Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 8

ಮೋಶೆಯಿಂದ ಯಾಜಕರ ಸಿದ್ಧತೆ

ಯೆಹೋವನು ಮೋಶೆಗೆ, “ಆರೋನನನ್ನೂ ಅವನ ಪುತ್ರರನ್ನೂ ಕರೆದುಕೊಂಡು ಅವರೊಂದಿಗೆ ಯಾಜಕ ವಸ್ತ್ರಗಳನ್ನೂ ಅಭಿಷೇಕ ತೈಲವನ್ನೂ ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋರಿಯನ್ನೂ ಎರಡು ಟಗರುಗಳನ್ನೂ ಹುಳಿಯಿಲ್ಲದ ರೊಟ್ಟಿಯಿಂದ ತುಂಬಿರುವ ಪುಟ್ಟಿಯನ್ನೂ ತೆಗೆದುಕೊಂಡು ಬಾ. ಮತ್ತು ಜನರನ್ನು ಒಟ್ಟಾಗಿ ದೇವದರ್ಶನಗುಡಾರದ ಬಾಗಿಲಿಗೆ ಎದುರಿನಲ್ಲಿ ಸೇರಿಸು” ಎಂದು ಹೇಳಿದನು.

ಯೆಹೋವನು ಆಜ್ಞಾಪಿಸಿದ್ದನ್ನು ಮೋಶೆ ಮಾಡಿದನು. ಜನರು ಒಟ್ಟಾಗಿ ದೇವದರ್ಶನಗುಡಾರದ ಬಾಗಿಲಲ್ಲಿ ಸೇರಿ ಬಂದರು. ಆಗ ಮೋಶೆ ಜನರಿಗೆ, “ನಾನು ಈಗ ಮಾಡುವ ಕಾರ್ಯವನ್ನು ಯೆಹೋವನೇ ಆಜ್ಞಾಪಿಸಿದನು” ಎಂದು ಹೇಳಿದನು.

ತರುವಾಯ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಕರೆದನು. ಅವನು ಅವರಿಗೆ ನೀರಿನಿಂದ ಸ್ನಾನ ಮಾಡಿಸಿದನು; ನಿಲುವಂಗಿಯನ್ನು ಆರೋನನಿಗೆ ತೊಡಿಸಿದನು; ನಡುಕಟ್ಟನ್ನು ಕಟ್ಟಿದನು; ಮೇಲಂಗಿಯನ್ನು ತೊಡಿಸಿದನು. ಏಫೋದನ್ನು ಹಾಕಿಸಿ ಕವಚದ ಮೇಲಿನ ವಿಶೇಷವಾದ ನಡುಕಟ್ಟನ್ನು ಕಟ್ಟಿದನು; ಎದೆಕವಚವನ್ನು ಬಿಗಿದನು. ಅದರೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಹಾಕಿದನು. ಅವನ ತಲೆಗೆ ಮುಂಡಾಸವನ್ನು ಇಟ್ಟನು; ಮುಂಡಾಸದ ಮುಂಭಾಗದಲ್ಲಿ ಚಿನ್ನದ ಪಟ್ಟಿಯನ್ನು ಕಟ್ಟಿದನು. ಈ ಚಿನ್ನದ ಪಟ್ಟಿಯು ಪವಿತ್ರಕಿರೀಟವಾಗಿದೆ. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.

10 ತರುವಾಯ ಮೋಶೆ ಅಭಿಷೇಕತೈಲವನ್ನು ತೆಗೆದುಕೊಂಡು ಪವಿತ್ರಗುಡಾರದ ಮೇಲೆ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳ ಮೇಲೆ ಚಿಮಿಕಿಸಿದನು. ಈ ರೀತಿಯಾಗಿ ಮೋಶೆ ಅವುಗಳನ್ನು ಪವಿತ್ರಗೊಳಿಸಿದನು. 11 ಮೋಶೆಯು ಅಭಿಷೇಕತೈಲದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ವೇದಿಕೆಯ ಮೇಲೆ ಏಳು ಸಲ ಚಿಮಿಕಿಸಿದನು. ಮೋಶೆಯು ತೈಲವನ್ನು ವೇದಿಕೆಯ ಮೇಲೆ, ಅದರ ಎಲ್ಲಾ ಉಪಕರಣಗಳ ಮೇಲೆ ಚಿಮಿಕಿಸಿದನು. ಮೋಶೆಯು ತೈಲವನ್ನು ಗಂಗಾಳ ಮತ್ತು ಅದರ ಪೀಠದ ಮೇಲೂ ಚಿಮಿಕಿಸಿದನು. ಈ ರೀತಿಯಾಗಿ ಮೋಶೆ ಅವುಗಳನ್ನು ಪವಿತ್ರಗೊಳಿಸಿದನು. 12 ಬಳಿಕ ಮೋಶೆ ಸ್ವಲ್ಪ ಅಭಿಷೇಕತೈಲವನ್ನು ಆರೋನನ ತಲೆಗೆ ಹೊಯಿದು ಅವನನ್ನು ಪವಿತ್ರಗೊಳಿಸಿದನು. 13 ಬಳಿಕ ಮೋಶೆಯು ಆರೋನನ ಪುತ್ರರನ್ನು ಕರೆದುಕೊಂಡು ಬಂದು ಅವರಿಗೆ ನಿಲುವಂಗಿಗಳನ್ನು ತೊಡಿಸಿ ನಡುಕಟ್ಟನ್ನು ಕಟ್ಟಿದನು. ಬಳಿಕ ಅವರ ತಲೆಗಳಿಗೆ ಮುಂಡಾಸಗಳನ್ನು ಇಟ್ಟನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.

14 ತರುವಾಯ ಮೋಶೆಯು ಪಾಪಪರಿಹಾರಕ್ಕಾಗಿ ಯಜ್ಞದ ಹೋರಿಯನ್ನು ತಂದನು. ಆರೋನನು ಮತ್ತು ಅವನ ಪುತ್ರರು ಆ ಪಾಪಪರಿಹಾರಕ ಯಜ್ಞದ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು. 15 ಬಳಿಕ ಮೋಶೆಯು ಹೋರಿಯನ್ನು ವಧಿಸಿ ಅದರ ರಕ್ತವನ್ನು ತೆಗೆದುಕೊಂಡು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ ವೇದಿಕೆಯ ಎಲ್ಲಾ ಮೂಲೆಗಳಿಗೆ ರಕ್ತವನ್ನು ಹಚ್ಚಿದನು. ಹೀಗೆ ಮೋಶೆಯು ವೇದಿಕೆಯನ್ನು ಯಜ್ಞಗಳಿಗಾಗಿ ಶುದ್ಧಗೊಳಿಸಿ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿದನು; ಜನರನ್ನು ಶುದ್ಧಿಮಾಡುವ ಯಜ್ಞಗಳನ್ನು ಸಮರ್ಪಿಸುವುದಕ್ಕಾಗಿ ವೇದಿಕೆಯನ್ನು ಪ್ರತಿಷ್ಠೆಗೊಳಿಸಿದನು. 16 ಮೋಶೆಯು ಹೋರಿಯ ಒಳಗಿನ ಭಾಗಗಳ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳನ್ನು ಆವರಿಸಿರುವ ಕೊಬ್ಬನ್ನೂ ತೆಗೆದುಕೊಂಡು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು. 17 ಹೋರಿಯ ಚರ್ಮ, ಅದರ ಮಾಂಸ ಮತ್ತು ಅದರ ಶರೀರದ ಕಲ್ಮಶವನ್ನು ಅವನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಬೆಂಕಿಯಿಂದ ಸುಟ್ಟುಹಾಕಿದನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.

18 ಬಳಿಕ ಮೋಶೆಯು ಸರ್ವಾಂಗಹೋಮದ ಟಗರನ್ನು ತಂದನು. ಆರೋನನು ಮತ್ತು ಅವನ ಪುತ್ರರು ತಮ್ಮ ಕೈಗಳನ್ನು ಟಗರಿನ ತಲೆಯ ಮೇಲೆ ಇಟ್ಟರು. 19 ಆಗ ಮೋಶೆಯು ಟಗರನ್ನು ವಧಿಸಿ ಅದರ ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು. 20-21 ಮೋಶೆಯು ಟಗರನ್ನು ತುಂಡುತುಂಡಾಗಿ ಕಡಿದು ಅದರ ಒಳಗಿನ ಭಾಗಗಳನ್ನು ಮತ್ತು ಕಾಲುಗಳನ್ನು ನೀರಿನಿಂದ ತೊಳೆದನು; ಇಡೀ ಟಗರನ್ನು ವೇದಿಕೆಯ ಮೇಲೆ ಹೋಮಮಾಡಿದನು. ಮೋಶೆಯು ಅದರ ತಲೆ, ತುಂಡುಗಳು ಮತ್ತು ಕೊಬ್ಬನ್ನು ಹೋಮಮಾಡಿದನು. ಅದು ಯೆಹೋವನಿಗೆ ಅಗ್ನಿಯ ಮೂಲಕ ಅರ್ಪಿಸಲ್ಪಟ್ಟ ಸುಗಂಧಕರವಾದ ಸರ್ವಾಂಗಹೋಮವಾಗಿದೆ. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.

22 ಬಳಿಕ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸುವುದಕ್ಕೆ ವಧಿಸಬೇಕಾದ ಎರಡನೆಯ ಟಗರನ್ನು ತಂದನು. ಆರೋನನೂ ಅವನ ಪುತ್ರರೂ ತಮ್ಮ ಕೈಗಳನ್ನು ಟಗರಿನ ತಲೆಯ ಮೇಲೆ ಇಟ್ಟರು. 23 ಆಗ ಮೋಶೆ ಟಗರನ್ನು ವಧಿಸಿ ಅದರ ಸ್ವಲ್ಪ ರಕ್ತವನ್ನು ಆರೋನನ ಬಲಗಿವಿಯ ತುದಿಗೂ ಅವನ ಬಲಗೈಯ ಹೆಬ್ಬೆರಳಿಗೂ ಅವನ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು. 24 ಬಳಿಕ ಮೋಶೆಯು ಆರೋನನ ಪುತ್ರರನ್ನು ವೇದಿಕೆಯ ಸಮೀಪಕ್ಕೆ ಕರೆಸಿ ಸ್ವಲ್ಪ ರಕ್ತವನ್ನು ಅವರ ಬಲಗಿವಿಗಳ ತುದಿಗೂ ಅವರ ಬಲಗೈಗಳ ಹೆಬ್ಬೆರಳಿಗೂ ಮತ್ತು ಅವರ ಬಲಗಾಲುಗಳ ಹೆಬ್ಬೆಟ್ಟಿಗೂ ಹಚ್ಚಿದನು; ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು; 25 ಕೊಬ್ಬನ್ನು ಅಂದರೆ ಬಾಲದ ಮೇಲಿರುವ ಕೊಬ್ಬನ್ನೂ ಒಳಗಿನ ಭಾಗಗಳ ಮೇಲಿರುವ ಕೊಬ್ಬೆಲ್ಲವನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಅವುಗಳ ಮೇಲಿರುವ ಕೊಬ್ಬನ್ನೂ ಮತ್ತು ಬಲ ತೊಡೆಯನ್ನೂ ತೆಗೆದುಕೊಂಡನು. 26 ಪ್ರತಿದಿನ ಯೆಹೋವನ ಸನ್ನಿಧಿಯಲ್ಲಿ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯು ಇಡಲ್ಪಡುತ್ತಿತ್ತು. ಮೋಶೆಯು ರೊಟ್ಟಿಯಲ್ಲಿ ಒಂದು ತುಂಡನ್ನೂ ಎಣ್ಣೆ ಬೆರಸಿದ ರೊಟ್ಟಿಯಲ್ಲಿ ಒಂದು ತುಂಡನ್ನೂ ಹುಳಿಯಿಲ್ಲದ ಒಂದು ಕಡುಬನ್ನೂ ತೆಗೆದುಕೊಂಡನು. ಮೋಶೆಯು ಆ ರೊಟ್ಟಿಯ ತುಂಡುಗಳನ್ನು ಕೊಬ್ಬಿನ ಮತ್ತು ಟಗರಿನ ಬಲ ತೊಡೆಯ ಮೇಲೆ ಇಟ್ಟನು. 27 ಬಳಿಕ ಮೋಶೆ ಅವೆಲ್ಲವುಗಳನ್ನು ಆರೋನನ ಮತ್ತು ಅವನ ಪುತ್ರರ ಕೈಗಳಲ್ಲಿ ಇಟ್ಟು, ತುಂಡುಗಳನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು. 28 ಬಳಿಕ ಮೋಶೆಯು ಆರೋನನ ಮತ್ತು ಅವನ ಪುತ್ರರ ಕೈಗಳಲ್ಲಿರುವ ಈ ವಸ್ತುಗಳನ್ನು ತೆಗೆದುಕೊಂಡನು. ಮೋಶೆ ಅವುಗಳನ್ನು ವೇದಿಕೆಯಲ್ಲಿ ಸರ್ವಾಂಗಹೋಮದ ಮೇಲಿಟ್ಟು ಅವುಗಳನ್ನು ಹೋಮಮಾಡಿದನು. ಅದು ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸುವ ಸಮರ್ಪಣೆಯಾಗಿತ್ತು. ಹೋಮವಾಗಿ ಅರ್ಪಿಸಲ್ಪಟ್ಟ ಈ ಯಜ್ಞವು ಯೆಹೋವನಿಗೆ ಸುಗಂಧಕರವಾಗಿದೆ. 29 ಮೋಶೆ ಎದೆಯ ಭಾಗವನ್ನು ತೆಗೆದುಕೊಂಡು ಯೆಹೋವನ ಮುಂದೆ ನೈವೇದ್ಯವಾಗಿ ನಿವಾಳಿಸಿದನು. ಅದು ಯಾಜಕರನ್ನು ನೇಮಿಸುವುದಕ್ಕಾಗಿ ಅರ್ಪಿಸಲ್ಪಟ್ಟ ಟಗರಿನಲ್ಲಿ ಮೋಶೆಯ ಪಾಲಾಗಿತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.

30 ಮೋಶೆ ಸ್ವಲ್ಪ ಅಭಿಷೇಕತೈಲವನ್ನು ಮತ್ತು ವೇದಿಕೆಯ ಮೇಲಿದ್ದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಮೇಲೆ ಮತ್ತು ಅವನ ಯಾಜಕವಸ್ತ್ರದ ಮೇಲೆ ಚಿಮಿಕಿಸಿದನು; ಆರೋನನ ಜೊತೆ ಇದ್ದ ಅವನ ಪುತ್ರರ ಮೇಲೆ ಮತ್ತು ಅವರ ಬಟ್ಟೆಗಳ ಮೇಲೆ ಚಿಮಿಕಿಸಿದನು. ಹೀಗೆ ಮೋಶೆಯು ಆರೋನನನ್ನೂ ಅವನ ಯಾಜಕವಸ್ತ್ರವನ್ನೂ ಅವನ ಪುತ್ರರನ್ನೂ ಅವರ ಯಾಜಕ ವಸ್ತ್ರಗಳನ್ನೂ ಪವಿತ್ರಗೊಳಿಸಿದನು.[a]

31 ತರುವಾಯ ಮೋಶೆಯು ಆರೋನನಿಗೂ ಅವನ ಪುತ್ರರಿಗೂ ಹೀಗೆ ಹೇಳಿದನು: “ನೀವು ಮಾಂಸವನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಬೇಯಿಸಿ ತಿನ್ನಬೇಕು. ಪ್ರತಿಷ್ಠೆಕಾಣಿಕೆಯ ಬುಟ್ಟಿಯಲ್ಲಿರುವ ರೊಟ್ಟಿಯೊಡನೆ ಅದನ್ನು ಅಲ್ಲಿ ತಿನ್ನಿರಿ. ಮಾಂಸವನ್ನೂ ರೊಟ್ಟಿಯನ್ನೂ ಆ ಸ್ಥಳದಲ್ಲಿ ತಿನ್ನಿರಿ. ನಾನು ಹೇಳುವ ಹಾಗೆ ಇದನ್ನು ಮಾಡಿರಿ. 32 ಮಾಂಸವಾಗಲಿ ರೊಟ್ಟಿಯಾಗಲಿ ಉಳಿದರೆ ಅದನ್ನು ಸುಟ್ಟುಹಾಕಿರಿ. 33 ಯಾಜಕರಾಗಿ ಪ್ರತಿಷ್ಠಿಸುವ ಆಚಾರವಿಧಿಯು ಏಳು ದಿನಗಳವರೆಗೆ ಇರುವುದು. ಆ ಸಮಯ ಮುಗಿಯುವವರೆಗೆ ನೀವು ದೇವದರ್ಶನಗುಡಾರದ ಬಾಗಿಲನ್ನು ಬಿಟ್ಟು ಹೋಗಬಾರದು. 34 ಈ ದಿನದಲ್ಲಿ ಮಾಡಿದ ಸಕಲಕಾರ್ಯಗಳನ್ನು ಏಳು ದಿನವೂ ಮಾಡಬೇಕು. 35 ನೀವು ಏಳು ದಿನಗಳು ಹಗಲುರಾತ್ರಿ ದೇವದರ್ಶನಗುಡಾರದ ಬಾಗಿಲಿನಲ್ಲಿ ಇರಬೇಕು. ನೀವು ಯೆಹೋವನ ಆಜ್ಞೆಗಳಿಗೆ ವಿಧೇಯರಾಗದಿದ್ದರೆ ಸಾಯುವಿರಿ! ಯೆಹೋವನು ಆ ಆಜ್ಞೆಗಳನ್ನು ನನಗೆ ಕೊಟ್ಟನು.”

36 ಆದ್ದರಿಂದ ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ಆರೋನನೂ ಅವನ ಪುತ್ರರೂ ಮಾಡಿದರು.

ಕೀರ್ತನೆಗಳು 9

ರಚನೆಗಾರ: ದಾವೀದ.

ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು.
    ನಿನ್ನ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು.
ದೇವರೇ, ನಿನ್ನಲ್ಲಿ ನಾನು ಸಂತೋಷಿಸುತ್ತಾ ಉಲ್ಲಾಸಪಡುವೆನು.
    ಮಹೋನ್ನತನೇ, ನಿನ್ನ ಹೆಸರನ್ನೇ ಸಂಕೀರ್ತಿಸುವೆನು.
ನನ್ನ ವೈರಿಗಳು ನಿನ್ನ ಎದುರಿನಿಂದ ಹಿಂತಿರುಗಿ ಓಡಿಹೋದರು.
    ಆದರೆ ಅವರು ಬಿದ್ದು ನಾಶವಾದರು.

ನೀನು ನೀತಿವಂತನಾದ ನ್ಯಾಯಾಧಿಪತಿ.
    ಸಿಂಹಾಸನದ ಮೇಲೆ ಕುಳಿತು ನೀನು ನ್ಯಾಯತೀರಿಸುವೆ.
    ನೀನು ನನ್ನ ಮೊಕದ್ದಮೆಯನ್ನು ಕೇಳಿ ನನ್ನ ವಿಷಯದಲ್ಲಿ ತೀರ್ಪು ಮಾಡಿರುವೆ.
ನೀನು ಜನಾಂಗಗಳನ್ನು ಟೀಕಿಸಿ ಆ ದುಷ್ಟರನ್ನು ನಾಶಮಾಡಿದೆ.
    ನೀನು ಅವರ ಹೆಸರುಗಳನ್ನು ಜೀವಿತರ ಪಟ್ಟಿಯಿಂದ ಶಾಶ್ವತವಾಗಿ ಅಳಿಸಿಹಾಕಿರುವೆ.
ವೈರಿಗಳು ಇಲ್ಲವಾದರು.
    ನೀನು ಅವರ ನಗರಗಳನ್ನು ನಾಶಮಾಡಿದೆ!
    ಈಗ ಹಾಳಾದ ಕಟ್ಟಡಗಳು ಮಾತ್ರ ಉಳಿದಿವೆ; ದುಷ್ಟರನ್ನು ಜ್ಞಾಪಕಕ್ಕೆ ತರುವ ಯಾವುದೂ ಉಳಿದಿಲ್ಲ.

ಯೆಹೋವನಾದರೋ ಶಾಶ್ವತವಾಗಿ ಆಳುವನು.
    ಆತನು ಭೂಲೋಕಕ್ಕೆ ನ್ಯಾಯದೊರಕಿಸುವುದಕ್ಕಾಗಿ ತನ್ನ ರಾಜ್ಯವನ್ನು ಬಲಗೊಳಿಸಿದ್ದಾನೆ.
ಆತನು ಭೂನಿವಾಸಿಗಳಿಗೆಲ್ಲಾ ನ್ಯಾಯವಾಗಿ ತೀರ್ಪುಮಾಡುವನು.
    ಆತನು ಜನಾಂಗಗಳಿಗೆಲ್ಲಾ ಯಥಾರ್ಥವಾಗಿ ತೀರ್ಪುಮಾಡುವನು.
ಯೆಹೋವನು ಕುಗ್ಗಿಹೋದವರಿಗೆ ಆಶ್ರಯಸ್ಥಾನವೂ
    ಇಕ್ಕಟ್ಟಿನಲ್ಲಿರುವವರಿಗೆ ಆಶ್ರಯದುರ್ಗವೂ ಆಗಿದ್ದಾನೆ.

10 ಯೆಹೋವನೇ, ನಿನ್ನ ಹೆಸರನ್ನು ಬಲ್ಲವರು ನಿನ್ನಲ್ಲಿ ಭರವಸೆಯಿಡುವರು.
    ಯಾಕೆಂದರೆ ನಿನ್ನ ಸಹಾಯಕ್ಕಾಗಿ ಬರುವವರನ್ನು ನೀನು ತೊರೆದುಬಿಡುವುದಿಲ್ಲ.

11 ಚೀಯೋನಿನ ನಿವಾಸಿಗಳೇ, ಯೆಹೋವನನ್ನು ಸಂಕೀರ್ತಿಸಿರಿ.
    ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.
12 ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವ ಆತನು
    ಕುಗ್ಗಿಹೋದವರ ಮೊರೆಯನ್ನು ಮರೆಯದೆ ಅವರನ್ನು ಜ್ಞಾಪಿಸಿಕೊಂಡನು.

13 “ಯೆಹೋವನೇ, ನನ್ನನ್ನು ಕನಿಕರಿಸು.
    ಇಗೋ, ವೈರಿಗಳು ನನಗೆ ಕೇಡುಮಾಡುತ್ತಿದ್ದಾರೆ.
    ‘ಮರಣ ದ್ವಾರ’ದಿಂದ ತಪ್ಪಿಸಿ ಕಾಪಾಡು.”
14 ಆಗ ಜೆರುಸಲೇಮಿನ ದ್ವಾರಗಳ ಬಳಿಯಲ್ಲಿ ನಿನ್ನನ್ನು ಸಂಕೀರ್ತಿಸುವೆನು.
    ನೀನು ನನ್ನನ್ನು ರಕ್ಷಿಸಿದ್ದರಿಂದ ಹರ್ಷಿಸುವೆನು.

15 ಅನ್ಯಜನಾಂಗಗಳವರು ತಾವು ತೋಡಿದ ಕುಣಿಗಳಲ್ಲಿ ತಾವೇ ಬಿದ್ದುಹೋಗುವರು;
    ತಾವು ಹಾಸಿದ ಬಲೆಗಳಲ್ಲಿ ತಾವೇ ಸಿಕ್ಕಿಬೀಳುವರು.
16 ಯೆಹೋವನು ಅವರನ್ನು ಅವರ ಕುಯುಕ್ತಿಯಲ್ಲಿಯೇ ಸಿಕ್ಕಿಸಿದ್ದರಿಂದ
    ಆತನ ನೀತಿಯು ಪ್ರಖ್ಯಾತವಾಯಿತು.

17 ದೇವರನ್ನು ಅಲಕ್ಷ್ಯ ಮಾಡುವ ಜನರೆಲ್ಲ ಕೆಟ್ಟವರು.
    ಅವರು ಮರಣದ ಸ್ಥಳಕ್ಕೆ ಹೋಗುವರು.
18 ಕೆಲವೊಮ್ಮೆ, ಇಕ್ಕಟ್ಟಿನಲ್ಲಿರುವವರನ್ನು ದೇವರು ಮರೆತಿರುವಂತೆ ಕಾಣುತ್ತದೆ;
    ಕುಗ್ಗಿಹೋದ ಅವರಿಗೆ ನಿರೀಕ್ಷೆಯೇ ಇಲ್ಲದಂತೆ ಕಂಡರೂ
    ದೇವರು ಅವರನ್ನು ಮರೆತುಬಿಡುವುದಿಲ್ಲ.

19 ಯೆಹೋವನೇ, ಎದ್ದೇಳು! ಜನಾಂಗಗಳಿಗೆ ನ್ಯಾಯತೀರಿಸು.
    ಅವರು ಬಲಿಷ್ಠರಾಗಕೂಡದು.
20 ಯೆಹೋವನೇ, ಅವರಿಗೆ ಭಯಹುಟ್ಟಿಸು;
    ತಾವು ಕೇವಲ ಮನುಷ್ಯರೆಂಬುದನ್ನು ಅವರು ಗ್ರಹಿಸಿಕೊಳ್ಳಲಿ.

ಜ್ಞಾನೋಕ್ತಿಗಳು 23

—6—

23 ಅಧಿಪತಿಯೊಂದಿಗೆ ಕುಳಿತುಕೊಂಡು ಊಟಮಾಡುವಾಗ, ನೀನು ಯಾರೊಂದಿಗಿರುವೆ ಎಂಬುದನ್ನು ಜ್ಞಾಪಿಸಿಕೊ. ನೀನು ತುಂಬ ಹಸಿವೆಗೊಂಡಿದ್ದರೂ ಅತಿಯಾಗಿ ತಿನ್ನಬೇಡ. ಅವನು ಬಡಿಸುವ ಒಳ್ಳೆಯ ಆಹಾರವನ್ನು ಅತಿಯಾಗಿ ತಿನ್ನಬೇಡ. ಅದು ನಿನ್ನನ್ನು ಮೋಸಗೊಳಿಸುವ ಆಹಾರ.

—7—

ಐಶ್ವರ್ಯವಂತನಾಗಬೇಕೆಂಬ ಪ್ರಯತ್ನದಲ್ಲಿ ನಿನ್ನ ಆರೋಗ್ಯವನ್ನು ಕಳೆದುಕೊಳ್ಳಬೇಡ. ನೀನು ಜ್ಞಾನಿಯಾಗಿದ್ದರೆ ತಾಳ್ಮೆಯಿಂದಿರುವೆ. ಪಕ್ಷಿಯಂತೆ ಹಾರಿಹೋಗುತ್ತದೋ ಎಂಬಂತೆ ಹಣವು ಬಹುಬೇಗನೆ ಇಲ್ಲವಾಗುವುದು.

—8—

ಸ್ವಾರ್ಥಿಯೊಂದಿಗೆ ಊಟಮಾಡಬೇಡ. ಅವನು ಇಷ್ಟಪಡುವ ಮೃಷ್ಠಾನ್ನದಿಂದ ದೂರವಿರು. ಅವನು ವೆಚ್ಚದ ಬಗ್ಗೆ ಯೋಚಿಸುವಂಥವನು. ಅವನು ನಿನಗೆ, “ತಿನ್ನು, ಕುಡಿ” ಎಂದು ಹೇಳಿದರೂ ಅವನ ಉದ್ದೇಶವೇ ಬೇರೆ. ನೀನು ಅವನ ಆಹಾರವನ್ನು ತಿಂದರೆ ವಾಂತಿಮಾಡುವೆ; ಆಗ ನಿನ್ನ ಸವಿಮಾತುಗಳೆಲ್ಲಾ ವ್ಯರ್ಥವಾಗುವುದು.

—9—

ಮೂಢನಿಗೆ ಉಪದೇಶಿಸಲು ಪ್ರಯತ್ನಿಸಬೇಡ. ಅವನು ನಿನ್ನ ಜ್ಞಾನದ ಮಾತುಗಳನ್ನು ಗೇಲಿಮಾಡುವನು.

—10—

10 ಜಮೀನಿನ ಮೇರೆಯನ್ನು ಎಂದಿಗೂ ಒತ್ತಬೇಡ. ಅನಾಥರಿಗೆ ಸೇರಿದ ಭೂಮಿಯನ್ನು ಎಂದಿಗೂ ಕಸಿದುಕೊಳ್ಳಬೇಡ. 11 ಇಲ್ಲವಾದರೆ ಯೆಹೋವನು ನಿನಗೆ ವಿರೋಧವಾಗುವನು; ಯೆಹೋವನು ಬಲಿಷ್ಠನೂ ಅನಾಥರ ಪರವಾಗಿ ವಾದಿಸುವವನೂ ಆಗಿದ್ದಾನೆ.

—11—

12 ನಿನ್ನ ಉಪದೇಶಕರಿಗೆ ಕಿವಿಗೊಟ್ಟು ನಿನ್ನಿಂದ ಸಾಧ್ಯವಾದಷ್ಟು ಕಲಿತುಕೊ.

—12—

13 ಅಗತ್ಯವೆನಿಸಿದರೆ ಮಗನನ್ನು ಬಾಲ್ಯದಲ್ಲಿಯೇ ದಂಡಿಸು. ನಿನ್ನ ಹೊಡೆತದಿಂದ ಅವನೇನೂ ಸಾಯುವುದಿಲ್ಲ. 14 ನಿನ್ನ ಹೊಡೆತವು ಅವನ ಜೀವವನ್ನು ಕಾಪಾಡಬಲ್ಲದು.

—13—

15 ನನ್ನ ಮಗನೇ, ನೀನು ಜ್ಞಾನಿಯಾಗಿದ್ದರೆ, ನನಗೆ ಬಹು ಸಂತೋಷ. 16 ನೀನು ಒಳ್ಳೆಯದನ್ನೇ ಹೇಳುವುದನ್ನು ಕೇಳುವಾಗ ನನ್ನ ಹೃದಯಕ್ಕೆ ಸಂತೋಷವಾಗುವುದು.

—14—

17 ಕೆಡುಕರ ಬಗ್ಗೆ ಹೊಟ್ಟೆಕಿಚ್ಚುಪಡಬೇಡ. ಆದರೆ ಯೆಹೋವನಲ್ಲಿ ಭಯಭಕ್ತಿಯಿಂದಿರಲು ನಿನ್ನಿಂದಾದಷ್ಟು ಪ್ರಯತ್ನಿಸು. 18 ಆಗ ನಿನಗೆ ಒಳ್ಳೆಯ ಭವಿಷ್ಯವಿರುವುದು; ನಿನ್ನ ನಿರೀಕ್ಷೆಯು ನಿರರ್ಥಕವಾಗದು.

—15—

19 ನನ್ನ ಮಗನೇ, ಕಿವಿಗೊಟ್ಟು ಕೇಳಿ ಜ್ಞಾನಿಯಾಗಿರು. ಯಾವಾಗಲೂ ಎಚ್ಚರಿಕೆಯಿಂದಿದ್ದು ನೀತಿಮಾರ್ಗದಲ್ಲಿ ಜೀವಿಸು. 20 ಕುಡುಕರ ಮತ್ತು ಹೊಟ್ಟೆಬಾಕರ ಸ್ನೇಹಿತನಾಗಿರಬೇಡ. 21 ಕುಡುಕರೂ ಹೊಟ್ಟೆಬಾಕರೂ ಬಡವರಾಗುವರು. ತಿಂದು ಕುಡಿದು ನಿದ್ರಿಸುವುದೇ ಅವರ ಕಾರ್ಯಗಳು. ಅವರು ಬಹು ಬೇಗನೆ ಬಡವರಾಗುವರು.

—16—

22 ನಿನ್ನ ತಂದೆಗೆ ಕಿವಿಗೊಡು. ಯಾಕೆಂದರೆ ನೀನು ಅವನ ಮಗನು. ಅವನು ನಿನ್ನ ತಂದೆ. ನಿನ್ನ ತಾಯಿ ವೃದ್ಧಳಾಗಿರುವಾಗಲೂ ಆಕೆಯನ್ನು ಗೌರವಿಸು. 23 ಸತ್ಯವನ್ನು ಕೊಂಡುಕೊ; ಅದನ್ನು ಮಾರಬೇಡ. ಜ್ಞಾನ, ಸುಶಿಕ್ಷೆ ಮತ್ತು ವಿವೇಕವನ್ನು ಕೊಂಡುಕೊ. ಇವು ಖರೀದಿಗೆ ಯೋಗ್ಯವಾದವುಗಳೂ ಮಾರಲಾಗದಷ್ಟು ಅಮೂಲ್ಯವಾದವುಗಳೂ ಆಗಿವೆ. 24 ಒಳ್ಳೆಯವನ ತಂದೆಗೆ ಬಹು ಸಂತೋಷ. ಜ್ಞಾನಿಯಾದ ಮಗನಿಂದ ಆನಂದ. 25 ನಿನ್ನ ತಂದೆತಾಯಿಗಳು ನಿನ್ನೊಂದಿಗೆ ಸಂತೋಷದಿಂದಿರಲಿ; ನಿನ್ನ ತಾಯಿಯು ಆನಂದಿಸಲಿ.

—17—

26 ನನ್ನ ಮಗನೇ, ನನ್ನ ಉಪದೇಶವನ್ನು ಗಮನವಿಟ್ಟು ಕೇಳು. ನನ್ನ ಜೀವಿತವು ನಿನಗೆ ಮಾದರಿಯಾಗಿರಲಿ. 27 ಸೂಳೆಯರು ಮತ್ತು ಕೆಟ್ಟಹೆಂಗಸರು ಬಲೆಯಂತಿದ್ದಾರೆ; ಮೇಲೇರಿ ಬರಲಾಗದ ಆಳವಾದ ಬಾವಿಯಂತಿದ್ದಾರೆ. 28 ಕೆಟ್ಟಹೆಂಗಸು ಕಳ್ಳನಂತೆ ನಿನಗಾಗಿ ಕಾದಿರುವಳು. ಅನೇಕ ಗಂಡಸರ ಪಾಪಕ್ಕೆ ಅವಳೇ ಕಾರಣ.

—18—

29 ಯಾರಿಗೆ ಆಪತ್ತಿದೆ? ಯಾರಿಗೆ ಯಾತನೆಯಿದೆ? ಯಾರಿಗೆ ಜಗಳಗಳಿವೆ? ಯಾರಿಗೆ ಉದ್ವೇಗವಿದೆ? ಯಾರಿಗೆ ನಿಷ್ಕಾರಣವಾದ ಬಾಸುಂಡೆಗಳಿವೆ? ಯಾರಿಗೆ ಕೆಂಪೇರಿದ ಕಣ್ಣುಗಳಿವೆ? 30 ಮದ್ಯವನ್ನು ಅತಿಯಾಗಿ ಕುಡಿಯುವವರಿಗೆ ಮತ್ತು ಮಿಶ್ರಣಗೊಂಡ ನಾನಾಬಗೆಯ ಮದ್ಯಗಳನ್ನು ಕುಡಿಯುವವರಿಗೆ!

31 ಆದ್ದರಿಂದ ಮದ್ಯದ ಬಗ್ಗೆ ಎಚ್ಚರಿಕೆಯಾಗಿರು. ಅದು ಅಂದವಾಗಿದ್ದು ಕೆಂಪಗೆ ಥಳಥಳಿಸುತ್ತದೆ. ನೀನು ಅದನ್ನು ಕುಡಿದಾಗ, ನಯವಾಗಿ ಇಳಿದುಹೋಗುತ್ತದೆ. 32 ಆದರೆ ಕೊನೆಯಲ್ಲಿ ಅದು ವಿಷದ ಹಲ್ಲುಳ್ಳ ಹಾವಿನಂತೆ ಕಚ್ಚುವುದು.

33 ಮದ್ಯವು ನಿನಗೆ ವಿಚಿತ್ರವಾದವುಗಳನ್ನು ಕಾಣಮಾಡುತ್ತದೆ. ನಿನ್ನ ಮನಸ್ಸನ್ನು ಗಲಿಬಿಲಿ ಮಾಡುತ್ತದೆ. 34 ನೀನು ಮಲಗಿಕೊಂಡಾಗ ಸಮುದ್ರದ ಅಲ್ಲೋಲಕಲ್ಲೋಲ ಅಲೆಗಳ ಮೇಲಿರುವಂತೆಯೂ ಹಡಗಿನ ಮೇಲೆ ಮಲಗಿಕೊಂಡಿರುವಂತೆಯೂ ನಿನಗನ್ನಿಸುವುದು. 35 “ಅವರು ನನಗೆ ಬಡಿದರೂ ಗೊತ್ತಾಗಲಿಲ್ಲ; ಅವರು ನನಗೆ ಹೊಡೆದರೂ ನನಗೆ ಬಡಿದರೂ ಅರಿವಾಗಲಿಲ್ಲ. ಈಗ ನಾನು ಎಚ್ಚರಗೊಳ್ಳಲಾರೆ. ನನಗೆ ಮತ್ತಷ್ಟು ದ್ರಾಕ್ಷಾರಸಬೇಕು” ಎಂದು ನೀನು ಹೇಳುವೆ.

1 ಥೆಸಲೋನಿಕದವರಿಗೆ 2

ಥೆಸಲೋನಿಕದಲ್ಲಿ ಪೌಲನ ಕಾರ್ಯ

ಸಹೋದರ ಸಹೋದರಿಯರೇ, ನಾವು ನಿಮ್ಮಲ್ಲಿಗೆ ಬಂದದ್ದು ವ್ಯರ್ಥವಾಗಲಿಲ್ಲ ಎಂಬುದು ನಿಮಗೆ ತಿಳಿದಿದೆ. ನಿಮ್ಮಲ್ಲಿಗೆ ಬರುವುದಕ್ಕೆ ಮೊದಲೇ ಫಿಲಿಪ್ಪಿಯಲ್ಲಿ ಹಿಂಸೆಯನ್ನು ಅನುಭವಿಸಿದೆವು. ಅಲ್ಲಿಯ ಜನರು ನಮ್ಮ ವಿರುದ್ಧವಾಗಿ ಕೆಟ್ಟದ್ದನ್ನು ಹೇಳಿದರು. ಅದೆಲ್ಲವೂ ನಿಮಗೆ ತಿಳಿದಿದೆ. ನಿಮ್ಮ ಬಳಿಗೆ ಬಂದಾಗ, ಅನೇಕ ಜನರು ನಮಗೆ ವಿರುದ್ಧವಾಗಿದ್ದರು. ಆದರೆ ಧೈರ್ಯದಿಂದ ಇರಲು ಮತ್ತು ನಿಮಗೆ ಸುವಾರ್ತೆಯನ್ನು ತಿಳಿಸಲು ದೇವರು ನಮಗೆ ಸಹಾಯ ಮಾಡಿದನು. ನಮ್ಮ ಬೋಧನೆಯು ತಪ್ಪೂ ಅಲ್ಲ ಮತ್ತು ಅಶುದ್ಧವಾದ ಉದ್ದೇಶವನ್ನು ಹೊಂದಿಯೂ ಇಲ್ಲ ಮತ್ತು ನಿಮ್ಮನ್ನು ಮೋಸಗೊಳಿಸುವ ಪ್ರಯತ್ನವೂ ಅಲ್ಲ. ನಾವು ಸುವಾರ್ತೆಯನ್ನು ತಿಳಿಸುತ್ತೇವೆ. ಏಕೆಂದರೆ ದೇವರು ನಮ್ಮನ್ನು ಪರಿಶೋಧಿಸಿದ್ದಾನೆ ಮತ್ತು ಸುವಾರ್ತೆಯನ್ನು ತಿಳಿಸಲು ನಮ್ಮನ್ನು ನೇಮಿಸಿದ್ದಾನೆ. ಆದುದರಿಂದ ಜನರನ್ನು ಮೆಚ್ಚಿಸಲು ಪ್ರಯತ್ನಿಸದೆ ನಮ್ಮ ಹೃದಯಗಳನ್ನು ಪರೀಕ್ಷಿಸುವಾತನಾದ ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತೇವೆ.

ನಿಮ್ಮ ಬಗ್ಗೆ ಒಳ್ಳೆಯದನ್ನು ಹೇಳಿ ನಿಮ್ಮನ್ನು ಮರುಳು ಮಾಡಬೇಕೆಂದು ನಾವೆಂದೂ ಪ್ರಯತ್ನಿಸಿಲ್ಲವೆಂಬುದು ನಿಮಗೆ ತಿಳಿದಿದೆ. ನಾವು ನಿಮ್ಮ ಹಣವನ್ನು ಕಸಿದುಕೊಳ್ಳಲು ಪ್ರಯತ್ನಿಸಿಲ್ಲ; ನಮ್ಮ ಸ್ವಾರ್ಥವನ್ನು ಮರೆಮಾಡಿಕೊಂಡು ವೇಶಧಾರಿಗಳಾಗಿರಲಿಲ್ಲ. ಇದು ನಿಜವೆಂಬುದು ದೇವರಿಗೆ ತಿಳಿದಿದೆ. ಜನರಿಂದ ಬರುವ ಮಾನಮರ್ಯಾದೆಗಳನ್ನು ನಿಮ್ಮಿಂದಾಗಲಿ ಇತರ ಜನರಿಂದಾಗಲಿ ನಾವೆಂದೂ ಬಯಸಲಿಲ್ಲ.

ನಾವು ಕ್ರಿಸ್ತನ ಅಪೊಸ್ತಲರಾಗಿ ನಿಮ್ಮೊಡಗಿದ್ದಾಗ, ನಿಮ್ಮಿಂದ ದುಡಿಸಿಕೊಳ್ಳಲು ನಮ್ಮ ಅಧಿಕಾರವನ್ನು ಬಳಸಬಹುದಾಗಿತ್ತು. ಆದರೆ ನಿಮ್ಮೊಡನೆ ಬಹಳ ಸಾತ್ವಿಕರಾಗಿದ್ದೆವು. ತಾಯಿಯು ತನ್ನ ಸ್ವಂತ ಚಿಕ್ಕ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ನಾವು ನಡೆದುಕೊಂಡೆವು. ನಿಮ್ಮನ್ನು ಬಹಳವಾಗಿ ಪ್ರೀತಿಸಿದೆವು. ಆದುದರಿಂದ ದೇವರ ಸುವಾರ್ತೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು, ಮಾತ್ರವೇ ಅಲ್ಲ, ನಿಮಗೋಸ್ಕರ ಸ್ವಂತ ಪ್ರಾಣವನ್ನೇ ಕೊಡಲು ಸಿದ್ಧರಾಗಿದ್ದೆವು. ಸಹೋದರ ಸಹೋದರಿಯರೇ, ನಾವು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ನಿಮ್ಮ ನೆನಪಿನಲ್ಲೇ ಇವೆ. ನಿಮಗೆ ದೇವರ ಸುವಾರ್ತೆಯನ್ನು ಉಪದೇಶಿಸಿದಾಗ ನೀವು ನಮಗೆ ವೇತನ ನೀಡುವ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಹಗಲಿರುಳು ದುಡಿದು ಜೀವನ ಸಾಗಿಸಿದೆವು.

10 ವಿಶ್ವಾಸಿಗಳಾದ ನಿಮ್ಮೊಡನೆ ನಾವಿದ್ದಾಗ ತಪ್ಪಿಲ್ಲದವರಾಗಿಯೂ ಪರಿಶುದ್ಧರಾಗಿಯೂ ಮತ್ತು ನಿರ್ದೋಷಿಗಳಾಗಿಯೂ ಜೀವಿಸಿದ್ದೆವು. ಇದು ನಿಜವೆಂಬುದು ನಿಮಗೂ ತಿಳಿದಿದೆ ಮತ್ತು ದೇವರಿಗೂ ತಿಳಿದಿದೆ. 11 ತಂದೆಯು ತನ್ನ ಸ್ವಂತ ಮಕ್ಕಳೊಡನೆ ನಡೆದುಕೊಳ್ಳುವಂತೆ ನಿಮ್ಮಲ್ಲಿ ಪ್ರತಿಯೊಬ್ಬರೊಡನೆಯೂ ನಡೆದುಕೊಂಡೆವೆಂಬುದು ನಿಮಗೆ ತಿಳಿದಿದೆ. 12 ನಿಮ್ಮನ್ನು ಬಲಗೊಳಿಸಿದೆವು ಮತ್ತು ಸಂತೈಸಿದೆವು. ನಿಮ್ಮನ್ನು ತನ್ನ ರಾಜ್ಯಕ್ಕೂ ಮಹಿಮೆಗೂ ಕರೆದ ದೇವರಿಗಾಗಿ ಯೋಗ್ಯವಾದ ರೀತಿಯಲ್ಲಿ ಜೀವಿಸಿರಿ ಎಂದು ನಾವು ನಿಮಗೆ ತಿಳಿಸಿದೆವು.

13 ನೀವು ದೇವರ ಸಂದೇಶವನ್ನು ಸ್ವೀಕರಿಸಿಕೊಂಡದ್ದಕ್ಕಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನೀವು ಆ ಸಂದೇಶವನ್ನು ನಮ್ಮಿಂದ ಕೇಳಿ, ಅದನ್ನು ದೇವರ ವಾಕ್ಯದಂತೆ ಒಪ್ಪಿಕೊಂಡಿರೇ ಹೊರತು ಮಾನವನ ವಾಕ್ಯಗಳೆಂದಲ್ಲ. ಅದು ನಿಜವಾಗಿಯೂ ದೇವರ ಸಂದೇಶ. ಆ ಸಂದೇಶವು ನಂಬುವವರಾದ ನಿಮ್ಮಲ್ಲಿ ಕಾರ್ಯಮಾಡುತ್ತದೆ. 14 ಸಹೋದರ ಸಹೋದರಿಯರೇ, ನೀವು ಜುದೇಯದಲ್ಲಿರುವ ದೇವರ ಸಭೆಗಳಂತಿದ್ದೀರಿ. ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಅವರು ಇತರ ಯೆಹೂದ್ಯರಿಂದ ಹಿಂಸಿಸಲ್ಪಟ್ಟರು. ಅದೇ ರೀತಿಯಲ್ಲಿ ನೀವೂ ನಿಮ್ಮ ದೇಶದ ಇತರ ಜನರಿಂದ ಹಿಂಸಿಸಲ್ಪಟ್ಟವರಾಗಿದ್ದೀರಿ. 15 ಆ ಯೆಹೂದ್ಯರು ಪ್ರಭುವಾದ ಯೇಸುವನ್ನೂ ಪ್ರವಾದಿಗಳನ್ನೂ ಕೊಂದುಹಾಕಿದರು. ತಮ್ಮ ದೇಶದಿಂದ (ಜುದೇಯ) ನಮ್ಮನ್ನು ಬಲವಂತವಾಗಿ ಹೊರಗಟ್ಟಿದರು. ಅವರು ದೇವರಿಗೆ ಮೆಚ್ಚಿಕೆಯಾದವರಾಗಿಲ್ಲ ಮತ್ತು ಜನರೆಲ್ಲರ ವಿರುದ್ಧವಾಗಿದ್ದಾರೆ. 16 ಹೌದು, ಯೆಹೂದ್ಯರಲ್ಲದವರಿಗೆ ರಕ್ಷಣೆ ನೀಡುವ ಸುವಾರ್ತೆಯನ್ನು ನಾವು ಉಪದೇಶಿಸದಂತೆ ನಮ್ಮನ್ನು ತಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಹೀಗೆ ಅವರು ತಮ್ಮ ಪಾಪಗಳಿಗೆ ಮತ್ತಷ್ಟು ಪಾಪಗಳನ್ನು ಕೂಡಿಸುತ್ತಿದ್ದಾರೆ. ಕೊನೆಗೆ, ದೇವರ ಕೋಪವು ಅವರ ಮೇಲೆ ಬರುತ್ತದೆ.

ಥೆಸಲೋನಿಕದವರನ್ನು ಮತ್ತೆ ನೋಡಲು ಪೌಲನ ಆಸೆ

17 ಸಹೋದರ ಸಹೋದರಿಯರೇ, ನಿಮ್ಮಿಂದ ಸ್ವಲ್ಪಕಾಲ ಅಗಲಿ ಹೋಗಿದ್ದೆವು. (ನಾವು ನಿಮ್ಮೊಡನೆ ಇರಲಿಲ್ಲ. ಆದರೆ ನಮ್ಮ ಆಲೋಚನೆಗಳು ನಿಮ್ಮೊಡನೆ ಇನ್ನೂ ಇವೆ.) ನಿಮ್ಮನ್ನು ನೋಡಲು ಅತ್ಯಾಸೆಯಿಂದ ಬಹಳ ಪ್ರಯತ್ನಪಟ್ಟೆವು. 18 ಹೌದು, ನಾವು ನಿಮ್ಮಲ್ಲಿಗೆ ಬರಬೇಕೆಂದಿದ್ದೆವು. ಪೌಲನಾದ ನಾನು, ನಿಜವಾಗಿಯೂ ಅನೇಕ ಸಲ ಬರಲು ಪ್ರಯತ್ನಿಸಿದೆನು, ಆದರೆ ನಮ್ಮನ್ನು ಸೈತಾನನು ನಿಲ್ಲಿಸಿದನು. 19 ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಾವು ಹೊಗಳಿಕೊಳ್ಳುವ ನಮ್ಮ ನಿರೀಕ್ಷೆ, ನಮ್ಮ ಸಂತೋಷ, ನಮ್ಮ ಕಿರೀಟ ನೀವೇ ಆಗಿದ್ದೀರಿ. 20 ನಿಜವಾಗಿಯೂ ನೀವೇ ನಮ್ಮ ಸಂತೋಷ ಮತ್ತು ಗೌರವವಾಗಿದ್ದೀರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International