Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 21

ಯಾಜಕರು ಅನುಸರಿಸತಕ್ಕ ನಿಯಮಗಳು

21 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಯಾಜಕರಾದ ಆರೋನನ ಮಕ್ಕಳಿಗೆ ಈ ಸಂಗತಿಗಳನ್ನು ಹೇಳು: ಯಾಜಕನು ಸತ್ತ ವ್ಯಕ್ತಿಯನ್ನು ಮುಟ್ಟಿ ತನ್ನನ್ನು ಅಶುದ್ಧಮಾಡಿಕೊಳ್ಳಬಾರದು. ಆದರೆ ಸತ್ತವನು ಅವನ ಹತ್ತಿರದ ಸಂಬಂಧಿಕರಲ್ಲಿ ಒಬ್ಬನಾಗಿದ್ದರೆ, ಆಗ ಅವನು ಆ ಹೆಣವನ್ನು ಮುಟ್ಟಬಹುದು. ಸತ್ತ ವ್ಯಕ್ತಿ ಅವನ ತಾಯಿ, ತಂದೆ, ಮಗ, ಮಗಳು, ಸಹೋದರ ಅಥವಾ ಮದುವೆಯಾಗದ ಸಹೋದರಿಯಾಗಿದ್ದರೆ[a] ಯಾಜಕನು ತನ್ನನ್ನು ಅಶುದ್ಧಮಾಡಿಕೊಳ್ಳಬಹುದು. (ಈ ಸಹೋದರಿಗೆ ಗಂಡನಿಲ್ಲದಿರುವುದರಿಂದ ಅವಳು ಅವನಿಗೆ ಹತ್ತಿರದ ಸಂಬಂಧಿಯಾಗಿದ್ದಾಳೆ. ಆದ್ದರಿಂದ ಯಾಜಕನು ತನ್ನನ್ನು ಅಶುದ್ಧಮಾಡಿಕೊಳ್ಳಬಹುದು.) ಆದರೆ ಸತ್ತವನು ಕೇವಲ ಅವನ ಗುಲಾಮರಲ್ಲಿ ಒಬ್ಬನಾಗಿದ್ದರೆ ಯಾಜಕನು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದು.

“ಯಾಜಕರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳಬಾರದು; ತಮ್ಮ ಗಡ್ಡದ ಪಾರ್ಶ್ವಗಳನ್ನು ಕತ್ತರಿಸಿ ವಿಕಾರಗೊಳಿಸಬಾರದು; ತಮ್ಮ ದೇಹಗಳಲ್ಲಿ ಯಾವ ಗಾಯ ಮಾಡಿಕೊಳ್ಳಬಾರದು. ಅವರು ತಮ್ಮ ದೇವರಿಗೆ ಪ್ರತಿಷ್ಠಿತರಾಗಿರಬೇಕು. ಅವರು ದೇವರ ಹೆಸರಿಗೆ ಗೌರವ ತೋರಿಸಬೇಕು. ಯಾಕೆಂದರೆ ಅವರು ಅಗ್ನಿಯ ಮೂಲಕ ಅರ್ಪಿಸಿದ ರೊಟ್ಟಿಯನ್ನು ಮತ್ತು ಕಾಣಿಕೆಗಳನ್ನು ಯೆಹೋವನಿಗೆ ತೆಗೆದುಕೊಂಡು ಹೋಗುತ್ತಾರೆ. ಆದ್ದರಿಂದ ಅವರು ಪವಿತ್ರರಾಗಿರಬೇಕು.

“ಯಾಜಕನು ವಿಶೇಷವಾದ ರೀತಿಯಲ್ಲಿ ದೇವರ ಸೇವೆ ಮಾಡುತ್ತಾನೆ. ಆದ್ದರಿಂದ ಯಾಜಕನು ಬೇರೆಯವರೊಡನೆ ಲೈಂಗಿಕ ಸಂಬಂಧಮಾಡಿದ ಸ್ತ್ರೀಯನ್ನು ಮದುವೆಯಾಗಬಾರದು. ಯಾಜಕನು ವೇಶ್ಯೆಯನ್ನಾಗಲಿ ಗಂಡ ಬಿಟ್ಟವಳನ್ನಾಗಲಿ ಮದುವೆಯಾಗಬಾರದು. ಯಾಜಕನು ವಿಶೇಷವಾದ ರೀತಿಯಲ್ಲಿ ದೇವರ ಸೇವೆ ಮಾಡುತ್ತಾನೆ. ಆದ್ದರಿಂದ ನೀವು ಅವನನ್ನು ವಿಶೇಷವಾದ ರೀತಿಯಲ್ಲಿ ನೋಡಿಕೊಳ್ಳಬೇಕು. ಯಾಕೆಂದರೆ ಅವನು ಪವಿತ್ರ ವಸ್ತುಗಳನ್ನು ಸಮರ್ಪಿಸುತ್ತಾನಲ್ಲ! ಅವನು ದೇವರ ಬಳಿಗೆ ಪವಿತ್ರ ರೊಟ್ಟಿಯನ್ನು ತರುತ್ತಾನೆ. ನಾನೇ ಪರಿಶುದ್ಧನು! ನಾನೇ ಯೆಹೋವನು! ಮತ್ತು ನಾನು ನಿಮ್ಮನ್ನು ಪರಿಶುದ್ಧಗೊಳಿಸುತ್ತೇನೆ.

“ಯಾಜಕನ ಮಗಳು ವೇಶ್ಯೆಯಾಗಿದ್ದರೆ, ಅವಳು ತನ್ನ ಗೌರವವನ್ನು ಹಾಳುಮಾಡಿಕೊಂಡವಳೂ ತನ್ನ ತಂದೆಗೆ ಅವಮಾನವನ್ನು ಉಂಟುಮಾಡಿದವಳೂ ಆಗಿದ್ದಾಳೆ. ಅವಳನ್ನು ಸುಟ್ಟುಹಾಕಬೇಕು.

10 “ಪ್ರಧಾನಯಾಜಕನು ಅವನ ಸಹೋದರರೊಳಗಿಂದ ಆರಿಸಲ್ಪಟ್ಟವನಾಗಿದ್ದಾನೆ. ಅಭಿಷೇಕತೈಲವು ಅವನ ತಲೆಯ ಮೇಲೆ ಹೊಯ್ಯಲ್ಪಟ್ಟಿದೆ. ಈ ರೀತಿಯಾಗಿ ಅವನು ಪ್ರಧಾನಯಾಜಕನ ವಿಶೇಷ ಕೆಲಸಕ್ಕೆ ಆರಿಸಲ್ಪಟ್ಟಿದ್ದಾನೆ. ಅವನು ವಿಶೇಷ ಬಟ್ಟೆಗಳನ್ನು ಧರಿಸಿಕೊಳ್ಳಲು ಆರಿಸಲ್ಪಟ್ಟಿದ್ದಾನೆ. ಆದ್ದರಿಂದ ಅವನು ಬಹಿರಂಗವಾಗಿ ದುಃಖ ಸೂಚಿಸುವ ಕಾರ್ಯಗಳನ್ನು ಮಾಡಬಾರದು. ಅವನು ತನ್ನ ಕೂದಲನ್ನು ಕೆದರಿಕೊಳ್ಳಬಾರದು. ಅವನು ತನ್ನ ಬಟ್ಟೆಗಳನ್ನು ಹರಿದುಕೊಳ್ಳಬಾರದು. 11 ಅವನು ಹೆಣವನ್ನು ಮುಟ್ಟಿ ತನ್ನನ್ನು ಅಶುದ್ಧನನ್ನಾಗಿ ಮಾಡಿಕೊಳ್ಳಬಾರದು. ಅದು ಅವನ ತಂದೆಯ ಶವವಾಗಿದ್ದರೂ ಸರಿ, ಅಥವಾ ತಾಯಿಯ ಶವವಾಗಿದ್ದರೂ ಸರಿ, ಅವನು ಅದರ ಬಳಿಗೆ ಹೋಗಬಾರದು. 12 ಪ್ರಧಾನಯಾಜಕನು ದೇವರ ಪರಿಶುದ್ಧ ಸ್ಥಳವನ್ನು ಬಿಟ್ಟು ಹೊರಗೆ ಹೋದರೆ ಅಶುದ್ಧನಾಗುವನು. ಅಲ್ಲದೆ ಅವನಿಂದ ದೇವರ ಪರಿಶುದ್ಧಸ್ಥಳವು ಅಶುದ್ಧವಾಗುವುದು. ಅಭಿಷೇಕತೈಲವು ಪ್ರಧಾನಯಾಜಕನ ತಲೆಯ ಮೇಲೆ ಹೊಯ್ಯಲ್ಪಟ್ಟಿದೆ. ಇದು ಅವನನ್ನು ಇತರ ಜನರಿಂದ ಪ್ರತ್ಯೇಕಗೊಳಿಸಿದೆ. ನಾನೇ ಯೆಹೋವನು!

13 “ಪ್ರಧಾನಯಾಜಕನು ಕನ್ಯೆಯಾಗಿರುವವಳನ್ನು ಮದುವೆಯಾಗಬೇಕು. 14 ಪ್ರಧಾನಯಾಜಕನು ಬೇರೆ ಪುರುಷನೊಡನೆ ಲೈಂಗಿಕ ಸಂಬಂಧ ಮಾಡಿದ ಸ್ತ್ರೀಯನ್ನು ಮದುವೆಯಾಗಬಾರದು. ಪ್ರಧಾನಯಾಜಕನು ವೇಶ್ಯಾ ಸ್ತ್ರೀಯನ್ನಾಗಲಿ ಗಂಡ ಬಿಟ್ಟವಳನ್ನಾಗಲಿ ಅಥವಾ ವಿಧವೆಯನ್ನಾಗಲಿ ಮದುವೆಯಾಗಬಾರದು. ಪ್ರಧಾನಯಾಜಕನು ತನ್ನ ಸ್ವಂತ ಜನರಲ್ಲಿ ಒಬ್ಬ ಕನ್ಯೆಯನ್ನು ಮದುವೆಯಾಗಬೇಕು. 15 ಹೀಗಾಗಿ ಜನರು ಅವನ ಮಕ್ಕಳಿಗೆ ಗೌರವ ತೋರಿಸುವರು.[b] ಯೆಹೋವನಾಗಿರುವ ನಾನು ಪ್ರಧಾನಯಾಜಕನನ್ನು ಅವನ ವಿಶೇಷ ಕೆಲಸಕ್ಕಾಗಿ ಪ್ರತ್ಯೇಕಿಸಿದ್ದೇನೆ.”

16 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 17 “ಆರೋನನಿಗೆ ಹೀಗೆ ಹೇಳು: ನಿನ್ನ ಸಂತತಿಯವರ ಮಕ್ಕಳಲ್ಲಿ ಯಾರಾದರೂ ಅಂಗವಿಕಲರಾಗಿದ್ದರೆ, ಅವರು ವಿಶೇಷ ರೊಟ್ಟಿಯನ್ನು ದೇವರ ಬಳಿಗೆ ತೆಗೆದುಕೊಂಡು ಹೋಗಬಾರದು. 18 ಯಾವ ಅಂಗವಿಕಲನೂ ಯಾಜಕನಾಗಿ ಸೇವೆಮಾಡಬಾರದು; ನನಗೆ ಯಜ್ಞಗಳನ್ನು ಅರ್ಪಿಸಬಾರದು. ಯಾಜಕರಾಗಿ ಸೇವೆ ಮಾಡಬಾರದವರು ಯಾರೆಂದರೆ: ಕುರುಡರು, ಕುಂಟರು, ತಮ್ಮ ಮುಖಗಳಲ್ಲಿ ಕೆಟ್ಟದಾದ ಗಾಯದ ಗುರುತುಗಳುಳ್ಳವರು, ಬಹಳ ಉದ್ದವಾದ ಕೈಕಾಲುಗಳುಳ್ಳವರು. 19 ಮುರಿದ ಕೈಕಾಲುಗಳುಳ್ಳವರು. 20 ಗೂನು ಬೆನ್ನುಳ್ಳವರು, ದೇಹ ಬೆಳವಣಿಗೆ ನಿಂತುಹೋಗಿರುವವರು, ಕಣ್ಣು ದೋಷವುಳ್ಳವರು, ಕಜ್ಜಿತುರಿಗಳುಳ್ಳವರು ಅಥವಾ ಚರ್ಮರೋಗವುಳ್ಳವರು, ಬೀಜದೋಷವುಳ್ಳವರು.

21 “ಆರೋನನ ಸಂತತಿಯವರಲ್ಲಿ ಅಂಗವಿಕಲರಾದ ಯಾರೂ ಯೆಹೋವನಿಗೆ ಹೋಮದ್ರವ್ಯಗಳನ್ನು ಸಮರ್ಪಿಸಬಾರದು; ಅಂಥವನು ವಿಶೇಷ ರೊಟ್ಟಿಯನ್ನು ದೇವರ ಬಳಿಗೆ ತೆಗೆದುಕೊಂಡು ಹೋಗಕೂಡದು. 22 ಅವನು ಯಾಜಕರ ಕುಟುಂಬದವನಾಗಿರುವುದರಿಂದ ಪರಿಶುದ್ಧ ರೊಟ್ಟಿಯನ್ನೂ ಮಹಾಪರಿಶುದ್ಧ ರೊಟ್ಟಿಯನ್ನೂ ತಿನ್ನಬಹುದು. 23 ಆದರೆ ಅವನು ತೆರೆಯ ಬಳಿಗೆ ಹೋಗಬಾರದು; ಅವನು ಯಜ್ಞವೇದಿಕೆಯ ಬಳಿಗೆ ಹೋಗಬಾರದು. ಯಾಕೆಂದರೆ ಅವನು ಅಂಗವಿಕಲನಾಗಿದ್ದಾನೆ. ಅವನು ನನ್ನ ಪರಿಶುದ್ಧ ಸ್ಥಳಗಳನ್ನು ಅಶುದ್ಧಗೊಳಿಸಬಾರದು. ಯೆಹೋವನಾದ ನಾನೇ ಆ ಸ್ಥಳಗಳನ್ನು ಪರಿಶುದ್ಧಗೊಳಿಸಿದ್ದೇನೆ.”

24 ಹೀಗೆ ಮೋಶೆ ಈ ಸಂಗತಿಗಳನ್ನು ಆರೋನನಿಗೂ ಅವನ ಪುತ್ರರಿಗೂ ಮತ್ತು ಇಸ್ರೇಲರೆಲ್ಲರಿಗೂ ಹೇಳಿದನು.

ಕೀರ್ತನೆಗಳು 26-27

ರಚನೆಗಾರ: ದಾವೀದ.

26 ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು.
    ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ.
    ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ.
    ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ.
    ನಾನು ಕಪಟಿಗಳ ಜೊತೆ ಸೇರುವವನಲ್ಲ.
ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ.
    ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.

ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ[a] ಸುತ್ತಲೂ ನಡೆಯಲು
    ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
    ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ
    ನನಗೆ ಎಷ್ಟೋ ಪ್ರಿಯವಾಗಿವೆ.

ಆ ಪಾಪಿಗಳ ಗುಂಪಿನಲ್ಲಿ ನನ್ನನ್ನು ಸೇರಿಸಬೇಡ.
    ಆ ಕೊಲೆಗಾರರ ಜೀವದೊಂದಿಗೆ ನನ್ನ ಜೀವವನ್ನು ತೆಗೆಯಬೇಡ.
10 ಅವರು ಜನರನ್ನು ವಂಚಿಸುವರು;
    ಕೆಟ್ಟಕಾರ್ಯಗಳನ್ನು ಮಾಡಲು ಲಂಚ ತೆಗೆದುಕೊಳ್ಳುವರು.
11 ನಾನಾದರೋ ನಿರಪರಾಧಿ.
    ನನಗೆ ಕರುಣೆತೋರಿ ನನ್ನನ್ನು ರಕ್ಷಿಸು.
12 ನಾನು ಎಲ್ಲಾ ಅಪಾಯಗಳಿಂದ ಪಾರಾಗಿದ್ದೇನೆ.
    ಯೆಹೋವನೇ, ನಿನ್ನ ಭಕ್ತರ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು.

ರಚನೆಗಾರ: ದಾವೀದ.

27 ಯೆಹೋವನೇ, ನೀನೇ ನನಗೆ ಬೆಳಕೂ ರಕ್ಷಕನೂ ಆಗಿರುವೆ.
    ನಾನು ಯಾರಿಗೂ ಭಯಪಡಬೇಕಿಲ್ಲ!
ಯೆಹೋವನೇ, ನನ್ನ ಪ್ರಾಣಕ್ಕೆ ಆಶ್ರಯಸ್ಥಾನವೂ ನೀನೇ.
    ಆದ್ದರಿಂದ ನಾನು ಯಾರಿಗೂ ಹೆದರುವುದಿಲ್ಲ!
ದುಷ್ಟರು ನನ್ನನ್ನು ಕೊಲ್ಲಲು ಆಕ್ರಮಣಮಾಡುವಾಗ
    ತಾವೇ ಮುಗ್ಗರಿಸಿ ಬೀಳುವರು.
ಮಹಾಸೈನ್ಯವೇ ನನಗೆ ಮುತ್ತಿಗೆ ಹಾಕಿದರೂ ನಾನು ಭಯಪಡುವುದಿಲ್ಲ.
    ಸೈನಿಕರು ನನ್ನ ಮೇಲೆ ಆಕ್ರಮಣ ಮಾಡಿದರೂ ನಾನು ಹೆದರುವುದಿಲ್ಲ.
    ಯಾಕೆಂದರೆ ನಾನು ಯೆಹೋವನಲ್ಲಿ ಭರವಸವಿಟ್ಟಿದ್ದೇನೆ.

ನನ್ನ ಜೀವಮಾನವೆಲ್ಲಾ
    ಯೆಹೋವನ ಆಲಯದಲ್ಲಿ ವಾಸಿಸುತ್ತಾ
ಆತನ ಪ್ರಸನ್ನತೆಯನ್ನು ವೀಕ್ಷಿಸುತ್ತಾ
    ಆತನ ಮಾರ್ಗದರ್ಶನವನ್ನು ಎದುರುನೋಡುತ್ತಾ ಇರಬೇಕೆಂಬ
    ಒಂದೇ ಒಂದು ಕೋರಿಕೆಯನ್ನು ಯೆಹೋವನಲ್ಲಿ ಕೇಳಿಕೊಂಡು ಅದನ್ನೇ ಎದುರುನೋಡುತ್ತಿದ್ದೇನೆ.

ನಾನು ಅಪಾಯದಲ್ಲಿರುವಾಗ ಯೆಹೋವನು ನನ್ನನ್ನು ಸಂರಕ್ಷಿಸುತ್ತಾನೆ;
    ತನ್ನ ಗುಡಾರದಲ್ಲಿ ನನ್ನನ್ನು ಅಡಗಿಸುತ್ತಾನೆ.
    ಸುರಕ್ಷಿತವಾದ ಸ್ಥಳಕ್ಕೆ ನನ್ನನ್ನು ಕೊಂಡೊಯ್ಯುವನು.
ವೈರಿಗಳು ನನಗೆ ಮುತ್ತಿಗೆ ಹಾಕಿದ್ದರೂ ಅವರನ್ನು ಸೋಲಿಸಲು ಯೆಹೋವನು ನನಗೆ ಸಹಾಯಮಾಡುವನು!
    ಆಗ ನಾನು ಆತನ ಗುಡಾರದಲ್ಲಿ ಉತ್ಸಾಹ ಧ್ವನಿಯೊಡನೆ ಯಜ್ಞಗಳನ್ನು ಅರ್ಪಿಸುವೆನು.
    ವಾದ್ಯಗಳನ್ನು ನುಡಿಸುತ್ತಾ ಆತನನ್ನು ಕೊಂಡಾಡುವೆನು.

ಯೆಹೋವನೇ, ನನ್ನ ಸ್ವರವನ್ನು ಕೇಳಿ ನನಗೆ ಉತ್ತರಿಸು.
    ನನ್ನನ್ನು ಕರುಣಿಸು.
ಯೆಹೋವನೇ, ನಾನು ನಿನ್ನೊಂದಿಗೆ ಹೃದಯಪೂರ್ವಕವಾಗಿ ಮಾತನಾಡಬೇಕೆಂದಿದ್ದೇನೆ.
    ದೇವರೇ, ನಾನು ನಿನ್ನ ಸನ್ನಿಧಿಗೆ ಬರುತ್ತೇನೆ.
ಯೆಹೋವನೇ, ನನಗೆ ವಿಮುಖನಾಗಬೇಡ:
    ನಿನ್ನ ಸೇವಕನನ್ನು ಕೋಪದಿಂದ ತಳ್ಳಿಬಿಡಬೇಡ.
ನನ್ನ ದೇವರೇ, ನನ್ನ ರಕ್ಷಕನು ನೀನೇ.
    ನನ್ನನ್ನು ಕೈ ಬಿಡಬೇಡ! ತೊರೆದುಬಿಡಬೇಡ!
10 ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು;
    ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.
11 ಯೆಹೋವನೇ, ನನಗೆ ವೈರಿಗಳಿರುವುದರಿಂದ ನಿನ್ನ ಮಾರ್ಗವನ್ನು ನನಗೆ ಉಪದೇಶಿಸಿ
    ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
12 ವೈರಿಗಳು ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ.
    ನನಗೆ ಕೇಡಾಗಲೆಂದು ಸುಳ್ಳುಗಳನ್ನು ಹೇಳಿದ್ದಾರೆ.
    ಯೆಹೋವನೇ, ಇಂಥ ವೈರಿಗಳ ಕೈಗೆ ನನ್ನನ್ನು ಕೊಡಬೇಡ.
13 ಯೆಹೋವನ ಒಳ್ಳೆಯತನವನ್ನು
    ನಾನು ಸಾಯುವುದಕ್ಕಿಂತ ಮುಂಚೆ[b] ನೋಡುತ್ತೇನೆ ಎಂಬ ದೃಢನಂಬಿಕೆ ನನ್ನಲ್ಲಿದೆ.
14 ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!
    ಬಲವಾಗಿಯೂ ಧೈರ್ಯವಾಗಿಯೂ ಇರಿ!
    ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!

ಪ್ರಸಂಗಿ 4

ಯಾರು ಮೇಲು? ಸತ್ತವರೋ? ಬದುಕಿರುವವರೋ?

ನಾನು ದೃಷ್ಟಿಸಿ ನೋಡಿದಾಗ, ಅನೇಕ ಜನರು ಹಿಂಸೆಗೆ ಒಳಗಾಗಿರುವುದನ್ನು ಕಂಡೆನು. ಅವರ ಕಣ್ಣೀರನ್ನೂ ನೋಡಿದೆನು. ದುಃಖದಲ್ಲಿದ್ದ ಅವರನ್ನು ಸಂತೈಸಲು ಒಬ್ಬರೂ ಇರಲಿಲ್ಲ. ಹಿಂಸಕರು ಎಲ್ಲಾ ಅಧಿಕಾರವನ್ನು ಹೊಂದಿದ್ದರು; ಅವರಿಂದ ಹಿಂಸೆಗೆ ಒಳಗಾದವರನ್ನು ಸಂತೈಸಲು ಯಾರೂ ಇರಲಿಲ್ಲ. ಇನ್ನೂ ಜೀವದಿಂದಿರುವವರಿಗಿಂತ ಸತ್ತವರೇ ಮೇಲೆಂದು ನಿರ್ಧರಿಸಿದೆನು. ಹುಟ್ಟುವಾಗಲೇ ಸತ್ತು ಹೋದವರಿಗೆ ಒಳ್ಳೆಯದೇ ಆಯಿತು! ಯಾಕೆಂದರೆ ಈ ಲೋಕದಲ್ಲಿ ನಡೆಯುವ ಕೆಟ್ಟದ್ದನ್ನು ಅವರು ನೋಡಲೇ ಇಲ್ಲ.

ಕಷ್ಟಪಟ್ಟು ದುಡಿಯುವುದೇಕೆ?

ಆಮೇಲೆ ನಾನು, “ಜನರು ಪ್ರಯಾಸಪಟ್ಟು ಕೆಲಸ ಮಾಡುವುದೇಕೆ?” ಎಂದು ಆಲೋಚಿಸಿದೆ. ಜನರು ಏಳಿಗೆ ಹೊಂದಲು ಮತ್ತು ಬೇರೆಯವರಿಗಿಂತ ಹೆಚ್ಚು ಅಭಿವೃದ್ಧಿಯಾಗಲು ಪ್ರಯತ್ನಿಸುವರು; ಅದಕ್ಕೆ ಅವರ ಮತ್ಸರವೇ ಕಾರಣ. ಇದೂ ಗಾಳಿಯನ್ನು ಹಿಂದಟ್ಟಿದ್ದ ಹಾಗೆ ವ್ಯರ್ಥ.

ಕೆಲವರು ಹೇಳುವಂತೆ, “ಏನೂ ಮಾಡದೆ ಕೈಕಟ್ಟಿಕೊಂಡು ಕುಳಿತುಕೊಳ್ಳುವುದು ಮೂಢತನ. ದುಡಿಯದವನು ಹಸಿವೆಯಿಂದ ಸಾಯುವನು.” ಇದೇನೊ ನಿಜವಿರಬಹುದು. ಆದರೆ ದುರಾಶೆಪಡುವುದಕ್ಕಿಂತ ಇರುವುದರಲ್ಲಿ ತೃಪ್ತರಾಗಿರುವುದೇ ಮೇಲು.

ಲೋಕದಲ್ಲಿ ಮತ್ತೊಂದು ವ್ಯರ್ಥವನ್ನು ಕಂಡೆನು. ಸ್ವಂತ ಕುಟುಂಬವನ್ನು ಹೊಂದಿಲ್ಲದವನು ಅಂದರೆ ಅಣ್ಣತಮ್ಮಂದಿರಾಗಲಿ ಮಕ್ಕಳಾಗಲಿ ಇಲ್ಲದವನು ಸಹ ಪ್ರಯಾಸಪಟ್ಟು ದುಡಿಯುವನು. ಅವನಿಗೂ ತನ್ನ ಆಸ್ತಿಯಲ್ಲಿ ತೃಪ್ತಿಯಿಲ್ಲ. ಅವನು ಬಿಡುವಿಲ್ಲದೆ ಪ್ರಯಾಸಪಟ್ಟು ದುಡಿಯುವನು. “ನಾನೇಕೆ ಪ್ರಯಾಸಪಟ್ಟು ದುಡಿಯುತ್ತಿರುವೆ? ನಾನೇಕೆ ಜೀವನದ ಸುಖವನ್ನು ಅನುಭವಿಸುತ್ತಿಲ್ಲ?” ಎಂದು ಅವನು ಆಲೋಚಿಸುವುದೇ ಇಲ್ಲ. ಇದು ಸಹ ಕೆಟ್ಟದ್ದೂ ವ್ಯರ್ಥವಾದದ್ದೂ ಆಗಿದೆ.

ಒಗಟ್ಟಿನಲ್ಲಿ ಬಲವಿದೆ

ಇಬ್ಬರು ಒಬ್ಬನಿಗಿಂತಲೂ ಉತ್ತಮ. ಇಬ್ಬರು ಒಟ್ಟಾಗಿ ದುಡಿದರೆ ಹೆಚ್ಚು ಗಳಿಸುವರು.

10 ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು. ಬಿದ್ದಾಗ ಒಬ್ಬಂಟಿಗನಾಗಿದ್ದರೆ ಎತ್ತಲು ಯಾರೂ ಇಲ್ಲದಿರುವುದರಿಂದ ಅವನಿಗೆ ದುರ್ಗತಿಯಾಗುವುದು.

11 ಇಬ್ಬರು ಒಟ್ಟಿಗೆ ಮಲಗಿಕೊಂಡರೆ ಅವರಿಬ್ಬರಿಗೂ ಬೆಚ್ಚಗಾಗುವುದು; ಆದರೆ ಒಬ್ಬಂಟಿಗನಿಗೆ ಬೆಚ್ಚಗಾಗುವುದಿಲ್ಲ.

12 ವೈರಿಯೊಬ್ಬನು ಒಬ್ಬನನ್ನು ಸೋಲಿಸಬಹುದು; ಆದರೆ ಇಬ್ಬರನ್ನು ಸೋಲಿಸಲು ಅವನಿಗೆ ಕಷ್ಟವಾಗುವುದು; ಒಂದುವೇಳೆ ಮೂವರಿದ್ದರೆ ಅವರು ಮೂರೆಳೆಯ ಹಗ್ಗದಂತೆ ಇರುವುದರಿಂದ ಅವನಿಗೆ ಮತ್ತಷ್ಟು ಕಷ್ಟವಾಗುವುದು.

ಜನರು, ರಾಜಕೀಯ ಮತ್ತು ಪ್ರಖ್ಯಾತಿ

13 ಜ್ಞಾನಿಯಾದ ಬಡಯುವಕನು ಎಚ್ಚರದ ಮಾತಿಗೆ ಕಿವಿಗೊಡದ ಮೂಢ ವೃದ್ಧರಾಜನಿಗಿಂತ ಉತ್ತಮ. 14 ಆ ಬಡಯುವಕನು ದೇಶದ ಒಂದು ಬಡಕುಟುಂಬದಲ್ಲಿ ಹುಟ್ಟಿದ್ದಿರಬಹುದು ಅಥವಾ ದೇಶವನ್ನು ಆಳುವುದಕ್ಕಾಗಿ ಸೆರೆಮನೆಯಿಂದ ಬಿಡುಗಡೆ ಮಾಡಲ್ಪಟ್ಟಿರಬಹುದು. 15 ಆದರೆ ನಾನು ಗಮನಿಸಿದ ಪ್ರಕಾರ ಜನರು ಆ ಯೌವನಸ್ಥನ ಪಕ್ಷವಹಿಸುವರು. ಅವನು ಹೊಸರಾಜನಾಗುವನು. 16 ಅನೇಕಾನೇಕ ಜನರು ಆ ಯೌವನಸ್ಥನಿಗೆ ಬೆಂಬಲನೀಡುವರು. ಆದರೆ ಕೊನೆಗಾಲದಲ್ಲಿ ಅವರೇ ಅವನನ್ನು ಇಷ್ಟಪಡುವುದಿಲ್ಲ. ಇದು ಸಹ ಗಾಳಿಯನ್ನು ಹಿಂದಟ್ಟಿದಂತೆ ವ್ಯರ್ಥ.

1 ತಿಮೊಥೆಯನಿಗೆ 6

ಗುಲಾಮರಿಗೆ ವಿಶೇಷವಾದ ಉಪದೇಶ

ಗುಲಾಮರು ತಮ್ಮ ಯಜಮಾನರಿಗೆ ಸಂಪೂರ್ಣ ಗೌರವ ಕೊಡಬೇಕು. ಆಗ ದೇವರ ಹೆಸರಾಗಲಿ ನಮ್ಮ ಉಪದೇಶವಾಗಲಿ ಟೀಕೆಗೆ ಗುರಿಯಾಗುವುದಿಲ್ಲ. ಕೆಲವರಿಗೆ ವಿಶ್ವಾಸಿಗಳಾದ ಯಜಮಾನರಿದ್ದಾರೆ. ಆದ್ದರಿಂದ ಆ ಗುಲಾಮರು ಮತ್ತು ಯಜಮಾನರು ಸಹೋದರರಾಗಿದ್ದಾರೆ. ಆದರೆ ಅವರು ತಮ್ಮ ಯಜಮಾನರಿಗೆ ಕಡಿಮೆ ಗೌರವ ಕೊಡದೆ ತಮ್ಮ ಯಜಮಾನರ ಸೇವೆಯನ್ನು ಇನ್ನೂ ಉತ್ತಮವಾಗಿ ಮಾಡಬೇಕು. ಏಕೆಂದರೆ ಅವರು ಒಳ್ಳೆಯ ಕೆಲಸಗಳಿಗಾಗಿ ತಮ್ಮನ್ನು ಪ್ರತಿಷ್ಠಿಸಿಕೊಳ್ಳುವ ವಿಶ್ವಾಸಿಗಳಾಗಿದ್ದಾರೆ ಮತ್ತು ಸ್ನೇಹಿತರಾಗಿದ್ದಾರೆ.[a]

ಈ ಕಾರ್ಯಗಳನ್ನು ಮಾಡುವಂತೆ ನೀನು ಜನರಿಗೆ ಉಪದೇಶಿಸಬೇಕು ಮತ್ತು ತಿಳಿಸಬೇಕು.

ದುರ್ಬೋಧನೆ ಮತ್ತು ನಿಜವಾದ ಶ್ರೀಮಂತಿಕೆ

ಕೆಲವು ಜನರು ಸುಳ್ಳುಸಂಗತಿಗಳನ್ನು ಬೋಧಿಸುತ್ತಾರೆ. ಆ ಜನರು ನಮ್ಮ ಪ್ರಭುವಾದ ಯೇಸುವಿನ ಸತ್ಯ ಬೋಧನೆಯನ್ನು ಒಪ್ಪುವುದಿಲ್ಲ. ದೇವರ ಸೇವೆಯನ್ನು ಸತ್ಯಕ್ಕನುಸಾರವಾಗಿ ಮಾಡಬೇಕೆಂಬ ಉಪದೇಶವನ್ನು ಅವರು ಸ್ವೀಕರಿಸಿಕೊಳ್ಳುವುದಿಲ್ಲ. ದುರ್ಬೋಧಕನು ಗರ್ವದಿಂದ ತುಂಬಿದವನಾಗಿರುತ್ತಾನೆ ಮತ್ತು ಅವನಿಗೆ ಏನೂ ಅರ್ಥವಾಗುವುದಿಲ್ಲ. ಅವನು ಕುತರ್ಕ ವಾಗ್ವಾದ ಮಾಡುವುದರಲ್ಲಿ ಆಸಕ್ತನಾಗಿದ್ದಾನೆ. ಇದರಿಂದ ಹೊಟ್ಟೆಕಿಚ್ಚು, ಜಗಳ, ನಿಂದನೆ ಮತ್ತು ದುಸ್ಸಂಶಯಗಳು ಉಂಟಾಗುತ್ತವೆ. ಇದಲ್ಲದೆ ಕೆಡುಕರಲ್ಲಿ ವಾದವಿವಾದಗಳು ಹುಟ್ಟುತ್ತವೆ. ಆ ಜನರು ಸತ್ಯವನ್ನು ತೊರೆದವರಾಗಿದ್ದಾರೆ. ದೇವರ ಸೇವೆಯು ಐಶ್ವರ್ಯವನ್ನು ಗಳಿಸುವ ಮಾರ್ಗವೆಂಬುದು ಅವರ ಆಲೋಚನೆ.

ದೇವರ ಸೇವೆ ಮಾಡುವವನು ತನ್ನಲ್ಲಿರುವುದರಲ್ಲಿ ಸಂತುಷ್ಟನಾಗಿದ್ದರೆ, ಅವನು ದೊಡ್ಡ ಶ್ರೀಮಂತನೇ ಸರಿ. ನಾವು ಲೋಕಕ್ಕೆ ಬಂದಾಗ ಏನನ್ನೂ ತೆಗೆದುಕೊಂಡು ಬರಲಿಲ್ಲ. ನಾವು ಸಾಯುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದ್ದರಿಂದ ಊಟ ಬಟ್ಟೆಗಳಿದ್ದರೆ ಸಾಕು, ನಾವು ಸಂತುಷ್ಟರಾಗುತ್ತೇವೆ. ಶ್ರೀಮಂತರಾಗಬೇಕೆನ್ನುವವರು ತಮ್ಮನ್ನು ತಾವೇ ಶೋಧನೆಗೆ ಗುರಿಪಡಿಸಿಕೊಳ್ಳುವರು. ಅವರು ಉರ್ಲಿನಲ್ಲಿ ಸಿಕ್ಕಿಹಾಕಿಕೊಂಡವರಾಗಿದ್ದಾರೆ. ಅವರು ಹಾನಿಕರವಾದ ಅನೇಕ ಮೂರ್ಖ ಆಸೆಗಳಲ್ಲಿ ಸಿಕ್ಕಿಬೀಳುವರು. ಅವು ಜನರನ್ನು ಹಾಳುಮಾಡಿ, ನಾಶಗೊಳಿಸುತ್ತವೆ. 10 ಹಣದಾಸೆಯು ಎಲ್ಲಾ ವಿಧವಾದ ಕೆಟ್ಟತನಕ್ಕೆ ಮೂಲವಾಗುತ್ತದೆ. ಕೆಲವು ಜನರು ಹೆಚ್ಚುಹೆಚ್ಚು ಹಣವನ್ನು ಗಳಿಸಿಕೊಳ್ಳುವುದಕ್ಕಾಗಿ ಸತ್ಯೋಪದೇಶವನ್ನು ತೊರೆದುಬಿಟ್ಟಿದ್ದಾರೆ. ಆದರೆ ಅವರು ತಮ್ಮನ್ನು ತಾವೇ ಹೆಚ್ಚು ವೇದನೆಗೆ ಗುರಿಪಡಿಸಿಕೊಂಡಿದ್ದಾರೆ.

ನೀವು ನೆನಪಿನಲ್ಲಿಡಬೇಕಾದ ಕೆಲವು ಸಂಗತಿಗಳು

11 ಆದರೆ ನೀನು ದೇವರ ಮನುಷ್ಯ. ಆದ್ದರಿಂದ ಈ ಎಲ್ಲಾ ಸಂಗತಿಗಳಿಂದ ದೂರವಾಗಿರು. ದೇವರ ಸೇವೆಯನ್ನು ಮಾಡುತ್ತಾ ಉತ್ತಮಮಾರ್ಗದಲ್ಲಿ ಜೀವಿಸಲು ಪ್ರಯತ್ನಿಸು; ನಂಬಿಕೆ, ಪ್ರೀತಿ, ತಾಳ್ಮೆ, ಸಾತ್ವಿಕತೆಗಳನ್ನು ಹೊಂದಿದವನಾಗಿರು. 12 ನಂಬಿಕೆಯಲ್ಲಿ ದೃಢವಾಗಿರುವುದು ಓಟದ ಸ್ಪರ್ಧೆಗೆ ಹೋಲಿಕೆಯಾಗಿದೆ. ಓಟದ ಸ್ಪರ್ಧೆಯಲ್ಲಿ ಗೆಲ್ಲಲು ನಿನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸು. ನಿತ್ಯಜೀವವನ್ನು ಪಡೆದುಕೊಳ್ಳಲು ಪ್ರಯಾಸಪಡು. ಅದನ್ನು ಹೊಂದಿಕೊಳ್ಳುವುದಕ್ಕಾಗಿ ನೀನು ಕರೆಯಲ್ಪಟ್ಟಿರುವೆ. ಕ್ರಿಸ್ತನಂಬಿಕೆಯ ಕುರಿತಾದ ಸತ್ಯವನ್ನು ನೀನು ಅನೇಕ ಜನರ ಎದುರಿನಲ್ಲಿ ಒಪ್ಪಿಕೊಂಡೆಯಲ್ಲಾ. 13 ಪೊಂತ್ಯ ಪಿಲಾತನ ಮುಂದೆ ಸಾಕ್ಷಿ ನೀಡಿದ ಕ್ರಿಸ್ತ ಯೇಸುವಿನ ಸನ್ನಿಧಿಯಲ್ಲಿಯೂ ಸರ್ವಸೃಷ್ಟಿಗೆ ಜೀವದಾಯಕನಾದ ದೇವರ ಸನ್ನಿಧಿಯಲ್ಲಿಯೂ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, 14 ನಮ್ಮ ಪ್ರಭುವಾದ ಯೇಸುಕ್ರಿಸ್ತನು ಮತ್ತೆ ಪ್ರತ್ಯಕ್ಷನಾಗುವ ಕಾಲದವರೆಗೆ ನೀನು ಆ ಕಾರ್ಯಗಳನ್ನು ತಪ್ಪಿಲ್ಲದೆ, ನಿಂದಾರಹಿತನಾಗಿ ಮಾಡುತ್ತಿರು. 15 ದೇವರು ತಕ್ಕ ಸಮಯದಲ್ಲಿ ಅದನ್ನು ನೆರವೇರಿಸುವನು. ಆತನು ಭಾಗ್ಯವಂತನಾದ ಏಕಾಧಿಪತಿಯೂ ರಾಜಾಧಿರಾಜನೂ ಪ್ರಭುಗಳಿಗೆ ಪ್ರಭುವೂ ಆಗಿದ್ದಾನೆ. 16 ಸಾವಿಲ್ಲದವನು ಆತನೊಬ್ಬನೇ. ಆತನು ಉಜ್ವಲ ಬೆಳಕಿನಲ್ಲಿ ವಾಸವಾಗಿರುವುದರಿಂದ ಆತನ ಹತ್ತಿರಕ್ಕೆ ಜನರು ಹೋಗಲು ಸಾಧ್ಯವಿಲ್ಲ. ಆತನನ್ನು ಇದುವರೆಗೆ ಯಾರು ನೋಡಿಲ್ಲ; ನೋಡಲು ಸಾಧ್ಯವೂ ಇಲ್ಲ. ಆತನಿಗೆ ಗೌರವವೂ ಅಧಿಪತ್ಯವೂ ಸದಾಕಾಲವಿರಲಿ. ಆಮೆನ್.

17 ಇಹಲೋಕದ ವಿಷಯಗಳಲ್ಲಿ ಶ್ರೀಮಂತರಾಗಿರುವ ಜನರಿಗೆ ಈ ಆಜ್ಞೆಗಳನ್ನು ತಿಳಿಸು. ಗರ್ವಪಡದಂತೆಯೂ ಹಣವನ್ನು ಅವಲಂಬಿಸಿಕೊಳ್ಳದೆ ದೇವರಲ್ಲೇ ನಿರೀಕ್ಷೆಯಿಡುವಂತೆಯೂ ಅವರಿಗೆ ತಿಳಿಸು. ಹಣವು ಭರವಸೆಗೆ ಯೋಗ್ಯವಲ್ಲ. ದೇವರಾದರೋ ನಮ್ಮ ಸಂತೋಷಕ್ಕಾಗಿ ಸಮಸ್ತವನ್ನು ನಮಗೆ ಧಾರಾಳವಾಗಿ ದಯಪಾಲಿಸುತ್ತಾನೆ. 18 ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಶ್ರೀಮಂತರಿಗೆ ತಿಳಿಸು. ಸತ್ಕಾರ್ಯಗಳನ್ನು ಮಾಡುವುದರಲ್ಲೇ ಶ್ರೀಮಂತರಾಗಿರಬೇಕೆಂದು ಅವರಿಗೆ ತಿಳಿಸು. ಪರೋಪಕಾರದಲ್ಲೂ ಹಂಚಿಕೊಳ್ಳುವುದರಲ್ಲೂ ಸಂತಸಪಡಲು ಅವರಿಗೆ ತಿಳಿಸು. 19 ಆಗ ಪರಲೋಕದಲ್ಲಿ ಒಂದು ನಿಧಿಯನ್ನು ಅವರು ಕೂಡಿಟ್ಟು ಕೊಂಡಂತಾಗುತ್ತದೆ. ಆ ನಿಧಿಯೇ ಅವರ ಮುಂದಿನ ಜೀವಿತಕ್ಕೆ ಭದ್ರವಾದ ಅಸ್ತಿವಾರವಾಗಿದೆ. ಹೀಗೆ ಅವರು ನಿಜವಾದ ಜೀವಿತವನ್ನು ಹೊಂದಿಕೊಳ್ಳುವರು.

20 ತಿಮೊಥೆಯನೇ, ನಿನ್ನ ವಶಕ್ಕೆ ಕೊಡಲಾಗಿರುವ ಸದ್ಬೋಧನೆಯನ್ನು ಸುರಕ್ಷಿತವಾಗಿ ಕಾಪಾಡು. ಪ್ರಾಪಂಚಿಕವಾದ ಮೂರ್ಖ ಸಂಗತಿಗಳನ್ನು ಹೇಳುವ ಜನರಿಂದಲೂ ಸತ್ಯದ ವಿರುದ್ಧವಾಗಿ ವಾದ ಮಾಡುವ ಜನರಿಂದಲೂ ದೂರವಾಗಿರು. ಅವರು ಅದನ್ನು ಜ್ಞಾನವೆಂದು ಕರೆದರೂ ಅದು ನಿಜವಾದ ಜ್ಞಾನವಲ್ಲ. 21 ಕೆಲವರು ತಮಗೆ ಜ್ಞಾನ ಇದೆಯೆಂದು ಹೇಳಿ ಕೊಂಡರೂ ಸತ್ಯೋಪದೇಶವನ್ನು ತೊರೆದುಬಿಟ್ಟವರಾಗಿದ್ದಾರೆ.

ದೇವರ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International