Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 20

ವಿಗ್ರಹಾರಾಧನೆಯ ಕುರಿತು ಎಚ್ಚರಿಕೆ

20 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸಬೇಕು. ನಿಮ್ಮ ದೇಶದಲ್ಲಿರುವ ಒಬ್ಬನು ತನ್ನ ಮಕ್ಕಳಲ್ಲಿ ಒಬ್ಬನನ್ನು ಸುಳ್ಳು ದೇವರಾದ ಮೊಲೆಕನಿಗೆ ಅರ್ಪಿಸಿದರೆ ಅವನನ್ನು ಕೊಲ್ಲಬೇಕು. ಅವನು ಸ್ವದೇಶಸ್ಥನಾದರೂ ಇಸ್ರೇಲರಲ್ಲಿ ವಾಸಿಸುವ ಪರದೇಶಸ್ಥನಾದರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ನಾನು ಅವನಿಗೆ ವಿರುದ್ಧವಾಗಿರುವೆನು. ನಾನು ಅವನನ್ನು ಅವನ ಕುಟುಂಬದಿಂದ ಬೇರ್ಪಡಿಸುವೆನು. ಯಾಕೆಂದರೆ ಅವನು ತನ್ನ ಮಕ್ಕಳನ್ನು ಮೊಲೆಕನಿಗೆ ಅರ್ಪಿಸುವುದರ ಮೂಲಕ ನನ್ನ ಪವಿತ್ರಾಲಯವನ್ನು ಅಪವಿತ್ರಗೊಳಿಸಿದನು; ನನ್ನ ನಾಮಕ್ಕೆ ಅವಮಾನ ಮಾಡಿದನು. ಒಂದುವೇಳೆ ದೇಶದ ಜನರು ಅವನು ಮಾಡಿದ ಕಾರ್ಯವನ್ನು ನಿರ್ಲಕ್ಷಿಸಿ ಅವನನ್ನು ಕೊಲ್ಲದಿದ್ದರೆ, ನಾನು ಅವನಿಗೂ ಅವನ ಕುಟುಂಬಕ್ಕೂ ವಿರುದ್ಧನಾಗಿರುವೆನು; ನಾನು ಅವನನ್ನು ಅವನ ಜನರಿಂದ ಬೇರ್ಪಡಿಸುವೆನು. ಮೊಲೆಕನೊಡನೆ ಸೂಳೆತನ ಮಾಡುವ ಅವನನ್ನೂ ಅವನ ಹಿಂಬಾಲಕರನ್ನೂ ಅವರ ಜನರಿಂದ ಬೇರ್ಪಡಿಸುವೆನು.

“ಸತ್ತವರಲ್ಲಿ ವಿಚಾರಿಸುವವರ ಮತ್ತು ಬೇತಾಳಿಕರ ಬಳಿಗೆ ಹೋಗುವ ಯಾವುದೇ ವ್ಯಕ್ತಿಯಾದರೂ ಸರಿಯೇ ಅವನಿಗೆ ನಾನು ವಿರುದ್ಧವಾಗಿರುವೆನು. ಆ ವ್ಯಕ್ತಿ ನನಗೆ ಅಪನಂಬಿಗಸ್ತನಾಗಿದ್ದಾನೆ.[a] ಆದ್ದರಿಂದ ನಾನು ಅವನನ್ನು ಅವನ ಕುಲದಿಂದ ತೆಗೆದುಹಾಕುವೆನು.

“ನೀವು ನನಗೆ ವಿಶೇಷ ಜನರಾಗಿದ್ದೀರಿ. ನಿಮ್ಮನ್ನು ಪವಿತ್ರರನ್ನಾಗಿ ಮಾಡಿಕೊಳ್ಳಿರಿ. ಯಾಕೆಂದರೆ ನಾನೇ ನಿಮ್ಮ ದೇವರಾದ ಯೆಹೋವನು. ನಾನು ಪರಿಶುದ್ಧನಾಗಿದ್ದೇನೆ. ನನ್ನ ನಿಯಮಗಳನ್ನು ಜ್ಞಾಪಕಮಾಡಿ ಅವುಗಳಿಗೆ ವಿಧೇಯರಾಗಿರಿ. ನಿಮ್ಮನ್ನು ಪವಿತ್ರರನ್ನಾಗಿ ಮಾಡುವ[b] ಯೆಹೋವನೇ ನಾನು. ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿದ್ದೇನೆ.

“ಯಾವನಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸಿದರೆ, ಅವನಿಗೆ ಮರಣಶಿಕ್ಷೆಯಾಗಬೇಕು. ಅವನು ತನ್ನ ತಂದೆತಾಯಿಗಳನ್ನು ಶಪಿಸಿದನು. ಅವನ ಮರಣಕ್ಕೆ[c] ಅವನೇ ಜವಾಬ್ದಾರನಾಗಿದ್ದಾನೆ.

ಲೈಂಗಿಕ ಪಾಪಗಳಿಗೆ ವಿಧಿಸತಕ್ಕ ಶಿಕ್ಷೆಗಳು

10 “ಒಬ್ಬನು ನೆರೆಯವನ ಹೆಂಡತಿಯೊಡನೆ ಲೈಂಗಿಕ ಸಂಬಂಧ ಹೊಂದಿದರೆ, ಆಗ ಅವರಿಬ್ಬರೂ ವ್ಯಭಿಚಾರ ಮಾಡಿದ ದೋಷಿಗಳಾಗಿದ್ದಾರೆ. ಆದ್ದರಿಂದ ಅವರಿಬ್ಬರಿಗೂ ಅಂದರೆ ಗಂಡಸಿಗೂ ಹೆಂಗಸಿಗೂ ಮರಣಶಿಕ್ಷೆಯಾಗಬೇಕು! 11 ಒಬ್ಬನು ತನ್ನ ತಂದೆಯ ಹೆಂಡತಿಯೊಡನೆ ಲೈಂಗಿಕ ಸಂಬಂಧ ಬೆಳೆಸಿದರೆ, ಅವನಿಗೂ ಆಕೆಗೂ ಮರಣಶಿಕ್ಷೆಯಾಗಬೇಕು. ಅವನು ತನ್ನ ತಂದೆಗೆ ಅವಮಾನ ಮಾಡಿದ್ದಾನೆ. ಅವರು ತಮ್ಮ ಮರಣಕ್ಕೆ ತಾವೇ ಜವಾಬ್ದಾರರಾಗಿದ್ದಾರೆ.

12 “ಒಬ್ಬನು ತನ್ನ ಸೊಸೆಯೊಡನೆ ಲೈಂಗಿಕ ಸಂಬಂಧ ಬೆಳೆಸಿದರೆ, ಅವರಿಬ್ಬರೂ ಕೊಲ್ಲಲ್ಪಡಬೇಕು. ಅವರ ಮರಣಕ್ಕೆ ಅವರೇ ಜವಾಬ್ದಾರರಾಗಿದ್ದಾರೆ. ಅವರು ಬಹಳ ಕೆಟ್ಟದಾದ ಲೈಂಗಿಕ ಪಾಪವನ್ನು ಮಾಡಿದವರಾಗಿದ್ದಾರೆ.

13 “ಒಬ್ಬನು ಸ್ತ್ರೀಯೊಂದಿಗೆ ಸಂಗಮಿಸುವಂತೆ ಪುರುಷನೊಡನೆ ಲೈಂಗಿಕ ಸಂಬಂಧ ಮಾಡಿದರೆ, ಆಗ ಈ ಇಬ್ಬರೂ ಭಯಂಕರವಾದ ಪಾಪ ಮಾಡಿದವರಾಗಿದ್ದಾರೆ. ಅವರಿಗೆ ಮರಣಶಿಕ್ಷೆಯಾಗಬೇಕು. ಅವರು ಕೊಲ್ಲಲ್ಪಡಬೇಕು. ಅವರ ಮರಣಕ್ಕೆ ಅವರೇ ಜವಾಬ್ದಾರರಾಗಿದ್ದಾರೆ.

14 “ಒಬ್ಬನು ಒಬ್ಬ ಸ್ತ್ರೀಯೊಂದಿಗೂ ಅವಳ ತಾಯಿಯೊಂದಿಗೂ ಲೈಂಗಿಕ ಸಂಬಂಧಗಳನ್ನು ಬೆಳೆಸಿದರೆ, ಆಗ ಇದು ಲೈಂಗಿಕ ಪಾಪವಾಗಿದೆ. ಜನರು ಆ ಮನುಷ್ಯನನ್ನು ಇಬ್ಬರು ಸ್ತ್ರೀಯರನ್ನು ಬೆಂಕಿಯಿಂದ ಸುಟ್ಟುಹಾಕಬೇಕು. ನಿಮ್ಮ ಜನರ ಮಧ್ಯದಲ್ಲಿ ಈ ಲೈಂಗಿಕ ಪಾಪ ನಡೆಯಲು ಬಿಡಬೇಡಿರಿ.

15 “ಒಬ್ಬನು ಪಶುವಿನೊಡನೆ ಲೈಂಗಿಕ ಸಂಬಂಧ ಮಾಡಿದರೆ, ಆ ಮನುಷ್ಯನಿಗೆ ಮರಣಶಿಕ್ಷೆಯಾಗಬೇಕು ಮತ್ತು ನೀವು ಆ ಪಶುವನ್ನು ಕೊಲ್ಲಬೇಕು. 16 ಸ್ತ್ರೀಯು ಪಶುವಿನೊಡನೆ ಲೈಂಗಿಕ ಸಂಬಂಧ ಮಾಡಿದರೆ, ಆಗ ನೀವು ಸ್ತ್ರೀಯನ್ನೂ ಪಶುವನ್ನೂ ಕೊಲ್ಲಬೇಕು. ಅವಳಿಗೆ ಮತ್ತು ಅದಕ್ಕೆ ಮರಣ ಶಿಕ್ಷೆಯಾಗಬೇಕು. ಅವರ ಮರಣಕ್ಕೆ ಅವರೇ ಜವಾಬ್ದಾರರಾಗಿದ್ದಾರೆ.

17 “ಒಬ್ಬನು ತನ್ನ ಸಹೋದರಿಯನ್ನಾಗಲಿ ತನ್ನ ತಂದೆಯ ಅಥವಾ ತಾಯಿಯ ಮಗಳನ್ನಾಗಲಿ ಮದುವೆಯಾಗಿ ಲೈಂಗಿಕ ಸಂಬಂಧ ಬೆಳೆಸಿದರೆ, ಅದು ಅವಮಾನಕರವಾದ ಕಾರ್ಯವಾಗಿದೆ! ಅವರಿಗೆ ಬಹಿರಂಗವಾಗಿ ಶಿಕ್ಷೆಯಾಗಬೇಕು. ಅವರನ್ನು ಅವರ ಕುಲದಿಂದ ತೆಗೆದುಹಾಕಬೇಕು. ತನ್ನ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಿದ ಪುರುಷನಿಗೆ ಅವನು ಮಾಡಿದ ಪಾಪಕ್ಕಾಗಿ ಶಿಕ್ಷೆಯಾಗಬೇಕು.[d]

18 “ಒಬ್ಬನು ಸ್ತ್ರೀಯನ್ನು ಅವಳ ತಿಂಗಳ ಮುಟ್ಟಿನ ಸಮಯದಲ್ಲಿ ಸಂಭೋಗ ಮಾಡಿದರೆ, ಅವರಿಬ್ಬರನ್ನೂ ಕುಲದಿಂದ ತೆಗೆದುಹಾಕಬೇಕು. ಯಾಕೆಂದರೆ ಅವನು ಅವಳ ಶೋಣಿತಸ್ಥಾನವನ್ನು ಬಯಲುಪಡಿಸಿದನು; ಅವಳು ಬಯಲುಪಡಿಸಿಕೊಂಡಳು.

19 “ತಾಯಿಯ ಸಹೋದರಿ ಅಥವಾ ತಂದೆಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಅದು ರಕ್ತ ಸಂಬಂಧಿಯೊಡನೆ ಸಂಭೋಗ ಮಾಡಿದ ಪಾಪವಾಗಿದೆ. ನಿಮ್ಮ ಪಾಪಗಳಿಗಾಗಿ ನಿಮಗೆ ಶಿಕ್ಷೆಯಾಗಬೇಕು. (ಅದಕ್ಕೆ ನೀವಿಬ್ಬರೂ ಜವಾಬ್ದಾರರಾಗಿದ್ದೀರಿ.)

20 “ಒಬ್ಬನು ತನ್ನ ದೊಡ್ಡಪ್ಪ ಅಥವಾ ಚಿಕ್ಕಪ್ಪನ ಹೆಂಡತಿಯೊಡನೆ ಮಲಗಿಕೊಳ್ಳಬಾರದು. ಅವರ ಪಾಪಗಳಿಗಾಗಿ ಅವರಿಬ್ಬರಿಗೂ ಶಿಕ್ಷೆಯಾಗುವುದು. ಅವರು ಮಕ್ಕಳಿಲ್ಲದೆ ಸಾಯುವರು.[e]

21 “ತನ್ನ ಸಹೋದರನ ಹೆಂಡತಿಯೊಡನೆ ಲೈಂಗಿಕ ಸಂಬಂಧ ಬೆಳೆಸುವುದು ತಪ್ಪಾಗಿದೆ. ಅವನು ತನ್ನ ಸಹೋದರನಿಗೆ ಅವಮಾನ ಮಾಡಿದವನಾಗಿದ್ದಾನೆ. ಅವರಿಗೆ ಮಕ್ಕಳಾಗುವುದಿಲ್ಲ.

22 “ನೀವು ನನ್ನ ಕಟ್ಟಳೆ ಮತ್ತು ನಿಯಮಗಳನ್ನೆಲ್ಲಾ ಜ್ಞಾಪಕಮಾಡಿಕೊಳ್ಳಬೇಕು. ನೀವು ಅವುಗಳಿಗೆ ವಿಧೇಯರಾಗಬೇಕು. ನಾನು ನಿಮ್ಮನ್ನು ನಿಮ್ಮ ದೇಶಕ್ಕೆ ನಡಿಸುತ್ತಿದ್ದೇನೆ. ನೀವು ಆ ದೇಶದಲ್ಲಿ ವಾಸಿಸುವಿರಿ. ನೀವು ನನ್ನ ಕಟ್ಟಳೆಗಳಿಗೆ ಮತ್ತು ನಿಯಮಗಳಿಗೆ ವಿಧೇಯರಾದರೆ, ಆಗ ಆ ದೇಶವು ನಿಮ್ಮನ್ನು ಕಾರಿಬಿಡುವುದಿಲ್ಲ. 23 ಆ ದೇಶವನ್ನು ಬಿಟ್ಟುಹೋಗುವಂತೆ ಅಲ್ಲಿಯ ಜನರನ್ನು ನಾನು ಹೊರಡಿಸಿಬಿಡುತ್ತಿದ್ದೇನೆ. ಯಾಕೆಂದರೆ ಅವರು ಆ ಪಾಪಗಳನ್ನೆಲ್ಲಾ ಮಾಡಿದರು. ನಾನು ಆ ಪಾಪಗಳನ್ನು ದ್ವೇಷಿಸುತ್ತೇನೆ. ಆದ್ದರಿಂದ ಅವರು ಜೀವಿಸಿದಂತೆ ನೀವು ಜೀವಿಸಬೇಡಿರಿ! 24 ನೀವು ಅವರ ದೇಶವನ್ನು ಪಡೆಯುವಿರಿ ಎಂದು ನಾನು ನಿಮಗೆ ಹೇಳಿದ್ದೇನೆ. ನಾನು ಅವರ ದೇಶವನ್ನು ನಿಮಗೆ ಕೊಡುವೆ. ಅದು ನಿಮ್ಮ ದೇಶವಾಗಿರುವದು. ಅದು ಅನೇಕ ಒಳ್ಳೆ ಸಂಗತಿಗಳಿಂದ ತುಂಬಿದ ದೇಶವಾಗಿದೆ.[f] ನಾನು ನಿಮ್ಮ ದೇವರಾಗಿರುವ ಯೆಹೋವನು!

“ನಾನು ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿಕೊಂಡಿದ್ದೇನೆ. ನಾನು ನಿಮ್ಮನ್ನು ಇತರ ಜನರಿಂದ ಆರಿಸಿಕೊಂಡಿದ್ದೇನೆ. 25 ಆದ್ದರಿಂದ ಶುದ್ಧವಾದ ಪ್ರಾಣಿಗಳನ್ನು ಅಶುದ್ಧವಾದ ಪ್ರಾಣಿಗಳಿಗಿಂತ ಭಿನ್ನವಾಗಿ ಕಾಣಬೇಕು. ನೀವು ಶುದ್ಧವಾದ ಪಕ್ಷಿಗಳನ್ನು ಅಶುದ್ಧವಾದ ಪಕ್ಷಿಗಳಿಗಿಂತ ಭಿನ್ನವಾಗಿ ಕಾಣಬೇಕು. ಆ ಅಶುದ್ಧವಾದ ಪಕ್ಷಿಗಳಲ್ಲಿ, ಪ್ರಾಣಿಗಳಲ್ಲಿ ಮತ್ತು ನೆಲದ ಮೇಲೆ ಹರಿದಾಡುವ ಪ್ರಾಣಿಗಳಲ್ಲಿ ಯಾವುದನ್ನೂ ತಿನ್ನಬೇಡಿರಿ. ನಾನು ಅವುಗಳನ್ನು ಅಶುದ್ಧವಾಗಿ ಮಾಡಿದ್ದೇನೆ. 26 ನಾನು ನಿಮ್ಮನ್ನು ಇತರ ಜನಾಂಗಗಳಿಂದ ಪ್ರತ್ಯೇಕಿಸಿ, ನನ್ನ ವಿಶೇಷ ಜನರನ್ನಾಗಿ ಮಾಡಿದ್ದೇನೆ. ಆದ್ದರಿಂದ ನೀವು ಪರಿಶುದ್ಧರಾಗಿರಬೇಕು. ಯಾಕೆಂದರೆ ನಾನು ಯೆಹೋವನು ಮತ್ತು ನಾನು ಪರಿಶುದ್ಧನಾಗಿದ್ದೇನೆ.

27 “ಸತ್ತವರಲ್ಲಿ ವಿಚಾರಿಸುವವರು ಅಥವಾ ಬೇತಾಳಿಕರು, ಪುರುಷರಾಗಲಿ ಸ್ತ್ರೀಯರಾಗಲಿ ಆಗಿದ್ದರೂ, ಅವರಿಗೆ ಮರಣಶಿಕ್ಷೆಯಾಗಬೇಕು. ಜನರು ಅವರನ್ನು ಕಲ್ಲೆಸೆದು ಕೊಲ್ಲಬೇಕು. ಅವರ ಮರಣಕ್ಕೆ ಅವರೇ ಜವಾಬ್ದಾರರಾಗಿದ್ದಾರೆ.”

ಕೀರ್ತನೆಗಳು 25

ರಚನೆಗಾರ: ದಾವೀದ.

25 ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
    ನನ್ನನ್ನು ನಿರಾಶೆಗೊಳಿಸಬೇಡ.
    ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
    ದ್ರೋಹಿಗಳಾದರೋ ನಿರಾಶರಾಗುವರು.
    ಅವರಿಗೆ ಏನೂ ದೊರೆಯುವುದಿಲ್ಲ.

ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
    ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
    ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
    ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
    ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
    ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.

ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
    ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
    ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.
10 ಯೆಹೋವನ ಒಡಂಬಡಿಕೆಯನ್ನೂ ವಾಗ್ದಾನಗಳನ್ನೂ ಅನುಸರಿಸುವ ಜನರಿಗೆ
    ಆತನ ಮಾರ್ಗಗಳೆಲ್ಲ ಕರುಣೆಯುಳ್ಳವೂ ಸತ್ಯವೂ ಆಗಿವೆ.

11 ಯೆಹೋವನೇ, ನಾನು ಅನೇಕ ಪಾಪಗಳನ್ನು ಮಾಡಿದ್ದೇನೆ.
    ಆದರೆ ನೀನು ನಿನ್ನ ಹೆಸರಿನ ನಿಮಿತ್ತ ಅವುಗಳನ್ನೆಲ್ಲಾ ಕ್ಷಮಿಸಿಬಿಟ್ಟೆ.

12 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರಿಗೆ
    ಅತ್ಯುತ್ತಮವಾದ ಜೀವಮಾರ್ಗವನ್ನು ತೋರಿಸುವನು.
13 ಅವನು ಸುಖದಿಂದಿರುವನು.
    ಆತನು ವಾಗ್ದಾನ ಮಾಡಿದ ದೇಶವನ್ನು ಅವನ ಮಕ್ಕಳು ಅನುಭವಿಸುವರು.
14 ಯೆಹೋವನು ತನಗೆ ವಿಧೇಯರಾಗಿರುವವರಿಗೆ ಆಪ್ತಮಿತ್ರನಂತಿರುವನು.
    ಆತನು ಅವರಿಗೆ ತನ್ನ ಒಡಂಬಡಿಕೆಯನ್ನು ಉಪದೇಶಿಸುವನು.
15 ನನ್ನ ಕಣ್ಣುಗಳು ಸಹಾಯಕ್ಕಾಗಿ ಯೆಹೋವನನ್ನೇ ದೃಷ್ಟಿಸುತ್ತಿವೆ.
    ಆತನು ನನ್ನನ್ನು ತೊಂದರೆಗಳಿಂದ ಖಂಡಿತವಾಗಿ ಬಿಡುಸುವನು.[a]

16 ಯೆಹೋವನೇ, ನಾನು ಬಾಧೆಪಡುವವನೂ ಒಬ್ಬಂಟಿಗನೂ ಆಗಿದ್ದೇನೆ.
    ನನಗೆ ಅಭಿಮುಖನಾಗಿ ಕರುಣೆತೋರು.
17 ಇಕ್ಕಟ್ಟುಗಳಿಂದ ನನ್ನನ್ನು ಬಿಡಿಸು.
    ನನ್ನ ಸಮಸ್ಯೆಗಳನ್ನು ಪರಿಹರಿಸು.
18 ಯೆಹೋವನೇ, ನನ್ನ ಸಂಕಟವನ್ನೂ ತೊಂದರೆಗಳನ್ನೂ ನೋಡು.
    ನನ್ನ ಪಾಪಗಳನ್ನೆಲ್ಲ ಕ್ಷಮಿಸು.
19 ನನ್ನ ವೈರಿಗಳನ್ನೆಲ್ಲ ದೃಷ್ಟಿಸಿನೋಡು.
    ಅವರು ನನ್ನನ್ನು ದ್ವೇಷಿಸುತ್ತಾ ಕೇಡುಮಾಡಬೇಕೆಂದಿದ್ದಾರೆ.
20 ದೇವರೇ, ನನ್ನನ್ನು ಕಾಪಾಡು, ನನ್ನನ್ನು ರಕ್ಷಿಸು.
    ನಾನು ನಿನ್ನಲ್ಲಿ ಭರವಸವಿಟ್ಟಿರುವುದರಿಂದ ನನ್ನನ್ನು ನಿರಾಶೆಗೊಳಿಸಬೇಡ.
21 ದೇವರೇ, ನೀನು ನಿಜವಾಗಿಯೂ ಒಳ್ಳೆಯವನು.
    ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ಆದ್ದರಿಂದ ನನ್ನನ್ನು ಕಾಪಾಡು.
22 ದೇವರೇ, ಇಸ್ರೇಲರನ್ನು
    ವೈರಿಗಳಿಂದ ತಪ್ಪಿಸಿ ಕಾಪಾಡು.

ಪ್ರಸಂಗಿ 3

ಪ್ರತಿಯೊಂದಕ್ಕೂ ಸೂಕ್ತ ಸಮಯವಿದೆ

ಪ್ರತಿಯೊಂದಕ್ಕೂ ಸೂಕ್ತವಾದ ಸಮಯವಿದೆ. ಭೂಮಿಯ ಮೇಲೆ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವಿದೆ.

ಹುಟ್ಟುವ ಸಮಯ,
    ಸಾಯುವ ಸಮಯ.
ನೆಡುವ ಸಮಯ,
    ಸಸಿಗಳನ್ನು ಕೀಳುವ ಸಮಯ.
ಕೊಲ್ಲುವ ಸಮಯ,
    ವಾಸಿಮಾಡುವ ಸಮಯ.
ನಾಶಮಾಡುವ ಸಮಯ,
    ಕಟ್ಟುವ ಸಮಯ.
ಅಳುವ ಸಮಯ,
    ನಗುವ ಸಮಯ.
ಗೋಳಾಡುವ ಸಮಯ,
    ಕುಣಿದಾಡುವ ಸಮಯ.
ಆಯುಧಗಳನ್ನು ಬಿಸಾಡುವ ಸಮಯ,
    ಆಯುಧಗಳನ್ನು ಎತ್ತಿಕೊಳ್ಳುವ ಸಮಯ.
ಅಪ್ಪಿಕೊಳ್ಳುವ ಸಮಯ,
    ಅಪ್ಪಿಕೊಳ್ಳದಿರುವ ಸಮಯ.
ಹುಡುಕುವ ಸಮಯ,
    ಹುಡುಕದಿರುವ ಸಮಯ.
ವಸ್ತುಗಳನ್ನು ಇಟ್ಟುಕೊಳ್ಳುವ ಸಮಯ,
    ವಸ್ತುಗಳನ್ನು ಬಿಸಾಡುವ ಸಮಯ.
ಬಟ್ಟೆಯನ್ನು ಹರಿಯುವ ಸಮಯ,
    ಬಟ್ಟೆಯನ್ನು ಹೊಲಿಯುವ ಸಮಯ.
ಮೌನವಾಗಿರುವ ಸಮಯ,
    ಮಾತಾಡುವ ಸಮಯ.
ಪ್ರೀತಿ ಮಾಡುವ ಸಮಯ,
    ದ್ವೇಷಿಸುವ ಸಮಯ.
ಯುದ್ಧಮಾಡುವ ಸಮಯ,
    ಶಾಂತಿಯಿಂದಿರುವ ಸಮಯ.

ಲೋಕವು ದೇವರ ಹತೋಟಿಯಲ್ಲಿದೆ

ದುಡಿಯುವವನಿಗೆ ಅವನ ಪ್ರಯಾಸದಿಂದ ಲಾಭವೇನು? 10 ದೇವರು ಮನುಷ್ಯರಿಗೆ ಕೊಟ್ಟಿರುವ ಪ್ರಯಾಸದ ಕೆಲಸವನ್ನೆಲ್ಲಾ ನೋಡಿದ್ದೇನೆ. 11 ಈ ಲೋಕವನ್ನು ಕುರಿತು ಆಲೋಚಿಸುವುದಕ್ಕೆ ದೇವರು ನನಗೆ ಜ್ಞಾನವನ್ನು ಕೊಟ್ಟಿದ್ದರೂ ದೇವರ ಕಾರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವೇ ಇಲ್ಲ. ದೇವರು ಪ್ರತಿಯೊಂದನ್ನೂ ತಕ್ಕ ಸಮಯದಲ್ಲಿ ಮಾಡುವನು.

12 ಬದುಕಿರುವಷ್ಟು ಕಾಲ ಸಂತೋಷವಾಗಿದ್ದು ಸುಖಪಡುವುದಕ್ಕಿಂತ ಬೇರೆ ಯಾವ ಮೇಲೂ ಮನುಷ್ಯರಿಗೆ ಇಲ್ಲವೆಂದು ಕಲಿತುಕೊಂಡೆನು. 13 ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಕೆಲಸವನ್ನು ಸಂತೋಷದಿಂದ ಮಾಡುವುದು ದೇವರಿಗೆ ಇಷ್ಟವಾಗಿದೆ. ಅವು ದೇವರ ವರವಾಗಿವೆ.

14 ದೇವರ ಕಾರ್ಯಗಳೆಲ್ಲಾ ಶಾಶ್ವತವಾದದ್ದು. ಆತನ ಕಾರ್ಯಗಳಿಗೆ ಮನುಷ್ಯರು ಏನನ್ನೂ ಸೇರಿಸಲಾರರು; ಅವುಗಳಿಂದ ಏನನ್ನೂ ತೆಗೆಯಲಾರರು. ಮನುಷ್ಯರು ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕೆಂಬುದೇ ಇದಕ್ಕೆ ಕಾರಣ. 15 ಈಗ ಸಂಭವಿಸುವಂಥವುಗಳೂ ಮುಂದೆ ಸಂಭವಿಸುವಂಥವುಗಳೂ ಹಿಂದಿನ ಕಾಲದಲ್ಲಿ ಸಂಭವಿಸಲ್ಪಟ್ಟಿವೆ. ದೇವರು ಅದೇ ಕಾರ್ಯಗಳನ್ನು ಮತ್ತೆಮತ್ತೆ ಬರಮಾಡುವನು.

16 ನಾನು ಈ ಲೋಕವನ್ನು ದೃಷ್ಟಿಸಿ ನೋಡಿದಾಗ, ನ್ಯಾಯಾಲಯಗಳಲ್ಲಿ ನೀತಿನ್ಯಾಯಗಳ ಬದಲಾಗಿ ದುಷ್ಟತನ ತುಂಬಿರುವುದನ್ನು ಕಂಡುಕೊಂಡೆನು. 17 ಆಗ ನಾನು ಮನಸ್ಸಿನಲ್ಲಿ, “ದೇವರು ಪ್ರತಿಯೊಂದಕ್ಕೂ ಸಮಯವನ್ನು ಗೊತ್ತುಪಡಿಸಿದ್ದಾನೆ. ಜನರು ಮಾಡುವ ಪ್ರತಿಯೊಂದಕ್ಕೂ ನ್ಯಾಯತೀರಿಸಲು ಆತನು ಸಮಯವನ್ನು ಗೊತ್ತುಪಡಿಸಿದ್ದಾನೆ. ದೇವರು ನೀತಿವಂತರಿಗೂ ದುಷ್ಟರಿಗೂ ನ್ಯಾಯತೀರಿಸುವನು” ಎಂದುಕೊಂಡೆನು.

ಮನುಷ್ಯರು ಪ್ರಾಣಿಗಳಂತಿರುವರೇ?

18 ಅಲ್ಲದೆ ಮನಸ್ಸಿನಲ್ಲಿ ಹೀಗೆಂದುಕೊಂಡೆನು: “ಮನುಷ್ಯರು ಪ್ರಾಣಿಗಳಿಗಿಂತ ಮೇಲಾದವರಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕೆಂಬುದು ದೇವರ ಇಷ್ಟವಾಗಿದೆ. 19 ಮನುಷ್ಯನು ಪ್ರಾಣಿಗಿಂತಲೂ ಉತ್ತಮನಾಗಿರುವನೇ? ಇಲ್ಲ! ಏಕೆಂದರೆ ಪ್ರತಿಯೊಂದು ಉಪಯೋಗವಿಲ್ಲದ್ದು. ಪ್ರಾಣಿಗಳಿಗೂ ಮನುಷ್ಯರಿಗೂ ಒಂದೇ ಗತಿಯಾಗುವುದು; ಪ್ರಾಣಿಗಳೂ ಸಾಯುವವು, ಮನುಷ್ಯರೂ ಸಾಯುವರು. ಮನುಷ್ಯರಿಗೂ ಪ್ರಾಣಿಗಳಿಗೂ ಇರುವುದು ಒಂದೇ ‘ಉಸಿರು.’ ಸತ್ತ ಪ್ರಾಣಿಗೂ ಸತ್ತ ಮನುಷ್ಯನಿಗೂ ವ್ಯತ್ಯಾಸವಿಲ್ಲ. 20 ಮನುಷ್ಯರ ಮತ್ತು ಪ್ರಾಣಿಗಳ ದೇಹಗಳೆಲ್ಲ ಒಂದೇ ಸ್ಥಳಕ್ಕೆ ಹೋಗುತ್ತವೆ. ಮನುಷ್ಯರು ಮಣ್ಣಿನಿಂದ ಬಂದರು. ಕೊನೆಗೆ ಅವರು ಮಣ್ಣಿಗೇ ಹೋಗುವರು. ಪ್ರಾಣಿಗಳು ಮಣ್ಣಿನಿಂದ ಬಂದವು; ಕೊನೆಗೆ ಅವು ಮಣ್ಣಿಗೆ ಹೋಗುತ್ತವೆ. 21 ಮನುಷ್ಯನ ಆತ್ಮಕ್ಕೆ ಏನು ಸಂಭವಿಸುವುದೋ ಯಾರಿಗೆ ಗೊತ್ತು? ಮನುಷ್ಯನ ಆತ್ಮವು ದೇವರ ಬಳಿಗೆ ಮೇಲಕ್ಕೆ ಹೋಗುವುದೋ ಪ್ರಾಣಿಯ ಆತ್ಮವು ಭೂಮಿಯೊಳಗೆ ಇಳಿಯುವುದೋ ಯಾರಿಗೆ ಗೊತ್ತು?”

22 ಆದ್ದರಿಂದ ಮನುಷ್ಯನಿಗೆ ತನ್ನ ಕಾರ್ಯದಲ್ಲಿ ಸಂತೋಷಪಡುವುದಕ್ಕಿಂತ ಬೇರೆ ಯಾವ ಮೇಲೂ ಇಲ್ಲ. ಇದೇ ಅವನ ಪಾಲು ಎಂದು ಗ್ರಹಿಸಿಕೊಂಡೆನು. ಅಲ್ಲದೆ ಮುಂದಿನ ಕಾಲವನ್ನು ಕುರಿತು ಮನುಷ್ಯನು ಚಿಂತಿಸಬಾರದು. ಯಾಕೆಂದರೆ ಅವನ ಜೀವಮಾನದ ನಂತರ ಸಂಭವಿಸುವಂಥವುಗಳನ್ನು ನೋಡಲು ಈ ಲೋಕಕ್ಕೆ ಅವನನ್ನು ಯಾರು ಬರಮಾಡುವರು?

1 ತಿಮೊಥೆಯನಿಗೆ 5

ವೃದ್ಧ ಪುರುಷರೊಂದಿಗೆ ಕೋಪದಿಂದ ಮಾತಾಡದೆ ಅವರನ್ನು ನಿನ್ನ ತಂದೆಯೆಂದು ಭಾವಿಸಿ ಅವರೊಂದಿಗೆ ಮಾತನಾಡು. ಯೌವನಸ್ಥರನ್ನು ಸಹೋದರರಂತೆಯೂ ವೃದ್ಧ ಸ್ತ್ರೀಯರನ್ನು ತಾಯಿಗಳಂತೆಯೂ ಯೌವನಸ್ಥೆಯರನ್ನು ಸಹೋದರಿಯರಂತೆಯೂ ಪರಿಗಣಿಸು. ಯಾವಾಗಲೂ ಅವರೊಡನೆ ಒಳ್ಳೆಯ ರೀತಿಯಲ್ಲಿ ನಡೆದುಕೊ.

ವಿಧವೆಯರನ್ನು ಹೇಗೆ ಪೋಷಿಸಬೇಕೆಂಬ ನಿಯಮಗಳು

ದಿಕ್ಕಿಲ್ಲದ ವಿಧವೆಯರನ್ನು ಪರಿಪಾಲಿಸು. ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಇದ್ದರೆ, ಅವರು ತಂದೆತಾಯಿಗಳಿಗೆ ಸಹಾಯ ಮಾಡುವುದರ ಮೂಲಕ ಸ್ವಂತ ಕುಟುಂಬಕ್ಕೆ ಗೌರವವನ್ನು ತೋರಬೇಕು. ಅವರು ಹೀಗೆ ಮಾಡಿದರೆ, ತಂದೆತಾಯಿಗಳಿಗೆ ಮತ್ತು ಅಜ್ಜಅಜ್ಜಿಯರಿಗೆ ಪ್ರತ್ಯುಪಕಾರ ಮಾಡಿದಂತಾಗುವುದು. ಅದು ದೇವರಿಗೆ ಮೆಚ್ಚಿಕೆಯಾದದ್ದು. ಒಬ್ಬ ವಿಧವೆಯು ನಿಜವಾಗಿಯೂ ಸಹಾಯಕರಿಲ್ಲದೆ ಒಬ್ಬಂಟಿಗಳಾಗಿದ್ದರೆ, ಆಗ ಆಕೆಯು ತನ್ನ ರಕ್ಷಣೆಗಾಗಿ ದೇವರ ಮೇಲೆ ಭರವಸೆ ಇಡುವಳು. ಆ ಸ್ತ್ರೀಯು ಹಗಲು ರಾತ್ರಿಯೆಲ್ಲ ಪ್ರಾರ್ಥಿಸುವಳು. ಅವಳು ದೇವರ ಸಹಾಯವನ್ನು ಬೇಡುವಳು. ಆದರೆ ವಿಧವೆಯಾದವಳು ತನ್ನ ಇಚ್ಛೆಪೂರೈಕೆಗಾಗಿ ತನ್ನ ಜೀವಿತವನ್ನು ಬಳಸಿಕೊಳ್ಳುವುದಾದರೆ ಅವಳು ಬದುಕಿದ್ದರೂ ಸತ್ತಂತೆಯೇ. ಜನರು ನಿಂದೆನೆಗೆ ಗುರಿಯಾಗದಂತೆ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸು. ಆಗ ಯಾರೂ ಅವರನ್ನು ನಿಂದಿಸಲು ಸಾಧ್ಯವಿಲ್ಲ. ಯಾವನಾದರೂ ಸ್ವಂತ ಜನರನ್ನು ವಿಶೇಷವಾಗಿ ಸ್ವಂತ ಕುಟುಂಬದವರನ್ನು ಪರಿಪಾಲಿಸದೆ ಹೋದರೆ ಅವನು ಸತ್ಯಬೋಧನೆಯನ್ನು ತಿರಸ್ಕರಿಸುವವನಾಗಿದ್ದಾನೆ. ಅವನು ನಂಬದವನಿಗಿಂತ ತುಂಬಾ ಕೀಳಾದವನು.

ವಿಧವೆಯರ ಪಟ್ಟಿಗೆ ಸೇರಿಸಲ್ಪಟ್ಟ ವಿಧವೆಯರು ವಯಸ್ಸಿನಲ್ಲಿ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಅವಳು ತನ್ನ ಗಂಡನಿಗೆ ನಂಬಿಗಸ್ತಳಾಗಿದ್ದವಳೆಂದೂ 10 ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದವಳೆಂದೂ ಹೆಸರನ್ನು ಪಡೆದಿರಬೇಕು. ಅಂದರೆ, ಅವಳು ತನ್ನ ಮಕ್ಕಳನ್ನು ಸಾಕಿಸಲಹಿದವಳೂ, ಅತಿಥಿಗಳನ್ನು ಸತ್ಕರಿಸಿದವಳೂ, ದೇವಜನರ ಪಾದಗಳನ್ನು ತೊಳೆದವಳೂ, ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಿದವಳೂ ಮತ್ತು ತನ್ನಿಂದಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದವಳೂ ಆಗಿರಬೇಕು.

11 ಆದರೆ ಪ್ರಾಯದ ವಿಧವೆಯರನ್ನು ಆ ಪಟ್ಟಿಯಲ್ಲಿ ಸೇರಿಸಬಾರದು. ಅವರು ಕ್ರಿಸ್ತನಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದರೂ ದೈಹಿಕ ಬಯಕೆಗಳ ಒತ್ತಡದಿಂದ ಪದೇಪದೇ ಆತನಿಗೆ ವಿಮುಖರಾಗುತ್ತಾರೆ. ನಂತರ ಅವರು ಮತ್ತೆ ಮದುವೆಯಾಗಲು ಆಸಕ್ತರಾಗುತ್ತಾರೆ. 12 ತಾವು ಕೊಟ್ಟ ವಾಗ್ದಾನವನ್ನು ಮೀರಿದವರೆಂಬ ತೀರ್ಪು ಅವರಿಗಾಗುತ್ತದೆ. 13 ಇದಲ್ಲದೆ, ಅವರು ಮನೆಮನೆಗೆ ಅಲೆಯುತ್ತಾ ತಮ್ಮ ಕಾಲವನ್ನು ಕಳೆಯಲಾರಂಭಿಸುತ್ತಾರೆ; ಹರಟೆ ಮಾತುಗಳನ್ನಾಡುತ್ತಾ ಇತರರ ಜೀವನದಲ್ಲಿ ತಲೆಹಾಕಿ ಕಾಲಹರಣ ಮಾಡುತ್ತಾರೆ; ಹೇಳಬಾರದ ಸಂಗತಿಗಳನ್ನೆಲ್ಲ ಹೇಳುತ್ತಾರೆ. 14 ಆದ್ದರಿಂದ ಅವರು ಮದುವೆ ಮಾಡಿಕೊಂಡು ಮಕ್ಕಳನ್ನು ಪಡೆಯಲಿ ಮತ್ತು ತಮ್ಮ ಮನೆಗಳನ್ನು ನೋಡಿಕೊಳ್ಳಲಿ. ಆಗ ಅವರನ್ನು ಟೀಕಿಸಲು ನಮ್ಮ ಶತ್ರುವಿಗೆ ಯಾವ ಕಾರಣವೂ ಇರುವುದಿಲ್ಲ. 15 ಆದರೆ ಈಗಾಗಲೇ ಕೆಲವರು ತಮ್ಮ ದಾರಿಯನ್ನು ಬದಲಾಯಿಸಿ ಸೈತಾನನನ್ನು ಹಿಂಬಾಲಿಸಿದ್ದಾರೆ.

16 ವಿಶ್ವಾಸಿಯಾದ ಸ್ತ್ರೀಯ ಕುಟುಂಬದಲ್ಲಿ ವಿಧವೆಯರಿದ್ದರೆ, ಆಕೆಯೇ ಅವರನ್ನು ಪರಿಪಾಲಿಸಲಿ. ಅವರನ್ನು ನೋಡಿಕೊಳ್ಳುವಂಥ ಜವಾಬ್ದಾರಿಯನ್ನು ಸಭೆಗೆ ಕೊಡಕೂಡದು. ಆಗ ದಿಕ್ಕಿಲ್ಲದ ವಿಧವೆಯರನ್ನು ನೋಡಿಕೊಳ್ಳಲು ಸಭೆಗೆ ಸಾಧ್ಯವಾಗುವುದು.

ಹಿರಿಯರ ಮತ್ತು ಇನ್ನಿತರ ವಿಷಯಗಳ ಕುರಿತು ಹೆಚ್ಚಿನ ಬೋಧನೆ

17 ಸಭೆಯನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಹಿರಿಯರು ಗೌರವಕ್ಕೂ ಸಂಬಳಕ್ಕೂ ಯೋಗ್ಯರಾಗಿದ್ದಾರೆ. ಪ್ರಸಂಗ ಮಾಡುವುದರಲ್ಲಿಯೂ ಉಪದೇಶಮಾಡುವುದರಲ್ಲಿಯೂ ನಿರತರಾಗಿರುವ ಹಿರಿಯರು ಉನ್ನತವಾದ ಗೌರವವನ್ನು ಪಡೆಯುತ್ತಾರೆ. 18 ಏಕೆಂದರೆ “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು”(A) ಎಂಬುದಾಗಿಯೂ “ದುಡಿಯುವ ಆಳಿಗೆ ತಕ್ಕ ಕೂಲಿ ದೊರೆಯಬೇಕು”(B) ಎಂಬುದಾಗಿಯೂ ಪವಿತ್ರ ಗ್ರಂಥವು ಹೇಳುತ್ತದೆ.

19 ಸಭೆಯ ಹಿರಿಯರನ್ನು ಕುರಿತು ಯಾವನಾದರೂ ದೂರು ಹೇಳಿದರೆ ಇಬ್ಬರು ಅಥವಾ ಮೂವರು ಸಾಕ್ಷಿಗಳಿಲ್ಲದ ಹೊರತು ಅವನ ಮಾತುಗಳಿಗೆ ಕಿವಿಗೊಡಬೇಡ. 20 ಪಾಪ ಮಾಡುವ ಜನರನ್ನು ಸಭೆಯಲ್ಲಿ ಎಲ್ಲರ ಎದುರಿನಲ್ಲಿಯೇ ಗದರಿಸು. ಆಗ ಇತರರಿಗೂ ಎಚ್ಚರಿಕೆ ನೀಡಿದಂತಾಗುವುದು.

21 ನೀನು ಈ ಕಾರ್ಯಗಳನ್ನು ಮಾಡಬೇಕೆಂದು ದೇವರ, ಯೇಸು ಕ್ರಿಸ್ತನ ಮತ್ತು ಆರಿಸಲ್ಪಟ್ಟ ದೇವದೂತರ ಸನ್ನಿಧಿಯಲ್ಲಿ ನಾನು ಆಜ್ಞಾಪಿಸುತ್ತೇನೆ. ಆದರೆ ಸತ್ಯವನ್ನು ತಿಳಿಯುವುದಕ್ಕಿಂತ ಮೊದಲೇ ಜನರಿಗೆ ತೀರ್ಪು ನೀಡಬೇಡ. ಯಾರಿಗೂ ಪಕ್ಷಪಾತ ತೋರಬೇಡ.

22 ನೀನು ನಿನ್ನ ಹಸ್ತಗಳನ್ನು ಯಾರ ಮೇಲಾದರೂ ಇಟ್ಟು ಅವನನ್ನು ಸಭಾಹಿರಿಯನನ್ನಾಗಿ ನೇಮಿಸುವುದಕ್ಕಿಂತ ಮೊದಲೇ ಗಮನವಿಟ್ಟು ಆಲೋಚನೆಮಾಡು. ಇತರ ಜನರ ಪಾಪಗಳಲ್ಲಿ ಪಾಲುಗಾರನಾಗದೆ ಶುದ್ಧನಾಗಿರು.

23 ತಿಮೊಥೆಯನೇ, ನೀನು ನೀರನ್ನು ಮಾತ್ರ ಕುಡಿಯದೆ ಸ್ವಲ್ಪ ದ್ರಾಕ್ಷಾರಸವನ್ನು ಸಹ ಕುಡಿಯಬೇಕು. ಇದರಿಂದ ನಿನ್ನ ಜೀರ್ಣಶಕ್ತಿಯು ಹೆಚ್ಚುವುದರಿಂದ ಪದೇಪದೇ ಅಸ್ವಸ್ಥನಾಗುವುದಿಲ್ಲ.

24 ಕೆಲವು ಜನರ ಪಾಪಗಳು ಎದ್ದುಕಾಣುತ್ತವೆ. ಅವರಿಗೆ ನ್ಯಾಯತೀರ್ಪಾಗುವುದೆಂಬುದನ್ನು ಅವರ ಪಾಪಗಳೇ ತೋರ್ಪಡಿಸುತ್ತವೆ. ಆದರೆ ಇತರ ಕೆಲವು ಜನರ ಪಾಪಗಳು ಸ್ವಲ್ಪಕಾಲದ ನಂತರ ತಿಳಿದುಬರುತ್ತವೆ. 25 ಹಾಗೆಯೇ, ಕೆಲವರ ಒಳ್ಳೆಯ ಕಾರ್ಯಗಳು ಪ್ರಸಿದ್ಧವಾಗಿವೆ. ಇನ್ನು ಕೆಲವರ ಒಳ್ಳೆಯ ಕಾರ್ಯಗಳು ಪ್ರಸಿದ್ಧವಾಗಿಲ್ಲದಿದ್ದರೂ ಅವು ಮರೆಯಾಗಿರಲು ಸಾಧ್ಯವಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International