Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 38

ಯಜ್ಞವೇದಿಕೆ

38 ತರುವಾಯ ಬೆಚಲೇಲನು ಯಜ್ಞವೇದಿಕೆಯನ್ನು ಜಾಲೀಮರದಿಂದ ಮಾಡಿದನು. ಈ ವೇದಿಕೆಯು ಸರ್ವಾಂಗಹೋಮಗಳನ್ನು ಅರ್ಪಿಸುವುದಕ್ಕೆ ಕಟ್ಟಲ್ಪಟ್ಟಿತ್ತು. ವೇದಿಕೆಯು ಚೌಕವಾಗಿತ್ತು. ಅದು ಐದು ಮೊಳ ಉದ್ದ, ಐದು ಮೊಳ ಅಗಲ ಮತ್ತು ಮೂರು ಮೊಳ ಎತ್ತರ ಇತ್ತು. ಅವನು ಯಜ್ಞವೇದಿಕೆಯ ನಾಲ್ಕು ಮೂಲೆಗಳಲ್ಲಿ ಒಂದೊಂದು ಕೊಂಬುಗಳನ್ನು ಇಟ್ಟು ಪ್ರತಿಯೊಂದೂ ಕೊಂಬನ್ನು ಅದರ ಮೂಲೆಗೆ ಸೇರಿಸಿದನು. ಹೀಗಾಗಿ ಪ್ರತಿಯೊಂದೂ ಅಖಂಡವಾದ ಒಂದೇ ವಸ್ತುವಿನಂತಾಯಿತು. ಅವನು ಯಜ್ಞವೇದಿಕೆಯನ್ನು ತಾಮ್ರದಿಂದ ಹೊದಿಸಿದನು. ಬಳಿಕ ವೇದಿಕೆಯಲ್ಲಿ ಉಪಯೋಗಿಸುವ ಎಲ್ಲಾ ಉಪಕರಣಗಳನ್ನು ಅಂದರೆ ಮಡಿಕೆಗಳು, ಸಲಿಕೆಗಳು, ಬೋಗುಣಿಗಳು, ಮುಳ್ಳುಗಳು ಮತ್ತು ಅಗ್ಗಿಷ್ಟಿಗೆಗಳನ್ನು ತಾಮ್ರದಿಂದ ಮಾಡಿದನು. ಬಳಿಕ ಅವನು ವೇದಿಕೆಗೆ ತಾಮ್ರದ ಜಾಳಿಗೆಯನ್ನು ಮಾಡಿದನು. ಜಾಳಿಗೆಯು ಹೆಣಿಗೇ ಕೆಲಸದಿಂದ ಮಾಡಲಾಗಿತ್ತು. ಜಾಳಿಗೆಯು ವೇದಿಕೆಯ ಕೆಳಭಾಗದಲ್ಲಿರುವ ಕಟ್ಟೆಯ ಕೆಳಗೆ ಇಡಲ್ಪಟ್ಟಿತ್ತು. ಅದು ಕೆಳಗಿನಿಂದ ವೇದಿಕೆಯ ಅರ್ಧಭಾಗದಷ್ಟು ಮೇಲಕ್ಕೆ ಹೋಯಿತು. ಬಳಿಕ ಅವನು ತಾಮ್ರದ ಬಳೆಗಳನ್ನು ಮಾಡಿದನು. ಈ ಬಳೆಗಳು ವೇದಿಕೆಯನ್ನು ಕೋಲುಗಳಿಂದ ಹೊರುವುದಕ್ಕೆ ಉಪಯುಕ್ತವಾಗಿದ್ದವು. ಅವನು ಬಳೆಗಳನ್ನು ಜಾಳಿಗೆಯ ನಾಲ್ಕು ಮೂಲೆಗಳಲ್ಲಿ ಇಟ್ಟನು. ಬಳಿಕ ಅವನು ಜಾಲೀಮರದಿಂದ ಕೋಲುಗಳನ್ನು ಮಾಡಿ ಅವುಗಳನ್ನು ತಾಮ್ರದಿಂದ ಹೊದಿಸಿದನು. ಅವನು ವೇದಿಕೆಯ ಪಾರ್ಶ್ವಗಳಲ್ಲಿದ್ದ ಬಳೆಗಳಲ್ಲಿ ಕೋಲುಗಳನ್ನು ಸೇರಿಸಿದನು. ಕೋಲುಗಳು ವೇದಿಕೆಯನ್ನು ಹೊರುವುದಕ್ಕಾಗಿ ಉಪಯುಕ್ತವಾಗಿದ್ದವು. ಅವನು ವೇದಿಕೆಯನ್ನು ಪೆಟ್ಟಿಗೆಯಂತೆ ಮಾಡಲು ಹಲಗೆಗಳನ್ನು ಉಪಯೋಗಿಸಿದನು. ಅದು ಟೊಳ್ಳಾಗಿತ್ತು.

ಅವನು ತಾಮ್ರದಿಂದ ಗಂಗಾಳವನ್ನೂ ಅದರ ಪೀಠವನ್ನೂ ಮಾಡಿದನು. ದೇವದರ್ಶನಗುಡಾರದ ಬಾಗಿಲಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರು ಕೊಟ್ಟ ತಾಮ್ರದ ದರ್ಪಣಗಳನ್ನು ಅದಕ್ಕೆ ಉಪಯೋಗಿಸಿದನು.

ಪವಿತ್ರಗುಡಾರದ ಸುತ್ತಲಿನ ಅಂಗಳ

ಬಳಿಕ ಅವನು ಅಂಗಳವನ್ನು ಮಾಡಿದನು. ದಕ್ಷಿಣ ಭಾಗದಲ್ಲಿ ನೂರು ಮೊಳ ಉದ್ದದ ಪರದೆಯ ಗೋಡೆಯನ್ನು ಮಾಡಿದನು. ಪರದೆಗಳು ಶ್ರೇಷ್ಠ ನಾರುಬಟ್ಟೆಯಿಂದ ಮಾಡಲಾಗಿದ್ದವು. 10 ದಕ್ಷಿಣ ಭಾಗದಲ್ಲಿದ್ದ ಪರದೆಗಳಿಗೆ ಇಪ್ಪತ್ತು ಕಂಬಗಳಿದ್ದವು. ಕಂಬಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳಿದ್ದವು. ಕಂಬಗಳ ಕೊಂಡಿಗಳು ಮತ್ತು ಪರದೆಯ ಕೋಲುಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು. 11 ಅಂಗಳದ ಉತ್ತರ ಭಾಗದಲ್ಲಿಯೂ ನೂರು ಮೊಳ ಉದ್ದದ ಪರದೆಗಳ ಗೋಡೆಯಿತ್ತು. ಅವುಗಳಿಗೆ ಇಪ್ಪತ್ತು ಕಂಬಗಳು, ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳು ಇದ್ದವು. ಕಂಬಗಳ ಕೊಂಡಿಗಳು ಮತ್ತು ಪರದೆಯ ಕೋಲುಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು.

12 ಅಂಗಳದ ಪಶ್ಚಿಮ ಭಾಗದಲ್ಲಿ ಪರದೆಗಳ ಗೋಡೆಯು ಐವತ್ತು ಮೊಳ ಉದ್ದವಾಗಿತ್ತು. ಅಲ್ಲಿ ಹತ್ತು ಕಂಬಗಳೂ ಹತ್ತು ಗದ್ದಿಗೇಕಲ್ಲುಗಳೂ ಇದ್ದವು. ಕಂಬಗಳ ಕೊಂಡಿಗಳು ಮತ್ತು ಪರದೆಯ ಕೋಲುಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು.

13 ಅಂಗಳದ ಪೂರ್ವ ಭಾಗವು ಐವತ್ತು ಮೊಳ ಅಗಲವಾಗಿತ್ತು. ಅಂಗಳದ ಪ್ರವೇಶದ್ವಾರವು ಈ ಭಾಗದಲ್ಲಿತ್ತು. 14 ಬಾಗಿಲಿನ ಒಂದು ಕಡೆಯಲ್ಲಿ ಪರದೆಗಳ ಗೋಡೆಯು ಹದಿನೈದು ಮೊಳ ಉದ್ದವಾಗಿತ್ತು. ಆ ಕಡೆಯಲ್ಲಿ ಮೂರು ಕಂಬಗಳೂ ಮೂರು ಗದ್ದಿಗೇಕಲ್ಲುಗಳೂ ಇದ್ದವು. 15 ಬಾಗಿಲಿನ ಇನ್ನೊಂದು ಕಡೆಯಲ್ಲೂ ಪರದೆಗಳ ಗೋಡೆಯು ಹದಿನೈದು ಮೊಳ ಉದ್ದವಾಗಿತ್ತು. ಆ ಕಡೆಯಲ್ಲಿ ಮೂರು ಕಂಬಗಳೂ ಮೂರು ಗದ್ದೀಗೆಕಲ್ಲುಗಳೂ ಇದ್ದವು. 16 ಅಂಗಳದ ಸುತ್ತಲಿದ್ದ ಪರದೆಗಳೆಲ್ಲಾ ಶ್ರೇಷ್ಠ ನಾರುಬಟ್ಟೆಯಿಂದ ಮಾಡಲ್ಪಟ್ಟಿದ್ದವು. 17 ಕಂಬಗಳ ಗದ್ದಿಗೇಕಲ್ಲುಗಳನ್ನು ತಾಮ್ರದಿಂದ ಮಾಡಲಾಗಿತ್ತು. ಕೊಂಡಿಗಳನ್ನು ಮತ್ತು ಪರದೆಯ ಕೋಲುಗಳನ್ನು ಬೆಳ್ಳಿಯಿಂದ ಮಾಡಲಾಗಿತ್ತು. ಕಂಬಗಳ ತುದಿಗಳನ್ನೂ ಬೆಳ್ಳಿಯಿಂದ ಹೊದಿಸಲಾಗಿತ್ತು. ಅಂಗಳದಲ್ಲಿದ್ದ ಕಂಬಗಳಿಗೆಲ್ಲಾ ಬೆಳ್ಳಿಯಿಂದ ಮಾಡಿದ ಪರದೆಯ ಕೋಲುಗಳಿದ್ದವು.

18 ಅಂಗಳದ ಬಾಗಿಲಿನ ಪರದೆಯು ಶ್ರೇಷ್ಠ ನಾರುಬಟ್ಟೆಯಿಂದಲೂ, ನೀಲಿ, ನೇರಳೆ, ಕೆಂಪುದಾರಗಳಿಂದಲೂ ಮಾಡಲಾಗಿತ್ತು. ಪರದೆಯಲ್ಲಿ ನಕಾಸಿ ಕೆಲಸ ಮಾಡಲಾಗಿತ್ತು. ಪರದೆಯು ಇಪ್ಪತ್ತು ಮೊಳ ಉದ್ದ ಮತ್ತು ಐದು ಮೊಳ ಅಗಲವಾಗಿತ್ತು. ಅಂಗಳದ ಸುತ್ತಲಿದ್ದ ಎಲ್ಲಾ ಪರದೆಗಳ ಎತ್ತರ ಒಂದೇ ಆಗಿತ್ತು. 19 ಪರದೆಗಳಿಗೆ ನಾಲ್ಕು ಕಂಬಗಳು ಮತ್ತು ನಾಲ್ಕು ತಾಮ್ರದ ಗದ್ದಿಗೇಕಲ್ಲುಗಳು ಇದ್ದವು. ಕಂಬಗಳ ಕೊಂಡಿಗಳನ್ನು ಬೆಳ್ಳಿಯಿಂದ ಮಾಡಲಾಗಿತ್ತು. ಕಂಬಗಳ ತುದಿಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು. 20 ಪವಿತ್ರಗುಡಾರದ ಎಲ್ಲಾ ಗೂಟಗಳು ಮತ್ತು ಅಂಗಳದ ಸುತ್ತಲಿದ್ದ ಪರದೆಗಳ ಗೂಟಗಳು ತಾಮ್ರದಿಂದ ಮಾಡಲ್ಪಟ್ಟಿದ್ದವು.

21 ಒಡಂಬಡಿಕೆಯ ಗುಡಾರವಾದ ಪವಿತ್ರಗುಡಾರವನ್ನು ಮಾಡಲು ಉಪಯೋಗಿಸಿದ ಎಲ್ಲಾ ವಸ್ತುಗಳನ್ನು ಬರೆದಿಡಬೇಕೆಂದು ಮೋಶೆಯು ಲೇವಿಯರಿಗೆ ಆಜ್ಞಾಪಿಸಿದನು. ಈ ಪಟ್ಟಿಯು ಆರೋನನ ಮಗನಾದ ಈತಾಮಾರನ ವಶದಲ್ಲಿ ಇತ್ತು.

22 ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರತಿಯೊಂದನ್ನೂ ಯೆಹೂದಕುಲದ ಹೂರನ ಮೊಮ್ಮಗನೂ ಊರಿಯ ಮಗನೂ ಆದ ಬೆಚಲೇಲನು ಮಾಡಿದನು. 23 ದಾನ್‌ಕುಲದ ಅಹೀಸಾಮಾಕನ ಮಗನಾದ ಒಹೊಲೀಯಾಬನು ಅವನಿಗೆ ಸಹಾಯ ಮಾಡಿದನು. ಒಹೊಲೀಯಾಬನು ನಿಪುಣನಾದ ಕೆಲಸಗಾರನೂ ನಕಾಸಿ ಕೆಲಸ ಮಾಡುವವನೂ ಆಗಿದ್ದನು. ಅವನು ಶ್ರೇಷ್ಠ ನಾರುಬಟ್ಟೆಯಲ್ಲಿ ನೀಲಿ, ನೇರಳೆ, ಕೆಂಪುದಾರಗಳಿಂದ ಬುಟೇದಾರೀ ಕೆಲಸ ಮಾಡಲು ನಿಪುಣನಾಗಿದ್ದನು.

24 ಪವಿತ್ರಸ್ಥಳಕ್ಕಾಗಿ ಎರಡು ಟನ್‌ಗಿಂತ ಹೆಚ್ಚು ಬಂಗಾರವು ಯೆಹೋವನಿಗೆ ಕಾಣಿಕೆಯಾಗಿ ಕೊಡಲ್ಪಟ್ಟಿತು. (ಅಧಿಕೃತ ಅಳತೆಯನ್ನು ಉಪಯೋಗಿಸಿ ಇದನ್ನು ತೂಕ ಮಾಡಲಾಯಿತು.)

25 ಲೆಕ್ಕಿಸಲ್ಪಟ್ಟ ಒಟ್ಟು ಗಂಡಸರು ಮೂರುಮುಕ್ಕಾಲು ಟನ್‌ಗಿಂತ ಹೆಚ್ಚು ಬೆಳ್ಳಿಯನ್ನು ಕೊಟ್ಟರು. (ಅಧಿಕೃತ ಅಳತೆಯನ್ನು ಉಪಯೋಗಿಸಿ ಇದನ್ನು ತೂಕ ಮಾಡಲಾಯಿತು.) 26 ಇಪ್ಪತ್ತು ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲಾ ಗಂಡಸರನ್ನು ಲೆಕ್ಕಿಸಲಾಯಿತು. ಅಲ್ಲಿ ಆರು ಲಕ್ಷದ ಮೂರು ಸಾವಿರದ ಐನೂರೈವತ್ತು ಮಂದಿ ಗಂಡಸರಿದ್ದರು ಮತ್ತು ಪ್ರತಿಯೊಬ್ಬನು ತಲಾ ಒಂದು ಬೆಕಾ[a] ಬೆಳ್ಳಿಯನ್ನು ತೆರಿಗೆಯಾಗಿ ಕೊಡಬೇಕಾಯಿತು. (ಅಧಿಕೃತ ಅಳತೆಯ ಪ್ರಕಾರ ಒಂದು ಬೆಕಾ ಅಂದರೆ ಅರ್ಧ ಶೆಕೆಲ್.) 27 ಯೆಹೋವನ ಪವಿತ್ರಸ್ಥಳ ಮತ್ತು ಪರದೆಗಳಿಗೆ ಬೇಕಾದ ನೂರು ಗದ್ದಿಗೇಕಲ್ಲುಗಳನ್ನು ಮಾಡಲು ಅವರು ಮೂರುಮುಕ್ಕಾಲು ಟನ್ ಬೆಳ್ಳಿಯನ್ನು ಉಪಯೋಗಿಸಿದರು. ಅವರು ಪ್ರತಿ ಗದ್ದಿಗೇಕಲ್ಲಿಗೆ ಎಪ್ಪತ್ತೈದು ಪೌಂಡು ಬೆಳ್ಳಿಯನ್ನು ಉಪಯೋಗಿಸಿದರು. 28 ಉಳಿದ ಐವತ್ತು ಪೌಂಡು ಬೆಳ್ಳಿಯನ್ನು, ಕೊಂಡಿಗಳನ್ನೂ ಪರದೆಯ ಕೋಲುಗಳನ್ನೂ ಮಾಡುವುದಕ್ಕೂ ಕಂಬಗಳಿಗೆ ಹೊದಿಸುವುದಕ್ಕೂ ಉಪಯೋಗಿಸಿದರು.

29 ಇಪ್ಪತ್ತಾರುವರೆ ಟನ್‌ಗಿಂತ ಹೆಚ್ಚು ತಾಮ್ರವನ್ನು ಯೆಹೋವನಿಗಾಗಿ ಕೊಡಲಾಯಿತು. 30 ಆ ತಾಮ್ರವನ್ನು ದೇವದರ್ಶನಗುಡಾರದ ಬಾಗಿಲಿನ ಗದ್ದಿಗೇಕಲ್ಲುಗಳನ್ನು ಮಾಡಲು ಉಪಯೋಗಿಸಲಾಯಿತು. ಯಜ್ಞವೇದಿಕೆಯನ್ನು ಮತ್ತು ತಾಮ್ರದ ಜಾಳಿಗೆಯನ್ನು ಮಾಡಲು ಅವರು ತಾಮ್ರವನ್ನು ಉಪಯೋಗಿಸಿದರು. ಯಜ್ಞವೇದಿಕೆಯ ಎಲ್ಲಾ ಉಪಕರಣಗಳನ್ನು ಮತ್ತು ಬಟ್ಟಲುಗಳನ್ನು ಮಾಡಲು ತಾಮ್ರವನ್ನು ಉಪಯೋಗಿಸಲಾಯಿತು. 31 ಅದನ್ನು ಅಂಗಳದ ಸುತ್ತಲಿರುವ ಪರದೆಗಳ ಮತ್ತು ಬಾಗಿಲಿನ ಪರದೆಗಳ ಗದ್ದಿಗೇಕಲ್ಲುಗಳಿಗೂ ಉಪಯೋಗಿಸಲಾಯಿತು. ತಾಮ್ರವನ್ನು ಪವಿತ್ರಗುಡಾರದ ಮತ್ತು ಅಂಗಳದ ಸುತ್ತಲಿರುವ ಪರದೆಗಳ ಗೂಟಗಳನ್ನು ಮಾಡಲು ಉಪಯೋಗಿಸಲಾಯಿತು.

ಯೋಹಾನ 17

ಶಿಷ್ಯರಿಗೋಸ್ಕರ ಯೇಸುವಿನ ಪ್ರಾರ್ಥನೆ

17 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಪರಲೋಕದ ಕಡೆಗೆ ನೋಡಿ ಹೀಗೆ ಪ್ರಾರ್ಥಿಸಿದನು: “ತಂದೆಯೇ, ಸಮಯವು ಬಂದಿದೆ. ನಿನ್ನ ಮಗನನ್ನು ಮಹಿಮೆಪಡಿಸು. ಆಗ ಮಗನು ನಿನ್ನನ್ನು ಮಹಿಮೆಪಡಿಸಬಲ್ಲನು. ನೀನು ಮಗನಿಗೆ ಯಾರ್ಯಾರನ್ನು ಕೊಟ್ಟೆಯೋ ಅವರೆಲ್ಲರಿಗೂ ಮಗನು ನಿತ್ಯಜೀವವನ್ನು ಕೊಡಬೇಕೆಂದು ನೀನು ಮಗನಿಗೆ ಅಧಿಕಾರವನ್ನು ಕೊಟ್ಟಿರುವೆ. ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನು ಮತ್ತು ನೀನು ಕಳುಹಿಸಿದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದೇ ನಿತ್ಯಜೀವ. ನೀನು ನನಗೆ ಕೊಟ್ಟ ಕೆಲಸವನ್ನು ನಾನು ಮಾಡಿ ಪೂರೈಸಿದ್ದೇನೆ. ನಾನು ಭೂಲೋಕದಲ್ಲಿ ನಿನ್ನನ್ನು ಮಹಿಮೆ ಪಡಿಸಿದೆನು. ಈಗ, ತಂದೆಯೇ, ನೀನು ನಿನ್ನ ಸನ್ನಿಧಿಯಲ್ಲಿ ನನ್ನನ್ನು ಮಹಿಮೆಪಡಿಸು. ಈ ಲೋಕವು ಸೃಷ್ಟಿಯಾಗುವುದಕ್ಕಿಂತ ಮೊದಲು ನಾನು ನಿನ್ನೊಂದಿಗೆ ಹೊಂದಿದ್ದ ಮಹಿಮೆಯನ್ನು ನನಗೆ ಕೊಡು.

“ನೀನು ಈ ಲೋಕದೊಳಗಿಂದ ಕೆಲವು ಜನರನ್ನು ನನಗೆ ಕೊಟ್ಟೆ. ನಿನ್ನ ಸ್ವರೂಪವನ್ನು ನಾನು ಇವರಿಗೆ ತೋರಿಸಿದೆನು. ಇವರು ನಿನ್ನವರಾಗಿದ್ದಾರೆ ಮತ್ತು ನೀನೇ ಇವರನ್ನು ನನಗೆ ಕೊಟ್ಟೆ. ಇವರು ನಿನ್ನ ಆಜ್ಞೆಗಳಿಗೆ ವಿಧೇಯರಾದರು. ನೀನು ನನಗೆ ಕೊಟ್ಟ ಪ್ರತಿಯೊಂದೂ ನಿನ್ನಿಂದಲೇ ಬಂದಿದೆ ಎಂಬುದು ಇವರಿಗೆ ಈಗ ತಿಳಿದಿದೆ. ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಆ ಮಾತುಗಳನ್ನು ಸ್ವೀಕರಿಸಿಕೊಂಡಿದ್ದಾರೆ. ನಾನು ನಿಜವಾಗಿಯೂ ನಿನ್ನ ಬಳಿಯಿಂದ ಬಂದಿರುವುದಾಗಿಯೂ ನೀನೇ ನನ್ನನ್ನು ಕಳುಹಿಸಿರುವುದಾಗಿಯೂ ಇವರು ನಂಬಿದ್ದಾರೆ. ಈಗ ನಾನು ಇವರಿಗಾಗಿ ಪ್ರಾರ್ಥಿಸುವೆನು. ಈ ಲೋಕದಲ್ಲಿರುವ ಜನರಿಗೋಸ್ಕರ ನಾನು ಪ್ರಾರ್ಥಿಸುತ್ತಿಲ್ಲ. ಆದರೆ ನೀನು ನನಗೆ ಕೊಟ್ಟ ಇವರಿಗಾಗಿ ಪ್ರಾರ್ಥಿಸುತ್ತಿದ್ದೇನೆ, ಏಕೆಂದರೆ ಇವರು ನಿನ್ನವರಾಗಿದ್ದಾರೆ. 10 ನನ್ನಲ್ಲಿರುವುದೆಲ್ಲಾ ನಿನ್ನದೇ ಮತ್ತು ನಿನ್ನಲ್ಲಿರುವುದೆಲ್ಲಾ ನನ್ನದೇ. ಇವರಿಂದ ನನಗೆ ಮಹಿಮೆ ಉಂಟಾಗಿದೆ.

11 “ಈಗ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ. ಇನ್ನು ನಾನು ಈ ಲೋಕದಲ್ಲಿರುವುದಿಲ್ಲ. ಆದರೆ ಇವರು ಇನ್ನೂ ಈ ಲೋಕದಲ್ಲಿರುತ್ತಾರೆ. ಪವಿತ್ರನಾದ ತಂದೆಯೇ, (ನೀನು ನನಗೆ ಕೊಟ್ಟ) ನಿನ್ನ ಹೆಸರಿನ ಶಕ್ತಿಯಿಂದ ಇವರನ್ನು ಕಾಯ್ದು ಕಾಪಾಡು. ನೀನೂ ನಾನೂ ಒಂದಾಗಿರುವಂತೆ ಇವರೂ ಒಂದಾಗಿರಲು ಆಗ ಸಾಧ್ಯವಾಗುವುದು. 12 ನಾನು ಇವರೊಂದಿಗೆ ಇದ್ದಾಗ, ನಿನ್ನ ಹೆಸರಿನ ಶಕ್ತಿಯಿಂದ ಇವರನ್ನು ಕಾಯ್ದು ಕಾಪಾಡಿದೆನು. ಪವಿತ್ರ ಗ್ರಂಥದ ಹೇಳಿಕೆಯು ನೆರವೇರುವಂತೆ ಕಳೆದುಹೋಗುವುದಕ್ಕಾಗಿಯೇ ಆರಿಸಲ್ಪಟ್ಟಿದ್ದ (ಯೂದನೆಂಬ) ಒಬ್ಬನೇ ಒಬ್ಬನು ಇವರಲ್ಲಿ ನಾಶವಾದನು.

13 “ಈಗ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ. ಆದರೆ ನಾನು ಈ ಲೋಕದಲ್ಲಿ ಇನ್ನೂ ಇರುವಾಗಲೇ ಈ ಸಂಗತಿಗಳಿಗಾಗಿ ಪ್ರಾರ್ಥಿಸುತ್ತಿದ್ದೇನೆ. ಈ ಜನರು ನನ್ನ ಆನಂದವನ್ನು ಹೊಂದಿದವರಾಗಿರಬೇಕೆಂದು ಮತ್ತು ನನ್ನ ಆನಂದವು ಇವರಲ್ಲಿ ಪರಿಪೂರ್ಣವಾಗಿರಬೇಕೆಂದು ಈ ಸಂಗತಿಗಳನ್ನು ಹೇಳುತ್ತಿದ್ದೇನೆ. 14 ನಾನು ಇವರಿಗೆ ನಿನ್ನ ವಾಕ್ಯಗಳನ್ನು ಕೊಟ್ಟಿದ್ದೇನೆ. ಈ ಲೋಕವು ಇವರನ್ನು ದ್ವೇಷಿಸುತ್ತದೆ. ನಾನು ಈ ಲೋಕಕ್ಕೆ ಯಾವ ರೀತಿ ಸೇರಿದವನಾಗಿಲ್ಲವೋ ಅದೇ ರೀತಿ ಇವರೂ ಈ ಲೋಕಕ್ಕೆ ಸೇರಿದವರಾಗಿಲ್ಲ. ಆದ್ದರಿಂದ ಈ ಲೋಕವು ಇವರನ್ನು ದ್ವೇಷಿಸಿದೆ.

15 “ನೀನು ಇವರನ್ನು ಈ ಲೋಕದಿಂದ ತೆಗೆದುಕೊಳ್ಳಬೇಕೆಂದು ನಾನು ಕೇಳುತ್ತಿಲ್ಲ. ಆದರೆ ಇವರನ್ನು ಕೆಡುಕನಿಂದ (ಸೈತಾನನಿಂದ) ತಪ್ಪಿಸಿ ಸುರಕ್ಷಿತವಾಗಿರಿಸಬೇಕೆಂದು ನಾನು ಕೇಳಿಕೊಳ್ಳುತ್ತಿದ್ದೇನೆ. 16 ನಾನು ಈ ಲೋಕಕ್ಕೆ ಯಾವ ರೀತಿ ಸೇರಿದವನಾಗಿಲ್ಲವೋ ಅದೇ ರೀತಿ ಇವರೂ ಈ ಲೋಕಕ್ಕೆ ಸೇರಿದವರಾಗಿಲ್ಲ. 17 ನಿನ್ನ ಸತ್ಯದ ಮೂಲಕ ನೀನು ಇವರನ್ನು ನಿನ್ನ ಸೇವೆಗೆ ಸಿದ್ಧಪಡಿಸು. ನಿನ್ನ ವಾಕ್ಯವು ಸತ್ಯವಾದದ್ದು. 18 ನೀನು ನನ್ನನ್ನು ಈ ಲೋಕಕ್ಕೆ ಕಳುಹಿಸಿದಂತೆ ನಾನೂ ಇವರನ್ನು ಈ ಲೋಕಕ್ಕೆ ಕಳುಹಿಸಿದ್ದೇನೆ. 19 ಇವರು ನಿಜವಾಗಿ ನಿನ್ನ ಸೇವೆಗೆ ಪ್ರತಿಷ್ಠಿತರಾಗಬೇಕೆಂದು ನಾನು ನನ್ನನ್ನೇ ಪ್ರತಿಷ್ಠಿಸಿಕೊಂಡಿದ್ದೇನೆ.

20 “ನಾನು ಇವರಿಗಾಗಿಯೂ ಇವರ ವಾಕ್ಯದಿಂದ ನನ್ನಲ್ಲಿ ನಂಬಿಕೆ ಇಡುವ ಎಲ್ಲರಿಗಾಗಿಯೂ ಪ್ರಾರ್ಥಿಸುತ್ತಿದ್ದೇನೆ. 21 ತಂದೆಯೇ, ನನ್ನಲ್ಲಿ ನಂಬಿಕೆ ಇಡುವ ಎಲ್ಲಾ ಜನರು ಒಂದಾಗಿರಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನೀನು ನನ್ನಲ್ಲಿ ನೆಲೆಸಿರುವೆ ಮತ್ತು ನಾನು ನಿನ್ನಲ್ಲಿ ನೆಲೆಸಿರುವೆ. ನೀನು ನನ್ನನ್ನು ಕಳುಹಿಸಿರುವೆಯೆಂದು ಈ ಲೋಕವು ನಂಬಿಕೊಳ್ಳುವುದಕ್ಕಾಗಿ ಈ ಜನರು ಸಹ ನಮ್ಮೊಂದಿಗೆ ಒಂದಾಗಿರಬೇಕೆಂದು ನಾನು ಪ್ರಾರ್ಥಿಸುತ್ತೇನೆ. 22 ನೀನು ನನಗೆ ಕೊಟ್ಟ ಮಹಿಮೆಯನ್ನು ನಾನು ಈ ಜನರಿಗೆ ಕೊಟ್ಟಿದ್ದೇನೆ. ನೀನು ಮತ್ತು ನಾನು ಒಂದಾಗಿರುವಂತೆ ಇವರೂ ಒಂದಾಗಿರಬೇಕೆಂದು ನಾನು ಇವರಿಗೆ ಈ ಮಹಿಮೆಯನ್ನು ಕೊಟ್ಟೆನು. 23 ನಾನು ಅವರಲ್ಲಿ ಇರುವೆನು ಮತ್ತು ನೀನು ನನ್ನಲ್ಲಿರುವೆ. ಆದ್ದರಿಂದ ಅವರು ಸಂಪೂರ್ಣವಾಗಿ ಒಂದಾಗಿರುವರು. ನೀನೇ ನನ್ನನ್ನು ಕಳುಹಿಸಿರುವುದಾಗಿ ಮತ್ತು ನೀನು ನನ್ನನ್ನು ಪ್ರೀತಿಸಿದಂತೆಯೇ ಈ ಜನರನ್ನೂ ಪ್ರೀತಿಸಿರುವುದಾಗಿ ಈ ಲೋಕವು ಆಗ ತಿಳಿದುಕೊಳ್ಳುವುದು.

24 “ತಂದೆಯೇ, ನೀನು ನನಗೆ ಕೊಟ್ಟಿರುವ ಇವರು, ನಾನು ಇರುವಲ್ಲೆಲ್ಲಾ ನನ್ನೊಂದಿಗೆ ಇರಬೇಕೆಂದು ಮತ್ತು ನನ್ನ ಮಹಿಮೆಯನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ. ಈ ಲೋಕವು ಸೃಷ್ಟಿಯಾಗುವುದಕ್ಕಿಂತ ಮೊದಲೇ ನೀನು ನನ್ನನ್ನು ಪ್ರೀತಿಸಿದ್ದರಿಂದ ನೀನೇ ನನಗೆ ಈ ಮಹಿಮೆಯನ್ನು ಕೊಟ್ಟೆ. 25 ನೀತಿಯುಳ್ಳ ತಂದೆಯೇ, ಈ ಲೋಕವು ನಿನ್ನನ್ನು ತಿಳಿದಿಲ್ಲ. ಆದರೆ ನಾನು ನಿನ್ನನ್ನು ತಿಳಿದಿರುವೆ ಮತ್ತು ನೀನೇ ನನ್ನನ್ನು ಕಳುಹಿಸಿರುವೆ ಎಂಬುದು ಈ ಜನರಿಗೆ ತಿಳಿದಿದೆ. 26 ನಾನು ನಿನ್ನ ನಿಜಸ್ವಭಾವವನ್ನು ಇವರಿಗೆ ಗೊತ್ತುಪಡಿಸಿದೆನು. ನಾನು ನಿನ್ನ ಸ್ವರೂಪವನ್ನು ಇವರಿಗೆ ಮತ್ತೆ ತೋರಿಸುವೆನು. ಆಗ ನನ್ನ ಮೇಲೆ ನಿನಗೆ ಯಾವ ಪ್ರೀತಿಯಿದೆಯೋ, ಅದೇ ಪ್ರೀತಿಯು ಇವರಲ್ಲಿಯೂ ಇರುವುದು ಮತ್ತು ನಾನು ಇವರಲ್ಲಿ ಇರುವೆನು.”

ಜ್ಞಾನೋಕ್ತಿಗಳು 14

14 ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು, ಆದರೆ ಜ್ಞಾನಹೀನಳು ತನ್ನ ಕೈಯಿಂದಲೇ ಅದನ್ನು ಬೀಳಿಸುವಳು.

ಸನ್ಮಾರ್ಗಿಯು ಯೆಹೋವನಲ್ಲಿ ಭಯಭಕ್ತಿಯಿಂದಿರುವನು. ವಕ್ರಮಾರ್ಗಿಯು ಆತನನ್ನು ಕಡೆಗಣಿಸುವನು.

ಮೂಢನ ಮಾತುಗಳು ಅವನಿಗೇ ತೊಂದರೆಯನ್ನು ಉಂಟುಮಾಡುತ್ತವೆ. ಜ್ಞಾನಿಯ ಮಾತುಗಳಾದರೋ ಅವನನ್ನು ಕಾಪಾಡುತ್ತವೆ.

ಎತ್ತುಗಳಿಲ್ಲದಿದ್ದರೆ ಕೊಟ್ಟಿಗೆ ಬರಿದಾಗಿರುವುದು. ದೊಡ್ಡ ಸುಗ್ಗಿಪಡೆಯಲು ಎತ್ತಿನ ಶಕ್ತಿ ಜನರಿಗೆ ಅಗತ್ಯ.

ಸತ್ಯಸಾಕ್ಷಿಯು ಸುಳ್ಳು ಹೇಳುವುದಿಲ್ಲ. ಆದರೆ ಸುಳ್ಳು ಸಾಕ್ಷಿಯು ಸುಳ್ಳನ್ನೇ ಹೇಳುವುದು.

ಜ್ಞಾನದೂಷಕನು ಜ್ಞಾನಕ್ಕಾಗಿ ಹುಡುಕಿದರೂ ಅದನ್ನು ಕಂಡುಕೊಳ್ಳುವುದಿಲ್ಲ. ಆದರೆ ವಿವೇಕಿಯು ತಿಳುವಳಿಕೆಯನ್ನು ಸರಾಗವಾಗಿ ಕಂಡುಕೊಳ್ಳುವನು.

ಅಜ್ಞಾನಿಯೊಡನೆ ಸ್ನೇಹ ಬೆಳಸಬೇಡಿ; ನಿಮಗೆ ಉಪದೇಶಿಸಲು ಅವನಲ್ಲೇನೂ ಇಲ್ಲ.

ಜಾಣರು ಜ್ಞಾನಿಗಳಾಗಿದ್ದಾರೆ; ಅವರು ವಿವೇಚಿಸಿ ಕಾರ್ಯಗಳನ್ನು ಮಾಡುತ್ತಾರೆ, ಮೂಢರು ಬುದ್ಧಿಹೀನರಾಗಿದ್ದಾರೆ; ತಾವು ಮೋಸದಿಂದ ಬದುಕಬಲ್ಲೆವು ಎಂದು ಅವರು ಯೋಚಿಸಿಕೊಂಡಿದ್ದಾರೆ.

ಮೂಢರಿಗೆ ಪ್ರಾಯಶ್ಚಿತ್ತವು ಹಾಸ್ಯಾಸ್ಪದವಾಗಿದೆ; ಯಥಾರ್ಥವಂತರು ಕ್ಷಮೆಗಾಗಿ ಶ್ರಮಿಸುವರು.

10 ಅವನವನ ವ್ಯಥೆಯು ಅವನವನಿಗೆ ಮಾತ್ರ ತಿಳಿದಿದೆ. ಹಾಗೆಯೇ ಅವನವನ ಸಂತೋಷವು ಅವನವನಿಗೆ ಮಾತ್ರ ತಿಳಿದಿರುತ್ತದೆ.

11 ದುಷ್ಟನ ಮನೆ ನಾಶಕರ; ಶಿಷ್ಟನ ಮನೆ ಅಭಿವೃದ್ಧಿಕರ.

12 ಒಳ್ಳೆಯದೆಂದು ಜನರು ಭಾವಿಸಿಕೊಂಡಿರುವ ಮಾರ್ಗವೊಂದುಂಟು. ಆದರೆ ಅದರ ಅಂತ್ಯ ಮರಣವೇ.

13 ಒಬ್ಬನು ನಗುತ್ತಿರುವಾಗಲೂ ವ್ಯಸನದಿಂದಿರಲು ಸಾಧ್ಯ. ಅಂತೆಯೇ ಆನಂದವೂ ದುಃಖದಲ್ಲಿ ಅಂತ್ಯವಾಗಬಹುದು.

14 ದುಷ್ಟರು ತಾವು ಮಾಡುವ ಕೆಟ್ಟಕಾರ್ಯಗಳಿಗೆ ಸಂಪೂರ್ಣವಾಗಿ ದಂಡನೆ ಅನುಭವಿಸುವರು. ಆದರೆ ಸಜ್ಜನರು ತಮ್ಮ ಒಳ್ಳೆಯಕಾರ್ಯಗಳಿಗೆ ಸಂಪೂರ್ಣವಾಗಿ ಪ್ರತಿಫಲ ಪಡೆಯುವರು.

15 ಮೂಢನು ತಾನು ಕೇಳಿದ್ದನ್ನೆಲ್ಲ ನಂಬುವನು. ಆದರೆ ಜಾಣನು ಪ್ರತಿಯೊಂದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವನು.

16 ಜ್ಞಾನಿಯು ಎಚ್ಚರವಾಗಿದ್ದು ಆಪತ್ತಿನಿಂದ ದೂರವಿರುತ್ತಾನೆ. ಜ್ಞಾನಹೀನನಾದರೋ ಸೊಕ್ಕಿನಿಂದ ಯೋಚಿಸದೆ ಕಾರ್ಯಗಳನ್ನು ಮಾಡುತ್ತಾನೆ.

17 ಮುಂಗೋಪಿಯು ಮೂಢಕಾರ್ಯಗಳನ್ನು ಮಾಡುವನು. ಕುತಂತ್ರಿಗಳನ್ನು ಜನರು ದ್ವೇಷಿಸುವರು.

18 ದಡ್ಡರಿಗೆ ಮೂಢತನವೇ ಪ್ರತಿಫಲ. ಜಾಣರಾದರೋ ಜ್ಞಾನವೆಂಬ ಕಿರೀಟವನ್ನು ಹೊಂದುವರು.

19 ಕೊನೆಯಲ್ಲಿ ಕೆಟ್ಟವರ ಮೇಲೆ ಒಳ್ಳೆಯವರು ಜಯಗಳಿಸುವರು. ಕೆಟ್ಟವರು ಬಲವಂತದಿಂದ ಒಳ್ಳೆಯವರ ಮುಂದೆ ತಲೆಬಾಗುವರು.

20 ಬಡವನು ತನ್ನ ನೆರೆಯವನಿಂದಲೂ ತಿರಸ್ಕರಿಸಲ್ಪಡುವನು. ಐಶ್ವರ್ಯವಂತನಿಗಾದರೋ ಅನೇಕ ಮಂದಿ ಸ್ನೇಹಿತರು.

21 ನೆರೆಯವರನ್ನು ತಿರಸ್ಕರಿಸುವುದು ತಪ್ಪು. ನೀವು ಸಂತೋಷದಿಂದ ಇರಬೇಕಾದರೆ ಬಡವರಿಗೆ ದಯೆತೋರಿಸಿ.

22 ದುರ್ಮಾರ್ಗಿಯು ದಾರಿ ತಪ್ಪುವನು. ಒಳ್ಳೆಯದನ್ನು ಮಾಡಲು ಪ್ರಯತ್ನಿಸುವವನು ಪ್ರೀತಿಗೂ ಭರವಸೆಗೂ ಪಾತ್ರನಾಗುವನು.

23 ಕಷ್ಟಪಟ್ಟು ದುಡಿದರೆ, ಸಮೃದ್ಧಿಯಿರುವುದು. ಕೇವಲ ಮಾತಾಡಿದರೆ ಬಡತನ ಬರುವುದು.

24 ಜ್ಞಾನಿಗಳಿಗೆ ದೊರೆಯುವ ಪ್ರತಿಫಲ ಐಶ್ವರ್ಯ. ಜ್ಞಾನಹೀನರಿಗೆ ದೊರೆಯುವ ಪ್ರತಿಫಲ ಮೂಢತನ.

25 ಸತ್ಯವನ್ನಾಡುವವನು ಬೇರೆಯವರಿಗೆ ಸಹಾಯಿಸುತ್ತಾನೆ. ಸುಳ್ಳುಗಾರನಾದರೋ ಮತ್ತೊಬ್ಬನಿಗೆ ನೋವನ್ನುಂಟು ಮಾಡುತ್ತಾನೆ.

26 ಯೆಹೋವನಲ್ಲಿ ಭಯಭಕ್ತಿಯುಳ್ಳವನು ಕ್ಷೇಮವಾಗಿರುವನು; ಅವನ ಮಕ್ಕಳು ಸಹ ಕ್ಷೇಮವಾಗಿರುವರು.

27 ಯೆಹೋವನಲ್ಲಿರುವ ಭಯಭಕ್ತಿ ಜೀವದ ಬುಗ್ಗೆ. ಅದು ಮನುಷ್ಯನನ್ನು ಮರಣದ ಬಲೆಯಿಂದ ಕಾಪಾಡುತ್ತದೆ.

28 ಅಧಿಕ ಜನಸಂಖ್ಯೆಯು ರಾಜನಿಗೆ ಗೌರವ. ಪ್ರಜೆಗಳೇ ಇಲ್ಲದಿದ್ದರೆ ರಾಜನಿಗೆ ಬೆಲೆಯೇ ಇಲ್ಲ.

29 ತಾಳ್ಮೆಯುಳ್ಳವನು ತುಂಬಾ ಜಾಣ. ಮುಂಗೋಪಿಯು ತಾನು ಮೂಢ ಎಂಬುದನ್ನು ತೋರಿಸಿಕೊಳ್ಳುತ್ತಾನೆ.

30 ಮನಶ್ಯಾಂತಿಯುಳ್ಳವನ ದೇಹವು ಆರೋಗ್ಯದಿಂದಿರುವುದು. ಹೊಟ್ಟೆಕಿಚ್ಚು ದೇಹಕ್ಕೆ ಕಾಯಿಲೆಯನ್ನು ಬರಮಾಡುವುದು.

31 ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನಿಗೇ ಅವಮಾನ ಮಾಡುತ್ತಾನೆ. ಬಡವರಿಗೆ ಕರುಣೆ ತೋರುವವನು ತನ್ನ ಸೃಷ್ಟಿಕರ್ತನನ್ನೇ ಸನ್ಮಾನಿಸುತ್ತಾನೆ.

32 ದುಷ್ಟನು ತನ್ನ ಕೆಡುಕಿನಿಂದಲೇ ಸೋತುಹೋಗುವನು; ಆದರೆ ಒಳ್ಳೆಯವನು ಮರಣದ ಸಮಯದಲ್ಲೂ ಜಯಶಾಲಿಯಾಗುವನು.

33 ವಿವೇಕಿಯು ಯಾವಾಗಲೂ ಜ್ಞಾನದ ಕಾರ್ಯಗಳನ್ನು ಆಲೋಚಿಸುವನು. ಮೂಢನಿಗಾದರೋ ಜ್ಞಾನದ ಬಗ್ಗೆ ಏನೂ ತಿಳಿಯದು.

34 ಒಳ್ಳೆತನವು ದೇಶದ ಏಳಿಗೆಗೆ ಕಾರಣ. ಪಾಪವು ದೇಶಕ್ಕೆ ಅವಮಾನಕರ.

35 ಬುದ್ಧಿವಂತ ನಾಯಕನನ್ನು ಹೊಂದಿರುವ ರಾಜನು ಸಂತೋಷವಾಗಿರುವನು. ಅಯೋಗ್ಯನಾದ ಸೇವಕನ ಮೇಲೆ ರಾಜನು ಕೋಪಗೊಳ್ಳುವನು.

ಫಿಲಿಪ್ಪಿಯವರಿಗೆ 1

ಯೇಸು ಕ್ರಿಸ್ತನ ದಾಸರಾದ ಪೌಲನು ತಿಮೊಥೆಯನು ಫಿಲಿಪ್ಪಿಯವರಿಗೆ ಬರೆಯುವ ಪತ್ರ. ಯೇಸು ಕ್ರಿಸ್ತನ ಮೂಲಕ ದೇವರ ಪರಿಶುದ್ಧ ಜನರಾಗಿರುವವರಿಗೂ ಎಲ್ಲಾ ಹಿರಿಯರಿಗೂ ಸಭಾಸೇವಕರಿಗೂ ನಾವು ಈ ಪತ್ರವನ್ನು ಬರೆಯತ್ತಿದ್ದೇವೆ.

ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ.

ಪೌಲನ ಪ್ರಾರ್ಥನೆ

ನಾನು ನಿಮ್ಮನ್ನು ಜ್ಞಾಪಿಸಿಕೊಂಡಾಗಲೆಲ್ಲಾ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನಾನು ನಿಮ್ಮೆಲ್ಲರಿಗಾಗಿ ಯಾವಾಗಲೂ ಆನಂದದಿಂದ ಪ್ರಾರ್ಥಿಸುತ್ತೇನೆ. ನನ್ನ ಸುವಾರ್ತಾಸೇವೆಯಲ್ಲಿ ನೀವು ಪಾಲುಗಾರರಾದ ಕಾರಣ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನೀವು ನಂಬಿಕೊಂಡಂದಿನಿಂದ ಇಲ್ಲಿಯವರೆಗೂ ನನಗೆ ಸಹಾಯ ಮಾಡಿದಿರಿ. ದೇವರು ನಿಮ್ಮಲ್ಲಿ ಒಳ್ಳೆಯ ಕಾರ್ಯವನ್ನು ಆರಂಭಿಸಿ ನಡೆಸಿಕೊಂಡು ಬರುತ್ತಿದ್ದಾನೆ. ಯೇಸು ಕ್ರಿಸ್ತನು ಮತ್ತೆ ಬಂದಾಗ ದೇವರು ಆ ಕಾರ್ಯವನ್ನು ಸಂಪೂರ್ಣಗೊಳಿಸುವನೆಂದು ನನಗೆ ಭರವಸೆ ಇದೆ.

ನಿಮ್ಮೆಲ್ಲರ ವಿಷಯದಲ್ಲಿ ಈ ರೀತಿ ಆಲೋಚಿಸುವುದು ನ್ಯಾಯಬದ್ಧವಾದದ್ದೆಂದು ನನಗೆ ಗೊತ್ತಿದೆ. ನೀವು ನನ್ನ ಹೃದಯದಲ್ಲಿರುವುದರಿಂದ, ನಾನು ನಿಮಗೆ ತುಂಬ ಸಮೀಪಸ್ಥನಾಗಿದ್ದೇನೆಂದು ಭಾವಿಸುತ್ತೇನೆ. ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾದ ಕಾರಣ ನೀವು ನನಗೆ ಸಮೀಪರಾಗಿದ್ದೀರಿ. ನಾನು ಸೆರೆಯಲ್ಲಿರುವಾಗಲೂ ಸುವಾರ್ತೆಯನ್ನು ಪ್ರತಿಪಾದಿಸುವಾಗಲೂ ನಿರೂಪಿಸುವಾಗಲೂ ನೀವು ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರಿ. ನಾನು ನಿಮ್ಮನ್ನು ನೋಡಲು ಬಹು ತವಕಪಡುತ್ತಿದ್ದೇನೆಂಬುದು ದೇವರಿಗೆ ಗೊತ್ತಿದೆ. ಯೇಸು ಕ್ರಿಸ್ತನಿಂದ ತೋರಿಬಂದ ಪ್ರೀತಿಯಿಂದ ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ.

ನಿಮಗಾಗಿ ನಾನು ಪ್ರಾರ್ಥಿಸುವುದೇನೆಂದರೆ:

ನೀವು ಪ್ರೀತಿಯಲ್ಲಿ ವೃದ್ಧಿಯಾಗುತ್ತಾ ಜ್ಞಾನವಂತರೂ ತಿಳುವಳಿಕೆಯುಳ್ಳವರೂ ಆಗಬೇಕು. 10 ಒಳಿತುಕೆಡಕುಗಳಿಗಿರುವ ವ್ಯತ್ಯಾಸವನ್ನು ಅರಿತುಕೊಂಡು ಒಳ್ಳೆಯದನ್ನೇ ಆರಿಸಿಕೊಳ್ಳುವಂಥವರಾಗಬೇಕು; ಕ್ರಿಸ್ತನ ಬರುವಿಕೆಯಲ್ಲಿ ನೀವು ಪರಿಶುದ್ಧರಾಗಿಯೂ ನಿರ್ದೋಷಿಗಳಾಗಿಯೂ ಇರಬೇಕು. 11 ಕ್ರಿಸ್ತನ ಸಹಾಯದಿಂದ ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಉಂಟುಮಾಡುವುದಕ್ಕಾಗಿ ನೀವು ಅನೇಕ ಕಾರ್ಯಗಳನ್ನು ಮಾಡುವಂಥವರಾಗಬೇಕು.

ಪೌಲನ ಕಷ್ಟಗಳು ಸುವಾರ್ತಾ ಸೇವೆಗೆ ಸಹಾಯಕವಾಗಿವೆ

12 ಸಹೋದರ ಸಹೋದರಿಯರೇ, ನನಗೆ ಸಂಭವಿಸಿದ ಕಷ್ಟಗಳು ಸುವಾರ್ತೆಯನ್ನು ಹಬ್ಬಿಸಲು ಸಹಾಯಕವಾದವೆಂದು ನಿಮಗೆ ತಿಳಿದಿರಬೇಕೆಂಬುದಾಗಿ ಅಪೇಕ್ಷಿಸುತ್ತೇನೆ. 13 ನಾನು ಏಕೆ ಸೆರೆಮನೆಯಲ್ಲಿದ್ದೇನೆಂಬುದು ಸ್ಪಷ್ಟವಾಗಿಯೇ ಇದೆ. ನಾನು ಕ್ರಿಸ್ತ ವಿಶ್ವಾಸಿಯಾಗಿರುವುದರಿಂದ ಸೆರೆಮನೆಯಲ್ಲಿದ್ದೇನೆ. ಇಲ್ಲಿಯ ಕಾವಲುಗಾರರಿಗೂ ಅರಮನೆಯ ಇತರ ಜನರೆಲ್ಲರಿಗೂ ಇದು ಗೊತ್ತಿದೆ. 14 ನಾನಿನ್ನೂ ಸೆರೆಮನೆಯಲ್ಲಿದ್ದೇನೆ. ಆದರೆ ನನ್ನ ಈ ಸ್ಥಿತಿಯಿಂದ ಅನೇಕ ವಿಶ್ವಾಸಿಗಳು ಪ್ರೋತ್ಸಾಹಿತರಾಗಿ ಕ್ರಿಸ್ತನ ವಿಷಯವಾದ ಸಂದೇಶವನ್ನು ಮತ್ತಷ್ಟು ಧೈರ್ಯದಿಂದ ಜನರಿಗೆ ಹೇಳುತ್ತಿದ್ದಾರೆ.

15 ಕೆಲವರು ತಮ್ಮಲ್ಲಿರುವ ಅಸೂಯೆಯಿಂದಲೂ ವೈಮನಸ್ಸಿನಿಂದಲೂ ಇನ್ನು ಕೆಲವರು ಸಹಾಯ ಮಾಡಬೇಕೆಂಬ ಉದ್ದೇಶದಿಂದಲೂ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ. 16 ಇವರು ತಮ್ಮಲ್ಲಿ ಪ್ರೀತಿಯಿರುವುದರಿಂದಲೇ ಜನರಿಗೆ ಬೋಧಿಸುತ್ತಾರೆ. ಸುವಾರ್ತೆಯನ್ನು ಪ್ರತಿಪಾದಿಸುವ ಕೆಲಸವನ್ನು ದೇವರು ನನಗೆ ಕೊಟ್ಟನೆಂಬುದು ಇವರಿಗೆ ಗೊತ್ತಿದೆ. 17 ಬೇರೆ ಕೆಲವರು ತಮ್ಮ ಸ್ವಾರ್ಥದ ದೆಸೆಯಿಂದ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ. ಅವರ ಸುವಾರ್ತಾಸೇವೆಯ ಉದ್ದೇಶವೇ ತಪ್ಪಾಗಿದೆ. ಸೆರೆಯಲ್ಲಿರುವ ನನಗೆ ತೊಂದರೆ ಮಾಡಬೇಕೆಂಬುದೇ ಅವರ ಅಪೇಕ್ಷೆ. 18 ಅವರು ನನಗೆ ತೊಂದರೆ ಮಾಡಿದರೂ ನಾನು ಚಿಂತಿಸುವುದಿಲ್ಲ. ಅವರ ಉದ್ದೇಶವು ಯಥಾರ್ಥವಾಗಿದ್ದರೂ ಯಥಾರ್ಥವಾಗಿಲ್ಲದಿದ್ದರೂ ನನಗದು ಮುಖ್ಯವಲ್ಲ.

ಅವರು ಕ್ರಿಸ್ತನ ವಿಷಯವಾಗಿ ಜನರಿಗೆ ಬೋಧಿಸುತ್ತಿರುವುದರಿಂದ ನಾನು ಉಲ್ಲಾಸಿಸುತ್ತೇನೆ, ಇನ್ನು ಮುಂದೆಯೂ ಉಲ್ಲಾಸಿಸುತ್ತೇನೆ. 19 ನೀವು ನನಗೋಸ್ಕರ ಪ್ರಾರ್ಥಿಸುತ್ತಿದ್ದೀರಿ ಮತ್ತು ಯೇಸು ಕ್ರಿಸ್ತನ ಆತ್ಮನು ನನಗೆ ಸಹಾಯ ಮಾಡುತ್ತಿದ್ದಾನೆ. ಆದ್ದರಿಂದ ನನ್ನ ಈ ಕಷ್ಟವು ನನಗೆ ರಕ್ಷಣೆಯನ್ನು ಉಂಟು ಮಾಡುವುದೆಂದು ನನಗೆ ಗೊತ್ತಿದೆ. 20 ನಾನು ಯಾವ ವಿಷಯದಲ್ಲಿಯೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ಧೈರ್ಯದಿಂದ ಇದ್ದೇನೆ. ನಾನು ಬದುಕಿದರೂ ಸರಿ, ಸತ್ತರೂ ಸರಿ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆ ಉಂಟಾಗಬೇಕೆಂಬುದೇ ನನ್ನ ಅಭಿಲಾಷೆ ಮತ್ತು ನಿರೀಕ್ಷೆ. 21 ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದೆಂದರೆ ಲಾಭವೇ. 22 ನಾನು ಜೀವದಿಂದಿದ್ದರೆ ಫಲಫಲಿಸುವ ಕೆಲಸ ನನಗಿರುತ್ತದೆ. ಆದರೆ ನಾನು ಸಾಯಬೇಕೇ? ಅಥವಾ ಬದುಕಬೇಕೇ? ಏನನ್ನು ಆರಿಸಿಕೊಳ್ಳಬೇಕೋ ನನಗೆ ಗೊತ್ತಿಲ್ಲ. 23 ಇವೆರಡರಲ್ಲಿ ಯಾವುದನ್ನು ಆರಿಸಿಕೊಳ್ಳಬೇಕೆಂಬುದೇ ಕಷ್ಟ. ನಾನು ಈ ಜೀವಿತವನ್ನು ಬಿಟ್ಟು ಆತನೊಂದಿಗಿರಲು ಅಪೇಕ್ಷಿಸುತ್ತೇನೆ. ಅದೇ ಉತ್ತಮವಾದದ್ದು. 24 ಆದರೆ ನಾನಿಲ್ಲಿ ಇಹಲೋಕದ ಶರೀರದಲ್ಲಿರುವುದು ನಿಮಗೆ ಅಗತ್ಯವಾಗಿದೆ. 25 ಆದ್ದರಿಂದ ನಾನು ಜೀವದಿಂದುಳಿದು ನಿಮ್ಮೊಂದಿಗೆ ಇರುತ್ತೇನೆಂದು ನನಗೆ ಗೊತ್ತಿದೆ. ನೀವು ನಂಬಿಕೆಯಲ್ಲಿ ವೃದ್ಧಿಯಾಗಿರಲು ಆನಂದವಾಗಿರಲು ನಿಮಗೆ ನೆರವಾಗಬೇಕೆಂತಲೂ 26 ನಾನು ಮತ್ತೆ ನಿಮ್ಮೊಂದಿಗಿರುವಾಗ ನೀವು ಕ್ರಿಸ್ತಯೇಸುವಿನಲ್ಲಿ ನನ್ನ ವಿಷಯವಾಗಿ ಹೆಮ್ಮೆಪಡಲು ಮತ್ತಷ್ಟು ಕಾರಣಗಳಿರುತ್ತವೆ.

27 ಅದೇನೇ ಇರಲಿ, ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ಬಾಳಿರಿ. ಆಗ ನಾನು ನಿಮ್ಮ ಬಳಿಗೆ ಬಂದರೂ ಸರಿ, ನಿಮ್ಮಿಂದ ದೂರದಲ್ಲಿದ್ದರೂ ಸರಿ, ನಿಮ್ಮ ವಿಷಯದಲ್ಲಿ ಒಳ್ಳೆಯ ಸಂಗತಿಗಳನ್ನು ಕೇಳುತ್ತೇನೆ. ನೀವು ಒಂದೇ ಉದ್ದೇಶದಿಂದ ದೃಢವಾಗಿದ್ದೀರೆಂದೂ ಸುವಾರ್ತೆಯಿಂದ ಉಂಟಾದ ನಂಬಿಕೆಗೋಸ್ಕರ ಏಕಮನಸ್ಸಿನಿಂದ ಕೆಲಸ ಮಾಡುತ್ತಿದ್ದೀರೆಂದೂ ಕೇಳುತ್ತಲೇ ಇರುತ್ತೇನೆ. 28 ಅಲ್ಲದೆ ನಿಮ್ಮನ್ನು ವಿರೋಧಿಸುವ ಜನರಿಗೆ ನೀವು ಹೆದರಿಕೊಳ್ಳುವುದಿಲ್ಲ. ನಿಮ್ಮ ರಕ್ಷಣೆಗೂ ನಿಮ್ಮ ವೈರಿಗಳ ನಾಶಕ್ಕೂ ಇವುಗಳು ದೇವರಿಂದಾದ ಪ್ರಮಾಣಗಳಾಗಿವೆ. 29 ನೀವು ಕ್ರಿಸ್ತನಲ್ಲಿ ನಂಬಿಕೆಯಿಟ್ಟದ್ದು ದೇವರ ಅನುಗ್ರಹದಿಂದಲೇ. ಅಷ್ಟು ಮಾತ್ರವೇ ಅಲ್ಲ, ಕ್ರಿಸ್ತನಿಗೋಸ್ಕರ ಕಷ್ಟಪಡುವುದೂ ಸಹ ನಿಮಗೆ ಅನುಗ್ರಹವಾಗಿ ದೊರೆಯಿತು. ಇವೆರಡೂ ಕ್ರಿಸ್ತನಿಗೆ ಮಹಿಮೆಯನ್ನು ಉಂಟುಮಾಡುತ್ತವೆ. 30 ನಾನು ನಿಮ್ಮ ಮಧ್ಯದಲ್ಲಿದ್ದಾಗ ಸುವಾರ್ತೆಗೆ ವಿರುದ್ಧವಾಗಿದ್ದ ಜನರೊಂದಿಗೆ ಮಾಡಿದ ಹೋರಾಟವನ್ನು ನೋಡಿದ್ದೀರಿ. ಈಗಲೂ ನನಗಿರುವ ಹೋರಾಟದ ಬಗ್ಗೆ ಕೇಳುತ್ತಿದ್ದೀರಿ. ಸ್ವತಃ ನೀವೇ ಈ ರೀತಿಯ ಹೋರಾಟವನ್ನು ಹೊಂದಿದ್ದೀರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International