M’Cheyne Bible Reading Plan
ವಿಶೇಷ ಹಬ್ಬದ ದಿನಗಳು
23 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಇಸ್ರೇಲರಿಗೆ ಹೀಗೆ ಆಜ್ಞಾಪಿಸು: ಯೆಹೋವನಿಂದ ಆರಿಸಲ್ಪಟ್ಟ ಹಬ್ಬದದಿನಗಳಲ್ಲಿ ಪವಿತ್ರಸಭೆ ಕೂಡಬೇಕೆಂಬುದಾಗಿ ಪ್ರಕಟಿಸಬೇಕು. ಇವು ನನ್ನ ವಿಶೇಷ ಹಬ್ಬದ ದಿನಗಳು.
ಸಬ್ಬತ್ತು
3 “ಆರು ದಿನಗಳಲ್ಲಿ ನೀವು ಕೆಲಸಮಾಡಿರಿ. ಆದರೆ ಏಳನೆಯ ದಿನವು ವಿಶೇಷವಾದ ವಿಶ್ರಾಂತಿ ದಿನವಾದ ಸಬ್ಬತ್ತಾಗಿದೆ. ಆ ದಿನದಲ್ಲಿ ಪವಿತ್ರಸಭೆ ಕೂಡಬೇಕು. ನೀವು ಯಾವ ಕೆಲಸವನ್ನೂ ಮಾಡಬಾರದು. ನಿಮ್ಮ ಎಲ್ಲಾ ಮನೆಗಳಲ್ಲಿ ಅದು ಯೆಹೋವನಿಗೆ ಮೀಸಲಾದ ಸಬ್ಬತ್ತಾಗಿದೆ.
ಪಸ್ಕಹಬ್ಬ
4 “ಇವುಗಳು ಯೆಹೋವನಿಂದ ಆರಿಸಲ್ಪಟ್ಟ ಹಬ್ಬದ ದಿನಗಳು. ಆ ಕಾಲಗಳಲ್ಲಿ ದೇವಾರಾಧನೆಗಾಗಿ ಸಭೆಕೂಟಗಳು ನಡೆಸಲ್ಪಡಬೇಕು. ನೇಮಕವಾದ ದಿನಗಳಲ್ಲಿ ಇವುಗಳನ್ನು ಪ್ರಕಟಿಸಬೇಕು. 5 ಯೆಹೋವನ ಪಸ್ಕಹಬ್ಬವು ಮೊದಲನೆ ತಿಂಗಳ ಹದಿನಾಲ್ಕನೆಯ ದಿನದ ಸಾಯಂಕಾಲ ಅಂದರೆ ಸೂರ್ಯಸ್ತಮಾನವಾದ ಸಮಯದಲ್ಲಿ ನಡೆಯುತ್ತದೆ.
ಹುಳಿಯಿಲ್ಲದ ರೊಟ್ಟಿಯ ಹಬ್ಬ
6 “ಅದೇ ತಿಂಗಳ ಹದಿನೈದನೆಯ ದಿನದಲ್ಲಿ ಯೆಹೋವನ ಹುಳಿಯಿಲ್ಲದ ರೊಟ್ಟಿಯ ಹಬ್ಬವಿರುತ್ತದೆ. ನೀವು ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನುವಿರಿ. 7 ಈ ಹಬ್ಬದ ದಿನದ ಮೊದಲನೆಯ ದಿನದಲ್ಲಿ ನೀವು ವಿಶೇಷ ಸಭೆಯಾಗಿ ಸೇರಬೇಕು. ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. 8 ಏಳು ದಿನಗಳವರೆಗೆ ನೀವು ಯೆಹೋವನಿಗೆ ಹೋಮವನ್ನು ಅರ್ಪಿಸಬೇಕು. ಏಳನೆಯ ದಿನದಲ್ಲಿ ನೀವು ಇನ್ನೊಂದು ಬಾರಿ ವಿಶೇಷ ಸಭೆಯಾಗಿ ಸೇರಬೇಕು. ನೀವು ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು.”
ಪ್ರಥಮ ಬೆಳೆಗಳ ಹಬ್ಬ
9 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 10 “ಇಸ್ರೇಲರಿಗೆ ಹೀಗೆ ಹೇಳು: ನಾನು ನಿಮಗೆ ಕೊಡುವ ದೇಶದಲ್ಲಿ ನೀವು ನೆಲೆಸಿದ ನಂತರ ಅಲ್ಲಿ ಬೆಳೆಯನ್ನು ಕೊಯ್ಯುವಿರಿ. ಆ ಸಮಯದಲ್ಲಿ ನಿಮ್ಮ ಬೆಳೆಯ ಪ್ರಥಮ ಸಿವುಡನ್ನು ಯಾಜಕನ ಬಳಿಗೆ ತರಬೇಕು. 11 ಯಾಜಕನು ಸಿವುಡನ್ನು ಯೆಹೋವನ ಸನ್ನಿಧಿಯಲ್ಲಿ ನಿವಾಳಿಸುವನು. ಆಗ ನೀವು ಸ್ವೀಕೃತರಾಗಲು ಯೋಗ್ಯರಾಗುವಿರಿ. ಸಬ್ಬತ್ತಾದ ನಂತರ ಯಾಜಕನು ಸಿವುಡನ್ನು ಯೆಹೋವನಿಗೆ ನಿವಾಳಿಸುವನು.
12 “ನೀವು ಸಿವುಡನ್ನು ನಿವಾಳಿಸುವ ದಿನದಲ್ಲಿ ಒಂದು ವರ್ಷದ ಗಂಡು ಕುರಿಮರಿಯನ್ನು ಅರ್ಪಿಸಬೇಕು. ಆ ಕುರಿಮರಿಯಲ್ಲಿ ಯಾವ ದೋಷವೂ ಇರಬಾರದು. ಅದು ಯೆಹೋವನಿಗೆ ಸರ್ವಾಂಗಹೋಮವಾಗಿ ಅರ್ಪಿತವಾಗುವುದಕ್ಕಾಗಿ ನೇಮಿತವಾಗಿರುವುದು. 13 ನೀವು ಎಣ್ಣೆ ಬೆರೆಸಿದ ಹದಿನಾರು ಬಟ್ಟಲು[a] ಶ್ರೇಷ್ಠ ಗೋಧಿಹಿಟ್ಟನ್ನು ಧಾನ್ಯಸಮರ್ಪಣೆಗಾಗಿ ಅರ್ಪಿಸಬೇಕು. ನೀವು ಕಾಲುಭಾಗ[b] ದ್ರಾಕ್ಷಾರಸವನ್ನು ಅರ್ಪಿಸಬೇಕು. ಆ ಯಜ್ಞದ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯಾಗಿರುತ್ತದೆ. 14 ನೀವು ಯಾವ ಹೊಸ ಧಾನ್ಯವನ್ನಾಗಲಿ ಹಣ್ಣನ್ನಾಗಲಿ ಹೊಸ ಧಾನ್ಯದಿಂದ ಮಾಡಿದ ರೊಟ್ಟಿಯನ್ನಾಗಲಿ ದೇವರಿಗೆ ಅರ್ಪಿಸುವ ಮೊದಲು ತಿನ್ನಬಾರದು. ಈ ನಿಯಮವು ನಿಮ್ಮ ಎಲ್ಲಾ ಸಂತತಿಯವರಿಗೂ ನಿಮ್ಮ ಎಲ್ಲಾ ನಿವಾಸ ಸ್ಥಾನಗಳಲ್ಲಿಯೂ ಶಾಶ್ವತವಾಗಿದೆ.
ಪಂಚಾಶತ್ತಮ ಹಬ್ಬ
15 “ಆ ಭಾನುವಾರ ಬೆಳಿಗ್ಗೆ ಮೊದಲುಗೊಂಡು ಅಂದರೆ ನೈವೇದ್ಯವಾಗಿ ನಿವಾಳಿಸುವುದಕ್ಕಾಗಿ ಸಿವುಡನ್ನು ತಂದ ದಿನದಿಂದ ಹಿಡಿದು ಏಳು ವಾರಗಳನ್ನು ಲೆಕ್ಕಿಸಿರಿ. 16 ಏಳು ವಾರಗಳು ಮುಗಿದ ಭಾನುವಾರ ಅಂದರೆ ಐವತ್ತು ದಿನಗಳ ನಂತರ ನೀವು ಯೆಹೋವನಿಗೆ ಹೊಸಬೆಳೆಯನ್ನು ಸಮರ್ಪಿಸುವಿರಿ. 17 ಆ ದಿನದಲ್ಲಿ ನಿಮ್ಮ ಮನೆಗಳಿಂದ ಎರಡು ರೊಟ್ಟಿಗಳನ್ನು ತನ್ನಿರಿ. ಆ ರೊಟ್ಟಿಗಳು ನೈವೇದ್ಯವಾಗಿ ನಿವಾಳಿಸಲ್ಪಡುವುದಕ್ಕಾಗಿದೆಯಷ್ಟೆ. ಹುಳಿಯನ್ನು ಉಪಯೋಗಿಸಿ ಹದಿನಾರು ಬಟ್ಟಲು[c] ಗೋಧಿಹಿಟ್ಟಿನಿಂದ ಎರಡು ರೊಟ್ಟಿಗಳನ್ನು ಮಾಡಿರಿ. ಅದು ನಿಮ್ಮ ಪ್ರಥಮ ಬೆಳೆಯಿಂದ ಯೆಹೋವನಿಗೆ ಸಮರ್ಪಿಸುವ ಕಾಣಿಕೆಯಾಗಿರುವುದು.
18 “ಜನರು ಸಮರ್ಪಿಸುವ ರೊಟ್ಟಿ, ಧಾನ್ಯ ಮತ್ತು ದ್ರಾಕ್ಷಾರಸಗಳೊಂದಿಗೆ ಒಂದು ಹೋರಿ, ಎರಡು ಟಗರು ಮತ್ತು ಒಂದು ವರ್ಷದ ಏಳು ಕುರಿಮರಿಗಳನ್ನು ಅರ್ಪಿಸಲಾಗುವುದು. ಆ ಪಶುಗಳಲ್ಲಿ ಯಾವ ದೋಷವು ಇರಬಾರದು. ಅವುಗಳು ಯೆಹೋವನಿಗೆ ಅಗ್ನಿಯ ಮೂಲಕ ಅರ್ಪಿತವಾಗಲಿರುವ ಸಮರ್ಪಣೆಗಳಾಗಿವೆ. ಅದರ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯಾಗಿದೆ. 19 ನೀವು ಪಾಪಪರಿಹಾರಕ ಸಮರ್ಪಣೆಯಾಗಿ ಒಂದು ಹೋತವನ್ನೂ ಸಮಾಧಾನಯಜ್ಞವಾಗಿ ಒಂದು ವರ್ಷದ ಎರಡು ಟಗರುಗಳನ್ನೂ ಅರ್ಪಿಸಬೇಕು.
20 “ಯಾಜಕನು ಅವುಗಳನ್ನು ಪ್ರಥಮ ಬೆಳೆಯಿಂದ ಮಾಡಿದ ರೊಟ್ಟಿಯೊಂದಿಗೆ ನೈವೇದ್ಯವಾಗಿ ಎರಡು ಕುರಿಮರಿಗಳೊಂದಿಗೆ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸುವನು. ಅವು ಯೆಹೋವನಿಗೆ ಪವಿತ್ರವಾಗಿರುತ್ತವೆ. ಅವು ಯಾಜಕರಿಗೆ ಸಲ್ಲುತ್ತವೆ. 21 ಅದೇ ದಿನದಲ್ಲಿ ನೀವು ಪವಿತ್ರಸಭೆಯಾಗಿ ಕೂಡಬೇಕು. ನೀವು ಯಾವ ಕೆಲಸವನ್ನು ಮಾಡಬಾರದು. ನಿಮ್ಮ ಎಲ್ಲಾ ಮನೆಗಳಲ್ಲಿ ಈ ನಿಯಮವು ಶಾಶ್ವತವಾಗಿರುವುದು.
22 “ಅಲ್ಲದೆ ನಿಮ್ಮ ದೇಶದಲ್ಲಿ ಪೈರುಗಳನ್ನು ಕೊಯ್ಯುವಾಗ ಹೊಲದ ಮೂಲೆಗಳವರೆಗೆ ಇರುವುದನ್ನೆಲ್ಲಾ ಕೊಯ್ಯಬೇಡಿರಿ. ನೆಲದ ಮೇಲೆ ಬೀಳುವ ಧಾನ್ಯಗಳನ್ನು ಹಕ್ಕಲಾಯಬಾರದು. ಬಡವರಿಗಾಗಿಯೂ ನಿಮ್ಮ ದೇಶದ ಮೂಲಕ ಪ್ರಯಾಣಮಾಡುವ ಪರದೇಶಸ್ಥರಿಗಾಗಿಯೂ ಅವುಗಳನ್ನು ಬಿಡಿರಿ. ನಾನೇ ನಿಮ್ಮ ದೇವರಾದ ಯೆಹೋವನು!”
ತುತ್ತೂರಿಗಳ ಹಬ್ಬ
23 ಯೆಹೋವನು ತಿರುಗಿ ಮೋಶೆಗೆ ಹೇಳಿದ್ದೇನೆಂದರೆ: 24 “ಇಸ್ರೇಲರಿಗೆ ಹೀಗೆ ಹೇಳು: ಏಳನೆಯ ತಿಂಗಳಿನ ಮೊದಲಿನ ದಿನವು ನಿಮಗೆ ವಿಶ್ರಾಂತಿಯ ವಿಶೇಷ ದಿನವಾಗಿರಬೇಕು. ಆಗ ನೀವು ಪವಿತ್ರಸಭೆಯಾಗಿ ಸೇರಬೇಕು. ಜ್ಞಾಪಕಮಾಡುವ ವಿಶೇಷ ಸಮಯಕ್ಕಾಗಿ ನೀವು ತುತ್ತೂರಿಯನ್ನು ಊದಿಸಬೇಕು. 25 ನೀವು ಯಾವ ಕೆಲಸವನ್ನೂ ಮಾಡಬಾರದು. ನೀವು ಅಗ್ನಿಯ ಮೂಲಕ ಯೆಹೋವನಿಗೆ ಸಮರ್ಪಣೆಯನ್ನು ಸಲ್ಲಿಸುವಿರಿ.”
ದೋಷಪರಿಹಾರಕ ದಿನ
26 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 27 “ಏಳನೆಯ ತಿಂಗಳಿನ ಹತ್ತನೆಯ ದಿನವು ದೋಷಪರಿಹಾರಕ ದಿನವಾಗಿರುವುದು. ಆಗ ಪವಿತ್ರ ಸಭೆಯಾಗಿ ಸೇರಬೇಕು. ನೀವು ಆಹಾರವನ್ನು ತಿನ್ನಬಾರದು. ನೀವು ಅಗ್ನಿಯ ಮೂಲಕ ಯೆಹೋವನಿಗೆ ಕಾಣಿಕೆಯನ್ನು ಸಲ್ಲಿಸಬೇಕು. 28 ನೀವು ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. ಯಾಕೆಂದರೆ ಅದು ದೋಷಪರಿಹಾರಕ ದಿನವಾಗಿರುತ್ತದೆ. ಆ ದಿನದಲ್ಲಿ ಯಾಜಕರು ಯೆಹೋವನ ಸನ್ನಿಧಿಗೆ ಹೋಗಿ ಆಚಾರವಿಧಿಗಳ ಪ್ರಕಾರ ನಿಮಗಾಗಿ ಪ್ರಾಯಶ್ಚಿತ್ತ ಮಾಡುವರು.
29 “ಈ ದಿನದಲ್ಲಿ ಯಾವನಾದರೂ ಉಪವಾಸ ಮಾಡದಿದ್ದರೆ ಅವನನ್ನು ಅವನ ಕುಲದಿಂದ ತೆಗೆದುಹಾಕಬೇಕು. 30 ಈ ದಿನದಲ್ಲಿ ಕೆಲಸಮಾಡುವವನನ್ನು ಇಸ್ರೇಲರೊಂದಿಗೆ ಇರದಂತೆ ನಾಶಮಾಡುವೆ. 31 ನೀವು ಅಂದು ಯಾವ ಕೆಲಸವನ್ನೂ ಮಾಡಬಾರದು. ನೀವು ಎಲ್ಲೇ ವಾಸವಾಗಿದ್ದರೂ ಈ ಕಟ್ಟಳೆ ನಿಮಗೆ ಶಾಶ್ವತವಾಗಿದೆ. 32 ಅದು ನಿಮಗಾಗಿ ವಿಶ್ರಾಂತಿಯ ವಿಶೇಷ ದಿನವಾಗಿರುವುದು. ನೀವು ಆಹಾರವನ್ನು ತಿನ್ನಬಾರದು.[d] ತಿಂಗಳಿನ ಒಂಭತ್ತನೆಯ ದಿನದ ನಂತರ ಸಾಯಂಕಾಲದಲ್ಲಿ ಈ ವಿಶ್ರಾಂತಿಯ ವಿಶೇಷ ದಿನವನ್ನು ಪ್ರಾರಂಭಿಸುವಿರಿ. ಈ ವಿಶ್ರಾಂತಿಯ ವಿಶೇಷ ದಿನವು ಆ ಸಾಯಂಕಾಲದಿಂದ ಹಿಡಿದು ಮರುದಿನ ಸಾಯಂಕಾಲದವರೆಗೆ ಮುಂದುವರಿಯುವುದು.”
ಪರ್ಣಶಾಲೆಗಳ ಹಬ್ಬ
33 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 34 “ಇಸ್ರೇಲರಿಗೆ ಹೀಗೆ ಹೇಳು: ಏಳನೆಯ ತಿಂಗಳಿನ ಹದಿನೈದನೆಯ ದಿನವು ಪರ್ಣಶಾಲೆಗಳ ಹಬ್ಬವಾಗಿರುತ್ತದೆ. ಯೆಹೋವನ ಈ ಹಬ್ಬದ ಕಾಲವು ಏಳು ದಿನಗಳವರೆಗೆ ಮುಂದುವರಿಯುವುದು. 35 ಮೊದಲನೆಯ ದಿನದಲ್ಲಿ ಪವಿತ್ರಸಭೆಯಾಗಿ ಸೇರಬೇಕು. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು. 36 ನೀವು ಏಳು ದಿನಗಳವರೆಗೆ ಅಗ್ನಿಯ ಮೂಲಕ ಯೆಹೋವನಿಗೆ ಯಜ್ಞವನ್ನು ಅರ್ಪಿಸಬೇಕು. ಎಂಟನೆಯ ದಿನದಲ್ಲಿ ಇನ್ನೊಂದು ಬಾರಿ ಸಭೆಯಾಗಿ ಸೇರಬೇಕು. ನೀವು ಅಗ್ನಿಯ ಮೂಲಕ ಯಜ್ಞವನ್ನು ಅರ್ಪಿಸಬೇಕು. ಇದು ಪವಿತ್ರಸಭೆಯಾಗಿರುವುದು. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು.
37 “ಯೆಹೋವನಿಗೆ ವಿಶೇಷ ಹಬ್ಬದ ದಿನಗಳು ಇವುಗಳೇ. ಈ ವಿಶೇಷ ದಿನಗಳಲ್ಲಿ ನೀವು ಪವಿತ್ರಸಭೆಯಾಗಿ ಸೇರಬೇಕು. ನೀವು ಅಗ್ನಿಯ ಮೂಲಕ ಯೆಹೋವನಿಗೆ ಸಮರ್ಪಣೆಯಾಗುವ ಸರ್ವಾಂಗಹೋಮ, ಧಾನ್ಯಸಮರ್ಪಣೆ, ಯಜ್ಞಗಳು ಮತ್ತು ಪಾನದ್ರವ್ಯಗಳನ್ನು ಅರ್ಪಿಸಬೇಕು. ನೀವು ಆ ಕಾಣಿಕೆಗಳನ್ನು ಸರಿಯಾದ ಸಮಯದಲ್ಲಿ ಅರ್ಪಿಸಬೇಕು. 38 ಯೆಹೋವನನ್ನು ಜ್ಞಾಪಕಮಾಡುವ ಸಬ್ಬತ್ ದಿನಗಳ ಜೊತೆಗೆ ನೀವು ಆ ಹಬ್ಬದ ದಿನಗಳನ್ನು ಆಚರಿಸಬೇಕು. ನೀವು ಆ ಕಾಣಿಕೆಗಳನ್ನು ನಿಮ್ಮ ಇತರ ಕಾಣಿಕೆಗಳ ಜೊತೆಗೆ ಅರ್ಪಿಸಬೇಕು. ನೀವು ಮಾಡಿದ ಹರಕೆಗಳನ್ನು ನೆರವೇರಿಸುವುದಕ್ಕಾಗಿ ಯೆಹೋವನಿಗೆ ಅರ್ಪಿಸುವ ಕಾಣಿಕೆಗಳ ಜೊತೆಗೆ ಅವುಗಳನ್ನು ಅರ್ಪಿಸಬೇಕು. ನೀವು ಯೆಹೋವನಿಗೆ ಅರ್ಪಿಸುವ ಯಾವುದೇ ವಿಶೇಷ ಸಮರ್ಪಣೆಗಳೊಂದಿಗೆ ಅವುಗಳನ್ನು ಸಮರ್ಪಿಸಬೇಕು.
39 “ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ನಿಮ್ಮ ದೇಶದಲ್ಲಿ ಪೈರುಗಳನ್ನು ಸಂಗ್ರಹಿಸಿದ ನಂತರ, ಏಳು ದಿನಗಳವರೆಗೆ ನೀವು ಯೆಹೋವನ ಹಬ್ಬವನ್ನು ಆಚರಿಸಬೇಕು. ನೀವು ಮೊದಲನೆಯ ಮತ್ತು ಎಂಟನೆಯ ದಿನದಲ್ಲಿ ವಿಶ್ರಮಿಸಬೇಕು. 40 ಪ್ರಥಮ ದಿನದಲ್ಲಿ ನೀವು ಮರಗಳಿಂದ ಉತ್ತಮ ಹಣ್ಣುಗಳನ್ನೂ ಖರ್ಜೂರಮರದ ಗರಿಗಳನ್ನೂ ಎಲೆತುಂಬಿದ ಕೊಂಬೆಗಳನ್ನೂ ವಿಲೋಸಸ್ಯಗಳನ್ನೂ ತೆಗೆದುಕೊಳ್ಳಬೇಕು. ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಈ ಹಬ್ಬದ ದಿನವನ್ನು ಏಳು ದಿನಗಳವರೆಗೆ ಆಚರಿಸಬೇಕು. 41 ನೀವು ಪ್ರತಿ ವರ್ಷ ಏಳು ದಿನಗಳವರೆಗೆ ಈ ಹಬ್ಬದ ದಿನವನ್ನು ಆಚರಿಸಬೇಕು. ಈ ನಿಯಮ ಶಾಶ್ವತವಾಗಿದೆ. ಏಳನೆಯ ತಿಂಗಳಲ್ಲಿ ಈ ಹಬ್ಬದ ದಿನವನ್ನು ನೀವು ಆಚರಿಸಬೇಕು. 42 ನೀವು ಏಳು ದಿನಗಳವರೆಗೆ ಪರ್ಣಶಾಲೆಗಳಲ್ಲಿ ವಾಸಿಸಬೇಕು. ಇಸ್ರೇಲರಲ್ಲಿ ಹುಟ್ಟಿದವರೆಲ್ಲರೂ ಆ ಪರ್ಣಶಾಲೆಗಳಲ್ಲಿ ವಾಸಿಸುವರು. 43 ನಾನು ಇಸ್ರೇಲರನ್ನು ಈಜಿಪ್ಟಿನಿಂದ ಹೊರಗೆ ಕರೆದು ತಂದಾಗ, ಈ ಪರ್ಣಶಾಲೆಗಳಲ್ಲಿ ವಾಸಿಸುವಂತೆ ಮಾಡಿದವನು ನಾನೇ ಎಂದು ನಿಮ್ಮ ಸಂತತಿಯವರು ತಿಳಿದುಕೊಳ್ಳುವರು. ನಾನೇ ನಿಮ್ಮ ದೇವರಾದ ಯೆಹೋವನು!”
44 ಆದ್ದರಿಂದ ಮೋಶೆಯು ಯೆಹೋವನನ್ನು ಸನ್ಮಾನಿಸುವುದಕ್ಕಾಗಿ ಸೇರಿಬರುವ ವಿಶೇಷ ಸಭೆಗಳ ಕುರಿತು ಜನರಿಗೆ ಹೇಳಿದನು.
ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.
30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
ಆದ್ದರಿಂದ ನಿನ್ನನ್ನು ಕೊಂಡಾಡುವೆನು.
2 ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
ನೀನು ನನ್ನನ್ನು ಗುಣಪಡಿಸಿದೆ.
3 ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]
4 ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
5 ಆತನ ಕೋಪವು ಕ್ಷಣಮಾತ್ರವಿರುವುದು.
ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.
6 ನಾನು ಸುರಕ್ಷಿತವಾಗಿದ್ದಾಗ
ನನಗೆ ಕೇಡೇ ಇಲ್ಲವೆಂದುಕೊಂಡೆನು.
7 ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
ಭಯದಿಂದ ನಡುಗತೊಡಗಿದೆ.
8 ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
9 “ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
ಅವರು ನಿನ್ನನ್ನು ಸ್ತುತಿಸುವುದಿಲ್ಲ!
ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.
11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.
ಐಶ್ವರ್ಯವು ಸಂತೋಷವನ್ನು ಕೊಡಲಾರದು
6 ಈ ಲೋಕದಲ್ಲಿ ಮತ್ತೊಂದು ಅನ್ಯಾಯವನ್ನು ಕಂಡಿದ್ದೇನೆ. ಅದನ್ನು ಗ್ರಹಿಸಿಕೊಳ್ಳುವುದಕ್ಕೂ ಕಷ್ಟ. 2 ದೇವರು ಒಬ್ಬನಿಗೆ ಐಶ್ವರ್ಯವನ್ನು, ಆಸ್ತಿಪಾಸ್ತಿಯನ್ನು ಮತ್ತು ಘನತೆಯನ್ನು ಕೊಡುವನು. ಅವನು ತನಗೆ ಈಗ ಬೇಕಾಗಿರುವ ಮತ್ತು ಮುಂದೆ ಬೇಕಾಗುವ ಎಲ್ಲವನ್ನೂ ಹೊಂದಿರುವನು. ಆದರೆ ಅವುಗಳನ್ನು ಅನುಭವಿಸಲು ದೇವರು ಅವನಿಗೆ ಅವಕಾಶಕೊಡುವುದಿಲ್ಲ. ಮತ್ತೊಬ್ಬನು ಬಂದು ಎಲ್ಲವನ್ನೂ ತೆಗೆದುಕೊಳ್ಳುವನು. ಇದು ಸಹ ತುಂಬ ಕೆಟ್ಟದ್ದೂ ಅರ್ಥವಿಲ್ಲದ್ದೂ ಆಗಿದೆ.
3 ಒಬ್ಬನು ಬಹುಕಾಲ ಬದುಕಬಹುದು. ಅವನಿಗೆ ನೂರು ಮಂದಿ ಮಕ್ಕಳಿರಬಹುದು. ಆದರೆ ಅವನಿಗೆ ಸುಖತೃಪ್ತಿಯೂ ಸತ್ತ ಮೇಲೆ ಉತ್ತರಕ್ರಿಯೆಯೂ ಇಲ್ಲದಿದ್ದರೆ ಹುಟ್ಟುವಾಗಲೇ ಸಾಯುವ ಮಗು ಅವನಿಗಿಂತಲೂ ಉತ್ತಮ. 4 ಮಗುವು ಹುಟ್ಟುವಾಗಲೇ ಸತ್ತುಹೋದರೆ ಅದಕ್ಕೆ ನಿಜವಾಗಿಯೂ ಅರ್ಥವಿಲ್ಲ. ಅದು ಹೆಸರನ್ನೂ ಹೊಂದಿಲ್ಲದೆ ಕತ್ತಲೆಯ ಗುಂಡಿಯಲ್ಲಿ ಹೂಳಲ್ಪಡುವುದು. 5 ಅದು ಸೂರ್ಯನನ್ನು ನೋಡಲೇ ಇಲ್ಲ. ಅದಕ್ಕೆ ತಿಳಿವಳಿಕೆಯೂ ಇಲ್ಲ. ಆದರೆ ದೇವರು ಅನುಗ್ರಹಿಸಿದವುಗಳಲ್ಲಿ ಸಂತೋಷಪಡದವನಿಗಿಂತ ಆ ಮಗುವೇ ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳುವುದು. 6 ಅವನು ಎರಡು ಸಾವಿರ ವರ್ಷಗಳ ಕಾಲ ಬದುಕಿಯೂ ಜೀವನದಲ್ಲಿ ಸಂತೋಷಪಡದಿದ್ದರೆ ಏನು ಪ್ರಯೋಜನ? ಆ ಮಗುವೂ ಅವನೂ ಕತ್ತಲೆ ಗುಂಡಿಗೇ ಹೋಗುವರು.
7 ಮನುಷ್ಯನು ದುಡಿಯುವುದೆಲ್ಲಾ ಊಟಕ್ಕಾಗಿಯೇ. ಆದರೂ ಅವನಿಗೆ ತೃಪ್ತಿಯೇ ಇಲ್ಲ. 8 ಆದ್ದರಿಂದ ಜ್ಞಾನಿಯು ಮೂಢನಿಗಿಂತ ಉತ್ತಮನಲ್ಲ. ಬಡವರಾಗಿದ್ದರೂ ಜೀವನವನ್ನು ಅರ್ಥಮಾಡಿಕೊಂಡು ಜೀವಿಸುವುದೇ ಮೇಲು, 9 ದುರಾಶೆಪಡುವುದಕ್ಕಿಂತ ಇರುವುದರಲ್ಲಿ ಸಂತೋಷಪಡುವುದೇ ಉತ್ತಮ. ದುರಾಶೆಯಿಂದ ಪ್ರಯೋಜನವಿಲ್ಲ. ಅದು ಸಹ ಗಾಳಿಯನ್ನು ಹಿಂದಟ್ಟಿದಂತಿದೆ.
10-11 ಮನುಷ್ಯನು ಕೇವಲ ಮನುಷ್ಯನಾಗಿ ಸೃಷ್ಟಿಸಲ್ಪಟ್ಟಿದ್ದಾನೆ. ಅದರ ಬಗ್ಗೆ ವಾದಮಾಡುವುದರಿಂದ ಉಪಯೋಗವಿಲ್ಲ. ಅಲ್ಲದೆ ಮನುಷ್ಯನು ದೇವರೊಂದಿಗೆ ವಾದಮಾಡಲಾರನು. ಯಾಕೆಂದರೆ ದೇವರು ಮನುಷ್ಯನಿಗಿಂತಲೂ ಬಲಿಷ್ಠನಾಗಿದ್ದಾನೆ. ಆದ್ದರಿಂದ ವಾದವು ಕೇವಲ ನಿರರ್ಥಕವಾಗಿದೆ.
12 ಮನುಷ್ಯನ ಅಲ್ಪಕಾಲದ ಜೀವನದಲ್ಲಿ ಅವನಿಗೆ ಯಾವುದು ಉತ್ತಮವೆಂದು ಯಾರಿಗೆ ಗೊತ್ತು? ಅವನ ಜೀವನವು ನೆರಳಿನಂತೆ ಕಳೆದುಹೋಗುವುದು. ಮುಂದೆ ಏನಾಗುವುದೆಂದು ಯಾರೂ ಅವನಿಗೆ ಹೇಳಲಾರರು.
ಕ್ರಿಸ್ತ ಯೇಸುವಿನ ನಿಷ್ಠಾವಂತ ಸೈನಿಕ
2 ಕ್ರಿಸ್ತ ಯೇಸುವಿನ ನಿಷ್ಠಾವಂತ ಸೈನಿಕನಾಗಿರುವ ತಿಮೊಥೆಯನೇ, ನೀನು ನನಗೆ ಮಗನಂತಿರುವೆ. ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ ಬಲ ಹೊಂದಿದವನಾಗು. 2 ನಾನು ಉಪದೇಶಿಸಿದ ಸಂಗತಿಗಳನ್ನು ನೀನು ಕೇಳಿರುವೆ. ಅವುಗಳನ್ನು ಇತರ ಅನೇಕ ಜನರೂ ಕೇಳಿದ್ದಾರೆ. ನೀನು ಆ ಸಂಗತಿಗಳನ್ನು ಉಪದೇಶಿಸಬೇಕು. ನಿನಗೆ ನಂಬಿಗಸ್ತರಾದ ಕೆಲವರ ವಶಕ್ಕೆ ಆ ಉಪದೇಶಗಳನ್ನು ಕೊಡು. ಆಗ ಅವರು ಆ ಸಂಗತಿಗಳನ್ನು ಇತರರಿಗೆ ಉಪದೇಶಿಸಲು ಸಾಧ್ಯವಾಗುತ್ತದೆ. 3 ನಮಗಿರುವ ತೊಂದರೆಗಳಲ್ಲಿ ನೀನೂ ಪಾಲುಗಾರನಾಗು. ಕ್ರಿಸ್ತ ಯೇಸುವಿನ ನಿಜವಾದ ಸೈನಿಕನಂತೆ ಆ ತೊಂದರೆಗಳನ್ನು ಸ್ವೀಕರಿಸು. 4 ಸೈನಿಕನು ತನ್ನ ಸೈನ್ಯಾಧಿಕಾರಿಯನ್ನು ಮೆಚ್ಚಿಸಲು ಇಷ್ಟಪಡುತ್ತಾನೆ. ಆದ್ದರಿಂದ ಆ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದಂತೆ ಎಚ್ಚರಿಕೆಯಿಂದಿರುವನು. 5 ಓಟದ ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ, ಓಟಗಾರನು ಎಲ್ಲಾ ನಿಯಮಗಳನ್ನು ಪಾಲಿಸಬೇಕು. 6 ಕಷ್ಟಪಟ್ಟು ಕೆಲಸಮಾಡುವ ರೈತನಿಗೆ ಬೆಳೆಯ ಪ್ರಥಮ ಪಾಲು ದೊರೆಯಬೇಕು. 7 ನಾನು ಹೇಳುತ್ತಿರುವ ಈ ಸಂಗತಿಗಳನ್ನು ಕುರಿತು ಆಲೋಚಿಸು. ಈ ಸಂಗತಿಗಳನ್ನೆಲ್ಲ ಅರ್ಥಮಾಡಿಕೊಳ್ಳುವ ವಿವೇಕವನ್ನು ಪ್ರಭುವು ನಿನಗೆ ದಯಪಾಲಿಸುವನು.
8 ಯೇಸು ಕ್ರಿಸ್ತನನ್ನು ನೆನಪು ಮಾಡಿಕೊ. ಆತನು ದಾವೀದನ ವಂಶದವನು. ಯೇಸು ಸತ್ತನಂತರ ಜೀವಂತವಾಗಿ ಮೇಲೆದ್ದು ಬಂದನು. ಈ ಸುವಾರ್ತೆಯನ್ನೇ ನಾನು ಜನರಿಗೆ ತಿಳಿಸುತ್ತೇನೆ. 9 ಈ ಕಾರಣದಿಂದಲೇ ಸಂಕಟವನ್ನು ಅನುಭವಿಸುತ್ತಿದ್ದೇನೆ. ದುಷ್ಕರ್ಮಿಯಂತೆ ಸಂಕೋಲೆಗಳಿಂದ ಬಂಧಿಸಲ್ಪಟ್ಟಿದ್ದೇನೆ. ಆದರೆ ದೇವರ ಉಪದೇಶಕ್ಕೆ ಬಂಧನವಿಲ್ಲ. 10 ಆದ್ದರಿಂದ ನಾನು ತಾಳ್ಮೆಯಿಂದಲೇ ಈ ತೊಂದರೆಗಳನ್ನು ಅಂಗೀಕರಿಸಿದ್ದೇನೆ. ಏಕೆಂದರೆ ದೇವರು ಆರಿಸಿರುವ ಜನರೆಲ್ಲರಿಗೂ ಸಹಾಯ ಮಾಡಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. ಆ ಜನರು ಕ್ರಿಸ್ತ ಯೇಸುವಿನಲ್ಲಿ ರಕ್ಷಣೆ ಪಡೆಯಲೆಂದು ನಾನು ಈ ತೊಂದರೆಗಳನ್ನೆಲ್ಲ ಸ್ವೀಕರಿಸಿಕೊಂಡಿದ್ದೇನೆ. ಈ ರಕ್ಷಣೆಯೊಂದಿಗೆ ನಿತ್ಯಪ್ರಭಾವವು ದೊರೆಯುತ್ತದೆ.
11 ಈ ಉಪದೇಶವು ಸತ್ಯವಾದದ್ದು:
ನಾವು ಆತನೊಂದಿಗೆ (ಯೇಸು) ಸತ್ತಿದ್ದರೆ, ಆತನೊಡನೆ ಜೀವಿಸುವೆವು.
12 ನಾವು ಸಂಕಟವನ್ನು ಸ್ವೀಕರಿಸಿಕೊಂಡರೆ, ಆತನೊಡನೆ ಆಳುವೆವು.
ನಾವು ಆತನನ್ನು ಸ್ವೀಕರಿಸಿಕೊಳ್ಳದಿದ್ದರೆ, ಆತನೂ ನಮ್ಮನ್ನು ಸ್ವೀಕರಿಸಿಕೊಳ್ಳುವುದಿಲ್ಲ.
13 ನಾವು ನಂಬಿಗಸ್ತರಾಗಿಲ್ಲದಿದ್ದರೂ, ಆತನು ಇನ್ನೂ ನಂಬಿಗಸ್ತನಾಗಿರುವನು;
ಏಕೆಂದರೆ ಆತನು ತನ್ನ ಸ್ವಭಾವಕ್ಕೆ ವಿರುದ್ಧನಾಗಲಾರನು.
ಯೋಗ್ಯನಾದ ಕೆಲಸಗಾರನು
14 ಜನರಿಗೆ ಈ ಸಂಗತಿಗಳನ್ನು ತಿಳಿಸುತ್ತಲೇ ಇರು. ಪದಗಳ ಬಗ್ಗೆ ವಾಗ್ವಾದ ಮಾಡಬಾರದೆಂದು ಅವರಿಗೆ ದೇವರ ಸನ್ನಿಧಿಯಲ್ಲಿ ಎಚ್ಚರಿಕೆ ನೀಡು. ವಾಗ್ವಾದಗಳಿಂದ ಯಾರಿಗೂ ಪ್ರಯೋಜನವಿಲ್ಲ. ವಾಗ್ವಾದವನ್ನು ಕೇಳುವ ಜನರು ಅದರಿಂದ ನಾಶವಾಗುತ್ತಾರೆ. 15 ದೇವರ ದೃಷ್ಟಿಯಲ್ಲಿ ಯೋಗ್ಯ ವ್ಯಕ್ತಿಯಾಗಲು ನಿನ್ನಿಂದಾದಷ್ಟು ಪ್ರಯಾಸಪಡು ಮತ್ತು ನಿನ್ನನ್ನೇ ಒಪ್ಪಿಸಿಕೊಡು. ತನ್ನ ಕೆಲಸದಲ್ಲಿ ನಾಚಿಕೆಪಡದಿರುವ ಕೆಲಸಗಾರನಾಗು, ಅಂದರೆ ಸತ್ಯೋಪದೇಶವನ್ನು ಯೋಗ್ಯವಾದ ರೀತಿಯಲ್ಲಿ ತಿಳಿಸುವವನಾಗು.
16 ದೇವರಿಂದ ಬಂದಿಲ್ಲದ ನಿರರ್ಥಕ ಸಂಗತಿಗಳನ್ನು ಮಾತನಾಡುವ ಜನರಿಂದ ದೂರವಾಗಿರು. ಆ ರೀತಿಯ ಮಾತುಗಳು ಜನರನ್ನು ದೇವರಿಂದ ಮತ್ತಷ್ಟು ದೂರ ಮಾಡುತ್ತವೆ. 17 ಅವರ ಕೆಟ್ಟ ಉಪದೇಶಗಳು ದೇಹದಲ್ಲಿ ಹರಡಿಕೊಳ್ಳುವ ಕಾಯಿಲೆಯಂತೆ ವ್ಯಾಪಿಸಿಕೊಳ್ಳುತ್ತವೆ. ಹುಮೆನಾಯನು ಮತ್ತು ಪಿಲೇತನು ಅಂತಹ ಜನರಾಗಿದ್ದಾರೆ. 18 ಅವರು ಸತ್ಯೋಪದೇಶವನ್ನು ತಿರಸ್ಕರಿಸಿದರು. ಎಲ್ಲಾ ಜನರಿಗೆ ಉಂಟಾಗುವ ಪುನರುತ್ಥಾನವು ಈಗಾಗಲೇ ಆಗಿ ಹೋಗಿದೆಯೆಂದು ಅವರು ಹೇಳುತ್ತಾರೆ. ಅವರಿಬ್ಬರು ಕೆಲವು ಜನರ ನಂಬಿಕೆಯನ್ನು ಹಾಳುಮಾಡುತ್ತಿದ್ದಾರೆ.
19 ಆದರೆ ದೇವರ ಭದ್ರವಾದ ಬುನಾದಿಯು ಬದಲಾಗುವುದೇ ಇಲ್ಲ. “ಪ್ರಭುವಿಗೆ ತನ್ನವರು ಯಾರೆಂಬುದು ತಿಳಿದಿದೆ”(A) ಎಂತಲೂ “ಪ್ರಭುವಿನಲ್ಲಿ ನಂಬಿಕೆಯಿಟ್ಟಿರುವವರೆಲ್ಲರೂ ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು” ಎಂತಲೂ ಆ ಬುನಾದಿಯ ಮೇಲೆ ಕೆತ್ತಲಾಗಿದೆ.
20 ದೊಡ್ಡ ಮನೆಯಲ್ಲಿ ಚಿನ್ನಬೆಳ್ಳಿಗಳಿಂದ ಮಾಡಿದ ವಸ್ತುಗಳಿರುತ್ತವೆ. ಅಲ್ಲದೆ ಮರದಿಂದ, ಮಣ್ಣಿನಿಂದ ಮಾಡಿದ ವಸ್ತುಗಳೂ ಇರುತ್ತವೆ. ಕೆಲವನ್ನು ವಿಶೇಷ ಕಾರ್ಯಕ್ಕಾಗಿ ಬಳಸುತ್ತಾರೆ. ಇತರ ವಸ್ತುಗಳನ್ನು ಹೀನವಾದ ಕೃತ್ಯಗಳಿಗೆ ಬಳಸುತ್ತಾರೆ. 21 ಹೀಗಿರಲಾಗಿ ಒಬ್ಬನು ತನ್ನ ದುಷ್ಕೃತ್ಯಗಳನ್ನು ತೊರೆದು ತನ್ನನ್ನು ಶುದ್ಧೀಕರಿಸಿಕೊಂಡರೆ ಅವನನ್ನು ಬಳಸಲಾಗುವುದು. ಅವನು ದೇವರ ಸೇವೆಗೆ ಮೀಸಲಾಗುತ್ತಾನೆ; ಯಜಮಾನನಿಗೆ ಉಪಯುಕ್ತನಾಗುತ್ತಾನೆ; ಸತ್ಕಾರ್ಯಗಳನ್ನು ಕೈಕೊಳ್ಳಲು ಸಿದ್ಧನಾಗಿರುತ್ತಾನೆ.
22 ಯುವಕರು ಇಷ್ಟಪಡುವ ಕೆಟ್ಟಕಾರ್ಯಗಳಿಂದ ನೀನು ದೂರವಾಗಿರು. ಪ್ರೀತಿ, ನಂಬಿಕೆ ಮತ್ತು ಶಾಂತಿಯನ್ನು ಹೊಂದಿದವನಾಗಿದ್ದು ಯೋಗ್ಯವಾದ ರೀತಿಯಲ್ಲಿ ಜೀವಿಸಲು ಬಹಳವಾಗಿ ಪ್ರಯತ್ನಪಡು. ಪ್ರಭುವಿನಲ್ಲಿ ಭರವಸವಿಟ್ಟಿರುವ ಮತ್ತು ಪರಿಶುದ್ಧ ಹೃದಯ ಹೊಂದಿರುವ ಜನರೊಂದಿಗೆ ಒಟ್ಟುಗೂಡಿ ಈ ಕಾರ್ಯಗಳನ್ನು ಮಾಡು. 23 ಮೂಢತನದ ಮತ್ತು ಕ್ಷುಲ್ಲಕವಾದ ವಾದವಿವಾದಗಳಿಂದ ದೂರವಾಗಿರು. ಆ ವಾಗ್ವಾದಗಳು ಬೆಳೆದು ದೊಡ್ಡದಾಗುತ್ತವೆ ಎಂಬುದು ನಿನಗೆ ತಿಳಿದಿದೆ. 24 ಪ್ರಭುವಿನ ಸೇವಕನು ವಾಗ್ವಾದ ಮಾಡಲೇಬಾರದು. ಅವನು ಪ್ರತಿಯೊಬ್ಬರಿಗೂ ದಯೆತೋರಬೇಕು; ಒಳ್ಳೆಯ ಉಪದೇಶಕನಾಗಿರಬೇಕು; ತಾಳ್ಮೆಯಿಂದಿರಬೇಕು. 25 ಅವನು ತನ್ನೊಂದಿಗೆ ಸಮ್ಮತಿಸದಿರುವ ಜನರಿಗೆ ಸಾತ್ವಿಕ ರೀತಿಯಲ್ಲಿ ಉಪದೇಶ ಮಾಡಬೇಕು. ಅವರು ಸತ್ಯವನ್ನು ಅಂಗೀಕರಿಸಿಕೊಳ್ಳುವಂತೆ ದೇವರು ಅವರ ಹೃದಯಗಳನ್ನು ಪರಿವರ್ತಿಸಬಲ್ಲನು. 26 ಸೈತಾನನು ಆ ಜನರನ್ನು ತನ್ನ ಬಲೆಗೆ ಬೀಳಿಸಿ, ತನ್ನ ಅಪೇಕ್ಷೆಗೆ ತಕ್ಕಂತೆ ಅವರಿಂದ ಕಾರ್ಯಗಳನ್ನು ಮಾಡಿಸುತ್ತಿದ್ದಾನೆ. ಆದರೆ ಅವರು ಎಚ್ಚರಗೊಂಡು, ಸೈತಾನನು ತಮ್ಮನ್ನು ವಶಪಡಿಸಿ ಕೊಂಡಿರುವುದನ್ನು ಗುರುತಿಸಬಹುದು ಹಾಗೂ ಸೈತಾನನ ಬಲೆಯಿಂದ ತಪ್ಪಿಸಿಕೊಂಡು ಬಿಡುಗಡೆ ಹೊಂದಬಹುದು.
Kannada Holy Bible: Easy-to-Read Version. All rights reserved. © 1997 Bible League International