Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 17

ಪ್ರಾಣಿಗಳನ್ನು ಕೊಲ್ಲುವುದರ ಮತ್ತು ತಿನ್ನುವುದರ ಕುರಿತು ನಿಯಮಗಳು

17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: ಆರೋನನೊಡನೆಯೂ ಅವನ ಪುತ್ರರೊಡನೆಯೂ ಇಸ್ರೇಲರೆಲ್ಲರೊಡನೆಯೂ ಮಾತಾಡು. ಯೆಹೋವನು ಹೀಗೆ ಆಜ್ಞಾಪಿಸಿದ್ದಾನೆಂದು ಹೇಳು. ಅದೇನೆಂದರೆ, ಇಸ್ರೇಲರಲ್ಲಿ ಯಾವನಾದರೂ ಹೋರಿಯನ್ನಾಗಲಿ ಕುರಿಮರಿಯನ್ನಾಗಲಿ ಹೋತವನ್ನಾಗಲಿ ಪಾಳೆಯದೊಳಗೆ ಅಥವಾ ಪಾಳೆಯದ ಹೊರಗೆ ವಧಿಸಬಹುದು. ಅವನು ಆ ಪ್ರಾಣಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಅವನು ಆ ಪಶುವಿನ ಒಂದು ಭಾಗವನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಅವನು ರಕ್ತವನ್ನು ಸುರಿಸಿದ್ದರಿಂದ ತನ್ನ ಕಾಣಿಕೆಯನ್ನು ಯೆಹೋವನ ಪವಿತ್ರ ಗುಡಾರದೊಳಗೆ ತೆಗೆದುಕೊಂಡು ಹೋಗಬೇಕು. ಅವನು ಪ್ರಾಣಿಯ ಒಂದು ಭಾಗವನ್ನು ಯೆಹೋವನಿಗೆ ಉಡುಗೊರೆಯಾಗಿ ತೆಗೆದುಕೊಂಡು ಹೋಗದಿದ್ದರೆ, ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು. ಸಮಾಧಾನಯಜ್ಞರೂಪವಾಗಿ ಇದನ್ನು ಯೆಹೋವನಿಗೆ ಅರ್ಪಿಸುವ ಯಜ್ಞಕ್ಕೆ ಇದೇ ನಿಯಮ. ಇಸ್ರೇಲರು ಹೊಲಗಳಲ್ಲಿ ಕೊಲ್ಲುವ ತಮ್ಮ ಪ್ರಾಣಿಗಳನ್ನು ದೇವದರ್ಶನಗುಡಾರದ ಬಾಗಿಲಿಗೆ ಅಂದರೆ ಯೆಹೋವನ ಸನ್ನಿಧಿಯಲ್ಲಿರುವ ಯಾಜಕರ ಬಳಿಗೆ ತರಬೇಕು. ಬಳಿಕ ಯಾಜಕನು ಆ ಪಶುಗಳ ರಕ್ತವನ್ನು ದೇವದರ್ಶನಗುಡಾರದ ಬಾಗಿಲಿನ ಹತ್ತಿರವಿರುವ ಯೆಹೋವನ ಯಜ್ಞವೇದಿಕೆಗೆ ಚೆಲ್ಲುವನು ಮತ್ತು ಅವುಗಳ ಕೊಬ್ಬನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡುವನು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. ಅವರು “ಅಜದೇವತೆಗಳಿಗೆ” ಇನ್ನು ಮುಂದೆ ಬಲಿಕೊಡಬಾರದು. ಅವರು ಅನ್ಯದೇವತೆಗಳ ಹಿಂದೆ ಹೋಗಿದ್ದಾರೆ. ಆ ರೀತಿಯಲ್ಲಿ ಅವರು ಸೂಳೆಯರ ಹಾಗೆ ವರ್ತಿಸಿದ್ದಾರೆ. ಈ ನಿಯಮಗಳು ಶಾಶ್ವತವಾಗಿವೆ.

“ಜನರಿಗೆ ಹೇಳಬೇಕಾದದ್ದೇನೆಂದರೆ: ನಿಮ್ಮ ಮಧ್ಯದಲ್ಲಿ ವಾಸಿಸುತ್ತಿರುವ ಯಾವ ಇಸ್ರೇಲನಾಗಲಿ ಅನ್ಯನಾಗಲಿ ಸರ್ವಾಂಗಹೋಮವನ್ನಾಗಲಿ ಯಜ್ಞವನ್ನಾಗಲಿ ಅರ್ಪಿಸಬಹುದು. ಅವನು ತನ್ನ ಬಲಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತೆಗೆದುಕೊಂಡು ಬಂದು ಯೆಹೋವನಿಗೆ ಅರ್ಪಿಸಬೇಕು. ಇಲ್ಲವಾದರೆ ಅವನನ್ನು ಅವನ ಕುಲದಿಂದ ತೆಗೆದುಹಾಕಬೇಕು.

10 “ರಕ್ತವನ್ನು ತಿನ್ನುವ ಪ್ರತಿಯೊಬ್ಬನಿಗೂ ನಾನು ವಿರುದ್ಧವಾಗಿರುವೆನು. ಅವನು ನಿಮ್ಮ ಮಧ್ಯದಲ್ಲಿ ವಾಸವಾಗಿರುವ ಇಸ್ರೇಲನಾಗಲಿ ಪರದೇಶಸ್ಥನಾಗಲಿ ಆಗಿರಬಹುದು. ನಾನು ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕುವೆನು. 11 ಯಾಕೆಂದರೆ ದೇಹದ ಜೀವ ರಕ್ತದಲ್ಲಿದೆ. ನೀವು ನಿಮಗೋಸ್ಕರವಾಗಿ ಯಜ್ಞವೇದಿಕೆಯ ಮೇಲೆ ಪ್ರಾಯಶ್ಚಿತ್ತ ಮಾಡಲಿ ಎಂದು ನಾನು ಅದನ್ನು ನಿಮಗೆ ಕೊಟ್ಟಿದ್ದೇನೆ. ನೀವು ನಿಮಗೋಸ್ಕರವಾಗಿ ಪ್ರಾಯಶ್ಚಿತ್ತ ಮಾಡಲು ಈ ನಿಯಮಗಳನ್ನು ಉಪಯೋಗಿಸಬೇಕು. ಒಬ್ಬನ ಜೀವಕ್ಕೆ ರಕ್ತವೇ ಪ್ರಾಯಶ್ಚಿತ್ತವಾಗಿದೆ. ಜೀವಿಯೊಂದನ್ನು ಕೊಂದಿದ್ದರ ಬೆಲೆಯಾಗಿ ನೀವು ನನಗೆ ಆ ರಕ್ತವನ್ನು ಕೊಡಬೇಕು. 12 ಆದ್ದರಿಂದ ನಾನು ಇಸ್ರೇಲರಿಗೆ ಹೇಳುವುದೇನೆಂದರೆ: ನಿಮ್ಮಲ್ಲಿ ಯಾವನೂ ರಕ್ತಭೋಜನ ಮಾಡಬಾರದು ಮತ್ತು ನಿಮ್ಮ ಮಧ್ಯದಲ್ಲಿ ವಾಸಿಸುವ ಯಾವ ಪರದೇಶಸ್ಥನೂ ರಕ್ತಭೋಜನ ಮಾಡಬಾರದು.

13 “ಯಾವನಾದರೂ ಒಂದು ಪ್ರಾಣಿಯನ್ನು ಬೇಟೆಯಾಡಿದರೆ ಅಥವಾ ಪಕ್ಷಿಯನ್ನು ಹಿಡಿದರೆ, ಅವನು ಅದರ ರಕ್ತವನ್ನು ನೆಲದ ಮೇಲೆ ಸುರಿದು ಅದನ್ನು ಮಣ್ಣಿನಿಂದ ಮುಚ್ಚಿಬಿಡಬೇಕು. ಅವನು ಇಸ್ರೇಲನಾದರೂ ನಿಮ್ಮ ಮಧ್ಯದಲ್ಲಿ ವಾಸಿಸುವ ಪರದೇಶಸ್ಥನಾದರೂ ಹಾಗೆಯೇ ಮಾಡಬೇಕು. 14 ನೀವು ಇದನ್ನು ಯಾಕೆ ಮಾಡಬೇಕೆಂದರೆ, ಮಾಂಸದಲ್ಲಿ ರಕ್ತವು ಇನ್ನೂ ಇದ್ದರೆ, ಅದರ ಪ್ರಾಣವು ಇನ್ನೂ ಮಾಂಸದಲ್ಲಿ ಇದೆ. ಆದ್ದರಿಂದ ನಾನು ಇಸ್ರೇಲರಿಗೆ ಈ ಅಪ್ಪಣೆಯನ್ನು ಕೊಡುತ್ತೇನೆ. ರಕ್ತದಿಂದ ಕೂಡಿರುವ ಮಾಂಸವನ್ನು ತಿನ್ನಬಾರದು. ಯಾವನಾದರೂ ರಕ್ತ ಭೋಜನ ಮಾಡಿದರೆ, ಅವನು ತನ್ನ ಜನರಿಂದ ತೆಗೆದುಹಾಕಲ್ಪಡಬೇಕು.

15 “ಅಲ್ಲದೆ ಯಾವನಾದರೂ ತನ್ನಷ್ಟಕ್ಕೆ ಸತ್ತ ಪ್ರಾಣಿಯನ್ನು ತಿಂದರೆ ಅಥವಾ ಬೇರೆ ಪ್ರಾಣಿಯಿಂದ ಕೊಲ್ಲಲ್ಪಟ್ಟ ಪ್ರಾಣಿಯನ್ನು ತಿಂದರೆ, ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿಕೊಳ್ಳಬೇಕು. ಅವನು ಇಸ್ರೇಲನಾಗಿದ್ದರೂ ನಿಮ್ಮ ಮಧ್ಯದಲ್ಲಿ ವಾಸಿಸುವ ಪರದೇಶಸ್ಥನಾಗಿದ್ದರೂ ಹಾಗೆಯೇ ಮಾಡಬೇಕು. 16 ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳದೆಯೂ ಸ್ನಾನ ಮಾಡಿಕೊಳ್ಳದೆಯೂ ಹೋದರೆ ಆಗ ಅವನು ಪಾಪಮಾಡಿದ ದೋಷಿಯಾಗಿರುವನು.”

ಕೀರ್ತನೆಗಳು 20-21

ರಚನೆಗಾರ: ದಾವೀದ.

20 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ.
    ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.
ಆತನು ತನ್ನ ಪವಿತ್ರ ಸ್ಥಳದಿಂದ ನಿನಗೆ ಸಹಾಯಮಾಡಲಿ.
    ಚೀಯೋನಿನಿಂದ ನಿನಗೆ ಆಧಾರ ನೀಡಲಿ.
ನೀನು ಅರ್ಪಿಸಿದ ಕಾಣಿಕೆಗಳನ್ನೆಲ್ಲ ಆತನು ಜ್ಞಾಪಿಸಿಕೊಳ್ಳಲಿ.
    ನಿನ್ನ ಯಜ್ಞಗಳನ್ನೆಲ್ಲ ಆತನು ಸ್ವೀಕರಿಸಿಕೊಳ್ಳಲಿ.
ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ.
    ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ.
ದೇವರು ನಿನಗೆ ಸಹಾಯಮಾಡುವಾಗ ಹರ್ಷಿಸುವೆವು.
    ಆತನ ಹೆಸರನ್ನು ಕೊಂಡಾಡೋಣ.
    ಯೆಹೋವನು ನಿನ್ನ ಕೋರಿಕೆಗಳನ್ನೆಲ್ಲ ನೆರವೇರಿಸಲಿ.

ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಸಹಾಯಮಾಡುತ್ತಾನೆಂದು ಈಗ ನನಗೆ ಗೊತ್ತಾಯಿತು.
    ದೇವರು ತಾನು ಆರಿಸಿಕೊಂಡ ರಾಜನಿಗೆ ಪರಲೋಕದಿಂದ ಉತ್ತರಿಸಿದನು;
    ತನ್ನ ಮಹಾಶಕ್ತಿಯಿಂದ ಅವನನ್ನು ರಕ್ಷಿಸಿದನು.
ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು.
    ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು.
    ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು.
ಅವರು ಸೋತುಹೋದರು; ಯುದ್ಧದಲ್ಲಿ ಸತ್ತುಹೋದರು;
    ನಾವಾದರೋ ಜಯಗಳಿಸಿದೆವು! ನಾವು ಜಯಪ್ರದರಾಗಿ ನಿಂತುಕೊಳ್ಳುವೆವು!

ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು!
    ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.

ರಚನೆಗಾರ: ದಾವೀದ.

21 ಯೆಹೋವನೇ, ನಿನ್ನ ಬಲವು ರಾಜನನ್ನು ಸಂತೋಷಗೊಳಿಸುವುದು.
    ನಿನ್ನ ರಕ್ಷಣೆಯು ಅವನನ್ನು ಹರ್ಷಗೊಳಿಸುವುದು.
ರಾಜನು ನಿನ್ನಲ್ಲಿ ಪ್ರಾರ್ಥಿಸಿದಾಗ
    ನೀನು ಅವನ ಕೋರಿಕೆಗಳನ್ನೆಲ್ಲಾ ಈಡೇರಿಸಿದೆ.

ನೀನು ರಾಜನನ್ನು ಬಹಳವಾಗಿ ಆಶೀರ್ವದಿಸಿರುವೆ.
    ಅವನ ತಲೆಗೆ ಬಂಗಾರದ ಕಿರೀಟವನ್ನು ತೊಡಿಸಿರುವೆ.
ಅವನು ದೀರ್ಘಾಯುಷ್ಯವನ್ನು ಕೇಳಿಕೊಂಡಾಗ ನೀನು ದಯಪಾಲಿಸಿದೆ.
    ದೇವರೇ, ನೀನು ರಾಜನಿಗೆ ಶಾಶ್ವತವಾದ ಜೀವಿತವನ್ನು ಅನುಗ್ರಹಿಸಿದೆ.
ನೀನು ರಾಜನಿಗೆ ಜಯವನ್ನು ದೊರಕಿಸಿ
    ಅವನಿಗೆ ಗೌರವವನ್ನೂ ಹೊಗಳಿಕೆಯನ್ನೂ ಬರಮಾಡಿದೆ.
ನೀನು ರಾಜನಿಗೆ ಶಾಶ್ವತವಾದ ಆಶೀರ್ವಾದವನ್ನು ಕೊಟ್ಟಿರುವೆ.
    ಅವನು ನಿನ್ನ ಸನ್ನಿಧಿಯಲ್ಲಿ ಅತ್ಯಾನಂದಪಡುವನು.
ರಾಜನು ಯೆಹೋವನಲ್ಲಿಯೇ ಭರವಸವಿಟ್ಟಿದ್ದಾನೆ;
    ಮಹೋನ್ನತನಾದ ದೇವರು ಅವನನ್ನು ನಿರಾಶೆಗೊಳಿಸುವುದಿಲ್ಲ.
ದೇವರೇ, ನಿನ್ನ ಬಲಿಷ್ಠತನವನ್ನು ನಿನ್ನ ಶತ್ರುಗಳಿಗೆಲ್ಲ ನೀನು ತೋರಿಸುವೆ.
    ನೀನು ದ್ವೇಷಿಸುವವರನ್ನು ನಿನ್ನ ಶಕ್ತಿಯು ಸೋಲಿಸುವುದು.
ಯೆಹೋವನೇ, ನೀನು ರಾಜನೊಂದಿರುವಾಗ
    ಅವನು ಉರಿಯುವ ಕುಲಿಮೆಯಂತಿರುವನು.
ಅವನ ಕೋಪವು ಧಗಧಗಿಸುವ ಬೆಂಕಿಯಂತೆ ಸುಡುವುದು;
    ಅವನು ಶತ್ರುಗಳನ್ನು ನಾಶಮಾಡುವನು.
10 ಅವನ ಶತ್ರುಗಳ ಕುಟುಂಬಗಳು ನಾಶವಾಗುತ್ತವೆ;
    ಅವು ಭೂಮಿಯ ಮೇಲೆ ಇಲ್ಲವಾಗುತ್ತವೆ.
11 ಯಾಕೆಂದರೆ, ಅವರು ನಿನಗೆ ವಿರೋಧವಾಗಿ ದುರಾಲೋಚನೆಗಳನ್ನು ಮಾಡಿದರು.
    ಅವರು ಕುತಂತ್ರಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ.
12 ನಿನ್ನ ಬಿಲ್ಲುಗಳಿಂದ ಬಾಣಗಳನ್ನು ನೀನು ಎಸೆಯುವಾಗ
    ಅವರು ಬೆನ್ನುಕೊಟ್ಟು ಓಡಿಹೋಗುವರು.

13 ಯೆಹೋವನೇ, ನಿನ್ನ ಪರಾಕ್ರಮಕ್ಕಾಗಿ ನಿನ್ನನ್ನು ಕೊಂಡಾಡುವೆನು.
    ನಿನ್ನ ಮಹತ್ವದ ಬಗ್ಗೆ ವಾದ್ಯ ನುಡಿಸುತ್ತಾ ಹಾಡುವೆವು.

ಜ್ಞಾನೋಕ್ತಿಗಳು 31

ಮಸ್ಸಾದ ಲೆಮೂವೇಲನ ಜ್ಞಾನೋಕ್ತಿಗಳಿವು

31 ಇವು ರಾಜನಾದ ಲೆಮೂವೇಲನ ಜ್ಞಾನದ ನುಡಿಗಳು. ಅವನ ತಾಯಿಯು ಅವನಿಗೆ ಇವುಗಳನ್ನು ಉಪದೇಶಿಸಿದ್ದಳು.

ನೀನು ನನ್ನ ಮಗನು: ನನ್ನ ಪ್ರಿಯ ಮಗನು: ನಾನು ಪ್ರಾರ್ಥಿಸಿ ಪಡೆದುಕೊಂಡ ಮಗನು ನೀನೇ. ನಿನ್ನ ಶಕ್ತಿಯನ್ನು ಹೆಂಗಸರಲ್ಲಿ ವ್ಯರ್ಥಮಾಡಿಕೊಳ್ಳಬೇಡ. ರಾಜನನ್ನು ನಾಶಮಾಡುವವರು ಹೆಂಗಸರುಗಳೇ. ನಿನ್ನನ್ನು ಅವರಲ್ಲಿ ಹಾಳುಮಾಡಿಕೊಳ್ಳಬೇಡ. ಲೆಮೂವೇಲನೇ, ರಾಜರುಗಳು ಮದ್ಯವನ್ನು ಕುಡಿಯುವುದು ಒಳ್ಳೆಯದಲ್ಲ. ಮದ್ಯಪಾನ ಆಳುವವರಿಗೆ ಒಳ್ಳೆಯದಲ್ಲ. ಅವರು ಅತಿಯಾಗಿ ಕುಡಿದು ಕಟ್ಟಳೆಗಳನ್ನು ಮರೆತು ಬಡವರ ಹಕ್ಕುಗಳನ್ನೆಲ್ಲ ರದ್ದುಮಾಡುವರು. ಸಾಯುವವರಿಗೆ ಮದ್ಯವನ್ನು ಕೊಡು. ವ್ಯಥೆಯಲ್ಲಿರುವವರಿಗೆ ಮದ್ಯವನ್ನು ಕೊಡು. ಆಗ ಅವರು ಕುಡಿದು, ತಮ್ಮ ಬಡತನವನ್ನು ಮರೆತುಬಿಡುವರು, ಅವರು ಕುಡಿದು ತಮ್ಮ ಕಷ್ಟಗಳನ್ನೆಲ್ಲಾ ಮರೆತುಬಿಡುವರು.

ತಮಗೋಸ್ಕರ ಮಾತಾಡಲಾರದ ಜನರಿಗೋಸ್ಕರ ಮಾತಾಡು. ಕಷ್ಟದಲ್ಲಿರುವ ಜನರೆಲ್ಲರ ಹಕ್ಕುಗಳಿಗಾಗಿ ಮಾತಾಡು. ಸತ್ಯವಾದವುಗಳ ಪರವಾಗಿ ನಿಂತುಕೋ. ಜನರಿಗೆಲ್ಲಾ ನ್ಯಾಯವಾದ ತೀರ್ಪನ್ನು ಮಾಡು. ಬಡಜನರ ಮತ್ತು ಕೊರತೆಯಲ್ಲಿರುವವರ ಹಕ್ಕುಗಳನ್ನು ಕಾಪಾಡು.

ಯೋಗ್ಯಳಾದ ಹೆಂಡತಿ

10 ಒಳ್ಳೆಯ ಹೆಂಡತಿಯನ್ನು ಪಡೆದುಕೊಳ್ಳುವುದು ತುಂಬಾ ಕಷ್ಟ.
    ಆಭರಣಕ್ಕಿಂತಲೂ ಹೆಚ್ಚು ಬೆಲೆಬಾಳುವಳು.
11 ಗಂಡನ ನಂಬಿಕೆಗೆ ಆಕೆ ಪಾತ್ರಳು.
    ಗಂಡ ಬಡವನಾಗುವುದೇ ಇಲ್ಲ.
12 ಒಳ್ಳೆಯ ಹೆಂಡತಿ ತನ್ನ ಗಂಡನಿಗೆ ತನ್ನ ಜೀವಮಾನವೆಲ್ಲಾ ಒಳ್ಳೆಯದನ್ನು ಮಾಡುವಳು.
    ಅವನಿಗೆಂದಿಗೂ ತೊಂದರೆ ಮಾಡುವುದಿಲ್ಲ.
13 ಅವಳು ಬಟ್ಟೆ ತಯಾರಿಸಲು ಉಣ್ಣೆಯನ್ನು
    ಸೆಣಬಿನ ನಾರನ್ನು ಯಾವಾಗಲೂ ಶೇಖರಿಸುವಳು.
14 ವ್ಯಾಪಾರದ ಹಡಗುಗಳಂತೆ ದೂರದಿಂದ ಬೇಕಾದ ಆಹಾರವನ್ನು
    ದೂರದಿಂದ ಮನೆಗೆ ತರುವಳು.
15 ಇನ್ನೂ ಕತ್ತಲಿರುವಾಗಲೇ ಆಕೆ ಎದ್ದೇಳುವಳು.
    ತನ್ನ ಕುಟುಂಬದವರಿಗೂ ತನ್ನ ಸೇವಕಿಯರಿಗೂ ಊಟ ಕೊಡುವಳು.
16 ಆಕೆ ಜಮೀನನ್ನು ಕೊಂಡುಕೊಳ್ಳುವಳು;
    ಗಳಿಸಿದ ಹಣವನ್ನು ದ್ರಾಕ್ಷಿತೋಟಕ್ಕೆ ಉಪಯೋಗಿಸುವಳು.
17 ಆಕೆ ತುಂಬ ಕಷ್ಟಪಟ್ಟು ಕೆಲಸಮಾಡುವಳು.
    ಬಲವಾಗಿದ್ದಾಳೆ; ತನ್ನ ಕೆಲಸಗಳನ್ನೆಲ್ಲಾ ಮಾಡಲು ಶಕ್ತಳಾಗಿದ್ದಾಳೆ.
18 ಆಕೆ ತಾನು ತಯಾರಿಸಿದ ವಸ್ತುಗಳನ್ನು ಒಳ್ಳೆಯ ಲಾಭಕ್ಕೆ ಮಾರುವಳು.
    ಬಹುಹೊತ್ತಿನವರೆಗೂ ಆಕೆ ಕೆಲಸ ಮಾಡುವಳು.
19 ಆಕೆ ತಾನೇ ದಾರವನ್ನು ತಯಾರಿಸುವಳು;
    ಬಟ್ಟೆಯನ್ನು ನೇಯುವಳು.
20 ಆಕೆ ಯಾವಾಗಲೂ ಬಡವರಿಗೆ ಕೊಡುವಳು;
    ಕೊರತೆಯಲ್ಲಿರುವ ಜನರಿಗೆ ಸಹಾಯ ಮಾಡುವಳು.
21 ಹಿಮ ಸುರಿಯುವಾಗ, ಆಕೆ ತನ್ನ ಕುಟುಂಬದ ಬಗ್ಗೆ ಚಿಂತಿಸಬೇಕಿಲ್ಲ;
    ಆಕೆ ಅವರೆಲ್ಲರಿಗೆ ಬೆಚ್ಚಗಿರುವ ಬಟ್ಟೆಗಳನ್ನು ಕೊಟ್ಟಿದ್ದಾಳೆ.
22 ಆಕೆ ಹೊದಿಕೆಗಳನ್ನು ತಯಾರಿಸುವಳು.
    ಆಕೆಯು ಶ್ರೇಷ್ಠವಾದ ನಾರಗಸೆಯ ದಾರದಿಂದ ಮಾಡಿದ ಬಟ್ಟೆಗಳನ್ನು ಧರಿಸಿಕೊಳ್ಳುವಳು.
23 ಜನರು ಆಕೆಯ ಗಂಡನನ್ನು ಗೌರವಿಸುವರು.
    ಅವನು ದೇಶದ ಹಿರಿಯರುಗಳಲ್ಲಿ ಒಬ್ಬನಾಗಿರುವನು.
24 ಆಕೆ ಒಳ್ಳೆಯ ವ್ಯಾಪಾರ ಮಾಡುವಳು;
    ಉಡುಪುಗಳನ್ನೂ ನಡುಪಟ್ಟಿಗಳನ್ನೂ ತಯಾರಿಸಿ ಮಾರುವಳು.
25 ಆಕೆಯು ಶಕ್ತಿಯನ್ನೂ ಗಾಂಭೀರ್ಯವನ್ನೂ ಪ್ರದರ್ಶಿಸುವಳು;
    ಹರ್ಷದಿಂದ ಭವಿಷ್ಯತ್ತನ್ನು ಎದುರುನೋಡುವಳು.
26 ಆಕೆಯು ಜ್ಞಾನದಿಂದ ಮಾತಾಡುವಳು;
    ಪ್ರೀತಿಯಿಂದ ಸದುಪದೇಶ ಮಾಡುವಳು.
27 ಆಕೆಯು ಚಟುವಟಿಕೆಯಿಂದಿದ್ದು
    ಗೃಹಕಾರ್ಯಗಳನ್ನೆಲ್ಲಾ ನೋಡಿಕೊಳ್ಳುವಳು.
28 ಮಕ್ಕಳು ಎದ್ದುನಿಂತು ಆಕೆಯನ್ನು ಅಭಿನಂದಿಸುವರು.
    ಗಂಡನು ಅವಳನ್ನು ಹೊಗಳುವನು.
29 “ಅನೇಕ ಹೆಂಗಸರು ಮೆಚ್ಚಿಕೆಗೆ ಪಾತ್ರವಾದ ಕಾರ್ಯಗಳನ್ನು ಮಾಡಿದ್ದಾರೆ.
    ಆದರೆ ನೀನು ಅವರೆಲ್ಲರಿಗಿಂತಲೂ ಅತ್ಯುತ್ತಮಳು” ಎಂದು ಆಕೆಯ ಗಂಡನು ಹೊಗಳುವನು.
30 ಲಾವಣ್ಯ ನಿನ್ನನ್ನು ಮೋಸಗೊಳಿಸಬಲ್ಲದು; ಸೌಂದರ್ಯ ತಾತ್ಕಾಲಿಕವಾದದ್ದು.
    ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳ ಹೆಂಗಸೇ, ಹೊಗಳಿಕೆಗೆ ಪಾತ್ರಳು.
31 ಆಕೆ ತನಗೆ ಯೋಗ್ಯವಾದ ಪ್ರತಿಫಲವನ್ನು ಹೊಂದಬೇಕು.
    ಆಕೆಯ ಕಾರ್ಯಗಳಿಗಾಗಿ ಜನರೆಲ್ಲರೂ ಆಕೆಯನ್ನು ಬಹಿರಂಗವಾಗಿ ಸನ್ಮಾನಿಸಬೇಕು.

1 ತಿಮೊಥೆಯನಿಗೆ 2

ಪ್ರಾರ್ಥನೆ ಮತ್ತು ಸಭಾಕೂಟಗಳ ಬಗ್ಗೆ ಕೆಲವು ಸಲಹೆಗಳು

ಮೊಟ್ಟ ಮೊದಲನೆಯದಾಗಿ ನಾನು ನಿಮಗೆ ಹೇಳುವುದೇನೆಂದರೆ, ಎಲ್ಲಾ ಜನರಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ, ವಿಜ್ಞಾಪಿಸಿರಿ, ಅವರ ಅಗತ್ಯಕ್ಕೆ ತಕ್ಕಂತೆ ಬಿನ್ನಹ ಮಾಡಿರಿ ಮತ್ತು ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ. ನಮ್ಮಲ್ಲಿ ಶಾಂತಿ ಸಮಾಧಾನಗಳು ನೆಲಸಿ ನಾವು ದೇವರನ್ನು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಆರಾಧಿಸಲು ಸಾಧ್ಯವಾಗುವಂತೆ ಅರಸರಿಗಾಗಿಯೂ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಿರಿ. ಇದು ಒಳ್ಳೆಯದೂ ಮತ್ತು ನಮ್ಮ ರಕ್ಷಕನಾದ ದೇವರಿಗೆ ಮೆಚ್ಚಿಕೆಕರವೂ ಆಗಿದೆ.

ಎಲ್ಲಾ ಜನರು ರಕ್ಷಿಸಲ್ಪಡಬೇಕೆಂದು, ಸತ್ಯವನ್ನು ತಿಳಿದು ಕೊಳ್ಳಬೇಕೆಂದು ದೇವರು ಬಯಸುತ್ತಾನೆ. ದೇವರು ಒಬ್ಬನೇ. ದೇವರಿಗೂ ಮನುಷ್ಯರಿಗೂ ಮಧ್ಯಸ್ತನು ಒಬ್ಬನೇ. ಮನುಷ್ಯನಾಗಿರುವ ಯೇಸುಕ್ರಿಸ್ತನೇ ಆತನು. ಯೇಸುವು ಜನರೆಲ್ಲರ ಪಾಪಗಳಿಗೆ ತನ್ನನ್ನೇ ಉಚಿತವಾಗಿ ಒಪ್ಪಿಸಿಕೊಟ್ಟನು. ಜನರೆಲ್ಲರೂ ರಕ್ಷಣೆ ಹೊಂದಬೇಕೆಂಬ ದೇವರ ಅಪೇಕ್ಷೆಗೆ ಯೇಸುವು ತಕ್ಕಕಾಲದಲ್ಲಿ ಸಾಕ್ಷಿನೀಡಿದನು. ಆದ ಕಾರಣವೇ ಸುವಾರ್ತೆಯನ್ನು ಸಾರುವುದಕ್ಕಾಗಿಯೂ ಅಪೊಸ್ತಲನಾಗುವುದಕ್ಕಾಗಿಯೂ ಯೆಹೂದ್ಯರಲ್ಲದ ಜನರಿಗೆ ಬೋಧಿಸುವುದಕ್ಕಾಗಿಯೂ ನನ್ನನ್ನು ಆರಿಸಿಕೊಳ್ಳಲಾಯಿತು. (ಇದು ಸತ್ಯ, ಖಂಡಿತವಾಗಿಯೂ ಸುಳ್ಳಲ್ಲ.) ಸತ್ಯವನ್ನು ತಿಳಿದುಕೊಳ್ಳಬೇಕೆಂತಲೂ ನಂಬಬೇಕೆಂತಲೂ ನಾನು ಅವರಿಗೆ ಬೋಧಿಸುತ್ತೇನೆ.

ಪುರುಷರಿಗೆ ಮತ್ತು ಸ್ತ್ರೀಯರಿಗೆ ವಿಶೇಷ ಸೂಚನೆಗಳು

ಎಲ್ಲಾ ಸ್ಥಳಗಳಲ್ಲಿ ಪುರುಷರು ಪ್ರಾರ್ಥನೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ತಮ್ಮ ಕೈಗಳನ್ನು ಮೇಲೆತ್ತಿ ಪ್ರಾರ್ಥಿಸುವ ಅವರು ಪರಿಶುದ್ಧರಾಗಿರಬೇಕು. ಅವರು ವಾಗ್ವಾದ ಮಾಡುವವರೂ ಕೋಪಗೊಳ್ಳುವವರೂ ಆಗಿರಬಾರದು.

ಸ್ತ್ರೀಯರು ತಮಗೆ ಯೋಗ್ಯವಾದ ಉಡುಪುಗಳನ್ನು ಧರಿಸಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರ ಉಡುಪುಗಳು ಅವರು ಮಾನಸ್ಥೆಯರು ಎಂಬುದನ್ನು ತೋರಿಸುವಂಥವುಗಳಾಗಿರಬೇಕು. ಅವರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ತಲೆಕೂದಲನ್ನು ಅಲಂಕಾರಿಕವಾಗಿ ಕಟ್ಟಿಕೊಳ್ಳಕೂಡದು; ಬಂಗಾರವನ್ನು ಮತ್ತು ಮುತ್ತುಗಳನ್ನು ತೊಟ್ಟುಕೊಳ್ಳಕೂಡದು ಮತ್ತು ಬೆಲೆಬಾಳುವ ಬಟ್ಟೆಗಳನ್ನು ಧರಿಸಿಕೊಳ್ಳಕೂಡದು. 10 ಆದರೆ ಅವರು ಯೋಗ್ಯಕಾರ್ಯಗಳನ್ನು ಮಾಡುವುದರ ಮೂಲಕ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು. ದೇವರನ್ನು ಆರಾಧಿಸುತ್ತೇವೆ ಎಂದು ಹೇಳುವ ಸ್ತ್ರೀಯರು ತಮ್ಮನ್ನು ಈ ರೀತಿಯಲ್ಲಿಯೇ ಅಲಂಕರಿಸಿಕೊಳ್ಳಬೇಕು.

11 ಸ್ತ್ರೀಯರು ಉಪದೇಶವನ್ನು ಕೇಳಬೇಕು ಮತ್ತು ವಿಧೇಯರಾಗಲು ಪೂರ್ಣಸಿದ್ಧರಾಗಿರಬೇಕು. 12 ಅವರು ಪುರುಷರಿಗೆ ಉಪದೇಶಿಸುವುದಕ್ಕಾಗಲಿ ಅವರ ಮೇಲೆ ಅಧಿಕಾರ ಚಲಾಯಿಸುವುದಕ್ಕಾಗಲಿ ನಾನು ಸಮ್ಮತಿಸುವುದಿಲ್ಲ. ಅವರು ಮೌನವಾಗಿರಬೇಕು. 13 ಏಕೆಂದರೆ ಮೊದಲು ನಿರ್ಮಿತನಾದವನು ಆದಾಮ. ಅನಂತರ ನಿರ್ಮಿತಳಾದದ್ದು ಹವ್ವಳು. 14 ಅಲ್ಲದೆ ಸೈತಾನನಿಂದ ವಂಚಿಸಲ್ಪಟ್ಟದ್ದು ಆದಾಮನಲ್ಲ. ಸ್ತ್ರೀಯು ವಂಚನೆಗೆ ಬಲಿಯಾಗಿ ಪಾಪಿಯಾದಳು.[a] 15 ಆದರೆ ಸ್ತ್ರೀಯರು ನಂಬಿಕೆಯಲ್ಲಿ, ಪ್ರೀತಿಯಲ್ಲಿ, ಪರಿಶುದ್ಧತೆಯಲ್ಲಿ ಮತ್ತು ಸರಿಯಾದ ನಡವಳಿಕೆಯಲ್ಲಿ ದೃಢವಾಗಿದ್ದರೆ ಮಕ್ಕಳನ್ನು ಹೆರುವಾಗ ರಕ್ಷಿಸಲ್ಪಡುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International