M’Cheyne Bible Reading Plan
ಇಸ್ರೇಲರು ದೇವಜನರಾಗಿದ್ದಾರೆ
19 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಇಸ್ರೇಲರಿಗೆ ಹೀಗೆ ಹೇಳು: ನಾನೇ ನಿಮ್ಮ ದೇವರಾದ ಯೆಹೋವನು ನಾನು ಪರಿಶುದ್ಧನಾಗಿರುವಂತೆಯೇ ನೀವೂ ಪರಿಶುದ್ಧರಾಗಿರಬೇಕು!
3 “ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ನನ್ನ ವಿಶ್ರಾಂತಿಯ ವಿಶೇಷ ದಿನಗಳನ್ನು ಆಚರಿಸಬೇಕು. ನಾನೇ ನಿಮ್ಮ ದೇವರಾದ ಯೆಹೋವನು!
4 “ವಿಗ್ರಹಾರಾಧನೆ ಮಾಡಬೇಡಿರಿ! ಎರಕದ ವಿಗ್ರಹಗಳನ್ನು ಮಾಡಿಕೊಳ್ಳಬೇಡಿರಿ. ನಾನೇ ನಿಮ್ಮ ದೇವರಾದ ಯೆಹೋವನು!
5 “ನೀವು ಸಮಾಧಾನಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸುವಾಗ, ನೀವು ಅಂಗೀಕೃತರಾಗುವಂತೆ ಅವುಗಳನ್ನು ಅರ್ಪಿಸಬೇಕು. 6 ನೀವು ಅರ್ಪಿಸಿದ ದಿನದಲ್ಲಿ ಅಥವಾ ಮರುದಿನದಲ್ಲಿ ಅದನ್ನು ತಿನ್ನಬಹುದು. ಆದರೆ ಆ ಯಜ್ಞದಲ್ಲಿ ಏನಾದರೂ ಮೂರನೆಯ ದಿನದವರೆಗೆ ಉಳಿದರೆ, ನೀವು ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. 7 ಅದರಲ್ಲಿ ಯಾವುದನ್ನಾದರೂ ಮೂರನೆಯ ದಿನದಲ್ಲಿ ತಿಂದರೆ, ಅದು ಅಪವಿತ್ರವಾಗುವುದು. ಅದು ಅಂಗೀಕೃತವಾಗುವುದಿಲ್ಲ. 8 ಒಬ್ಬನು ಅದನ್ನು ಮೂರನೆಯ ದಿನದಲ್ಲಿ ತಿಂದರೆ ಅವನು ಪಾಪಮಾಡಿದ ದೋಷಿಯಾಗಿರುವನು. ಯಾಕೆಂದರೆ ಯೆಹೋವನಿಗೆ ಮೀಸಲಾದ ಪವಿತ್ರ ವಸ್ತುಗಳ ವಿಷಯದಲ್ಲಿ ಅವನಿಗೆ ಗೌರವವಿಲ್ಲ; ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕಬೇಕು.
9 “ಸುಗ್ಗಿಕಾಲದಲ್ಲಿ ನಿಮ್ಮ ಬೆಳೆಯನ್ನು ಕೊಯ್ಯುವಾಗ, ಹೊಲಗಳ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬೇಡಿರಿ; ಧಾನ್ಯವೇನಾದರೂ ನೆಲದ ಮೇಲೆ ಬಿದ್ದರೆ ಅದನ್ನು ಕೂಡಿಸಿಕೊಳ್ಳಬಾರದು. 10 ನಿಮ್ಮ ದ್ರಾಕ್ಷಿತೋಟಗಳಲ್ಲಿರುವ ದ್ರಾಕ್ಷಿಗಳನ್ನೆಲ್ಲಾ ತೆಗೆದುಕೊಳ್ಳಬೇಡಿರಿ: ನೆಲದ ಮೇಲೆ ಬೀಳುವ ದ್ರಾಕ್ಷಿಹಣ್ಣುಗಳನ್ನು ಹೆಕ್ಕಿಕೊಳ್ಳಬಾರದು. ಯಾಕೆಂದರೆ ನೀವು ಅವುಗಳನ್ನು ಬಡವರಿಗಾಗಿಯೂ ನಿಮ್ಮ ದೇಶದಲ್ಲಿ ವಾಸಿಸಲು ಬಂದ ಪರದೇಶಸ್ಥರಿಗಾಗಿಯೂ ಬಿಡಬೇಕು. ನಾನೇ ನಿಮ್ಮ ದೇವರಾದ ಯೆಹೋವನು!
11 “ನೀವು ಕದಿಯಬಾರದು; ಮೋಸಮಾಡಬಾರದು; ಒಬ್ಬರಿಗೊಬ್ಬರು ಸುಳ್ಳಾಡಬಾರದು. 12 ನೀವು ನನ್ನ ಹೆಸರನ್ನು ಉಪಯೋಗಿಸಿ ಸುಳ್ಳಾಣೆ ಇಟ್ಟುಕೊಳ್ಳಬಾರದು; ಇಲ್ಲವಾದರೆ ನೀವು ದೇವರ ಹೆಸರನ್ನು ಅಪಕೀರ್ತಿಗೆ ಗುರಿಪಡಿಸುವಿರಿ; ನಾನೇ ನಿಮ್ಮ ದೇವರಾದ ಯೆಹೋವನು!
13 “ನಿಮ್ಮ ನೆರೆಯವನಿಗೆ ಕೆಡುಕುಗಳನ್ನು ಮಾಡಬಾರದು. ನೀವು ಅವನನ್ನು ಸುಲಿಗೆ ಮಾಡಬಾರದು. ನಿಮ್ಮ ಕೂಲಿಯವರ ಕೂಲಿಯನ್ನು ಮರುದಿನದ ಮುಂಜಾನೆಯವರೆಗೆ ಹಿಡಿದಿಟ್ಟುಕೊಳ್ಳಬಾರದು.
14 “ನೀವು ಕಿವುಡನನ್ನು ಶಪಿಸಬಾರದು. ಕುರುಡನು ಬೀಳುವಂತೆ ನೀವು ಅವನ ಮುಂದೆ ಅಡ್ಡವಾಗಿ ಏನನ್ನೂ ಇಡಬಾರದು. ಆದರೆ ನೀವು ನಿಮ್ಮ ದೇವರನ್ನು ಸನ್ಮಾನಿಸಬೇಕು. ನಾನೇ ನಿಮ್ಮ ದೇವರಾದ ಯೆಹೋವನು.
15 “ನೀವು ಕೊಡುವ ತೀರ್ಪು ನ್ಯಾಯವಾಗಿರಬೇಕು. ಬಡವರ ಬಡತನವನ್ನಾಗಲಿ ಪ್ರಾಮುಖ್ಯರ ದೊಡ್ಡಸ್ತಿಕೆಯನ್ನಾಗಲಿ ಗಮನಿಸದೆ ಪಕ್ಷಪಾತವಿಲ್ಲದೆ ತೀರ್ಪುಕೊಡಬೇಕು. ನೀವು ನಿಮ್ಮ ನೆರೆಯವನಿಗೆ ತೀರ್ಪುಮಾಡುವಾಗ ನ್ಯಾಯದ ತೀರ್ಪುಕೊಡಿರಿ. 16 ಬೇರೆ ಜನರ ವಿರುದ್ಧ ಚಾಡಿ ಹೇಳಬಾರದು. ನಿಮ್ಮ ನೆರೆಯವನ ಪ್ರಾಣವನ್ನು ಅಪಾಯಕ್ಕೆ ಈಡುಮಾಡುವ ಯಾವ ಕಾರ್ಯವನ್ನೂ ನೀವು ಮಾಡಬಾರದು. ನಾನೇ ಯೆಹೋವನು!
17 “ನೀವು ನಿಮ್ಮ ಸಹೋದರನನ್ನು ಮನಸ್ಸಿನಲ್ಲಿ ದ್ವೇಷಿಸಬಾರದು. ನಿಮ್ಮ ಸಹೋದರನು ಏನಾದರೂ ತಪ್ಪುಮಾಡಿದರೆ, ಅವನೊಡನೆ ಅದರ ಕುರಿತು ಮಾತಾಡು. ಅವನ ಅಪರಾಧದಲ್ಲಿ ನೀವು ಪಾಲುಹೊಂದದಂತೆ ನೇರವಾಗಿ ಗದರಿಸಿ. ಆಗ ನೀವು ಅವನನ್ನು ಕ್ಷಮಿಸಬಹುದು. 18 ಜನರು ನಿಮಗೆ ಮಾಡುವ ಕೆಟ್ಟಕಾರ್ಯಗಳನ್ನು ಮರೆತುಬಿಡಿರಿ. ನಿಮ್ಮ ಜನರಲ್ಲಿ ಒಬ್ಬನಾಗಿರುವವನ ಮೇಲೆ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸಬೇಡಿರಿ; ದ್ವೇಷವನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ನೆರೆಯವನನ್ನು ನಿಮ್ಮಂತೆಯೇ ಪ್ರೀತಿಸಿರಿ. ನಾನೇ ಯೆಹೋವನು!
19 “ನೀವು ನನ್ನ ಕಟ್ಟಳೆಗಳಿಗೆ ವಿಧೇಯರಾಗಿರಬೇಕು. ಎರಡು ಬೇರೆ ಜಾತಿಯ ಪಶುಗಳನ್ನು ಒಟ್ಟಿಗೆ ಸೇರಿಸಿ ಈಯಿಸಬಾರದು. ನಿಮ್ಮ ಹೊಲಗಳಲ್ಲಿ ಎರಡು ವಿಧದ ಬೀಜಗಳನ್ನು ಬಿತ್ತಬಾರದು. ಎರಡು ವಿಧದ ದಾರಗಳನ್ನು ಸೇರಿಸಿ ಮಾಡಿದ ಬಟ್ಟೆಯನ್ನು ಧರಿಸಿಕೊಳ್ಳಬಾರದು.
20 “ಇನ್ನೊಬ್ಬನ ದಾಸಿಯಾಗಿರುವ ಸ್ತ್ರೀಯೊಡನೆ ಒಬ್ಬನು ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ, ಈ ದಾಸಿಯು ಹಣದಿಂದಾಗಲಿ ಉಚಿತವಾಗಿಯಾಗಲಿ ಬಿಡುಗಡೆಯಾಗಲು ಸಾಧ್ಯವಿಲ್ಲದಿದ್ದರೆ ಅವರಿಬ್ಬರಿಗೆ ಶಿಕ್ಷೆ ವಿಧಿಸಬೇಕು. ಆದರೆ ಅವರಿಗೆ ಮರಣ ಶಿಕ್ಷೆಯಾಗಬಾರದು. ಯಾಕೆಂದರೆ ಸ್ತ್ರೀಯು ಸ್ವತಂತ್ರಳಾಗಿಲ್ಲ. 21 ಆ ಪುರುಷನು ತನ್ನ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಟಗರನ್ನು ಯೆಹೋವನ ಬಳಿಗೆ ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. 22 ಯಾಜಕನು ಅವನನ್ನು ಶುದ್ಧಿಮಾಡುವ ಕಾರ್ಯಗಳನ್ನು ಮಾಡುವನು. ಯಾಜಕನು ಯೆಹೋವನ ಸನ್ನಿಧಿಯಲ್ಲಿ ಆ ಟಗರನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವನು. ಅದು ಆ ಪುರುಷನು ಮಾಡಿದ ಪಾಪಗಳ ಪರಿಹಾರಕ್ಕಾಗಿರುವುದು. ಆಗ ಅವನಿಗೆ ಕ್ಷಮಾಪಣೆಯಾಗುವುದು.
23 “ಮುಂದೆ ನೀವು ನಿಮ್ಮ ದೇಶವನ್ನು ಪ್ರವೇಶಿಸುವಿರಿ. ಆ ಸಮಯದ ಆಹಾರಕ್ಕಾಗಿ ಅನೇಕ ವಿಧಗಳ ಮರಗಳನ್ನು ನೆಡುವಿರಿ. ಸಸಿಯನ್ನು ನೆಟ್ಟನಂತರ, ನೀವು ಆ ಮರದಿಂದ ಹಣ್ಣನ್ನು ಉಪಯೋಗಿಸುವುದಕ್ಕೆ ಮೂರು ವರ್ಷಗಳು ಕಾಯಬೇಕು. ನೀವು ಆ ಹಣ್ಣನ್ನು ಉಪಯೋಗಿಸಬಾರದು. 24 ನಾಲ್ಕನೆಯ ವರ್ಷದಲ್ಲಿ ಆ ಮರದ ಎಲ್ಲಾ ಹಣ್ಣುಗಳು ಯೆಹೋವನದಾಗುವುದು. ಅದು ಯೆಹೋವನ ಸ್ತುತಿಗೆ ಅರ್ಪಿತವಾಗುವ ಪವಿತ್ರ ಕಾಣಿಕೆಯಾಗಿರುವುದು. 25 ಬಳಿಕ ಐದನೆಯ ವರ್ಷದಲ್ಲಿ, ನೀವು ಆ ಮರದ ಹಣ್ಣುಗಳನ್ನು ತಿನ್ನಬಹುದು ಮತ್ತು ಮರವು ನಿಮಗೆ ಹೆಚ್ಚೆಚ್ಚಾಗಿ ಹಣ್ಣುಗಳನ್ನು ನೀಡುವುದು. ನಾನೇ ನಿಮ್ಮ ದೇವರಾದ ಯೆಹೋವನು!
26 “ರಕ್ತಸಹಿತವಾದ ಮಾಂಸವನ್ನು ನೀವು ತಿನ್ನಬಾರದು.
“ನೀವು ಕಣಿ ಹೇಳಬಾರದು; ಮಂತ್ರತಂತ್ರಗಳನ್ನು ಮಾಡಬಾರದು.
27 “ನಿಮ್ಮ ಮುಖದ ಪಾರ್ಶ್ವದಲ್ಲಿ ಬೆಳೆಯುವ ಕೂದಲನ್ನು ನೀವು ಕತ್ತರಿಸಬಾರದು. ನಿಮ್ಮ ಮುಖದ ಪಾರ್ಶ್ವದಲ್ಲಿರುವ ಗಡ್ಡವನ್ನು ಕತ್ತರಿಸಿಕೊಳ್ಳುವುದರ ಮೂಲಕ ನೀವು ನಿಮ್ಮ ಗಡ್ಡವನ್ನು ವಿಕಾರ ಮಾಡಿಕೊಳ್ಳಬಾರದು. 28 ಸತ್ತವರನ್ನು ಜ್ಞಾಪಕ ಮಾಡಿಕೊಳ್ಳುವುದಕ್ಕಾಗಿ ನಿಮ್ಮ ದೇಹವನ್ನು ಗಾಯಮಾಡಿಕೊಳ್ಳಬಾರದು. ಶರೀರದ ಮೇಲೆ ಹಚ್ಚೇ ಚುಚ್ಚಿಸಿಕೊಳ್ಳಬಾರದು. ನಾನೇ ಯೆಹೋವನು!
29 “ಮಗಳನ್ನು ಸೂಳೆಯನ್ನಾಗಿ ಮಾಡಬಾರದು. ಇದರಿಂದ ಸೂಳೆಗಾರಿಕೆ ಹೆಚ್ಚಾಗುತ್ತದೆ. ನಿಮ್ಮ ದೇಶದಲ್ಲಿ ಸೂಳೆಗಾರಿಕೆ ಇರದಂತೆ ನೋಡಿಕೊಳ್ಳಿರಿ. ಇಂಥ ಪಾಪದಿಂದ ನಿಮ್ಮ ದೇಶವು ತುಂಬಿಹೋಗಲು ಬಿಡಬೇಡಿರಿ.
30 “ನೀವು ನನ್ನ ಸಬ್ಬತ್ ದಿನಗಳನ್ನು ಅನುಸರಿಸಬೇಕು. ನನ್ನ ವಿಶ್ರಾಂತಿಯ ವಿಶೇಷ ದಿನಗಳಲ್ಲಿ ನೀವು ಕೆಲಸ ಮಾಡಬಾರದು. ನೀವು ನನ್ನ ಪವಿತ್ರಸ್ಥಳವನ್ನು ಗೌರವಿಸಬೇಕು. ನಾನೇ ಯೆಹೋವನು!
31 “ಸಲಹೆಗಾಗಿ, ಸತ್ತವರಲ್ಲಿ ವಿಚಾರಿಸುವವರ ಮತ್ತು ಬೇತಾಳಿಕರ ಬಳಿಗೆ ಹೋಗಬೇಡಿರಿ. ಅವರು ನಿಮ್ಮನ್ನು ಕೇವಲ ಅಶುದ್ಧರನ್ನಾಗಿ ಮಾಡುವರು. ನಾನೇ ನಿಮ್ಮ ದೇವರಾದ ಯೆಹೋವನು!
32 “ವೃದ್ಧರ ಮುಂದೆ ಎದ್ದು ನಿಂತುಕೊಳ್ಳಿರಿ. ಹಿರಿಯರಿಗೆ ಗೌರವಕೊಡಿರಿ. ನಿಮ್ಮ ದೇವರನ್ನು ಸನ್ಮಾನಿಸಿರಿ. ನಾನೇ ಯೆಹೋವನು!
33 “ನಿಮ್ಮ ದೇಶದಲ್ಲಿ ವಾಸಿಸುವ ಪರದೇಶಸ್ಥರಿಗೆ ಕೆಟ್ಟದ್ದನ್ನು ಮಾಡಬೇಡಿರಿ. 34 ನಿಮ್ಮ ಸ್ವಂತ ದೇಶದವರೊಡನೆ ವರ್ತಿಸುವ ಪ್ರಕಾರ ಪರದೇಶಸ್ಥರೊಡನೆ ವರ್ತಿಸಿರಿ. ನಿಮ್ಮನ್ನು ಪ್ರೀತಿಸುವಂತೆ ಪರದೇಶಸ್ಥರನ್ನು ಪ್ರೀತಿಸಿರಿ. ಯಾಕೆಂದರೆ ನೀವು ಸಹ ಒಂದು ಕಾಲದಲ್ಲಿ ಈಜಿಪ್ಟಿನಲ್ಲಿದ್ದಾಗ ಪರದೇಶಸ್ಥರಾಗಿದ್ದಿರಿ. ನಾನೇ ನಿಮ್ಮ ದೇವರಾದ ಯೆಹೋವನು!
35 “ನೀವು ಜನರಿಗೆ ತೀರ್ಪುಮಾಡುವಾಗ ನ್ಯಾಯವಾಗಿ ತೀರ್ಪುಮಾಡಬೇಕು. ನೀವು ಅಳೆಯುವಾಗ ಮತ್ತು ತೂಕಮಾಡುವಾಗ ನ್ಯಾಯವಾಗಿ ನಡೆದುಕೊಳ್ಳಬೇಕು. 36 ನಿಮ್ಮ ಪುಟ್ಟಿಗಳು ಸರಿಯಾದ ಪ್ರಮಾಣದ್ದಾಗಿರಬೇಕು. ನಿಮ್ಮ ಕೊಳಗಗಳು ದ್ರವಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಹಿಡಿಸಿಕೊಳ್ಳುವಂತವುಗಳಾಗಿರಬೇಕು. ನಿಮ್ಮ ತೂಕದ ಕಲ್ಲುಗಳು ಮತ್ತು ತಕ್ಕಡಿಗಳು ವಸ್ತುಗಳನ್ನು ಸರಿಯಾಗಿ ತೂಕ ಮಾಡುವಂಥವುಗಳಾಗಿರಬೇಕು. ನಾನೇ ನಿಮ್ಮ ದೇವರಾದ ಯೆಹೋವನು! ನಾನು ನಿಮ್ಮನ್ನು ಈಜಿಪ್ಟಿನಿಂದ ಹೊರತಂದೆನು.
37 “ನೀವು ನನ್ನ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಜ್ಞಾಪಕಮಾಡಿಕೊಳ್ಳಬೇಕು; ಅವುಗಳಿಗೆ ವಿಧೇಯರಾಗಬೇಕು. ನಾನೇ ಯೆಹೋವನು.”
ರಚನೆಗಾರ: ದಾವೀದ.
23 ಯೆಹೋವನೇ ನನಗೆ ಕುರುಬನು.
ನನಗೆ ಕೊರತೆಯೇ ಇಲ್ಲ.
2 ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
3 ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
4 ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
5 ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
6 ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.
ರಚನೆಗಾರ: ದಾವೀದ.
24 ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದೇ.
ಲೋಕವೂ ಅದರ ನಿವಾಸಿಗಳೂ ಆತನವೇ.
2 ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು ಆತನೇ.
ಅದನ್ನು ಜಲರಾಶಿಗಳ ಮೇಲೆ ಕಟ್ಟಿದವನೂ ಆತನೇ.
3 ಯೆಹೋವನ ಪರ್ವತವನ್ನು ಹತ್ತುವವರು ಎಂಥವರಾಗಿರಬೇಕು?
ಆತನ ಪವಿತ್ರ ಆಲಯದಲ್ಲಿ ನಿಂತುಕೊಳ್ಳುವವರು ಎಂಥವರಾಗಿರಬೇಕು?
4 ಅವರು ದುಷ್ಕೃತ್ಯಗಳನ್ನು ಮಾಡಿಲ್ಲದವರೂ
ಶುದ್ಧ ಹೃದಯವುಳ್ಳವರೂ
ನನ್ನ ಹೆಸರಿನಲ್ಲಿ[a] ಮೋಸ ಪ್ರಮಾಣ ಮಾಡದವರೂ
ವಿಗ್ರಹಗಳನ್ನು ಆರಾಧಿಸದವರೂ ಆಗಿರಬೇಕು.
5 ಅವರನ್ನು ಯೆಹೋವನು ಆಶೀರ್ವದಿಸಿ ಕಾಪಾಡುವನು;
ದೇವರು ಅವರನ್ನು ನಿರಪರಾಧಿಗಳೆಂದು ಪ್ರಕಟಿಸುವನು.
6 ಆತನನ್ನು ಅನುಸರಿಸುವವರು ಇಂಥವರೇ.
ಸಹಾಯಕ್ಕಾಗಿ ಯಾಕೋಬನ ದೇವರ ಬಳಿಗೆ ಹೋಗುವವರು ಇಂಥವರೇ.
7 ಹೆಬ್ಬಾಗಿಲುಗಳೇ, ಉನ್ನತವಾಗಿರಿ!
ಪುರಾತನ ದ್ವಾರಗಳೇ, ತೆರದುಕೊಂಡಿರಿ.
ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
8 ಮಹಿಮಾಸ್ವರೂಪನಾದ ಈ ರಾಜನು ಯಾರು?
ಬಲಿಷ್ಠನೂ ಮಹಾಪರಾಕ್ರಮಿಯೂ ಆಗಿರುವ
ಯೆಹೋವನೇ ಆತನು.
9 ಹೆಬ್ಬಾಗಿಲುಗಳೇ, ಉನ್ನತವಾಗಿರಿ!
ಪುರಾತನ ದ್ವಾರಗಳೇ, ತೆರೆದುಕೊಂಡಿರಿ.
ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
10 ಮಹಿಮಾಸ್ವರೂಪನಾದ ಈ ರಾಜನು ಯಾರು?
ಸೇನಾಧೀಶ್ವರನಾದ ಯೆಹೋವನೇ ಆ ರಾಜನು.
ಮಹಿಮಾಸ್ವರೂಪನಾದ ರಾಜನು ಆತನೇ.
“ಸುಖವು” ನೀತಿಮಾರ್ಗಕ್ಕೆ ನಡೆಸುವುದೇ?
2 ನಾನು ನನ್ನ ಹೃದಯದಲ್ಲಿ, “ಬಾ, ನಿನ್ನನ್ನು ಸುಖದ ಮೂಲಕ ಪರೀಕ್ಷಿಸುವೆನು; ಆಗ ನೀನು ನೀತಿಮಾರ್ಗವನ್ನು ಕಲಿತುಕೊಳ್ಳುವೆ” ಎಂದುಕೊಂಡೆನು. ಆದರೆ ಇದು ಸಹ ವ್ಯರ್ಥವೆಂದು ಕಂಡುಕೊಂಡೆನು. 2 ನಗೆಯು ಹುಚ್ಚುತನ. ಸುಖದಿಂದ ಪ್ರಯೋಜನವೇನು? ಅಂದುಕೊಂಡೆನು.
3 ಮನುಷ್ಯರು ತಮ್ಮ ಕ್ಷಣಿಕ ಜೀವಮಾನದಲ್ಲಿ ಮಾಡತಕ್ಕ ಒಳ್ಳೆಯದನ್ನು ತಿಳಿದುಕೊಳ್ಳಬೇಕೆಂದು ನನ್ನ ಮನಸ್ಸನ್ನು ಜ್ಞಾನದಿಂದ ತುಂಬಿಸಿದೆ; ದೇಹವನ್ನು ದ್ರಾಕ್ಷಾರಸದಿಂದ ತುಂಬಿಸಿದೆ; ಮೂಢತನವನ್ನು ಅವಲಂಭಿಸಿಕೊಂಡೆ.
ದುಡಿಮೆಯಿಂದ ಸಂತೋಷವಾಗುವುದೇ?
4 ದೊಡ್ಡಕಾರ್ಯಗಳನ್ನು ಮಾಡಲಾರಂಭಿಸಿದೆ; ನನಗೋಸ್ಕರ ಮನೆಗಳನ್ನು ಕಟ್ಟಿಸಿದೆ; ದ್ರಾಕ್ಷಿತೋಟಗಳನ್ನು ಮಾಡಿಸಿದೆ; 5 ತೋಟಗಳನ್ನೂ ಉದ್ಯಾನವನಗಳನ್ನೂ ಮಾಡಿಸಿದೆ; ಎಲ್ಲಾ ಬಗೆಯ ಹಣ್ಣಿನ ಮರಗಳನ್ನು ನೆಡಿಸಿದೆ. 6 ನೀರಿನ ಕೊಳಗಳನ್ನು ಮಾಡಿಸಿ ಮರಗಳಿಗೆ ನೀರನ್ನು ಹಾಯಿಸಿದೆ. 7 ಪುರುಷರನ್ನೂ ಸ್ತ್ರೀಯರನ್ನೂ ಗುಲಾಮರನ್ನಾಗಿ ಕೊಂಡುಕೊಂಡೆ. ನನ್ನ ಮನೆಯಲ್ಲೇ ಹುಟ್ಟಿದ ಗುಲಾಮರೂ ನನಗಿದ್ದರು. ನನಗೆ ದನದ ಹಿಂಡುಗಳೂ ಕುರಿಮಂದೆಗಳೂ ಇದ್ದವು. ಜೆರುಸಲೇಮಿನಲ್ಲಿ ಇದ್ದವರೆಲ್ಲರಿಗಿಂತಲೂ ಹೆಚ್ಚು ವಸ್ತುಗಳನ್ನು ನಾನು ಪಡೆದಿದ್ದೆ.
8 ಇದಲ್ಲದೆ ಬೆಳ್ಳಿಬಂಗಾರಗಳನ್ನು ನನಗೋಸ್ಕರ ಸಂಗ್ರಹಿಸಿದೆ; ರಾಜರುಗಳಿಂದಲೂ ಅವರ ದೇಶಗಳಿಂದಲೂ ಭಂಡಾರಗಳನ್ನು ತೆಗೆದುಕೊಂಡೆ. ನನಗೋಸ್ಕರ ಹಾಡಲು ಗಾಯಕಗಾಯಕಿಯರಿದ್ದರು. ನನ್ನನ್ನು ಸಂತೋಷಪಡಿಸಲು ಅನೇಕ ಉಪಪತ್ನಿಯರಿದ್ದರು. ಮನುಷ್ಯನು ಬಯಸಬಹುದಾದ ಪ್ರತಿಯೊಂದನ್ನೂ ನಾನು ಪಡೆದಿದ್ದೆ.
9 ನಾನು ಬಹು ಐಶ್ವರ್ಯವಂತನಾದೆ; ಪ್ರಸಿದ್ಧನಾದೆ. ನನಗಿಂತ ಮೊದಲು ಜೆರುಸಲೇಮಿನಲ್ಲಿದ್ದ ಎಲ್ಲರಿಗಿಂತಲೂ ನಾನು ದೊಡ್ಡವನಾದೆ. ನನಗೆ ಸಹಾಯಕ್ಕಾಗಿ ಯಾವಾಗಲೂ ನನ್ನಲ್ಲಿ ಜ್ಞಾನವಿತ್ತು. 10 ನನ್ನ ಕಣ್ಣುಗಳು ಬಯಸಿದ್ದನ್ನೆಲ್ಲ ನನಗೋಸ್ಕರ ಪಡೆದುಕೊಂಡೆನು. ಯಾವುದೇ ಸುಖದಿಂದಾಗಲಿ ನನ್ನ ಹೃದಯವನ್ನು ನಾನು ತಡೆಹಿಡಿಯಲಿಲ್ಲ; ಯಾಕೆಂದರೆ ನನ್ನ ಕಾರ್ಯಗಳಲ್ಲಿ ನನ್ನ ಹೃದಯವು ಸಂತೋಷಗೊಂಡಿತ್ತು. ನನ್ನ ಪ್ರಯಾಸದ ಫಲವು ಅದೊಂದೇ.
11 ನನ್ನ ಕಾರ್ಯಗಳನ್ನೂ ನನ್ನ ಪ್ರಯಾಸವನ್ನೂ ಆಲೋಚಿಸಿದೆ. ಗಾಳಿಯನ್ನು ಹಿಂದಟ್ಟಿದ ಹಾಗೆ ಅದೆಲ್ಲಾ ವ್ಯರ್ಥವೆಂದು ಕಂಡುಕೊಂಡೆ. ನಮ್ಮ ಈ ಜೀವಮಾನದ ಯಾವ ಕೆಲಸಗಳಿಂದಲೂ ಲಾಭವಿಲ್ಲ.
ಜ್ಞಾನಿಗೂ ಅಜ್ಞಾನಿಗೂ ವ್ಯತ್ಯಾಸವೇನು?
12 ರಾಜನಿಗಿಂತ ಹೆಚ್ಚಾಗಿ ಮಾಡಲು ಬೇರೆ ಯಾರಿಗೂ ಸಾಧ್ಯವಿಲ್ಲ. ನೀನು ಮಾಡಬೇಕೆನ್ನುವುದನ್ನು ನಿನಗಿಂತ ಮೊದಲೇ ಬೇರೊಬ್ಬ ರಾಜನು ಮಾಡಿರುತ್ತಾನೆ; ಆದ್ದರಿಂದ ರಾಜನ ಕಾರ್ಯಗಳು ಸಹ ವ್ಯರ್ಥವೆಂದು ಕಂಡುಕೊಂಡೆನು. ಆದ್ದರಿಂದ ನಾನು ಜ್ಞಾನವನ್ನೂ ಮೂಢತನವನ್ನೂ ಬುದ್ಧಿಹೀನತೆಯನ್ನೂ ಮತ್ತೆ ಮತ್ತೆ ಆಲೋಚಿಸಿದೆನು. 13 ಆಗ ಬೆಳಕು ಕತ್ತಲೆಗಿಂತ ಉತ್ತಮವಾಗಿರುವಂತೆ ಜ್ಞಾನವು ಮೂಢತನಕ್ಕಿಂತ ಉತ್ತಮವಾಗಿದೆ ಎಂಬುದನ್ನು ಅರಿತುಕೊಂಡೆನು. 14 ಅದು ಈ ರೀತಿಯಿದೆ: ಜ್ಞಾನಿಯು ತನ್ನ ಮಾರ್ಗವನ್ನು ತಿಳಿದುಕೊಳ್ಳಲು ತನ್ನ ಮನಸ್ಸನ್ನು ಕಣ್ಣುಗಳಂತೆ ಉಪಯೋಗಿಸುವನು. ಮೂಢನಾದರೋ ಕತ್ತಲೆಯಲ್ಲಿ ನಡೆದುಹೋಗುವನು.
ಆದರೆ ಜ್ಞಾನಿಗೂ ಮೂಢನಿಗೂ ಒಂದೇ ಗತಿಯೆಂದು ಕಂಡುಕೊಂಡೆನು; ಅವರಿಬ್ಬರೂ ಸಾಯುವರು. 15 ನಾನು ನನ್ನೊಳಗೆ, “ಮೂಢನಿಗೆ ಸಂಭವಿಸುವ ಗತಿಯು ನನಗೂ ಸಂಭವಿಸುವುದು. ಹೀಗಿರಲು ಜ್ಞಾನಿಯಾಗಲು ನಾನೇಕೆ ಪ್ರಯಾಸಪಡಬೇಕು? ಇದೂ ವ್ಯರ್ಥವಲ್ಲವೇ?” ಅಂದುಕೊಂಡೆನು. 16 ಯಾಕೆಂದರೆ ಮೂಢನು ಸಾಯುವಂತೆ ಜ್ಞಾನಿಯೂ ಸಾಯುವುದರಿಂದ ಜನರು ಜ್ಞಾನಿಯನ್ನಾಗಲಿ ಮೂಢನನ್ನಾಗಲಿ ಸದಾಕಾಲ ಜ್ಞಾಪಿಸಿಕೊಳ್ಳುವುದಿಲ್ಲ. ಅವರ ಕಾರ್ಯಗಳನ್ನು ಮುಂದಿನ ಕಾಲದ ಜನರು ಮರೆತುಬಿಡುವರು. ಆದ್ದರಿಂದ ಜ್ಞಾನಿಗೂ ಮೂಢನಿಗೂ ಯಾವ ವ್ಯತ್ಯಾಸವೂ ಇಲ್ಲ.
ಜೀವನದಲ್ಲಿ ನಿಜ ಸಂತೋಷವಿದೆಯೇ?
17 ಈ ಲೋಕದ ಕಾರ್ಯಗಳೆಲ್ಲಾ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೆಂದು ನನಗೆ ಕಂಡುಬಂದದ್ದರಿಂದ ಜೀವನವೇ ನನಗೆ ಅಸಹ್ಯವಾಯಿತು.
18 ನನ್ನ ಪ್ರಯಾಸದ ಫಲವನ್ನು ನನ್ನ ತರುವಾಯ ಬೇರೆಯವರು ಪಡೆದುಕೊಳ್ಳುವುದರಿಂದ ನಾನು ಲೋಕದಲ್ಲಿ ಪಟ್ಟ ಪ್ರಯಾಸಕ್ಕೆ ಬೇಸರಗೊಂಡೆನು. 19 ನಾನು ಜ್ಞಾನವನ್ನೂ ಪ್ರಯಾಸವನ್ನೂ ಯಾವುದರಲ್ಲಿ ವಿನಿಯೋಗಿಸಿದ್ದೇನೋ ಅದರ ಮೇಲೆ ಬೇರೊಬ್ಬನು ದೊರೆತನ ಮಾಡುವನು. ಅವನು ಜ್ಞಾನಿಯೋ ಮೂಢನೋ ನನಗೆ ಗೊತ್ತಿಲ್ಲ. ಇದೂ ವ್ಯರ್ಥವೇ.
20 ಆದ್ದರಿಂದ, ನಾನು ಈ ಲೋಕದಲ್ಲಿ ಪ್ರಯಾಸಪಟ್ಟ ಕೆಲಸಗಳ ಬಗ್ಗೆ ವ್ಯಸನಗೊಂಡೆನು. 21 ಒಬ್ಬನು ತನ್ನ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ಕಾರ್ಯವನ್ನು ಸಫಲಗೊಳಿಸಿದ ಮೇಲೆ ಅದರ ಫಲವನ್ನು ಪ್ರಯಾಸಪಡದ ಬೇರೊಬ್ಬನಿಗೆ ಬಿಟ್ಟು ಹೋಗಬೇಕಾಗುವುದು. ಇದೂ ವ್ಯರ್ಥವೂ ಅನ್ಯಾಯವೂ ಆಗಿದೆ.
22 ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ಪ್ರಯೋಜನವೇನು? 23 ಅವನ ಜೀವಮಾನವೆಲ್ಲಾ ಅವನಿಗೆ ವ್ಯಸನವಿರುವುದು; ಕೆಲಸದಲ್ಲೆಲ್ಲಾ ಕಷ್ಟವಿರುವುದು; ರಾತ್ರಿಯಲ್ಲಿಯೂ ಮನಸ್ಸಿಗೆ ವಿಶ್ರಾಂತಿಯಿರದು. ಇದೂ ವ್ಯರ್ಥವೇ.
24-25 ಜೀವನದಲ್ಲಿ ಸುಖಪಡಲು ನನಗಿಂತಲೂ ಹೆಚ್ಚಾಗಿ ಯಾರಾದರೂ ಪ್ರಯತ್ನಿಸಿರುವರೇ? ಇಲ್ಲ! ಅನುಭವದಿಂದ ಹೇಳುವುದೇನೆಂದರೆ, ಅನ್ನಪಾನಗಳನ್ನು ತೆಗೆದುಕೊಂಡು ಪ್ರಯಾಸದಲ್ಲಿಯೂ ಸುಖಪಡುವುದಕ್ಕಿಂತ ಬೇರೆ ಯಾವ ಮೇಲೂ ಮನುಷ್ಯನಿಗಿಲ್ಲ. ಇದು ಸಹ ದೇವರಿಂದ ಬಂದ ಭಾಗ್ಯವೆಂದು ಕಂಡುಕೊಂಡೆನು. 26 ದೇವರು ತಾನು ಮೆಚ್ಚಿಕೊಂಡವನಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ಕೊಡುವನು. ಪಾಪಿಗಾದರೋ ಪ್ರಯಾಸದಿಂದ ಸಂಪಾದಿಸುವ ಮತ್ತು ಕೂಡಿಸಿಡುವ ಕೆಲಸವನ್ನು ಕೊಡುವನು. ಅವನು ಕೂಡಿಸಿಟ್ಟವುಗಳನ್ನು ದೇವರು ತನ್ನ ಮೆಚ್ಚಿಕೆಗೆ ಪಾತ್ರನಾದವನಿಗೆ ಕೊಡುವನು. ಇದು ಸಹ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ.
ಸುಳ್ಳುಬೋಧಕರ ಬಗ್ಗೆ ಎಚ್ಚರಿಕೆ
4 ಮುಂದಿನ ದಿನಗಳಲ್ಲಿ ಕೆಲವು ಜನರು ಸತ್ಯ ಬೋಧನೆಯನ್ನು ನಂಬುವುದಿಲ್ಲವೆಂದು ಪವಿತ್ರಾತ್ಮನು ಸ್ಪಷ್ಟವಾಗಿ ಹೇಳುತ್ತಾನೆ. ಆ ಜನರು ಸುಳ್ಳಾಡುವ ದುರಾತ್ಮಗಳಿಗೆ ವಿಧೇಯರಾಗುವರು; ದೆವ್ವಗಳ ಬೋಧನೆಯನ್ನು ಅನುಸರಿಸುವರು. 2 ಆ ಬೋಧನೆಗಳು ಸುಳ್ಳು ಹೇಳುವ ಮತ್ತು ವಂಚಿಸುವ ಜನರ ಮೂಲಕ ಬರುತ್ತವೆ. ಅವರು ಸರಿತಪ್ಪುಗಳ ಭೇದವನ್ನು ಗುರುತಿಸುವುದಿಲ್ಲ. ಕಾದ ಕಬ್ಬಿಣದಿಂದ ಸುಟ್ಟು ಬೂದಿಯಾಗುವಂತೆ ಅವರ ವಿವೇಕವು ನಾಶಗೊಂಡಿದೆ. 3 ಜನರು ಮದುವೆಮಾಡಿಕೊಳ್ಳಬಾರದೆಂದೂ ಕೆಲವು ಆಹಾರಪದಾರ್ಥಗಳನ್ನು ತಿನ್ನಬಾರದೆಂದೂ ಅವರು ಹೇಳುತ್ತಾರೆ. ಆದರೆ ನಂಬಿಕೆಯುಳ್ಳವರು ಮತ್ತು ಸತ್ಯವನ್ನು ತಿಳಿದಿರುವವರು ಕೃತಜ್ಞತಾಸ್ತುತಿ ಮಾಡಿ ಆ ಆಹಾರಪದಾರ್ಥಗಳನ್ನು ತಿನ್ನಲಿ. ಏಕೆಂದರೆ ಅವುಗಳನ್ನು ನಿರ್ಮಿಸಿದಾತನು ದೇವರೇ. 4 ಆತನು ನಿರ್ಮಿಸಿದ ಪ್ರತಿಯೊಂದೂ ಉತ್ತಮವಾಗಿರುತ್ತದೆ. ಆತನಿಗೆ ಕೃತಜ್ಞತಾಸ್ತುತಿ ಮಾಡಿ ತೆಗೆದುಕೊಳ್ಳುವ ಯಾವುದನ್ನೇ ಆಗಲಿ ನಿಷಿದ್ಧವೆಂದು ತಿರಸ್ಕರಿಸಬಾರದು. 5 ಏಕೆಂದರೆ ದೇವರ ವಾಕ್ಯದಿಂದ ಮತ್ತು ಪ್ರಾರ್ಥನೆಯಿಂದ ಅದು ಪವಿತ್ರವಾಗಿದೆ.
ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರು
6 ಅಲ್ಲಿರುವ ಸಹೋದರ ಸಹೋದರಿಯರಿಗೆ ಈ ಸಂಗತಿಗಳನ್ನು ತಿಳಿಸಿದರೆ, ನೀನು ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವೆ ಎಂಬುದನ್ನೂ ನಂಬಿಕೆಯ ನುಡಿಗಳಿಂದ ಮತ್ತು ಉತ್ತಮ ಉಪದೇಶಗಳನ್ನು ಅನುಸರಿಸಿದ್ದರಿಂದ ಬಲಗೊಂಡಿರುವೆ ಎಂಬುದನ್ನೂ ತೋರಿಸಿದಂತಾಗುತ್ತದೆ. 7 ದೇವರ ಸತ್ಯಕ್ಕೆ ಹೊಂದಿಕೆಯಾಗದ ಕ್ಷುಲ್ಲಕ ಕಥೆಗಳನ್ನು ಜನರು ಹೇಳುತ್ತಾರೆ. ಆ ಕಥೆಗಳ ಬೋಧನೆಯನ್ನು ಅನುಸರಿಸಬೇಡ. ದೇವರಿಗೆ ನಿಜವಾದ ಸೇವೆ ಮಾಡಲು ನಿನಗೆ ನೀನೇ ಬೋಧಿಸಿಕೊ. 8 ನೀನು ದೇಹವನ್ನು ಪಳಗಿಸಿಕೊಂಡರೆ ನಿನಗೆ ಕೆಲವು ರೀತಿಯಲ್ಲಿ ಸಹಾಯಕವಾಗುವುದು. ಆದರೆ ದೇವರ ಸೇವೆಯು ನಿನಗೆ ಎಲ್ಲಾ ರೀತಿಯಲ್ಲಿಯೂ ಸಹಾಯಕವಾಗುವುದು. ದೇವರ ಸೇವೆಯು ಇಹಪರಗಳೆರಡರಲ್ಲೂ ನಿನಗೆ ಆಶೀರ್ವಾದವನ್ನು ಉಂಟು ಮಾಡುವುದು. 9 ಈ ಸಂಗತಿಯು ನಂಬತಕ್ಕದ್ದೂ ಸರ್ವಾಂಗಿಕಾರಕ್ಕೆ ಯೋಗ್ಯವಾದದ್ದೂ ಆಗಿದೆ. 10 ಆದಕಾರಣವೇ, ನಾವು ಜೀವಸ್ವರೂಪನಾದ ದೇವರ ಮೇಲೆ ನಿರೀಕ್ಷೆಯಿಟ್ಟು ದುಡಿಯುತ್ತಿದ್ದೇವೆ ಮತ್ತು ಹೋರಾಡುತ್ತಿದ್ದೇವೆ. ಆತನು ಎಲ್ಲಾ ಜನರಿಗೆ ರಕ್ಷಕನಾಗಿದ್ದಾನೆ. ತನ್ನಲ್ಲಿ ನಂಬಿಕೆಯಿಡುವ ಜನರಿಗೆಲ್ಲಾ ಆತನು ವಿಶೇಷವಾದ ರೀತಿಯಲ್ಲಿ ರಕ್ಷಕನಾಗಿದ್ದಾನೆ.
11 ಇವುಗಳನ್ನು ಆಜ್ಞಾಪಿಸು ಮತ್ತು ಬೋಧಿಸು. 12 ನೀನು ಯೌವನಸ್ಥನಾಗಿರುವುದರಿಂದ ನಿನ್ನನ್ನು ಪ್ರಮುಖನಲ್ಲವೆಂದು ಪರಿಗಣಿಸಿ ಅಸಡ್ಡೆಮಾಡಲು ಯಾರಿಗೂ ಅವಕಾಶಕೊಡದಿರು. ವಿಶ್ವಾಸಿಗಳು ಹೇಗೆ ಜೀವಿಸಬೇಕೆಂಬುದಕ್ಕೆ ನೀನೇ ಅವರಿಗೆ ಮಾದರಿಯಾಗಿರು. ನಡೆನುಡಿಗಳಲ್ಲಿ, ಪ್ರೀತಿಯಲ್ಲಿ, ನಂಬಿಕೆಯಲ್ಲಿ ಮತ್ತು ಪರಿಶುದ್ಧ ಜೀವನದಲ್ಲಿ ನೀನೇ ಅವರಿಗೆ ಮಾದರಿಯಾಗಿರು.
13 ದೇವರ ವಾಕ್ಯವನ್ನು ಜನರಿಗೆ ಓದಿಹೇಳಿ ಅವರನ್ನು ಬಲಪಡಿಸು ಮತ್ತು ಅವರಿಗೆ ಬೋಧಿಸು. ನಾನು ಬರುವತನಕ ಈ ಕಾರ್ಯಗಳನ್ನು ಮಾಡುತ್ತಿರು. 14 ನಿನ್ನಲ್ಲಿರುವ ವರವನ್ನು ಜ್ಞಾಪಿಸಿಕೊಳ್ಳುತ್ತಿರು. ಸಭೆಯ ಹಿರಿಯರು ಪ್ರವಾದನೆಗಳೊಂದಿಗೆ ತಮ್ಮ ಕೈಗಳನ್ನು ನಿನ್ನ ಮೇಲಿಟ್ಟಾಗ ಆ ವರವು ನಿನಗೆ ಕೊಡಲ್ಪಟ್ಟಿತು. 15 ಈ ಕಾರ್ಯಗಳನ್ನು ಮಾಡುತ್ತಲೇ ಇರು. ಈ ಕಾರ್ಯಗಳನ್ನು ಮಾಡಲು ನಿನ್ನ ಜೀವನವನ್ನು ಮುಡಿಪಾಗಿಡು. ಆಗ ನಿನ್ನ ಕಾರ್ಯವು ಅಭಿವೃದ್ಧಿಗೊಳ್ಳುತ್ತಿರುವುದನ್ನು ಜನರೆಲ್ಲರೂ ನೋಡುವರು. 16 ನಿನ್ನ ಜೀವನದಲ್ಲಿಯೂ ನಿನ್ನ ಬೋಧನೆಯಲ್ಲಿಯೂ ಎಚ್ಚರಿಕೆಯಿಂದಿರು. ಯೋಗ್ಯವಾದ ರೀತಿಯಲ್ಲಿ ಜೀವಿಸುತ್ತಾ ಬೋಧಿಸು. ಆಗ ನೀನು, ನಿನ್ನನ್ನೂ ನಿನ್ನ ಬೋಧನೆ ಕೇಳುವವರನ್ನೂ ರಕ್ಷಿಸುವೆ.
Kannada Holy Bible: Easy-to-Read Version. All rights reserved. © 1997 Bible League International