M’Cheyne Bible Reading Plan
ದೋಷಪರಿಹಾರಕ ದಿನ
16 ಆರೋನನ ಇಬ್ಬರು ಪುತ್ರರು ಯೆಹೋವನಿಗೆ ಆತನು ಆಜ್ಞಾಪಿಸದೇ ಇದ್ದ ಧೂಪವನ್ನು ಅರ್ಪಿಸುತ್ತಿದ್ದಾಗ ಸತ್ತರು. ಅದಾದ ನಂತರ ಯೆಹೋವನು ಮೋಶೆಯೊಡನೆ ಮಾತಾಡಿದನು. 2 ಆತನು ಹೇಳಿದ್ದೇನೆಂದರೆ: “ನಿನ್ನ ಸಹೋದರನಾದ ಆರೋನನೊಡನೆ ಮಾತಾಡು. ಅವನು ತನಗೆ ಇಷ್ಟಬಂದಾಗಲೆಲ್ಲಾ ತೆರೆಯ ಹಿಂದಿರುವ ಮಹಾ ಪವಿತ್ರಸ್ಥಳದೊಳಕ್ಕೆ ಹೋಗಬಾರದೆಂದು ಅವನಿಗೆ ಹೇಳು. ಆ ತೆರೆಯ ಹಿಂದೆ ಇರುವ ಕೋಣೆಯೊಳಗೆ ಪವಿತ್ರ ಪೆಟ್ಟಿಗೆಯು ಇರುತ್ತದೆ. ಕೃಪಾಸನವು ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿರುತ್ತದೆ. ಕೃಪಾಸನದ ಮೇಲೆ ಮೇಘದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಆರೋನನು ಆ ಕೋಣೆಯೊಳಗೆ ಹೋದರೆ ಸಾಯುವನು!
3 “ದೋಷಪರಿಹಾರಕ ದಿನದಲ್ಲಿ ಆರೋನನು ಮಹಾ ಪವಿತ್ರಸ್ಥಳದೊಳಗೆ ಪ್ರವೇಶಿಸುವ ಮೊದಲು ಪಾಪಪರಿಹಾರಕ ಯಜ್ಞವಾಗಿ ಹೋರಿಯನ್ನೂ ಸರ್ವಾಂಗಹೋಮವಾಗಿ ಟಗರನ್ನೂ ಅರ್ಪಿಸಬೇಕು. 4 ಆರೋನನು ತನ್ನ ಪೂರ್ಣಶರೀರವನ್ನು ನೀರಿನಿಂದ ತೊಳೆದುಕೊಳ್ಳಬೇಕು. ಬಳಿಕ ಅವನು ಈ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಆರೋನನು ಪವಿತ್ರ ನಾರಿನ ನಿಲುವಂಗಿಯನ್ನೂ ನಾರಿನ ಚಡ್ಡಿಯನ್ನೂ ಧರಿಸಿಕೊಂಡಿರಬೇಕು. ಅವನು ನಾರಿನ ನಡುಕಟ್ಟನ್ನು ಕಟ್ಟಿಕೊಳ್ಳಬೇಕು; ನಾರಿನ ಮುಂಡಾಸವನ್ನು ಇಟ್ಟುಕೊಳ್ಳಬೇಕು. ಇವುಗಳು ಪವಿತ್ರವಾದವುಗಳಾಗಿವೆ.
5 “ಆರೋನನು ಇಸ್ರೇಲರಿಂದ ಪಾಪಪರಿಹಾರಕ ಯಜ್ಞಕ್ಕಾಗಿ ಎರಡು ಹೋತಗಳನ್ನು ಮತ್ತು ಸರ್ವಾಂಗಹೋಮಕ್ಕಾಗಿ ಒಂದು ಟಗರನ್ನು ತೆಗೆದುಕೊಳ್ಳಬೇಕು. 6 ಬಳಿಕ ಆರೋನನು ಪಾಪಪರಿಹಾರಕ ಯಜ್ಞಕ್ಕೋಸ್ಕರ ಹೋರಿಯನ್ನು ಅರ್ಪಿಸಬೇಕು. ಈ ಪಾಪಪರಿಹಾರಕ ಯಜ್ಞವು ಅವನಿಗಾಗಿ ಇರುತ್ತದೆ. ಆರೋನನು ತನಗೂ ತನ್ನ ಕುಟುಂಬದವರಿಗೂ ಪ್ರಾಯಶ್ಚಿತ್ತ ಮಾಡಲು ಇದನ್ನು ಮಾಡಬೇಕು.
7 “ತರುವಾಯ ಆರೋನನು ಆ ಎರಡು ಹೋತಗಳನ್ನು ತೆಗೆದುಕೊಂಡು ಅವುಗಳನ್ನು ದೇವದರ್ಶನಗುಡಾರದ ಬಾಗಿಲಿನಲ್ಲಿ ಯೆಹೋವನ ಸನ್ನಿಧಿಗೆ ತರಬೇಕು. 8 ಆರೋನನು ಚೀಟುಹಾಕಿ ಒಂದು ಹೋತವನ್ನು ಯೆಹೋವನಿಗಾಗಿಯೂ ಇನ್ನೊಂದನ್ನು ಅಜಾಜೇಲನಿಗಾಗಿಯೂ ಎಂದು ನಿರ್ಧರಿಸಬೇಕು.
9 “ಬಳಿಕ ಆರೋನನು ಚೀಟು ಹಾಕುವುದರ ಮೂಲಕ ಯೆಹೋವನಿಗೋಸ್ಕರ ಆರಿಸಲ್ಪಟ್ಟ ಹೋತವನ್ನು ಅರ್ಪಿಸುವನು. ಆರೋನನು ಈ ಹೋತವನ್ನು ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು. 10 ಆದರೆ ಚೀಟು ಹಾಕುವುದರ ಮೂಲಕ ಅಜಾಜೇಲನಿಗಾಗಿ ಆರಿಸಲ್ಪಟ್ಟ ಹೋತವನ್ನು ಜೀವಂತವಾಗಿ ಯೆಹೋವನ ಸನ್ನಿಧಿಗೆ ತರಬೇಕು ಮತ್ತು ಈ ಹೋತವನ್ನು ಮರುಭೂಮಿಯಲ್ಲಿರುವ ಅಜಾಜೇಲನಿಗೆ ಕಳುಹಿಸಬೇಕು. ಜನರಿಗೋಸ್ಕರ ಪ್ರಾಯಶ್ಚಿತ್ತ ಮಾಡಲು ಹೀಗೆ ಮಾಡಬೇಕು.
11 “ಬಳಿಕ ಆರೋನನು ಹೋರಿಯನ್ನು ತನ್ನ ಪಾಪಪರಿಹಾರಕ ಯಜ್ಞವಾಗಿ ಅರ್ಪಿಸುವನು. ಆರೋನನು ತನಗಾಗಿಯೂ ತನ್ನ ಕುಟುಂಬದವರಿಗಾಗಿಯೂ ಪ್ರಾಯಶ್ಚಿತ್ತ ಮಾಡುವನು. ಆರೋನನು ಹೋರಿಯನ್ನು ತನ್ನ ಪಾಪಪರಿಹಾರಕ ಯಜ್ಞವಾಗಿ ವಧಿಸುವನು. 12 ಬಳಿಕ ಅವನು ಯೆಹೋವನ ಸನ್ನಿಧಿಯಲ್ಲಿರುವ ವೇದಿಕೆಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತೆಗೆದುಕೊಳ್ಳಬೇಕು. ಆರೋನನು ಪರಿಮಳ ಧೂಪ ದ್ರವ್ಯದ ಪುಡಿಯಲ್ಲಿ ಎರಡು ಹಿಡಿ ತೆಗೆದುಕೊಳ್ಳುವನು. ಆರೋನನು ಆ ಧೂಪವನ್ನು ತೆರೆಯ ಹಿಂದೆ ಇರುವ ಕೋಣೆಗೆ ತೆಗೆದುಕೊಂಡು ಬರಬೇಕು. 13 ಆರೋನನು ಯೆಹೋವನ ಸನ್ನಿಧಿಯಲ್ಲಿ ಬೆಂಕಿಯ ಮೇಲೆ ಧೂಪವನ್ನು ಹಾಕಬೇಕು. ಆಗ ಒಡಂಬಡಿಕೆಯ ಪೆಟ್ಟಿಗೆ ಮೇಲಿರುವ ಕೃಪಾಸವನ್ನು ಧೂಪದ ಹೊಗೆಯು ಮುಚ್ಚಿಕೊಳ್ಳುವುದು. ಹೀಗೆ ಮಾಡುವುದರಿಂದ ಆರೋನನು ಸಾಯುವುದಿಲ್ಲ. 14 ಅಲ್ಲದೆ ಆರೋನನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಕೃಪಾಸನದ ಪೂರ್ವಭಾಗದಲ್ಲಿ ತನ್ನ ಬೆರಳಿನಿಂದ ಚಿಮಿಕಿಸಬೇಕು. ಕೃಪಾಸನದ ಮುಂಭಾಗದಲ್ಲಿ ಅವನು ತನ್ನ ಬೆರಳಿನಿಂದ ರಕ್ತವನ್ನು ಏಳು ಬಾರಿ ಚಿಮಿಕಿಸುವನು.
15 “ಬಳಿಕ ಆರೋನನು ಜನರಿಗೋಸ್ಕರವಾಗಿರುವ ಪಾಪಪರಿಹಾರಕ ಪಶುವಾದ ಹೋತವನ್ನು ವಧಿಸಬೇಕು. ಆರೋನನು ಈ ಹೋತದ ರಕ್ತವನ್ನು ತೆರೆಯ ಹಿಂಭಾಗದಲ್ಲಿರುವ ಕೋಣೆಗೆ ತೆಗೆದುಕೊಂಡು ಬರಬೇಕು. ಆರೋನನು ಹೋರಿಯ ರಕ್ತದಿಂದ ಮಾಡಿದಂತೆ ಹೋತದ ರಕ್ತದಿಂದಲೂ ಮಾಡಬೇಕು. ಆರೋನನು ಹೋತದ ರಕ್ತವನ್ನು ಕೃಪಾಸನದ ಮೇಲೂ ಮತ್ತು ಕೃಪಾಸನದ ಮುಂಭಾಗದಲ್ಲಿಯೂ ಚಿಮಿಕಿಸಬೇಕು. 16 ಆರೋನನು ಮಹಾ ಪವಿತ್ರಸ್ಥಳವನ್ನು ಪರಿಶುದ್ಧ ಮಾಡಲು ಅನುಸರಿಸಬೇಕಾದ ನಿಯಮಗಳು: ಇಸ್ರೇಲರ ಅಶುದ್ಧತ್ವ, ದಂಗೆಕೋರತನ ಮತ್ತು ಅವರ ಯಾವುದೇ ಪಾಪಗಳ ಪರಿಹಾರಕ್ಕಾಗಿ ಆರೋನನು ಇದನ್ನು ಮಾಡಬೇಕು. ಅವರ ಅಶುದ್ಧತ್ವದ ನಡುವೆ ಇರುವ ದೇವದರ್ಶನಗುಡಾರಕ್ಕೂ ಅವನು ಇದನ್ನೇ ಮಾಡಬೇಕು.
17 “ಆರೋನನು ಮಹಾ ಪವಿತ್ರಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡಲು ದೇವದರ್ಶನಗುಡಾರದೊಳಗೆ ಹೋದ ಸಮಯದಿಂದ ಅವನು ಬರುವ ತನಕ ಗುಡಾರದೊಳಗೆ ಯಾರೂ ಇರಕೂಡದು. ಆರೋನನು ಬರುವ ತನಕ ಯಾರೂ ಒಳಗೆ ಹೋಗಕೂಡದು. ಹೀಗೆ ಆರೋನನು ತನಗಾಗಿಯೂ ತನ್ನ ಕುಟುಂಬಕ್ಕಾಗಿಯೂ ಇಡೀ ಇಸ್ರೇಲ್ ಸಮೂಹಕ್ಕಾಗಿಯೂ ಪ್ರಾಯಶ್ಚಿತ್ತ ಮಾಡುವನು. 18 ತರುವಾಯ ಆರೋನನು ಹೊರಗೆ ಬಂದು ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಕೆಯ ಬಳಿಗೆ ಹೋಗುವನು. ಆರೋನನು ಯಜ್ಞವೇದಿಕೆಯನ್ನು ಶುದ್ಧೀಕರಿಸುವನು. ಆರೋನನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ಮತ್ತು ಹೋತದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಕೆಯ ಎಲ್ಲಾ ಮೂಲೆಗಳಿಗೆ ಹಚ್ಚುವನು. 19 ಬಳಿಕ ಆರೋನನು ತನ್ನ ಬೆರಳಿನಿಂದ ಸ್ವಲ್ಪ ರಕ್ತವನ್ನು ಯಜ್ಞವೇದಿಕೆಯ ಮೇಲೆ ಏಳು ಸಲ ಚಿಮಿಕಿಸುವನು. ಹೀಗೆ ಆರೋನನು ಯಜ್ಞವೇದಿಕೆಯನ್ನು ಇಸ್ರೇಲರಿಂದ ಅದಕ್ಕುಂಟಾದ ಅಶುದ್ಧತ್ವದಿಂದ ದೂರಮಾಡಿ ಪರಿಶುದ್ಧಗೊಳಿಸುವನು.
20 “ಹೀಗೆ ಆರೋನನು ಮಹಾ ಪವಿತ್ರಸ್ಥಳವನ್ನೂ ದೇವದರ್ಶನಗುಡಾರವನ್ನೂ ಯಜ್ಞವೇದಿಕೆಯನ್ನೂ ಶುದ್ಧೀಕರಿಸುವನು. ಬಳಿಕ ಆರೋನನು ಜೀವಂತವಾಗಿರುವ ಹೋತವನ್ನು ಯೆಹೋವನ ಬಳಿಗೆ ತರುವನು. 21 ಆರೋನನು ಸಜೀವವಾದ ಹೋತದ ತಲೆಯ ಮೇಲೆ ತನ್ನ ಎರಡು ಕೈಗಳನ್ನಿಟ್ಟು ಇಸ್ರೇಲರು ಮಾಡಿದ ಪಾಪಗಳನ್ನು ಮತ್ತು ದ್ರೋಹಗಳನ್ನು ಅರಿಕೆಮಾಡುವನು. ಹೀಗೆ ಆರೋನನು ಜನರ ಪಾಪಗಳನ್ನು ಹೋತದ ತಲೆಯ ಮೇಲೆ ಹೊರಿಸುವನು. ಬಳಿಕ ಅವನು ಹೋತವನ್ನು ಮರುಭೂಮಿಗೆ ಕಳುಹಿಸಿಬಿಡುವನು. ಒಬ್ಬ ಮನುಷ್ಯನು ಹೋತವನ್ನು ನಡಿಸಿಕೊಂಡು ಹೋಗಲು ಸಿದ್ಧನಾಗಿ ನಿಂತಿರುವನು. 22 ಹೀಗೆ ಹೋತವು ಜನರ ಪಾಪಗಳನ್ನು ಹೊತ್ತುಕೊಂಡು ಬರಿದಾದ ಮರುಭೂಮಿಗೆ ಹೋಗುವುದು. ಹೋತವನ್ನು ನಡಿಸಿಕೊಂಡು ಹೋಗುವ ಮನುಷ್ಯನು ಮರುಭೂಮಿಯಲ್ಲಿ ಅದನ್ನು ಬಿಟ್ಟುಬಿಡುವನು.
23 “ಬಳಿಕ ಆರೋನನು ದೇವದರ್ಶನಗುಡಾರವನ್ನು ಪ್ರವೇಶಿಸುವನು. ಅವನು ಪವಿತ್ರಸ್ಥಳದೊಳಗೆ ಹೋಗಿದ್ದಾಗ ಧರಿಸಿಕೊಂಡಿದ್ದ ನಾರುಬಟ್ಟೆಯನ್ನು ತೆಗೆದುಹಾಕುವನು. ಅವನು ಈ ಬಟ್ಟೆಗಳನ್ನು ಅಲ್ಲಿಯೇ ಬಿಡಬೇಕು. 24 ಅವನು ತನ್ನ ಶರೀರವನ್ನು ಪವಿತ್ರಸ್ಥಳದಲ್ಲಿ ನೀರಿನಿಂದ ತೊಳೆದುಕೊಳ್ಳುವನು. ಬಳಿಕ ಅವನು ತನ್ನ ಇತರ ವಿಶೇಷ ಬಟ್ಟೆಗಳನ್ನು ಧರಿಸಿಕೊಳ್ಳುವನು. ಅವನು ಹೊರಗೆ ಬಂದು, ತನ್ನ ಸರ್ವಾಂಗಹೋಮವನ್ನು ಮತ್ತು ಜನರ ಸರ್ವಾಂಗಹೋಮವನ್ನು ಅರ್ಪಿಸುವನು. ಅವನು ತನಗಾಗಿಯೂ ಜನರಿಗಾಗಿಯೂ ಪ್ರಾಯಶ್ಚಿತ್ತ ಮಾಡುವನು. 25 ಬಳಿಕ ಅವನು ಪಾಪಪರಿಹಾರಕ ಯಜ್ಞದ ಕೊಬ್ಬನ್ನು ವೇದಿಕೆಯ ಮೇಲೆ ಹೋಮಮಾಡುವನು.
26 “ಅಜಾಜೇಲನಿಗೆ ಹೋತವನ್ನು ನಡೆಸಿಕೊಂಡು ಹೋದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಿಂದ ತನ್ನ ಪೂರ್ಣಶರೀರವನ್ನು ತೊಳೆದುಕೊಳ್ಳಬೇಕು. ಬಳಿಕ ಅವನು ಪಾಳೆಯದೊಳಗೆ ಬರಬಹುದು.
27 “ಪಾಪಪರಿಹಾರಕ ಯಜ್ಞಕ್ಕಾಗಿ ಇರುವ ಹೋರಿಯನ್ನು ಮತ್ತು ಹೋತವನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಬೇಕು. (ಆ ಪಶುಗಳ ರಕ್ತವನ್ನು, ಪವಿತ್ರವಸ್ತುಗಳನ್ನು ಶುದ್ಧೀಕರಿಸುವುದಕ್ಕೆ ಪವಿತ್ರಸ್ಥಳಕ್ಕೆ ತರಲಾಯಿತು.) ಯಾಜಕರು ಆ ಪಶುಗಳ ಚರ್ಮ, ಮಾಂಸ ಮತ್ತು ದೇಹದ ಕಲ್ಮಶವನ್ನೆಲ್ಲಾ ಬೆಂಕಿಯಿಂದ ಸುಟ್ಟುಹಾಕಿಸಬೇಕು. 28 ಬಳಿಕ ಅವುಗಳನ್ನು ಸುಡುವ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ತನ್ನ ಪೂರ್ಣದೇಹವನ್ನು ನೀರಿನಿಂದ ತೊಳೆದುಕೊಳ್ಳಬೇಕು. ಬಳಿಕ ಅವನು ಪಾಳೆಯದೊಳಗೆ ಬರಬಹುದು.
29 “ಇದು ನಿಮಗೆ ಶಾಶ್ವತವಾದ ಕಟ್ಟಳೆ: ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನೀವು ಆಹಾರವನ್ನು[a] ತೆಗೆದುಕೊಳ್ಳದೆ ಉಪವಾಸ ಮಾಡಬೇಕು. ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. ನಿಮ್ಮ ದೇಶದಲ್ಲಿ ವಾಸಿಸುವ ಪ್ರವಾಸಿಗರಾಗಲಿ ಪರದೇಶಸ್ಥರಾಗಲಿ ಯಾವ ಕೆಲಸವನ್ನು ಮಾಡಬಾರದು. 30 ಯಾಕೆಂದರೆ ಈ ದಿನದಲ್ಲಿ ಯಾಜಕನು ನಿಮ್ಮನ್ನು ಶುದ್ಧೀಕರಿಸಲು ನಿಮಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ನೀವು ಯೆಹೋವನಿಗಾಗಿ ನಿಮ್ಮ ಎಲ್ಲಾ ಪಾಪಗಳಿಂದ ಬಿಡುಗಡೆಯಾಗಿ ಪರಿಶುದ್ಧರಾಗುವಿರಿ. 31 ಈ ದಿನವು ನಿಮಗೆ ಬಹಳ ಪ್ರಾಮುಖ್ಯವಾದ ವಿಶ್ರಾಂತಿ ದಿನವಾಗಿದೆ. ನೀವು ಉಪವಾಸ ಮಾಡಬೇಕು. ಈ ನಿಯಮ ಶಾಶ್ವತವಾದದ್ದು.
32 “ಆದ್ದರಿಂದ ಪ್ರಧಾನಯಾಜಕನಾಗಿ ಆರಿಸಲ್ಪಟ್ಟವನು ವಸ್ತುಗಳನ್ನು ಶುದ್ಧೀಕರಿಸಲು ಈ ಆಚರಣೆಯನ್ನು ಮಾಡಬೇಕು. ಈತನು ತನ್ನ ತಂದೆಯ ನಂತರ ಪ್ರಧಾನಯಾಜಕನಾಗಿ ಸೇವೆಮಾಡುವುದಕ್ಕೆ ನೇಮಿಸಲ್ಪಟ್ಟವನಾಗಿದ್ದಾನೆ. ಆ ಯಾಜಕನು ಪವಿತ್ರವೂ ಶ್ರೇಷ್ಠವೂ ಆಗಿರುವ ನಾರುಬಟ್ಟೆಯನ್ನು ಧರಿಸಿಕೊಳ್ಳಬೇಕು. 33 ಅವನು ಮಹಾ ಪವಿತ್ರಸ್ಥಳ, ದೇವದರ್ಶನಗುಡಾರ ಮತ್ತು ವೇದಿಕೆಯನ್ನು ಶುದ್ಧೀಕರಿಸಬೇಕು; ಅವನು ಯಾಜಕರನ್ನು ಇಸ್ರೇಲರನ್ನು ಶುದ್ಧೀಕರಿಸಬೇಕು. 34 ಇಸ್ರೇಲರನ್ನು ಶುದ್ಧೀಕರಿಸುವ ಕಟ್ಟಳೆ ಶಾಶ್ವತವಾದದ್ದು. ನೀವು ಆ ಕಾರ್ಯಗಳನ್ನು ವರ್ಷಕ್ಕೊಮ್ಮೆ ಇಸ್ರೇಲರ ಪಾಪಗಳ ದೆಸೆಯಿಂದ ಮಾಡಬೇಕು.”
ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಆ ಕಾರ್ಯಗಳನ್ನು ಮಾಡಿದರು.
ರಚನೆಗಾರ: ದಾವೀದ.
19 ಆಕಾಶಮಂಡಲವು ದೇವರ ಮಹಿಮೆಯನ್ನು ಪ್ರಕಟಿಸುವುದು.
ಗಗನವು ಆತನ ಕೈಕೆಲಸವನ್ನು ತಿಳಿಸುವುದು.
2 ಪ್ರತಿಯೊಂದು ದಿನವೂ ಅದರ ಕುರಿತು ಹೊಸ ವಿಷಯವನ್ನು ತಿಳಿಸುವುದು.
ಪ್ರತಿಯೊಂದು ರಾತ್ರಿಯೂ ಅದರ ಕುರಿತು ಹೊಸ ಸಂಗತಿಯನ್ನು ಪ್ರಕಟಿಸುವುದು.
3 ಅವುಗಳ ಮಾತಾಗಲಿ
ನುಡಿಗಳಾಗಲಿ ಸ್ವರವಾಗಲಿ ನಮಗೆ ಕೇಳಿಸದು.
4 ಆದರೂ ಅವುಗಳ ಸಂದೇಶವು ಭೂಲೋಕದಲ್ಲೆಲ್ಲಾ ಹರಡುತ್ತದೆ;
ಭೂಮಿಯ ಕಟ್ಟಕಡೆಗಳವರೆಗೂ ವ್ಯಾಪಿಸುತ್ತದೆ.
ಆಕಾಶವು ಸೂರ್ಯನಿಗೆ ಮನೆಯಂತಿದೆ.
5 ಮದುವೆಯ ಮಂಟಪದಿಂದ ಆನಂದದಿಂದ ಬರುವ ಮದುಮಗನಂತೆ ಸೂರ್ಯನು ಮುಂಜಾನೆ ಉದಯಿಸುವನು.
ಕ್ರೀಡಾಪಟುವಿನಂತೆ
ಸೂರ್ಯನು ಆಕಾಶದಲ್ಲಿ ಓಡಲಾರಂಭಿಸುವನು.
6 ಸೂರ್ಯನು ಆಕಾಶದ ಒಂದು ಕಡೆಯಿಂದ ಉದಯಿಸಿ
ಮತ್ತೊಂದು ಕೊನೆಗೆ ಓಡುತ್ತಾಹೋಗುವನು.
ಅವನ ತಾಪಕ್ಕೆ ಯಾವುದೂ ಮರೆಯಾಗಿರಲಾರದು.
7 ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
8 ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.
9 ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.
12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.
ಯಾಕೆಯ ಮಾಗನಾದ ಅಗೂರನ ಜ್ಞಾನೋಕ್ತಿಗಳು
30 ಮಾಸ್ಸಾದ ಯಾಕೆ ಎಂಬವನ ಮಗನಾದ ಅಗೂರನ ನುಡಿಗಳಿವು. ಇಥಿಯೇಲನಿಗೂ ಉಕ್ಕಾಲನಿಗೂ ಇವನು ನೀಡಿದ ಸಂದೇಶವಿದು:
2 ನಾನು ಬೇರೆಯವರಿಗಿಂತ ದಡ್ಡನಾಗಿರುವೆ. ಸರ್ವಸಾಮಾನ್ಯವಾದ ಬುದ್ಧಿಯೂ ನನಗಿಲ್ಲ. 3 ನಾನು ಜ್ಞಾನವನ್ನು ಕಲಿತವನಲ್ಲ; ಪರಿಶುದ್ಧನಾದ ದೇವರ ಬಗ್ಗೆಯೂ ಗೊತ್ತಿಲ್ಲ. 4 ಎಂದಾದರೂ ಪರಲೋಕಕ್ಕೆ ಏರಿಹೋಗಿ ಇಳಿದುಬಂದವನು ಯಾರು? ಗಾಳಿಯನ್ನು ತನ್ನ ಕೈಯಲ್ಲಿ ಹಿಡಿದವನು ಯಾರು? ತನ್ನ ಉಡುಪಿನಲ್ಲಿ ಸಮುದ್ರವನ್ನು ಮೂಟೆಕಟ್ಟಿದವನು ಯಾರು? ಭೂಮಿಗೆ ಮೇರೆಗಳನ್ನು ಹಾಕಿದವನು ಯಾರು? ಈ ಕಾರ್ಯಗಳನ್ನು ಯಾವನಾದರೂ ಮಾಡಿದ್ದರೆ, ಅವನು ಯಾರು? ಅವನು ಕುಟುಂಬ ಎಲ್ಲಿದೆ?
5 ದೇವರು ಹೇಳುವ ಪ್ರತಿಯೊಂದು ಮಾತೂ ನಂಬಿಕೆಗೆ ಯೋಗ್ಯವಾಗಿದೆ. ತನ್ನ ಬಳಿಗೆ ಬರುವ ಜನರಿಗೆ ದೇವರು ಆಶ್ರಯದುರ್ಗವಾಗಿದ್ದಾನೆ. 6 ಆದ್ದರಿಂದ ದೇವರು ಹೇಳುವ ಸಂಗತಿಗಳಿಗೆ ಏನನ್ನೂ ಸೇರಿಸಬೇಡ. ನೀನು ಬದಲಾಯಿಸಿದರೆ, ಆತನು ನಿನ್ನನ್ನು ಶಿಕ್ಷಿಸುವನು ಮತ್ತು ನಿನ್ನನ್ನು ಸುಳ್ಳುಗಾರನೆಂದು ರುಜುವಾತು ಮಾಡುವನು.
7 ಯೆಹೋವನೇ, ನಾನು ಸಾಯುವ ಮೊದಲು ನೀನು ನನಗೋಸ್ಕರ ಎರಡು ಕಾರ್ಯಗಳನ್ನು ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುವೆ. 8 ಸುಳ್ಳುಹೇಳದಂತೆ ನನಗೆ ಸಹಾಯಮಾಡು. ನನ್ನನ್ನು ತುಂಬ ಐಶ್ವರ್ಯವಂತನನ್ನಾಗಿಯೂ ಮಾಡಬೇಡ; ತುಂಬ ಬಡವನನ್ನಾಗಿಯೂ ಮಾಡಬೇಡ; ಅನುದಿನಕ್ಕೆ ಬೇಕಾದವುಗಳನ್ನು ಮಾತ್ರ ಕೊಡು. 9 ನನಗೆ ಹೆಚ್ಚಾಗಿದ್ದರೆ, ನಿನ್ನನ್ನೇ ತಿರಸ್ಕರಿಸಿ, “ನನಗೆ ಯೆಹೋವನ ಅಗತ್ಯವಿಲ್ಲ” ಎಂದು ಹೇಳುವೆನು. ನಾನು ಬಡವನಾಗಿದ್ದರೆ, ಕಳವುಮಾಡಿ ನಿನ್ನ ಹೆಸರಿಗೆ ಅವಮಾನ ಮಾಡುವೆನು.
10 ಸೇವಕನ ಬಗ್ಗೆ ಯಜಮಾನನಿಗೆ ಚಾಡಿ ಹೇಳಬೇಡ. ನೀನು ಹೇಳಿದರೆ, ಅವನು ನಿನ್ನನ್ನು ಶಪಿಸುವನು; ಆ ಶಾಪದಿಂದ ನೀನು ಸಂಕಟಪಡುವೆ.
11 ಕೆಲವರು ತಮ್ಮ ತಂದೆಗಳನ್ನು ಶಪಿಸುವರು. ತಮ್ಮ ತಾಯಂದಿರನ್ನು ಆಶೀರ್ವದಿಸುವುದಿಲ್ಲ.
12 ಕೆಲವರು ತಮ್ಮನ್ನು ಶುದ್ಧರೆಂದು ಯೋಚಿಸುವರು. ಆದರೆ ಅವರು ತಮ್ಮ ಹೊಲಸಿನಿಂದ ಶುದ್ಧೀಕರಿಸಲ್ಪಟ್ಟಿಲ್ಲ.
13 ಕೆಲವರು ಬಹಳ ದುರಾಭಿಮಾನಿಗಳಾಗಿದ್ದಾರೆ. ತಾವು ಬೇರೆಯವರಿಗಿಂತ ಎಷ್ಟೋ ಉತ್ತಮರೆಂಬುದು ಅವರ ಭಾವನೆ.
14 ಖಡ್ಗಗಳಂತಿರುವ ಹಲ್ಲುಗಳನ್ನು ಹೊಂದಿರುವ ಜನರಿದ್ದಾರೆ. ಅವರ ಕೋರೆಗಳು ಕತ್ತಿಗಳಂತಿವೆ. ಅವರು ಬಡಜನರಲ್ಲಿ ಇರುವುದನ್ನೆಲ್ಲಾ ತಮ್ಮಿಂದಾದಷ್ಟು ದೋಚಿಕೊಳ್ಳಲು ತಮ್ಮ ಸಮಯವನ್ನು ಉಪಯೋಗಿಸುವರು.
15 ಕೆಲವರು ರಕ್ತ ಕುಡಿಯುವ ಜಿಗಣೆಗಳಂತಿದ್ದಾರೆ. ಅವರು, “ನನಗೆ ಕೊಡು, ನನಗೆ ಕೊಡು, ನನಗೆ ಕೊಡು” ಎಂದು ಹೇಳುತ್ತಾರೆ. ಎಂದಿಗೂ ತೃಪ್ತಿಯಾಗದ ಮೂರು ಸಂಗತಿಗಳಿವೆ. ನಿಜವಾಗಿಯೂ ನಾಲ್ಕು ಸಂಗತಿಗಳು ಎಂದಿಗೂ ಸಾಕು ಎನ್ನವು: 16 ಮರಣದ ಸ್ಥಳ, ಮಕ್ಕಳಿಲ್ಲದ ಹೆಂಗಸು, ಸತತವಾಗಿ ನೀರಿನ ಅಗತ್ಯವಿರುವ ಭೂಮಿ ಮತ್ತು ಆರದ ಬೆಂಕಿ!
17 ತನ್ನ ತಂದೆಯನ್ನು ಗೇಲಿಮಾಡುವವನಾಗಲಿ ವೃದ್ಧ ತಾಯಿಯನ್ನು ಕಡೆಗಣಿಸುವವನಾಗಲಿ ದಂಡನೆ ಹೊಂದುವನು. ಕಾಗೆಗಳೂ ಕ್ರೂರಪಕ್ಷಿಗಳೂ ಅವನ ಕಣ್ಣುಗಳನ್ನು ತಿನ್ನುವಂತಿರುವುದು ಆ ದಂಡನೆ.
18 ನನಗೆ ಅರ್ಥಮಾಡಿಕೊಳ್ಳಲು ಕಷ್ಟವಾದ ಮೂರು ಸಂಗತಿಗಳಿವೆ; ನಿಜವಾಗಿಯೂ ನಾಲ್ಕು ಸಂಗತಿಗಳನ್ನು ನಾನು ಅರ್ಥಮಾಡಿಕೊಳ್ಳಲಾರೆ: 19 ಆಕಾಶದಲ್ಲಿ ಹಾರುವ ಹದ್ದಿನ ರೀತಿ, ಬಂಡೆಯ ಮೇಲೆ ಹರಿದಾಡುವ ಹಾವು, ಸಮುದ್ರದ ಮೇಲೆ ಸಂಚರಿಸುವ ಹಡಗು ಮತ್ತು ಹೆಂಗಸನ್ನು ಪ್ರೇಮಿಸುತ್ತಿರುವ ಗಂಡಸು.
20 ವ್ಯಭಿಚಾರಿಣಿಯ ನಡತೆಯು ಇದೇ. ಆಕೆ ಊಟ ಮಾಡುವಳು, ಬಾಯಿ ಒರಸಿಕೊಳ್ಳುವಳು ಮತ್ತು ತಾನು ಯಾವ ತಪ್ಪನ್ನೂ ಮಾಡಿಲ್ಲವೆಂದು ಹೇಳುವಳು.
21 ಭೂಮಿಯ ಮೇಲೆ ಕೇಡುಮಾಡುವ ಮೂರು ಸಂಗತಿಗಳಿವೆ; ನಿಜವಾಗಿಯೂ ನಾಲ್ಕು ಸಂಗತಿಗಳನ್ನು ಭೂಮಿಯು ತಾಳಲಾಗದು: 22 ರಾಜನಾದ ಸೇವಕ, ತನಗೆ ಅಗತ್ಯವಿರುವ ಪ್ರತಿಯೊಂದನ್ನು ಪಡೆದಿರುವ ಮೂಢ, 23 ಪ್ರೀತಿಯನ್ನು ಕಂಡಿಲ್ಲದಿದ್ದರೂ ಮದುವೆಯಾಗುವ ಸ್ತ್ರೀ ಮತ್ತು ತನ್ನ ಯಜಮಾನಿಯ ಸ್ಥಾನವನ್ನು ಕಸಿದುಕೊಳ್ಳುವ ಸೇವಕಿ.
24 ಭೂಮಿಯ ಮೇಲೆ ನಾಲ್ಕು ಪ್ರಾಣಿಗಳಿವೆ. ಆದರೆ ಈ ಪ್ರಾಣಿಗಳು ತುಂಬ ವಿವೇಕವುಳ್ಳವುಗಳಾಗಿವೆ.
25 ಇರುವೆಗಳು ಸಣ್ಣಗಿವೆ ಮತ್ತು ಬಲಹೀನವಾಗಿವೆ. ಆದರೆ ಅವು ಸುಗ್ಗೀಕಾಲದಲ್ಲಿ ತಮ್ಮ ಆಹಾರವನ್ನು ಕೂಡಿಸಿಟ್ಟುಕೊಳ್ಳುತ್ತವೆ.
26 ಬೆಟ್ಟದ ಮೊಲ ಬಲಿಷ್ಠವಾದ ಪ್ರಾಣಿಯಾಗಿಲ್ಲದಿದ್ದರೂ ಅವು ಬಂಡೆಗಳಲ್ಲಿ ತಮಗೆ ಮನೆಗಳನ್ನು ಮಾಡಿಕೊಳ್ಳಬಲ್ಲವು.
27 ಮಿಡತೆಗಳಿಗೆ ರಾಜನಿಲ್ಲದಿದ್ದರೂ ಅವು ಗುಂಪುಗುಂಪಾಗಿ ಹೋಗುತ್ತವೆ.
28 ಹಲ್ಲಿಗಳನ್ನು ನಿಮ್ಮ ಕೈಗಳಲ್ಲಿ ಹಿಡಿದುಕೊಳ್ಳಬಹುದು. ಅವು ಅಷ್ಟು ಸಣ್ಣವು. ಆದರೆ ಅವು ರಾಜನ ಮನೆಗಳಲ್ಲಿಯೂ ವಾಸಿಸುತ್ತವೆ.
29 ಮೂರು ಪ್ರಾಣಿಗಳಿವೆ: ಅವು ನಡೆಯುವಾಗ ಗಂಭೀರತೆಯು ಎದ್ದುಕಾಣುತ್ತದೆ. ನಿಜವಾಗಿಯೂ ನಾಲ್ಕು ಇವೆ:
30 ಸಿಂಹವು ಎಲ್ಲಾ ಪ್ರಾಣಿಗಳಲ್ಲಿ ಅತಿ ಬಲಿಷ್ಠವಾದದ್ದು; ಅದು ಯಾವುದಕ್ಕೂ ಭಯಪಡುವುದಿಲ್ಲ.
31 ಬಹು ಹೆಮ್ಮೆಯಿಂದ ನಡೆಯುವ ಬೇಟೆನಾಯಿ;
ಹೋತ ಮತ್ತು
ತನ್ನ ಜನರ ನಡುವೆ ಇರುವ ರಾಜ.
32 ನೀನು ನಿನ್ನನ್ನು ಹೆಚ್ಚಿಸಿಕೊಂಡು ಮೂಢನಾಗಿದ್ದರೆ, ಕೆಡುಕನ್ನು ಆಲೋಚಿಸುತ್ತಿದ್ದರೆ, ಸ್ವಲ್ಪ ಯೋಚಿಸು.
33 ಹಾಲನ್ನು ಕರೆಯುವವನು ಬೆಣ್ಣೆಮಾಡುವನು. ಮತ್ತೊಬ್ಬನ ಮೂಗನ್ನು ಹೊಡೆದರೆ ರಕ್ತ ಬರುವುದು. ಅಂತೆಯೇ, ನೀನು ಜನರನ್ನು ಕೋಪಗೊಳಿಸಿದರೆ, ಜಗಳವನ್ನು ಎಬ್ಬಿಸುವೆ.
1 ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ತಿಮೊಥೆಯನಿಗೆ ಬರೆಯುವ ಪತ್ರ. ನಮ್ಮ ರಕ್ಷಕನಾದ ದೇವರು ಮತ್ತು ನಮ್ಮ ನಿರೀಕ್ಷೆಗೆ ಆಧಾರವಾದ ಕ್ರಿಸ್ತ ಯೇಸುವಿನ ಆಜ್ಞೆಗನುಸಾರವಾಗಿ ನಾನು ಅಪೊಸ್ತಲನಾದೆನು.
2 ನೀನು ನಂಬಿಕೆ ಉಳ್ಳವನಾಗಿರುವುದರಿಂದ ನನಗೆ ನಿಜವಾದ ಮಗನಂತಿರುವೆ.
ತಂದೆಯಾದ ದೇವರಿಂದ ಮತ್ತು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಿಂದ ಕೃಪೆಯೂ ಕರುಣೆಯೂ ಶಾಂತಿಯೂ ನಿನಗೆ ಲಭಿಸಲಿ.
ದುರ್ಬೋಧನೆಗಳ ವಿರುದ್ಧ ಎಚ್ಚರಿಕೆ
3 ನಾನು ಮಕೆದೋನಿಯಕ್ಕೆ ಹೋಗುವಾಗ, ನೀನು ಎಫೆಸದಲ್ಲೇ ಇರು ಎಂದು ನಿನಗೆ ತಿಳಿಸಿದ್ದೆ. ಏಕೆಂದರೆ ಕೆಲವರು ಅಲ್ಲಿ ಸುಳ್ಳು ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ. ನೀನು ಅದನ್ನು ನಿಲ್ಲಿಸಬೇಕು. 4 ಕಲ್ಪನಾಕಥೆಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಗಮನಕೊಡಬಾರದೆಂದು ಅವರಿಗೆ ಆಜ್ಞಾಪಿಸು. ಆ ಸಂಗತಿಗಳು ವಾದವಿವಾದಗಳನ್ನು ಮಾತ್ರ ತರುತ್ತವೆ. ಅವುಗಳಿಂದ ದೇವರ ಕಾರ್ಯಕ್ಕೆ ಪ್ರಯೋಜನವೇನೂ ಇಲ್ಲ. ದೇವರ ಕಾರ್ಯವನ್ನು ನಂಬಿಕೆಯಿಂದ ಮಾಡಬೇಕು. 5 ಪ್ರೀತಿಯೇ ಈ ಆಜ್ಞೆಯ ಗುರಿಯಾಗಿದೆ. ಈ ಪ್ರೀತಿಯನ್ನು ಹೊಂದಿಕೊಳ್ಳಲು ಜನರು ಶುದ್ಧಹೃದಯ ಉಳ್ಳವರಾಗಿರಬೇಕು; ಯೋಗ್ಯವಾದ ಕಾರ್ಯವನ್ನೇ ಮಾಡುವವರಾಗಿರಬೇಕು; ಮತ್ತು ನಿಷ್ಕಪಟವಾದ ನಂಬಿಕೆಯನ್ನು ಹೊಂದಿದವರಾಗಿರಬೇಕು. 6 ಕೆಲವರು ಈ ಗುರಿತಪ್ಪಿ ನಿರರ್ಥಕವಾದ ವಿಷಯಗಳನ್ನು ಕುರಿತು ಮಾತಾಡುತ್ತಿದ್ದಾರೆ. 7 ತಾವು ಧರ್ಮೋಪದೇಶಕರಾಗಬೇಕೆಂಬುದು ಅವರ ಅಪೇಕ್ಷೆ. ಆದರೆ ತಾವು ಏನು ಮಾತಾಡುತ್ತಿದ್ದೇವೆ ಎಂಬುದೇ ಅವರಿಗೆ ತಿಳಿದಿಲ್ಲ. ತಮಗೆ ಖಚಿತವಾಗಿ ತಿಳಿದಿದೆ ಎಂದು ತಾವು ಹೇಳುವ ಸಂಗತಿಗಳನ್ನೂ ಅವರು ಅರ್ಥಮಾಡಿಕೊಳ್ಳುವುದಿಲ್ಲ.
8 ಧರ್ಮಶಾಸ್ತ್ರವು ಒಳ್ಳೆಯದೇ. ಆದರೆ ಅದನ್ನು ನಿಷ್ಠೆಯಿಂದ ಅನುಸರಿಸಬೇಕು. 9 ಧರ್ಮಶಾಸ್ತ್ರವನ್ನು ರೂಪಿಸಿದ್ದು ಒಳ್ಳೆಯವರಿಗಾಗಿಯಲ್ಲ ಎಂಬುದು ನಮಗೆ ತಿಳಿದಿದೆ. ಅದನ್ನು ರೂಪಿಸಿದ್ದು ಅದರ ವಿರುದ್ಧವಾಗಿ ನಡೆಯುವ ಮತ್ತು ಅದನ್ನು ಅನುಸರಿಸಲು ಒಪ್ಪದಿರುವ ಜನರಿಗಷ್ಟೇ. ದೇವರಿಗೆ ವಿರುದ್ಧವಾದ ಜನರಿಗೆ ಮತ್ತು ಪಾಪಿಷ್ಠರಿಗೆ, ಅಧರ್ಮಿಗಳಿಗೆ ಮತ್ತು ಪರಿಶುದ್ಧರಲ್ಲದವರಿಗೆ, ತಂದೆತಾಯಿಗಳನ್ನು ಕೊಲ್ಲುವವರಿಗೆ ಮತ್ತು ಕೊಲೆಗಾರರಿಗೆ, 10 ಲೈಂಗಿಕ ಪಾಪಗಳನ್ನು ಮಾಡುವವರಿಗೆ, ಸಲಿಂಗಕಾಮಿಗಳಿಗೆ, ಗುಲಾಮರನ್ನು ಮಾರಾಟ ಮಾಡುವವರಿಗೆ, ಸುಳ್ಳನ್ನು ಹೇಳುವವರಿಗೆ, ಒಪ್ಪಂದವನ್ನು ಮೀರುವ ಜನರಿಗೆ, ದೇವರ ಸತ್ಯೋಪದೇಶಕ್ಕೆ ವಿರುದ್ಧವಾಗಿ ಏನನ್ನು ಬೇಕಾದರೂ ಮಾಡುವವರಿಗೆ ಅದನ್ನು ರೂಪಿಸಲಾಗಿದೆ. 11 ಈ ಉಪದೇಶವು ಜನರಿಗೆ ತಿಳಿಸುವುದಕ್ಕಾಗಿ ದೇವರು ನನಗೆ ಕೊಟ್ಟ ಸುವಾರ್ತೆಯ ಒಂದು ಭಾಗವಾಗಿದೆ. ಭಾಗ್ಯವಂತನಾದ ದೇವರಿಂದಲೇ ಈ ಮಹಿಮೆಯ ಸುವಾರ್ತೆಯು ಬಂದಿತು.
ದೇವರ ಕರುಣೆಗಾಗಿ ಕೃತಜ್ಞತೆಗಳು
12 ನಮ್ಮ ಪ್ರಭುವಾದ ಕ್ರಿಸ್ತ ಯೇಸು ನನ್ನ ಮೇಲಿನ ನಂಬಿಕೆಯಿಂದ, ಆತನ ಸೇವೆ ಮಾಡುವ ಈ ಕಾರ್ಯವನ್ನು ನನಗೆ ದಯಪಾಲಿಸಿದ್ದರಿಂದ ನಾನು ಆತನಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆತನು ನನ್ನನ್ನು ಬಲಪಡಿಸುತ್ತಾನೆ. 13 ಮೊದಲು, ನಾನು ಕ್ರಿಸ್ತನ ವಿರುದ್ಧ ಮಾತನಾಡಿದ್ದೆನು. ಆತನನ್ನು ಹಿಂಸಿಸಿದ್ದೆನು. ಆತನಿಗೆ ನೋವಾಗುವಂಥ ಕಾರ್ಯಗಳನ್ನು ಮಾಡಿದ್ದೆನು. ಆದರೆ ನಾನೇನು ಮಾಡುತ್ತಿದ್ದೇನೆಂಬುದು ನನಗೆ ತಿಳಿದಿರಲಿಲ್ಲವಾದ್ದರಿಂದ ದೇವರು ನನಗೆ ಕರುಣೆ ತೋರಿದನು. ನಂಬದಿರುವಾಗ ನಾನು ಅವುಗಳನ್ನು ಮಾಡಿದೆನು. 14 ಆದರೆ ನಮ್ಮ ಪ್ರಭುವಿನ ಕೃಪೆಯು ಸಂಪೂರ್ಣವಾಗಿ ನನಗೆ ಲಭಿಸಿತು. ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆ ಮತ್ತು ಪ್ರೀತಿಗಳು ಆ ಕೃಪೆಯೊಂದಿಗೆ ಬಂದವು.
15 ನಾನು ಹೇಳುತ್ತಿರುವ ಈ ಸಂಗತಿ ಸತ್ಯವಾದದ್ದು. ಆದ್ದರಿಂದ ನೀವು ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು. ಅದೇನೆಂದರೆ: ಪಾಪಿಗಳನ್ನು ರಕ್ಷಿಸುವುದಕ್ಕೆ ಕ್ರಿಸ್ತ ಯೇಸು ಈ ಲೋಕದಲ್ಲಿ ಪ್ರತ್ಯಕ್ಷನಾದನು. ಆ ಪಾಪಿಗಳಲ್ಲಿ ನಾನೇ ಮುಖ್ಯನು. 16 ಆದರೆ ನನಗೆ ಕರುಣೆ ದೊರೆಯಿತು. ಕ್ರಿಸ್ತ ಯೇಸು ತನ್ನ ಅಮಿತವಾದ ತಾಳ್ಮೆಯನ್ನು ನನ್ನಲ್ಲಿ ತೋರ್ಪಡಿಸುವುದಕ್ಕಾಗಿಯೇ ನನಗೆ ಕರುಣೆಯನ್ನು ದಯಪಾಲಿಸಿದನು. ಪಾಪಿಗಳಲ್ಲೆಲ್ಲಾ ಮುಖ್ಯನಾಗಿದ್ದ ನನಗೆ ಕ್ರಿಸ್ತನು ತನ್ನ ತಾಳ್ಮೆಯನ್ನು ತೋರಿದನು. ನಿತ್ಯಜೀವಕ್ಕಾಗಿ ಕ್ರಿಸ್ತನಲ್ಲಿ ನಂಬಿಕೆಯನ್ನಿಡುವ ಜನರಿಗೆ ನಾನು ದೃಷ್ಟಾಂತವಾಗಿರಬೇಕೆಂದೇ ಆತನು ನನ್ನನ್ನು ಕರುಣಿಸಿದನು. 17 ಸದಾಕಾಲ ಆಳುವ ಅರಸನಿಗೆ ಗೌರವವೂ ಮಹಿಮೆಯೂ ಇರಲಿ. ಆತನಿಗೆ ಲಯವೆಂಬುದೇ ಇಲ್ಲ. ಆತನು ಅದೃಶ್ಯನಾಗಿರುವನು. ಒಬ್ಬನೇ ದೇವರಾದ ಆತನಿಗೆ ಗೌರವವೂ ಮಹಿಮೆಯೂ ಉಂಟಾಗಲಿ. ಆಮೆನ್.
18 ತಿಮೊಥೆಯನೇ, ನೀನು ನನಗೆ ಮಗನಂತಿರುವೆ. ನಾನು ನಿನಗೆ ಆಜ್ಞಾಪಿಸುವುದೇನೆಂದರೆ, ಮೊದಲು ನಿನ್ನ ವಿಷಯದಲ್ಲಿ ತಿಳಿಸಲಾದ ಪ್ರವಾದನೆಗಳಿಗೆ ಅನುಗುಣವಾಗಿ ನಂಬಿಕೆಯ ದಿವ್ಯ ಹೋರಾಟವನ್ನು ಮಾಡು. 19 ನಂಬಿಕೆಯು ನಿನ್ನಲ್ಲಿ ಅಚಲವಾಗಿರಲಿ, ನಿನಗೆ ಯೋಗ್ಯವೆನಿಸಿದ್ದನ್ನೇ ಮಾಡು. ಕೆಲವು ಜನರು ಹೀಗೆ ಮಾಡಲಿಲ್ಲ. ಅವರ ನಂಬಿಕೆಯೆಲ್ಲವೂ ನಾಶವಾಯಿತು. 20 ಹುಮೆನಾಯನು ಮತ್ತು ಅಲೆಗ್ಸಾಂಡರನು ಹಾಗೆ ಮಾಡಿದರು. ದೇವರ ವಿರುದ್ಧವಾಗಿ ಮಾತನಾಡಕೂಡದೆಂದು ಅವರು ತಿಳಿದುಕೊಳ್ಳಲೆಂದೇ ಅವರನ್ನು ಸೈತಾನನಿಗೆ ಒಪ್ಪಿಸಿದೆನು.
Kannada Holy Bible: Easy-to-Read Version. All rights reserved. © 1997 Bible League International