Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 1

ಯಜ್ಞಗಳು ಮತ್ತು ಕಾಣಿಕೆಗಳು

ಯೆಹೋವನು ಮೋಶೆಯನ್ನು ಕರೆದು ದೇವದರ್ಶನಗುಡಾರದೊಳಗಿಂದ ಅವನ ಸಂಗಡ ಮಾತಾಡಿದನು. ಯೆಹೋವನು ಹೀಗೆ ಹೇಳಿದನು: “ಇಸ್ರೇಲರಿಗೆ ನೀನು ಹೇಳಬೇಕಾದದ್ದೇನೆಂದರೆ, ನೀವು ಯೆಹೋವನಿಗೆ ಯಜ್ಞವನ್ನು ಕಾಣಿಕೆಯಾಗಿ ಅರ್ಪಿಸುವುದಾದರೆ ನೀವು ಸಾಕಿದ ಪಶುಗಳನ್ನೇ ಅರ್ಪಿಸಬೇಕು. ಅದು ದನವಾಗಲಿ ಕುರಿಯಾಗಲಿ ಆಡಾಗಲಿ ಆಗಿರಬಹುದು.

“ಒಬ್ಬನು ತನ್ನ ದನಗಳಲ್ಲಿ ಒಂದನ್ನು ಸರ್ವಾಂಗಹೋಮವಾಗಿ ಅರ್ಪಿಸಬಯಸಿದರೆ ಆ ಪಶುವು ಯಾವ ದೋಷವಿಲ್ಲದ ಹೋರಿಯಾಗಿರಬೇಕು. ಅವನು ಆ ಪಶುವನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಆಗ ಯೆಹೋವನು ಆ ಸಮರ್ಪಣೆಯನ್ನು ಮೆಚ್ಚಿಕೊಳ್ಳುವನು. ಅವನು ತನ್ನ ಕೈಯನ್ನು ಪ್ರಾಣಿಯ ತಲೆಯ ಮೇಲಿಡಬೇಕು. ಆ ವ್ಯಕ್ತಿಯ ದೋಷಪರಿಹಾರಕ್ಕಾಗಿ ಯೆಹೋವನು ಆ ಸರ್ವಾಂಗಹೋಮವನ್ನು ಸ್ವೀಕರಿಸುವನು.

“ಅವನು ಹೋರಿಯನ್ನು ಯೆಹೋವನ ಸನ್ನಿಧಿಯಲ್ಲಿ ವಧಿಸಬೇಕು. ಬಳಿಕ ಯಾಜಕರಾದ ಆರೋನನ ಪುತ್ರರು ರಕ್ತವನ್ನು ದೇವದರ್ಶನಗುಡಾರದ ಬಾಗಿಲಿನ ಹತ್ತಿರವಿರುವ ಯಜ್ಞವೇದಿಕೆಯ ಬಳಿಗೆ ತರಬೇಕು; ರಕ್ತವನ್ನು ಸುತ್ತಲೂ ಯಜ್ಞವೇದಿಕೆಯ ಮೇಲೆ ಚಿಮಿಕಿಸಬೇಕು. ಯಾಜಕನು ಆ ಪಶುವಿನ ಚರ್ಮವನ್ನು ಸುಲಿದು, ಪಶುವನ್ನು ತುಂಡುತುಂಡುಗಳಾಗಿ ಕಡಿಯಬೇಕು. ಯಾಜಕರಾದ ಆರೋನನ ಪುತ್ರರು ವೇದಿಕೆಯ ಮೇಲೆ ಬೆಂಕಿಯನ್ನಿಟ್ಟು ಅದರ ಮೇಲೆ ಕಟ್ಟಿಗೆಯನ್ನು ಇಡಬೇಕು. ಆರೋನನ ವಂಶದವರಾದ ಯಾಜಕರು ವೇದಿಕೆಯ ಮೇಲೆ ಬೆಂಕಿಯಲ್ಲಿರುವ ಕಟ್ಟಿಗೆಯ ಮೇಲೆ ಪಶುವಿನ ತುಂಡುಗಳನ್ನೂ ತಲೆ ಮತ್ತು ಕೊಬ್ಬನ್ನೂ ಇಡಬೇಕು. ಯಾಜಕನು ಪಶುವಿನ ಕಾಲುಗಳನ್ನು ಮತ್ತು ಒಳಗಿನ ಭಾಗಗಳನ್ನು ನೀರಿನಿಂದ ತೊಳೆದು ಈ ಎಲ್ಲಾ ಭಾಗಗಳನ್ನು ವೇದಿಕೆಯ ಮೇಲೆ ಹೋಮಮಾಡಬೇಕು. ಈ ಸರ್ವಾಂಗಹೋಮದ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

10 “ಒಬ್ಬನು ಕುರಿಯನ್ನಾಗಲಿ ಆಡನ್ನಾಗಲಿ ಸರ್ವಾಂಗಹೋಮವಾಗಿ ಅರ್ಪಿಸುವಾಗ, ಆ ಪ್ರಾಣಿಯು ಯಾವ ದೋಷವಿಲ್ಲದ ಗಂಡಾಗಿರಬೇಕು. 11 ಅವನು ಯೆಹೋವನ ಸನ್ನಿಧಿಯಲ್ಲಿ ಅಂದರೆ ವೇದಿಕೆಯ ಉತ್ತರ ಭಾಗದಲ್ಲಿ ಪಶುವನ್ನು ವಧಿಸಬೇಕು. ಬಳಿಕ ಯಾಜಕರಾದ ಆರೋನನ ಪುತ್ರರು ರಕ್ತವನ್ನು ವೇದಿಕೆಯ ಮೇಲೆ ಸುತ್ತಲೂ ಚಿಮಿಕಿಸಬೇಕು. 12 ಬಳಿಕ ಯಾಜಕನು ಆ ಪಶುವನ್ನು ತುಂಡುತುಂಡುಗಳಾಗಿ ಕತ್ತರಿಸಬೇಕು. ಯಾಜಕನು ವೇದಿಕೆಯ ಮೇಲೆ ಬೆಂಕಿಯಲ್ಲಿರುವ ಕಟ್ಟಿಗೆಯ ಮೇಲೆ ತುಂಡುಗಳನ್ನೂ ತಲೆ ಮತ್ತು ಕೊಬ್ಬನ್ನೂ ಇಡಬೇಕು. 13 ಯಾಜಕನು ಪಶುವಿನ ಕಾಲುಗಳನ್ನೂ ಒಳಗಿನ ಭಾಗಗಳನ್ನೂ ನೀರಿನಿಂದ ತೊಳೆಯಬೇಕು. ಬಳಿಕ ಯಾಜಕನು ಪಶುವಿನ ಈ ಎಲ್ಲಾ ಭಾಗಗಳನ್ನೂ ವೇದಿಕೆಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಸಮರ್ಪಿಸಲ್ಪಟ್ಟ ಸರ್ವಾಂಗಹೋಮವಾಗಿರುತ್ತದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

14 “ಒಬ್ಬನು ಪಕ್ಷಿಯನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಅರ್ಪಿಸುವಾಗ ಆ ಪಕ್ಷಿಯು ಬೆಳೆವಕ್ಕಿಯಾಗಲಿ ಪಾರಿವಾಳದ ಮರಿಯಾಗಲಿ ಆಗಿರಬೇಕು. 15 ಯಾಜಕನು ಅದನ್ನು ವೇದಿಕೆಯ ಬಳಿಗೆ ತರಬೇಕು. ಯಾಜಕನು ಪಕ್ಷಿಯ ಕುತ್ತಿಗೆಯನ್ನು ಮುರಿದು ವೇದಿಕೆಯ ಮೇಲೆ ಹೋಮಮಾಡಬೇಕು. ಪಕ್ಷಿಯ ರಕ್ತವು ವೇದಿಕೆಯ ಪಾರ್ಶ್ವದಲ್ಲಿ ಹಿಂಡಲ್ಪಡಬೇಕು. 16 ಯಾಜಕನು ಪಕ್ಷಿಯ ಕರುಳುಗಳನ್ನು ಮತ್ತು ಗರಿಗಳನ್ನು ತೆಗೆದು ಅವುಗಳನ್ನು ವೇದಿಕೆಯ ಪೂರ್ವದಿಕ್ಕಿನಲ್ಲಿ ಬಿಸಾಡಬೇಕು. ಈ ಸ್ಥಳವು ವೇದಿಕೆಯಿಂದ ತೆಗೆದ ಬೂದಿಯನ್ನು ಹಾಕುವ ಸ್ಥಳವಾಗಿದೆ. 17 ತರುವಾಯ ಯಾಜಕನು ಪಕ್ಷಿಯ ರೆಕ್ಕೆಗಳನ್ನು ಕಿತ್ತುಹಾಕಬೇಕು. ಆದರೆ ಅವನು ಪಕ್ಷಿಯನ್ನು ಎರಡು ಭಾಗಗಳಾಗಿ ವಿಭಾಗಿಸಬಾರದು. ಯಾಜಕನು ಪಕ್ಷಿಯನ್ನು ವೇದಿಕೆಯ ಮೇಲೆ ಬೆಂಕಿಯಲ್ಲಿರುವ ಕಟ್ಟಿಗೆಗಳ ಮೇಲಿಟ್ಟು ಹೋಮಮಾಡಬೇಕು. ಇದು ಅಗ್ನಿಯ ಮೂಲಕ ಸಮರ್ಪಣೆಯಾದ ಸರ್ವಾಂಗಹೋಮವಾಗಿದೆ. ಅದರ ಸುವಾಸನೆ ಯೆಹೋವನಿಗೆ ಪ್ರಿಯವಾಗಿದೆ.

ಯೋಹಾನ 20

ಬರಿದಾದ ಸಮಾಧಿ

(ಮತ್ತಾಯ 28:1-10; ಮಾರ್ಕ 16:1-8; ಲೂಕ 24:1-12)

20 ಭಾನುವಾರದ ಮುಂಜಾನೆ ಮಗ್ದಲದ ಮರಿಯಳು ಯೇಸುವಿನ ದೇಹವಿದ್ದ ಸಮಾಧಿಯ ಬಳಿಗೆ ಬಂದಳು. ಆಗ ಇನ್ನೂ ಕತ್ತಲಿತ್ತು. ಸಮಾಧಿಯ ಬಾಗಿಲಿಗೆ ಮುಚ್ಚಿದ್ದ ದೊಡ್ಡ ಕಲ್ಲು ಅಲ್ಲಿಂದ ತೆಗೆದುಹಾಕಲ್ಪಟ್ಟಿರುವುದನ್ನು ಕಂಡ ಮರಿಯಳು ಸೀಮೋನ್ ಪೇತ್ರನ ಮತ್ತು (ಯೇಸು ಪ್ರೀತಿಸುತ್ತಿದ್ದ) ಮತ್ತೊಬ್ಬ ಶಿಷ್ಯನ ಬಳಿಗೆ ಓಡಿಬಂದು, “ಅವರು ಸಮಾಧಿಯೊಳಗಿಂದ ಪ್ರಭುವನ್ನು ತೆಗೆದುಕೊಂಡಿದ್ದಾರೆ, ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲ” ಎಂದು ಹೇಳಿದಳು.

ಆದ್ದರಿಂದ ಪೇತ್ರನು ಮತ್ತು ಮತ್ತೊಬ್ಬ ಶಿಷ್ಯನು ಸಮಾಧಿಯ ಬಳಿಗೆ ಹೊರಟರು. ಅವರಿಬ್ಬರೂ ಓಡುತ್ತಾ ಹೋದರು. ಆದರೆ ಆ ಮತ್ತೊಬ್ಬ ಶಿಷ್ಯನು ಪೇತ್ರನಿಗಿಂತಲೂ ವೇಗವಾಗಿ ಓಡುತ್ತಾ ಹೋಗಿ ಸಮಾಧಿಯನ್ನು ಮೊದಲು ತಲುಪಿದನು. ಆ ಶಿಷ್ಯನು ಬಗ್ಗಿ ಒಳಗೆ ನೋಡಿದನು.

ನಾರುಬಟ್ಟೆಯ ತುಂಡುಗಳು ಅಲ್ಲಿ ಬಿದ್ದಿರುವುದನ್ನು ಅವನು ಕಂಡನು. ಅಲ್ಲದೆ ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆಯನ್ನೂ ಅವನು ಕಂಡನು. ಆ ಬಟ್ಟೆಯು ಸುತ್ತಲ್ಪಟ್ಟು, ಇತರ ನಾರುಬಟ್ಟೆಗಳಿಂದ ಪ್ರತ್ಯೇಕವಾಗಿ ಬಿದ್ದಿತ್ತು. ಬಳಿಕ ಆ ಮತ್ತೊಬ್ಬ ಶಿಷ್ಯನು ಒಳಗೆ ಹೋದನು. ಸಮಾಧಿಯನ್ನು ಮೊದಲು ತಲುಪಿದವನೇ ಆ ಶಿಷ್ಯನು. ಅವನು ಸಂಭವಿಸಿರುವುದನ್ನು ಕಂಡು ನಂಬಿಕೊಂಡನು. (ಯೇಸು ಸತ್ತು ಜೀವಂತವಾಗಿ ಎದ್ದುಬರಬೇಕೆಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿರುವುದು ಈ ಶಿಷ್ಯರಿಗೆ ಇನ್ನೂ ಅರ್ಥವಾಗಿರಲಿಲ್ಲ.)

ಮಗ್ದಲದ ಮರಿಯಳಿಗೆ ಯೇಸುವಿನ ದರ್ಶನ

(ಮಾರ್ಕ 16:9-11)

10 ಬಳಿಕ ಶಿಷ್ಯರು ಹಿಂತಿರುಗಿ ಮನೆಗೆ ಹೋದರು. 11 ಆದರೆ ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ, 12 ಬಿಳುಪಾದ ಬಟ್ಟೆಗಳನ್ನು ಧರಿಸಿಕೊಂಡಿದ್ದ ಇಬ್ಬರು ದೇವದೂತರನ್ನು ಕಂಡಳು. ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳದಲ್ಲಿ ಅವರಲ್ಲೊಬ್ಬನು ಯೇಸುವಿನ ತಲೆಯಿದ್ದ ಕಡೆಯಲ್ಲಿಯೂ ಮತ್ತೊಬ್ಬನು ಪಾದವಿದ್ದ ಕಡೆಯಲ್ಲಿಯೂ ಕುಳಿತುಕೊಂಡಿದ್ದನು.

13 ದೇವದೂತರು ಮರಿಯಳಿಗೆ, “ಅಮ್ಮಾ, ಏಕೆ ಅಳುತ್ತಿರುವೆ?” ಎಂದು ಕೇಳಿದರು.

ಮರಿಯಳು, “ನನ್ನ ಪ್ರಭುವಿನ ದೇಹವನ್ನು ಕೆಲವು ಜನರು ತೆಗೆದುಕೊಂಡು ಹೋಗಿದ್ದಾರೆ. ಅವರು ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟಳು. 14 ಮರಿಯಳು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದನ್ನು ಕಂಡಳು. ಆದರೆ ಆತನು ಯೇಸು ಎಂಬುದು ಆಕೆಗೆ ಗೊತ್ತಿರಲಿಲ್ಲ.

15 ಯೇಸು ಆಕೆಯನ್ನು “ಅಮ್ಮಾ ಏಕೆ ಅಳುತ್ತಿರುವೆ? ನೀನು ಯಾರನ್ನು ಹುಡುಕುತ್ತಿರುವೆ?” ಎಂದು ಕೇಳಿದನು.

ಇವನು ತೋಟವನ್ನು ನೋಡಿಕೊಳ್ಳುವವನಿರಬಹುದೆಂದು ಮರಿಯಳು ಯೋಚಿಸಿಕೊಂಡು ಅವನಿಗೆ, “ಅಯ್ಯಾ, ನೀನು ಯೇಸುವನ್ನು ತೆಗೆದುಕೊಂಡು ಹೋದೆಯಾ? ಆತನನ್ನು ಎಲ್ಲಿಟ್ಟಿರುವೆ, ನನಗೆ ಹೇಳು. ನಾನು ಹೋಗಿ ಆತನನ್ನು ತೆಗೆದು ಕೊಳ್ಳುತ್ತೇನೆ” ಎಂದು ಹೇಳಿದಳು.

16 ಯೇಸು ಆಕೆಗೆ, “ಮರಿಯಳೇ” ಎಂದನು.

ಮರಿಯಳು ಯೇಸುವಿನ ಕಡೆಗೆ ತಿರುಗಿ, ಯೆಹೂದ್ಯರ ಭಾಷೆಯಲ್ಲಿ “ರಬ್ಬೂನಿ” ಎಂದಳು. (ರಬ್ಬೂನಿ ಎಂದರೆ “ಗುರು”.)

17 ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ. ನಾನು ತಂದೆಯ ಬಳಿಗೆ ಇನ್ನೂ ಹಿಂತಿರುಗಿ ಹೋಗಿಲ್ಲ. ಆದರೆ ನೀನು ನನ್ನ ಸಹೋದರರ (ಶಿಷ್ಯರ) ಬಳಿಗೆ ಹೋಗಿ, ‘ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಹಿಂತಿರುಗಿ ಹೋಗುತ್ತಿದ್ದೇನೆ’ ಎಂಬುದಾಗಿ ಹೇಳು” ಎಂದನು.

18 ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಹೋಗಿ, “ನಾನು ಪ್ರಭುವನ್ನು ಕಂಡೆನು!” ಎಂದು ಹೇಳಿದಳು. ಮತ್ತು ಯೇಸು ಹೇಳಿದ ಸಂಗತಿಗಳನ್ನು ಆಕೆ ಅವರಿಗೆ ತಿಳಿಸಿದಳು.

ಶಿಷ್ಯರಿಗೆ ಯೇಸುವಿನ ದರ್ಶನ

(ಮತ್ತಾಯ 28:16-20; ಮಾರ್ಕ 16:14-18; ಲೂಕ 24:36-49)

19 ಅಂದು ಭಾನುವಾರ, ಅದೇ ಸಾಯಂಕಾಲ ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯೆಹೂದ್ಯರಿಗೆ ಹೆದರಿ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು. 20 ಯೇಸು ಹೀಗೆ ಹೇಳಿದ ಮೇಲೆ, ತನ್ನ ಕೈಗಳನ್ನು ಮತ್ತು ಪಕ್ಕೆಯನ್ನು ಅವರಿಗೆ ತೋರಿಸಿದನು. ಪ್ರಭುವನ್ನು ಕಂಡು ಶಿಷ್ಯರಿಗೆ ಬಹು ಸಂತೋಷವಾಯಿತು.

21 ಬಳಿಕ ಯೇಸು ಮತ್ತೆ, “ಶಾಂತಿಯು ನಿಮ್ಮೊಂದಿಗಿರಲಿ! ತಂದೆಯು ನನ್ನನ್ನು ಕಳುಹಿಸಿದನು. ಅದೇ ರೀತಿಯಲ್ಲಿ, ಈಗ ನಾನೂ ನಿಮ್ಮನ್ನು ಕಳುಹಿಸುತ್ತೇನೆ” ಎಂದು ಹೇಳಿದನು. 22 ಯೇಸು ಹೀಗೆ ಹೇಳಿದ ನಂತರ ಶಿಷ್ಯರ ಮೇಲೆ ಉಸಿರೂದಿ, “ಪವಿತ್ರಾತ್ಮನನ್ನು ಸ್ವೀಕರಿಸಿಕೊಳ್ಳಿ. 23 ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ, ಅವರ ಪಾಪಗಳನ್ನು ಕ್ಷಮಿಸಲಾಗುವುದು. ನೀವು ಯಾರ ಪಾಪಗಳನ್ನು ಕ್ಷಮಿಸುವುದಿಲ್ಲವೋ, ಅವರ ಪಾಪಗಳಿಗೆ ಕ್ಷಮೆ ದೊರೆಯುವುದಿಲ್ಲ” ಎಂದು ಹೇಳಿದನು.

ತೋಮನಿಗೆ ಯೇಸುವಿನ ದರ್ಶನ

24 ಯೇಸು ಬಂದಾಗ ದಿದುಮನೆಂಬ ತೋಮನು ಶಿಷ್ಯರೊಂದಿಗೆ ಇರಲಿಲ್ಲ. ಹನ್ನೆರಡು ಮಂದಿ ಶಿಷ್ಯರಲ್ಲಿ ತೋಮನೂ ಒಬ್ಬನಾಗಿದ್ದನು. 25 ಉಳಿದ ಶಿಷ್ಯರು ತೋಮನಿಗೆ, “ನಾವು ಪ್ರಭುವನ್ನು ನೋಡಿದೆವು” ಎಂದು ಹೇಳಿದರು. ಆದರೆ ತೋಮನು, “ಆತನ ಕೈಗಳಲ್ಲಿರುವ ಮೊಳೆಯ ಗಾಯದ ಗುರುತುಗಳನ್ನು ನಾನು ನೋಡುವವರೆಗೆ, ಮೊಳೆಗಳನ್ನು ಜಡಿದಿದ್ದ ಸ್ಥಳದಲ್ಲಿ ನನ್ನ ಬೆರಳನ್ನಿಡುವವರೆಗೆ ಮತ್ತು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟುನೋಡುವವರೆಗೆ ನಾನು ಅದನ್ನು ನಂಬುವುದಿಲ್ಲ” ಎಂದು ಹೇಳಿದನು.

26 ಒಂದು ವಾರದ ನಂತರ ಶಿಷ್ಯರು ಮನೆಯೊಂದರಲ್ಲಿ ಒಟ್ಟಾಗಿ ಸೇರಿದ್ದರು. ತೋಮನು ಅವರೊಂದಿಗೆ ಇದ್ದನು. ಬಾಗಿಲುಗಳನ್ನು ಮುಚ್ಚಲಾಗಿತ್ತು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು. 27 ಬಳಿಕ ಯೇಸು ತೋಮನಿಗೆ, “ನಿನ್ನ ಬೆರಳನ್ನು ಇಲ್ಲಿಡು. ನನ್ನ ಕೈಗಳನ್ನು ನೋಡು. ನಿನ್ನ ಕೈಯನ್ನು ನನ್ನ ಪಕ್ಕೆಯಲ್ಲಿ ಹಾಕು. ಸಂಶಯಪಡದೆ ನಂಬುವವನಾಗು” ಎಂದು ಹೇಳಿದನು.

28 ತೋಮನು ಯೇಸುವಿಗೆ, “ನನ್ನ ಪ್ರಭುವೇ, ನನ್ನ ದೇವರೇ!” ಎಂದು ಹೇಳಿದನು.

29 ಯೇಸು ತೋಮನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದೆ. ನನ್ನನ್ನು ನೋಡದೆ ನಂಬುವವರು ನಿಜವಾಗಿಯೂ ಧನ್ಯರು” ಎಂದು ಹೇಳಿದನು.

ಯೋಹಾನನು ಈ ಪುಸ್ತಕವನ್ನು ಬರೆದ ಉದ್ದೇಶ

30 ಯೇಸು ಇನ್ನೂ ಅನೇಕ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಕಣ್ಮುಂದೆ ಮಾಡಿದನು. ಆ ಅದ್ಭುತಕಾರ್ಯಗಳನ್ನು ಈ ಪುಸ್ತಕದಲ್ಲಿ ಬರೆದಿಲ್ಲ. 31 ಆದರೆ ಆತನೇ ಕ್ರಿಸ್ತನೆಂದೂ ದೇವರ ಮಗನೆಂದೂ ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ.

ಜ್ಞಾನೋಕ್ತಿಗಳು 17

17 ಜಗಳದ ಮನೆಯಲ್ಲಿ ಮೃಷ್ಠಾನ್ನ ತಿನ್ನುವುದಕ್ಕಿಂತಲೂ ಸಮಾಧಾನದ ಮನೆಯಲ್ಲಿ ಒಣರೊಟ್ಟಿಯನ್ನು ತಿನ್ನುವುದೇ ಮೇಲು.

ಜ್ಞಾನಿಯಾದ ಸೇವಕನು ತನ್ನ ಯಜಮಾನನ ಅಯೋಗ್ಯ ಮಗನನ್ನೇ ತನ್ನ ಹತೋಟಿಯಲ್ಲಿಟ್ಟುಕೊಳ್ಳುವನು; ಅವನ ಸಹೋದರರೊಂದಿಗೂ ಆಸ್ತಿಯಲ್ಲಿ ಪಾಲು ಹೊಂದುವನು.

ಜನರು ಬೆಳ್ಳಿಬಂಗಾರವನ್ನು ಬೆಂಕಿಗೆ ಹಾಕಿ ಶುದ್ಧಮಾಡುವರು. ಆದರೆ ಮನುಷ್ಯರ ಹೃದಯಗಳನ್ನು ಶುದ್ಧಮಾಡುವವನು ಯೆಹೋವನೇ.

ಕೆಟ್ಟಮಾತುಗಳಿಗೆ ಕಿವಿಗೊಡುವವನು ಕೆಡುಕನಿಗೆ ಸಮಾನ. ಚಾಡಿಗೆ ಕಿವಿಗೊಡುವವನು ಸುಳ್ಳುಗಾರನಿಗೆ ಸಮಾನ.

ಬಡವನನ್ನು ಗೇಲಿಮಾಡಿದರೆ ಅವನನ್ನು ನಿರ್ಮಿಸಿದ ದೇವರಿಗೇ ಅವಮಾನಮಾಡಿದಂತಾಗುವುದು. ಬೇರೊಬ್ಬನ ದುರಾವಸ್ಥೆಯಲ್ಲಿ ಸಂತೋಷಪಡುವವರಿಗೆ ದಂಡನೆಯು ಖಂಡಿತ.

ಮೊಮ್ಮಕ್ಕಳು ವೃದ್ಧರಿಗೆ ಸಂತೋಷ. ಮಕ್ಕಳಿಗೆ ತಮ್ಮ ತಂದೆತಾಯಿಗಳ ಬಗ್ಗೆ ಹೆಮ್ಮೆ.

ವಾಕ್ಚಾತುರ್ಯವು ಮೂಢನಿಗೆ ವಿರುದ್ಧ; ಸುಳ್ಳು ಮಾತು ಗಣ್ಯನಿಗೆ ಇನ್ನೂ ವಿರುದ್ಧ.

ಲಂಚವು ಅದೃಷ್ಟ ಎಂದು ಭಾವಿಸಿಕೊಳ್ಳುವವರಿಗೆ, ಅವರು ಹೋದಲ್ಲೆಲ್ಲಾ ಅದೇ ಕಾರ್ಯಸಾಧಕದಂತೆ ಕಾಣುತ್ತದೆ.

ನಿನಗೆ ತಪ್ಪು ಮಾಡಿದವನನ್ನು ನೀನು ಕ್ಷಮಿಸಿದರೆ ನೀನು ಸ್ನೇಹಿತನಾಗುವಿ. ಆದರೆ ನೀನು ಆ ವಿಷಯವನ್ನು ಬೇರೆಯವರಿಗೆ ಮತ್ತೆ ಹೇಳಿದರೆ ನಿಮ್ಮ ಗೆಳೆತನವು ಒಡೆದು ಹೋಗುವುದು.

10 ಮೂಢನಿಗೆ ಮನವರಿಕೆ ಮಾಡಲು ನೂರು ಏಟುಗಳು ಬೇಕಾದರೂ ಜ್ಞಾನಿಗೆ ಒಂದೇ ಗದರಿಕೆಯು ಸಾಕು.

11 ದುಷ್ಟನಿಗೆ ದೇವರ ವಿರುದ್ಧ ದಂಗೆ ಏಳುವುದಕ್ಕೆ ಇಷ್ಟ. ಕೊನೆಯಲ್ಲಿ ದೇವರು ತನ್ನ ದೂತನನ್ನು ಕಳುಹಿಸಿ ಅವನನ್ನು ದಂಡಿಸುವನು.

12 ಮೂಢಕಾರ್ಯಗಳಲ್ಲಿ ನಿರತನಾಗಿರುವ ಮೂಢನನ್ನು ಭೇಟಿಯಾಗುವುದಕ್ಕಿಂತ ತನ್ನ ಮರಿಗಳನ್ನು ಕಳೆದುಕೊಂಡು ಕೋಪದಿಂದಿರುವ ತಾಯಿಕರಡಿಗೆ ಎದುರಾಗುವುದೇ ಮೇಲು.

13 ನಿನಗೆ ಉಪಕಾರ ಮಾಡುವವರಿಗೆ ಅಪಕಾರ ಮಾಡಬೇಡ. ಇಲ್ಲವಾದರೆ ನಿನ್ನ ಜೀವಮಾನವೆಲ್ಲಾ ಕಷ್ಟಪಡುವೆ.

14 ವಾದವು ಜಲಾಶಯದ ಕಟ್ಟೆಯಲ್ಲಿ ಮಾಡುವ ರಂಧ್ರಕ್ಕೆ ಸಮಾನ. ಅದು ಹೆಚ್ಚೆಚ್ಚು ದೊಡ್ಡದಾಗುವುದಕ್ಕಿಂತ ಮೊದಲೇ ನಿಲ್ಲಿಸು.

15 ನಿರಪರಾಧಿಗಾಗುವ ದಂಡನೆಯೂ ಅಪರಾಧಿಗಾಗುವ ಬಿಡುಗಡೆಯೂ ಯೆಹೋವನಿಗೆ ಅಸಹ್ಯ.

16 ಮೂಢನಲ್ಲಿ ಹಣವಿದ್ದರೂ ಪ್ರಯೋಜನವಿಲ್ಲ. ಯಾಕೆಂದರೆ ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ಅವನ ಹಣ ನಿಷ್ಪ್ರಯೋಜಕ.

17 ಸ್ನೇಹಿತನು ಯಾವಾಗಲೂ ಪ್ರೀತಿಸುವನು. ಕಷ್ಟದ ಸಮಯಗಳಲ್ಲಿ ಸಹೋದರನು ಸಹಾಯಮಾಡುವನು.

18 ಮೂಢನು ಬೇರೊಬ್ಬನ ಸಾಲಕ್ಕೆ ಜಾಮೀನುಗಾರನಾಗುವನು.

19 ಜಗಳದಲ್ಲಿ ಸಂತೋಷಿಸುವವನು ಪಾಪದಲ್ಲಿಯೂ ಸಂತೋಷಿಸುವನು. ಜಂಬಕೊಚ್ಚಿಕೊಳ್ಳುವುದು ಕೇಡನ್ನು ಕರೆಯುವುದಕ್ಕೆ ಸಮಾನ.

20 ಕೆಡುಕನಿಗೆ ಲಾಭವೆಂದೂ ಆಗದು. ಸುಳ್ಳುಗಾರನಿಗೆ ತೊಂದರೆಯೇ ಗತಿ.

21 ಮೂಢಮಗನನ್ನು ಪಡೆದಿರುವ ತಂದೆಗೆ ಬಹು ವ್ಯಥೆ. ಅವನ ತಂದೆಯು ಸಂತೋಷದಿಂದರಲಾರನು.

22 ಸಂತೋಷವು ಒಳ್ಳೆಯ ಔಷಧಿಯಂತಿದೆ. ಆದರೆ ದುಃಖವು ಕಾಯಿಲೆಯಂತಿದೆ.

23 ದುಷ್ಟನು ನ್ಯಾಯ ದೊರೆಯದಂತೆ ಮಾಡಲು ಗುಟ್ಟಾಗಿ ಲಂಚ ತೆಗೆದುಕೊಳ್ಳುವನು.

24 ವಿವೇಕಿಯು ಜ್ಞಾನದ ಮೇಲೆ ಮನಸ್ಸಿಡುತ್ತಾನೆ. ಆದರೆ ಮೂಢನು ಬಹುದೂರದ ಸ್ಥಳಗಳ ಬಗ್ಗೆ ಕನಸು ಕಾಣುತ್ತಲೇ ಇರುವನು.

25 ಮೂಢಮಗನಿಂದ ತಂದೆಗೆ ದುಃಖ; ಹೆತ್ತತಾಯಿಗೆ ವ್ಯಥೆ.

26 ನಿರಪರಾಧಿಯನ್ನು ಶಿಕ್ಷಿಸುವುದು ತಪ್ಪು. ನ್ಯಾಯವಂತರಾದ ನಾಯಕರಿಗೆ ಹೊಡೆಯುವುದು ತಪ್ಪು.

27 ಜ್ಞಾನಿಯು ಎಚ್ಚರಿಕೆಯಿಂದ ಮಾತಾಡುವನು. ವಿವೇಕಿಯು ಬೇಗನೆ ಕೋಪಗೊಳ್ಳುವುದಿಲ್ಲ.

28 ಮೌನವಾಗಿದ್ದರೆ ಮೂಢನು ಸಹ ಜ್ಞಾನಿಯಂತೆ ಕಾಣುವನು; ಮಾತಾಡದಿದ್ದರೆ ವಿವೇಕಿಯಂತೆ ಕಾಣುವನು.

ಫಿಲಿಪ್ಪಿಯವರಿಗೆ 4

ಮಾಡಬೇಕಾದ ಕಾರ್ಯಗಳು

ನನ್ನ ಸಹೋದರ ಸಹೋದರಿಯರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಿಮ್ಮನ್ನು ನೋಡಬಯಸುತ್ತೇನೆ. ನೀವು ನನಗೆ ಆನಂದವನ್ನು ಉಂಟುಮಾಡಿ, ನಿಮ್ಮ ವಿಷಯದಲ್ಲಿ ನಾನು ಹೆಮ್ಮಪಡುವಂತೆ ಮಾಡಿದ್ದೀರಿ. ನಾನು ನಿಮಗೆ ಹೇಳಿದಂತೆ ಪ್ರಭುವನ್ನು ಅನುಸರಿಸಿರಿ.

ಪ್ರಭುವಿನಲ್ಲಿ ಒಂದೇ ಮನಸ್ಸನ್ನು ಹೊಂದಿರಬೇಕೆಂದು ನಾನು ಯವೋದ್ಯಳನ್ನೂ ಸಂತುಕೆಯನ್ನೂ ಕೇಳಿಕೊಳ್ಳುತ್ತೇನೆ. ನನ್ನ ಸ್ನೇಹಿತನೇ, ನೀನು ನನ್ನ ಜೊತೆಕೆಲಸದವನಾಗಿ ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಿರುವುದರಿಂದ ಈ ಸ್ತ್ರೀಯರಿಗೂ ನೀನು ಸಹಾಯ ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇನೆ. ಈ ಸ್ತ್ರೀಯರು ನನ್ನೊಂದಿಗೆ ಸುವಾರ್ತೆಗೋಸ್ಕರ ಸೇವೆ ಮಾಡಿದ್ದಾರೆ. ನನ್ನೊಂದಿಗೆ ಸೇವೆ ಮಾಡುತ್ತಿದ್ದ ಕ್ಲೇಮೆನ್ಸ್ ಮತ್ತು ಇತರ ಸೇವಕರೊಡನೆ ಈ ಸ್ತ್ರೀಯರು ಸೇವೆ ಮಾಡಿದ್ದಾರೆ. ಅವರ ಹೆಸರುಗಳು ಜೀವಬಾಧ್ಯರ ಪುಸಕ್ತದಲ್ಲಿ[a] ಬರೆಯಲ್ಪಟ್ಟಿವೆ.

ಯಾವಾಗಲೂ ಪ್ರಭುವಿನಲ್ಲಿ ಆನಂದಿಸಿರಿ; ಆನಂದಪಡಿರಿ ಎಂದು ಮತ್ತೆ ಹೇಳುತ್ತೇನೆ.

ನಿಮ್ಮ ಮೃದುಸ್ವಭಾವವನ್ನೂ ಕರುಣೆಯನ್ನೂ ಜನರೆಲ್ಲರೂ ನೋಡುವಂತಾಗಲಿ. ಪ್ರಭುವು ಬೇಗನೆ ಬರುತ್ತಾನೆ. ಯಾವುದರ ಬಗ್ಗೆಯೂ ಚಿಂತಿಸಬೇಡಿ. ಆದರೆ ಪ್ರಾರ್ಥನೆ ಮಾಡುತ್ತಾ ನಿಮ್ಮ ಅಗತ್ಯತೆಗಳಿಗೆಲ್ಲಾ ದೇವರಲ್ಲಿ ವಿಜ್ಞಾಪಿಸಿರಿ. ನೀವು ಪ್ರಾರ್ಥನೆ ಮಾಡುವಾಗಲೆಲ್ಲಾ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ. ದೇವಶಾಂತಿಯು ಕ್ರಿಸ್ತ ಯೇಸುವಿನಲ್ಲಿ ನಿಮ್ಮ ಹೃದಯಗಳನ್ನೂ ಮನಸ್ಸುಗಳನ್ನೂ ಕಾಯುವುದು. ದೇವರು ಕೊಡುವ ಆ ಶಾಂತಿಯು ನಾವು ಅರ್ಥಮಾಡಿಕೊಳ್ಳಲಾಗದಷ್ಟು ಅಗಮ್ಯವಾಗಿದೆ.

ಸಹೋದರ ಸಹೋದರಿಯರೇ, ಒಳ್ಳೆಯದಾದ ಮತ್ತು ಸ್ತುತಿಗೆ ಯೋಗ್ಯವಾದ ಸಂಗತಿಗಳ ಬಗ್ಗೆ ಆಲೋಚಿಸಿರಿ. ಸತ್ಯವಾದ, ಮಾನ್ಯವಾದ, ನ್ಯಾಯವಾದ, ಶುದ್ಧವಾದ, ಸುಂದರವಾದ ಮತ್ತು ಗೌರವಯುತವಾದ ವಿಷಯಗಳ ಬಗ್ಗೆ ಆಲೋಚಿಸಿರಿ. ನೀವು ನನ್ನಿಂದ ಕಲಿತುಕೊಂಡದ್ದನ್ನು, ಹೊಂದಿಕೊಂಡದ್ದನ್ನು, ಕೇಳಿದ್ದನ್ನು ಮತ್ತು ಕಣ್ಣಾರೆ ಕಂಡದ್ದನ್ನು ಮಾಡಿರಿ. ಆಗ, ಶಾಂತಿಯನ್ನು ಕೊಡುವ ದೇವರು ನಿಮ್ಮೊಂದಿಗಿರುವನು.

ಫಿಲಿಪ್ಪಿ ಕ್ರೈಸ್ತರಿಗೆ ಪೌಲನ ವಂದನೆ

10 ನನ್ನ ಮೇಲೆ ನಿಮಗಿರುವ ಚಿಂತೆಯನ್ನು ನೀವು ಮತ್ತೆ ತೋರಿಸಿದ್ದಕ್ಕಾಗಿ ನಾನು ಪ್ರಭುವಿನಲ್ಲಿ ಬಹು ಸಂತೋಷಪಡುತ್ತೇನೆ. ನೀವು ನನ್ನ ಬಗ್ಗೆ ಚಿಂತಿಸುತ್ತಲೇ ಇದ್ದೀರಿ. ಆದರೆ ಅದನ್ನು ತೋರಿಸಲು ನಿಮಗೆ ಅವಕಾಶವೇ ಇರಲಿಲ್ಲ. 11 ನಾನು ಈ ಮಾತುಗಳನ್ನು ಹೇಳುತ್ತಿರುವುದು ನನಗಿರುವ ಕೊರತೆಯ ದೆಸೆಯಿಂದಲ್ಲ. ನನ್ನಲ್ಲಿರುವಂಥವುಗಳಲ್ಲಿ ಮತ್ತು ನನಗೆ ಸಂಭವಿಸುವ ಪ್ರತಿಯೊಂದರಲ್ಲಿ ತೃಪ್ತನಾಗಿರಲು ನಾನು ಕಲಿತುಕೊಂಡಿದ್ದೇನೆ. 12 ಹಸಿವೆಯಿಂದಿರುವಾಗಲೂ ಸಮೃದ್ಧಿಯುಳ್ಳವನಾಗಿರುವಾಗಲೂ ಹೇಗೆ ಜೀವಿಸಬೇಕೆಂಬುದು ನನಗೆ ತಿಳಿದಿದೆ. ಯಾವ ಸಮಯದಲ್ಲಾಗಲಿ ಯಾವ ಪರಿಸ್ಥಿತಿಯಲ್ಲಾಗಲಿ ಸಂತೋಷದಿಂದಿರುವ ಗುಟ್ಟು ನನಗೆ ತಿಳಿದಿದೆ. ಊಟಕ್ಕೆ ಬೇಕಾದಷ್ಟು ಇರುವಾಗಲೂ ಇಲ್ಲದಿರುವಾಗಲೂ ನನಗೆ ಅಗತ್ಯವಾದವುಗಳನ್ನು ಹೊಂದಿರುವಾಗಲೂ ಹೊಂದಿಲ್ಲದಿರುವಾಗಲೂ ಸಂತೋಷವಾಗಿರಲು ಕಲಿತುಕೊಂಡಿದ್ದೇನೆ. 13 ಕ್ರಿಸ್ತನ ಮೂಲಕ ನಾನು ಎಲ್ಲಾ ಕಾರ್ಯಗಳನ್ನು ಮಾಡಬಲ್ಲೆನು. ಏಕೆಂದರೆ ಆತನು ನನ್ನನ್ನು ಬಲಪಡಿಸುತ್ತಾನೆ.

14 ಆದರೂ ನಾನು ಕೊರತೆಯಲ್ಲಿದ್ದಾಗ ನೀವು ನನಗೆ ಸಹಾಯ ಮಾಡಿದ್ದು ಒಳ್ಳೆಯದಾಯಿತು. 15 ಇದಲ್ಲದೆ ಫಿಲಿಪ್ಪಿ ಪಟ್ಟಣದವರೇ, ನಾನು ಮೊದಲು ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ ಮಕೆದೋನಿಯಕ್ಕೆ ಹೊರಟಾಗ, ನಿಮ್ಮ ಸಭೆಯೊಂದೇ ನನಗೆ ಸಹಾಯ ಮಾಡಿದ್ದು ನಿಮಗೆ ಗೊತ್ತಿದೆ. 16 ನಾನು ಥೆಸಲೋನಿಕದಲ್ಲಿದ್ದಾಗ ನನಗೆ ಅಗತ್ಯವಾದವುಗಳನ್ನು ನೀವು ಹಲವಾರು ಸಲ ಕಳುಹಿಸಿಕೊಟ್ಟಿರಿ. 17 ನಿಜವಾಗಿಯೂ, ನಿಮ್ಮಿಂದ ಕೊಡುಗೆಗಳನ್ನು ಪಡೆದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಲ್ಲ. ಆದರೆ ಕೊಡುವುದರ ಮೂಲಕ ಮುಂದೆ ಹೇರಳವಾಗಿ ದೊರೆಯುವ ಆಶೀರ್ವಾದಗಳನ್ನು ನೀವು ಹೊಂದಿಕೊಳ್ಳಬೇಕೆಂಬುದೇ ನನ್ನ ಅಪೇಕ್ಷೆ. 18 ಎಪಫ್ರೊದೀತನು ನಿಮ್ಮ ಕೊಡುಗೆಯನ್ನು ತಂದು ಕೊಟ್ಟಿದ್ದರಿಂದ ಬೇಕಾದದ್ದೆಲ್ಲ ನನ್ನಲ್ಲಿ ಹೇರಳವಾಗಿದೆ. ನಿಮ್ಮ ಕೊಡುಗೆಯು ದೇವರಿಗೆ ಅರ್ಪಿಸಲ್ಪಟ್ಟ ಪರಿಮಳಭರಿತವಾದ ಯಜ್ಞವಾಗಿದೆ. ಇದು ದೇವರಿಗೆ ಮೆಚ್ಚಿಕೆಯಾದದ್ದೂ ಆಗಿದೆ. 19 ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ಅನುಗುಣವಾಗಿ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು. 20 ನಮ್ಮ ತಂದೆಯಾದ ದೇವರಿಗೆ ಸದಾಕಾಲ ಮಹಿಮೆಯಾಗಲಿ. ಆಮೆನ್.

21 ದೇವಜನರೆಲ್ಲರಿಗೂ ಕ್ರಿಸ್ತ ಯೇಸುವಿನಲ್ಲಿ ನನ್ನ ವಂದನೆ ತಿಳಿಸಿ. ನನ್ನೊಂದಿಗಿರುವ ಸಹೋದರರು ನಿಮಗೆ ವಂದನೆ ತಿಳಿಸಿದ್ದಾರೆ. 22 ಎಲ್ಲಾ ದೇವಮಕ್ಕಳು ನಿಮಗೆ ವಂದನೆ ತಿಳಿಸಿದ್ದಾರೆ. ಸೀಸರನ ಅರಮನೆಯಲ್ಲಿರುವ ವಿಶ್ವಾಸಿಗಳೂ ಸಹ ನಿಮಗೆ ವಂದನೆ ತಿಳಿಸಿದ್ದಾರೆ.

23 ಪ್ರಭು ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International