Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 15

ದೇಹದಿಂದುಂಟಾಗುವ ಸ್ರಾವಗಳ ವಿಷಯದಲ್ಲಿ ಅನುಸರಿಸಬೇಕಾದ ನಿಯಮಗಳು

15 ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಹೇಳಿರಿ: ಒಬ್ಬನ ದೇಹದಿಂದ ಸ್ರಾವವಾದಾಗ ಆ ವ್ಯಕ್ತಿ ಅಶುದ್ಧನಾಗಿದ್ದಾನೆ. ಆ ಸ್ರಾವವು ಹರಿಯುತ್ತಿದ್ದರೂ ನಿಂತುಹೋಗಿದ್ದರೂ ಅವನು ಅಶುದ್ಧನೇ.

“ಸ್ರಾವವಾಗುತ್ತಿರುವ ವ್ಯಕ್ತಿ ಯಾವ ಹಾಸಿಗೆಯ ಮೇಲೆ ಮಲಗಿದರೂ ಆ ಹಾಸಿಗೆ ಅಶುದ್ಧವಾಗುತ್ತದೆ. ಯಾವನಾದರೂ ಆ ವ್ಯಕ್ತಿಯ ಹಾಸಿಗೆಯನ್ನು ಮುಟ್ಟಿದರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಸ್ರಾವವುಳ್ಳವನು ಕುಳಿತುಕೊಳ್ಳುವ ವಸ್ತುವಿನ ಮೇಲೆ ಯಾವನಾದರೂ ಕುಳಿತುಕೊಂಡರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನ ಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಅಲ್ಲದೆ ಸ್ರಾವವುಳ್ಳ ವ್ಯಕ್ತಿಯನ್ನು ಯಾವನಾದರೂ ಮುಟ್ಟಿದರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

“ಸ್ರಾವವುಳ್ಳ ವ್ಯಕ್ತಿ ಶುದ್ಧವ್ಯಕ್ತಿಯ ಮೇಲೆ ಉಗುಳಿದರೆ, ಶುದ್ಧವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಿಂದ ಸ್ನಾನಮಾಡಬೇಕು. ಈ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಸ್ರಾವವುಳ್ಳ ವ್ಯಕ್ತಿ ಯಾವ ತಡಿಯ ಮೇಲೆ ಕುಳಿತರೂ ಅದು ಅಶುದ್ಧವಾಗುವುದು. 10 ಆದ್ದರಿಂದ ಯಾವನಾದರೂ ಸ್ರಾವವುಳ್ಳ ವ್ಯಕ್ತಿಯ ಕೆಳಗಿರುವ ಯಾವದೇ ವಸ್ತುಗಳನ್ನು ಮುಟ್ಟಿದರೂ ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಸ್ರಾವವುಳ್ಳ ವ್ಯಕ್ತಿಯ ಕೆಳಗಿರುವ ವಸ್ತುಗಳನ್ನು ತೆಗೆದುಕೊಂಡುಹೋಗುವ ಯಾವನಾದರೂ ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 11 ಒಂದುವೇಳೆ ಸ್ರಾವವುಳ್ಳ ಒಬ್ಬನು ತನ್ನ ಕೈಗಳನ್ನು ನೀರಿನಲ್ಲಿ ತೊಳೆಯದೆ ಇನ್ನೊಬ್ಬ ವ್ಯಕ್ತಿಯನ್ನು ಮುಟ್ಟಿದರೆ, ಆಗ ಆ ಇನ್ನೊಬ್ಬ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

12 “ಸ್ರಾವವುಳ್ಳ ವ್ಯಕ್ತಿ ಮಣ್ಣಿನ ಮಡಿಕೆಯನ್ನು ಮುಟ್ಟಿದರೆ, ಆ ಮಡಿಕೆಯನ್ನು ಒಡೆದುಹಾಕಬೇಕು. ಸ್ರಾವವುಳ್ಳ ವ್ಯಕ್ತಿ ಮರದ ಬಟ್ಟಲನ್ನು ಮುಟ್ಟಿದರೆ, ಆ ವಸ್ತುವನ್ನು ನೀರಿನಲ್ಲಿ ತೊಳೆಯಬೇಕು.

13 “ಸ್ರಾವವುಳ್ಳವನ ಸ್ರಾವವು ನಿಂತು ವಾಸಿಯಾದಾಗ, ಅವನು ಶುದ್ಧಮಾಡಿಕೊಳ್ಳುವುದಕ್ಕೆ ಏಳು ದಿನಗಳವರೆಗೆ ಕಾಯಬೇಕು. ಬಳಿಕ ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಹರಿಯುವ ನೀರಿನಲ್ಲಿ ಸ್ನಾನಮಾಡಬೇಕು. ಆಗ ಅವನು ಶುದ್ಧನಾಗುವನು. 14 ಎಂಟನೆಯ ದಿನದಲ್ಲಿ ಆ ವ್ಯಕ್ತಿ ತನಗೋಸ್ಕರ ಎರಡು ಬೆಳವಕ್ಕಿಗಳನ್ನು ಅಥವಾ ಎರಡು ಪಾರಿವಾಳದ ಮರಿಗಳನ್ನು ತೆಗೆದುಕೊಳ್ಳಬೇಕು. ಅವನು ದೇವದರ್ಶನ ಗುಡಾರದ ಬಾಗಿಲಿನ ಬಳಿ ಯೆಹೋವನ ಸನ್ನಿಧಿಗೆ ಬರಬೇಕು. ಆ ವ್ಯಕ್ತಿ ಎರಡು ಪಕ್ಷಿಗಳನ್ನು ಯಾಜಕನಿಗೆ ಕೊಡಬೇಕು. 15 ಯಾಜಕನು ಈ ಪಕ್ಷಿಗಳಲ್ಲಿ ಒಂದನ್ನು ಪಾಪಪರಿಹಾರಕ ಯಜ್ಞವಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಅರ್ಪಿಸುವನು. ಹೀಗೆ ಯಾಜಕನು ಅವನ ಅಶುದ್ಧವಾದ ಸ್ರಾವಕ್ಕಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು.

16 “ಒಬ್ಬನಿಗೆ ವೀರ್ಯಸ್ಖಲನವಾದರೆ, ಅವನು ನೀರಿನಲ್ಲಿ ಸರ್ವಾಂಗಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 17 ಯಾವ ಬಟ್ಟೆಯ ಮೇಲಾಗಲಿ ತೊಗಲಿನ ವೇಲಾಗಲಿ ವೀರ್ಯವು ಬಿದ್ದರೆ, ಆ ಬಟ್ಟೆ ಅಥವಾ ತೊಗಲನ್ನು ನೀರಿನಿಂದ ತೊಳೆಯಬೇಕು. ಅದು ಸಾಯಂಕಾಲವರೆಗೆ ಅಶುದ್ಧವಾಗಿರುವುದು. 18 ಪುರುಷನಿಗೆ ಸ್ತ್ರೀಸಂಗದಿಂದ ವೀರ್ಯಸ್ಖಲನವಾದರೆ, ಆಗ ಅವರಿಬ್ಬರೂ ಸ್ನಾನಮಾಡಬೇಕು. ಅವರು ಸಾಯಂಕಾಲದವರೆಗೆ ಅಶುದ್ಧರಾಗಿರುವರು.

19 “ಸ್ತ್ರೀಗೆ ಅವಳ ತಿಂಗಳ ಮುಟ್ಟಿನಿಂದ ಸ್ರಾವವಿದ್ದರೆ, ಅವಳು ಏಳು ದಿನಗಳವರೆಗೆ ಅಶುದ್ಧಳಾಗಿರುವಳು. ಯಾವನಾದರೂ ಆಕೆಯನ್ನು ಮುಟ್ಟಿದರೆ, ಆ ವ್ಯಕ್ತಿಯೂ ಸಾಯಂಕಾಲದವರೆಗೆ ಆಶುದ್ಧನಾಗಿರುವನು. 20 ಅಲ್ಲದೆ, ಸ್ತ್ರೀಯು ತನ್ನ ಮುಟ್ಟಿನ ದಿನಗಳಲ್ಲಿ ಯಾವುದರ ಮೇಲೆ ಮಲಗಿದರೂ ಅದು ಅಶುದ್ಧವಾಗಿರುವುದು ಮತ್ತು ಆ ಸಮಯದಲ್ಲಿ ಆಕೆಯು ಯಾವುದರ ಮೇಲೆ ಕುಳಿತುಕೊಂಡರೂ ಅದು ಅಶುದ್ಧವಾಗಿರುವುದು. 21 ಯಾವನಾದರೂ ಅವಳ ಹಾಸಿಗೆಯನ್ನು ಮುಟ್ಟಿದರೆ, ಆ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 22 ಯಾವನಾದರೂ ಅವಳು ಕುಳಿತುಕೊಂಡಿದ್ದ ಯಾವ ವಸ್ತುವನ್ನಾದರೂ ಮುಟ್ಟಿದರೆ, ಆ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 23 ಅವನು ಅವಳ ಹಾಸಿಗೆಯನ್ನಾಗಲಿ ಅಥವಾ ಅವಳು ಕುಳಿತ್ತಿದ್ದ ಸ್ಥಳದಲ್ಲಿ ಇದ್ದ ಯಾವದನ್ನಾದರೂ ಮುಟ್ಟಿದರೆ ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

24 “ಪುರುಷನು ಸ್ತ್ರೀಯ ಮುಟ್ಟಿನ ಸಮಯದಲ್ಲಿ ಆಕೆಯೊಡನೆ ಲೈಂಗಿಕ ಸಂಪರ್ಕ ಹೊಂದಿದರೆ, ಆಗ ಅವನು ಏಳು ದಿನಗಳವರೆಗೆ ಅಶುದ್ಧನಾಗಿರುವನು. ಅವನು ಮಲಗಿಕೊಳ್ಳುವ ಪ್ರತಿಯೊಂದು ಹಾಸಿಗೆಯು ಅಶುದ್ಧವಾಗುವುದು.

25 “ಸ್ತ್ರೀಗೆ ತನ್ನ ಮುಟ್ಟಿನ ದಿನಗಳ ಹೊರತಾಗಿ ಅನೇಕ ದಿನಗಳವರೆಗೆ ರಕ್ತಸ್ರಾವವಾದರೆ ಅಥವಾ ಮುಟ್ಟಿನ ದಿನಗಳ ನಂತರ ಅವಳಿಗೆ ಸ್ರಾವವಾದರೆ, ಆಕೆಯು ತನ್ನ ಮುಟ್ಟಿನ ದಿನಗಳಲ್ಲಿ ಅಶುದ್ಧಳಾಗಿರುವಂತೆ, ಅಶುದ್ಧಳಾಗಿರುವಳು. ಅವಳಿಗೆ ಸ್ರಾವವಾಗುವ ದಿನಗಳೆಲ್ಲಾ ಅವಳು ಅಶುದ್ಧಳಾಗಿರುವಳು. 26 ಆ ಸ್ರಾವವಿರುವ ತನಕ ಅವಳು ಯಾವ ಹಾಸಿಗೆಯ ಮೇಲೆ ಮಲಗಿದರೂ, ಅದು ತಿಂಗಳ ಮುಟ್ಟಿನ ಕಾಲದಲ್ಲಿ ಅವಳು ಮಲಗಿರುವ ಹಾಸಿಗೆಯಂತೆಯೇ ಅಶುದ್ಧವಾಗಿರುವುದು. ಅವಳು ಯಾವುದರ ಮೇಲೆ ಕುಳಿತರೂ ಅದು ತಿಂಗಳ ಮುಟ್ಟಿನ ಕಾಲದಲ್ಲಿ ಅವಳು ಕುಳಿತಿದ್ದ ವಸ್ತುವಿನಂತೆಯೇ ಅಶುದ್ಧವಾಗಿರುವುದು. 27 ಯಾವನಾದರೂ ಆ ವಸ್ತುಗಳನ್ನು ಮುಟ್ಟಿದರೆ, ಆ ವ್ಯಕ್ತಿ ಅಶುದ್ಧನಾಗಿರುವನು. ಆ ವ್ಯಕ್ತಿಯು ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 28 ಸ್ತ್ರೀಗೆ ಸ್ರಾವವು ನಿಂತ ನಂತರ, ಅವಳು ಏಳು ದಿನಗಳವರೆಗೆ ಕಾಯಬೇಕು. ಅದರ ನಂತರ ಅವಳು ಶುದ್ಧಳಾಗಿರುವಳು. 29 ಬಳಿಕ ಎಂಟನೆಯ ದಿನದಲ್ಲಿ ಸ್ತ್ರೀಯು ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಳ್ಳಬೇಕು. ಅವಳು ಅವುಗಳನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಯಾಜಕನ ಬಳಿಗೆ ತರಬೇಕು. 30 ತರುವಾಯ ಯಾಜಕನು ಒಂದು ಪಕ್ಷಿಯನ್ನು ಪಾಪಪರಿಹಾರಕ ಯಜ್ಞವಾಗಿಯೂ ಇನ್ನೊಂದು ಪಕ್ಷಿಯನ್ನು ಸರ್ವಾಂಗಹೋಮವಾಗಿಯೂ ಅರ್ಪಿಸಬೇಕು. ಹೀಗೆ ಯಾಜಕನು ಅವಳಿಗಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು.

31 “ಆದ್ದರಿಂದ ಅಶುದ್ಧತ್ವದ ಕುರಿತು ನೀವು ಇಸ್ರೇಲರನ್ನು ಎಚ್ಚರಿಸಬೇಕು. ನೀವು ಜನರನ್ನು ಎಚ್ಚರಿಸದಿದ್ದರೆ ಅವರು ನನ್ನ ಪವಿತ್ರ ಗುಡಾರವನ್ನು ಅಶುದ್ಧಮಾಡಿ ಸಾವಿಗೀಡಾಗುವರು.”

32 ಸ್ರಾವವುಳ್ಳ ಜನರು ಅನುಸರಿಸಬೇಕಾದ ನಿಯಮಗಳು ಇವುಗಳೇ. ವೀರ್ಯಸ್ಖಲನದಿಂದ ಅಶುದ್ಧರಾದ ಪುರುಷರು ಅನುಸರಿಸಬೇಕಾದ ನಿಯಮಗಳು ಇವುಗಳೇ. 33 ತಮ್ಮ ತಿಂಗಳ ಮುಟ್ಟಿನಿಂದ ಅಶುದ್ಧರಾಗುವ ಸ್ತ್ರೀಯರು, ಸ್ರಾವವಾಗುವ ಗಂಡಸರು ಮತ್ತು ಸ್ತ್ರೀಯರು ಅನುಸರಿಸಬೇಕಾದ ನಿಯಮಗಳು ಇವುಗಳೇ. ಅಶುದ್ಧಳಾದ ಸ್ತ್ರೀಯೊಡನೆ ಮಲಗುವುದರಿಂದ ಅಶುದ್ಧನಾಗುವ ಯಾವನಾದರೂ ಅನುಸರಿಸಬೇಕಾದ ನಿಯಮಗಳು ಇವುಗಳೇ.

ಕೀರ್ತನೆಗಳು 18

ಯೆಹೋವನು ದಾವೀದನನ್ನು ಸೌಲನಿಂದಲೂ ಎಲ್ಲಾ ಶತ್ರು ಸೈನ್ಯಗಳಿಂದಲೂ ರಕ್ಷಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

18 ನನ್ನ ಬಲವಾಗಿರುವ ಯೆಹೋವನೇ,
    ನಿನ್ನನ್ನೇ ಪ್ರೀತಿಸುವೆನು!

ಯೆಹೋವನು ನನ್ನ ಬಂಡೆಯೂ[a] ನನ್ನ ಕೋಟೆಯೂ
    ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ
    ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.

ಯೆಹೋವನಿಗೆ ಸ್ತೋತ್ರವಾಗಲಿ!
    ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.
ಮರಣಕರವಾದ ಹಗ್ಗಗಳು ನನ್ನನ್ನು ಬಿಗಿದುಕೊಂಡವು.
    ನಾಶಪ್ರವಾಹವು ನನ್ನನ್ನು ಪಾತಾಳಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು.
ಪಾತಾಳದ ಹಗ್ಗಗಳು ನನ್ನನ್ನು ಬಿಗಿದುಕೊಂಡಿದ್ದವು.
    ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
ಆಗ ನಾನು ಸಹಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡೆನು;
    ನನ್ನ ದೇವರಿಗೆ ಮೊರೆಯಿಟ್ಟೆನು.
ಆತನು ತನ್ನ ಆಲಯದಲ್ಲಿ ನನ್ನ ಸ್ವರವನ್ನು ಕೇಳಿದನು;
    ನನ್ನ ಮೊರೆಗೆ ಕಿವಿಗೊಟ್ಟನು.
ಆಗ ಆತನಿಗೆ ಸಿಟ್ಟೇರಿದ್ದರಿಂದ ಭೂಮಿಯು ಗಡಗಡನೆ ನಡುಗಿತು;
    ಪರ್ವತಗಳ ಬುನಾದಿಗಳು ಕಂಪಿಸಿದವು.
ಆತನ ಮೂಗಿನಿಂದ ಹೊಗೆಯು ಬಂದಿತು;
    ಆತನ ಬಾಯಿಂದ ಅಗ್ನಿಜ್ವಾಲೆಯೂ ಬೆಂಕಿಯ ಕಿಡಿಗಳೂ ಬಂದವು.
ಆತನು ಆಕಾಶವನ್ನು ಹರಿದು ಕೆಳಗಿಳಿದು ಬಂದನು.
    ಆತನು ದಟ್ಟವಾದ ಕಪ್ಪುಮೋಡದ ಮೇಲೆ ನಿಂತುಕೊಂಡನು.
10 ಕೆರೂಬಿಗಳ ಮೇಲೆ ಆಸೀನನಾಗಿ
    ವಾಯುವೇ ತನ್ನ ರೆಕ್ಕೆಗಳೋ ಎಂಬಂತೆ ಹಾರಿಬಂದನು.
11 ಆತನನ್ನು ಗುಡಾರದಂತೆ ಆವರಿಸಿಕೊಂಡಿದ್ದ ದಟ್ಟವಾದ ಕಪ್ಪುಮೋಡದಲ್ಲಿ
    ಆತನು ಮರೆಯಾದನು.
12 ಬಳಿಕ, ಆತನ ಉಜ್ವಲವಾದ ಪ್ರಕಾಶವು ಮೋಡಗಳನ್ನು ಛೇದಿಸಿಕೊಂಡು ನುಗ್ಗಲು
    ಆಲಿಕಲ್ಲಿನ ಮಳೆಯು ಸುರಿಯಿತು; ಮಿಂಚುಗಳು ಹೊಳೆದವು.
13 ಯೆಹೋವನು ಆಕಾಶದಲ್ಲಿ ಗುಡುಗಿದನು;
    ಮಹೋನ್ನತ ದೇವರು ತನ್ನ ಧ್ವನಿಯನ್ನು ಕೇಳುವಂತೆ ಮಾಡಿದನು.
14 ಆತನು ಬಾಣಗಳನ್ನು[b] ಎಸೆದು ವೈರಿಗಳನ್ನು ಚದರಿಸಿಬಿಟ್ಟನು;
    ಸಿಡಿಲುಮಿಂಚುಗಳಿಂದ ಅವರನ್ನು ಕಳವಳಗೊಳಿಸಿದನು.

15 ಯೆಹೋವನೇ, ನೀನು ಆಜ್ಞಾಪಿಸಿದಾಗ
    ಬಿರುಗಾಳಿಯು ಬೀಸತೊಡಗಿ ನೀರನ್ನು ನೂಕಲು
ಸಮುದ್ರದ ತಳವೇ ಕಾಣಿಸಿತು.
    ಭೂಮಿಯ ಅಸ್ತಿವಾರಗಳೂ ಕಾಣಿಸಿದವು.

16 ಆತನು ಮೇಲಿನ ಲೋಕದಿಂದ ಕೈಚಾಚಿ ನನ್ನನ್ನು ರಕ್ಷಿಸಿದನು.
    ಆತನು ನನ್ನ ಕೈಹಿಡಿದು ನೀರಿನಿಂದ ಮೇಲೆತ್ತಿದನು.
17 ನನ್ನನ್ನು ದ್ವೇಷಿಸುವ ವೈರಿಗಳು
    ನನಗಿಂತ ಬಲವಾಗಿಯೂ ಶಕ್ತರಾಗಿಯೂ ಇದ್ದರು; ಆತನು ನನ್ನನ್ನು ಅವರಿಂದ ರಕ್ಷಿಸಿದನು.
18 ನಾನು ಕಷ್ಟದಲ್ಲಿದ್ದಾಗ ಅವರು ನನ್ನ ಮೇಲೆ ಆಕ್ರಮಣಮಾಡಲು,
    ಯೆಹೋವನು ನನಗೆ ಸಹಾಯಕನಾಗಿ ಬಂದನು.
19 ಆತನು ನನ್ನನ್ನು ಪ್ರೀತಿಸುವುದರಿಂದ ನನ್ನನ್ನು ರಕ್ಷಿಸಿದನು;
    ನನ್ನನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಬಂದನು.
20 ನಾನು ನಿರಪರಾಧಿಯಾಗಿದ್ದರಿಂದ ಯೆಹೋವನು ನನಗೆ ಪ್ರತಿಫಲ ನೀಡಿದನು;
    ನಾನು ತಪ್ಪನ್ನು ಮಾಡಿಲ್ಲದ ಕಾರಣ ನನಗೆ ಒಳ್ಳೆಯದನ್ನು ಮಾಡಿದನು.
21 ಯಾಕೆಂದರೆ ನಾನು ಯೆಹೋವನಿಗೆ ವಿಧೇಯನಾಗಿದ್ದೆನು;
    ನನ್ನ ದೇವರ ವಿರೋಧನಾಗಿ ನಾನು ಪಾಪಮಾಡಲಿಲ್ಲ.
22 ನಾನು ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ
    ಯಾವಾಗಲೂ ಜ್ಞಾಪಿಸಿಕೊಳ್ಳುವೆ.
23 ಆತನ ಎದುರಿನಲ್ಲಿ ನಿರ್ದೋಷಿಯಾಗಿದ್ದೆನು.
    ಪಾಪದಲ್ಲಿ ಬೀಳದಂತೆ ಎಚ್ಚರಿಕೆಯಾಗಿದ್ದೆನು.
24 ಯೆಹೋವನ ದೃಷ್ಟಿಯಲ್ಲಿ ನಾನು ನೀತಿವಂತನೂ ನಿರಪರಾಧಿಯೂ ಆಗಿರುವುದರಿಂದ
    ಆತನು ನನಗೆ ತಕ್ಕ ಪ್ರತಿಫಲವನ್ನು ಕೊಟ್ಟನು.

25 ಯೆಹೋವನೇ, ನಿನ್ನನ್ನು ನಿಜವಾಗಿಯೂ ಪ್ರೀತಿಸುವವರನ್ನು
    ನೀನು ಶಾಶ್ವತವಾದ ಪ್ರೀತಿಯಿಂದ ಪ್ರೀತಿಸುವೆ.
ನಿನಗೆ ನಂಬಿಗಸ್ತರಾಗಿರುವವರಿಗೆ
    ನೀನೂ ನಂಬಿಗಸ್ತನಾಗಿರುವೆ.
26 ನೀನು ಒಳ್ಳೆಯವರಿಗೂ ಶುದ್ಧರಿಗೂ ಒಳ್ಳೆಯವನಾಗಿಯೂ ಪರಿಶುದ್ಧನಾಗಿಯೂ ಇರುವೆ;
    ದುಷ್ಟರಿಗಾದರೋ ಶತ್ರುವಾಗಿರುವೆ.
27 ಯೆಹೋವನೇ, ನೀನು ದೀನರಿಗೆ ಸಹಾಯಮಾಡುವೆ.
    ಗರ್ವಿಷ್ಠರಿಗಾದರೋ ಅವಮಾನ ಮಾಡುವೆ.
28 ಯೆಹೋವನೇ, ನನ್ನ ದೀಪವನ್ನು ಹೊತ್ತಿಸುವವನು ನೀನೇ.
    ನನ್ನ ದೇವರು ನನ್ನ ಸುತ್ತಲೂ ಇರುವ ಕತ್ತಲೆಯನ್ನು ಬೆಳಕನ್ನಾಗಿ ಮಾಡುವನು.
29 ಯೆಹೋವನೇ, ನಿನ್ನ ಸಹಾಯದಿಂದ ನಾನು ಸೈನಿಕರೊಡನೆ ಓಡಬಲ್ಲೆ.
    ನನ್ನ ದೇವರ ಸಹಾಯದಿಂದ ನಾನು ಶತ್ರುಗಳ ಕೋಟೆಗಳನ್ನು ಹತ್ತುವೆನು.

30 ದೇವರ ಮಾರ್ಗಗಳು ನಿಷ್ಕಳಂಕವಾಗಿವೆ;
    ಯೆಹೋವನ ಮಾತುಗಳು ಸತ್ಯವಾಗಿವೆ.
    ಆತನು ತನ್ನಲ್ಲಿ ಭರವಸೆಯಿಟ್ಟಿರುವವರನ್ನು ಸಂರಕ್ಷಿಸುವನು.
31 ಯೆಹೋವನಲ್ಲದೆ ಬೇರೆ ಯಾವ ದೇವರೂ ಇಲ್ಲ.
    ನಮ್ಮ ದೇವರಲ್ಲದೆ ಬೇರೆ ಯಾವ ಬಂಡೆಯೂ ಇಲ್ಲ.
32 ಆತನೇ, ನನಗೆ ಬಲವನ್ನು ಕೊಡುವನು;
    ಶುದ್ಧ ಜೀವನವನ್ನು ನಡೆಸಲು ನನಗೆ ಸಹಾಯಮಾಡುವನು.
33 ಆತನು ನನ್ನ ಪಾದಗಳನ್ನು ಜಿಂಕೆಯಂತೆ[c] ವೇಗಗೊಳಿಸುವನು.
    ಆತನು ನನ್ನನ್ನು ಸ್ಥಿರಗೊಳಿಸುವನು; ಎತ್ತರವಾದ ಸ್ಥಳಗಳಲ್ಲಿ ಬೀಳದಂತೆ ದೃಢಪಡಿಸುವನು.
34 ಆತನು ನನ್ನನ್ನು ಯುದ್ಧಕ್ಕೆ ತರಬೇತಿಗೊಳಿಸುವನು.
    ಆದ್ದರಿಂದ ನನ್ನ ತೋಳುಗಳು ದೊಡ್ಡ ಬಿಲ್ಲಿನಿಂದ ಬಾಣವನ್ನು ಎಸೆಯಬಲ್ಲವು.
    ಆದ್ದರಿಂದ ನಾನು ಬಲವಾದ ಬಿಲ್ಲಿನ ತಂತಿಯನ್ನು ಎಸೆಯಬಲ್ಲೆ.

35 ದೇವರೇ, ನಿನ್ನ ವಿಜಯದ ಗುರಾಣಿಯನ್ನು ನೀನು ನನಗೆ ಕೊಟ್ಟಿರುವೆ.
    ನಿನ್ನ ಬಲಗೈ ನನಗೆ ಆಧಾರ ನೀಡುತ್ತದೆ.
    ನೀನು ನನ್ನನ್ನು ಪದೇಪದೇ ಬಲಗೊಳಿಸಿರುವೆ.
36 ದೇವರೇ, ನಾನು ಮುಗ್ಗರಿಸದೆ ನಡೆಯಲು
    ನನ್ನ ಕಾಲುಗಳನ್ನೂ ಹರಡುಗಳನ್ನೂ ಬಲಗೊಳಿಸು.

37 ಆಗ ನಾನು ಶತ್ರುಗಳನ್ನು ಬೆನ್ನಟ್ಟಿ ಹಿಡಿಯಲು ಶಕ್ತನಾಗುವೆ.
    ಅವರನ್ನು ನಾಶಮಾಡುವ ತನಕ ನಾನು ಹಿಂತಿರುಗಿ ಬರುವುದಿಲ್ಲ.
38 ನಾನು ನನ್ನ ಶತ್ರುಗಳನ್ನು ಸೋಲಿಸಿ ಅವರನ್ನು ಏಳಲಾರದಂತೆ ಮಾಡುವೆನು;
    ನನ್ನ ಶತ್ರುಗಳು ನನ್ನ ಪಾದಗಳ ಕೆಳಗೇ ಇರುವರು.
39 ದೇವರೇ, ಯುದ್ಧದಲ್ಲಿ ನೀನು ನನ್ನನ್ನು ಬಲಿಷ್ಠನನ್ನಾಗಿ ಮಾಡಿದೆ;
    ಎಲ್ಲಾ ಶತ್ರುಗಳು ನನ್ನ ಎದುರಿನಲ್ಲಿ ಬೀಳುವಂತೆ ಮಾಡಿದೆ.
40 ನನ್ನ ಶತ್ರುಗಳಿಗೆ ಕತ್ತಿನ ಮೇಲೆ ಹೊಡೆದು ಕೆಳಗುರುಳಿಸಲು
    ನೀನು ನನಗೆ ಅವಕಾಶನೀಡಿದೆ.
41 ನನ್ನ ಶತ್ರುಗಳು ಸಹಾಯಕ್ಕಾಗಿ ಕೂಗಿಕೊಂಡರು.
    ಆದರೆ ಅವರನ್ನು ರಕ್ಷಿಸಲು ಯಾರೂ ಇರಲಿಲ್ಲ.
ಅವರು ಯೆಹೋವನನ್ನೂ ಕೂಗಿಕೊಂಡರು;
    ಆದರೆ ಆತನೂ ಅವರಿಗೆ ಉತ್ತರಿಸಲಿಲ್ಲ.
42 ನಾನು ನನ್ನ ಶತ್ರುಗಳನ್ನು ಹೊಡೆದು ತುಂಡುತುಂಡು ಮಾಡುವೆನು; ಜಜ್ಜಿ ಪುಡಿಪುಡಿ ಮಾಡುವೆನು;
    ಗಾಳಿ ಬಡಿದುಕೊಂಡು ಹೋಗುವ ಧೂಳಿನಂತೆ ಅವರಾಗುವರು.

43 ನನ್ನ ವಿರೋಧಿಗಳಿಂದ ನನ್ನನ್ನು ರಕ್ಷಿಸು.
    ಆ ಜನಾಂಗಗಳಿಗೆ ನನ್ನನ್ನು ನಾಯಕನನ್ನಾಗಿ ಮಾಡು.
    ನನಗೆ ಗೊತ್ತಿಲ್ಲದವರೂ ನನ್ನ ಸೇವೆಮಾಡುವರು.
44 ಅವರು ನನ್ನ ಕುರಿತಾಗಿ ಕೇಳಿದ ಕೂಡಲೇ ವಿಧೇಯರಾಗುವರು.
    ಆ ವಿದೇಶಿಯರು ನನ್ನ ವಿಷಯದಲ್ಲಿ ಭಯದಿಂದಿರುವರು.
45 ಆ ವಿದೇಶಿಯರು ಧೈರ್ಯವಿಲ್ಲದವರಾಗಿ ನಡುಗುತ್ತಾ
    ತಮ್ಮ ಕೋಟೆಗಳಿಂದ ಬರುವರು.

46 ಯೆಹೋವನು ಜೀವಸ್ವರೂಪನಾಗಿದ್ದಾನೆ.
    ನನ್ನ ಬಂಡೆಯಾಗಿರುವ ಆತನನ್ನು ಸ್ತುತಿಸುವೆನು.
    ನನ್ನನ್ನು ರಕ್ಷಿಸುವ ದೇವರು ಮಹೋನ್ನತನಾಗಿದ್ದಾನೆ.
47 ದೇವರು ನನ್ನ ವೈರಿಗಳನ್ನು ದಂಡಿಸಿ
    ಅವರನ್ನು ನನಗೆ ಅಧೀನಪಡಿಸಿದ್ದಾನೆ.
48     ಯೆಹೋವನೇ, ಶತ್ರುಗಳಿಂದ ನೀನು ನನ್ನನ್ನು ಕಾಪಾಡಿದೆ.

ನನ್ನ ವಿರೋಧಿಗಳನ್ನು ಸೋಲಿಸಲು ನೀನು ನನಗೆ ಸಹಾಯಮಾಡಿದೆ;
    ಕ್ರೂರಿಗಳಿಂದ ನನ್ನನ್ನು ರಕ್ಷಿಸಿದೆ.
49 ಯೆಹೋವನೇ, ಈ ಕಾರಣದಿಂದ ನಾನು ನಿನ್ನನ್ನು ಜನಾಂಗಗಳ ಮಧ್ಯದಲ್ಲಿ ಸ್ತುತಿಸುವೆನು;
    ನಿನ್ನ ಹೆಸರನ್ನು ಕುರಿತು ಹಾಡುಗಳನ್ನು ಹಾಡುವೆನು.

50 ಆತನು ತಾನು ನೇಮಿಸಿದ ರಾಜನಿಗೆ ಅನೇಕ ಯುದ್ಧಗಳಲ್ಲಿ ಜಯವನ್ನು ದಯಪಾಲಿಸುವನು;
    ತಾನು ಅಭಿಷೇಕಿಸಿದ ರಾಜನಿಗೆ ಶಾಶ್ವತವಾದ ಪ್ರೀತಿಯನ್ನು ತೋರುವನು.
    ಆತನು ದಾವೀದನಿಗೂ ಅವನ ಸಂತತಿಯವರಿಗೂ ಎಂದೆಂದಿಗೂ ನಂಬಿಗಸ್ತನಾಗಿರುವನು.

ಜ್ಞಾನೋಕ್ತಿಗಳು 29

29 ಪದೇಪದೇ ಎಚ್ಚರಿಸಿದರೂ ಮೊಂಡನಾಗಿರುವವನು ಪಕ್ಕನೆ ಏಳದ ಹಾಗೆ ನಾಶವಾಗುವನು.

ಅಧಿಪತಿಯು ಒಳ್ಳೆಯವನಾಗಿರುವಾಗ ಜನರೆಲ್ಲರೂ ಸಂತೋಷವಾಗಿರುವರು. ಕೆಡುಕನು ಆಳುವಾಗ ಜನರೆಲ್ಲರೂ ಸಂಕಟಪಡುವರು.

ಜ್ಞಾನವನ್ನು ಪ್ರೀತಿಸುವವನ ತಂದೆ ಬಹು ಸಂತೋಷವಾಗಿರುವನು. ಆದರೆ ಸೂಳೆಯರ ಸಹವಾಸ ಮಾಡುವವನು ತನ್ನ ಐಶ್ವರ್ಯವನ್ನು ಕಳೆದುಕೊಳ್ಳುವನು.

ರಾಜನು ನ್ಯಾಯವಂತನಾಗಿದ್ದರೆ ದೇಶವು ಬಲಿಷ್ಠವಾಗಿರುವುದು. ರಾಜನು ತನ್ನ ಐಶ್ವರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ವಿಪರೀತ ತೆರಿಗೆಗಳನ್ನು ಹಾಕಿದರೆ, ದೇಶವು ಹಾಳಾಗುವುದು.

ನೆರೆಯವನ ಮುಖಸ್ತುತಿ ಮಾಡುವವನು ಅವನ ಕಾಲಿಗೆ ಬಲೆಯನ್ನು ಒಡ್ಡುತ್ತಿದ್ದಾನೆ.

ಕೆಡುಕರು ತಮ್ಮ ಪಾಪದಿಂದಲೇ ಸಿಕ್ಕಿಕೊಳ್ಳುವರು. ಒಳ್ಳೆಯವರಾದರೋ ಸಂತೋಷದಿಂದ ಹಾಡುವರು.

ನೀತಿವಂತರು ಬಡವರಿಗೆ ಒಳ್ಳೆಯದನ್ನು ಮಾಡಲು ಇಷ್ಟಪಡುತ್ತಾರೆ. ಕೆಡುಕರಾದರೋ ಬಡವರನ್ನು ಲಕ್ಷಿಸುವುದಿಲ್ಲ.

ದುರಾಭಿಮಾನಿಗಳು ಇಡೀ ಪಟ್ಟಣವನ್ನೇ ಬೇಸರಗೊಳಿಸುವರು. ಜ್ಞಾನಿಗಳಾದರೋ ಕೋಪದ ಜ್ವಾಲೆಗಳನ್ನು ನಂದಿಸುವರು.

ಜ್ಞಾನಿಯು ಮೂಢನೊಂದಿಗೆ ನ್ಯಾಯಾಲಯಕ್ಕೆ ಹೋದರೆ, ಮೂಢನು ಕೇವಲ ಆರ್ಭಟಿಸುವನು; ಹುಚ್ಚುಚ್ಚಾಗಿ ಕೂಗಾಡುವನು; ಅವರಿಗೆ ಪರಿಹಾರ ದೊರೆಯುವುದಿಲ್ಲ.

10 ಕೊಲೆಗಾರರು ಯಥಾರ್ಥವಂತರನ್ನು ಯಾವಾಗಲೂ ದ್ವೇಷಿಸುವರು. ಆ ಕೆಡುಕರು ಅವರನ್ನು ಕೊಲ್ಲಬಯಸುವರು.

11 ಮೂಢನು ತನ್ನ ಕೋಪವನ್ನೆಲ್ಲಾ ವ್ಯಕ್ತಪಡಿಸುವನು; ಆದರೆ ಜ್ಞಾನಿಯು ತನ್ನನ್ನು ಹತೋಟಿಯಲ್ಲಿಟ್ಟುಕೊಳ್ಳುವನು.

12 ಅಧಿಪತಿಯು ಸುಳ್ಳುಮಾತುಗಳಿಗೆ ಕಿವಿಗೊಟ್ಟರೆ, ಅವನ ಅಧೀನದಲ್ಲಿರುವ ಅಧಿಕಾರಿಗಳೆಲ್ಲರು ಕೆಡುಕರಾಗುವರು.

13 ಒಂದು ರೀತಿಯಲ್ಲಿ ಬಡವನಿಗೂ ಅವನನ್ನು ಕುಗ್ಗಿಸುವವನಿಗೂ ವ್ಯತ್ಯಾಸವಿಲ್ಲ; ಅವರಿಬ್ಬರಿಗೂ ಜೀವಕೊಟ್ಟಾತನು ಯೆಹೋವನೇ; ಅವರಿಬ್ಬರನ್ನು ಸೃಷ್ಟಿಮಾಡಿದವನು ಯೆಹೋವನೇ.

14 ಬಡಜನರಿಗೆ ನ್ಯಾಯದೊರಕಿಸುವ ರಾಜನು ಬಹುಕಾಲ ಆಳುವನು.

15 ಶಿಕ್ಷೆಯು ಮತ್ತು ತಿದ್ದುಪಡಿಯು ಮಕ್ಕಳನ್ನು ಜ್ಞಾನಿಗಳನ್ನಾಗಿ ಮಾಡುತ್ತವೆ. ಶಿಸ್ತುಪಡಿಸಿಲ್ಲದ ಯೌವನಸ್ಥನು ತನ್ನ ತಾಯಿಯನ್ನು ನಾಚಿಕೆಗೆ ಗುರಿಪಡಿಸುತ್ತಾನೆ.

16 ಕೆಡುಕರು ದೇಶವನ್ನು ಆಳುತ್ತಿದ್ದರೆ, ಎಲ್ಲೆಲ್ಲೂ ಪಾಪವಿರುವುದು. ಆದರೆ ಒಳ್ಳೆಯವರಿಗೆ ಕೊನೆಯಲ್ಲಿ ಜಯವಾಗುವುದು.

17 ನಿನ್ನ ಮಗನನ್ನು ತಿದ್ದಿ ಸರಿಪಡಿಸು; ಆಗ ನೀನು ಅವನ ಬಗ್ಗೆ ಹೆಮ್ಮೆಯಿಂದಿರುವೆ. ಅವನು ನಿನ್ನನ್ನು ತೃಪ್ತಿಪಡಿಸುವನು.

18 ಪ್ರವಾದಿಗಳಿಗೆ ದರ್ಶನವಾಗದಿದ್ದರೆ ಜನರು ಹತೋಟಿ ತಪ್ಪುತ್ತಾರೆ. ಆದರೆ ದೇವರ ಕಟ್ಟಳೆಗೆ ವಿಧೇಯನಾಗಿರುವವನು ಸಂತೋಷವಾಗಿರುವನು.

19 ನೀನು ಸೇವಕನಿಗೆ ಕೇವಲ ಮಾತಿನಿಂದ ಹೇಳಿದರೆ ಅವನು ಪಾಠವನ್ನು ಕಲಿತುಕೊಳ್ಳುವುದಿಲ್ಲ. ಅವನು ನಿನ್ನ ಮಾತುಗಳನ್ನು ಅರ್ಥಮಾಡಿಕೊಂಡರೂ ವಿಧೇಯನಾಗುವುದಿಲ್ಲ.

20 ವಿವೇಚಿಸದೆ ಮಾತಾಡುವವನನ್ನು ನೀನು ಕಂಡಿರುವಿಯೋ? ಅವನಿಗಿಂತಲೂ ಮೂಢನಿಗೇ ಹೆಚ್ಚು ನಿರೀಕ್ಷೆಯಿದೆ.

21 ನೀನು ಚಿಕ್ಕಂದಿನಿಂದಲೇ ಗುಲಾಮನನ್ನು ಕೋಮಲನಾಗಿ ಸಾಕಿದರೆ, ಕೊನೆಯಲ್ಲಿ ಅವನು ಮೊಂಡನಾಗಿರುವನು.

22 ಕೋಪಿಷ್ಠನು ಜಗಳ ಎಬ್ಬಿಸುವನು. ಉದ್ರೇಕಗೊಂಡವನು ಅನೇಕ ಪಾಪಗಳನ್ನು ಮಾಡುವನು.

23 ದುರಾಭಿಮಾನಿಯನ್ನು ಅವನ ದುರಾಭಿಮಾನವೇ ನಾಶಪಡಿಸುವುದು. ಆದರೆ ದೀನನನ್ನು ಬೇರೆ ಜನರು ಗೌರವಿಸುವರು.

24 ಕಳ್ಳನ ಸಂಗಡಿಗನು ತನಗೆ ತಾನೆ ಕಡುವೈರಿ. ಸಾಕ್ಷಿ ಹೇಳದ ಜನರಿಗೆ ಬರತಕ್ಕ ಶಾಪದ ಬಗ್ಗೆ ಕೇಳಿದರೂ ಅವನು ಹೇಳುವುದಿಲ್ಲ.

25 ಮನುಷ್ಯರ ಭಯ ಉರುಲಾಗಬಹುದು. ಆದರೆ ಯೆಹೋವನ ಮೇಲಿರುವ ಭರವಸೆ ಕ್ಷೇಮವಾಗಿಡುವುದು.

26 ಅನೇಕರು ಅಧಿಪತಿಯಿಂದ ಸಹಾಯ ಬಯಸುವರು. ಆದರೆ ನ್ಯಾಯ ದೊರೆಯುವುದು ಯೆಹೋವನಿಂದಲೇ.

27 ಒಳ್ಳೆಯವರಿಗೆ ಯಥಾರ್ಥರಲ್ಲದವರು ಅಸಹ್ಯ. ಕೆಡುಕರು ಯಥಾರ್ಥರನ್ನು ದ್ವೇಷಿಸುವರು.

2 ಥೆಸಲೋನಿಕದವರಿಗೆ 3

ನಮಗೋಸ್ಕರ ಪ್ರಾರ್ಥಿಸಿ

ಸಹೋದರ ಸಹೋದರಿಯರೇ, ನಮಗೋಸ್ಕರ ಪ್ರಾರ್ಥಿಸಿರಿ. ಪ್ರಭುವಿನ ಉಪದೇಶವು ತ್ವರಿತಗತಿಯಲ್ಲಿ ಹಬ್ಬಲೆಂದು ಪ್ರಾರ್ಥಿಸಿ. ನಿಮ್ಮಂತೆಯೇ ಇತರ ಜನರು ಈ ಉಪದೇಶವನ್ನು ಗೌರವಿಸುವಂತೆ ಪ್ರಾರ್ಥಿಸಿ. ಕೆಟ್ಟವರಾದ ಮತ್ತು ದುಷ್ಟರಾದ ಜನರ ಕೈಯಿಂದ ನಮ್ಮನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿ. (ಪ್ರಭುವಿನಲ್ಲಿ ಜನರೆಲ್ಲರೂ ನಂಬಿಕೆಯಿಟ್ಟಿಲ್ಲ.)

ಆದರೆ ಪ್ರಭುವು ನಂಬಿಗಸ್ತನು. ಆತನು ನಿಮ್ಮನ್ನು ಬಲಗೊಳಿಸುವನು ಮತ್ತು ಕೆಡುಕನಿಂದ (ಸೈತಾನನಿಂದ) ನಿಮ್ಮನ್ನು ರಕ್ಷಿಸುವನು. ನಾವು ನಿಮಗೆ ತಿಳಿಸಿದ ಸಂಗತಿಗಳನ್ನು ನೀವು ಮಾಡುತ್ತಿದ್ದೀರೆಂಬ ಭರವಸೆಯನ್ನು ಪ್ರಭುವೇ ನಮಗೆ ಕೊಟ್ಟಿದ್ದಾನೆ. ನೀವು ಇನ್ನು ಮುಂದೆಯೂ ಇವುಗಳನ್ನು ಮಾಡುವಿರೆಂದು ನಮಗೆ ತಿಳಿದದೆ. ದೇವರ ಪ್ರೀತಿಯ ಕಡೆಗೂ ಮತ್ತು ಕ್ರಿಸ್ತನ ತಾಳ್ಮೆಯ ಕಡೆಗೂ ನಿಮ್ಮ ಹೃದಯಗಳನ್ನು ಪ್ರಭುವೇ ಮುನ್ನಡೆಸಲಿ ಎಂದು ನಾವು ಪ್ರಾರ್ಥಿಸುತ್ತೇವೆ.

ಪ್ರತಿಯೊಬ್ಬರು ದುಡಿಯಲಿ

ಸಹೋದರ ಸಹೋದರಿಯರೇ, ಕೆಲಸ ಮಾಡದ ವಿಶ್ವಾಸಿಯಿಂದ ನೀವು ದೂರವಿರಬೇಕೆಂದು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಅಧಿಕಾರದಿಂದ ನಿಮಗೆ ಆಜ್ಞಾಪಿಸುತ್ತಿದ್ದೇವೆ. ನಾವು ನೀಡಿದ ಉಪದೇಶವನ್ನು ಅವರು ಅನುಸರಿಸುವುದಿಲ್ಲ. ನಾವು ಜೀವಿಸುವಂತೆಯೇ ನೀವೂ ಜೀವಿಸಬೇಕೆಂದು ನಿಮಗೆ ಗೊತ್ತಿದೆ. ನಾವು ನಿಮ್ಮ ಜೊತೆಯಲ್ಲಿದ್ದಾಗ ಸೋಮಾರಿಗಳಾಗಿರಲಿಲ್ಲ; ಹಣ ಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ. ನಿಮ್ಮಲ್ಲಿ ಯಾರಿಗೂ ತೊಂದರೆಯಾಗಬಾರದೆಂದು ಹಗಲಿರುಳು ಎಡೆಬಿಡದೆ ಕೆಲಸ ಮಾಡಿದೆವು. “ನಮಗೆ ಸಹಾಯ ಮಾಡಿ” ಎಂದು ನಿಮ್ಮನ್ನು ಕೇಳಲು ನಮಗೆ ಹಕ್ಕಿತ್ತು. ಆದರೆ ನಮ್ಮ ಪೋಷಣೆಗೆ ಬೇಕಾದದ್ದನ್ನು ನಾವೇ ದುಡಿದು ಸಂಪಾದಿಸಿದೆವು, ಏಕೆಂದರೆ ನಿಮಗೆ ನಾವು ಮಾದರಿಯಾಗಬೇಕೆಂದಿದ್ದೆವು. 10 ನಾವು ನಿಮ್ಮ ಸಂಗಡವಿದ್ದಾಗ, “ಕೆಲಸ ಮಾಡದವನು ಊಟವನ್ನೂ ಮಾಡಕೂಡದು” ಎಂಬ ನಿಯಮವನ್ನು ವಿಧಿಸಿದೆವು.

11 ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಜೀವನದಲ್ಲಿ ಆಸಕ್ತರಾಗಿದ್ದಾರೆ ಎಂಬುದನ್ನು ಕೇಳಿದ್ದೇವೆ. 12 ತಮ್ಮ ಕೆಲಸವನ್ನು ತಾವು ನೋಡಿಕೊಳ್ಳುವಂತೆ ಅವರಿಗೆ ಆಜ್ಞಾಪಿಸುತ್ತಿದ್ದೇವೆ. ಅವರೇ ದುಡಿದು ತಮ್ಮ ಆಹಾರವನ್ನು ಸಂಪಾದಿಸಿಕೊಳ್ಳಬೇಕೆಂದು ಆಜ್ಞಾಪಿಸಿ ಪ್ರಭುವಾದ ಯೇಸು ಕ್ರಿಸ್ತನಲ್ಲಿ ಬೇಡಿಕೊಳ್ಳುತ್ತೇವೆ. 13 ಸಹೋದರ ಸಹೋದರಿಯರೇ, ಒಳ್ಳೆಯದನ್ನು ಮಾಡುವುದರಲ್ಲಿ ಎಂದಿಗೂ ಬೇಸರಗೊಳ್ಳಬೇಡಿ.

14 ಈ ಪತ್ರದ ಮೂಲಕ ನಿಮಗೆ ತಿಳಿಸಿರುವ ಮಾತುಗಳಿಗೆ ಯಾವನಾದರೂ ವಿಧೇಯನಾಗದಿದ್ದರೆ, ಅವನು ಯಾರೆಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ. ಅವನ ಸಹವಾಸಮಾಡಬೇಡಿ. ಆಗ ಅವನಿಗೆ ನಾಚಿಕೆ ಆಗಬಹುದು. 15 ಆದರೆ ಅವನನ್ನು ವೈರಿಯೆಂದು ಎಣಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿ ಹೇಳಿರಿ.

ಕೊನೆಯ ಮಾತುಗಳು

16 ಶಾಂತಿದಾಯಕನಾದ ಪ್ರಭುವು ಎಲ್ಲಾ ಕಾಲಗಳಲ್ಲಿಯೂ ಮತ್ತು ಎಲ್ಲಾ ವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಪ್ರಭುವು ನಿಮ್ಮೆಲ್ಲರೊಂದಿಗಿರಲಿ.

17 ಪೌಲನಾದ ನಾನು ಈಗ ನನ್ನ ಕೈಬರಹದಿಂದ ಈ ಪತ್ರವನ್ನು ಮುಕ್ತಾಯಗೊಳಿಸುತ್ತೇನೆ. ನನ್ನ ಪತ್ರಗಳಿಗೆಲ್ಲಾ ಇದೇ ನನ್ನ ಗುರುತು. ಇದೇ ನನ್ನ ಕೈ ಬರಹ.

18 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International