M’Cheyne Bible Reading Plan
ಚಿನ್ನದ ಬಸವ
32 ಬಹಳ ಸಮಯ ದಾಟಿಹೋದರೂ ಮೋಶೆ ಬೆಟ್ಟದಿಂದ ಕೆಳಗಿಳಿಯಲಿಲ್ಲವಾದ್ದರಿಂದ ಇಸ್ರೇಲರು ಆರೋನನ ಬಳಿಗೆ ಒಟ್ಟಾಗಿ ಬಂದು, “ನೋಡು, ಮೋಶೆಯು ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದನು. ಆದರೆ ಅವನಿಗೇನಾಯಿತೋ ನಮಗೆ ತಿಳಿಯದು. ಆದ್ದರಿಂದ ನಮ್ಮನ್ನು ಮುನ್ನಡೆಸಲು ಕೆಲವು ದೇವರುಗಳನ್ನು ಮಾಡಿಕೊಡು” ಎಂದು ಹೇಳಿದರು.
2 ಆರೋನನು ಅವರಿಗೆ, “ನಿಮ್ಮ ಹೆಂಡತಿಯ ಮತ್ತು ಗಂಡು ಹೆಣ್ಣುಮಕ್ಕಳಲ್ಲಿರುವ ಚಿನ್ನದ ಓಲೆಗಳನ್ನು ತಂದು ನನಗೆ ಕೊಡಿರಿ” ಎಂದು ಹೇಳಿದನು.
3 ಆದ್ದರಿಂದ ಅವರೆಲ್ಲರೂ ತಮ್ಮ ಚಿನ್ನದ ಓಲೆಗಳನ್ನು ತಂದುಕೊಟ್ಟರು. 4 ಆರೋನನು ಬಸವನ ಮೂರ್ತಿಯನ್ನು ಚಿನ್ನದಿಂದ ಎರಕಹೊಯ್ಯಿಸಿದನು.
ಬಳಿಕ ಅವರು, “ಇಸ್ರೇಲರೇ, ನಿಮ್ಮ ದೇವರುಗಳು ಇಲ್ಲಿವೆ! ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರುಗಳು ಇವುಗಳೇ” ಎಂದು ಹೇಳಿದರು.
5 ಆರೋನನು ಇವೆಲ್ಲವನ್ನು ನೋಡಿ, ಬಸವನ ಮುಂದೆ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ಬಳಿಕ, “ನಾಳೆ ಯೆಹೋವನನ್ನು ಸನ್ಮಾನಿಸಲು ಒಂದು ವಿಶೇಷ ಹಬ್ಬವಿರುವುದು” ಎಂದು ಪ್ರಕಟಿಸಿದನು.
6 ಮರುದಿನ ಮುಂಜಾನೆ ಜನರೆಲ್ಲರೂ ಬೇಗನೆ ಎದ್ದು ತಮ್ಮ ಪಶುಗಳನ್ನು ವಧಿಸಿ ಸರ್ವಾಂಗಹೋಮಗಳನ್ನಾಗಿಯೂ ಸಮಾಧಾನಯಜ್ಞಗಳನ್ನಾಗಿಯೂ ಅರ್ಪಿಸಿ ತಿನ್ನುವುದಕ್ಕೂ ಕುಡಿಯುವುದಕ್ಕೂ ಕುಳಿತುಕೊಂಡರು. ಬಳಿಕ ಎದ್ದು ಕುಣಿದಾಡಿದರು ಮತ್ತು ಕೂಗಾಡಿದರು.
7 ಅದೇ ಸಮಯದಲ್ಲಿ ಯೆಹೋವನು ಮೋಶೆಗೆ, “ಬೆಟ್ಟದಿಂದ ಇಳಿದುಹೋಗು. ನೀನು ಈಜಿಪ್ಟಿನಿಂದ ಕರೆದುಕೊಂಡು ಬಂದ ನಿನ್ನ ಜನರು ಭಯಂಕರವಾದ ಪಾಪ ಮಾಡಿದ್ದಾರೆ. 8 ನಾನು ಅವರಿಗೆ ಆಜ್ಞಾಪಿಸಿದವುಗಳಿಗೆ ಬಹುಬೇಗನೆ ಅವಿಧೇಯರಾಗಿದ್ದಾರೆ. ಚಿನ್ನವನ್ನು ಕರಗಿಸಿ ಅದರಿಂದ ಬಸವನನ್ನು ಮಾಡಿಕೊಂಡು ಅದನ್ನು ಪೂಜಿಸುತ್ತಾ ಅದಕ್ಕೆ ಯಜ್ಞಗಳನ್ನು ಸಮರ್ಪಿಸುತ್ತಿದ್ದಾರೆ. ‘ಇಸ್ರೇಲರೇ ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರುಗಳು ಇವುಗಳು’ ಎಂದು ಜನರು ಹೇಳುತ್ತಿದ್ದಾರೆ” ಎಂದನು.
9 ಯೆಹೋವನು ಮೋಶೆಗೆ, “ನಾನು ಈ ಜನರನ್ನು ನೋಡಿದ್ದೇನೆ. ಅವರು ಬಹಳ ಮೊಂಡರೆಂದು ನಾನು ಬಲ್ಲೆನು. ಅವರು ಯಾವಾಗಲೂ ನಿನಗೆ ವಿರೋಧವಾಗಿ ದಂಗೆ ಏಳುವರು. 10 ಆದ್ದರಿಂದ ನಾನು ಅವರನ್ನು ಕೋಪದಿಂದ ನಾಶಮಾಡಿಬಿಡುತ್ತೇನೆ. ನನ್ನನ್ನು ತಡೆಯಬೇಡ. ಬಳಿಕ ನಾನು ನಿನ್ನಿಂದ ಒಂದು ಮಹಾಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು.
11 ಆದರೆ ಮೋಶೆಯು ತನ್ನ ದೇವರಾದ ಯೆಹೋವನಿಗೆ, “ಯೆಹೋವನೇ, ನಿನ್ನ ಕೋಪವು ನಿನ್ನ ಜನರನ್ನು ನಾಶಮಾಡದಿರಲಿ. ನಿನ್ನ ಮಹಾಶಕ್ತಿಯಿಂದಲೂ ಬಲದಿಂದಲೂ ಈ ಜನರನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದೆಯಲ್ಲಾ. 12 ಆದರೆ ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು, ‘ಯೆಹೋವನು ತನ್ನ ಜನರಿಗೆ ಕೇಡನ್ನು ಮಾಡುವುದಕ್ಕಾಗಿಯೇ ಈಜಿಪ್ಟಿನಿಂದ ಕರೆದುಕೊಂಡು ಹೋದನು. ಆತನು ಅವರನ್ನು ಬೆಟ್ಟಗಳಲ್ಲಿ ಕೊಲ್ಲಬೇಕೆಂದಿದ್ದನು; ತನ್ನ ಜನರನ್ನು ಭೂಮಿಯಿಂದ ನಿರ್ಮೂಲ ಮಾಡಬೇಕೆಂದಿದ್ದನು’ ಎಂದು ಹೇಳುವರು. ಆದ್ದರಿಂದ ನಿನ್ನ ಜನರ ಮೇಲೆ ಕೋಪಗೊಳ್ಳಬೇಡ. ನಿನ್ನ ಕೋಪವನ್ನು ಬಿಟ್ಟುಬಿಡು. ನಿನ್ನ ಜನರನ್ನು ನಾಶಮಾಡಬೇಡ. 13 ನಿನ್ನ ಸೇವೆಮಾಡಿದ ಅಬ್ರಹಾಮನನ್ನು, ಇಸಾಕನನ್ನು, ಯಾಕೋಬನನ್ನು ಜ್ಞಾಪಿಸಿಕೊ. ನೀನು ನಿನ್ನ ಹೆಸರನ್ನು ಉಪಯೋಗಿಸಿ ಆ ಜನರಿಗೆ ವಾಗ್ದಾನವನ್ನು ಮಾಡಿದೆ. ‘ನಾನು ನಿನ್ನ ಸಂತತಿಯವರನ್ನು ಆಕಾಶದ ನಕ್ಷತ್ರಗಳಷ್ಟು ಮಾಡುವೆನು. ನಾನು ವಾಗ್ದಾನ ಮಾಡಿದಂತೆ ಈ ದೇಶವನ್ನೆಲ್ಲಾ ನಿನ್ನ ಸಂತತಿಗಳವರಿಗೆ ಕೊಡುವೆನು. ಈ ದೇಶ ಎಂದೆಂದಿಗೂ ಅವರದಾಗಿರುವುದು’ ಎಂದು ನೀನು ನಿನ್ನ ಹೆಸರಿನಲ್ಲಿ ವಾಗ್ದಾನ ಮಾಡಿದೆಯಲ್ಲಾ” ಅಂದನು.
14 ಆದ್ದರಿಂದ ಯೆಹೋವನು ಜನರಿಗಾಗಿ ಮರುಕಪಟ್ಟು ತನ್ನ ಮನಸ್ಸನ್ನು ಮಾರ್ಪಡಿಸಿಕೊಂಡನು; ತಾನು ಹೇಳಿದ್ದ ಕೇಡನ್ನು ಮಾಡಲಿಲ್ಲ; ತನ್ನ ಜನರನ್ನು ನಾಶಮಾಡಲಿಲ್ಲ.
15 ಬಳಿಕ ಮೋಶೆ ಬೆಟ್ಟದಿಂದಿಳಿದು ಬಂದನು. ಮೋಶೆಯೊಡನೆ ಆಜ್ಞಾಶಾಸನಗಳ ಎರಡು ಕಲ್ಲಿನ ಹಲಿಗೆಗಳಿದ್ದವು. ಈ ಆಜ್ಞಾಶಾಸನಗಳ ಕಲ್ಲುಗಳ ಮುಂದೆಯೂ ಹಿಂದೆಯೂ ಬರೆಯಲ್ಪಟ್ಟಿದ್ದವು. 16 ಯೆಹೋವನು ತಾನೇ ಆ ಕಲ್ಲುಗಳನ್ನು ಮಾಡಿ ಅವುಗಳ ಮೇಲೆ ಬರೆದಿದ್ದನು.
17 ಇಸ್ರೇಲರ ಗದ್ದಲವನ್ನೂ ಕೂಗಾಟವನ್ನೂ ಯೆಹೋಶುವನು ಕೇಳಿ ಮೋಶೆಗೆ, “ಪಾಳೆಯದ ಕಡೆಯಿಂದ ಯುದ್ಧದ ಧ್ವನಿ ಕೇಳಿಬರುತ್ತಿದೆ” ಅಂದನು.
18 ಅದಕ್ಕೆ ಮೋಶೆ, “ಅದು ಸೈನ್ಯದ ಜಯಧ್ವನಿಯಲ್ಲ. ಅದು ಸೋಲಿನಿಂದ ಕೂಗುವ ಸೈನ್ಯದ ಧ್ವನಿಯೂ ಅಲ್ಲ. ನಾನು ಕೇಳುತ್ತಿರುವುದು ಉತ್ಸವದ ಧ್ವನಿ” ಎಂದು ಉತ್ತರಿಸಿದನು.
19 ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದನು. ಅವನು ಚಿನ್ನದ ಬಸವನನ್ನೂ ಜನರ ನರ್ತನವನ್ನೂ ನೋಡಿ ಬಹುಕೋಪಗೊಂಡು ಕಲ್ಲಿನ ಹಲಿಗೆಗಳನ್ನು ನೆಲದ ಮೇಲೆ ಬಿಸಾಡಿಬಿಟ್ಟನು; ಅವು ಚೂರುಚೂರಾಗಿ ಒಡೆದುಹೋದವು. 20 ಬಳಿಕ ಮೋಶೆಯು ಆ ಬಸವನ ಮೂರ್ತಿಯನ್ನು ಬೆಂಕಿಯಲ್ಲಿ ಕರಗಿಸಿ ಅದರ ಚಿನ್ನವನ್ನು ಧೂಳಿನಂತೆ ಅರೆದು ನೀರಿಗೆ ಹಾಕಿ ಆ ನೀರನ್ನು ಇಸ್ರೇಲರಿಗೆ ಕುಡಿಸಿದನು.
21 ಮೋಶೆಯು ಆರೋನನಿಗೆ, “ಈ ಜನರು ನಿನಗೇನು ಮಾಡಿದರು? ಇಂಥಾ ಕೆಟ್ಟ ಪಾಪವನ್ನು ಮಾಡುವಂತೆ ಯಾಕೆ ಅವರನ್ನು ನಡಿಸಿದೆ?” ಎಂದು ಹೇಳಿದನು.
22 ಆರೋನನು, “ಕೋಪಗೊಳ್ಳಬೇಡ. ಇವರು ಯಾವಾಗಲೂ ಪಾಪಮಾಡಲು ಸಿದ್ಧರಾಗಿರುವುದು ನಿನಗೆ ಗೊತ್ತೇ ಇದೆ. 23 ಅವರು ನನಗೆ, ‘ಮೋಶೆಯು ನಮ್ಮನ್ನು ಈಜಿಪ್ಟಿನಿಂದ ಹೊರಗೆ ನಡೆಸಿದನು. ಆದರೆ ಅವನಿಗೇನಾಯಿತೋ ನಮಗೆ ತಿಳಿಯದು. ಆದ್ದರಿಂದ ನಮ್ಮನ್ನು ಮುನ್ನಡೆಸಲು ದೇವರುಗಳನ್ನು ಮಾಡಿಕೊಡು’ ಎಂದು ಕೇಳಿದರು. 24 ಆದ್ದರಿಂದ ನಾನು ಅವರಿಗೆ, ‘ನಿಮ್ಮಲ್ಲಿ ಚಿನ್ನದ ಆಭರಣಗಳಿದ್ದರೆ ನನಗೆ ಕೊಡಿರಿ’ ಎಂದು ಹೇಳಿದೆನು. ಅವರು ಆಭರಣಗಳನ್ನು ನನಗೆ ತಂದುಕೊಟ್ಟರು. ನಾನು ಅವುಗಳನ್ನು ಬೆಂಕಿಯಲ್ಲಿ ಕರಗಿಸಿ ಈ ಬಸವನ ಮೂರ್ತಿಯನ್ನು ಎರಕಹೊಯ್ದೆನು” ಎಂದು ಉತ್ತರಿಸಿದನು.
25 ಜನರು ಅಂಕೆತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಬಿಟ್ಟುಬಿಟ್ಟಿರುವುದು ಮೋಶೆಗೆ ತಿಳಿಯಿತು. ಜನರು ಕ್ರಮವಿಲ್ಲದೆ ಸ್ವೇಚ್ಛೆಯಿಂದ ನಡೆಯುತ್ತಿದ್ದರು; ಅವರ ಮೂರ್ಖತನವು ಅವರ ವಿರೋಧಿಗಳಿಗೆ ಎದ್ದುಕಾಣುತ್ತಿತ್ತು! 26 ಆದ್ದರಿಂದ ಪಾಳೆಯದ ದ್ವಾರದಲ್ಲಿ ಮೋಶೆಯು ನಿಂತು, “ಯೆಹೋವನ ಪಕ್ಷದವರು ನನ್ನ ಬಳಿಗೆ ಬರಬೇಕು” ಎಂದು ಹೇಳಿದನು. ಲೇವಿ ಕುಲದವರೆಲ್ಲಾ ಮೋಶೆಯ ಬಳಿಗೆ ಬಂದರು.
27 ಆಗ ಮೋಶೆ ಅವರಿಗೆ, “ಇಸ್ರೇಲರ ದೇವರಾದ ಯೆಹೋವನು ಹೇಳುವುದನ್ನು ನಿಮಗೆ ತಿಳಿಸುತ್ತೇನೆ: ‘ನಿಮ್ಮಲ್ಲಿ ಪ್ರತಿಯೊಬ್ಬನು ಕತ್ತಿಯನ್ನು ತೆಗೆದುಕೊಂಡು ಪಾಳೆಯದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೆ ಹೋಗಿ ಜನರನ್ನು ಶಿಕ್ಷಿಸಬೇಕು. ನಿಮ್ಮ ಸಹೋದರರಾಗಿದ್ದರೂ ಸ್ನೇಹಿತರಾಗಿದ್ದರೂ ಅಥವಾ ನೆರೆಯವರಾಗಿದ್ದರೂ ಸರಿ, ಕೊಲ್ಲಿರಿ’” ಎಂದು ಹೇಳಿದನು.
28 ಲೇವಿಕುಲದವರು ಮೋಶೆಯ ಮಾತಿಗೆ ವಿಧೇಯರಾದರು. ಅಂದು ಇಸ್ರೇಲರಲ್ಲಿ ಸುಮಾರು ಮೂರು ಸಾವಿರ ಮಂದಿ ಸತ್ತರು. 29 ಆಗ ಮೋಶೆಯು ಅವರಿಗೆ, “ಇಂದು ನೀವು ಯೆಹೋವನಿಗೆ ಮೀಸಲಾದ ಜನರಾದಿರಿ; ಯಾಕೆಂದರೆ ನೀವು ನಿಮ್ಮ ಸ್ವಂತ ಗಂಡುಮಗನಿಗೂ ಸಹೋದರನಿಗೂ ವಿರೋಧವಾದಿರಿ. ಇಂದು ಆತನು ನಿಮ್ಮನ್ನು ಆಶೀರ್ವದಿಸಿದ್ದಾನೆ” ಅಂದನು.
30 ಮರುದಿನ ಮುಂಜಾನೆ ಮೋಶೆಯು ಜನರಿಗೆ, “ನೀವು ಭಯಂಕರವಾದ ಪಾಪವನ್ನು ಮಾಡಿದ್ದೀರಿ. ಆದರೆ ಈಗ ನಾನು ಯೆಹೋವನ ಬಳಿಗೆ ಹೋಗಿ, ಆತನು ನಿಮ್ಮ ಪಾಪಗಳನ್ನು ಕ್ಷಮಿಸುವಂತೆ ನಾನೇನಾದರೂ ಮಾಡಬಹುದೊ ಎಂದು ವಿಚಾರಿಸುತ್ತೇನೆ” ಎಂದನು. 31 ಅಂತೆಯೇ ಮೋಶೆಯು ಯೆಹೋವನ ಬಳಿಗೆ ಮರಳಿ ಹೋಗಿ, “ದಯವಿಟ್ಟು ಆಲಿಸು! ಈ ಜನರು ಬಹಳ ಕೆಟ್ಟ ಪಾಪವನ್ನು ಮಾಡಿದ್ದಾರೆ. ಚಿನ್ನದಿಂದ ಮೂರ್ತಿಯನ್ನು ಮಾಡಿಕೊಂಡಿದ್ದಾರೆ. 32 ಅವರ ಈ ಪಾಪವನ್ನು ಕ್ಷಮಿಸು. ನೀನು ಅವರನ್ನು ಕ್ಷಮಿಸುವುದಿಲ್ಲವಾದರೆ ನಿನ್ನ ಜೀವಭಾದ್ಯರ ಪಟ್ಟಿಯ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು” ಎಂದು ಪ್ರಾರ್ಥಿಸಿದನು.
33 ಆದರೆ ಯೆಹೋವನು ಮೋಶೆಗೆ, “ನನಗೆ ವಿರೋಧವಾಗಿ ಪಾಪಮಾಡುವ ಜನರ ಹೆಸರನ್ನು ಮಾತ್ರವೇ ನನ್ನ ಪುಸ್ತಕದಿಂದ ಅಳಿಸುತ್ತೇನೆ. 34 ಆದ್ದರಿಂದ ಈಗ ಕೆಳಗಿಳಿದು ನಾನು ನಿನಗೆ ಹೇಳುವಲ್ಲಿಗೆ ಜನರನ್ನು ನಡಿಸು. ನನ್ನ ದೂತನು ನಿನ್ನ ಮುಂದೆ ಹೋಗಿ ನಿನ್ನನ್ನು ನಡಿಸುವನು. ಪಾಪಮಾಡಿದ ಜನರನ್ನು ಶಿಕ್ಷಿಸುವ ಸಮಯ ಬಂದಾಗ ಅವರು ಶಿಕ್ಷಿಸಲ್ಪಡುವರು” ಎಂದು ಹೇಳಿದನು. 35 ಆದ್ದರಿಂದ ಯೆಹೋವನು ಜನರಿಗೆ ಭಯಂಕರವಾದ ವ್ಯಾದಿಯನ್ನು ಬರಮಾಡಿದನು. ಅವರು ಆರೋನನಿಂದ ಬಸವನನ್ನು ಮಾಡಿಸಿಕೊಂಡದ್ದೇ ಇದಕ್ಕೇ ಕಾರಣ.
ಲಾಜರನ ಮರಣ
11 ಲಾಜರನೆಂಬ ಒಬ್ಬನು ಅಸ್ವಸ್ಥನಾಗಿದ್ದನು. ಅವನು ಬೆಥಾನಿ ಎಂಬ ಊರಿನಲ್ಲಿ ವಾಸವಾಗಿದ್ದನು. ಮರಿಯಳು ಮತ್ತು ಆಕೆಯ ಸಹೋದರಿಯಾದ ಮಾರ್ಥಳು ಈ ಊರಿನಲ್ಲೇ ವಾಸವಾಗಿದ್ದರು. 2 ಪ್ರಭುವಿಗೆ (ಯೇಸುವಿಗೆ) ಪರಿಮಳತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೆಕೂದಲಿನಿಂದ ಒರಸಿದವಳೇ ಈ ಮರಿಯಳು. ಅಸ್ವಸ್ಥನಾಗಿದ್ದ ಲಾಜರನು ಮರಿಯಳ ಸಹೋದರನಾಗಿದ್ದನು. 3 ಆದ್ದರಿಂದ ಮರಿಯಳು ಮತ್ತು ಮಾರ್ಥಳು, “ಪ್ರಭುವೇ, ನಿನ್ನ ಪ್ರಿಯ ಸ್ನೇಹಿತನಾದ ಲಾಜರನು ಅಸ್ವಸ್ಥನಾಗಿದ್ದಾನೆ” ಎಂಬ ಸಂದೇಶವನ್ನು ಆತನಿಗೆ ತಿಳಿಸಲು ಒಬ್ಬನನ್ನು ಕಳುಹಿಸಿಕೊಟ್ಟರು.
4 ಯೇಸು ಇದನ್ನು ಕೇಳಿದಾಗ, “ಈ ಕಾಯಿಲೆಯು ದೇವರ ಮತ್ತು ದೇವಕುಮಾರನ ಮಹಿಮೆಗಾಗಿ ಬಂದಿದೆಯೇ ಹೊರತು ಮರಣಕ್ಕಾಗಿಯಲ್ಲ” ಎಂದು ಹೇಳಿದನು. 5 ಯೇಸು ಮಾರ್ಥಳನ್ನು, ಆಕೆಯ ಸಹೋದರಿಯನ್ನು ಮತ್ತು ಲಾಜರನ್ನು ಪ್ರೀತಿಸುತ್ತಿದ್ದನು. 6 ಲಾಜರನು ಅಸ್ವಸ್ಥನಾಗಿದ್ದಾನೆ ಎಂಬ ವಾರ್ತೆಯನ್ನು ಆತನು ಕೇಳಿದಾಗ ತಾನಿದ್ದ ಸ್ಥಳದಲ್ಲಿಯೇ ಇನ್ನೂ ಎರಡು ದಿನಗಳವರೆಗೆ ತಂಗಿದನು. 7 ಬಳಿಕ ಆತನು ತನ್ನ ಶಿಷ್ಯರಿಗೆ, “ನಾವು ಜುದೇಯಕ್ಕೆ ಹಿಂತಿರುಗಿ ಹೋಗಬೇಕು” ಎಂದು ಹೇಳಿದನು.
8 ಶಿಷ್ಯರು, “ಗುರುವೇ, ಜುದೇಯದ ಯೆಹೂದ್ಯರು ನಿನ್ನನ್ನು ಕಲ್ಲುಗಳಿಂದ ಕೊಲ್ಲಲು ಪ್ರಯತ್ನಿಸಿದರು. ಅದಾದದ್ದು ಕೇವಲ ಸ್ವಲ್ಪಕಾಲದ ಹಿಂದೆಯಷ್ಟೇ. ಈಗ ನೀನು ಮತ್ತೆ ಅಲ್ಲಿಗೆ ಹೋಗಬೇಕೆನ್ನುವಿಯಾ?” ಎಂದು ಉತ್ತರಕೊಟ್ಟರು.
9 ಯೇಸು, “ಹಗಲಿಗೆ ಹನ್ನೆರಡು ತಾಸುಗಳಿರುತ್ತವೆ. ಹೌದಲ್ಲವೇ? ಹಗಲಿನಲ್ಲಿ ನಡೆಯುವವನು ಎಡವಿಬೀಳುವುದಿಲ್ಲ. ಏಕೆಂದರೆ ಈ ಲೋಕದ ಬೆಳಕಿನಿಂದ ಅವನು ನೋಡಬಲ್ಲನು. 10 ಆದರೆ ರಾತ್ರಿಯಲ್ಲಿ ನಡೆಯುವವನು ಎಡವುತ್ತಾನೆ. ಏಕೆಂದರೆ ನೋಡಿಕೊಂಡು ನಡೆಯಲು ಅವನಿಗೆ ಯಾವ ಬೆಳಕೂ ಇರುವುದಿಲ್ಲ” ಎಂದು ಉತ್ತರಕೊಟ್ಟನು.
11 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ, “ನಮ್ಮ ಸ್ನೇಹಿತನಾದ ಲಾಜರನು ಈಗ ನಿದ್ರಿಸುತ್ತಿದ್ದಾನೆ. ಅವನನ್ನು ಎಬ್ಬಿಸಲು ನಾನು ಅಲ್ಲಿಗೆ ಹೋಗುತ್ತಿದ್ದೇನೆ” ಎಂದು ಹೇಳಿದನು.
12 ಶಿಷ್ಯರು, “ಪ್ರಭುವೇ, ಅವನು ನಿದ್ರೆ ಮಾಡುತ್ತಿದ್ದರೆ ಆರೋಗ್ಯ ಹೊಂದುವನು” ಎಂದು ಉತ್ತರಕೊಟ್ಟರು. 13 ಲಾಜರನು ಸತ್ತುಹೋಗಿದ್ದಾನೆ. ಎಂಬರ್ಥದಲ್ಲಿ ಯೇಸು ಹೇಳಿದನು. ಆದರೆ ಲಾಜರನು ನಿಜವಾಗಿಯೂ ನಿದ್ರಿಸುತ್ತಿದ್ದಾನೆ ಎಂಬರ್ಥದಲ್ಲಿ ಯೇಸು ಹೇಳಿದನೆಂಬುದಾಗಿ ಶಿಷ್ಯರು ಭಾವಿಸಿಕೊಂಡರು.
14 ಆದ್ದರಿಂದ ಯೇಸು, “ಲಾಜರನು ಸತ್ತುಹೋಗಿದ್ದಾನೆ. 15 ಆದರೆ ನಾನು ಅಲ್ಲಿ ಇಲ್ಲದಿದ್ದ ಕಾರಣ ಸಂತೋಷಿಸುತ್ತೇನೆ. ನಿಮ್ಮ ವಿಷಯದಲ್ಲಿಯೂ ನಾನು ಸಂತೋಷಪಡುತ್ತೇನೆ. ಏಕೆಂದರೆ, ಆಗ ನೀವು ನನ್ನಲ್ಲಿ ನಂಬಿಕೆ ಇಡುವಿರಿ. ಬನ್ನಿ, ಅವನ ಬಳಿಗೆ ಹೋಗೋಣ” ಎಂದು ಸ್ವಷ್ಟವಾಗಿ ಹೇಳಿದನು.
16 ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಸಹ ಯೇಸುವಿನೊಂದಿಗೆ ಹೋಗಿ ಜುದೇಯದಲ್ಲಿ ಸಾಯೋಣ” ಎಂದು ಹೇಳಿದನು.
ಬೆಥಾನಿಯಲ್ಲಿ ಯೇಸು
17 ಯೇಸು ಬೆಥಾನಿಯಕ್ಕೆ ಬಂದನು. ಈಗಾಗಲೇ ಲಾಜರನು ಸತ್ತು ಸಮಾಧಿಯಾಗಿ ನಾಲ್ಕು ದಿನಗಳಾಯಿತೆಂಬುದು ಯೇಸುವಿಗೆ ತಿಳಿಯಿತು. 18 ಬೆಥಾನಿಯು ಜೆರುಸಲೇಮಿನಿಂದ ಸುಮಾರು ಎರಡು ಮೈಲಿಗಳಷ್ಟು ದೂರದಲ್ಲಿತ್ತು. 19 ಅನೇಕ ಯೆಹೂದ್ಯರು ಮಾರ್ಥ ಮತ್ತು ಮರಿಯಳ ಬಳಿಗೆ ಬಂದಿದ್ದರು. ಮಾರ್ಥ ಮತ್ತು ಮರಿಯಳನ್ನು ಅವರ ತಮ್ಮನಾದ ಲಾಜರನ ವಿಷಯದಲ್ಲಿ ಸಂತೈಸಲು ಯೆಹೂದ್ಯರು ಬಂದಿದ್ದರು.
20 ಯೇಸು ಬರುತ್ತಿದ್ದಾನೆ ಎಂಬ ಸುದ್ದಿಯನ್ನು ಕೇಳಿ ಮಾರ್ಥಳು ಆತನನ್ನು ವಂದಿಸಲು ಹೊರಗೆ ಹೋದಳು. ಆದರೆ ಮರಿಯಳು ಮನೆಯಲ್ಲೇ ಇದ್ದಳು. 21 ಮಾರ್ಥಳು ಯೇಸುವಿಗೆ, “ಪ್ರಭುವೇ, ನೀನು ಇಲ್ಲಿ ಇದ್ದಿದ್ದರೆ, ನನ್ನ ಸಹೋದರನು ಸಾಯುತ್ತಿರಲಿಲ್ಲ. 22 ಆದರೆ ಈಗಲೂ ಸಹ ನೀನು ಏನನ್ನೇ ಕೇಳಿಕೊಂಡರೂ ದೇವರು ನಿನಗೆ ಕೊಡುತ್ತಾನೆ ಎಂಬುದು ನನಗೆ ತಿಳಿದಿದೆ” ಎಂದು ಹೇಳಿದಳು.
23 ಯೇಸು, “ನಿನ್ನ ಸಹೋದರನು ಮತ್ತೆ ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು.
24 ಮಾರ್ಥಳು, “ಅಂತಿಮ ದಿನದಂದು ಪುನರುತ್ಥಾನವಾಗುವಾಗ ಅವನು ಮತ್ತೆ ಎದ್ದುಬರುವನೆಂದು ನನಗೆ ಗೊತ್ತಿದೆ” ಎಂಬುದಾಗಿ ಉತ್ತರ ಕೊಟ್ಟಳು.
25 ಯೇಸು ಆಕೆಗೆ, “ನಾನೇ ಪುನರುತ್ಥಾನ. ನಾನೇ ಜೀವ. ನನ್ನನ್ನು ನಂಬುವವನು ತಾನು ಸತ್ತನಂತರವೂ ಮತ್ತೆ ಜೀವವನ್ನು ಹೊಂದುವನು. 26 ಮತ್ತು ಬದುಕುತ್ತಾ ನನ್ನನ್ನು ನಂಬುವವನು ಎಂದಿಗೂ ಸಾಯುವುದಿಲ್ಲ. ಮಾರ್ಥಳೇ, ನೀನು ಇದನ್ನು ನಂಬುವಿಯಾ?” ಎಂದನು.
27 ಮಾರ್ಥಳು, “ಹೌದು ಪ್ರಭುವೇ, ನೀನು ದೇವರ ಮಗನಾದ ಕ್ರಿಸ್ತನೆಂದು ನಾನು ನಂಬುವೆ. ಈ ಲೋಕಕ್ಕೆ ಬರಬೇಕಾಗಿದ್ದವನು ನೀನೇ” ಎಂದು ಉತ್ತರಕೊಟ್ಟಳು.
ಯೇಸು ಕಣ್ಣೀರಿಡುವನು
28 ಮಾರ್ಥಳು ಹೀಗೆ ಹೇಳಿದ ಮೇಲೆ, ತನ್ನ ಸಹೋದರಿಯಾದ ಮರಿಯಳ ಬಳಿಗೆ ಹಿಂತಿರುಗಿ ಹೋದಳು. ಮಾರ್ಥಳು ಮರಿಯಳೊಂದಿಗೆ ಪ್ರತ್ಯೇಕವಾಗಿ ಮಾತಾಡಿ, “ಗುರುವು (ಯೇಸು) ನಿನ್ನನ್ನು ಕರೆಯುತ್ತಿದ್ದಾನೆ” ಎಂದು ತಿಳಿಸಿದಳು. 29 ಇದನ್ನು ಕೇಳಿದ ಕೂಡಲೇ ಮರಿಯಳು ಎದ್ದು ಯೇಸುವಿನ ಬಳಿಗೆ ಬೇಗಬೇಗನೆ ಹೋದಳು. 30 ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ. ಮಾರ್ಥಳು ತನ್ನನ್ನು ಸಂಧಿಸಿದ ಸ್ಥಳದಲ್ಲೇ ಆತನಿದ್ದನು. 31 ಯೆಹೂದ್ಯರು ಮರಿಯಳೊಂದಿಗೆ ಮನೆಯಲ್ಲಿದ್ದರು. ಅವರು ಆಕೆಯನ್ನು ಸಂತೈಸುತ್ತಿದ್ದರು. ಮರಿಯಳು ಎದ್ದು ಬೇಗನೆ ಹೋಗುವುದನ್ನು ಅವರು ಕಂಡರು. ಆಕೆಯು ಅಳುವುದಕ್ಕಾಗಿ ಸಮಾಧಿಯ ಬಳಿಗೆ ಹೋಗುತ್ತಿದ್ದಾಳೆಂದು ಅವರು ಭಾವಿಸಿಕೊಂಡು ಆಕೆಯನ್ನು ಹಿಂಬಾಲಿಸಿದರು. 32 ಯೇಸು ಇದ್ದ ಸ್ಥಳಕ್ಕೆ ಮರಿಯಳು ಹೋದಳು. ಆಕೆಯು ಯೇಸುವನ್ನು ಕಂಡಾಗ ಆತನ ಪಾದಗಳಿಗೆ ಅಡ್ಡಬಿದ್ದು, “ಪ್ರಭುವೇ, ನೀನು ಇಲ್ಲಿ ಇದ್ದಿದ್ದರೆ, ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದು ಹೇಳಿದಳು.
33 ಮರಿಯಳ ಮತ್ತು ಆಕೆಯೊಂದಿಗೆ ಬಂದಿದ್ದ ಯೆಹೂದ್ಯರ ಗೋಳಾಟವನ್ನು ಯೇಸು ನೋಡಿದಾಗ, ತನ್ನ ಹೃದಯದಲ್ಲಿ ಬಹಳವಾಗಿ ದುಃಖಗೊಂಡು ತತ್ತರಿಸಿದನು. 34 ಯೇಸು ಅವರಿಗೆ, “ಅವನನ್ನು ಎಲ್ಲಿ ಇಟ್ಟಿದ್ದೀರಿ?” ಎಂದು ಕೇಳಿದನು.
ಅದಕ್ಕೆ ಅವರು, “ಸ್ವಾಮೀ, ಬಂದು ನೋಡು” ಎಂದರು.
35 ಯೇಸು ಕಣ್ಣೀರಿಟ್ಟನು.
36 ಆಗ ಯೆಹೂದ್ಯರು, “ನೋಡಿ! ಯೇಸು ಅವನನ್ನು ಬಹಳವಾಗಿ ಪ್ರೀತಿಸುತ್ತಿದ್ದನು!” ಎಂದರು.
37 ಆದರೆ ಕೆಲವು ಯೆಹೂದ್ಯರು, “ಯೇಸು ಕುರುಡನ ಕಣ್ಣುಗಳನ್ನು ಗುಣಪಡಿಸಿದನಲ್ಲಾ; ಲಾಜರನಿಗೂ ಸಹಾಯಮಾಡಿ ಅವನನ್ನು ಸಾವಿನಿಂದ ತಪ್ಪಿಸಬಾರದಾಗಿತ್ತೇ?” ಎಂದರು.
ಮರುಜೀವ ಪಡೆದ ಲಾಜರ
38 ಯೇಸು ತನ್ನ ಹೃದಯದಲ್ಲಿ ಮತ್ತೆ ಬಹಳವಾಗಿ ದುಃಖಗೊಂಡು, ಲಾಜರನಿದ್ದ ಸಮಾಧಿಯ ಬಳಿಗೆ ಬಂದನು. ಆ ಸಮಾಧಿಯು ಒಂದು ಗವಿಯಾಗಿತ್ತು. ಅದರ ಬಾಯಿಗೆ ದೊಡ್ಡಕಲ್ಲನ್ನು ಮುಚ್ಚಿದ್ದರು. 39 “ಆ ಕಲ್ಲನ್ನು ತೆಗೆದುಹಾಕಿರಿ” ಎಂದು ಯೇಸು ಹೇಳಿದನು.
ಲಾಜರನ ಅಕ್ಕಳಾದ ಮಾರ್ಥಳು, “ಪ್ರಭುವೇ, ಲಾಜರನು ಸತ್ತು ನಾಲ್ಕು ದಿನಗಳಾಗಿವೆ. ಆದ್ದರಿಂದ ಅಲ್ಲಿ ದುರ್ವಾಸನೆಯಿರುತ್ತದೆ” ಎಂದು ಹೇಳಿದಳು.
40 ಯೇಸು ಮಾರ್ಥಳಿಗೆ, “ನಾನು ನಿನಗೆ ಹೇಳಿದ್ದನ್ನು ಜ್ಞಾಪಿಸಿಕೊಳ್ಳುವಿಯಾ? ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ನಿನಗೆ ಹೇಳಿದೆನು” ಎಂದನು.
41 ಆದ್ದರಿಂದ ಅವರು ಸಮಾಧಿಯ ಬಾಯಿಂದ ಕಲ್ಲನ್ನು ತೆಗೆದುಹಾಕಿದರು. ಆಗ ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ತಂದೆಯೇ, ನನ್ನ ಪ್ರಾರ್ಥನೆಯನ್ನು ಕೇಳಿದರಿಂದ ನಿನ್ನನ್ನು ಕೊಂಡಾಡುತ್ತೇನೆ. 42 ನೀನು ಯಾವಾಗಲೂ ನನಗೆ ಕಿವಿಗೊಡುವೆ ಎಂಬುದು ನನಗೆ ತಿಳಿದಿದೆ. ಆದರೆ ಇಲ್ಲಿ ನನ್ನ ಸುತ್ತಲೂ ನೆರೆದಿರುವ ಜನರಿಗೋಸ್ಕರವಾಗಿ ನಾನು ಈ ಸಂಗತಿಗಳನ್ನು ಹೇಳಿದೆನು. ನೀನೇ ನನ್ನನ್ನು ಕಳುಹಿಸಿರುವುದಾಗಿ ಅವರು ನಂಬಬೇಕೆಂದು ನಾನು ಬಯಸುತ್ತೇನೆ” ಎಂದನು. 43 ಬಳಿಕ ಯೇಸು ಗಟ್ಟಿಯಾದ ಧ್ವನಿಯಿಂದ, “ಲಾಜರನೇ, ಹೊರಗೆ ಬಾ!” ಎಂದು ಕರೆದನು. 44 ಸತ್ತುಹೋಗಿದ್ದವನು (ಲಾಜರನು) ಹೊರಗೆ ಬಂದನು. ಅವನ ಕೈಕಾಲುಗಳನ್ನು ಬಟ್ಟೆಗಳಿಂದ ಸುತ್ತಲಾಗಿತ್ತು. ಅವನ ಮುಖವನ್ನು ಕರವಸ್ತ್ರದಿಂದ ಮುಚ್ಚಲಾಗಿತ್ತು.
ಆಗ ಯೇಸು, “ಅವನಿಗೆ ಸುತ್ತಿರುವ ಬಟ್ಟೆಗಳನ್ನು ತೆಗೆದುಹಾಕಿರಿ, ಅವನು ಹೋಗಲಿ” ಎಂದು ಹೇಳಿದನು.
ಯೇಸುವನ್ನು ಕೊಲ್ಲಲು ಯೆಹೂದ್ಯ ನಾಯಕರ ಸಂಚು
(ಮತ್ತಾಯ 26:1-5; ಮಾರ್ಕ 14:1-2; ಲೂಕ 22:1-2)
45 ಮರಿಯಳನ್ನು ಸಂದರ್ಶಿಸಲು ಬಂದಿದ್ದ ಅನೇಕ ಯೆಹೂದ್ಯರು ಅಲ್ಲಿದ್ದರು. ಯೇಸು ಮಾಡಿದ ಈ ಕಾರ್ಯವನ್ನು ಕಂಡ ಇವರಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. 46 ಆದರೆ ಕೆಲವು ಯೆಹೂದ್ಯರು ಫರಿಸಾಯರ ಬಳಿಗೆ ಹೋಗಿ, ಯೇಸು ಮಾಡಿದ್ದನ್ನು ತಿಳಿಸಿದರು. 47 ಆಗ ಮಹಾಯಾಜಕರು ಮತ್ತು ಫರಿಸಾಯರು ಯೆಹೂದ್ಯರ ಆಲೋಚನಾಸಭೆಯನ್ನು ಕರೆದು, “ನಾವು ಏನು ಮಾಡಬೇಕು? ಈ ಮನುಷ್ಯನು (ಯೇಸು) ಅನೇಕ ಸೂಚಕಕಾರ್ಯಗಳನ್ನು ಮಾಡುತ್ತಿದ್ದಾನೆ. 48 ಈ ಕಾರ್ಯಗಳನ್ನು ಮಾಡಲು ನಾವು ಅವನಿಗೆ ಅವಕಾಶ ಕೊಟ್ಟರೆ ಜನರೆಲ್ಲರೂ ಇವನಲ್ಲಿ ನಂಬಿಕೆ ಇಡುವರು. ಆಗ ರೋಮ್ ರಾಜ್ಯದವರು ಬಂದು ನಮ್ಮ ದೇವಾಲಯವನ್ನೂ ನಮ್ಮ ದೇಶವನ್ನೂ ವಶಪಡಿಸಿಕೊಳ್ಳುವರು” ಅಂದರು.
49 ಅವರಲ್ಲಿ ಕಾಯಫನೆಂಬ ಒಬ್ಬನಿದ್ದನು. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಅವನು, “ನಿಮಗೆ ಏನೂ ಗೊತ್ತಿಲ್ಲ! 50 ಇಡೀ ಜನಾಂಗವು ನಾಶವಾಗುವುದಕ್ಕಿಂತ ಒಬ್ಬನು ಅವರಿಗೋಸ್ಕರವಾಗಿ ಸಾಯುವುದು ಉತ್ತಮ. ಆದರೆ ನೀವು ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ” ಎಂದು ಹೇಳಿದನು.
51 ಇದು ಕಾಯಫನ ಸ್ವಂತ ಆಲೋಚನೆಯಾಗಿರಲಿಲ್ಲ. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಆದ್ದರಿಂದ ಯೆಹೂದ್ಯರಿಗೋಸ್ಕರವಾಗಿ ಯೇಸು ಸಾಯುತ್ತಾನೆಂದು ಅವನು ನಿಜವಾಗಿಯೂ ಪ್ರವಾದಿಸಿದನು. 52 ಹೌದು, ಯೆಹೂದ್ಯರಿಗಾಗಿಯೂ ಲೋಕದಲ್ಲೆಲ್ಲಾ ಚದರಿಹೋಗಿರುವ ದೇವರ ಮಕ್ಕಳನ್ನೆಲ್ಲ ಒಂದುಗೂಡಿಸುವುದಕ್ಕಾಗಿಯೂ ಆತನು ಸಾಯಲಿದ್ದನು.
53 ಅಂದಿನಿಂದ ಯೆಹೂದ್ಯನಾಯಕರು ಯೇಸುವನ್ನು ಕೊಲ್ಲಲು ಸಂಚು ಮಾಡಲಾರಂಭಿಸಿದರು. 54 ಆದ್ದರಿಂದ ಯೇಸುವು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ಸಂಚರಿಸುವುದನ್ನು ಬಿಟ್ಟುಬಿಟ್ಟನು. ಆತನು ಜೆರುಸಲೇಮನ್ನು ಬಿಟ್ಟು ಮರುಭೂಮಿಯ ಸಮೀಪದಲ್ಲಿದ್ದ ಸ್ಥಳಕ್ಕೆ ಹೋಗಿ ಎಫ್ರಾಯಿಮ್ ಎಂಬ ಊರಿನಲ್ಲಿ ತನ್ನ ಶಿಷ್ಯರ ಸಂಗಡ ಇಳಿದುಕೊಂಡನು.
55 ಆಗ ಯೆಹೂದ್ಯರ ಪಸ್ಕಹಬ್ಬವು ಸಮೀಪವಾಗಿತ್ತು. ಪಸ್ಕಹಬ್ಬಕ್ಕಿಂತ ಮೊದಲೇ ತಮ್ಮ ಗ್ರಾಮಗಳಿಂದ ಅನೇಕ ಜನರು ಜೆರುಸಲೇಮಿಗೆ ಹೋಗಿದ್ದರು. ವಿಶೇಷವಾದ ಕಾರ್ಯಗಳನ್ನು ಮಾಡಿ ಪಸ್ಕಹಬ್ಬಕ್ಕಾಗಿ ತಮ್ಮನ್ನು ಶುದ್ಧೀಕರಿಸಿಕೊಳ್ಳಬೇಕೆಂದು ಅವರು ಹೋಗಿದ್ದರು. 56 ಅವರು ಅಲ್ಲಿ ಯೇಸುವನ್ನು ಹುಡುಕತೊಡಗಿದರು. ಅವರು ದೇವಾಲಯದಲ್ಲಿ ನಿಂತುಕೊಂಡು, “ಆತನು ಹಬ್ಬಕ್ಕೆ ಬರುವನೇ? ನಿಮ್ಮ ಆಲೋಚನೆ ಏನು?” ಎಂದು ಒಬ್ಬರನ್ನೊಬ್ಬರು ಕೇಳುತ್ತಿದ್ದರು. 57 ಆದರೆ ಮಹಾಯಾಜಕರು ಮತ್ತು ಫರಿಸಾಯರು, ಯೇಸು ಎಲ್ಲಿದ್ದಾನೆಂಬುದು ಯಾರಿಗಾದರೂ ತಿಳಿದು ಬಂದರೆ ತಮಗೆ ತಿಳಿಸಬೇಕೆಂದು ವಿಶೇಷ ಆಜ್ಞೆಯನ್ನು ಪ್ರಕಟಿಸಿದ್ದರು. ಅವರು ಆತನನ್ನು ಬಂಧಿಸಬೇಕೆಂದಿದ್ದರು.
ಜ್ಞಾನ—ಒಳ್ಳೆಯ ಸ್ತ್ರೀ
8 ಕೇಳಿ! ಜ್ಞಾನವೆಂಬಾಕೆಯೂ ವಿವೇಕವೆಂಬಾಕೆಯೂ
“ಕಿವಿಗೊಡಿರಿ” ಎಂದು ನಿಮ್ಮನ್ನು ಕೂಗಿ ಕರೆಯುತ್ತಿದ್ದಾಳೆ.
2 ರಸ್ತೆಗಳ ಚೌಕಗಳ ಬಳಿಯಿರುವ
ಗುಡ್ಡದ ಮೇಲ್ಭಾಗದಲ್ಲಿ ಆಕೆಯು ನಿಂತುಕೊಂಡಿದ್ದಾಳೆ.
3 ಪಟ್ಟಣದ ಹೆಬ್ಬಾಗಿಲುಗಳ ಬಳಿಯಿಂದಲೂ
ತೆರೆದ ಬಾಗಿಲುಗಳ ಬಳಿಯಿಂದಲೂ ಕರೆಯುತ್ತಿದ್ದಾಳೆ.
4 “ಮನುಷ್ಯರೇ, ನಿಮ್ಮನ್ನೇ ಕರೆಯುತ್ತೇನೆ;
ಎಲ್ಲಾ ಜನರನ್ನು ಕರೆಯುತ್ತೇನೆ.
5 ಮೂಢರೇ, ಜಾಣತನವನ್ನು ಕಲಿತುಕೊಳ್ಳಿರಿ;
ಜ್ಞಾನಹೀನರೇ ಬುದ್ಧಿಯನ್ನು ಗ್ರಹಿಸಿಕೊಳ್ಳಿರಿ.
6 ಕೇಳಿರಿ! ಶ್ರೇಷ್ಠವಾದವುಗಳನ್ನೂ
ಯಥಾರ್ಥವಾದವುಗಳನ್ನೂ ನಿಮಗೆ ತಿಳಿಸುವೆನು.
7 ನನ್ನ ಮಾತುಗಳು ಸತ್ಯ.
ನನ್ನ ತುಟಿಗಳಿಗೆ ದುಷ್ಟತನ ಅಸಹ್ಯ.
8 ನನ್ನ ಮಾತುಗಳು ನೀತಿಯ ಮಾತುಗಳಾಗಿವೆ.
ನನ್ನ ಮಾತುಗಳಲ್ಲಿ ತಪ್ಪಾಗಲಿ ಕಪಟವಾಗಲಿ ಇಲ್ಲವೇ ಇಲ್ಲ.
9 ತಿಳುವಳಿಕೆಯುಳ್ಳವನಿಗೆ ನನ್ನ ಮಾತುಗಳು ಸ್ಪಷ್ಟವಾಗಿವೆ;
ವಿವೇಕಿಗೆ ಯಥಾರ್ಥವಾಗಿವೆ.
10 ನನ್ನ ಉಪದೇಶವನ್ನು ಬೆಳ್ಳಿಗಿಂತಲೂ
ನನ್ನ ಜ್ಞಾನೋಪದೇಶವನ್ನು ಶುದ್ಧ ಬಂಗಾರಕ್ಕಿಂತಲೂ ಉತ್ತಮವೆಂದು ಸ್ವೀಕರಿಸಿಕೊಳ್ಳಿ.
11 ಜ್ಞಾನವು ಹವಳಕ್ಕಿಂತಲೂ ಶ್ರೇಷ್ಠ,
ಮನುಷ್ಯನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.”
ಜ್ಞಾನವು ಮಾಡುವುದೇನು
12 “ನಾನೇ ಜ್ಞಾನ.
ನಾನು ಒಳ್ಳೆಯ ನ್ಯಾಯತೀರ್ಪಿನೊಡನೆ ವಾಸಿಸುವೆ.
ನಾನು ವಿವೇಕದೊಡನೆಯೂ ಒಳ್ಳೆಯ ಆಲೋಚನೆಯೊಡನೆಯೂ ಇರುವೆನು.
13 ಯೆಹೋವನಲ್ಲಿ ಭಯಭಕ್ತಿಯಿರುವವನು ಪಾಪವನ್ನು ದ್ವೇಷಿಸುತ್ತಾನೆ.
ಜ್ಞಾನವೆಂಬ ನಾನು ಗರ್ವವನ್ನೂ ಅಹಂಭಾವವನ್ನೂ
ದುರ್ಮಾರ್ಗತನವನ್ನೂ ಸುಳ್ಳಾಡುವ ಬಾಯನ್ನೂ ದ್ವೇಷಿಸುತ್ತೇನೆ.
14 ಒಳ್ಳೆಯ ಆಲೋಚನೆಗಳೂ ಒಳ್ಳೆಯ ತೀರ್ಪುಗಳೂ ನನ್ನವೇ.
ವಿವೇಕವೂ ಸಾಮರ್ಥ್ಯವೂ ನನ್ನಲ್ಲಿವೆ.
15 ನನ್ನ ಸಹಾಯದಿಂದ ರಾಜರುಗಳು ರಾಜ್ಯವಾಳುವರು;
ಅಧಿಪತಿಗಳು ನ್ಯಾಯವಾದ ಕಾನೂನುಗಳನ್ನು ಮಾಡುವರು.
16 ನನ್ನ ಸಹಾಯದಿಂದ ಅಧಿಪತಿಗಳು ಆಡಳಿತ ಮಾಡುವರು;
ನಾಯಕರು ದೊರೆತನ ಮಾಡುವರು.
17 ನನ್ನನ್ನು ಪ್ರೀತಿಸುವವರನ್ನು ನಾನೂ ಪ್ರೀತಿಸುವೆನು;
ಬಹಳವಾಗಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
18 ನನ್ನಲ್ಲಿಯೂ ಸಹ ಕೊಡಲು ಐಶ್ವರ್ಯವಿದೆ ಮತ್ತು ಘನತೆಯಿದೆ.
ನಾನು ಶಾಶ್ವತವಾದ ಐಶ್ವರ್ಯವನ್ನೂ ಯಶಸ್ಸನ್ನೂ ಕೊಡುವೆನು.
19 ನಾನು ಕೊಡುವಂಥವುಗಳು ಬಂಗಾರಕ್ಕಿಂತಲೂ ಶ್ರೇಷ್ಠ.
ನನ್ನ ಉಡುಗೊರೆಗಳು ಅಪ್ಪಟ ಬೆಳ್ಳಿಗಿಂತಲೂ ಉತ್ತಮ.
20 ನಾನು ನೀತಿಮಾರ್ಗದಲ್ಲಿಯೂ
ನ್ಯಾಯಮಾರ್ಗದಲ್ಲಿಯೂ ನಡೆಯುತ್ತೇನೆ.
21 ನನ್ನನ್ನು ಪ್ರೀತಿಸುವವರಿಗೆ ನಾನು ಐಶ್ವರ್ಯವನ್ನು ಕೊಡುವೆನು.
ಹೌದು, ಅವರ ಉಗ್ರಾಣಗಳನ್ನು ತುಂಬಿಸುವೆನು.
22 “ಯೆಹೋವನು ‘ಜ್ಞಾನ’ವೆಂಬ ನನ್ನನ್ನು
ತನ್ನ ಸೃಷ್ಟಿ ಕ್ರಮದಲ್ಲಿ ಮೊದಲು ನಿರ್ಮಿಸಿದನು.
23 ನಾನು ಆದಿಯಲ್ಲಿ ನಿರ್ಮಾಣಗೊಂಡೆನು.
ಪ್ರಪಂಚವು ಆರಂಭವಾಗುವುದಕ್ಕಿಂತ ಮೊದಲೇ ನಾನು ನಿರ್ಮಿತನಾದೆನು.
24 ನಾನು ಸಾಗರಗಳಿಗಿಂತ ಮೊದಲೇ ಜನಿಸಿದೆನು;
ಬುಗ್ಗೆಗಳ ನೀರು ಉಂಟಾಗುವುದಕ್ಕಿಂತ ಮೊದಲೇ ಜನಿಸಿದೆನು.
25 ನಾನು ಪರ್ವತಗಳಿಗಿಂತ ಮೊದಲೇ ಜನಿಸಿದೆನು; ಬೆಟ್ಟಗಳಿಗಿಂತ ಮೊದಲೇ ಹುಟ್ಟಿದೆನು.
26 ಯೆಹೋವನು ಭೂಮಿಯನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಜ್ಞಾನವೆಂಬ ನಾನು ಹುಟ್ಟಿದೆನು.
ನಾನು ಬಯಲುಗಳಿಗಿಂತ ಮೊದಲೇ ಹುಟ್ಟಿದೆನು. ಆತನು ಭೂಮಿಯ ಮೊದಲನೆ ಧೂಳಿನ ಕಣವನ್ನು ಉಂಟುಮಾಡುವುದಕ್ಕಿಂತ ಮೊದಲೇ ನಾನು ಹುಟ್ಟಿದೆನು.
27 ಯೆಹೋವನು ಆಕಾಶವನ್ನು ಸೃಷ್ಟಿಸಿದ ಸಮಯದಲ್ಲಿ
ಜ್ಞಾನವೆಂಬ ನಾನು ಅಲ್ಲಿದ್ದೆನು.
ಆತನು ಸಾಗರದ ಎಲ್ಲೆಗಳನ್ನು ಗೊತ್ತುಪಡಿಸಿದಾಗ ಜ್ಞಾನವೆಂಬ ನಾನು ಅಲ್ಲಿದ್ದೆನು.
28 ಆತನು ಆಕಾಶದಲ್ಲಿ ಮೋಡಗಳನ್ನೂ
ಸಾಗರಗಳಲ್ಲಿ ನೀರನ್ನೂ ನೆಲೆಗೊಳಿಸಿದಾಗ ನಾನು ಅಲ್ಲಿದ್ದೆನು.
29 ಆತನು ಸಮುದ್ರಗಳ ನೀರಿಗೆ ಎಲ್ಲೆಕಟ್ಟನ್ನು ಹಾಕಿದಾಗಲೂ
ಭೂಮಿಗೆ ಅಸ್ತಿವಾರಗಳನ್ನು ಹಾಕಿದಾಗಲೂ ನಾನು ಅಲ್ಲಿದ್ದೆನು.
30 ನಾನು ಆತನ ಪಕ್ಕದಲ್ಲಿ ನಿಪುಣ ಕೆಲಸಗಾರನಂತಿದ್ದೆನು.
ನಾನು ಪ್ರತಿದಿನವೂ ಸಂತೋಷಪಡುತ್ತಾ ಆತನ ಸನ್ನಿಧಿಯಲ್ಲಿ ಯಾವಾಗಲೂ ಉಲ್ಲಾಸಿಸುತ್ತಿದ್ದೆನು.
31 ಆತನು ಸೃಷ್ಟಿಸಿದ ಭೂಲೋಕದ ವಿಷಯದಲ್ಲಿ ಉಲ್ಲಾಸಿಸುತ್ತಾ
ಮಾನವ ಸಂತಾನದ ವಿಷಯದಲ್ಲಿ ಹರ್ಷಿಸುತ್ತಾ ಇದ್ದೆನು.
32 “ಆದ್ದರಿಂದ ಮಕ್ಕಳೇ, ನನಗೆ ಕಿವಿಗೊಡಿರಿ!
ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರಾಗಿದ್ದಾರೆ.
33 ನನ್ನ ಉಪದೇಶಗಳನ್ನು ಕೇಳಿ ಜ್ಞಾನವಂತರಾಗಿರಿ.
ಕಿವಿಗೊಡದಿರಬೇಡಿ!
34 ನನಗೆ ಕಿವಿಗೊಡುವವನು ಧನ್ಯನಾಗಿದ್ದಾನೆ.
ಅವನು ಪ್ರತಿದಿನ ನನ್ನ ಮನೆಬಾಗಿಲುಗಳ ಬಳಿಯಲ್ಲೂ ನನ್ನ ಬಾಗಿಲಿನ ನಿಲುವುಗಳ ಬಳಿಯಲ್ಲೂ ಕಾದುಕೊಂಡಿರುತ್ತಾನೆ.
35 ನನ್ನನ್ನು ಕಂಡುಕೊಂಡಂಥವನು ಜೀವವನ್ನು ಕಂಡುಕೊಳ್ಳುತ್ತಾನೆ.
ಅವನಿಗೆ ಯೆಹೋವನ ಕೃಪೆಯು ದೊರೆಯುತ್ತದೆ.
36 ಆದರೆ ನನ್ನನ್ನು ಕಂಡುಕೊಳ್ಳಲಾರದವನು
ತನಗೇ ಕೇಡುಮಾಡಿಕೊಳ್ಳುವನು.
ನನ್ನನ್ನು ದ್ವೇಷಿಸುವ ಜನರೆಲ್ಲರೂ ಮರಣವನ್ನು ಪ್ರೀತಿಸುವರು.”
1 ಕ್ರಿಸ್ತ ಯೇಸುವಿನ ಅಪೊಸ್ತಲನಾಗಿರುವ ಪೌಲನು ಬರೆಯುವ ಪತ್ರ. ನಾನು ದೇವರ ಇಷ್ಟಾನುಸಾರವಾಗಿ ಅಪೊಸ್ತಲನಾಗಿದ್ದೇನೆ. ಎಫೆಸ[a] ಪಟ್ಟಣದಲ್ಲಿ ವಾಸವಾಗಿರುವ ಮತ್ತು ಕ್ರಿಸ್ತಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಪರಿಶುದ್ಧ ದೇವಜನರಿಗೆ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ.
2 ನಮ್ಮ ತಂದೆಯಾದ ದೇವರು ಮತ್ತು ಪ್ರಭುವಾದ ಯೇಸು ಕ್ರಿಸ್ತನು ನಿಮಗೆ ಕೃಪೆಯನ್ನೂ ಶಾಂತಿಯನ್ನೂ ದಯಪಾಲಿಸಲಿ.
ಕ್ರಿಸ್ತನಲ್ಲಿರುವ ಆತ್ಮಿಕ ಆಶೀರ್ವಾದಗಳು
3 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ಪರಲೋಕದಲ್ಲಿರುವ ಪ್ರತಿಯೊಂದು ಆಶೀರ್ವಾದಗಳನ್ನು ದೇವರು ನಮಗೆ ಕ್ರಿಸ್ತನಲ್ಲಿ ದಯಪಾಲಿಸಿದ್ದಾನೆ. 4 ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡನು. ತನ್ನ ಸನ್ನಿಧಿಯಲ್ಲಿ ನಾವು ಪರಿಶುದ್ಧರೂ ನಿರ್ದೋಷಿಗಳೂ ಆಗಿರಬೇಕೆಂಬುದು ಆತನ ಉದ್ದೇಶವಾಗಿತ್ತು. 5 ನಮ್ಮ ಮೇಲಿನ ಪ್ರೀತಿಯಿಂದ ಕ್ರಿಸ್ತ ಯೇಸುವಿನ ಮೂಲಕ ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ಆತನು ಆಗಲೇ ನಿರ್ಧರಿಸಿದ್ದನು. ಅದು ಆತನ ಚಿತ್ತವಾಗಿತ್ತು ಮತ್ತು ಆತನಿಗೆ ಮೆಚ್ಚಿಕೆಕರವಾಗಿತ್ತು. 6 ದೇವರ ಅದ್ಭುತವಾದ ಕೃಪೆಯಿಂದಾದ ಈ ನಿರ್ಧಾರವು ಆತನಿಗೆ ಸ್ತೋತ್ರವನ್ನು ಉಂಟುಮಾಡುತ್ತದೆ. ದೇವರು ಆ ಕೃಪೆಯನ್ನು ತನ್ನ ಪ್ರಿಯನಾದ ಕ್ರಿಸ್ತನಲ್ಲಿ ನಮಗೆ ಉಚಿತವಾಗಿ ದಯಪಾಲಿಸಿದ್ದಾನೆ.
7 ಕ್ರಿಸ್ತನ ರಕ್ತದ ಮೂಲಕವಾಗಿ ನಮಗೆ ಬಿಡುಗಡೆಯಾಯಿತು. ದೇವರ ಮಹಾ ಕೃಪೆಯಿಂದ ನಮ್ಮ ಪಾಪಗಳು ಕ್ಷಮಿಸಲ್ಪಟ್ಟವು. 8 ದೇವರು ನಮಗೆ ಆ ಕೃಪೆಯನ್ನು ಸಂಪೂರ್ಣವಾಗಿಯೂ ಉಚಿತವಾಗಿಯೂ ತೋರಿದನು. ದೇವರು ತನ್ನ ರಹಸ್ಯವಾದ ಯೋಜನೆಯನ್ನು ನಮಗೆ ತಿಳಿಸುವುದರ ಮೂಲಕ ನಮಗೆ ಸಂಪೂರ್ಣವಾದ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಟ್ಟನು. 9 ಇದು ದೇವರ ಚಿತ್ತವಾಗಿತ್ತು. ಕ್ರಿಸ್ತನ ಮೂಲಕ ಇದನ್ನು ನೆರವೇರಿಸಲು ಆತನು ಯೋಜನೆ ಮಾಡಿದನು. 10 ಕಾಲವು ಪರಿಪೂರ್ಣವಾದಾಗ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದುಗೂಡಿಸಿ ಆತನಿಗೆ ಅಧೀನ ಪಡಿಸಬೇಕೆಂಬುದೇ ದೇವರ ಯೋಜನೆಯಾಗಿತ್ತು.
11 ನಾವು ದೇವರ ಮಕ್ಕಳಾಗಿರಬೇಕೆಂದು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಳ್ಳಲಾಯಿತು. ನಾವು ತನ್ನ ಮಕ್ಕಳಾಗಿರಬೇಕೆಂದು ದೇವರು ತನ್ನ ಚಿತ್ತಾನುಸಾರವಾಗಿ ಮೊದಲೇ ಯೋಜನೆ ಮಾಡಿದ್ದನು. ತನ್ನ ನಿರ್ಧಾರ ಮತ್ತು ಇಷ್ಟಗಳಿಗನುಸಾರವಾಗಿ ಪ್ರತಿಯೊಂದನ್ನು ನೆರವೇರಿಸುವಾತನು ದೇವರೇ. 12 ಕ್ರಿಸ್ತನನ್ನು ನಿರೀಕ್ಷಿಸಿಕೊಂಡಿರುವವರಲ್ಲಿ ನಾವೇ ಮೊದಲಿಗರು. ದೇವರ ಮಹಿಮೆಗೆ ಸ್ತೋತ್ರವನ್ನು ಉಂಟುಮಾಡಬೇಕೆಂದೇ ನಮ್ಮನ್ನು ಆರಿಸಿಕೊಳ್ಳಲಾಯಿತು. 13 ಇದು ನಿಮಗೂ ಅನ್ವಯಿಸುತ್ತದೆ. ನೀವು ಸತ್ಯ ಬೋಧನೆಯ ಬಗ್ಗೆ ಅಂದರೆ ನಿಮ್ಮ ರಕ್ಷಣೆಯ ಕುರಿತಾದ ಸುವಾರ್ತೆಯ ಬಗ್ಗೆ ಕೇಳಿದಾಗ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರಿ. ದೇವರು ತನ್ನ ವಾಗ್ದಾನಕ್ಕನುಸಾರವಾಗಿ ನಿಮಗೆ ಪವಿತ್ರಾತ್ಮನನ್ನು ದಯಪಾಲಿಸುವುದರ ಮೂಲಕ ನಿಮ್ಮ ಮೇಲೆ ತನ್ನ ವಿಶೇಷವಾದ ಮುದ್ರೆಯನ್ನು ಹಾಕಿದನು. 14 ದೇವರು ತನ್ನ ಜನರಿಗೆ ವಾಗ್ದಾನ ಮಾಡಿದವುಗಳನ್ನು ನಾವು ಹೊಂದಿಕೊಳ್ಳುತ್ತೇವೆ ಎಂಬುದಕ್ಕೆ ಆ ಪವಿತ್ರಾತ್ಮನೇ ಪ್ರಮಾಣವಾಗಿದ್ದಾನೆ. ದೇವರು ಸಂಪಾದಿಸಿಕೊಂಡ ಜನರಿಗೆ ಇದು ಸಂಪೂರ್ಣ ವಿಮೋಚನೆಯನ್ನು ಉಂಟುಮಾಡುತ್ತದೆ. ದೇವರ ಮಹಿಮೆಗೆ ಸ್ತೋತ್ರವಾಗ ಬೇಕೆಂಬುದೇ ಇದೆಲ್ಲದರ ಉದ್ದೇಶವಾಗಿದೆ.
ಪೌಲನ ಪ್ರಾರ್ಥನೆ
15-16 ಆದಕಾರಣವೇ ನನ್ನ ಪ್ರಾರ್ಥನೆಗಳಲ್ಲಿ ನಾನು ನಿಮ್ಮನ್ನು ಜ್ಞಾಪಿಸಿಕೊಂಡು ನಿಮ್ಮ ವಿಷಯದಲ್ಲಿ ದೇವರಿಗೆ ಯಾವಾಗಲೂ ಸ್ತೋತ್ರ ಸಲ್ಲಿಸುತ್ತೇನೆ. ಪ್ರಭುವಾದ ಯೇಸುವಿನಲ್ಲಿ ನಿಮಗಿರುವ ನಂಬಿಕೆಯ ಬಗ್ಗೆ ಮತ್ತು ಎಲ್ಲಾ ದೇವಜನರ ಮೇಲೆ ನಿಮಗಿರುವ ಪ್ರೀತಿಯ ಬಗ್ಗೆ ಕೇಳಿದಂದಿನಿಂದ ನಾನು ನಿಮ್ಮ ವಿಷಯದಲ್ಲಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 17 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ಮಹಿಮಾ ಸ್ವರೂಪನಾದ ತಂದೆಯೂ ಆಗಿರುವಾತನಿಗೆ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ. ದೇವರ ಜ್ಞಾನದಿಂದ ಅಂದರೆ ಆತನು ನಿಮಗೆ ತಿಳಿಯಪಡಿಸಿದ ಜ್ಞಾನದಿಂದ ನಿಮ್ಮನ್ನು ವಿವೇಕಿಗಳನ್ನಾಗಿ ಮಾಡುವಂಥ ಆತ್ಮವನ್ನು ಆತನು ನಿಮಗೆ ಅನುಗ್ರಹಿಸಲೆಂದು ನಾನು ಪ್ರಾರ್ಥಿಸುತ್ತೇನೆ.
18 ನೀವು ನಿಮ್ಮ ಹೃದಯದಲ್ಲಿ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ಹೊಂದಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. ನಾವು ಎಂಥ ನಿರೀಕ್ಷೆಯನ್ನು ಹೊಂದಿಕೊಳ್ಳಬೇಕೆಂದು ದೇವರು ನಮ್ಮನ್ನು ಆರಿಸಿಕೊಂಡನೆಂಬುದನ್ನು ಆಗ ತಿಳಿದುಕೊಳ್ಳುವಿರಿ; ಆತನು ತನ್ನ ಪರಿಶುದ್ಧ ಜನರಿಗೆ ವಾಗ್ದಾನ ಮಾಡಿದ ಆಶೀರ್ವಾದಗಳು ಎಷ್ಟು ಮಹಿಮಾತಿಶಯವಾಗಿವೆ ಎಂಬುದನ್ನು ತಿಳಿದುಕೊಳ್ಳುವಿರಿ. 19 ನಂಬಿಕೆಯಿಡುವಂಥ ನಮಗೆ ದೇವರ ಶಕ್ತಿಯು ಎಷ್ಟು ಮಹತ್ವವುಳ್ಳದ್ದಾಗಿದೆ ಎಂಬುದನ್ನೂ ಆಗ ನೀವು ತಿಳಿದುಕೊಳ್ಳುವಿರಿ. ಕ್ರಿಸ್ತನನ್ನು ಮರಣದಿಂದ ಜೀವಂತನಾಗಿ ಎಬ್ಬಿಸಲು ದೇವರು ಉಪಯೋಗಿಸಿದ ಮಹಾಶಕ್ತಿ ಅದೇ. 20 ದೇವರು ಕ್ರಿಸ್ತನನ್ನು ಪರಲೋಕದೊಳಗೆ ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು. 21 ದೇವರು ಕ್ರಿಸ್ತನನ್ನು ಎಲ್ಲಾ ಅಧಿಪತಿಗಳಿಗಿಂತಲೂ ಅಧಿಕಾರಿಗಳಿಗಿಂತಲೂ ಶಕ್ತಿಗಳಿಗಿಂತಲೂ ರಾಜರುಗಳಿಗಿಂತಲೂ ಪ್ರಮುಖನನ್ನಾಗಿ ಮಾಡಿದನು. ಈ ಲೋಕದಲ್ಲಾಗಲಿ ಮುಂದಿನ ಲೋಕದಲ್ಲಾಗಲಿ ಕೊಡಲ್ಪಟ್ಟಿರುವ ಯಾವುದೇ ಹೆಸರುಳ್ಳವರಿಗಿಂತಲೂ ಕ್ರಿಸ್ತನು ಪ್ರಮುಖನಾಗಿದ್ದಾನೆ. 22 ದೇವರು ಪ್ರತಿಯೊಂದನ್ನು ಕ್ರಿಸ್ತನ ಅಧಿಕಾರಕ್ಕೆ ಒಳಪಡಿಸಿದನು. ಸಭೆಗೋಸ್ಕರವಾಗಿ ದೇವರು ಆತನನ್ನು ಪ್ರತಿಯೊಂದರ ಮೇಲೆ ಶಿರಸ್ಸನ್ನಾಗಿ ಮಾಡಿದನು. 23 ಸಭೆಯು ಕ್ರಿಸ್ತನ ದೇಹವಾಗಿದೆ. ಸಭೆಯು ಕ್ರಿಸ್ತನಿಂದ ಆವರಿಸಲ್ಪಟ್ಟಿದೆ. ಆತನು ಸಮಸ್ತವನ್ನು ಪ್ರತಿಯೊಂದು ವಿಷಯದಲ್ಲಿಯೂ ಸಂಪೂರ್ಣಗೊಳಿಸುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International