Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 39

ಯಾಜಕರ ವಿಶೇಷ ಬಟ್ಟೆಗಳು

39 ಯಾಜಕರು ಯೆಹೋವನ ಪವಿತ್ರಸ್ಥಳದಲ್ಲಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ವಿಶೇಷ ಬಟ್ಟೆಗಳನ್ನು ಮಾಡುವುದಕ್ಕೆ ಕೆಲಸಗಾರರು ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಆರೋನನಿಗೆ ವಿಶೇಷ ಬಟ್ಟೆಗಳನ್ನು ಮಾಡಿದರು.

ಏಫೋದು

ಅವರು ಏಫೋದನ್ನು ಚಿನ್ನದ ದಾರದಿಂದಲೂ ಶ್ರೇಷ್ಠ ನಾರುಬಟ್ಟೆಯಿಂದಲೂ ನೀಲಿ, ನೇರಳೆ, ಕೆಂಪುದಾರಗಳಿಂದಲೂ ಮಾಡಿದರು. (ಅವರು ಚಿನ್ನವನ್ನು ಸುತ್ತಿಗೆಯಿಂದ ಹೊಡೆದು ತೆಳುವಾದ ತಗಡುಗಳನ್ನು ಮಾಡಿದರು. ಬಳಿಕ ಅವರು ಅದನ್ನು ಕತ್ತರಿಸಿ ಉದ್ದವಾದ ದಾರಗಳನ್ನಾಗಿ ಮಾಡಿದರು. ಅವರು ಚಿನ್ನವನ್ನು ನೀಲಿ, ನೇರಳೆ, ಕೆಂಪುದಾರಗಳಿಗೂ ಮತ್ತು ಶ್ರೇಷ್ಠ ನಾರುಬಟ್ಟೆಗೂ ಹೆಣೆದರು. ಇದು ಬಹಳ ನಿಪುಣನಾದ ಕೆಲಸಗಾರನು ಮಾಡಿದ ಕೆಲಸವಾಗಿತ್ತು.) ಅವರು ಏಫೋದಿನ ಭುಜದ ಪಟ್ಟಿಗಳನ್ನು ಮಾಡಿದರು. ಅವರು ಈ ಭುಜದ ಪಟ್ಟಿಗಳನ್ನು ಏಫೋದಿನ ಎರಡು ಮೂಲೆಗಳಿಗೆ ಕಟ್ಟಿದರು. ಅವರು ನಡುಕಟ್ಟನ್ನು ಹೆಣೆದು ಏಫೋದಿಗೆ ಬಿಗಿಯಾಗಿ ಕಟ್ಟಿದರು. ಏಫೋದನ್ನು ಮಾಡಿದಂತೆಯೇ ಇದನ್ನು ಮಾಡಲಾಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಇದನ್ನು ಮಾಡುವುದಕ್ಕೆ ಚಿನ್ನದ ದಾರ, ಶ್ರೇಷ್ಠ ನಾರುಬಟ್ಟೆಯನ್ನು ಮತ್ತು ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು.

ಕೆಲಸಗಾರರು ಗೋಮೇಧಕ ರತ್ನಗಳನ್ನು ಏಫೋದಿನೊಳಗೆ ಚಿನ್ನದ ಕುಂದಣದಲ್ಲಿ ಇಟ್ಟರು. ಈ ರತ್ನಗಳಲ್ಲಿ ಇಸ್ರೇಲರ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದರು. ಬಳಿಕ ಅವರು ಈ ರತ್ನಗಳನ್ನು ಏಫೋದಿನ ಭುಜದ ಪಟ್ಟಿಯಲ್ಲಿ ಇಟ್ಟರು. ಇಸ್ರೇಲರನ್ನು ದೇವರ ಜ್ಞಾಪಕಕ್ಕೆ ತರುವಂತೆ ಈ ರತ್ನಗಳು ಇಡಲ್ಪಟ್ಟವು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಲಾಯಿತು.

ದೈವನಿರ್ಣಯದ ಪದಕ

ಬಳಿಕ ಅವರು ದೈವನಿರ್ಣಯ ಪದಕವನ್ನು ಮಾಡಿದರು. ಏಫೋದಿನಂತೆಯೇ ಇದು ಸಹ ಬುಟೇದಾರಿ ಕೆಲಸವಾಗಿತ್ತು. ಅದನ್ನು ಚಿನ್ನದ ದಾರಗಳಿಂದಲೂ ಶ್ರೇಷ್ಠವಾದ ನಾರುಬಟ್ಟೆಯಿಂದಲೂ ನೀಲಿ, ನೇರಳೆ, ಕೆಂಪುದಾರಗಳಿಂದಲೂ ಮಾಡಲಾಯಿತು. ದೈವನಿರ್ಣಯದ ಪದಕವನ್ನು ಅರ್ಧ ಮಡಚಿ ಚಚ್ಚೌಕವಾದ ಚೀಲವನ್ನಾಗಿ ಮಾಡಲಾಗಿತ್ತು. ಅದು ಒಂಭತ್ತು ಇಂಚು ಉದ್ದ ಮತ್ತು ಒಂಭತ್ತು ಇಂಚು ಅಗಲ ಇತ್ತು. 10 ಬಳಿಕ ಕೆಲಸಗಾರರು ಅಂದವಾದ ರತ್ನಗಳನ್ನು ನಾಲ್ಕು ಸಾಲುಗಳಾಗಿ ದೈವನಿರ್ಣಯದ ಪದಕದಲ್ಲಿ ಇಟ್ಟರು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ, ಸ್ಫಟಿಕಗಳು ಇದ್ದವು. 11 ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲಪಚ್ಚೆಗಳು ಇದ್ದವು. 12 ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಕ, ಧೂಮ್ರಮಣಿಗಳು ಇದ್ದವು. 13 ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ, ವೈಡೂರ್ಯಗಳು ಇದ್ದವು. ಈ ಎಲ್ಲಾ ರತ್ನಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಇಟ್ಟರು. 14 ಇಸ್ರೇಲನ ಗಂಡುಮಕ್ಕಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ರತ್ನದಂತೆ ದೈವನಿರ್ಣಯ ಪದಕದಲ್ಲಿ ಹನ್ನೆರಡು ರತ್ನಗಳಿದ್ದವು. ಪ್ರತಿ ರತ್ನದಲ್ಲಿಯೂ ಇಸ್ರೇಲನ ಗಂಡುಮಕ್ಕಳಲ್ಲಿ ಒಬ್ಬೊಬ್ಬನ ಹೆಸರು ಬರೆಯಲ್ಪಟ್ಟಿತ್ತು. ಮುದ್ರಾರತ್ನವನ್ನು ಕೆತ್ತುವಂತೆ ಕಲ್ಲಿನಲ್ಲಿ ಹೆಸರುಗಳನ್ನು ಕೆತ್ತಿದರು.

15 ಅವರು ದೈವನಿರ್ಣಯಪದಕಕ್ಕೆ ಅಪ್ಪಟ ಬಂಗಾರದ ಸರಪಣಿಗಳನ್ನು ಹುರಿಗಳಂತಿರುವ ಹಗ್ಗದಂತೆ ಮಾಡಿದರು. 16 ಕೆಲಸಗಾರರು ಎರಡು ಚಿನ್ನದ ಕುಂದಣಗಳನ್ನೂ ಎರಡು ಚಿನ್ನದ ಉಂಗುರಗಳನ್ನೂ ಮಾಡಿದರು. ಅವರು ಎರಡು ಚಿನ್ನದ ಉಂಗುರಗಳನ್ನು ದೈವನಿರ್ಣಯಪದಕದ ಎರಡು ಕೊನೆಗಳಲ್ಲಿ ಇರಿಸಿದರು. 17 ಬಳಿಕ ಅವರು ದೈವನಿರ್ಣಯಪದಕದ ಕೊನೆಗಳಲ್ಲಿರುವ ಉಂಗುರಗಳಿಗೆ ಎರಡು ಚಿನ್ನದ ಸರಪಣಿಗಳನ್ನು ಸಿಕ್ಕಿಸಿದರು. 18 ಅವರು ಚಿನ್ನದ ಸರಪಣಿಗಳ ಇನ್ನೆರಡು ಕೊನೆಗಳನ್ನು ಎರಡು ಕುಂದಣಗಳಿಗೆ ಕಟ್ಟಿದರು. ಇದು ಅವುಗಳನ್ನು ಏಫೋದಿನ ಎರಡು ಭುಜದ ಪಟ್ಟಿಗಳಿಗೆ ಮುಂಭಾಗದಲ್ಲಿ ಬಿಗಿಯಾಗಿ ಹಿಡಿದುಕೊಂಡಿತು. 19 ಬಳಿಕ ಅವರು ಇನ್ನೆರಡು ಚಿನ್ನದ ಉಂಗುರಗಳನ್ನು ಮಾಡಿ, ದೈವನಿರ್ಣಯ ಪದಕದ ಇನ್ನೆರಡು ಕೊನೆಗಳಿಗೆ ಸಿಕ್ಕಿಸಿದರು. ಅವರು ಉಂಗುರಗಳನ್ನು ಏಫೋದಿನ ಹತ್ತಿರವಿರುವ ದೈವನಿರ್ಣಯ ಪದಕದ ಒಳಗಿನ ಅಂಚಿನಲ್ಲಿ ಇರಿಸಿದರು. 20 ಅವರು ಎರಡು ಚಿನ್ನದ ಉಂಗುರಗಳನ್ನು ಏಫೋದಿನ ಮುಂಭಾಗದಲ್ಲಿ ಭುಜದ ಪಟ್ಟಿಗಳ ಕೆಳಭಾಗದಲ್ಲಿ ಇರಿಸಿದರು. ಈ ಉಂಗುರಗಳು ನಡುಕಟ್ಟಿನ ಮೇಲ್ಗಡೆಯಲ್ಲಿರುವ ಕಟ್ಟಿನ ಹತ್ತಿರ ಇದ್ದವು. 21 ಬಳಿಕ ಅವರು ನೀಲಿದಾರದಿಂದ ದೈವನಿರ್ಣಯ ಪದಕದ ಉಂಗುರಗಳನ್ನು ಏಫೋದಿನ ಉಂಗುರಗಳಿಗೆ ಕಟ್ಟಿದರು. ಈ ರೀತಿಯಾಗಿ ದೈವನಿರ್ಣಯ ಪದಕವು ನಡುಕಟ್ಟಿಗೆ ಹತ್ತಿರವಾಗಿದ್ದು ಏಫೋದಿಗೆ ಬಿಗಿಯಾಗಿ ಅಂಟಿಕೊಂಡಿತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಅವರು ಎಲ್ಲವನ್ನೂ ಮಾಡಿದರು.

ಯಾಜಕರಿಗೆ ಇತರ ಬಟ್ಟೆಗಳು

22 ಬಳಿಕ ಅವರು ಏಫೋದಿನೊಂದಿಗೆ ತೊಟ್ಟುಕೊಳ್ಳಬೇಕಾದ ನಿಲುವಂಗಿಯನ್ನು ಮಾಡಿದರು. ಅದು ನಿಪುಣನಾದ ಕೆಲಸಗಾರನಿಂದ ಹೆಣೆಯಲ್ಪಟ್ಟಿತ್ತು. ಅವರು ಅದನ್ನು ನೀಲಿ ಬಟ್ಟೆಯಿಂದ ಮಾಡಿದರು. 23 ಅವರು ನಿಲುವಂಗಿಯ ಮಧ್ಯದಲ್ಲಿ ಒಂದು ಸಂದನ್ನು ಮಾಡಿ ಆ ಸಂದಿನ ಅಂಚಿನ ಸುತ್ತಲೂ ಬಟ್ಟೆಯನ್ನಿಟ್ಟು ಹೊಲಿದರು. ಈ ಬಟ್ಟೆಯು ಸಂದು ಹರಿದು ಹೋಗದಂತೆ ಮಾಡಿತು.

24 ತರುವಾಯ ಅವರು ಬಟ್ಟೆಗೆ ದಾಳಿಂಬೆ ಹಣ್ಣಿನ ಚೆಂಡುಗಳನ್ನು ಮಾಡಲು ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು. ಅವರು ಈ ದಾಳಿಂಬೆ ಹಣ್ಣಿನಂತಿರುವ ಚೆಂಡುಗಳನ್ನು ನಿಲುವಂಗಿಯ ಕೆಳಅಂಚಿನಲ್ಲಿ ತೂಗುಹಾಕಿದರು. 25 ಬಳಿಕ ಅವರು ಅಪ್ಪಟ ಬಂಗಾರದ ಗೆಜ್ಜೆಗಳನ್ನು ಮಾಡಿದರು. ಅವರು ಈ ಗೆಜ್ಜೆಗಳನ್ನು ನಿಲುವಂಗಿಯ ಕೆಳಅಂಚಿನ ಸುತ್ತಲೂ ದಾಳಿಂಬೆ ಹಣ್ಣುಗಳ ನಡುವೆ ತೂಗು ಹಾಕಿದರು. 26 ಹೀಗೆ ನಿಲುವಂಗಿಯ ಕೆಳಅಂಚಿನ ಸುತ್ತಲೆಲ್ಲ ದಾಳಿಂಬೆ ಹಣ್ಣುಗಳೂ ಗೆಜ್ಜೆಗಳೂ ಇದ್ದವು. ಪ್ರತಿ ದಾಳಿಂಬೆ ಹಣ್ಣಿನ ನಡುವೆ ಒಂದೊಂದು ಗೆಜ್ಜೆ ಇತ್ತು. ಯಾಜಕರು ಯೆಹೋವನ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ನಿಲುವಂಗಿ ಇದಾಗಿತ್ತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಲಾಗಿತ್ತು.

27 ನಿಪುಣರಾದ ಕೆಲಸಗಾರರು ಆರೋನನಿಗೂ ಅವನ ಮಕ್ಕಳಿಗೂ ಅಂಗಿಗಳನ್ನು ಹೊಲಿದರು. ಈ ಅಂಗಿಗಳು ಶ್ರೇಷ್ಠವಾದ ನಾರುಬಟ್ಟೆಯಿಂದ ಮಾಡಲ್ಪಟ್ಟವು. 28 ಶ್ರೇಷ್ಠವಾದ ನಾರುಬಟ್ಟೆಯಿಂದ ಕೆಲಸಗಾರರು ಒಂದು ಮುಂಡಾಸನ್ನು ಮಾಡಿದರು. ಅವರು ತಲೆಪಟ್ಟಿಗಳನ್ನು ಮತ್ತು ಒಳಅಂಗಿಗಳನ್ನು ಮಾಡುವುದಕ್ಕೆ ಶ್ರೇಷ್ಠವಾದ ನಾರುಬಟ್ಟೆಯನ್ನು ಉಪಯೋಗಿಸಿದರು. 29 ಬಳಿಕ ಅವರು ಶ್ರೇಷ್ಠವಾದ ನಾರುಬಟ್ಟೆಯಿಂದಲೂ ಮತ್ತು ನೀಲಿ, ನೇರಳೆ, ಕೆಂಪುದಾರಗಳಿಂದಲೂ ನಡುಕಟ್ಟನ್ನು ಮಾಡಿದರು. ಈ ಬಟ್ಟೆಗೆ ಕಸೂತಿ ಹಾಕಲಾಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಈ ವಸ್ತುಗಳನ್ನು ಮಾಡಲಾಯಿತು.

30 ತರುವಾಯ ಅವರು ಪವಿತ್ರಕಿರೀಟವನ್ನು ಅಪ್ಪಟ ಬಂಗಾರದಿಂದ ಮಾಡಿದರು. ಅವರು ಬಂಗಾರದಲ್ಲಿ ಅಕ್ಷರಗಳನ್ನು ಕೆತ್ತಿದರು. ಅವರು, “ಯೆಹೋವನಿಗೆ ಪವಿತ್ರವಾದದ್ದು” ಎಂಬ ಮಾತುಗಳನ್ನು ಬರೆದರು. 31 ಅವರು ಚಿನ್ನದ ಪಟ್ಟಿಯನ್ನು ದಾರಕ್ಕೆ ಬಿಗಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಈ ನೀಲಿ ದಾರವನ್ನು ಮುಂಡಾಸಕ್ಕೆ ಕಟ್ಟಿದರು.

ಮೋಶೆಯು ಪವಿತ್ರಗುಡಾರವನ್ನು ಪರೀಕ್ಷಿಸಿದ್ದು

32 ಹೀಗೆ ಪವಿತ್ರಗುಡಾರವಾದ ದೇವದರ್ಶನ ಗುಡಾರದ ಕೆಲಸವೆಲ್ಲವೂ ಮುಗಿಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರೇಲರು ಪ್ರತಿಯೊಂದನ್ನೂ ಮಾಡಿದರು. 33 ಬಳಿಕ ಅವರು ಪವಿತ್ರಗುಡಾರವನ್ನು ಮೋಶೆಗೆ ತೋರಿಸಿದರು. ಅವರು ಗುಡಾರವನ್ನೂ ಅದರಲ್ಲಿರುವ ವಸ್ತುಗಳನ್ನೆಲ್ಲಾ ಅವನಿಗೆ ತೋರಿಸಿದರು. ಬಳೆಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೇಕಲ್ಲುಗಳನ್ನೆಲ್ಲಾ ಅವನಿಗೆ ತೋರಿಸಿದರು. 34 ಅವರು ಕೆಂಪುಬಣ್ಣದ ಕುರಿತೊಗಲಿನಿಂದ ಮಾಡಿದ ಗುಡಾರದ ಮೇಲ್ಹೊದಿಕೆಯನ್ನು ಅವನಿಗೆ ತೋರಿಸಿದರು; ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನೂ ಅವನಿಗೆ ತೋರಿಸಿದರು. ಮಹಾಪವಿತ್ರಸ್ಥಳವನ್ನು ಮುಚ್ಚುವ ಪರದೆಯನ್ನೂ ಅವನಿಗೆ ತೋರಿಸಿದರು.

35 ಅವರು ಮೋಶೆಗೆ ಒಡಂಬಡಿಕೆಯ ಪೆಟ್ಟಿಗೆಯನ್ನೂ ಆ ಪೆಟ್ಟಿಗೆಯನ್ನು ಹೊರುವುದಕ್ಕಾಗಿ ಉಪಯೋಗಿಸುವ ಕೋಲುಗಳನ್ನೂ ಪೆಟ್ಟಿಗೆಯ ಕೃಪಾಸನವನ್ನೂ ಮೋಶೆಗೆ ತೋರಿಸಿದರು. 36 ಅವರು ಮೇಜನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ನೈವೇದ್ಯದ ರೊಟ್ಟಿಯನ್ನೂ ಅವನಿಗೆ ತೋರಿಸಿದರು. 37 ಅವರು ಅಪ್ಪಟ ಬಂಗಾರದ ದೀಪಸ್ತಂಭವನ್ನೂ ಅದರಲ್ಲಿರುವ ಹಣತೆಗಳನ್ನೂ ಎಣ್ಣೆಯನ್ನೂ ಹಣತೆಗಳೊಂದಿಗೆ ಉಪಯೋಗಿಸುವ ಇತರ ವಸ್ತುಗಳನ್ನೂ ತೋರಿಸಿದರು. 38 ಅವರು ಚಿನ್ನದ ವೇದಿಕೆಯನ್ನೂ ಅಭಿಷೇಕತೈಲವನ್ನೂ ಪರಿಮಳಧೂಪವನ್ನೂ ಗುಡಾರದ ಪ್ರವೇಶದಲ್ಲಿರುವ ಪರದೆಯನ್ನೂ ಮೋಶೆಗೆ ತೋರಿಸಿದರು. 39 ಅವರು ಅವನಿಗೆ ತಾಮ್ರದ ವೇದಿಕೆಯನ್ನೂ ತಾಮ್ರದ ಜಾಳಿಗೆಯನ್ನೂ ವೇದಿಕೆಯನ್ನು ಹೊರುವುದಕ್ಕೆ ಉಪಯೋಗಿಸುವ ಕೋಲುಗಳನ್ನೂ ವೇದಿಕೆಯ ಎಲ್ಲಾ ಉಪರಕಣಗಳನ್ನೂ ಗಂಗಾಳವನ್ನೂ ಮತ್ತು ಅದರ ಕೆಳಗಿರುವ ಗದ್ದಿಗೇಕಲ್ಲನ್ನೂ ಮೋಶೆಗೆ ತೋರಿಸಿದರು.

40 ಅವರು ಅಂಗಳದ ಸುತ್ತಲಿರುವ ಪರದೆಗಳ ಗೋಡೆಯನ್ನೂ ಅದರ ಕಂಬಗಳನ್ನೂ ಗದ್ದಿಗೇಕಲ್ಲುಗಳನ್ನೂ ಅಂಗಳದ ಪ್ರವೇಶವನ್ನು ಮುಚ್ಚುವ ಪರದೆಯನ್ನೂ ಹಗ್ಗಗಳನ್ನೂ ಗುಡಾರದ ಗೂಟಗಳನ್ನೂ ದೇವದರ್ಶನದ ಪವಿತ್ರಗುಡಾರದ ಎಲ್ಲಾ ವಸ್ತುಗಳನ್ನೂ ಮೋಶೆಗೆ ತೋರಿಸಿದರು.

41 ತರುವಾಯ ಮೋಶೆಗೆ ಪವಿತ್ರಸ್ಥಳದಲ್ಲಿ ಸೇವೆ ಮಾಡುವುದಕ್ಕೆ ಯಾಜಕರಿಗಾಗಿ ಮಾಡಿದ ಬಟ್ಟೆಗಳನ್ನು ಅಂದರೆ ಯಾಜಕನಾದ ಆರೋನನಿಗೆ ಮತ್ತು ಅವನ ಮಕ್ಕಳಿಗಾಗಿ ಮಾಡಿದ ವಿಶೇಷ ಬಟ್ಟೆಗಳನ್ನು ಅವರು ತೋರಿಸಿದರು. ಅವರು ಯಾಜಕರಾಗಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ಬಟ್ಟೆಗಳು ಇವುಗಳೇ.

42 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರೇಲರು ಇವುಗಳನ್ನೆಲ್ಲಾ ಮಾಡಿದರು. 43 ಮೋಶೆಯು ಎಲ್ಲಾ ಕೆಲಸವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಎಲ್ಲವೂ ಮಾಡಲ್ಪಟ್ಟಿದ್ದರಿಂದ ಮೋಶೆ ಅವರನ್ನು ಆಶೀರ್ವದಿಸಿದನು.

ಯೋಹಾನ 18

ಯೇಸುವಿನ ಬಂಧನ

(ಮತ್ತಾಯ 26:47-56; ಮಾರ್ಕ 14:43-50; ಲೂಕ 22:47-53)

18 ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರೊಂದಿಗೆ ಹೊರಟನು. ಅವರು ಕಿದ್ರೋನ್ ಕಣಿವೆಯನ್ನು ದಾಟಿಹೋದರು. ಅದರ ಮತ್ತೊಂದು ಕಡೆಯಲ್ಲಿ ಆಲಿವ್ ಮರಗಳ ತೋಟವಿತ್ತು. ಯೇಸು ಮತ್ತು ಆತನ ಶಿಷ್ಯರು ಅಲ್ಲಿಗೆ ಹೋದರು.

ಯೇಸುವಿಗೆ ದ್ರೋಹ ಬಗೆದ ಯೂದನಿಗೂ ಈ ಸ್ಥಳವು ತಿಳಿದಿತ್ತು. ಏಕೆಂದರೆ ಯೇಸು ತನ್ನ ಶಿಷ್ಯರೊಂದಿಗೆ ಆಗಾಗ್ಗೆ ಅಲ್ಲಿಗೆ ಬರುತ್ತಿದ್ದನು. ಯೂದನು ಸೈನಿಕರ ಗುಂಪೊಂದನ್ನೂ ಮಹಾಯಾಜಕರ ಮತ್ತು ಫರಿಸಾಯರ ಕಾವಲುಗಾರರಲ್ಲಿ ಕೆಲವರನ್ನೂ ಕರೆದುಕೊಂಡು ತೋಟಕ್ಕೆ ಬಂದನು. ಅವರು ದೀವಟಿಗೆ, ಪಂಜು ಮತ್ತು ಆಯುಧಗಳಿಂದ ಸುಸಜ್ಜಿತರಾಗಿದ್ದರು.

ತನಗೆ ಸಂಭವಿಸಲಿದ್ದ ಪ್ರತಿಯೊಂದೂ ಯೇಸುವಿಗೆ ತಿಳಿದಿತ್ತು. ಆತನು ಹೊರಗೆ ಹೋಗಿ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು.

ಅವರು, “ನಜರೇತಿನ ಯೇಸುವನ್ನು” ಎಂದು ಉತ್ತರಕೊಟ್ಟರು.

ಆತನು, “ನಾನೇ ಯೇಸು” ಎಂದನು. (ಯೇಸುವಿಗೆ ದ್ರೋಹ ಬಗೆದ ಯೂದನು ಅವರೊಂದಿಗೆ ಅಲ್ಲೇ ನಿಂತಿದ್ದನು.) ಆತನು, “ನಾನೇ ಯೇಸು” ಎಂದಾಗ ಅವರು ಹಿಂದೆ ಸರಿದು ನೆಲದ ಮೇಲೆ ಬಿದ್ದರು.

ಯೇಸು ಅವರಿಗೆ ಮತ್ತೆ “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು.

ಅವರು, “ನಜರೇತಿನ ಯೇಸುವನ್ನು” ಎಂದು ಹೇಳಿದರು.

ಆತನು, “ನಾನೇ ಯೇಸು ಎಂದು ನಿಮಗೆ ಹೇಳಿದೆನಲ್ಲಾ. ನೀವು ನನ್ನನ್ನು ಹುಡುಕುತ್ತಿದ್ದರೆ, ಉಳಿದ ಇವರನ್ನು ಹೋಗಬಿಡಿರಿ” ಎಂದು ಹೇಳಿದನು. “ನೀನು ನನಗೆ ಕೊಟ್ಟ ಜನರಲ್ಲಿ ಯಾರನ್ನೂ ನಾನು ಕಳೆದುಕೊಳ್ಳಲಿಲ್ಲ” ಎಂದು ಯೇಸು ಮೊದಲು ಹೇಳಿದ್ದ ಮಾತು ಹೀಗೆ ನಿಜವಾಯಿತು.

10 ಸೀಮೋನ್ ಪೇತ್ರನ ಬಳಿ ಒಂದು ಖಡ್ಗವಿತ್ತು. ಅವನು ಆ ಖಡ್ಗವನ್ನು ಹೊರತೆಗೆದು ಪ್ರಧಾನ ಯಾಜಕನ ಸೇವಕನೊಬ್ಬನಿಗೆ ಹೊಡೆದು, ಅವನ ಬಲಗಿವಿಯನ್ನು ಕತ್ತರಿಸಿದನು. (ಆ ಸೇವಕನ ಹೆಸರು ಮಾಲ್ಕ.) 11 ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು! ತಂದೆಯು ನನಗೆ ಕೊಟ್ಟಿರುವ ಸಂಕಟದ ಪಾತ್ರೆಯನ್ನು ನಾನು ಸ್ವೀಕರಿಸಿಕೊಳ್ಳಬೇಕು” ಎಂದು ಹೇಳಿದನು.

ಅನ್ನನ ಮುಂದೆ ಯೇಸು

(ಮತ್ತಾಯ 26:57-58; ಮಾರ್ಕ 14:53-54; ಲೂಕ 22:54)

12 ಬಳಿಕ ಆ ಸೈನಿಕರು, ಅವರ ಸೇನಾಧಿಪತಿ ಹಾಗೂ ಯೆಹೂದ್ಯ ಕಾವಲುಗಾರರು ಯೇಸುವನ್ನು ಹಿಡಿದು ಕಟ್ಟಿ, ಅನ್ನನ ಬಳಿಗೆ ತಂದರು. 13 ಅನ್ನನು ಕಾಯಫನ ಮಾವ. ಆ ವರ್ಷ ಕಾಯಫನು ಪ್ರಧಾನಯಾಜಕನಾಗಿದ್ದನು. 14 ಎಲ್ಲಾ ಜನರಿಗಾಗಿ ಒಬ್ಬನು ಸಾಯುವುದೇ ಮೇಲು ಎಂಬ ಸಲಹೆಯನ್ನು ಕೊಟ್ಟಿದ್ದವನು ಇವನೇ.

ಪೇತ್ರನ ವಿಶ್ವಾಸದ್ರೋಹ

(ಮತ್ತಾಯ 26:69-70; ಮಾರ್ಕ 14:66-68; ಲೂಕ 22:55-57)

15 ಸೀಮೋನ್ ಪೇತ್ರ ಮತ್ತು ಯೇಸುವಿನ ಶಿಷ್ಯರಲ್ಲಿ ಮತ್ತೊಬ್ಬನು ಯೇಸುವಿನೊಂದಿಗೆ ಹೋದರು. ಆ ಮತ್ತೊಬ್ಬ ಶಿಷ್ಯನಿಗೆ ಪ್ರಧಾನಯಾಜಕನ ಪರಿಚಯವಿತ್ತು. ಆದ್ದರಿಂದ ಅವನು ಪ್ರಧಾನ ಯಾಜಕನ ಮನೆಯ ಅಂಗಳದೊಳಗೆ ಹೋದನು. 16 ಆದರೆ ಪೇತ್ರನು ಹೊರಗೆ ಬಾಗಿಲಿನ ಸಮೀಪದಲ್ಲಿ ಕಾದುಕೊಂಡಿದ್ದನು. ಪ್ರಧಾನಯಾಜಕನ ಪರಿಚಯವಿದ್ದ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಯೊಂದಿಗೆ ಮಾತಾಡಿ ಪೇತ್ರನನ್ನು ಒಳಗೆ ಕರೆದುಕೊಂಡು ಹೋದನು. 17 ದ್ವಾರಪಾಲಕಿಯು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದಳು.

ಪೇತ್ರನು, “ಇಲ್ಲ, ನಾನಲ್ಲ!” ಎಂದು ಉತ್ತರಕೊಟ್ಟನು.

18 ಆಗ ಚಳಿಯಿದ್ದುದರಿಂದ ಕಾವಲುಗಾರರು ಬೆಂಕಿ ಹಾಕಿ ಅದರ ಸುತ್ತಲೂ ನಿಂತುಕೊಂಡು ತಮ್ಮನ್ನು ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು. ಪೇತ್ರನು ಅವರೊಂದಿಗೆ ನಿಂತುಕೊಂಡಿದ್ದನು.

ಪ್ರಧಾನಯಾಜಕನು ಮಾಡಿದ ವಿಚಾರಣೆ

(ಮತ್ತಾಯ 26:59-66; ಮಾರ್ಕ 14:55-64; ಲೂಕ 22:66-71)

19 ಪ್ರಧಾನಯಾಜಕನು ಯೇಸುವಿಗೆ ಆತನ ಶಿಷ್ಯರ ಬಗ್ಗೆಯೂ ಆತನು ಉಪದೇಶಿಸಿದ ಸಂಗತಿಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದನು. 20 ಅದಕ್ಕೆ ಯೇಸು, “ನಾನು ಬಹಿರಂಗವಾಗಿ ಜನರೊಂದಿಗೆ ಮಾತಾಡಿದ್ದೇನೆ; ಯಾವಾಗಲೂ ಸಭಾಮಂದಿರಗಳಲ್ಲಿ ಮತ್ತು ದೇವಾಲಯದಲ್ಲಿ ಬೋಧಿಸಿದ್ದೇನೆ. ಯೆಹೂದ್ಯರೆಲ್ಲರೂ ಅಲ್ಲಿಗೆ ಒಟ್ಟಾಗಿ ಸೇರಿಬರುತ್ತಿದ್ದರು. ನಾನು ಯಾವುದನ್ನೂ ರಹಸ್ಯವಾಗಿ ಎಂದೂ ಹೇಳಿಲ್ಲ. 21 ಹೀಗಿರಲು, ನೀನು ನನ್ನನ್ನು ಪ್ರಶ್ನಿಸುವುದೇಕೆ? ನನ್ನ ಉಪದೇಶವನ್ನು ಕೇಳಿದ ಜನರನ್ನು ಕೇಳು. ನಾನು ಹೇಳಿದ್ದನ್ನು ಅವರು ಬಲ್ಲರು” ಎಂದು ಉತ್ತರಕೊಟ್ಟನು.

22 ಯೇಸು ಹೀಗೆ ಹೇಳಿದ ಕೂಡಲೇ, ಅಲ್ಲಿ ನಿಂತಿದ್ದ ಕಾವಲುಗಾರರಲ್ಲಿ ಒಬ್ಬನು ಯೇಸುವಿಗೆ ಹೊಡೆದು, “ನೀನು ಪ್ರಧಾನಯಾಜಕನೊಂದಿಗೆ ಆ ರೀತಿ ಮಾತಾಡಕೂಡದು” ಎಂದನು.

23 ಯೇಸು, “ನಾನು ತಪ್ಪಾಗಿ ಮಾತಾಡಿದ್ದರೆ, ನಾನು ಹೇಳಿದ್ದು ತಪ್ಪೆಂದು ಎಲ್ಲರಿಗೂ ತೋರಿಸಿಕೊಡು. ಆದರೆ ನಾನು ಹೇಳಿದ್ದು ಸರಿಯಾಗಿದ್ದರೆ ನೀನು ನನ್ನನ್ನು ಹೊಡೆಯುವುದೇಕೆ?” ಎಂದು ಉತ್ತರಕೊಟ್ಟನು.

24 ಆಗ ಅನ್ನನು ಯೇಸುವನ್ನು ಮತ್ತೆ ಕಟ್ಟಿಸಿ, ಪ್ರಧಾನಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.

ಮತ್ತೊಮ್ಮೆ ಪೇತ್ರನ ವಿಶ್ವಾಸದ್ರೋಹ

(ಮತ್ತಾಯ 26:71-75; ಮಾರ್ಕ 14:69-72; ಲೂಕ 22:58-62)

25 ಸೀಮೋನ್ ಪೇತ್ರನು ತನ್ನನ್ನು ಬೆಚ್ಚಗೆ ಮಾಡಿಕೊಳ್ಳುತ್ತಾ ಬೆಂಕಿಯ ಸಮೀಪದಲ್ಲಿ ನಿಂತುಕೊಂಡಿದ್ದನು. ಅಲ್ಲಿದ್ದವರು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದರು.

ಆದರೆ ಪೇತ್ರನು, “ಇಲ್ಲ, ನಾನಲ್ಲ!” ಎಂದು ಹೇಳಿದನು.

26 ಪ್ರಧಾನಯಾಜಕನ ಸೇವಕರಲ್ಲಿ ಒಬ್ಬನು ಪೇತ್ರನಿಂದ ಕಿವಿ ಕತ್ತರಿಸಿಹಾಕಲ್ಪಟ್ಟ ಸೇವಕನ ಸಂಬಂಧಿಕನಾಗಿದ್ದನು. ಆ ಸೇವಕನು, “ನೀನು ತೋಟದಲ್ಲಿ ಅವನೊಂದಿಗೆ (ಯೇಸುವಿನೊಂದಿಗೆ) ಇದ್ದುದನ್ನು ನಾನು ನೋಡಿದಂತಿದೆ!” ಎಂದು ಹೇಳಿದನು.

27 ಆದರೆ ಪೇತ್ರನು ಮತ್ತೆ, “ಇಲ್ಲ, ನಾನು ಆತನೊಂದಿಗೆ ಇರಲಿಲ್ಲ!” ಎಂದನು. ಆ ಕೂಡಲೇ ಕೋಳಿ ಕೂಗಿತು.

ಪಿಲಾತನ ಮುಂದೆ ಯೇಸು

(ಮತ್ತಾಯ 27:1-2,11-31; ಮಾರ್ಕ 15:1-20; ಲೂಕ 23:1-25)

28 ಬಳಿಕ ಯೆಹೂದ್ಯರು ಯೇಸುವನ್ನು ಕಾಯಫನ ಮನೆಯಿಂದ ರೋಮ್ ರಾಜ್ಯಪಾಲನ ಭವನಕ್ಕೆ ಕರೆದುಕೊಂಡು ಬಂದರು. ಆಗ ಮುಂಜಾನೆಯಾಗಿತ್ತು. ಯೆಹೂದ್ಯರು ಭವನದೊಳಗೆ ಹೋಗಲಿಲ್ಲ. ಅವರು ಪಸ್ಕಹಬ್ಬದ ಊಟಮಾಡ ಬೇಕೆಂದಿದ್ದ ಕಾರಣ ತಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಲು ಇಷ್ಟಪಡಲಿಲ್ಲ. 29 ಆದ್ದರಿಂದ ಪಿಲಾತನು ಆ ಯೆಹೂದ್ಯರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ನೀವು ಹೊರಿಸುತ್ತಿರುವ ಅಪರಾಧಗಳೇನು?” ಎಂದು ಕೇಳಿದನು.

30 ಯೆಹೂದ್ಯರು, “ಇವನು ಒಬ್ಬ ಕೆಟ್ಟ ಮನುಷ್ಯ. ಆದಕಾರಣ, ನಾವು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆವು” ಎಂದು ಉತ್ತರಕೊಟ್ಟರು.

31 ಪಿಲಾತನು ಯೆಹೂದ್ಯರಿಗೆ, “ಯೆಹೂದ್ಯರಾದ ನೀವೇ ಇವನನ್ನು ಕರೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ತೀರ್ಪುಮಾಡಿ” ಎಂದು ಹೇಳಿದನು.

ಯೆಹೂದ್ಯರು, “ಆದರೆ ಒಬ್ಬನಿಗೆ ಮರಣದಂಡನೆ ವಿಧಿಸಲು ನಿನ್ನ ಕಾನೂನು ನಮಗೆ ಅವಕಾಶ ಕೊಡುವುದಿಲ್ಲ” ಎಂದು ಉತ್ತರಕೊಟ್ಟರು. 32 (ತಾನು ಸಾಯುವ ರೀತಿಯ ಬಗ್ಗೆ ಯೇಸು ಹೇಳಿದ್ದ ಮಾತು ಹೀಗೆ ನಿಜವಾಯಿತು.)

33 ಬಳಿಕ ಪಿಲಾತನು, ಭವನದೊಳಗೆ ಹಿಂತಿರುಗಿ ಹೋಗಿ, ಯೇಸುವನ್ನು ಕರೆದು, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು.

34 ಯೇಸು, “ಇದು ನಿನ್ನ ಪ್ರಶ್ನೆಯೋ? ಅಥವಾ ನನ್ನ ಬಗ್ಗೆ ಬೇರೆ ಜನರು ನಿನಗೆ ತಿಳಿಸಿದರೋ?” ಎಂದನು.

35 ಪಿಲಾತನು, “ನಾನು ಯೆಹೂದ್ಯನಲ್ಲ! ನಿನ್ನ ಸ್ವಂತ ಜನರು ಮತ್ತು ಅವರ ಮಹಾಯಾಜಕರು ನಿನ್ನನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಿದ್ದಾರೆ. ನೀನು ಏನು ಮಾಡಿದೆ?” ಎಂದು ಕೇಳಿದನು.

36 ಯೇಸು, “ನನ್ನ ರಾಜ್ಯವು ಈ ಲೋಕಕ್ಕೆ ಸೇರಿದ್ದಲ್ಲ. ಅದು ಈ ಲೋಕಕ್ಕೆ ಸೇರಿದ್ದಾಗಿದ್ದರೆ, ಯೆಹೂದ್ಯರ ಕೈಗೆ ನಾನು ಸಿಗದಂತೆ ನನ್ನ ಸೇವಕರು ಹೋರಾಡುತ್ತಿದ್ದರು. ಆದರೆ ನನ್ನ ರಾಜ್ಯವು ಮತ್ತೊಂದು ಸ್ಥಳದ್ದು” ಎಂದನು.

37 ಪಿಲಾತನು, “ಹಾಗಾದರೆ ನೀನು ರಾಜ!” ಎಂದನು.

ಯೇಸು, “ನೀನೇ ನನ್ನನ್ನು ರಾಜನೆಂದು ಹೇಳುತ್ತಿರುವೆ. ಅದು ಸತ್ಯ. ನಾನು ಜನರಿಗೆ ಸತ್ಯದ ಬಗ್ಗೆ ಹೇಳುವುದಕ್ಕಾಗಿಯೇ ಹುಟ್ಟಿದೆನು. ಆದಕಾರಣವೇ ನಾನು ಈ ಲೋಕಕ್ಕೆ ಬಂದೆನು. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನೂ ನನಗೆ ಕಿವಿಗೊಡುತ್ತಾನೆ” ಎಂದು ಉತ್ತರಕೊಟ್ಟನು.

38 ಪಿಲಾತನು, “ಸತ್ಯವೆಂದರೇನು?” ಎಂದು ಕೇಳಿ, ಮತ್ತೆ ಯೆಹೂದ್ಯರ ಬಳಿಗೆ ಹೊರಕ್ಕೆ ಬಂದನು. ಅವನು ಯೆಹೂದ್ಯರಿಗೆ, “ಈ ಮನುಷ್ಯನ ಮೇಲೆ ಅಪವಾದ ಹೊರಿಸಲು ನನಗೆ ಏನೂ ಕಾಣುತ್ತಿಲ್ಲ. 39 ಆದರೆ ಪಸ್ಕಹಬ್ಬದ ಕಾಲದಲ್ಲಿ ನಾನು ನಿಮಗೋಸ್ಕರ ಕೈದಿಗಳಲ್ಲಿ ಒಬ್ಬನನ್ನು ಬಿಡುಗಡೆ ಮಾಡುವುದು ನಿಮ್ಮ ಪದ್ಧತಿಯಾಗಿದೆ. ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ನೀವು ಬಯಸುತ್ತೀರಾ?” ಎಂದು ಕೇಳಿದನು.

40 ಯೆಹೂದ್ಯರು, “ಇಲ್ಲ, ಅವನನ್ನಲ್ಲ! ಬರಬ್ಬನಿಗೆ ಬಿಡುಗಡೆಯಾಗಲಿ!” ಎಂದು ಕೂಗಿದರು. (ಬರಬ್ಬನು ಒಬ್ಬ ದರೋಡೆಕೋರ.)

ಜ್ಞಾನೋಕ್ತಿಗಳು 15

15 ಸಮಾಧಾನದ ಉತ್ತರ ಕೋಪವನ್ನು ಕಡಿಮೆ ಮಾಡುವುದು; ಒರಟು ಉತ್ತರ ಕೋಪವನ್ನು ಹೆಚ್ಚಿಸುವುದು.

ಜ್ಞಾನಿಯ ಮಾತನ್ನು ಜನರು ಕೇಳಬಯಸುತ್ತಾರೆ. ಮೂಢನು ಕೇವಲ ಮೂರ್ಖತನವನ್ನೇ ಮಾತಾಡುವನು.

ಯೆಹೋವನ ದೃಷ್ಟಿಗೆ ಪ್ರತಿಯೊಂದೂ ಕಾಣುತ್ತದೆ. ಆತನು ಕೆಡುಕರನ್ನೂ ಒಳ್ಳೆಯವರನ್ನೂ ಗಮನಿಸುತ್ತಿದ್ದಾನೆ.

ಹಿತನುಡಿಗಳು ಜೀವವುಳ್ಳ ಮರದಂತಿವೆ. ಸುಳ್ಳು ಮಾತುಗಳು ಮನುಷ್ಯನ ಆತ್ಮವನ್ನು ಜಜ್ಜಿಹಾಕುತ್ತವೆ.

ಮೂರ್ಖನು ತಂದೆಯ ಬುದ್ಧಿಮಾತನ್ನು ತಿರಸ್ಕರಿಸುವನು. ಬುದ್ಧಿಮಾತನ್ನು ಸ್ವೀಕರಿಸಿಕೊಳ್ಳುವವನು ಜ್ಞಾನಿಯಾಗುತ್ತಾನೆ.

ಒಳ್ಳೆಯವರ ಮನೆಗಳಲ್ಲಿ ಬಹಳ ಐಶ್ವರ್ಯವಿರುತ್ತದೆ. ಕೆಡುಕರ ಸಂಪಾದನೆಯಾದರೋ ಆಪತ್ತನ್ನು ಬರಮಾಡುತ್ತದೆ.

ಜ್ಞಾನಿಯ ಮಾತುಗಳು ತಿಳುವಳಿಕೆಯನ್ನು ಹರಡುತ್ತವೆ. ಮೂಢರ ಮಾತುಗಳು ಕೇಳಲು ಯೋಗ್ಯವಲ್ಲ.

ಕೆಡುಕರ ಕಾಣಿಕೆಯನ್ನು ಯೆಹೋವನು ದ್ವೇಷಿಸುವನು; ಒಳ್ಳೆಯವರ ಪ್ರಾರ್ಥನೆಯನ್ನು ಸಂತೋಷದಿಂದ ಕೇಳುವನು.

ದುಷ್ಟರ ಜೀವಿತವು ಯೆಹೋವನಿಗೆ ಅಸಹ್ಯ. ಒಳ್ಳೆಯದನ್ನು ಮಾಡಲಿಚ್ಛಿಸುವವರು ಯೆಹೋವನಿಗೆ ಪ್ರಿಯ.

10 ನೀತಿಮಾರ್ಗವನ್ನು ತೊರೆದವನಿಗೆ ಮಹಾದಂಡನೆಯಾಗುವುದು; ಶಿಕ್ಷಣ, ಗದರಿಕೆಯನ್ನು ದ್ವೇಷಿಸುವವನು ನಾಶವಾಗುವನು.

11 ಮೃತ್ಯುಲೋಕದಲ್ಲಿ ನಡೆಯುತ್ತಿರುವುದು ಯೆಹೋವನಿಗೆ ತಿಳಿದಿದೆ. ಜನರ ಹೃದಯಗಳಲ್ಲಿರುವ ಆಲೋಚನೆಗಳು ಸಹ ಆತನಿಗೆ ಗೊತ್ತಿವೆ.

12 ಮೂಢನು ತನ್ನ ತಪ್ಪನ್ನು ಬೇರೆಯವರಿಂದ ಕೇಳಲು ಇಷ್ಟಪಡನು. ಮೂಢನು ಉಪದೇಶಕ್ಕಾಗಿ ಜ್ಞಾನಿಗಳ ಬಳಿಗೆ ಹೋಗುವುದಿಲ್ಲ.

13 ಸಂತೋಷವಾಗಿರುವವನ ಮುಖದಲ್ಲಿ ಆನಂದ ಎದ್ದುಕಾಣುವುದು. ದುಃಖಗೊಂಡಿರುವವನ ಆತ್ಮದಲ್ಲಿ ವ್ಯಥೆ ಎದ್ದುಕಾಣುವುದು.

14 ವಿವೇಕಿಯು ಮತ್ತಷ್ಟು ತಿಳುವಳಿಕೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವನು. ಮೂಢನು ಮತ್ತಷ್ಟು ಮೂಢತನವನ್ನು ಬಯಸುತ್ತಾನೆ.

15 ಬಡಜನರ ದಿನಗಳೆಲ್ಲಾ ದುಃಖಕರ. ಸಂತೋಷದ ಹೃದಯದಲ್ಲಿ ಸದಾ ಔತಣ.

16 ಬಹಳ ಐಶ್ವರ್ಯವನ್ನು ಹೊಂದಿದ್ದು ಸಮಾಧಾನವಿಲ್ಲದೆ ಇರುವುದಕ್ಕಿಂತ ಸ್ವಲ್ಪ ಐಶ್ವರ್ಯವನ್ನು ಹೊಂದಿದ್ದು ಯೆಹೋವನಲ್ಲಿ ಭಯಭಕ್ತಿಯಿಂದಿರುವುದೇ ಮೇಲು.

17 ದ್ವೇಷವಿರುವಲ್ಲಿ ಹೆಚ್ಚಾಗಿ ತಿನ್ನುವುದಕ್ಕಿಂತಲೂ ಪ್ರೀತಿಯಿರುವಲ್ಲಿ ಸ್ವಲ್ಪ ತಿನ್ನುವುದೇ ಉತ್ತಮ.

18 ಮುಂಗೋಪಿಯು ಜಗಳವನ್ನು ಎಬ್ಬಿಸುವನು. ತಾಳ್ಮೆಯುಳ್ಳವನು ಶಾಂತಿಯನ್ನು ಸ್ಥಾಪಿಸುವನು.

19 ಸೋಮಾರಿಗೆ ಎಲ್ಲೆಲ್ಲೂ ತೊಂದರೆ, ಯಥಾರ್ಥವಂತನಿಗೆ ಜೀವನ ಸರಾಗ.

20 ಜ್ಞಾನಿಯಾದ ಮಗನಿಂದ ತಂದೆಗೆ ಸಂತೋಷ. ಮೂಢನಾದರೋ ತನ್ನ ತಾಯಿಯನ್ನು ಕಡೆಗಣಿಸುವನು.

21 ಮೂಢನಿಗೆ ಮೂಢತನದಲ್ಲಿ ಸಂತೋಷ. ಜ್ಞಾನಿಯು ಎಚ್ಚರಿಕೆಯಿಂದಿದ್ದು ಒಳ್ಳೆಯದನ್ನು ಮಾಡುವನು.

22 ಆಲೋಚನೆಯಿಲ್ಲದ ಯೋಜನೆಗಳು ವಿಫಲವಾಗುತ್ತವೆ. ಆಲೋಚಿಸಿ ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ.

23 ಸಮರ್ಪಕವಾದ ಉತ್ತರ ಸಂತೋಷವನ್ನು ಉಂಟುಮಾಡುವುದು; ತಕ್ಕ ಸಮಯದಲ್ಲಿ ಸಮಯೋಚಿತವಾದ ಮಾತು ಅತ್ಯುತ್ತಮ.

24 ಜ್ಞಾನಿಯ ಕಾರ್ಯಗಳು ಅವನನ್ನು ಯಶಸ್ಸಿಗೆ ನಡೆಸುತ್ತವೆ; ಅವು ಅವನನ್ನು ಮರಣದ ಹಾದಿಯಿಂದ ತಪ್ಪಿಸುತ್ತವೆ.

25 ಅಹಂಕಾರಿಗಳ ಆಸ್ತಿಯನ್ನು ಯೆಹೋವನು ನಾಶಗೊಳಿಸುತ್ತಾನೆ; ಆದರೆ ವಿಧವೆಯರ ಆಸ್ತಿಯನ್ನು ಕಾಪಾಡುವನು.

26 ಯೆಹೋವನು ದುರಾಲೋಚನೆಗಳನ್ನು ದ್ವೇಷಿಸುವನು; ಕನಿಕರದ ಮಾತುಗಳಲ್ಲಾದರೋ ಸಂತೋಷಪಡುವನು.

27 ದುರಾಶೆಪಡುವವನು ತನ್ನ ಕುಟುಂಬಕ್ಕೆ ಆಪತ್ತನ್ನು ಬರಮಾಡಿಕೊಳ್ಳುವನು. ಲಂಚ ತೆಗೆದುಕೊಳ್ಳದವನಿಗೆ ಯಾವ ಸಮಸ್ಯೆಯೂ ಇರುವುದಿಲ್ಲ.

28 ಒಳ್ಳೆಯವರು ಎಚ್ಚರಿಕೆಯಿಂದ ಯೋಚಿಸಿ ಉತ್ತರ ಕೊಡುವರು. ದುಷ್ಟರಾದರೋ ಯೋಚಿಸದೆ ಮಾತಾಡುವರು; ಅದರಿಂದ ಜನರಿಗೆ ಕೇವಲ ತೊಂದರೆಯಷ್ಟೇ.

29 ಯೆಹೋವನು ದುಷ್ಟರಿಗೆ ಬಹುದೂರ. ಶಿಷ್ಟರ ಪ್ರಾರ್ಥನೆಯನ್ನಾದರೋ ಆತನು ಯಾವಾಗಲೂ ಕೇಳುತ್ತಾನೆ.

30 ನಗುಮುಖವು ಜನರನ್ನು ಸಂತೋಷಗೊಳಿಸುವುದು; ಒಳ್ಳೆಯ ಸುದ್ದಿಯಿಂದ ಜನರ ಆರೋಗ್ಯ ಹೆಚ್ಚುವುದು.

31 ತನ್ನ ತಪ್ಪನ್ನು ಎಚ್ಚರಿಕೆಯಿಂದ ಕೇಳುವವನು ಬಹು ಜ್ಞಾನಿ.

32 ಶಿಕ್ಷೆಯನ್ನು ಒಪ್ಪದವನು ತನಗೇ ಕೇಡುಮಾಡಿಕೊಳ್ಳುತ್ತಾನೆ. ಗದರಿಕೆಯನ್ನು ಕೇಳುವವನು ತಿಳುವಳಿಕೆಯನ್ನು ಪಡೆದುಕೊಳ್ಳುವನು.

33 ಯೆಹೋವನಲ್ಲಿ ಭಯಭಕ್ತಿಯುಳ್ಳವನು ಜ್ಞಾನಿಯಾಗುತ್ತಿದ್ದಾನೆ. ಸನ್ಮಾನ ಹೊಂದಬೇಕೆನ್ನುವವನು ಮೊದಲು ದೀನನಾಗಿರಬೇಕು.

ಫಿಲಿಪ್ಪಿಯವರಿಗೆ 2

ಐಕ್ಯಮತದಿಂದಿದ್ದು ಒಬ್ಬರನ್ನೊಬ್ಬರು ಪರಾಂಬರಿಸಿರಿ

ನಿಮ್ಮಲ್ಲಿ ಕ್ರಿಸ್ತನಿಂದಾದ ಉತ್ತೇಜನ, ಪ್ರೀತಿಯ ಪ್ರೇರಣೆ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯ ದಯಾರಸಗಳು ಇವೆಯೋ? ನಿಮ್ಮಲ್ಲಿ ಇವುಗಳು ಇರುವುದಾದರೆ, ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ. ಆಗ ನನ್ನ ಸಂತೋಷವು ಪರಿಪೂರ್ಣವಾಗುವುದು. ಒಬ್ಬರಿಗೊಬ್ಬರು ಒಂದೇ ಪ್ರೀತಿ ಉಳ್ಳವರಾಗಿರಿ. ಅನ್ಯೋನ್ಯಭಾವವುಳ್ಳವರಾಗಿದ್ದು ಒಂದೇ ಗುರಿಯಿಂದ ಜೀವಿಸಿರಿ. ನೀವು ಯಾವುದನ್ನೇ ಮಾಡುವಾಗ, ಸ್ವಾರ್ಥವಾಗಲಿ ಅಹಂಕಾರವಾಗಲಿ ನಿಮಗೆ ಮಾರ್ಗದರ್ಶಕವಾಗದಂತೆ ನೋಡಿಕೊಳ್ಳಿರಿ. ದೀನಭಾವವುಳ್ಳವರಾಗಿದ್ದು ನಿಮಗಿಂತಲೂ ಹೆಚ್ಚಾಗಿ ಬೇರೆಯವರಿಗೆ ಗೌರವವನ್ನು ಕೊಡಿರಿ. ನಿಮ್ಮ ಅಭಿಲಾಷೆಗಳ ಬಗ್ಗೆ ಮಾತ್ರ ಚಿಂತಿಸದೆ ಇತರರ ಜೀವಿತದ ಬಗ್ಗೆಯೂ ಚಿಂತಿಸಿರಿ.

ನಿಸ್ವಾರ್ಥರಾಗಿರುವುದನ್ನು ಕ್ರಿಸ್ತನಿಂದ ಕಲಿತುಕೊಳ್ಳಿರಿ

ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.

ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮನಾಗಿದ್ದರೂ
    ಆ ಪದವಿಯನ್ನು ಬಿಡಲಾರೆ ಎನ್ನಲಿಲ್ಲ.
ಆ ಪದವಿಯನ್ನು ಆತನು ಬಿಟ್ಟುಕೊಟ್ಟು
    ಸೇವಕನ ಸ್ವಭಾವವನ್ನು ಧರಿಸಿಕೊಂಡು ಮಾನವ ರೂಪದಲ್ಲಿ ಬಂದನು.
ಆತನು ಮನುಷ್ಯನಾಗಿ ಜೀವಿಸುತ್ತಿದ್ದಾಗ
    ತನ್ನನ್ನು ತಗ್ಗಿಸಿಕೊಂಡು ಮರಣವನ್ನೂ ಕಡೆಗಣಿಸಿ ದೇವರಿಗೆ ಸಂಪೂರ್ಣ ವಿಧೇಯನಾಗಿ,
    ಶಿಲುಬೆಯ ಮೇಲೆ ಪ್ರಾಣವನ್ನೇ ಕೊಟ್ಟನು.
ಆದ್ದರಿಂದ ದೇವರು ಆತನನ್ನು ಅತ್ಯುನ್ನತವಾದ ಸ್ಥಾನಕ್ಕೇರಿಸಿ
    ಉಳಿದೆಲ್ಲ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.
10 ಆದ್ದರಿಂದ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಪಾತಾಳದಲ್ಲಿಯೂ ಇರುವ ಪ್ರತಿಯೊಬ್ಬರು
    ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು,
11 “ಯೇಸು ಕ್ರಿಸ್ತನೇ ಪ್ರಭು”ವೆಂದು ಹೇಳುವರು.
    ಇದರಿಂದ ತಂದೆಯಾದ ದೇವರಿಗೆ ಮಹಿಮೆ ಉಂಟಾಗುವುದು.

ದೇವರ ಇಷ್ಟಕ್ಕನುಸಾರವಾದ ಜನರಾಗಿರಿ

12 ನನ್ನ ಪ್ರಿಯ ಸ್ನೇಹಿತರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ ನಾನು ದೂರವಿರುವಾಗಲೂ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿರಿ. ನೀವು ದೇವರಿಗೆ ಭಯಭಕ್ತಿಯಿಂದಿದ್ದು ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. 13 ಹೌದು, ಆತನಿಗೆ ಮೆಚ್ಚಿಕೆಕರವಾದ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೆಯನ್ನು ಆತನೇ ನಿಮ್ಮಲ್ಲಿ ಹುಟ್ಟಿಸುತ್ತಾನೆ ಅಲ್ಲದೆ ಅವುಗಳನ್ನು ಮಾಡಲು ಆತನೇ ನಿಮಗೆ ಶಕ್ತಿಯನ್ನು ಕೊಡುತ್ತಾನೆ.

14 ನೀವು ಮಾಡುವ ಪ್ರತಿಯೊಂದನ್ನು ಗುಣಗುಟ್ಟದೆಯೂ ವಿವಾದವಿಲ್ಲದೆಯೂ ಮಾಡಿರಿ. 15 ಆಗ ಮುಗ್ಧರೂ ಪರಿಶುದ್ಧರೂ ಆಗಿದ್ದು ಕಳಂಕರಹಿತವಾದ ದೇವಮಕ್ಕಳಾಗಿರುತ್ತೀರಿ. ದುಷ್ಟಜನರ ಮಧ್ಯದಲ್ಲಿ ವಾಸವಾಗಿರುವ ನೀವು ಕಾರ್ಗತ್ತಲೆಯಲ್ಲಿ ಪ್ರಕಾಶಿಸುವ ನಕ್ಷತ್ರಮಂಡಲದಂತಿದ್ದೀರಿ. 16 ಜೀವದಾಯಕವಾದ ವಾಕ್ಯವನ್ನು ನೀವು ಆ ಜನರಿಗೆ ಕೊಟ್ಟರೆ, ಕ್ರಿಸ್ತನು ಬಂದಾಗ ನಾನು ಹೆಮ್ಮೆಯಿಂದಿರಲು ಸಾಧ್ಯವಾಗುತ್ತದೆ, ಏಕೆಂದರೆ ನನ್ನ ಕೆಲಸವು ವ್ಯರ್ಥವಾಗಲಿಲ್ಲ. ನಾನು ಪಂದ್ಯದಲ್ಲಿ ಓಡಿ ಗೆದ್ದೆನು.

17 ನೀವು ನಿಮ್ಮ ಜೀವಿತಗಳನ್ನು ದೇವರ ಸೇವೆಗಾಗಿ ಯಜ್ಞದೋಪಾದಿಯಲ್ಲಿ ಅರ್ಪಿಸಿಕೊಳ್ಳಲು ನಿಮ್ಮ ನಂಬಿಕೆಯು ನಿಮ್ಮನ್ನು ಪ್ರೇರೇಪಿಸುತ್ತದೆ. ಒಂದುವೇಳೆ, ನಿಮ್ಮ ಯಜ್ಞದೊಡನೆ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ಸಂತೋಷಿಸುತ್ತೇನೆ, ನಿಮ್ಮೆಲ್ಲರೊಂದಿಗೆ ಸಂತೋಷಿಸುತ್ತೇನೆ. 18 ಹಾಗೆಯೇ ನೀವು ಸಹ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಿಸಿರಿ.

ತಿಮೊಥೆ ಮತ್ತು ಎಪಫ್ರೊದೀತರ ಸುದ್ದಿ

19 ನಿಮ್ಮ ಬಳಿಗೆ ತಿಮೊಥೆಯನನ್ನು ಆದಷ್ಟು ಬೇಗನೆ ಕಳುಹಿಸಿಕೊಡಲು ಪ್ರಭುವಾದ ಯೇಸುವಿನಲ್ಲಿ ನಿರೀಕ್ಷಿಸುತ್ತಿದ್ದೇನೆ. ಅವನ ಮೂಲಕ ನಿಮ್ಮ ಯೋಗಕ್ಷೇವುವನ್ನು ತಿಳಿದುಕೊಳ್ಳುವುದರಿಂದ ನನಗೆ ಪ್ರೋತ್ಸಾಹವಾಗಬಹುದು. 20 ಅವನಂತೆ ನಿಮ್ಮ ವಿಷಯದಲ್ಲಿ ನಿಜವಾಗಿಯೂ ಚಿಂತಿಸುವವರು ನನ್ನ ಬಳಿ ಯಾರೂ ಇಲ್ಲ. 21 ಉಳಿದವರು ಕೇವಲ ತಮ್ಮ ಬಗ್ಗೆ ಚಿಂತಿಸುತ್ತಾರೆಯೇ ಹೊರತು ಕ್ರಿಸ್ತ ಯೇಸುವಿನ ಸೇವೆಯ ಬಗ್ಗೆ ಚಿಂತಿಸುವುದಿಲ್ಲ. 22 ತಿಮೊಥೆಯನು ಎಂಥವನೆಂಬುದು ನಿಮಗೆ ಗೊತ್ತಿದೆ. ಮಗನು ತನ್ನ ತಂದೆಯೊಡನೆ ಸೇವೆ ಮಾಡುವಂತೆ ಅವನು ಸುವಾರ್ತೆಯನ್ನು ತಿಳಿಸುವುದರಲ್ಲಿ ನನ್ನೊಂದಿಗೆ ಸೇವೆ ಮಾಡಿದನು. 23 ನನ್ನ ಬಗ್ಗೆ ನಡೆಯುತ್ತಿರುವ ವಿಚಾರಣೆಯ ಫಲಿತಾಂಶವು ತಿಳಿದಕೂಡಲೇ ಅವನನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ. 24 ಅಲ್ಲದೆ ಪ್ರಭುವಿನ ಸಹಾಯದಿಂದ ನಿಮ್ಮ ಬಳಿಗೆ ಅದಷ್ಟು ಬೇಗನೆ ಬರುತ್ತೇನೆ ಎಂಬ ಭರವಸೆ ನನಗಿದೆ.

25 ಎಪಫ್ರೊದೀತನು ಕ್ರಿಸ್ತನಲ್ಲಿ ನನ್ನ ಸಹೋದರನಾಗಿದ್ದಾನೆ. ಕ್ರಿಸ್ತನ ಸೈನ್ಯದಲ್ಲಿ ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ ಮತ್ತು ಸೇವೆ ಮಾಡುತ್ತಿದ್ದಾನೆ. ನನಗೆ ಸಹಾಯಬೇಕಿದ್ದಾಗ, ನೀವು ಅವನನ್ನು ನನ್ನ ಬಳಿಗೆ ಕಳುಹಿಸಿಕೊಟ್ಟಿರಿ. ಈಗ ನಾನು ಅವನನ್ನು ನಿಮ್ಮ ಬಳಿಗೆ ಮತ್ತೆ ಕಳುಹಿಸಬೇಕೆಂದಿದ್ದೇನೆ. 26 ಏಕೆಂದರೆ ಅವನು ನಿಮ್ಮೆಲ್ಲರನ್ನು ನೋಡಲು ಬಹು ತವಕಪಡುತ್ತಿದ್ದಾನೆ. ತಾನು ಅಸ್ವಸ್ಥನಾಗಿದ್ದದ್ದು ನಿಮಗೆ ತಿಳಿದದ್ದರಿಂದ ಅವನಿಗೆ ಚಿಂತೆಯಾಗಿದೆ. 27 ಅವನು ಅನಾರೋಗ್ಯದಿಂದ ಸಾಯುವ ಸ್ಥಿತಿಯಲ್ಲಿದ್ದನು. ಆದರೆ ದೇವರು ಅವನನ್ನು ಕರುಣಿಸಿದನು; ಅವನನ್ನು ಮಾತ್ರವಲ್ಲದೆ ನನ್ನನ್ನು ಸಹ ಕರುಣಿಸಿದನು. 28 ಆದ್ದರಿಂದ ಅವನನ್ನು ನಿಮ್ಮ ಬಳಿಗೆ ಕಳುಹಿಸಿಕೊಡಲು ನಾನು ಬಹಳ ತವಕಪಡುತ್ತಿದ್ದೇನೆ. ನೀವು ಅವನನ್ನು ನೋಡಿದಾಗ ಸಂತೋಷಪಡುತ್ತೀರಿ ಮತ್ತು ನಿಮ್ಮ ವಿಷಯದಲ್ಲಿ ನನಗಿರುವ ಚಿಂತೆಯು ಕೊನೆಗೊಳ್ಳುತ್ತದೆ. 29 ಮಹಾ ಆನಂದದಿಂದ ಪ್ರಭುವಿನಲ್ಲಿ ಅವನನ್ನು ಸ್ವಾಗತಿಸಿರಿ. ಎಪಫ್ರೊದೀತನಂಥ ಜನರನ್ನು ಗೌರವಿಸಿರಿ. 30 ಅವನು ಕ್ರಿಸ್ತನ ಕೆಲಸಕ್ಕಾಗಿ ಬಹುಮಟ್ಟಿಗೆ ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ಅವನಿಗೆ ಮಾನ್ಯತೆ ದೊರೆಯಬೇಕು. ನನಗೆ ಸಹಾಯಮಾಡಲು ಅವನು ತನ್ನ ಪ್ರಾಣವನ್ನೇ ಅಪಾಯಕ್ಕೆ ಈಡುಮಾಡಿಕೊಂಡನು. ಈ ರೀತಿಯ ಸಹಾಯ ಮಾಡಲು ನಿಮಗೆ ಸಾಧ್ಯವಾಗಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International