Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 6

ಬೇರೆ ಪಾಪಗಳಿಗಾಗಿ ದೋಷಪರಿಹಾರಕ ಯಜ್ಞಗಳು

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಯಾವನಾದರೂ ಮತ್ತೊಬ್ಬನಿಂದ ತನ್ನ ವಶಕ್ಕೆ ಕೊಡಲ್ಪಟ್ಟ ವಸ್ತುವಿನ ವಿಷಯದಲ್ಲಾಗಲಿ ತನ್ನ ಬಳಿಯಲ್ಲಿ ಅಡವು ಇಟ್ಟ ವಸ್ತುವಿನ ವಿಷಯದಲ್ಲಾಗಲಿ ತಾನು ಮಾಡಿದ ಕಳುವಿನ ವಿಷಯದಲ್ಲಾಗಲಿ ಸುಳ್ಳಾಡುವುದರಿಂದಾಗಲಿ ಮತ್ತೊಬ್ಬನನ್ನು ಮೋಸಗೊಳಿಸುವುದರಿಂದಾಗಲಿ ಮತ್ತೊಬ್ಬನು ಕಳೆದುಕೊಂಡದ್ದನ್ನು ಕಂಡುಕೊಂಡು ಅದರ ಬಗ್ಗೆ ಸುಳ್ಳು ಹೇಳುವುದರಿಂದಾಗಲಿ ಮಾಡಿದ ಪ್ರಮಾಣವನ್ನು ಉಲ್ಲಂಘಿಸುವುದರಿಂದಾಗಲಿ ಪಾಪಮಾಡಿ ಯೆಹೋವನಿಗೆ ದ್ರೋಹಮಾಡಿದರೆ, ಅವನು ತಾನು ಕದ್ದದ್ದನ್ನಾಗಲಿ ಮೋಸದಿಂದ ತೆಗೆದುಕೊಂಡದ್ದನ್ನಾಗಲಿ ಅಡವು ಇಟ್ಟುಕೊಂಡದ್ದನ್ನಾಗಲಿ ಕಂಡುಕೊಂಡ ಅಥವಾ ಕಳೆದುಹೋದ ವಸ್ತುವನ್ನಾಗಲಿ ಸುಳ್ಳಾಣೆ ಇಟ್ಟುಕೊಂಡ ವಸ್ತುವನ್ನಾಗಲಿ ಸಂಪೂರ್ಣವಾಗಿ ತಂದುಕೊಡಬೇಕು. ಅದರೊಂದಿಗೆ ಅದರ ಐದನೆಯ ಒಂದಂಶವನ್ನು ಹೆಚ್ಚಾಗಿ ತಂದುಕೊಡಬೇಕು. ದೋಷಪರಿಹಾರಕ ಯಜ್ಞವನ್ನು ಅರ್ಪಿಸುವ ದಿನದಲ್ಲಿಯೇ ನಿಜವಾದ ಯಜಮಾನನಿಗೆ ಇದನ್ನು ತಂದುಕೊಡಬೇಕು. ಆ ವ್ಯಕ್ತಿ ದೋಷಪರಿಹಾರಕ ಯಜ್ಞವನ್ನು ಯಾಜಕನ ಬಳಿಗೆ ತರಬೇಕು. ಅದು ಮಂದೆಯಿಂದ ತಂದ ಟಗರಾಗಿರಬೇಕು. ಟಗರಿನಲ್ಲಿ ಯಾವ ದೋಷವೂ ಇರಬಾರದು. ಅದು ಯಾಜಕನು ಹೇಳುವ ಬೆಲೆಯುಳ್ಳದ್ದಾಗಿರಬೇಕು. ಅದು ಯೆಹೋವನಿಗೆ ಸಮರ್ಪಿಸುವ ದೋಷಪರಿಹಾರಕ ಯಜ್ಞವಾಗಿರುವುದು. ಬಳಿಕ ಯಾಜಕನು ಯೆಹೋವನ ಸನ್ನಿಧಿಗೆ ಹೋಗಿ ಅವನನ್ನು ಶುದ್ಧಿಮಾಡುವನು. ಆಗ ದೇವರು ಅವನನ್ನು ಕ್ಷಮಿಸುವನು.”

ಸರ್ವಾಂಗಹೋಮಗಳು

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಆರೋನನಿಗೂ ಅವನ ಪುತ್ರರಿಗೂ ಈ ಅಪ್ಪಣೆಯನ್ನು ಕೊಡು: ಸರ್ವಾಂಗಹೋಮದ ನಿಯಮ ಇದಾಗಿದೆ. ಸರ್ವಾಂಗಹೋಮವು ವೇದಿಕೆಯ ಒಲೆಯಲ್ಲಿ[a] ರಾತ್ರಿಯೆಲ್ಲಾ ಮರುದಿನ ಮುಂಜಾನೆಯವರೆಗೆ ಉರಿಯುತ್ತಿರಬೇಕು. ವೇದಿಕೆಯಲ್ಲಿ ಬೆಂಕಿಯು ಉರಿಯುತ್ತಿರಬೇಕು. 10 ಯಾಜಕನು ತನ್ನ ನಾರಿನ ನಿಲುವಂಗಿಯನ್ನೂ ನಾರಿನ ಚಡ್ಡಿಯನ್ನೂ ಧರಿಸಿಕೊಳ್ಳಬೇಕು. ಯಾಜಕನು ಸರ್ವಾಂಗಹೋಮ ಮಾಡಿದಾಗ ಬೆಂಕಿಯಿಂದ ಉಂಟಾದ ಬೂದಿಯನ್ನು ತೆಗೆದು ವೇದಿಕೆಯ ಬಳಿಯಲ್ಲಿಡಬೇಕು. 11 ಬಳಿಕ ಯಾಜಕನು ತನ್ನ ಬಟ್ಟೆಗಳನ್ನು ತೆಗೆದುಹಾಕಿ ಬೇರೆ ಬಟ್ಟೆಗಳನ್ನು ಧರಿಸಿಕೊಂಡು ಬೂದಿಯನ್ನು ಪಾಳೆಯದ ಹೊರಗೆ ಒಂದು ವಿಶೇಷ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು. 12 ಆದರೆ ವೇದಿಕೆಯ ಮೇಲೆ ಬೆಂಕಿ ಉರಿಯುತ್ತಲೇ ಇರಬೇಕು. ಅದನ್ನು ಆರಿ ಹೋಗುವುದಕ್ಕೆ ಬಿಡಬಾರದು, ಯಾಜಕನು ಪ್ರತಿ ಮುಂಜಾನೆ ವೇದಿಕೆಯ ಮೇಲೆ ಸರ್ವಾಂಗಹೋಮವನ್ನು ಸಿದ್ಧಪಡಿಸಿ, ಸಮಾಧಾನಯಜ್ಞದ ಕೊಬ್ಬನ್ನು ಸುಡಬೇಕು. 13 ಬೆಂಕಿಯು ವೇದಿಕೆಯ ಮೇಲೆ ಉರಿಯುತ್ತಲೇ ಇರಬೇಕು; ಆರಿಹೋಗಬಾರದು.

ಧಾನ್ಯಸಮರ್ಪಣೆಗಳು

14 “ಇದು ಧಾನ್ಯಸಮರ್ಪಣೆಯ ನಿಯಮವಾಗಿದೆ: ಆರೋನನ ಪುತ್ರರು ಅದನ್ನು ಸಮರ್ಪಿಸಲು ಯಜ್ಞವೇದಿಕೆಯ ಮುಂಭಾಗದಲ್ಲಿ ಯೆಹೋವನ ಬಳಿಗೆ ತರಬೇಕು. 15 ಯಾಜಕನು ಧಾನ್ಯನೈವೇದ್ಯದಿಂದ ಒಂದು ಹಿಡಿ ಶ್ರೇಷ್ಠ ಹಿಟ್ಟನ್ನು ಮತ್ತು ಎಣ್ಣೆಯನ್ನು ಮತ್ತು ಎಲ್ಲಾ ಧೂಪವನ್ನು ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಅದನ್ನು ವೇದಿಕೆಯ ಮೇಲೆ ಸುಡಬೇಕು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

16 “ಆರೋನನ ಮತ್ತು ಅವನ ಪುತ್ರರು ಧಾನ್ಯನೈವೇದ್ಯದಲ್ಲಿ ಉಳಿದದ್ದನ್ನು ತಿನ್ನಬೇಕು. ಅವರು ಆ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿಕೊಂಡು ಪವಿತ್ರಸ್ಥಳದಲ್ಲಿ ಅಂದರೆ ದೇವದರ್ಶನಗುಡಾರದ ಸುತ್ತಲಿರುವ ಅಂಗಳದಲ್ಲಿ ತಿನ್ನಬೇಕು. 17 ಹುಳಿಕಲಸಿ ರೊಟ್ಟಿ ಸುಡಬಾರದು. ನನಗೆ ಅಗ್ನಿಯ ಮೂಲಕ ಹೋಮವಾಗಿ ಅರ್ಪಿಸಿದ ಸಮರ್ಪಣೆಗಳಲ್ಲಿ ನಾನು ಅದನ್ನು ಯಾಜಕರ ಪಾಲನ್ನಾಗಿ ಕೊಟ್ಟಿದ್ದೇನೆ. ಅದು ಪಾಪಪರಿಹಾರಕ ಯಜ್ಞದಂತೆಯೂ ದೋಷಪರಿಹಾರಕ ಯಜ್ಞದಂತೆಯೂ ಮಹಾ ಪವಿತ್ರವಾಗಿದೆ. 18 ಆರೋನನ ವಂಶದವರಾದ ಗಂಡಸರೆಲ್ಲರೂ ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಗಳನ್ನು ತಿನ್ನಬಹುದು. ಇದು ನಿಮ್ಮ ಸಂತತಿಯವರಿಗೆ ಶಾಶ್ವತವಾದ ನಿಯಮವಾಗಿದೆ. ಈ ಕಾಣಿಕೆಗಳಿಗೆ ತಗಲಿದ್ದೆಲ್ಲಾ ಪವಿತ್ರವಾಗುತ್ತವೆ.”

ಯಾಜಕರ ಧಾನ್ಯನೈವೇದ್ಯ

19 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 20 “ಆರೋನನು ಮಹಾಯಾಜಕನಾಗಿ ಅಭಿಷೇಕಿಸಲ್ಪಡುವ ದಿನದಂದು ಅವನು ಮತ್ತು ಅವನ ಪುತ್ರರು ಯೆಹೋವನ ಸನ್ನಿಧಿಗೆ ತರಬೇಕಾದ ಧಾನ್ಯಸಮರ್ಪಣೆ ಇದಾಗಿದೆ. ಅವರು ಎಂಟು ಬಟ್ಟಲು[b] ಶ್ರೇಷ್ಠ ಗೋಧಿಹಿಟ್ಟನ್ನು ಧಾನ್ಯನೈವೇದ್ಯಕ್ಕಾಗಿ ತರಬೇಕು. (ದಿನನಿತ್ಯದ ನೈವೇದ್ಯಗಳ ಸಮಯಗಳಲ್ಲಿ ಇದನ್ನು ಅರ್ಪಿಸಬೇಕು.) ಅವರು ಇದರಲ್ಲಿ ಅರ್ಧದಷ್ಟನ್ನು ಮುಂಜಾನೆಯಲ್ಲಿ ಮತ್ತು ಉಳಿದರ್ಧವನ್ನು ಸಾಯಂಕಾಲದಲ್ಲಿ ಅರ್ಪಿಸಬೇಕು. 21 ಶ್ರೇಷ್ಠವಾದ ಗೋಧಿಹಿಟ್ಟಿಗೆ ಎಣ್ಣೆಯನ್ನು ಬೆರೆಸಿ ಕಬ್ಬಿಣದ ಹಂಚಿನ ಮೇಲೆ ರೊಟ್ಟಿ ಸುಟ್ಟು ಅದನ್ನು ಒಳಗೆ ತರಬೇಕು. ನೀವು ಈ ಸಮರ್ಪಣೆಯನ್ನು ತುಂಡುತುಂಡಾಗಿ ಮುರಿದು ಸಮರ್ಪಿಸಬೇಕು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

22 “ಆರೋನನ ಸ್ಥಾನವನ್ನು ಹೊಂದುವುದಕ್ಕಾಗಿ ಆರೋನನ ಸಂತತಿಯವರಲ್ಲಿ ಆರಿಸಲ್ಪಟ್ಟು ಅಭಿಷೇಕಿಸಲ್ಪಟ್ಟ ಯಾಜಕನು ಯೆಹೋವನಿಗೆ ಈ ಧಾನ್ಯಸಮರ್ಪಣೆ ಮಾಡಬೇಕು. ಈ ನಿಯಮ ಶಾಶ್ವತವಾದದ್ದು. ಧಾನ್ಯಸಮರ್ಪಣೆ ಸಂಪೂರ್ಣವಾಗಿ ಹೋಮವಾಗಬೇಕು. 23 ಯಾಜಕನ ಪ್ರತಿಯೊಂದು ಧಾನ್ಯಸಮರ್ಪಣೆ ಸಂಪೂರ್ಣವಾಗಿ ಹೋಮವಾಗಬೇಕು. ಅದನ್ನು ತಿನ್ನಲೇಬಾರದು.”

ಪಾಪಪರಿಹಾರ ಯಜ್ಞದ ಕಟ್ಟಳೆ

24 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 25 “ಆರೋನನಿಗೆ ಮತ್ತು ಅವನ ಪುತ್ರರಿಗೆ ಹೀಗೆ ಹೇಳು: ಪಾಪಪರಿಹಾರಕ ಯಜ್ಞದ ಕಟ್ಟಳೆ ಇದಾಗಿದೆ. ಸರ್ವಾಂಗಹೋಮ ಪಶುವು ವಧಿಸಲ್ಪಡುವ ಸ್ಥಳದಲ್ಲಿಯೇ ಪಾಪಪರಿಹಾರಕ ಯಜ್ಞಪಶುವು ಯೆಹೋವನ ಸನ್ನಿಧಿಯಲ್ಲಿ ವಧಿಸಲ್ಪಡಬೇಕು. ಅದು ಮಹಾ ಪವಿತ್ರವಾಗಿದೆ. 26 ಪಾಪಪರಿಹಾರಕ ಯಜ್ಞವನ್ನು ಅರ್ಪಿಸುವ ಯಾಜಕನು ಅದನ್ನು ಪವಿತ್ರಸ್ಥಳದಲ್ಲಿ ಅಂದರೆ ದೇವದರ್ಶನಗುಡಾರದ ಸುತ್ತಲಿರುವ ಅಂಗಳದಲ್ಲಿ ತಿನ್ನಬೇಕು. 27 ಪಾಪಪರಿಹಾರಕ ಯಜ್ಞದ ಮಾಂಸವು ತಗಲಿದ ವಸ್ತುವೂ ಪವಿತ್ರವಾಗುತ್ತದೆ; ಮುಟ್ಟುವ ವ್ಯಕ್ತಿಯೂ ಪವಿತ್ರವಾಗುವನು.

“ಚಿಮಿಕಿಸಲ್ಪಟ್ಟ ರಕ್ತದಲ್ಲಿ ಸ್ವಲ್ಪ ರಕ್ತವು ಯಾರ ಬಟ್ಟೆಯ ಮೇಲಾದರೂ ಬಿದ್ದರೆ, ನೀವು ಆ ಬಟ್ಟೆಗಳನ್ನು ಪವಿತ್ರಸ್ಥಳದಲ್ಲಿ ತೊಳೆಯಬೇಕು. 28 ಪಾಪಪರಿಹಾರಕ ಯಜ್ಞವನ್ನು ಮಣ್ಣಿನ ಮಡಕೆಯಲ್ಲಿ ಬೇಯಿಸಿದರೆ, ಆ ಮಡಕೆಯನ್ನು ಒಡೆದುಹಾಕಬೇಕು. ಪಾಪಪರಿಹಾರಕ ಯಜ್ಞವನ್ನು ತಾಮ್ರದ ಪಾತ್ರೆಯಲ್ಲಿ ಬೇಯಿಸಿದರೆ, ಆ ಪಾತ್ರೆಯನ್ನು ಉಜ್ಜಿ ನೀರಿನಲ್ಲಿ ತೊಳೆಯಬೇಕು.

29 “ಯಾಜಕನ ಕುಟುಂಬದಲ್ಲಿರುವ ಯಾವ ಪುರುಷನಾದರೂ ಪಾಪಪರಿಹಾರಕ ಯಜ್ಞದ ಮಾಂಸವನ್ನು ತಿನ್ನಬಹುದು. ಅದು ಬಹಳ ಪವಿತ್ರವಾಗಿದೆ. 30 ಆದರೆ ಪಾಪಪರಿಹಾರಕ ಯಜ್ಞದ ರಕ್ತವನ್ನು ದೇವದರ್ಶನಗುಡಾರದೊಳಗೆ ತೆಗೆದುಕೊಂಡು ಹೋಗಿ, ಜನರನ್ನು ಶುದ್ಧಿಗೊಳಿಸಲು ಪವಿತ್ರಸ್ಥಳದಲ್ಲಿ ಉಪಯೋಗಿಸಿದರೆ, ಆ ಪಾಪಪರಿಹಾರಕ ಯಜ್ಞವನ್ನು ಅಗ್ನಿಯಲ್ಲಿ ಸುಟ್ಟುಬಿಡಬೇಕು. ಯಾಜಕರು ಅದರ ಮಾಂಸವನ್ನು ತಿನ್ನಲೇಬಾರದು.

ಕೀರ್ತನೆಗಳು 5-6

ರಚನೆಗಾರ: ದಾವೀದ.

ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು.
    ನನ್ನ ಆಲೋಚನೆಗಳಿಗೆ ಗಮನಕೊಡು.
ನನ್ನ ರಾಜನೇ, ನನ್ನ ದೇವರೇ, ನಿನಗೇ ಮೊರೆಯಿಡುವೆನು.
    ನನ್ನ ಪ್ರಾರ್ಥನೆಯನ್ನು ಆಲೈಸು.
ಯೆಹೋವನೇ, ಪ್ರತಿಮುಂಜಾನೆ ನಿನಗೆ ಕಾಣಿಕೆಗಳನ್ನು ಅರ್ಪಿಸಿ ಸಹಾಯಕ್ಕಾಗಿ ಎದುರುನೋಡುವೆನು;
    ಪ್ರತಿಮುಂಜಾನೆ ನೀನು ನನ್ನ ಪ್ರಾರ್ಥನೆಗಳಿಗೆ ಕಿವಿಗೊಡುವೆ.

ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.
    ನಿನ್ನ ಸನ್ನಿಧಿಯಲ್ಲಿ ದುಷ್ಟರು ಇರಲಾರರು.
ನಿನ್ನನ್ನು ನಂಬದವರು ನಿನ್ನ ಬಳಿಗೆ ಬರಲಾರರು;
    ದುಷ್ಟರನ್ನು ನೀನು ದ್ವೇಷಿಸುವೆ.
ಸುಳ್ಳಾಡುವವರನ್ನು ನೀನು ನಾಶಪಡಿಸುವೆ.
    ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವನು ದ್ವೇಷಿಸುವನು.

ನಾನಂತೂ ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಆಲಯಕ್ಕೆ ಬರುವೆನು,
    ನಿನ್ನಲ್ಲಿ ಭಯಭಕ್ತಿಯುಳ್ಳವನಾಗಿ ನಿನ್ನ ಪವಿತ್ರ ಆಲಯದ ಕಡೆಗೆ ಅಡ್ಡಬೀಳುವೆನು.
ಯೆಹೋವನೇ, ವೈರಿಗಳು ನನ್ನನ್ನು ಗಮನಿಸುತ್ತಿರುವುದರಿಂದ
    ನಿನ್ನ ನೀತಿಯ ಮಾರ್ಗವನ್ನು ನನಗೆ ತೋರಿಸಿ,
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
ಅವರ ಮಾತುಗಳಲ್ಲಿ ಸತ್ಯವೆಂಬುದೇ ಇಲ್ಲ.
    ಅವರ ಬಾಯಿಗಳು ಸವಿಮಾತುಗಳನ್ನಾಡಿದರೂ
ಅವರ ಹೃದಯಗಳು ನಾಶಕರವಾದ ಗುಂಡಿಯಾಗಿವೆ.
    ಅವರ ಗಂಟಲು ತೆರೆದ ಸಮಾಧಿಗಳಂತಿವೆ.
10 ದೇವರೇ, ಅವರನ್ನು ದಂಡಿಸು!
    ಅವರು ತಮ್ಮ ಬಲೆಗಳಿಗೇ ಸಿಕ್ಕಿಕೊಳ್ಳಲಿ.
ಅವರು ನಿನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
    ಅವರ ಅನೇಕ ಅಪರಾಧಗಳ ನಿಮಿತ್ತ ಅವರನ್ನು ದಂಡಿಸು.
11 ದೇವರಲ್ಲಿ ಭರವಸವಿಟ್ಟಿರುವ ಜನರೆಲ್ಲರೂ ಸದಾಕಾಲ ಸಂತೋಷವಾಗಿರಲಿ.
    ನಿನ್ನ ಹೆಸರನ್ನು ಪ್ರೀತಿಸುವ ಜನರನ್ನು ಕಾಪಾಡಿ ಅವರಿಗೆ ಶಕ್ತಿಯನ್ನು ದಯಪಾಲಿಸು.
12 ಯೆಹೋವನೇ, ನೀನು ನೀತಿವಂತರಿಗೆ ಒಳ್ಳೆಯದನ್ನೇ ಮಾಡುವೆ;
    ನೀನು ಅವರನ್ನು ವಿಶಾಲವಾದ ಗುರಾಣಿಯಂತೆ ಸಂರಕ್ಷಿಸುವೆ.

ರಚನೆಗಾರ: ದಾವೀದ.

ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ;
    ರೋಷದಿಂದ ನನ್ನನ್ನು ದಂಡಿಸಬೇಡ.
ಯೆಹೋವನೇ, ನನ್ನನ್ನು ಕನಿಕರಿಸು!
    ನಾನು ರೋಗಿಯಾಗಿದ್ದೇನೆ, ಬಲಹೀನನಾಗಿದ್ದೇನೆ,
ನನ್ನನ್ನು ಗುಣಪಡಿಸು! ನನ್ನ ಎಲುಬುಗಳು ನಡುಗುತ್ತಿವೆ.
ನನ್ನ ಇಡೀ ದೇಹ ನಡುಗುತ್ತಿದೆ.
    ಯೆಹೋವನೇ, ನನ್ನನ್ನು ಗುಣಪಡಿಸಲು ಇನ್ನೆಷ್ಟುಕಾಲ ಬೇಕು?
ಯೆಹೋವನೇ, ನನ್ನನ್ನು ಮತ್ತೆ ಬಲಪಡಿಸು!
    ನಿನ್ನ ಮಹಾಕೃಪೆಯಿಂದ ನನ್ನನ್ನು ರಕ್ಷಿಸು.
ಸತ್ತವರು ನಿನ್ನನ್ನು ಜ್ಞಾಪಿಸಿಕೊಳ್ಳುವರೇ?
    ಸಮಾಧಿಗಳಲ್ಲಿರುವವರು ನಿನ್ನನ್ನು ಸ್ತುತಿಸುವರೇ?
    ಆದ್ದರಿಂದ ನನ್ನನ್ನು ಗುಣಪಡಿಸು.

ಯೆಹೋವನೇ, ರಾತ್ರಿಯೆಲ್ಲಾ ನಿನಗೆ ಪ್ರಾರ್ಥಿಸಿದೆನು.
    ನನ್ನ ಹಾಸಿಗೆಯು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ.
ನನ್ನ ಹಾಸಿಗೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ.
    ನಾನು ಅತ್ತು ಗೋಳಾಡಿ ಬಲಹೀನನಾಗಿದ್ದೇನೆ.
ನನ್ನ ವೈರಿಗಳು ನನಗೆ ಅನೇಕ ತೊಂದರೆಗಳನ್ನು ಮಾಡಿರುವುದರಿಂದ ನನಗೆ ದುಃಖವೂ ಗೋಳಾಟವೂ ಉಂಟಾಗಿವೆ.
    ನನ್ನ ಕಣ್ಣುಗಳು ಬಲಹೀನಗೊಂಡಿವೆ; ಅತ್ತತ್ತು ಆಯಾಸಗೊಂಡಿವೆ.

ದುಷ್ಟರೇ, ತೊಲಗಿಹೋಗಿರಿ.
    ಯಾಕೆಂದರೆ ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.
ಯೆಹೋವನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ.
    ಆತನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿ ಸದುತ್ತರವನ್ನು ದಯಪಾಲಿಸುವನು.

10 ನನ್ನ ವೈರಿಗಳೆಲ್ಲ ಗಲಿಬಿಲಿಗೊಂಡು ನಿರಾಶರಾಗುವರು.
    ಇದ್ದಕ್ಕಿದ್ದಂತೆ ಅವಮಾನಿತರಾಗಿ ಹಿಂತಿರುಗುವರು.

ಜ್ಞಾನೋಕ್ತಿಗಳು 21

21 ಯೆಹೋವನು ರಾಜನ ಮನಸ್ಸನ್ನು ನೀರಿನ ಕಾಲುವೆಯಂತೆ ಹತೋಟಿಯಲ್ಲಿಡುವನು. ಆತನು ತನ್ನ ಇಷ್ಟಾನುಸಾರ ಅದಕ್ಕೆ ಮಾರ್ಗದರ್ಶನ ನೀಡುವನು.

ತನ್ನ ನಡತೆ ಸರಿಯೆಂದು ಒಬ್ಬನು ಭಾವಿಸಿಕೊಳ್ಳಬಹುದು; ಆದರೆ ಉದ್ದೇಶಗಳಿಗನುಸಾರವಾಗಿ ತೀರ್ಪು ನೀಡುವವನು ಯೆಹೋವನೇ.

ಸರಿಯಾದ ಮತ್ತು ನ್ಯಾಯವಾದ ಕಾರ್ಯಗಳನ್ನು ಮಾಡು. ಯೆಹೋವನು ಅವುಗಳನ್ನು ಯಜ್ಞಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವನು.

ಗರ್ವದ ಕಣ್ಣುಗಳು ಮತ್ತು ದುರಾಭಿಮಾನದ ಹೃದಯ ಪಾಪಮಯವಾಗಿದ್ದು ದುಷ್ಟನಿಗೆ ಮಾರ್ಗದರ್ಶನ ನೀಡುತ್ತವೆ.

ಕಷ್ಟಪಟ್ಟು ದುಡಿಯುವವನ ಆಲೋಚನೆಗಳು ಲಾಭಕ್ಕೆ ನಡೆಸುತ್ತವೆ. ಆದರೆ ಆತುರತೆಯಲ್ಲೇ ಇರುವವನು ಬಡವನಾಗುವನು.

ನೀನು ಮೋಸದಿಂದ ಐಶ್ವರ್ಯವಂತನಾದರೆ, ಆ ಐಶ್ವರ್ಯವು ಬಹುಬೇಗನೆ ಇಲ್ಲವಾಗುತ್ತದೆ. ನಿನ್ನ ಐಶ್ವರ್ಯವು ನಿನ್ನನ್ನು ಮರಣಕ್ಕೆ ನಡೆಸುತ್ತದೆ.

ಕೆಡುಕರು ಕೊಡುವ ಹಿಂಸೆಯು ಅವರನ್ನೇ ನಾಶಮಾಡುತ್ತದೆ; ಯಾಕೆಂದರೆ ಒಳ್ಳೆಯದನ್ನು ಮಾಡಲು ಅವರು ಒಪ್ಪುವುದೇ ಇಲ್ಲ.

ಕೆಟ್ಟವರು ಬೇರೆಯವರನ್ನು ಮೋಸಗೊಳಿಸುವುದಕ್ಕೇ ಪ್ರಯತ್ನಿಸುವರು. ಒಳ್ಳೆಯವರಾದರೋ ಯಥಾರ್ಥವಂತರೂ ನ್ಯಾಯವಂತರೂ ಆಗಿದ್ದಾರೆ.

ಮನೆಯೊಳಗೆ ವಾದಿಸುವ ಹೆಂಡತಿಯ ಜೊತೆಯಲ್ಲಿ ವಾಸಿಸುವುದಕ್ಕಿಂತ ಮನೆಯ ಮೇಲ್ಛಾವಣಿಗೆಯ ಮೂಲೆಯಲ್ಲಿ ವಾಸಿಸುವುದೇ ಮೇಲು.

10 ಕೆಡುಕರು ಕೇಡುಮಾಡುವುದಕ್ಕೇ ಇಷ್ಟಪಡುವರು; ಅವರು ತಮ್ಮ ಸುತ್ತಮುತ್ತಲಿರುವ ಜನರಿಗೆ ಕರುಣೆ ತೋರುವುದಿಲ್ಲ.

11 ದುರಾಭಿಮಾನಿಯು ದಂಡಿಸಲ್ಪಟ್ಟರೆ ದಡ್ಡನು ಜ್ಞಾನಿಯಾಗುವನು. ಜ್ಞಾನಿಗೆ ಉಪದೇಶಿಸಿದರೆ ತಾನೇ ತಿಳುವಳಿಕೆಯನ್ನು ಹೊಂದವನು.

12 ದೇವರು ನೀತಿಸ್ವರೂಪನು. ಆತನು ದುಷ್ಟರ ದುಷ್ಕೃತ್ಯಗಳನ್ನು ಬಲ್ಲವನಾಗಿದ್ದು ಅವರನ್ನು ದಂಡಿಸುವನು.

13 ಬಡವರಿಗೆ ಸಹಾಯಮಾಡದವನು ತಾನೇ ಕೊರತೆಯಲ್ಲಿರುವಾಗ ಯಾರೂ ಅವನಿಗೆ ಸಹಾಯ ಮಾಡುವುದಿಲ್ಲ.

14 ನಿನ್ನ ಮೇಲೆ ಕೋಪಗೊಂಡಿರುವವನಿಗೆ ಒಂದು ಉಡುಗೊರೆಯನ್ನು ಗುಟ್ಟಾಗಿ ಕೊಡು. ಗುಟ್ಟಾಗಿ ಕೊಟ್ಟ ಉಡುಗೊರೆಯು ಮಹಾ ಕೋಪವನ್ನೂ ಅಡಗಿಸಬಲ್ಲದು.

15 ನ್ಯಾಯವಾದ ತೀರ್ಪು ಒಳ್ಳೆಯವರಿಗೆ ಸಂತೋಷ; ಕೆಡುಕರಿಗೆ ಬಹುಭಯ.

16 ಜ್ಞಾನದ ಮಾರ್ಗವನ್ನು ತೊರೆದವನು ನಾಶನದ ಕಡೆಗೆ ಹೋಗುತ್ತಿರುವನು.

17 ಸುಖವನ್ನು ಪ್ರೀತಿಸುವವನು ಬಡವನಾಗುವನು. ದ್ರಾಕ್ಷಾರಸವನ್ನೂ ತೈಲವನ್ನೂ ಪ್ರೀತಿಸುವವನು ಐಶ್ವರ್ಯವಂತನಾಗಲಾರನು.

18 ಒಳ್ಳೆಯವರ ಬದಲಾಗಿ ಕೆಡುಕರು ಸಂಕಟಪಡುವರು. ನೀತಿವಂತರ ಬದಲಾಗಿ ದ್ರೋಹಿಗಳು ಸಂಕಟಪಡುವರು.

19 ಮುಂಗೋಪಿಯೂ ವಾದಿಸುವವಳೂ ಆಗಿರುವ ಹೆಂಡತಿಯೊಡನೆ ಜೀವಿಸುವುದಕ್ಕಿಂತ ಮರಳುಗಾಡಿನಲ್ಲಿ ಜೀವಿಸುವುದೇ ಮೇಲು.

20 ಜ್ಞಾನಿಯ ಮನೆಯಲ್ಲಿ ಬೆಲೆಬಾಳುವ ಭಂಡಾರಗಳೂ ಪರಿಮಳದ್ರವ್ಯಗಳೂ ಇರುತ್ತವೆ. ಮೂಢನಾದರೋ ತನ್ನಲ್ಲಿರುವ ಪ್ರತಿಯೊಂದನ್ನೂ ಬೇಗನೆ ಹಾಳುಮಾಡಿಕೊಳ್ಳುವನು.

21 ನ್ಯಾಯವನ್ನು ಮತ್ತು ಕರುಣೆಯನ್ನು ಹುಡುಕುವವನಿಗೆ ಒಳ್ಳೆಯ ಜೀವಿತವೂ ನ್ಯಾಯವೂ ಸನ್ಮಾನವೂ ದೊರೆಯುವುದು.

22 ಜ್ಞಾನಿಯು ಯುದ್ಧವೀರರಿಂದ ತುಂಬಿರುವ ಪಟ್ಟಣದ ಮೇಲೆ ಆಕ್ರಮಣಮಾಡಿ ಅವರ ಆಶ್ರಯಕೋಟೆಯನ್ನು ನಾಶಮಾಡಬಲ್ಲನು.

23 ಎಚ್ಚರಿಕೆಯಿಂದ ಮಾತಾಡುವವನು ತೊಂದರೆಯಿಂದ ಪಾರಾಗುವನು.

24 ಗರ್ವಿಷ್ಠನೂ ದುರಾಭಿಮಾನಿಯೂ ಆಗಿರುವವನಿಗೆ ಗೇಲಿಗಾರನೆಂದು ಹೆಸರು. ಅವನ ನಡತೆಯು ಗರ್ವದ ಮದದಿಂದ ಕೂಡಿರುತ್ತದೆ.

25 ಸೋಮಾರಿಯ ಆಸೆ ಅವನನ್ನು ಉಪವಾಸದಿಂದ ಸಾಯಿಸುವುದು, ಯಾಕೆಂದರೆ ಅವನು ದುಡಿಯುವುದಿಲ್ಲ.

26 ದುರಾಶೆಯುಳ್ಳವನು ಹೆಚ್ಚುಹೆಚ್ಚು ಅಪೇಕ್ಷಿಸುತ್ತಲೇ ಇರುವನು, ಆದರೆ ನೀತಿವಂತನು ಉದಾರವಾಗಿ ಕೊಡುವನು.

27 ಕೆಡುಕನ ಯಜ್ಞಗಳು ಯೆಹೋವನಿಗೆ ಅಸಹ್ಯ. ಯಾಕೆಂದರೆ ಅವು ದುರುದ್ದೇಶದಿಂದ ಕೂಡಿವೆ.

28 ಸುಳ್ಳುಸಾಕ್ಷಿಯು ನಾಶವಾಗುವನು. ಆದರೆ ಎಚ್ಚರಿಕೆಯಿಂದ ಕೇಳುವವನು ಮಾತಾಡುತ್ತಲೇ ಇರುವನು.

29 ದುಷ್ಟರು ನಾಚಿಕೆಯಿಲ್ಲದೆ ವರ್ತಿಸುವರು; ಆದರೆ ಒಳ್ಳೆಯವನು ತನ್ನ ಮಾರ್ಗಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವನು.

30 ಯೆಹೋವನೇ ವಿರೋಧವಾಗಿದ್ದರೆ, ಜಯಪ್ರಧವಾಗಬಲ್ಲ ಯೋಜನೆಯನ್ನು ಮಾಡುವಂಥ ಜ್ಞಾನ ಯಾರಿಗೂ ಇಲ್ಲ.

31 ಯುದ್ಧಕ್ಕಾಗಿ ಕುದುರೆಗಳನ್ನು ಸಿದ್ಧಪಡಿಸುತ್ತಾರೆ; ಆದರೆ ಜಯದ ನಿರ್ಧಾರ ಯೆಹೋವನಿಂದಲೇ.

ಕೊಲೊಸ್ಸೆಯವರಿಗೆ 4

ಯಜಮಾನರೇ, ನಿಮ್ಮ ಸೇವಕರಿಗೆ ನ್ಯಾಯವಾದದ್ದನ್ನೂ ಸರಿಯಾದದ್ದನ್ನೂ ಮಾಡಿರಿ. ಪರಲೋಕದಲ್ಲಿ ನಿಮಗೂ ಒಬ್ಬ ಯಜಮಾನನಿದ್ದಾನೆ ಎಂಬುದು ನಿಮ್ಮ ಜ್ಞಾಪಕದಲ್ಲಿರಲಿ.

ಕ್ರೈಸ್ತರು ಮಾಡತಕ್ಕ ಕಾರ್ಯಗಳು

ಪ್ರಾರ್ಥನೆಯನ್ನು ತಪ್ಪದೆ ಮಾಡಿರಿ, ನೀವು ಪ್ರಾರ್ಥಿಸುವಾಗ, ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. ನಮಗಾಗಿಯೂ ನೀವು ಪ್ರಾರ್ಥಿಸಿ. ಜನರಿಗೆ ದೇವರ ಸಂದೇಶವನ್ನು ತಿಳಿಸಲು ಅನುಕೂಲವಾದ ಸಂದರ್ಭವನ್ನು ಆತನು ನಿಮಗೆ ದಯಪಾಲಿಸುವಂತೆ ಪ್ರಾರ್ಥಿಸಿರಿ. ದೇವರು ಕ್ರಿಸ್ತನ ಬಗ್ಗೆ ತಿಳಿಸಿರುವ ರಹಸ್ಯಸತ್ಯವನ್ನು ನಾವು ಬೋಧಿಸಲಾಗುವಂತೆ ಪ್ರಾರ್ಥಿಸಿರಿ. ನಾನು ಈ ಸತ್ಯವನ್ನು ಬೋಧಿಸಿದರಿಂದಲೇ ಈಗ ಸೆರೆಮನೆಯಲ್ಲಿದ್ದೇನೆ. ಈ ಸತ್ಯವನ್ನು ನಾನು ಜನರಿಗೆ ಸ್ಪಷ್ಟವಾಗಿಯೂ ಸರಳವಾಗಿಯೂ ತಿಳಿಸಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.

ಅವಿಶ್ವಾಸಿಗಳೊಂದಿಗೆ ವ್ಯವಹರಿಸುವಾಗ ಜ್ಞಾನವುಳ್ಳವರಾಗಿರಿ. ನಿಮ್ಮ ಸಮಯವನ್ನು ಅತ್ಯುತ್ತಮವಾದ ರೀತಿಯಲ್ಲಿ ಬಳಸಿರಿ. ನೀವು ಮಾತನಾಡುವಾಗಲೆಲ್ಲಾ ದಯೆಯುಳ್ಳವರಾಗಿಯೂ ಜ್ಞಾನವುಳ್ಳವರಾಗಿಯೂ ಮಾತನಾಡಿರಿ. ಆಗ ಪ್ರತಿಯೊಬ್ಬರಿಗೂ ಯೋಗ್ಯವಾದ ರೀತಿಯಲ್ಲಿ ಉತ್ತರಿಸಲು ಶಕ್ತರಾಗುವಿರಿ.

ಪೌಲನೊಂದಿಗಿರುವ ಜನರನ್ನು ಕುರಿತ ಸುದ್ಧಿ

ತುಖಿಕನು ಕ್ರಿಸ್ತನಲ್ಲಿ ನನ್ನ ಪ್ರೀತಿಯ ಸಹೋದರನಾಗಿದ್ದಾನೆ. ನನ್ನೊಡನೆ ಅವನೂ ಪ್ರಭುವಿನಲ್ಲಿ ನಂಬಿಗಸ್ತನಾದ ಸೇವಕನೂ ದಾಸನೂ ಆಗಿದ್ದಾನೆ. ನನಗೆ ಸಂಭವಿಸುತ್ತಿರುವುದನ್ನೆಲ್ಲ ಅವನು ನಿಮಗೆ ತಿಳಿಸುತ್ತಾನೆ. ಆದಕಾರಣವೇ ನಾನು ಅವನನ್ನು ಕಳುಹಿಸುತ್ತಿದ್ದೇನೆ. ನಾವು ಹೇಗಿರುವೆವು ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮನ್ನು ಪ್ರೋತ್ಸಾಹಿಸಲು ನಾನು ಅವನನ್ನು ಒನೇಸಿಮನ ಜೊತೆಯಲ್ಲಿ ಕಳುಹಿಸುತ್ತಿದ್ದೇನೆ. ಒನೇಸಿಮನು ಕ್ರಿಸ್ತನಲ್ಲಿ ನಂಬಿಗಸ್ತನಾದ ಪ್ರೀತಿಯ ಸಹೋದರನಾಗಿದ್ದಾನೆ. ಅವನು ನಿಮ್ಮ ಊರಿನವನೇ. ಇಲ್ಲಿ ಸಂಭವಿಸಿದ್ದೆಲ್ಲವನ್ನು ಅವರು ನಿಮಗೆ ತಿಳಿಸುತ್ತಾರೆ.

10 ಅರಿಸ್ತಾರ್ಕನು ವಂದನೆ ತಿಳಿಸಿದ್ದಾನೆ. ಅವನೂ ನನ್ನೊಡನೆ ಸೆರೆಯಲ್ಲಿದ್ದಾನೆ. ಬಾರ್ನಬನಿಗೆ ಸೋದರ ಬಾಂಧ್ಯವ್ಯವುಳ್ಳ ಮಾರ್ಕನೂ ವಂದನೆಯನ್ನು ಹೇಳುತ್ತಾನೆ. (ಮಾರ್ಕನ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ. ಅವನು ಬಂದರೆ ಅವನನ್ನು ಸ್ವಾಗತಿಸಿರಿ.) 11 ಯೇಸುವು (ಯುಸ್ತನೆಂದೂ ಅವನನ್ನು ಕರೆಯುತ್ತಾರೆ.) ಸಹ ವಂದನೆಯನ್ನು ಹೇಳುತ್ತಾನೆ. ಯೆಹೂದ್ಯರಲ್ಲಿ ವಿಶ್ವಾಸಿಗಳಾಗಿರುವ ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆ ಕೆಲಸ ಮಾಡುತ್ತಿದ್ದಾರೆ. ಇವರೇ ನನಗೆ ಆದರಣೆಯಾಗಿದ್ದಾರೆ.

12 ಎಪಫ್ರನು ಸಹ ವಂದನೆ ತಿಳಿಸಿದ್ದಾನೆ. ಅವನು ಯೇಸು ಕ್ರಿಸ್ತನ ಸೇವಕನು. ಅವನು ನಿಮ್ಮವರಲ್ಲಿ ಒಬ್ಬನಾಗಿದ್ದಾನೆ. ಅವನು ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತಾನೆ. ನೀವು ಆತ್ಮಿಕತೆಯಲ್ಲಿ ಬೆಳೆಯುತ್ತಾ ಸಂಪೂರ್ಣತೆಯನ್ನು ಮುಟ್ಟಬೇಕೆಂತಲೂ ದೇವರ ಚಿತ್ತವನ್ನು ಪೂರ್ಣವಾಗಿ ತಿಳಿದುಕೊಂಡು ದೃಢವಾಗಿರಬೇಕೆಂತಲೂ ಪ್ರಾರ್ಥಿಸುತ್ತಾನೆ. 13 ಅವನು ನಿಮಗೋಸ್ಕರ, ಲವೊದಿಕೀಯ ಮತ್ತು ಹಿರೆಯಾ ಪೊಲಿಯದ ಜನರಿಗೋಸ್ಕರ ಬಹಳ ಪ್ರಯಾಸಪಟ್ಟು ಕೆಲಸ ಮಾಡಿದನೆಂಬುದು ನನಗೆ ತಿಳಿದಿದೆ. 14 ದೇಮನು ಮತ್ತು ಪ್ರೀತಿಯ ಸ್ನೇಹಿತನಾದ ವೈದ್ಯ ಲೂಕನು ವಂದನೆಗಳನ್ನು ಹೇಳುತ್ತಾರೆ.

15 ಲವೊದಿಕೀಯದಲ್ಲಿರುವ ಸಹೋದರ ಸಹೋದರಿಯರಿಗೆ ವಂದನೆಗಳನ್ನು ತಿಳಿಸಿರಿ. ನುಂಫಳಿಗೂ ಅವಳ ಮನೆಯಲ್ಲಿ ಸೇರುವ ಸಭೆಯವರಿಗೂ ವಂದನೆಗಳನ್ನು ತಿಳಿಸಿರಿ. 16 ಈ ಪತ್ರವನ್ನು ಓದಿದ ನಂತರ ಲವೊದಿಕೀಯದ ಸಭೆಯವರಿಗೂ ಓದಲು ಕೊಡಿರಿ. ನಾನು ಲವೊದಿಕೀಯದವರಿಗೆ ಬರೆದಿರುವ ಪತ್ರವನ್ನು ನೀವೂ ಓದಿರಿ. 17 ಅರ್ಖಿಪ್ಪನಿಗೆ, “ಪ್ರಭುವು ನಿನಗೆ ವಹಿಸಿರುವ ಸೇವೆಯನ್ನು ಖಂಡಿತವಾಗಿ ನೆರವೇರಿಸಬೇಕು” ಎಂದು ತಿಳಿಸಿರಿ.

18 ನಿಮಗೆ ನನ್ನ ವಂದನೆಗಳು. ಪೌಲನೆಂಬ ನಾನು ನನ್ನ ಸ್ವಂತ ಕೈಯಿಂದ ಇದನ್ನು ಬರೆದಿದ್ದೇನೆ. ಸೆರೆಮನೆಯಲ್ಲಿರುವ ನನ್ನನ್ನು ಜ್ಞಾಪಿಸಿಕೊಳ್ಳಿರಿ. ದೇವರ ಕೃಪೆಯು ನಿಮ್ಮೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International