Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 37

ಒಡಂಬಡಿಕೆ ಪೆಟ್ಟಿಗೆ

37 ಬೆಚಲೇಲನು ಜಾಲೀಮರದಿಂದ ಪವಿತ್ರ ಪೆಟ್ಟಿಗೆಯನ್ನು ಮಾಡಿದನು. ಪೆಟ್ಟಿಗೆಯು ಎರಡೂವರೆ ಮೊಳ ಉದ್ದ ಒಂದೂವರೆ ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರವಿತ್ತು. ಪೆಟ್ಟಿಗೆಯ ಹೊರಗಿನ ಮತ್ತು ಒಳಗಿನ ಭಾಗವನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. ಬಳಿಕ ಪೆಟ್ಟಿಗೆಯ ಸುತ್ತಲೂ ಚಿನ್ನದ ಗೋಟು ಕಟ್ಟಿಸಿದನು. ಅವನು ಚಿನ್ನದ ನಾಲ್ಕು ಬಳೆಗಳನ್ನು ಮಾಡಿಸಿ ಪೆಟ್ಟಿಗೆಯ ನಾಲ್ಕು ಮೂಲೆಗಳಲ್ಲಿ ಇರಿಸಿದನು. ಈ ಬಳೆಗಳು ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಉಪಯೋಗಿಸಲ್ಪಡುತ್ತಿದ್ದವು. ಪ್ರತಿಯೊಂದು ಬದಿಯಲ್ಲೂ ಎರಡು ಬಳೆಗಳಿದ್ದವು. ಬಳಿಕ ಪೆಟ್ಟಿಗೆಯನ್ನು ಹೊರುವುದಕ್ಕಾಗಿ ಕೋಲುಗಳನ್ನು ಜಾಲೀಮರದಿಂದ ಮಾಡಿಸಿದನು. ಅದನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. ಪೆಟ್ಟಿಗೆಯ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಅವನು ಕೋಲುಗಳನ್ನು ಸೇರಿಸಿದನು. ಬಳಿಕ ಅವನು ಅಪ್ಪಟ ಬಂಗಾರದ ಕೃಪಾಸನವನ್ನು ಮಾಡಿಸಿದನು. ಅದು ಎರಡೂವರೆ ಮೊಳ ಉದ್ದ ಮತ್ತು ಒಂದೂವರೆ ಮೊಳ ಅಗಲ ಇತ್ತು. ಬಳಿಕ ಬೆಚಲೇಲನು ಬಂಗಾರವನ್ನು ಸುತ್ತಿಗೆಯಿಂದ ಕೆತ್ತಿ ಎರಡು ಕೆರೂಬಿಗಳ ಆಕಾರಗಳನ್ನು ಮಾಡಿದನು. ಅವನು ಕೆರೂಬಿದೂತರನ್ನು ಕೃಪಾಸನದ ಕೊನೆಗಳಲ್ಲಿ ಇಟ್ಟನು. ಒಂದು ಕೆರೂಬಿಯನ್ನು ಕೃಪಾಸನದ ಒಂದು ಕೊನೆಯಲ್ಲೂ ಇನ್ನೊಂದನ್ನು ಮತ್ತೊಂದು ಕೊನೆಯಲ್ಲೂ ಇಟ್ಟನು. ಅವುಗಳನ್ನು ಒಟ್ಟಾಗಿ ಕೃಪಾಸನಕ್ಕೆ ಜೋಡಿಸಿ ಒಂದೇ ವಸ್ತುವನ್ನಾಗಿ ಮಾಡಿದನು. ಕೆರೂಬಿಗಳ ರೆಕ್ಕೆಗಳು ಆಕಾಶದ ಕಡೆಗೆ ಚಾಚಿದ್ದವು. ಅವುಗಳು ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚಿದ್ದವು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿದ್ದವು.

ವಿಶೇಷ ಮೇಜು

10 ತರುವಾಯ, ಅವನು ಜಾಲೀಮರದಿಂದ ಮೇಜನ್ನು ಮಾಡಿದನು. ಮೇಜು ಎರಡು ಮೊಳ ಉದ್ದ, ಒಂದು ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರ ಇತ್ತು. 11 ಅವನು ಮೇಜನ್ನು ಅಪ್ಪಟ ಬಂಗಾರದಿಂದ ಹೊದಿಸಿದನು; ಮೇಜಿನ ಸುತ್ತಲೂ ಚಿನ್ನದ ಗೋಟನ್ನು ಕಟ್ಟಿಸಿದನು. 12 ಬಳಿಕ ಅವನು ಮೇಜಿನ ಸುತ್ತಲೂ ಮೂರು ಇಂಚು ಅಗಲದ ಚೌಕಟ್ಟನ್ನು ಮಾಡಿದನು; ಆ ಚೌಕಟ್ಟಿಗೆ ಚಿನ್ನದ ಗೋಟನ್ನು ಕಟ್ಟಿಸಿದನು. 13 ಬಳಿಕ ಅವನು ನಾಲ್ಕು ಚಿನ್ನದ ಬಳೆಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿರುವ ನಾಲ್ಕು ಮೂಲೆಗಳಲ್ಲಿ ಅವುಗಳನ್ನು ಇರಿಸಿದನು. 14 ಅವನು ಬಳೆಗಳನ್ನು ಮೇಜಿನ ತುದಿಯಲ್ಲಿರುವ ಚೌಕಟ್ಟಿಗೆ ಹತ್ತಿರವಾಗಿ ಇರಿಸಿದನು. ಕೋಲುಗಳಿಂದ ಮೇಜನ್ನು ಹೊರುವುದಕ್ಕಾಗಿ ಈ ಬಳೆಗಳು ಇದ್ದವು. 15 ಬಳಿಕ ಮೇಜನ್ನು ಹೊರುವುದಕ್ಕಾಗಿ ಉಪಯೋಗಿಸಲ್ಪಡುತ್ತಿದ್ದ ಕೋಲುಗಳನ್ನು ಜಾಲೀಮರದಿಂದ ಮಾಡಿದನು. ಕೋಲುಗಳನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. 16 ಬಳಿಕ ಅವನು ಮೇಜಿನಲ್ಲಿ ಉಪಯೋಗಿಸಲ್ಪಡುತ್ತಿದ್ದ ಎಲ್ಲಾ ವಸ್ತುಗಳನ್ನು ಮಾಡಿದನು. ಅವನು ಅಪ್ಪಟ ಬಂಗಾರದ ತಟ್ಟೆ, ಚಮಚ, ಬೋಗುಣಿ ಮತ್ತು ಹೂಜೆಗಳನ್ನು ಮಾಡಿದನು. ಬೋಗುಣಿ ಮತ್ತು ಹೂಜೆಗಳು ಪಾನದ್ರವ್ಯ ಸಮರ್ಪಣೆಗಳನ್ನು ಅರ್ಪಿಸುವುದಕ್ಕೆ ಉಪಯುಕ್ತವಾಗಿದ್ದವು.

ದೀಪಸ್ತಂಭ

17 ಬಳಿಕ ಅವನು ದೀಪಸ್ತಂಭವನ್ನು ಮಾಡಿದನು. ಅವನು ಅಪ್ಪಟ ಬಂಗಾರದಿಂದ ಕಂಬವನ್ನು ಮಾಡಿದನು. ತರುವಾಯ ಹೂವು, ಮೊಗ್ಗು ಮತ್ತು ದಳಗಳನ್ನು ಮಾಡಿ ಜೋಡಿಸಿದನು. ಹೀಗೆ ಅವು ಪುಷ್ಪಾಲಂಕಾರವಾದ ಒಂದೇ ವಸ್ತುವಾಯಿತು. 18 ದೀಪಸ್ತಂಭಕ್ಕೆ ಆರು ಕೊಂಬೆಗಳಿದ್ದವು. ಮೂರು ಕೊಂಬೆಗಳು ಒಂದು ಕಡೆಯಲ್ಲೂ ಇನ್ನು ಮೂರು ಕೊಂಬೆಗಳು ಇನ್ನೊಂದು ಕಡೆಯಲ್ಲಿಯೂ ಇದ್ದವು. 19 ಪ್ರತಿಯೊಂದು ಕೊಂಬೆಗಳಲ್ಲಿ ಮೂರುಮೂರು ಹೂವುಗಳಿದ್ದವು. ಈ ಹೂವುಗಳು ಮೊಗ್ಗು, ದಳಗಳಿಂದ ಕೂಡಿದ ಬಾದಾಮಿಹೂವುಗಳಂತೆ ಮಾಡಲ್ಪಟ್ಟವು. 20 ದೀಪಸ್ತಂಭದ ಕಂಬದಲ್ಲಿ ಇನ್ನೂ ನಾಲ್ಕು ಹೂವುಗಳಿದ್ದವು. ಅವುಗಳು ಸಹ ಮೊಗ್ಗು, ದಳಗಳಿಂದ ಕೂಡಿದ ಬಾದಾಮಿಯ ಹೂವುಗಳಂತೆ ಮಾಡಲ್ಪಟ್ಟವು. 21 ಕಂಬದ ಪ್ರತಿಯೊಂದು ಕಡೆಯಲ್ಲಿ ಮೂರುಮೂರು ಕೊಂಬೆಗಳಂತೆ ಆರು ಕೊಂಬೆಗಳಿದ್ದವು. ಕೊಂಬೆಗಳು ಕವಲೊಡೆದಿರುವ ಮೂರು ಸ್ಥಳಗಳಲ್ಲೂ ಒಂದೊಂದು ಹೂವು ಇತ್ತು. ಆ ಹೂವಿಗೆ ಮೊಗ್ಗುಗಳು ಮತ್ತು ದಳಗಳು ಇದ್ದವು. 22 ಹೂವು ಮತ್ತು ಕೊಂಬೆಗಳಿಂದ ಕೂಡಿದ ಇಡೀ ದೀಪಸ್ತಂಭವು ಅಪ್ಪಟ ಬಂಗಾರದಿಂದ ಅಖಂಡವಾಗಿ ಮಾಡಲ್ಪಟ್ಟಿತ್ತು. 23 ಅವನು ಈ ದೀಪಸ್ತಂಭಕ್ಕೆ ಏಳು ಹಣತೆಗಳನ್ನು ಮಾಡಿದನು; ಬಳಿಕ ಅಪ್ಪಟ ಬಂಗಾರದಿಂದ ಬತ್ತಿಗಳನ್ನು ಸರಿಪಡಿಸುವ ಕತ್ತರಿಗಳನ್ನೂ ಹರಿವಾಣಗಳನ್ನೂ ಮಾಡಿದನು. 24 ದೀಪಸ್ತಂಭವನ್ನು ಮತ್ತು ಅದರ ಉಪಕರಣಗಳನ್ನು ಮಾಡಲು ಎಪ್ಪತ್ತೈದು ಪೌಂಡು ಅಪ್ಪಟ ಬಂಗಾರವನ್ನು ಉಪಯೋಗಿಸಿದನು.

ಧೂಪವೇದಿಕೆ

25 ಅವನು ಧೂಪವೇದಿಕೆಯನ್ನು ಜಾಲೀಮರದಿಂದ ಮಾಡಿದನು. ಧೂಪವೇದಿಕೆಯು ಚೌಕವಾಗಿತ್ತು. ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲ ಮತ್ತು ಎರಡು ಮೊಳ ಎತ್ತರ ಇತ್ತು. ಧೂಪವೇದಿಕೆಯಲ್ಲಿ ನಾಲ್ಕು ಕೊಂಬುಗಳಿದ್ದವು. ಪ್ರತಿ ಮೂಲೆಯಲ್ಲಿಯೂ ಒಂದೊಂದು ಕೊಂಬುಗಳಿದ್ದವು. ಈ ಕೊಂಬುಗಳು ಒಟ್ಟಾಗಿ ಧೂಪವೇದಿಕೆಗೆ ಜೋಡಿಸಲ್ಪಟ್ಟು ಅವಿಭಾಜ್ಯವಾಗಿತ್ತು. 26 ಅವನು ಅಪ್ಪಟ ಬಂಗಾರದಿಂದ ಮೇಲ್ಭಾಗವನ್ನೂ ಎಲ್ಲಾ ಪಾರ್ಶ್ವಗಳನ್ನೂ ಕೊಂಬುಗಳನ್ನೂ ಹೊದಿಸಿದನು. ಬಳಿಕ ಅವನು ಧೂಪವೇದಿಕೆಯ ಸುತ್ತಲೂ ಚಿನ್ನದ ಗೋಟನ್ನು ಕಟ್ಟಿಸಿದನು. 27 ಅವನು ಧೂಪವೇದಿಕೆಗೆ ಎರಡು ಚಿನ್ನದ ಬಳೆಗಳನ್ನು ಮಾಡಿಸಿ ಗೋಟಿನ ಕೆಳಗೆ ವೇದಿಕೆಯ ಪ್ರತಿಯೊಂದು ಬದಿಯಲ್ಲಿ ಇರಿಸಿದನು. ಈ ಚಿನ್ನದ ಬಳೆಗಳು ವೇದಿಕೆಯನ್ನು ಕೋಲುಗಳ ಮೂಲಕ ಹೊರುವುದಕ್ಕೆ ಉಪಯುಕ್ತವಾಗಿದ್ದವು. 28 ಅವನು ಜಾಲೀಮರದಿಂದ ಕೋಲುಗಳನ್ನು ಮಾಡಿಸಿ ಚಿನ್ನದಿಂದ ಅವುಗಳನ್ನು ಹೊದಿಸಿದನು.

29 ತರುವಾಯ ಅವನು ಪವಿತ್ರವಾದ ಅಭಿಷೇಕತೈಲವನ್ನು ಮಾಡಿದನು. ಅವನು ಶುದ್ಧವಾದ ಪರಿಮಳಧೂಪವನ್ನು ಮಾಡಿದನು. ಸುಗಂಧದ್ರವ್ಯಕಾರರ ವಿದ್ಯೆಯ ಮೇರೆಗೆ ಈ ವಸ್ತುಗಳನ್ನು ಮಾಡಲಾಯಿತು.

ಯೋಹಾನ 16

16 “ಜನರು ನಿಮ್ಮ ನಂಬಿಕೆಯನ್ನು ನಾಶಮಾಡಲಾಗದಂತೆ ನಾನು ಈ ಸಂಗತಿಗಳನ್ನೆಲ್ಲಾ ನಿಮಗೆ ಹೇಳಿದ್ದೇನೆ. ಜನರು ನಿಮ್ಮನ್ನು ತಮ್ಮ ಸಭಾಮಂದಿರಗಳಿಂದ ಬಹಿಷ್ಕರಿಸುವರು. ಹೌದು, ನಿಮ್ಮನ್ನು ಕೊಂದರೆ ದೇವರ ಸೇವೆ ಮಾಡಿದಂತಾಗುವುದು ಎಂದು ಜನರು ಯೋಚಿಸುವ ಕಾಲ ಬರಲಿದೆ. ಜನರು ತಂದೆಯನ್ನು ಮತ್ತು ನನ್ನನ್ನು ತಿಳಿದಿಲ್ಲದ ಕಾರಣ ಇವುಗಳನ್ನು ಮಾಡುವರು. ಈಗ ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಹೀಗಿರಲು, ಈ ಸಂಗತಿಗಳೆಲ್ಲಾ ನೆರವೇರುವ ಕಾಲ ಬಂದಾಗ ನನ್ನ ಎಚ್ಚರಿಕೆಯ ಮಾತುಗಳನ್ನು ನೀವು ಜ್ಞಾಪಿಸಿಕೊಳ್ಳುವಿರಿ.

ಪವಿತ್ರಾತ್ಮನ ಕಾರ್ಯ

“ನಾನು ಈ ಸಂಗತಿಗಳನ್ನೆಲ್ಲಾ ನಿಮಗೆ ಆರಂಭದಲ್ಲೇ ತಿಳಿಸಲಿಲ್ಲ. ಏಕೆಂದರೆ, ಆಗ ನಾನು ನಿಮ್ಮ ಸಂಗಡವಿದ್ದೆನು. ಈಗಲಾದರೋ, ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹೋಗುತ್ತಿದ್ದೇನೆ. ಆದರೆ ನಿಮ್ಮಲ್ಲಿ ಒಬ್ಬರಾದರೂ, ‘ನೀನು ಎಲ್ಲಿಗೆ ಹೋಗುತ್ತಿರುವೆ?’ ಎಂದು ನನ್ನನ್ನು ಕೇಳಲಿಲ್ಲ. ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದರಿಂದ ನಿಮ್ಮ ಹೃದಯಗಳು ದುಃಖದಿಂದ ತುಂಬಿಹೋಗಿವೆ. ಆದರೆ ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ನಾನು ಹೋಗುವುದು ನಿಮ್ಮ ಒಳ್ಳೆಯದಕ್ಕಾಗಿಯೇ ಏಕೆಂದರೆ ನಾನು ಹೋಗಿ ಸಹಾಯಕನನ್ನು ನಿಮ್ಮ ಬಳಿಗೆ ಕಳುಹಿಸುವೆನು. ನಾನು ಹೋಗದಿದ್ದರೆ, ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ.

“ಸಹಾಯಕನು ಬಂದು ಪಾಪ, ನೀತಿ, ನ್ಯಾಯತೀರ್ಪು ಈ ವಿಷಯಗಳ ಬಗ್ಗೆ ಲೋಕಕ್ಕೆ ತಿಳಿಸಿಕೊಡುವನು. ನನ್ನನ್ನು ನಂಬದಿರುವುದರಿಂದ ಜನರಲ್ಲಿ ಪಾಪವಿದೆಯೆಂದು ಆ ಸಹಾಯಕನು ನಿರೂಪಿಸುವನು. 10 ನಾನು ತಂದೆಯ ಬಳಿಗೆ ಹೋಗುವುದರಿಂದ ನೀತಿಯ ವಿಷಯವಾಗಿಯೂ ಆತನು ಜನರಿಗೆ ನಿರೂಪಿಸುವನು. ಇನ್ನು ಮೇಲೆ ನೀವು ನನ್ನನ್ನು ನೋಡುವುದಿಲ್ಲ. 11 ನ್ಯಾಯತೀರ್ಪಿನ ಕುರಿತಾದ ಸತ್ಯವನ್ನು ಆ ಸಹಾಯಕನು ಈ ಲೋಕಕ್ಕೆ ಸಾಧರಪಡಿಸುವನು, ಏಕೆಂದರೆ ಈ ಲೋಕದ ಅಧಿಪತಿಗೆ ಈಗಾಗಲೇ ನ್ಯಾಯತೀರ್ಪಾಗಿದೆ.

12 “ನಾನು ನಿಮಗೆ ತಿಳಿಸಬೇಕಾದ ಇನ್ನೂ ಅನೇಕ ಸಂಗತಿಗಳಿವೆ. ಆದರೆ ಈಗ ಆ ಸಂಗತಿಗಳನ್ನು ಸ್ವೀಕರಿಸಿಕೊಳ್ಳಲು ನಿಮಗೆ ಬಹು ಕಷ್ಟವಾಗಬಹುದು. 13 ಆದರೆ ಸತ್ಯದ ಆತ್ಮನು ಬಂದಾಗ, ಆತನು ನಿಮ್ಮನ್ನು ಸಕಲ ವಿಷಯದಲ್ಲಿಯೂ ಸತ್ಯಕ್ಕೆ ನಡೆಸುವನು. ಸತ್ಯದ ಆತ್ಮನು ಹೇಳುವುದು ಆತನ ಸ್ವಂತ ಮಾತುಗಳಲ್ಲ. ತಾನು ಕೇಳಿದ್ದನ್ನು ಮಾತ್ರ ಆತನು ಹೇಳುತ್ತಾನೆ. ಸಂಭವಿಸಲಿರುವ ಸಂಗತಿಗಳನ್ನು ಆತನು ನಿಮಗೆ ತಿಳಿಸುತ್ತಾನೆ. 14 ಸತ್ಯದ ಆತ್ಮನು ನನ್ನಿಂದಲೇ ವಿಷಯಗಳನ್ನು ತೆಗೆದುಕೊಂಡು ನಿಮಗೆ ತಿಳಿಸುವುದರ ಮೂಲಕ ನನ್ನನ್ನು ಮಹಿಮೆಪಡಿಸುವನು. 15 ನನ್ನ ತಂದೆಗೆ ಇರುವುದೆಲ್ಲಾ ನನ್ನದೇ. ಆದಕಾರಣ, ಪವಿತ್ರಾತ್ಮನು ನನ್ನಿಂದಲೇ ವಿಷಯಗಳನ್ನು ತೆಗೆದುಕೊಂಡು, ನಿಮಗೆ ತಿಳಿಸುತ್ತಾನೆ ಎಂದು ನಾನು ಹೇಳಿದೆನು.

ದುಃಖವು ಸಂತೋಷವಾಗುವುದು

16 “ಸ್ವಲ್ಪಕಾಲವಾದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಅನಂತರ ಸ್ವಲ್ಪಕಾಲವಾದ ಮೇಲೆ ನೀವು ನನ್ನನ್ನು ಮತ್ತೆ ನೋಡುವಿರಿ.”

17 ಶಿಷ್ಯರಲ್ಲಿ ಕೆಲವರು, “‘ಸ್ವಲ್ಪಕಾಲದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ಪಲ್ಪಕಾಲವಾದ ಬಳಿಕ ನನ್ನನ್ನು ಮತ್ತೆ ನೋಡುವಿರಿ. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ’ ಎಂದು ಆತನು ಹೇಳಿದ್ದರ ಅರ್ಥವೇನು?” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 18 ಶಿಷ್ಯರು, “‘ಸ್ವಲ್ಪಕಾಲ’ ಎಂದರೇನು? ಆತನ ಮಾತೇ ನಮಗೆ ಅರ್ಥವಾಗುತ್ತಿಲ್ಲ” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.

19 ಶಿಷ್ಯರು ಇದರ ಬಗ್ಗೆ ತನ್ನನ್ನು ಕೇಳಬೇಕೆಂದಿದ್ದಾರೆ ಎಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು, “‘ಸ್ವಲ್ಪಕಾಲವಾದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ವಲ್ಪಕಾಲವಾದ ಬಳಿಕ ನನ್ನನ್ನು ನೋಡುವಿರಿ’ ಎಂದು ನಾನು ಹೇಳಿದ್ದರ ಅರ್ಥವೇನೆಂದು ನೀವು ಒಬ್ಬರನ್ನೊಬ್ಬರು ಕೇಳುತ್ತಿದ್ದೀರಾ? 20 ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಅಳುವಿರಿ, ದುಃಖಪಡುವಿರಿ. ಆದರೆ ಲೋಕವು ಸಂತೋಷಪಡುವುದು. ನೀವು ದುಃಖಪಡುವಿರಿ, ಆದರೆ ನಿಮ್ಮ ದುಃಖವು ಆನಂದವಾಗುವುದು.

21 “ಗರ್ಭಿಣಿ ಸ್ತ್ರೀಯು ಪ್ರಸವಿಸುವ ಗಳಿಗೆ ಬಂದಾಗ ವೇದನೆಪಡುತ್ತಾಳೆ. ಮಗುವು ಜನಿಸಿದಾಗ, ಲೋಕದಲ್ಲಿ ಮಗುವೊಂದು ಜನಿಸಿತೆಂಬ ಸಂತೋಷದಿಂದ ಆಕೆ ಆ ವೇದನೆಯನ್ನು ಮರೆತುಬಿಡುತ್ತಾಳೆ. 22 ಇದು ನಿಮಗೂ ಅನ್ವಯಿಸುತ್ತದೆ. ಈಗ ನೀವು ದುಃಖದಿಂದಿದ್ದೀರಿ. ಆದರೆ ನಾನು ನಿಮ್ಮನ್ನು ಮತ್ತೆ ನೋಡಿದಾಗ ಹರ್ಷಿಸುವಿರಿ. ಆ ಹರ್ಷವನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳಲಾರರು. 23 ಆ ದಿನದಲ್ಲಿ ನೀವು ನನಗೆ ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 24 ನೀವು ನನ್ನ ಹೆಸರಿನಲ್ಲಿ ಏನೂ ಕೇಳಿಕೊಳ್ಳಲಿಲ್ಲ. ಕೇಳಿರಿ, ಆಗ ನಿಮಗೆ ದೊರೆಯುವುದು ಮತ್ತು ನಿಮ್ಮ ಆನಂದವು ಪರಿಪೂರ್ಣವಾಗುವುದು.

ಲೋಕದ ಮೇಲೆ ವಿಜಯ

25 “ನಾನು ನಿಮಗೆ ಈ ಸಂಗತಿಗಳನ್ನು ಸಾಮ್ಯಗಳ ರೂಪದಲ್ಲಿ ತಿಳಿಸಿದೆನು. ಆದರೆ ಸಮಯವು ಬರಲಿದೆ. ಆಗ ನಾನು ಸಾಮ್ಯಗಳನ್ನು ಬಳಸದೆ ನನ್ನ ತಂದೆಯ ಬಗ್ಗೆ ಸರಳವಾದ ಮಾತುಗಳಲ್ಲಿ ತಿಳಿಸುವೆನು. 26 ಆಗ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಬೇಡಿಕೊಳ್ಳುವಿರಿ. ನಾನು ನಿಮಗೋಸ್ಕರ ತಂದೆಯನ್ನು ಕೇಳಿಕೊಳ್ಳುವ ಅಗತ್ಯವಿರುವುದಿಲ್ಲ. 27 ಹೌದು, ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ. ನೀವು ನನ್ನನ್ನು ಪ್ರೀತಿಸಿದರಿಂದ ಮತ್ತು ನಾನು ದೇವರಿಂದ ಬಂದೆನೆಂದು ನೀವು ನಂಬುವುದರಿಂದ ಆತನು ನಿಮ್ಮನ್ನು ಪ್ರೀತಿಸುತ್ತಾನೆ. 28 ನಾನು ತಂದೆಯ ಬಳಿಯಿಂದ ಈ ಲೋಕಕ್ಕೆ ಬಂದೆನು. ಈಗ ನಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹಿಂತಿರುಗಿ ಹೋಗುತ್ತಿದ್ದೇನೆ” ಎಂದು ಹೇಳಿದನು.

29 ಆಗ ಶಿಷ್ಯರು ಯೇಸುವಿಗೆ, “ಈಗ ನೀನು ನಮ್ಮೊಂದಿಗೆ ಸ್ಪಷ್ಟವಾಗಿ ಮಾತಾಡುತ್ತಿರುವೆ. ಅರ್ಥವಾಗದಂಥ ಕಠಿಣ ಮಾತುಗಳನ್ನು ನೀನು ಬಳಸುತ್ತಿಲ್ಲ. 30 ನಿನಗೆ ಎಲ್ಲಾ ಸಂಗತಿಗಳು ತಿಳಿದಿವೆಯೆಂದು ನಮಗೆ ಈಗ ತಿಳಿಯಿತು. ಒಬ್ಬನು ಪ್ರಶ್ನೆಯನ್ನು ಕೇಳುವುದಕ್ಕಿಂತ ಮೊದಲೇ ನೀನು ಅವನ ಪ್ರಶ್ನೆಗೆ ಉತ್ತರ ಕೊಡಬಲ್ಲೆ. ಇದರಿಂದಾಗಿ, ನೀನು ದೇವರಿಂದ ಬಂದವನೆಂದು ನಾವು ನಂಬುತ್ತೇವೆ” ಎಂದು ಹೇಳಿದರು.

31 ಯೇಸು, “ಹಾಗಾದರೆ ಈಗ ನೀವು ನಂಬುತ್ತೀರಾ? 32 ನನಗೆ ಕಿವಿಗೊಡಿರಿ. ನೀವು ಚದರಿಹೋಗುವ ಕಾಲ ಬರುತ್ತಿದೆ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಮನೆಗೆ ಚದರಿಹೋಗುವನು. ಆ ಸಮಯ ಈಗಲೇ ಬಂದಿದೆ. ನೀವು ನನ್ನನ್ನು ಬಿಟ್ಟು ಹೋಗುವಿರಿ. ನಾನು ಒಬ್ಬಂಟಿಗನಾಗಿರುವೆನು. ಆದರೆ ನಿಜವಾಗಿ ನಾನೆಂದಿಗೂ ಒಬ್ಬಂಟಿಗನಲ್ಲ. ಏಕೆಂದರೆ ತಂದೆಯು ನನ್ನೊಂದಿಗಿದ್ದಾನೆ.

33 “ನೀವು ನನ್ನಲ್ಲಿ ಶಾಂತಿಯನ್ನು ಹೊಂದಿದವರಾಗಿರಬೇಕೆಂದು ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಈ ಲೋಕದಲ್ಲಿ ನಿಮಗೆ ಸಂಕಟವಿದೆ. ಆದರೆ ಧೈರ್ಯದಿಂದಿರಿ! ನಾನು ಈ ಲೋಕವನ್ನು ಸೋಲಿಸಿದ್ದೇನೆ!” ಎಂದು ಹೇಳಿದನು.

ಜ್ಞಾನೋಕ್ತಿಗಳು 13

13 ಜ್ಞಾನಿಯಾದ ಮಗನು ತನ್ನ ತಂದೆಯ ಮಾತುಗಳನ್ನು ಎಚ್ಚರಿಕೆಯಿಂದ ಕೇಳುತ್ತಾನೆ. ಆದರೆ ದುರಾಭಿಮಾನಿಯು ಕೇಳುವುದಿಲ್ಲ.

ಒಳ್ಳೆಯವರು ತಮ್ಮ ಮಾತುಗಳಿಗೆ ಪ್ರತಿಫಲ ಹೊಂದುವರು. ಕೆಡುಕರು ಯಾವಾಗಲೂ ಕೆಟ್ಟದ್ದನ್ನು ಮಾಡಬಯಸುತ್ತಾರೆ.

ಎಚ್ಚರಿಕೆಯಿಂದ ಮಾತಾಡುವವನು ತನ್ನ ಜೀವವನ್ನು ಕಾಪಾಡಿಕೊಳ್ಳುವನು. ಯೋಚಿಸದೆ ಮಾತಾಡುವವನು ನಾಶವಾಗುವನು.

ಸೋಮಾರಿಯ ಆಸೆಗಳೆಲ್ಲಾ ವ್ಯರ್ಥ. ಅವನೆಂದಿಗೂ ಅವುಗಳನ್ನು ಪಡೆಯಲಾರ. ಕಷ್ಟಪಟ್ಟು ದುಡಿಯುವವನು ತನ್ನ ಆಸೆಗಳನ್ನು ಈಡೇರಿಸಿಕೊಳ್ಳುವನು.

ಶಿಷ್ಟರು ಸುಳ್ಳನ್ನು ದ್ವೇಷಿಸುತ್ತಾರೆ. ದುಷ್ಟರು ನಾಚಿಕೆಕರವಾದ ಕೆಲಸ ಮಾಡುವರು.

ನೀತಿಯು ಯಥಾರ್ಥವಂತನನ್ನು ಕಾಪಾಡುವುದು. ಕೆಡುಕತನವು ಪಾಪವನ್ನು ಪ್ರೀತಿಸುವವನನ್ನು ಸೋಲಿಸುವುದು.

ಕೆಲವರು ಐಶ್ವರ್ಯವಂತರಂತೆ ನಟಿಸುತ್ತಾರೆ, ಆದರೆ ಅವರಲ್ಲೇನೂ ಇರುವುದಿಲ್ಲ. ಕೆಲವರು ಬಡವರಂತೆ ವರ್ತಿಸುತ್ತಾರೆ. ಆದರೆ ಅವರು ನಿಜವಾಗಿಯೂ ಐಶ್ವರ್ಯವಂತರು.

ಐಶ್ವರ್ಯವಂತರು ತಮ್ಮ ಜೀವವನ್ನು ಕಾಪಾಡಿಕೊಳ್ಳಲು ಈಡುಕೊಡಬೇಕಾಗುವುದು. ಆದರೆ ಬಡವನಿಗೆ ಅಂಥಾ ಯಾವ ಬೆದರಿಕೆಗಳೂ ಇರುವುದಿಲ್ಲ.

ಶಿಷ್ಟನು ಪ್ರಕಾಶಮಾನವಾದ ಬೆಳಕಿನಂತಿರುವನು. ದುಷ್ಟನಾದರೋ ನಂದಿಹೋಗುತ್ತಿರುವ ಬೆಳಕಿನಂತಿರುವನು.

10 ದುರಾಭಿಮಾನವು ಕೇವಲ ಜಗಳಕ್ಕೆ ಕಾರಣ. ಬುದ್ಧಿವಾದವನ್ನು ಕೇಳುವವರು ವಿವೇಕಿಗಳಾಗಿದ್ದಾರೆ.

11 ಮೋಸದಿಂದ ಸಂಪಾದಿಸಿದ ಹಣವು ಕ್ಷಯಿಸಿ ಹೋಗುವುದು. ದುಡಿದು ಸಂಪಾದಿಸಿದ ಹಣ ಹೆಚ್ಚುತ್ತಾ ಹೋಗುವುದು.

12 ನಿರೀಕ್ಷೆಯು ನೆರವೇರದಿದ್ದರೆ ಹೃದಯವು ವ್ಯಸನವಾಗಿರುವುದು. ಬಯಸಿದ್ದು ನೆರವೇರಿದರೆ ಆನಂದವು ತುಂಬಿಕೊಳ್ಳುವುದು.

13 ಬುದ್ಧಿಮಾತನ್ನು ಕೇಳದವನು ತನಗೆ ತೊಂದರೆಯನ್ನು ಬರಮಾಡಿಕೊಳ್ಳುವನು. ಬುದ್ಧಿವಾದವನ್ನು ಗೌರವಿಸುವವನು ಪ್ರತಿಫಲವನ್ನು ಹೊಂದುವನು.

14 ಜ್ಞಾನಿಯ ಉಪದೇಶಗಳು ಜೀವದ ಬುಗ್ಗೆಯಾಗಿವೆ; ಮರಣಕರವಾದ ಬಲೆಗಳಿಗೆ ಸಿಕ್ಕಿಕೊಳ್ಳದಂತೆ ಅವು ಸಹಾಯಮಾಡುತ್ತವೆ.

15 ಜನರು ಜಾಣನನ್ನು ಗೌರವಿಸುತ್ತಾರೆ. ಆದರೆ ನಂಬಿಕೆಗೆ ಯೋಗ್ಯನಲ್ಲದವನು ತೊಂದರೆಗೆ ಒಳಗಾಗುವನು.

16 ಜ್ಞಾನಿಯು ವಿವೇಚಿಸಿ ಕಾರ್ಯಮಾಡುವನು; ಮೂಢನಾದರೋ ತನ್ನ ಕಾರ್ಯಗಳಿಂದಲೇ ತನ್ನ ಮೂಢತನವನ್ನು ತೋರಿಸಿಕೊಳ್ಳುತ್ತಾನೆ.

17 ಅಪನಂಬಿಗಸ್ತನಾದ ರಾಯಭಾರಿಯ ಸುತ್ತಲೂ ಕೇಡುಗಳಿವೆ. ನಂಬಿಗಸ್ತನಾದ ರಾಯಭಾರಿಗೆ ಸಮಾಧಾನವಿರುವುದು.

18 ಶಿಕ್ಷೆಯನ್ನು ಕಡೆಗಣಿಸುವವನು ಬಡವನಾಗುವನು; ಅವಮಾನ ಹೊಂದುವನು. ತಿದ್ದುಪಡಿಯನ್ನು ಸ್ವೀಕರಿಸಿಕೊಳ್ಳುವವನು ಗೌರವವನ್ನೂ ಐಶ್ವರ್ಯವನ್ನೂ ಪಡೆದುಕೊಳ್ಳುವನು.

19 ಒಬ್ಬನು ತಾನು ಅಪೇಕ್ಷಿಸಿದ್ದನ್ನು ಪಡೆದುಕೊಂಡರೆ, ಅದರ ಮೇಲೆ ಅವನಿಗೆ ಬಹಳ ಇಷ್ಟವಿರುವುದು. ಮೂಢರು ಕೇಡಿಗೆ ವಿಮುಖರಾಗಲು ಅಸಹ್ಯಪಡುತ್ತಾರೆ.

20 ಜ್ಞಾನಿಗಳೊಂದಿಗೆ ಸ್ನೇಹದಿಂದಿರಿ. ಆಗ ನೀವೂ ಜ್ಞಾನಿಗಳಾಗುವಿರಿ. ಆದರೆ ನೀವು ಜ್ಞಾನಹೀನರನ್ನು ನಿಮ್ಮ ಸ್ನೇಹಿತರನ್ನಾಗಿ ಆಯ್ದುಕೊಂಡರೆ, ನಿಮಗೆ ತೊಂದರೆ ಉಂಟಾಗುವುದು.

21 ಪಾಪಿಗಳು ಹೋದಲ್ಲೆಲ್ಲಾ ಕೇಡು ಅವರನ್ನು ಹಿಂಬಾಲಿಸುವುದು. ಸಜ್ಜನರಿಗಾದರೋ ಒಳ್ಳೆಯದೇ ಆಗುತ್ತದೆ.

22 ಒಳ್ಳೆಯವನಲ್ಲಿ ತನ್ನ ಮಕ್ಕಳಿಗೂ ಮೊಮ್ಮಕ್ಕಳಿಗೂ ಕೊಡಲು ಐಶ್ವರ್ಯವಿರುವುದು. ಕಟ್ಟಕಡೆಯಲ್ಲಿ, ಕೆಡುಕರು ಹೊಂದಿರುವದೆಲ್ಲಾ ಒಳ್ಳೆಯವರ ಪಾಲಾಗುವುದು.

23 ಬಡವನ ಭೂಮಿಯು ಯಥೇಚ್ಛವಾಗಿ ಫಲಿಸಬಹುದು. ಆದರೆ ಅನ್ಯಾಯವು ಅದನ್ನು ಕೊಚ್ಚಿಕೊಂಡು ಹೋಗುವುದು.

24 ಮಕ್ಕಳು ತಪ್ಪು ಮಾಡಿದಾಗ ಶಿಕ್ಷಿಸದ ತಂದೆಯು ಅವರಿಗೆ ಶತ್ರುವಿನಂತಿದ್ದಾನೆ. ಮಕ್ಕಳು ತಪ್ಪು ಮಾಡಿದಾಗ ಶಿಕ್ಷಿಸುವ ತಂದೆಯು ಅವರಿಗೆ ಮಿತ್ರನಂತಿದ್ದಾನೆ.

25 ಶಿಷ್ಟನು ತೃಪ್ತಿಯಾಗುವಷ್ಟು ತಿನ್ನುವನು. ಆದರೆ ದುಷ್ಟನು ಹಸಿವೆಯಿಂದಿರುವನು.

ಎಫೆಸದವರಿಗೆ 6

ಮಕ್ಕಳು ಮತ್ತು ತಂದೆತಾಯಿಗಳು

ಮಕ್ಕಳೇ, ಪ್ರಭುವಿನ ಚಿತ್ತಕ್ಕನುಸಾರವಾಗಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ. ಅದು ನ್ಯಾಯಬದ್ಧವಾದದ್ದಾಗಿದೆ. ದೇವಾಜ್ಞೆಯು ಹೇಳುವಂತೆ, “ನೀವು ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು.”(A) ಈ ಮೊದಲನೆಯ ಆಜ್ಞೆಯು ವಾಗ್ದಾನವನ್ನು ಒಳಗೊಂಡಿದೆ. ಆ ವಾಗ್ದಾನವು ಇಂತಿದೆ: “ಆಗ ನಿಮಗೆ ಒಳ್ಳೆಯದಾಗುವುದು ಮತ್ತು ನೀವು ಭೂಮಿಯ ಮೇಲೆ ಬಹುಕಾಲ ಬದುಕುವಿರಿ.”(B)

ತಂದೆಗಳೇ, ನಿಮ್ಮ ಮಕ್ಕಳನ್ನು ಸಿಟ್ಟಿಗೆಬ್ಬಿಸದೆ ಪ್ರಭುವಿನ ಉಪದೇಶದಿಂದಲೂ ಬಾಲಶಿಕ್ಷೆಯಿಂದಲೂ ಬೆಳೆಸಿರಿ.

ಸೇವಕರು ಮತ್ತು ಯಜಮಾನರು

ಸೇವಕರೇ, ನಿಮ್ಮ ಇಹಲೋಕದ ಯಜಮಾನರಿಗೆ ಭಯದಿಂದಲೂ ಗೌರವದಿಂದಲೂ ವಿಧೇಯರಾಗಿರಿ. ನೀವು ಕ್ರಿಸ್ತನಿಗೆ ವಿಧೇಯರಾಗುವಂತೆ ಯಥಾರ್ಥವಾದ ಹೃದಯದಿಂದ ವಿಧೇಯರಾಗಿರಿ. ಅವರ ಮೆಚ್ಚಿಕೆಯನ್ನು ಗಳಿಸಿಕೊಳ್ಳಬೇಕೆಂದು ಅವರು ಗಮನಿಸುತ್ತಿರುವಾಗ ಮಾತ್ರ ಸೇವೆ ಮಾಡದೆ ನೀವು ಕ್ರಿಸ್ತನಿಗೆ ವಿಧೇಯರಾಗಿರುವಂತೆ ಅವರಿಗೆ ವಿಧೇಯರಾಗಿರಬೇಕು. ದೇವರಿಗೆ ಇಷ್ಟವಾದದ್ದನ್ನು ನೀವು ಪೂರ್ಣಹೃದಯದಿಂದ ಮಾಡಬೇಕು. ನೀವು ಮಾಡತಕ್ಕ ಕೆಲಸವನ್ನು ಸಂತೋಷದಿಂದ ಮಾಡಿರಿ. ಕೇವಲ ಮನುಷ್ಯರ ಸೇವೆಯನ್ನು ಮಾಡುವವರಂತೆ ಮಾಡದೆ ಪ್ರಭುವಿನ ಸೇವೆಯನ್ನು ಮಾಡುವವರಂತೆ ಮಾಡಿರಿ. ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬನಿಗೂ ದೇವರು ಪ್ರತಿಫಲವನ್ನು ಕೊಡುತ್ತಾನೆಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ಪ್ರತಿಯೊಬ್ಬ ವ್ಯಕ್ತಿಯು ಅವನು ಸೇವಕನಾಗಿರಲಿ ಅಥವಾ ಸ್ವತಂತ್ರನಾಗಿರಲಿ ತಾನು ಮಾಡುವ ಒಳ್ಳೆಯ ಕಾರ್ಯಗಳಿಗೆ ಪ್ರತಿಫಲವನ್ನು ಹೊಂದುವನು.

ಯಜಮಾನರೇ, ಅದೇರೀತಿಯಲ್ಲಿ ನಿಮ್ಮ ಸೇವಕರಿಗೆ ಒಳ್ಳೆಯವರಾಗಿರಿ. ಅವರಿಗೆ ಹೆದರಿಕೆಯಾಗುವಂಥ ಮಾತುಗಳನ್ನಾಡಬೇಡಿ. ನಿಮಗೂ ಅವರಿಗೂ ಒಡೆಯನಾಗಿರುವಾತನು ಪರಲೋಕದಲ್ಲಿದ್ದಾನೆ ಎಂಬುದು ನಿಮಗೆ ತಿಳಿದಿದೆ. ಆತನು ಪ್ರತಿಯೊಬ್ಬನಿಗೂ ಪಕ್ಷಪಾತವಿಲ್ಲದೆ ನ್ಯಾಯತೀರಿಸುವನು.

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ

10 ಕಡೇ ಮಾತೇನೆಂದರೆ, ಪ್ರಭುವಿನಲ್ಲಿಯೂ ಆತನ ಮಹಾಶಕ್ತಿಯಲ್ಲಿಯೂ ಬಲವಾಗಿರಿ. 11 ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ಆಗ ಸೈತಾನನ ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಡಲು ನಿಮಗೆ ಸಾಧ್ಯವಾಗುವುದು. 12 ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ. 13 ಆದಕಾರಣವೇ ನೀವು ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು. ಆಗ ಯುದ್ಧದ ದಿನದಲ್ಲಿಯೂ ಹೋರಾಟವು ಸಂಪೂರ್ಣವಾಗಿ ಮುಗಿದಾದ ಮೇಲೆಯೂ ದೃಢವಾಗಿನಿಂತುಕೊಳ್ಳಲು ನಿಮಗೆ ಸಾಧ್ಯವಾಗುವುದು.

14 ಆದ್ದರಿಂದ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಎದೆಗೆ ಬಿಗಿದುಕೊಂಡು 15 ಸಮಾಧಾನದ ಸುವಾರ್ತೆಯೆಂಬ ಪಾದರಕ್ಷೆಯನ್ನು ಹಾಕಿಕೊಂಡು ದೃಢವಾಗಿ ನಿಂತುಕೊಳ್ಳಿರಿ. 16 ಅಲ್ಲದೆ ನಂಬಿಕೆಯೆಂಬ ಗುರಾಣಿಯನ್ನೂ ಹಿಡಿದುಕೊಳ್ಳಿರಿ. ಕೆಡುಕನ ಅಗ್ನಿಬಾಣಗಳನ್ನೆಲ್ಲಾ ತಡೆಯಲು ನಿಮಗೆ ಇದರಿಂದ ಸಾಧ್ಯವಾಗುವುದು. 17 ದೇವರ ರಕ್ಷಣೆಯನ್ನು ಶಿರಸ್ತ್ರಾಣವನ್ನಾಗಿ ಧರಿಸಿಕೊಳ್ಳಿರಿ. ಪವಿತ್ರಾತ್ಮನ ಖಡ್ಗವನ್ನು ಅಂದರೆ ದೇವರ ವಾಕ್ಯವನ್ನು ತೆಗೆದುಕೊಳ್ಳಿರಿ. 18 ನೀವು ಪವಿತ್ರಾತ್ಮನ ಸಹಾಯದಿಂದ ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಾ ಸಕಲವಿಧವಾದ ವಿಜ್ಞಾಪನೆಗಳನ್ನು ಮಾಡಿರಿ ಮತ್ತು ನಿಮಗೆ ಅಗತ್ಯವಾದವುಗಳಿಗಾಗಿ ಬೇಡಿಕೊಳ್ಳಿರಿ. ಇದಕ್ಕಾಗಿ ಯಾವಾಗಲೂ ಸಿದ್ಧರಾಗಿರಿ. ಪ್ರಾರ್ಥನೆಯನ್ನು ಬಿಟ್ಟುಕೊಡಬೇಡಿರಿ. ದೇವಜನರೆಲ್ಲರಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.

19 ಅಲ್ಲದೆ ನನಗಾಗಿಯೂ ಪ್ರಾರ್ಥಿಸಿರಿ. ನಾನು ಮಾತಾಡುವಾಗ ಸುವಾರ್ತೆಯ ರಹಸ್ಯಸತ್ಯವನ್ನು ನಿರ್ಭಯದಿಂದ ತಿಳಿಸಲು ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸುವಂತೆ ಪ್ರಾರ್ಥಿಸಿರಿ. 20 ಸುವಾರ್ತೆಯನ್ನು ತಿಳಿಸುವುದೇ ನನ್ನ ಕೆಲಸ. ಈಗ ಸೆರೆಮನೆಯಲ್ಲಿಯೂ ನಾನು ಆ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಯಾವ ರೀತಿ ಮಾತಾಡಬೇಕೋ ಅದೇ ರೀತಿ ನಿರ್ಭಯದಿಂದ ಮಾತಾಡಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.

ವಂದನೆಗಳು

21 ನಮ್ಮ ಪ್ರಿಯ ಸಹೋದರನಾದ ತುಖಿಕನನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ಅವನು ಪ್ರಭುವಿನ ಸೇವೆಯಲ್ಲಿ ನಂಬಿಗಸ್ತನಾದ ಸೇವಕನಾಗಿದ್ದಾನೆ. ಇಲ್ಲಿಯ ಸಂಗತಿಗಳನ್ನೆಲ್ಲಾ ಅವನು ನಿಮಗೆ ತಿಳಿಸುವನು. ನಾನು ಇಲ್ಲಿ ಹೇಗಿದ್ದೇನೆ ಮತ್ತು ಏನು ಮಾಡುತ್ತಿದ್ದೇನೆ ಎಂಬುದು ಆಗ ನಿಮಗೆ ಗೊತ್ತಾಗುವುದು. 22 ನಮ್ಮ ಸ್ಥಿತಿಗತಿಗಳು ನಿಮಗೆ ತಿಳಿದಿರಬೇಕೆಂಬುದು ನನ್ನ ಇಷ್ಟ. ಅಲ್ಲದೆ ಅವನು ನಿಮ್ಮನ್ನು ಪ್ರೋತ್ಸಾಹಿಸುವನು.

23 ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಶಾಂತಿಯೂ ನಂಬಿಕೆಯಿಂದ ಕೂಡಿದ ಪ್ರೀತಿಯೂ ಉಂಟಾಗಲಿ. 24 ನಮ್ಮ ಪ್ರಭುವಾದ ಯೇಸು ಕ್ರಿಸ್ತನನ್ನು ನಿರಂತರವಾದ ಪ್ರೀತಿಯಿಂದ ಪ್ರೀತಿಸುವ ನಿಮ್ಮೆಲ್ಲರ ಮೇಲೆ ದೇವರ ಕೃಪೆಯಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International