M’Cheyne Bible Reading Plan
36 “ಆದ್ದರಿಂದ ಬೆಚಲೇಲನೂ ಒಹೊಲೀಯಾಬನೂ ಮತ್ತು ಇತರ ಎಲ್ಲಾ ನಿಪುಣರೂ ಯೆಹೋವನು ಆಜ್ಞಾಪಿಸಿದ ಕೆಲಸವನ್ನು ಮಾಡಬೇಕು. ಈ ಪವಿತ್ರಸ್ಥಳವನ್ನು ಕಟ್ಟುವುದಕ್ಕಾಗಿ ಅವಶ್ಯವಿರುವ ಎಲ್ಲಾ ಸೂಕ್ಷ್ಮವಾದ ಕೆಲಸವನ್ನು ಮಾಡುವುದಕ್ಕೆ ಯೆಹೋವನು ಈ ಜನರಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಅನುಗ್ರಹಿಸಿದ್ದಾನೆ.”
2 ಬಳಿಕ ಮೋಶೆಯು ಬೆಚಲೇಲನನ್ನೂ ಒಹೊಲೀಯಾಬನನ್ನೂ ಮತ್ತು ಯೆಹೋವನಿಂದ ವಿಶೇಷ ಜ್ಞಾನ ಹೊಂದಿದ ಇತರ ಎಲ್ಲಾ ನಿಪುಣರನ್ನೂ ಕರೆದನು. ಕೆಲಸದಲ್ಲಿ ಸಹಾಯಮಾಡಲು ಇವರು ಬಯಸಿದ್ದರಿಂದ ಬಂದರು. 3 ಇಸ್ರೇಲರು ಕಾಣಿಕೆಗಳಾಗಿ ತಂದ ವಸ್ತುಗಳನ್ನೆಲ್ಲಾ ಮೋಶೆಯು ಅವರಿಗೆ ಕೊಟ್ಟನು. ಅವರು ದೇವರ ಪವಿತ್ರಸ್ಥಳವನ್ನು ಕಟ್ಟುವುದಕ್ಕಾಗಿ ಈ ವಸ್ತುಗಳನ್ನು ಉಪಯೋಗಿಸಿದರು. ಪ್ರತಿ ಮುಂಜಾನೆ ಜನರು ಕಾಣಿಕೆಗಳನ್ನು ತರುತ್ತಲೇ ಇದ್ದರು. 4 ಆಗ ಆ ನಿಪುಣರೆಲ್ಲಾ ತಾವು ಮಾಡುತ್ತಿದ್ದ ಪವಿತ್ರಸ್ಥಳದ ಕೆಲಸವನ್ನು ಬಿಟ್ಟು ಮೋಶೆಯೊಡನೆ ಮಾತಾಡಲು ಹೋದರು. ಅವರು, 5 “ಜನರು ಬಹಳ ಹೆಚ್ಚಾಗಿ ತಂದಿದ್ದಾರೆ! ಗುಡಾರದ ಕೆಲಸವನ್ನು ಮುಗಿಸುವುದಕ್ಕೆ ನಮಗೆ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ನಮ್ಮಲ್ಲಿ ಇವೆ!” ಎಂದು ಹೇಳಿದರು.
6 ಆಗ ಮೋಶೆಯು, “ಪವಿತ್ರಸ್ಥಳದ ಕೆಲಸಕ್ಕಾಗಿ ಯಾವ ಪುರುಷನಾಗಲಿ ಸ್ತ್ರೀಯಾಗಲಿ ಇನ್ನು ಮುಂದೆ ಯಾವುದನ್ನೂ ಕಾಣಿಕೆಯಾಗಿ ಸಿದ್ಧಮಾಡಬಾರದು” ಎಂಬ ಸಂದೇಶವನ್ನು ಪಾಳೆಯದಲ್ಲೆಲ್ಲಾ ಕಳುಹಿಸಿದನು. ಆದ್ದರಿಂದ ಜನರು ಹೆಚ್ಚಾಗಿ ಕೊಡುವುದನ್ನು ನಿಲ್ಲಿಸಬೇಕಾಯಿತು. 7 ದೇವರ ಪವಿತ್ರಸ್ಥಳವನ್ನು ಕಟ್ಟುವ ಕೆಲಸವನ್ನು ಮುಗಿಸುವುದಕ್ಕೆ ಬೇಕಾಗಿರುವುದಕ್ಕಿಂತಲೂ ಹೆಚ್ಚಾಗಿ ಜನರು ತಂದಿದ್ದರು.
ಪವಿತ್ರಗುಡಾರ
8 ತರುವಾಯ ನಿಪುಣರು ಪವಿತ್ರಗುಡಾರವನ್ನು ಮಾಡಲು ಪ್ರಾರಂಭಿಸಿದರು. ಅವರು ಶ್ರೇಷ್ಠ ನಾರುಬಟ್ಟೆಯಿಂದಲೂ ನೀಲಿ, ನೇರಳೆ, ಕೆಂಪು ದಾರಗಳಿಂದಲೂ ಹತ್ತು ಪರದೆಗಳನ್ನು ಮಾಡಿದರು. ಅವರು ಕೆರೂಬಿಗಳ ಚಿತ್ರಗಳನ್ನು ಪರದೆಗಳಲ್ಲಿ ಕಸೂತಿ ಹಾಕಿದರು. 9 ಪ್ರತಿ ಪರದೆಯೂ ಒಂದೇ ಅಳತೆಯುಳ್ಳದ್ದಾಗಿ ಇಪ್ಪತ್ತೆಂಟು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. 10 ಕೆಲಸಗಾರರು ಪರದೆಗಳನ್ನು ಒಟ್ಟಾಗಿ ಜೋಡಿಸಿ ಪರದೆಗಳ ಎರಡು ಭಾಗಗಳನ್ನಾಗಿ ಮಾಡಿದರು. ಒಂದು ಭಾಗದಲ್ಲಿ ಐದು ಪರದೆಗಳನ್ನೂ ಇನ್ನೊಂದು ಭಾಗದಲ್ಲಿ ಐದು ಪರದೆಗಳನ್ನೂ ಒಟ್ಟಾಗಿ ಜೋಡಿಸಿದರು. 11 ಬಳಿಕ ಅವರು ಒಂದು ಗುಂಪಿನ ಕೊನೆಯ ಪರದೆಯ ಅಂಚಿನಲ್ಲಿ ಕುಣಿಕೆಗಳನ್ನು ಮಾಡಲು ನೀಲಿಬಟ್ಟೆಯನ್ನು ಉಪಯೋಗಿಸಿದರು. ಇನ್ನೊಂದು ಗುಂಪಿನಲ್ಲಿದ್ದ ಕೊನೆಯ ಪರದೆಯಲ್ಲೂ ಹಾಗೆಯೇ ಮಾಡಿದರು. 12 ಒಂದು ಗುಂಪಿನ ಕೊನೆಯ ಪರದೆಯಲ್ಲೂ ಐವತ್ತು ಕುಣಿಕೆಗಳಿದ್ದವು. ಇನ್ನೊಂದು ಗುಂಪಿನ ಕೊನೆಯ ಪರದೆಯಲ್ಲೂ ಐವತ್ತು ಕುಣಿಕೆಗಳಿದ್ದವು. ಕುಣಿಕೆಗಳನ್ನು ಒಂದಕ್ಕೊಂದು ಎದುರಾಗಿ ಇರಿಸಿದರು. 13 ಬಳಿಕ ಅವರು ಐವತ್ತು ಚಿನ್ನದ ಬಳೆಗಳನ್ನು ಮಾಡಿ ಎರಡು ಪರದೆಗಳನ್ನು ಒಟ್ಟಾಗಿ ಸೇರಿಸಿದರು. ಹೀಗೆ ಪವಿತ್ರಗುಡಾರವು ಜೋಡಿಸಲ್ಪಟ್ಟು ಒಂದೇ ಗುಡಾರವಾಯಿತು.
14 ಬಳಿಕ ಕೆಲಸಗಾರರು ಪವಿತ್ರಗುಡಾರವನ್ನು ಹೊದಿಸುವುದಕ್ಕೆ ಇನ್ನೊಂದು ಗುಡಾರವನ್ನು ಮಾಡಿದರು. ಈ ಗುಡಾರವನ್ನು ಮಾಡಲು ಹನ್ನೊಂದು ಪರದೆಗಳನ್ನು ಉಪಯೋಗಿಸಿದರು. ಅವರು ಆಡುಕೂದಲಿನಿಂದ ಈ ಪರದೆಗಳನ್ನು ಮಾಡಿದರು. 15 ಈ ಎಲ್ಲಾ ಪರದೆಗಳು ಒಂದೇ ಅಳತೆಯುಳ್ಳದ್ದಾಗಿ ಮೂವತ್ತು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇದ್ದವು. 16 ಕೆಲಸಗಾರರು ಐದು ಪರದೆಗಳನ್ನು ಒಟ್ಟಾಗಿ ಸೇರಿಸಿ ಒಂದು ಭಾಗವನ್ನಾಗಿ ಮಾಡಿದರು. ಬಳಿಕ ಅವರು ಇತರ ಆರು ಪರದೆಗಳನ್ನು ಒಟ್ಟಾಗಿ ಸೇರಿಸಿ ಇನ್ನೊಂದು ಭಾಗವನ್ನಾಗಿ ಮಾಡಿದರು. 17 ಅವರು ಒಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು ಇಟ್ಟರು. ಇನ್ನೊಂದು ಭಾಗದ ಕೊನೆಯ ಪರದೆಯಲ್ಲಿಯೂ ಅದೇ ರೀತಿಯಾಗಿ ಮಾಡಿದರು. 18 ಕೆಲಸಗಾರರು ಎರಡು ಪರದೆಗಳನ್ನು ಒಟ್ಟಾಗಿ ಜೋಡಿಸಲು ಐವತ್ತು ತಾಮ್ರದ ಬಳೆಗಳನ್ನು ಮಾಡಿದರು. ಇದು ಸಮಸ್ತವನ್ನು ಒಂದೇ ಗುಡಾರವಾಗುವಂತೆ ಮಾಡಿತು. 19 ಬಳಿಕ ಅವರು ಪವಿತ್ರಗುಡಾರಕ್ಕೆ ಎರಡು ಮೇಲ್ಹೊದಿಕೆಗಳನ್ನು ಮಾಡಿದರು. ಒಂದು ಮೇಲ್ಹೊದಿಕೆಯನ್ನು ಕೆಂಪು ಬಣ್ಣದ ಕುರಿದೊಗಲುಗಳಿಂದ ಮಾಡಿದರು; ಮತ್ತೊಂದು ಮೇಲ್ಹೊದಿಕೆಯನ್ನು ಕಡಲುಹಂದಿಯ ತೊಗಲುಗಳಿಂದ ಮಾಡಿದರು.
20 ಬಳಿಕ ಕೆಲಸಗಾರರು ಪವಿತ್ರಗುಡಾರದ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿದರು. 21 ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದವಾಗಿಯೂ ಒಂದು ಮೊಳ ಅಗಲವಾಗಿಯೂ ಇತ್ತು. 22 ಎರಡು ಕಂಬಗಳಿಗೆ ಎರಡು ಅಡ್ಡಕಂಬಗಳನ್ನು ಜೋಡಿಸಿ ಚೌಕಟ್ಟನ್ನು ಮಾಡಲಾಗಿತ್ತು. ಪವಿತ್ರಗುಡಾರದ ಪ್ರತಿ ಚೌಕಟ್ಟನ್ನು ಅದೇ ರೀತಿಯಲ್ಲಿ ಮಾಡಲಾಗಿತ್ತು. 23 ಪವಿತ್ರಗುಡಾರದ ದಕ್ಷಿಣ ಭಾಗದಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು. 24 ಬಳಿಕ ಅವರು ಚೌಕಟ್ಟುಗಳಿಗೆ ನಲವತ್ತು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿದರು. ಒಂದು ನಿಲುವುಪೆಟ್ಟಿಗೆಗೆ ಒಂದರಂತೆ ಪ್ರತಿ ಚೌಕಟ್ಟಿಗೆ ಎರಡು ಗದ್ದಿಗೇಕಲ್ಲುಗಳಿದ್ದವು. 25 ಅವರು ಪವಿತ್ರಗುಡಾರದ ಇನ್ನೊಂದು ಕಡೆಯ ಉತ್ತರ ಭಾಗದಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು. 26 ಅವರು ಪ್ರತಿ ಚೌಕಟ್ಟಿಗೆ ಎರಡು ಗದ್ದಿಗೇಕಲ್ಲುಗಳಂತೆ ನಲವತ್ತು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿದರು. 27 ಅವರು ಪವಿತ್ರಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮ ಭಾಗಕ್ಕೆ ಇನ್ನೂ ಆರು ಚೌಕಟ್ಟುಗಳನ್ನು ಮಾಡಿದರು. 28 ಪವಿತ್ರಗುಡಾರದ ಹಿಂಭಾಗದಲ್ಲಿನ ಮೂಲೆಗಳಿಗೂ ಎರಡು ಚೌಕಟ್ಟುಗಳನ್ನು ಮಾಡಿದರು. 29 ಈ ಚೌಕಟ್ಟುಗಳು ಕೆಳಭಾಗಕ್ಕೆ ಒಟ್ಟಾಗಿ ಸೇರಿಸಲ್ಪಟ್ಟಿದ್ದವು; ತುದಿಯಲ್ಲಿ ಒಂದು ಬಳೆಯು ಮೂಲೆ ಚೌಕಟ್ಟುಗಳನ್ನು ಒಟ್ಟಿಗೆ ಹಿಡಿದುಕೊಂಡಿತ್ತು. ಅವರು ಎರಡೂ ಮೂಲೆಗಳಿಗೆ ಹಾಗೆಯೇ ಮಾಡಿದರು. 30 ಪವಿತ್ರಗುಡಾರದ ಪಶ್ಚಿಮ ದಿಕ್ಕಿನಲ್ಲಿ ಒಟ್ಟು ಎಂಟು ಚೌಕಟ್ಟುಗಳಿದ್ದವು. ಪ್ರತಿ ಚೌಕಟ್ಟಿಗೆ ಎರಡು ಗದ್ದಿಗೇಕಲ್ಲುಗಳಂತೆ ಹದಿನಾರು ಬೆಳ್ಳಿಯ ಗದ್ದಿಗೇಕಲ್ಲುಗಳಿದ್ದವು.
31 ಬಳಿಕ ಕೆಲಸಗಾರರು ಚೌಕಟ್ಟುಗಳಿಗೆ ಅಗುಳಿಗಳನ್ನು ಮಾಡಲು ಜಾಲೀಮರವನ್ನು ಉಪಯೋಗಿಸಿದರು. ಪವಿತ್ರಗುಡಾರದ ಮೊದಲಿನ ಕಡೆಯಲ್ಲಿ ಐದು ಅಗುಳಿಗಳೂ 32 ಇನ್ನೊಂದು ಕಡೆಯಲ್ಲಿ ಐದು ಅಗುಳಿಗಳೂ ಪವಿತ್ರಗುಡಾರದ ಹಿಂಭಾಗದಲ್ಲಿ ಅಂದರೆ ಪಶ್ಚಿಮ ಭಾಗದಲ್ಲಿ ಐದು ಅಗುಳಿಗಳೂ ಇದ್ದವು. 33 ಚೌಕಟ್ಟುಗಳನ್ನು ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೂ ಹಾದುಹೋಗುವಂತೆ ಅವರು ಮಧ್ಯದ ಅಗುಳಿಯನ್ನು ಮಾಡಿದರು. 34 ಅವರು ಈ ಚೌಕಟ್ಟುಗಳನ್ನು ಚಿನ್ನದಿಂದ ಹೊದಿಸಿದರು. ಅಗುಳಿಗಳಿಗಾಗಿ ಚಿನ್ನದ ಕೊಂಡಿಗಳನ್ನು ಮಾಡಿದರು; ಅಗುಳಿಗಳನ್ನು ಚಿನ್ನದಿಂದ ಹೊದಿಸಿದರು.
35 ಮಹಾಪವಿತ್ರಸ್ಥಳದ ದ್ವಾರಕ್ಕೆ ವಿಶೇಷ ಪರದೆಯನ್ನು ಮಾಡಲು ಅವರು ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು. ಅವರು ಕೆರೂಬಿಗಳ ಚಿತ್ರಗಳನ್ನು ಪರದೆಯಲ್ಲಿ ಕಸೂತಿ ಹಾಕಿದರು. 36 ಅವರು ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿದರು ಮತ್ತು ಕಂಬಗಳನ್ನು ಚಿನ್ನದಿಂದ ಹೊದಿಸಿದರು. ಬಳಿಕ ಅವರು ಕಂಬಗಳಿಗೆ ಚಿನ್ನದ ಕೊಂಡಿಗಳನ್ನು ಮಾಡಿದರು. ಅವರು ಕಂಬಗಳಿಗೆ ನಾಲ್ಕು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿದರು. 37 ಬಳಿಕ ಗುಡಾರದ ಬಾಗಿಲಿಗೆ ಪರದೆಯನ್ನು ಮಾಡಿದರು. ಅವರು ಈ ಪರದೆಯನ್ನು ಮಾಡಲು ನೀಲಿ, ನೇರಳೆ, ಕೆಂಪುದಾರವನ್ನು, ಶ್ರೇಷ್ಠ ನಾರುಬಟ್ಟೆಯನ್ನು ಉಪಯೋಗಿಸಿದರು ಮತ್ತು ಅವರು ಚಿತ್ರಗಳನ್ನು ಅದರಲ್ಲಿ ಹೆಣೆದರು. 38 ಬಳಿಕ ಅವರು ಐದು ಕಂಬಗಳನ್ನೂ ಬಾಗಿಲಿನ ಪರದೆಗೆ ಕೊಂಡಿಗಳನ್ನೂ ಮಾಡಿದರು. ಅವರು ಕಂಬಗಳ ತುದಿಯನ್ನು ಮತ್ತು ಪರದೆಯ ಕೋಲುಗಳನ್ನು ಚಿನ್ನದಿಂದ ಹೊದಿಸಿದರು. ಅವರು ಕಂಬಗಳಿಗೆ ಐದು ತಾಮ್ರದ ಗದ್ದಿಗೇಕಲ್ಲುಗಳನ್ನು ಮಾಡಿದರು.
ಯೇಸು ದ್ರಾಕ್ಷಿಬಳ್ಳಿಯಂತಿದ್ದಾನೆ
15 “ನಾನು ನಿಜವಾದ ದ್ರಾಕ್ಷಿಬಳ್ಳಿ. ನನ್ನ ತಂದೆ ತೋಟಗಾರನು. 2 ಫಲಕೊಡದಿರುವ ಪ್ರತಿಯೊಂದು ಕವಲನ್ನು ಆತನು ಕತ್ತರಿಸಿಹಾಕುವನು. ಫಲಕೊಡುವ ಕವಲು ಇನ್ನೂ ಹೆಚ್ಚು ಫಲಕೊಡುವಂತೆ ಅದನ್ನು ಶುದ್ಧಗೊಳಿಸುವನು. 3 ನಾನು ನಿಮಗೆ ಹೇಳಿದ ಉಪದೇಶದಿಂದ ನೀವು ಈಗಾಗಲೇ ಶುದ್ಧರಾಗಿದ್ದೀರಿ. 4 ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಯಾವ ಕವಲೂ ತನ್ನಷ್ಟಕ್ಕೆ ತಾನೇ ಫಲಕೊಡಲಾರದು. ಅದು ದ್ರಾಕ್ಷಿಬಳ್ಳಿಯಲ್ಲಿ ನೆಲೆಗೊಂಡಿರಬೇಕು. ಇದು ನಿಮಗೂ ಅನ್ವಯಿಸುತ್ತದೆ. ನೀವು ನಿಮ್ಮಷ್ಟಕ್ಕೇ ಫಲಕೊಡಲಾರಿರಿ. ನೀವು ನನ್ನಲ್ಲಿ ನೆಲೆಗೊಂಡಿರಬೇಕು.
5 “ನಾನೇ ದ್ರಾಕ್ಷಿಬಳ್ಳಿ; ನೀವೇ ಕವಲುಗಳು. ಒಬ್ಬನು ನನ್ನಲ್ಲಿ ನೆಲೆಗೊಂಡಿದ್ದರೆ ಮತ್ತು ನಾನು ಅವನಲ್ಲಿ ನೆಲೆಗೊಂಡಿದ್ದರೆ, ಆಗ ಅವನು ಹೆಚ್ಚು ಫಲಕೊಡುವನು. ಆದರೆ ಅವನು ನನ್ನನ್ನು ಬಿಟ್ಟು ಏನೂ ಮಾಡಲಾರನು. 6 ನನ್ನಲ್ಲಿ ನೆಲೆಗೊಂಡಿಲ್ಲದವನು ಹೊರಗೆ ಬಿಸಾಡಲ್ಪಟ್ಟ ಕವಲಿನಂತಿರುವನು. ಆ ಕವಲು ಸತ್ತುಹೋಗುವುದು. ಸತ್ತ ಕವಲುಗಳನ್ನು ಜನರು ಒಟ್ಟುಗೂಡಿಸಿ ಬೆಂಕಿಯೊಳಕ್ಕೆ ಎಸೆದು ಸುಟ್ಟುಹಾಕುವರು. 7 ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಕೇಳಿಕೊಳ್ಳಿರಿ, ಅದು ನಿಮಗೆ ದೊರೆಯುವುದು. 8 ನೀವು ಬಹಳ ಫಲಕೊಟ್ಟು, ನೀವೇ ನನ್ನ ಶಿಷ್ಯರೆಂಬುದನ್ನು ತೋರಿಸಬೇಕು. ಇದರಿಂದ ನನ್ನ ತಂದೆಗೆ ಮಹಿಮೆ ಆಗುವುದು.
9 “ತಂದೆಯು ನನ್ನನ್ನು ಪ್ರೀತಿಸಿದಂತೆ ನಾನೂ ನಿಮ್ಮನ್ನು ಪ್ರೀತಿಸಿದೆನು. ಈಗ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ. 10 ನಾನು ನನ್ನ ತಂದೆಯ ಆಜ್ಞೆಗಳಿಗೆ ವಿಧೇಯನಾಗಿದ್ದು ಆತನ ಪ್ರೀತಿಯಲ್ಲಿ ನೆಲೆಗೊಂಡಿದ್ದೇನೆ. ಅದೇ ರೀತಿಯಲ್ಲಿ, ನೀವು ನನ್ನ ಆಜ್ಞೆಗಳಿಗೆ ವಿಧೇಯರಾದರೆ, ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. 11 ನನಗಿರುವ ಆನಂದವನ್ನು ನೀವೂ ಹೊಂದಿಕೊಳ್ಳಬೇಕೆಂದು ನಾನು ನಿಮಗೆ ಈ ಸಂಗತಿಗಳನ್ನು ಹೇಳಿದ್ದೇನೆ. ನಿಮ್ಮ ಆನಂದವು ಪರಿಪೂರ್ಣವಾದ ಆನಂದವಾಗಿರಬೇಕೆಂದು ನಾನು ಬಯಸುತ್ತೇನೆ. 12 ನಾನು ನಿಮ್ಮನ್ನು ಪ್ರೀತಿಸಿದಂತೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆಯಾಗಿದೆ. 13 ಗೆಳೆಯರಿಗಾಗಿ ಸ್ವಂತ ಪ್ರಾಣವನ್ನೇ ಕೊಡುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. 14 ನಾನು ಹೇಳುವ ಕಾರ್ಯಗಳನ್ನು ನೀವು ಮಾಡಿದರೆ, ನೀವು ನನ್ನ ಸ್ನೇಹಿತರು. 15 ಈಗ ನಾನು ನಿಮ್ಮನ್ನು ನನ್ನ ಸೇವಕರುಗಳೆಂದು ಕರೆಯುವುದಿಲ್ಲ. ಯಜಮಾನನ ಕೆಲಸಕಾರ್ಯಗಳು ಸೇವಕನಿಗೆ ತಿಳಿದಿರುವುದಿಲ್ಲ. ಆದರೆ ಈಗ ನಾನು ನಿಮ್ಮನ್ನು ನನ್ನ ಗೆಳೆಯರೆಂದು ಕರೆಯುತ್ತೇನೆ. ಏಕೆಂದರೆ ನನ್ನ ತಂದೆಯಿಂದ ಕೇಳಿದ ಪ್ರತಿಯೊಂದನ್ನೂ ನಾನು ನಿಮಗೆ ಹೇಳಿದ್ದೇನೆ.
16 “ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ; ನಾನು ನಿಮ್ಮನ್ನು ಆರಿಸಿಕೊಂಡೆನು. ನೀವು ಹೊರಟುಹೋಗಿ ಫಲಕೊಡಬೇಕು. ಇದೇ ನಾನು ನಿಮಗೆ ಕೊಟ್ಟಿರುವ ಕೆಲಸ. ಈ ಫಲವು ನಿಮ್ಮ ಜೀವನದಲ್ಲಿ ಶಾಶ್ವತವಾಗಿರಲಿ ಎಂಬುದೇ ನನ್ನ ಬಯಕೆ. ಹೀಗಿರಲಾಗಿ, ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನನ್ನ ಆಜ್ಞೆ.
ಯೇಸು ತನ್ನ ಶಿಷ್ಯರಿಗೆ ನೀಡಿದ ಎಚ್ಚರಿಕೆ
18 “ಈ ಲೋಕವು ನಿಮ್ಮನ್ನು ದ್ವೇಷ ಮಾಡಿದರೆ, ಅದು ಮೊದಲು ನನ್ನನ್ನೇ ದ್ವೇಷ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿರಿ. 19 ನೀವು ಈ ಲೋಕಕ್ಕೆ ಸೇರಿದವರಾಗಿದ್ದರೆ, ಈ ಲೋಕವು ತನ್ನ ಸ್ವಂತ ಜನರನ್ನು ಪ್ರೀತಿಸುವಂತೆ ನಿಮ್ಮನ್ನೂ ಪ್ರೀತಿಸುತ್ತಿತ್ತು. ಆದರೆ ನಾನು ನಿಮ್ಮನ್ನು ಈ ಲೋಕದೊಳಗಿಂದ ಆರಿಸಿಕೊಂಡಿದ್ದೇನೆ. ಆದ್ದರಿಂದ ನೀವು ಈ ಲೋಕಕ್ಕೆ ಸೇರಿದವರಲ್ಲ. ಆದಕಾರಣ ಈ ಲೋಕವು ನಿಮ್ಮನ್ನು ದ್ವೇಷಿಸುತ್ತದೆ.
20 “ಸೇವಕನು ತನ್ನ ಒಡೆಯನಿಗಿಂತ ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಿಸಿಕೊಳ್ಳಿ. ಜನರು ನನ್ನನ್ನು ಹಿಂಸಿಸಿದಂತೆ ನಿಮ್ಮನ್ನೂ ಹಿಂಸಿಸುವರು ಮತ್ತು ನನ್ನ ಉಪದೇಶಕ್ಕೆ ವಿಧೇಯರಾದರೆ ನಿಮ್ಮ ಉಪದೇಶಕ್ಕೂ ವಿಧೇಯರಾಗುವರು. 21 ಜನರು ನನ್ನ ದೆಸೆಯಿಂದ ಇದನ್ನೆಲ್ಲಾ ನಿಮಗೆ ಮಾಡುವರು. ನನ್ನನ್ನು ಕಳುಹಿಸಿದಾತನನ್ನು ಅವರು ತಿಳಿದಿಲ್ಲ. 22 ನಾನು ಬಂದು ಈ ಲೋಕದ ಜನರೊಂದಿಗೆ ಮಾತಾಡಿಲ್ಲದಿದ್ದರೆ, ಅವರನ್ನು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ಈಗ ನಾನು ಅವರೊಂದಿಗೆ ಮಾತಾಡಿದ್ದೇನೆ. ಆದ್ದರಿಂದ ತಮ್ಮ ಪಾಪಕ್ಕೆ ಅವರಿಗೆ ಯಾವ ನೆವವೂ ಇಲ್ಲ.
23 “ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನೂ ದ್ವೇಷಿಸುವವನಾಗಿದ್ದಾನೆ. 24 ಬೇರೆ ಯಾವ ವ್ಯಕ್ತಿಯೂ ಹಿಂದೆಂದೂ ಮಾಡಿಲ್ಲದ ಕಾರ್ಯಗಳನ್ನು ಮಾಡಿಲ್ಲದಿದ್ದರೆ, ಅವರನ್ನು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ನಾನು ಮಾಡಿದ ಆ ಕಾರ್ಯಗಳನ್ನು ಅವರು ನೋಡಿದ್ದಾರೆ. ಹೀಗಿದ್ದರೂ ಅವರು ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸುತ್ತಾರೆ. 25 ‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’[a] ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನಿಜವಾಗಲೆಂದು ಹೀಗಾಯಿತು.
26 “ನಾನು ತಂದೆಯ ಬಳಿಯಿಂದ ಸಹಾಯಕನನ್ನು ನಿಮಗೆ ಕಳುಹಿಸಿಕೊಡುವೆನು. ತಂದೆಯ ಬಳಿಯಿಂದ ಬರುವ ಆ ಸಹಾಯಕನು ಸತ್ಯದ ಆತ್ಮನಾಗಿದ್ದಾನೆ. ಆತನು ಬಂದಾಗ ನನ್ನ ಬಗ್ಗೆ ನಿಮಗೆ ತಿಳಿಸುವನು. 27 ಮತ್ತು ನೀವು ಮೊದಲಿಂದಲೂ ನನ್ನೊಂದಿಗೆ ಇದ್ದಕಾರಣ ನೀವು ಸಹ ನನ್ನ ಬಗ್ಗೆ ಜನರಿಗೆ ಹೇಳುವಿರಿ.
12 ಶಿಸ್ತನ್ನು ಇಷ್ಟಪಡುವವನು ಕಲಿಯಲು ಇಷ್ಟಪಡುತ್ತಾನೆ; ತಿದ್ದುಪಡಿಯನ್ನು ದ್ವೇಷಿಸುವವನು ಬುದ್ಧಿಹೀನ.
2 ಯೆಹೋವನು ಒಳ್ಳೆಯವನನ್ನು ಸ್ವೀಕರಿಸಿಕೊಳ್ಳುವನು; ಕುಯುಕ್ತಿಯುಳ್ಳವನನ್ನು ಖಂಡಿಸುವನು.
3 ಕೆಡುಕರಿಗೆ ಎಂದಿಗೂ ಕ್ಷೇಮವಿಲ್ಲ; ಒಳ್ಳೆಯವರಾದರೋ ಸಮಾಧಾನದಿಂದಿರುವರು.
4 ಗುಣವಂತಳಾದ ಹೆಂಡತಿಯು ಗಂಡನಿಗೆ ಕಿರೀಟದಂತಿರುವಳು; ಗಂಡನನ್ನು ನಾಚಿಕೆಗೆ ಗುರಿಮಾಡುವ ಹೆಂಡತಿಯು ಗಂಡನ ಎಲುಬಿಗೆ ಕ್ಷಯದಂತಿರುವಳು.
5 ಶಿಷ್ಟರ ಆಲೋಚನೆ ನ್ಯಾಯವಾಗಿವೆ. ದುಷ್ಟರ ಉಪದೇಶ ಮೋಸಕರ.
6 ಕೆಡುಕರು ತಮ್ಮ ಮಾತುಗಳಿಂದ ಬೇರೆಯವರನ್ನು ನೋಯಿಸುತ್ತಾರೆ. ಒಳ್ಳೆಯವರ ಮಾತುಗಳಾದರೋ ಜನರನ್ನು ಅಪಾಯದಿಂದ ರಕ್ಷಿಸುತ್ತವೆ.
7 ದುರ್ಜನರು ಸರ್ವನಾಶವಾಗುವರು; ಆದರೆ ಸಜ್ಜನರ ಕುಟುಂಬವು ಸ್ಥಿರವಾಗಿರುವುದು.
8 ಜನರು ಜ್ಞಾನಿಗಳನ್ನು ಹೊಗಳುವರು; ಮೂಢನನ್ನು ಕಡೆಗಣಿಸುವರು.
9 ಪ್ರಮುಖನಂತೆ ವರ್ತಿಸುತ್ತಾ ಆಹಾರವಿಲ್ಲದಿರುವುದಕ್ಕಿಂತ ಪ್ರಮುಖನಲ್ಲದವನಾಗಿದ್ದು ಸೇವಕನಂತೆ ಇರುವುದು ಮೇಲು.
10 ಶಿಷ್ಟನು ತನ್ನ ಪಶುಗಳನ್ನು ನೋಡಿಕೊಳ್ಳುತ್ತಾನೆ. ಆದರೆ ದುಷ್ಟನ ವಾತ್ಸಲ್ಯವು ಕ್ರೂರವಾಗಿದೆ.
11 ತನ್ನ ಜಮೀನಿನಲ್ಲಿ ದುಡಿಯುವ ರೈತನಿಗೆ ಸಾಕಷ್ಟು ಆಹಾರವಿರುವುದು. ಆದರೆ ಮೂಢನು ಪ್ರಯೋಜನವಿಲ್ಲದ ಸಂಗತಿಗಳಲ್ಲಿ ತನ್ನ ಸಮಯವನ್ನು ಹಾಳುಮಾಡುವನು.
12 ಕಳವು ಮಾಲುಗಳಲ್ಲಿ ದುಷ್ಟರಿಗೆ ಆಸೆ. ಒಳ್ಳೆಯವರಿಗಾದರೋ ತಮ್ಮಲ್ಲಿರುವುದನ್ನು ಬೇರೆಯವರಿಗೆ ಕೊಡಬೇಕೆಂಬ ಆಸೆ.
13 ಕೆಡುಕನು ತನ್ನ ಕೆಟ್ಟಮಾತುಗಳಿಂದಲೇ ಸಿಕ್ಕಿಕೊಳ್ಳುವನು. ಆದರೆ ಒಳ್ಳೆಯವನು ಇಕ್ಕಟ್ಟುಗಳಿಂದ ಪಾರಾಗುವನು.
14 ಮನುಷ್ಯನು ತನ್ನ ಒಳ್ಳೆಯ ಮಾತುಗಳಿಗೆ ಪ್ರತಿಫಲವನ್ನು ಪಡೆಯುವನು. ಅದೇ ರೀತಿಯಲ್ಲಿ, ಅವನ ಕೆಲಸವು ಅವನಿಗೆ ಲಾಭವನ್ನು ಕೊಡುವುದು.
15 ಮೂಢನು ತನ್ನ ದಾರಿಯನ್ನೇ ಒಳ್ಳೆಯದೆಂದು ಭಾವಿಸಿಕೊಂಡಿರುತ್ತಾನೆ. ಜ್ಞಾನಿಯಾದರೋ ಉಪದೇಶಕ್ಕೆ ಕಿವಿಗೊಡುತ್ತಾನೆ.
16 ಮೂಢನು ತನ್ನ ಸಿಟ್ಟನ್ನು ತಟ್ಟನೆ ತೋರಿಸುವನು. ಆದರೆ ಜ್ಞಾನಿಯು ಅವಮಾನವನ್ನು ಕಡೆಗಣಿಸುವನು.
17 ಸತ್ಯಸಾಕ್ಷಿಯು ನ್ಯಾಯವನ್ನು ಪ್ರತಿಪಾದಿಸುವನು. ಆದರೆ ಸುಳ್ಳುಸಾಕ್ಷಿಯು ಅನ್ಯಾಯವನ್ನು ಪ್ರಕಟಿಸುವನು.
18 ದುಡುಕಿದ ಮಾತು ಖಡ್ಗದಂತೆ ನೋವು ಮಾಡುತ್ತದೆ; ಜ್ಞಾನಿಯ ಮಾತು ಗುಣಪಡಿಸುತ್ತದೆ.
19 ಸುಳ್ಳುತುಟಿಗಳು ಕ್ಷಣಿಕ. ಆದರೆ ಸತ್ಯವು ಶಾಶ್ವತ.
20 ಕೆಡುಕರು ಯಾವಾಗಲೂ ಕೇಡು ಮಾಡಲಿಚ್ಛಿಸುವರು. ಸಮಾಧಾನವನ್ನು ಅಪೇಕ್ಷಿಸುವವರು ಸಂತೋಷವಾಗಿರುವರು.
21 ಸಜ್ಜನರು ಯೆಹೋವನಿಂದ ಕ್ಷೇಮವಾಗಿರುವರು. ಆದರೆ ದುರ್ಜನರಿಗೆ ಅನೇಕ ತೊಂದರೆಗಳಿರುತ್ತವೆ.
22 ಸುಳ್ಳುಗಾರರು ಯೆಹೋವನಿಗೆ ಅಸಹ್ಯ. ಆದರೆ ಸತ್ಯವಂತರು ಆತನಿಗೆ ಇಷ್ಟಕರ.
23 ಜಾಣನು ತನ್ನ ಜ್ಞಾನದ ಬಗ್ಗೆ ಜಂಬಕೊಚ್ಚಿಕೊಳ್ಳುವುದಿಲ್ಲ. ಆದರೆ ಮೂಢನು ದುಡುಕಿ ಮಾತಾಡಿ ತಾನು ಮೂಢನೆಂದು ತೋರಿಸಿಕೊಳ್ಳುತ್ತಾನೆ.
24 ಕಷ್ಟಪಟ್ಟು ಕೆಲಸ ಮಾಡುವವನು ಅಧಿಪತಿಯಾಗುವನು. ಸೋಮಾರಿಯನ್ನು ಗುಲಾಮನನ್ನಾಗಿ ಮಾಡಲಾಗುವುದು.
25 ಚಿಂತೆಯು ಮನುಷ್ಯನ ಸಂತೋಷವನ್ನು ತೆಗೆದುಹಾಕುತ್ತದೆ; ಕನಿಕರದ ಮಾತು ಮನುಷ್ಯನನ್ನು ಸಂತೋಷಗೊಳಿಸುತ್ತದೆ.
26 ಸನ್ಮಾರ್ಗಿಯು ತನ್ನ ನೆರೆಯವನಿಗೆ ಒಳ್ಳೆಯ ಮಾರ್ಗವನ್ನು ತೋರಿಸುತ್ತಾನೆ; ದುರ್ಮಾರ್ಗಿಯು ಬೇರೆಯವರನ್ನು ದಾರಿ ತಪ್ಪಿಸುವನು.
27 ಸೋಮಾರಿಯಾದ ಬೇಟೆಗಾರನು ಬೇಟೆಯಾಡುವುದಿಲ್ಲ. ಐಶ್ವರ್ಯವು ಕಷ್ಟಪಟ್ಟು ಕೆಲಸ ಮಾಡುವವನಿಗೆ ಬರುತ್ತದೆ.
28 ನೀತಿಯ ಮಾರ್ಗದಲ್ಲಿ ಜೀವವಿದೆ. ಆದರೆ ಮರಣಕ್ಕೆ ನಡೆಸುವ ಮತ್ತೊಂದು ಮಾರ್ಗವಿದೆ.
5 ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು. 2 ಪ್ರೀತಿಯಿಂದ ಬಾಳಿರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿದಂತೆ ನೀವೂ ಇತರರನ್ನು ಪ್ರೀತಿಸಿರಿ. ಕ್ರಿಸ್ತನು ನಮಗೋಸ್ಕರವಾಗಿ ತನ್ನನ್ನೇ ಪರಿಮಳದ ಕಾಣಿಕೆಯಾಗಿಯೂ ಯಜ್ಞವಾಗಿಯೂ ದೇವರಿಗೆ ಸಮರ್ಪಿಸಿಕೊಂಡನು.
3 ಆದರೆ ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿರಕೂಡದು. ಯಾವ ಬಗೆಯ ದುಷ್ಟತ್ವವಾಗಲಿ ಸ್ವಾರ್ಥತೆಯಾಗಲಿ ಇರಕೂಡದು. ಏಕೆಂದರೆ ಅವುಗಳು ದೇವರ ಪರಿಶುದ್ಧ ಜನರಿಗೆ ಯೋಗ್ಯವಾದವುಗಳಲ್ಲ. 4 ಅಲ್ಲದೆ ನಿಮ್ಮ ಮಧ್ಯದಲ್ಲಿ ಕೆಟ್ಟಮಾತುಗಳು ಇರಕೂಡದು. ನೀವು ಮೂರ್ಖತನದಿಂದ ಮಾತಾಡಕೂಡದು ಮತ್ತು ಹೊಲಸಾದ ಹಾಸ್ಯನುಡಿಗಳನ್ನು ಹೇಳಕೂಡದು. ಇವುಗಳು ನಿಮಗೆ ಯೋಗ್ಯವಾದವುಗಳಲ್ಲ. ಆದರೆ ನೀವು ದೇವರಿಗೆ ಸ್ತೋತ್ರ ಸಲ್ಲಿಸುವವರಾಗಿರಬೇಕು. 5 ಇದು ನಿಮಗೆ ಚೆನ್ನಾಗಿ ತಿಳಿದಿರಲಿ: ಲೈಂಗಿಕ ಪಾಪಮಾಡುವವರಿಗೆ, ದುಷ್ಕೃತ್ಯಗಳನ್ನು ಮಾಡುವವರಿಗೆ, ಸ್ವಾರ್ಥಿಗಳಿಗೆ, ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಸ್ಥಳವೇ ಇಲ್ಲ. ಸ್ವಾರ್ಥತೆಯು ವಿಗ್ರಹಾರಾಧನೆಗೆ ಸಮಾನವಾಗಿದೆ.
6 ಅಸತ್ಯವಾದ ಸಂಗತಿಗಳನ್ನು ಹೇಳಿ ನಿಮ್ಮನ್ನು ಮೋಸಪಡಿಸಲು ಯಾರಿಗೂ ಅವಕಾಶ ಕೊಡಬೇಡಿ. ಆ ಕೆಟ್ಟಸಂಗತಿಗಳ ನಿಮಿತ್ತ ದೇವರ ಕೋಪವು ಆತನಿಗೆ ವಿಧೇಯರಾಗದ ಜನರ ಮೇಲೆ ಬರುತ್ತದೆ. 7 ಆದ್ದರಿಂದ ನೀವು ಅಂಥ ಜನರೊಂದಿಗೆ ಪಾಲುಗಾರರಾಗಬೇಡಿ. 8 ಹಿಂದಿನ ಕಾಲದಲ್ಲಿ ನೀವು ಕಗ್ಗತ್ತಲೆಯಾಗಿದ್ದಿರಿ. ಈಗಲಾದರೋ ನೀವು ಕರ್ತನಲ್ಲಿ ಪೂರ್ಣಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿಗೆ ಸೇರಿದ ಮಕ್ಕಳಂತೆ ಜೀವಿಸಿರಿ. 9 ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಂಡುಬರುತ್ತದೆ. 10 ಪ್ರಭುವಿಗೆ ಯಾವುದು ಮೆಚ್ಚಿಕೆಯಾದದ್ದೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. 11 ಕತ್ತಲೆಯಲ್ಲಿರುವ ಜನರು ಮಾಡುವಂಥ ಕಾರ್ಯಗಳನ್ನು ಮಾಡಬೇಡಿ. ಅವುಗಳಿಂದ ಒಳ್ಳೆಯದೇನೂ ಆಗುವುದಿಲ್ಲ. ಆದರೆ ಕತ್ತಲೆಯಲ್ಲಿ ನಡೆಯುವ ಕಾರ್ಯಗಳು ತಪ್ಪಾದವುಗಳೆಂದು ತೋರಿಸಲು ಒಳ್ಳೆಯ ಕಾರ್ಯಗಳನ್ನು ಮಾಡಿರಿ. 12 ಆ ಜನರು ಕತ್ತಲೆಯಲ್ಲಿ ಮಾಡುವ ಗುಪ್ತಕಾರ್ಯಗಳ ಬಗ್ಗೆ ಮಾತಾಡುವುದಕ್ಕೂ ನಾಚಿಕೆಯಾಗುತ್ತದೆ. 13 ಆದರೆ ಆ ಕಾರ್ಯಗಳು ತಪ್ಪಾದವುಗಳೆಂದು ನಾವು ತೋರಿಸುವಾಗ ಬೆಳಕಿನಿಂದ ಆ ಕಾರ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. 14 ಪ್ರತಿಯೊಂದನ್ನು ಸ್ಪಷ್ಟವಾಗಿ ತೋರಿಸುವಂಥದ್ದೇ ಬೆಳಕು. ಆದ್ದರಿಂದಲೇ ಹೀಗೆ ಬರೆದದೆ:
“ನಿದ್ರೆಮಾಡುವವನೇ, ಎಚ್ಚರವಾಗು!
ಸತ್ತವರನ್ನು ಬಿಟ್ಟು ಎದ್ದೇಳು,
ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”
15 ಆದ್ದರಿಂದ ನೀವು ಹೇಗೆ ಜೀವಿಸುತ್ತಿದ್ದೀರಿ ಎಂಬುದರ ಬಗ್ಗೆ ಬಹು ಎಚ್ಚರಿಕೆಯಿಂದಿರಿ. ಅವಿವೇಕಿಗಳಂತೆ ಜೀವಿಸದೆ ವಿವೇಕಿಗಳಾಗಿ ಜೀವಿಸಿರಿ. 16 ಈ ದಿನಗಳು ಕೆಟ್ಟವುಗಳಾಗಿವೆ. ಆದ್ದರಿಂದ ನಿಮಗಿರುವ ಪ್ರತಿಯೊಂದು ಅವಕಾಶವನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿರಿ. 17 ನಿಮ್ಮ ಜೀವಿತಗಳ ಬಗ್ಗೆ ಮೂರ್ಖರಾಗಿರದೆ ದೇವರ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ. 18 ಮದ್ಯಪಾನಮಾಡಿ ಮತ್ತರಾಗಬೇಡಿ, ಅದು ಪಾಪಕೃತ್ಯಗಳಿಗೆ ನಡೆಸುತ್ತದೆ, ಆದರೆ ಯಾವಾಗಲೂ ಪವಿತ್ರಾತ್ಮಭರಿತರಾಗಿರಿ. 19 ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿರಿ. ನಿಮ್ಮ ಹೃದಯಗಳಲ್ಲಿ ಪ್ರಭುವಿಗೆ ವಾದ್ಯ ನುಡಿಸುತ್ತಾ ಹಾಡಿರಿ. 20 ಪ್ರತಿಯೊಂದು ವಿಷಯದಲ್ಲಿಯೂ ತಂದೆಯಾದ ದೇವರಿಗೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಯಾವಾಗಲೂ ಸ್ತೋತ್ರಮಾಡಿರಿ.
ಗಂಡ ಹೆಂಡತಿಯರು
21 ನೀವು ಒಬ್ಬರಿಗೊಬ್ಬರು ವಿಧೇಯರಾಗಿರಬೇಕು. ಏಕೆಂದರೆ ನೀವು ಕ್ರಿಸ್ತನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು.
22 ಸ್ತ್ರೀಯರೇ, ನೀವು ಪ್ರಭುವಿಗೆ ಅಧೀನರಾಗಿರುವಂತೆ ನಿಮ್ಮ ಗಂಡಂದಿರಿಗೂ ಅಧೀನರಾಗಿರಿ. 23 ಕ್ರಿಸ್ತನು ಸಭೆಗೆ ಶಿರಸ್ಸಾಗಿರುವಂತೆ ಗಂಡನು ಹೆಂಡತಿಗೆ ಶಿರಸ್ಸಾಗಿದ್ದಾನೆ. ಸಭೆಯು ಕ್ರಿಸ್ತನ ದೇಹವಾಗಿದೆ. ಕ್ರಿಸ್ತನು ಆ ದೇಹದ ರಕ್ಷಕನಾಗಿದ್ದಾನೆ. 24 ಸಭೆಯು ಕ್ರಿಸ್ತನ ಅಧೀನದಲ್ಲಿದೆ. ಇದೇ ನಿಯಮವು ಸ್ತ್ರೀಯರಿಗೆ ಅನ್ವಯಿಸುತ್ತದೆ. ಪ್ರತಿಯೊಂದು ವಿಷಯದಲ್ಲಿಯೂ ಸ್ತ್ರೀಯರು ತಮ್ಮ ಗಂಡಂದಿರಿಗೆ ಅಧೀನರಾಗಿರಬೇಕು.
25 ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದಂತೆ ನೀವು ನಿಮ್ಮ ಹೆಂಡತಿಯರನ್ನು ಪ್ರೀತಿಸಬೇಕು. 26 ಕ್ರಿಸ್ತನು ಸಭೆಯನ್ನು ಪರಿಶುದ್ಧಗೊಳಿಸುವುದಕ್ಕಾಗಿ ಪ್ರಾಣಕೊಟ್ಟನು. ಸುವಾರ್ತೆಯನ್ನು ತಿಳಿಸುವುದರ ಮೂಲಕ ಜಲಸ್ನಾನವನ್ನು ಮಾಡಿಸಿ ಆತನು ಸಭೆಯನ್ನು ಶುದ್ಧಗೊಳಿಸಿದನು. 27 ಮಹಿಮಾಪೂರ್ಣಳಾದ ಕನ್ನಿಕೆಯೋ ಎಂಬಂತಿರುವ ಸಭೆಯನ್ನು ತನಗೇ ಕೊಡಬೇಕೆಂದು ಆತನು ಪ್ರಾಣಕೊಟ್ಟನು. ಸಭೆಯು ದೋಷವಿಲ್ಲದೆ ಶುದ್ಧವಾಗಿರಬೇಕೆಂದು ಮತ್ತು ದುಷ್ಟತ್ವವಾಗಲಿ ಪಾಪವಾಗಲಿ ಅಥವಾ ಬೇರೆ ಯಾವುದೇ ತಪ್ಪಾಗಲಿ ಸಭೆಯಲ್ಲಿರಕೂಡದೆಂದು ಆತನು ಪ್ರಾಣಕೊಟ್ಟನು.
28 ಆದ್ದರಿಂದ ಪುರುಷರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸುವಂತೆ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುವವನಾಗಿದ್ದಾನೆ. 29 ಏಕೆಂದರೆ ಯಾವನೂ ತನ್ನ ದೇಹವನ್ನು ದ್ವೇಷಿಸುವುದಿಲ್ಲ. ಪ್ರತಿಯೊಬ್ಬನು ತನ್ನ ದೇಹವನ್ನು ಪೋಷಿಸಿ ಜಾಗ್ರತೆಯಿಂದ ನೋಡಿಕೊಳ್ಳುತ್ತಾನೆ. ಕ್ರಿಸ್ತನು ಸಭೆಗೋಸ್ಕರ ಮಾಡುವಂಥದ್ದು ಅದೇ ಆಗಿದೆ. 30 ಏಕೆಂದರೆ ನಾವು ಆತನ ದೇಹದ ಅಂಗಗಳಾಗಿದ್ದೇವೆ. 31 ಪವಿತ್ರ ಗ್ರಂಥವು ಹೇಳುವಂತೆ, “ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ದೇಹವಾಗುವರು.”(A) 32 ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತಾಡುತ್ತಿದ್ದೇನೆ. ರಹಸ್ಯವಾದ ಈ ಸತ್ಯವು ಬಹು ಮುಖ್ಯವಾದದ್ದು. 33 ಆದರೆ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ತಾನು ಪ್ರೀತಿಸುವಂತೆ ತನ್ನ ಹೆಂಡತಿಯನ್ನು ಪ್ರೀತಿಸಬೇಕು ಮತ್ತು ಸ್ತ್ರೀಯು ತನ್ನ ಗಂಡನಿಗೆ ಭಯಭಕ್ತಿಯಿಂದರಬೇಕು.
Kannada Holy Bible: Easy-to-Read Version. All rights reserved. © 1997 Bible League International