್ಳೆಯದಾಗುವುದು.
4 ಜ್ಞಾನಿಯು ಮರಣದ ಬಗ್ಗೆ ಆಲೋಚಿಸುವನು;
ಮೂಢನಾದರೋ ಉಲ್ಲಾಸ ಸಮಯದ ಬಗ್ಗೆ ಆಲೋಚಿಸುವನು.
5 ಮೂಢರ ಹೊಗಳಿಕೆಗಿಂತ
ಜ್ಞಾನಿಗಳ ಗದರಿಕೆಯೇ ಉತ್ತಮ.
6 ಮೂಢರ ನಗು ಉಪಯೋಗವಿಲ್ಲದ್ದು.
ಅದು ಮಡಕೆಯ ಕೆಳಗೆ ಚಟಪಟನೆ ಉರಿದುಹೋಗುವ ಮುಳ್ಳುಕಡ್ಡಿಯಂತಿದೆ.
7 ಹಣವು ಜ್ಞಾನಿಯನ್ನೂ ಮೂರ್ಖನನ್ನಾಗಿ ಮಾಡುವುದು.
ಲಂಚವು ಅವನ ವಿವೇಕವನ್ನು ಕೆಡಿಸುವುದು.
8 ಆರಂಭಿಸುವ ಸಮಯಕ್ಕಿಂತಲೂ
ಪೂರ್ಣಗೊಳಿಸುವ ಸಮಯವೇ ಮೇಲು.
ಗರ್ವಕ್ಕಿಂತಲೂ ತಾಳ್ಮೆಯೇ ಉತ್ತಮ.
9 ಮುಂಗೋಪಿಯಾಗಿರಬೇಡ.
ಯಾಕೆಂದರೆ ಕೋಪವು ಕೇವಲ ಮೂಢತನ.
10 “ಈ ಕಾಲಕ್ಕಿಂತ ‘ಹಿಂದಿನ ಕಾಲವೇ’ ಚೆನ್ನಾಗಿತ್ತಲ್ಲವೇ?” ಎನ್ನಬೇಡ.
ಅದು ಜ್ಞಾನವುಳ್ಳವರ ಪ್ರಶ್ನೆಯಲ್ಲ.
11 ನಿನಗೆ ಆಸ್ತಿಯಿದ್ದರೆ ಜ್ಞಾನವು ಮತ್ತಷ್ಟು ಉಪಯುಕ್ತವಾಗಿದೆ. ನಿಜವಾಗಿಯೂ ಜ್ಞಾನಿಗಳು ಐಶ್ವರ್ಯವನ್ನು ಹೇರಳವಾಗಿ ಪಡೆದುಕೊಳ್ಳುವರು. 12 ಜ್ಞಾನಿಯು ಐಶ್ವರ್ಯವಂತನಾಗುವನು; ಜ್ಞಾನವು ತನ್ನ ಯಜಮಾನನನ್ನು ನೋಡಿಕೊಳ್ಳುವುದು.
13 ದೇವರ ಕಾರ್ಯಗಳನ್ನು ನೋಡು. ಆತನು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡಲು ಯಾರಿಗೆ ಸಾಧ್ಯ? 14 ಸುಖದ ದಿನಗಳಲ್ಲಿ ಸಂತೋಷಿಸು. ದುಃಖದ ದಿನಗಳಲ್ಲಿ, ಸುಖದುಃಖಗಳನ್ನು ಕೊಡುವವನು ದೇವರೇ ಎಂಬುದನ್ನು ಜ್ಞಾಪಿಸಿಕೊ. ಮುಂದೆ ಏನಾಗುವುದೋ ಯಾರಿಗೂ ಗೊತ್ತಿಲ್ಲ.
ಪಾಪವನ್ನೇ ಮಾಡದವರಿಲ್ಲ
15 ನನ್ನ ಅಲ್ಪಕಾಲದ ಜೀವನದಲ್ಲಿ ನಾನು ಪ್ರತಿಯೊಂದನ್ನೂ ನೋಡಿದ್ದೇನೆ. ನೀತಿವಂತರು ಯೌವನ ಪ್ರಾಯದಲ್ಲಿ ಸಾಯುವುದನ್ನೂ ನೋಡಿದ್ದೇನೆ. ದುಷ್ಟರು ಬಹುಕಾಲ ಬದುಕುವುದನ್ನೂ ನೋಡಿದ್ದೇನೆ. 16-17 ಆದ್ದರಿಂದ ನೀನು ನಿನ್ನನ್ನೇ ಯಾಕೆ ನಾಶಮಾಡಿಕೊಳ್ಳುವೆ? ಬಹಳ ನೀತಿವಂತನಾಗಿಯೂ ಇರಬೇಡ; ಬಹಳ ಕೆಟ್ಟವನಾಗಿಯೂ ಇರಬೇಡ. ಬಹು ಜ್ಞಾನಿಯಾಗಿಯೂ ಇರಬೇಡ; ಬಹು ಮೂಢನಾಗಿಯೂ ಇರಬೇಡ. ನಿನ್ನ ಕಾಲಕ್ಕಿಂತ ಮೊದಲೇ ನೀನು ಯಾಕೆ ಸಾಯಬೇಕು?
18 ಇವೆರಡರಲ್ಲಿಯೂ ಮಿತವಾಗಿರಬೇಕು. ದೇವಭಕ್ತರಲ್ಲಿ ಇವೆರಡೂ ಅತಿಯಾಗಿರುವುದಿಲ್ಲ. 19-20 ಒಳ್ಳೆಯದನ್ನೇ ಮಾಡುವ ಮತ್ತು ಪಾಪವನ್ನೇ ಮಾಡದ ನೀತಿವಂತನು ಭೂಮಿಯ ಮೇಲೆ ಇಲ್ಲವೇ ಇಲ್ಲ. ಜ್ಞಾನವು ಒಬ್ಬನಿಗೆ ಶಕ್ತಿಯನ್ನು ಕೊಡುತ್ತದೆ. ಒಬ್ಬ ಜ್ಞಾನಿಯು ನಗರದಲ್ಲಿರುವ ಹತ್ತುಮಂದಿ ಮೂಢ ನಾಯಕರುಗಳಿಗಿಂತಲೂ ಬಲಶಾಲಿ.
21 ಜನರ ಮಾತಿಗೆಲ್ಲಾ ಕಿವಿಗೊಡಬೇಡ. ನಿನ್ನ ಸ್ವಂತ ಸೇವಕನೇ ನಿನ್ನನ್ನು ಶಪಿಸಬಹುದು. 22 ನೀನು ಸಹ ಅನೇಕಸಲ ಬೇರೆಯವರನ್ನು ಶಪಿಸಿರುವುದಕ್ಕೆ ನಿನ್ನ ಮನಸ್ಸೇ ಸಾಕ್ಷಿಯಾಗಿದೆ.
23 ನನ್ನ ಜ್ಞಾನದಿಂದ ಇವೆಲ್ಲವುಗಳ ಕುರಿತಾಗಿ ಆಲೋಚಿಸಿದೆನು; ಜ್ಞಾನಿಯಾಗುವೆನು ಎಂದುಕೊಂಡೆನು; ಆದರೆ ಅದು ಅಸಾಧ್ಯವಾಗಿತ್ತು. 24 ಪ್ರತಿಯೊಂದು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಅದನ್ನು ಅರ್ಥಮಾಡಿಕೊಳ್ಳುವುದಕ್ಕೂ ಕಷ್ಟ. 25 ನಿಜವಾದ ಜ್ಞಾನವನ್ನು ಕಂಡುಕೊಳ್ಳಲು ನಾನು ವ್ಯಾಸಂಗ ಮಾಡಿದೆ ಮತ್ತು ತುಂಬ ಕಷ್ಟಪಟ್ಟು ಪ್ರಯತ್ನಿಸಿದೆ. ಪ್ರತಿಯೊಂದಕ್ಕೂ ಕಾರಣವನ್ನು ಕಂಡುಕೊಳ್ಳಲು ನಾನು ಪ್ರಯತ್ನಿಸಿದೆ.
ನಾನು ಕಲಿತಿದ್ದೇನು? ಕೆಡುಕನಾಗಿರುವುದು ಮೂಢತನ ಮತ್ತು ಮೂಢನಂತೆ ವರ್ತಿಸುವುದು ಹುಚ್ಚುತನ ಎಂಬುದನ್ನು ನಾನು ಕಲಿತುಕೊಂಡೆ. 26 ಇದಲ್ಲದೆ ಕೆಲವು ಸ್ತ್ರೀಯರು ಅಪಾಯಕರವಾದ ಬೋನುಗಳಂತಿರುವರು ಎಂಬುದನ್ನು ನಾನು ಕಂಡುಕೊಂಡೆ. ಅವರ ಹೃದಯಗಳು ಬಲೆಗಳಂತಿವೆ; ಅವರ ಕೈಗಳು ಸರಪಣಿಗಳಂತಿವೆ. ಆ ಸ್ತ್ರೀಯರಿಗೆ ಸಿಕ್ಕಿಬೀಳುವುದು ಮರಣಕ್ಕಿಂತಲೂ ಅಪಾಯಕರ. ದೇವರ ಭಕ್ತನು ಆ ಸ್ತ್ರೀಯರ ಬಳಿಯಿಂದ ಓಡಿಹೋಗುವನು; ಪಾಪಿಯಾದರೋ ಅವರಿಗೆ ಸಿಕ್ಕಿಕೊಳ್ಳುವನು.
27-28 ಪ್ರಸಂಗಿಯು ಹೀಗೆನ್ನುತ್ತಾನೆ: “ಒಂದು ತೀರ್ಮಾನಕ್ಕೆ ಬರಬೇಕೆಂದು ಇವೆಲ್ಲವುಗಳನ್ನು ಒಟ್ಟಾಗಿ ಸೇರಿಸಿದೆ. ಆದರೂ ಒಂದು ತೀರ್ಮಾನಕ್ಕೆ ಬರಲಾಗುತ್ತಿಲ್ಲ. ಆದರೆ ನಾನು ಒಂದನ್ನು ಕಂಡುಕೊಂಡೆ. ಅದೇನೆಂದರೆ, ಸಾವಿರ ಪುರುಷರಲ್ಲಿ ಒಬ್ಬ ನೀತಿವಂತನು ಇದ್ದರೂ ಇರಬಹುದು; ಆದರೆ ಸಾವಿರ ಸ್ತ್ರೀಯರಲ್ಲಿ ಒಬ್ಬ ನೀತಿವಂತಳನ್ನೂ ನಾನು ಕಾಣಲಿಲ್ಲ.
29 “ನಾನು ಮತ್ತೊಂದು ವಿಷಯವನ್ನು ತಿಳಿದುಕೊಂಡೆನು. ಅದೇನೆಂದರೆ, ದೇವರು ಮನುಷ್ಯರನ್ನು ನೀತಿವಂತರನ್ನಾಗಿ ಸೃಷ್ಟಿಸಿದನು. ಆದರೆ ಜನರು ಕೆಟ್ಟವರಾಗಿರಲು ಅನೇಕ ದಾರಿಗಳನ್ನು ಕಂಡುಕೊಂಡರು.”
ಕೊನೆಯ ದಿನಗಳು
3 ನೆನಪಿನಲ್ಲಿಡಿರಿ! ಕಡೇ ದಿನಗಳಲ್ಲಿ ಅನೇಕ ತೊಂದರೆಗಳು ಬರುತ್ತವೆ. 2 ಆ ಕಾಲದಲ್ಲಿ ಜನರು ಸ್ವಾರ್ಥಿಗಳಾಗಿರುತ್ತಾರೆ, ಹಣದಾಸೆ ಉಳ್ಳವರಾಗಿರುತ್ತಾರೆ; ಬಡಾಯಿಕೊಚ್ಚುವವರಾಗಿರುತ್ತಾರೆ; ಗರ್ವಿಷ್ಠರಾಗಿರುತ್ತಾರೆ; ಚಾಡಿಕೋರರಾಗಿರುತ್ತಾರೆ; ತಂದೆತಾಯಿಗಳಿಗೆ ಅವಿಧೇಯರಾಗಿರುತ್ತಾರೆ; ಕೃತಜ್ಞತೆಯಿಲ್ಲದವರಾಗಿರುತ್ತಾರೆ; ಅಪವಿತ್ರರಾಗಿರುತ್ತಾರೆ; 3 ಇತರರನ್ನು ಪ್ರೀತಿಸದವರಾಗಿರುತ್ತಾರೆ; ಕ್ಷಮಿಸದವರಾಗಿರುತ್ತಾರೆ; ದೂಷಿಸುವವರಾಗಿರುತ್ತಾರೆ. ತಮ್ಮ ಮೇಲೆ ತಮಗೇ ಹತೋಟಿಯಿಲ್ಲದವರಾಗಿರುತ್ತಾರೆ; ಉತ್ತಮವಾದದ್ದನ್ನು ದ್ವೇಷಿಸುವವರಾಗಿರುತ್ತಾರೆ; ಕೋಪಿಷ್ಠರಾಗಿರುತ್ತಾರೆ; ಸಂಕುಚಿತ ಗುಣವುಳ್ಳವರಾಗಿರುತ್ತಾರೆ. 4 ಕೊನೆಯ ದಿನಗಳಲ್ಲಿ ಜನರು ಮಿತ್ರದ್ರೋಹಿಗಳಾಗಿರುತ್ತಾರೆ; ದುಡುಕಿ ಮೂರ್ಖ ಕೆಲಸಗಳನ್ನು ಮಾಡುವವರಾಗಿರುತ್ತಾರೆ; ಜಂಬದಿಂದ ಉಬ್ಬಿಕೊಂಡವರಾಗಿರುತ್ತಾರೆ; ದೇವರನ್ನು ಪ್ರೀತಿಸದೆ ವಿಲಾಸಪ್ರಿಯರಾಗಿರುತ್ತಾರೆ; 5 ಆ ಜನರು ತಾವು ದೇವರ ಸೇವೆ ಮಾಡುತ್ತಿರುವುದಾಗಿ ನಟಿಸುತ್ತಲೇ ಇರುವರು. ಆದರೆ ಅವರು ನಿಜವಾಗಿಯೂ ದೇವರ ಸೇವೆ ಮಾಡುತ್ತಿಲ್ಲವೆಂಬುದನ್ನು ಅವರ ಜೀವಿತವೇ ತೋರ್ಪಡಿಸುತ್ತದೆ. ತಿಮೊಥೆಯನೇ, ಅಂತಹ ಜನರಿಂದ ದೂರವಾಗಿರು.
6 ಅವರಲ್ಲಿ ಕೆಲವರು ಮನೆಗಳಿಗೆ ನುಸುಳಿಕೊಂಡು ಹೋಗಿ, ಪಾಪಿಷ್ಠರಾದ ಸ್ತ್ರೀಯರನ್ನು ವಶಪಡಿಸಿಕೊಳ್ಳುತ್ತಾರೆ. ಆ ಸ್ತ್ರೀಯರು ಅನೇಕ ಪಾಪದೋಷಗಳಿಂದ ತುಂಬಿದವರಾಗಿದ್ದಾರೆ. 7 ಆ ಸ್ತ್ರೀಯರು ಯಾವಾಗಲೂ ಹೊಸ ಉಪದೇಶಗಳನ್ನು ಕಲಿಯಲು ಪ್ರಯತ್ನಿಸಿದರೂ ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವೇ ಇಲ್ಲ. 8 ಯನ್ನ ಮತ್ತು ಯಂಬ್ರರನ್ನು ನೆನಪುಮಾಡಿಕೊ. ಅವರು ಮೋಶೆಯನ್ನು ವಿರೋಧಿಸಿದರು. ಈ ಜನರೂ ಅವರಂತೆಯೇ. ಅವರು ಸತ್ಯವನ್ನು ವಿರೋಧಿಸುತ್ತಾರೆ. ಆ ಜನರ ಆಲೋಚನೆಗಳೆಲ್ಲ ಗಲಿಬಿಲಿಗೊಂಡಿವೆ. ಅವರು ನಂಬಿಕೆಯನ್ನು ಅನುಸರಿಸುವ ತಮ್ಮ ಪ್ರಯತ್ನದಲ್ಲಿ ಸೋತುಹೋಗಿದ್ದಾರೆ. 9 ಅವರ ಕಾರ್ಯಗಳಲ್ಲಿ ಅವರಿಗೆ ಯಶಸ್ಸಾಗುವುದಿಲ್ಲ. ಅವರು ಮೂರ್ಖರೆಂಬುದು ಜನರೆಲ್ಲರಿಗೂ ಕಾಣುತ್ತದೆ. ಯನ್ನ, ಯಂಬ್ರರಿಗೆ ಹೀಗೆಯೇ ಆಯಿತು.
ಅಂತಿಮ ಸಲಹೆಗಳು
10 ಆದರೆ ನನ್ನನ್ನು ಕುರಿತು ನಿನಗೆ ಎಲ್ಲವೂ ತಿಳಿದಿದೆ. ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ತಾಳ್ಮೆ, ಪ್ರೀತಿ, ಸೈರಣೆ ನಿನಗೆ ತಿಳಿದಿವೆ. 11 ನನಗೆ ಸಂಭವಿಸಿದ ಹಿಂಸೆ ಮತ್ತು ಸಂಕಟಗಳ ಬಗ್ಗೆಯೂ ನಿನಗೆ ತಿಳಿದಿದೆ. ಅಂತಿಯೋಕ್ಯ, ಇಕೋನ್ಯ, ಲುಸ್ತ್ರಗಳಲ್ಲಿ ನನಗೆ ಸಂಭವಿಸಿದ ಸಂಗತಿಗಳೆಲ್ಲವೂ ನಿನಗೆ ತಿಳಿದಿವೆ. ನಾನು ಆ ಸ್ಥಳಗಳಲ್ಲಿ ಅನುಭವಿಸಿದ ಹಿಂಸೆಯು ನಿನಗೆ ತಿಳಿದಿದೆ. ಆದರೆ ಆ ಎಲ್ಲ ತೊಂದರೆಗಳಿಂದ ಪ್ರಭುವು ನನ್ನನ್ನು ಕಾಪಾಡಿದನು. 12 ಕ್ರಿಸ್ತ ಯೇಸುವಿನಲ್ಲಿ ದೇವರ ಚಿತ್ತಕ್ಕನುಸಾರವಾಗಿ ಜೀವಿಸುವ ಪ್ರತಿಯೊಬ್ಬರೂ ಹಿಂಸೆಗೆ ಒಳಗಾಗುವರು. 13 ದುಷ್ಟರು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನದಿಂದ ದಿನಕ್ಕೆ ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆ.
14 ಆದರೆ ನೀನು ಕಲಿತಿರುವ ಉಪದೇಶಗಳನ್ನು ಅನುಸರಿಸು. ಅವು ಸತ್ಯವೆಂಬುದು ನಿನಗೆ ತಿಳಿದಿದೆ. ಅವುಗಳನ್ನು ನಿನಗೆ ಕಲಿಸಿದ ಜನರು ನಂಬಿಕೆಗೆ ಯೋಗ್ಯರೆಂಬುದು ನಿನಗೆ ತಿಳಿದಿದೆ. 15 ಚಿಕ್ಕಂದಿನಿಂದಲೂ ನಿನಗೆ ಪವಿತ್ರ ಗ್ರಂಥದ ಪರಿಚಯವಿದೆ. ನಿನ್ನನ್ನು ಜ್ಞಾನಿಯನ್ನಾಗಿ ಮಾಡಲು ಆ ಪವಿತ್ರ ಗ್ರಂಥವು ಶಕ್ತವಾಗಿದೆ. ಕ್ರಿಸ್ತ ಯೇಸುವಿನಲ್ಲಿನ ನಂಬಿಕೆಯ ಮೂಲಕ ಆ ಜ್ಞಾನವು ರಕ್ಷಣೆಯ ಕಡೆಗೆ ನಡೆಸುತ್ತದೆ. 16 ಪವಿತ್ರ ಗ್ರಂಥವನ್ನು ದೇವರು ದಯಪಾಲಿಸಿದನು. ಉಪದೇಶವನ್ನು ಮಾಡುವುದಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಅದು ಉಪಯುಕ್ತವಾಗಿದೆ. 17 ಆದ್ದರಿಂದ ದೇವರ ಸೇವಕರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.
Kannada Holy Bible: Easy-to-Read Version. All rights reserved. © 1997 Bible League International