M’Cheyne Bible Reading Plan
ಆರೋನನ ಪುತ್ರರ ಸಾವು
10 ತರುವಾಯ ಆರೋನನ ಪುತ್ರರಲ್ಲಿ ನಾದಾಬ ಮತ್ತು ಅಬೀಹು ಎಂಬಿಬ್ಬರು ಧೂಪ ಹಾಕಲು ಒಂದೊಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಬೇರೆ ಬೆಂಕಿಯನ್ನಿಟ್ಟು ಯೆಹೋವನ ಮುಂದೆ ಧೂಪಹಾಕಿದರು. ಯೆಹೋವನ ಆಜ್ಞೆಗನುಸಾರವಾದ ಬೆಂಕಿಯನ್ನು ಅವರು ಉಪಯೋಗಿಸಲಿಲ್ಲ. 2 ಆದ್ದರಿಂದ ಯೆಹೋವನಿಂದ ಬೆಂಕಿ ಹೊರಟುಬಂದು ಅವರಿಬ್ಬರನ್ನು ನಾಶಮಾಡಿತು. ಅವರು ಯೆಹೋವನ ಸನ್ನಿಧಿಯಲ್ಲಿ ಸತ್ತರು.
3 ಆಗ ಮೋಶೆ ಆರೋನನಿಗೆ, “ಯೆಹೋವನು ಹೇಳುವುದೇನೆಂದರೆ, ‘ನನ್ನ ಬಳಿಗೆ ಬರುವ ಯಾಜಕರು ನನ್ನನ್ನು ಗೌರವಿಸಬೇಕು. ಯಾಕೆಂದರೆ ನಾನು ಅವರ ಮೂಲಕ ಜನರಿಗೆ ಪ್ರಕಟಿಸಿಕೊಳ್ಳುವೆನು. ನಾನು ಪರಿಶುದ್ಧನೆಂದು ಅವರು ಮತ್ತು ಎಲ್ಲಾ ಜನರು ತಿಳಿದುಕೊಂಡು ನನ್ನನ್ನು ಘನಪಡಿಸಬೇಕು’” ಎಂದು ಹೇಳಿದನು. ಆದ್ದರಿಂದ ಆರೋನನು ತನ್ನ ಪುತ್ರರು ಸತ್ತಿದ್ದರ ಬಗ್ಗೆ ಏನೂ ಹೇಳದೆ ಸುಮ್ಮನಿದ್ದನು.
4 ಆರೋನನ ಚಿಕ್ಕಪ್ಪನಾದ ಉಜ್ಜಿಯೇಲನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅವರ ಹೆಸರು ಮೀಶಾಯೇಲ್ ಮತ್ತು ಎಲ್ಸಾಫಾನ್. ಮೋಶೆ ಆ ಪುತ್ರರಿಗೆ, “ಪವಿತ್ರಸ್ಥಳದ ಮುಂದೆ ಬಿದ್ದಿರುವ ನಿಮ್ಮ ಸಹೋದರರ ಮೃತಶರೀರಗಳನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿರಿ” ಎಂದು ಹೇಳಿದನು.
5 ಮಿಶಾಯೇಲ ಮತ್ತು ಎಲ್ಸಾಫಾನ ಮೋಶೆಯ ಮಾತಿಗೆ ವಿಧೇಯರಾದರು. ಅವರು ನಾದಾಬ ಮತ್ತು ಅಬೀಹು ಎಂಬವರ ಮೃತಶರೀರಗಳನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋದರು. ನಾದಾಬ ಮತ್ತು ಅಬೀಹು ತೊಟ್ಟುಕೊಂಡಿದ್ದ ವಿಶೇಷವಾದ ಹೆಣೆದ ಅಂಗಿಗಳು ಇನ್ನೂ ಅವರ ಮೃತಶರೀರಗಳ ಮೇಲಿದ್ದವು.
6 ಬಳಿಕ ಮೋಶೆ ಆರೋನನೊಡನೆ ಮತ್ತು ಅವನ ಪುತ್ರರಾದ ಎಲ್ಲಾಜಾರ್ ಮತ್ತು ಈತಾಮಾರ್ ಇವರೊಡನೆ ಮಾತಾಡಿದನು. ಮೋಶೆ ಅವರಿಗೆ, “ನೀವು ದುಃಖದಿಂದ ನಿಮ್ಮ ತಲೆಕೂದಲನ್ನು ಕೆದರಿಕೊಳ್ಳಬೇಡಿರಿ; ನಿಮ್ಮ ಬಟ್ಟೆಗಳನ್ನು ಹರಿದುಕೊಳ್ಳಬೇಡಿರಿ. ಇಲ್ಲವಾದರೆ ನೀವೂ ಕೊಲ್ಲಲ್ಪಡುವಿರಿ. ಅಲ್ಲದೆ ಯೆಹೋವನು ಜನರೆಲ್ಲರ ಮೇಲೆ ಕೋಪಗೊಳ್ಳುವನು. ಆದರೆ ಯೆಹೋವನು ಬೆಂಕಿಯಿಂದ ನಾಶಮಾಡಿದವರ ಬಗ್ಗೆ ಇಸ್ರೇಲರೆಲ್ಲರು ಮತ್ತು ನಿಮ್ಮ ಬಂಧುಗಳು ದುಃಖಿಸಬಹುದು. 7 ಆದರೆ ನೀವು ದೇವದರ್ಶನಗುಡಾರದ ಬಾಗಿಲನ್ನು ಸಹ ಬಿಟ್ಟುಹೋಗಬಾರದು. ಇಲ್ಲವಾದರೆ ನೀವು ಸಾಯುವಿರಿ! ಯಾಕೆಂದರೆ, ಯೆಹೋವನ ಅಭಿಷೇಕತೈಲವು ನಿಮ್ಮ ಮೇಲಿದೆ” ಎಂದು ಹೇಳಿದನು. ಆದ್ದರಿಂದ ಆರೋನ, ಎಲ್ಲಾಜಾರ್ ಮತ್ತು ಈತಾಮಾರ್ ಮೋಶೆಯ ಮಾತಿಗೆ ವಿಧೇಯರಾದರು.
8 ಬಳಿಕ ಯೆಹೋವನು ಆರೋನನಿಗೆ, 9 “ನೀನು ಮತ್ತು ನಿನ್ನ ಪುತ್ರರು ದೇವದರ್ಶನದ ಗುಡಾರದೊಳಗೆ ಬರುವಾಗ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯಬಾರದು. ನೀವು ಅವುಗಳನ್ನು ಕುಡಿದರೆ ಸಾಯುವಿರಿ. ಈ ಕಟ್ಟಳೆಯು ನಿಮ್ಮ ಸಂತತಿಯವರಿಗೆ ಶಾಶ್ವತವಾಗಿದೆ. 10 ನೀವು ಪವಿತ್ರವಾದವುಗಳ ಮತ್ತು ಪವಿತ್ರವಲ್ಲದ ವಸ್ತುಗಳ ಕುರಿತಾಗಿಯೂ ಶುದ್ಧವಾದವುಗಳ ಮತ್ತು ಅಶುದ್ಧವಾದವುಗಳ ಕುರಿತಾಗಿಯೂ ಸ್ಪಷ್ಟವಾಗಿ ವಿವೇಚನೆಯುಳ್ಳವರಾಗಿರಬೇಕು. 11 ಯೆಹೋವನು ಮೋಶೆಯ ಮೂಲಕ ಇಸ್ರೇಲ್ ಜನರಿಗೆ ಕೊಟ್ಟ ಎಲ್ಲಾ ಕಟ್ಟಳೆಗಳನ್ನು ಅವರಿಗೆ ಬೋಧಿಸುವುದು ನಿನ್ನ ಜವಾಬ್ದಾರಿಯಾಗಿದೆ” ಎಂದು ಹೇಳಿದನು.
12 ಆರೋನನಿಗೆ ಇನ್ನೂ ಜೀವಂತವಾಗಿದ್ದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬ ಇಬ್ಬರು ಪುತ್ರರು ಇದ್ದರು. ಮೋಶೆಯು ಆರೋನನಿಗೆ ಮತ್ತು ಅವನ ಇಬ್ಬರು ಗಂಡುಮಕ್ಕಳಿಗೆ, “ಯಜ್ಞವೇದಿಕೆಯ ಮೇಲೆ ಅರ್ಪಿಸಿದ ಯಜ್ಞಗಳಲ್ಲಿಯೂ ಧಾನ್ಯನೈವೇದ್ಯದಲ್ಲಿಯೂ ಉಳಿದ ಭಾಗವನ್ನು ತೆಗೆದುಕೊಂಡು ನೀವು ತಿನ್ನಬೇಕು. ಆದರೆ ನೀವು ಅದಕ್ಕೆ ಹುಳಿಯನ್ನು ಸೇರಿಸದೆ ಯಜ್ಞವೇದಿಕೆಯ ಸಮೀಪದಲ್ಲಿಯೇ ತಿನ್ನಬೇಕು. ಯಾಕೆಂದರೆ ಆ ಸಮರ್ಪಣೆಯು ಬಹಳ ಪವಿತ್ರವಾಗಿದೆ. 13 ಅದನ್ನು ಪವಿತ್ರವಾದ ಸ್ಥಳದಲ್ಲಿ ಮಾತ್ರ ತಿನ್ನಬೇಕು. ಅದು ಯೆಹೋವನಿಗಾಗಿ ಅಗ್ನಿಯಲ್ಲಿ ಹೋಮವಾದ ಸಮರ್ಪಣೆಗಳಲ್ಲಿ ಒಂದು ಭಾಗವಾಗಿದೆ. ಯೆಹೋವನಿಗಾಗಿ ಬೆಂಕಿಯ ಮೂಲಕ ಸಮರ್ಪಿಸಿದವುಗಳಲ್ಲಿ ನಿನಗೂ ನಿನ್ನ ಗಂಡುಮಕ್ಕಳಿಗೂ ಇದು ಸೇರತಕ್ಕ ಪಾಲಾಗಿದೆ. ನಿಮಗೆ ಈ ಕಟ್ಟಳೆಯನ್ನು ಕೊಡಲು ನನಗೆ ಆಜ್ಞಾಪಿಸಲಾಗಿದೆ.
14 “ಮಾತ್ರವಲ್ಲದೆ ನೀನು, ನಿನ್ನ ಪುತ್ರರು ಮತ್ತು ನಿನ್ನ ಹೆಣ್ಣುಮಕ್ಕಳು ಯೆಹೋವನಿಗೆ ನೈವೇದ್ಯವಾಗಿ ನಿವಾಳಿಸಿದ ಎದೆಯ ಭಾಗವನ್ನು ಮತ್ತು ಅರ್ಪಿಸಲ್ಪಟ್ಟ ತೊಡೆಯನ್ನು ತಿನ್ನಬೇಕು. ನೀವು ಅವುಗಳನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕಾಗಿಲ್ಲ. ಆದರೆ ನೀವು ಅವುಗಳನ್ನು ಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಯಾಕೆಂದರೆ ಅವುಗಳು ಸಮಾಧಾನಯಜ್ಞಗಳಿಂದ ಬಂದವುಗಳಾಗಿವೆ. ಇಸ್ರೇಲರು ಆ ಕಾಣಿಕೆಗಳನ್ನು ದೇವರಿಗಾಗಿ ಕೊಡುತ್ತಾರೆ. ಜನರು ಆ ಪಶುಗಳಲ್ಲಿ ಕೆಲವು ಭಾಗಗಳನ್ನು ತಿನ್ನುತ್ತಾರೆ. ಆದರೆ ಎದೆಯ ಭಾಗವು ನಿಮ್ಮ ಪಾಲಾಗಿರುತ್ತದೆ. 15 ಜನರು ಪ್ರಾಣಿಗಳ ಕೊಬ್ಬನ್ನು ಅಗ್ನಿಯ ಮೂಲಕ ಹೋಮಮಾಡುವಾಗ, ಯಾಜಕರಿಗಾಗಿ ತೆಗೆದಿಟ್ಟ ತೊಡೆಯ ಭಾಗವನ್ನು ಮತ್ತು ನೈವೇದ್ಯವಾಗಿ ನಿವಾಳಿಸಬೇಕಾದ ಎದೆಯ ಭಾಗವನ್ನು ಯೆಹೋವನ ಸನ್ನಿಧಿಗೆ ತರಬೇಕು. ಅದು ನಿಮ್ಮ ಪಾಲಾಗಿರುವುದು. ಅದು ನಿನಗೂ ನಿನ್ನ ಮಕ್ಕಳಿಗೂ ಸೇರಿದ್ದು. ಯೆಹೋವನು ಆಜ್ಞಾಪಿಸಿದಂತೆ ಯಜ್ಞಗಳ ಆ ಭಾಗವು ಎಂದೆಂದೂ ನಿಮ್ಮ ಪಾಲಾಗಿರುತ್ತದೆ” ಎಂದು ಹೇಳಿದನು.
16 ಮೋಶೆಯು ಪಾಪಪರಿಹಾರಕ್ಕಾಗಿ ಸಮರ್ಪಿತವಾದ ಹೋತದ ಕುರಿತು ವಿಚಾರಿಸಿದಾಗ, ಅದನ್ನು ಸುಟ್ಟುಬಿಟ್ಟರೆಂದು ಕೇಳಿ ಆರೋನನ ಮತ್ತು ಅವನ ಪುತ್ರರಾದ ಎಲ್ಲಾಜಾರ್ ಮತ್ತು ಈತಾಮಾರ್‌ರವರ ಮೇಲೆ ಬಹುಕೋಪಗೊಂಡನು. 17 ಮೋಶೆ, “ನೀವು ಹೋತದ ಮಾಂಸವನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕಾಗಿತ್ತು. ಅದು ಬಹಳ ಪವಿತ್ರವಾದದ್ದಲ್ಲವೇ? ನೀವು ಯಾಕೆ ಅದನ್ನು ಯೆಹೋವನ ಸನ್ನಿಧಿಯಲ್ಲಿ ತಿನ್ನಲಿಲ್ಲ? ನೀವು ಜನರ ಪಾಪಪರಿಹಾರ ಮಾಡುವಂತೆಯೂ ಜನರ ದೋಷವನ್ನು ಪರಿಹಾರಮಾಡುವಂತೆಯೂ ಯೆಹೋವನು ಅದನ್ನು ನಿಮಗೆ ಕೊಟ್ಟನು. 18 ಆ ಹೋತದ ರಕ್ತವನ್ನು ಪವಿತ್ರಸ್ಥಳದ ಒಳಗಡೆ ತರಲಿಲ್ಲ. ನಾನು ಆಜ್ಞಾಪಿಸಿದಂತೆ ನೀವು ಅದರ ಮಾಂಸವನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕಾಗಿತ್ತು” ಅಂದನು.
19 ಆದರೆ ಆರೋನನು ಮೋಶೆಗೆ, “ನೋಡು ಈ ದಿನ ಇವರು ಯೆಹೋವನ ಸನ್ನಿಧಿಗೆ ಪಾಪಪರಿಹಾರಕ ಮತ್ತು ಸರ್ವಾಂಗಹೋಮಗಳನ್ನು ತಂದಿದ್ದರೂ ನನಗೆ ಈ ಆಪತ್ತು ಸಂಭವಿಸಿತು. ಹೀಗಿರುವಾಗ ನಾನು ಪಾಪಪರಿಹಾರಕ ಸಮರ್ಪಣೆಯ ಪಶುವಿನ ಮಾಂಸವನ್ನು ಈ ದಿನದಲ್ಲಿ ತಿಂದಿದ್ದರೆ ಯೆಹೋವನಿಗೆ ಒಳ್ಳೆಯದಾಗಿ ತೋರುತ್ತಿತ್ತೋ? ಇಲ್ಲ!” ಎಂದು ಹೇಳಿದನು.
20 ಮೋಶೆ ಆ ಮಾತನ್ನು ಕೇಳಿ ಒಪ್ಪಿಕೊಂಡನು.
ರಚನೆಗಾರ: ದಾವೀದ.
11 ನಾನು ಯೆಹೋವನನ್ನೇ ಆಶ್ರಯಿಸಿಕೊಂಡಿದ್ದೇನೆ.
ಹೀಗಿರಲು, “ನಿನ್ನ ಬೆಟ್ಟಕ್ಕೆ ಪಕ್ಷಿಯಂತೆ ಹಾರಿಹೋಗು” ಎಂದು ನೀವು ಹೇಳುವುದೇಕೆ?
2 ದುಷ್ಟರು ಬೇಟೆಗಾರರಂತಿದ್ದಾರೆ;
ಅವರು ಕತ್ತಲೆಯಲ್ಲಿ ಅವಿತುಕೊಂಡಿರುವರು;
ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ನೀತಿವಂತರ ಹೃದಯಕ್ಕೆ ನೇರವಾಗಿ ಹೊಡೆಯುವರು.
3 ಅಸ್ತಿವಾರಗಳೇ ನಾಶವಾಗುತ್ತಿದ್ದರೆ
ನೀತಿವಂತನು ಏನು ಮಾಡಲಾದೀತು?
4 ಯೆಹೋವನು ತನ್ನ ಪವಿತ್ರ ಆಲಯದಲ್ಲಿದ್ದಾನೆ.
ಆತನು ಪರಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು
ಮನುಷ್ಯರ ಕಾರ್ಯಗಳನ್ನು ಗಮನಿಸುತ್ತಿದ್ದಾನೆ.
ಆತನ ಕಣ್ಣುಗಳು ಅವರನ್ನು ಪರಿಶೋಧಿಸುತ್ತಿವೆ.
5 ಯೆಹೋವನು ನೀತಿವಂತರಿಗಾಗಿ ಹುಡುಕುವನು.
ಆದರೆ ಆತನು ದುಷ್ಟರನ್ನೂ ಹಿಂಸಕರನ್ನೂ ತಿರಸ್ಕರಿಸುವನು.
6 ಆತನು ಆ ದುಷ್ಟರ ಮೇಲೆ ಬೆಂಕಿಗಂಧಕಗಳ ಮಳೆಯನ್ನು ಸುರಿಸುವನು.
ಅವರಿಗೆ ಸಿಕ್ಕುವುದೆಂದರೆ ಕಾದ ಉರಿಗಾಳಿಯೊಂದೇ.
7 ಯಾಕೆಂದರೆ ಯೆಹೋವನು ನೀತಿಸ್ವರೂಪನಾಗಿದ್ದಾನೆ; ಆತನು ನ್ಯಾಯವನ್ನು ಪ್ರೀತಿಸುತ್ತಾನೆ.
ನೀತಿವಂತರು ಆತನ ಮುಖವನ್ನು ನೋಡುವರು.
ರಚನೆಗಾರ: ದಾವೀದ.
12 ಯೆಹೋವನೇ, ನನ್ನನ್ನು ರಕ್ಷಿಸು!
ಒಳ್ಳೆಯವರೆಲ್ಲಾ ಕೊನೆಗೊಂಡರು.
ಭೂನಿವಾಸಿಗಳಲ್ಲಿ ನಿಜವಾದ ವಿಶ್ವಾಸಿಗಳು ಉಳಿದೇ ಇಲ್ಲ.
2 ಜನರು ತಮ್ಮ ನೆರೆಯವರಿಗೆ ಸುಳ್ಳು ಹೇಳುವರು.
ಪ್ರತಿಯೊಬ್ಬರೂ ತಮ್ಮ ನೆರೆಯವರಿಗೆ ಸುಳ್ಳಿನಿಂದ ಮುಖಸ್ತುತಿ ಮಾಡುವರು.
3 ಸುಳ್ಳಾಡುವ ಆ ತುಟಿಗಳನ್ನೂ ಕಟ್ಟುಕಥೆಗಳನ್ನು ಹೇಳುವ
ಆ ನಾಲಿಗೆಗಳನ್ನೂ ಯೆಹೋವನು ಕತ್ತರಿಸಿಹಾಕಲಿ.
4 “ನಾವು ಪ್ರಮುಖರಾಗಲು ನಮ್ಮ ಸುಳ್ಳುಗಳೇ ನಮಗೆ ಆಧಾರ.
ನಮ್ಮ ನಾಲಿಗೆಗಳು ಇರುವಾಗ ನಮಗೆ ಒಡೆಯರಾಗಲು ಯಾರಿಗೆ ಸಾಧ್ಯ?” ಎಂದು ಅವರು ಹೇಳುತ್ತಾರೆ.
5 ಆದರೆ ಯೆಹೋವನು ಹೇಳುವುದೇನೆಂದರೆ:
“ದುಷ್ಟರು ಕುಗ್ಗಿಹೋದವರಿಂದ ಕದ್ದುಕೊಂಡಿದ್ದಾರೆ.
ಅಸಹಾಯಕರು ದುಃಖದಿಂದ ನಿಟ್ಟುಸಿರು ಬಿಡುತ್ತಿದ್ದಾರೆ.
ಆದ್ದರಿಂದ ನಾನು ಎದ್ದುನಿಂತು, ಆಯಾಸಗೊಂಡಿರುವ ಅವರನ್ನು ಕಾಪಾಡುವೆನು.”
6 ಯೆಹೋವನ ಮಾತುಗಳು
ಬೆಂಕಿಯಲ್ಲಿ ಏಳು ಸಲ ಶುದ್ಧೀಕರಿಸಿದ ಬೆಳ್ಳಿಯಂತೆ ಸತ್ಯವಾಗಿವೆ.
7 ಯೆಹೋವನೇ, ಅಸಹಾಯಕರನ್ನು ಪರಿಪಾಲಿಸು.
ಅವರನ್ನು ಶಾಶ್ವತವಾಗಿ ಸಂರಕ್ಷಿಸು.
8 ಆ ದುಷ್ಟರು ಪ್ರಮುಖರಂತೆ ವರ್ತಿಸಿದರೂ
ಅವರು ಕೇವಲ ನಕಲಿ ಆಭರಣಗಳಂತಿದ್ದಾರೆ.
ಸೊಲೊಮೋನನಿಂದ ಮತ್ತಷ್ಟು ಜ್ಞಾನೋಕ್ತಿಗಳು
25 ಇವು ಸಹ ಸೊಲೊಮೋನನು ಹೇಳಿದ ಜ್ಞಾನೋಕ್ತಿಗಳು. ಈ ನುಡಿಗಳನ್ನು ಯೆಹೂದದ ರಾಜನಾಗಿದ್ದ ಹಿಜ್ಕೀಯನ ಸೇವಕರು ನಕಲು ಮಾಡಿದರು:
2 ವಿಷಯಗಳನ್ನು ರಹಸ್ಯಗೊಳಿಸಿದ್ದರಿಂದ ದೇವರಿಗೆ ಸನ್ಮಾನ; ವಿಷಯಗಳನ್ನು ಕಂಡುಹಿಡಿಯುವುದರಿಂದ ರಾಜನಿಗೆ ಸನ್ಮಾನ.
3 ಆಕಾಶದ ಎತ್ತರವನ್ನಾಗಲಿ ಭೂಮಿಯ ಆಳವನ್ನಾಗಲಿ ಅಳೆಯಲು ಯಾರಿಗೆ ಸಾಧ್ಯ? ಅಂತೆಯೇ ರಾಜರುಗಳ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲಾರರು.
4 ನೀನು ಬೆಳ್ಳಿಯಿಂದ ಕಲ್ಮಶವನ್ನು ತೆಗೆದುಹಾಕಿ ಶುದ್ಧಗೊಳಿಸಿದರೆ, ಅಕ್ಕಸಾಲಿಗನು ಅದರಿಂದ ಸುಂದರವಾದ ವಸ್ತುಗಳನ್ನು ಮಾಡಬಲ್ಲನು. 5 ಅಂತೆಯೇ, ರಾಜನಿಂದ ಕೆಟ್ಟ ಆಲೋಚನೆಗಾರರನ್ನು ತೆಗೆದುಹಾಕಿದರೆ, ಒಳ್ಳೆಯತನವು ಅವನ ಆಡಳಿತವನ್ನು ಭದ್ರಗೊಳಿಸುತ್ತದೆ.
6 ರಾಜನ ಮುಂದೆ ಜಂಬಕೊಚ್ಚಿಕೊಳ್ಳಬೇಡ. ಪ್ರಮುಖರ ಸ್ಥಳದಲ್ಲಿ ನಿಂತುಕೊಳ್ಳಬೇಡ. 7 ಗಣ್ಯರ ಮುಂದೆ ಅವಮಾನಿತನಾಗುವುದಕ್ಕಿಂತ, “ಮೇಲಕ್ಕೆ ಬಾ” ಎಂದು ಹೇಳಿಸಿಕೊಳ್ಳುವುದೇ ಉತ್ತಮ.
8 ನೀನು ಕಂಡ ಯಾವುದನ್ನಾದರೂ ನ್ಯಾಯಾಧೀಶನಿಗೆ ತಿಳಿಸಲು ಆತುರಪಡಬೇಡ. ನೀನು ತಪ್ಪಿತಸ್ಥನೆಂದು ಬೇರೊಬ್ಬನು ಹೇಳಿದರೆ, ನಿನಗೆ ಅವಮಾನವಾಗುವುದು.
9 ನೀನು ನಿನ್ನ ನೆರೆಯವನೊಂದಿಗೆ ವಾಗ್ವಾದ ಮಾಡಿದ್ದರೆ, ಗುಟ್ಟಾದ ವಿಷಯಗಳನ್ನು ಬೇರೊಬ್ಬನಿಗೆ ಪ್ರಕಟಿಸಬೇಡ. 10 ಇಲ್ಲವಾದರೆ ಅದನ್ನು ಕೇಳಿದವರೆಲ್ಲರೂ ನಿನ್ನನ್ನು ಖಂಡಿಸುವರು; ಆ ಕೆಟ್ಟ ಹೆಸರು ನಿನ್ನನ್ನೆಂದಿಗೂ ಬಿಟ್ಟುಹೋಗದು.
11 ನೀನು ಸರಿಸಮಯದಲ್ಲಿ ಒಳ್ಳೆಯದನ್ನು ಹೇಳಿದರೆ, ಅದು ಬೆಳ್ಳಿಯ ತಟ್ಟೆಯಲ್ಲಿರುವ ಚಿನ್ನದ ಸೇಬಿನಂತಿರುವುದು. 12 ಜ್ಞಾನಿಯು ನಿನಗೆ ಕೊಡುವ ಎಚ್ಚರಿಕೆಯು ಚಿನ್ನದ ಉಂಗುರಗಳಿಗಿಂತಲೂ ಬಂಗಾರದ ಆಭರಣಗಳಿಗಿಂತಲೂ ಹೆಚ್ಚು ಬೆಲೆ ಬಾಳುತ್ತದೆ.
13 ನಂಬಿಗಸ್ತನಾದ ಸಂದೇಶಕನಿಂದ ಯಜಮಾನನಿಗೆ ಉಲ್ಲಾಸ. ಅವನು ಸುಗ್ಗೀಕಾಲದ ಬಿಸಿಲಿನ ದಿನಗಳಲ್ಲಿರುವ ತಣ್ಣನೆಯ ಹಿಮದಂತಿರುವನು.
14 ದಾನ ಮಾಡುವುದಾಗಿ ಹೇಳಿಯೂ ಮಾಡದವರು ಮಳೆಯನ್ನು ತಾರದ ಮೋಡಗಳಂತೆಯೂ ಗಾಳಿಯಂತೆಯೂ ಇರುವರು.
15 ತಾಳ್ಮೆಯು ಅಧಿಪತಿಯನ್ನು ಸಹ ಮನವೊಪ್ಪಿಸುವುದು. ನಯವಾದ ಮಾತಿಗೆ ಬಹುಬಲ.
16 ಜೇನುತುಪ್ಪ ಒಳ್ಳೆಯದು. ಆದರೆ ಅತಿಯಾಗಿ ತಿನ್ನಬೇಡ. ಇಲ್ಲವಾದರೆ, ಕಾಯಿಲೆಬೀಳುವೆ. 17 ಅಂತೆಯೇ, ನಿನ್ನ ನೆರೆಯವನ ಮನೆಗೆ ಪದೇಪದೇ ಹೋಗಬೇಡ. ನೀನು ಹೋದರೆ, ಅವನು ನಿನ್ನ ಮೇಲೆ ಬೇಸರಗೊಳ್ಳುವನು.
18 ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳುವವನು ಅಪಾಯಕಾರಿ. ಅವನು ದೊಣ್ಣೆಯಂತೆಯೂ ಕತ್ತಿಯಂತೆಯೂ ಚೂಪಾದ ಬಾಣದಂತೆಯೂ ಇದ್ದಾನೆ. 19 ಕಷ್ಟಕಾಲಗಳಲ್ಲಿ ಅಪನಂಬಿಗಸ್ತನನ್ನು ಆಶ್ರಯಿಸಿಕೊಳ್ಳುವುದು ಮುರುಕು ಹಲ್ಲಿನಿಂದ ತಿನ್ನುವಂತೆಯೂ ಕುಂಟುಕಾಲಿನಿಂದ ನಡೆಯುವಂತೆಯೂ ಇದೆ.
20 ವ್ಯಸನದಿಂದಿರುವವನಿಗೆ ಸಂತಸದ ಗೀತೆಗಳನ್ನು ಹಾಡಿದರೆ ಚಳಿಯಲ್ಲಿರುವವನ ಬಟ್ಟೆಯನ್ನು ತೆಗೆದುಹಾಕಿದಂತೆಯೂ ಗಾಯದ ಮೇಲೆ ಹುಳಿರಸವನ್ನು ಸುರಿದಂತೆಯೂ ಇರುವುದು.
21 ನಿನ್ನ ವೈರಿ ಹಸಿವೆಗೊಂಡಿದ್ದರೆ, ಅವನಿಗೆ ಊಟಕೊಡು. ನಿನ್ನ ವೈರಿ ಬಾಯಾರಿದ್ದರೆ, ಅವನಿಗೆ ನೀರು ಕೊಡು. 22 ಆಗ, ಉರಿಯುವ ಕೆಂಡಗಳನ್ನು ಅವನ ತಲೆಯ ಮೇಲೆ ಇಟ್ಟಂತಾಗುವುದು. ಯೋಹೋವನು ನಿನಗೆ ಅದರ ಪ್ರತಿಫಲವನ್ನು ಕೊಡುವನು.
23 ಉತ್ತರದಿಕ್ಕಿನಿಂದ ಬೀಸುವ ಗಾಳಿ ಮಳೆಯನ್ನು ತರುವುದು. ಅಂತೆಯೇ ಚಾಡಿಮಾತು ಕೋಪಕ್ಕೆ ಕಾರಣ.
24 ವಾದಿಸುವ ಹೆಂಡತಿಯೊಡನೆ ಮನೆಯಲ್ಲಿ ಇರುವುದಕ್ಕಿಂತ ಮೇಲ್ಛಾವಣಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಮೇಲು.
25 ಬಹುದೂರದ ಒಳ್ಳೆಯ ಸುದ್ದಿಯು ಬಾಯಾರಿದವನಿಗೆ ಕೊಟ್ಟ ತಣ್ಣನೆ ನೀರಿನಂತಿರುವುದು.
26 ದುಷ್ಟನು ಒಳ್ಳೆಯವನಿಗೆ ಆಪತ್ತನ್ನು ಬರಮಾಡಿದರೆ, ಅದು ಚಿಲುಮೆಗೆ ಮಣ್ಣುಹಾಕಿದಂತೆಯೂ ಒರತೆಯನ್ನು ಹೊಲಸು ಮಾಡಿದಂತೆಯೂ ಇದೆ.
27 ಜೇನುತುಪ್ಪವನ್ನು ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಅಂತೆಯೇ, ನಿನಗೋಸ್ಕರ ಅತಿಯಾಗಿ ಸನ್ಮಾನವನ್ನು ಬಯಸಬೇಡ.
28 ತನ್ನನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾರದವನು ಕೋಟೆ ಬಿದ್ದುಹೋದ ಪಟ್ಟಣದಂತಿರುವನು.
ದೇವರನ್ನು ಹರ್ಷಗೊಳಿಸುವ ಜೀವನ
4 ಸಹೋದರ ಸಹೋದರಿಯರೇ, ಈಗ ನಿಮಗೆ ಇತರ ಕೆಲವು ವಿಚಾರಗಳನ್ನು ತಿಳಿಸುತ್ತೇನೆ. ದೇವರನ್ನು ಮೆಚ್ಚಿಸಲು ಹೇಗೆ ಜೀವಿಸಬೇಕೆಂದು ನಿಮಗೆ ಕಲಿಸಿದ್ದೇವೆ. ನೀವು ಅದೇ ರೀತಿಯಲ್ಲಿ ಜೀವಿಸುತ್ತಿರುವಿರಿ. ಅದೇ ರೀತಿಯಲ್ಲಿ ಇನ್ನೂ ಹೆಚ್ಚು ಸಮರ್ಪಕವಾಗಿ ಜೀವಿಸಬೇಕೆಂದು ನಾವು ನಿಮ್ಮನ್ನು ಕ್ರಿಸ್ತನಲ್ಲಿ ಕೇಳಿಕೊಳ್ಳುತ್ತೇವೆ ಮತ್ತು ಪ್ರೋತ್ಸಾಹಿಸುತ್ತೇವೆ. 2 ನೀವು ಯಾವ ಕಾರ್ಯಗಳನ್ನು ಮಾಡಬೇಕೆಂದು ನಾವು ನಿಮಗೆ ಹೇಳಿದೆವೋ ಅವುಗಳೆಲ್ಲಾ ನಿಮಗೆ ತಿಳಿದೇ ಇವೆ. ಪ್ರಭು ಯೇಸುವಿನ ಅಧಿಕಾರದಿಂದ ನಾವು ಆ ಸಂಗತಿಗಳನ್ನು ನಿಮಗೆ ಹೇಳಿದೆವು. 3 ನೀವು ಪವಿತ್ರರಾಗಿರಬೇಕೆಂಬುದು ದೇವರ ಚಿತ್ತವಾಗಿದೆ. ಆದುದರಿಂದ ನೀವು ಲೈಂಗಿಕ ಪಾಪಗಳಿಂದ ದೂರವಿರಿ. 4 ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಸ್ವಂತ ದೇಹಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂಬುದು ದೇವರ ಅಪೇಕ್ಷೆ. ನಿಮ್ಮ ದೇಹವನ್ನು ಪವಿತ್ರವಾದ ಮಾರ್ಗದಲ್ಲಿ ಬಳಸಿದರೆ, ದೇವರಿಗೆ ಗೌರವವನ್ನು ನೀಡಿದಂತಾಗುವುದು.[a] 5 ನಿಮ್ಮ ದೇಹವನ್ನು ಲೈಂಗಿಕ ಪಾಪಗಳಿಗಾಗಿ ಬಳಸಬೇಡಿ. ದೇವರನ್ನು ತಿಳಿಯದ ಜನರು ತಮ್ಮ ದೇಹಗಳನ್ನು ಅದಕ್ಕೆ ಬಳಸುತ್ತಾರೆ. 6 ಈ ವಿಷಯದಲ್ಲಿ ನಿಮ್ಮಲ್ಲಿ ಯಾರೂ ಕ್ರಿಸ್ತನಲ್ಲಿ ಸಹೋದರನಾದವನನ್ನು ವಂಚಿಸಿ ಕೇಡುಮಾಡಬಾರದು. ನಾವು ಈಗಾಗಲೇ ನಿಮಗೆ ಹೇಳಿದಂತೆ ಮತ್ತು ಎಚ್ಚರಿಕೆ ನೀಡಿದಂತೆ ಇವೆಲ್ಲವುಗಳ ವಿಷಯದಲ್ಲಿ ದೇವರು ದಂಡಿಸುತ್ತಾನೆ. 7 ದೇವರು ನಮ್ಮನ್ನು ಪರಿಶುದ್ಧರಾಗಿ ಜೀವಿಸುವುದಕ್ಕೆ ಕರೆದಿದ್ದಾನೆ. ನಾವು ಪಾಪದಲ್ಲಿ ಜೀವಿಸಲು ಆತನು ಇಷ್ಟಪಡುವುದಿಲ್ಲ. 8 ಆದುದರಿಂದ ಈ ಉಪದೇಶವನ್ನು ಅನುಸರಿಸದವನು ಅವಿಧೇಯನಾಗಿರುವುದು ದೇವರಿಗೇ ಹೊರತು ಮಾನವನಿಗಲ್ಲ. ನಮಗೆ ತನ್ನ ಪವಿತ್ರಾತ್ಮನನ್ನು ನೀಡಿದಾತನು ದೇವರೇ.
9 ಕ್ರಿಸ್ತನಲ್ಲಿ ಸಹೋದರ ಸಹೋದರಿಯರನ್ನು ಹೇಗೆ ಪ್ರೀತಿಸಬೇಕೆಂಬುದರ ಬಗ್ಗೆ ನಾವು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ಒಬ್ಬರನ್ನೊಬ್ಬರು ಹೇಗೆ ಪ್ರೀತಿಸಬೇಕೆಂಬುದನ್ನು ಈಗಾಗಲೇ ದೇವರು ನಿಮಗೆ ಕಲಿಸಿದ್ದಾನೆ. 10 ಮಕೆದೋನಿಯದಲ್ಲಿರುವ ಸಹೋದರ ಸಹೋದರಿಯರನ್ನೆಲ್ಲ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದೀರಿ. ಅವರನ್ನು ಇನ್ನೂ ಹೆಚ್ಚೆಚ್ಚಾಗಿ ನೀವು ಪ್ರೀತಿಸಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
11 ಶಾಂತಿಯಿಂದ ಜೀವಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ನಿಮ್ಮ ಸ್ವಂತ ವ್ಯವಹಾರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಿ. ನಿಮ್ಮ ಕೈಯಾರೆ ಕೆಲಸ ಮಾಡಬೇಕೆಂದು ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. 12 ನೀವು ಹೀಗೆ ಮಾಡಿದರೆ, ವಿಶ್ವಾಸಿಗಳಲ್ಲದವರು ನಿಮ್ಮ ಜೀವತದ ರೀತಿಯನ್ನು ಕಂಡು ನಿಮ್ಮನ್ನು ಗೌರವಿಸುತ್ತಾರೆ. ಅಲ್ಲದೆ ನಿಮ್ಮ ಅಗತ್ಯತೆಗಳ ಪೂರೈಕೆಗಾಗಿ ನೀವು ಬೇರೆಯವರನ್ನು ಅವಲಂಬಿಸಿಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ.
ಪ್ರಭುವಿನ ಬರುವಿಕೆ
13 ಸಹೋದರ ಸಹೋದರಿಯರೇ, ಸತ್ತುಹೋದ ಜನರ ಬಗ್ಗೆ ನೀವು ತಿಳಿದುಕೊಳ್ಳಬೇಕೆಂಬುದು ನಮ್ಮ ಅಪೇಕ್ಷೆ. ನಿರೀಕ್ಷೆಯಿಲ್ಲದ ಜನರಂತೆ ನೀವು ದುಃಖದಿಂದಿರುವುದು ನಮಗೆ ಇಷ್ಟವಿಲ್ಲ. 14 ಯೇಸು ಸತ್ತುಹೋದನೆಂದು ನಾವು ನಂಬುತ್ತೇವೆ. ಆದರೆ ಯೇಸು ಮತ್ತೆ ಜೀವಂತವಾಗಿ ಎದ್ದುಬಂದನೆಂಬುದನ್ನೂ ನಾವು ನಂಬುತ್ತೇವೆ. ಹಾಗೆಯೇ ಯೇಸುವಿನಲ್ಲಿ ವಿಶ್ವಾಸವಿಟ್ಟು ಸತ್ತುಹೋದವರನ್ನು ದೇವರು ಆತನ ಜೊತೆಯಲ್ಲಿ ಕರೆದುಕೊಂಡು ಬರುವನು.
15 ಈಗ ನಾವು ನಿಮಗೆ ಹೇಳುತ್ತಿರುವುದು ಪ್ರಭುವಿನ ಸ್ವಂತ ಸಂದೇಶವನ್ನೇ. ಪ್ರಭುವು ಮತ್ತೆ ಬಂದಾಗ ಈಗ ಜೀವಿಸುತ್ತಿರುವ ನಾವು ಇನ್ನೂ ಜೀವದಿಂದ ಇದ್ದರೆ ನಾವು ಪ್ರಭುವಿನ ಜೊತೆಯಲ್ಲಿರುತ್ತೇವೆ. ಆದರೂ ಸತ್ತುಹೋದ ಇತರರಿಗಿಂತಲೂ ನಾವು ಮುಂದಿನವರಾಗುವುದಿಲ್ಲ. 16 ಪ್ರಭುವು ತಾನೇ ಪರಲೋಕದಿಂದ ಇಳಿದುಬರುವನು. ಆಗ ಪ್ರಧಾನ ದೇವದೂತನು ದೇವರ ತುತೂರಿ ಧ್ವನಿಯೊಡನೆ ಆಜ್ಞಾಘೋಷ ಮಾಡುವನು. ಕೂಡಲೇ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು. 17 ಅನಂತರ, ಇನ್ನೂ ಜೀವದಿಂದುಳಿದಿರುವ ನಾವು ಸತ್ತವರೊಡನೆ ಒಂದುಗೂಡುವೆವು. ಪ್ರಭುವನ್ನು ಅಂತರಿಕ್ಷದಲ್ಲಿ ಎದುರುಗೊಳ್ಳಲು ನಾವು ಮೇಘಗಳ ನಡುವೆ ಎತ್ತಲ್ಪಡುವೆವು. ಹೀಗೆ ನಾವು ಯಾವಾಗಲೂ ಪ್ರಭುವಿನೊಂದಿಗೆ ಇರುವೆವು. 18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.
Kannada Holy Bible: Easy-to-Read Version. All rights reserved. © 1997 Bible League International