Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 13

ಚರ್ಮರೋಗಗಳ ಕುರಿತು ನಿಯಮಗಳು

13 ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ: “ಒಬ್ಬ ಮನುಷ್ಯನ ಮೇಲೆ ಊತವಾಗಲಿ ಗುಳ್ಳೆಯಾಗಲಿ ಹೊಳೆಯುವ ಮಚ್ಚೆಯಾಗಲಿ ಉಂಟಾಗಿ ಮಚ್ಚೆಯು ಕುಷ್ಠರೋಗದಂತೆ ಕಂಡುಬಂದರೆ, ಅವನನ್ನು ಯಾಜಕನಾದ ಆರೋನನ ಬಳಿಗೆ ಅಥವಾ ಯಾಜಕರಾದ ಅವನ ಪುತ್ರರಲ್ಲಿ ಒಬ್ಬನ ಬಳಿಗೆ ಕರೆದುಕೊಂಡು ಬರಬೇಕು. ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ನೋಡಬೇಕು. ಮಚ್ಚೆಯಲ್ಲಿರುವ ರೋಮವು ಬೆಳ್ಳಗಾಗಿದ್ದರೆ ಮತ್ತು ಮಚ್ಚೆಯು ಅವನ ಚರ್ಮಕ್ಕಿಂತ ತಗ್ಗಾಗಿದ್ದರೆ ಅದು ಕುಷ್ಠರೋಗವಾಗಿದೆ. ಯಾಜಕನು ಅವನನ್ನು ಪರೀಕ್ಷಿಸಿದ ನಂತರ ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು.

“ಕೆಲವು ಬಾರಿ ಒಬ್ಬ ವ್ಯಕ್ತಿಯ ಚರ್ಮದ ಮೇಲೆ ಬಿಳಿ ಮಚ್ಚೆ ಇರುತ್ತದೆ. ಆದರೆ ಮಚ್ಚೆಯು ಚರ್ಮಕ್ಕಿಂತ ತಗ್ಗಾಗಿರದಿದ್ದರೆ ಮತ್ತು ಅದರ ರೋಮ ಬೆಳ್ಳಗಾಗಿಲ್ಲದಿದ್ದರೆ ಯಾಜಕನು ಅವನನ್ನು ಬೇರೆ ಜನರಿಂದ ಏಳು ದಿನಗಳವರೆಗೆ ಪ್ರತ್ಯೇಕಿಸಬೇಕು. ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸಬೇಕು. ಮಚ್ಚೆಯು ಬದಲಾಗದೆ ಚರ್ಮದ ಮೇಲೆ ಹರಡಲಿಲ್ಲವೆಂದು ಯಾಜಕನು ಕಂಡರೆ, ಯಾಜಕನು ಅವನನ್ನು ಇನ್ನೂ ಏಳು ದಿನಗಳವರೆಗೆ ಇತರ ಜನರಿಂದ ಪ್ರತ್ಯೇಕಿಸಬೇಕು. ಏಳು ದಿನಗಳ ನಂತರ ಯಾಜಕನು ಮತ್ತೆ ಅವನನ್ನು ನೋಡಬೇಕು. ಮಚ್ಚೆಯು ಮೊಬ್ಬಾಗಿ ಚರ್ಮದಲ್ಲಿ ಹರಡದೆ ಇದ್ದರೆ, ಆಗ ಯಾಜಕನು ಅವನನ್ನು ಶುದ್ಧನೆಂದು ಪ್ರಕಟಿಸಬೇಕು. ಯಾಕೆಂದರೆ ಮಚ್ಚೆಯು ಕೇವಲ ಗುಳ್ಳೆಯಾಗಿದೆ. ಆ ವ್ಯಕ್ತಿ ತನ್ನ ಬಟ್ಟೆಗಳನ್ನು ಒಗೆದುಕೊಂಡು ತಿರುಗಿ ಶುದ್ಧನಾಗುವನು.

“ಆದರೆ ಆ ವ್ಯಕ್ತಿಯ ಗುಳ್ಳೆಯು ಚರ್ಮದ ಮೇಲೆ ಹೆಚ್ಚಾಗಿ ಹರಡಿದರೆ, ಆ ವ್ಯಕ್ತಿಯು ಯಾಜಕನ ಬಳಿಗೆ ಮತ್ತೆ ಬರಬೇಕು. ಯಾಜಕನು ಪರೀಕ್ಷಿಸಿದಾಗ ಗುಳ್ಳೆಯು ಚರ್ಮದ ಮೇಲೆ ಹರಡಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಕುಷ್ಠರೋಗವಾಗಿದೆ.

“ಒಬ್ಬನಿಗೆ ಕುಷ್ಠವಿದ್ದರೆ, ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು. 10 ಯಾಜಕನು ಆ ವ್ಯಕ್ತಿಯನ್ನು ನೋಡಬೇಕು. ಚರ್ಮದ ಮೇಲೆ ಬೆಳ್ಳಗಾದ ಊತವಿದ್ದರೆ, ರೋಮವು ಬೆಳ್ಳಗಾಗಿದ್ದರೆ ಮತ್ತು ಚರ್ಮವು ಊತದಿಂದ ಹಸಿಯಾಗಿ ಕಂಡರೆ, 11 ಅದು ಬಹಳ ಕಾಲದಿಂದ ಅವನ ಚರ್ಮದಲ್ಲಿರುವ ಕುಷ್ಠರೋಗವಾಗಿದೆ. ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಯಾಜಕನು ಅವನನ್ನು ಪರೀಕ್ಷಿಸುವುದಕ್ಕಾಗಿ ಸ್ವಲ್ಪ ಸಮಯದವರೆಗೆ ಜನರಿಂದ ಪ್ರತ್ಯೇಕಿಸುವುದಿಲ್ಲ. ಯಾಕೆಂದರೆ ಆ ವ್ಯಕ್ತಿಯು ಈಗಾಗಲೇ ಅಶುದ್ಧನಾಗಿದ್ದಾನೆ.

12 “ಕೆಲವು ಬಾರಿ ಚರ್ಮರೋಗವು ಒಬ್ಬನ ಮೈಯೆಲ್ಲಾ ಹರಡಿಕೊಳ್ಳುವುದು. ಚರ್ಮರೋಗವು ಅವನನ್ನು ತಲೆಯಿಂದ ಅಂಗಾಲಿನವರೆಗೂ ಮುಚ್ಚಿಕೊಳ್ಳುವುದು. ಯಾಜಕನು ಆ ವ್ಯಕ್ತಿಯ ಇಡೀ ದೇಹವನ್ನು ನೋಡಬೇಕು. 13 ಚರ್ಮರೋಗವು ಇಡೀ ದೇಹವನ್ನು ವ್ಯಾಪಿಸಿ ಆ ವ್ಯಕ್ತಿಯ ಚರ್ಮವು ಬಿಳಿ ಬಣ್ಣಕ್ಕೆ ತಿರುಗಿರುವುದನ್ನು ಯಾಜಕನು ಕಂಡರೆ, ಆ ವ್ಯಕ್ತಿಯು ಶುದ್ಧನೆಂದು ಯಾಜಕನು ಪ್ರಕಟಿಸಬೇಕು. 14 ಆದರೆ ಆ ವ್ಯಕ್ತಿಯ ಚರ್ಮವು ಹಸಿಯಾಗಿದ್ದರೆ, ಆ ವ್ಯಕ್ತಿಯು ಶುದ್ಧನಲ್ಲ. 15 ಯಾಜಕನು ಹಸಿಯಾದ ಚರ್ಮವನ್ನು ನೋಡಿದಾಗ, ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಹಸಿಯಾದ ಚರ್ಮವು ಶುದ್ಧವಲ್ಲ. ಅದು ಕುಷ್ಠರೋಗವಾಗಿದೆ.

16 “ಹಸಿಯಾದ ಚರ್ಮವು ಬದಲಾಗಿ ಬಿಳಿಯಾದರೆ, ಆಗ ಆ ವ್ಯಕ್ತಿ ಯಾಜಕನ ಬಳಿಗೆ ಬರಬೇಕು. 17 ಯಾಜಕನು ಅವನನ್ನು ಪರೀಕ್ಷಿಸಬೇಕು. ಮಚ್ಚೆಯು ಬೆಳ್ಳಗಾಗಿದ್ದರೆ, ಯಾಜಕನು ಆ ವ್ಯಕ್ತಿಯನ್ನು ಶುದ್ಧನೆಂದು ಪ್ರಕಟಿಸಬೇಕು. ಆ ವ್ಯಕ್ತಿಯು ಶುದ್ಧನಾಗಿದ್ದಾನೆ.

18 “ಒಬ್ಬನ ಚರ್ಮದ ಮೇಲೆ ಹುಣ್ಣು ಎದ್ದಿದ್ದು ವಾಸಿಯಾಗಿದ್ದಿರಬಹುದು. 19 ಆದರೆ ಹುಣ್ಣಿದ್ದ ಜಾಗದಲ್ಲಿ ಬೆಳ್ಳಗಾದ ಊತವಿದ್ದರೆ ಅಥವಾ ಕೆಂಪುಬಿಳುಪು ಮಿಶ್ರವಾದ ಹೊಳೆಯುವ ಮಚ್ಚೆಯಿದ್ದರೆ, ಚರ್ಮದ ಈ ಭಾಗವನ್ನು ಯಾಜಕನಿಗೆ ತೋರಿಸಬೇಕು. 20 ಯಾಜಕನು ಅದನ್ನು ಪರೀಕ್ಷಿಸಬೇಕು. ಅದು ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಅದರ ಮೇಲಿರುವ ರೋಮವು ಬೆಳ್ಳಗಾಗಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಆ ಕಲೆಯು ಕುಷ್ಠದ ಸೋಂಕಾಗಿದೆ. ಹುಣ್ಣಿನಿಂದ ಕುಷ್ಠ ಬಂದಿದೆ. 21 ಆದರೆ ಯಾಜಕನು ಮಚ್ಚೆಯನ್ನು ನೋಡಿದಾಗ ಅದರಲ್ಲಿ ಬಿಳಿರೋಮಗಳು ಇಲ್ಲದಿದ್ದರೆ, ಮಚ್ಚೆಯು ಚರ್ಮಕ್ಕಿಂತ ತಗ್ಗಾಗಿಲ್ಲದೆ ಮೊಬ್ಬಾಗಿ ಹೋಗಿದ್ದರೆ, ಆಗ ಯಾಜಕನು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಪ್ರತ್ಯೇಕಿಸಬೇಕು. 22 ಮಚ್ಚೆಯು ಚರ್ಮದಲ್ಲಿ ಹರಡಿದರೆ, ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಸೋಂಕುರೋಗವಾಗಿದೆ. 23 ಆದರೆ ಹೊಳೆಯುವ ಮಚ್ಚೆಯು ತನ್ನ ಸ್ಥಳದಲ್ಲಿಯೇ ಇದ್ದು ಹರಡದಿದ್ದರೆ, ಆಗ ಅದು ಕೇವಲ ಹುಣ್ಣಿನ ಮಚ್ಚೆಯಾಗಿದೆ. ಯಾಜಕನು ಅವನನ್ನು ಶುದ್ಧನೆಂದು ಪ್ರಕಟಿಸಬೇಕು.

24-25 “ಒಬ್ಬನ ದೇಹದ ಚರ್ಮದಲ್ಲಿ ಬೆಂಕಿಯಿಂದ ಸುಟ್ಟಗಾಯ ಉಂಟಾಗಬಹುದು. ಹಸಿಯಾದ ಚರ್ಮವು ಬೆಳ್ಳಗಾಗಿದ್ದರೆ, ಕೆಂಪುಬಿಳುಪು ಮಿಶ್ರವಾದ ಮಚ್ಚೆಯುಳ್ಳದ್ದಾಗಿದ್ದರೆ, ಯಾಜಕನು ಅದನ್ನು ಪರೀಕ್ಷಿಸಬೇಕು. ಆ ಬಿಳಿ ಕಲೆ ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಆ ಕಲೆಯಲ್ಲಿನ ರೋಮವು ಬೆಳ್ಳಗಾಗಿದ್ದರೆ, ಅದು ಕುಷ್ಠರೋಗವಾಗಿದೆ. ಆ ಕುಷ್ಠವು ಸುಟ್ಟಗಾಯದಲ್ಲಿ ಹುಟ್ಟಿದ್ದಾಗಿದೆ. ಆಗ ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಕುಷ್ಠರೋಗವಾಗಿದೆ. 26 ಆದರೆ ಯಾಜಕನು ಮಚ್ಚೆಯನ್ನು ನೋಡಲಾಗಿ ಹೊಳೆಯುವ ಮಚ್ಚೆಯಲ್ಲಿ ಬಿಳಿರೋಮವಿಲ್ಲದೆ ಮತ್ತು ಮಚ್ಚೆಯು ಚರ್ಮಕ್ಕಿಂತ ತಗ್ಗಾಗಿಲ್ಲದೆ ಮೊಬ್ಬಾಗಿ ಹೋಗುತ್ತಿದ್ದರೆ, ಯಾಜಕನು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು. 27 ಏಳನೆಯ ದಿನದಲ್ಲಿ ಯಾಜಕನು ಮತ್ತೆ ಆ ವ್ಯಕ್ತಿಯನ್ನು ಪರೀಕ್ಷಿಸಬೇಕು. ಮಚ್ಚೆಯು ಚರ್ಮದ ಮೇಲೆ ಹರಡಿದ್ದರೆ, ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಕುಷ್ಠರೋಗವಾಗಿದೆ. 28 ಆದರೆ ಹೊಳೆಯುವ ಮಚ್ಚೆಯು ಚರ್ಮದ ಮೇಲೆ ಉಂಟಾದ ಊತವಾಗಿದೆ. ಯಾಜಕನು ಆ ವ್ಯಕ್ತಿಯನ್ನು ಶುದ್ಧನೆಂದು ಪ್ರಕಟಿಸಬೇಕು. ಅದು ಕೇವಲ ಸುಟ್ಟಗಾಯದಿಂದ ಉಂಟಾದ ಮಚ್ಚೆಯಾಗಿದೆ.

29 “ಒಬ್ಬ ಗಂಡಸಿನ ಅಥವಾ ಹೆಂಗಸಿನ ತಲೆಯ ನೆತ್ತಿಯಲ್ಲಿ ಅಥವಾ ಗಡ್ಡದಲ್ಲಿ ಸೋಂಕು ತಗಲಿ ಕಲೆ ಉಂಟಾಗಬಹುದು. 30 ಯಾಜಕನು ಆ ಕಲೆಯನ್ನು ನೋಡಬೇಕು. ಸೋಂಕಿನ ಕಲೆಯು ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಅದರಲ್ಲಿರುವ ರೋಮವು ತೆಳ್ಳಗಾಗಿಯೂ ಹಳದಿಯಾಗಿಯೂ ಇದ್ದರೆ, ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ತಲೆಯ ಅಥವಾ ಗಡ್ಡದ ಕೆಟ್ಟ ಚರ್ಮರೋಗವಾಗಿದೆ. 31 ರೋಗವು ಚರ್ಮಕ್ಕಿಂತ ತಗ್ಗಾಗಿಲ್ಲವೆಂದು ಕಂಡುಬಂದರೂ ಅದರಲ್ಲಿ ಕಪ್ಪಾದ ಕೂದಲು ಇಲ್ಲದ್ದಿದ್ದರೆ, ಆಗ ಯಾಜಕನು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು. 32 ಏಳನೆಯ ದಿನದಲ್ಲಿ ಯಾಜಕನು ಸೋಂಕು ತಗಲಿದ ಜಾಗವನ್ನು ಪರೀಕ್ಷಿಸಬೇಕು. ರೋಗವು ಹರಡಿಕೊಳ್ಳದೆ ಇದ್ದರೆ ಮತ್ತು ಅದು ಇರುವ ಕಡೆ ಹಳದಿಬಣ್ಣದ ಕೂದಲು ಬೆಳೆಯುತ್ತಿಲ್ಲವಾಗಿದ್ದರೆ ಮತ್ತು ರೋಗವು ಉಳಿದ ಚರ್ಮಕ್ಕಿಂತ ತಗ್ಗಾಗಿ ತೋರದಿದ್ದರೆ, 33 ಆಗ ಆ ವ್ಯಕ್ತಿಯು ಕ್ಷೌರ ಮಾಡಿಸಿಕೊಳ್ಳಬೇಕು. ಆದರೆ ಅವನು ರೋಗ ಇರುವ ಜಾಗದಲ್ಲಿ ಕ್ಷೌರ ಮಾಡಿಸಿಕೊಳ್ಳಬಾರದು. ಯಾಜಕನು ಆ ವ್ಯಕ್ತಿಯನ್ನು ಇನ್ನೂ ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು. 34 ಏಳನೆಯ ದಿನದಲ್ಲಿ ಯಾಜಕನು ರೋಗವನ್ನು ಪರೀಕ್ಷಿಸಬೇಕು. ರೋಗವು ಚರ್ಮದಲ್ಲಿ ಹರಡಿಕೊಳ್ಳದಿದ್ದರೆ ಮತ್ತು ಅದು ಚರ್ಮಕ್ಕಿಂತ ತಗ್ಗಾಗಿ ತೋರದಿದ್ದರೆ ಆಗ ಯಾಜಕನು ಆ ವ್ಯಕ್ತಿಯನ್ನು ಶುದ್ಧನೆಂದು ಪ್ರಕಟಿಸಬೇಕು. ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಶುದ್ಧನಾಗುವನು. 35 ಆದರೆ ಅವನು ಶುದ್ಧನಾದ ನಂತರ, ರೋಗವು ಚರ್ಮದ ಮೇಲೆ ಹರಡಿದರೆ, 36 ಯಾಜಕನು ಆ ವ್ಯಕ್ತಿಯನ್ನು ಮತ್ತೆ ಪರೀಕ್ಷಿಸಬೇಕು. ರೋಗವು ಚರ್ಮದಲ್ಲಿ ಹರಡಿಕೊಂಡಿದ್ದರೆ, ಯಾಜಕನು ಹಳದಿ ಬಣ್ಣದ ಕೂದಲು ಇದೆಯೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ. ಅವನು ಅಶುದ್ಧನಾಗಿದ್ದಾನೆ. 37 ಆದರೆ ರೋಗವು ನಿಂತುಹೋಗಿ, ಕಪ್ಪಾದ ಕೂದಲು ಆ ಜಾಗದಲ್ಲಿ ಬೆಳೆಯುತ್ತಿದ್ದರೆ, ರೋಗವು ವಾಸಿಯಾಗಿದೆ ಎಂದರ್ಥ. ಆ ವ್ಯಕ್ತಿಯು ಶುದ್ಧನಾಗಿದ್ದಾನೆ. ಯಾಜಕನು ಅವನನ್ನು ಶುದ್ಧನೆಂದು ಪ್ರಕಟಿಸಬೇಕು.

38 “ಒಬ್ಬ ಗಂಡಸಿನ ಅಥವಾ ಹೆಂಗಸಿನ ಚರ್ಮದ ಮೇಲೆ ಬಿಳಿ ಕಲೆಗಳು ಇದ್ದರೆ, 39 ಯಾಜಕನು ಆ ಕಲೆಗಳನ್ನು ಪರೀಕ್ಷಿಸಬೇಕು. ಆ ವ್ಯಕ್ತಿಯ ಚರ್ಮದ ಮೇಲಿರುವ ಕಲೆಗಳು ಬರೀ ಮೊಬ್ಬಾದ ಬಿಳೀ ಬಣ್ಣದವುಗಳಾಗಿದ್ದರೆ, ಆಗ ರೋಗವು ಕೇವಲ ಚರ್ಮದಲ್ಲಿ ಹುಟ್ಟಿದ ಚಿಬ್ಬಾಗಿದೆ. ಆ ವ್ಯಕ್ತಿಯು ಶುದ್ಧನಾಗಿದ್ದಾನೆ.

40 “ಒಬ್ಬ ಮನುಷ್ಯನ ತಲೆಕೂದಲು ಉದುರಿಹೋಗುತ್ತಿದ್ದರೆ ಅವನು ಶುದ್ಧನಾಗಿದ್ದಾನೆ. ಅವನು ಬೋಳುತಲೆಯವನಷ್ಟೆ. 41 ಒಬ್ಬನ ತಲೆಯ ಪಾರ್ಶ್ವಗಳಿಂದ ಕೂದಲು ಉದುರಿಹೋಗುತ್ತಿದ್ದರೆ, ಅದು ಇನ್ನೊಂದು ರೀತಿಯ ಬೋಳುತಲೆಯಷ್ಟೆ. 42 ಆದರೆ ಅವನ ನೆತ್ತಿಯ ಮೇಲೆ ಕೆಂಪು ಬಿಳುಪು ಮಿಶ್ರಿತವಾದ ಸೋಂಕಿನ ಚಿಹ್ನೆ ಇದ್ದರೆ, ಅದು ಚರ್ಮರೋಗವಾಗಿದೆ. 43 ಯಾಜಕನು ಆ ವ್ಯಕ್ತಿಯನ್ನು ಪರೀಕ್ಷಿಸಬೇಕು. ಸೋಂಕಿನಿಂದ ಉಂಟಾದ ಊತ ಕೆಂಪು ಬಿಳುಪು ಮಿಶ್ರವಾಗಿ ಚರ್ಮದಲ್ಲಿ ಕುಷ್ಠದಂತೆ ತೋರಿದರೆ, 44 ಆಗ ಆ ವ್ಯಕ್ತಿಯ ತಲೆಯಲ್ಲಿ ಕುಷ್ಠರೋಗವಿದೆ. ಅವನು ಅಶುದ್ಧನಾಗಿದ್ದಾನೆ. ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು.

45 “ಒಬ್ಬನಿಗೆ ಕುಷ್ಠರೋಗವಿದ್ದರೆ, ಅವನು ಬೇರೆ ಜನರಿಗೆ ಎಚ್ಚರಿಕೆ ಕೊಡಬೇಕು. ‘ನಾನು ಅಶುದ್ಧನು, ಅಶುದ್ಧನು’ ಎಂದು ಅವನು ಕೂಗಿಕೊಳ್ಳಬೇಕು. ಆ ವ್ಯಕ್ತಿಯು ತನ್ನ ಬಟ್ಟೆಗಳನ್ನು ಹರಿದುಕೊಂಡಿರಬೇಕು; ತನ್ನ ಕೂದಲನ್ನು ಕೆದರಿಕೊಂಡಿರಬೇಕು; ತನ್ನ ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡಿರಬೇಕು. 46 ಆ ವ್ಯಕ್ತಿಯು ತನಗೆ ರೋಗವಿರುವ ಕಾಲವೆಲ್ಲಾ ಅಶುದ್ಧನಾಗಿರುವನು. ಆ ವ್ಯಕ್ತಿಯು ಅಶುದ್ಧನಾಗಿದ್ದಾನೆ. ಅವನು ಒಂಟಿಯಾಗಿ ವಾಸಿಸಬೇಕು. ಅವನ ನಿವಾಸವು ಪಾಳೆಯದ ಹೊರಗೆ ಇರಬೇಕು.

47-48 “ಕೆಲವು ಬಟ್ಟೆಗಳಲ್ಲಿ ಬೂಷ್ಟು ಇರಬಹುದು. ಅದು ನಾರಿನ ಬಟ್ಟೆಯಾಗಲಿ ಉಣ್ಣೆ ಬಟ್ಟೆಯಾಗಲಿ ಆಗಿರಬಹುದು. ಅದು ಹೆಣೆದ ಅಥವಾ ಹೊಲಿದ ಬಟ್ಟೆಯಾಗಿರಬಹುದು. ಚರ್ಮದಿಂದ ಮಾಡಿದ ವಸ್ತುವಿನ ಮೇಲೂ ಬೂಷ್ಟು ಇರಬಹುದು. 49 ಹಸಿರು ಅಥವಾ ಕೆಂಪು ಬಣ್ಣದ ಬೂಷ್ಟು ಬಟ್ಟೆಯ, ಚರ್ಮದ, ನೇಯ್ದ ಮತ್ತು ಹೆಣೆದ ಸಾಮಗ್ರಿಗಳ ಮೇಲೆ ಇದ್ದರೆ, ಆಗ ಅದನ್ನು ಯಾಜಕನಿಗೆ ತೋರಿಸಬೇಕು. 50 ಯಾಜಕನು ಬೂಷ್ಟನ್ನು ನೋಡಬೇಕು. ಅವನು ಆ ವಸ್ತುವನ್ನು ಏಳು ದಿನಗಳವರೆಗೆ ಪ್ರತ್ಯೇಕವಾದ ಸ್ಥಳದಲ್ಲಿರಿಸಬೇಕು. 51-52 ಏಳನೆಯ ದಿನದಲ್ಲಿ ಯಾಜಕನು ಬೂಷ್ಟನ್ನು ಪರೀಕ್ಷಿಸಬೇಕು. ಅದು ಚರ್ಮದ ಮೇಲಾಗಲಿ ಬಟ್ಟೆಯ ಮೇಲಾಗಲಿ ನೇಯ್ದ ಅಥವಾ ಹೆಣೆದ ಬಟ್ಟೆಯ ಮೇಲಾಗಲಿ ಇದ್ದರೆ ಅದನ್ನು ಪರೀಕ್ಷಿಸಬೇಕು. ಬೂಷ್ಟು ಹರಡಿದ್ದರೆ, ಆ ಬಟ್ಟೆ ಅಥವಾ ತೊಗಲು ಅಶುದ್ಧವಾಗಿದೆ. ಯಾಜಕನು ಅದನ್ನು ಸುಟ್ಟುಹಾಕಬೇಕು.

53 “ಬೂಷ್ಟು ಬಟ್ಟೆಯ ಮೇಲಾಗಲಿ ಚರ್ಮದ ಮೇಲಾಗಲಿ ನೇಯ್ದ ಅಥವಾ ಹೆಣೆದ ಬಟ್ಟೆಯ ಮೇಲಾಗಲಿ ಹರಡಿಲ್ಲವೆಂದು ಯಾಜಕನು ಕಂಡರೆ, ಅದನ್ನು ತೊಳೆಯಬೇಕು. 54 ಯಾಜಕನು ಆ ತೊಗಲನ್ನು ಅಥವಾ ಬಟ್ಟೆಯನ್ನು ತೊಳೆಯಲು ಜನರಿಗೆ ಅಪ್ಪಣೆಕೊಡಬೇಕು. ಬಳಿಕ ಯಾಜಕನು ಆ ಬಟ್ಟೆಯನ್ನು ಇನ್ನೂ ಏಳು ದಿನಗಳವರೆಗೆ ಪ್ರತ್ಯೇಕವಾಗಿರಿಸಬೇಕು. 55 ಆ ಬಳಿಕ ಯಾಜಕನು ಅದನ್ನು ತಿರುಗಿ ಪರೀಕ್ಷಿಸಬೇಕು. ಬೂಷ್ಟು ಇನ್ನೂ ಹಾಗೆಯೇ ಇರುವಂತೆ ಕಂಡರೆ, ಆಗ ಆ ವಸ್ತು ಅಶುದ್ಧವಾಗಿದೆ. ಅದು ಹರಡಲಿಲ್ಲವಾದರೂ ನೀವು ಬಟ್ಟೆಯನ್ನು ಅಥವಾ ತೊಗಲನ್ನು ಸುಟ್ಟುಹಾಕಬೇಕು.

56 “ಆದರೆ ಯಾಜಕನು ತೊಗಲನ್ನಾಗಲಿ ಬಟ್ಟೆಯನ್ನಾಗಲಿ ನೋಡಿದಾಗ, ತೊಳೆದನಂತರ ಬೂಷ್ಟು ಮೊಬ್ಬಾಗಿರುವುದನ್ನು ಕಂಡರೆ, ಆಗ ಯಾಜಕನು ಕಲೆ ಇರುವ ಆ ಬಟ್ಟೆಯ ಅಥವಾ ತೊಗಲಿನ ಭಾಗವನ್ನು ಕತ್ತರಿಸಿಹಾಕಬೇಕು. (ಅದು ನೇಯ್ದ ಬಟ್ಟೆಯಾಗಿದ್ದರೂ ಸರಿ, ಹೆಣೆದ ಬಟ್ಟೆಯಾಗಿದ್ದರೂ ಸರಿ.) 57 ಆದರೆ ಬೂಷ್ಟು ಆ ತೊಗಲಿನ ಮೇಲೆ ಅಥವಾ ಬಟ್ಟೆಯ ಮೇಲೆ ಮರಳಿ ಬಂದರೆ, ಆಗ ಆ ಬೂಷ್ಟು ಹರಡುತ್ತಿದೆ ಎಂದರ್ಥ. ಆ ತೊಗಲನ್ನು ಅಥವಾ ಆ ಬಟ್ಟೆಯನ್ನು ಸುಟ್ಟುಹಾಕಬೇಕು. 58 ಆದರೆ, ತೊಳೆದ ನಂತರ ಬೂಷ್ಟು ತಿರುಗಿ ಬಾರದಿದ್ದರೆ, ಆ ತೊಗಲು ಅಥವಾ ಬಟ್ಟೆ ಶುದ್ಧವಾಗಿದೆ. ಅದು ಹೆಣೆದ ಅಥವಾ ಹೊಲಿದ ಬಟ್ಟೆಯಾಗಿದ್ದರೂ ಶುದ್ಧವಾಗಿದೆ.”

59 ಚರ್ಮದ ವಸ್ತುಗಳ ಮೇಲಾಗಲಿ ಬಟ್ಟೆಯ ಮೇಲಾಗಲಿ (ಅದು ಉಣ್ಣೆಯದ್ದಾಗಿರಲಿ ನಾರಿನದ್ದಾಗಿರಲಿ ನೇಯ್ದದ್ದಾಗಿರಲಿ ಅಥವಾ ಹೆಣೆದದ್ದಾಗಿರಲಿ) ಕಂಡು ಬರುವ ಬೂಷ್ಟಿನ ವಿಷಯದಲ್ಲಿ ಅನುಸರಿಸಬೇಕಾದ ನಿಯಮಗಳು ಇವೇ. ಶುದ್ಧವಾದವುಗಳೋ ಅಶುದ್ಧವಾದವುಗಳೋ ಎಂದು ನಿರ್ಧಾರ ಮಾಡಲು ಇದೇ ನಿಯಮಗಳನ್ನು ಅನುಸರಿಸಬೇಕು.

ಕೀರ್ತನೆಗಳು 15-16

ರಚನೆಗಾರ: ದಾವೀದ.

15 ಯೆಹೋವನೇ, ನಿನ್ನ ಪವಿತ್ರ ಗುಡಾರದಲ್ಲಿ ಎಂಥವನು ವಾಸಿಸಬಲ್ಲನು?
    ನಿನ್ನ ಪವಿತ್ರ ಪರ್ವತದ ಮೇಲೆ ಎಂಥವನು ನೆಲಸಬಲ್ಲನು?
ಅವನು ನಿರ್ದೋಷಿಯೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ
    ಹೃದಯದಿಂದ ಸತ್ಯವನ್ನು ಮಾತಾಡುವವನೂ ಆಗಿರಬೇಕು.
ಅವನು ಚಾಡಿ ಹೇಳದವನೂ ನೆರೆಯವರಿಗೆ ಕೇಡನ್ನು ಮಾಡದವನೂ
    ತನ್ನ ಸ್ವಂತ ಕುಟುಂಬದವರನ್ನು ನಿಂದಿಸದವನೂ ಆಗಿರಬೇಕು.
ಅವನು ದೇವದೂಷಕರನ್ನು ತಿರಸ್ಕರಿಸುವವನೂ
    ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಗೌರವಿಸುವವನೂ
ತನಗೆ ತೊಂದರೆಯಾದರೂ
    ಕೊಟ್ಟ ಮಾತಿಗೆ ತಪ್ಪದವನೂ ಆಗಿರಬೇಕು.
ಅವನು ಕೊಟ್ಟ ಸಾಲಕ್ಕೆ ಬಡ್ಡಿ ಕೇಳದವನೂ
    ನಿರಪರಾಧಿಗೆ ಕೇಡುಮಾಡಲು ಲಂಚ ತೆಗೆದುಕೊಳ್ಳದವನೂ ಆಗಿರಬೇಕು.
ಹೀಗೆ ಜೀವಿಸುವವನು
    ದೇವರಿಗೆ ಸಮೀಪವಾಗಿಯೇ ಇರುತ್ತಾನೆ.[a]

ರಚನೆಗಾರ: ದಾವೀದ.

16 ದೇವರೇ, ನನ್ನನ್ನು ಕಾಪಾಡು. ಯಾಕೆಂದರೆ ನಾನು ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
ನಾನು ಯೆಹೋವನಿಗೆ, “ನೀನೇ ನನ್ನ ಒಡೆಯನು.
    ನನ್ನಲ್ಲಿರುವ ಒಳ್ಳೆಯದನ್ನೆಲ್ಲ ದಯಪಾಲಿಸಿದಾತನು ನೀನೇ” ಎಂದು ಹೇಳಿದೆನು.
ಯೆಹೋವನು ಭೂಲೋಕದಲ್ಲಿರುವ ತನ್ನ ಭಕ್ತರಿಗೆ ಅತಿಶಯವಾದವುಗಳನ್ನು ಮಾಡುವನು;
    ಅವರ ಮೇಲೆ ತನಗಿರುವ ನಿಜವಾದ ಪ್ರೀತಿಯನ್ನು ತೋರ್ಪಡಿಸುವನು.

ಆದರೆ ಅನ್ಯದೇವರುಗಳನ್ನು ಆಶ್ರಯಿಸಿಕೊಂಡವರಿಗೆ ಕೇಡುಗಳು ಹೆಚ್ಚಾಗುತ್ತವೆ.
    ಅವರು ಆ ವಿಗ್ರಹಗಳಿಗೆ ಅರ್ಪಿಸುವ ರಕ್ತದ ಕಾಣಿಕೆಗಳಲ್ಲಿ ನಾನು ಪಾಲುಗಾರನಾಗುವುದಿಲ್ಲ,
    ಆ ವಿಗ್ರಹಗಳ ಹೆಸರುಗಳನ್ನೂ ನಾನು ಉಚ್ಚರಿಸುವುದಿಲ್ಲ.
ನನ್ನ ಪಾಲೂ ನನ್ನ ಪಾತ್ರೆಯೂ ಯೆಹೋವನಿಂದಲೇ ಬರುತ್ತವೆ.
    ನನಗೆ ಆಧಾರವಾಗಿದ್ದು ನನ್ನ ಪಾಲನ್ನು ದಯಪಾಲಿಸುವಾತನು ನೀನೇ.
ನನ್ನ ಪಾಲು[b] ರಮಣೀಯವಾಗಿದೆ.
    ನನ್ನ ಸ್ವಾಸ್ತ್ಯವು[c] ಬಹು ಸುಂದರವಾಗಿದೆ.
ನನ್ನ ಆಲೋಚನಾಕರ್ತನಾದ ಯೆಹೋವನನ್ನು ಕೊಂಡಾಡುವೆನು;
    ರಾತ್ರಿಯಲ್ಲಿಯೂ, ಆತನು ತನ್ನ ಆಲೋಚನೆಗಳನ್ನು ನನ್ನ ಅಂತರಾತ್ಮದಲ್ಲಿ ಬೇರೂರಿಸುವನು.

ನಾನು ಯೆಹೋವನನ್ನು ಯಾವಾಗಲೂ ನನ್ನ ಎದುರಿನಲ್ಲೇ ಇಟ್ಟುಕೊಂಡಿದ್ದೇನೆ;
    ಆತನು ನನ್ನ ಬಲಗಡೆಯಲ್ಲಿರುವುದರಿಂದ ನಾನೆಂದಿಗೂ ಕದಲುವುದಿಲ್ಲ.
ಆದ್ದರಿಂದ ನನ್ನ ಹೃದಯವೂ ಆತ್ಮವೂ ಉಲ್ಲಾಸಪಡುತ್ತವೆ.
    ನನ್ನ ದೇಹವೂ ಸುರಕ್ಷಿತವಾಗಿರುವುದು.
10 ಯಾಕೆಂದರೆ, ನೀನು ನನ್ನ ಆತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ.
    ನಿನ್ನ ಪವಿತ್ರನನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.
11 ನೀನು ನನಗೆ ಜೀವಮಾರ್ಗವನ್ನು ಉಪದೇಶಿಸುವೆ.
    ನಿನ್ನ ಸನ್ನಿಧಿಯಲ್ಲಿದ್ದರೆ ಪರಿಪೂರ್ಣ ಸಂತೋಷವಿರುವುದು;
    ನಿನ್ನ ಬಲಗಡೆಯಲ್ಲಿದ್ದರೆ ಶಾಶ್ವತವಾದ ಆನಂದವಿರುವುದು.

ಜ್ಞಾನೋಕ್ತಿಗಳು 27

27 ಭವಿಷ್ಯತ್ತಿನ ಕುರಿತು ಜಂಬಪಡಬೇಡ. ನಾಳೆ ಏನಾಗುವುದೋ ನಿನಗೆ ತಿಳಿಯದು.

ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ; ಬೇಕಿದ್ದರೆ ಬೇರೆಯವರೇ ನಿನ್ನನ್ನು ಹೊಗಳಲಿ.

ಕಲ್ಲು ಭಾರ, ಮರಳು ಭಾರ, ಮೂಢನಿಂದಾಗುವ ಕೇಡು ಇವೆರಡಕ್ಕಿಂತಲೂ ಬಹು ಭಾರ.

ಕೋಪವು ಕ್ರೂರ; ಅದು ಪ್ರವಾಹದಂತೆ ನಾಶಕರ. ಹೊಟ್ಟೆಕಿಚ್ಚು ಅದಕ್ಕಿಂತಲೂ ನಾಶಕರ.

ಬಹಿರಂಗವಾದ ಟೀಕೆ ಗುಟ್ಟಾದ ಪ್ರೀತಿಗಿಂತಲೂ ಉತ್ತಮ.

ಸ್ನೇಹಿತನಿಂದಾಗುವ ಗಾಯಗಳು ಸಹಾಯಕರ. ಶತ್ರುವಿನ ಮುತ್ತುಗಳಾದರೋ ಮೋಸಕರ.

ಹೊಟ್ಟೆ ತುಂಬಿದವನು ಜೇನುತುಪ್ಪವನ್ನೂ ತಿರಸ್ಕರಿಸುವನು; ಹಸಿವೆಗೊಂಡಿರುವವನಿಗೋ ಕಹಿಯೂ ಸಿಹಿ.

ಮನೆಯಿಂದ ದೂರವಿರುವ ಗಂಡಸು ಗೂಡಿನಿಂದ ದೂರವಿರುವ ಪಕ್ಷಿಯಂತಿರುವನು.

ಪರಿಮಳತೈಲ ಮತ್ತು ಧೂಪ ನಿನ್ನನ್ನು ಸಂತೋಷಗೊಳಿಸುತ್ತವೆ; ಆದರೆ ಸ್ನೇಹಿತನ ಮಧುರವಾದ ಉಪದೇಶದಿಂದ ಸ್ವಂತ ನಿರ್ಧಾರಕ್ಕಿಂತಲೂ ಹೆಚ್ಚು ಆನಂದವಾಗುವುದು.

10 ನಿನ್ನ ಸ್ನೇಹಿತರನ್ನೂ ನಿನ್ನ ತಂದೆಯ ಸ್ನೇಹಿತರನ್ನೂ ಮರೆಯಬೇಡ. ಕಷ್ಟಬಂದಾಗ ಸಹಾಯ ಕೇಳಲು ಬಹುದೂರವಿರುವ ನಿನ್ನ ಸಹೋದರನ ಮನೆಗೆ ಹೋಗುವುದಕ್ಕಿಂತ ನಿನ್ನ ಸಮೀಪದಲ್ಲಿರುವ ನೆರೆಯವನನ್ನು ಕೇಳುವುದೇ ಉತ್ತಮ.

11 ನನ್ನ ಮಗನೇ, ನೀನು ಜ್ಞಾನಿಯಾಗಿದ್ದರೆ ನನಗೆ ಸಂತೋಷ ಆಗ, ನನ್ನನ್ನು ಟೀಕಿಸುವವನಿಗೆ ಉತ್ತರ ಕೊಡಲು ನಾನು ಶಕ್ತನಾಗುವೆ.

12 ಜ್ಞಾನಿಯು ಕೇಡನ್ನು ಕಂಡು ಆ ದಾರಿಯನ್ನೇ ಬಿಟ್ಟುಹೋಗುವನು. ಮೂಢನಾದರೋ ಕೇಡಿಗೆ ನೇರವಾಗಿ ನಡೆದು ಕಷ್ಟಕ್ಕೆ ಗುರಿಯಾಗುವನು.

13 ಬೇರೊಬ್ಬನ ಸಾಲಕ್ಕೆ ನೀನು ಜಾಮೀನಾದರೆ, ನಿನ್ನ ಅಂಗಿಯನ್ನೂ ಕಳೆದುಕೊಳ್ಳುವೆ.

14 ಹೊತ್ತಾರೆಯಲ್ಲಿ ನಿನ್ನ ನೆರೆಯವನಿಗೆ, “ನಮಸ್ಕಾರ!” ಎಂದು ಕೂಗಿ ಎಬ್ಬಿಸಬೇಡ. ಅವನಿಗೆ ಅದು ಆಶೀರ್ವಾದದಂತೆ ಕಾಣದೆ ಶಾಪದಂತೆಯೇ ಕಾಣುವುದು.

15 ವಾದವನ್ನೇ ಇಚ್ಛಿಸುವ ಹೆಂಡತಿ ಮಳೆ ದಿನದಲ್ಲಿ ಸೋರುತ್ತಲೇ ಇರುವ ಮೇಲ್ಛಾವಣಿಯಂತಿರುವಳು. 16 ಆಕೆಯ ಬಾಯನ್ನು ಮುಚ್ಚಿಸಲು ಮಾಡುವ ಪ್ರಯತ್ನ ಗಾಳಿಯನ್ನು ನಿಲ್ಲಿಸಲು ಪ್ರಯತ್ನಿಸಿದಂತೆಯೂ ಅಂಗೈಯಲಿ ಎಣ್ಣೆಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದಂತೆಯೂ ಇದೆ.

17 ಕಬ್ಬಿಣವು ಕಬ್ಬಿಣವನ್ನು ಹರಿತಗೊಳಿಸುವುದು; ಅಂತೆಯೇ ಸ್ನೇಹಿತನು ಸ್ನೇಹಿತನನ್ನು ಉತ್ತಮಪಡಿಸುವನು.

18 ಅಂಜೂರದ ಮರಗಳನ್ನು ನೋಡಿಕೊಳ್ಳುವವನು ಅವುಗಳ ಹಣ್ಣನ್ನು ತಿನ್ನುವನು; ಯಜಮಾನನನ್ನು ನೋಡಿಕೊಳ್ಳುವವನು ಪ್ರತಿಫಲವನ್ನು ಹೊಂದುವನು.

19 ನೀರನ್ನು ನೋಡುವವನಿಗೆ ಅವನ ಮುಖವು ಕಾಣುವುದು. ಅಂತೆಯೇ ಹೃದಯವು ವ್ಯಕ್ತಿಯ ನಿಜರೂಪವನ್ನು ತೋರುವುದು.

20 ಮರಣಕ್ಕಾಗಲಿ ಸಮಾಧಿಗಾಗಲಿ ತೃಪ್ತಿಯೇ ಇಲ್ಲ. ಅಂತೆಯೇ ಮನುಷ್ಯನ ಬಯಕೆಗಳಿಗೂ ಕೊನೆಯಿಲ್ಲ.

21 ಚಿನ್ನವಾಗಲಿ ಬೆಳ್ಳಿಯಾಗಲಿ ಬೆಂಕಿಯಿಂದ ಶುದ್ಧೀಕರಿಸಲ್ಪಡುವಂತೆಯೇ ಮನುಷ್ಯನು ಜನರಿಂದ ಬರುವ ಹೊಗಳಿಕೆಯಿಂದ ಪರೀಕ್ಷಿತನಾಗುವನು.

22 ನೀನು ಮೂಢನನ್ನು ಅರೆದು ಪುಡಿಪುಡಿ ಮಾಡಿದರೂ ಅವನ ಮೂಢತನವನ್ನು ತೊಲಗಿಸಲಾರೆ.

23 ನಿನ್ನ ಕುರಿಗಳನ್ನೂ ಪಶುಗಳನ್ನೂ ಎಚ್ಚರಿಕೆಯಿಂದ ಕಾಯ್ದುಕೊಂಡಿರು; ನಿನ್ನಿಂದಾದಷ್ಟು ಮಟ್ಟಿಗೆ ಅವುಗಳ ಮೇಲೆ ಗಮನವಿಟ್ಟು ನೋಡಿಕೊ. 24 ಐಶ್ವರ್ಯ ಸದಾಕಾಲ ಇರುವಂಥದ್ದಲ್ಲ. ಅಂತೆಯೇ ಸಾಮ್ರಾಜ್ಯಗಳು ಶಾಶ್ವತವಾಗಿರುವುದಿಲ್ಲ. 25 ಹುಲ್ಲನ್ನು ಕತ್ತರಿಸಿದ ಮೇಲೆ ಹೊಸಹುಲ್ಲು ಬೆಳೆಯಲಾರಂಭಿಸುವುದು; ಒಣಹುಲ್ಲನ್ನು ಬೆಟ್ಟಗಳ ಮೇಲೆ ಸಂಗ್ರಹಿಸಲಾಗುವುದು. 26 ಬಳಿಕ ನಿನ್ನ ಕುರಿಗಳ ಉಣ್ಣೆಯಿಂದ ಬಟ್ಟೆಗಳನ್ನು ತಯಾರಿಸಬಹುದು. ನಿನ್ನ ಆಡುಗಳನ್ನು ಮಾರಿ ಬಂದ ಹಣದಿಂದ ಜಮೀನನ್ನು ಕೊಂಡುಕೊಳ್ಳಬಹುದು. 27 ನಿನ್ನ ಇನ್ನಿತರ ಆಡುಗಳು ನಿನಗೆ ಬೇಕಾದಷ್ಟು ಹಾಲನ್ನು ಕೊಡುತ್ತವೆ. ಅದರಿಂದ ನಿನಗೂ ನಿನ್ನ ಕುಟುಂಬಕ್ಕೂ ನಿನ್ನ ಸೇವಕಿಯರಿಗೂ ಬೇಕಾದಷ್ಟು ಆಹಾರವಿರುವುದು.

2 ಥೆಸಲೋನಿಕದವರಿಗೆ 1

ತಂದೆಯಾದ ದೇವರಲ್ಲಿಯೂ ಮತ್ತು ಪ್ರಭುವಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲನು, ಸಿಲ್ವಾನನು ಮತ್ತು ತಿಮೊಥೆಯನು ಬರೆಯುವ ಪತ್ರ.

ತಂದೆಯಾದ ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಕೃಪೆಯೂ ಶಾಂತಿಯೂ ನಿಮಗಿರಲಿ.

ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಿಮ್ಮ ನಂಬಿಕೆಯು ಮತ್ತು ಇತರರ ಮೇಲೆ ನಿಮಗಿರುವ ಪ್ರೀತಿಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ನಿಮ್ಮ ವಿಷಯದಲ್ಲಿ ಸ್ತೋತ್ರ ಸಲ್ಲಿಸುವುದು ಯೋಗ್ಯವಾದ ಕಾರ್ಯವಾಗಿದೆ. ದೇವರ ಇತರ ಸಭೆಗಳಲ್ಲಿ ನಿಮ್ಮನ್ನು ಕುರಿತು ಹೆಚ್ಚಳಪಡುತ್ತೇವೆ. ನಿಮ್ಮಲ್ಲಿರುವ ನಂಬಿಕೆ ಮತ್ತು ಸಹನೆಗಳನ್ನು ಕುರಿತು ಇತರ ಸಭೆಗಳಿಗೆ ಹೇಳುತ್ತೇವೆ. ನೀವು ಹಿಂಸೆಗೆ ಒಳಗಾಗಿದ್ದರೂ ಅನೇಕ ಸಂಕಟಗಳನ್ನು ಅನುಭವಿಸುತ್ತಿದ್ದರೂ ನಂಬಿಕೆಯಿಂದಲೂ ಸಹನೆಯಿಂದಲೂ ಜೀವಿಸುತ್ತಿದ್ದೀರಿ.

ದೇವರ ತೀರ್ಪನ್ನು ಕುರಿತು ಪೌಲನ ವಿವರಣೆ

ದೇವರು ನ್ಯಾಯವಾದ ತೀರ್ಪನ್ನು ನೀಡುತ್ತಾನೆಂಬುದಕ್ಕೆ ಅದೇ ಪ್ರಮಾಣವಾಗಿದೆ. ದೇವರ ರಾಜ್ಯಕ್ಕೆ ನೀವು ಯೋಗ್ಯರಾಗಿರಬೇಕೆಂಬುದು ಆತನ ಅಪೇಕ್ಷೆ. ನೀವು ಹಿಂಸೆಪಡುತ್ತಿರುವುದು ಆ ರಾಜ್ಯಕ್ಕೋಸ್ಕರವೇ. ದೇವರು ಯೋಗ್ಯವಾದುದ್ದನ್ನೇ ಮಾಡುತ್ತಾನೆ. ನಿಮಗೆ ತೊಂದರೆ ಕೊಡುವ ಜನರಿಗೆ ದೇವರು ತೊಂದರೆ ಕೊಡುತ್ತಾನೆ. ತೊಂದರೆಗೆ ಒಳಗಾಗಿರುವ ನಿಮಗೆ ದೇವರು ಶಾಂತಿಯನ್ನು ನೀಡುತ್ತಾನೆ. ಆತನು ನಮಗೂ ಶಾಂತಿಯನ್ನು ನೀಡುವನು. ಪ್ರಭುವಾದ ಯೇಸು ತನ್ನ ಶಕ್ತಿಶಾಲಿಗಳಾದ ದೂತರೊಂದಿಗೆ ಪರಲೋಕದಿಂದ ಪ್ರತ್ಯಕ್ಷನಾದಾಗ ಈ ಶಾಂತಿಯನ್ನು ದಯಪಾಲಿಸುತ್ತಾನೆ. ಪ್ರಭು ಯೇಸು ಪರಲೋಕದಿಂದ ಬೆಂಕಿಯ ಜ್ವಾಲೆಗಳೊಡನೆ ಪ್ರತ್ಯಕ್ಷನಾದಾಗ ದೇವರನ್ನು ತಿಳಿದಿಲ್ಲದವರಿಗೂ ಸುವಾರ್ತೆಗೆ ವಿಧೇಯರಾಗಿಲ್ಲದವರಿಗೂ ದಂಡನೆಯನ್ನು ಬರಮಾಡುತ್ತಾನೆ. ಅವರಿಗೆ ನಿತ್ಯವಾದ ದಂಡನೆಯಾಗುವುದು. ಪ್ರಭುವಿನೊಂದಿಗಿರಲು ಅವರಿಗೆ ಅವಕಾಶ ದೊರೆಯುವುದಿಲ್ಲ. ಆತನು ತನ್ನ ಮಹಾಶಕ್ತಿಯಿಂದ ಅವರನ್ನು ದೂರವಿರಿಸುತ್ತಾನೆ. 10 ಪ್ರಭುವಾದ ಯೇಸು ಪ್ರತ್ಯಕ್ಷನಾದಾಗ ಇದು ಸಂಭವಿಸುತ್ತದೆ. ಆತನು ತನಗೆ ದೊರೆಯ ಬೇಕಾದ ವೈಭವವನ್ನು ಸ್ವೀಕರಿಸಲು ತನ್ನ ಪರಿಶುದ್ಧ ಜನರೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಆತನನ್ನು ನಂಬಿದ ಜನರೆಲ್ಲರೂ ಆತನನ್ನು ಕಂಡು ಆಶ್ಚರ್ಯಚಕಿತರಾಗುವರು. ನಾವು ಹೇಳಿದ್ದನ್ನು ನಂಬಿದ ನೀವೆಲ್ಲರೂ ವಿಶ್ವಾಸಿಗಳ ಆ ಸಮೂಹದಲ್ಲಿರುವಿರಿ.

11 ಆದಕಾರಣವೇ ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತೇವೆ. ಯಾವ ಒಳ್ಳೆಯ ಮಾರ್ಗದಲ್ಲಿ ನೀವು ಜೀವಿಸಬೇಕೆಂದು ದೇವರು ನಿಮ್ಮನ್ನು ಕರೆದನೋ, ಆ ಮಾರ್ಗದಲ್ಲೇ ನೀವು ಜೀವಿಸಲಿಕ್ಕಾಗುವಂತೆ ಪ್ರಾರ್ಥಿಸುತ್ತೇವೆ. ನಿಮ್ಮಲ್ಲಿರುವ ಒಳ್ಳೆಯ ತನವು ಒಳ್ಳೆಯದನ್ನು ಮಾಡುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮಲ್ಲಿರುವ ನಂಬಿಕೆಯು ನಿಮ್ಮಿಂದ ಕಾರ್ಯ ಸಾಧಿಸುತ್ತದೆ. ಈ ಕಾರ್ಯಗಳನ್ನು ನೀವು ಹೆಚ್ಚುಹೆಚ್ಚಾಗಿ ಮಾಡಲು ದೇವರು ತನ್ನ ಶಕ್ತಿಯಿಂದ ನಿಮಗೆ ಸಹಾಯ ಮಾಡಲೆಂದು ಬೇಡಿಕೊಳ್ಳುತ್ತೇವೆ. 12 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದಲೆಂದು ಮತ್ತು ನೀವೂ ಆತನಲ್ಲಿ ಮಹಿಮೆ ಹೊಂದಲೆಂದು ನಾವು ಪ್ರಾರ್ಥಿಸುತ್ತೇವೆ. ಆ ಮಹಿಮೆಯು ನಮ್ಮ ದೇವರ ಮತ್ತು ಪ್ರಭು ಯೇಸು ಕ್ರಿಸ್ತನ ಕೃಪೆಯಿಂದ ಬರುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International